ನಾಟಕಕಾರರಾಗಿ ಕುವೆಂಪು (ಭಾಗ-1): ಹಿಪ್ಪರಗಿ ಸಿದ್ದರಾಮ್


 
ಸಮೃದ್ಧ ಕನ್ನಡ ಸಾಹಿತ್ಯ ಪ್ರಕಾರದ ಬೆಳವಣಿಗೆಯಲ್ಲಿ ಇಪ್ಪತ್ತನೆಯ ಶತಮಾನವೆಂಬುದು ಹಲವಾರು ದೃಷ್ಟಿಕೋನಗಳಿಂದ ವಿಶಿಷ್ಟ ಮತ್ತು ಅಪರೂಪದ ನವೋದಯ ಕಾಲವಾಗಿ ಬೆಳೆದಿರುವುದು ಸಾಹಿತ್ಯಾಸಕ್ತರಿಗೆ ಗೊತ್ತಿರುವ ಸಂಗತಿಯಾಗಿದೆ. ಆಂಗ್ಲರ ಆಳಿಕೆಯ ದೆಸೆಯಿಂದಾಗಿ ಭಾಷೆಯೆಂಬ ಸಂವಹನ ಸಾಧನದ ಮೂಲಕ ಪಡೆದುಕೊಂಡ ಪರಿಜ್ಞಾನದ ವಿವಿಧ ಮಗ್ಗಲುಗಳು ದೇಶದ ಪ್ರಜ್ಞಾವಂತರ ಮನಸ್ಸನ್ನು ತಾಕಿದ್ದು ಸುಳ್ಳೇನಲ್ಲ. ಇದರ ಪರಿಣಾಮವಾಗಿ ಸಾಹಿತ್ಯಕ್ಷೇತ್ರವೂ ಪ್ರಚೋಧಿತವಾದಂತಾಯಿತು. ಸಾಹಿತ್ಯವು  ಹಲವಾರು ಮಗ್ಗಲುಗಳನ್ನು ಕಂಡುಕೊಂಡಂತೆ ರಂಗಭೂಮಿಯಲ್ಲಿಯೂ ವಿವಿಧ ಪ್ರಕಾರದ ವಿಭಿನ್ನ ಪ್ರದರ್ಶನ-ಪ್ರಯೋಗಗಳು ಚಾಲ್ತಿಗೆ ಬಂದು, ಸಾಹಿತಿಗಳು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗದೇ ರಂಗ-ಸಾಹಿತ್ಯದೆಡೆಗೂ ಗಮನಹರಿಸುವುದರೊಂದಿಗೆ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಲವಾರು ಬೆಳವಣಿಗೆಗೆ ಕಾರಣರಾದರು. ಇಂತಹ ಸಂದರ್ಭದಲ್ಲಿ ವಿಶ್ವಮಾನವ ಸಂದೇಶ ನೀಡಿದ ಯುಗದ ಕವಿಯೆಂದು ಹೆಸರಾದ “ರಾಷ್ಟ್ರಕವಿ ಕುವೆಂಪು”ರವರು (ಜನನ : 29-12-1904, ಮರಣ : 11-11-1994) ವಿಶಿಷ್ಟ ಕೊಡುಗೆಯನ್ನು ರಂಗಭೂಮಿಗೂ ನೀಡಿದವರು.
 
ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಮುಗಿಲೆತ್ತರಕ್ಕೆ ಮುಟ್ಟಿಸಿದ ಮಹಾನ್ ಚೇತನವೆಂದು ಕರೆಯಲ್ಪಡುವ ಅವರ ಸಾಹಿತ್ಯ ಕೃಷಿಯ ವಿಸ್ತಾರವನ್ನು ಭಾವಗೀತೆಗಳು, ಕಾದಂಬರಿಗಳು, ಸಣ್ಣಕಥಾನಕಗಳು, ಜೀವನ ಚರಿತ್ರೆಗಳು, ನಾಟಕ(ರಂಗ) ಕೃತಿಗಳು, ವಿಮರ್ಶಾಗ್ರಂಥಗಳು ಅಲ್ಲದೇ ಶತಮಾನಗಳ ಶ್ರೇಷ್ಟ ಮತ್ತು ಮೇರು ಕೃತಿ ‘ಶ್ರೀ ರಾಮಾಯಣ ದರ್ಶನಂ’ ಎಂಬ ಮಹಾಕಾವ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ಪ್ರತಿಭೆ ಅನಾವರಣಗೊಂಡಿದೆ. ಹೀಗೆ ಪ್ರತಿಭೆಯ ವಿವಿಧ ಮುಖಗಳನ್ನು ಕಾಣುವುದು ಯುಗದ ಕವಿ, ಜಗದ ಕವಿ, ವಿಶ್ವಮಾನವ ಸಂದೇಶ ನೀಡಿದ ಮಹಾಕವಿ ಕುವೆಂಪು ಅವರಂಥ ಕೆಲವೇ ಕೆಲವರಲ್ಲಿ ಮಾತ್ರ ಸಾಧ್ಯ.
 
