Facebook

ಅನಾದಿ ಮೊರೆಯ ಕೇಳಿ..: ತಿರುಪತಿ ಭಂಗಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಭಾಳಂದ್ರ ಇನ್ನ ಒಂದೆರ್ಡ ದಿನ ಉಳಿಬಹುದ… ನಮ್ಮ ಕೈಯಿಂದ ಮಾಡು ಪ್ರಯತ್ನಾ ನಾಂವ ಮಾಡೀವಿ, ಇನ್ನ ಮಿಕ್ಕಿದ್ದ ಆ ದೇವ್ರರ್ಗೆ ಬಿಟ್ಟದ್ದ.” ಡಾಕ್ಟರ್ ಕಡ್ಡಿ ಮುರದ್ಹಂಗ ಮಾತಾಡಿದ್ದ ಕೇಳಿದ ಶಿವಕ್ಕನ ಎದಿ ಒಮ್ಮಿಗಿಲೆ ‘ದಸಕ್’ ಅಂದ ಕೈಕಾಲಾಗಿನ ನರಗೋಳಾಗಿದ್ದ ಸಕ್ತಿ ಪಟಕ್ನ ಹಿಂಡಿ ಹಿಪ್ಪಿ ಆದಾಂಗ ಆಗಿತ್ತು. ಎಷ್ಟೊತ್ತನಕಾ ದಂಗ್ ಬಡ್ದಾಂಗಾಗಿ ಪಿಕಿ ಪಿಕಿ ಕಣ್ಣ ಬಿಟಗೋತ, ಡಾಕ್ಟರಪ್ಪನ ನೋಡಕೋತ ನಿಂತ ಕೊಂಡ್ಳು. ಅದೆಲ್ಲಿತ್ತೋ ಎಲ್ಲಿಲ್ಲೋ ಅಕಿ ಎದಿಯಾಗಿನ ದುಕ್ಕದ ಶಳುವು ಒಮ್ಮಿಗಿಲೆ ಉಕ್ಕಿ ಬಂದದ್ದ ತಡಾ, ಡಾಕ್ಟರ್ ಕಾಲ ಮ್ಯಾಲ ಬಿದ್ದ ಗಡಾಗಡಾ ಉಳ್ಳಾಡಿ “ಯಪ್ಪಾ.. ಡಾಕ್ಟರಪ್ಪಾ… ನನಗ ಮೋಸಾ ಮಾಡಬ್ಯಾಡ್ರೋ.. ನನ್ನ ಮಗನ್ನ ಉಳಿಸಿ ಕೊಡ್ರಪೋ.. ನನ್ನ ಮಗನ ಪಾಲಿಗೆ ನಿಂವ ದೇವ್ರಪೋ.. ಇದರಮ್ಯಾಲ ತಪಾ ತಕ್ಕೊಂಡ ಕುಂತಿನ್ರಪೋ.. ಈ ಮಗಾನ ಇಲ್ಲಂದ್ರ ಇಲ್ಲಿ ನಂದರ ಏನೈತ್ರೋ.. ಹಂಗ ಅನಬ್ಯಾಡ್ರಪೋ.. ನನ್ನ ಮಗನ್ನ ಪ್ರಾಣಾ.. ಉಳಸ್ರೀ..ಹಿ..ಹೀ..ಹೀ..ಹೀ..” ಎಂದು ಮೈಯಾಗಿನ ಉಟ್ಟ ಸೀರಿ ಕಬರ ಇಲ್ಲದ ಎದಿಬಾಯಿ ಬಡ್ಕೋತ ಶಿವಕ್ಕ ದವಾಖಾನಿಯಲ್ಲಿ ಅಳತಿದ್ರ, ಅಕಿ ಗೋಳಾಟಾ ನೋಡಾಕ ಗುಬುಗುಬು ಅಂತ ಸುತ್ತಮುತ್ತ ಸಿಕ್ಕಾಪಟಿ ಮಂದಿ ಮುಕ್ರಿತ್ತು.

