ಸೋಲು: ಗಿರಿಜಾ ಜ್ಞಾನಸುಂದರ್

ಸಪ್ಪೆ ಮೊರೆ ಹಾಕಿಕೊಂಡು ಬರುತ್ತಿದ್ದ ಪ್ರೀತಿಯನ್ನು ಪಕ್ಕದ ಮನೆ ಆಂಟಿ “ಏನ್ ಪುಟ್ಟಿ! ರಿಸಲ್ಟ್ ಏನಾಯ್ತು? ಯಾವಾಗ್ಲೂ ಫಸ್ಟ್ ಬರ್ತಿದ್ದೆ ಅಲ್ವಾ. ಈಸಲ ಏನು? ಸ್ವೀಟು ಕೊಡ್ಲಿಲ್ಲ?” ಸುಮ್ಮನೆ ತಲೆ ತಗ್ಗಿಸಿ ಅಲ್ಲಿಂದ ಹೊರಟು ಬಂದಿದ್ದಳು.

ಶಾಲೆಯಲ್ಲಿ ಎಲ್ಲದರಲ್ಲೂ ಮುಂದಿದ್ದ ಹುಡುಗಿ. ಇಡೀ ಶಾಲೆಗೆ ೧೦ನೇ ತರಗತಿಯಲ್ಲಿ ಎರಡನೇ ಸ್ಥಾನದಲ್ಲಿ ಪಾಸಾಗಿದ್ದವಳು. ಅವರಪ್ಪ ಅದಕ್ಕಾಗಿ ತಮ್ಮ ಸುತ್ತಮುತ್ತಲಿನ ಮನೆಗಳಿಗೆಲ್ಲ ಒಂದೊಂದು ಸ್ವೀಟ್ ಡಬ್ಬವನ್ನೇ ಹಂಚಿದ್ದರು. ತಮ್ಮ ಶಾಲೆಯಿಂದ ಬೇರೆ ಶಾಲಿಗಳಿಗೂ ಬಹಳಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತಂದುಕೊಟ್ಟವಳು. ಅರೋಗ್ಯ ಅಷ್ಟಕ್ಕಷ್ಟೇ ಆಗಿದ್ದರು, ಅದು ಅವಳ ವಿದ್ಯೆಯ ಮೇಲೆ ಎಂದು ಪ್ರಭಾವಬೀರಿರಲಿಲ್ಲ.

ಅಂಥದರಲ್ಲಿ ಕಾಲೇಜು ಮೆಟ್ಟಿಲೇರುತ್ತಲೇ ಅವಳಿಗೇಕೋ ವಿಜ್ಞಾನ ಕಬ್ಬಿಣದ ಕಡಲೆ ಅನ್ನಿಸುತ್ತಿತ್ತು. ಬೇಡವೆಂದರೂ ಅವಳ ತಂದೆ ತಾಯಿಯರ ಒತ್ತಾಯಕ್ಕೆ ವಿಜ್ಞಾನವನ್ನು ಓದಲು ಒಪ್ಪಿದಳು. ಅದು ಇಂದಿನ ಪರಿಸ್ಥಿತಿಗೆ ಕಾರಣವಾಗಿತ್ತು. ಅವಳು ದ್ವಿತೀಯ ಪಿ ಯು ಸಿ ಯಲ್ಲಿ ಫೇಲಾಗಿದ್ದಳು. ಅದು ಅವಳ ಜೀವನವನ್ನೇ ಬದಲಾಯಿಸಿತ್ತು. ಅವಳ ಸೋಲನ್ನು ಒಪ್ಪಲು ಅವಳ ಮನಸ್ಸು ತಯಾರಾಗಿರಲ್ಲ. ಅದಕ್ಕೆ ತಕ್ಕಂತೆ ವಯಸ್ಸು ತನ್ನ ಸಮತೋಲನ ಕಳೆದುಕೊಂಡಿತ್ತು. ಹದಿಹರೆಯ, ಮನಸ್ಸಿನಲ್ಲಿ ತನ್ನತನದ ತೊಳಲಾಟ.. ಅದರಲ್ಲೂ ಅವಳು ಕಪ್ಪು.. ಹಾಗಾಗಿ ಸುತ್ತಮುತ್ತಲಿನ ಜನ ಅವಳನ್ನು ಹೀಯಾಳಿಸುತ್ತಿದ್ದರು. ಅದನ್ನು ಮೀರಿ ತನ್ನತನವನ್ನು ಭದ್ರವಾಗಿ ಬೆಳೆಸುತ್ತಿದ್ದಳು. ಆದರೆ ಇಂದಿನ ಸೋಲು ಅವಳನ್ನು ಕುಸಿಯುವಂತೆ ಮಾಡಿತ್ತು.

