ಮುಗುಳ್ನಗೆಯ ಸರದಾರ: ಕೊಳ್ಳೇಗಾಲ ಶರ್ಮ

ಜಾಣಜಾಣೆಯರು
ಮೋನಾಲಿಸಾ. ಈ ಹೆಸರು ಯಾರಿಗೆ ಗೊತ್ತಿಲ್ಲ? ಸೌಂದರ್ಯಕ್ಕೆ ಪ್ರತೀಕ ಎನ್ನುವ ಹೆಸರು ಇದು. ಸೌಂದರ್ಯಕ್ಕಿಂತಲೂ ಮುಗುಳ್ನಗೆಗೆ ಹೆಸರು. ಮೋನಾಲಿಸಾಳ ನಗು ಅತ್ಯಂತ ಸುಂದರವಾದದ್ದು ಎನ್ನುವ ಪ್ರತೀತಿ ಇದೆ. ಕವಿಗಳು ತಮ್ಮ ಮನದನ್ನೆಯರ ನಗುವನ್ನು ಈ ಇಟಲಿಯ ಹೆಣ್ಣಿನ ನಗುವಿಗೆ ಹೋಲಿಸುತ್ತಾರೆ. ಈಕೆ ಕ್ಲಿಯೋಪಾತ್ರಾಳಂತೆ ಯಾರೋ ರಾಣಿಯೂ ಅಲ್ಲ, ವೀನಸ್ಸಿನಂತೆ ಅಪ್ಸರೆಯೂ ಆಲ್ಲ. ವಾಸ್ತವವಾಗಿ ಮೊನಾಲೀಸಾ ಯಾರು ಎನ್ನುವುದೇ ಇನ್ನೂ ನಿಗೂಢ. ಆದರೆ ಅವಳ ಚಿತ್ರ ಮಾತ್ರ ಜಗತ್ಪ್ರಸಿದ್ಧ. ಹೀಗೆ ಸಾಮಾನ್ಯ ಹೆಣ್ಣೊಬ್ಬಳನ್ನು ಜಗತ್ಪ್ರಸಿದ್ದಳನ್ನಾಗಿ ಮಾಡಿ, ಮುಗುಳ್ನಗುವಿಗೆ ಪ್ರತೀಕವನ್ನಾಗಿ ಮಾಡಿದ ಅಪ್ರತಿಮ ಕಲಾವಿದ ಹುಟ್ಟಿದ ದಿನ ಇಂದು. ಏಪ್ರಿಲ್ 15, ಇಟಲಿಯ ಕಲಾವಿದ ಲಿಯೊನಾರ್ದೊ ಡಾವಿಂಚಿ ಹುಟ್ಟಿದ ದಿನ. ಈತ ಹುಟ್ಟಿದ್ದು 1452ನೆಯ ಇಸವಿಯಲ್ಲಿ.

ಜಾಣಸುದ್ದಿಯಲ್ಲಿ ಕಲೆ, ಕಲಾವಿದರ ಬಗ್ಗೆ ಯಾವಾಗ ಮಾತನಾಡಲು ಆರಂಭಿಸಿದಿರಿ ಎಂದಿರಾ? ನಿಮ್ಮ ಪ್ರಶ್ನೆ ಅರ್ಥವಾಯಿತು. ವಿಜ್ಞಾನ, ವಿಚಾರ, ವಿಸ್ಮಯಗಳಲ್ಲಿ ಕಲೆ ಎಲ್ಲಿಂದ ಬಂತು ಎನ್ನುವುದು ತಾನೇ ಪ್ರಶ್ನೆ. ಲಿಯೊನಾರ್ದೊ ಡಾವಿಂಚಿ ಕಲೆಗಾರನೇನೋ ಹೌದು. ಆದರೆ ಅದಕ್ಕಿಂತಲೂ ಮುಖ್ಯವಾಗಿ ಆತ ಒಬ್ಬ ಅದ್ಭುತ ಇಂಜಿನೀಯರು ಹಾಗೂ ವಿಜ್ಞಾನಿಯೂ ಆಗಿದ್ದ ಎನ್ನುವುದು ಬಹುತೇಕ ಜನರಿಗೆ ತಿಳಿಯದು. ಹದಿನೈದನೇ ಶತಮಾನದಲ್ಲಿ ಯುರೋಪಿನಲ್ಲಿ ನಡೆದ ರೆನೈಸಾನ್ಸ್ ಅಥವಾ ಪುನರುತ್ಥಾನದ ಕಾಲದ ಅತ್ಯಂತ ಮಹತ್ವದ ವ್ಯಕ್ತಿ ಈತ. ಕಲೆ, ಅನ್ವೇಷಣೆ, ವಿಜ್ಞಾನ ಹೀಗೆ ಹತ್ತಾರು ವಿಷಯಗಳಲ್ಲಿ ಸಾಧಕನಾಗಿದ್ದವ.

