ಹುಲಿ ಬಂತು ಹುಲಿ: ನಂದಾದೀಪ, ಮಂಡ್ಯ

ಹುಲಿ ಬಂತು ಹುಲಿ ಎಂದು ಅಜ್ಜಿ ಕತೆ ಶುರು ಮಾಡಿ ಹುಲಿ ಜಿಂಕೆನಾ ತಿಂದು ಬಿಡ್ತು ಎಂದು ಕತೆ ಮುಗಿಸುವಾಗ ನಮ್ಮೆಲ್ಲರ ಮನಸಲ್ಲಿ ಹುಲಿ ಎಂದರೆ ಏನೋ ಒಂದು ಅವ್ಯಕ್ತ ಭಯ ಆವರಿಸುತ್ತದೆ..! ಭಯದ ಜೊತೆಗೆ ಹುಲಿಯನ್ನು ನೋಡಬೇಕೆಂಬ ಕುತೂಹಲವು ಹೆಚ್ಚಾಗುತ್ತದೆ..! ಮೃಗಾಲಯದಲ್ಲಿ ದೂರದಿಂದಲೇ ಹುಲಿಯನ್ನು ಬೆರಗುಗಣ್ಣಿಂದಲೇ ತುಂಬಿಕೊಂಡಿದ್ದು ಉಂಟು..!

ಹುಲಿಯ ಮೇಲಿನ ಕುತೂಹಲ ಹೆಚ್ಚಿದಂತೆ ಅದರ ಬಗ್ಗೆ ತಿಳಿಯಲು ಒಂದಷ್ಟು ವಿಷಯಗಳನ್ನು ತಿಳಿಯಲು ಹೊರಟಾಗ ಅದು ಭಯ ಹುಟ್ಟಿಸುವ ಜೀವಿ ಅನ್ನೋದಕ್ಕಿಂತ ಸ್ವಾಭಿಮಾನಿ ಜೀವಿ ಎನ್ನುವುದು ತಿಳಿದು ಬರುತ್ತದೆ.. ಅದರ ಜೀವನ ವೈಶಿಷ್ಟ್ಯವೇ ಅಂತದ್ದು..

ಹುಲಿ.. ಇದರ ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್.. ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಕುಟುಂಬಕ್ಕೆ ಸೇರಿದ ಒಂದು ಜೀವಿ. ಪ್ಯಾಂಥೆರಾ ವಂಶಕ್ಕೆ ಸೇರಿದ ೪ ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ.

ಮಾಂಸ ಭೇಟಿಯಾಡುವ ಪ್ರಾಣಿಗಳ ಗುಂಪಿಗೆ ಸೇರಿದ ಹುಲಿಯು ೪ ಮೀ. ವರೆಗೆ ಅಂದರೆ ೧೩ ಅಡಿಉದ್ದವನ್ನು ಹಾಗೂ ೩೦೦ ಕಿ.ಗ್ರಾಂ ವರೆಗೆ ತೂಕವನ್ನು ಹೊಂದಬಹುದು. ದೊಡ್ಡ ದೇಹ ಮತ್ತು ಅಪಾರ ಬಲ ಹೊಂದಿರುವ ಹುಲಿಯ ಕಣ್ಸೆಳೆಯುವ ಲಕ್ಷಣವೆಂದರೆ ಬಿಳೀ ಅಥವಾ ಹಳದಿ ಯಾ ಕೇಸರಿ ಬಣ್ಣದ ಮೈ ಮೇಲೆ ನೀಳವಾಗಿ ಮೇಲಿನಿಂದ ಕೆಳಗೆ ಇರುವ ಗಾಢ ಬಣ್ಣದ ಪಟ್ಟೆಗಳನ್ನು ಹೊಂದಿದ್ದು ಸಾಮಾನ್ಯವಾಗಿ ಹುಲಿಯ ದೇಹದ ಅಡಿಯ ಭಾಗ ತೆಳು ಬಣ್ಣದ್ದಾಗಿರುತ್ತದೆ. ಹುಲಿಗಳ ಜಾತಿಗಳ ಪೈಕಿ ಸೈಬೀರಿಯಾದ ಹುಲಿ ಅತ್ಯಂತ ದೊಡ್ಡ ಕಾಯವನ್ನು ಹೊಂದಿರುತ್ತದೆ..

