ಕತ್ತರಿ ಕೈಗಳ ಕಲಾವಿದ:ವಾಸುಕಿ ರಾಘವನ್

 

ಈ ವಾರ ಬೇರೇನೋ ಬರೆಯೋಣ ಅಂತ ಯೋಚನೆ ಮಾಡ್ತಾ ಇದ್ದೆ. ಆದರೆ ಈ ಸಿನಿಮಾ ನೋಡಿದೆ ನೋಡಿ, ಇದರ ಬಗ್ಗೆ ಬರೀದೇ ಇರಕ್ಕೆ ಆಗೋದೇ ಇಲ್ಲ ಅನ್ನಿಸಿಬಿಡ್ತು. ಆ ಚಿತ್ರ ಟಿಮ್ ಬರ್ಟನ್ ನಿರ್ದೇಶನದ ಜಾನಿ ಡೆಪ್ ಅಭಿನಯದ “ಎಡ್ವರ್ಡ್ ಸಿಜರ್ ಹ್ಯಾಂಡ್ಸ್”.

“ಏವಾನ್” ಸೌಂದರ್ಯವರ್ಧಕ ಕಂಪನಿಯ ಸೇಲ್ಸ್ ವುಮನ್ ಪೆಗ್, ಗ್ರಾಹಕರನ್ನು ಹುಡುಕುತ್ತಾ ಹೊರಟಿರುವಾಗ ಪಾಳು ಬಿದ್ದ ಒಂದು ಮಹಲಿಗೆ ಬರುತ್ತಾಳೆ.  ಅಲ್ಲಿ ಅವಳಿಗೆ ಎಡ್ವರ್ಡ್ ಭೇಟಿ ಆಗುತ್ತೆ. ಮನುಷ್ಯರ ಒಡನಾಟವೇ ಇಲ್ಲದ ಎಡ್ವರ್ಡ್ ಸ್ವಲ್ಪ ಹೆದರಿರುತ್ತಾನೆ, ಇವನನ್ನು ಅಚಾನಕ್ಕಾಗಿ ನೋಡಿದ ಪೆಗ್ ಕೂಡ ಬೆಚ್ಚುತ್ತಾಳೆ. ಕಾರಣ ಕೈಗಳಿರಬೇಕಾದ ಜಾಗದಲ್ಲಿ ಅವನಿಗೆ ಕತ್ತರಿಗಳಿವೆ. ಅಸಲಿಗೆ ಅವನು ಮನುಷ್ಯನೇ ಅಲ್ಲ. ಅವನು ಒಬ್ಬ ತಿಕ್ಕಲು ವಿಜ್ಞಾನಿಯ ಅಪೂರ್ಣ ಸೃಷ್ಟಿ. ಇವನಿಗೆ ಕೈಗಳನ್ನು ಜೋಡಿಸುವ ಮೊದಲೇ ಆ ವಿಜ್ಞಾನಿ ಹೃದಯಾಘಾತದಿಂದ ಸತ್ತಿರುತ್ತಾನೆ. ಎಡ್ವರ್ಡ್ ನ ಅಸಹಾಯಕತೆ, ಒಬ್ಬಂಟಿತನ ನೋಡಿ  ಮರುಗಿ, ಒಳ್ಳೇ ಮನಸ್ಸಿನ ಪೆಗ್ ಅವನನ್ನ ತನ್ನ ಮನೆಗೆ ಕರೆತರುತ್ತಾಳೆ.

