ಅರ್ಥವಾಗದವರು:ಉಮೇಶ್ ದೇಸಾಯಿ

 


ವಾಸುದೇವ ಸುಳ್ಳದ ಗಲಿಬಿಲಿಗೊಂಡಿದ್ದ ಅವನ ಸ್ಥಿತಿಗೆ ಕಾರಣ ಬೆಂಗಳೂರಿನ ಗಿಜಿಗುಡುವ ಟ್ರಾಫಿಕ್ ಮಾತ್ರ ಕಾರಣವಾಗಿರದೇ ಅಂದು ಮುಂಜಾನೇ ಅವ್ವ ಮಾಡಿದ ಫೋನೂ ಕಾರಣವಾಗಿತ್ತು. ಅವ್ವ ಫೋನು ಮಾಡಿ ಅಂದು ಸಂಜೆ ಕಲ್ಯಾಣ ಕಾಕಾನಿಗೆ ಭೇಟಿಯಾಗಬೇಕೆಂದೂ ಹೆಚ್ಚಿನ ವಿಷಯ ಅವನಿಂದಲೇ ತಿಳಿಯುವುದಾಗಿ ಹೇಳಿದ್ದಳು. ವಾಸು ಕೆದಕಿ ಕೇಳಿದರೂ ಅವ್ವ ಬಾಯಿ ಬಿಟ್ಟಿರಲಿಲ್ಲ. ಮಧ್ಯಾಹ್ನ ಲಂಚ ನಲ್ಲಿ ಕಲ್ಯಾಣಕಾಕಾನ ಫೋನು ಬಂದಾಗ ವಾಸು ಅಂದಿನ ಸಂಜೆ ಭೇಟಿಯಾಗುವುದಾಗಿ ಹೇಳಿದ್ದ. ಆ ಕಾರ್ಯಕ್ರಮದ ಅನ್ವಯವೇ ಆಫೀಸಿನಿಂದ ಬೇಗನೆ ಹೊರಟವ ಕಾರ್ಪೊರೇಷನ್ ಹತ್ತಿರ ವಾಹನಗಳ ಜಾತ್ರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ತಾನು ಕಲ್ಯಾಣಕಾಕಾನಿಗೆ ಕೊಟ್ಟ ಭೇಟಿಯ ವೇಳೆ ಸಮೀಪಿಸುತ್ತಿದೆ… ಅಪರಿಚಿತ ಊರಲ್ಲಿ ತಾನು ಭೇಟಿಯಾಗದೇ ಅವರು ವಾಪಸ್ಸು ಹೋದರೆ ಅವ್ವಳಿಂದ ನೂರೆಂಟು ಅನಿಸಿಕೊಳ್ಳಬೇಕು ಈ ಆತಂಕ ಅವನಿಗಿತ್ತು. ಅಂತೂ ಇಂತೂ ಜಾಮ್ ಮುಗಿದು ಇವನಿದ್ದ ಬಸ್ಸು ಮುಂದೆ ಸರಿದಾಗ ನಿರಾಳವಾದ.

***

ಸೊರ್ ಎಂದು ಸಪ್ಪಳ ಮಾಡುತ್ತ ಕಾಫಿ ಹೀರುತ್ತಿದ್ದ ಕಲ್ಯಾಣಕಾಕಾನನ್ನು ತದೇಕವಾಗಿ ನೋಡುತ್ತಿದ್ದ. ಸ್ವಲ್ಪ ಸೂರಗಿದಂತೆ ಕಂಡರೂ ಉತ್ಸಾಹ ಕುಂದಿಲ್ಲ. ಎರಡು ಪ್ಲೇಟ್ ಇಡ್ಲಿ ವಡೆ ಅನಾಮತ್ತಾಗಿ ಖಾಲಿ ಮಾಡಿ ನಿರಾಳವಾಗಿ ಕುಳಿತವನನ್ನು ನೋಡುತ್ತಿದ್ದ ವಾಸು. ಏನು ಸುದ್ದಿ ಇರಬಹುದು ಈ ಕುತೂಹಲ ಇತ್ತು. ತನ್ನ ಬ್ಯಾಗಿನಿಂದ ಎಲಿ ತೆಗೆದು ಅದಕ್ಕೆ ಸುಣ್ಣ ಅಡಿಕೆ ಸವರಿ ಬಾಯಾ ಇಟ್ಟುಕೊಂಡು ತಂಬಾಕು ಚೀಲ ತೆಗೆದು ಕೈಯ್ಯಲ್ಲಿ ಅರೆದು ಬಾಯಲ್ಲಿಟ್ಟವ ಸೋಜಿಗವಾಗಿ ಕಂಡ.

“ವಿಷಯಾ ಗಂಭೀರ ಅದ… ನಿಮ್ಮ ಬಕುಲಾಗ ಸಂಬಂದಿಸೇದ… ನಾನ ಬರಬೇಕಾತು ಖುದ್ದಾಗಿ…” ಧ್ವನಿ ಎಂದಿನಂತೆ ಸ್ಪಷ್ಟವಾಗಿತ್ತು. ವಾಸುಗೆ ಬಕುಲಾಳ ಸಂಬಂಧಿಸಿದ ವಿಷಯ ಅದಕ್ಕಾಗಿ ಇವ ಇಲ್ಲೀವರೆಗೆ ಬಂದಿದ್ದು… ಹೀಗೆ ಇನ್ನೂ ಗೊಂದಲಕ್ಕೊಳಗಾದ.

