Facebook

ದೀಪ: ದಿವ್ಯ ಆಂಜನಪ್ಪ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂಧಕಾರವನ್ನು ತೊಲಗಿಸಿ, ಬೆಳಕನ್ನು ನೀಡಿ ದಾರಿ ತೋರುವ 'ದೀಪ'ವು ಜ್ಞಾನದ ಸಂಕೇತವಾಗಿದೆ. ಸಾಂಪ್ರದಾಯಕ ದೃಷ್ಟಿಯಿಂದಲೂ ದೀಪವು ಶ್ರೇಷ್ಟ ಸ್ಥಾನವನ್ನು ಪಡೆದಿದೆ. ಪೂಜೆ ಆಚರಣೆಗಳಲ್ಲಿ, ಆರತಿ ಬೆಳಗುವಲ್ಲಿ, ಯಾವುದೇ ಒಂದು ಕಾರ್ಯಕ್ರಮದ ಉದ್ಘಾಟನೆಯಲ್ಲಿ, ದೀಪ ಬೆಳಗಿಸುವ ಕಾರ್ಯವೇ ಮೊದಲಾಗಿದೆ. ಹೀಗೆ ನಮ್ಮ ಮನಸ್ಸು, ನಮ್ಮ ಸಂಸ್ಕೃತಿ ಮತ್ತು ನಮ್ಮ ಬುದ್ಧಿಯೂ ದೀಪವನ್ನು ಶ್ರೇಷ್ಠ ಸ್ಥಾನದಲ್ಲಿಟ್ಟು ನೋಡುತ್ತದೆ. ಭಾವನಾತ್ಮಕವಾಗಿಯೂ ಮತ್ತು ಸಾಹಿತ್ಯಾತ್ಮಕವಾಗಿಯೂ ದೀಪವು ನಮ್ಮ ಮನಗಳನ್ನು ಬೆಳಗಿಸಿವೆ ಎಂದೇ ಹೇಳಬಹುದು.

ದೀಪವು ಬೆಳಕಿನ, ಜ್ಞಾನದ, ಕ್ರಾಂತಿಯ ದ್ಯೋತಕವಾಗಿ ಅನೇಕ ಕವಿತೆಗಳಾಗಿವೆ. ಕವಿಗಳಿಗೆ ಸ್ಪೂರ್ತಿಯಾಗಿ ಸಾಹಿತ್ಯವನ್ನು ತನ್ನ ಪ್ರಕಾಶತೆಯಲ್ಲಿ ಬೆಳಗಿಸಿದೆ. ನಮ್ಮ ಕವಿಗಳು ಅನಾದಿಕಾಲದಿಂದಲೂ ದೀಪದ ಆರಾಧಕರೇ ಆಗಿದ್ದಾರೆ. ಎಲ್ಲಿ ಜ್ಞಾನವೋ (ಬೆಳಗೋ) ಅಲ್ಲಿ ದೀಪವು. ಸೂರ್ಯನ ನಂತರ ಪ್ರಕೃತಿಯಲ್ಲಿ ಮಾನವನ ಮನ-ಮನೆಗಳನ್ನು ಬೆಳಗುವ ಕಾರ್ಯವನ್ನು ದೀಪವು ವಹಿಸಿಕೊಂಡಿದೆ ಎಂದು ಬಾಲ್ಯದಲ್ಲಿ ಪಾಠವಾಗಿ ಕಲಿತ ನೆನಪು. ಹೌದಲ್ಲವೇ ಸೂರ್ಯ ಮುಳುಗಿದ ತದನಂತರ ದೀಪ ಬೇಳಗಿಸಿ ತಮ್ ತಮ್ಮ ಕಾರ್ಯಗಳ ಪೂರೈಕೆಗಳಲ್ಲಿ ತೊಡಗುತ್ತೇವೆ. ಹೀಗೆ ನಮ್ಮ ಅವಶ್ಯಕತೆಯಾಗಿ ದೀಪ, ಪೂಜೆ- ದೇವನೊಲಿಸಿಕ್ಕೊಳ್ಳುವುದಕ್ಕಾಗಿ ದೀಪ, ಸಂತೋಷಕ್ಕಾಗಿ ದೀಪ, ದೃಷ್ಟಿ ತೆಗೆಯುವುದಕ್ಕಾಗಿ ದೀಪ, ಹುಟ್ಟಿಗೆ ದೀಪ ಕಡೆಗೆ ಸಾವಿನಲ್ಲೂ ದೀಪದೊಂದಿಗೆ ಜೀವನದ ಅಂತ್ಯವಾಗುತ್ತದೆ. ಜೀವನದುದ್ದಕ್ಕೂ ಒಂದಲ್ಲ ಒಂದು ಕಾರಣಕ್ಕಾಗಿ ದೀಪವು ನಮ್ಮ ಜೊತೆಯಾಗಿರುತ್ತದೆ. ಇದರೊಟ್ಟಿಗೆ 'ದೀಪ'ಕ್ಕೆ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ. ದೀಪವನ್ನು ಹಚ್ಚಲು, ಅದಕ್ಕೆ ಬತ್ತಿಯನ್ನು ಹಾಕಲು, ಅಲಂಕರಿಸಲು, ಎಣ್ಣೆ ಎರೆಯಲು ಹೀಗೆ ಎಲ್ಲಾ ಹಂತಗಳಲ್ಲೂ ಅದರದೇ ಆದ ರೀತಿ ನೀತಿಗಳನ್ನು ಹೊಂದಿದೆ. ಈ ಎಲ್ಲಾ ರೀತಿ-ನೀತಿಗಳನ್ನು ಸಂಪ್ರದಾಯಗಳನ್ನು ಸೃಷ್ಟಿಸಿದ ಮಾನವನ ಮನಸ್ಸಿನ ಶಕ್ತಿಯೂ ಇವೆಲ್ಲಕ್ಕಿಂತ ದೊಡ್ದದು ಅಲ್ಲವೇ? ಹಾಗಾಗಿ ಯಾವೊಬ್ಬ ವ್ಯಕ್ತಿಯು ತನ್ನ ಮನದ ದೀಪವನ್ನು ಹಚ್ಚಿ ಅದರ ಬೆಳಗನ್ನು ಇತರರ ಶ್ರೇಯಸ್ಸಿಗೆ ನೀಡುತ್ತಾನೋ ಅವನೇ ಶ್ರೇಷ್ಠನು ಎಂದೆನಿಸಿಕೊಳ್ಳುತ್ತಾನೆ.

