ಎಲ್ಲಿದೆ ನಮ್ಮ ಮನೆ?!: ಎಸ್.ಜಿ.ಶಿವಶಂಕರ್

ಸಮಯ ರಾತ್ರಿ ಏಳೂವರೆ ಸಮೀಪ. ಬಡಾವಣೆಯ ನಡುವಿನ ಆ ಪಾರ್ಕು ನಿರ್ಜನವಾಗುತ್ತಿತ್ತು. ಕತ್ತಲಾಗುವವರೆಗೂ ಅಲ್ಲಿ ಮಕ್ಕಳು, ಮಹಿಳೆಯರು ತುಂಬಿರುತ್ತಾರೆ. ಕತ್ತಲು ಕವಿಯುವ ಹೊತ್ತಿನ ನಂತರವೂ ಅಲ್ಲಿ ಉಳಿಯುತ್ತಿದ್ದವರೆಂದರೆ ಕೆಲವು ಹಿರಿತಲೆಗಳು. ಆರು ಜನರ ಆ ಹಿರಿಯರ ಗುಂಪು ಕಳೆದೈದು ವರ್ಷಗಳಿಂದ ಆ ಪಾರ್ಕಿನ ಅವಿಭಾಜ್ಯ ಅಂಗವಾಗಿದ್ದರು. ಅವರೆಲ್ಲ ಸರ್ವಿಸಿನಲ್ಲಿದ್ದು ರಿಟೈರ್ ಆದವರು. ಬೆಳಕಿರುವವರೆಗೂ ವಾಕಿಂಗ್ ಮಾಡಿ ನಂತರ ಪಕ್ಕಪಕ್ಕದಲ್ಲಿರುವ ಎರಡು ಕಲ್ಲು ಬೆಂಚುಗಳಲ್ಲಿ ಆಸೀನರಾಗುತ್ತಿದ್ದರು. ಏಳೂವರೆಯವರೆಗೂ ಅವರ ಹರಟೆ ಸಾಗುತ್ತಿತ್ತು. ನಂತರ ನಿಧಾನಕ್ಕೆ ಎಲ್ಲರೂ ತಂತಮ್ಮ ಮನೆಗಳತ್ತ ಹೊರಡುತ್ತಿದ್ದರು. ಅವರೆಲ್ಲರ ಮನೆಗಳೂ ಪಾರ್ಕಿಗೆ ಹತ್ತಿರದಲ್ಲೇ ಇದ್ದವು. ಇಂದು ಆರು ಜನರಲ್ಲಿ ನಾಲ್ವರು ಮಾತ್ರ ಇದ್ದರು. ಏಳೂವರೆಯಾದರೂ ಅವರಿನ್ನೂ ಕುಳಿತೇ ಇದ್ದರು. ಗುಂಪಿನಲ್ಲಿ ಒಬ್ಬರಾಗಿದ್ದ ರಂಗಣ್ಣನಿಗೆ ಕಾಯುತ್ತಿದ್ದರು.

ಅವರು ಕಾಯುತ್ತಿದ್ದ ವ್ಯಕ್ತಿ ರಂಗಣ್ಣ ಆತುರಾತುರವಾಗಿ ಬಂದು ಗುಂಪು ಸೇರಿಕೊಂಡರು.
“ಯಾಕೆ ಲೇಟು..?”
ಹಿರಿಯರಾದ ಅನಂತಯ್ಯ ಕೇಳಿದರು.
“ಅದೊಂದು ದೊಡ್ಡ ಕತೆ” ರಂಗಣ್ಣ ನಿಟ್ಟುಸಿರುಬಿಟ್ಟ.
“ಸಣ್ಣದಾಗಿ ಹೇಳು” ಎಂದು ನಕ್ಕ ಭಾಸ್ಕರ್ ಮರುಕ್ಷಣ, ತಾನು ನಗಬಾರದಿತ್ತು, ಜೋಕ್ ಮಾಡಬಾರದಿತ್ತು ಎಂದು ನೆನೆದು ಗಂಭೀರರಾದರು.
“ಸರಿ, ಶುರು ಮಾಡಿ” ಪದ್ಮನಾಭಯ್ಯ ಹೇಳಿದರು.

“ಸ್ನೇಹಿತರೆ, ಐದು ವರ್ಷ ನಮ್ಮ ಜೊತೆಯಲ್ಲಿ ಇದೇ ಪಾರ್ಕಿನಲ್ಲಿ, ವಾಕ್ ಮಾಡ್ತಾ, ಕಷ್ಟ ಸುಖಗಳನ್ನ ಹಂಚಿಕೊಳ್ತಿದ್ದ ಶಾಮಣ್ಣ ಇವತ್ತು ನಮ್ಮ ಜೊತೆ ಇಲ್ಲ. ನೆನ್ನೆ ನಾವೆಲ್ಲಾ ಅವನ ಅಂತ್ಯಸಂಸ್ಕಾರಕ್ಕೆ ಹೋಗಿದ್ದೋ. ಮೊನ್ನೆ ನಮ್ಮ ಜೊತೇಲಿ ಇದೇ ಪಾರ್ಕಿನಲ್ಲಿ ವಾಕಿಂಗ್ ಮಾಡಿದ್ದವನು ಇವತ್ತು ಇಲ್ಲ. ಅವನ ಅಗಲಿಕೆ ನಮ್ಮ ಗುಂಪಿಗೆ ತುಂಬಾ ನಷ್ಟವಾಗಿದೆ. ಸಂಭಾವಿತ, ಆಧ್ಯಾತ್ಮದಲ್ಲಿ ಆಸಕ್ತಿ ಇದ್ದವನು. ಹೆಚ್ಚು ತಿಳ್ಕೊಂಡಿದ್ದ, ವಿಚಾರವಂತ. ನಮ್ಮ ರಂಗಣ್ಣನೂ ಅವನೂ ಗಳಸ್ಯ-ಕಂಠಸ್ಯ. ನಮ್ಮೆಲರಿಗಿಂತ ರಂಗಣ್ಣನಿಗೆ ವೈಯುಕ್ತಿವಾಗಿ ಹೆಚ್ಚು ನಷ್ಟ! ತುಂಬಾ ಆತ್ಮೀಯನಾಗಿದ್ದವನನ್ನು ರಂಗಣ್ಣ ಕಳ್ಕೊಂಡಿದ್ದಾನೆ. ಶಾಮಣ್ಣನ ಆತ್ಮಕ್ಕೆ ಸದ್ಗತಿ ದೊರೆಯಲಿ ಅಂತ ನಾವೆಲ್ಲಾ ಪ್ರಾರ್ಥಿಸೋಣ. ನೆನ್ನೇನೇ ಮಾಡಬೇಕಾಗಿದ್ದ ಈ ಸಂತಾಪಸೂಚಕ ಸಭೇನ ಇವತ್ತು ಮಾಡೋಣ. ನಮ್ಮೆಲ್ಲರ ಆತ್ಮೀಯನಾಗಿದ್ದ ಸ್ನೇಹಿತ ಶಾಮಣ್ಣನ ಆತ್ಮಕ್ಕೆ ಶಾಂತಿ ಸಿಗಲೀಂತ ಎಲ್ಲರೂ ಒಂದು ನಿಮಿಷ ಮೌನ ಆಚರಿಸೋಣ”

ಎಂದು ಹೇಳಿ ಅನಂತಯ್ಯ ಬೆಂಚಿಗೆ ಕೈಯೂರಿ ಎದ್ದು ನಿಂತರು. ಉಳಿದವರು ಅನುಕರಿಸಿದರು. ಕತ್ತಲಿನ ಜೊತೆಗೆ ಮೌನ ಕೂಡ ಆ ನಿರ್ಜನ ಪಾರ್ಕನ್ನು ಆವರಿಸಿತು. ಒಂದು ನಿಮಿಷ ಎಷ್ಟು ಧೀರ್ಘ ಎನ್ನಿಸಬೇಕಾದರೆ ಧ್ಯಾನ ಮಾಡಬೇಕು ಎನ್ನುವ ಮಾತಿದೆ. ಆ ಮಾತು ಮೌನದಲ್ಲಿದ್ದವರಿಗೆ ಅನುಭವವಾಯಿತು. ಆ ಒಂದು ನಿಮಿಷದಲ್ಲಿ ಹತ್ತಾರು ಯೋಚನೆಗಳು ಅವರ ಮನಸ್ಸಿನಲ್ಲಿ ಬಂದು ಹೋಗಿದ್ದವು! ಶಾಮಣ್ಣನ ಆತ್ಮಕ್ಕೆ ಶಾಂತಿ ಸಿಕ್ಕಿತೋ ಇಲ್ಲವೋ ಹಾಗೆ ಮಾಡಿದ್ದರಿಂದ ಅವರಿಗಂತೂ ನೆಮ್ಮದಿಯಾಯಿತು. ಒಂದು ನಿಮಿಷದ ಮೌನ ಮುಗಿಯಿತೆಂದು ಅನಂತಯ್ಯ ಕೆಮ್ಮಿದರು. ಮೌನ ಮುಗಿದಿದ್ದಕ್ಕೆ ಎಲ್ಲರಿಗೂ ನಿರಾಳವಾಯಿತು.
“ರಂಗೂ ನಮ್ಮ ವಾಕಿಂಗ್ ಎಲ್ಲಾ ಮುಗೀತು. ನೀನಿವತ್ತು ಲೇಟು. ನಾವು ಹೊರಡ್ತೀವಿ..” ಅನಂತಯ್ಯ ಹೊರಟರು.

