ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 17 & 18): ಎಂ. ಜವರಾಜ್

-೧೭-
ಬಾಗಿಲು ಕಿರುಗುಟ್ಟಿತು
ನನ್ನ ದಿಗಿಲು
ಕಿರುಗುಟ್ಟಿದ‌ ಬಾಗಿಲ ಕಡೆಗೋಯ್ತು.
ಅಯ್ನೋರು ಬಗ್ಗಿ
ಹೊಸಿಲ ಮೇಲೆ ಕಾಲಿಟ್ಟು
ಆಚೀಚೆ ನೋಡ್ತ ಬೀಡಿ ತಗ್ದು ತುಟಿಗಿಟ್ಟು
ಕಡ್ಡಿ ಗೀರಿ ಬೀಡಿ ಮೊನೆಗೆ ಹಚ್ಚಿ
ಅದೇ ಕಡ್ಡಿ ಬೆಳಕಲ್ಲಿ
ನನ್ ಕಡೆ ತಿರುಗಿ
ಆ ಬೆಳಕು ನನ್ ಮೇಲೂ ಬಿದ್ದು
ಅಯ್ನೋರು ಹೊಸಿಲು ದಾಟಿ
ನನ್ನ ಮೆಟ್ಟಿ
ಬಲಗೈಲಿ ಸೂರು ಹಿಡಿದು
ಎಡಗೈಲಿ ಬೀಡಿ ಹಿಡಿದು
ಸೇದ್ತಾ ಹೊಗೆ ಬಿಡ್ತಾ ಇರೋವತ್ಲಿ
ಒಳಗೆ ಸವ್ವಿ
ಗುಕ್ಕಗುಕ್ಕನೆ ದುಮುಗುಡುತ
ಅಳ್ತಾ ಇರೋದು ಕೇಳ್ತಿತ್ತಲ್ಲೊ..

ಕಾಲಯ್ಯೋ..
ನೀ ಎಲ್ಲಿ ಹೋದ್ಯೋ..
ಶಿವ್ನೆ ಏನಪ್ಪಾ ಮಾಡ್ದೆ ನನ್ ಕಾಲಯ್ನ..

ಈ ಅಯ್ನೋರು
ನಿಂತಿದ್ದೋರು ಕುಂತ್ರು
ಆಚೀಚಿ ಮನೆ ಕಾಣ್ದು
ಗೇಣ್ಗೊಂದು ಮಾರ್ಗೊಂದು
ಯಾರ್ ಬಂದಾರು ಕೇಳಕ
ತಡ್ಕ ಮನಲಿ ಏನಿದ್ದದು ಅಂತ ಬಂದಾರು
ಈ ಅಯ್ನೋರು ಬರೋದು ಯಾರ್ಗು ಕಾಣ್ದ
ಆ ನನ್ ಕಾಲಯ್ಗು ಕಾಣ್ದ
ಆ ಕಾಲಯ್ನ ಮಗನ್ಗು ಕಾಣ್ದ
ಈ ಸವ್ವಿಗ
ಈ ಅಯ್ನೋರು ಹಿಂಗಿಂಗ ಅಂತ
ಈ ಮೊದುಲ್ಗ ಗೊತ್ತಿತ್ತಾ..
ಈ ವಿಚಾರ
ಆ ನನ್ ಕಾಲಯ್ಯನ್ಗು
ಈ ಮನೆ ಕುಲು ಪುತ್ರುನ್ಗು ತಿಳ್ದಿತ್ತಾ..
ಅಯ್ಯೊ ಶಿವ್ನೆ.

ಅಯ್ನೋರು ಬೀಡಿ ಮೋಟ ಎಸ್ದು
ಮೇಲೆದ್ದು ಮೋರಿ ದಾಟಿ
ಗಿರಿಕ್ಕು ಗಿರಿಕ್ಕು ಅಂತನ್ನಿಸಿ
ಸಂದಿ ಬುಟ್ಟು ಬೀದಿದಿಕ್ಕ ಬಂದಾಗ
ಈ ಅಯ್ನೋರ ರಭಸಕ್ಕೆ
ಬೀದಿಲಿರ ಧೂಳಲಿ ನಾ ಮುಳುಗಿ ಏಳುತ್ತಾ
ನಾ ಎದ್ದ ರಭಸಕ್ಕೆ ಆ ಧೂಳೂ ಮೇಲೇಳುತಾ
ಹಾಗೆ ಮೇಲೇಳುವ ಆ ಧೂಳು
ಉಟ್ಟ ಪಂಚೆ ಅಂಚಲೂ ಕೂರ್ತಾ
ಆ ಪಂಚೆ ಅಂಚೂ,