ಕನ್ನಡವೆಂದರೆ ಒಂದೆಡೆ ರಾಷ್ಟ್ರಕವಿ ಕುವೆಂಪು, ಮತ್ತೊಂದೆಡೆ ವರನಟ ಡಾ.ರಾಜಕುಮಾರ ನೆನಪಾಗುತ್ತಾರೆಂದರೆ ಅದು ಅವರ ಶ್ರೇಷ್ಟತೆಗೆ ಸಾಕ್ಷಿ. ಕುವೆಂಪು ಅವರಂತ ಮಹಾನ್ ಚೇತನಗಳ ಕುರಿತು ಮಾತಾಡುವುದು ಮತ್ತು ಅವರ ಕುರಿತು ಬರೆಯುವುದೆಂದರೆ “ಮಂದಾನಿಲದ ಮಂದಹಾಸ ಮಿನುಗುತ್ತಿತ್ತು” ಅಂತ ಖುಷಿ ಅನಿಸಿದರೂ ಮಹಾ ಮೇರುಪರ್ವತದ ಕಾಲ ಕೆಳಗಿನ ಈಗ ತಾನೆ ಮೊಳಕೆಯೊಡೆಯುತ್ತಿರುವ ಚಿಕ್ಕ ಸಸಿಯಂತಿರುವ ನನ್ನಿಂದ ಏನಾದರೂ ತಪ್ಪಾದರೆ? ಎಂಬ ಆತಂಕಪೂರಿತ ಹೆದರಿಕೆ ಒಂದೆಡೆಯಾದರೆ, ಕ್ಷಮಿಸುವ ಉದಾರತೆಯನ್ನು ಕನ್ನಡಮ್ಮನ ಮಡಿಲ ಮಕ್ಕಳೆಂದಿಗೂ ಮರೆತಿರಲಾರರು ಎಂಬ ವಿಶ್ವಾಸದೊಂದಿಗೆ ಘಟಾನುಘಟಿ ಮಲೆನಾಡಿನ ಮಹಾ ಮನುಜ, ಉದಯರವಿಯ ಮುಕುಟಮಣಿಯ ದರ್ಶನಾಪೇಕ್ಷಿಯಾಗಿ ಪುಟ್ಟ ಪ್ರಯತ್ನದ ಈ ಲೇಖನ ಬರೆಯುತ್ತಿದ್ದೇನೆ ಮತ್ತು ಮಹಾಕವಿಯ (ದಿವ್ಯ)ಆತ್ಮಕ್ಕೆ ಕನ್ನಡದ ಸಾವಿ-ರದ ನಮನಗಳೊಂದಿಗೆ “ದೀಕ್ಷೆಯ ಕೊಡು ಇಂದೆ ; ಶಕ್ತಿಯ ನೀಡಿಂದೆ” ಎಂದು ಪ್ರಾರ್ಥಿಸುತ್ತಾ ಮುಂದೆ ಸಾಗುತ್ತೇನೆ.
 
ಸಹೃದಯ ಓದುಗರೇ, ಎಂದೆಂದಿಗೂ ಬತ್ತದ, ನಿರಂತರವಾಗಿ ಹರಿಯುವ ಜಲದಾರೆಯಂತಿರುವ ಕುವೆಂಪುರವರ ವೈವಿಧ್ಯಮಯ ಸಾಹಿತ್ಯವನ್ನು ವಿಶ್ವದಾದ್ಯಂತ ಚದುರಿ ಹೋಗಿರುವ ಸಾಹಿತ್ಯ ಕ್ಷೇತ್ರದ ಹಲವರು ಹಲವಾರು ದೃಷ್ಟಿಕೋನಗಳಿಂದ ತಮಗೆ ತೋಚಿದಂತೆ ವಿಮರ್ಶೆ ಮಾಡಿದ್ದಾರೆ. ಈಗಲೂ ಅಧ್ಯಯನ ನಡೆದಿದೆ. ಅವರರವ ಯೋಚನಾಶಕ್ತಿಗೆ ತಕ್ಕಂತೆ ಕುವೆಂಪುರವರ ಸಾಹಿತ್ಯ ಕಾಡಿಸುತ್ತದೆ, ಹೇಳಿಸುತ್ತದೆ, ಬರೆಯಿಸಿಕೊಳ್ಳುತ್ತದೆ. ಅಂತಹ ಸದಾವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಸುಕೃತವೇ ಸರಿ. 
 