“ಹೋಗ್ಬನ್ನಿ. ಶಾಮಣ್ಣನ ಮನೇಗೆ ಹೋಗಿ ಅವರಿಗೆಲ್ಲಾ ಸಮಾಧಾನ ಹೇಳಿ ಬರೋದ್ರಲ್ಲಿ ಸ್ವಲ್ಪ ತಡವಾಯ್ತು. ನೀವು ಹೊರಡಿ. ನಾನು ಇವತ್ತು ವಾಕಿಂಗು ತಪ್ಪಿಸೊ ಹಾಗಿಲ್ಲ” ರಂಗಣ್ಣ ಹೇಳಿ ಅವರತ್ತ ಕೈಬೀಸಿ ವಾಕಿಂಗ್ ಶುರು ಮಾಡಿದ.
ಆ ಹಿರಿಯರ ಆ ಗುಂಪು ಪಾರ್ಕಿಗೆ ಬರುವ ಎಲ್ಲರಿಗೂ ಚಿರಪರಿಚಿತ. ಅನಂತಯ್ಯನನ್ನು ಬಿಟ್ಟು ಉಳಿದವರೆಲ್ಲ ಸುಮಾರು ಅರವತ್ತೈದರಿಂದ ಎಪ್ಪತ್ತರ ವರೆಗಿನ ವಯಸ್ಸಿನವರು. ಅನಂತಯ್ಯ ಮಾತ್ರ ಎಲ್ಲರಿಗಿಂತ ದೊಡ್ಡವರು. ಅವರಿಗೀಗ ಎಪ್ಪತ್ತೈದು. ಅವರೆಲ್ಲ ಸರ್ವಿಸಿನಲ್ಲಿದ್ದು, ವಿಶ್ರಾಂತ ಜೀವನ ನಡೆಸುತ್ತಿದ್ದವರು. ಅವರಲ್ಲಿ ಈವರೆಗೆ ಒಬ್ಬರಾಗಿದ್ದ ಶಾಮಣ್ಣ ಎರಡು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿದ್ದರು. ಹೃದಯದ ತೊಂದರೆ ಇತ್ತು, ಕಳೆದ ವರ್ಷವಷ್ಟೆ ಬೈಪಾಸ್ ಆಗಿತ್ತು. ಆ ಸ್ನೇಹಿತರ ಗುಂಪಿನ ಸದಸ್ಯರಲ್ಲಿ ಈಗ ಒಬ್ಬರು ಕಡಿಮೆಯಾಗಿದ್ದರು.

ಕಳೆದ ಮೂರು ದಿನಗಳಿಂದ ರಂಗಣ್ಣ ವಾಕಿಂಗ್ ತಪ್ಪಿಸಿಕೊಂಡಿದ್ದರು. ಸ್ನೇಹಿತ ಶಾಮಣ್ಣ ಇಹಲೋಕ ವ್ಯಾಪಾರ ಮುಗಿಸಿದ್ದು ಅವನ ಅಂತ್ಯಕ್ರಿಯೆಯಲ್ಲಿ ಮನೆಯವರ ನೆರವಿಗೆ ನಿಂತಿದ್ದರು. ಇಂದು ವಾಕಿಂಗು ತಪ್ಪಿಸಲೇ ಬಾರದೆಂದು ನಿರ್ಧಾರ ಮಾಡಿದ್ದರು. ಕಾರಣ ಒಂದೆರಡು ದಿನ ವಾಕಿಂಗ್ ತಪ್ಪಿಸಿದರೆ ಜೀರ್ಣಶಕ್ತಿ ಕಮ್ಮಿಯಾಗುತ್ತಿತ್ತು, ಮಂಡಿ ನೋವು ಶುರುವಾಗುತ್ತಿತ್ತು. ಇಂದು ಆರೋಗ್ಯದ ಯೋಚನಗಳೇ ರಂಗಣ್ಣನ ತಲೆಯಲ್ಲಿ ತುಂಬಿದ್ದವು. ಶುಗರ್ ಲೆವೆಲ್ ನಾಳೆ ಚೆಕ್ ಮಾಡಿಸ್ಕೋಬೇಕು. ಹೀಗೆ ನೆಗ್ಲೆಕ್ಟ್ ಮಾಡಬಾರದು. ‘ಡಯಾಬಿಟೀಸು ಇರುವವರು ಒಂದು ದಿನವೂ ವಾಕಿಂಗ್ ತಪ್ಪಿಸಬಾರದು’ ಎಂದು ಡಾಕ್ಟರು ಪದೇಪದೇ ಎಚ್ಚರಿಸುತ್ತಿದ್ದುದು ರಂಗಣ್ಣನ ಮನಸ್ಸಿನಲ್ಲಿ ಮಾರ್ದನಿಸಿತು.

ನಡೆಯುತ್ತಿರುವಾಗ ಎರಡು ದಿನ ವಾಕಿಂಗು ತಪ್ಪಿಸಿದ್ದೀಯ ಎಂದು ಮಂಡಿ ನೋವು ನೆನಪು ಮಾಡಿತು. ರಂಗಣ್ಣನಿಗೆ ಆ ಪಾರ್ಕು ಒಂದು ಸುತ್ತು ನಡೆಯಲು ಎಂಟು ನಿಮಿಷದಲ್ಲಿ ಹಿಡಿಯುತ್ತಿತ್ತು. ಗುಂಪಿನ ಜೊತೆ ನಡೆದರೆ ಹತ್ತರಿಂದ ಹನ್ನೆರಡು ನಿಮಿಷ. ಗುಂಪಿನಲ್ಲಿ ಕೆಲವರು ನಿಧಾನಕ್ಕೆ ನಡೆಯುವವರಿದ್ದರು. ಇಂದು ಯಾರೂ ಇಲ್ಲದಿದ್ದುರಿಂದ ರಂಗಣ್ಣ ಸ್ವಲ್ಪ ವೇಗವಾಗಿ ನಡೆಯುತ್ತಿದ್ದರು. ಮನಸ್ಸಿನಲ್ಲಿ ಪದೇಪದೇ ಶಾಮಣ್ಣನ ಪತ್ನಿಯ ದುಃಖತಪ್ತ ಮುಖ, ಶಾಮಣ್ಣನಿಲ್ಲದೆ ಭಣಭಣ ಎನ್ನುತ್ತಿದ್ದ ಮನೆಯ ಚಿತ್ರ ಮೂಡುತ್ತಿತ್ತು. ಜೊತೆಗೆ ಮಡದಿ ಲಕ್ಷ್ಮಿಯ ರಕ್ತದೊತ್ತಡ ಬೇರೆ ಚಿಂತಿಸುವಂತೆ ಮಾಡಿತ್ತು. ಅವಳಿಗೆ ಪದೇಪದೇ ಲಕ್ಷ್ಮಿಗೆ ರಕ್ತದೊತ್ತಡ ಏಕೆ ಏರುಪೇರಾಗುತ್ತದೆ ಎನ್ನುವುದು ತಿಳಿಯುತ್ತಿರಲಿಲ್ಲ. ಮನಸ್ಸಿನ ಖಿನ್ನತೆಯನ್ನು ಬಿಟ್ಟರೆ ಬೇರಾವ ಕಾರಣವೂ ಇರಲಿಲ್ಲ. ಇಬ್ಬರು ಗಂಡು ಮಕ್ಕಳೂ ವಿದೇಶಗಳಲ್ಲಿರುವುದೇ ಆಕೆಯ ಖಿನ್ನತೆಗೆ ಕಾರಣ ಎನ್ನುವುದು ರಂಗಣ್ಣನಿಗೆ ತಿಳಿಯದ ವಿಷಯವೇನಾಗಿರಲಿಲ್ಲ. ‘ಮಕ್ಕಳ ಯೋಚನೆ ಇನ್ನು ಬಿಡು’ ಎಂದು ಎಷ್ಟು ಸಾಂತ್ವನ ಹೇಳಿದರೂ ಆಕೆಗೆ ಸಮಾಧಾನವಾಗುತ್ತಿರಲಿಲ್ಲ.