“ಅಯ್ಯ… ಪಾಪ..! ಎಷ್ಟ ಸಂಕಟಾ ಮಾಡ್ಕೋತೈತವ್ವಾ ಹೆಣಮಗ್ಳು, ಈ ಹಾಟ್ಯಾನ ದೇವ್ರ ಹುಟ್ಟಸ್ತಾನ ಚಂದ್ಹಂಗರ ಹುಟ್ಟಸಂಗಿಲ್ಲ, ಯಾವ ಗುಂಗನ್ಯಾಗ ಇರ್ತಾನೋ.. ಪುಣ್ಯಾತ್ಮ.. ಹೆಂಗ ಬಲ್ಲಂಗ ಹುಟ್ಟಿಸಿ ಭೂಮಿಮ್ಯಾಲ ವಗದ, ತಾನರ ಗಪ್ ಗಡದ ಕುಂತ ಬಿಡ್ತಾನ.. ತಿಳಿಗೇಡಿ ಮನಸ್ಯಾರ ನಮಗೇನ ಅಂವನ ಲಿಲಾ ಪುಟ್ಟಾಪೂರಾ ತಿಳದೀತು..? ಯಾವ ಜನ್ಮದಾಗರ ಮಾಡಿದ ಪಾಪ ತಂದ ಮತ್ತೊಂದ ಜನ್ಮದಾಗ ಅದ್ನ ಮರಿಲಾರದ ತುಂಬಿ ಸ್ಯಾಸ್ತಿ ಮಾಡ್ತಾನ..ಅಂವನ ಲಿಲಾ ಯಾರ್ಗಿ ತಿಳದೈತೋ..” ಪಾಪ.. ! ಈ ಹೆಂಗಸ ಇಷ್ಟಕೊಂಡ ಸಂಕಟಾ ಮಾಡೂದ ಕಂಡ ಅಂವನ ಮನಸ ಕರಗ್ಬೇಕಿತ್ತು ಅದ್ಯಾಕ ಕರಗೊಲ್ದೋ .. ಎಂದು ಅರವತ್ತರ ಆಸುಪಾಸಿನ, ತಲೆತುಂಬ ಬಿಳಿ ಕೂದಲು ನೆರೆದಿದ್ದ, ಒಂದೂ ರೂಪಾಯಿ ಅಗಲದಷ್ಟ ಕುಂಕಮಾ ಹಣೆಗೆ ಎರಿಸಿಕೊಂಡಿದ್ದ ಮುದಕೆವ್ವ ಒಟಗುಡುತ್ತಿರುವ ಮಾತು ಅಲ್ಲಿದ್ದವರ ಯಾವ ಕಿವಿಯಲ್ಲೂ ಹೋಗಲಿಲ್ಲ.

ತಂಗೆವ್ವಾ ನಾವರಾ ಏನ್ ಮಾಡಾವ್ರು.. ನಮ್ಮ ಕಲತ ದ್ಯಾನದಮ್ಯಾಲ ನಮಗ ಹತ್ತಿದಷ್ಟು..ತಿಳದಷ್ಟ ನಾಂವ ನೋಡ್ತಿವಿ.. ನಿನ್ನ ಮ್ಯಾಲ ನಮಗೇನ ದ್ವೇಷ ಐತೇನ್ .. ಈ ಹುಡಗಗ ಜೀರ್ಣಾಂಗನ ಪೂರ್ತಿ ಕೆಟ್ಟಹೋಗೈತಿ. ನಾಂವ್ ಎಷ್ಟ ತಿಪ್ಪರಲಗಾ ಹಾಕಿದ್ರೂ ಅದನ್ನ ಸುದ್ದಮಾಡಾಕ ಆಗೂದಿಲ್ಲ.. ನೀ ಹಿಂಗತಿ ಅತ್ತರ ಮಗಾ ಉಳಿತಾನೇನ್.. ?ಹುಚ್ಚವ್ವಾ ಸಮಾಧಾನ ತಗೋ ಇರು ತನಕಾ ಇರ್ತಾನ.. “ಹುಟ್ಟಿದ ಹುಳುವೊಂದು ಸಾಯುವುದು ಕಟ್ಟಿದ ಮನಿಯೊಂದು ಬೀಳುವುದುಸೃಷ್ಟಿಯ ನಿಯಮವಿದೋ..ಎಲೇ ಮಾನವಾ..”

