ನಾಟಕಕಾರರಾಗಿ ಕುವೆಂಪು (ಭಾಗ-5):ಹಿಪ್ಪರಗಿ ಸಿದ್ದರಾಮ್


1931ರಲ್ಲಿ ರಚನೆಯಾದ ಮಹಾಕವಿ ಕುವೆಂಪರವರ ‘ಸ್ಮಶಾನ ಕುರುಕ್ಷೇತ್ರಂ’ ರಂಗಕೃತಿಯು ಇಂದಿಗೂ ಅತ್ಯಂತ ಪ್ರಸ್ತುತವಾಗುತ್ತಾ, ನಮ್ಮನ್ನು ಸದಾಕಾಲ ಸಾಮಾಜಿಕ ಸನ್ನಿವೇಶಗಳೊಂದಿಗೆ ಅನುಸಂಧಾನ ಮಾಡುವ ಕಥಾವಸ್ತು ಹೊಂದಿರುವ ಈ ರಂಗಕೃತಿಯಲ್ಲಿ ಯುದ್ಧೋತ್ತರ ಮಹಾಭಾರತದ ಚಿತ್ರಣ, ಪಂಪ, ರನ್ನ ಮುಂತಾದ ಕವಿಗಳು ಕುರುಕ್ಷೇತ್ರದ ಯುದ್ಧದ ಕೊನೆಯ ದೃಶ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿರುವುದನ್ನು ತಮ್ಮ ಪ್ರಾಂಜಲ ಮನದಿಂದ ಪರೋಕ್ಷವಾಗಿ ಮಹಾಕವಿಗಳು ಕೃತಜ್ಞತೆಯೊಂದಿಗೆ ಸ್ಮರಿಸಿಕೊಳ್ಳುತ್ತಾರೆ. ಇಂದಿನ ಜಾಗತೀಕರಣೋತ್ತರ ಭಾರತ ಮತ್ತು ಸಮಕಾಲೀನ ಸಂದರ್ಭದ ಜಗತ್ತಿನ ಪ್ರಭಲ ರಾಷ್ಟ್ರಗಳೆಲ್ಲವೂ ಸ್ವರಕ್ಷಣೆಯ ನೆಪದಲ್ಲಿ ಸಿಡಿಮದ್ದು, ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಾ ಯುದ್ಧದ ಭೀತಿಯನ್ನು ಸದಾಕಾಲ ಜೀವಂತವಾಗಿರಿಸುತ್ತಾ, ಪರರ ನೆಲವನ್ನು ಆಕ್ರಮಿಸಿಕೊಳ್ಳುವ ಅಥವಾ ತಮ್ಮ ತೆಕ್ಕೆಗೆ ಬಲವಂತದಿಂದ ಕಸಿದುಕೊಳ್ಳುವ ಹುನ್ನಾರದಲ್ಲಿರುವ ಆತಂಕದ ಕಾಲದಲ್ಲಿ ನಾವಿದ್ದೇವೆ. ಇಂತಹ ಯುದ್ಧ ಸಂಸ್ಕೃತಿಯ ಬಹುಮುಖಗಳಾದ ಭಯ, ತಲ್ಲಣ, ನೋವು, ಕ್ರೌರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಆಗಿನ ಸಂದರ್ಭದಲ್ಲಿಯೇ ಮಹಾಕವಿಗಳು ಹೇಳಿರುವುದನ್ನು ನೋಡಿದರೆ ಒಂದು ರೀತಿಯಲ್ಲಿ ಅವರನ್ನು ಕರುನಾಡಿನ ಕಾಲಜ್ಞಾನಿಯೆಂದರೂ ತಪ್ಪಾಗಲಿಕ್ಕಿಲ್ಲ. ಹೀಗೆ ಹಲವಾರು ಸಂಗತಿಗಳನ್ನು ಈ ರಂಗಕೃತಿಯಲ್ಲಿ ಅಳವಡಿಸಿಕೊಂಡು ಮಹಾಕವಿ ಕುವೆಂಪು ಅವರು ಚಿತ್ರಿಸಿರುವುದನ್ನು ಹಿಂದಿನ ಸಂಚಿಕೆಯಲ್ಲಿ ನಾವು ನೋಡಿದ್ದೇವೆ.

ಈಗ ಉತ್ತರ ರಾಮಾಯಣದಿಂದ ಕಥಾವಸ್ತುವೊಂದನ್ನು ಆಯ್ದುಕೊಂಡು ‘ಸೀತಾಪರಿತ್ಯಾಗ’ದ ಸಂದರ್ಭದ ಹಿನ್ನಲೆಯಾಧಾರಿತವಾಗಿ 1931ರಲ್ಲಿ ರಚಿತವಾಗಿರುವ ಅವರದೇ ಇನ್ನೊಂದು ರಂಗಕೃತಿ ‘ವಾಲ್ಮೀಕಿಯ ಭಾಗ್ಯ’. ಈ ಕೃತಿಯು ಒಂದೇ ದೃಶ್ಯದ ಕಡಿಮೆ ಅವಧಿಯ ಏಕಾಂಕ ಶೈಲಿಯ ರಂಗಕೃತಿಯಾಗಿದ್ದು ಸೀತಾದೇವಿಯ ವನವಾಸದ ವಸ್ತುವನ್ನುಳ್ಳದ್ದಾಗಿದೆ.

ವಾಲ್ಮೀಕಿಯ ಭಾಗ್ಯ (1931) :

ಈ ರಂಗಕೃತಿಯು ಪರಿಮಿತ ವ್ಯಾಪ್ತಿಯ ಕಡಿಮೆ ಅವಧಿಯ ಒಂದೇ ದೃಶ್ಯಾವಳಿಯ, ಲಕ್ಷ್ಮಣ, ಸೀತೆ ಮತ್ತು ವಾಲ್ಮೀಕಿ ಎಂಬ ಮೂರು ಪಾತ್ರಗಳನ್ನೊಳಗೊಂಡಿದೆ. ಇಲ್ಲಿ ಮಹಾಕವಿಗಳು ಮಾಡಿರುವ ರಂಗಕೃತಿಯೊಂದರ (ಚಿಕ್ಕ ಮತ್ತು ಚೊಕ್ಕ) ವಿನ್ಯಾಸವನ್ನು ಗಮನಿಸುವುದರೊಂದಿಗೆ ಪಾತ್ರ ಪೋಷಣೆ, ಮನೋಗತ ವಿಚಾರಗಳ ವಿಶ್ಲೇಷಣೆ, ಕುತೂಹಲದೊಂದಿಗೆ ರಂಗಕೃತಿಯ ಆರಂಭ ಮತ್ತು ಅಂತ್ಯಗಳ ಪರಿಣಾಮಕಾರಿ ಪ್ರಸ್ತುಪಡಿಸುವಿಕೆಯ ಕುಶಲತೆಯು ಗಮನ ಸೆಳೆಯುತ್ತದೆ. ಮಹಾಕವಿಗಳು ಲಕ್ಷ್ಮೀಶನ ಪದ್ಯವನ್ನು, ಮುದ್ದಣ್ಣನ ಗದ್ಯದಲ್ಲಿಯ ಸನ್ನಿವೇಶಗಳನ್ನು ಕೃತಜ್ಞತಾಪೂರ್ವಕ ಭಾವದೊಂದಿಗೆ ನೆನಪಿಸಿಕೊಳ್ಳುತ್ತಾರೆ. ಕೆಲವೆಡೆ ಆ ಕವಿಗಳು ತಮ್ಮ ಕಾವ್ಯಗಳಲ್ಲಿ ಬಳಸಿರುವ ಮಾತುಗಳನ್ನು ಹಾಗೆಯೇ ಪಾತ್ರಗಳ ಮೂಲಕ ಹೇಳಿಸಿರುವುದನ್ನು ಬಹಿರಂಗವಾಗಿ ಹೇಳುತ್ತಾರೆ. ಈ ಕೃತಿಯು 1931ರಲ್ಲಿ ಮೊದಲ ಮುದ್ರಣವನ್ನು ಕಂಡರೆ, ಇತ್ತೀಚೆಗಿನ ಮುದ್ರಣದ ಹನ್ನೊಂದನೆಯ ಆವೃತ್ತಿಯನ್ನು ಉದಯರವಿ ಪ್ರಕಾಶನದಿಂದ (2010) ಪ್ರಕಟಿಸಲಾಗಿದೆ.