ಅಪ್ಪ ಅಮ್ಮ ನೆಂಟರಿಷ್ಟರು, ಸುತ್ತಮುತ್ತಲಿನ ಜನ ಇವರನ್ನೆಲ್ಲ ಹೇಗೆ ಎದುರಿಸುವುದು? ಸುಳ್ಳು ಹೇಳುವುದು ಬೇಡ ಎಂದು ತೀರ್ಮಾನ ಮಾಡಿದ್ದಳಾದ್ದರಿಂದ ಅವಳ ಪರಿಸ್ಥಿತಿ ಇನ್ನು ಕಷ್ಟವಾಗಿತ್ತು. ನಿಜ ಹೇಳಲು ಮನಸ್ಸಿಲ್ಲ, ಸುಳ್ಳು ಹೇಳಲು ಇಷ್ಟವಿಲ್ಲ. ಅವಳ ಮನೆಯಲ್ಲಿ ಯಾರು ಏನು ಹೇಳುತ್ತಿಲ್ಲ, ಅವಳ ಮನಸ್ಸಿಗೆ ನೋವಾಗಬಾರದು ಎಂದು. ಆದರೆ ಅವಳಿಗೆ ಪರಿಸ್ಥಿತಿಯನ್ನು ಎದುರಿಸಲು ತಿಳಿಯುತ್ತಿಲ್ಲ. ಅಪ್ಪ ಅಮ್ಮ ಸಮಾಧಾನವಾಗೇ ಇದ್ದಾರೆ. ಅವರೇ ಎಲ್ಲರಿಗು ಏನೋ ಹೇಳಿ ಸುಮ್ಮನಾಗಿಸಿದ್ದಾರೆ. ಆದರೆ ಅವಳಿಗೆ ತನ್ನಮೇಲೆ ಅಸಮಾಧಾನ.

ಹೊರಗೆಲ್ಲೂ ಓಡಾಡಲು ಮನಸ್ಸಿಲ್ಲ. ಮನೆಯಲ್ಲಿ ಒಬ್ಬಳೇ ಒಂಟಿಯಾಗಿರಬೇಕೆನಿಸುತ್ತಿದೆ. ಹಾಗೆ ಒಂಟಿಯಾರಲು ಅಭ್ಯಾಸವೇ ಇಲ್ಲದ ಹುಡುಗಿ. ಯಾವಾಗ್ಲೂ ಒಂದಷ್ಟು ಜನರ ಗುಂಪು ಅವಳದ್ದು. ಅಂಥದ್ದರಲ್ಲಿ ಇಂದು ಅವಳಿಗೆ ಏನೋ ಮಂಕು. ಯಾರು ಬೇಡ, ಏನು ಬೇಡ. ಅವಳನ್ನು ಏನು ದೂಷಿಸದಿದ್ದರೂ ಅವಳಿಗೆ ಎಲ್ಲದರಲ್ಲೂ ಮುಜುಗರ. ತನಗೆ ತಾನೇ ತನ್ನನು ತಪ್ಪಿತಸ್ಥಳಂತೆ ಕಾಣುತ್ತಿದ್ದಳು. ಆತ್ಮಾಭಿಮಾನ ಇಲ್ಲದಂತಾಗಿತ್ತು. ಅವಳ ಪ್ರೀತಿಯ ಅಪ್ಪ ಅವಳ ಮನವೊಲಿಸಲು ಬಹಳ ಪ್ರಯತ್ನ ಪಟ್ಟಿದ್ದರು “ಬರಿ ಗಣಿತದಲ್ಲಿ ಅದರಲ್ಲೂ ಬರಿ 5 ಅಂಕದಲ್ಲಿ ಫೇಲಾಗಿದ್ದೆಯ… ಇನ್ನೊಂದು ಸಾರಿ ಬರೆದು ಪಾಸಾದರೆ ಆಯಿತು ಬಿಡು. ಎಷ್ಟುಜನ ಫೇಲಾಗಿದ್ದರೆ! ನೀನೋಬ್ಬಳೇನ? ನನ್ನ ಮಗಳು ಎಷ್ಟು ಜಾಣೆ ಅಂತ ನಂಗೊತ್ತು. ಧೈರ್ಯವಾಗಿರ್ಬೇಕು” ಬಹಳಷ್ಟು ಬಾರಿ ಮಗಳ ಮನಸ್ಸನ್ನು ಹಗುರ ಮಾಡಲು ಪ್ರಯತ್ನಿಸುತ್ತಿದ್ದರು.