ಪ್ರಕೃತಿಯೊಂದಿಗೆ ಸುಲಭವಾಗಿ ಹೊಂದಾಣಿಕೆ ಮಾಡಿಕೊಂಡು ಜೀವಿಸುವ ಹುಲಿಗಳು ತುಕ್ಕಿನ ಬಣ್ಣದ ಇಲ್ಲವೆ ಕಂದು ಬಣ್ಣದ ಪಟ್ಟೆಗಳನ್ನು ಹೊಂದಿದ್ದು ಮುಖದ ಪರಿಧಿಯಲ್ಲಿ ಬಿಳಿ ಬಣ್ಣವನ್ನು ಪಡೆದಿರುತ್ತವೆ. ಪಟ್ಟೆಗಳ ಆಕಾರ ಹಾಗೂ ಸಾಂದ್ರತೆಯು ಜಾತಿಯಿಂದ ಜಾತಿಗೆ ಬದಲಾಗುತ್ತವೆ. ಹೆಚ್ಚಿನ ಹುಲಿಗಳು ನೂರಕ್ಕೂ ಹೆಚ್ಚು ಪಟ್ಟೆಗಳನ್ನು ಹೊಂದಿರುತ್ತವೆ. ಪಟ್ಟೆಗಳ ವಿನ್ಯಾಸವು ಪ್ರತಿ ಹುಲಿಗೂ ಬದಲಾಗುತ್ತದೆ. ಬೇಟೆಗಾಗಿ ಹೊಂಚು ಹಾಕುತ್ತಿರುವಾಗ ಹುಲಿಯು ಸುತ್ತಲಿನ ಪರಿಸರದೊಂದಿಗೆ ಸೇರಿಹೋಗಲು ಈ ಪಟ್ಟೆಗಳು ಅನುವಾಗುವುವೆಂದು ಹೇಳಲಾಗಿದೆ..
ಹುಲಿಯ ಭುಜಗಳು ಮತ್ತು ಕಾಲುಗಳು ಬಲವಾಗಿ ರೂಪುಗೊಂಡಿದ್ದು ಇವುಗಳ ಸಹಾಯದಿಂದ ಹುಲಿಯು ತನಗಿಂತ ದೊಡ್ಡ ಗಾತ್ರದ ಬೇಟೆಯ ಪ್ರಾಣಿಯನ್ನು ಸುಲಭವಾಗಿ ನೆಲಕ್ಕೆ ಕೆಡವಬಲ್ಲುದು.

