ಕಥಾಸಂಗಮ:ವಾಸುಕಿ ರಾಘವನ್

ಪುಟ್ಟಣ್ಣ ಕಣಗಾಲ್ ಒಬ್ಬ ದೈತ್ಯ ಪ್ರತಿಭೆ. ನಿರ್ದೇಶಕನ ಸ್ಥಾನಕ್ಕೆ ಸಿಗಬೇಕಾದ ಮಾನ್ಯತೆ ತಂದುಕೊಟ್ಟವರು. ಸಾಮಾನ್ಯವಾಗಿ ಹೀರೋಗಳಿಂದ ಚಿತ್ರಗಳನ್ನು ಗುರುತಿಸುವ ವಾಡಿಕೆ ನಮ್ಮಲ್ಲಿ. ಆದರೆ “ಎಡಕಲ್ಲು ಗುಡ್ಡದ ಮೇಲೆ” ಚಂದ್ರಶೇಖರ್ ಪಿಚ್ಚರ್ ಅಂತ ಆಗಲೀ, “ಮಾನಸ ಸರೋವರ” ಶ್ರೀನಾಥ್ ಪಿಚ್ಚರ್ ಅಂತಾಗ್ಲೀ ಯಾರೂ ಹೇಳಲ್ಲ. ಅವೆಲ್ಲ ಗುರುತಿಸಿಕೊಳ್ಳೋದು ಪುಟ್ಟಣ್ಣ ಅವರ ಫಿಲಂಗಳು ಅಂತಲೇ!

ಪುಟ್ಟಣ್ಣ ಅವರ ಅತ್ಯುತ್ತಮ ಚಿತ್ರಗಳು ಅನ್ನೋ ವಿಷಯ ಬಂದಾಗ ಸಾಕ್ಷಾತ್ಕಾರ, ಗೆಜ್ಜೆ ಪೂಜೆ, ಶರಪಂಜರ, ರಂಗನಾಯಕಿ, ನಾಗರಹಾವು, ಶುಭಮಂಗಳ, ಮಾನಸಸರೋವರ – ಇವು ಸಾಮಾನ್ಯವಾಗಿ ಹೆಸರಿಸಲ್ಪಡುತ್ತವೆ! ಅವಕ್ಕೆಲ್ಲಾ ಆ ಅರ್ಹತೆ ಇದೆ ಕೂಡ. ಆದರೆ ಅವರ ಈ ಒಂದು ಚಿತ್ರಕ್ಕೆ ಸಿಗಬೇಕಾದಷ್ಟು ಮಾನ್ಯತೆ ಸಿಕ್ಕಿಲ್ಲ. ಅದೇ “ಕಥಾ ಸಂಗಮ”.

ಇದೊಂದು ಆಂಥಾಲಜಿ ಫಿಲಂ. ಆಂಥಾಲಜಿ ಫಿಲಂ ಅಂದರೆ ಹಲವಾರು ಕಿರುಚಿತ್ರಗಳನ್ನ ಒಳಗೊಂಡ ಚಿತ್ರ. ಕೆಲವು ಸಲ ಒಂದು ವಿಷಯದ ಮೇಲೆ ಆಧರಿಸಿರುತ್ತವೆ ಅನ್ನೋದು ಬಿಟ್ರೆ ಒಂದಕ್ಕೊಂದು ಸಂಬಂಧವಿರದ ಭಿನ್ನ ಚಿತ್ರಗಳು. ಮೂರು ಕಿರುಚಿತ್ರಗಳ ಸಂಗಮವಾದ “ಕಥಾ ಸಂಗಮ” ಅಂತಹ ಇನ್ನೊಂದು ಚಿತ್ರ ಕನ್ನಡದಲ್ಲಿ ಬಂದ ನೆನಪು ನನಗಿಲ್ಲ. ತುಂಬಾ ಖುಷಿ ಕೊಟ್ಟಿದ್ದು ಈ ಚಿತ್ರವನ್ನು ಮಾಡಿರುವ ಉದ್ದೇಶ – ಅದೇನಪ್ಪಾ ಅಂದ್ರೆ ಕನ್ನಡದ ಸಣ್ಣಕಥೆಗಳ ಬರಹಗಾರರನ್ನ ಚಿತ್ರಪ್ರೇಮಿಗಳಿಗೆ ಪರಿಚಯಿಸೋದು. ಪ್ರತೀ ಕಥೆಗೂ ಮುನ್ನ ಪರದೆಯ ಮೇಲೆ ಬರುವ ಪುಟ್ಟಣ್ಣ ಅತ್ಯಂತ ಸ್ಪಷ್ಟತೆಯಿಂದ ನಿಖರವಾಗಿ ಮಾತನಾಡಿದ್ದಾರೆ, ಹಾಗು ಆ ಕಥೆಯ ಬರಹಗಾರರನ್ನೂ ತೆರೆಯ ಮೇಲೆ ಕರೆತಂದು ಕಿರುಪರಿಚಯ ಮಾಡಿಸಿದ್ದಾರೆ!

