ದೇವ್ರಾಟ..: ತಿರುಪತಿ ಭಂಗಿ

ಪ್ಯಾಟಿಗೆ ಹೋಗಿದ್ದ ಹನಮ್ಯಾ ಪೋಲಿಸರ ಕೈಯಾಗ ಸಿಕ್ಕಾಕ್ಕೊಂಡ ಬಲ್ಲಂಗ ಗಜ್ಜತಿಂದಿದ್ದ. ‘ಸತ್ನೋ ಯಪ್ಪಾ..’ ಅಂತ ನರಳ್ಯಾಡಕೋತ, ಕುಂಟಕೋತ, ಕುಂಡಿಮ್ಯಾಲ ಗಸಾಗಸಾ ತಿಕ್ಕೋತ ಮನಿಹಾದಿ ಹಿಡದಿದ್ದ. “ಈ ಪೋಲಸ್ರಿಗೆ ಮುಕಳಿ-ಮಾರಿ ಯಾವ್ದಂತ ಒಂದೂ ಗೊತ್ತಿಲ್ಲ, ದಬಾದಬಾ ದನಾ ಬಡ್ದಂಗ ಬಡಿತಾರ, ನಮ್ದ ಎಂತ ಸರಕಾರೋ,ಎಂತಾ ಕಾನೂನೋ..ಏನ್ ಆಡಳಿತಾನೋ..ನಮ್ಮ ದೇಶದಾಗ..! ಎಲ್ಲ ದೇವ್ರಾಟ. ಮೈತುಂಬ ಹಿಗ್ಗಾಮುಗ್ಗಾ ಪೋಲಿಸ್ರು ಥಳಸಿದ ಏಟಿಗೆ ಹನಿಮ್ಯಾನಿಗೆ ಎಂದೂ ನೆನಪಾಗದ ದೇಶದ ಸರಕಾರ, ಕಾನೂನು, ಆಡಳಿತಗಳೆಲ್ಲ ನೆನಪಾಗಿ ಮೈತುಂಬ ಪರಚಿದಂತಾದವು.

ನಮಗ ರಕ್ಷಣಾ ಕೊಡವ್ರ ನಮಗ ಹಿಂಗತಿ ಬಡದ್ರ ಹ್ಯಾಂಗಾದಿತು. ತಾಯಿನ ಮಕ್ಕಳ್ನ ಕೊಂದಂಗಲ್ಲೇನು? ಮನೆ ಮುಟ್ಟತನಕ ಹನಮ್ಯಾನ ತಲೆಯಲ್ಲಿ ಪೋಲಿಸ್ರೇ ಕುಣದಾಡ್ತಿದ್ರು. ಎಷ್ಟೇ ಕಷ್ಟವಾಗ್ಲಿ ನಾನೂ ‘ಆಯ್.ಪಿ.ಎಸ್’ ಮುಗಸ್ಬೇಕು. ಕಿರಣ್ ಬೇಡಿತರಾ, ಅಣ್ಣಾಮಲೈ ಹಾಗೆ, ಸಾಂಗ್ಲಿಯಾನರಂತೆ ದೇಶದ ನಂಬರ್ ಒನ್ ಪೋಲಿಸ್, ಜನಮೆಚ್ಚಿದ ಪೋಲಿಸ್, ಜನರ ಅಂತಃಕರಣದಲ್ಲಿ ಉಳಿಯುವಂತೆ ಹೆಸರು ಗಳಿಸುವ ಪೋಲಿಸ್ ಆಗ್ಬೇಕು. ಹಿಂಗತಿ ದನಾಬಡೆದಂತೆ ಮನುಷ್ಯರನ್ನು ಬಡೆಯುವ ಪೋಲಿಸರಿಗೆ ತಕ್ಕ ಶಾಸ್ತಿ ಮಾಡ್ಬೇಕು. ಮೈತುಂಬ ಬಿದ್ದ ನೋವಿನ ಸಂಕಟದಲ್ಲೂ ಹನಿಮ್ಯಾ ಬಗೆಬಗೆಯಾಗಿ ತನ್ನ ಕನಸಿನ ಕುದರೆಯನ್ನೇರಿ ಮನೆಯತ್ತ ನಡೆದಿದ್ದ.

“ಹೊರಗ ಹೋಗಬ್ಯಾಡ ಹೋಗಬ್ಯಾಡ ಅಂತ ಬಡ್ಕೊಂಡ್ಯಾ ,ನೀ ಎಲ್ಲಿ ಕೇಳ್ತಿ ನನ್ನ ಮಾತ, ಊರಿಗೆ ಉಪಗಾರ ಮಾಡಾಕ ಹೋಗಿ ಮುಲ್ಲಾ ಸೊರಗಿದಂತ” ಹನಿಮ್ಯಾಗ ಬಾರ ಮೂಡಿದ ಕಡೆಗೆಲ್ಲ ಹರಿಸಿಣಾ ತೈದ, ಅದರ ಜೋಡಿ ಒಂದ ತಟಕ ಕೊಬ್ರಿ ಎಣ್ಣಿ ಮಿಕ್ಸ್ ಮಾಡಿ, ಹನಮ್ಯಾನ ಬೆನ್ನ ಮ್ಯಾಲ,ಕುಂಡಿಮ್ಯಾಲ ಚಂದ್ರವ್ವ ಹಚ್ಚತಿದ್ದಳು. ಹನಮ್ಯಾ “ಯವ್ವಾ..ಯವ್ವಾ ಸತ್ನೋ..ನಿದಾನ್ಕ ಹಚ್ಚ ಬೇ..” ಎಂದು ನೋವಿನ ಸಂಕಟಕ ಗೋಳಾಡ್ತಿದ್ದ. “ಅವ್ರ ಕೈ ಕತ್ತರಸ್ಲಿ, ಅವ್ರ ಹೆಂಡರ ರಂಡಿ ಆಗ್ಲಿ, ದನಾ ಬಡ್ದಂಗ ಹೆಂಗ ಬಡ್ದಾರ ನೋಡ, ಖಾಕಿ ಅಂಗಿ ಮೂಳಗೋಳ” ಎಂದು ಹನಮ್ಯಾ ಪಡುವ ಸಂಕಟಾ ನೋಡಿ, ಚಂದ್ರವ್ವನ ಹೆತ್ತ ಕರಳ ಚುರುಗುಡಿದಾಗ ಅಕಿ ಬಾಯಿಂದ ಬೈಗುಳಗಳ ಸುರಿಮಳೆ ಸುರಿದವು.