‘ಥೂ ಎಕ್ಕುಟ್ಟೋದ್ ಸೂಳೆ ಮಗನ
ಇವ್ನ ಸಂಗ್ಡದಿಂದ ಏನೇನ್ ಕೇಡೋ
ಥೂ ಹಲ್ಕ ಬಡ್ಡಿ ಮಗ’
ಅಂತ ವರಾತ ತೆಗಿತಲ್ಲಾ..

‘ಅದೇನ ನೀ ಅನ್ನದು’
‘ಅಲ್ಲ ನಿಂಗೊತ್ತಿಲ್ವ..’
‘ ನಿಂಗೊತ್ತಿರ ಅಸ್ಟು ನಂಗೊತ್ತಿಲ್ಲ ಕನಾ
ನಿ ಎಲ್ಲ ನೋಡಿದೈ
ನಾ ಈಚ ಬುಟ್ರ ಒಳಕ ಬರಗಿದ್ದಾ..
ನಿ ರಾಜ, ರಾಜ್ ಮಾರಾಜ..’
‘ಅಯ್ಯೊ ನಾ ಎಂತ ಮಾರಾಜ್ನೊ
ಈ ಕಣ್ಲಿ ನೋಡ್ಬಾರ್ದ ನೋಡಿ
ಕೇಳ್ಬಾರ್ದ ಕೇಳಿ ಸಾಕಾಗದ ಕನಾ..’
‘ಅಂದ್ರ ನೀ ಹೇಳದೇನಪಾ..’
‘ಮೆಟ್ಟೇ ಈ ಸವ್ವಿಗು ಕಾಲಯ್ಗು ಏನು ಇಲ್ಲ
ಈ ಸವ್ವಿ ದೇವಮ್ಮೊರ ತಂಗ ಮಗ್ಳು’
‘ಏನಂದ…’
‘ ಊ..


‘ಆ ದೇವಮ್ಮೋರು ಲಗ್ನ ಆದ ರಾತ್ರ
ವಸ್ಗ ಜಿನ..
ಚಂದ್ರಮ್ಮೋರೂ ಈ ಅಯ್ನೋರು ಕಾಣಿ..

‘ಅಯ್ನೋರೊವ್ವ ಶಂಕ್ರಮ್ಮೋರು ಶಾಪಾಕ್ತ
ದೇವಮ್ಮೋರ್ನ ಅಸ್ಟೊತ್ಗೆ ಎಬ್ಬುರ್ಸಿ
‘ಕುಲಗೆಟ್ಟವ್ರು
ನಿ ಇಲ್ಲಿದ್ರ ನಿ ಕುಲ್ಗೆಡಲ ಅನ್ನಗಿದ್ದಾ..
ಅಂವ ಗಂಡ್ಸು ಆಸ ಇರುತ್ತಾ
ನಿನ್ ತಂಗಗಾದ್ರು ಗ್ಯಾನ ಬ್ಯಾಡ್ವ’
ಶಂಕ್ರಮ್ಮೋರ ಸಿಟ್ಟು ನೆತ್ತಿಗೇರಿ
ನೆತ್ತಿ ಸೂರ್ಯ ಇಳಿಯೋದ್ರಲ್ಲಿ
ಊರು ಸೇರಿ ಹಿತ್ತಲಗೋಗಿ
ಮಲ್ಲಿಗೆ ಮೆಳದ ಬುಡದಲಿ ಕೂರ್ಸಿ
ದೇವಮ್ಮೋರ ತಲೆಗೆ ಬಾವಿಲಿ ಸೇದ ನೀರ
ದೊದದೊದನೆ ಸುರ್ದು
ನಡುಮನೆಗೆ ತಂದು ಕೂರ್ಸಿ
ರಾತ್ರ ಉಟ್ಟುಕೊಂಡು ವಸ್ಗ ಮಾಡ್ಕಳ್ಳಿ ಅಂತ ದೇವಮ್ಮೋರೊವ್ವ ಅಪ್ಪ
ನನ್ನ ತಂದು ವೈರ್ ಬ್ಯಾಗ್ಲಿ ಇಟ್ಡಿದ್ರು
ಅದೇ ವೈರ್ ಬ್ಯಾಗ್ಲಿ ನಾ ಶಂಕ್ರಮ್ಮೋರ
ಸಂಗ್ಡ ಬಂದಿದಾಗ
ನನ್ನ ದೇವಮ್ಮೋರ ತೊಡೆ ಮೇಲೆ ಇಟ್ಟು
‘ಅಂವ ಬರಗಂಟ ಮಗ್ಗುಲ್ಲಿ ಮಡಿಕ ಮನಿಕ’
ಅಂತ ಶಂಕ್ರಮ್ಮೋರು ಕೊಟ್ಟು
ಅಯ್ನೋರ್ ಬರದ ಕಾದ.