ಹಿರ್ಯಾರೇರ ಈ ತತ್ವಪದಾ ಸುಮ್ಮ ಸುಮ್ಮಕ ಕಟ್ಟಿ ಹಾಡ್ಯಾರೇನ್..? “ಸಾವಿಲ್ಲದ ಮನಿಯಿಲ್ಲ ರೋಗಿಲ್ಲದ ಶರೀರಿಲ್ಲಾ” ಅನ್ನುವ ಗಾದಿಮಾತ ನೀ ತಿಳಕೋಬೇಕವ್ವಾ.. ಡಾಕ್ಟರಪ್ಪ ನೂರೆಂಟ ನಮೂನಿ ‘ಶಾಂತಿ ಮಂತ’್ರ ಶಿವಕ್ಕನ ಮುಂದ ಊದಿದ್ರೂ ಶಿವಕ್ಕನ ಅಳು ನಿಂದ್ರಸೂದಕ್ಕ ಡಾಕ್ಟರಪ್ಪನ ಕೈಯಿಂದ ಸಾದ್ಯ ಆಗಲಿಲ್ಲ.. ನಾಕ ವರ್ಷದ ಶ್ರೀಕಾಂತ ಕಾಂತಿ ಹೀನನಾಗಿ ದವಾಖಾನೆಯ ಹಾಸಿಗೆಯ ಮೇಲೆ ಮಲಗಿ ಅರೆಗನ್ನ ತಕ್ಕೊಂಡು ಹಾಂ..ಹೂಂ.. ಅಂತ ನೆರಳುತ್ತ ಮಲಗಿದ್ದ. ಅಳಕೋತ ಕರಕೋತ ಶಿವಕ್ಕ ದವಾಖಾನಿ ದುಡ್ಡ ಕಟ್ಟಿ, ಕಾಟಾದಮ್ಯಾಲ ಮಲಗಿದ್ದ ಮಗನ್ನ ಮೆಲಕಾಸ ತೆಕ್ಕಿ ಬಡದ ಹೆಗಲಮ್ಯಾಲ ಹೊತಗೊಂಡ ಊರಕಡೆ ಮುಖಮಾಡಿದ್ಳು. ಅವಳ ಸ್ಥಿತಿ ನೋಡುತ್ತಿದ್ದ ದವಾಖಾನೆಯಲ್ಲಿದ್ದ ಜನರ ಕಣ್ಣಲ್ಲಿ ಅವರ ಅರಿವಿಲ್ಲದೇ ಅವರಕಣ್ಣಾಲಿಗಳಲ್ಲಿ ಕಣ್ಣೀರು ಜಿಟಗುಡುತ್ತಿದ್ದವು.

*

ಮಗಾ ಈಗ ಸಾಯತಾನೋ.. ಆಗ ಸಾಯತಾನೋ.. ಅನ್ನವ ಜೀವ ಭಯದಾಗ ಶಿವಕ್ಕ ಅತ್ತ ಅತ್ತ ಗೋಳಾಡೂದ ಕಂಡ ಮನಿಸುತ್ತ ಮುತ್ತಿದ್ದ ಹೆಂಗಸ್ರು ಅಕಿನ ಸಮಾಧಾನ ಮಾಡಾಕ ಬಂದಿದ್ರು. “ಯಕ್ಕಾ ಮನಸ್ ಕಲ್ಲ ಮಾಡ್ಕೋರವೋ.. ಈ ನೋವಾ..ಸಾವಾ ಮನಸ್ಯಾಗ ಬರ್ದ ಮತ್ತೇನ ಮರಕ್ ಬರ್ತಾವೇನ?”. ಎಂದು ಸಗರವ್ವ ತನಗ ತಿಳದಷ್ಟ ಸಮಾಧಾನದ ಮಾತ ಹೇಳಾಕ ಗುದ್ದಾಡಿದ್ಳು. ಶಿವಕ್ಕ.. ರೊಂಯ್ ಅಂತ ಮತ್ತ ಅಳಾಕ ಸುರು ಮಾಡಿದ್ಳು. ಶಿವಕ್ಕ ಅಳೂದ ಕಂಡ ಸುತ್ತಮುತ್ತ ಇದ್ದವರೂ ತಮ್ಮ ಕಣ್ಣನ್ಯಾಗ ಬಂದಷ್ಟ ಕಣ್ಣೀರ ಅವರೂ ವರಸ್ಕೊಂಡು ಅಳತೊಡಗಿದ್ದರು.

