ನಾಲ್ವರ ಕವಿತೆಗಳು

 

ಬಣ್ಣದ ಬದುಕು

ಕಣ್ಣ ಕನ್ನಡಿಯಲ್ಲಿ ಇಂದು

ಕಾಣುತಿಹುದು ನಿನ್ನ ಬಿಂಬ

ಏರಬೇಕು ಮಲ್ಲಗಂಬ

ಸಲ್ಲದೆಂದೂ ನಾನು ನನ್ನದೆಂಬ ಜಂಬ.

 

ಅವನೇ ಜಗದ ಸೂತ್ರಧಾರಿ

ನೀನು ಇಲ್ಲಿ ಪಾತ್ರಧಾರಿ

ಪ್ರಾಯ ಹೋಗೋ ಮುನ್ನ ಜಾರಿ

ಬೆಳೆಯಬೇಕು ಎಲ್ಲ ಮೀರಿ ..!!

 

ಇದ್ದರೇನು ಪ್ರಾಯ ಸಣ್ಣ

ಎಲ್ಲ ಹಚ್ಚ ಬೇಕು ಬಣ್ಣ

ನಾವು ಹೆಜ್ಜೆ ಹಾಕಬೇಕು

ತುತ್ತ ಚೀಲ ತುಂಬಬೇಕು.

 

ಕೆಂಪಾದರೇನು ಕಪ್ಪಾದರೇನು?

ಹೆಚ್ಚಬೇಕು ಪಾತ್ರದಂದ

ಬಣ್ಣಕಿಂತ ನಗುವೇ ಚಂದ

ನಗುವು ಮಾಸದಿರಲಿ ಕಂದ .

 

ಅವನು ನೋಡುತಿರಲು ಪಾತ್ರ

ಪರಿಗಣಿಪುದು ಪ್ರತಿಭೆ ಮಾತ್ರ

ನಿಜದಿ ತೆರೆವನವನು ನೇತ್ರ,

ಕೈಯಲೇಕೆ ದರ್ಪಣ?

ಬದುಕು ಅವನಿಗರ್ಪಣ .

-ರವಿಕಿರಣ್

 

…..ಋಣ ….

ಭೂಮಿಯೂ

ನಾ ಭಾರವೆನಲು,

ಕಂಡರೂ ಕಾಣದ ಅದೃಶ್ಯ

ಮಾನವನಾಗಿ ಅಲೆದಾಡುತ್ತಿರಲು,..

ಆಸೆಗಳೆಲ್ಲಾ ಮರೀಚಿಕೆಯಂತೆನಿಸಲು,

ಸಂಚಲನವಾಯಿತದೇನೂ

ಮರಗಟ್ಟಿದ ಮನದಲ್ಲಿ

ನಿನ್ನ ಕಂಡಾಕ್ಷಣ,

ಕವಿಯಾದೆ ನಾ ಆಗಲೇ

ಹೇಗೆ ಹೇಳು ತೀರಿಸಲಿ

ಈ ಋಣ….

—ಶೀತಲ್ …

 

ಏನೆಂದು ಬರೆಯಲಿ

ಹೇಳೇ……

ಈ ಪ್ರೀತಿ ಪುಟಗಳ

ಮೇಲೆ….

ತಿರುವಿದ ಹಾಳೆಯ

ಹಾಗೆ…..

ಹರಿದಿದೆ ನೆನಪಿನ

ಮುತ್ತಿನ ಮಾಲೆ…..

 

ಬೆಂಬಿಡದ

ಕನಸುಗಳ………..

ಪೈರೇಟೆಡ್

ಕಾಪಿಗಳ………..

ಪಳೆಯುಳಿಕೆ

ನೆನಪುಗಳು ಹೊಸೆದ,

ಹಸಿಯುಸಿರ

ಕಾವ್ಯವಿದು.

 

ಎಲ್ಲೆಲ್ಲೋ

ಮುದ್ರಿಸಿದ…….