ರಂಗಕೃತಿಯ ಆರಂಭದಲ್ಲಿಯೇ ಮಹಾಕವಿಗಳು “ಅಯೋಧ್ಯೆಯ ಶ್ರೀರಾಮಚಂದ್ರನು ಪಿಸುಣರ ಮಾತಿಗೆ ಕಿವಿಗೊಟ್ಟು ಗರ್ಭಿಣಿಯಾಗಿದ್ದ ಸೀತಾಮಾತೆಯನ್ನು ಅರಮನೆಯಿಂದ ಅರಣ್ಯದಲ್ಲಿ ಬಿಟ್ಟು ಬರಲು ಲಕ್ಷ್ಮಣನನ್ನು ನಿಯೋಜಿಸುವ ಹೃದಯವಿದ್ರಾವಕ ಸನ್ನಿವೇಶವನ್ನು ಚಿತ್ರಿಸುವ ಪ್ರಯತ್ನವಿದಾಗಿದೆ. ಈ ಹಿಂದಿನ ಕವಿವರ್ಯರು ಈ ಘಟನೆಗೆ ಹಲವಾರು ಕಾರಣಗಳನ್ನು ಹೇಳಿರುವರು. ಲೋಕಾಪವಾದದ ನಿವಾರಣೆ, ರಘುಕುಲದ ಕೀರ್ತಿಸಂರಕ್ಷಣೆ, ಶ್ರೀರಾಮನ ಸ್ವಕೀರ್ತಿಪಾಲನೆ ಮೊದಲಾದವು. ಆ ಕಾರಣಗಳಲ್ಲಿ ಕೆಲವು ಕುಂಟು ; ಮತ್ತೆ ಕೆಲವು ಕುರುಡು ; ಎಂಬುದು ಈ ಕಾವ್ಯಗಳಲ್ಲಿಯೇ ರಾಘವಾನುಜರಾಡುವ ಪ್ರತಿವಾದದಿಂದ ತಿಳಿದು ಬರುತ್ತದೆ. ಈ ದೃಶ್ಯದಲ್ಲಿ ವಾಲ್ಮೀಕಿಯ ಭಾಗ್ಯವನ್ನು ಕಾರಣವಾಗಿ ಇಟ್ಟುಕೊಂಡಿದೆ. ಈ ಕಾರಣವನ್ನು ಹೇಳಿದುದರಿಂದ ಸೀತಾಪರಿತ್ಯಾಗದ ಸಮಸ್ಯೆ ಪರಿಹಾರವಾಗದಿದ್ದರೂ ಅದು ಭಾವಪೂರ್ಣವಾಗುವುದೆಂದು ಬರೆದವನ ಆಶಯ”ವೆಂದು ವಿಜ್ಞಾಪಿಸಿಕೊಳ್ಳುತ್ತಾರೆ.

ದೃಶ್ಯದಾರಂಭವು ಗಂಗಾತೀರದ ಅರಣ್ಯದಲ್ಲಿ ನಡೆಯುತ್ತದೆ. ಗರ್ಭಿಣಿಯಾದ ಸೀತಾದೇವಿಯು ನಡೆದು ಆಯಾಸಗೊಂಡರೂ ಉತ್ಸಾಹದ ಬರದಲ್ಲಿ ಸಡಗರದಿಂದ ಬರುತ್ತಾಳೆ. ಜೊತೆಗೆ ಲಕ್ಷ್ಮಣನು ಬಿಲ್ಲು-ಬತ್ತಳಿಕೆಯೊಡನೆ ಒಂದು ದೊಡ್ಡ ಗಂಟನ್ನು ಹೊತ್ತುಕೊಂಡು ಬಂದಿರುವನು. ಸೀತಾಮಾತೆಯೆಂಬ ಸತಿಯು ತನ್ನ ಪತಿಯಾದ ಶ್ರೀರಾಮಚಂದ್ರನು ತನ್ನ ಕೋರಿಕೆಯಂತೆ ಋಷಿಗಳ ಆಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾನೆಂಬ ಅಭಿಮಾನದ ಮುಗ್ದ ಸತಿಶಿರೋಮಣಿ. ಮಾತೃ ಸ್ವರೂಪಳಾದ ಅತ್ತಿಗೆ ಸೀತೆಯನ್ನು ಅರಣ್ಯದಲ್ಲಿ ಬಿಟ್ಟುಬರಬೇಕೆಂಬ ಅನುಜ (ಅಣ್ಣ) ರಾಮಚಂದ್ರ ಮಹಾರಾಜರ ರಾಜಾಜ್ಞೆಯನ್ನು ಪಾಲಿಸಬೇಕಾದ ಧರ್ಮಸಂಕಟದಲ್ಲಿರುವ ಲಕ್ಷ್ಮಣನು ಬಲವಂತದ ಮುಗುಳ್ನಗೆಯೊಂದಿಗೆ ಏನೊಂದು ಅರಿಯದೆ ಸಂಭ್ರಮದಲ್ಲಿರುವ ಅತ್ತಿಗೆಯ ಪರಿಸ್ಥಿತಿಗೆ ಮರುಗುತ್ತಿದ್ದಾನೆ. ಇಂತಿಪ್ಪ ಇರ್ವರ ಮನಸ್ಥಿತಿಯನ್ನು ಮಹಾಕವಿಗಳು ಇಬ್ಬರ ಸಂಭಾಷಣೆಗಳ ಮೂಲಕ ಹೇಳಿಸುತ್ತಾರೆ.

ಪರಿಸರ ಪ್ರೇಮಿಗಳಾದ ಮಹಾಕವಿಗಳು ರಂಗನಾಟಕದ ಆರಂಭದ ಸೀತೆಯ ಸಂಭಾಷಣೆಯ ಮೂಲಕ ಪರಿಸರದ ವರ್ಣನೆಯನ್ನು ಮಾಡುತ್ತಾರೆ. ಸೀತೆಯು ಪ್ರಕೃತಿಯನ್ನು ನೋಡಿ ಆನಂಧಿಸುತ್ತಿರುವಾಗ ಲಕ್ಷ್ಮಣನು ದೂರದಲ್ಲಿರುವುದನ್ನು ಕಂಡು ಧರ್ಮಸಂಕಟದಲ್ಲಿರುವ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದಾನೆ. ಆಗ ಸೀತೆಯು ಮುಗುಳ್ನಗೆಯೊಂದಿಗೆ :

ಲೇಸಾಯ್ತು ! ನಿಡು ಲೇಸಾಯ್ತು !
ಹೆಣ್ಣಾದ ನಾನೆ ಸಾಗಿಬರೆ,
ಗಂಡುಗಲಿ ನೀನೆ ನಡೆಯಲಾರದಿರೆ, ನಾಣಲ್ತೆ?
ಇರು, ಇರು ; ಊರ್ಮಿಳೆಗಿದನೊರೆದಪೆಂ :
ನಿನ್ನಿನಿಯಂ, ನಚ್ಚಿನ ನಿನ್ನಿನಿಯಂ
ಪೆಣ್ಣೊಡಗೂಡಿ ನಡೆಯಲಾರದೆ
ಬಸವಳಿದು ಪಿಂದಾದಂ ಎಂದು !