“ಅವ ಓಡಿ ಹೋಗ್ಯಾನ ಹೇಡಿ ನನ್ ಮಗ… ಅಲ್ಲಾ ನಾ ಏನು ಕಾಲು ಬಿದ್ದಿದ್ದೆ ಅವಗ… ಬಾಳುವಿ ಮಾಡಲಿಕ್ಕೆ ಬರದ ಖೋಡಿ…” ವಾಸುಗೆ ನಿಚ್ಚಳ ಆತು. ಓಡಿಹೋದಾವ ಯಾರು ಈ ಗೊಂದಲ ಇರಲಿಲ್ಲ.

“ಆದ್ರ ಕಾಕಾ ಅವನ್ನ ಹುಡಕ್ಕೊತ ನೀವ್ಯಾಕ ಬಂದ್ರಿ… ಮತ್ತ ಅವ್ರು ಇಲ್ಲೇ ಇದ್ದಾರಂತ ಹೆಂಗ ಗೊತ್ತದ…”

“ಇಲ್ಲೇ ಇದ್ದಾನ ಇದು ಖರೆ… ಹಂಗ ನೋಡಿದ್ರ ಗೋಪಾಲನೂ ಬರಲಿಕ್ಕೆ ತಯಾರಾಗಿ ಕೂತಿದ್ದ ನಾನ ಬ್ಯಾಡಂತ ಹೇಳಿದೆ. ಮೊದಲ ತಿರಸಟ್ಟ ಅವ ಆಮ್ಯಾಲ ಒಂದು ಹೋಗಿ ಇನ್ನೊಂದಾಗ್ತದ…”

“ಆದ್ರ ಕುಲಕರ್ಣಿ ಅವರು ಹಿಂಗ ಯಾಕ ಮಾಡಿದ್ರು… ಅದೂ ಇಷ್ಟು ವರ್ಷ ಆದಮ್ಯಾಲ…”

“ಎಲ್ಲಾ ನಿನ್ನ ತಮ್ಮ ಅನಂತನ ಕೃಪಾ ಅದಪ… ವಾಸು, ಅವಾ ಬಾಯಿಬಿಟ್ಟು ಆ ಗೋವಿಂದನ ತಲಿಯೊಳಗ ಏನೇನರ ಹೇಳ್ಯಾನ… ಮೊನ್ನೆ ಮಾತಿಮಾತಿನ್ಯಾಗ ಆ ಗೋವಿಂದ ಬಕುಲಾಗ ಎದಿರಾಎದಿರ ಆ ಮಾತಂದ. ಅಲ್ಲಾ ನಿನ್ನ ತಮ್ಮಗ ಯಾಕ ಬೇಕಿತ್ತು ಈ ಉಸಾಬರಿ ಅಂತ… ಆ ಕುಲಕರ್ಣಿ ಅದಕ್ಕ ತಲಿಕೆಡಸಿಕೊಂಡು ಸನ್ಯಾಸಿ ಆಗ್ತೇನಿ ಅಂತ ಇಲ್ಲಿ ಬಂದು ಕೂತಾನ…”

ಕಲ್ಯಾಣಕಾಕಾ ವ್ಯಾಕುಲರಾಗಿದ್ದರು. ಪಕ್ಕದವರೂ ತಮ್ಮ ಮಾತು ಕೇಳಿಸಿಕೊಳ್ಳುತ್ತಿದ್ದಾರೆಂದು ಅರಿವಾಗಿ ವಾಸುದೇವ ಅಲ್ಲಿಂದ ಎದ್ದ .ಚಾಮರಾಜಪೇಟನಿಂದ ಎರಡು ಹೆಜ್ಜೆಗೆ ಆಶ್ರಮ. ಸೆಕ್ಯುರಿಟಿಗಾರ್ಡಿಗೆ ಹೇಳಿ ಒಳಗೆ ಹೋಗಿ ಆಫೀಸಿನಲ್ಲಿ ವಿಚಾರಿಸಿದರು. ಕುಲಕರ್ಣಿ ಅವರ ಫೋಟೋ ತೋರಿಸಿದಾಗ ಅವರ ಶಾಖಾ ಮಠ ಅಂದ್ರೆ ಮಾಗಡಿಯೊಳಗೆ ಇದ್ದಿದ್ದು ತಿಳಿಯಿತು. ನಾಳೆ ಅಲ್ಲಿಗೆ ಹೋಗುವುದಾಗಿ ನಿರ್ಧರಿಸಿದರು. ಕಲ್ಯಾಣಕಾಕಾ ಅಂದು ವಾಸುನ ರೂಮಿನಲ್ಲಿರಬೇಕಾತು.