ಅದೇನೇ ಇರಲಿ, ಭಾವನಾತ್ಮಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ನಮ್ಮನವನ್ನು ತುಂಬಿರುವ ದೀಪವು ರಂಗುರಂಗಾದ ಕನಸುಗಳನ್ನು ಕಟ್ಟಿಕೊಟ್ಟಿದೆ. ಹಾಗಾದರೆ, ಆ ದೀಪಗಳ ಬೆಳಕಿನಲ್ಲಿ ಕವಿಮನಗಳ ಕೆಲವು ರಂಗುಗಳನ್ನು ನಾವಿಲ್ಲಿ ಕಾಣುವ ಮನಸ್ಸು ಮಾಡೋಣವೇ? 🙂

ಜೀವನದ ಸ್ಫೂರ್ತಿ, ಜೀವನದ ಆಸ್ತಿ, ಜ್ಞಾನದ ಪ್ರತೀಕವಾಗಿರುವ 'ದೀಪ'ವು; ಕವಿಮನಗಳ ಆರಾಧ್ಯ ದೈವವೆಂದೇ ಹೇಳಬಹುದು. ಹೀಗೆ ಕವಿ ಹೃದಯವನ್ನು ಕಲಕಿ ಜೀವನದ ಆಗು-ಹೋಗುಗಳಿಗೆ ಕಾರಣಕರ್ತನನ್ನು ಪ್ರಾರ್ಥಿಸುತ್ತ ತನ್ನ ಜೀವನ (ದೀಪ, ಸಂಪತ್ತು)ವನ್ನು ಉಳಿಸೆಂದು ಹಾಡಿದ ಭಾವಗೀತೆ ಕೆ.ಎಸ್.ನರಸಿಂಹಸ್ವಾಮಿರವರ "ದೀಪವು ನಿನ್ನದೆ, ಗಾಳಿಯೂ ನಿನ್ನದೆ,,,,,". ಜೀವನದ ಪ್ರತೀಕವಾದ ದೀಪವೂ ನಿನ್ನದೆ, ತೊಡಕುಗಳೆಂಬ ಗಾಳಿಯೂ ನಿನ್ನದೆ ಆಗಿರಲು ನನ್ನ ದೀವಿಗೆಯು ಆರದಂತೆ ಕಾಪಾಡುವ ಹೊಣೆಯೂ ನಿನ್ನದೆ ಎಂದು ಧೀಮಂತದೆದುರು ಪ್ರಾರ್ಥಿಸುವ ಭಾವವನ್ನು ಇಲ್ಲಿ ನೋಡಬಹುದು.