ನಾವು ವಿದೇಶಿಯರಂತೆ ತತ್ಕಾಲೀನ, ಚಾಲ್ತಿಯಲ್ಲಿರುವ ಘಟನಾವಳಿಗಳನ್ನು ಕೆಲ ದಿನಗಳ ನಂತರ ಇತಿಹಾಸವೆಂದು ಪರಿಗಣಿಸಿ ಅದಕ್ಕೆ ಹೆಚ್ಚಿನ ಒತ್ತು ಕೊಡದೆ ದೈನಂದಿನ ವ್ಯವಹಾರದಲ್ಲಿ ಸತ್ಯದ ನಡತೆ, ಧರ್ಮ-ದೈವ-ದೇವರುಗಳ ಭಯದೊಂದಿಗೆ ಜೀವನ ಸಾಗಿಸುತ್ತಿದ್ದರೂ ಸಹ ನಿತ್ಯ-ಸತ್ಯದೆಡೆಗೆ ಹೆಚ್ಚಿನ ಗಮನ ಕೊಡುವುದು ನಮ್ಮ ನಾಡಿನ ಪರಂಪರಾಗತ ನಡೆಯಾಗಿದೆ. ಹೀಗೆ ಸಾಗಿರುವ ಸಾಮಾಜಿಕ ಜನ-ಜೀವನದ ಹಲವಾರು ಅವಸ್ಥೆಗಳು, ಮಗ್ಗಲುಗಳು, ಭಾವಗಳು, ಸ್ವಭಾವಗಳು ಅನುಕರಣೆಗೆ ಹೇಳಿಮಾಡಿಸಿದ ಸಂಗತಿಗಳು. ಸಮಾಜದಲ್ಲಿಯ ಕೆಲವರು ಅನುಕರಣ ಯೋಗ್ಯ ವ್ಯಕ್ತಿತ್ವದವರು, ದೇವಾನುದೇವತೆಗಳು, ಮಹಾರಾಜರು, ಮಾಹಾತ್ಮರು, ಜನಸಾಮಾನ್ಯರು ಇಂತಹವರ ಕುರಿತಾಗಿ ಮನಮುಟ್ಟುವಂತೆ ಸಾರ್ವಜನಿಕವಾಗಿ ಪ್ರದರ್ಶಿಸಿಸುವಂತಹ ಕಲೆಯನ್ನು ನಾಟಕಕ್ಷೇತ್ರ ಅಥವಾ ರಂಗಭೂಮಿ ಎಂದು ಕರೆಯಲಾಗುತ್ತಿದೆ.
 
ಅದಕ್ಕಾಗಿಯೇ ಹಿಂದಿನವರು ಹೇಳಿರುವುದು ಹೀಗೆ “ಕಾವ್ಯಷು ನಾಟಕಂ ರಮ್ಯಂ” ಎಂಬುದು ಗಾದೆ ಮಾತಿನಂತಿರುವ ಸೂಕ್ತಿ. ಮಹಾಕವಿ ಕಾಳಿದಾಸ “ಶಾಂತಂ ಕ್ರತುಂ ಚಾಕ್ಷುಷಂ” ಅಂದರೆ ಕಣ್ಣಿನಿಂದ ಆಸ್ವಾಧಿಸಿ (ಕುಡಿದು) ಸಂತೋಷ (ತೃಪ್ತಿ) ಹೊಂದುವ ಯಾಗವೆಂದು ಹೇಳಿರುವುದು ನಾಟಕದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಆಗಿನ ಕಾಲದ ಹಿರಿಯರು “ನಾಟ್ಯಂ ಭಿನ್ನರುಚೇ ಜನಸ್ಯ ಬಹುದಾಪ್ಯೇಕಂ ಸಮಾರಾಧನಂ” ಎಂದು ಹೇಳಿರುವುದನ್ನು ಗಮನಿಸಿದರೆ ನಾಟಕ ಅಥವಾ ರಂಗಭೂಮಿಯೆಂಬುದು ಸೃಜನಶೀಲತೆಯ ಪ್ರಕಾರಗಳಾದ ಸಾಹಿತ್ಯ, ಸಂಗೀತ, ಚಿತ್ರಕಲೆ(ಚಿತ್ತಾರ), ಶಿಲ್ಪ, ನಟನೆ, ವೇಷಭೂಷಣ ಮುಂತಾದ ಅಂಶಗಳಿಂದಾದ ಗಂಧರ್ವ ಕಲೆಯೆಂದರೆ ತಪ್ಪಾಗಲಿಕ್ಕಿಲ್ಲ. ಒಂದೊಂದು ಪ್ರಕಾರಗಳ ಆಳಕ್ಕೆ ಇಳಿದರೆ ಅನಘ್ರ್ಯ ಮುತ್ತು-ರತ್ನ-ವಜ್ರ-ವೈಡೂರ್ಯಗಳ ಅಪಾರ ಅಗಣಿತ ಸಂಪತ್ತಿನ ಖ(ಗ)ಣಿಗಳೆಂಬುದು ಸುಳ್ಳೇನಲ್ಲ. ಮೊಗೆದಷ್ಟು ಮುಗಿಯದಷ್ಟು ಸಂಪತ್ತಿನ ಭಂಡಾರವೇ ಅಲ್ಲಿ ಅಡಗಿದೆ. ಅಂತಹ ವೈಭವ-ಸಂಪತ್ತಿನ ಕ್ಷೇತ್ರ ನಾಟಕರಂಗ ಅಥವಾ ರಂಗಭೂಮಿ. 
 