ಅವ್ರ ಕೆಲಸಾ ಅವ್ರ ಮಾಡ್ಯಾರ, ಇಂವಗೇನ್ ತಿಳವಳಿಕಿಲ್ಲೇನ್.. ಒಂದ ವಾರದಿಂದ ಆತ, ಟಿ.ವಿ ಒಳಗ ಹೇಳಕತ್ಯಾರ, ಪತ್ರಿಕಿವಳಗೂ ತಿಳಿಸ್ಯಾರ, ಇಡೀ ಜಗತ್ತಿಗೆ ಗೊತ್ತ ಇದ್ದ ಮಾತ ಐತಿ, ಯಾರೂ ಮನಿ ಬಿಟ್ಟ ಹೊರಗ ಹೋಗಬ್ಯಾಡ್ರಿ, ಒಂದ ತಿಂಗಳೊಪ್ಪತ ಮನ್ಯಾಗ ಇರ್ರೀ, ಚೀನಾದಿಂದ ಒಂದ ವೈರಸ್ ಬಂದೈತಿ, ಅಂತ ಬಬ್ಬಿಹೊಡ್ಕೊಂಡ ಪ್ರಚಾರ ಮಾಡ್ಯಾರ. ಹಂತಾದ್ರಾಗೂ ಇಂವ ಬಂಡ ಧೈರ್ಯಮಾಡಿ, ಅಲ್ಲ..ಅಲ್ಲಾ.. ಸೊಕ್ಕಿನಿಂದ ಸರಕಾರ ಆದೇಶ ಮುರದ್ರ, ನೋಡಿ ನೋಡಿ ಸರಕಾರ ಹೆಂಗ ಸುಮ್ಮ ಕುಂದ್ರತೈತಿ..? ಅದಕ ಇಂವಗ ಸರಿಯಾದ ಪಾಠ, ಕಲಿಸ್ಯಾರ ಪೋಲಿಸ್ರ. ನ್ಯೂಸ್ ಪೇಪರ್ ಓದ್ಕೋತ ಕುಂತಿದ್ದ ಹನಿಮ್ಯಾನ ತಂಗಿ ಶಾಂತಿ, ಅಡ್ಡಬಾಯಿ ಹಾಕಿ, ಅವರ ಅವ್ವನ ಬೈಗಳಗಳನ್ನು ವಿರೋಧಿಸಿದ್ಳು.

ಹನಮ್ಯಾಗ ಮದಲ ಹಸಿಮೆನಿಸಿನಕಾಯಿ ಕಡದಷ್ಟ ಉರಿತ ಮೈಯೊಳಗಿದ್ರ, ಅಂವ್ನ ತಂಗಿ ಶಾಂತಿ ಆಡಿದ ಮಾತ ಕೇಳಿ ಮತ್ತ ಗಾಯದ ಮ್ಯಾಲ ಬರಿ ಎಳದಂಗಾತು. “ಏ ಸೋಡಾಬುಡ್ಡಿ ಬಾಯ್ ಮುಚಗೊಂದ ಕುಂದ್ರ, ನಿನಗತೆ ಇಪ್ಪತ್ತನಾಕ ತಾಸ್ನೂ ಪುಸ್ತಾಕ ಹಿಡಕೊಂಡ ಕುಂದ್ರಾಕ ನನ್ನೇನ ಹೆಣ್ಣಪ್ಯಾಲಿ ಮಾಡಿಯೇನ್” ಎಂದು ತಿನಕ್ಯಾಡಿ ಮಾತಾಡಿದ. “ಗಣಮಕಳಗತೆ ಅಡ್ಯಾಡಿ ,ಈಗ ಉಣ್ಣ ಸುಕಾ ಹೆಂಗೈತಿ” ಎಂದು ಶಾಂತಿ ಕೊಕ್ಕಾಡ್ಸಿ ಮನಿ ಹಾರಿಹೋಗುವಂಗ ನಗತೊಡಗಿದ್ಳು.

“ಏನ್ ಪಿಸಿಪಿಸಿ ಹಲ್ಲ ಕಿಸಿತಿಯವ್ವಾ ನೀ..ಬರಬರ್ತ ಏನ್ ಸಣ್ಣ ಹುಡಿಗಿ ಅಕ್ಕಿಯೇನ್, ಅಣ್ಣ ಇಸ್ಟಕೊಂದ ನೋವ ತಿಂದ ಹಾವಿನಗತೆ ಒದ್ಯಾಡಾಕತ್ಯಾನ ಅಂವ್ನ ಒಂದ ತಟಗ, ಸಮಾದಾನ ಮಾಡೂದ ಬಿಟ್ಟ ನಗ್ತಿಯಲ್ಲಾ.. ನಿಂದ ಕಳ್ಳರಾ ಎಂಥದ್ದು” ಎಂದು ಚಂದ್ರವ್ವ ಶಾಂತಿಗೆ ಹಚ್ಚಿ ಜಾಡ್ಸಿದ್ಳು.

“ಇಂವಗೇನ್ ಬುದ್ಧಿಲ್ಲೋ ತಿಳವಳಿಕಿಲ್ಲೋ.. ‘ಎಮ್.ಎ’ ಮುಗಿಸ್ಯಾನ, ಆ ಬುದ್ದಿ ಏನ್ ಎಮ್ಮಿಕಾಯಾಕ ಇಟಗೊಂದಾನೇನ್, ದೇಶದ ತುಂಬ ಸೆಕ್ಸನ್ 144 ಜಾರಿ ಐತಿ, ಯಾರೂ ಮನಿಬಿಟ್ಟ ಎಲ್ಲೂ ಅಡ್ಯಾಡಬಾರ್ದು. ಹಂಗೇನರ ಅಡ್ಯಾಡಿದ್ದ ಆದ್ರ , ಸೆಕ್ಷನ್ 162, 169 ಪ್ರಕಾರ ಪೋಲಿಸ ಮಾಂವಗೊಳ ಹಿಡದ ಗುಮ್ಮುದಷ್ಟ ಅಲ್ಲ, ಗಾಡ್ಯಾಕ ಹಕ್ಕೊಂಡ ಹೋಗಿ, ಕುರಿಮರಿ ದಡ್ಯಾಗ ಹಾಕಿದಂಗ ಜೇಲನ್ಯಾಗ ಹಾಕ್ತಾರ” ಎಂದು ಶಾಂತಿ ಅವರ ಅವ್ವಗ ಪಟಪಟ ‘ಎಳ್’ ಹುರದಂಗ ಹೇಳಿದ್ಳು. ಮಗಳ ಮಾತ ಕೇಳಿ ಚಂದ್ವಗ ಮನದಾಗ ಖುಷಿ ಆತು. “ ಹುಚನನ್ನ ಹಾಟ್ಯಾ, ನೀ ತಂಗಿಗೆ ಬರೀ ಪುಸ್ತಾಕದಾನ ಹುಳಾ, ಕೀಟಾ, ತಿಗಣಿ ಅಂತ ಬೈತಿ, ನೋಡಲ್ಲಿ ನನ್ನ ‘ಬಂಗಾರಗಿಂಡಿ’ ಎಷ್ಟೆಲ್ಲಾ ಕಾನೂನ ತಿಳ್ಕೊಂಡೈತಿ..” ನಾನೊಂದ ಮೂಳಿ. ಸುಮ್ನ ಅಕಿಗೆ ಬೈದ್ಯಾ ಅಂತ ಚಂದ್ರವ್ವ ಒಂದಕಡೆ ಹಳಹಳಿಸಿದ್ರ ಮತ್ತೊಂದ ಕಡೆ, ಮಗಳ ಶಾಣ್ಯಾತನ ಕಂಡು ಹಿರಿಹಿರಿ ಹಿಗ್ಗಿ ಹೀರಿಕಾಯ ಆದ್ಳು.