ಈ ಮನದ ಚಿತ್ರಣವ…..

ಹಿಡಿದಿಡುವ

ಅಣೆಕಟ್ಟು..

ನನ್ನುಸಿರ

ಹೊತ್ತಿಗೆಯು…….

-ಶಿವಕುಮಾರ್. ಸಿ

 

ಮತ್ತೆ ಮತ್ತೆ ಒಲವು

ಪರಿಚಯವಾಗಿ ವರ್ಷಗಳಾದ ಮೇಲೆ

ಯೌವನದ ಮುನ್ನುಡಿಯಲ್ಲಿ ಭಾವ

ನನ್ನೆದೆಯ ಕದವನ್ನು ತಟ್ಟುವಾಗ

ಬೆಳಕಿಗೆ ಬಂದಿರಲು ಹಗುರವಾಗಿ

ವ್ಯಕ್ತವಾಗುವ ಕಳವಳವೆ ಒಲವೆ ??

 

ಮತ್ತದೆ ದಿನಚರಿಯ ಭಾಗವಾಗಿ

ಕಳೆದುಹೋದರು ಕಾಯಕದೊಳಗೆ

ಹೃದಯ ನಲುಮೆಯ ಹೊಸ್ತಿಲಲ್ಲಿ

ಬದುಕೆಂಬ ಜಾತ್ರೆಯೊಳಗೆ ಬಿಡದೆ

ಅರಸುವುದು ನಿನಗೇನಾ ಒಲವೆ ?

 

ಒಂಟಿತನದ ಸಂಗ ಅಸಹನೀಯ

ಅಂತರಂಗದ ಅರಮನೆಯೊಳಗೆ

ಮೊಳಗಬೇಕು ಆವರಣದಿ ಗಟ್ಟಿಮೇಳ

ವರನಂತೆ ಸಿಂಗರಿಸಿ ಕಾಯುತಿರುವೆ

ವಧುವಾಗಿ ಬರುವೆಯಾ ಒಲವೆ ?

 

ತವಕವಿದೆ ಸಂಭ್ರಮದ ಆಚರಣೆಗೆ

ಕುತೂಹಲದ ಭವಿಷ್ಯ ಎದುರಲ್ಲಿ

ಪ್ರಶ್ನಾರ್ಥಕ ನೋಟವಿರಲಿ ದೂರ

ಗಮ್ಯದೆಡೆಗಿನ ಹಾದಿಯಿದು ದಿಟವೆ

ನಂಬಿ ಪಯಣಿಸುವೆಯಾ ಒಲವೆ ?

 

ಪ್ರಣಯಗೀತೆಯೇನೊ ದಾಖಲು

ಕಾಗದದ ಖಾಲಿತನವ ತುಂಬುತ

ಸಾಮಾನ್ಯನ ಸಾಹಿತ್ಯವಿದು ನೇರ

ಸೂಕ್ಷ್ಮವಾಗಿ ಗಮನಿಸಿ ಒಮ್ಮೆ

ಸಮ್ಮತಿ ಮಿಡಿಯುವೆಯಾ ಒಲವೆ ?

– ಪ್ರಮೋದ್ ಶ್ರೀನಿವಾಸ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Hipparagi Siddaram
Hipparagi Siddaram
10 years ago

ಕಡಿಮೆ ಪದಗಳಲ್ಲಿ ಆಳದ ಅರ್ಥಗಳಿಂದಾದ ಕವನಗಳು….ಚೆನ್ನಾಗಿವೆ…..ಎಲ್ಲಾ ಕವಿ ಮಿತ್ರರಿಗೆ ಧನ್ಯವಾದಗಳು !

ಶಿವಕುಮಾರ್
ಶಿವಕುಮಾರ್
10 years ago

ಧನ್ಯವಾದಗಳು !ಸಿದ್ದರಾಮ ರವರೆ

2
0
Would love your thoughts, please comment.x
()
x