ಬಿಳಿಯ ಮರ್ಸಿಡೀಸ್ ಬೆಂಝ್: ಉಪೇಂದ್ರ ಪ್ರಭು

 

’ಏನ್ ಬಾಬಾ ನೀನು, ಯಾವಾಗ ನೋಡಿದ್ರೂ ಬರೇ ಕನ್ನಡ ಕಥೆಗಳನ್ನೇ ಬರೀತೀಯಾ. ಇಂಗ್ಲಿಷ್‌ನಲ್ಲಿ ಬರೆದ್ರೆ ನಾವೂ ಓದ್‌ಬಹುದಲ್ವಾ’ ಕಂಪ್ಯೂಟರ್ ಎದುರು ಕೂತು ಟೈಪ್ ಮಾಡುವಲ್ಲಿ ಮಗ್ನನಾಗಿದ್ದ ನನ್ನನ್ನು ರೇಗಿಸುತ್ತಾಳೆ ಹದಿಹರೆಯಕ್ಕೆ ಕಾಲಿಡುತ್ತಿರುವ ದ್ವಿತೀಯ ಸುಪುತ್ರಿ ಸ್ವಾತಿ.

’ಏ ಹುಡ್ಗಿ, ಕಥೆಗಳಲ್ಲಿ ಕನ್ನಡ ಕಥೆ ಇಂಗ್ಲಿಷ್ ಕಥೆ ಎಂದೇನೂ ಇಲ್ಲ. ಕನ್ನಡ ಕಥೆಗಳನ್ನೇ ಬರೀತೀಯಾ ಅನ್ನುವ ಬದಲು ಕನ್ನಡದಲ್ಲೇ ಕಥೆಗಳನ್ನು ಬರೀತೀಯಾ ಅನ್ನೋದು ವ್ಯಾಕರಣಬದ್ಧವಾಗುತ್ತದೆ’- ನನ್ನ ಕನ್ನಡ ಪಾಂಡಿತ್ಯವನ್ನು ಕನ್ನಡ ಓದಲು ಬರೆಯಲು ಬಾರದ ನನ್ನ ಹೆಂಡತಿ ಮಕ್ಕಳ ಎದುರು ಪ್ರದರ್ಶಿಸುವುದೆಂದರೆ ನನಗೊಂದು ಥರಾ ಖುಶಿ.

’ಏನ್ ಹೇಳ್ತಿದ್ದೀಯೋ ನನಗಂತೂ ಅರ್ಥ ಆಗ್ಲಿಲ್ಲ. ಎಲ್ಲಾ ಎರಡು ಅಡಿ ಮೇಲಿಂದ ಹಾರಿ ಹೋಯ್ತು’ ಪುನಃ ರೇಗಿಸುತ್ತಾಳೆ ಸ್ವಾತಿ.

’ಅರ್ಥ ಆಗೋಕೆ ಬರೇ ತಲೆ ಇದ್ರೆ ಸಾಲ್ದು. ಅದ್ರೊಳ್ಗೆ ಮೆದುಳು ಅನ್ನೋದು ಇರ್ಬೇಕು ಮಗಳೇ’

’ನನ್ನ ಮೆದುಳು ಇನ್ನೂ ಫ್ರೆಶ್ ಆಗಿದೆ. ಇದಕ್ಕೆಲ್ಲಾ ಯೂಸ್ ಮಾಡೋವಷ್ಟು ದಡ್ಡಿಯಲ್ಲ ನಾನು’, ಅಪ್ಪನಿಗೇ ತಿರುಗೇಟು! ಭೇಷ್ ಮಗಳೆ ಎಂದುಕೊಳ್ಳುತ್ತೇನೆ ಮನಸ್ಸಿನಲ್ಲೇ .

’ಬಾಬಾ ಏಳು, ನಿನ್ನ ಕಥೇನ ನಾನು ಎಲ್ಲಾರ್ಗೂ ಓದಿ  ಹೇಳ್ತೀನಿ’ ಎನ್ನುತ್ತಾ ಹದಿನಾಲ್ಕರ ಅಂಚಿನಲ್ಲಿರುವ ಪ್ರಥಮ ಪುತ್ರಿ ಸ್ನೇಹಾಳ  ಪ್ರವೇಶವಾಗುತ್ತದೆ.

’ಸಾಕು ಸುಮ್ನಿರು. ಈಗ ಆಗುತ್ತಿರುವ ಕನ್ನಡದ ಕೊಲೆಗೆ ನಿನ್ನದೂ ಒಂದು ಪಾಲು ಇರಲಿ ಅಂತಾನಾ? ಮೊದಲು ಅ ಆ ಇ ಈ ಸರಿಯಾಗಿ ಓದೋದು ಬರೆಯೋದು ಕಲಿ.  ಆ ಮೇಲೆ ಕಥೆ ಓದುವೆಯಂತೆ’ ಅಂದೆ – ಕೇಂದ್ರೀಯ ವಿದ್ಯಾಲಯದಲ್ಲಿ ಕಲಿಯುತ್ತಿರುವ ಅವಳದ್ದೇನೂ ತಪ್ಪಿಲ್ಲ, ಎಂದು ತಿಳಿದೂ.

’ಸರಿ ಹಾಗಿದ್ದರೆ ನೀನೆ ಓದಿ ಹೇಳು, ನಮಗೂ ಗೊತ್ತಾಗಲಿ, ನೀನು ಏನು ಬರೀತಾ ಇರ್ತಿ ಅಂತ’

’ಏ, ನಾನು ಬರೆದದ್ದು ಒಮ್ಮೊಮ್ಮೆ ನನಗೇ ಅರ್ಥ ಆಗೊಲ್ಲ, ನಿನಗೇನು ಅರ್ಥ ಆಗುತ್ತೆ ಹೇಳು..?’

’ಸರೀನಪ್ಪಾ, ನಮಗೆ ಅರ್ಥ ಆಗ್ದಿರೋದು ಓದಿ ಹೇಳೋದು ಬೇಡ ಬಿಡು. ನಮಗರ್ಥ ಆಗೋ ಒಂದು ಕಥೆ ಹೇಳು, ನಿದ್ದೆ ಬರುತ್ತಾ ನೋಡೋಣ’ 

 

ನನಗೂ ಟೈಪ್ ಮಾಡಿ ಬೋರಾಗಿತ್ತು. ಸ್ವಲ್ಪ ಟೈಮ್ ಪಾಸ್ ಆಗ್ಲಿ ಎಂದುಕೊಂಡು ’ಸರಿ, ನಿಮ್ಮಮ್ಮನ್ನೂ ಕರಿ, ಅವಳಿಗೂ ಹಗಲಲ್ಲಿ ಸರಿಯಾಗಿ ನಿದ್ದೆ ಬರ್ತಾ ಇಲ್ವಂತೆ’ ಅಂದೆ.