***

ವಾಸು ಬೆಂಗಳೂರಿಗೆ ಬಂದಿದ್ದೇ ಅಕಸ್ಮಿಕವಾಗಿ. ಡಿಪ್ಲೋಮಾ ಮುಗಿಸಿದವ ಹುಬ್ಬಳ್ಳಿಯ ಕಂಪನಿಯಲ್ಲಿಯೇ ಇದ್ದ. ಕೊಡುವ ಐದು ಸಾವಿರವೇ ಬಹಳವಾಗಿ ಅನಿಸಿತ್ತು. ಅವನ ಗೆಳೆಯ ರಾಜು ಅಕಸ್ಮಾತ್ತಾಗಿ ಸಿಕ್ಕದೇ ಹೋಗಿದ್ದರೆ… ಇವನ ರೆಸುಮೆ ತಗೊಂಡು ಅವ ಮುತುವರ್ಜಿ ವಹಿಸದೇ ಹೋಗಿದ್ದರೆ ವಾಸು ಇನ್ನೂ ಹುಬ್ಬಳ್ಳಿಯಲ್ಲಿಯೇ ಇರಬೇಕಾಗಿತ್ತು. ಟ್ರೇನಿಂಗ್ ಮುಗಿಸಿದವನಿಗೆ ಕಂಪನಿ ಗೊತ್ತು ಮಾಡಿದ ಸಂಬಳ ಇಪ್ಪತ್ತು ಸಾವಿರ ದಿನಕ್ಕೆ ಹತ್ತು ತಾಸು ಕೆಲಸ ಶುರುವಾತಿಗೆ ತ್ರಾಸು ಅನುಭವಿಸಿದರೂ ಆಮ್ಯಾಲೆ ಅವ ಹೊಂದಿಕೊಂಡ ಮುಖ್ಯವಾಗಿ ವಾಸುನ ಪಗಾರದಿಂದ ಅವರ ಮನಿ ಪರಿಸ್ಥಿತಿ ಶುರುವಾಗಿತ್ತು. ವಾಸುನ ತಂದೆ ಕೇಶವರಾಯರು ಶಿಕ್ಷಕರು. ಆದರೆ ಅವರ ಮುಖ್ಯ ಆಸಕ್ತಿ ತಬಲಾ ವಾದನವಾಗಿತ್ತು. ಅವರ ಆಸಕ್ತಿ ಅವರ ವೃತ್ತಿಯ ಬಗ್ಗೆ ಅಸಡ್ಡೆ ಬೆಳೆಸಿತ್ತು. ತಾವು ಸಾತ್ ಕೊಡುತ್ತಿದ್ದ ಗಾಯಕಿಯ ತಂಗಿಯ ಜೊತೆ ಇವರ ಸಂಬಂಧವಿದೆ ಎಂಬ ಪುಕಾರೂ ಇತ್ತು. ವಾಸುನ ಅವ್ವ ಈ ವಿಷಯಕ್ಕೆ ಯಾವಾಗಲೂ ಕಣ್ಣೀರು ಹಾಕತಿದ್ಲು. ವಾಸುಗೆ ಮನೆಯ ಸ್ಥಿತಿ ನೋಡಿ ಬೇಸರವಾಗಿತ್ತು. ಸದಾ ಅಳುವ ಅವ್ವ, ಮೆಟ್ರಿಕ್‍ನಲ್ಲಿ ನಪಾಸಾಗಿ ಮತ್ತೆ ಕಟ್ಟಿ ಪಾಸಾಗಿ ಕಾಲೇಜು ಕಲಿಯೋ ತಮ್ಮ ಅನಂತ, ತಿಂಗಳಿಗೋ ಹದಿನೈದು ದಿನಕ್ಕೊಮ್ಮಬರುವ ಅಪ್ಪ ಇವರೆಲ್ಲರಿಂದ ಅವ ಓಡಿ ಹೋಗಲು ಬಯಸಿದ್ದ. ವಾಸುವ ಸ್ವಭಾವ ಮೃದು… ಬಹಳ ಬೇಗ ಕರಗಿಬಿಡುತ್ತಿದ್ದ. ಬೆಂಗಳೂರಿಗೆ ಬಂದರೂ ಅವನ ಮೊದಲಿನ ಸ್ವಭಾವ ಹೋಗಿರಲಿಲ್ಲ.

ಬಕುಲಾ ವಾಸುನ ಅಪ್ಪನಿಗೆ ದೂರದ ಸಂಬಂಧಿಯಾಗಬೇಕು. ಅವಳ ಅಣ್ಣ ಗೋಪಾಲನಿಗೂ ಕೇಶವರಾಯರಿಗೂ ಯಾವುದೋ ವಿಷಯಕ್ಕೆ ಜಗಳವಾಗಿತ್ತು. ಹೀಗೆ ಯಾರದೋ ಮದುವೆಯಲ್ಲಿ ಮತ್ತೆ ಸಿಕ್ಕಾಗ ರಾಜಿ ಸಂಧಾನ ಆಗಿ ಗೋಪಾಲ ಇವರ ಮನಿಗೆ ಬಂದು ಹೋಗಿ ಮಾಡುತ್ತಿದ್ದ. ಅವ ಮೇಲಿಂದ ಮೇಲೆ ಅಡ್ಡಾಡಲು ಕಾರಣ ಅವನ ತಂಗಿ ಬಕುಲಾಳಿಗೆ ವರ ಹುಡುಕುವಾದಾಗಿತ್ತು. ಮುವ್ವತ್ತು ದಾಟಿದರೂ ಮದುವೆ ಯೋಗ ಬಂದಿರಲಿಲ್ಲ. ಅವಳಿಗೆ ಮೇಲಾಗಿ ದಪ್ಪ ಶರೀರ ಹಲ್ಲು ಸ್ವಲ್ಪ ಮುಂದೆ ಅನ್ನಬಹುದು. ಗೋಪಾಲನ ತಲೆ ಮೇಲೆ ನಾಲ್ಕುಜನ ತಂಗಿಯರ ಜವಾಬ್ದಾರಿ. ಮೂವರನ್ನು ಮದುವೆ ಮಾಡಿ ಕೊಟ್ಟಾಗ ಪಿತ್ರಾರ್ಜಿತ ಆಸ್ತಿ ಕರಗಿತ್ತು. ಕಲ್ಯಾಣಕಾಕಾ ಹಾಗೂ ಗೋಪಾಲ ಇಬ್ಬರ ಪ್ರಯತ್ನ ಕೂಡಿ ಫಲಿಸಿ ಕೆಇಬಿಯಲ್ಲಿ ಕೆಲಸಕ್ಕಿದ್ದ ಕುಲಕರ್ಣಿ ಬಕುಲಾಳಿಗೆ ನೋಡಿ ಒಪ್ಪಿಗೆ ಸೂಚಿಸಿದರು. ಕುಲಕರ್ಣಿ ಅವರಿಗೆ ಇದು ಎರಡನೇ ಮದುವೆ. ಮೊದಲ ಹೆಂಡತಿ ಇವರ ಕೈಗೆ ಗೋವಿಂದನನ್ನು ಕೊಟ್ಟು ಕಣ್ಣು ಮುಚ್ಚಿದ್ದಳು. ಮಗ ದೊಡ್ಡವನಾಗುವವರೆಗೂ ಅವರ ಅತ್ತೆ ಮನೆಯವರೇ ಅವನಿಗೆ ಜೋಪಾನ ಮಾಡಿದ್ದರು. ಕೈ ತುಂಬ ಸಂಬಳ ಬರೋ ನೌಕರಿ ಅನೇಕ ಜನ ಸಲಹೆ ಕೊಟ್ರು ಎರಡನೇ ಮದುವೆಗೆ ಯಾಕೋ ಕುಲಕರ್ಣಿರವರಿಗೆ ಮನಸು ಬರಲಿಲ್ಲ. ಮಗ ಮೆಟ್ರಿಕ್ ಪರೀಕ್ಷೆ ತಯಾರಿ ನಡೆಸಿದ್ದ. ಅದೇನು ಸೆಳೆತವೋ ಗೊತ್ತಿಲ್ಲ ಕುಲಕರ್ಣಿ ಅವರಿಗೆ ಮೊದಲಿನ ವೈರಾಗ್ಯ ಇರಲಿಲ್ಲ. ಇದರ ಫಲವೇ ಬಕುಲಾಳ ಜೊತೆ ಮದುವೆಯಾದದ್ದು. ಗೋವಿಂದನಿಗೆ ತಂದೆಯ ಈ ವರ್ತನೆ ಸರಿ ಬಂದಿರಲಿಲ್ಲ. ಆಡಿಯೂ ತೋರಿಸಿದ… ಆದರೂ ಬಕುಲಾ ಅವರ ಮನೆಗೆ ಬಂದಾಗಿತ್ತು.