ಈ ಹಾಳಾದ ದೇವ್ರ ವರ್ಷದ ಹಿಂದರಾ ಗಂಡನ ಕಸಗೊಂಡಾ.. ಈಗ ಮಗನ್ನ ಕಸಗೊಳಾಕ.. ಹಂಸ್ಯಾಡಾಕತ್ಯಾನ.. ಎಷ್ಟ ಆಸ್ತಿ ಇದ್ದರ ಏನ್ ಮಾಡೂದೈತೆವ್ವಾ.. ಸಾವ ಬಂದ ಕಾಲಕ್ ಎಲ್ಲಾ ಇಲ್ಲೆ ಬಿಟ್ಟ ಹೋಗ್ಬೇಕಲ್ಲಾ… ಶಿವಕ್ಕ ಇನ್ನ ಹರೆದ ಹೆಂಗಸ ಅಕಿಗೆ ಹಿಂತಾ ಗತಿ ದೇವ್ರ ಕೊಡಬಾರ್ದಿತ್ತ ಎಂದು ವಡಕಬಾಯಿ ಯಮನವ್ವ ವಡಾವಡಾ ವಡಗುಟ್ಟಿದ್ಳು. ಯಮನವ್ವನ ಮಾತ ಕೇಳಿದ ಶಿವಕ್ಕ ಮತ್ತಟ ಸಂಕಟಾ ಮಾಡಕೊಂಡ ಅಳಾಕತ್ತಿದ್ಳು.. “ಸುಮ್ಮಿರ ಹುಚ್ಚಪ್ಯಾಲಿ ನಿನೊಂದ, ಕಿಲಿಯಂದ ತಗಿಯಂದ್ರ.. ಬಲಿಯಂದ ತಗಿತೀಯಲ್ಲ.. ಏನ್ ಮಾತಾಡ್ಬೇಕು ಏನ್ ಬಿಡ್ಬೇಕು ಒಂದೂ ಗೊತ್ತಾಗುದಲಿಲ್ಲ.. ನಿನಗ.. ಸುಮ್ಮ ಬಾಯಿ ಮುಚಗೊಂದ ಕುಂದ್ರ” ಎಂದು ಸಗರವ್ವ ಹಚ್ಚಿ ಜಾಡಸಿ ಬೈದ್ಳು. ಯಮನವ್ವಾ ಯಾಕಾರ ಮಾತಾಡಿದ್ನೆವ್ವಾ ಅಂತ ಮೋತಿ ಸಪ್ಪಗ ಮಾಡ್ಕೊಂಡ ಕುಂತ್ಳು. ಅಕಿನ್ಯಾಕ ಬೇತಿ ಬಿಡವ್ವಾ ಯಕ್ಕಾ .. ನನ್ನ ಹಣಿಬರಾ ಸುಮಾರ ಐತಿ.. ಗಂಡ ರಗಡ ಗಳಿಸಿ ಇಟ್ಟ ಹೋಗ್ಯಾನ.. ಈ ಹಾಳದ ಆಸ್ತಿಪಾಸ್ತಿ ಏನ್ ಮಾಡ್ಲಿ.. ಅಂವ ನಡೂನ ಕೈಬಿಟ್ಟ ಹೋಗ್ಯಾನ.. ಈ ಮಗಾ ಆದ್ರೂ ನನ್ನ ಜೋಡಿ ಇರ್ತಾನಂದ್ರ ಇಂವೂ.. ನನ್ನ ಕೈಬಿಟ್ಟ ಹೊಂಟಾನ.. ನನಗ್ಯಾಕ ದೇವ್ರ ಹಿಂತಾ ಶಿಕ್ಷಾ ಕೊಡ್ತಿದ್ದನಾನೋ.. ಬಿಕ್ಕಿ ಬಿಕ್ಕಿ ಅಳತಿದ್ಳು.. ಅವಾಗ ಶ್ರೀಕಾಂತ ಲಟಿಪಿಟಿ ಲಟಿಪಿಟಿ ಒದ್ದಾಡಿದವ್ನ.. ಒಮ್ಮಿಗಿಲೇ.. ಸಣ್ಣಂಗ ಅವ್ವಾ.. ಅಂತ ದನಿ ಮಾಡಿದ.. ಯಾಕೋ ನನ್ನಪ್ಪಾ ಎಂದು ಶಿವಕ್ಕ ಮತ್ತ ಹಲಬುತ್ತ ಅಂವನ ಗದ್ದ, ತುಟಿ ಹಿಡದ ಮುದ್ದಾಡಿದ್ಳು..