ಲಲ್ಲಿಯೂ ಬಂದು ಕೂತ ಮೇಲೆ ನಾನು ಶುರು ಮಾಡಿದೆ, ’ಈಗ ನಾನು ಹೇಳೋದು ಒಂದು ನೀತಿ ಕಥೆ.  ಇದನ್ನು ಚೆನ್ನಾಗಿ ಅಂದ್ರೆ ಗಮನವಿಟ್ಟು ಕೇಳಿ ಈ ಕಥೆಯಲ್ಲಿ ಅಡಗಿರುವ ನೀತಿಯನ್ನು  ನನ್ಗೆ  ಹೇಳ್ಬೇಕು…’

’ಬಾಬಾ ಬಾಬಾ, ನಿನ್ನ ನೀತಿ ಕಥೆಯೆಲ್ಲಾ ಬೇಡ, ಸ್ಕೂಲಲ್ಲಿ ಬೇಕಾದಷ್ಟು ಕೇಳಿಯಾಗಿದೆ. ಏನಿದ್ದರೂ ಒಂದು ಥ್ರಿಲ್ಲಿಂಗ್ ಕಥೆ ಹೇಳು’ ನನ್ನ ಮಾತನ್ನು ಅರ್ಧದಲ್ಲೇ ನಿಲ್ಲಿಸಿದ ಸ್ವಾತಿಯಿಂದ ಬಂದ ಸಲಹೆ.

’ಪೂರ್ತಿ ಕೇಳೇ. ಬರೀ ನಿಮ್ಮಮ್ಮನಿಗಷ್ಟೆ ತಾಳ್ಮೆ ಇಲ್ಲ ಅಂದ್ಕೊಂಡಿದ್ದೆ. ನೀನ್ ನೋಡಿದ್ರೆ ಅವಳಪ್ಪನನ್ನೂ ಮೀರಿಸೋ ಥರಾ ಕಾಣಿಸ್ತಿ.  ಈಗ ಕೇಳು. ಕಥೆ ಕೇಳಿದ್ಮೇಲೆ ನಿಮ್ಮಲ್ಲಿ ಯಾರಾದರೂ ಹೇಳೋ ನೀತಿ ನಾನು ಅಂದ್ಕೊಂಡ  ನೀತಿಗೆ ಮ್ಯಾಚ್ ಆದ್ರೆ ಇವತ್ತಿನ ಸಂಜೆ ಊಟಕ್ಕೆ ನಿಮಗಿಷ್ಟವಾದ ಕೆಎಫ್‌ಸೀಗೆ ಹೋಗೋಣ’ ಅಂದಾಗ  ಮೂವರ ಕಿವಿಯೂ ನೆಟ್ಟಗಾಯ್ತು. 

’ನನಗೊಂದು ಸಂದೇಹ. ನಾವೇನೋ ನಿನ್ನ ಕಥೆ ಕೇಳಿ ನಮಗೆ ತಿಳಿದ ನೀತಿಯನ್ನು ಹೇಳ್ತೀವಿ.  ಆದ್ರೆ ಅದು ಒಂದು ವೇಳೆ ನಿನ್ನ ನೀತಿಯಂತೆ ಇತ್ತು ಅಂದ್ಕೋ. ಆ ಮೇಲೆ ನಮ್ಮನ್ನು ಕೆಎಫ್‌ಸೀಗೆ ಕರೆದುಕೊಂಡು ಹೋಗೋದನ್ನು ತಪ್ಪಿಸೋದಿಕ್ಕೆ ನೀನು ನಿನ್ನ ನೀತಿಯನ್ನು ಬದಲಾಯಿಸೋಲ್ಲ ಅನ್ನೋ ಗ್ಯಾರಂಟಿ ಏನಿದೆ?’ ನನ್ನವಳ ಸವಾಲು.

’ಹೆಣ್ಣೇ, ಸಂದೇಹ ಅನ್ನೋದು ನಿನ್ನ ಇನ್ನೊಂದು ಹೆಸರು, ಇದಕ್ಕೆ ನಾನೇನೂ ಮಾಡೋ ಹಾಗಿಲ್ಲ’ ಅಂದೆ.

’ಐಡಿಯಾ! ನಿನ್ನ ನೀತಿಯನ್ನು ಒಂದು ಚೀಟಿಯಲ್ಲಿ ಬರೆದು ಒಂದು ಕಡೆ ಇಟ್ಟಿರು. ಕಥೆ ಕೇಳಿ ನಾವು ನಮಗೆ ತಿಳಿದ ನೀತಿ ಹೇಳಿದ ಮೇಲೆ ನಾವೇ ಅದನ್ನು ಓಪನ್ ಮಾಡಿ ನೋಡಿದ್ರೆ ಸಂದೇಹ ಪಡೋ ಚಾನ್ಸೇ ಇಲ್ಲ’ ಸ್ನೇಹಾಳಿಂದ ಸಮಯೋಚಿತ ಸಲಹೆ.

’ಕಥೆ ಹೇಳೋನು ನಾನು. ಕೆಎಫ್‌ಸೀಗೆ ಕರೆದುಕೊಂಡು ಹೋಗೋನೂ ನಾನು. ಆದ್ರೂ ನನ್ಮೇಲೆ ಅದೆಷ್ಟು ನಿರ್ಬಂಧಗಳು!’

’ಮತ್ತೆ ಸಂಸಾರ ಅಂದ್ರೆ ಸುಮ್ನೇನಾ?’ ಲಲ್ಲಿಯ ತಿರುಗೇಟು.

’ಸರಿ ಈಗ ಕಥೆ ಕೇಳಿ. ಇದು ನನ್ನ ಸ್ವಂತ ಕಥೆ ಅಲ್ಲ.  ನಾನು ಬೇರೆಯವರ ಬಾಯಿಯಿಂದ ಕೇಳಿದ ಕಥೆ. ಒಬ್ಬ ಡೊಡ್ಡ  ವ್ಯಾಪಾರಿ ಇರ್ತಾನೆ..’

’ವ್ಯಾಪಾರಿ ಅಂದ್ರೆ?’ ಸ್ವಾತಿಯ ಪ್ರಶ್ನೆ.

’ವ್ಯಾಪಾರಿ ಅಂದ್ರೆ ಬ್ಯುಸಿನೆಸ್‌ಮ್ಯಾನ್. ಆಗರ್ಭ ಶ್ರೀಮಂತ…’

’ಗರ್ಭ ಇರೋದು ಹೆಂಗಸರಿಗಲ್ವಾ?’ ಸ್ನೇಹಾಳ ಡೌಟ್!