‘ಮದ್ವಿ ಆದ ಮೂರ್ನಾಕ್ ತಿಂಗ್ಳಾಯ್ತು
ಒಂದೊಪ್ಪತ್ತು ರಾತ್ರನಾಗ ಅಯ್ನೋರು
ಕಂಡ್ರು.

‘ಎಲ್ಯಾ ನಿನ್ ಮಿಂಡ್ಗಾತಿ’
‘ಏನವ್ವ..’
‘ಏಯ್, ಬಂಚೊತ್..’

ನಾನು ದೇವಮ್ಮೋರ ತೊಡೆ ಮೇಲೆ ಇದ್ದಿ
ದೇವಮ್ಮೋರು ಎದ್ ನಿಂತ್ರು
ಶಂಕ್ರಮ್ಮೋರು ಅಯ್ನೋರ ದರದರ ಎಳ್ಕಂಡು
ಮಲ್ಗೆ ಮೆಳೆ ಬುಡದಲ್ಲಿ ಕೂರ್ಸಿ
ಬಾವಿಲಿ ಸೇದ ನೀರ ಊದು
ಹಂಗೆ ದರದರ ಎಳ್ಕ ಬಂದು
ದೇವಮ್ಮೋರ ಸಂಗ್ಡ ಬುಟ್ರು.
ದೇವಮ್ಮೋರು ನನ್ನ ಅಯ್ನೋರ್ ಕೈಗ ಕೊಟ್ರು.

ಆಮೇಲ ವರ್ಷೊಂಬತ್ತು ಕಳ್ದು
ಒಂದೊಂದು ಸಾರಿ ನನ್ನ ಉಡೋರು
ಒಂದೊಂದು ಸಾರಿ ನನ್ನ ಬುಟ್ಟು ಹೋಗೋರು
ನನ್ನ ಉಡ್ದೆ ಇರಗ ದೇವಮ್ಮೋರು
ನನ್ನ ತಂಬ್ಕೋಡು ಮುದ್ದಾಡೋರು
ಸೋಪಾಕಿ ಒಗೇವ್ರು
ಇಸ್ತ್ರಿ ಪೆಟ್ಟಿ ತಂದು ಇಜ್ಜಲಾಕಿ
ಇಸ್ತ್ರಿ ಮಾಡೋರು.

ಈ ಅಯ್ನೋರು ನನ್ನ ನೋಡಿ
ಉಟ್ಕೊಂಡು ನಡಿಯೋರು
ಈ ಕಾಲಯ್ಯನ ಪಡಸಾಲೆಲಿ ಕೂರೋರು
ಚೆಲುವಮ್ಮ ನಗೋರು
ಚೆಲುವಮ್ಮನ ನಗೂಗೆ
ಕಾಲಯ್ಯನೂ ನಗೋನು