ಪಾರ್ಕು ಅರ್ಧ ಸುತ್ತು ಹಾಕಿರುವಾಗ ಹಿಂದಿನಿಂದ ಯಾರೋ ತನ್ನ ಹೆಸರು ಹಿಡಿದು ಕೂಗಿದಂತಾಯಿತು. ರಂಗಣ್ಣನಿಗೆ ಅಚ್ಚರಿಯಾಗಿತ್ತು! ಕಾರಣ ಪಾರ್ಕು ನಿರ್ಜನವಾಗಿತ್ತು! ಯಾರಾದರೂ ಕರೆಯುವ ಸಾಧ್ಯತೆಯೇ ಇರಲಿಲ್ಲ! ರಂಗಣ್ಣ ಹಿಂದೆ ತಿರುಗಿ ನೋಡಿದ. ಕತ್ತಲಲ್ಲಿ ಮಾನವ ಆಕೃತಿಯೊಂದು ಕಂಡು ಮರುಕ್ಷಣ ಮಾಯವಾಯಿತು! ಅದು ಪುರುಷ ಆಕೃತಿಯಂತೆ ಕಂಡಿತ್ತು! ಹೀಗೆಲ್ಲಾದರೂ ಆಗುವುದುಂಟೆ..? ನೋಡಿದ ತಕ್ಷಣ ಮಾಯವಾಗುವುದು? ತಾನು ಕಂಡಿದ್ದು ಭ್ರಮೆ ಎನ್ನಿಸಿತು. ಸುತ್ತ ತಿರುಗಿ ನೋಡಿದ. ಇಡೀ ಪಾರ್ಕಿನಲ್ಲಿ ಯಾರೂ ಕಾಣಲಿಲ್ಲ. ಹಾಗಾದರೆ ಕೂಗಿದವರು ಯಾರು..? ತಿರುಗಿದಾಗ ಅಲ್ಲಿ ಯಾರೋ ಇದ್ದಂತೆ ಇತ್ತು! ಅದು ಪುರುಷನಂತಿತ್ತು! ಮರುಕ್ಷಣ ಇರಲಿಲ್ಲ! ಅದು ಅಪ್ಪಟ ಭ್ರಮೆಯೇ ಎಂದುಕೊಂಡು ರಂಗಣ್ಣ ಮತ್ತೆ ತನ್ನ ನಡಿಗೆ ಮುಂದುವರಿಸಿದರು.

ಮತ್ತೆ ಇಪ್ಪತ್ತು ಹೆಜ್ಜೆ ಹಾಕಿರಬಹುದು ಅಷ್ಟೆ, ಮತ್ತೆ ಅದೇ ಕರೆ! ಅದೇ ದನಿ! ರಂಗಣ್ಣ ಈ ಸಲ ಸರÀಕ್ಕನೆ ತಿರುಗಿ ನೋಡಿದರು. ನಿಜಕ್ಕೂ ಬೆನ್ನ ಹಿಂದೆ ಕತ್ತಲಲ್ಲಿ ಯಾರೋ ಕರೆದಿದ್ದರು! ಅದು ಸ್ಪಸ್ಟವಾಗಿತ್ತು. ಅದು ಯಾರು ಎಂದು ಗುರುತಿಸುವ ಮೊದಲೇ ಮಾಯ! ಇದೇನು ವಿಚಿತ್ರ..? ತಲೆ ತುಂಬಾ ಯೋಚನೆಗಳು ಇದ್ದುದಕ್ಕೆ ಹೀಗಾಗಿದೆ ಎಂದು ರಂಗಣ್ಣ ಮತ್ತೆ ನಡಿಗೆ ಮುಂದುವರಿಸಿದರು. ನಡೆಯುತ್ತಿರುವಾಗಲೇ ಮನಸ್ಸಿಗೆ ಕೊಂಚ ಅಳುಕು! ಎಂದೂ ಇಷ್ಟು ಲೇಟಾಗಿ, ಒಬ್ಬನೇ ಪಾರ್ಕಿನಲ್ಲಿ ವಾಕ್ ಮಾಡಿದ್ದಿಲ್ಲ. ಕಳೆದ ತಿಂಗಳು ಪಾರ್ಕಿನ ಮರವೊಂದಕ್ಕೆ ಒಬ್ಬ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ನೆನಪಾಯಿತು ರಂಗಣ್ಣನಿಗೆ. ಅವನ ದೆವ್ವವೇನಾದರೂ..? ಛೆ..ಛೆ.. ಇವಲ್ಲಾ ಮನುಷ್ಯ ಕಲ್ಪಿತ! ಅವೆಲ್ಲಾ ಇರಲಿಕ್ಕೆ ಸಾಧ್ಯವಿಲ್ಲ. ಸತ್ತವರೆಲ್ಲಾ ದೆವ್ವವಾಗಿಬಿಟ್ಟರೆ ಬದುಕಿರುವವರಿಗೆ ಜಾಗವೇ ಇರುತ್ತಿರಲಿಲ್ಲ ಎನಿಸಿ ಮುಖದಲ್ಲಿ ನಗು ಮೂಡಿತು. ಮನಸ್ಸಿನÀಲ್ಲಿ ತುಳುಕಿದ ಅಳುಕಿನೊಂದಿಗೆ ಪಾರ್ಕನ್ನು ಒಂದು ಸುತ್ತು ಹಾಕಿದರು. ಯಾವ ದನಿಯೂ ಕೇಳಲಿಲ್ಲ, ಯಾರೂ ಕಾಣಲಿಲ್ಲ! ಅಂದರೆ ಅದೆಲ್ಲಾ ತನ್ನ ಭ್ರಮೆಯೇ ಎಂಬ ನಿರ್ಧಾರಕ್ಕೆ ಬಂದರು ರಂಗಣ್ಣ. ಮತ್ತೊಂದು ಸುತ್ತು. ಈ ಸಲವೂ ಏನೂ ಆಗಲಿಲ್ಲ. ಹಣೆಯಲ್ಲಿ ಬೆವರು ಕಾಣಿಸಿತು. ಮಾಮೂಲಾಗಿ ಮೂರು ನಾಲ್ಕನೆ ಸುತ್ತಿಗೆ ಕಾಣಿಸುತ್ತಿದ್ದ ಬೆವರು ಎರಡನೇ ಸುತ್ತಿಗೇ ಕಾಣಿಸಿತು! ಯಾಕೆ ಹೀಗೆ..? ತಾನೇನಾದರೂ ಹೆದರಿರುವೆನೆ..? ಆ ಆಕೃತಿ ಕಂಡು ಮಯವಾಗಿದ್ದಕ್ಕೆ? ಆದರೆ ಅದು ಅಪ್ಪಟ ಭ್ರಮೆ.

ಮೂರನೆಯ ಸತ್ತು ಮುಂದುವರಿಸಲು ಯಾಕೋ ಮನಸ್ಸು ಒಪ್ಪಲಿಲ್ಲ. ನೀರವ ಮೌನ ಅಧೀರತೆಯನ್ನು ಹುಟ್ಟುಹಾಕಿತ್ತು. ಹೆಚ್ಚಿಗೆ ವಾಕ್ ಮಾಡಬೇಕೆಂದಿದ್ದವರು ದಿಢೀರನೆ ವಾಕಿಂಗ್ ಮುಗಿಸಿ ಮನೆಯತ್ತ ಹೊರಡುವ ನಿರ್ಧಾರಕ್ಕೆ ಬಂದುಬಿಟ್ಟರು. ಯಾರೋ ಹಿಂದಿಂದ ಕರೆದದ್ದು ಮತ್ತು ಕ್ಷಣಕಾಲ ಅಲ್ಲೊಂದು ಆಕೃತಿ ಕಂಡು ಮರೆಯಾದದ್ದು ಆ ನಿರ್ಧಾರಕ್ಕೆ ಕಾರಣವಾಯಿತಾ? ಎಂಬ ಅನುಮಾನ! ಅದು ಏನೂ ಇರಲಿಕ್ಕಿಲ್ಲ, ಆದರೂ ರಿಸ್ಕು ಯಾಕೆ ಎನ್ನಿಸಿತು. ಹತ್ತು ನಿಮಿಷದಲ್ಲಿ ಮನೆಯನ್ನು ತಲುಪಿದ ರಂಗಣ್ಣನ ಎದೆ ಜೋರಾಗಿ ಹೊಡೆದುಕ್ಕೊಳ್ಳುತ್ತಿತ್ತು.