ತಮಾಷೆಯೊಂದಿಗೆ ಛೇಡಿಸುತ್ತಿರುವಾಗ ಆತನು ಅತ್ತಿಗೆಯ ಹತ್ತಿರಕ್ಕೆ ಬರುತ್ತಾನೆ. ಇಲ್ಲಿ ಮಹಾಕವಿಗಳು ತಮಾಷೆಯನ್ನು ಸೊಗಸಾಗಿ ಉನ್ನತ ಮಟ್ಟದ ರಾಜಹಾಸ್ಯದಲ್ಲಿ ನಿರೂಪಿಸುತ್ತಾ, ಬಹುಕಾಲ ನೆನಪಿನಂಗಳದಲ್ಲಿ ಹಸಿರಾಗಿಸುತ್ತಾರೆ. ಮನದಲ್ಲಿಯ ಸಂಕಟವನ್ನು ತೋರ್ಪಡಿಸಿಕೊಳ್ಳದೇ ಲಕ್ಷ್ಮಣನು ಭಾರವಾಗಿರುವ ಗಂಟನ್ನು ತೋರಿಸುತ್ತಾ, ಅದನ್ನು ಹೊತ್ತು ಕೊಂಡು ಬರಲು ತಡವಾಯಿತೆಂದು ನೆಪವನ್ನು ಹೇಳುತ್ತಾನೆ. ಹಿಂದಿನ ವನವಾಸದ ಸಂದರ್ಭದಲ್ಲಿ ಎಲ್ಲ ಭಾರವನ್ನು ಹೊತ್ತಿದ್ದಲ್ಲದೇ ಲಂಕೆಯ ಯುದ್ಧದಲ್ಲಿ ರಾಕ್ಷಸರು ಎಸೆದ ಬಲ್ಗುಂಡುಗಳನ್ನು ನಿರಾತಂಕವಾಗಿ ಎದುರಿಸಿದವನಿಗೆ, ಈ ಗಂಟು ಭಾರವೆನಿಸಿದ್ದಕ್ಕೆ ಸೀತೆಗೆ ಮತ್ತಷ್ಟು ನಗುವುಕ್ಕಲು (ಹಾಸ್ಯಕ್ಕೆ) ಸಾಮಗ್ರಿ ಪೂರೈಸಿದಂತಾಗುತ್ತದೆ.

ಓಹೋ! ಈಗಳರಿತೆಂ !
ಅರಮನೆಯ ವಾಸಂ,
ಮೇಣೂರ್ಮಿಳೆಯ ಲಲಿತ ಸಹವಾಸಂ
ನಿನ್ನನಿಂತುಗೈದಿರ್ಪುದೆ ಸಾಜಂ !

ಎಂದು ಅಣಕಿಸುತ್ತಾ ನಗೆಯಾಡುತ್ತಾಳೆ. ಲಕ್ಷ್ಮಣನಿಗೆ ಗಂಟಿನಲ್ಲೇನಿದೆ, ಯಾಕಿಷ್ಟು ಭಾರವಿದೆಯೆಂಬುದು ಕುತೂಹಲದ ಸಂಗತಿ. ಆ ಕುತೂಹಲಕ್ಕೆ ಸೀತೆಯ ವಿವರಣೆ ಹೀಗಿದೆ :

ಅದರೊಳೇನಿರ್ಪುದೈ, ಸೌಮಿತ್ರಿ ?
ತಪೋವನದ ಋಷಿಗಳ್ಗೆಂದು ಮುನಿಪತ್ನಿಯರ್ಗೆಂದುಂ
ಪರಿಮಳದ್ರವ್ಯಂಗಳಂ ದಿವ್ಯಾಂಬರಂಗಳಂ
ಕೈಗಾಣ್ಕೆಯಾಗಿಟ್ಟಿಹೆಂ.
ಆಶ್ರಮದ ಕಿರುವರೆಯದ ನಲ್ಗುವರರ್ಗೆಂದು
ಒಂದೆರಳ್ವಗೆಯ ನಲ್ಲುಣಿಸನಿಟ್ಟಿಹೆಂ.
ಮತ್ತೇನೊಂದುಮಿಲ್ಲಂ !-ಆಃ! ಮರೆತಿರ್ದೆಂ!
ಎನ್ನಿನಿಯನಡಿಗಳ ಚೆಂಬೊನ್ನ ಪಾವುಗೆಗಳಿಹವಲ್ಲಿ !