ಒಂದ್ ರಾತ್ರ ದೇವಮ್ಮೋರು ಒಬ್ರೆ.
ಬೆಮ್ಮನ್ಸಿ.
ಅಯ್ನೋರು ಶಂಕ್ರಮ್ಮೋರು
ಮಾದೇಶ್ವರನ ಬೆಟ್ಟಕ್ಕೆ ಹೋದವ್ರು
ಬರಬೇಕಿತ್ತು ಬಂದಿರ್ನಿಲ್ಲ.
ಅದೇನೋ ಅರ್ಕೆಂತ ಶಂಕ್ರಮ್ಮೋರ್ದು.
ಹಿತ್ತುಲ್ಲಿ ಬೇಲಿ ತರಿಯಾಗ
ಕಳ್ಳಿ ಹಾಲ್ ಬಿದ್ದು ಊದಿ
ಕಣ್ಲಿ ನೀರು ಸೋರ್ತಿತ್ತು.
ಕಣ್ಣು ಕಾಣ್ದಗಾಗಿ ನೋವ್ ಕೊಡ್ತಿತ್ತು.
ಕಳ್ಳಿ ಸೆರೆದ ರಭಸಕ್ಕೆ ಕೊಕ್ಕ
ತೊಡೆ ಸಂದಿಗ ತಿಮುದು ಕಾಲು ಎಳಿತಿತ್ತು.
ಈಗೀಗ ನಡೆಯೋದೆ ಕನಸಾಗಿ
ಮಲೆ ಮಾದಪ್ಪನ ಧ್ಯಾನ ಮಾಡಿದ್ಲು


ಸಿಡ್ಲು ಗುಡ್ಗು
ದಡದಡಾಂತ ಮಳೆ ಸುರಿತಾ
ದೇವಮ್ಮೋರು ನನ್ನ ಗಟ್ಟಿಯಾಗಿ ತಬ್ಕಂಡಿದ್ರು
ಬಾಗಿಲು ಬಡಿದಂಗಾಯ್ತು
ದೇವಮ್ಮೋರು ನನ್ನ ಅಲ್ಲೆ ಇಟ್ಟು
ಬಾಗಿಲು ತೆಗೆದಾಯ್ತು.
ಲಾಟೀನು ಉರಿತಿತ್ತು
ಆ ಲಾಟೀನು ಬೆಳಕಲ್ಲಿ
ಚಂದ್ರಮ್ಮೋರ್ ಕಂಡ್ರು
ಟವಲ್ ಒಳಗೆ ಮಗು ಇದ್ದಂಗಿತ್ತು
ದೇವಮ್ಮೋರು ಬೆವರುತ್ತಾ
‘ಏನ್ ಚಂದ್ರ ಇಲ್ಯಾಕ್ ಬಂದ’
‘ ನಾ ಇಲ್ಲೆ ಇರ್ತಿನಿ’
‘ ಬ್ಯಾಡ ನೀ ಇಲ್ಲಿರ್ಬೇಡ’
‘ ಈ ಮಗು ಏನ್ಮಾಡ್ಲಿ.. ಅವ್ರು ಬತ್ತಿನಿ ಅಂತ
ಬರ್ನೆ ಇಲ್ಲ ಯಾರ್ಗು ಕಾಣ್ದೆ ಬಂದಿ’
‘ಚಂದ್ರ, ಅತ್ತೆಮ್ಮೋರ್ ನೋಡುದ್ರ
ನಿನ್ನ ಬುಡದಿಲ್ಲ ಹೋಗು’
ದೇವಮ್ಮೋರ್ ಮಾತ್ಗ
ಚಂದ್ರಮ್ಮೋರು ಅಳ್ತ ಅಳ್ತ
ಮಲಗಿದ್ದ ಮಗುನು ಏಳ್ತು
ಗುಡುಗು ಸಿಡಿಲಿಗೆ ಅದೂ ಕಿಟಾರನೆ ಕಿರುಚ್ತು.
ದೇವಮ್ಮೋರು ಒಂದ್ ಕೈಲಿ ನಡ ಹಿಡ್ಕಂಡು
ಚಂದ್ರಮ್ಮೋರ ಕೂರ್ಸಿ
ಕೋಣೆಗೋಗಿ ಬಿಸಿನೀರು ಕಾಯ್ಸಿ ಕೊಟ್ಲು
ಚಂದ್ರಮ್ಮೋರು ಅಲ್ಲೆ ಕುಂತು
ಮಗೂಗೆ ಹಾಲು ಕುಡ್ಸುದ್ರು.