ಹಂಗು

ಈ ಕಥೆಯ ಬರಹಗಾರರು ಗಿರಡ್ಡಿ ಗೋವಿಂದರಾಜ್. ಕಥಾನಾಯಕ ಒಬ್ಬ ಕಾಲೇಜ್ ಪ್ರೊಫೆಸರ್. ಬಡವ, ಆದರೆ ತುಂಬಾ ಆದರ್ಶವಾದಿ. ಊರ ಸಾಹುಕಾರ ತನ್ನ ಮಗನಿಗೆ ಹೆಚ್ಚು ಅಂಕ ಕೊಡುವಂತೆ ಇವನಿಗೆ ಹಲವಾರು ರೀತಿಯಲ್ಲಿ ಪ್ರಭಾವ ಬೀರಿ ಸೋಲುತ್ತಾನೆ. ಆದರೆ ಪ್ರೊಫೆಸರ್ ಮಗುವಿಗೆ ಅನಾರೋಗ್ಯದ ಸಂದರ್ಭದಲ್ಲಿ ಇದೇ ಸಾಹುಕಾರನ ಸಹಾಯ ಪಡೆಯಬೇಕಾದ ಸನ್ನಿವೇಶ ಒದಗುತ್ತದೆ. ಪ್ರೊಫೆಸರ್ ಇತ್ತ ಆದರ್ಶವನ್ನೂ ಬಿಡಲಾರದೆ, ಅತ್ತ ಆ ಋಣದ ಹಂಗಿನ ಭಾರವನ್ನು ಹೊರಲಾರದೆ ಪರಿತಪಿಸುತ್ತಾನೆ. ಕಥೆ ಅತ್ಯಂತ ಸರಳವಾಗಿದ್ದರೂ ಹಿಡಿದಿಡುತ್ತದೆ, ಕಾಡುತ್ತದೆ. ಪ್ರೊಫೆಸರ್ ಆಗಿ ಜಿ.ಕೆ.ಗೋವಿಂದರಾವ್ ಮತ್ತು ಸಾಹುಕಾರನ ಪಾತ್ರದಲ್ಲಿ ಅಂಕಲ್ ಲೋಕನಾಥ್ ಅಭಿನಯ ನೆನಪಿನಲ್ಲಿ ಉಳಿಯುತ್ತೆ.