ಎಂದು ಹೇಳುತ್ತಾ ‘ಭಾರವಾಗಿದ್ದರೆ ಇತ್ತ ನೀಡು’ ಎಂದು ಕೈನೀಡುತ್ತಾಳೆ. ‘ಭಕ್ತಂಗೆ ದೇವರಡಿದಾವರೆಗಳ್ ಭರಮೇ?’ ಎಂದು ಕೇಳುತ್ತಾ ‘ಪರಿಹಾಸ್ಯ ಸಾಕಮ್ಮ’ ಎನ್ನುತ್ತಾ ಏನೊಂದು ಅರಿಯದವನಂತೆ ಲಕ್ಷ್ಮಣನು ಆ ಗಂಟಿಗೆ ನಮಸ್ಕರಿಸುತ್ತಾನೆ. ಸೀತಮ್ಮನು ಪರಿಹಾಸ್ಯ ಮಾಡುತ್ತಾ ಪ್ರಕೃತಿಯ ಸೊಬಗನ್ನು ನೋಡುತ್ತಾ ಆನಂದಿಸುವುದು ಮುಂದುವರಿಯುತ್ತದೆ. ಅದನ್ನು ಗಮನಿಸದೆ ತನ್ನೊಳಗೆ ಯೋಚಿಸುತ್ತಾ ತಾನೀಗ ಮಾಡಬೇಕಾದ ಘನಘೋರಕಾರ್ಯವನ್ನು ನೆನೆದು ಲಕ್ಷ್ಮಣನು ಪರಿತಪಿಸುತ್ತಾನೆ. ‘ಆ ರಾಘವನು ಇಂತಹ ಕೋಮಲ ಅತ್ತಿಗೆಯ ಕೊಲೆಗೆಲಸಕ್ಕೆ ನನ್ನನ್ನು ಯಾಕೆ ನಿಯೋಜಿಸಿದನೋ’ ಎಂದು ಮನದಲ್ಲಿ ಹಲುಬುತ್ತಾ ನಿಂತಿರುವಾಗ, ತನ್ನ ಆನಂದೋತ್ಸಾಹಕ್ಕೆ ತಕ್ಕ ಪ್ರತಿಕ್ರಿಯೆ ಲಕ್ಷ್ಮಣನಿಂದ ಬಾರದಿರುವುದಕ್ಕೆ ಸೀತೆ ತುಸು ಸಿಟ್ಟಾಗುತ್ತಾಳೆ. ‘ನನ್ನೊಡನೆ ನಿನಗೆ ಬರಲು ಇಚ್ಚೆಯಿಲ್ಲ ಎಂದಿದ್ದರೆ ಅಲ್ಲಿಯೇ ಹೇಳಬಹುದಾಗಿತ್ತು ಇನ್ನುಳಿದ ಭರತ-ಶತ್ರುಘ್ನರಲ್ಲಿ ಯಾರಾದರೊಬ್ಬರನ್ನು ಕೆರದುಕೊಂಡು ಬರುತ್ತಿದ್ದೆ’ ಎಂದು ಹೇಳುತ್ತಾ ತನ್ನ ದುಡುಕು ಸ್ವಭಾವವನ್ನು ತೋರಿಸುತ್ತಾಳೆ. ಮದುವೆಯ ನಂತರದಿಂದ ವನವಾಸ ಸಂದರ್ಭದಿಂದಲೂ ಎಷ್ಟೊಂದು ವರ್ಷಗಳ ಕಾಲ ಮೈದುನ ಲಕ್ಷ್ಮಣನು ತನ್ನ ಮತ್ತು ಪತಿಯ ಸೇವೆ ಮಾಡಿರುವಾಗಲೂ ಆತನ ಮನಸ್ಸನ್ನು ಅರ್ಥೈಸಿಕೊಳ್ಳಲು ಅಸಮರ್ಥಳಾದ ಸೀತೆಯ ಸ್ವಭಾವವನ್ನು ಈ ಪ್ರಸಂಗದಿಂದ ಅರಿತುಕೊಳ್ಳಬಹುದು. ಇದರಿಂದ ಕಣ್ಣೀರು ತಂದುಕೊಂಡ ಲಕ್ಷ್ಮಣನು ‘ಜನನೀ, ಕೋಪಿಸದಿರಿಂ!’ ಎಂದಾಗ ಆತನ ಕರುಣಾಜನಕ ಮಾತಿಗೆ ಕರಗಿ ಹೋಗುವ ಸೀತವ್ವ ತಾಯಿ ‘ಏನೈ ಕಂದಾ, ಕಣ್ಣು ಹನಿಯಾಡುತಿದೆ!’ ಎಂಬ ತಾಯ ಮಮಕಾರದ ಮಾತುಗಳು ನಮ್ಮಲ್ಲಿ ಒಂದು ಕ್ಷಣ ಕಣ್ಣೀರು ತರಿಸುತ್ತವೆ. ‘ಕಾಡಿನಲ್ಲಿಯ ದುಂಬಿಗಳ ಪರಾಗ ಬಿದ್ದು ಕಣ್ಣೀರು ಬಂದಿದೆ’ ಎಂದು ನೆಪ ಹೇಳುತ್ತಾನೆ. ಹಾಗೇ ನೋಡಿದರೆ ರಾಮಾಯಣದಲ್ಲಿ ಲಕ್ಷ್ಮಣ ಪಾತ್ರ ಕರುಣಾಜನಕ ಸ್ಥಿತಿಯದು. ‘ಎಲ್ಲಿ ತಪ್ಪಿದೆನೋ’ ಎಂದು ಆತಂಕ ಪಡುತ್ತಾನೆ. ಪುಣ್ಯಾಶ್ರಮದ ಕುರುಹುಗಳೊಂದು ಇಲ್ಲದ ದಟ್ಟವಾದ ಅಡವಿಗೆ ಬಂದಿರುವುದು ಸೀತೆಗೆ ಗೊತ್ತಾಗಿ ಹೆಚ್ಚಿನ ಆತಂಕಗಳು ಆರಂಭವಾಗುತ್ತವೆ. ಇದೇ ಸಮಯದಲ್ಲಿ ಸೀತೆಗೆ ಅಪಶಕುನಗಳು ಕಾಣಿಸಲಾರಂಭಿಸುತ್ತವೆ. ಲಕ್ಷ್ಮಣನು ‘ಅಪಶಕುನಗಳೆಲ್ಲಾ ತನಗಾಗಿ ಕಾಣಿಸುತ್ತಿರಬಹುದು’ ಎಂದು ಹೇಳುತ್ತಾ ವಿಷಯ ಮರೆಸಲು ಪ್ರಯತ್ನಿಸುತ್ತಾನೆ. ರಾಮನನ್ನು ಅರಮನೆಯಲ್ಲಿ ಬಿಟ್ಟು ಬಂದುದಕ್ಕೆ ಸೀತೆಗೆ ಪಶ್ಚಾತ್ತಾಪದ ಭಾವ ಮೂಡಿದಂತಾಗಿ ತನಗೆ ಅಮಂಗಳವೆಂದು ಭಾವಿಸುತ್ತಾಳೆ. ‘ಪತಿಯ ಪಾದವಂ ತೊರೆದು ಬನಕೈತಂದೆನಗೆ! ಅಯ್ಯೋ ಪಾವನಕೆ ಪಾವನಂ, ಮಂಗಳಕೆ ಮಂಗಳಂ’ ಎಂದು ದುಃಖದಿಂದ ಮರುಗುತ್ತಾಳೆ. ಅಲ್ಲಿಯವರೆಗಿನ ಸಂಭ್ರಮದ ಖುಷಿಯಿಂದ ಕಾಣಿಸದಿದ್ದ ದೈಹಿಕ ಆಯಾಸವು ಈಗ ಕಾಣಿಸಿಕೊಳ್ಳತೊಡಗುತ್ತದೆ. ಈಗ ಲಕ್ಷ್ಮಣನ ದುಃಖ ಕಟ್ಟೆಯೊಡೆದು ಬಿಕ್ಕಿ ಬಿಕ್ಕಿ ಅಳುತ್ತಾನೆ.

ಮಾತೆ,
ಬನಕೆ ಪೋಪೆನೆಂದು ಕಾಂತನನೇತರ್ಕೆ ಬೇಡಿದೌ?
ಎನ್ನನೇತರ್ಕೆ ಇಂತರ್ಪ ಘೋರಕೀಡುಮಾಡಿದೌ?-
ಹಾ ವಿಧಿ !
ರಾವಣನಂ ತಪ್ಪಿಸಿ ಲಕ್ಷ್ಮಣನಿಂ ಕೊಲಿಸಲೇಂದೇ
ರಾಮಾಯಣವನಾಗಿಸಿದಯ್ ?