’ಆಗರ್ಭ ಶ್ರೀಮಂತ ಅಂದ್ರೆ ತುಂಬಾ ತುಂಬಾ ಶ್ರೀಮಂತ ಅಂತ.  ಇನ್ನು ಮಧ್ಯೆ ಯಾರೂ ಪ್ರಶ್ನೆ ಕೇಳ್ಕೂಡ್ದು. ಹೆಸರು ರಾಮರಾವ್. ಅವನಿಗೊಬ್ಬ ಮಗ. ಅವನ ಹೆಸರು ಜಿತೇಂದ್ರ’

ಸ್ವಾತಿ ನನ್ನ ಕಥೆಯನ್ನು ಮಧ್ಯದಲ್ಲೇ ತುಂಡರಿಸಿ ’ಅವನಿಗೆ ಇಬ್ಬರು ಮಕ್ಕಳು. ಮಗಳು ಏಕ್ತಾ, ಮಗ ತುಷಾರ್’ ಎಂದಾಗ ನಗು ಬಂದರೂ ತೋರಿಸಿಕೊಳ್ಳದೆ, ’ನಿನ್ಗೆ ಟೀವಿ ಸಿನೇಮಾ ಬಿಟ್ಟು ಬೇರೇನು ಗೊತ್ತು ಹೇಳು. ದೇಶದ ಗೃಹ ಮಂತ್ರಿ ಯಾರು ಹೇಳು ನೋಡೋಣ’ ಎಂದು ಸವಾಲೆಸುಯುತ್ತೇನೆ.

’ನೀನು ಇಂಡಿಯಾದಲ್ಲಿ ಎಷ್ಟು ರಾಜ್ಯಗಳಿವೆ ಎಂದು ಹೇಳಿದ್ರೆ ನಾನು  ದೇಶದ ಗೃಹ ಮಂತ್ರಿ ಯಾರೆಂದು ಹೇಳ್ತೀನಿ’ ಎಂದ ಮರುಸವಾಲಿಗೆ ನನ್ನಲ್ಲಿ ಉತ್ತರವಿರದ ಕಾರಣ, ’ಸಾಕು, ಸುಮ್ನೆ ಕಥೆ ಕೇಳು’ ಎಂದು ಮುಂದುವರಿಸುತ್ತೇನೆ.

 

’ಜಿತೇಂದ್ರ ಚಿಕ್ಕವನಾಗಿದ್ದಾಗಲೇ ಅವನ ಅಮ್ಮ ತೀರಿಕೊಂಡಿದ್ದರಿಂದ ಅವನ ತಂದೆಯೇ ಅವನಿಗೆ ಸರ್ವಸ್ವ. ಮಗ ಒಳ್ಳೆಯ ವಿದ್ಯಾಬುದ್ಧಿ ಕಲಿಯಲಿ ಎಂದು ತಂದೆ ಅವನನ್ನು ಅಮೇರಿಕಾದಲ್ಲಿ ಒಂದು ರೆಸಿಡೆನ್ಷಿಯಲ್ ಸ್ಕೂಲಲ್ಲಿ ಓದಿಸುತ್ತಾನೆ..’

’ಯಮ್ಮೀ, ಅಮೇರಿಕಾದಲ್ಲಿ ರೆಸಿಡೆನ್ಷಿಯಲ್ ಸ್ಕೂಲಲ್ಲಿ, ಎಷ್ಟು ಮಜಾ ಅಲ್ವಾ’ ಸ್ವಾತಿ ಕಣ್ಣರಳಿಸುತ್ತಾಳೆ.

’ಸುಮ್ನೆ ಕೂತ್ಕೊಳ್ಳೆ, ನೀನೂ ಅವ್ನ ಮಗಳಾಗಿದ್ರೆ ನೀನೂ ಹೋಗಬಹುದಿತ್ತು’ ಲಲ್ಲಿ ಅವಳನ್ನು ಸುಮ್ಮನಾಗಿಸುತ್ತಾಳೆ.

’ಸರಿ ಸರಿ, ಮುಂದೆ ಕೇಳಿ.. ರಾಮರಾವ್‌ನ ಮಗ ಹತ್ತನೇ ತರಗತಿ ಮುಗಿಸಿದ ಮೇಲೆ ಬೆಂಗಳೂರಿಗೆ ಕರೆಸಿಕೊಂಡು ಇಲ್ಲೇ ಒಂದು ಕಾಲೇಜಿಗೆ ಸೇರಿಸ್ತಾನೆ. 

 

ಮಗನ ಹದಿನಾರನೇ ಜನ್ಮದಿನದ ಮುಂಚಿನ ಸಂಜೆ ಅಪ್ಪ ಮಗನನ್ನು ಕರೆದು, ’ಮಗಾ, ಇಷ್ಟು ವರ್ಷ ನೀನು ಅಮೇರಿಕಾದಲ್ಲಿದ್ದುದರಿಂದ ನಿನ್ನ ಜನ್ಮದಿನ ಸರಿಯಾಗಿ ಆಚರಿಸಲು ಸಾಧ್ಯವಾಗಲಿಲ್ಲ.  ಈಗ ನೀನು ನನ್ನ ಜತೆಯಲ್ಲಿಯೇ ಇರುವುದರಿಂದ ಈ ಸಲ ಜೋರಾಗಿ ಆಚರಿಸೋಣ ಅಂದುಕೊಂಡಿದ್ದೇನೆ. ನಿನಗೆ ಏನು ಬೇಕು ಕೇಳು’ ಅಂದಾಗ ಮಗ ವಿನಮ್ರನಾಗಿ, ’ಅಪ್ಪಾ, ನನಗೆ ನೀವು ಇದುವರೆಗೆ ಯಾವುದಕ್ಕೂ ಕಡಿಮೆ ಮಾಡಿಲ್ಲ. ತಂದೆ  ತಾಯಿ ಎಲ್ಲಾ ನೀವೇ ಆಗಿ ನನ್ನನ್ನು ಬೆಳೆಸಿದ್ದೀರಿ. ನನ್ನ ಬೇಕು ಬೇಡಗಳನ್ನೆಲ್ಲಾ ಪೂರೈಸಿದ್ದೀರಿ. ನನಗೇನೂ ಬೇಡ’ ಅನ್ನುತ್ತಾನೆ.

’ವೇಸ್ಟ್, ಯೂಸ್‌ಲೆಸ್ ಫೆಲೋ. ನಾನಾಗಿದ್ರೆ ಏನೆಲ್ಲಾ ಕೇಳ್ತಿದ್ದೆ ಗೊತ್ತಾ’ ಸ್ವಾತಿ ತನ್ನ ಚಾಳಿ ಬಿಡದೆ ಮಧ್ಯೆ ಬಾಯಿ ಹಾಕುತ್ತಾಳೆ.