ಎಂದಿನಂತೆ ರಾತ್ರಿ ಒಂಬತ್ತಕ್ಕೆ ಊಟ ಮುಗಿದಿತ್ತು. ಹತ್ತು ಗಂಟೆಯ ಸುಮಾರಿಗೆ ಟಿವಿ ಮುಂದೆ ಕೂತಿದ್ದಾಗ ತೂಕಡಿಕೆ ಶುರುವಾಯಿತು ರಂಗಣ್ಣನಿಗೆ. ಊಟವಾದ ಮೇಲೆ ರಂಗಣ್ಣನಿಗೆ ನಿದ್ರೆ ಎಳೆಯುವುದು ಮಾಮೂಲು.
‘ಅದೇನು ನಿದ್ರೇನಪ್ಪಾ..? ಸೆಕೆಂಡ್ ಶಿಫ್ಟಲ್ಲಿ ಅದು ಹೇಗೆ ಫ್ಯಾಕ್ಟ್ರೀಲಿ ಕೆಲ್ಸ ಮಾಡ್ತಿದ್ರೋ ದೇವರಿಗೇ ಗೊತ್ತು. ಯಾಕೆ ತೂಕಡಿಸ್ತೀರಿ ಹೋಗಿ ಮಲಕ್ಕೊಳ್ಳಿ’ ಬೇಸರÀದಿಂದ ಮಡದಿ ಹೇಳಿದಾಗ ಮರುಮಾತಿಲ್ಲದೆ ರಂಗಣ್ಣ ರೂಮಿಗೆ ಹೋಗಿ ಮಲಗಿದರು. ಐದು ನಿಮಿಷದಲ್ಲಿ ಗೊರಕೆಯ ಶಬ್ದ ರೂಮಿನಿಂದ ಕೇಳಿಸಿತು.
‘ಪುಣ್ಯವಂತರಪ್ಪಾ..? ನನಗೂ ನಿದ್ರೆಗೂ ಬದ್ದ ದ್ವೇಷಾಂತ ಕಾಣ್ಸುತ್ತೆ. ನನ್ನ ಹತ್ರಾನೂ ಸುಳಿಯೊಲ್ಲ ಈ ದರಿದ್ರ ನಿದ್ರೆ! ಈ ರಾತ್ರಿ ಯಾಕಾದರೂ ಬರುತ್ತೋ..?’ ಲಕ್ಷಿ ಮನಸ್ಸಿನಲ್ಲೇ ಗೊಣಗುತ್ತಾ ಟಿವಿ ಚಾನಲ್ಲನ್ನು ಬದಲಿಸಿದರು. ಯಾವ ಚಾನಲ್ಲುಗಳ ಕಾರ್ಯಕ್ರಮಗಳು ಆಸಕ್ತಿ ಹಿಡಿದಿಡಲ್ಲಿಲ್ಲ. ಆಕಳಿಸಿದರು. ನಿದ್ರೆ ಕಾಣಿಸುತ್ತೆ ಆದರೆ ದಿಂಬಿಗೆ ತಲೆ ಇಟ್ಟ ತಕ್ಷಣ ನಿದ್ರೆ ಓಡಿಹೋಗುತ್ತೆ! ಎಂದು ಬೇಸರಿಸಿದರು.
ರೂಮಿಗೆ ಹೋಗುವ ಹೊತ್ತಿಗೆ ರಂಗಣ್ಣನ ಗೊರಕೆ ನಿಂತಿತ್ತು. ಬದಲಿಗೆ ಏನೇನೋ ಬಡಬಡಿಸುತ್ತಿದ್ದರು.
‘ನನ್ನ ತಡೀಬೇಡ ನಾನು ವಾಕ್ ಮಾಡ್ಬೇಕು..ನೀನ್ಯಾಕೆ ಬಂದೆ..? ನೀನು ಸತ್ತು ಹೋಗಿದ್ದೀಯಲ್ವಾ..?’ ಪತಿಯ ಅಸ್ಪಷ್ಟ ಮಾತು ಕೇಳಿ ಲಕ್ಷ್ಮಿಗೆ ಗಾಬರಿಯಾಯಿತು! ಲೈಟು ಹಾಕ್ ನೋಡಿದರೆ ಪತಿಯ ಮುಖದಲ್ಲಿ ಬೆವರಿತ್ತು! ಕೆಟ್ಟ ಕನಸು ಬಿದ್ದಿರಬೇಕೆನ್ನಿಸಿತು. ಪತಿಯನ್ನು ಏಳಿಸಿದರು ಲಕ್ಷ್ಮಿ.
ಗಾಬರಿಯಿಂದ ಎದ್ದ ರಂಗಣ್ಣ ಲಕ್ಷ್ಮಿಯ ಮುಖ ನೋಡಿ ‘ಓ..ಹಾಗಾದ್ರೆ ಅದು ಕನಸು!’ ಎಂದರು ಮುಖದಲ್ಲಿ ಗಾಬರಿಯಿತ್ತು.

‘ಯಾಕ್ರೀ..ಏನಾಯ್ತು..? ನೀನು ಸತ್ತೀದೀಯಲ್ವಾ ಅಂತ ಯಾರಿಗೆ ಹೇಳ್ತಿದ್ರಿ..?’
ಕೆಲವು ನಿಮಿಷ ರಂಗಣ್ಣ ಮಾತಾಡಲಿಲ್ಲ. ಕನಸಿನ ಗಾಬರಿಯಿಂದ ಇನ್ನೂ ಸಾವರಿಸಿಕ್ಕೊಳ್ಳುತ್ತಿದ್ದಂತಿತ್ತು!
‘ಏನ್ರೀ..? ಏನಾಯ್ತು ಹೇಳಿ..”ಲಕ್ಷ್ಮಿಗೆ ಗಾಬರಿಯಿಂದ ಕೇಳಿದರು. ಯಾವತ್ತೂ ಕನಸು ಕಂಡು ಹೆದರಿರಲಿಲ್ಲ ರಂಗಣ್ಣ.
‘ಕನಸಲ್ಲಿ ಶಾಮಣ್ಣ ಕಾಣಿಸಿಕೊಂಡ..’ ನಿಧಾನಕ್ಕೆ ರಂಗಣ್ಣ ಹೇಳಿದರು.
‘ಎನು? ಶಾಮಣ್ಣಾನಾ..?’

‘ಹೌದು, ನಾನು ಪಾರ್ಕಲ್ಲಿ ವಾಕಿಂಗ್ ಮಾಡ್ತಿದ್ದೆ ಆಗ ಹಿಂದಿಂದ ಶಾಮಣ್ಣ ರಂಗೂ..ಕೂಗ್ತಿದ್ದರೂ ಕೇಳಿಸೊಲ್ಲವೇನೋ..ನಿನ್ನ ವಾಕಿಂಗು ಇದ್ದೇ ಇದೆ ಬಾ ನನ್ನ ಹತ್ರ ಮಾತಾಡು ಅಂತ ಹೇಳಿದರು. ಅದಕ್ಕೇ ನೀನು ಸತ್ತು ಹೋಗಿದ್ದೀಯಲ್ವಾ ಅಂತ ಕೇಳಿದೆ..? ಹೌದು ಮತ್ತು ಇಲ್ಲ ಅಂದ. ಗಾಬರಿಯಾಗಿತ್ತು..ಎಷ್ಟು ಸ್ಪಷ್ಟವಾಗಿ ಕಂಡ ಗೊತ್ತಾ..? ಈಗಲೂ ಅವನು ಇಲ್ಲೇ ಇದ್ದಾನೆ ಅನ್ನಿಸುತ್ತೆ..’ ತುಂಬಾ ಗೊಂದಲದಲ್ಲಿ ಮಾತಾಡಿದರು ರಂಗಣ್ಣ.
‘ನೀವು ಶಾಮಣ್ಣ ತುಂಬಾ ಕ್ಲೋಸಾಗಿದ್ರಲ್ವಾ ಅದಕ್ಕೇ ಹೀಗೆ ಕನಸು..ದೇವರ ಮನೆಗೋಗಿ ದೇವರಿಗೆ ಕೈಮುಗಿದು, ಉದ್ದರಣೇಲಿ ಒಂದು ಗುಟುಕು ತೀರ್ಥ ಕುಡಿದು ಬನ್ನಿ. ನಾನು ಇನ್ನೂ ಸ್ವಲ್ಪ ಹೊತ್ತ್ತು ಎದ್ದಿರ್ತೀನಿ. ನೀವು ಮಲಗಿ..’ ಎಂದು ಲಕ್ಷ್ಮಿ ಧೈರ್ಯ ಹೇಳಿದರು.