ಹೊಸ ಪ್ರಪಂಚಕ್ಕೆ ಕಾಲಿಡುವ ಎಡ್ವರ್ಡ್ ಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತೆ. ಕೈಯಾಡಿಸಿದರೆ ತನಗೋ, ಬೇರೆಯರಿಗೋ ಗಾಯ ಆಗೋದು ನೋಡಿ ಗಾಬರಿ. ಪೆಗ್ ಮನೆಗೆ ಬಂದಿರೋ ಆಗಂತುಕನ ಬಗ್ಗೆ ನೆರೆಹೊರೆಯವರಿಗೆಲ್ಲ ಏನೋ ಕುತೂಹಲ. ಪರಿಚಯವಾದ ಮೇಲೆ ಇವನನ್ನು ಎಲ್ಲರೂ ತಮ್ಮ ಗುಂಪಿನಲ್ಲಿ ಸ್ವೀಕರಿಸುತ್ತಾರೆ. ಕತ್ತರಿಗಳೇ ಕೈಗಳಾಗಿರುವ ಇವನು ಎಲ್ಲರ ಮನೆಯ ಮುಂದಿರುವ ಪೊದೆಗಳನ್ನು ಕತ್ತರಿಸಿ ಅದರಿಂದ ಡೈನೋಸಾರ್, ನರ್ತಕಿ, ಹಂಸ ಹೀಗೆಲ್ಲ ಆಕಾರಗಳನ್ನು ಸೃಷ್ಟಿಸುತ್ತಾನೆ; ಹೆಂಗಸರಿಗೆ ಬಗೆಬಗೆಯ ಕೇಶವಿನ್ಯಾಸ ಮಾಡಿ ಸಲೂನ್ ತೆಗೆಯೋ ಮಟ್ಟಕ್ಕೆ ಪ್ರಸಿದ್ಧಿ ಆಗುತ್ತಾನೆ. ಅದೇ ಸಮಯದಲ್ಲಿ ಅವನಿಗೆ ಪೆಗ್ ಮಗಳು ಕಿಮ್ ಮೇಲೆ ಪ್ರೀತಿ ಉಂಟಾಗುತ್ತೆ.

ಹಾಗಂತ ಅವನಿಗೆ ತೊಂದರೆಗಳು ಇರೋಲ್ಲ ಅಂತಲ್ಲ. ಮೊದಮೊದಲಿಗೆ ಕಿಮ್ ಇವನನ್ನು ನೋಡಿ ಭಯ ಪಡುತ್ತಾಳೆ, ಆಮೇಲೂ ಏನೋ ಮುಜುಗರ, ಅವಳಿಗೆ ಇವನ ಪ್ರೀತಿಯ ಪರಿವೇ ಇಲ್ಲ. ಕಿಮ್ ಬಾಯ್ ಫ್ರೆಂಡ್ ಗೆ ಇವನನ್ನು ಕಂಡರೆ ಆಗಲ್ಲ. ಇವನ ಸಾಮೀಪ್ಯ ಬಯಸಿ ಬಂದು ತಿರಸ್ಕೃತಗೊಳ್ಳೋ ಜಾಯ್ಸ್ ಸೇಡಿನಿಂದ ಇವನ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಹೊರಿಸುತ್ತಾಳೆ. ಸನ್ನಿವೇಶಗಳು ಹೇಗೆ ಎದುರಾಗುತ್ತವೆ ಅಂದರೆ ಇವನ “ಬೇರೆತನ”ದಿಂದಾಗಿ ಇವನ ಮೇಲೆ ಎಲ್ಲರಿಗೂ ಅಪಾರ್ಥ ಬರುವಂತೆ ಆಗುತ್ತೆ. ಎಲ್ಲಾ ಅಧ್ವಾನಗಳೂ ಶುರು ಆಗೋ ಹೊತ್ತಿಗೆ ಅವನ ಒಳ್ಳೆತನಕ್ಕೆ ಮಾರುಹೋಗಿ ಕಿಮ್ ಅವನಿಗೆ ಮನಸೋಲುತ್ತಾಳೆ.