’ಗೊತ್ತಿಲ್ಲ. ಆದ್ರೆ ಈಗ ಹೇಳೋಕೆ ಹೋಗ್ಬೇಡ”ಇದುವರೆಗೆ ಸುಮ್ಮನೆ ಕೂತ ಸ್ನೇಹಾ ಬಾಯಿ ತೆರೆದಾಗ ಪುನಃ ರೇಗಿದೆ ’ಸುಮ್ನೆ ಕಥೆ ಕೇಳ್ತೀರಾ, ಎದ್ದುಹೋಗ್ಲೋ”

ಎಲ್ಲಾ ಸುಮ್ಮನಾದ ಮೇಲೆ ಮುಂದುವರಿಸಿದೆ

’ಹಾಗೆಲ್ಲಾ ಹೇಳಿ ನನ್ನ ಮನಸ್ಸು ನೋಯಿಸಬೇಡ, ಏನಾದರೂ ಕೇಳಲೇಬೇಕು’ ಎಂದು ಬಲವಂತ ಮಾಡಿದ ತಂದೆಯ ಬಲವಂತಕ್ಕೆ ಮಣಿದು ಮಗ ಹೇಳುತ್ತಾನೆ, ’ಅಪ್ಪಾ, ಇಷ್ಟು ಬಲವಂತ  ಮಾಡುತ್ತಿದ್ದೀರಾ ಎಂದು ಕೇಳುತ್ತಿದ್ದೇನೆ, ಸಾಧ್ಯವಾದರೆ ಒಂದು ಬಿಳಿಯ ಮರ್ಸಿಡೀಸ್ ಬೆಂಝ್ ತರಿಸಿಕೊಡಿ’.  ಈ ರಾಮರಾವ್‌ಗೆ ಇದೇನು ಮಹಾ ಎಂದು ತನ್ನ ಮ್ಯಾನೇಜರ್‌ನ ಕರೆದು ’ಬಿಳಿಯ ಮರ್ಸಿಡೀಸ್ ಬೆಂಝ್ ಎಲ್ಲಿದ್ದರೂ ಖರೀದಿಸಿ. ನಾಳೆ ಬೆಳಿಗ್ಗೆ ನಮ್ಮ ಮನೆಯ ಮುಂದೆ ನಿಂತಿರಬೇಕು’ ಎಂದು ಆರ್ಡರ್ ಮಾಡ್ತಾನೆ.

ಬೆಳಿಗ್ಗೆ ಸುಮಾರು ಹನ್ನೊಂದರ ಹೊತ್ತಿಗೆ ಸ್ವಾತಿ ಸ್ಕೂಲ್‌ನಿಂದ ಬರೋ ಥರಾ ಮುಖ ಜೋಲು ಹಾಕಿಕೊಂಡು ಬಂದ ಮ್ಯಾನೇಜರ್ ’ಸರ್, ಇಡೀ ಬೆಂಗಳೂರು ಜಾಲಾಡಿಸಿದೆ. ಒಂದೂ ’ಬಿಳಿಯ ಮರ್ಸಿಡೀಸ್ ಬೆಂಝ್ ಸಿಗಲಿಲ್ಲ’ ಎಂದಾಗ ತಂದೆಗೆ ಪೆಚ್ಚಾದರೂ ಮಗನೇ ಅಪ್ಪನಿಗೆ ಸಾಂತ್ವನ ಹೇಳುತ್ತಾನೆ, ’ಅಪ್ಪಾ, ಯಾಕಿಷ್ಟು ಅಪ್‌ಸೆಟ್ ಆಗ್ತೀರಾ. ನನಗೇನೂ ಅದರಲ್ಲಿ ಆಸೆ ಇಲ್ಲ. ಆದ್ರೂ ನಿಮ್ಮ ಬಲವಂತಕ್ಕೆ ಕೇಳಿದೆ ಅಷ್ಟೆ”

ಜಿತೇಂದ್ರ ಈಗ ಬೆಂಗ್ಳೂರಿನಲ್ಲೇ ಕಾಲೇಜಿಗೆ ಹೋಗ್ತಿದ್ದಾನೆ. ಚಿಗುರು ಮೀಸೆ ಬೆಳೆಯುತ್ತಿದೆ. ಹೊಸ ಹೊಸ ಗೆಳೆಯರು. ಮಜವಾಗಿದ್ದಾನೆ. ಇಷ್ಟರಲ್ಲೇ ಅವನ ಹದಿನೇಳನೇ ಜನ್ಮದಿನ ಹತ್ತಿರ ಬರುತ್ತದೆ. ಅಪ್ಪನಿಗೆ ಹಿಂದಿನ ವರ್ಷದ ಕಹಿ ಅನುಭವ ಇದ್ದಿದ್ದರಿಂದ ಈ ಸಲ ಎರಡು ದಿನ ಮುಂಚಿತವಾಗಿ ಕೇಳುತ್ತಾನೆ, ’ಮಗೂ ನಿನ್ನ ಜನ್ಮದಿನಕ್ಕೆ ಏನು ಕೊಡಲಿ.  ಮೊದಲು ಬೇಡವೆಂದರೂ ಹೆಚ್ಚೇನೂ ಬಲವಂತ ಮಾಡಿಸಿಕೊಳ್ಳದೆ ಮಗ ’ಬಿಳಿಯ ಮರ್ಸಿಡೀಸ್ ಬೆಂಝ್’ ಅನ್ನುತ್ತಾನೆ. ಅಪ್ಪ ತನ್ನ ದೇಶದ ಎಲ್ಲಾ ಗೆಳೆಯರಿಗೂ ಫೋನ್ ಮಾಡಿ ಇನ್ನೆರಡು ದಿನದೊಳಗೆ ತನಗೊಂದು ಬಿಳಿಯ ಮರ್ಸಿಡೀಸ್ ಬೆಂಝ್ ಬೇಕು ದುಡ್ಡು ಎಷ್ಟಾದರೂ ಪರವಾಗಿಲ್ಲ ಎನ್ನುತ್ತಾನೆ. ಜನ್ಮದಿನದಂದು ಕಾರ್ ಬರಲೇ ಇಲ್ಲ. ಎಲ್ಲರಿಂದಲೂ ಒಂದೇ ಉತ್ತರ -’ಕ್ಷಮಿಸು, ನೀನು ಹೇಳಿದ ಬಣ್ಣದ ಕಾರು ಸಿಗಲಿಲ್ಲ- ಎಂದು. ಈ ಸರಿಯೂ ಮಗನೇ ’ಪರವಾಗಿಲ್ಲ ಬಿಡಿ ಡ್ಯಾಡೀ’ ಅಂತಾನೆ.