ದೀಪವು ನಿನ್ನದೆ ಗಾಳಿಯೂ ನಿನ್ನದೆ, ಆರದಿರಲಿ ಬೆಳಕು

ಕಡಲು ನಿನ್ನದೆ ಹಡಗು ನಿನ್ನದೆ, ಮುಳುಗದಿರಲಿ ಬದುಕು

ಪ್ರಕೃತಿಯ ಸೃಷ್ಟಿಕರ್ತನೇ, ನಿನ್ನ ಸೃಷ್ಟಿಯ ಕಡಲು, ನಿನ್ನ ಸೃಷ್ಟಿಯ ಹಡಗು (ಜೀವನ), ಎಲ್ಲವೂ ನಿನ್ನದೆ ನಿನ್ನ ಕೈಸೆರೆ. ಹೀಗಿರುವಾಗ, ಕಷ್ಟಗಳ ಬಿರುಗಾಳಿಗೆ ಸಿಕ್ಕಿ ಜೀವನದ ಹಡಗು ಮುಳುಗದಂತೆ ನೋಡಿಕೊ. ಯಾವುದೊಂದಕ್ಕೆ ಧಕ್ಕೆಯಾದರೂ ಅದು ನಿನ್ನದೇ ಒಂದಂಶದ ಸೋಲು ಎನ್ನುವ ಒಳಾರ್ಥ ಈ ಸಾಲುಗಳದ್ದಾಗಿದೆ. ಈ ಕವನದ ಮುಂದಿವ ಸಾಲುಗಳಲ್ಲಿ ಬೆಟ್ಟ-ಬಯಲು, ನೆಳಲು-ಬಿಸಿಲು, ಸಿಡಿಲು-ಮುಗಿಲು, ರಣದುಂದುಭಿ-ವೀಣೆ- ಎಂಬವನ್ನು ಪರಸ್ಪರ ವೈರುದ್ಯವಾಗಿ ನಿಲ್ಲಸಿ; ಅವೆಲ್ಲವೂ ಕ್ರಮವಾಗಿ 'ಆ ಚೇತನನು ತೋರುವ ಪ್ರೀತಿಯು', 'ಅವನಿಗೆ ಸಲ್ಲುವ ನಮಸ್ಕಾರಗಳು', 'ಅವನ ಪ್ರತಿಧ್ವನಿ' ಮತ್ತು ಮಹಾಕಾವ್ಯ-ಭಾವಗೀತೆಗಳು ಆತನ ಪದಧ್ವನಿಗಳೆಂದು ಕವಿ ಹಾಡುತ್ತ ಹೊಗಳಿ ಜೀವನದ ದೀಪವನ್ನು ಬೆಳಗಿಸುವಂತೆ ಪ್ರಾರ್ಥಿಸುವ ಭಾವ ಈ ಕವನದ್ದಾಗಿದೆ.

ತನ್ನ ಮನದಿ ಬಂದು ನೆಲಸಿ, ದೀಪವನ್ನು ಹಚ್ಚಿ. ಹಳೆ ಬಾಳನ್ನು ಹಿಂದಿಟ್ಟು ಆತ್ಮರತಿಗೆ ಕಲ್ಲಾರತಿಯಾಗಿ ಬಂದು ನಂದಾದೀಪವಾಗಿ ಬೆಳಗೆಂಬ ಪ್ರಿಯಳ ಪ್ರಿಯನೆಡೆಗೆ ಹರಿದು ಬಂದ ಭಾವ ಲಹರಿಯಲಿ ನಾವು ಆಧ್ಯಾತ್ಮದ ಲೇಪವನ್ನೂ ಕಾಣಬಹುದು. ಅಂತಹ ಗೀತೆ 'ಎಸ್.ವಿ.ಪರಮೇಶ್ವರ ಭಟ್ಟ'ರ "ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ,…"

ತನ್ನ ಪ್ರಿಯಕರನ ಬರುವಿಗಾಗಿ ಹಾತೊರೆದ ಹೆಣ್ಮನದ ತುಮುಲಗಳನ್ನು ಕವಿಗಳು ಹೀಗೆ ಕವನದಲ್ಲಿ ಹಿಡಿದಿಟ್ಟಿದ್ದಾರೆ. ಪ್ರೀತಿಯಿಂದ ಕರೆದ ಕರೆಯನ್ನು ಕೇಳಿ ತನ್ನ ಆತ್ಮದ ಹಂಬಲವನ್ನು ಆಲಿಸಿ ಇನ್ನಾದರೂ ಬಂದು ನೀ ಮನದಿ ನೆಲಸಿ; ಮನೆಯೆಲ್ಲಾ ಬೆಳಗುವಂತೆ ಬದುಕನ್ನು ಹಸನುಗೊಳಿಸಲೆಂದು ನೀ ದೀಪವ ಹಚ್ಚಿ ತನ್ನ ಕತ್ತಲೆಯ ವಿಷಾದಗಳನ್ನು ಹೊಡೆದೋಡಿಸೆಂದು ಪ್ರೀಯೆಯ ನಿವೇದನೆಯೇ ಈ ಸಾಲುಗಳು.