ಹಾಗೇ ನೋಡಿದರೆ ಬಹುಷಃ 12ರಿಂದ 13ನೇಯ ಶತಮಾನದವರೆಗೂ ದ್ರಾವಿಢ ಭಾಷೆಗಳಲ್ಲೊಂದಾದ ಪ್ರಾಚೀನ ಕನ್ನಡ ಭಾಷೆಯಲ್ಲಿ ನಾಟಕ(ರಂಗಕೃತಿ)ಗಳ ರಚನೆ ಅಷ್ಟಾಗಿ ಕಂಡುಬರುವುದಿಲ್ಲವಾದರೂ ರಂಗಭೂಮಿ ಜೀವಂತವಿತ್ತು. ಕರ್ಣಪಾರ್ಯನ ‘ಮಾಲತಿ-ಮಾಧವ’ (1140), ಕೇಶಿರಾಜನ ಸುಭದ್ರಾಹರಣ ಮತ್ತು ಪ್ರಭೋಧಚಂದ್ರ (1260) ಎಂಬ ರಂಗಕೃತಿಗಳು ಪ್ರಪ್ರಥಮ ರಚನೆಗಳೆಂದು ತಿಳಿದು ಬಂದಿದ್ದರೂ ಈಗ ಲಭ್ಯವಿರುವ ರಂಗಕೃತಿಯೆಂದರೆ ಸಿಂಗರಾರ್ಯನ ‘ಮಿತ್ರವಿಂದಾಗೋವಿಂದ’ (1680). ಈ ರಂಗಕೃತಿಯು ಅಂದಿನ ಮೈಸೂರಿನ ಮಹಾರಾಜರ ಪ್ರೋತ್ಸಾಹದಿಂದ ಆಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ಕಾಣುವುದರೊಂದಿಗೆ ಕನ್ನಡದ ಮೊದಲ ನಾಟಕವೆಂದು ಇತಿಹಾಸ ಬರೆದುಕೊಂಡಿತು. ಈ ನಾಟಕದ ಆತ್ಮವು ಸಂಸ್ಕøತದ ಶ್ರೀಹರ್ಷನ ‘ರತ್ನಾವಳಿ’ ನಾಟಕದಿಂದ ಪಡೆದುಕೊಂಡಿದ್ದರೂ ನಾಟಕದಲ್ಲಿ ಬಳಸಿದ್ದು ಮಾತ್ರ ಹಳೆಗನ್ನಡ ಶೈಲಿಯ ಸಂಭಾಷಣೆ ಮತ್ತು ಹಾಡುಗಳು.
 
ಅರಮನೆಯ ಆಸ್ಥಾನದ ರಂಗಸಜ್ಜಿಕೆಯನ್ನು ಬಳಸಿಕೊಂಡು ಪ್ರಯೋಗಗೊಂಡ ಈ ನಾಟಕ ಹೆಚ್ಚಿನ ಪ್ರಮಾಣದಲ್ಲಿ ಹಾಸ್ಯ-ಶೃಂಗಾರ-ಷೋಡಸತನದ ನಟನಾವಳಿಗಳಿಂದ ರಂಗೇರಿಸುವುದರೊಂದಿಗೆ ಸಭಿಕರನ್ನು ಮಂತ್ರಮುಗ್ದರನ್ನಾಗಿಸಿತ್ತು. ಕಾಲಾಂತರದಲ್ಲಿ ವಿದೇಶಿ ವೃತ್ತಿರಂಗಭೂಮಿಯ ಕಂಪನಿಯೊಂದು ಅರಮನೆಯಲ್ಲಿ ಪ್ರದರ್ಶನ ನೀಡಿದ ನಂತರ, ಆ ಪ್ರದರ್ಶನ ನೋಡಿ ಪ್ರಚೋಧನೆಗೊಂಡು, ರಂಗಭೂಮಿಯ ಚಟುವಟಿಕೆಗಳು ಹುರುಪು ಬಂದಂತಾಗಲು, ಮಹಾರಾಜರ ಪ್ರೋತ್ಸಾಹಗಳಿಂದ ಆಸ್ಥಾನದ ವಿದ್ವಾಂಸರು ಉತ್ಸಾಹದಿಂದ ಸಂಸ್ಕೃತದ ಹಲವಾರು ಯಶಸ್ವಿ ಮತ್ತು ಉತ್ತಮ ರಂಗಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನಕ್ಕೆ ಕೈಹಾಕಿದರು. ಭವಭೂತಿ, ಕಾಳಿದಾಸರಂತವರ ಸಂಸ್ಕೃತ ರಂಗಕೃತಿಗಳು ಕನ್ನಡಕ್ಕೆ ಭಾಷಾಂತರಗೊಳ್ಳುತ್ತಿದ್ದರೆ, ಮತ್ತೊಂದೆಡೆ ಪಾಶ್ಚಿಮಾತ್ಯರ ಆಂಗ್ಲ ಭಾಷೆಯ ರಂಗಕೃತಿಗಳು ಭಾಷಾಂತರಗೊಳ್ಳುವುದರೊಂದಿಗೆ ಕನ್ನಡ ರಂಗಭೂಮಿಯ ಸಮೃದ್ಧಿಗೆ ಮುನ್ನುಡಿ ಬರೆಯಲಾರಂಭಿಸಿದವು.
 