ಮಗ ಈಗ ಸೆಕೆಂಡ್ ಪಿಯೂಸಿಯಲ್ಲಿದ್ದಾನೆ.  ಕಾಲೇಜ್ ವಾತಾವರಣ, ಹೊಸ ಹೊಸ ವಿಚಾರಗಳು, ಹೊಸ ಹೊಸ ಅಭ್ಯಾಸಗಳು.  ತಂದೆಗೆ ಮಗ ಎಲ್ಲಾದರೂ ದಾರಿ ತಪ್ಪುತಿದ್ದಾನೇನೋ ಎಂಬ ಆತಂಕ ಬೇರೆ. ಇನ್ನೊಂದು ವರ್ಷ ಕಳೆಯುತ್ತಾ ಬಂತು. ತಂದೆಯ ಆತಂಕ ಯಾಕೋ ಜಾಸ್ತಿಯಾಗುತಿತ್ತು. ಅವನ ಗೆಳೆಯರು ಸಲಹೆ ಕೊಡುತ್ತಾರೆ-  ಮಗನಿಗೆ  ಮುಂಜಿ ಮಾಡಿಸಿಬಿಡು-ಎಂದು. ತಂದೆಗೂ ಅದೇ ಸರಿ ಅನ್ನಿಸುತ್ತದೆ. ಈ ಸಲ ಮಗನ ಜನ್ಮದಿನದಂದೇ ಅವನ ಮುಂಜಿ ಮಾಡಿಸಿ ಬಿಡೋಣ ಎಂದುಕೊಂಡು ಮಗನ ಹತ್ತಿರ ವಿಷಯ ಪ್ರಸ್ತಾಪಿಸುತ್ತಾನೆ. ಮಗನಿಗೋ ನನ್ನ ಹಾಗೆ ದೇವರು ದಿಂಡರು ಎಂದರೆ ಅಷ್ಟಕ್ಕಷ್ಟೆ. ’ನನಗೆ ಮುಂಜಿ ಬೇಡವೇ ಬೇಡ, ನನಗದರಲ್ಲಿ ನಂಬಿಕೆ ಇಲ್ಲ’ ಎನ್ನುತ್ತಾನೆ. ತಂದೆ ಎಷ್ಟು ಹೇಳಿದರೂ ಕೇಳುವುದೇ ಇಲ್ಲ. ಕೊನೆಗೆ ತಂದೆಯ ಕಣ್ಣಲ್ಲಿ ನೀರಾಡುತ್ತಿದ್ದಿದ್ದು ಕಂಡು ಸ್ವಲ್ಪ ಕರಗುತ್ತಾನೆ. ’ಸರಿ ಡ್ಯಾಡೀ, ನಾನು ಮುಂಜಿ ಮಾಡಿಕೊಳ್ಳಲು ಒಪ್ಪುತ್ತೇನೆ. ಆದ್ರೆ ಒಂದು ಕಂಡಿಷನ್. ನನಗೆ ಅದೇ ದಿನ ಬಿಳಿಯ ಮರ್ಸಿಡೀಸ್ ಬೆಂಝ್ ಕೊಡಿಸಬೇಕು’ ಎಂದಾಗ ತಂದೆಗೆ ನಿರಾಳವಾಗಿ ನಿಟ್ಟುಸಿರು ಬಿಡುತ್ತಾನೆ. ಇನ್ನೂ ಒಂದು ವಾರ ಇದೆ. ’ಬಿಳಿಯ ಮರ್ಸಿಡೀಸ್ ಬೆಂಝ್ ಏನು ಮಹಾ. ದೇಶವಿದೇಶಗಳಲ್ಲಿ ತನಗೆ ಬೇಕಾದಷ್ಟು ದೊಡ್ಡ ಮನುಷ್ಯರ ಪರಿಚಯವಿದೆ, ಗೆಳೆತನವಿದೆ, ಈ ಸಲ ಕಾರ್ ಸಿಕ್ಕೇ ಸಿಗುತ್ತದೆ. ಮಗನ ಆಸೆ ಪೂರೈಸದಿದ್ದರೆ ಇಷ್ಟೆಲ್ಲಾ ಇದ್ದು ಏನು ಪ್ರಯೋಜನ – ಎಂದು ತನ್ನ ಗೆಳೆಯರಿಗೆಲ್ಲಾ ಫೋನ್ ಮಾಡಿ ’ತನಗೊಂದು ಬಿಳಿಯ ಮರ್ಸಿಡೀಸ್ ಬೆಂಝ್ ಒಂದು ವಾರದೊಳಗೆ ಬೇಕೇ ಬೇಕು ಎನ್ನುತ್ತಾನೆ.

ಮುಂಜಿಯ ದಿನ ಬೆಳಿಗ್ಗೆ ಮಗ ತಾನು ಮುಂಜಿ ಮಾಡಿಕೊಳ್ಳುವುದೇ ಇಲ್ಲ ಎಂದು ಕೋಣೆ ಸೇರಿಬಿಟ್ಟ! ಕಾರಣ: ಬಿಳಿಯ ಮರ್ಸಿಡೀಸ್ ಬೆಂಝ್ ಬರಲೇ ಇಲ್ಲ. ರಾಮರಾವ್ ಅಸಹಾಯಕನಾಗಿದ್ದಾನೆ. ಎಷ್ಟು ದುಡ್ಡಿದ್ದ್ರೆ ಏನು ಪ್ರಯೋಜನ? ಮಗನ ಒಂದೇ ಒಂದು ಆಸೆಯನ್ನು ಪೂರೈಸುವಲ್ಲಿ ಮೂರು ವರ್ಷಗಳಿಂದ ಸತತವಾಗಿ ವಿಫಲನಾಗುತ್ತಾ ಬಂದಿದ್ದಾನೆ. ಈಗ ಇಷ್ಟು ಜನರ ಎದುರು ತನಗೆ ಮುಖಭಂಗವಾಗುತ್ತಿದೆ.  ಮಗ ಮುಂಜಿ ಮಾಡಿಕೋಳ್ಳುವುದಿಲ್ಲ ಎಂದು ಮೊಂಡು ಹಿಡಿದುಬಿಟ್ಟಿದ್ದಾನೆ. ಅಪ್ಪನ ಘನತೆ ಗೌರವಕ್ಕಿಂತ ಅವನ ಹಟ ಅವನಿಗೆ ಮುಖ್ಯವಾಗಿದೆ.  ಉಕ್ಕಿ ಬರುತ್ತಿರುವ ಕಣ್ಣೀರನ್ನು ಹತ್ತಿಕ್ಕುವ ವ್ಯರ್ಥ ಪ್ರಯತ್ನ ಮಾಡಿತ್ತಿದ್ದಾನೆ ರಾಮರಾವ್.