ಇದಷ್ಟೇ ಅಲ್ಲದೆ, ಹುಲಿ ಬಹಳ ಅಪರೂಪದ ವಿಶೇಷ ಸ್ವಾರಸ್ಯ ಒಳಗೊಂಡಿರುವ ಜೀವಿ.
ಹುಲಿಗಳಿಗೆ ಬೆದೆಗೆ ಬರುವ ಋತುಗಳಿಲ್ಲ. ಸಂತಾನೋತ್ಪತ್ತಿ ವರ್ಷದ ಯಾವ ಸಮಯದಲ್ಲಾದರೂ ನಡೆಯಬಹುದಾದರೂ ಹುಲಿಗಳ ಹೆಣ್ಣು ಗಂಡುಗಳ ಸಂಗಮ ನವೆಂಬರ್ ನಿಂದ ಎಪ್ರಿಲ್ ವರೆಗೆ ಹೆಚ್ಚು ಸಾಮಾನ್ಯ. ಹುಲಿಯ ಗರ್ಭಧಾರಣೆಯ ಅವಧಿ ೧೬ ವಾರಗಳು. ಒಂದು ಬಾರಿಗೆ ಮೂರರಿಂದ ೪ ಮರಿಗಳು ಜನಿಸುತ್ತವೆ. ನವಜಾತ ಮರಿಯು ೧ ಕಿ.ಗ್ರಾಂ. ತೂಕ ಹೊಂದಿದ್ದು ಕುರುಡಾಗಿದ್ದು ಸಂಪೂರ್ಣ ನಿಸ್ಸಹಾಯಕ ಸ್ಥಿತಿಯಲ್ಲಿರುವುದು. ಮರಿಗಳ ಪಾಲನೆ ಮತ್ತು ಪೋಷಣೆಯ ಪೂರ್ಣ ಜವಾಬ್ದಾರಿ ತಾಯಿ ಹುಲಿಯದು ಮಾತ್ರ. ಹೀಗೆ ಜನ್ಮ ನೀಡಿದ ಮರಿ ಹುಲಿಯನ್ನು ಸುಮಾರು ಒಂದೂವರೆ ವರ್ಷ ಅಥವಾ ಎರಡು ವರ್ಷ ತನ್ನ ಬಳಿಯಲ್ಲಿ ಇಟ್ಟುಕೊಂಡಿರುತ್ತದೆ. ಈ ಅವಧಿಯಲ್ಲಿ ಲಾಲನೆ- ಪಾಲನೆ ಜತೆಗೆ ಭೇಟಿ ಆಡುವುದು, ಸರಹದ್ದು ಗುರುತಿಸುವುದನ್ನು ಹೇಳಿ ಕೊಡುತ್ತದೆ. ಬಳಿಕ ಅದು ತನ್ನ ಸರಹದ್ದು ಗುರುತಿಸಿಕೊಂಡು ಹೊರಹೋಗಲೇಬೇಕು. ಅದು ವಯಸ್ಸಿಗೆ ಬಂದ ತಕ್ಷಣ ತಾಯಿಹುಲಿ ತನ್ನ ಸರಹದ್ದಿನಿಂದಲೇ ಹೊರದಬ್ಬುತ್ತದೆ! ಒಮ್ಮೆ ತಾಯಿ ತೊರೆದ ಗಂಡು ಮರಿಹುಲಿ ಮತ್ತೆ ಪೋಷಕರನ್ನು ಭೇಟಿ ಮಾಡುವುದು ಅಪರೂಪ. ಹೆಣ್ಣು ಮರಿಹುಲಿಯಾದರೆ ತಾಯಿ ಹುಲಿ ಸರಹದ್ದು ದೊಡ್ಡದಿದ್ದರೆ ಸ್ವಲ್ಪ ಜಾಗ ಮಾಡಿಕೊಡುತ್ತದೆ. ಇಲ್ಲದಿದ್ದರೆ ಅದು ಕೂಡ ತನ್ನದೇ ಸರಹದ್ದು ಹುಡುಕಿಕೊಳ್ಳುವುದು ಅನಿವಾರ್ಯ ವಾಗಿರುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಹುಲಿ ಹೆಣ್ಣು ಹುಲಿಯೊಂದಿಗೆ ಕಾಲಕಳೆಯುತ್ತದೆ. ಆ ನಂತರ ಮರಿಗಳ ಜತೆ ಒಂದಷ್ಟು ಸಮಯ ಕಳೆಯುವುದು ಬಿಟ್ಟರೆ ಹುಲಿ ಸದಾ ಏಕಾಂಗಿಯಾಗಿ ಬದುಕುವ ಪ್ರಾಣಿ..!