ಹನಮ್ಯಾ ಕುಂಡಿ ಮ್ಯಾಕ ಮಾಡ್ಕೊಂಡ ಮಲಗಿದ್ದ. ಏನಂತಿರಿ ಅನ್ರೀ. ನೀವ ಅನ್ನುವಂಗ ಆಗೇತಿ. ನಾ ಏನ್ ಪ್ಯಾಟಿಗೆ ಚೈನಿ ಮಾಡಾಕ ಹೋಗಿರಲಿಲ್ಲ. ಸಿದ್ದವ್ವ ಆಯಿವು ತೇಕಿನ ಗುಳಿಗಿ ಮುಗದ ಮೂರ ದಿನಾ ಆಗಿದ್ದುವಂತ, ಅಕಿಗೆ ಗುಳಗಿ ತರಾಕ ಹೋಗಿದ್ಯಾ. ಅಕಿಗೆರಾ ಯಾರ ಅದಾರ ದಿಕ್ಕ. ಮುಪ್ಪಿನ ಕಾಲಕ್ಕ ಪಾಪ..! ಕುಂತ್ರ ಏಳಾಕ ಬರಂಗಿಲ್ಲ, ಎದ್ರ ಕುಂದ್ರಾಕ ಬರಾಂಗಿಲ್ಲ. ಇದ್ದ ಗಂಡಮಗ ಒಬ್ಬ ಹೆಂತಿ ಶರಗ ಹಿಡ್ಕೊಂಡ ಪ್ಯಾಟಿ ಸೇರ್ಯಾನ, ಅಂವಗ ತಿಳದ್ರ ಅಲ್ಲಿಂದ ಅಕಿ ಕರ್ಚಿಗೆ ಸಾವೀರಾ, ಐದನೂರಾ ಕಳಸ್ತಾನ. ಇಲ್ಲಂದ್ರ ಅದೂ ಇಲ್ಲ. ಸಿದ್ದವ್ವ ಆಯಿ ಮೊದಲ್ನಿಂದ ನನ್ನ ಮೊಮ್ಮಗನ ತರಾ ನೋಡ್ಕೋತ ಬಂದಾಳ. ನಮ್ಮ ಅಪ್ಪ ಸತ್ತಾಗ ನಮಗ ತಿನ್ನಾಕ ಗತಿ ಇದ್ದಿದ್ದಿಲ್ಲ. ನಾನ ಸಾಲಿಗೆ ಹೊಂಟ್ರ, ನನ್ನ ಕೈಯಾಗ ಮುಟಗಿ ತುಂಬಾ ಸಿಂಗಾದ ಬ್ಯಾಳಿನೋ, ಕೊಬ್ರಿ ಚೂರ್ನೋ, ಕೊಟ್ಟ ಕಳಸ್ತಿದ್ಳು ಸಿದ್ದವ್ವ ಆಯಿ. ಅಕಿ ಅನ್ನಾ ತಿಂದ ಬೆಳದೈತಿ ಈ ದೇಹ. ಈಗ ಅಕಿಗೆ ಮಗಾ ತೇಕಿನ ಗುಳಗಿ ಕೊಟ್ಟ ಕಳಸಿಲ್ಲ, ಬೆಳತಾನ ಅಕಿದ ಮ್ಯಾಲಿನ ಉಸಲ ಮ್ಯಾಲ, ತಳಗಿನ ಉಸಲ ತಳಗ ಆಗಿರ್ತೈತಂತ, ನಿನ್ನೆ ಬಿದ್ದಕೋತ,ಎದ್ದಕೋತ ನಾ ಇದ್ದಲ್ಲಿಗೆ ಬಂದು “ಹನಮ್ಯಾ.. ತೇಕಿನ ಗುಳಿಗೆ ಆಗ್ಯಾವೋ ಕೂಸ, ಬೆಳತಾನ ಬಾಳಗೋಳ್ಯಾಡಿನಿ” ಅಂತ ಅಂದಾಗ ನನ್ನ ಕರಳ ಕಿವಿಚಿದಂಗ ಆತು. ಆಗ ನಾಯೇನ್ ಅಕಿಗೆ “ದೇಶದಾಗ ಹಿಂಗಿಂಗ ನಿಷೇಧಾಜ್ಞೆ ಐತಿ, ದೇಶಕ್ ಒಂದ ಭಯಂಕರ ವೈರಸ್ ಬಂದೈತಿ, ಇಡೀ ದೇಶಕ ದೇಶಾನ ಬಾಗಲಾ ಹಕ್ಕೊಂಡ ಮನ್ಯಾಗ ಕುಂತೈತಿ, ಅಂತ ಇತಿಹಾಸ ಹೇಳಿದ್ರ, ಅಕಿಗೆ ಇದೆಲ್ಲ ಹೆಂಗ ತಿಳಿಬೇಕು..? ಒಂದ ವೇಳೆ ಹಿಂಗ ಹೇಳಿದ್ನೀ ಅಂತ ಇಟಗೋ.. “ಹೋಗಲಾರದಕ್ಕ ನೆವಾ ಹೇಳತಾನನೋಡ ಭಾಡ್ಯಾ” ಅಂದ್ರ ನಾ ಆಗ ಸತ್ತಂಗ. ಹಿಂತಾ ವ್ಯಾಳೆದಾಗ ಅಕಿಗೆ ಅಷ್ಟೂ ಮಾಡಲಿಲ್ಲಂದ್ರ ಹ್ಯಾಂಗ..? ಅದಕ್ಕ ಎಲ್ಲಾ ಗೊತ್ತಿದ್ದು ಪ್ಯಾಟಿಗೆ ಹೋದದ್ದು. ಮಗನ ಮಾತ ಕೇಳಿದಾಗ ಚಂದ್ರವ್ವನ ಕಣ್ಣಾಗ ಕಣ್ಣೀರ ತಟಾತಟಾ ತಟಗುಡ್ತಿದ್ದು. ಶಾಂತಿ ಹನಿಮ್ಯಾನ ಮಾತ ಕೇಳಿ, ಮೆಲ್ಲಕಾಸ ಬಂದು ಹನಮ್ಯಾನ ಗಾಯಗಳ ಮ್ಯಾಲ ಕೈ ಇಟ್ಟು. ತೆಪ್ಪಾತ ಅಣ್ಣಾ ಅಂದ್ಳು. ಆಗ ಹನಮ್ಯಾ ಸೋಡಾಬುಡ್ಡಿ ಅಂದು ನಕ್ಕ.