ಸ್ವಲ್ಪ ಹೊತ್ತಿನ ನಂತರ ಮಗನಿಗೆ ಏನನಿಸಿತೋ ಏನೋ. ತಂದೆಯ ಹತ್ತಿರ ಬಂದು ’ನಿಮ್ಮಿಷ್ಟದಂತೇ ಆಗಲಿ ಡ್ಯಾಡೀ. ನಾನು ಮುಂಜಿಗೆ ತಯಾರು’ ಅಂದಾಗ ತಂದೆಯ ಕಣ್ಣಲ್ಲಿ ಆನಂದಭಾಷ್ಪ.

ಮುಂಜಿ ಮುಗಿಯುತ್ತದೆ. ಸಂಜೆಯ ಹೊತ್ತಿಗೆ ಮಗ ಜನಿವಾರವನ್ನು ಕಡಿದು ಬಿಸಾಕಿಯೂ ಆಗಿದೆ. ಸುಮಾರು ಆರು ಗಂಟೆಯ ಹೊತ್ತಿಗೆ ತನ್ನ ಗೆಳೆಯರೊಂದಿಗೆ ಅಡ್ಡಾಡಲು ಹೋದ ಮಗ ಎಂ.ಜಿ. ರೋಡ್ ದಾಟುತ್ತಿರುವಷ್ಟರಲ್ಲಿ ತುಂಬಾ ವೇಗವಾಗಿ ಬರುತ್ತಿದ್ದ ’ಬಿಳಿಯ ಮರ್ಸಿಡೀಸ್ ಬೆಂಝ್ ಕಾರೊಂದು ಇವನಿಗೆ ಢಿಕ್ಕಿ ಹೊಡೆದು ಅಷ್ಟೇ ರಭಸದಲ್ಲಿ ಮುಂದೋಡುತ್ತದೆ. ಹಿಟ್ ಆಂಡ್ ರನ್ ಅಂತಾರಲ್ಲಾ ಆ ಥರದ ಕೇಸ್. ಸಮಯಕ್ಕೆ ಸರಿಯಾಗಿ ಪ್ರತಿಕ್ರಯಿಸಿದ ನಮ್ಮ ಬೆಂಗಳೂರು ಪೋಲೀಸರು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಗನನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ಸೇರಿಸಿ ರಾಮರಾವ್‌ಗೆ ಸುದ್ದಿ ತಿಳಿಸುತ್ತಾರೆ, ಅಲ್ಲದೇ ಅಪಘಾತಕ್ಕೆ ಕಾರಣವಾದ ಕಾರನ್ನು ಪತ್ತೆ ಹಚ್ಚಿ ಮಾಲೀಕನನ್ನು ಬಂಧಿಸುತ್ತಾರೆ.

ಜೀವ ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಧಾವಿಸಿದ ರಾಮರಾವ್‌ಗೆ ವೈದ್ಯರು ಮಗ ಉಳಿಯುವ ಭರವಸೆ ಇಲ್ಲ ಎಂದಾಗ ರಾಮರಾವ್ ಭೂಮಿಗೆ ಕುಸಿಯುತ್ತಾನೆ.  ಈಗಲೋ ಆಗಲೋ ಪ್ರಾಣ ಬಿಡಲು ಸಿದ್ಧನಾಗಿದ್ದ ಮಗನ ರಕ್ತಸಿಕ್ತ ಮುಖವನ್ನು ಸವರುತ್ತಾ ತಂದೆ ಕೇಳುತ್ತಾನೆ, ’ಮಗೂ ಇವತ್ತು ನಿನ್ನ ಹದಿನೆಂಟನೇ ಜನ್ಮದಿನ. ನಿನಗೇನು ಬೇಕು ಕೇಳು. ನನ್ನ ಪ್ರಾಣ ಒತ್ತೆ ಇಟ್ಟಾದರೂ ನಿನ್ನ ಇಚ್ಛೆ ಪೂರೈಸುತ್ತೇನೆ’. ಮಗನ ಬಾಯಿಯಿಂದ ಕೇಳಿಯೂ ಕೇಳಿಸದಂತೆ ’ಬಿಳಿಯ ಮರ್ಸಿಡೀಸ್ ಬೆಂಝ್’ ಎಂಬ ಶಬ್ದಗಳು ತುಂಬಾ ಕಷ್ಟದಲ್ಲಿ ಹೊರಬೀಳುತ್ತವೆ.

ರಾಮರಾವ್ ಕೂಡಲೇ ಪೋಲಿಸ್ ಸಹಾಯ ಪಡೆದು ಮಗನ ಅಪಘಾತಕ್ಕೆ ಕಾರಣವಾದ ಕಾರಿನ ಒಡೆಯನ ಮನವೊಲಿಸಿ  ಅದೇ ಕಾರನ್ನು ಖರೀದಿಸಿ ಅದರ ಕೀಲಿಕೈಯನ್ನು ಮಗನ ರಕ್ತಸಿಕ್ತ ಕೈಯಲ್ಲಿ ಇಡುವ ಮುಂಚೆಯೇ ಮಗನ ಪ್ರಾಣಪಕ್ಷಿ ಹಾರಿಹೋಗಿರುತ್ತದೆ!

ಕಥೆ ಮುಗಿಸಿದೆ. ನಿಶ್ಯಬ್ದ. ಯಾರೂ ಮಾತಾಡುತ್ತಿಲ್ಲ. ಸ್ವಲ್ಪ ಹೊತ್ತು ಬಿಟ್ಟು ನಾನಂದೆ, ’ನಿಮಗೆ ಐದು ನಿಮಿಷದ ವಾಯಿದೆ. ಚೆನ್ನಾಗಿ ಯೋಚಿಸಿ ನೀವು ಕಲಿತ ನೀತಿಯನ್ನು ನನಗೆ ಹೇಳಿ’ ಎಂದು ಕಂಪ್ಯೂಟರ್ ರೂಮ್‌ನಿಂದ ಹೊರಗೆ ಬಂದು ಸೋಫಾದಲ್ಲಿ ಒಕ್ಕರಿಸಿದೆ.

ಮೊದಲು ಹೊರಬಂದವಳು ಸ್ವಾತಿ. ’ಹೇಳಮ್ಮಾ, ಏನ್ ನೀತಿ ಕಲಿತೆ’ ಅಂದೆ.