ಸರೊತ್ತು ಕಳಿತಾ ಇಳಿತಾ
ಗುಡುಗು ಸಿಡಿಲು ಸದ್ದು ನಿಲ್ತಾ
ಸುರಿಯೋ ಮಳೆನೂ ನಿಲ್ತಾ
ದೇವಮ್ಮೋರು ಚಂದ್ರಮ್ಮೋರು
ನಿದ್ರೆ ಹೋದ ಹೊತ್ತಲ್ಲಿ
ಬಾಗಿಲು ಸದ್ದಾಯ್ತು.

ದೇವಮ್ಮೋರು ನಡ ಹಿಡ್ಕಂಡು
ನಿದ್ರಾಗಣ್ಣಲಿ ಎದ್ದು
ಚಂದ್ರಮ್ಮೋರ ಏಳ್ಸಿ
ಹಿತ್ತಲಗಾಣ ಬಾಗಿಲು ತಗ್ದು
‘ನೀ ಹೋಗು ಇದೇ ಬೀದಿಲಿ ಕೊನ್ಗ
ಬೇಲಿ ಮಾಳ್ದಿಂದ ಆಚ ದಡದಲಿ ದೂರ ಅದ
ಹುಣಸೆ ಮರದೊತ್ತಲಿ ನೆರ್ಕಲಿ ಕಟ್ಟಿರ
ಕಾಲುನ್ ಮನ ಅದ ಹೋಗು ಹೋಗು’
ಅಂತ ದಡುಕ್ಕನೆ ಬಾಗಿಲು ಮುಚ್ಚುದ್ರು.


ಒಂಜಿನ ದೇವಮ್ಮೋರ್ ಮಡ್ಲೂ ತುಂಬ್ತು
ಚೊಚ್ಚಲ ಹೆರಿಗೆಗೆ ತವರಿಗೆ ಕಳಿಸ್ಲೆ ಇಲ್ಲ.
ಶಂಕ್ರಮ್ಮೋರ್ದು ಹಠ.

ಕಣ್ಣು ಕಾಣ್ದೆ ಕಾಲು ಬರ್ದೆ
ಬಾಣಂತನ ಮಾಡಕಾದ್ದಾ..
ಶಂಕ್ರವ್ವೊರ ಮಾತ ದಿಕ್ಕರಿಸಿದ
ಅಯ್ನೋರ ಮಾತಿಗೆ ಮಗು ಸಮೇತ
ದೇವಮ್ಮೋರು ತವರು ಸೇರಿದ್ದಾಯ್ತು.
ಇದ ವಸಿ ಹೇಳಿದ್ದಿ ಅನ್ಸುತ್ತ..

ಆಮೇಲ ಒಂದು ರಾತ್ರ
ಅಯ್ನೋರಾ ಕಪಿಲಾ ಬಾವಿಲಿ
ಹೆಣ್ಣೆಂಗ್ಸ ಹೆಣ ತೇಲ್ತಿತ್ತಂತ
ಅದು ಚಂದ್ರಮ್ಮೋರ್ದಂತ
ಆ ಚಂದ್ರಮ್ಮೋರ್ ಮಗು
ಕಾಲಯ್ನ ಪಡಸಾಲೆಲಿ ಆಡ್ತಿತ್ತಂತ
ಆ ಮಗುನಾ ಚೆಲುವಮ್ಮ ಆಡುಸ್ತಿದ್ಲಂತ
ಆ ಕಾಲಯ್ಯನ್ಗು
ಆ ಚೆಲುವಮ್ಮುನ್ಗು
ಚಂದ್ರಮ್ಮೊರು
ಯಾರಂತ ಗೊತ್ತಿರ್ನಿಲ್ವಂತ
ಈ ಮಗು ಆಡ್ತಾ ಆಡ್ತಾ ಬೆಳಿತಂತಾ…’

ನಂಗ ಇಂವ ಹೇಳದು ಒಗಟಾಯ್ತಲ್ಲಾ..
ಚಂದ್ರಮ್ಮೋರ್ ಸತ್ತ ಮ್ಯಾಲ
ಮಗು ಪಡಸಾಲೆಗ ಹೆಂಗ್ ಹೋಯ್ತು..
ನಂಗ ತಲ ಚಿಟ್ಟಿಡಿತಾ
ಧೂಳೊಳಗ ಏಳ್ತಾ ಮುಳುಗ್ತಾ ಇದ್ದಾಗ
ಚೆಂಗುಲಿ ಓಡೋಡಿ ಬಂದಂಗಾಯ್ತಲ್ಲೊ….