ಡಾವಿಂಚಿ ಎಂದೇ ಈತ ಪ್ರಸಿದ್ಧ. ಈತ ರಚಿಸಿದ ಎರಡು ಚಿತ್ರಗಳು ಇಂದಿಗೂ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತವೆ. ಅವುಗಳಲ್ಲಿ ಮುಗುಳ್ನಗೆಯನ್ನು ಅಮರವನ್ನಾಗಿಸಿದ ಮೊನಾಲಿಸಾ ಒಂದು. ಎರಡನೆಯದು ದಿ ಲಾಸ್ಟ್ ಸಪ್ಪರ್ ಎನ್ನುವ ಮತ್ತೊಂದು ಚಿತ್ರ. ಇದು ಯೇಸುಕ್ರಿಸ್ತ ತನ್ನ ಅನುಯಾಯಿಗಳ ಜೊತೆಗೆ ಊಟ ಮಾಡುತ್ತಿರುವ ಚಿತ್ರ. ಇದಾದ ಮರುದಿನವೇ ಯೇಸುಕ್ರಿಸ್ತನನ್ನು ಶಿಲುಬೆಗೆ ಏರಿಸಿದರಂತೆ. ಹೀಗಾಗಿ ಇದನ್ನು ಲಾಸ್ಟ್ ಸಪ್ಪರ್, ಕೊನೆಯ ಭೋಜನ ಎಂದು ಹೆಸರಿಸಿದ್ದಾರೆ. ಇವೆರಡೂ ಚಿತ್ರಗಳೇ ಇಂದಿಗೂ ಲಿಯೊನಾರ್ದೊ ಡಾವಿಂಚಿಯ ಹೆಸರನ್ನು ಅಜರಾಮರವಾಗಿರಿಸಿವೆ.

ಹಾಗಂತ ಡಾವಿಂಚಿ ಇತರೆ ಸುಪ್ರಸಿದ್ಧ ಕಲೆಗಾರರಾದ ಮೈಖೇಲ್ ಏಂಜೆಲೊ ಅಥವಾ ಪಿಕಾಸೋರಂತೆ ನೂರಾರು ಚಿತ್ರಗಳನ್ನೋ, ಶಿಲ್ಪಗಳನ್ನೋ ರಚಿಸಲಿಲ್ಲ. ಈತ ಬರೆದದ್ದು ಕೇವಲ ಇಪ್ಪತ್ತೇ ಚಿತ್ರಗಳು. ಅವುಗಳಲ್ಲಿ ಎರಡೇ ಬಲು ಸುಪ್ರಸಿದ್ಧವಾದವು. ಆದರೂ ಡಾವಿಂಚಿಯನ್ನು ಮೈಖೇಲ್ ಏಂಜೆಲೋ ಅಥವಾ ಪಿಕಾಸೋರಿಗಿಂತಲೂ ಎತ್ತರದ ಸ್ಥಾನದಲ್ಲಿ ಇರಿಸಲಾಗಿದೆ. ಇದಕ್ಕೆ ಕಾರಣ ಈತ ಅಪ್ರತಿಮ ಕಲಾವಿದ ಎನ್ನುವುದಕ್ಕಲ್ಲ. ಈತನ ಬಹುಮುಖ ಪ್ರತಿಭೆಯಿಂದಾಗಿ ಡಾವಿಂಚಿಯನ್ನು ಆ ಕಾಲದ ಅನುಪಮ ಪ್ರತಿಭೇ ಎಂದು ಕರೆಯಲಾಗುತ್ತದೆ.