ರಂಗಣ್ಣ ನಿಧಾನಕ್ಕೆ ಎದ್ದು ಬಾತ್ರೂಮಿಗೆ ಹೋಗಿ, ಕೈಕಾಲು ತೊಳೆದುಕೊಂಡರು. ದೇವರ ಮನೆಗೆ ಹೋಗಿ ಕೈಮುಗಿದು, ತೀರ್ಥ ಬಾಯಿಗೆ ಹಾಕಿಕೊಂಡು ವಾಪಸ್ಸು ಬಂದಾಗ ಅಚ್ಚರಿಯಿಂದ ಪತ್ನಿಯತ್ತ ನೋಡಿದರು. ಕೆಲವೇ ನಿಮಿಷಗಳ ಹಿಂದೆ ಎದ್ದಿರುತ್ತೇನೆ ಎಂದಿದ್ದ ಪತ್ನಿ ಮಲಗಿ ನಿದ್ರಿಸುತ್ತಿದ್ದಳು.
ತಕ್ಷಣ ಮಲಗಲು ರಂಗಣ್ಣನಿಗೆ ಧೈsರ್ಯ ಬರಲ್ಲಿಲ್ಲ. ಹಾಲಿನಲ್ಲಿ ಕೂತು ಟಿವಿ ಆನ್ ಮಾಡಿದರು ರಂಗಣ್ಣ. ಹಾಗಾದರೆ ಇಂದು ಸಂಜೆ ಪಾರ್ಕಿನಲ್ಲಿ ವಾಕಿಂಗ್ ಹೋಗುವಾಗ ತನ್ನನ್ನು ಕರೆದ ಆಕೃತಿ ಶಾಮಣ್ಣನದೇ! ಇದೀಗ ಕನಸಿನಲ್ಲೂ ಶಾಮಣ್ಣ ಬಂದಿದ್ದ! ಅದೇ ರೀತಿ! ಪಾರ್ಕಿನಲ್ಲಿ ತಾನು ನಡೆಯುತ್ತಿದ್ದಂತೆ, ಅವನು ಹಿಂದೆ ನಿಂತು ಕರೆದಂತೆ! ತಿರುಗಿ ನೋಡಿದಾಗ ಶಾಮಣ್ಣ ಸ್ಪಷ್ಟವಾಗಿ ಕಂಡಿದ್ದ. ‘ರಂಗೂ..ಕೂಗ್ತಿದ್ದರೂ ಕೇಳಿಸೊಲ್ಲವೇನೋ..ನಿನ್ನ ವಾಕಿಂಗು ಇದ್ದೇ ಇದೆ ಬಾ ನನ್ನ ಹತ್ರ ಮಾತಾಡು’ ಎಂದಿದ್ದ! ಅದು ಈಗಲೂ ಕಿವಿಯಲ್ಲೇ ಇದೆ! ಯಾಕೆ ಹೀಗೆ..? ನಿಜಕ್ಕೂ ಶಾಮಣ್ಣ ದೆವ್ವ ಆಗಿದ್ದಾನಾ..? ದೆವ್ವ ಅಂದರೆ ಆತ್ಮ! ಆದರೆ ತನ್ನನ್ನು ಯಾಕೆ ಮಾತಾಡಿಸೋಕೆ..ಬಂದಿದ್ದು..? ಛೆ..ಅದೆಲ್ಲಾ ನಿಜ ಅಲ್ಲ..ಕನಸು..ಶಾಮಣ್ಣ ತನಗೆ ತುಂಬಾ ಕ್ಲೋಸ್ ಆಗಿದ್ದವನು. ಅದಕ್ಕೇ ಕನಸಲ್ಲಿ ಬಂದಿರೋದು. ಅದೆಲ್ಲಾ ತನ್ನ ಮನಸ್ಸು ಕಲ್ಪಿಸಿರೋದು. ಸತ್ತ ಮೇಲೆ ಏನಾಗ್ತಾರೆ ಅನ್ನೋದೆಲ್ಲಾ ಊಹಾಪೋಹ! ಆ ಬಗ್ಗೆ ತಾನು ಶಾಮಣ್ಣ ಮಾತಾಡ್ತಾ ಇದ್ದುದ್ದು ನಿಜ! ಸತ್ತ ಮೇಲೆ ಮನುಷ್ಯ ಏನಾಗ್ತಾನೆ..? ಎಲ್ಲಿಗೆ ಹೋಗ್ತಾನೆ..? ಹುಟ್ಟೋಕೆ ಮುಂಚೆ ಎಲ್ಲಿರ್ತಾನೆ..? ವಿಜ್ಞಾನ ನಿಜವೋ ಇಲ್ಲಾ.. ವೇದಾಂತಿಗಳು ಹೇಳಿರೋದು ನಿಜವೋ..? ಇದನ್ನು ಯಾರು ಪ್ರಮಾಣಿಸುತ್ತಾರೆ ಎಂದೆಲ್ಲಾ ಮಾತಾಡಿಕೊಂಡಿದ್ದೆÀ್ದವು. ಆಗ ತಮಾಷೆಗೆ ಶಾಮಣ್ಣ ಹೇಳಿದ್ದ. ‘ರಂಗೂ ನಮ್ಮಲ್ಲಿ ಯಾರು ಮೊದಲು ಸಾಯ್ತಾರೋ ಅವರು ಬದುಕಿರೋರನ್ನ ಸಂಪರ್ಕಿಸಿ ಸತ್ತ ಮೇಲೆ ಮನುಷ್ಯ ಏನಾಗ್ತಾನೆ ಅನ್ನೋದನ್ನ ಹೇಳಬೇಕು…ಇದು ನಮ್ಮಿಬ್ಬರ ಮಧ್ಯೆ ಒಪ್ಪಂದ’ ಎಂದು ನಕ್ಕಿದ್ದ. ಆ ತಮಾಷೆಗೆ ತಾನೂ ಆಗಲಿ ಎಂದಿದ್ದೆ! ಈಗ ನಿಜಕ್ಕೂ ಶಾಮಣ್ಣನ ಆತ್ಮ ತನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆಯೆ..? ಆದರೆ ಹೇಗೆ..? ಕೆಲವು ಸಾಧಕರ ಪ್ರಕಾರ ಅತ್ಮಕ್ಕ್ಕೆ ಭೌತಿಕ ಶರೀರ ಇರೋದಿಲ್ಲ. ಹಾಗಾದರೆ..ಪಾರ್ಕಿನಲ್ಲಿ ಶಾಮಣ್ಣ ತನ್ನನ್ನು ಕರೆದದ್ದು ಸುಳ್ಳು! ಆದರೆ ಆತ್ಮ ಕನಸನ್ನು ಪ್ರವೇಶಿಸಬಹುದೆ? ಗೊತ್ತಿಲ್ಲ! ಇನ್ನು ನಿದ್ರೆ ಬರುವುದಿಲ್ಲ ಎನ್ನಿಸಿತು ರಂಗಣ್ಣನಿಗೆ. ಗಡಿಯಾರ ನಾಲ್ಕನ್ನು ತೋರಿಸುತ್ತಿತ್ತು. ಇತ್ತ ಮಲಗಲೂ ಮನಸ್ಸಿಲ್ಲ, ಎದ್ದಿರಲೂ ಬೇಸರ..? ವಾಕ್ ಹೋಗಲೆ..? ಮತ್ತೆ ಅಲ್ಲಿ ಶಾಮಣ್ಣ ಸಿಕ್ಕರೆ..? ಬೇಡ..ಏನೋ ಗೊಂದಲ..ಹೆದರಿಕೆ ಕೂಡ..ರಂಗಣ್ಣ ಅಡಿಗೆ ಮನೆಗೆ ಹೋಗಿ ಕಾಫಿ ಮಾಡಿಕೊಂಡರು. ಆಗಲೂ ಏನೋ ಅಧೀರತೆ..! ಹಿಂದೆಲ್ಲೋ ಶಾಮಣ್ಣ ಇರಬಹುದು ಎಂದು! ಅವನು ತನ್ನನ್ನು ನೋಡುತ್ತಿದ್ದಾನೆ ಎಂದು. ಆಗಾಗ್ಗೆ ತಿರುಗಿ ನೋಡುತ್ತಿದ್ದ. ಮೈಕ್ರೋವೇವಿನಲ್ಲಿ ಕಾಫಿ ಮಾಡಿ ತಂದು ಹಾಲಿನ ಸೋಫಾದಲ್ಲಿ ಅಸೀನನಾದರು. ಕಾಫಿ ಕಪ್ಪು ಬಾಯಿಗಿಟ್ಟುಕೊಂಡರುಅನ್ಯಮನಸ್ಕರಾಗಿ! ಬಿಸಿಯಾಗಿದ್ದ ಕಾಫಿ ತುಟಿ ಸುಟ್ಟಿತು! ಹೌಹಾರಿದರು! ಕಾಫಿ ಸ್ವಲ್ಪ ತುಳುಕಿ ತೊಡೆಯ ಮೇಲೆ ಬಿದ್ದು ಚುರುಗುಟ್ಟಿತು!