ಹನಮ್ಯಾ ಮರದಿನಾ ಹರ್ಯಾಗೆದ್ದ ಮೆಲ್ಲಕಾಸ ಹಳಾಸರದ ಬಂಡಿಗಾಲಿಗತೆ ಅಂಕಡೊಂಕಾಗಿ ಎಡಗೈಯಾಗ ಪ್ಲಾಸ್ಟಿಕ್ ತಂಬಗಿ ಹಿಡ್ಕೊಂಡ ನೆಡ್ಕೋತ ಬೈಲಕಡೆಗೆ ಹೊಂಟಿದ್ದ. ಅಂವ ಹೋಗವ ಭಾವಭಂಗಿ ನೋಡಿ ನನಗ ನಗು ಬಂತು. ಇಂವನಾಪ್ನ ಸಣ್ಣ ಹುಡ್ಗುರಗತೆ ಚಡ್ಯಾಗ-ಗಿಡ್ಯಾಗ ಮಾಡ್ಕೊಂಡಾನೇನ್ ಪುಣ್ಯಾತ್ಮ. ಅಂವ ಹೋಗು ಪರಿ ನೋಡಿ ನನ್ನ ನಗಿ ಮತ್ತಷ್ಟ ಹೆಚ್ಚಾತು. ಲೇ.. ಹನಮ್ಯಾ.. ಒಂದ ತಟಗ ಲಗೂನ ಬರ್ಬಾರ್ದಾ..? ಥೂ ಅಸಯ್ಯ..! ಎಂದು ಭಾರಿ ಹಸನಾಗಿರುವ ಮನಷ್ಯಾರಗತೆ ನಾನು ಅಂವನಿಗೆ ಹಿಯ್ಯಾಳಿಸಿದೆ. ಹತ್ತಿರ ಹೋದಂಗೆ ವಾಸನೆ ಬರಲಿಲ್ಲ. ಹನಮ್ಯಾ ತಿರುಗಿ ನಿಂತು ಮಾತು ಪ್ರಾಂಬಿಸಿದ. ನಿನ್ನೆ ತಾನು ಪ್ಯಾಟಿಗೆ ಹೋಗಿ ಪೋಲಿಸರಿಂದ ಗಜ್ಜ ತಿಂದದ್ದು, ಬೆಳತಾನ ನೋವ ತಾಳಲಾರದ ಗೋಳಾಡಿದ್ದು, ಹೇಳುವಾಗ ಅಂವನ ಮೋತಿ ತೀರಾ ಸಣ್ಣದಾಗಿತ್ತು. ಪೋಲಿಸರನ್ನು ಬೈಯ್ಯುವುದು ಹನಮ್ಯಾ ನಿಲ್ಲಿಸಿರಲಿಲ್ಲ. ತಾನು ‘ಆಯ್. ಪಿ.ಎಸ್’ ಅಧಿಕಾರಿ ಆಗುವ ಕನಸನ್ನು ಮತ್ತೊಮ್ಮೆ ನನ್ನೊಂದಿಗೆ ಹಂಚಿಕೊಂಡು ಸಮಾಧಾನ ಪಟ್ಟುಕೊಂಡ.
ಆಗ ನನಗೆ ವಾಸ್ತವ ಅರಿವಾಗಿ ದಿನಾಲೂ ಅಂವನೊಂದಿಗೆ ಮಾಡುತ್ತಿದ್ದ ನಕಲಿ, ಚ್ಯಾಷ್ಟಿ ಅಂದು ಮಾಡಲಿಲ್ಲ. ಯಾಕಂದರೆ ಹನುಮನಿಗೆ ಪೋಲಿಸರು ಹೊಡೆದ ಪೆಟ್ಟು ಪೂರೈಸಿತ್ತು. ನನಗು ಅಂವನ ಸ್ಥಿತಿ ಕಂಡು ಮರುಗಿದೆ.

ಹನಮ್ಯಾ ಎಂದಿನಂತೆ ದೂರ ಹೋಗಲಿಲ್ಲ. ಅಲ್ಲೆ ಜಾಲಿಗಿಡದ ಕೆಳಗೆ ಅಯ್ಯಪ್ಪೋ.. ಅನಕೋತ ಕುಳಿತ. ಕೆಳಗೆ ಕುಂಡಿ ಅವಾಜ್ ಮಾಡಿದಾಗ ತಾನೇ ಒಂದಿಷ್ಟು ಮುಳುಮುಳು ನಕ್ಕ. ಮ್ಯಾಲೇಳುವಾಗ ಹರಸಾಹಸಮಾಡಿ ಎದ್ದ. “ಲೋಕಕ್ಕ ಹೆಂತಾ ಗತಿ ಬಂತ ನೋಡ್ಲೇ.. ಮನ್ನೆ ಮನ್ನೆಯರಾ ಪ್ರವಾಹ ಬಂದು, ಇಡೀ ಬದುಕ ಸರ್ವನಾಶ ಮಾಡಿ ಹೋಗೇತಿ, ನಮ್ಮ ದೇಶದಾಗ ಒಂದ ಆದ್ರ, ಆಸ್ಟ್ರೇಲಿಯಾದಾಗ ಇಡೀ ಕಾಡುಮೇಡಗಳು ಸುಟ್ಟ ಬೂದಿಯಾಗಿ, ಎಷ್ಟೋ ಜೀವಿಗಳು ಹಾಳಾಗಿ ಹೋಗ್ಯಾವ, ಮತ್ತೊಂದ ಕಡೆ ಜ್ವಾಲಾಮುಖಿ, ಈಗ ನೋಡಿದ್ರ ಈ ಕರೋನಾ ವೈರಸ್..! ಲೋಕಪ್ರಳಯ ಆಗುದಂದ್ರ ಇದ ಇರ್ಬೇಕು” ಎಂದು ಹನಮ್ಯಾ ಹೇಲುಕೇರಿಯಿಂದ ಮನಿಮುಟ್ಟುಮಟಾ ದೇಶಕ್ಕೆ, ಲೋಕಕ್ಕೆ ಒದಗಿದ ಆಪತ್ತು ಕುರಿತು ಮಾತಾಡುತ್ತಿದ್ದ. “ಹೆಂತಾ ಜಾಗದಾಗ ಹೆಂತೆಂತ ವಿಚಾರ ಚರ್ಚಾಮಾಡ್ತಾನಪಾ ಇಂವಾ” ಅಂತ ನಗು ಬಂದರೂ ಸುಮ್ಮನಾದೆ. ಹನಮ್ಯಾ ತುಂಬಾ ಬುದ್ಧಿವಂತ ಅನ್ನುವುದು, ಲೋಕಜ್ಞಾನ ಅರಿತವನೆನ್ನುವುದು, ನಾನು ಬಲ್ಲವನಾಗಿದ್ದೆ.