ಎಂದು ರೋದಿಸುತ್ತಾನೆ. ಮನಕಲಕುವಂತಹ ಸನ್ನಿವೇಶವನ್ನು ಮಹಾಕವಿಗಳು ಸೃಷ್ಟಿಸಿರುವುದನ್ನು ನೋಡಿದರೆ ಭಾವನಾತ್ಮಕವಾಗಿ ಮನಸ್ಸುಗಳೊಂದಿಗೆ ಆಟವಾಡುತ್ತಾ ಕೌಟುಂಬಿಕ ವಿಷಯದಲ್ಲಿಯೂ ಮಾನವತೆಯನ್ನು ಭೋಧಿಸುವ ಅವರ ವಿಶ್ವದರ್ಜೆಯ ಉಚ್ಚ ವಿಚಾರಗಳು ಅಪರೋಕ್ಷವಾಗಿ ವ್ಯಕ್ತವಾಗುತ್ತದೆ. ಲಕ್ಷ್ಮಣನು ರೋದಿಸುವದನ್ನು ಕಂಡು ಸೀತೆಯ ಆತಂಕ ಹೆಚ್ಚಾಗುತ್ತದೆ. ಮರಳಿ ಹೋಗೋಣವೆಂದು ತಯಾರಾಗುತ್ತಾಳೆ. ಆದರೆ ಲಕ್ಷ್ಮಣನು ಇದಕ್ಕೆ ತಯಾರಿಲ್ಲ. ‘ಮರಳುವುದೆಲ್ಲಿಗೆ ತಾಯೇ’ ಎಂದು ಕೇಳುತ್ತಾನೆ. ‘ನಡೆದು ಬಂದ ದಾರಿಯನ್ನು ಮರೆತೆಯೇನು?’ ಎಂದು ಹೆಚ್ಚಿನ ಉದ್ವೇಗದಲ್ಲಿ ಕೇಳಿದಾಗ, ‘ತಾಯೆ, ನಾನುರು ಚಂಡಾಲಂ! ಮಹಾಪಾಪಿ ! ಮಾತೃಘಾತಕಂ ! ದೇವೀ, ನಾನಿಲ್ಲಿ ಕೊಲೆಯಾದಪೆಂ ನೀಂ ಪಿಂತಿರುಗಿ !’ ಎಂದು ಹೇಳುವ ಲಕ್ಷ್ಮಣನ ಮಾತುಗಳು ತಾನು ಮಾಡುತ್ತಿರುವ ಕೆಲಸದ ಕುರಿತು ತಪ್ಪಿತಸ್ಥಭಾವ ತುಂಬಿರುವುದು ಕಂಡು ಬಂದು ಪರಿಸ್ಥಿತಿಯನ್ನು ನಿಬಾಯಿಸುವ ಕುರಿತು ಚಿಂತಿತನಾಗಿರುವುದು ಕಂಡು ಬರುತ್ತದೆ. ಹೀಗೆಕೆ ಮಾತಾಡುತ್ತಿರುವಿ ನಿನಗೇನು ಹುಚ್ಚು ಹಿಡಿದಿದೆಯೇನು? ಎಂದು ಕೇಳುತ್ತಾ ರಾಮನಾಗಿದ್ದರೂ ದಾರಿ ತಪ್ಪಿದಾಗ ಹೀಗೆ ಆಗುತ್ತಿರಲಿಲ್ಲವೇ? ಎಂದು ಧೈರ್ಯದ ಮಾತುಗಳನ್ನಾಡುತ್ತಾಳೆ. ಆಗ ಲಕ್ಷ್ಮಣನು ನಿಟ್ಟುಸಿರಿನಿಂದ ‘ನಾನಂತು ಮರಳಲಾರೆಂ, ನಿಮ್ಮೊಡನೆ !’ ಎನ್ನುತ್ತಾನೆ. ಇಷ್ಟೆಲ್ಲಾ ಧೈರ್ಯ ಹೇಳಿದರೂ ಕೇಳದವನ ಮೇಲೆ ತುಸು ಸಿಡುಕಿನಿಂದ ‘ಎನ್ನನಿಲ್ಲಿಯೆ ಬಿಟ್ಟು ನೀನೊರ್ವನೆ ಪೋಗು!’ ಎನ್ನುವಲ್ಲಿಗೆ ಸೀತವ್ವನ ಬಾಯಿಯಿಂದಲೇ ಈ ಮಾತು ಬರುವಂತೆ ಮಾಡಿರುವುದು ಮಹಾಕವಿಗಳ ಒಳಗಿನ ನಾಟಕರಚನಾಕಾರನ ಬುದ್ಧಿವಂತಿಕೆಗೆ ತಾಜಾ ಉದಾಹರಣೆ ಎಂದರೂ ಅಡ್ಡಿಯಿಲ್ಲ. ಆ ಸಿಡುಕಿನ ಮಾತು ಸೀತವ್ವನಿಗೆ ನಿಜವಾಗಿ ನಡೆಯಬೇಕಾಗಿದೆಯೆಂಬುದನ್ನು ಲಕ್ಷ್ಮಣನು ಗತ್ಯಂತರವಿಲ್ಲದೇ ಹೇಳಬೇಕಾಗುತ್ತದೆ. ಆ ಮಾತು ಕೇಳಿದ ಸೀತೆ ಆಘಾತದಿಂದ ಮೂರ್ಛೆಹೋಗುತ್ತಾಳೆ. ಲಕ್ಷ್ಮಣ ಅವಳನ್ನು ಉಪಚರಿಸುತ್ತಾನೆ. ‘ಮಾತೆಯಂ ಪೊರೆಯೈ !, ರಾಮನ ಸೇವೆ ಸಂದುದೇ ತನಗೆ’ ಎಂದು ಪಾರ್ಥಿಸುತ್ತಾನೆ. ಎಚ್ಚರಗೊಂಡ ಸೀತೆಯ ದುಃಖ ಕಟ್ಟೆಯೊಡೆದು ಅಳತೆಗೆ ನಿಲುಕದಂತಾಗಿದೆ.

……..
ಕೊಯ್ಯಲೊಲ್ಲದೆ ಕೊರಲಂ ಇಂತುಟೆನ್ನಂ ಬಿಡಲು
ಮಾಡಿದಪರಾಧಮುಂಟೇ?
ಕಯ್ಯಾರೆ ಖಡ್ಗಮಂ ಕೊಟ್ಟು
ತನ್ನರಸಿಯಂ ಹೊಯ್ ಎಂದು ಪೇಳದೆ
ಅಡವಿಗೆ ಕಳುಹಿ ಬಾ ಎಂದನೇ?-
ಅಯ್ಯಯ್ಯೋ, ರಾಘವಂ ಕಾರುಣ್ಯನಿಧಿಯಲ್ತೆ !