ಆಚೆ ಬೀಟ್ ಪೊಲೀಸಿನ ಶೀಟಿ ಶಬ್ದ ಕೇಳಿಸಿತು. ಎದ್ದು ಹೋಗಿ ಕಿಟಿಕಿ ತೆರೆದು ನೋಡಿದರು ರಂಗಣ್ಣ. ಪೊಲೀಸ್ ಆಗಲೇ ಮುಂದೆ ಹೋಗಿದ್ದ. ಕಿಟಿಕಿ ಮುಚ್ಚಿ ವಾಪಸ್ಸು ಬಂದ ರಂಗಣ್ಣ ಉಳಿದಿದ್ದ ಕಾಫಿಯನ್ನು ಗುಟುಕರಿಸಿದ. ಲೈಟು ಆರಿಸಿ, ಹಾಗೆಯೇ ಸೋಫಾದಲ್ಲೇ ಮಲಗಿದರು.
ಪ್ರಕಾಶಮಾನವಾದ ಬೆಳಕು ಎದುರಿಗೆ ಕಾಣಿಸಿತು. ಅದೆಷ್ಟು ಪ್ರಖರವಾಗಿತ್ತೆಂದರೆ ರಂಗಣ್ಣ ಕೆಲವು ಕ್ಷಣ ಕಣ್ಣು ಮುಚ್ಚಿಕ್ಕೊಳ್ಳಬೇಕಾಯಿತು. ಮತ್ತೆ ಕಣ್ಣು ಬಿಟ್ಟಾಗ ಬೆಳಕು ಕಮ್ಮಿಯಾಗಿ ಎದುರಿಗೆ ಶಾಮಣ್ಣ ನಿಂತಿದ್ದ! ಆದರೆ ಅವನ ರೂಪು ಸ್ಪಷ್ಟವಾಗಿರಲಿಲ್ಲ! ಆವಿಯಂತೆ..ಕಾಣಿಸುತ್ತಿತ್ತು! ರಂಗಣ್ಣ ಕಣ್ಣುಜ್ಜಿಕೊಂಡರು. ಇದು ನಿಜವೇ..? ಜೊತೆಗೆ ಗಾಬರಿ..! ಹೆದರಿಕೆ!

‘ಯಾಕೆ ಹೆದ್ರಿತಿದ್ದೀಯ ರಂಗೂ..ನಾನು ಸತ್ತಿದ್ದೀನಿ, ನನಗೆ ಅದು ಗೊತ್ತಾಗಿದೆ. ಆದ್ರೆ ನಿನಗೇನೂ ಮಾಡೊಲ್ಲ! ಮಾಡೋಕೂ ಆಗೊಲ್ಲ! ನಾವಿಬ್ಬರೂ ಅದೆಷ್ಟು ಈ ಸಾವಿನ ಬಗ್ಗೆ ಮಾತಾಡಿದ್ದೀವಿ! ಸತ್ತ ನಂತರ ಮನುಷ್ಯ ಏನಾಗಬಹುದು ಅನ್ನೋದರ ಬಗೆಗೆ ಗಂಟೆಗಟ್ಲೆ ಮಾತಾಡಿದ್ದೊ..ನೆನಪಿದೆಯಾ..? ಹುಟ್ಟೋಕೆ ಮುಂಚೆ ಈ ಜೀವ ಅನ್ನೋದು ಎಲ್ಲಿರುತ್ತೆ..? ಸತ್ತ ಮೇಲೆ ಅದು ಎಲ್ಲಿಗೆ ಹೋಗುತ್ತೆ..? ಈ ಸೃಷ್ಟಿಯ ರಹಸ್ಯ ಏನು? ನಾವು ಯಾತಕ್ಕಾಗಿ ಹುಟ್ತೀವಿ, ಯಾಕೆ ಸಾಯ್ತೀವಿ..? ಇದ್ನೆಲ್ಲಾ ಮಾತಾಡಿ ದಣಿದಿದ್ದೊ! ಈ ಬಗ್ಗೆ ನಮ್ಮ ಮಧ್ಯ ಇದ್ದಿದ್ದು ಕೆಲವು ಸಿದ್ಧಾಂತಗಳು ಅಷ್ಟೆ. ದೇವರು, ಜೀವ, ಹುಟ್ಟು, ಸಾವು, ಕರ್ಮ –ಎಲ್ಲಾ ಸಿದ್ಧಾಂತಗಳು. ಅವನ್ನು ಯಾರೂ ಈವರೆಗೆ ಪ್ರಮಾಣಿಸಿಲ್ಲ. ಕಣ್ಣಿಗೆ ಕಾಣದ, ಅನುಭವಕ್ಕೆ ಬರದ ಅವ್ನೆಲ್ಲಾ ನಂಬೋದು ನಮಗಾಗಿರಲಿಲ್ಲ. ಅದಕ್ಕೇ ಕೊನೆಗೆ ನಮ್ಮಿಬ್ಬರಲ್ಲಿ ಒಂದು ಕರಾರು ಆಗಿತ್ತು ನೆನಪಿದೆಯಾ..? ನೆನಪಿರಲೇ ಬೇಕು! ಈ ವಿಷಯ ಹೇಗೆ ಮರೆಯೋಕೆ ಸಾಧ್ಯ..? ನಮ್ಮಿಬ್ಬರಲ್ಲಿ ಯಾರು ಮೊದಲು ಸತ್ತರೂ ವಾಪಸ್ಸು ಬಂದು ಆ ಅನುಭವ ಕುರಿತು ಹೇಳಬೇಕು ಅಂದುಕೊಂಡಿದ್ದೆವಲ್ಲ…? ಮರ್ತುಹೋಯ್ತಾ..? ನಾನು ದೆವ್ವವಾಗಿ ಬಂದಿದೀನಿ ಅಂದ್ಕೊಂಡಿದ್ದೀಯಾ..?’