ಹೀಗೆ ಆಂಗ್ಲರ ಆಳ್ವಿಕೆಯೊಂದಿಗೆ ಅವರ ನಾಡಿನ ಸಾಹಿತ್ಯ ಪ್ರಕಾರವು ಅನುವಾದಗೊಂಡು ಭಾಷಾ ಬೆಳವಣಿಗೆಯೊಂದಿಗೆ ಪಾಶ್ಚಿಮಾತ್ಯ ದೇಶಗಳ ಸಾಹಿತ್ಯವನ್ನು ಸ್ಥಳೀಯ ಸಾಹಿತ್ಯಾಸಕ್ತರು ಅರಿಯುವಂತಾಯಿತು. ಸಾಹಿತ್ಯದ ಹಲವಾರು ಪ್ರಕಾರಗಳಾದ ಕಥೆ, ಕಾದಂಬರಿ, ಭಾವಗೀತೆ, ಪ್ರಬಂಧಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಣೆಗೊಂಡವು. ಈ ಮೊದಲಿದ್ದ ಸಾಂಪ್ರದಾಯಿಕ ಸಾಹಿತ್ಯ ಪ್ರಕಾರಗಳಲ್ಲಿದ್ದ ಶೈಲಿ, ಸ್ವರೂಪ, ಪ್ರಭಾವಳಿಗಳು ವಿಸ್ತಾರತೆಯನ್ನು ಪಡೆದುಕೊಂಡು ಪ್ರಾಂತೀಯ ಭಾಷೆಗಳು ಹೆಚ್ಚು ಬೆಳವಣಿಗೆಯನ್ನು ಕಾಣಲು ಅನುಕೂಲಕರ ವಾತಾವರಣ ಸೃಷ್ಟಿಯಾಯಿತು. ಇಂತಹ ವಾತಾವರಣವನ್ನು ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ‘ನವೋದಯ ಕಾಲ’ವೆಂದು ನಾಮಕರಣಗೊಳಿಸಿಕೊಂಡರು. ಅದರ ಪ್ರಭಾವಳಿ ಈಗಲೂ ಇಲ್ಲೇಲ್ಲೊ ಸುಳಿದಾಡುತ್ತಿರುವಂತೆ ಆಗಾಗ ಭಾಸವಾಗುತ್ತಿರುವುದು ಸಹಜವಾಗಿದೆ.  
 