ಪ್ರಾಥಮಿಕ ಶಾಲೆಯಿಂದ ಹಿಡಿದು ಡಿಗ್ರೀ ವರೆಗೂ ಇಬ್ಬರೂ ಕುಡಿಯೇ ಶಾಲೆ ಕಲಿತಿದ್ದರಿಂದ, ಇಬ್ಬರೂ ಒಂದೇ ಊರಲ್ಲಿ ಇರುವುದರಿಂದ ಹನಮ್ಯಾನೊಂದಿಗಿನ ನನ್ನ ಸ್ನೇಹ ತುಂಬಾ ಗಟ್ಟಿಯಾಗಿತ್ತು. ಚಿಕ್ಕವನಿರುವಾಗಲೇ ಹನಮ್ಯಾ ತಂದೆಯನ್ನು ಕಳೆದುಕೊಂಡು ಏನೂ ಅರಿಯದ ತಾಯಿಯೊಂದಿಗೆ ತಾನೂ ಪಡಬಾರದ ಕಷ್ಟ ಅನುಭವಿಸಿದ್ದ. ಕೂಲಿನಾಲಿ ಮಾಡಿಕೊಂಡು, ಆಡು,ಮೇಕೆ ಮೇಸಿಕೊಂಡು ಶಾಲೆ ಕಲಿತು ಬುದ್ಧಿವಂತರ ವಲಯದಲ್ಲಿ ಹೆಸರು ಮಾಡಿಕೊಂಡಿದ್ದ. ಅರ್ಜಿ ಹಾಕಿದರೆ ಯಾವ ನೌಕರಿಯನ್ನು ಬೇಕಾದರು ಪಡೆಯಬಲ್ಲವನಾಗಿದ್ದ. ಆಗಾಗ ನನ್ನೊಂದಿಗೆ ಕಾಲೇಜ್ ಪ್ರೋಪೇಸರ್ ಆಗ್ತಿನಿ, ನನಗೆ ಬೋಧನೆಯಂದರೆ, ಓದಿಸುವುದೆಂದರೆ ಭಾಳ ಇಷ್ಟ ಎಂದು ಇಂಗ್ಲೀಷ್‍ನಲ್ಲಿ ‘ಎಮ್.ಎ’ ಮುಗಿಸಿ, ‘ಪಿ.ಎಚ್.ಡಿ’ ಮಾಡಲು ಹವನಿಸುತ್ತಿದ್ದ. ಆದ್ರೆ ಇಂದು ಅಂವನ ನಿರ್ಧಾರ ಬದಲಾಗಿದ್ದು ಕಂಡು ನನಗೆ ಅಚ್ಚಿರಿಯಾಗಿತ್ತು. ನಾನು ‘ಆಯ್.ಪಿ ಎಸ್’ ಆಗ್ತಿನಿ ಅನ್ನುವ ಛಲ ಅವನಿಗೆ ಬಂದದ್ದು, ನಿನ್ನೆ ಪೋಲಿಸರು ಕೊಟ್ಟ ಲಾಟಿ ಏಟಿನಿಂದ ಅಂತ ನಾನು ಬೇಗ ಅರಿತುಕೊಂಡೆ.

“ನೀ ಆರಾಮ ತಗೋರಪೋ.. ನಾನ ಹೊಕ್ಕೀನಿ” ಎಂದು ಹನಮ್ಯಾನಿಂದ ಕಾಲ್ಕಿತ್ತು ಬರಬೇಕೆಂದು ಕೊಂಡರೆ ಅದು ಸಾದ್ಯವಾಗಲಿಲ್ಲ. ಹನಮ್ಯಾರವ್ವ ಚಂದ್ರವ್ವ ನನ್ನ ನೋಡಿದ್ದೆ ತಡಾ “ಬಾ ತಮ್ಮಾ.. ಚ್ಯಾ ಕುಡ್ಕೊಂಡ ಹೋಗುವಂತೆ” ಎಂದು ಕೂಗಿದಳು. “ನಾ ಇನ್ನ ಹಲ್ಲ ತಿಕ್ಕಿಲ್ಲ ಯವ್ವಾ” ಎಂದು ನೂನಚಿಕೊಳ್ಳಲು ಗುದ್ದಾಡಿದೆ. “ಬಿಸಿನೀರ ಅದಾವ ತಗೊರ್ರಿ ಬಾಯ್ ತೊಳ್ಕೊರ್ರೀ..” ಎಂದು ಶಾಂತಿ ಕೈಯಲ್ಲಿ ಚರಗಿ ತುಂಭಿಕೊಂಡು ಬಂದಾಗ ಅನಿವಾರ್ಯವಾಗಿ, ಬಾಯಿ ತೊಳಿದುಕೊಂಡು ಹನಮ್ಯಾ ಮಲಗಿದ್ದ ಕಾಟದ ತುದಿಗೆ ಕುಳಿತುಕೊಂಡೆ. ಹನಮ್ಯಾ ಕೈ ತೊಳಿದುಕೊಂಡವನೇ ಬಂದು ‘ಡುಬಕ್’ ಅಂತ ಹಾಸ್ಗಿಮ್ಯಾಲ ಉರಳಿದ. ಚಂದ್ರವ್ವ ಮತ್ತೊಮ್ಮೆ ನಿನ್ನೆ ನಡೆದದ್ದು ಚುಟುಕಾಗಿ ಹೇಳಿ ಮುಗಿಸಿದಳು. ಶಾಂತಿಯ ಕಣ್ಣುಗಳು ನನ್ನೇ ನೋಡುತ್ತಿದ್ದವು. ಅವಳ ಕಣ್ಣಲ್ಲಿ ಮತ್ತೇರಿಸುವ ಶಕ್ತಿ ಇತ್ತು. ಗೆಳೆಯನ ತಂಗಿ ನನಗೂ ತಂಗಿ ಎಂದು ಭಾವಿಸಕೊಂಡ ನನ್ನ ಭಾವನೆಗೆ ಶಾಂತಿ ವಿರುದ್ಧವಾಗಿದ್ದಳು. ಆಗಾಗ ನನ್ನ ಜೀವ ಹಿಂಡುತ್ತಿದ್ದಳು. ಹನಿಮ್ಯಾನ ಪೋನಿನಿಂದ ಗೊತ್ತಿಲ್ಲದೆ ಮಿಸ್ ಕಾಲ್ ಮಾಡಿ, ನನ್ನ ಮನಸ್ಸು ಕದಡುತ್ತಿದ್ದಳು. ಒಂದು ಸಾರಿ ತಿಳಿಸಿ ಹೇಳಿದರೂ ಅಕಿಯ ಮನಸ್ಸು ಇಂಗತಿಂದ ಮಂಗನಂತೆ ಆಡುತ್ತಿತ್ತು.