ಅತಿಥಿ

ಈ ಕಥೆಯ ಬರಹಗಾರ್ತಿ ವೀಣಾ. ಚಿತ್ರದ ನಾಯಕಿ ಅವಿವಾಹಿತ ವೃದ್ಧೆ. ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಹಾಗು ಹಾಸ್ಟೆಲ್ಲಿನ ವಾರ್ಡನ್. ತುಂಬಾ ಸ್ವಾಭಿಮಾನಿ, ಮುಂಗೋಪಿ, ಹೆಣ್ಣು ಗಂಡಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋ ನಂಬಿಕೆ ಹೊಂದಿದವಳು ಮತ್ತು ಅದನ್ನು ಹೆಜ್ಜೆಹೆಜ್ಜೆಯಲ್ಲೂ ಸಾಧಿಸಿ ತೋರಿಸಲು ಹವಣಿಸುವವಳು. ಜೀವನದ ಸಂಧ್ಯಾಕಾಲದಲ್ಲಿ, ತಾನು ಯೌವನದಲ್ಲಿ ತನ್ನನ್ನು ಮೆಚ್ಚಿದ್ದ ಹುಡುಗನನ್ನು ತಿರಸ್ಕರಿಸಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ಅದೂ ಹೆಣ್ಣು ಗಂಡಿನ ಸಹಾಯವಿಲ್ಲದೆ ಸಂತೋಷವಾಗಿ ಬದುಕಬಹುದು ಮತ್ತು ಸಾಧನೆಗಳನ್ನು ಮಾಡಬಹುದು ಅಂತ ಪ್ರೂವ್ ಮಾಡಕ್ಕೋಸ್ಕರ. ಈ ಕಥೆ ನನಗೆ ಇದು ಅಷ್ಟು ಹಿಡಿಸಲಿಲ್ಲ. ಅಷ್ಟೊಂದು ಓದಿಕೊಂಡಿರುವ ನಾಯಕಿಗೆ ವಿನಾಕಾರಣ ಆ ಮಟ್ಟಿಗಿನ ಪುರುಷ ದ್ವೇಷಕ್ಕೆ ಕಾರಣ ಏನು ಅಂತ ಗೊತ್ತೇ ಆಗೋದಿಲ್ಲ. ಆಮೇಲೆ ಪ್ರತೀ ಸೀನಲ್ಲೂ “ಹೆಣ್ಣು ವರ್ಸಸ್ ಗಂಡು” ಮಾತುಗಳ ಓವರ್ಡೋಸ್ ಆಗಿದೆ. ಇದರಲ್ಲಿ ಸರೋಜಾದೇವಿ ಮತ್ತು ಕಲ್ಯಾಣ್ ಕುಮಾರ್ ಮುಖ್ಯ ತಾರಾಗಣ ಇದೆ.

ಮುನಿತಾಯಿ

ಈ ಕಥೆಯ ಬರಹಗಾರರು ಈಶ್ವರ್ ಚಂದ್ರ. ಮನುಷ್ಯ ಸಂಬಂಧಗಳು ಎಷ್ಟು ಸೂಕ್ಷ್ಮ ಅಂತ ತಿಳಿಸೋ ಈ ಹೃದಯವಿದ್ರಾವಕ ಕಥೆ ಈ ಚಿತ್ರದ ಬೆಸ್ಟ್ ಶಾರ್ಟ್ ಫಿಲಂ. ಮುನಿತಾಯಿ ಕುರುಡಿ. ಆದರೂ ಎಲ್ಲ ಕೆಲಸಗಳನ್ನೂ ತಾನೇ ಮಾಡುವ ಚಟುವಟಿಕೆಯ ಸ್ವಭಾವ. ಅವಳನ್ನು ಮೆಚ್ಚಿದ ಚೆನ್ನಪ್ಪ ಮಾಡುವೆ ಮಾಡಿಕೊಂಡು ಅವಳನ್ನು ತನ್ನೂರಿಗೆ ಕರೆದುಕೊಂಡು ಹೋಗ್ತಾನೆ. ಜೂಜುಕೋರ, ಕುಡುಕ ಕೊಂಡಾಜಿಯ ಜೊತೆ ಸೇರಿಕೊಂಡು ಹಾಳಾಗಿ ಹೋಗುತ್ತಿದ್ದ ಹುಡುಗ ತಿಮ್ಮರಾಯಿನ ಮುನಿತಾಯಿಗೆ ಸಹಾಯಕ್ಕೆ ಅಂತ ಕರೆತರುತ್ತಾನೆ. ಆಕೆ ಇವನನ್ನು ಮನೆಯವನ ಥರ ನೋಡಿಕೊಳ್ಳೋದು ಅಷ್ಟೇ ಅಲ್ಲದೆ ಅವನಿಗೆ ಬುಟ್ಟಿ ಹೆಣೆಯುವ ಕೆಲಸ ಹೇಳಿಕೊಡ್ತಾಳೆ. ಆದರೆ ನಾಯಿ ಬಾಲ ಯಾವತ್ತಿದ್ರೂ ಡೊಂಕು ಅನ್ನೋ ಥರ ತಿಮ್ಮರಾಯಿ ಅವಳ ಸ್ನಾನ ಮಾಡೋದನ್ನ ಕದ್ದು ನೋಡ್ತಾನೆ. ಕೊಂಡಾಜಿಯನ್ನು ಆ ಮನೆಗೆ ಕರೆತಂದು ಅವಳ ಅತ್ಯಾಚಾರಕ್ಕೆ ಕಾರಣ ಆಗ್ತಾನೆ. ಅಷ್ಟು ಸಾಲದು ಅನ್ನುವಂತೆ ಈ ವಿಷಯದ ಬ್ಲಾಕ್ಮೇಲ್ ಮಾಡಿ ಹಣ ಕೀಳುತ್ತಾನೆ. ಮುನಿತಾಯಿಯಾಗಿ ಆರತಿ, ಕೊಂಡಾಜಿಯಾಗಿ ರಜನೀಕಾಂತ್, ತಿಮ್ಮರಾಯಿ ಆಗಿ ಮಾಸ್ಟರ್ ಉಮೇಶ್ (ಎಂ.ಎಸ್.ಉಮೇಶ್) ಒಬ್ಬರಿಗಿಂತ ಒಬ್ಬರದು ಶ್ರೇಷ್ಠ ಅಭಿನಯ.