ಎದುರಿಗಿದ್ದ ಆ ಶಾಮಣ್ಣನ ಆಕೃತಿ ಹೇಳುತ್ತಿತ್ತು. ರಂಗಣ್ಣನ ಹೆದರಿಕೆ ಕೊಂಚ ಕಮ್ಮಿಯಾಯಿತು! ಹೌದು, ಅದರ ಬಗೆಗೆ ಎಷ್ಟೊಂದು ಮಾತಾಡಿದ್ದೆವಲ್ಲ..? ಈಗ ನಾನೇಕೆ ಹೆದರಬೇಕು..? ಶಾಮಣ್ಣ ಸತ್ತಿದ್ದಾನೆ ನಿಜ! ಈಗ ಅವನ ಆತ್ಮವೋ ಏನೋ ಬಂದಿದೆ..!
‘ಇಲ್ಲ ಮರೆತಿಲ್ಲ..’ ರಂಗಣ್ಣ ಕ್ಷೀಣ ದನಿಯಲ್ಲಿ ಹೇಳಿದ. ಬಾಯಿ ಒಣಗುತ್ತಿತ್ತು.
‘ಗುಡ್. ಮೊನ್ನೆ..ನನ್ನ ಸಾವಿನ ಅನುಭವ ಹೇಳ್ತೀನಿ ಕೇಳು. ರಾತ್ರಿ..ನಿದ್ರೆಯಲ್ಲಿದ್ದಾಗ ಏನೋ ಸಂಕಟವಾದಂತಾಯಿತು. ಯಾರೋ ನನ್ನನ್ನ ಹಾಸಿಗೆಯಿಂದ ಎಳೆದಂತಾಯಿತು. ಆ ಎಳೆತಕ್ಕೆ ನಾನು ಎದ್ದೆ. ಆಶ್ಚರ್ಯವಾಗಿತ್ತು! ನಾನು ಹತ್ತಿಯಷ್ಟು ಹಗುರವಾಗಿದ್ದೆ! ಶರೀರಕ್ಕೆ ಭಾರವೇ ಇಲ್ಲವೇನೋ ಎನ್ನುವಂತೆ! ಹಾಸಿಗೆಯಲ್ಲಿ ಕುಳಿತು ಕೆಲವು ಕ್ಷಣಗಳ ನಂತರ ಮಂಚದಿಂದ ಕೆಳಕ್ಕಿಳಿದು ಹಿಂದೆ ತಿರುಗಿ ನೋಡಿದೆ. ನನ್ನ ಪತ್ನಿ ಚೆನ್ನಾಗಿ ನಿದ್ರಿಸುತ್ತಿದ್ದಳು. ಮರುಕ್ಷಣವೇ ಅವಳ ಪಕ್ಕ ನಾನೂ ಮಲಗಿರುವುದು ಕಂಡಿತು! ಎಲಾ..ನಾನು ಮಂಚದ ಪಕ್ಕದಲ್ಲಿ ನಿಂತಿರುವೆ..ಮತ್ತೆ ಅಲ್ಲಿ ನಾನು ಮಲಗಿರುವೆ! ಎಂತಾ ಗೊಂದಲ ಅಂತೀಯಾ..? ಆಗಲೇ ಏನೋ ಅನುಮಾನ ನಾವು ಸಾವಿನ ಬಗೆಗೆ ಓದಿದ್ದೆಲ್ಲಾ ನೆನಪಾಯಿತು! ತಕ್ಷಣವೇ ಅರಿವಾಯಿತು..ನಾನು ನನ್ನ ದೇಹದಿಂದ ಈಚೆ ಬಂದಿದ್ದೀನಿ ಎಂದು! ಅಂದರೆ ಆತ್ಮನಾಗಿ ನಾನು ದೇಹ ತೊರೆದಿದ್ದೆ! ಯಾರು ನನ್ನನ್ನು ದೇಹದಿಂದ ಈಚೆ ಎಳೆದರು ಗೊತ್ತಾಗಲಿಲ್ಲ! ಅದೊಂದು ಶಕ್ತಿ ಎನ್ನಿಸಿತು. ನಾನು ಮತ್ತೆ ನನ್ನ ದೇಹದ ಒಳಗೆ ಹೋಗÀಲು ಪ್ರಯತ್ನಿಸಿದೆ! ಸಾಧ್ಯವಾಗಲಿಲ್ಲ! ತಿಪ್ಪರಲಾಗ ಹಾಕಿದರೂ ಸಾಧ್ಯವಾಗಲಿಲ್ಲ! ಬೀಗ ಹಾಕಿದ ಮನೆಗೆ ಹೇಗೆ ಪ್ರವೇಶ ಮಾಡಲಾಗುವುದಿಲ್ಲವೋ ಹಾಗಾಯಿತು! ಬೇರೆ ದಾರಿಯಿಲ್ಲದೆ..ಪತ್ನಿಯನ್ನು ಏಳಿಸಲೆ ಎನ್ನಿಸಿತು. ಪಾಪ ಮಲಗಿದ್ದಾಳೆ..ಅವಳ ನಿದ್ರೆಯನ್ನೇಕೆ ಹಾಳು ಮಾಡಲಿ ಎಂದು ಈಚೆ ಬಂದೆ! ನಾನು ಗಾಳಿಯಲ್ಲಿ ಹಗುರಾಗಿ ತೇಲುತ್ತಿದ್ದೆ. ಅದು ಹೊಸ ಅನುಭವ. ಬಾಗಿಲು, ಗೋಡೆ ಯಾವುದೂ ನನಗೆ ತಡೆಯಾಗಿರಲಿಲ್ಲ. ಎಲ್ಲದರ ಮೂಲಕವೂ ಹೋಗಲು ಸಾಧ್ಯವಾಗಿತ್ತು. ಅಸಾಧ್ಯ ವೇಗದಲ್ಲಿ ಹಕ್ಕಿಯಂತೆ ಹಾರಾಡಲು ಸಾಧ್ಯವಾಗಿತ್ತು. ಇಡೀ ಊರನ್ನೆಲ್ಲಾ ಒಂದು ಸುತ್ತಿ ಬಂದೆ. ನಿನ್ನ ಮನೆಗೂ ಬಂದು ನೋಡಿ ಹೋದೆ. ವಾಪಸ್ಸು ಹೋಗುವಷ್ಟರಲ್ಲಿ ನನ್ನ ಮನೆಯ ಚಿತ್ರವೇ ಬದಲಾಗಿತ್ತು!!

ಪತ್ನಿ ಮಕ್ಕಳು ಅಳುತ್ತಿದ್ದರು. ಅಕ್ಕ-ಪಕ್ಕದ ಮನೆಯವರೆಲ್ಲಾ ಬಂದಿದ್ದರು. ಡಾಕ್ಟರು ತಪಾಸಣೆ ಮುಗಿಸಿ, ನಾನು ಸತ್ತಿರುವುದು ತಿಳಿಸಿ ಆಚೆ ಹೋಗುತ್ತಿದ್ದರು!
‘ಪಕ್ಕದಲ್ಲೇ ಮಲಗಿದ್ದೆ! ಯಾವಾಗ ಹೋದರೋ ಗೊತ್ತಾಗಲೇ ಇಲ್ಲ..’ ಪತ್ನಿ ಬಿಕ್ಕಳಿಸಿ ಅಳುತ್ತಿದ್ದಳು.
‘ಆಳಬೇಡ. ನಾನಿನ್ನೂ ಬದುಕಿದ್ದೇನೆ..ಆದರೆ ದೇಹದಲ್ಲಿ ಅಲ್ಲ..ಆತ್ಮವಾಗಿ’ ಎಂದೆ. ಆದರೆ ನನ್ನ ಮಾತು ಅವಳಿಗೆ ಕೇಳಿಸುತ್ತಿರಲಿಲ್ಲ. ನಾನು ಅವಳ ಕಣ್ಣೀರು ಒರೆಸಲು ಹೋದೆ, ಆದರೆ ಅವಳನ್ನುಸ್ಪರ್ಷಿಸಲು ಸಾಧ್ಯವಾಗಲಿಲ್ಲ. ಬಹುಶಃ ನಾನು ಸ್ಥೂಲ ಶರೀರದಿಂದ ಸೂಕ್ಷ್ಮ ಶರೀರಾವಸ್ಥೆಗೆ ಬಂದಿದ್ದೆ. ನನ್ನ ಕತೆ ಮುಗಿದಿತ್ತು! ನನಗೇನೂ ದುಃಖವಾಗಲಿಲ್ಲ. ಮೊದಲಿಗಿಂತಲೂ ಹೆಚ್ಚು ಆರಾಮವಾಗಿದ್ದೆ. ಬದುಕಿದ್ದಾಗ ಸ್ವಲ್ಪ ಶ್ರಮವಾದರೂ ಹೃದಯದ ತೊಂದರೆಯಿಂದ ಏದುಸಿರು ಬಿಡುತ್ತಿದ್ದೆ! ಈಗ ಶ್ರಮವೂ ಇಲ್ಲ! ಬೆವರೂ ಇಲ್ಲ! ಹಗುರ! ಹತ್ತಿಯಂತೆ! ಒಂದೇ ಒಂದು ತೊಂದರೆಯೂ ಇಲ್ಲ! ಆದರೆ ನನ್ನ ಸಂಸಾರ ನೋಡಿ ದುಃಖವಾಗುತ್ತಿತ್ತು! ನಾನಿಲ್ಲದೆ ಅವರಿಗೆ ಎಷ್ಟೊಂದು ತೊಂದರೆ..! ಮುಖ್ಯವಾಗಿ ನನ್ನ ಪತ್ನಿಗೆ! ಮಕ್ಕಳೆಲ್ಲಾ ಸೆಟ್ಲಾಗಿದ್ದಾರೆ. ಸೊಸೆ ಮನೆಯಲ್ಲಿದ್ದಾಳೆ. ಮಗಳು ವಿದೇಶದಲ್ಲಿದ್ದಾಳೆ. ಎಲ್ಲಾ ಸರಿ ಆದರೆ ಹೆಂಡತಿ ಇಳಿವಯಸ್ಸಿನಲ್ಲಿ ಒಂಟಿಯಾದಳು, ಅತಂತ್ರಳಾದಳು ಎಂದು ದುಃಖವಾಗುತ್ತಿದೆ.