***

ವಾಸುಗೆ ತನ್ನ ತಮ್ಮ ಅನಂತನಿಗೂ ಕುಲಕರ್ಣಿ ಅವರು ಮನೆ ಬಿಟ್ಟು ಹೋಗಿ ಮಠ ಸೇರುವುದಕ್ಕೂ ಇರೋ ಸಂಬಂಧ ಗೊತ್ತಾಗಬೇಕಿತ್ತು. ಅವನ ತಮ್ಮನ ಸ್ವಭಾವದ ಬಗ್ಗೆ ಅವನಿಗೆ ಗೊತ್ತು. ಅವ್ವ ಸಹ ಆಗಾಗ ಹೇಳತಿದ್ಲು ಅಪ್ಪನ ಗುಣ ಹೊತ್ತಾನ ಅಂತ. ಅವನ ಟೇಬಲ್‍ ಡ್ರಾಯರಿನ ಒಳಗೆ ಸಿಕ್ಕ ಸೆಕ್ಸ ಪುಸ್ತಕಾ ನೋಡಿ ವಾಸು ದಂಗಾಗಿದ್ದ. ತಮ್ಮಗ ಕೇಳಿದ್ದ ಸಿಕ್ಕ ಉತ್ತರ ಉಡಾಫೆಯದಾಗಿತ್ತು. ಅನಂತನ ಸ್ವಭಾವವೇ ಹಾಗೆ ವಾಸು ಅವನಿಗೆ ಬುದ್ಧಿ ಹೇಳಲು ಅನೇಕ ಬಾರಿ ಪ್ರಯತ್ನಿಸಿ ಸೋಲೊಪ್ಪಿದ್ದ. ಈಗ ಕುಲಕರ್ಣಿ ಅವರ ಪ್ರಕರಣಕ್ಕೆ ಅವನ ಮೇಲೆ ಆರೋಪ ಬಂದಿದೆ. ಖರೇ ಸಂಗತಿ ತಿಳಿದುಕೊಳ್ಳಬೇಕಾಗಿತ್ತು. ಮನೆಗೆ ಫೋನ್ ಮಾಡಿದಾಗ ಸಿಕ್ಕವ ಅನಂತನೇ…

***

:2:

ಅಣ್ಣನ ಫೋನು ಬಂದಿದ್ದು ವಿಶೇಷವೇನೂ ಅಲ್ಲ. ಆದರೆ ಅವನು ತೆಗೆದ ವಿಷಯ ಮುಜುಗರ ತಂದಿತ್ತು. ಅನಂತನಿಗೆ ಅವ್ವಳ ಎದುರು ಹೇಳುವಂತಿಲ್ಲ ತಾನೇ ಮಾಡುವುದಾಗಿ ಅಣ್ಣನಿಗೆ ಹೇಳಿದವ ಮೊಬೈಲು ತೆಗೆದುಕೊಂಡು ಹೊರಬಿದ್ದ. ರಸ್ತೆಯಲ್ಲಿ ಜನಸಂಚಾರ ಕಮ್ಮಿಯಾಗಿತ್ತು. ಸಿಗರೇಟು ತೆಗೆದು ತುಟಿಕೊಟ್ಟವ ತಾನು ಅಣ್ಣನಿಗೆ ಏನು ಹೆಳುವುದು ಎಂಬ ವಿಚಾರದಲ್ಲಿ ಮುಳುಗಿದ. ಗೋವಿಂದ ಕ್ಲಾಸ್‍ಮೇಟ್… ಮೇಲಾಗಿ ಬಕುಲಾಳ ಮಗ ಸಲಿಗೆ ಬೆಳೆದಿತ್ತು. ಮನೆಗೆ ಹೋಗುವುದು, ಹರಟೆಹೊಡೆಯುವುದು ಹೀಗೆ… ಅದೊಂದು ಮಧ್ಯಾಹ್ನ ಗೋವಿಂದನ ಮನೆಗೆ ಹೋಗಿದ್ದ ಅಟ್ಟದ ಮೇಲಿನ ಅವನ ರೂಮಿನಲ್ಲಿ ಮೊನ್ನೆ ನೋಡಿದ ಸಿನೇಮಾದ ಬಗ್ಗೆ ಚರ್ಚೆ ನಡೆದಿತ್ತು ಗೆಳೆಯರಲ್ಲಿ. ಗೋವಿಂದನ ರೂಮಿಗೆ ಎದಿರಾಗಿಯೇ ಇರುವ ರೂಮು ಅದು ಕುಲಕರ್ಣಿ ಅವರ ಮಲಗುವ ಮನೆ. ಅವರು ಆ ದಿನ ರಜೆ ಹಾಕಿದ್ದರು. ಇದು ಅನಂತನಿಗೆ ಗೊತ್ತಿರಲಿಲ್ಲ. ಆ ರೂಮಿನಿಂದ ವಿಚಿತ್ರ ಶಬ್ದಗಳು… ಯಾರೋ ಆಕ್ರಮಣ ಮಾಡುತ್ತಿರುವ ಹಾಗೆ ಹುಂಕಾರಗಳು… ಅನಂತ ವಿಚಿತ್ರವಾಗಿ ಕಂಪಿಸಿದ ಗೋವಿಂದನಿಗೂ ಆ ಅನುಭವ ಆಗಿತ್ತು. ಆದರೂ ಏನೂ ಆಗಿಯೇ ಇಲ್ಲ ಎಂಬಂತೆ ಆತ ವರ್ತಿಸುತ್ತಿದ್ದ. ಇದ್ದಕ್ಕಿದಂತೆಯೇ ಆ ರೂಮಿನ ಬಾಗಿಲು ತೆರೆಯಿತು. ಬಕುಲಾ ಹೊರಬಂದಳು. ಅನಂತನ ಇರುವು ಅವಳಿಗೆ ಗೊತ್ತಿರಲಿಲ್ಲ. ಅವಳು ಗೊಣಗುತ್ತಿದ್ದುದು ಅನಂತನಿಗೆ ಕೇಳಿಸಿತು…

“ನೀರು ಇಲ್ಲದವರು ಕೈಲ ಆಗೂದಿಲ್ಲ ಬಿಡೂದಿಲ್ಲ ಚಪಲಾ ಬಿಡೂದಿಲ್ಲ…”

ಅನಂತನಿಗೆ ಸ್ಥಿತಿಯ ಅರಿವಾಯಿತು. ಗೋವಿಂದ ಅಪಮಾನದಿಂದ ತಲೆ ತಗ್ಗಿಸಿದ್ದ. ಅನಂತ ಹೊರನಡೆದ. ತಲೆ ತುಂಬ ನೂರೆಂಟು ಚಿತ್ರಗಳು. ಆ ರೂಮಿನಲ್ಲಿ ಏನು ನಡೆದಿರಬಹುದು ಈ ಊಹೆ ಅವನಿಗಿತ್ತು. ಬಕುಲಾಳ ಮಾತು ಪ್ರತಿಧ್ವನಿಸಿತು. ನಗು ತೇಲಿತು… ಕುಲಕರ್ಣಿ ಅವರ ಮುಖ ಚೆಹರೆ ಊಹಿಸಿ. ಮುಂದೆ ಬಹಳ ದಿನಗಳವರೆಗೆ ಗೋವಿಂದ ಇವನ ಜೊತೆ ಮಾತನಾಡಿರಲಿಲ್ಲ. ಅನಂತನಿಗೆ ಅವನ ವರ್ತನೆ ನೋಡಿ ಒಳಗೊಳಗೇ ನಗು. ಆದರೂ ಗೆಳೆಯನನ್ನು ಮಾತಿಗೆ ಎಳೆಯುವುದು ಮಾತ್ರವಲ್ಲ ಮತ್ತೆ ಸಲಗೆ ಮುಂದುವರೆಸಿದ. ಇಬ್ಬರಿಗೂ ಬೀರು ಕುಡಿಯೋ ಚಟ. ಹಿಂಗ ಒಮ್ಮೆ ಕೂತಾಗ ಬಕುಲಾಳ ವಿಷಯ ಬಂತು. ಅನಂತ ತನ್ನ ಎಂದಿನ ನಗೆಚಾಟಿಗೆ ಧಾಟಿಯಲ್ಲಿ ಬಕುಲಾ ಹೇಗೆ ಹಸಿದಿದ್ದಾಳೆ… ಕುಲಕರ್ಣಿ ಅವರು ಅವಳಿಗೆ ಉಣಬಡಿಸುವುದರಲ್ಲಿ ಅಸಮರ್ಥರು ಎಂಬುದಾಗಿ ಹೇಳಿದ. ಅವ ಹೇಳಿದ್ದು ಸತ್ಯವೇ ಆಗಿತ್ತು. ಗೋವಿಂದನಿಗೆ ಅಪಮಾನವಾಗಿತ್ತು. ಆ ಅಪಮಾನ ಮುಂದೆ ಸ್ಪೋಟಗೊಡಿದ್ದು ತನ್ನ ತಂದೆಯ ಜೊತೆಗಾದ ಜಗಳದಲ್ಲಿ ಗೋವಿಂದ ಒಂದು ಹೆಜ್ಜೆ ಮುಂದೆ ಹೋಗಿ ಹೊಸದಾಗಿ ಮದುವೆಯಾಗಿ ಬಂದ ತನ್ನ ಚಿಕ್ಕಮ್ಮ ಅಂದರೆ ಬಕುಲ ಅನಂತನಿಗೆ ಸೆಳೆಯಲು ಪ್ರಯತ್ನ ನಡೆಸಿದ್ದಾಳೆ. ಆದರೆ ಅದಕ್ಕೆ ಅನಂತ ಒಪ್ಪಲಿಲ್ಲ ಹಾಗೂ ಅವನೇ ತನಗೆ ಈ ವಿಷಯ ಹೇಳಿದ್ದು, ಇಂಥವಳಿಗೆ ನಾ ಯಾಕೆ ಗೌರವ ಕೊಡಲಿ ಇದು ಅವ ಕುಲಕರ್ಣಿಯವರ ಜೊತೆಗೆ ಹಾಕಿದ ವಾದ. ತನ್ನ ತಂದೆಯ ಕಣ್ಣಲ್ಲಿ ಅವಳನ್ನು ದೋಷಿಯಾಗಿ ಮಾಡಬೇಕು ಇದು ಅವನ ಮನದಾಸೆ. ಅದಕ್ಕಾಗಿಯೇ ಭರ್ಜರಿ ಸುಳ್ಳು ಹೆಣೆದಿದ್ದ ಅಮಾಯಕ ಬಕುಲಾ ಹಾಗೂ ಚಾಲಾಕು ಎನಿಸಿಕೊಂಡ ಅನಂತನನ್ನು ಅದಕ್ಕೆ ಪಾತ್ರಧಾರಿಯಾಗಿ ಮಾಡಿದ್ದ. ಪರಿಣಾಮ ವಿಪರೀತವಾಗಿತ್ತು. ಕುಲಕರ್ಣಿ ಅವರು ಮನೆ ಬಿಟ್ಟು ಹೋಗಿದ್ದರು. ಬಕುಲಾ ತವರುಮನೆ ಸೇರಿದಳು.