ಬೃಹತ್‌ ಕಟ್ಟಡಗಳ ಮೇಲೆ ಚಿತ್ರಗಳನ್ನು ರಚಿಸುವಾಗ ಕಟ್ಟುವ ಏಣಿ, ಅದನ್ನು ಸರಾಗವಾಗಿ ಚಲಿಸಲು ಬೇಕಾದ ವ್ಯವಸ್ಥೆಯ ವಿನ್ಯಾಸದ ಚಿತ್ರ

ಲಿಯೊನಾರ್ಡೊ ಇಟಲಿಯ ಟಸ್ಕನ್ ಪ್ರಾಂತ್ಯದಲ್ಲಿದ್ದ ಡಾವಿಂಚಿ ಎನ್ನುವ ಊರಿನವ. ಈತನ ಬಾಲ್ಯದ ಶಿಕ್ಷಣದ ಬಗ್ಗೆ ಹೆಚ್ಚು ವಿವರಗಳಿಲ್ಲ. ಆದರೆ ಈತನ ಬಾಲ್ಯವಂತೂ ಬಲು ವಿಶಿಷ್ಟ ಎನ್ನಬೇಕು. ಈತನ ತಂದೆ ಇಟಲಿಯ ಟಸ್ಕನ್ನಿನ ಒಬ್ಬ ಸಾಹುಕಾರ ವಕೀಲ. ಹೆಸರು ಸೆ ಪಿಯೆರೊ ಡಾವಿಂಚಿ. ಈತ ಯೌವನದಲ್ಲಿ ತನ್ನ ಕುಲದ್ದಲ್ಲದ ಯುವತಿಯೊಬ್ಬಳನ್ನು ಪ್ರೇಮಿಸಿದ. ಇಬ್ಬರಿಗೂ ಒಂದು ಮಗುವೂ ಆಯಿತು. ಆದರೆ ಅವಳನ್ನು ಮದುವೆಯಾಗದೆ ಕೈ ಬಿಟ್ಟು ಹೋದ. ಆ ಅನಾಥ ಮಗುವೇ ಲಿಯೊನಾರ್ಡೊ ಡಾವಿಂಚಿ. ಡಾವಿಂಚಿಯ ತಾಯಿ ತನ್ನ ತಾಯಿಯ ಮನೆಗೆ ಹೋದಳು. ಮಗುವನ್ನು ಹೆತ್ತು ಅವನನ್ನು ಬೆಳೆಸಿದಳು. ಡಾವಿಂಚಿ ಸುಮಾರು ಐದು ವರ್ಷದವನಾಗಿದ್ದಾಗ, ಸೆ ಪಿಯೆರೊ ಈತನನ್ನು ಮತ್ತೆ ತನ್ನ ಬಳಿಗೆ ಕರೆದೊಯ್ದು ಬೆಳೆಸಿದ. ತನ್ನ ಮಗನೆಂದು ಒಪ್ಪಿಕೊಂಡ. ಇದಕ್ಕೆ ಕಾರಣ ಸೆ ಪಿಯೆರೊನ ಹೆಂಡತಿಗೆ ಮಕ್ಕಳಾಗಿರಲಿಲ್ಲ. ಹೀಗೆ ಲಿಯೊನಾರ್ದೊ ಮರಳಿ ತನ್ನ ತಂದೆಯ ನೆರಳಿಗೆ ಹಿಂದಿರುಗಿದ.