’ಯಾವಾಗಲೂ ಮಕ್ಕಳ ಆಸೆಯನ್ನು ಅಪ್ಪ ಅಮ್ಮ ಪೂರೈಸಬೇಕು. ಇಲ್ಲದಿದ್ದರೆ ನಂತರ ಸಂಕಟ ಪಡಬೇಕಾಗುತ್ತದೆ. ಇದು ನನ್ನ ಉತ್ತರ. ನನಗಿವತ್ತು ಕೆಎಫ್‌ಸೀಗೆ ಹೋಗುವ ಆಸೆಯಿದೆ. ನೀನು ಒಳ್ಳೆಯ ಅಪ್ಪ ಎಂದು ನನಗೆ ಗೊತ್ತು’ ಅಂದಾಗ ಸುಸ್ತಾದೆ.

ಸ್ನೇಹಾಳ ಸರದಿ. ಸ್ವಲ್ಪ ಮೃದು ಸ್ವಭಾವದ ಇವಳು ಕಂಡುಕೊಂಡ ನೀತಿ ’ಮಕ್ಕಳು ಯಾವುದಕ್ಕೂ ಹೆಚ್ಚು ಆಸೆ ಪಡಬಾರದು. ತಂದೆ ತಾಯಿಯರೂ ಅಷ್ಟೆ, ದುಡ್ಡೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂದುಕೊಳ್ಳಬಾರದು. ಅಲ್ಲದೇ ಮಕ್ಕಳಿಗೆ ಅದು ಕೊಡಿಸುತ್ತೇನೆ ಇದು ಕೋಡಿಸುತ್ತೇನೆ ಎಂದು ಆಸೆ ತೋರಿಸಬಾರದು’

ಲಲ್ಲಿಯ ವರಸೆ ಬೇರೆ ಥರ. ’ಮಕ್ಕಳು ಬೆಳೆಯುತ್ತಿದ್ದಂತೆ ತಂದೆ ತಾಯಿಯರ ಮೇಲೆ ಅವರಿಗೆ ಗೌರವ ಕಡಿಮೆಯಾಗುತ್ತದೆ. ಸಂಸ್ಕೃತಿ, ಆಚಾರ ವಿಚಾರಗಳನ್ನು ಮರೆಯುತ್ತಾರೆ. ಜಾತಿ, ಧರ್ಮ, ದೇವರುಗಳ ಬಗ್ಗೆ ಅಸಡ್ಡೆಯಿಂದ ವರ್ತಿಸುತ್ತಾರೆ. ಎಲ್ಲವನ್ನೂ ನೋಡುವವನೊಬ್ಬ ಮೇಲಿರುತ್ತಾನೆ ಎಂಬುದನ್ನು ಮರೆಯುತ್ತಾರೆ. ಇದು ತಪ್ಪು’

’ಅಪ್ಪಾ, ಡಿನ್ನರ್ ಕೆಎಫ್‌ಸೀಯಲ್ಲಿ ಖಂಡಿತಾ ತಾನೆ. ಇನ್ನು ಇಲ್ಲ ಅನ್ಬಾರ್ದು’ ಸ್ನೇಹಾಳ ಮನವಿ.

’ನನ್ನ ಕಂಡಿಷನ್ ಏನಿತ್ತು? ನಿಮ್ಮಲ್ಲಿ ಕನಿಷ್ಟ ಒಬ್ಬರ ನೀತಿ ನನ್ನ ನೀತಿಯಂತಿದ್ದರಷ್ಟೆ ಕೆಎಫ್‌ಸೀಗೆ ಹೋಗುವುದು ಎಂದು. ಈಗ ನಾನು ಹೇಳುವ ನೀತಿ ಕೇಳಿ…’ 

’ಬಾಬಾ, ನೋ ಚೀಟಿಂಗ್. ನೀನು ತುಂಬಾ ಚಾಲೂ ಅಂತ ನಂಗೊತ್ತಿಲ್ವಾ?’ ಎಂದ ಸ್ವಾತಿ ಒಳಗೆ ಹೋಗಿ ನಾನು ಬರೆದಿಟ್ಟ ಚೀಟಿಯನ್ನು ತಾಯಿಯ ಕೈಗಿಡುತ್ತಾಳೆ.

ಲಲ್ಲಿ ಕಷ್ಟಪಟ್ಟು ಆ ಚೀಟಿಯಲ್ಲಿ ಬರೆದುದನ್ನು ಓದಿ ಹೇಳುತ್ತಾಳೆ:

ರಸ್ತೆ ದಾಟುವಾಗ ಆಕಡೆ ಈಕಡೆ ನೋಡಿ ಜಾಗರೂಕತೆಯಿಂದ ದಾಟಬೇಕು. ಸಂಚಾರ ನಿಯಮಗಳನ್ನು ಪಾಲಿಸಬೇಕು.

-ಉಪೇಂದ್ರ ಪ್ರಭು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

25 Comments
Oldest
Newest Most Voted
Inline Feedbacks
View all comments
Hipparagi Siddaram
Hipparagi Siddaram
10 years ago

ಕಥೆಯೊಳಗೊಂದು ಕಥೆ ಹೇಳುತ್ತಲೇ ಕಥಾನೀತಿಯನ್ನು ಕಥೆಯೊಳಗಿನ ಪಾತ್ರಗಳಿಂದಲೇ ಹೇಳಿಸುತ್ತಾ ಗಂಭೀರತೆಯೊಂದಿಗೆ ತೆಳುಹಾಸ್ಯದ ಲೇಪನ ಮಾಡಿರುವುದರಿಂದ ಕಥೆಗಾರರು ಓದುಗ ಪ್ರಭುವಿನ ಮನಸ್ಸು ಗೆದ್ದಿದ್ದಾರೆ….ಉತ್ತಮ ಕಥೆ !

Upendra
Upendra
10 years ago

🙂

Venkatesh
Venkatesh
10 years ago

NIce one ! enjoyed it !!

Upendra
Upendra
10 years ago
Reply to  Venkatesh

ThanQ 🙂

niharika
niharika
10 years ago

🙂 😀 ಗಂಭೀರ ಕಥೆ, ಅನಿರೀಕ್ಷಿತ ಅಂತ್ಯ…. ಸಖತ್ ಇಷ್ಟ ಆಯ್ತು…

Upendra
Upendra
10 years ago
Reply to  niharika

Thanks 🙂

Vasuki
10 years ago

Haha…nice!!