ಅಣ್ಣನಿಗೆ ಈ ವಿಷಯ ಹೇಗೆ ತಿಳಿಸುವುದು ಫೋನಿನಲ್ಲಿ ಎಲ್ಲ ವಿವರ ಕೊಡಲಾದೀತೆ ಈ ಜಿಜ್ಞಾಸೆಯಲ್ಲಿಯೇ ಅನಂತ ಎರಡನೇ ಸಿಗರೇಟು ತುಟಿಗಿಟ್ಟ.

***

ಮಾಗಡಿಯೊಳಗಿನ ಶಾಖಾಮಠ ಅಷ್ಟೇನೂ ದೊಡ್ಡದಾಗಿರಲಿಲ್ಲ. ಕುಲಕರ್ಣಿ ಅವರ ಬಗ್ಗೆ ವಿಚಾರಿಸಲಾಗಿ ಅವರು ಕೆಲಸದ ಮೇಲೆ ಹೊರಗಡೆ ಹೋಗಿದ್ದು, ಸ್ವಲ್ಪ ಕಾಯಬೇಕಾಗುತ್ತದೆ ಎಂದು ಅಲ್ಲಿನ ವ್ಯವಸ್ಥಾಪಕರು ಹೇಳಿದರು. ವಾಸು ತಾನು ಬಸ್ಸಿನಲ್ಲಿ ಹೇಳಿಕೊಂಡು ಬಂದ ವಿಷಯವನ್ನೇ ಮತ್ತೆ ಕಲ್ಯಾಣಕಾಕಾಗೆ ಹೇಳಿದ. ಅನಂತ ಫೋನು ಮಾಡುತ್ತ ಬಿಕ್ಕುತ್ತಿದ್ದ. ತನ್ನ ಚಾಷ್ಟಿಯ ಮಾತು ಈ ರೀತಿ ಪರಿಣಾಮ ಬೀರಬಲ್ಲದು ಇದು ಅವನಿಗೆ ತಲೆನೋವಾಗಿತ್ತು. ಅದರಲ್ಲೂ ಗೋವಿಂದ ತನ್ನ ಮಾತು ತನ್ನುಪಯೋಗಕ್ಕೆ ತಕ್ಕಂತೆ ಬದಲಾಯಿಸಿಕೊಂಡದ್ದು ತಿಳಿದು ಅವನ ಮೇಲೆ ತನಗಾದ ಬೇಜಾರು, ಕುಲಕರ್ಣಿ ಅವರ ಬಳಿ ಹೇಳಿ ಕ್ಷಮೆ ಕೇಳಲು ಕೇಳಿಕೊಂಡಿದ್ದ. ತಮ್ಮನ ಮೇಲೆ ಸಿಟ್ಟು ಬಂದಿತ್ತು. ವಾಸುಗೆ ಸದಾ ಕೆಟ್ಟ ವಿಚಾರಗಳೇ ಅವನ ತಲೆಯಲ್ಲಿ. ಆದರೆ ಅವ ಹೆಳಿದ್ದು ಸುಳ್ಳು ಅನ್ನುವ ಹಾಗಿರಲಿಲ್ಲ. ವಯಸ್ಸಾದ ಮೇಲೆ ಕುಲಕರ್ಣಿ ಅವರು ಮದುವೆಯಾಗಿದ್ದಾರೆ… ಮೊದಲಿನ ಹುಮ್ಮಸ್ಸು ಈಗ ಇರಲಾರದು. ತನ್ನ ನಿಲುವು ಕಲ್ಯಾಣಕಾಕಾನಿಗೂ ಹೇಳಿದ. ಇವ ಹೇಳಿದ್ದಕ್ಕೆ ತಲೆ ಆಡಿಸಿದ ಕಲ್ಯಾಣಕಾಕಾ… “ಹೌದಪ್ಪಾ ನೀ ಅನ್ನುವುದು ಖರೆ… ಆದ್ರ ಕುಲಕರ್ಣಿ ಅವರ ತಲ್ಯಾಗ ಅವರ ಮಗ ವಿಷದ ಗಿಡ ನೆಟ್ಟಾನ. ಅದು ತಗಿಯೂದು ತ್ರಾಸ ಅದ. ನೋಡೋಣ… ಅವರ ಭೇಟಿಯಾಗಿ ವಿಷಯ ಹೇಳೋಣ ಶ್ರೀಹರಿ ಇಚ್ಛಾ ಇದ್ರ ಎಲ್ಲ ಸುರಳೀತ ಆಗ್ತದ…”