ಎಂದು ರೋಧಿಸುತ್ತಾಳೆ. ಪತಿಯೊಂದಿಗಿನ ಹಿಂದಿನ ಕ್ಷಣಗಳನ್ನು ನೆನಪಿಸಿಕೊಂಡು ಅಳುತ್ತಾಳೆ. ಅದರಂತೆ ಮೈದುನ ಲಕ್ಷ್ಮಣನು ತನಗಾಗಿ ತೊಂದರೆ ತೆಗೆದುಕೊಂಡಿರುವುದನ್ನು ಸ್ಮರಿಸಿಕೊಳ್ಳುತ್ತಾ ದುಃಖಿಸುತ್ತಾಳೆ. ಇಲ್ಲಿ ಭಾರತೀಯ ನಾರಿಯು ಪತಿಯನ್ನಗಲಿ ಒಂದು ಕ್ಷಣವೂ ಇರಲಾರೆನೆಂಬುದನ್ನು ಹಲವಾರು ಯುಗಗಳಿಂದ ಸಾಬೀತುಪಡಿಸುತ್ತಲೇ ಬಂದಿರುವುದರ ಹೆಣ್ಣು ಹೃದಯದ ಭಾವನಾತ್ಮಕ ಕೊಂಡಿಯಾಗಿ ಸೀತಾಮಾತೆಯು ಹೆಣ್ಣಿನ ಜಾತಿಗೆ ಹೆಚ್ಚಿನ ಗೌರವವನ್ನು ತಂದು ಕೊಡುವ ಸನ್ನಿವೇಶವು ಹೃದಯಸ್ಪರ್ಶಿಯಾಗಿ ಕಾಣುತ್ತದೆ. ಹಾಗೆಯೇ ಅತ್ತಿಗೆಯು ನೋವಿನಿಂದ ಆಡಿಕೊಂಡು ಅಳುವ ನುಡಿಗಳು ಲಕ್ಷ್ಮಣನಿಗೆ ಹತ್ತಾರು ಕಡೆ ಇರಿದಂತಾಗುತ್ತಿದ್ದರೂ ವಿಧಿಯಿಲ್ಲದೇ ಅಸಹಾಯಕನಾಗಿ ಕಣ್ಣೀರು ಹಾಕದೆ ವಿಧಿಯಲ್ಲ ಆತನಿಗೆ. ‘ಮಾತೆ, ಓ ಎನ್ನಮಾತೆ, ಓ ಜಗನ್ಮಾತೆ, ನಿಷ್ಕರುಣಿಯಂ ಕುಲಘಾತುಕನಂ ದುಷ್ಟನಂ ಚಂಡಾಲನಂ ಉದ್ದರಿಸೌ!’ ಎಂದು ದೊಪ್ಪನೆ ಬಿದ್ದು ಸೀತವ್ವನ ಪಾದಗಳಿಗೆ ನಮಿಸುತ್ತಾನೆ. ನಮ್ಮ ನಾಡ ಸಂಸ್ಕøತಿಯಲ್ಲಿ ಅತ್ತಿಗೆಯೆಂದರೆ ಮಾತೃ ಸಮಾನವೆಂಬುದನ್ನು ‘ಅತ್ತಿಗೆಯಲ್ಲಿ ಅವ್ವನನ್ನು ಕಾಣುವ ನಿಷ್ಕಲ್ಮಷ ಮನಸ್ಸುಗಳ ಕುರಿತು ಹೇಳಲು ಇಲ್ಲಿ ಮಹಾಕವಿಗಳು ಸೀತವ್ವನ ಪಾದಗಳಿಗೆ ನಮಿಸುವ ಸಂದರ್ಭವನ್ನು ಸೃಷ್ಟಿಸಿರುವುದು ಅವರಲ್ಲಿಯ ಸಂಸ್ಕøತಿ ಕುರಿತಾದ ಕಾಳಜಿಯನ್ನು ತೋರಿಸುತ್ತದೆ. ಪಾದಗಳಿಗೆ ನಮಿಸಿದ ಸುತ ಸ್ವರೂಪಿ ಮೈದುನ ಲಕ್ಷ್ಮಣನನ್ನು ಸಂತೈಸುತ್ತಾ ‘ಇದರಲ್ಲಿ ನಿನ್ನದೇನೂ ತಪ್ಪಿಲ್ಲ, ಹೆಣ್ಣಾಗಿ ಹುಟ್ಟಿದ ತಪ್ಪಿಗೆ ಅನುಭವಿಸುವುದು ಅನಿವಾರ್ಯ, ಆದುದರಿಂದ ನೀನು ಇಲ್ಲಿರುವುದ ಬೇಡ, ನಡೆ ಹೋಗು’ ಎಂದು ಹಿರಿಯಳೆಂಬ ಕಾಳಜಿಯಲ್ಲಿ ಆಜ್ಞಾಪಿಸುತ್ತಾಳೆ. ಹೋಗುವಾಗ ಸಂದೇಶವೊಂದನ್ನು ರಾಮನಿಗೆ ತಲುಪಿಸಲು ಹೇಳುವಲ್ಲಿಗೆ ಗಂಡನ ಮೇಲಿನ ಮಮಕಾರ ಕಡಿಮೆಯಾಗಿಲ್ಲವೆಂದು ಮತ್ತೊಮ್ಮೆ ಸಾಬೀತುಪಡಿಸುತ್ತಾಳೆ.

ನಿನ್ನಣಂ ಕೇಳ್ದೊಡೆ
“ನಿನ್ನಾಣತಿಗಬಲೆ ಮರುಗಿದಳಿಲ್ಲ ;
ಮಾರ್ನುಡಿದಳಿಲ್ಲ ;
ಮುನಿಸಾಂತಳಿಲ್ಲ ;
ಬೆರ್ಚಿದಳಿಲ್ಲ !
ನಿನೆ ಗತಿಯೆಂದು ನಿನ್ನಡಿಯಂ ನೆನಯುತೆ
ಕಡೆವೊಳ್ತಂ ಪಾರುತಿರ್ಪಳ್”
ಎಂದು ಬಿನ್ನವಿಸಯ್ !

ಎಂದು ಹೇಳುವಲ್ಲಿಗೆ ಆಕೆಯ ದೃಢಮನಸ್ಸು ಎಂತಹ ಕಷ್ಟವನ್ನಾದರೂ ಸಹಿಸಿಕೊಳ್ಳಲು ತಯಾರಾಗಿದೆಯೆಂಬುದರ ಜೊತೆಗೆ ನಿಷ್ಕಲ್ಮಷ ಮನಸ್ಸಿನಾಳದಲ್ಲಿ ಒಂದಿನಿತು ಪತಿಯ ನಿರ್ಧಾರದ ಕುರಿತು ಬೇಜಾರಿಲ್ಲವೆಂಬುದನ್ನು ತೋರಿಸುತ್ತದೆ. ಸೀತೆಯನ್ನು ಅಡವಿಯಲ್ಲಿ ಬಿಟ್ಟು ಹೊರಡುವಾಗ ಲಕ್ಷ್ಮಣನು ಅಲ್ಲಿಯ ವನಚರಗಳಲ್ಲಿ, ಪಂಚಭೂತಗಳಲ್ಲಿ, ಭೂದೇವಿಯಲ್ಲಿ ತನ್ನ ಅತ್ತಿಗೆ ಜಗಜ್ಜನನಿ ಜಾಹ್ನವಿಯನ್ನು ಸಂರಕ್ಷಿಸಿರೆಂದು ಕೈಮುಗಿದು ವಿನಂತಿಸಿಕೊಳ್ಳುತ್ತಾನೆ. ಮತ್ತೊಮ್ಮೆ ಸೀತೆಯ ಆಜ್ಞಾಪನೆಯೊಂದಿಗೆ ಕೈಮುಗಿದು ಮನಸ್ಸಿಲ್ಲದ ಮನಸ್ಸಿನಿಂದ ಹೊರಡುತ್ತಾನೆ. ಲಕ್ಷ್ಮಣ ಮರೆಯಾದೊಡನೆ ಅಲ್ಲಿಯವೆರೆಗೂ ತಡೆಹಿಡಿದುಕೊಂಡಿದ್ದ ದುಃಖವನ್ನು ತಡೆದುಕೊಳ್ಳಲಾಗದೆ ನಾನಾ ರೀತಿಯಿಂದ ಗೋಳಾಡುತ್ತಾಳೆ. ‘ಮಿಥಿಲೆಯ ವಂಶದೊಳು ಜನಿಸಿ, ರಘುಕುಲದ ದಶರಥನ ಸೊಸೆಯಾಗಿ ಬಂದ ತನಗೆ ಶ್ರೀರಾಮನಲ್ಮೆಯೊಂದೆ ಶಾಶ್ವತಂ ! ಆತನ ನಾಮಸ್ಮರಣೆಯೆ ಎನಗೆ ದಿಕ್ಕು’ ಎಂದುಕೊಳ್ಳುತ್ತಾ ‘ರಾಮಾ ! ರಾಮಾ ! ರಾಮಾ !…’ ಎಂದು ಅನಾಥಪ್ರಜ್ಞೆಯಲ್ಲಿ ಕೂಗಾಡುತ್ತಾಳೆ.