ತಂದೆ ಎಂಬವನೊಬ್ಬನ ಹೆಸರು ಈತನಿಗೆ ದಕ್ಕಿತೇ ಹೊರತು ಆಸ್ತಿಯಲ್ಲ. ಡಾವಿಂಚಿ ಇನ್ನೂ ಕಷ್ಟದಲ್ಲಿಯೇ ಬೆಳೆಯಬೇಕಾಯಿತು. ಏಕೆಂದರೆ ಈತನ ತಂದೆ ಸೆ ಪಿಯೆರೋ ಇನ್ನೂ ಇಬ್ಬರನ್ನು ಮದುವೆಯಾದ. ಇನ್ನೂ ಹನ್ನೆರಡು ಮಂದಿ ಮಕ್ಕಳಿಗೆ ತಂದೆಯಾದ. ಅವರೆಲ್ಲರೂ ಕಾನೂನು ಪ್ರಕಾರ ಅವನ ಮಕ್ಕಳೇ ಆಗಿದ್ದರಿಂದ ಹಾಗೂ ಲಿಯೊನಾರ್ದೊ ಕಾನೂನು ಬಾಹಿರ ಸಂತಾನವಾಗಿದ್ದರಿಂದ ಲಿಯೊನಾರ್ದೊಗೆ ಆತನ ಆಸ್ತಿಯಲ್ಲಿ ಪಾಲು ದಕ್ಕಲಿಲ್ಲ. ಲಿಯೊನಾರ್ದೊವಿಗೆ ಎಪ್ಪತ್ತೆರಡು ವರ್ಷ ವಯಸ್ಸಾದಾಗ ಅವನ ಈ ಹನ್ನೆಡರೂ ಮಂದಿ ಸೋದರರು ಒಟ್ಟಾಗಿ ಆತನಿಗೆ ತಂದೆಯ ಅಸ್ತಿ ದಕ್ಕದಂತೆ ಸಂಚು ಹೂಡಿದರಂತೆ.

ಇಷ್ಟೆಲ್ಲ ಕಷ್ಟಗಳ ನಡುವೆ ಬೆಳೆದದ್ದರಿಂದಲೋ ಏನೋ ಲಿಯೊನಾರ್ಡೊವಿನ ಮನಸ್ಸು ಬಲು ಸಂವೇದನಶೀಲವಾಗಿತ್ತು ಎನ್ನುತ್ತಾನೆ ಆತನ ಜೀವನಚರಿತ್ರಕಾರರು. ಈ ಎಲ್ಲ ಕುಟುಂಬ ಕೋಟಲೆಗಳಿಂದಾಗಿ ಲಿಯೊನಾರ್ಡೊವಿಗೆ ತಕ್ಕ ಶಿಕ್ಷಣ ದೊರೆಯಲಿಲ್ಲ. ಆಗ ಜ್ಞಾನಾರ್ಜನೆಯ ಪರ್ವ ಕಾಲ ಎನ್ನಬೇಕು. ಇಟಲಿಯಂತೂ ಯುರೋಪಿನ ಕಲೆ, ಸಾಹಿತ್ಯ, ವೈದ್ಯಕೀಯ ಹಾಗೂ ತತ್ವಶಾಸ್ತ್ರಗಳ ಅಧ್ಯಯನಕ್ಕೆ ಬಲು ಹೆಸರುವಾಸಿಯಾಗಿತ್ತು. ಲಿಯೊನಾರ್ಡೊ ಹುಟ್ಟುವುದಕ್ಕೆ ಕೆಲವೇ ವರ್ಷಗಳ ಹಿಂದೆ ಜರ್ಮನಿಯ ಗುಟೆನ್ ಬರ್ಗ್ ಎಂಬಾತ ಮುದ್ರಣ ಯಂತ್ರವನ್ನು ಸೃಷ್ಟಿಸಿದ್ದ. ಪುಸ್ತಕಗಳನ್ನು ಬರೆಯುವ, ಅಥವಾ ಪಾಠಗಳನ್ನು ಬಾಯಿಪಾಠದ ಮೂಲಕ ಹೇಳುವ ಕಾಲ ಮುಗಿದು, ಮುದ್ರಿಸುವ ಕಾಲ ಆರಂಭವಾಗಿತ್ತು. ಇಟಲಿಯ ಕಾಂಸ್ಟಂಟಿನೋಪಲ್ಲಿನ ಸುಪ್ರಸಿದ್ಧ ಗ್ರಂಥಾಲಯದಲ್ಲಿ ಪ್ರಪಂಚದ ಅತ್ಯಂತ ಹೆಸರುವಾಸಿ ಗ್ರಂಥಗಳು ದೊರೆಯುತ್ತಿದ್ದವು. ಹಾಗಿದ್ದೂ, ಆ ಎಲ್ಲವನ್ನೂ ಪಡೆಯಬಹುದಾಗಿದ್ದ ಲಿಯೊನಾರ್ದೊ, ಕುಲಹೀನ ಸಂತಾನ ಎನ್ನುವ ಒಂದೇ ಕಾರಣಕ್ಕೇ ಅವೆಲ್ಲದರಿಂದಲೂ ವಂಚಿತನಾದ. ಮನೆಯಲ್ಲೇ ಒಂದಿಷ್ಟು ಓದು ಬರೆಹ ಕಲಿತನಷ್ಟೆ ಹೊರತು, ಸಾಂಪ್ರದಾಯಿಕವಾಗಿ ಕಲಿಯಬೇಕಿದ್ದ ಗ್ರೀಕ್ ಅಥವಾ ಲ್ಯಾಟಿನ್ ಶಿಕ್ಷಣ ಈತನಿಗೆ ದೊರಕಲಿಲ್ಲ.