ಪ್ರೀತಿಯ ಕರೆಕೇಳಿ ಆತ್ಮನ ಮೊರೆ ಕೇಳಿ

ನೀ ಬಂದು ನಿಂದಿಲ್ಲಿ ದೀಪ ಹಚ್ಚ||

ನಲ್ಲ ನೀ ಬಂದಂದು, ಕಣ್ಣಾರೆ ಕಂಡಂದು

ಮನೆಯೆಲ್ಲಾ ಹೊಳೆದಂತೆ ದೀಪ ಹಚ್ಚ||

ಬದುಕಲ್ಲಿ ಅನೇಕ ಕಷ್ಟಗಳಲ್ಲಿ ನೊಂದು, ಅಂಧಕಾರವೇ ಆವರಿಸಿದಂತಾಗಿ ಬಾಳು ಇನ್ನೇನು ಇರುಳಾಗುವ ಸಮಯದಿ ನೀ ಮನದಿ ಬಂದು ದೀಪವನ್ನು ಹಚ್ಚಿ ಮನವ ಬೆಳಕಾಗಿಸು. ಇರುಳಿಗೆ ಬಾನಿನ ತಾರೆಗಳು ಬೆಳಕಾಗುವಂತೆ ನೀ ಎನ್ನ ಜೀವನದ ಕಾಂತಿಯಾಗಿ ಬಾರೆಂದು ಪ್ರಿಯೆಯು ಪ್ರಾರ್ಥಿಸುತಿದ್ದಾಳೆ. ಇಲ್ಲಿ ಕರಿಗೆಜ್ಜೆ ಎಂಬುದು ಇರುಳಿನ ಸಂಕೇತ, ಕಣ್ಣೀರ ಮಿಡಿಯುವುದು ಎಂಬುದು ಕಷ್ಟಗಳ ಸಂಕೇತವಾಗಿದೆ.

ಕರಿಗೆಜ್ಜೆ ಕುಣಿಸುತ್ತ ಕಣ್ಣೀರ ಮಿಡಿಯುತ್ತಿರುವ

ಇರುಳಾಕೆ ಬಂದಳು ದೀಪ ಹಚ್ಚ

ಬಾನಿನಂಗಳದಲಿ ಚುಕ್ಕಿ ಹೊಳೆದೆಸೆವಂತೆ

ನನ್ನ ಮನದಂಗಳದಿ ದೀಪ ಹಚ್ಚ||

ನೀ ಕಾರಣವಾಗಿ ತನ್ನ ಹಳೆಯ ಕಣ್ಣೀರಿನ ಬಾಳು ಸತ್ತು, ಬೇಡದ ನೆನಪುಗಳು ಸುಡುವಂತೆ ಹೊಸಬಾಳು ಹುಟ್ಟಿದೆ. ನೀ ಹಚ್ಚಿದ ದೀಪದಿಂದ ಹೊಸ ವ್ಯಕ್ತಿತ್ವವನ್ನು ಪಡೆದ ನಾನಿನ್ನು ನಿನ್ನ ಆರಾಧಕಿ. ರತಿಯಂತೆ ಪ್ರೀತಿಸಿ; ನೀ ಬೆಳಗಿದ ಆರತಿಗೆ ಮನವೆಲ್ಲಾ ಬೆಳಕಾಗಿ ಕಲ್ಲಾರತಿಯಾಗಿದೆ.

"ಕಷ್ಟಗಳ ಕೋಟೆಯೊಳಗಿದ್ದ ಕತ್ತಲೆಯ ಮನಸ್ಸಿಗೆ ಪ್ರೀತಿ, ಙ್ಞಾನ, ಅರಿವೆಂಬ ಬೆಳಕು ಬೀರುವಂತ ದೀಪವನ್ನು ತಂದಿಟ್ಟು, ಹೊಸ ಬಾಳು, ಹೊಸ ಧ್ಯೇಯೆಯ ನೀಡಿ; ಬಾಡಿದ ಹೃದಯಕ್ಕೆ ಪ್ರೀತಿಯ ಸಿಂಚನ ಮಾಡಿಸಿ ರತಿಯಂತೆ ಜೀವ ತುಂಬಿದ ಹೇ ಸೃಷ್ಟಿಕರ್ತನೇ (ಪ್ರಿಯನೇ), ನೀ ಎನ್ನ ಮನದ ಜ್ಞಾನದೀಪ" ಎಂಬ ಭಾವ ಈ ಕವನದಲ್ಲಿ ವ್ಯಕ್ತವಾಗಿದೆ.