Upendra
Upendra
10 years ago
Reply to  Vasuki

Thank you 🙂

anandgiri
10 years ago

thumba.. thumba.. chennagide.. actually i spent 10 mins thinking about moral.. but could not think of your moral

Upendra
Upendra
10 years ago
Reply to  anandgiri

Thanks.

parthasarathyn
10 years ago

ಕತೆ ತುಂಬಾ ಚೆನ್ನಾಗಿದೆ,  ಕತೆಯೊಳಗಿನ ಕತೆ ಬೆಂಜ್ ಕಾರಿನ ಕತೆಯನ್ನು ಒಮ್ಮೆ ಓದಿದ ನೆನಪು ಆದರೆ ಹೌದೊ ಇಲ್ಲವೊ ಸರಿಯಾಗಿ ಹೇಳಲಾರೆ, ಬೆಂಜ್ ಕತೆಯಂತದ್ದನ್ನು ಅಥವ ಬೇರೆಯದೊ ಕಡೆಯಲ್ಲಿ  ಟ್ವಿಸ್ಟ್ ಕೊಡುವಂತದನ್ನು  , ಬಹುಷ ನಿಮ್ಮದೆ ಕತೆಯನ್ನು ಓದಿದ್ದರು ಆಶ್ಚರ್ಯವಿಲ್ಲ , ಆದರೆ ನಿಮ್ಮ ಕತೆಯ ನಿರೂಪಣೆಯಂತು ಸೂಪರ್… 

Upendra
Upendra
10 years ago
Reply to  parthasarathyn

ನಿಮ್ಮ ಊಹೆ ನಿಜ. ಕೆಲವು ವರ್ಷಗಳ ಹಿಂದೆ ತರಂಗದಲ್ಲಿ  ನಾನೇ ಬರೆದ ಈ ಕಥೆ ಪ್ರಕಟವಾಗಿತ್ತು (ಇಸವಿ ನೆನಪಿಲ್ಲ. ಸಂಚಿಕೆ ಎಲ್ಲೋ ಇದೆ. ಹುಡುಕಬೇಕು).  ಅಲ್ಲಿ ಓದಿರಬಹುದು. ಕಥೆ ನನ್ನದೇ. ಇದನ್ನು 'ಪಂಜು'ಗೆ ಕಳುಹಿಸುವಾಗ ಇದನ್ನು ನಮೂದಿಸಿದ್ದೆ. ಪಂಜುವಿನಲ್ಲಿ ಪ್ರಕಟವಾಗುವ ಬರಹಗಳು ಹಿಂದೆ ಎಲ್ಲೂ ಪ್ರಕಟವಾಗಿರಬಾರದು ಎಂಬ ನಿಯಮ ಇದ್ದರೂ ಅಂತಿಮ ನಿರ್ಣಯ ಸಂಪಾದಕರದ್ದು 🙂

ದಿವ್ಯ ಆಂಜನಪ್ಪ

ಕತೆ ಚೆನ್ನಾಗಿದೆ ಸರ್. 🙂

Upendra
Upendra
10 years ago

ಹೌದಾ? Thanks 🙂

Raghunandan K
10 years ago

ಸರಳ ನಿರೂಪಣೆಯ ಕಥೆ, ಚೆನ್ನಾಗಿದೆ…

Upendra
Upendra
10 years ago
Reply to  Raghunandan K

Thank you Raghunandan 🙂

mamatha keelar
mamatha keelar
10 years ago

ಗಂಭೀರವಾಗಿ ಏನೇನೋ ನೀತಿಯನ್ನ ಹುಡುಕುತ್ತೇವೆ ಈ ಕತೆಯನ್ನ ಓದಿದಾಗ ..ಆಮೇಲೆ ಕೊತುಹಲದಿಂದ ಲೇಖಕರ ನೀತಿ ನೋಡಿ ನಗು ತಡೆಯೋಕೆ ಆಗಲ್ಲ..ಆದರೆ ಇದು ತುಂಬಾ ಗಂಭಿರವಾದ ನೀತಿಯಂತು ಸತ್ಯ… ತುಂಬಾ ಚನ್ನಾಗಿದೆ.

Upendra
Upendra
10 years ago
Reply to  mamatha keelar

ನಿಮ್ಮ ಅಭಿಮತಕ್ಕೆ thank you ಮಮತಾ 😉

ಕೆ.ಎಂ.ವಿಶ್ವನಾಥ

ಈ ಕಥೆ ನಾನು ರಾತ್ರಿ ೧೧ ಕ್ಕೆ ಓದಿದೆ ಎಂತಹ ಅದ್ಭುತ ಕಥೆ ಸರ್ ಇದು ಮಾನವನ ಆಸೆಯ ಮೂಲ ತನ್ನ ಎದುರಿನ ಯಾವ ಆಸೆಯು ಪರಿಗಣನೆಗೆ ಬರುವುದಿಲ್ಲ ಎನಿಸುತ್ತದೆ ಈ ಕಥೆಯ ನಿರೂಪಣೆ ಅದರ ಸಾರಂಶದ ಶೈಲಿ ಎಲ್ಲವು ತುಂಬಾ ಹಿಡಿಸಿತು
 
ಉತ್ತಮ ಲೇಖನ ಸರ್

Upendra
Upendra
10 years ago

ಧನ್ಯವಾದಗಳು ವಿಶ್ವನಾಥ್ ಅವರೇ. ಈ ಕಥೆಯಲ್ಲಿ ಬರುವ ನಿರೂಪಕ, 'ಪಾತ್ರ'ಗಳು ಎಲ್ಲ ಐದಾರು ವರ್ಷಗಳ ಹಿಂದಿನ ನಮ್ಮ ಮನೆಯ 'ಪಾತ್ರೆ'ಗಳೇ! ನನ್ನ ಹೆಂಡತಿ, ಮಕ್ಕಳು ಮತ್ತು ನಾನು 🙂

geetha kote
geetha kote
10 years ago

neeti kathe chennaagide. hinde oodidde, mattomme oodalu chennaagittu.

Upendra
Upendra
10 years ago
Reply to  geetha kote

ನೀವು ತರಂಗ ಓದುಗರಾಗಿದ್ದರೆ ಹಿಂದೆ ಓದಿರಬಹುದು. ನಾನು ಪಾರ್ಥಸಾರಥಿ (parthasarathyn) ಅವರ ಕಾಮೆಂಟ್ ಗೆ ಉತ್ತರಿಸುವಾಗ (ಇದೇ ಪುಟದಲ್ಲಿ) ಇದರ ಬಗ್ಗೆ ಬರೆದಿದ್ದೇನೆ J

ರಾಜೇಂದ್ರ ಬಿ. ಶೆಟ್ಟಿ

ಕಥೆಯ ನಿರೂಪಣೆ ಹಾಗೂ ಕೊನೆ ಇಷ್ಟವಾಯಿತು.

Upendra
Upendra
10 years ago

DhanyavaadagaLu.

gaviswamy
10 years ago

excellent short story. ಪರಿಣಾಮಕಾರಿ ಕಥೆ. hoping lot more

25
0
Would love your thoughts, please comment.x
()
x