ಚಂದ್ರವ್ವ ಬಿಸಿಬಿಸಿ ಚ್ಯಾ ತಂದು ನನಗು,ಹನಮನಿಗು ಮತ್ತು ತನಗೊಂದು ತಗೆದುಕೊಂಡು ಕುಡಿಯುತ್ತ ನನ್ನ ಕುರಿತು “ಅಲ್ಲ ತಮ್ಮಾ ಹಿಂಗತಿ ಇಡೀ ಜಗತ್ತ ಮನ್ಯಾಗ ಕುಂತ್ರ ಹೊಟ್ಟಿಗೇನ್ ಮಣ್ಣ ತಿನ್ನೂದೇನ್ ಯಪ್ಪಾ..ರೊಕ್ಕರೂಪಾಯಿ ಇದ್ದವ್ರು, ಕಾಳಕಡಿ ಇದ್ದವ್ರು ಆರಮ ಇರ್ತಾರ, ಅವ್ರರ್ದ ಹೆಂಗ ಇರ್ಬೇಕ್ ಹಂಗ ಇರ್ತೈತಿ, ನಮ್ಮಂತ ಪಡಪೋಶಿಗಳ ಕಥಿ ಹೆಂಗ” ಅಂತ ನಾ ದೊಡ್ಡ ಶ್ಯಾನ್ಯಾ ಅನ್ನುವರಗತೆ ನನ್ನ ಕೇಳಿದ್ಳು. ಶಾಂತಿಗೆ ನನ್ನ ಬುದ್ಧಿವಂತಿಕೆ ಗೊತ್ತಿತ್ತು. ಕುಂತಲ್ಲೇ ‘ಕಿಸಕ್’ ಅಂತ ನಕ್ಕು ನನ್ನ ಉತ್ತರಕ್ಕಾಗಿ ಚಂದ್ರವ್ವನ ಜೋಡಿ ತಾನೂ ಕಾದ್ಳು. ನಾ ಗುದ್ದಾಡಿ, ತಿನಕ್ಯಾಡಿ ನನ್ನ ತೆಲ್ಯಾಗಿದದ್ದು, ಟಿ.ವಿ ವಳಗ ತೋರಸಿದ ನಾಲೇಜ್ ನಂಬಕೊಂಡ “ನೋಡ ಯವ್ವಾ, ಈ ವೈರಸ್ ಸಾಮಾನ್ಯದಲ್ಲ, ಚೀನಾ ದೇಶದವ್ರು, ನಮ್ಮ ದೇಶದ ಮ್ಯಾಲ ಇದ್ದ ಸಿಟ್ಟು ಸೇಡವಿಗೊಸ್ಕರ, ಇದನ್ನ ತಯ್ಯಾರ ಮಾಡಿ, ಬಿಟ್ಟಾರ, ಇದ ನಮಗಷ್ಟ ತೊಂದ್ರಿ ಕೊಟ್ಟಿಲ್ಲ ತಯ್ಯಾರ ಮಾಡಿದ ಆ ಪಾಪಿಗೊಳ್ಗೂ ನಾಶ ಮಾಡೈತಿ, ಇದ ಒಂದ ನಮೋನಿ ನೆಗಡಿ ಜಡ್ಡ ಇದ್ದಂಗ, ಒಬ್ಬರಿಂದ ಒಬ್ಬರಿಗೆ ಬರ್ತೈತಂತ, ಅದಕ್ಕ ಯಾವುದಕ್ಕೂ ಹುಷಾರಾಗಿ ಇರ್ಬೇಕು, ಅದಕ್ಕ ಇಡೀ ಜಗತ್ತ ಈ ವೈರಸ್ಗೆ ಅಂಜಿ ಸತ್ತಾರ, ಒಂದ ತಿಂಗಳೊಪ್ಪತ ಕಷ್ಟ ಆದ್ರೂ ಮುಂದ ನಾಮ್ಗ ಆರಮ ಅಲ್ಲ” ಎಂದು ಐದಾರುವಾಕ್ಯದ ಉತ್ತರ ಹೇಳಿದಂತೆ ಚಂದ್ರವ್ವಗ ಹೇಳಿದ. ಆಗ ಶಾಂತಿಯ ಮೋತಿ ನನ್ನ ಮಾತು ಕೇಳಿ ಚಂಡು ಹೂವಿನಂತೆ ಅರಳಿಕೊಂಡಿತ್ತು.

ಹನಮ್ಯಾ ಹಾಸಿಗೆಯಲ್ಲಿ ಮಲಗಿಕೊಂಡು “ಊರಾಗ ಹೆಂಗೆಂಗೈತಪಾ ವಾತಾವರಣಾ” ಎಂದು ಚೌಕಾಸಿಮಾಡಿದ.ನಾನು ಎಲ್ಲಿ ಹೊರಗ ಹೋಗಿಲ್ಲ. ಬರೀ ಟಿ.ವಿ ನೋಡ್ಕೋತ ಕುಂತಿನಿ ಅಂತ ಹನಿಮ್ಯಾನಿಗೆ ನನ್ನ ದಿನಚರಿಯನ್ನು ಹೇಳತ್ತಿದ್ದೆ. ಆಗ “ ಅಯ್ಯೋ ತಮ್ಮಾ ಈ ಟಿ.ವಿ ಅವರೇನ ಪಾ.. ತೋರ್ಸಿದ್ದ ತಿರಗಾಮುರಾ ತೋರಿಸಿ ತೋರಿಸಿ ಹೆದ್ರಸ್ತಾರ” ಎಂದು ಚಂದ್ರವ್ವ ಅಡ್ಡ ಬಾಯಿ ಹಾಕಿದ್ಳು. “ಅದು ಅವರ ಕರ್ತವ್ಯ, ಜನರಿಗೆ ತಿಳವಳಿಕೆ ಕೊಡ್ಬೆಕಲ್ಲಾ.. ಅಷ್ಟ ತಿಳವಳಿಕೆ ಹೇಳಿದ್ರೂ ಹಿಂತವ್ರು ಹೋಗಿ ಹಿಂಗೆಲ್ಲಾ ಮಾಡ್ಕೊಂಡ ಬರ್ತಾರಲ್ಲ” ಅಂತ ಶಾಂತಿ ಮತ್ತೊಮ್ಮೆ ಹನಿಮ್ಯಾನ ಕುರಿತು ಹಂಗಿಸಿದಂತೆ ಮಾತಾಡಿದಳು. ಹನಮ್ಯಾ ಮಲಗಿದಲ್ಲಿಯೇ ಮತ್ತೊಮ್ಮೆ ಸೋಡಾಬುಡ್ಡಿ ಅಂದು ನಕ್ಕಿದ್ದ.

ಹೊರಗೆ ಮಂದಿ ಬರಗುಡುತ್ತ ಒಬ್ಬರ ಹಿಂದೆ ಒಬ್ಬರು ಕಾರಹುಣ್ಣಿಮೆ ಎತ್ತುಗಳಂತೆ ಓಡತೊಡಗಿದ್ದರು. ಏನಾತು ಎಂದು ಒಬ್ಬಿಬ್ಬರನ್ನು ವಿಚಾರಿಸಿಲು ಚಂದ್ರವ್ವ, ಶಾಂತಿ ಅಂಗಳಕ್ಕೆ ಇಳಿದು ವಿಷಯ ತಿಳಿದು ಒಳಬಂದಿದ್ದರು. “ಸಿದ್ದವ್ವ ಆಯಿ ಹ್ವಾದ್ಳಂತ” ಎಂದು ಹೇಳಿದಾಗ ಹನಿಮ್ಯಾ ತನ್ನ ಮೈಯಾಗಿನ ನೋವ ಮರೆತು ಮ್ಯಾಲೆದ್ದು ಸೆಟದು ಕುಂತಿದ್ದ. “ಅಕಿಸಮಂದ ಪೋಲಿಸ್ರ ಕೈಯಾಗ ಸಿಕ್ಕ ಕುಂಡಿಚರ್ಮಾ ಸುಲಸ್ಕೊಂಡ ಬಂದೀನಿ, ಅಕೀ ಹ್ವಾದ್ಳಾ” ಎಂದು ಹನಿಮ್ಯಾ ಕಣ್ಣು ತೊಯ್ಸಿಕೊಂಡ.