ಹಳೆಬಾಳು ಸತ್ತಿತ್ತು ಕೊಳೆಬಾಳು ಸುಟ್ಟಿತ್ತು

ಹೊಸಬಾಳು ಹುಟ್ಟಿತ್ತು ದೀಪ ಹಚ್ಚ

ಪ್ರೀತಿಯ ರತಿಗೆ ನೀ ಬೆಳಕಿನ ಆರತಿ

ಬೆಳಗಿ ಕಲ್ಲಾರತಿ ದೀಪ ಹಚ್ಚ||

ಈ ಮೊದಲೇ ಹೇಳಿದಂತೆ ಇದೊಂದು ಪ್ರೀತಿಯ ಮತ್ತು ಆಧ್ಯಾತ್ಮಿಕ ಭಾವವುಳ್ಳ ಕವನವಾಗಿದೆ. ಇಲ್ಲಿ ಪ್ರಿಯನೇ ದೇವನು. ಇಡೀ ವಿಶ್ವವೇ ಆ ಭಗವಂತನ ಪಾದಗಳಿಗೆ ತಮ್ಮ ಧ್ಯೇಯೋಭಿಲಾಷೆಗಳಿಗೆ ಮುಗಿಬೀಳುವರು. ಇಲ್ಲಿ ವಿಶ್ವಮೋಹಿತಚರಣವೆಂದರೆ ಭಗವಂತನೆಂಬ ಅರ್ಥವು ಪ್ರಾಪ್ತವಾಗುವುದು. ವಿವಿಧ ರೀತಿಯ ಅವತಾರಗಳು ಆ ಭಗವಂತನ ಆಭರಣಗಳಿದ್ದಂತೆ ಎಂಬುದು 'ವಿವಿಧ ವಿಶ್ವಾಭರಣ"ದಲ್ಲಿ ಪ್ರತಿಬಿಂಬಿತವಾಗಿದೆ. ವಿಶ್ವಕ್ಕೇ ನೀ ಆಭರಣ ಎಂಬ ಅರ್ಥವೂ ಕೊಡುತ್ತದೆ. ಆನಂದ ಸಾಗರ ಆ ದೇವನು ಜ್ಯೋತಿಯಾಗಿ ಬೆಳಗಲು ಮಾನವನ ಜೀವ ಆ ಬೆಳಕಿಗೆ ಆಕರ್ಷಿತವಾದ ಪತಂಗದಂತೆ ಆ ದೀಪದ ಸುತ್ತಲೇ ಗಿರಕಿ ಹೊಡೆಯುತ್ತದೆ. ದೇವನ ಆ ದಿವ್ಯತೆಗೆ ಶರಣಾಗಿ ವಿನಮ್ರದಿ ಪ್ರಾರ್ಥಿಸುವ ಮನವು ತನ್ನ ಮನದ ದೀಪ ಬೆಳಗಿಸಲೆಂದು ಬೇಡುತ್ತದೆ.

ಈ ಕವನವು ಪ್ರಿಯೆ ಪ್ರಿಯನಿಗೆ ಹೇಳಿದಂತೆಯೂ ಕಂಡಿದ್ದು, ತನ್ನ ಪ್ರಿಯನನ್ನು ದೇವನಿಗೆ ಹೋಲಿಸಿ ತನ್ನ ಮನದರಿಕೆಯನ್ನು ಸಲ್ಲಿಸುತ್ತಿದ್ದಾಳೆ. ಪ್ರೀತಿಯೆಂಬ ಜ್ಯೋತಿಗೆ ಹೆಣ್ಮನವು ಹಂಬಲಿಸಿದಂತ ಚಿತ್ರಣವನ್ನು ನಾವು ಕಾಣಬಹುದು.

ವಿಶ್ವ ಮೋಹಿತ ಚರಣ ವಿವಿಧ ವಿಶ್ವಾಭರಣ

ಆನಂದದ ಕಿರಣ ದೀಪ ಹಚ್ಚ

ನೀನೆಂಬ ಜೋತಿಯಲಿ ನಾನೆಂಬ ಪತಂಗ

ಸೋತ ಉಲಿ ಹೇಳಲೀ ದೀಪ ಹಚ್ಚ||

ನನ್ನಂತರಂಗಕ್ಕೆ ಎಂದೆಂದೂ "ಆರದ ದೀಪ" ನೀನಾಗಿ ಬಾರೆಂದು ಪ್ರೀತಿಯ ಹಂಬಲಿಸುವ ಮನ ಪೂರ್ಣ ಶರಣಾಗತಿಯಲ್ಲಿ ದೇವ (ಪ್ರಿಯ) ನಲ್ಲಿ ಪ್ರಾರ್ಥಿಸುತ್ತಿದೆ.