ಪುಟ್ಟಣ್ಣರ ಬಗ್ಗೆ

ಈ ಚಿತ್ರ ಬಂದಿದ್ದು 1975 ರಲ್ಲಿ. ಇದಕ್ಕೆ ಮುಂಚೆ ಪುಟ್ಟಣ್ಣ ಅವರು ಮೂರು ಕಲರ್ ಚಿತ್ರಗಳನ್ನ ಮಾಡಿದ್ರು. ಇದಾದ ಮೇಲೆ ಬಂದಿರುವ ಎಲ್ಲಾ ಚಿತ್ರಗಳೂ ಕಲರ್ ಚಿತ್ರಗಳೇ. ಆದರೆ ಇದನ್ನ ಮಾತ್ರ ಕಪ್ಪುಬಿಳುಪಿನಲ್ಲಿ ತೆಗೆದಿದ್ದಾರೆ. ಬಜೆಟ್ ಕಮ್ಮಿ ಇತ್ತಾ ಅಥವಾ ಈ ಚಿತ್ರಪ್ರಕಾರಕ್ಕೆ ಕಪ್ಪುಬಿಳುಪು ಹೊಂದುತ್ತೆ ಅನ್ನೋ ಆಲೋಚನೆ ಇತ್ತಾ ಗೊತ್ತಿಲ್ಲ. ಆದರೆ ಕಪ್ಪು ಬೆಳಕಿನಲ್ಲಿ ಚಿತ್ರಿಸಿರುವ ಇದು ಪುಟ್ಟಣ್ಣ ಅವರ ಅತ್ಯಂತ ಪ್ರಯೋಗಾತ್ಮಕ ಚಿತ್ರ. ತುಂಬಾ ಜನ ಕನ್ನಡಿಗರು ಪುಟ್ಟಣ್ಣ ಅವರನ್ನು ‘ಯಾವ’ ವಿಚಾರದ ಬಗ್ಗೆ ಸಿನಿಮಾ ಮಾಡಿದ್ದಾರೆ ಅನ್ನೋ ವಿಷಯದಿಂದ ಇಷ್ಟ ಪಡ್ತಾರೆ. ಆದರೆ ಪುಟ್ಟಣ್ಣ ಅವರ ಗ್ರೇಟ್ನೆಸ್ ಇರೋದು ‘ಹೇಗೆ’ ತೆಗೆದಿದ್ದಾರೆ ಅನ್ನೋದರಿಂದ ಅಂತ ನನ್ನ ವೈಯಕ್ತಿಕ ಅಭಿಪ್ರಾಯ.