ಇಡೀ ದೇಶಕ ದೇಶನ ಲಾಕ್ ಡೌನ್ ಐತಿ, ಈಗ ಬಸ್, ರೈಲು, ಕಾರು,ಜೀಪು, ಯಾವ ಗಾಡಿನೂ ಓಡ್ಯಾಡುದಿಲ್ಲ, ಸಿದ್ದವ್ವ ಆಯಿ ಮಗನಿಗೆ ಮತ್ತ ಸ್ವಸಿಗೆ ಸುದ್ಧಿ ಹ್ಯಾಂಗ ಮುಟ್ಟಸೂದು? ಈಗಂತು ಯಾವ ಬೀಗ್ರೂ ಬಿಜ್ಜರೂ ಬರಂಗಿಲ್ಲ, ಈಗ ಹೆಂಗಮಾಡ್ಬೇಕೆಂದು ಇಡೀ ಊರ ದೈವವೇ ಸಿದ್ದವ್ವ ಆಯಿ ಮಣ್ಣ ಮಾಡುವ ಕುರಿತು ವಿಚಾರ ಮಾಡಾಕತ್ತಿತ್ತು. ಹನಮ್ಯಾ ತನ್ನ ನೋವೆಲ್ಲ ಬದಿಗೆ ಸರಿಸಿ. ಊರ ದೈವಕ್ಕ ಕೈ ಜೋಡಿಸಿ. “ ಸಿದ್ದವ್ವ ಆಯಿ ನನಗ ಸ್ವಂತ ಅವ್ವನ ಸಮಾ.. ಅಕಿದ ಏನ್ ಕರ್ಚ ಐತಿ ಅದನೆಲ್ಲಾ ನಾನ ಕೊಡ್ತಿನಿ” ಎಂದು ಹೇಳಿದಾಗ ಇಡೀ ಊರ ಮಂದಿಯಲ್ಲ ‘ಬಪ್ಪರೇ ಮಗನ..’ ಎಂದು ಹನಮ್ಯಾನ ಕೊಂಡಾಡಿದ್ರು. “ನೀ ಸಾಲಿ ಕಲತದ್ದಕ್ಕೂ ಸಾರ್ಥಕ ಆತು. ದಿಕ್ಕ ಇಲ್ಲದ ಹೆಣಕ್ಕ ದಿಕ್ಕ ತೋರ್ಸು ನಿನ್ನ ಒಳ್ಳೆತನಕ್ಕ ಆ ಸಿದ್ದವ್ವ ಆಯಿನ ನಿನಗ ಒಳ್ಯಾದ ಮಾಡ್ತಾಳಪೋ ಪುಣ್ಯಾತ್ಮಾ” ಎಂದು ಸಿದ್ದವ್ವ ಆಯಿ ಜೋಡಿ ದಿನಾ ಕುಂದ್ರತಿದ್ದ ಕಾಶವ್ವ ಆಯಿ ಕಣ್ಣೀರಿಟ್ಳು. ಹನಮ್ಯಾನ ಮಾತ ಕೇಳಿ ನನಗಂತು ಆಗ ತತ್ರಾನಿ ಒಳಗಿನ ನೀರ ಕುಡದ್ಹಂಗಾತು. ಸಿದ್ದವ್ವ ಆಯಿ ಮಣ್ಣ ಹನಿಮ್ಯಾನ ಮುಂದ ನಿಂತ ಪುರೈಸಿದ. ಹನಮಪ್ಪನ ಬಾಲದಗತೆ ನಾನೂ ಹನಮ್ಯಾನ ಜೋಡಿನೇ ಇದ್ದೆ.


ಬರೊಬ್ಬರಿ ಎರಡ ತಿಂಗಳ ಸನೇಕ ಬಂದ್ರೂ ವೈರಸ್ ಹಾವಳಿ ದೇಶದಾಗ ಕಡಿಮಿ ಅನಿಸಿರಲಿಲ್ಲ. “ಇವ್ನೌನ ಇದೆಂಥಾ ರೋಗೋ ಮಾರಯ್ಯಾ.. ಕಾಲರಾ.. ಪ್ಲೇಗಾ, ದುರ್ಗವ್ವನಬ್ಯಾನಿಯಂತ ರೋಗನ ಎಷ್ಟೋ ಚಲೋ ಇದ್ದು. ಇದೇನ ರಾಕ್ಷಸಕ್ಕ ಹುಟ್ಟೇತೇನ” ಎಂದು ಮಲ್ಲಪ್ಪಜ್ಜ ಬ್ಯಾಸಗಿ ಶೆಕಿಗೆ ಅಂಜಿ, ಮನಿ ಒಳಗ ಕುಂದ್ರೂದ ಆಗದ ಬಂಗಾಲಿಗಿಡದ ನೆಳ್ಳಿಗೆ ಕುಂತ ‘ಉಷ್ ಉಷ್’ ಅಂತ ಮೈಯ್ಯಾಗಿನ ಬನೇನ್ ಬಿಚ್ಚಿ ಗಾಳಿ ಹೋಡ್ಕೋತ ಇಧಿಯಾಗಿ ಕಾಡ್ತಿದ್ದ ವೈರಸ್ ನ ಬೈಯಾಕತ್ತಿದ್ದ. “ಹುಟ್ಟಿದ್ದಕ್ಕ ಸಾವ ಇರ್ಬೇಕಲ್ಲ” ಎಂದು ಕವಡೆಪ್ಪ ನುಡಿಗಟ್ಟ ಹೇಳಿದ. “ಅದೇನ್ ಸಾಯತೈತೋ ಎಲ್ಲರ್ನೂ ಸಾಯಿಸಿ ತಾನಷ್ಟ ತೈ ತೈ ಕುಣಿತೈತೋ” ಎಂದು ಮಲ್ಲಪ್ಪಜ್ಜ ವೈರಸ್ ಕುರಿತು ವಿಷಾಧವ್ಯಕ್ತಪಡಿಸಿದ. ಇದೆಲ್ಲಾ ದೇವ್ರಾಟ ಭೂಮಿಮ್ಯಾಲ ಪಾಪ ಹೆಚ್ಚಾಗೇತಿ, ಜನ್ರಿಗೆ ದೇವ್ರಂದ್ರ ಭಯಾ ಭಕ್ತಿಯಿಲ್ಲ, ಹಿರ್ಯಾರು ಕಿರ್ಯಾರು ಅನ್ನು ದ್ಯಾನ ಇಲ್ಲಾ, ಕಲಿಯುಗ ಪೂರಾ ಕೆಟ್ಟ ಕೆರಾಹಿಡದೈತಿ ಅದಕ್ಕ ದೇವ್ರ ಹಿಂತಾ ಆಟಾ ಆಡಾಕತ್ಯಾನ, ಇದೆಲ್ಲ ಅವನಾಟಾನ.. ಎಂದು ಕವಡೆಪ್ಪ ಕಳವಳವಯಕ್ತಪಡಿಸಿದ. ಇವರಾಡುವ ಮಾತು ನನ್ನ ಕಿವಿಗೆ ಬಿದ್ದರು ನಾನು ಅವರತ್ತ ತಲೆ ಕೆಡಿಸಿಕೊಳ್ಳದೆ ನಾನು ಮೊಬೈಲ್ದಲ್ಲಿ ವಿಡಿಯೋ ನೋಡುತ್ತ ಕುಳಿತುಕೊಂಡಿದ್ದೆ.