ಸಾಮಾನ್ಯವಾಗಿ ಹೆಣ್ಣು ಹುಲಿಯ ಪ್ರಾಂತ್ಯ ೨೦ ಚ. ಕಿ.ಮೀ. ಇದ್ದರೆ ಒಂದು ಗಂಡು ಹುಲಿಯ ಪ್ರಾಂತ್ಯ ೬೦ ರಿಂದ ೧೦೦ ಚ.ಕಿ.ಮೀ. ವಿಸ್ತಾರವಾಗಿರುವುದು. ಒಂದು ಗಂಡು ಹುಲಿಯ ಪ್ರಾಂತ್ಯವು ಹಲವು ಹೆಣ್ಣು ಹುಲಿಗಳ ಸರಹದ್ದನ್ನು ಸಹ ಒಳಗೊಂಡಿರುತ್ತದೆ.

ಇನ್ನು ಹುಲಿ ಮಾಂಸಾಹಾರ ಪ್ರಾಣಿಯಾಗಿದ್ದು ಸಾಮಾನ್ಯವಾಗಿ ದೊಡ್ಡ ಮತ್ತು ಮಧ್ಯಮ ಗಾತ್ರದ ಪ್ರಾಣಿಗಳನ್ನು ಬೇಟೆಯಾಡಿ ಆಹಾರ ಪಡೆಯುತ್ತವೆ. ಭಾರತದಲ್ಲಿ ಹುಲಿಗಳಿಗೆ ಸಾಂಬಾರ, ಜಿಂಕೆ, ಕಾಡುಕೋಣ, ಚೀತಾಲ್, ಕಾಡುಹಂದಿ ಮತ್ತು ನೀಲಗಾಯ್ ಮುಖ್ಯ ಆಹಾರ. ಅಪರೂಪವಾಗಿ ಹುಲಿಗಳು ಚಿರತೆ , ಕರಡಿ , ಹೆಬ್ಬಾವು, ಮೊಸಳೆಗಳನ್ನು ಸಹ ಬೇಟೆಯಾಡುವುದಿದೆ..!

ತನ್ನ ಭಾರೀ ದೇಹತೂಕದ ಹೊರತಾಗಿಯೂ ಹುಲಿಯು ಗಂಟೆಗೆ ೫೦ ರಿಂದ ೬೫ ಕಿ.ಮೀ. ವರೆಗಿನ ಓಟದ ವೇಗವನ್ನು ತಲುಪಬಲ್ಲುದು.

ದೊಡ್ಡ ಗಾತ್ರದ ಪ್ರಾಣಿಯನ್ನು ಬೇಟೆಯಾಡುವಾಗ ಹುಲಿಯು ತನ್ನ ಮುಂಗಾಲುಗಳಿಂದ ಬೇಟೆಯನ್ನು ಹಿಡಿದು ಅದರ ಕೊರಳನ್ನು ಕಚ್ಚಿ ಹಿಡಿದು, ಭೇಟೆಯು ಉಸಿರುಗಟ್ಟಿ ಪ್ರಾಣ ಹೋಗುವವರೆಗೂ ಹುಲಿಯು ಅದರ ಕೊರಳನ್ನು ಕಚ್ಚಿಕೊಂಡೇ ಇರುತ್ತದೆ. ಈ ವಿಧಾನದಿಂದಾಗಿ ಹುಲಿಯು ತನಗಿಂತ ಗಣನೀಯವಾಗಿ ದೊಡ್ಡವಾದ ಪ್ರಾಣಿಗಳನ್ನು ಸಹ ಸಾಯಿಸಬಲ್ಲುದು. ಸಣ್ಣ ಪ್ರಾಣಿಗಳನ್ನು ಬೇಟೆಯಾಡುವಾಗ ಹುಲಿಯು ಭೇಟೆಯು ಬೆನ್ನುಹುರಿ, ಶ್ವಾಸಾನಾಳ ಮತ್ತು ಮುಖ್ಯ ರಕ್ತನಾಳಗಳನ್ನು ಛೇದಿಸುವ ಮೂಲಕ ಕೊಲ್ಲುತ್ತದೆ..