ನನ್ನಂತರಂಗದಿ ನಂದದೆ ನಿಂದಿಪ

ನಂದಾದೀಪವಾಗಿರಲೀ ದೀಪ ಹಚ್ಚ||

ಮತ್ತೊಂದು ದೀಪದ ಬೆಳಕಿನ ಚಿತ್ತಾರವನ್ನು ನಾಡಭಾಷೆ, ಹೆಮ್ಮೆಯ ಭಾಷೆಯ ಬಣ್ಣಗಳಾಗಿ ಕಾಣವ ಗೀತೆ ಡಿ.ಎಸ್.ಕರ್ಕಿ ರವರ "ಹಚ್ಚೇವು ಕನ್ನಡದ ದೀಪ"

ಕನ್ನಡ ನಾಡಿನ, ಸಿರಿಸಂಪತ್ತಿನ ಭಾಷೆ ನಮ್ಮಡೆಗೆ ಒಲವನ್ನು ತೋರುವ ಭಾಷೆಯೆಂಬ ದೀಪವು ನಮ್ಮಿಂದ ಬೆಳಗಬೇಕಾಗಿದೆ. ಈ ದೀಪದ ಬೆಳಕಿನಲ್ಲಿ ಬಹುದಿನಗಳಿಂದ ಕೂಡಿದ ನಮ್ಮ ಜಡತ್ವವನ್ನು ಬಡಿದೋಡಿಸಬೇಕು. ಅಂತಹ ಕನ್ನಡದ ದೀಪದ ಸುಳಿವಿದ್ದಲ್ಲಿ ನಮ್ಮ ಕಿವಿಗಳು ಮನಗಳು ತೆರೆದುಕೊಳ್ಳಬೇಕು. ಕನ್ನಡವನ್ನು ಪ್ರೀತಿಸುವ ಪೋಷಿಸುವ ಪ್ರಯತ್ನಗಳಿಂದ ಕನ್ನಡದ ದೀಪವನ್ನು ಹಚ್ಚಬೇಕು.

ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ||

ಕರುನಾಡ ದೀಪ ಸಿರಿನುಡಿಯ ದೀಪ, ಒಲವೆತ್ತಿ ತೋರುವಾ ದೀಪ|| ಹಚ್ಚೇವು||

ಬಹುದಿನಗಳಿಂದ ಮೈಮರವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು

ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು.

ನಾವು ಕನ್ನಡಿಗರು ನಡುನಾಡಿನಲ್ಲೇ ಇರಲಿ, ಗಡಿನಾಡಿನಲ್ಲೇ ಇರಲಿ ಕನ್ನಡಕ್ಕೆ ಕಳೆಯಂತಿರಬೇಕು. ಮರೆವು ಎಂಬುದನ್ನು ಮರೆತು, ಒಲವನ್ನು ಪರಸ್ಪರ ಹಂಚಿಕೊಂಡು ಪ್ರೀತಿ-ವಿಶ್ವಾಸದಿ ಬೆರೆತು ಬಾಳಬೇಕು. ಕನ್ನಡದ ಕಂದಮ್ಮಗಳು ನಾವಾಗಿರಲು ನಮ್ಮ ನರನರಗಳಿ ಕನ್ನಡವು ಮಿಡಿದು ಕನ್ನಡದ ದೀಪಕ್ಕೆ ಸೊಡರುಗಳಾಗಿ ಹೊತ್ತಿ ಉರಿಯಬೇಕು; ಪ್ರಜ್ವಲಿಸಬೇಕು. ಎಂಬುದು ಕವಿಗಳ ಆಶಯವಾಗಿದೆ.

ಕಲ್ಪನೆಯ ಕಣ್ಣುಗಳು ಹರಿಯುವತನಕ, ಅಂತ್ಯವಿಲ್ಲದಂತೆ ಸಾಲು ದೀಪಗಳನ್ನು ಬೆಳಗಿಸುವ ಹೊಣೆ ನಮ್ಮದಾಗಿದೆ. ಆ ದೀಪಗಳ ಬೆಳಕಲ್ಲಿ ಕನ್ನಡತಾಯ ರೂಪವನ್ನು ಕಣ್ತುಂಬಿಕೋಳ್ಳಬೇಕಿದೆ. ಪ್ರಸನ್ನಳಾದ ತಾಯಿಯನ್ನು ಕಾಣುವ ದಾರಿ ಇದಾಗಿದೆಯೆಂದು ಕವಿ ಸೂಚಿಸಿದ್ದಾರೆ.

ನಡುನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು

ಮರೆತೇವು ಮರೆವ ತೆರೆದೇವು ಮನವ ಎರೆದೇವು ಒಲವ ಹಿಡಿನೆನೆಪ

ನರನರವನೆಲ್ಲಾ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ||

ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು

ಹಚ್ಚಿರುವ ದೀಪದಲಿ ತಾಯ ರೂಪ ಅಚ್ಚಳಿಯದಂತೆ ತೊರೇವು||ಹಚ್ಚೇವು||

ತಮ್ ತಮ್ಮಲ್ಲಿನ ದ್ವೇಷ-ಅಸೂಯೆಯ ಭಾವಗಳನ್ನು ಗಡಿನಾಡಿನಾಚೆಗೆ ತೂರಿ, ಪರಸ್ಪರ ಪ್ರೀತಿ-ಸ್ನೇಹದಿಂದಿರಲು ನಾಡಿನೆಡೆಗಿನ ಒಲವೊಂದೇ ನಮ್ಮಧ್ಯೇಯವಾಗಿರಲು ನಮ್ಮ ಮನೆಮನಗಳಲ್ಲಿ ಕನ್ನಡದ ದೀಪವು ಬೆಳಗುತ್ತಿದೆ. ನಾವೆಲ್ಲಾ ಒಂದಾಗಿ ನಮ್ಮ ಹಿರಿಯರ ಹೆಸರನ್ನು ಉಳಿಸುವುದರ ಮೂಲಕ ಮಾತೆಯ ಪೂಜೆಯನ್ನು ಕೈಗೊಳ್ಳಬೇಕಿದೆ. ಈ ನಾಡಿವ ಹಸಿರನ್ನೂ ಉಸಿರನ್ನೂ ಸೇವಿಸಿದ ನಾವಿನ್ನೂ ಈ ಮಣ್ಣಿಗೆ ಚಿರಋಣಿಗಳಾಗಿ ದುಡಿಯಬೇಕಿದೆ. ಇಲ್ಲಿ ಹುಟ್ಟಿದ ನಮ್ಮ ಕಂದಮ್ಮಗಳಿಗೂ ಮಿಂಚನ್ನು ಮುಡಿಸುವ ಸೌಭಾಗ್ಯ ನಮ್ಮದಾಗಿದೆ ಎಂದು ಕವಿ ಹಾಡಿದ್ದಾರೆ.

ಒಡಲೊಡಲ ಕಿಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೂರೇವು||

ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ ನಾಡೊಲವ ನೀತಿ ಹಿಡಿನೆನಪ||

ನಮ್ಮವರು ಗಲಿಸಿದ ಹೆಸರುಳಿಸಲು ಎಲ್ಲಾರು ಒಂದೂ ಗೂಡೇವು

ನಮ್ಮೆದೆಯ ಮಿಡಿಯಿವೀ ಮಾತಿನಲ್ಲಿ ಮಾತೆಯನು ಪೂಜೆ ಮಾಡೇವು||

ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯ ಗೀತ ಹಾಡೇವು,,,

ಕರುಳೆಂಬ ಕುಡಿಗೆ ಮಿಂಚನ್ನು ಮುಡಿಸಿ||ಹಚ್ಚೇವು||

ನಾವೆಲ್ಲರೂ ಸಂತೋಷದಿ ಕನ್ನಡದ ದೀಪದ ಬೆಳಕಿನಲ್ಲಿ ಬಾಳುತ್ತಿದ್ದೇವೆ. ಕನ್ನಡ ನಾಡಿನ ಜನತೆಗೆ ನಂದಾದೀಪವಾಗಿ ಕನ್ನಡ ದೀಪವು ಆಶ್ರಯ, ಆನಂದ, ಆತ್ಮತೃಪ್ತಿಯನ್ನು ನೀಡಿ ಕೈ ಹಿಡಿದು ಮುನ್ನೆಡೆಸಿದೆ. ಆ ದೀಪವು ಎಂದೆಂದಿಗೂ ಬೆಳಗುತ್ತಿರುವಂತೆ ನೋಡಿಕೂಳ್ಳುವ ಹೊಣೆ ನಮ್ಮೇಲ್ಲರದ್ದಾಗಿದೆ.

ನಿರಂತರ ಬೆಳಗುವು ಅರಿವಿನ ದೀವಿಗೆಗೆ ನಮೋ ನಮಃ. ದೀಪದಿಂದ ದೀಪದ ಬೆಳಗು. ಜ್ಞಾನದ ಹಂಚಿಕೆಯಿಂದ ಜ್ಞಾನವು ವೃದ್ಧೀ. ನಿರಂತರ ಜ್ಞಾನದಾಹದಿಂದ ನಾವು ನಮ್ಮಲ್ಲಿನ ದೀಪನನ್ನು ಎಂದೂ ಮಂದವಾಗಿಸದಂತೆ ನಂದಾದೀಪಗಳಾಗೋಣವೇ?,,

ದೀಪದ ಬೆಳಗು ಕವಿಮನಗಳಲ್ಲಿ ತರತರಹದ ಬೆರಗುಗಳನ್ನು ಮೂಡಿಸಿದೆ. ಅಂತಹುದೇ ಸಾಹಿತ್ಯಾತ್ಮಕ ಬೆಳಕು ಪಂಜು. ಪುಟ ಪುಟಗಳಲ್ಲೂ ಬೆಳಕಿನ ಬೆರಗನ್ನೂ ನೀಡುತ್ತಾ ಬಂದ ನಮ್ಮ ಪಂಜುವಿಗೆ ತನ್ನ ೨೫ ಸಂಚಿಕೆಯನ್ನು ಹೊರಡಿಸುತ್ತಿರುವ ಸಂಭ್ರಮ. ಶುಭವಾಗಲಿ. ನಿರಂತರ ಪ್ರಜ್ವಲಿಸುತ್ತಿರಲಿ.ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