ದೂರದಲ್ಲಿ ಸಂತೆ ಮುಗಿಸಿ ಕೈ ಚೀಲ ಹಿಡಿದು ಬರುತಿದ್ದ ಕುಲಕರ್ಣಿ ಕಂಡರು. ದುಗುಡ ಇಬ್ಬರಲ್ಲೂ ತಲೆಹಾಕಿತು.

***

“ಇಲ್ರಿ ಕಲ್ಯಾಣರಾವ ನನ್ನ ನಿರ್ಧಾರ ಖಡಾಖಡಿ ಅದ. ಬದಲಾಯಿಸೂದು ಅಶಕ್ಯ ಅದ…” ಒಂದು ಸಾಲಿನ ಜಜ್ಮೆಂಟ್ ಕೊಟ್ಟ ಕುಲಕರ್ಣಿ ಅವರು ನಿರಾಳವಾಗಿ ಒರಗಿ ಕುಳಿತರು. ಗಿಡದ ಬಡ್ಡೆಗೆ ಮಧ್ಯಾಹ್ನದ ಇಳಿಬಿಸಿಲ ಜೊತೆಗೆ ತಂಗಾಳಿ ಹಿತವಾಗಿ ಮಿಳಿತಗೊಂಡಿತ್ತು. ವಾಸುದೇವ ಸುಳ್ಳದ ಮತ್ತೆ ಗೊಂದಲಗೊಂಡಿದ್ದ. ತನ್ನ ತಮ್ಮ ಬಾಯಿಚಪಲದಿಂದ ಆಡಿದ ಮಾತುಗಳು ಈ ಎಲ್ಲ ರಾದ್ಧಾಂತಕ್ಕ ಕಾರಣವಾಗಿವೆ… ಈ ವಿಷಯ ಕಲ್ಯಾಣಕಾಕಾ ಹಾಗೂ ಕುಲಕರ್ಣಿ ಅವರು ತಾವಾಡಿದ ಮಾತಿನಿಂದ ಅನೇಕ ಸಾರಿ ಚುಚ್ಚಿದ್ದಾರೆ. ಬಕುಲಾಳ ಬಾಳು ಸರಿಯಾಗಿ ಆಗುವುದಾದರೆ ಕುಲಕರ್ಣಿ ಅವರ ಕಾಲು ಹಿಡಿದುಕೊಂಡು ಕ್ಷಮಾ ಕೇಳಿದರಾಯಿತು. ಇದು ವಾಸುದೇವ ತಗೊಂಡ ನಿರ್ಧಾರವಾಗಿತ್ತು.

“ಈಗ ಹಂಗಾರ ನಿಮ್ಮದ ಇದ ಕಡೀ ನಿರ್ಧಾರ ಅದ ಅಂದಮ್ಯಾಲ ಮುಂದಿನ ಪರಿಣಾಮ ಯೋಚನೆ ಮಾಡೀರೇನು… ಇನ್ನೊಂದೆರಡು ವರ್ಷದಾಗ ನೀವು ರಿಟೈರು ಆಗಾವ್ರು… ನಮ್ಮ ಬಕುಲಾಗ ಜೀವನೋಪಾಯಕ ವ್ಯವಸ್ಥಾ ಮಾಡರಿ ಹಂಗಾದ್ರ… ಕಾಯಿದಾ ಈಗ ಹೆಣ್ಣು ಮಕ್ಕಳ ಕಡೇನ ಅದ ಅಂತ ನಾ ಏನೂ ಬ್ಯಾರೆ ಹೇಳಬೇಕಾಗಿಲ್ಲ ನಿಮಗ…”

ಕಲ್ಯಾಣರಾವರ ನೇರ ಮಾತು ಕೆಲಸ ಮಾಡಿತು. “ಅಲ್ಲಾ ನಾ ಎಲ್ಲಿ ಸೋಡಚೀಟಿ ಬಗ್ಗೆ ಹೇಳಿದೆ. ಏನೋ ಮನಸ್ಸಿಗೆ ಬ್ಯಾಸರ ಆಗೇದ… ಒಂದೆರಡು ದಿನಾ ಇಲ್ಲಿ ಸೇವಾ ಮಾಡಲಿಕ್ಕೆ ಬಂದೇನಿ…”

“ಅಂದ್ರ ಹುಡುಗಾಟಗಿ ಹಚ್ಚೀರೇನು… ಗೋಪಾಲ ಬರಾವಿದ್ದ ಜೋಡಿ ರೈತರು ಬರ್ತಿದ್ರು. ಹೊಡೆದಾಟದಾಗ ಆ ಮಂದಿ ಸದಾ ಮುಂದ. ಈಗೇನು ಮಾಡೋರು ಹೇಳ್ರಿ… ನಿಮ್ಮ ಆಶ್ರಮದ ಮುಖ್ಯಸ್ಥರಿಗು ಎಲ್ಲಾ ವಿಷಯ ಹೇಳೇನಿ. ಇಲ್ಲಿಂದ ಗೇಟಪಾಸ್ ನಿಮಗ ಕೊಡ್ತಾರ. ಅವಾಗೇನು ಮಾಡಾವ್ರು… ಸುಮ್ಮನ ನಡೀರಿ ಬಾಳುವೆ ಮಾಡ್ರಿ…”

ಕುಲಕರ್ಣಿ ಅವರು ತಲೆತಗ್ಗಿಸಿದರು. ವಾಸುನು ಸುಮ್ಮನಾಗದೇ ಅವರ ಕಾಲು ಹಿಡಿದುಕೊಂಡ. ತಮ್ಮನ ಹುಡುಗಾಟದ ಮಾತು ಇಷ್ಟೆಲ್ಲ ಅವಘಢಕ್ಕ ಕಾರಣ ಆಗೇದ ಅಂದ.