ಇಂತಹ ‘ನವೋದಯ ಕಾಲ’ದಲ್ಲಿ ಷೇಕ್ಸಪೀಯರ್‍ನ ಇಂಗ್ಲಿಷಿನ ‘ಒಥೆಲ್ಲೊ’ (1603) ರಂಗಕೃತಿಯನ್ನು ಕನ್ನಡದಲ್ಲಿ ‘ಶೂರಸೇನ ಚರಿತೆ’ ಎಂಬ ಹೆಸರಿನಿಂದ ಮುಮ್ಮಡಿ ಕೃಷ್ಣರಾಜಾ ಒಡೆಯರ ಮತ್ತು ಚಾಮರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿದ್ದ ಬಸವಪ್ಪ ಶಾಸ್ತ್ರಿಗಳು (1882) ಅನುವಾದಗೊಳಿಸುವುದರೊಂದಿಗೆ ‘ಕನ್ನಡ ನಾಟಕ ಪಿತಾಮಹ’ರೆಂದು ಪ್ರಖ್ಯಾತರಾದರು. ಇವರು ಮುಂದೆ ಇಂಗ್ಲಿಷಿನಿಂದ ಸಂಸ್ಕೃತಕ್ಕೆ, ಸಂಸ್ಕೃತದಿಂದ ಕನ್ನಡಕ್ಕೆ, ಇಂಗ್ಲಿಷಿನಿಂದ ಕನ್ನಡಕ್ಕೆ ಹೀಗೆ ಹಲವಾರು ರೀತಿಯಲ್ಲಿ ರಂಗಭೂಮಿಯಲ್ಲಿ ಸಾಹಿತ್ಯಕೃಷಿ ಮಾಡಿದರು. ಕಾಳಿದಾಸನ ಅಭಿಜ್ಞಾನ ಶಾಕುಂತಲ, ವಿಕ್ರಮೋರ್ವಶೀಯ, ಮಾಳವಿಕಾಗ್ನಿಮಿತ್ರ, ಉತ್ತರರಾಮ ಚರಿತೆ, ಮಾಲತಿ-ಮಾಧವ ಮತ್ತು ರತ್ನಾವಳಿ ಹೀಗೆ ಹಲವಾರು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಶ್ರೀಮಂತಗೊಳಿಸಿದರು. ಷೇಕ್ಸಪೀಯರ್ ವಿರಚಿತ ಸ್ಕಾಟ್ಲಂಡ್ ದೇಶದ ದೊರೆಯ ದುರಂತ ಕಥಾನಕವನ್ನೊಳಗೊಂಡ ಇಂಗ್ಲಿಷಿನ ‘ಮ್ಯಾಕ್‍ಬೆತ್’ (1606) ನಾಟಕವನ್ನು ಕನ್ನಡದಲ್ಲಿ ‘ಪ್ರತಾಪರುದ್ರದೇವ’ (1890) ಎಂದು, ಷೇಕ್ಸಪೀಯರ್‍ನ ಇನ್ನೊಂದು ರಂಗಕೃತಿ ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ (1590) ನಾಟಕವನ್ನು ಕನ್ನಡದಲ್ಲಿ ‘ಪ್ರಮೀಳಾರ್ಜುನೀಯ’ ಎಂದು ಅನುವಾದಗೊಳಿಸಿದವರು ಎಮ್.ಎಲ್.ಶ್ರೀಕಂಠೇಶ ಗೌಡರು. ಇಷ್ಟೆಲ್ಲಾ ಅನುವಾದಗಳಿಂದ ಸ್ಪೂರ್ತಿ ಪಡೆದುಕೊಂಡ ಚುರುಮುರಿ ಶೇಷಗಿರಿರಾಯರು ‘ಶಕುಂತಲಾ’ ಮತ್ತು ‘ರಾಘವೇಂದ್ರರ ನಾಟಕ’ (1889) ಎಂಬ ಕೃತಿಗಳನ್ನು ರಚಿಸಿದರೂ ಅವುಗಳ ಮೇಲೆ ‘ಒಥೆಲ್ಲೊ’ ನಾಟಕದ ಪ್ರಭಾವ ಇರುವುದನ್ನು ಮರೆಯುವಂತಿಲ್ಲ. ಎಂ.ಎಸ್.ಪುಟ್ಟಣ್ಣಯ್ಯನವರು ‘ಕಿಂಗ ಲೀಯರ್’ ನಾಟಕವನ್ನು ಅನುವಾದಿಸಿದರೆ, ‘ರಾಮವರ್ಮ ಮತ್ತು ಲೀಲಾವತಿ’ ಎಂಬ ಶೀರ್ಷಿಕೆಯೊಂದಿಗೆ ‘ರೋಮಿಯೋ ಮತ್ತು ಜ್ಯೂಲಿಯಟ್’ ಕನ್ನಡಕ್ಕೆ ಅನುವಾದಗೊಂಡ ಕೃತಿಗಳಾದವು. ಮುಂದೆ ಪ್ರಹಸನ ಪಿತಾಮಹರೆಂದು ಖ್ಯಾತರಾದ ಟಿಪಿಕಲ್ ಕೈಲಾಸಂ, ಬಿ.ಎಂ.ಶ್ರೀಕಂಠಯ್ಯನವರಂತಹ ಸ್ವಾತಂತ್ರ ಚಳುವಳಿ ಮತ್ತು ಸ್ವಾತಂತ್ರೋತ್ತರ ಕಾಲದ ವಿದ್ವಾಂಸರಿಂದ ರಂಗಭೂಮಿಯಲ್ಲಿ ಕ್ರಾಂತಿಕಾರಕ ಬೆಳವಣಿಗಳು ಘಟಿಸಿದವು.
 
