ನಿತ್ಯೋತ್ಸವ ಮತ್ತು ನಾನು : ಉಷಾ ನರಸಿಂಹನ್

ಬದುಕಿನಲ್ಲಿ ಎಲ್ಲದಕ್ಕು ಮೊದಲೆಂಬುದಿರುತ್ತದೆ. ಭಾವಗೀತೆ ಕೇಳುವುದಕ್ಕು… ಸಾವಿರದೊಂಬೈನೂರ ಎಂಬತ್ತನೆ ಇಸವಿ. ನಮ್ಮ ಮನೆಗೆ ನಿತ್ಯೋತ್ಸವ ಕ್ಯಾಸೆಟ್ ತಂದರು. ಎಲ್ಲರ ಸಮಕ್ಷಮ ಟೇಪ್ ರೆಕಾರ್ಡರ್ ನಲ್ಲಿ ಹಾಕಿದರು. ನಾನು ಭಾವಗೀತೆಗಳನ್ನು ಕೇಳಿದ ಮೊದಲ ಬಾರಿಯದು. ಕವಿಯೇ ಕಾವ್ಯಸಾರಾಂಶ ಹೇಳಿದ ಪರಿ ಅನನ್ಯ. ಮನೋಜ್ಞ ಸಾಹಿತ್ಯ, ಸಂತುಲಿತ ರಾಗಸಂಯೋಜನೆ, ರತ್ನಮಾಲಾಪ್ರಕಾಶ್ ಅವರ ಮಧುಸಿಂಚಿತ ನುಣ್ದನಿ, ಮೈಸೂರು ಅನಂತಸ್ವಾಮಿ ಅವರ ಭಾವಪೂರ್ಣಗಾಯನ… ನಾನು ಹಾಡಿಗೆ ಪರವಶವಾದ ಮೊದಲ ಸಲವದು. ಬದುಕಿನಲ್ಲಿ ವಸಂತ ಅಡಿಯಿಡುತ್ತಿದ್ದ ರಮ್ಯಕಾಲದಲ್ಲಿದ್ದೆ! ನವಿರು, ಪುಳಕ, ತವಕಗಳಿಗೆ ಹಾತೊರೆಯುತ್ತಿದ್ದ ಮೈ ಮನಸ್ಸುಗಳಿಗೆ ನಿತ್ಯೋತ್ಸವದ ಎಲ್ಲ ಕವಿತೆಗಳು ಅಂದದ ಗಿಫ್ಟ್ ರಾಪರ್ನಲ್ಲಿ ತನ್ನ ಹೃದಯವನ್ನೇ ಇಟ್ಟು ಪ್ರೇಮಿ ಕೊಟ್ಟ ಮೊದಲ ಉಡುಗೊರೆಯಂತಿತ್ತು! ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ…ಹಾಡಿನ ವಿರಹದ ಬಿಸಿ ಎದೆಯನ್ನು ಹಾಯ್ದು ಹೊರಳೆಗಳಲ್ಲಿ ಹೊರಹೊಮ್ಮಿದ್ದಿದೆ.

‘ಆಸೆಗಳ ಹಿಂದಿನ ತುಳಿತಕ್ಕೆ ಹೊಲ ನನ್ನೀ ದೇಹ…ಬರುವೆಯೋ ಬಾರೆಯೋ ನೀನೆನ್ನುತಿದೇ ಸಂದೇಹ’ _ಈ ಸಾಲುಗಳು ಹ್ರದಯದ ಮ್ರದುಖಂಡಗಳನ್ನು ನುಲಿಸುತ್ತ ನನ್ನಿಡೀ ಮೈಮನಸ್ಸುಗಳನ್ನು ಹಾಡಿಗೆ ಸಂವಾದಿಯಾಗಿಸುತ್ತಿತ್ತು. ‘ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ ಕಣ್ಣಂಚಿನಾ ಕೊನೆಯ ಭಾವದಲ್ಲಿ’ ಎಂಬ ಗೀತೆಗೆ ಭಾವಕೋಶ ತುಂಬಿ ಕಂಬನಿಯಾಗಿ ಹರಿದಿದ್ದಿದೆ.’ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ’ಗೀತೆಯಲ್ಲಿ ನನ್ನದೇ ಬದುಕು ಧುತ್ತೆಂದು ಎದುರುನಿಂತಂತಾಗಿ, ಸೂಕ್ಷ್ಮ ಸಂಚಲನವೊಂದನ್ನು ನನ್ನೊಳಗೆ ಉಂಟುಮಾಡಿದ್ದನ್ನು ಮರೆಯಲಾದೀತೆ! ಬೆಣ್ಣೆ ಕದ್ದ ಕೃಷ್ಣನ ಹಾಡಿನ ಲಯ ಮಾರ್ದವಗಳಿಗೆ ಮನಸೋತು ವಿಸ್ಮಯದ ಲೋಕಕ್ಕೆ ಹೋಗಿ ಬಿಡುತ್ತಿದ್ದೆ. ಬೆಣ್ಣೆಗಳ್ಳ ನೀಲ ನಮ್ಮದೇ ಮನೆಯ ಮುದ್ದು ಮಗುವೆನ್ನಿಸುತ್ತಿತ್ತು.