ಹುಲಿಗಳ ವಾಸದ ನೆಲೆಯ ಮೂರು ಮುಖ್ಯ ಲಕ್ಷಣಗಳನ್ನು ಹೊಂದಿರುವುದು. ಇವೆಂದರೆ ಗಿಡಮರಗಳಿಂದ ಒದಗುವ ನೈಸರ್ಗಿಕ ಮರೆ, ನೀರಿನಾಶ್ರಯ ಮತ್ತು ಧಾರಾಳವಾಗಿ ಒದಗುವ ಆಹಾರದ ಪ್ರಾಣಿಗಳು. ಬಂಗಾಳದ ಹುಲಿಗಳು ಎಲ್ಲ ಬಗೆಯ ಅರಣ್ಯಗಳಲ್ಲಿ ವಾಸಿಸುವುದು. ಹುಲಿಗಳು ದಟ್ಟ ಸಸ್ಯರಾಶಿಯನ್ನು ಬಯಸುತ್ತವೆ.. ಇದರ ಜೊತೆಗೆ ಹುಲಿಯು ಒಂದು ನುರಿತ ಈಜುಗಾರ ಒಂದು ಸಲಕ್ಕೆ ಹುಲಿಯು ೪ ಮೈಲಿಗಳಷ್ಟು ದೂರವನ್ನು ಈಜಬಲ್ಲುದು..!

ಇಂತಹ ವೈಶಿಷ್ಟ್ಯತೆಯ ಲಕ್ಷಣಗಳನ್ನು ಹೊಂದಿರುವ ಹುಲಿಯ ಕೆಲವು ತಳಿಗಳು ನಮ್ಮಿಂದ ಮರೆಯಾಗಿವೆ..
ಐತಿಹಾಸಿಕ ಕಾಲದಲ್ಲಿ ಹುಲಿಗಳು ಕಾಕಸಸ್
ಮತ್ತು ಕ್ಯಾಪ್ಸಿಯನ್ ಸಮುದ್ರದಿಂದ ಸೈಬೀರಿಯಾ ಮತ್ತು ಇಂಡೋನೇಷ್ಯವರೆಗೆ ಏಷ್ಯಾದ ಎಲ್ಲಾ ಭಾಗಗಳಲ್ಲಿ ಜೀವಿಸಿದ್ದವು. ೧೯ನೆಯ ಶತಮಾನದಲ್ಲಿ ಹುಲಿಗಳು ಪಶ್ಚಿಮ ಏಷ್ಯಾದಿಂದ ಸಂಪೂರ್ಣವಾಗಿ ಕಣ್ಮರೆಯಾದವು. ೨೦ನೆಯ ಶತಮಾನದಲ್ಲಿ ಜಾವಾ ಮತ್ತು ಬಾಲಿ ದ್ವೀಪಗಳಿಂದ ಹುಲಿಗಳು ಶಾಶ್ವತವಾಗಿ ಮರೆಯಾದವು.

ಇಂದಿನ ಯುಗದ ಹುಲಿಗಳ ೮ ಉಪತಳಿಗಳ ಪೈಕಿ ೨ ಈಗಾಗಲೇ ನಶಿಸಿಹೋಗಿದ್ದು ಉಳಿದ ೬ ತೀವ್ರ ಅಪಾಯದಲ್ಲಿರುವ ಜೀವತಳಿಗಳೆಂದು ಗುರುತಿಸಲ್ಪಟ್ಟಿವೆ.
ನೆಲೆಗಳ ನಾಶ ಮತ್ತು ಭೇಟೆಯಾಡುವಿಕೆಗಳು ಹುಲಿಗೆ ದೊಡ್ಡ ಕುತ್ತಾಗಿವೆ..