ಸೃಜನಶೀಲತೆಯ ಹಲವಾರು ಪ್ರಾಕಾರಗಳು ಬೆಳೆಯುತ್ತಾ ವಿವಿಧ ಮಗ್ಗಲುಗಳನ್ನು ವಿಸ್ತರಿಸಿಕೊಳ್ಳುವುದು ಅದರ ಚಲನಶೀಲ ಸ್ವಭಾವಕ್ಕೆ ಉತ್ತಮ ನಿದರ್ಶನ. ಅದರಂತೆ ರಂಗಭೂಮಿಯೂ ಆರಂಭದಲ್ಲಿ ಸಾಂಪ್ರದಾಯಿಕ ಶೈಲಿಯನ್ನು ನೆಚ್ಚಿಕೊಂಡು ಪ್ರಯೋಗಗಳನ್ನು ನೀಡಲು ಆರಂಭಿಸಿದ್ದರೂ ನಂತರದ ದಿನಗಳಲ್ಲಿ ಅಲ್ಲಿಯೂ ಹೊಸಗಾಳಿ ಬೀಸಲಾರಂಭಿಸಿದಾಗ ಪ್ರೇಕ್ಷಕ ಪ್ರಭುವಿಗೆ ಇಷ್ಟವಾಗುವ ರೀತಿಯಲ್ಲಿ, ಆತನ ಅಭಿರುಚಿಗೆ ತಕ್ಕಂತೆ ಪ್ರಯೋಗಗಳು ಆರಂಭವಾದವು. ಜೀವನವನ್ನು ರಂಗಭೂಮಿಗಾಗಿ ಸಮರ್ಪಿಸಿಕೊಂಡವರು ಅಥವಾ ತೊಡಗಿಸಿಕೊಂಡವರು, ಅದೇ ಮನೋಭಾವದ ಇನ್ನಿತರರು ಸೇರಿಕೊಂಡು ಪ್ರತಿದಿನದ ಪ್ರದರ್ಶನ ನೀಡುವುದರೊಂದಿಗೆ ನಾಟಕ ಕಂಪನಿಗಳನ್ನು ಕಟ್ಟಿಕೊಂಡು ತನ್ಮೂಲಕ ರಂಗಭೂಮಿ ಸೇವೆಯಲ್ಲಿಯೇ ಸಾರ್ಥಕತೆ ಕಂಡರು. ಇಂತಹ ಕಂಪನಿ ನಾಟಕ ತಂಡಗಳನ್ನು ‘ವೃತ್ತಿರಂಗಭೂಮಿ’ ಪ್ರಾಕಾರಗಳೆಂದು ಗುರುತಿಸಲಾಯಿತು. ಗ್ರಾಮಗಳಲ್ಲಿಯ ಯುವಕರು ಗ್ರಾಮದೇವತೆಯ ಉತ್ಸವ ಅಥವಾ ಬೇಸಿಗೆಯ ಕೃಷಿಕೆಲಸಗಳ ಬಿಡುವಿನ ಸಮಯದಲ್ಲಿ ನಾಟಕ ಮಾಸ್ತರರನ್ನು ಕರೆಸಿ ಅವರಿಂದ ನಾಟಕ ಕಲಿತು ತಮ್ಮ ಊರಿನಲ್ಲಿ ಪ್ರದರ್ಶನ ನೀಡುವ ತಂಡಗಳನ್ನು ‘ಗ್ರಾಮೀಣರಂಗಭೂಮಿಯ ಹವ್ಯಾಸಿ ತಂಡ’ಗಳೆಂದು ಹೇಳಲಾಯಿತು.
 
ಅದರಂತೆ ನಗರಗಳಲ್ಲಿಯ ಸಮಾನ ಮನಸ್ಕ ವಿದ್ಯಾವಂತರು ಸೇರಿ, ತಂಡವೊಂದನ್ನು ಕಟ್ಟಿಕೊಂಡು ಬಿಡುವಿನ ವೇಳೆಯಲ್ಲಿ ನಾಟಕ ಕಲಿತು ಪ್ರದರ್ಶನ ಮಾಡುವಿಕೆಯನ್ನು ‘ಹವ್ಯಾಸಿ ನಾಟಕ ತಂಡ’ಗಳೆಂದು ಕರೆಯಲಾಯಿತು. ಈ ಹವ್ಯಾಸಿ ನಾಟಕ ತಂಡಗಳು ಆಧುನಿಕ ಶೈಲಿಯಿಂದ ಮತ್ತು ಹೆಚ್ಚಿನ ತಾಂತ್ರಿಕತೆಗಳನ್ನು ಬಳಸಿಕೊಂಡು ಪ್ರದರ್ಶನವಾಗುವುದರೊಂದಿಗೆ ರಂಗವೈಭವ ಮತ್ವೈತು ಚಾರಿಕ ಮನೋಭಾವವನ್ನು ಜನರಲ್ಲಿ ಮೂಡಿಸಿದವು. ಆಡಳಿತಶಾಹಿಯ ಜನವಿರೋಧಿ ಧೊರಣೆಯನ್ನು ವಿರೋಧಿಸಿ ಜನಜಾಗೃತಿ ಮೂಡಿಸುವ ನಾಟಕ ಪ್ರಕಾರವಾಗಿ ‘ಬೀದಿ ನಾಟಕ’ಗಳು ಹೆಸರುಮಾಡಿದವು. ಹೀಗೆ ವೃತ್ತಿರಂಗಭೂಮಿ, ಹವ್ಯಾಸಿರಂಗಭೂಮಿ, ಗ್ರಾಮೀಣರಂಗಭೂಮಿ, ಬೀದಿನಾಟಕ ಹೀಗೆ ಹಲವಾರು ಪ್ರಕಾರಗಳಾಗಿ ಬೆಳೆದ ರಂಗಭೂಮಿ ತನ್ನ ಪ್ರಯೋಗಗಳಿಗಾಗಿ ಕವಿಗಳು, ಸಾಹಿತಿಗಳು, ಬುದ್ಧಿಜೀವಿಗಳ ಕೃತಿಗಳನ್ನು ಆರಿಸಿಕೊಂಡು ಏಕಾಂಕ, ಪ್ರಹಸನ, ಗಂಭೀರ, ಪ್ರಚಲಿತ ಹೀಗೆ ವಿವಿಧ ಪ್ರಕಾರಗಳನ್ನಾಗಿಸಿಕೊಂಡು ಸಾರ್ವಜನಿಕ ಸಮಾರಂಭ, ಶಾಲಾ-ಕಾಲೇಜುಗಳ ದಿನಾಚರಣೆ, ಸರಕಾರಿ ಪ್ರಾಯೋಜಿತ ಉತ್ಸವಗಳು ಮುಂತಾದೆಡೆಗಳಲ್ಲಿ ಪ್ರದರ್ಶನಗೊಳ್ಳತೊಡಗಿದವು. ಇದರಿಂದ ಹುರುಪುಗೊಂಡ ಹಲವಾರು ಸಾಹಿತ್ಯಿಕ ಉತ್ಸಾಹಿಗಳು ಕೃತಿ ಮತ್ತು ವಸ್ತುಗಳ ಆಯ್ಕೆಯಲ್ಲಿ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಇತ್ಯಾದಿ ಪ್ರಕಾರಗಳಲ್ಲಿ ಆಧುನಿಕ ಮನೋಭಾವದೊಂದಿಗೆ ಕನ್ನಡ ಸಾಹಿತ್ಯದಲ್ಲಿ ರಂಗಕೃತಿಗಳನ್ನು ರಚಿಸುವುದರೊಂದಿಗೆ ರಂಗಭೂಮಿ ಮತ್ತು ರಂಗಸಾಹಿತ್ಯದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಿದರು. ಇಂತಹ ಸಂದರ್ಭದಲ್ಲಿ ಕುವೆಂಪುರವರು ಸಹ ತಮ್ಮ ವಿಶಿಷ್ಟ ಮತ್ತು ಪ್ರಾತಿನಿಧಿಕ ರಂಗಕೃತಿಗಳ ಮೂಲಕ ಹಲವಾರು ಕೃತಿಗಳನ್ನು ರಚಿಸಿದರು.
 