ಯಾವ ಕವಿಸಮಯವೊಂದು ವೈಯಕ್ತಿಕತೆಯ ಗಡಿದಾಟಿ ಸಾರ್ವತ್ರಿಕವಾಗುವ ಧನ್ಯತೆ ಪಡೆವುದೋ ಅದೇ ಅಪ್ಪಟ ಕವಿತೆ! ‘ನನ್ನ ನಲವಿನ ಬಳ್ಳಿಮೈತುಂಬಿ ನಲಿವಾಗ’ಕವಿತೆ ನನ್ನನ್ನು ವಿಸ್ಮಿತಗೊಳಿಸುತಿತ್ತು. ನಿಸಾರರ ಗೀತೆಗಳೆಲ್ಲ ನನ್ನದೇ ಬದುಕನ್ನು, ಭಾವವನ್ನು ಕುರಿತಾದ್ದೆನಿಸುತ್ತಿತ್ತು. ನಿತ್ಯೋತ್ಸವ ನನ್ನೊಳಗಿನ ಮಧುರಭಾವಗಳ ಸರಿದಾಟದ ಸರಕನ್ನು ಕದ್ದುಕಟ್ಟಿದ ಲಾಲಿತ್ಯಪುಂಜಗಳೆಂದು ನನ್ನ ಯಾವತ್ತು ನಂಬಿಕೆಯಾಗಿತ್ತು. ಇರುಳಿನ ನೀರವದಲ್ಲಿ ಸಣ್ಣ ದನಿಯಲ್ಲಿ ನಿತ್ಯೋತ್ಸವದ ಗೀತೆಗಳನ್ನು ಹಾಕಿಕೊಂಡು, ನಿದ್ದೆ ಬರುವವರೆಗು … ಕೆಲಬಾರಿ ಇರುಳು ಸರಿಯುವವರೆಗು ಕೇಳಿದ ದಿನಗಳಿವೆ. ನಿತ್ಯೋತ್ಸವ ನನ್ನ ಅಂತರಂಗದ ಪಿಸುಮಾತು. ಮಹಾಮಧುರ ಘನಸಾರ. ಮಾರ್ದವತೆಯ ಮೊತ್ತ.ನಿಸಾರ್ ಅಹಮದ್ ನನ್ನ ಅತ್ಯಂತ ಪ್ರೀತಿಯ ಭಾವಗೀತೆಗಳ ಕವಿ. ನನ್ನೊಳಗೆ ಮಾರ್ದವತೆಯ ಮೊಗ್ಗರಳಿಸಿದವರವರು. ಮಧುರಕಂಪನಗಳ ಸವಿಸುಖವನ್ನು, ಎದೆಯ ನಿಜದನಿಯನ್ನು ಕೇಳಿಸಿದ್ದು ನಿತ್ಯೋತ್ಸವ.ನನ್ನ ಅಂತರಂಗದ ರುಚಿಯನ್ನು ಸಾಹಿತ್ಯಕ್ಕೆ ಸಜ್ಜುಗೊಳಿಸಿದವರು ನಿಸಾರ್ ಅಹ್ಮದ್.

ನಿಸಾರ್ ಸರ್, ಐ ಮಿಸ್ ಯೂ……….

ಉಷಾ ನರಸಿಂಹನ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಹೆಚ್‌ ಎನ್‌ ಮಂಜುರಾಜ್

ಉಷಾ ನರಸಿಂಹನ್‌ ಅವರು ಏನು ಬರೆದರೂ ಆಪ್ತವಾಗಿರುತ್ತದೆ ಮತ್ತು ಸುಪ್ತಾವಸ್ಥೆ ಜಾಗೃತವಾಗುತ್ತದೆ. ಅವರ ನೆನಪುಗಳ ಅವಿಸ್ಮರಣೀಯತೆ ಮತ್ತು ಭಾವನಾತ್ಮಕತೆಗಳನ್ನು ಓದಿದ ನಾವೂ ಅನುಭವಿಸುತ್ತೇವೆ.

ಬರೆಹಗಾರರಿಗೆ ನೆನಪು ಎಂಬುದು ಹರಿಗೋಲಿನಂತೆ. ಮೀಟುತಿರಬೇಕು; ಮೀಟದಂತಿರಬೇಕು, ದೋಣಿ ಸಾಗುತಿರಬೇಕು. ಹೀಗೆ ಅವರು ನಿನ್ನೆ ಮೊನ್ನೆ ಅನುಭವಿಸಿದ್ದೇನೋ ಎನ್ನುವಂತೆ ಅಷ್ಟು ಹಿಂದಿನ ವರುಷಗಳ ಸೊಬಗನ್ನು ಮೆಲುಕು ಹಾಕಿದ್ದಾರೆ. ತುಂಬ ಖುಷಿಯಾಯಿತು. ಅಭಿನಂದನೆ ಮತ್ತು ಧನ್ಯವಾದ ಮೇಡಂಗೂ ಮತ್ತು ಪಂಜು ಬಳಗಕ್ಕೂ………..

1
0
Would love your thoughts, please comment.x
()
x