ಕೃತಕ ಮಾನವನನ್ನು ಸೃಷ್ಟಿಸುವ ವಿಜ್ಞಾನಿಯ ಕಥೆ ಹೊಂದಿದ್ದರೂ ಇದು ಸೈನ್ಸ್ ಫಿಕ್ಷನ್ ಚಿತ್ರವಾಗಿಲ್ಲ. ಇದು ಮೂಲತಃ ಒಂದು ಫೇರಿ ಟೇಲ್ – ಒಂದು ಕಾಲ್ಪನಿಕ ರೋಮ್ಯಾನ್ಸ್ ಅಂತ ಹೇಳಬಹುದು. ಈ ಥರ ಕೃತಕ ಮಾನವನ ಸೃಷ್ಟಿ ಹೇಗೆ, ಇಷ್ಟು ವಿಚಿತ್ರ ವ್ಯಕ್ತಿಯನ್ನು ಎಲ್ಲರೂ ಅಷ್ಟು ಸುಲಭವಾಗಿ ಹೇಗೆ ತಮ್ಮೊಂದಿಗೆ ಸೇರಿಸಿಕೊಳ್ತಾರೆ ಅನ್ನೋದೆಲ್ಲ ಮುಖ್ಯ ಆಗಲ್ಲ. ಅಂತಹ ಒಬ್ಬ ಮನುಷ್ಯ ಇದಾನೆ ಅನ್ನೋದನ್ನ ಒಪ್ಪಿ ಮುಂದುವರಿದಾಗ ಬರುತ್ತಲ್ಲಾ ಅದೇ ನಿಜವಾದ ಕಥೆ ಇಲ್ಲಿ. ಕಥೆಯಲ್ಲಿ ಅಂತಹ ತಿರುವುಗಳೇನೂ ಇಲ್ಲ, ಮುಂದೇನಾಗುತ್ತೆ ಅಂತ ಸುಲಭವಾಗೇ ಊಹಿಸಬಹುದು, ಆದರೆ ಇಷ್ಟ ಆಗೋದು ಹೇಗಾಗುತ್ತೆ ಅಂತ ನಿರೂಪಿಸಿರೋ ಸರಳತೆಯಲ್ಲಿ, ಪ್ರಾಮಾಣಿಕತೆಯಲ್ಲಿ.

ಟಿಮ್ ಬರ್ಟನ್ ಇದರಲ್ಲಿ ಬಣ್ಣಗಳನ್ನ ಬಳಸಿರೋ ರೀತಿ ವಿಶೇಷ. ಪೆಗ್ ಮತ್ತು ಸುತ್ತಮುತ್ತಲಿನವರ ಮನೆಗಳೆಲ್ಲ ವರ್ಣರಂಜಿತ – ಪಿಂಕ್, ನೀಲಿ, ಹಳದಿ, ಹಸಿರು. ಅವರ ಬಟ್ಟೆಗಳು, ಕಾರ್ ಗಳು ಎಲ್ಲಾ ಕಲರ್ ಕಲರ್. ಆದರೆ ಎಡ್ವರ್ಡ್ ಹೆಚ್ಚಾಗಿ ಬಿಳೀ, ಬೂದುಬಣ್ಣದ ಬಟ್ಟೆಗಳನ್ನೇ ಹಾಕೋದು, ಒಳಗಡೆ ಅವನ ಕಪ್ಪು “ಕವಚ” – ಈ ಎರಡು ಪ್ರಪಂಚಗಳ ವ್ಯತ್ಯಾಸಗಳನ್ನ ಬಣ್ಣಗಳ ಮೂಲಕ ಹೇಳಿರೋದು ನಿಜಕ್ಕೂ ಸೂಪರ್.