ಕುವೆಂಪುರವರ ನಾಟಕ (ರಂಗಕೃತಿ)ಗಳು : 
ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಮಕ್ಕಳ ರಂಗಭೂಮಿಗಾಗಿ ಕುವೆಂಪುರವರು ಸುಮಾರು ಹದಿಮೂರು ನಾಟಕ(ರಂಗಕೃತಿ)ಗಳನ್ನು ರಚಿಸಿದ್ದಾರೆ. ಪ್ರತಿಯೊಂದರಲ್ಲಿಯ ವಸ್ತುವೈವಿಧ್ಯತೆಗಳನ್ನು ಆಯ್ಕೆ ಮಾಡಿಕೊಂಡಿರುವುದು ನಾವು ಗಮನಿಸಿದರೆ ಕನ್ನಡ ರಂಗಸಾಹಿತ್ಯದ ಬೆಳವಣಿಗೆಯ ಆಯಾ ಕಾಲಘಟ್ಟವನ್ನು ಪರಿಚಯಿಸಿಕೊಂಡ ಅನುಭವವಾಗುತ್ತದೆ.
 
(ಮುಂದುವರೆಯುತ್ತದೆ…)
 
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಉತ್ತಮ ಸಂಪಾದಕೀಯ ಲೇಖನ. ನಾಟಕದ ಬೆಳವಣಿಗೆಯನ್ನು ಸಂಕ್ಷಿಪ್ತವಾಗಿ ಸುಂದರವಾಗಿ ಹೆಣೆದಿದ್ದೀರಿ. ನಾಟಕದ ಮೂಲ/ತವರು ಗ್ರೀಕ್. ನಾಟಕದ ಉಗಮಕ್ಕೆ ಕಾರಣಗಳನ್ನು ಭಾಷಾತಜ್ಙರು ನೀಡಿರುವಂತೆ ಮುಖ್ಯಾಂಶಗಳನ್ನು ಸೇರಿಸಿದ್ದರೆ ನಾಟಕದ ಪ್ರಾರಂಭ ಪೀಠಿಕೆ ಸಂಪೂರ್ಣವಾಗುತಿತ್ತೆನೋ ಎಂದು ನನಗನಿಸುತ್ತದೆ. ಮುಂದಿನ ಭಾಗಗಳಿಗೆ ನಾನು ಕಾತುರಳಾಗಿದ್ದೇನೆ. ಧನ್ಯವಾದಗಳು ಸರ್  🙂

Hipparagi Siddaram
Hipparagi Siddaram
10 years ago

ಮೇಡಮ್, ನಿಮ್ಮ ಸಲಹೆಗೆ ಧನ್ಯವಾದಗಳು……ಶುಭದಿನ 

2
0
Would love your thoughts, please comment.x
()
x