ಆದರೂ ವಿಚಿತ್ರ ನೋಡಿ. ಅವೆಲ್ಲವೂ ದೊರಕಿದ ಈತನ ಹನ್ನೆರಡು ಸೋದರರು ಯಾರ ಹೆಸರೂ ಈಗ ಉಳಿದಿಲ್ಲ. ಡಾವಿಂಚಿಯದೊಬ್ಬನದ್ದೇ ಐದುನೂರು ವರ್ಷಗಳಾದ ಮೇಲೂ ಉಳಿದುಕೊಂಡಿದೆ. ಇದಕ್ಕೆ ಕಾರಣ ಮೊನಾಲಿಸಾವಷ್ಟೆ ಅಲ್ಲ, ಈತ ಬರೆದ ಹಲವಾರು ಇಂಜಿನೀಯರಿಂಗ್ ಚಿತ್ರಗಳು. ಕಲೆಯಲ್ಲಿ ಕೇವಲ ಸೌಂದರ್ಯವಷ್ಟೆ ಅಲ್ಲದೆ ಗಣಿತ ಹಾಗೂ ಜ್ಯಾಮಿತಿಯ ಅಂಶಗಳನ್ನೂ ಈತ ಸೇರಿಸಿದ್ದ. ಚಿತ್ರಗಳು ಹೇಗೆ ಪ್ರಮಾಣ ಬದ್ಧವಾಗಿರಬೇಕು? ಮನುಷ್ಯನ, ಜೀವಿಗಳ ಆಕಾರ ಹೇಗೆ ಪ್ರಮಾಣಬದ್ಧವಾಗಿವೆ ಎಂಬುದನ್ನು ಮೊತ್ತ ಮೊದಲಬಾರಿಗೆ ಮನಗಂಡು, ಅದರಂತೆ ಚಿತ್ರಗಳನ್ನು ರಚಿಸಲು ಪ್ರಯತ್ನಿಸಿದವ ಈತ. ಗಣಿತ ಹಾಗೂ ಜ್ಯಾಮಿತಿಯ ಬಗ್ಗೆ ಅಪಾರ ಆಸಕ್ತಿ ಇದ್ದವ.
ಡಾವಿಂಚಿಯ ನೋಟ್ ಬುಕ್ ಎನ್ನುವ ಪುಸ್ತಕ ಬಹುಶಃ ಇಂಜಿನೀಯರಿಂಗು ಕಲಿಯುವ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಕನಿಷ್ಟ ಕಣ್ಣಾಡಿಸಲೇ ಬೇಕಾದ ಪುಸ್ತಕ ಎನ್ನಬಹುದು. ಈ ಪುಸ್ತಕದಲ್ಲಿ ಈತ ಹಲವಾರು ಯಂತ್ರಗಳ ವಿನ್ಯಾಸಗಳನ್ನು ಬರೆದಿದ್ದಾನೆ. ಈ ಯಂತ್ರಗಳನ್ನೆಲ್ಲ ಈತ ರಚಿಸಿದ್ದನೋ, ಕಟ್ಟಿದ್ದನೋ ಎಂದು ಕೇಳಿದರೆ ಬಹುಶಃ ಇಲ್ಲ ಎಂದೇ ಉತ್ತರಿಸಬೇಕು. ಡಾವಿಂಚಿ ಹದಿನೈದನೇ ವರ್ಷದವನಾಗಿದ್ದಾಗ ಈತನ ತಂದೆ ಫ್ಲಾರೆನ್ಸ್ ಪಟ್ಟಣಕ್ಕೆ ವಲಸೆ ಬಂದರು. ಅಲ್ಲಿ ಲಿಯೊನಾರ್ಡೊ ಒಬ್ಬ ಚಿನಿವಾರನ ಬಳಿ ಕೆಲಸಕ್ಕೆ ಸೇರಿಕೊಂಡ. ಈ ಸಂದರ್ಭದಲ್ಲಿಯೇ ಈತ ಮಣ್ಣನ್ನು ಅರೆದು ಬಣ್ಣಗಳನ್ನು ತಯಾರಿಸುವ, ಕಂಚು ಎರಕ ಹೊಯ್ಯುವ, ಚಿತ್ರಕಲೆ ಮುಂತಾದುವನ್ನು ಕಲಿತುಕೊಂಡ. ಇದುವೇ ಆತನ ಶಿಕ್ಷಣವಾಯಿತು.