ಹೀಗೆಯೇ ಸುಮಾರು 15 ದಿನಗಳು ಕಳೆದಿದ್ದವು. ಅವಳಿಗೆ ಎಲ್ಲವು ಸಾಕಾಗಿತ್ತು. 16 – 17 ವಯಸ್ಸು ತನ್ನ ಹೆಜ್ಜೆಯನ್ನು ಸಮಾಜದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಆದರೆ ಪರಿಸ್ಥಿತಿ ಅವಕಾಶವನ್ನು ಕಸಿದುಕೊಂಡಿತ್ತು. ಮನಸ್ಸು ಘಾಸಿಗೊಂಡಿತ್ತು. ಸಮಾಜದಲ್ಲಿ ನಾನೇನೂ ಮಾಡಲಾರೆ.. ನಾನು ದುರದೃಷ್ಟವಂತೆ… ನನಗೇನು ಮಾಡಲು ಸಾಧ್ಯವಿಲ್ಲ ಅನ್ನುವ ಭಾವನೆ ದಿನೇ ದಿನೇ ಹೆಚ್ಚಾಗಿತ್ತು. ಅವಳ ಬಲಿಷ್ಠವಾದ ಮನಸ್ಸು ತೀರಾ ಹದಗೆಟ್ಟಿತ್ತು. ಊಟ, ತಿಂಡಿ ಬೇಡವಾಗಿತ್ತು. ತನ್ನನ್ನೇ ತಾನು ದ್ವೇಷಿಸತೊಡಗಿದಳು.

ಒಂದು ಸಂಜೆ ಸೀದಾ ತಾರಸಿಯ ಮೇಲಕ್ಕೆ ಹೋಗಿ ಕುಳಿತಿದ್ದಳು. ಕತ್ತಲಾದ್ದರಿಂದ ಸುತ್ತಮುತ್ತಲಿನವರಿಗೆ ಅವಳು ಕುಳಿತಿರುವುದು ಕಾಣುತ್ತಿರಲಿಲ್ಲ. ಅವಳು ಮನಸ್ಸು ಮಾಡಿದ್ದಳು ಇನ್ನು ಜೀವನ ಸಾಕೆಂದು.. ಏನು ಪ್ರಯೋಜನವಿಲ್ಲದ ಈ ಬದುಕು ಏಕೆ? ಕೊನೆಗೊಳಿಸಬೇಕು.
8 ಮಹಡಿಯ ಮೇಲಿನ ತಾರಸಿ. ಅಲ್ಲಿಂದ ಬಿದ್ದು ಪ್ರಾಣ ಕೊಡಬೇಕು ಎಂದು. ಅಲ್ಲಿಂದ ಒಮ್ಮೆ ಕೆಳಗೆ ನೋಡಿದಳು..”ಅಬ್ಬಾ….ಎಷ್ಟೊಂದು ಭಯವಾಯುತ್ತೆ” ಬೇಡ ಬೇಡ… ಒಂದು ವೇಳೆ ನನ್ನ ಜೀವ ಹೋಗದೆ ಬರಿ ಕೈ ಕಾಲು ಮುರಿದುಕೊಂಡರೆ ಏನು ಗತಿ… ಛೆ ಛೆ. ನಿಧಾನವಾಗಿ ಇಳಿದು ಮನೆಗೆ ವಾಪಸ್ಸಾದಳು. ಮತ್ತದೇ ಯೋಚನೆ.