13 Responses to “ದೀಪ: ದಿವ್ಯ ಆಂಜನಪ್ಪ”

 1. M.S,Krishna murthy says:

  Deepada bagge olle lekana baredidiri Divya,, abinandanegalu, namma manasina andakaravannu todedu jnandada belaka hachuva deepagala bagge uttama lekana

 2. M.S.Krishna murhy says:

  ಮನಸ್ಸಿನ ಅಂದಕಾರವ ತೊಡೆದು ಹಾಕಬಲ್ಲ ದೀಪ… ಕತ್ತಲಲ್ಲಿರುವವರಿಗೆ ಬೆಳಕು ಕೊಡುವ ದೀಪ ,, ದೀಪದ ತುಂಬಾ ಅರ್ಥಗಳನ್ನು ಬಹಳ ಚೆಂದವಾಗಿ ಬೆಳಗಿಸಿದ್ದೀರಿ ದಿವ್ಯ.. ಚೆಂದವಿದೆ ಬರಹ.. ಅಭಿನಂದನೆಗಳು

 3. Ganesh says:

  ಸೂಪರ್.

 4. ಆತ್ಮೀಯರೇ, ಮೆಚ್ಚುಗೆಯ ಪ್ರೊತ್ಸಾಹದ ತಮ್ಮ ಪ್ರತಿಕ್ರಿಯೆಗಳಿಗೆ ನನ್ನ ಅನಂತ ಧನ್ಯವಾದಗಳು 🙂

 5. GAVISWAMY says:

  ದೀಪದ ಬಗ್ಗೆ ಬರೆದಿರುವ ಲೇಖನ ತುಂಬಾ 
  ಸಂದರ್ಭೋಚಿತವಾಗಿಯೂ , ಅರ್ಥಪೂರ್ಣವಾಗಿಯೂ ಇದೆ.

   

 6. prashasti.p says:

  ದೀಪದ ಬಗೆಗಿನ ಸುಂದರ ಲೇಖನ 🙂

 7. ಹಿಪ್ಪರಗಿ ಸಿದ್ದರಾಮ್ says:

  ಮೇಡಮ್..ಜಿ, ಈ ದೀಪದ ಹಿಂದಿನ ಸ್ವಾರಸ್ಯಕರ ಘಟನಾವಳಿಗಳನ್ನು ತಿಳಿದುಕೊಂಡಾದ ನಂತರ ಮತ್ತೊಮ್ಮೆ ನಿಮ್ಮ ಲೇಖನ ಓದಿದೆ…ಶುಭವಾಗಲಿ !

 8. Mahantesh.Y says:

  Channagide Medum……………..

 9. ಸದಾ ನನ್ನೆದೆಯಲ್ಲಿ ಮೊರೆವಂತಾ ಪ್ರಾರ್ಥನಾ ಗೀತೆಯನ್ನು ವಿವರಿಸಿ ಬರೆದ ನಿಮಗೆ ಶರಣು.

  • ನಿಮ್ಮ ಪ್ರೋತ್ಸಾಹಕ್ಕೆ ನನ್ನ ಅನಂತ ಧನ್ಯವಾದಗಳು ಸರ್ 🙂
   ನಿಮ್ಮ ಓದಿ ಆಸ್ವಾದಿಸುವ ಸಹೃದಯಕ್ಕೆ ಕಿರಿಯರಾದ ನಾವು ಶರಣು.

 10. ದಿವ್ಯ ಆಂಜನಪ್ಪ says:

  ಕೃಷ್ಣಮೂರ್ತಿ ಸರ್, ಸಂತೋಷ್ ಸರ್ ಗಣೇಶ್ ಸರ್,
  ಗವಿಸ್ವಾಮಿ ಸರ್, ಪ್ರಶಸ್ತಿ ಸರ್, ಹಿಪ್ಪರಗಿ ಸರ್ ಮಹಾಂತೇಶ್ ಸರ್ ತಮ್ಮೇಲ್ಲರಿಗೂ ನನ್ನ ಅನಂತ ಧನ್ಯವಾದಗಳು 🙂

 11. Anil says:

  ಸೊಗಸಾಗಿ ವಿವರಣೆ ನೀಡಿದ್ದೀರಾ ಮೇಡಂ ಧನ್ಯವಾದಗಳು ನಿಮಗೆ

Leave a Reply