ಪ್ರಕೃತಿಯೇ ತನ್ನ ಗುರು ಎನ್ನುತ್ತಿದ್ದ ಲಿಯೊನಾರ್ದೊ ನಿಸರ್ಗದಲ್ಲಿರುವ ವಿದ್ಯಮಾನಗಳಿಂದ ಕಲಿಯಲು ಪ್ರಯತ್ನಿಸಿದ. “ಹಕ್ಕಿಗಳು ಹಾರುತ್ತವಾದರೆ ನಾವೇಕೆ ಹಾರಲಾರೆವು?” ಎನ್ನುವುದು ಆತನ ಪ್ರಶ್ನೆಯಾಗಿತ್ತು. ಹಕ್ಕಿಗಳು ಹಾರುವ ರೀತಿಯನ್ನು ತಿಳಿದರೆ ನಾವೂ ಹಾರುವ ಯಂತ್ರಗಳನ್ನು ಕಟ್ಟಬಹುದು ಎನ್ನುವ ತರ್ಕ. ಈ ನಿಟ್ಟಿನಲ್ಲಿ ಈತ ಹಲವಾರು ಯಂತ್ರಗಳ ರೂಪುರೇಷೆಗಳನ್ನು ತನ್ನನೋಟುಪುಸ್ತಕದಲ್ಲಿ ಬರೆದಿಟ್ಟಿದ್ದ. ಆಕಾಶದಲ್ಲಿ ಹಾರುವ ಹೆಲಿಕಾಪ್ಟರುಗಳ ಬಗ್ಗೆ, ಸಮುದ್ರದೊಳಗೆ ಆಳದಲ್ಲಿ ಚಲಿಸುವ ಸಬ್ ಮೆರೀನುಗಳು, ವೈರಿಗಳ ಗುಂಡುಗಳಿಂದ ರಕ್ಷಿಸಿಕೊಳ್ಳಬಲ್ಲ ಮಿಲಿಟರಿ ಟ್ಯಾಂಕುಗಳು ಹೀಗೆ ಒಂದಲ್ಲ ಎರಡಲ್ಲ ನೂರಾರು ಹೊಸ ಯಂತ್ರಗಳನ್ನು ಕಲ್ಪಿಸಿ, ಅವುಗಳನ್ನು ಚಿತ್ರಿಸಿ ಇಟ್ಟಿದ್ದ.