“ನಾನು ಶಾಂತಿ, ಅಣ್ಣಾ ಹೆಂಗೆಂಗೋ ಮಾಡಾಕತ್ಯಾನ ಮನಿಕಡೆ ಬರ್ರೀ” ಎಂದು ಮೇಸೆಜ್ ಮಾಡಿದ್ಳು. ಅಲ್ಲಿಂದ ಜಂಗನೇ ಎದ್ದು ಸಡಿಲಾದ ಲುಂಗಿಯನ್ನು ಸೊಂಟದಲ್ಲಿ ತುರಕಿಕೊಳ್ಳುತ್ತ ಹನಿಮ್ಯಾನ ಮನಿಯತ್ತ, ಓಡತೊಡಗಿದೆ. ಮ್ಯಾಲೆ ಬಿಸಿಲು, ಊರೆಲ್ಲ ಮೌನವಾಗಿತ್ತು. ಹನಿಮ್ಯಾಗ ಏನಾತು? ಅನ್ನುವ ಗಾಬರಿಯಲ್ಲಿ ಬಿಸಿಲಿನ ಪರಿವೇ ಇರದೆ ಓಡಿದೆ. ಹನಮ್ಯಾ ಗೋಳಾಡುತ್ತಿದ್ದ “ಸತ್ನೋ ಯಪ್ಪಾ.. ಎದಿ ಬ್ಯಾನಿ ಆಗೇತ್ರೋ..” ಎಂದು ಪೂರಾ ಬೇವತುಹೋಗಿದ್ದ. ಆಜುಬಾಜು ಮನೆಯವರು ಒಂದಿಬ್ಬರು ಬಂದರು, ಲಗೂನ್ ದವಾಖಾನಿಗೆ ವಯ್ಯುನು ಎಂದು ಸಾವಕಾರ ಚಂದ್ರಯ್ಯನ ಕಾರ್ ಮನಿಮುಂದೈತಿ, ಅಂದವನೆ ನಾನು ಚಂದ್ರಯ್ಯನ ಮನೆ ಬಾಗಿಲು ತಟ್ಟಿದೆ. ಚಂದ್ರಯ್ಯ ಸವಾಕಾರ ಕಾರ್ ಕೊಡುದ ಇಲ್ಲ ಅನ್ನದಕ್ಕ ತಮ್ಮಾ ಪ್ಯಾಟ್ಯಾಗ ಗಾಡಿ ಸೀಜ್ ಮಾಡ್ತಾರಂತ ಟಿವ್ಯಾಗ ತೋರ್ಸಾಕತ್ತಿದ್ರು, ನೀನು ತಿಳದಾಂವ ಅದಿ, ಈಗ ಪರಸ್ಥಿತಿ ಹೆಂಗೈತಿ ಅನ್ನುದ ನಿನಗ ಗೊತ್ತು. ಈ ಕಾರೇನ್ ಅಂಬ್ಯೂಲೆನ್ಸ್ ಗಾಡಿಯಲ್ಲ ಎಂದು ನನ್ನ ಮೋತಿಗೆ ಹೊಡದಂಗೆ ಹೇಳಿ ಕಳಿಸಿದ್ದ.

ಹನಿಮ್ಯಾನಿಗೆ ಪೋಲಿಸರು ಹೊಡೆದ ಏಟು ಪುರೈಸಿತ್ತು. ‘ಲೇ ದವಾಖಾನಿಗೆ ತೋರಸ್ಕೋರೋ’ ಎಂದು ನಾ ದುಂಬಾಲು ಬಿದ್ದಿದ್ದೆ. ನನ್ನ ಮಾತು ಹನಮ್ಯಾ ಕೇಳಲಿಲ್ಲ. “ನಾಕದಿಂದಾಗ ಒಳಗಾಯ ಮಾಯತೈತಿ” ಅಂತ ಹೇಳಿ ನಕ್ಕಿದ್ದ. ಈಗ ಅವನ ಸ್ಥಿತಿ ನೋಡಿ ನನ್ನ ಕೆಳಗಿದ್ದ ನೆಲವೇ ನಡುಗಿದಂತೆ ಆಗುತ್ತಿತ್ತು. ಚಂದ್ರವ್ವ, ಶಾಂತಿ ಒಂದೇ ಸಮನೆ ಬೋರಾಡಿ ಅಳುತ್ತಿರುವುದು ನನ್ನ ಕಣ್ಣಿಂದ ನೋಡಲಾಗುತ್ತಿರಲ್ಲ.

ತಮ್ಮಾ ಪ್ಯಾಟಿಗೇನ್ ಹೋಗುದ ಬ್ಯಾಡಾ, ಅಲ್ಲಿ ದವಾಖಾನ್ಯಾಗ ಡಾಕ್ಟರ್ ಇರ್ತಾರೋ ಇಲ್ಲೋ.. ಮಗ್ಗಲ ಊರಾಗ ಒಬ್ಬ ಬೆಂಗಳೂರನ್ಯಾಗ ಡಾಕ್ಟರ್‍ಕಿ ಕಲ್ಯಾಕ ಹ್ವಾದ ಹುಡಗ ಬಂದಾನಂತ ಅಂವನ ಕಡೆ ಕರ್ಕೊಂಡ ಹೋಗುನು. ಪಟಕ್ನ ಬೈಕ್ ಚಲೂ ಮಾಡ್ ಎಂದು ಕೆಂಚಪ್ಪಕಾಕಾ ನನಗೆ ಹೇಳಿದ. ಬೈಕ್ ಚಲೂಮಾಡ್ಕೊಂಡ ಹನಮ್ಯಾನ ನಟ್ಟ-ನಡಬಾರ್ಕ ಕುಂದರಸ್ಕೊಂಡ ಊರ ಸೀಮಿ ದಾಟೂದ್ರಾಗ ಹನಮ್ಯಾನ ಮೈ ತಣ್ಣಗ ಆನಿಕಲ್ಗತೆ ಆಗಿತ್ತು. ಕೆಂಚಪ್ಪಕಾಕಾ “ಗಾತ ಆತ್ಲೇ.. ತಮ್ಮಾ ಗಾಡಿ ಹೊಳಸು” ಎಂದು ನನ್ನ ಮುಂಡಿ ಹಿಚಕಿದ. ಅವನ ಮಾತಿನ ಲಹರಿ ತಿಳಿದ ನನ್ನ ಕಣ್ಣುಗಳಿಂದ ಬಳಬಳ ನೀರು ಉದರತೊಡಗಿದವು. ನಾ ಅಳುವುದನ್ನು ಕಂಡು ಕೆಂಚಪ್ಪಕಾಕಾ.. ..
“ದೇವ್ರಾಟಾ ಬಲ್ಲವರಾರು
ಅವನ ಎದುರು ನಿಲ್ಲವ್ರಾರು..?”
ಎಂದು ಹೇಳುತ್ತ ಅವನೂ ತನ್ನ ಟಾವೆಲ್ಲಿನಿಂದ ಕಣ್ಣುವರಿಸಿಕೊಂಡನು.

ತಿರುಪತಿ ಭಂಗಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x