-೧೮-
‘ಲೇ ಲೇ ಚೆಂಗುಲಿ ಬಡ್ಡೆತದ
ಈ ಕತ್ಲಲಿ ಏನಾ ನಿಂದು..
ಅಡ್ಡಾಡದ್ಯಾಕಲೇ ಬಂಚೊತ್..’
ಮೆಲ್ಲಗೆ ಮಾತಾಡ್ತ
ಬೀದಿ ಕೊನೇ ಅಚಲಿ ನಿಂತ್ರಲ್ಲಾ..

‘ಅಯ್ನೊರಾ ಅಯ್ನೋರಾ
ಕಾಲ ಸತ್ತೋದ್ನಂತ ಅಯ್ನೋರಾ..’

ಅಯ್ಯೋ ನನ್ ಕಾಲಯ್ಯೋ
ಈ ಚೆಂಗುಲಿ ಏನ ಹೇಳದು
ನನ್ ಒಡಿಯಾ ಕಲಯ್ಯೋ
ನೀ ಯಾಕಾರು ಸತ್ಯೋ..

‘ಏನ್ಲಾ ಹೇಳಿಯೇ ಬಂಚೊತ್..’
ಅಯ್ನೋರು ಇನ್ನೂ ಮೆಲ್ಲಗೆ
ಚಗುಲಿಯ ಬೆನ್ಮೇಲಿ ಕೈ ಹಾಕುದ್ರು.
‘ಊ ಅಯ್ನೋರಾ..
ಆಗ್ಲೆ ನೀವಿಂಗ್ ಹೋದ್ರಿ
ಯಾರೋ ಕೂಗಾಕ ಬಂದ್ರು
ಚೆಲ್ವಿ ಹೆಂಡದ ಗುಳ್ಳಿಂದ ಓಡುದ್ಲು
ಅವನ ಹೈದ ಪರಶೂ ಓಡ್ತು..’

ನಂಗ ಹುಚ್ಚತ್ಗತ್ತು. ಕತ್ಲು ಕಾಣ್ದು.
ಅಯ್ನೋರು ಅಡ್ಡದಾರಿ ಹಿಡುದ್ರು
ಚೆಂಗುಲಿ ಅಯ್ನೋರ ಹಿಂದೆ ಬರ್ತಿತ್ತು.
ಧೂಳು ಕಮ್ಮಿಯಾಗಿ
ಅಡ್ಡದಾರಿ ಗಟ್ಟಿಯಾಗಿತ್ತು
ಅಯ್ನೋರು ಎಡಗೈ ಪಂಚ ಅಂಚ ಎಳ್ದು
ಮೇಲೆತ್ತಿ ಕಟ್ತ ನಡಿತಾ ನಡಿತಾ
ಈಗ ಅದೇ ಮರದತ್ರ ನಿಂತ್ರು.
ಚೆಂಗುಲಿ ಓಡ್ತು ಓಡ್ತು
ಎತ್ತಾಗ್ ನೋಡುದ್ರು ಗವ್ವನ್ನದು.

ಅಯ್ನೋರು ಬೀಡಿ ಕಚ್ಚುದ್ರು
ಕಡ್ಡಿ ಗೀರಿ ಬೆಳ್ಕು ಮಾಡುದ್ರು
ಚೆಂಗುಲಿ ಅದೇ‌ ಓಟ್ದಲ್ಲಿ ಬಂದು
ಅಯ್ನೋರ್ ಕೈಗ ಬಾಟ್ಲಿ ಕೊಟ್ಟ

‘ಅಯ್ನೋರಾ ಕಾಲ ಸತ್ತಿಲ್ವಂತ
ಗ್ಯಾನ ಇಲ್ವಂತ’