ನೆನ್ನೆ ನನ್ನ ದೇಹದ ಅಂತ್ಯಸಂಸ್ಕಾರವಾಯಿತು. ನೀನೂ ಬಂದಿದ್ದೆ! ಆ ದೇಹ ಹೋಗಿದ್ದಕ್ಕೆ ನನಗೆ ಸಂಕಟವಾಗಲಿಲ್ಲ! ಕೆಲಸಕ್ಕೆ ಬಾರದ ಆ ದೇಹದಿಂದೇನು ಪ್ರಯೋಜನ. ಅದನ್ನು ನಾನು ಮತ್ತೆ ಧರಿಸುವಂತಿರಲಿಲ್ಲ! ನನ್ನ ಹೆಂಡತಿಯ ಗೋಳು ಮುಗಿಲು ಮುಟ್ಟಿತ್ತು. ನಾನು ಅಸಹಾಯಕ. ಏನೂ ಮಾಡಲಾರದವನಾಗಿದ್ದೆ!

ಮುಂದೆ ಏನು ಗೊತ್ತಿಲ್ಲ! ದೇಹದಿಂದ ಈಚೆ ಬಂದ ಮೇಲೆ ಒಂಟಿ ಜಗತ್ತು! ಇದೇ ಹೆದರಿಕೆ ಹುಟ್ಟಿಸುವಂತಾದ್ದು! ಒಂಟಿಯಾಗಿ ಹೀಗೆ..ಎಷ್ಟು ಕಾಲ ಇರಬೇಕು..? ಏನು ಮಾಡಬೇಕು..? ಯಾವುದೂ ಗೊತ್ತಾಗುತ್ತಿಲ್ಲ. ಎಲ್ಲಾ ಕಂಡರೂ ಯಾವುದನ್ನೂ ಸ್ಪರ್ಷಿಸಲಾಗುತ್ತಿಲ್ಲ. ಎಲ್ಲರನ್ನು ಕಂಡರೂ ಸಂಪರ್ಕ ಮಾಡಲಾಗುತ್ತಿಲ್ಲ! ಯಾರನ್ನೂ ಮಾತಾಡಿಸಲಾಗುತ್ತಿಲ್ಲ! ಈ ವಿರಾಟ್ ವಿಶ್ವದಲ್ಲಿ ಒಬ್ಬಂಟಿಯಾಗಿಬಿಟ್ಟಿದ್ದೀನಿ. ಇವತ್ತು ಸಂಜೆ ಪಾರ್ಕಿನಲ್ಲಿ ನಿನ್ನನ್ನು ಕರೆದೆ. ಆಗ ಶ್ರಮಪಟ್ಟು ನಿನ್ನ ಮುಂದೆ ನಿಲ್ಲುವ ಪ್ರಯತ್ನ ಮಾಡಿದೆ. ಬಹಳ ಶ್ರಮಿಸಿದ್ದಕ್ಕೆ ಕ್ಷಣಕಾಲ ಮಾತ್ರ ಒಂದು ರೂಪವಾಗಿ ನಿನ್ನ ಬೆನ್ನ ಹಿಂದೆ ಕಾಣಿಸಿದೆ! ಆದರೆ ಮರುಕ್ಷಣ ಕರಗಿಬಿಟ್ಟೆ! ಮತ್ತೆ ಪ್ರಯತ್ನಿಸಿದೆ! ಎರಡನೆ ಸಲವೂ ಹೀಗೇ ಅಯಿತು! ಮತ್ತೆ ಆ ಪ್ರಯತ್ನ ಬಿಟ್ಟೆ. ನಿನ್ನನ್ನು ಹೇಗೆ ಸಂಪರ್ಕಿಸಲೆಂದು ಪ್ರಯತ್ನಿಸುತ್ತಿದ್ದೆ. ಕೊನೆಗೆ ನಿನ್ನ ಕನಸಿನಲ್ಲು ಸೂಕ್ಷ್ಮ ರೂಪದಲ್ಲಿ ಹೋದರೆ ಹೇಗೆ ಎಂಬ ಯೋಚನೆ ಬಂತು ಹಾಗೇ ಮಾಡಿದೆ. ಆದರೆ ನೀನು ಹೆದರಿ ಎದ್ದು ಬಿಟ್ಟೆ! ಮತ್ತೆ ಪ್ರಯತ್ನಿಸುತ್ತಿದ್ದೇನೆ. ಇಷ್ಟು ಹೇಳಲು ಸಾಧ್ಯವಾದುದಕ್ಕೆ ಸಮಾಧಾನ. ನಾನು ನಿನಗೆ ಮಾತು ಕೊಟ್ಟಿದ್ದೆ. ಸತ್ತ ಮೇಲೆ ಸಾಧ್ಯಮಾಡಿಕೊಂಡು ಸಂಪರ್ಕಿಸುತ್ತೇನೆ ಎಂದು. ಮಾತು ಉಳಿಸಿಕೊಂಡಿದ್ದೇನೆ..ಮತ್ತೆ..ಅರೆ..ಯಾರೋ ನನ್ನ ಕಡೆಗೆ ಬರುತ್ತಿದ್ದಾರೆ! ಅವರನ್ನು ನೋಡೋಕೆ ಸಂತೋಷವಾಗುತ್ತಿದೆ! ಇಷ್ಟು ಕಾಲ ಒಂಟಿಯಾಗಿದ್ದೆ! ಅವರೂ ನನ್ನಂತೆ..ಸೂಕ್ಷ್ಮ ಶರೀರಿ! ಆದರೆ ಅವರ ಮುಖದಲ್ಲಿ ಬೆಳಕಿದೆ. ಅವರ ಹಿಂದೆಯೂ ಪ್ರಕಾಶಮಾನವಾದ ಆದರೆ ಪ್ರಶಾಂತವಾದ ಬೆಳಕು ಕಾಣುತ್ತಿದೆ. ಅವರು ನನ್ನನ್ನು ಕರೆಯುತ್ತಿದ್ದಾರೆ! ಮಾತಿನಿಂದ ಅಲ್ಲ! ಭಾವದಿಂದ..ನನಗರಿಯದೆ ಅವರತ್ತ ತೇಲಿ ಹೋಗುತ್ತಿರುವೆ. ಅವರು ಯಾರು ಗೊತ್ತಿಲ್ಲ..ದೇವರೋ..ಇಲ್ಲಾ ದೇವತೆಯೋ..ಅವರು ನನ್ನನ್ನು ಎಲ್ಲಿಗೋ ಕರೆದೊಯ್ಯುವಂತಿದೆ..ವಿದಾಯ ಮಿತ್ರ..ವಿದಾಯ..’

‘ಶಾಮಣ್ಣ, ಶಾಮಣ್ಣಾ..ಹೋಗ್ಬೇಡ ನಿಂತ್ಕೋ..ಇನ್ನೂ ನಾನು ಕೇಳಬೇಕಾದದ್ದು ಇದೆ..ಈಗ್ಲೇ ಹೋಗ್ಬೇಡ..ಪ್ಲೀಸ್..’
ರಂಗಣ್ಣ ಬೇಡಿಕೊಂಡರು.
‘ರೀ..ಏನದು..ಯಾರಿಗೆ ಹೇಳ್ತಿದ್ದೀರಾ..ಯಾವಾಗ ಬಂದು ಮಲಗಿದಿರಿ..?’
ಒಳಗಿನಿಂದ ಬಂದ ಪತ್ನಿ ಕೇಳಿದಾಗ ಸೋಫಾದಲ್ಲಿ ಮಲಗಿದ್ದ ರಂಗಣ್ಣ ಕಣ್ಣು ತೆರೆದರು.
‘ಕನಸು..ಮತ್ತೆ ಕನಸು ಬಿದ್ದಿತ್ತು..’
‘ಶಾಮಣ್ಣ ಬಂದಿದ್ದರೆ..?’
‘ಬಂದಿದ್ದರು..ಇನ್ನು ಬರೋದಿಲ್ಲ..’ ಎನ್ನುತ್ತಾ ರಂಗಣ್ಣ ಎದ್ದರು.
ಲಕ್ಷ್ಮಿ ಗಾಬರಿಯಿಂದ ಪತಿಯನ್ನು ನೋಡಿದರು.
ರಂಗಣ್ಣನ ಮುಖದಲ್ಲೀಗ ಗಾಬರಿಯಲ್ಲಿರಲಿಲ್ಲ, ಸಮಾಧಾನವಿತ್ತು. ನಿಧಾನಕ್ಕೆ ಸೋಫಾದಿಂದ ಎದ್ದು ದೇವರ ಮನೆಯತ್ತ ಹೆಜ್ಜೆ ಹಾಕಿದರು ರಂಗಣ್ಣ.
-ಶಿವಶಂಕರ್‌ ಎಸ್.‌ ಜಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x