***

ಉಗಾದಿ ಹಬ್ಬಕ್ಕೆಂದು ಧಾರವಾಡಕ್ಕೆ ಹೋದ ವಾಸು ಅನೇಕ ಬದಲಾಣೆ ಕಂಡ. ಮುಖ್ಯವಾಗಿ ತಮ್ಮ ಅನಂತನ ಸುಧಾರಣೆ. ಅವನ ಅವ್ವ ಸಹ ಈ ಬಗ್ಗೆ ಉತ್ಸುಕಳಾಗಿದ್ದಳು. ಬಕುಲಾ ಬಗ್ಗೆ ಅನಂತ ಮಾಡಿದ ಭಾನಗಡಿಯ ಬಗ್ಗೆ ಅವ್ವಳಿಗೆ ಗೊತ್ತಿಲ್ಲ. ಅದು ಅವಳಿಗೆ ಗೊತ್ತಾಗದೇ ಇದ್ದಿದ್ದೇ ಒಳ್ಳೆಯದಾಯಿತು ಅಂದುಕೊಂಡ ವಾಸು. ತಮ್ಮ ಪಿಯುಸಿ ಮುಗಿಸಿ ಬಿ.ಕಾಮ್. ಮೊದಲ ವರ್ಷದಲ್ಲಿದ್ದ. ವಾಸು ಇನ್ನೊಂದು ಬದಲಾವಣೆ ಸುದ್ದಿ ಕೇಳಿದ. ಅದೆಂದರೆ ಕುಲಕರ್ಣಿ ಅವರು ವಾಪಸ್ಸಾಗಿದ್ದು ಹಾಗೂ ಬಕುಲಾ ಜೊತೆ ಸಂಸಾರ ಸುರು ಮಾಡಿದ್ದು. ಕುಲಕರ್ಣಿ ಅವರು ತಮ್ಮ ಮಗನನ್ನು ಅವನ ಸೋದರ ಮಾವನ ಮನೆಯಲ್ಲಿ, ಬೆಳಗಾವಿಯಲ್ಲಿ ಇರಿಸಿದರು. ವಾಸುಗೆ ಕುಲಕರ್ಣಿ ಅವರ ಮನೆಗೆ ಹೋಗೋ ಮನಸ್ಸಾತು. ಅಂದು ಸಂಜೆ ಹೋದಾಗ ಮನೆ ಕೀಲಿ ಹಾಕಿತ್ತು. ನಿರಾಶನಾಗಿ ವಾಪಸ್ ಬರುವಾಗ ಆಟೋದಿಂದಿಳಿಯುತ್ತಿದ್ದ ಬಕುಲಾ ಹಾಗೂ ಕುಲಕರ್ಣಿ ಕಂಡರು. ಅವರೊಡನೆ ಮತ್ತೆ ಮನಗೆ ಹೋದಾಗ ಇವನಿಗೆ ವಿಶೇಷ ಆದರ ದೊರೆತಿತು. ಬಿಸಿ ಉಪ್ಪಿಟ್ಟು ಮಾಡಿ ಹಾಕಿದ ಬಕುಲಾಳ ಮುಖದಲ್ಲಿ ಕೃತಜ್ಞತೆ ಇತ್ತು. ಅವರಿಬ್ಬರೂ ಡಾಕ್ಟರ್ ಬಳಿ ಹೋಗಿದ್ದುದಾಗಿ ಬಕುಲಾಳಿಗೆ ಟ್ರೀಟ್ಮೆಂಟ್ ಮುಂದಿನ ತಿಂಗಳಿನಿಂದ ಶುರು ಅಂದಾಗ ಬಕುಲಾಳ ಮುಖದಲ್ಲಿ ನಾಚಿಕೆ ಮನೆ ಮಾಡಿತ್ತು.

ವಾಪಸ್ಸು ಬರುವಾಗ ವಾಸುನ ತರೆಯಲ್ಲಿ ವಿಚಾರಗಳ ಸರಮಾಲೆ. ಈ ಸಂಸಾರ ಮೋಹದ ಬಗ್ಗೆ ತೀರ ಕುತೂಹಲದಿಂದ ವಿಚಾರ ಮಾಡಿದ. ಬೇಡವೆಂದು ದೂರಹೋಗಿ ಈಗ ಮತ್ತೆ ಹೊಸ ಉಮೇದಿನ ಕುಲಕರ್ಣಿ ಅವರು ಒಗಟಾಗಿ ಕಂಡರು ಅಥವಾ ಅವರ ಕ್ರಿಯೆ ಸ್ವಾಭಾವಿಕವೇ ಇದ್ದು ನಾನು ನೋಡುವ ರೀತಿ ತಪ್ಪೋ ಎಂಬ ಗೊಂದಲದಲ್ಲಿ ವಾಸು ಬಿದ್ದ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
gaviswamy
10 years ago

ಕಥೆ ಚೆನ್ನಾಗಿದೆ ಸಾರ್. ಇಷ್ಟವಾಯಿತು .

1
0
Would love your thoughts, please comment.x
()
x