ಚೆಂಗುಲಿ ಮಾತ್ಗ ಉಸುರ್ಬಂತು
ಅಂವ ಇನ್ನು ಏನಾ ಹೇಳ್ದ
ಅಯ್ನೋರು ಚೆಂಗುಲಿನ
ನೀ ಇಲ್ಲೆ ಇರು ಅಂತೇಳಿ
ಮೆಲ್ಗೆ ಕತ್ಲೊಳ್ಗ ಕಾಲೂರುದ್ರು
ಅಯ್ನೋರ ಹೆಜ್ಜೆಜ್ಗು
ಉದುರಿ ಒಣ್ಗಿದ್ದ ತರಗೆಲೆ
ನನ್ನ ಮೆಟ್ದ ಮೆಟ್ಗ
ನೊರಕ ನೊರಕ ಅಂತನ್ನವು.
ತರಗೆಲೆ ಸದ್ದು ಎಲ್ಲಿಗಂಟ ಅಂದ್ರ
ಹೆಂಡದ ಗುಳ್ಗಂಟ..
ಆ ಹೆಂಡದ ಗುಳ್ಳ ಬಾಗ್ಲು
ಅಯ್ನೋರ ದೆಸೆಗೆ ಹಿಂದಕ್ಕೋಯ್ತು.

ನಾನೂ ಅವರೊದ್ಗೇ ಒಳಕ್ಕೋದಿ
ನಾ ಒಳಕ್ಕೋಟ್ಗೆ ಬಾಗ್ಲು ಮುಚ್ಕತು
ಅಂತು ನಂಗು ಕಾಲ ಬಂತು ಅನ್ಕಂಡಿ.
ಕತ್ಲು ಅಂದ್ರ ಕತ್ಲು ಗವ್ಗತ್ಲು
ರಪುಣೂ ಕಾಣ್ದು.

ಅಯ್ನೋರು ಕಡ್ಡಿ ಗೀರುದ್ರು
ಆ ಬೆಂಕಿ ಕಡ್ಡಿ ಬೆಳ್ಕಲ್ಲಿ
ಹೆಂಡದ ಕಾನಿಗಳೆ ಕಂಡ್ವು
ಆ ಹೆಂಡದ ಕಾನಿ ಒಳಗೆ
ಹೆಂಡ ತುಂಬಿರ ಬಾಟ್ಲೇ ಕಂಡ್ವು.
ಇನ್ನೊಂದ್ ಕಡ
ಖಾಲಿ ಕಾನಿಗಳೇ ಕಂಡ್ವು
ಆ ಖಾಲಿ ಕಾನಿಗಳ ಒಳಗೆ
ಬರಿ ಖಾಲಿ ಬಾಟ್ಲೇ ಕಂಡ್ವು.
ಹೆಂಡದ ಗುಳ್ಳೊಳಗ
ಕಡ್ಡಿ ಬೆಳ್ಕು ಚೆಲ್ತಾ
ಅಯ್ನೋರು ಮೆಲ್ಲ ಮೆಲ್ಗ
ಮುಂದ ಮುಂದ ಹೋಯ್ತಾ
ಹೆಂಡದ ಕಾನಿಗಳ ಸಂದಿಲಿ
ಗೋಣಿ ತಾಟ್ಮೇಲ
ಬೆನ್ನು ತಿರುಗಿ ಕುಂತವ್ಳು ಚೆಲ್ವಿ ಅಲ್ವಾ…

ಒಡಿಯಾ ನನ್ ಒಡಿಯಾ
ನೀ ಎಲ್ಯಪ್ಪಾ ಇದ್ದಯ್
ಅನ್ನನ್ಕತಾ ಇರಾಗ
ನನ್ನ ಕಾನಿ ಸಂದ್ಗ ಬುಟ್ಟು
ಪಂಚ ಅಳ್ದು ಕಾನಿ ಮ್ಯಾಲಕ್ಕಿಟ್ಟು
ಉರಿಯಾ ಬೆಂಕಿ ಕಡ್ಡಿ ನೆಲುಕ್ಕೊಂಟಿ
ಕತ್ಲು ಗವ್ವರಾಕಂಡ್ಮ್ಯಾಲ
ಹೆಂಡದ ಕಾನಿಗಳೆಲ್ಲ ಅಳ್ಳಾಡ್ದಗಾಗಿ
ಕಾನಿಲಿರ ಬಾಟ್ಲು ಬಾಟ್ಲುವ
ಚೆಲ್ಲಾಡ ಮಟ್ಗ ಸದ್ದಾಯ್ತಲ್ಲ…

ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x