ಮಾರನೆಯ ದಿನ ತನ್ನ ಕೊಠಡಿಯ ಒಳಗೆ ಫ್ಯಾನ್ ನೋಡುತ್ತಾ ನೇಣು ಹಾಕಿಕೊಂಡರೆ ಹೇಗೆ? ಎಂದು ಯೋಚಿಸುತ್ತಿದ್ದಳು. ಸರಿ. ಹಾಗೆ ಮಾಡೋಣ ಏನು ನೇಣು ಹಾಕಿಕೊಳ್ಳಲು ಲೆಕ್ಕಾಚಾರ ನಡೆಸುತ್ತಿದ್ದಳು. ಅಷ್ಟರಲ್ಲಿ “ಅಕ್ಕ.. ಒಂದು ಪಿಚ್ಚರ್ ಗೆ ಹೋಗಣ ಬರ್ತೀರಾ? ನಾನೇ ಕರ್ಕೊಂಡೋಗ್ತೀನಿ ಬನ್ರೀ.ನಂಗೆ ಸಂಬಳ ಬಂದಿದೆ.. ಹಂಗೆ ಬರ್ತಾ ಪಾನಿ ಪೂರಿ ತಿನ್ಕೊಂಡು ಬರೋಣ?” ಅವಳ ಮನೆ ಕೆಲಸದ ಹುಡುಗಿ ರತ್ನ ಅವಳನ್ನು ಕೇಳುತ್ತಿದ್ದಳು. ಇವಳಿಗಿಂತ ಸುಮಾರು ಎರಡು ವರ್ಷ ಚಿಕ್ಕವಳಿರಬಹುದು. ಅವನನ್ನು ನೋಡಿ ಪ್ರೀತಿಗೆ ಆಶ್ಚರ್ಯವಾಗಿತ್ತು. “ರತ್ನ.. ನೀನು ಏನು ಓದಿದ್ದೀಯ?”
“ಅಯ್ಯೋ ಅಕ್ಕ ನಾನು 8 ನೇ ಕ್ಲಾಸ್ ಫೇಲ್ ಆದ್ಮೇಲೆ ಓದೋದು ಬಿಟ್ಟು ಅಮ್ಮಂಗೆ ಮನೆ ಕೆಲಸ ಮಾಡೋಕೆ ಸಹಾಯ ಮಾಡ್ತಿನಿ. ಮೊದಲು ಅವ್ರು ಜೊತೆ ಹೋಗತಿದ್ದೆ… ಈಗ ನಾನೇ ಒಂದೊಂದು ಮನೆಗೆ ಕೆಲ್ಸಕ್ಕೆ ಹೋಗತೀನಿ”
ಅವಳಿಗೆ ಒಂಥರಾ ವಿಚಿತ್ರ ಅನ್ಸ್ತಿತ್ತು. ಬರಿ 8 ನೇ ಕ್ಲಾಸ್ ಓದಿ ಈ ಹುಡುಗಿ ಮನೆ ಮನೆ ಪಾತ್ರೆ ತೊಳೆದು, ಕೆಲಸ ಮಾಡಿಕೊಟ್ಟು ಇಷ್ಟೊಂದು ಖುಷಿಯಾಗಿದ್ದಾಳೆ. ಅವಳ ಅಪ್ಪ ಗಾರೆ ಕೆಲಸ ಮಾಡುವ ಮನುಷ್ಯ. ಅಮ್ಮ ಮನೆ ಮನೆ ಕೆಲಸ ಮಾಡೋ ಹೆಣ್ಣು. 4 ಜನ ಮಕ್ಕಳು. ಸಂತೋಷವಾಗಿದ್ದಾಳೆ. ರತ್ನ ಸದಾ ಹಾಡುತ್ತ ಕುಣಿಯುತ್ತ ಕೆಲಸ ಮಾಡುತ್ತಿರುತ್ತಾಳೆ.