ಈ ನೋಟು ಪುಸ್ತಕಗಳಲ್ಲಿ ಬೈಸಿಕಲ್ಲು, ಮಡಚಿಕೊಳ್ಳುವ ಸೇತುವೆ, ಪ್ಯಾರಾಶೂಟು ಮೊದಲಾದವುಗಳ ಕಲ್ಪನೆಗಳೂ ಇವೆ. ಕೇವಲ ಅಂದಿನ ಅಗತ್ಯಗಳನ್ನಷ್ಟೆ ಅಲ್ಲದೆ, ಮುಂದೆ ಭವಿಷ್ಯದಲ್ಲಿ ಬೇಕಾಗಬಹುದಾದ ಅಥವಾ ಬರಬಹುದಾದ ಯಂತ್ರಗಳನ್ನೂ ಕಲ್ಪಿಸಿಕೊಳ್ಳಲು ಈತ ಪ್ರಯತ್ನಿಸಿದ್ದ ಎನ್ನುವುದು ಈತನ ವಿಶಿಷ್ಟ ಪ್ರತಿಭೆಗೆ ಸಾಕ್ಷಿ. ಇಟಲಿಯ ಹಲವು ನಗರಗಳಲ್ಲಿ ಈತ ಇಂಜಿನೀಯರಾಗಿಯೂ, ಕಲಾವಿದನಾಗಿಯೂ ಕೆಲಸ ಮಾಡಿದ್ದ. ಸುಪ್ರಸಿದ್ಧ ಕಲಾವಿದ ಮೈಖೇಲ್ ಏಂಜೆಲೋವಿಗೆ ಪ್ರತಿಸ್ಪರ್ಧಿ ಎಂದು ಖ್ಯಾತಿಯನ್ನೂ ಪಡೆದಿದ್ದ. ಫ್ಲಾರೆನ್ಸಿನ್ ಒಂದು ಚರ್ಚಿನಲ್ಲಿ, ಇವರಿಬ್ಬರೂ ಕಲಾವಿದರ ಚಿತ್ರಗಳನ್ನೂ ಎದುರೆದುರು ರಚಿಸಿ ಇಡಬೇಕೆನ್ನುವ ಯೋಜನೆಯೂ ಇತ್ತಂತೆ. ಆದರೆ ಅದು ಕೈಗೂಡಲಿಲ್ಲ ಎನ್ನುತ್ತದೆ ಚರಿತ್ರೆ.

ಬಹುಶಃ ಭವಿಷ್ಯವಿಜ್ಞಾನ ಅರ್ಥಾತ್ ಫ್ಯೂಚರಿಸಂ ಎನ್ನುವ ವಿಜ್ಞಾನದ ಮೊದಲ ಪ್ರತಿಪಾದಕ ಈತ ಎನ್ನಬಹುದು. ಅಂದು ಇದ್ದ ಅರಿವಿನ ಹಿನ್ನೆಲೆಯಲ್ಲಿ ಮುಂದೆ ಏನಾಗಬಹುದು ಎನ್ನುವುದನ್ನು ಕಲ್ಪಿಸಿಕೊಂಡು, ಅದಕ್ಕೆ ತಕ್ಕಂತಹ ಯಂತ್ರಗಳನ್ನು ವಿನ್ಯಾಸ ಮಾಡಲು ಪ್ರಯತ್ನಿಸಿದ್ದ ಪ್ರತಿಭೆ ಲಿಯೊನಾರ್ದೊ ಡಾವಿಂಚಿ. ಏಪ್ರಿಲ್ ೧೫ ಈತನ ಹುಟ್ಟುಹಬ್ಬ.


ಇದರ ಧ್ವನಿಸಂಚಿಕೆಯನ್ನು ಇಲ್ಲಿ ಕೇಳಬಹುದು: https://anchor.fm/kollegala/episodes/135-32-ecqp5n.

-ಕೊಳ್ಳೇಗಾಲ ಶರ್ಮ


ಕೃಪೆ: ಜಾಣಸುದ್ದಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x