ಹುಲಿಗಳ ಈ ನಶಿಸುವಿಕೆಯನ್ನು ತಡೆಯಲು ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ 2010ರಲ್ಲಿ ರಷ್ಯಾದಲ್ಲಿ ನಡೆದ ಸೇಂಟ್ ಪೀಟರ್ಸ್ ಬರ್ಗ್ ಹುಲಿ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆರಂಭಿಸಲಾಯಿತು. ಮತ್ತು ಹುಲಿಗಳ ಸಂರಕ್ಷಣೆಯನ್ನು ಮಾಡಲು ಪ್ರತಿ ವರ್ಷದ ಜುಲೈ 29ನ್ನು ‘ವಿಶ್ವ ಹುಲಿ ದಿನ’ವನ್ನಾಗಿ ಆಚರಿಸಲಾಗುತ್ತದೆ.
ಈ ಆಚರಣೆಯ ಹಿಂದಿನ ಪ್ರಮುಖ ಉದ್ದೇಶ ಅಪಾಯದಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸುವುದು.

ಹುಲಿಯನ್ನು ಅದರ ಚರ್ಮ ಮತ್ತು ಉಗುರುಗಳಿಗೋಸ್ಕರವಾಗಿ ವ್ಯಾಪಕವಾಗಿ ಬೇಟೆಯಾಡಲಾಗುತ್ತದೆ. ಜೊತೆಗೆ ವಾಸದ ನೆಲೆಗಳ ನಾಶವು ಸಹ ಸೇರಿ ಹುಲಿಗಳ ಸಂಖ್ಯೆ ಇಂದು ಗಣನೀಯವಾಗಿ ಕುಸಿದಿದೆ. ೨೦ ನೆಯ ಶತಮಾನದ ಆದಿಯಲ್ಲಿ ಜಗತ್ತಿನಲ್ಲಿ ಸುಮಾರು ಒಂದು ಲಕ್ಷ ಹುಲಿಗಳಿದ್ದರೆ ಇಂದು ಈ ಸಂಖ್ಯೆ ವಿಶ್ವದ ಅರಣ್ಯಗಳಲ್ಲಿ 3890 ಮಾತ್ರ.. !

ಭಾರತದಲ್ಲಿ ಹುಲಿ ಸಂತತಿ ನಶಿಸುತ್ತಿರುವುದನ್ನ ಮನಗಂಡ ಅಂದಿನ ಪ್ರಧಾನಿ ಇಂದಿರಾ ಗಾಂಧಿ 1973ರಲ್ಲಿ ರಾಷ್ಟ್ರದ 9 ಹುಲಿ ವಾಸ ಮಾಡುವ ಅರಣ್ಯಗಳನ್ನು ಹುಲಿ ಯೋಜನೆ ವ್ಯಾಪ್ತಿಗೆ ತಂದರು

ಭಾರತವು ವಿಶ್ವದ ಅತಿ ದೊಡ್ಡ ಸಂಖ್ಯೆಯ ಕಾಡಿನ ಹುಲಿಗಳನ್ನು ಹೊಂದಿದೆ. ಹುಲಿಗಳನ್ನು ಕಾಪಾಡಿಕೊಳ್ಳಲು ೧೯೭೩ರಲ್ಲಿ ಪ್ರಾಜೆಕ್ಟ್ ಟೈಗರ್(ಹುಲಿ ಯೋಜನೆ) ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲಾಯಿತು.. ಈ ಯೋಜನೆಯಡಿಯಲ್ಲಿ ದೇಶದಾದ್ಯಂತ ೨೫ ಹುಲಿ ಮೀಸಲು ಕ್ಷೇತ್ರಗಳನ್ನು ರಚಿಸಲಾಗಿದ್ದು ಇವುಗಳ ವ್ಯಾಪ್ತಿಯಲ್ಲಿ ಮಾನವ ಚಟುವಟಿಕೆಯನ್ನು ಪೂರ್ಣವಾಗಿ ನಿಷೇಧಿಸಲಾಯಿತು..