‘ರಾಮಾ ! ರಾಮಾ !” ಎಂಬ ಅರ್ತನಾದವನ್ನು ಕೇಳಿ ಆಕಸ್ಮಿಕವಾಗಿ ಅಲ್ಲಿಯೇ ಹೋಗುತ್ತಿದ್ದ ವಾಲ್ಮೀಕಿ ಮಹರ್ಷಿಯು ಹುಡುಕುನೋಟದಿಂದ ಧ್ವನಿ ಬಂದ ಕಡೆಗೆ ಬರುತ್ತಾನೆ. ರಾಮಮಂತ್ರದ ಉಚ್ಚಾರಣೆಯ ಪ್ರಭಾವದಿಂದ ಅದರ ಮಹತ್ವವನ್ನು ಅರಿತುಕೊಂಡಿರುವ ಮಹರ್ಷಿಯು ತನ್ನ ಜೀವನದ ಪಥವನ್ನೇ ಬದಲಾಯಿಸಿರುವ ಮಹಾಮಂತ್ರವನ್ನು ಉಚ್ಛರಿಸುತ್ತಿರುವ ಸ್ತ್ರೀ ಧ್ವನಿ ಯಾವುದೆಂದು ಶಬ್ದ ಬಂದ ದಿಕ್ಕಿನೆಡೆಗೆ ಬೆಚ್ಚಿ ನೋಡುತ್ತಾನೆ. ಅಲ್ಲಿ ಸೀತೆಯು ಅಳುತ್ತಾ ಕುಳಿತಿರುವುದನ್ನು ಕಾಣುತ್ತಾನೆ. ‘ಎಲೆ ತಾಯಿ, ನೀನಾವಳೌ? ಕಂಡ ಕುರುಪಾಗಿರ್ಪುದು ! ಅಕಟಾ, ಈ ಘೋರತರ ಗಹನಕೊರ್ವಳೆ ಎಂತು ಬಂದೇ?’ ಎಂದು ಪ್ರಶ್ನಿಸುತ್ತಾನೆ. ಹಿಂದೊಮ್ಮೆ ಇದೇ ರೀತಿ ಮಹರ್ಷಿಯ ವೇಷದಲ್ಲಿ ಬಂದು ರಾವಣೇಶ್ವರನು ಮೋಸದಿಂದ ಅಪಹರಿಸಿದ ನಂತರ ಅನುಭವಿಸಿದ ಕಷ್ಟಗಳನ್ನು ಮರೆತಿರದ ಸೀತೆಯು ಗಾಬರಿಯಾಗುತ್ತಾಳೆ.

ಅಯ್ಯೋ ಬಳಿ ಸಾರದಿರ್.
ರಾವಣನೀ ವೇಷದೊಳೆ ಮುನ್ನಮೊಯ್ದಂ !
ಶ್ರೀರಾಮನಾಣೆ ! ದೂರ ಸರಿ !

ಎಂದು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಾಳೆ.

ದೇವಿ,
ಶ್ರೀರಾಮಚಂದ್ರನಾಣೆ ! ಎನ್ನಾಣೆ !
ನಾಂ ಕವಡುದವಸಿಯಲ್ತು ;
ವಾಲ್ಮೀಕಿ ನಾಂ !
ಭೂರಿ ಶೋಕಾರ್ತರಾಗಿರ್ದರಂ ಕಂಡು
ಸುಮ್ಮನೆ ಪೋಪನಲ್ಲ.

ಎಂಬ ವಾಲ್ಮೀಕಿ ಮಹರ್ಷಿಯ ಮಾತುಗಳಿಂದ ಅವಳ ಮನದಲ್ಲಿಯ ದುಗುಡ ಮಾಯವಾದಂತಾಗಿ, ಒಂದೆಡೆ ಹರ್ಷ, ಮತ್ತೊಂದೆಡೆ ಶೋಕದಿಂದ, ಇನ್ನೊಂದೆಡೆ ಗರ್ಭಿಣಿಯಾಗಿರುವ ತನಗೆ ತಂದೆಯ ಸಮಾನ ವಯೋವೃದ್ಧರು ಕಾಳಜಿ ತೆಗೆದುಕೊಳ್ಳಲು ದೊರಕಿರುವುದರಿಂದ ಲಜ್ಜೆಯಿಂದಲೇ ತನ್ನ ಪರಿಚಯವನ್ನು ಮತ್ತು ತಾನಿಲ್ಲಿಗೆ ಬರಲು ಕಾರಣವಾದ ‘ಲೋಕಾಪವಾದ’ದ ಕುರಿತು ವಿವರಿಸುತ್ತಾ ಕೈಮುಗಿಯುತ್ತಾಳೆ. ಮಹರ್ಷಿ ವಾಲ್ಮೀಕಿಯ ದ್ಯಾನದೃಷ್ಟಿಯಿಂದ ಹಿಂದೆ ನಡೆದುದೆಲ್ಲವೂ ಗೋಚರಿಸಿದಂತಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅರಿತುಕೊಳ್ಳುತ್ತಾನೆ.
‘ನಿನ್ನಂ ನಾನೋವಿಕೊಂಡಿರ್ಪೆಂ, ಅಂಜದಿರು, ಬಾ ನನ್ನೊಡನೆ !’ ಎಂದು ಮಗಳನ್ನು ಸಮಾಧಾನಿಸುವಂತೆ ಸಮಾಧಾನಿಸಿ ಧೈರ್ಯವನ್ನು ತುಂಬಿ ಆಶ್ರಮಕ್ಕೆ ಆಹ್ವಾನಿಸುತ್ತಾನೆ.

ತಂದೆ,
ನಿಮ್ಮಂ ನಾಂ ಮೊದಲೆ ಕೇಳಿಬಲ್ಲೆಂ.
ಅರಿಯದೆಯೇ ಸಂದೇಹಪಟ್ಟುದಂ ಮನ್ನಿಸೈ!

ಎಂದು ಸೀತೆಯು ಹೇಳುತ್ತಾ ಮಹರ್ಷಿಯ ಕಾಲಿಗೆ ನಮಸ್ಕರಿಸುತ್ತಾಳೆ. ವಾಲ್ಮೀಕಿಯು ಅವಳನ್ನು ಮೆಲ್ಲಗೆ ಹಿಡಿದೆತ್ತುತ್ತಾ

ತಾಯಿ ಮೇಲೇಳು
ನಿನಗೆಲ್ಲಂ ಒಳ್ಳಿತಿಹುದು.
ನೀನೆನ್ನ ಮಹಾಕಾವ್ಯದ ಸವಿಗಣ್ಣಲ್ತೆ!
ಕಥಾನಾಯಿಕರಯಲ್ತೆ!
ವಾಲ್ಮೀಕಿಯ ಭಾಗ್ಯಮಲ್ತೆ!

ಎಂದು ಸೀತವ್ವ ತನ್ನ ಆಶ್ರಮಕ್ಕೆ ಆಗಮಿಸುತ್ತಿರುವುದು ತನ್ನ ಸೌಭಾಗ್ಯವೆಂದು ಭಾವಿಸುವುದರೊಂದಿಗೆ ರಂಗಸ್ಥಳದ ಪರದೆ ಬೀಳುತ್ತದೆ.