ಪ್ರೀತಿಯ ಮನಸ್ಸು ಒಂದು ಪಾಠ ಕಲಿತಿತ್ತು. ಸಂತೋಷವಾಗಿರೋದಕ್ಕೆ ಯಾವುದೇ ಸಂದರ್ಭ, ವಿಷಯ ಬೇಕಾಗುವುದಿಲ್ಲ. ಅದು ನಮ್ಮಲ್ಲಿರುತ್ತದೆ. ಎಲ್ಲದರಲ್ಲೂ ಸಂತೋಷ ಹುಡುಕಲು ನಮಗೆ ಸಾಮರ್ಥ್ಯ ಇರಬೇಕು ಅಷ್ಟೇ. ಸೋಲು ಗೆಲುವು ಜೀವನದ ಒಂದು ಮಜಲುಗಳು. ಗೆದ್ದಾಗ ಹೀಗಿದ್ದರೆ ಪ್ರಭಾವ ಸೋತಾಗ ಕುಗ್ಗುತ್ತೆವೆ. ಹಾಗಾಗಿ ಎರಡನ್ನು ಸಂಭಾಳಿಸುವುದನ್ನು ಕಲಿಯಬೇಕು. ಮನಸ್ಸಿನ ಸಮತೋಲನವನ್ನು ಕಾಪಾಡಲು ನಮ್ಮಿಂದ ಮಾತ್ರ ಸಾಧ್ಯ. ಯಾವುದೇ ಜಾಗವಾಗಲಿ, ಜನವಾಗಲಿ, ವಸ್ತುವಾಗಲಿ ನಮ್ಮನ್ನು ಸಂತೋಷ ಪಡಿಸಲು ಸಾಧ್ಯವಿಲ್ಲ. ಪಾಠ ಕಲಿಯಲು ಶಾಲೆಯಷ್ಟೇ ಅಲ್ಲ, ಶಿಕ್ಷಕರಷ್ಟೇ ಅಲ್ಲ… ಅದು ಎಲ್ಲರಲ್ಲಿಯೂ ಎಲ್ಲೆಡೆಯಲ್ಲಿಯೂ ಸಿಗುತ್ತದೆ. ಕಲಿಯಲು ಆಸಕ್ತಿ ಬೇಕಷ್ಟೆ.

ಮುಂದಿನ ದಿನಗಳಲ್ಲಿ ಪ್ರೀತಿ ಬೇರೆ ವ್ಯಕ್ತಿಯೇ ಆದಳು. ಎಂದಿನಂತೆ ಶಿಸ್ತಿನ ಜೀವನದಲ್ಲಿ ತೊಡಗಿದಳು. ಸೋಲನ್ನು ಗೆಲುವನ್ನು ಸಮವಾಗಿ ಸ್ವೀಕರಿಸಲು ಸಿದ್ಧಳಾದಳು.

ಗಿರಿಜಾ ಜ್ಞಾನಸುಂದರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Umashankar Huskur Kappanna

ನಿಮ್ಮ ಕಥೆ ತುಂಬಾ ಚೇನಾಗಿತು ಮೇಡಂ
ಪ್ರೀತಿ ಅಂಥ ಬಹಳ ಜನ ಹುಡುಗಿಯರು ಕೆಲವೊಮ್ಮೆ ತಮ್ಮ ಸ್ವಂತ ಧೃಡ ನಿರ್ಧಾರ ತೆಗೆದುಕೊಳಬೇಕು ತಂದೆತಾಯಿಗಳು ಅವರನ್ನು ಬೆಂಬಲಿಸಬೇಕು ಅಕ್ಕಪಕ್ಕದ ಮನೆಯವರನು ಪರಿಗಣಿಸದೆ ತಮ್ಮ ಮಕಳಿಗೆ ಬೆಂಬಲಿಸಬೇಕು

Girija
Girija
3 years ago

ಧನ್ಯವಾದಗಳು ಸರ್

2
0
Would love your thoughts, please comment.x
()
x