ಆ ಸರಳ ಕಥೆಯ ಆಳದಲ್ಲಿ ಎರಡು ಮುಖ್ಯವಾದ ಥೀಮ್ ಗಳು ನನಗೆ ಗೋಚರಿಸಿತು. ಮೊದಲನೆಯದು, ನಾವು ಯಾವುದೋ ಒಂದು ವಿಷಯದಲ್ಲಿ ನಮಗಿಂತ “ಕಡಿಮೆ ಮಟ್ಟ” ದಲ್ಲಿ ಇರೋರನ್ನ ಅಸಡ್ಡೆ ಮಾಡುತ್ತೇವೆ. ನಮಗೆ ಸುಲಭವಾಗಿ ಮಾಡಕ್ಕೆ ಆಗೋ ಕೆಲಸ ಇನ್ನೊಬ್ಬರಿಗೆ ಆಗದೇ ಇರಬಹುದು, ಆದರೆ ಅವರಿಗೂ ತಮ್ಮದೇ ಆದ ಸಾಮರ್ಥ್ಯ ಇರುತ್ತೆ. ನಾವೆಲ್ಲರೂ ನಮ್ಮ ನಮ್ಮ “ಅಪೂರ್ಣತೆ”ಯ ಮಧ್ಯೆಯೇ ಎಷ್ಟೊಂದು ಸಾಧನೆ ಮಾಡೋ ಅವಕಾಶ ಇದೆ. ಎರಡನೆಯದಾಗಿ, ನಮಗಿಂತ ಭಿನ್ನವಾಗಿರುವವರನ್ನು ಸಮಾಜ, ಅಂದರೆ ನಾವು ಹೇಗೆ ನೋಡ್ತೀವಿ ಅನ್ನೋದು. “ಬೇರೆತನ” ವನ್ನು ಬಹಳಷ್ಟು ಜನ ಭಯದಿಂದ, ಅನುಮಾನದಿಂದ ನೋಡುವುದು ಸರ್ವೇಸಾಮಾನ್ಯ, ಸಾಮ್ಯತೆ ಇಲ್ಲದಿರುವುದೇ ಅಸಮಾಧಾನಕ್ಕೆ ಕಾರಣ ಆಗ್ತಾ ಇರೋ ಇವತ್ತಿನ ಅಸಹನೆಯ ಪ್ರಪಂಚದಲ್ಲಿ ಈ ಕಥೆ ತುಂಬಾ ಪ್ರಸ್ತುತ ಅನ್ನಿಸ್ತು. ನಮಗಿಂತ ಬೇರೆ ಭಾಷೆ ಮಾತಾಡುವವರಿರಬಹುದು, ಬೇರೆ ಧರ್ಮದವರಿರಬಹುದು, ದೈವಭಕ್ತರ ಮಧ್ಯೆ ಇರುವ ಒಬ್ಬ ನಾಸ್ತಿಕನಿರಬಹುದು, ಕೇವಲ ಸೀರೆ ಉಡೋ ಹೆಂಗಸರಿರುವ ಪಟ್ಟಣದಲ್ಲಿ ಚೂಡಿದಾರ್ ಹಾಕೋ ಹುಡುಗಿ ಇರಬಹುದು – ಅಲ್ಲೆಲ್ಲಾ ಒಬ್ಬ ಎಡ್ವರ್ಡ್ ಇದ್ದಾನೆ. ಅವನು ನಮ್ಮ ಪ್ರೀತಿ, ಬೆಂಬಲ, ಅಕ್ಸೆಪ್ಟೆನ್ಸ್ ಅನ್ನು ಬಯಸುತ್ತಿರುತ್ತಾನೆ. ಸ್ಪೂನ್ ಅಲ್ಲಿ ಊಟ ಮಾಡಲು ಕಷ್ಟ ಆದರೆ ಏನಂತೆ, ಮನೆಯ ಮುಂದೆ ಅಷ್ಟು ಚಂದದ ಉದ್ಯಾನ ಮಾಡಬಹುದಲ್ಲ?

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಪ್ರಮೋದ್
10 years ago

ಒಳ್ಳೆಯ ಚಿತ್ರ. ಮತ್ತೊಮ್ಮೆ ಕ್ರೇಜಿ ಟಿಮ್ ಬರ್ಟನ್ ಕ್ರೇಜಿ ಡೆಪ್ ಕಾ೦ಬಿನೇಷನ್ ಕ್ಲಿಕ್ ಆದ ಚಿತ್ರ. ಬಹಳಷ್ಟು ಜರ್ಮನ್ ಡಿಸೈನ್ ಪ್ರೇರೇಪಿತ ಚಿತ್ರ. ಕ್ಯಾಬಿನೆಟ್ ಆಪ್ ಡಾ| ಕ್ಯಾಲಿಘರಿ ಗೋಥಿಕ್ ಸ್ಟೈಲ್  ಇ೦ಫ್ಲುಯೆನ್ಸ್ ಆಗಿದೆ. ಫ್ರಾ೦ಕೆನ್ಶ್ಟೈನ್ ನ ಸೃಷ್ಟಿಯ೦ತೆ ಇಲ್ಲಿಯೂ ನ್ಯೂನತೆಯ ಮನುಷ್ಯನನ್ನು ಸೃಷ್ಟಿಗೊಳಿಸಿ ಮನುಷ್ಯರ ಆಗುಹೋಗುಗಳನ್ನು ಆರೋಪಿಸಿಲಾಗಿದೆ. ಉತ್ತಮ ಚಿತ್ರ. ಹೀಗೂ ಚಿತ್ರ ಮಾಡಬಹುದು ಎ೦ದು ತೋರಿಸಿಕೊಟ್ಟ ಚಿತ್ರ.

1
0
Would love your thoughts, please comment.x
()
x