ಆಧುನಿಕ ಕಾಲದ ರಂಗಭೂಮಿಯ ಎಲ್ಲಾ ಅಂಶಗಳನ್ನು, ಸಾಧ್ಯತೆಗಳನ್ನು ಒಳಗೊಂಡು ಕೇವಲ ಮೂರು ಪಾತ್ರಗಳ ಮೂಲಕ ಒಂದು ಸನ್ನಿವೇಶವನ್ನು ಮತ್ತು ಅದರ ಹಿನ್ನಲೆಯ ಆಧಾರದ ಮೇಲೆ ಕಟ್ಟಿಕೊಡುವಂತಹ ಕುಸುರಿ ಕೆಲಸವನ್ನು ಮಹಾಕವಿಗಳು ಈ ಏಕಾಂಕ ರಂಗಕೃತಿಯ ಮೂಲಕ ಓದುಗರನ್ನು/ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ನಾಟಕದುದ್ದಕ್ಕೂ ರಾಮನ ಪಾತ್ರದ ಉಲ್ಲೇಖ ಆಗುವುದಾದರೂ ಆ ಪಾತ್ರ ರಂಗದ ಮೇಲೆ ಬರುವುದೇ ಇಲ್ಲ ; ಆದರೂ ಆ ಪಾತ್ರಕ್ಕೆ ಇನ್ನಿಲ್ಲದ ಮಹತ್ವ ಪ್ರಾಪ್ತಿಯಾಗುತ್ತದೆ. ಬಹುಷಃ ವಾಲ್ಮೀಕಿಯ ಭಾಗ್ಯವೇ ಈ ಪ್ರಸಂಗದ ಹಿಂದಿನ ಸೂತ್ರಧಾರಕ ಶಕ್ತಿಯಾಗಿ ಪರಿಣಮಿಸಿರಬೇಕೆಂಬ ವಿಚಾರದಲ್ಲಿ ಮಹಾಕವಿಗಳು ಈ ರಂಗಕೃತಿಯನ್ನು ರಚಿಸಿರುವರು. ಏಕಾಂಕದ ಕೊನೆಯಲ್ಲಿ ವಾಲ್ಮೀಕಿಯ ಸಂಭಾಷಣೆಯ ಕೊನೆಯಲ್ಲಿ ಆ ಮಾತು ಬಂದು ಇಡೀ ರಂಗಕೃತಿಗೆ ಸುಂದರತೆಯನ್ನು ತಂದು ಕೊಡುತ್ತದೆ. ಇನ್ನೊಂದು ವಿಶೇಷವೆಂದರೆ, ರಾಮಾಯಣದ ಕರ್ತೃ ವಾಲ್ಮೀಕಿ ಮಹರ್ಷಿಯು ತನ್ನ ಕೃತಿಯಲ್ಲಿಯ ಪಾತ್ರವೊಂದಕ್ಕೆ ತಮ್ಮ ಆಶ್ರಮದಲ್ಲಿ ಆಶ್ರಯ ನೀಡುವಂತಹ ಚಮತ್ಕಾರಿಕ ಅಪರೂಪದ ಪ್ರಸಂಗವಿದು. ಈ ರಂಗಕೃತಿಯ ರಂಗರೂಪವನ್ನು ನಾನು ಮೈಸೂರಿನ ರಂಗಾಯಣದ ವನರಂಗದಲ್ಲಿ 25.12.2012ರಂದು (ರಂಗಕಹಳೆಯವರ ಕುವೆಂಪು ನಾಟಕೋತ್ಸವದಲ್ಲಿ) ಮುಸ್ಸಂಜೆಯ ಹೊತ್ತಿನಲ್ಲಿ ಕಾಂತೇಶ್ ಕದರಮಂಡಲಗಿಯವರ ನಿರ್ದೇಶನದಲ್ಲಿ ಭದ್ರಾವತಿಯ ಧನಲಕ್ಷ್ಮಿ ನಾಟಕ ಮಂಡಳಿಯ ಕಲಾವಿದರು ಅಭಿನಯಿಸುತ್ತಿರುವುದನ್ನು ತಲ್ಲೀನನಾಗಿ ನೋಡುತ್ತಿದ್ದಾಗ ‘ನಾಟಕ…ಇಷ್ಟು ಬೇಗ ಮುಗಿದು ಹೋಯಿತಾ?’ ಎಂದು ನನಗರಿಯದಂತೆ ಮಾತು ಹೊರಟಿತ್ತು. ಯಾಕಂದರೆ ಮಹಾಕವಿಗಳ ಕಾವ್ಯದ ಶೈಲಿಯ ಸಂಭಾಷಣೆಯ ಆಸ್ವಾಧನೆಯಲ್ಲಿ ನನ್ನನ್ನು ನಾ ಮೈಮರೆತಿದ್ದೆ. ಮಹಾಕವಿಗಳು ಯಾರಿಂದ ಪ್ರೇರಣೆ ಪಡೆದಿರುವರೆಂಬುದನ್ನು ಯಾವುದೇ ಮುಚ್ಚು-ಮರೆಯಿಲ್ಲದೇ ರಂಗಕೃತಿಯ ಆರಂಭದಲ್ಲಿ ಹೇಳಿಕೊಂಡಿರುವುದು ಅವರ ಮೇರು ವ್ಯಕ್ತಿತ್ವದ ಹಲವಾರು ಉದಾಹರಣೆಗಳಲ್ಲಿ ಇದು ಒಂದೆಂದು ಹೇಳಲು ನನಗೆ ಮನತುಂಬಿ ಬರುತ್ತದೆ.

(…ಮುಂದುವರಿಯುತ್ತದೆ)
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
ಹನುಮಂತ ಹಾಲಿಗೇರಿ
ಹನುಮಂತ ಹಾಲಿಗೇರಿ
10 years ago

 ನಿಮ್ಮ ವಾರದ  ಬರಹ ಅಪರೂಪದ ಸಂಶೋಧನೆಯಂಗ ಚಲೋ ಮೂಡ ಬರುತ್ತಿದೆ ಸಿದ್ದರಾಮಣ್ಣನವರೆ, ಮುಂದುವರೆಸಿ

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago

ಧನ್ಯವಾದಗಳು ಹನುಮಂತ ಹಾಲಿಗೇರಿಯವರಿಗೆ….

gaviswamy
10 years ago

ನೀನೆನ್ನ ಮಹಾಕಾವ್ಯದ ಸವಿಗಣ್ಣಲ್ತೆ!
ಕಥಾನಾಯಕಿಯಲ್ತೆ!
ವಾಲ್ಮೀಕಿಯ ಭಾಗ್ಯಮಲ್ತೆ!

ಮಹಾಕವಿಗಳ ಚರಣಾರವಿಂದಗಳಿಗೆ ನಮೋ ನಮಃ

ಸೀತಾಮಾತೆಯೆಂದರೆ ಪಾವಿತ್ರ್ಯತೆ , ಉದಾರತೆ ಮತ್ತು ಸಹಿಸ್ಣುತೆಯ ಪ್ರತಿರೂಪ ಎಂಬುದನ್ನು ಮಹಾಕವಿಗಳು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಅವನಿದ್ದಾನಲ್ಲ unsung hero ಲಕ್ಷಮಣ!
ಆತ ನನಗೆ ಕರ್ಣನನ್ನು ನೆನಪಿಸುತ್ತಾನೆ.
ಆತನ ಮುಂದೆ ಸಾಕ್ಷಾತ್ ಶ್ರೇರಾಮನೇ ಮಂಕಾಗಿ ಕಾಣುತ್ತಾನೆ.
ಸೀತಾ ಲಕ್ಷಮಣರ ಪವಿತ್ರಬಂಧ ಚಿರಕಾಲ ಜಗತ್ತಿಗೇ ಮಾದರಿಯಾಗಿ ಉಳಿಯುತ್ತದೆ .

ಸುಂದರವಾಗಿ ವಿಶ್ಲೇಷಣೆ ಮಾಡಿದ್ದಕ್ಕೆ ಧನ್ಯವಾದಗಳು ಸರ್.
ಈ ಪುಸ್ತಕವನ್ನು ಆದಷ್ಟು ಬೇಗ ಓದಬೇಕೆಂಬ ಹಂಬಲ, 
ಕುತೂಹಲವುಂಟಾಗಿದೆ 

 

ಹಿಪ್ಪರಗಿ ಸಿದ್ದರಾಮ್, ಧಾರವಾಡ
ಹಿಪ್ಪರಗಿ ಸಿದ್ದರಾಮ್, ಧಾರವಾಡ
10 years ago
Reply to  gaviswamy

 ಧನ್ಯವಾದಗಳು ಡಾ.ಗವಿಸ್ವಾಮಿ ಸರ್…

4
0
Would love your thoughts, please comment.x
()
x