ಇದರ ಫಲಸ್ವರೂಪವಾಗಿ ೨೦೦೭ರಲ್ಲಿ ನಡೆದ ಹುಲಿಗಣತಿಯು ಭಾರತದಲ್ಲಿ ಇರುವ ಹುಲಿಗಳ ಒಟ್ಟು ಸಂಖ್ಯೆಯು ೧೪೧೧ ಎಂದು ತಿಳಿಸಿದೆ.
ಹೆಚ್ಚು ಹುಲಿಗಳನ್ನು ಹೊಂದಿರುವುದು ಭಾರತ..
ಭಾರತದಲ್ಲಿ 2264 ಹುಲಿಗಳಿರುವುದಾಗಿ ತಿಳಿದು ಬಂದಿದೆ. ಅವು 90,000 ಚದರ ಕಿ.ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿವೆ.
2018ರ ಹುಲಿ ಗಣತಿ ವರದಿಯಿಂದ ಭಾರತ ದೇಶದಲ್ಲಿ 2967 ಹುಲಿಗಳು ಇರುವುದಾಗಿ, ಕರ್ನಾಟಕದಲ್ಲಿ 524 ಹುಲಿಗಳು ಇದೆ ಎಂದು ಲೆಕ್ಕಹಾಕಲಾಗಿದೆ..
ದೇಶದ ಹುಲಿಗಳ ಸಂಖ್ಯೆ 2014ರಲ್ಲಿ 1,411 ಇದ್ದದ್ದು 2019 ರಲ್ಲಿ 2,967 ಕ್ಕೆ ಏರಿದೆ ಎಂದು ಹುಲಿ ಗಣತಿ ವರದಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಜುಲೈ 11 2018ರಲ್ಲಿ ನಡೆಸಿದ ಅತಿ ದೊಡ್ಡ ಕ್ಯಾಮೆರಾ ಟ್ರ್ಯಾಪ್ ಹುಲಿ ಸಮೀಕ್ಷೆ ಗಿನ್ನೆಸ್ ಬುಕ್ ಆ ವರ್ಲ್ಡ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.. 26, 838 ಕ್ಯಾಮೆರಾಗಳನ್ನು ಬಳಸಿ 34,858,623 ಫೋಟೋಗಳನ್ನು ತೆಗೆದು ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದೆ.. ಹಲವಾರು ವರ್ಷಗಳಲ್ಲಿ ಹುಲಿಗಳ ಸಂಖ್ಯೆಯು ಶೇ 6% ಹೆಚ್ಚಾಗಿದೆ..

ಕಳ್ಳ ಬೇಟೆ ನಿಯಂತ್ರಿಸಿ, ಆವಾಸಗಳ ಸಂರಕ್ಷಣೆ ಮಾಡುವುದು, ಹುಲಿ-ಮಾನವ ಸಂಘರ್ಷ ಕಡಿಮೆ ಮಾಡುವುದರಿಂದ ಈ ಸುಂದರವನ್ಯಜೀವಿಯನ್ನು ಮುಂದಿನ ಪೀಳಿಗೆಗೆ ಉಳಿಸಬಹುದಾಗಿದೆ..
ನಿಸರ್ಗದ ಮಡಿಲಿನಲ್ಲಿ ಎಲ್ಲ ಪ್ರಾಣಿ ಪಕ್ಷಿಗಳಿಗೂ ಸಮಾನ ಹಕ್ಕಿದೆ ಅವುಗಳ ಸಂರಕ್ಷಣೆಯು ಕೂಡ ನಮ್ಮ ಕರ್ತವ್ಯ.. ಹತ್ತು ಹಲವು ವಿಶೇಷತೆ ಹೊಂದಿರುವ ಹುಲಿ ಸಂಕುಲ ಉಳಿಯಬೇಕು ಬೆಳೆಯಬೇಕು..

-ನಂದಾದೀಪ, ಮಂಡ್ಯ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x