ಸಿನಿಮಾ ಬೇರೆಲ್ಲ ದೃಶ್ಯಮಾಧ್ಯಮಗಳಿಗಿಂತ ವಿಭಿನ್ನವಾದ ಮಾಧ್ಯಮ, ಅದಕ್ಕೆ ತನ್ನದೇ ಆದ ಬೇರೆಯ ಗ್ರಾಮರ್ ಇದೆ. ಇದನ್ನ ಪುಟ್ಟಣ್ಣ ಅವರಷ್ಟು ಚನ್ನಾಗಿ ಅರ್ಥ ಮಾಡಿಕೊಂಡ ಇನ್ನೊಬ್ಬ ನಿರ್ದೇಶಕರಿಲ್ಲ ಕನ್ನಡದಲ್ಲಿ. ಮನುಷ್ಯ ಸಂಬಂಧಗಳು, ತುಮುಲಗಳು, ಭಾವನೆಗಳು ಎಲ್ಲವನ್ನು ‘ವಿಶುಯಲ್’ ಆಗಿ ತೋರಿಸೋ ತಾಕತ್ತು ಇತ್ತು ಅವರಿಗೆ. “ಹಂಗು” ಚಿತ್ರದಲ್ಲಿ ಪ್ರೊಫೆಸರ್ ಗೆ ತನ್ನ ತಂಗಿಗೆ ಚಿನ್ನ ಸರ ಮಾಡಿಸಿಕೊಡೋ ಜವಾಬ್ದಾರಿ ಇದೆ – ಇದನ್ನ ಪಂಜರದ ಹಿಂದೆ ನಿಂತು ಬೇಡಿಕೊಳ್ಳೋ ತಂಗಿ, ಮರದ ಮೇಲಿಂದ ಗೋಗರೆಯುವ ಅಪ್ಪನ ಚಿತ್ರಣದಿಂದ ತೋರಿಸಿರುವುದು ವಿನೂತನವಾಗಿದೆ. ಹಾಗೆಯೇ ಉತ್ತರ ಪತ್ರಿಕೆ ಆಕಾಶದಲ್ಲಿ ಹಾರುತ್ತ ಬರೋದು ಅವನ ಋಣಭಾರ ತೋರಿಸಲು ಬಳಸಲಾಗಿದೆ. “ಅತಿಥಿ” ಚಿತ್ರದಲ್ಲಿ ನಾಯಕ ನಾಯಕಿಗೆ ಪಾರ್ಕಿನಲ್ಲಿ ಪ್ರಪೋಸ್ ಮಾಡಿದಾಗ ತನ್ನ ಕುರ್ಚಿಯಿಂದ ಎದ್ದು ಬೇರೆಡೆ ಕುಳಿತು, ಒಂದು ಕ್ಷಣ ಯೋಚಿಸಿ ಹಿಂತಿರುಗಿ ತನ್ನ ಹಳೆಯ ಕುರ್ಚಿಯಲ್ಲಿ ಕೂತುಕೊಳ್ತಾಳೆ. ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ ಅನ್ನೋದನ್ನ ಸಿನಿಮಾ ಭಾಷೆಯ ಮೂಲಕ ಎಷ್ಟು ಸಾಂಕೇತಿಕವಾಗಿ ಹೇಳಿದಂತೆ! ಇನ್ನು “ಮುನಿತಾಯಿ” ಚಿತ್ರದಲ್ಲಿ ಮುನಿತಾಯಿ ಸ್ನಾನ ಮಾಡೋದನ್ನ ಕದ್ದು ನೋಡೋ ಸೀನಲ್ಲಿ ಕ್ಯಾಮೆರಾ ಮುನಿತಾಯಿ ಮೈ ಮೇಲೆ ಹೋಗಲ್ಲ. ಕೇವಲ ತಿಮ್ಮರಾಯಿ ಮತ್ತು ಕೊಂಡಾಜಿ ಮುಖದ ಮೇಲೆ ಉಳಿಯುವ ಕ್ಯಾಮೆರಾ ಅವರ ಕಾಮುಕತೆಯನ್ನ, ಅವರ ವರ್ತನೆಯಿಂದ ಅವಳ ಬಾಳಿನಲ್ಲಿ ಉಂಟಾಗಲಿರುವ ಭಯಾನಕತೆಯನ್ನ ಅವರ ಮುಖದ ಮೇಲಿನ ಭಾವಗಳಿಂದ ವ್ಯಕ್ತಪಡಿಸುತ್ತಾರೆ.

ಪುಟ್ಟಣ್ಣ ಅವರು ಹೋಗಿ ಸುಮಾರು ಇಪ್ಪತ್ತೇಳು ವರ್ಷ ಆಗ್ತಾ ಬಂತು. ಆದರೆ ಈಗ್ಲೂ ಕನ್ನಡಿಗರ ಬಾಯಲ್ಲಿ ಬರೋದು ಅದೇ ಮಾತು – “ಛೇ, ಇವತ್ತು ಪುಟ್ಟಣ್ಣ ಇರಬೇಕಿತ್ತು…”

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
hipparagi Siddaram
hipparagi Siddaram
11 years ago

ನಿಜ ಸ್ವಾಮಿ…..ಇವತ್ತು ಪುಟ್ಟಣ್ಣ ಇರಬೇಕಿತ್ತು…..ಲೇಖನ ಚೆನ್ನಾಗಿದೆ…..

sharada moleyar
sharada moleyar
11 years ago

good

2
0
Would love your thoughts, please comment.x
()
x