ಸಗರವ್ವ ದೇವ್ರ ಕೋಲಿಗೆ ಹೋಗಿ ಒಂದೀಟ ಅಂಗಾರ ತಂದ ಶ್ರೀಕಾಂತನ ಹಣಿಗೆ ಹಚ್ಚಿದ್ಳು. ದೇವರ್ನ ಬೇಡ್ಕೊರವ್ವಾ.. ಶಿವಕ್ಕಾ ಅಂವ ಕೈಬಿಡುದಿಲ್ಲ.. ಎಂದು ಶಿವಕ್ಕನ ಮುಂಡಿ ಮ್ಯಾಲ ಪ್ರೀತಿಂದ ಕೈಯಿಟ್ಟು ಹೇಳಿದ್ಳು.

“ಗುಡಿಯಾಗಿನ ಹನಮಪ್ಪಗ ಹನ್ನೊಂದ ದಿನ ಎಳ್ಳದೀಪಾ ಹಚ್ಚೀನಿ..ಪ್ರತಿ ಶನಿವಾರ ತಪ್ಪದ ಒಪ್ಪತ್ತ ಇರ್ತೀನಿ, ಮಂಗಳವಾರಕೊಮ್ಮಿ ಗುಡ್ಡದೆಲ್ಲವ್ವನ ಹೆಸರಮ್ಯಾಲ ನಿರಹಂಕಾರ ಉಪವಾಸ ಮಾಡ್ತೀನಿ.. ಒಂದಲ್ಲ ಎರ್ಡಲ್ಲ ಎಲ್ಲ ತರಾ ಮಾಡಿದ್ರೂ ನನ್ನ ಮಗನಿಗೆ ಕೂಳಾ-ನೀರಾ ದಕ್ಕವಲ್ದು.. ದೇವ್ರ ನಮಗ ಎಲ್ಲಾ ಕೊಟ್ಟಾನ, ತಿನ್ನಾಕ ಕಡಿಮಿಲ್ಲಾ, ಉಣ್ಣಾಕ ಕಡಿಮಿಲ್ಲಾ, ಮಕ್ಕಳಿಲ್ಲಂತ ಮೊದಲ ಭಾಳ ಹಳಹಳಿ ಮಾಡ್ಕೊಂಡಿದ್ಯಾ.. ನನ್ನ ಮರಗಾ ನೋಡುದ ಆಗಲಾರದ್ಕ ಪಳಕ್ನ ಕಣ್ಣ ತೆರದ “ತಗೋರವ್ವ ಎಷ್ಟ ಹರಕಿ ಹೊತ್ತಿದ್ದಿ, ಎಷ್ಟ ಭಕ್ತಿಯಿಂದ ಪೂಜಸಿದ್ದಿ” ಅಂತ ನನಗ ಒಂದ ಗಂಡ ಮಗನೂ ಕೊಟ್ಟಿ ಖರೇ.. ಆದ್ರ ನನ್ನ ಮಗಗ ಈಗ ಹಿಂತಾ ಗತಿಬಂದತಲ್ಲೋ ಶಿವನ. ಈಗ ಮತ್ತ ನೀ ಎಲ್ಲಿ ಕಣ್ಣ ಮುಚಗೊಂದ ಕುಂತಿಯೋ.. ನನ್ನ ಕಣ್ಣೀರ ಕೂಗ ನಿನಗ ಕೇಳಸೊಲ್ದೇನೋ..ಮಾದೇವಾ.. ಮಕ್ಕಳ ಕೊಡೂದರಾ ಬಿಟ್ಟಿದ್ರ ಚಲೋ ಇತ್ತ.. ಹಿಂಗತಿ ಕೊಟ್ಟ ನೀ ಯಾಕ ನಮನ್ನ ಮೋಜನೋಡಾಕತ್ತಿಯೋ.. ಮಾಯಕಾರಾ.. ಎಂದು ಶಿವಕ್ಕ ಬುಳುಬುಳು ಅಳಕೋತ ಸೊರಕ್ ಬರಕ್ ಅಂತ ಮೂಗನ್ಯಾಗಿನ ಸುಂಬಳಾ ಸಿಂತ, ಸಿರಿ ಸೆರಗಿಂದ ಮೂಗ ಗಸಗಸ ತಿಕ್ಕೋತ, ಮತ್ತ ಮತ್ತ ಅಳಾಕ ಗುದ್ದಾಡಿ ಎದಿಯಾಗಿದ್ದ ದುಃಖ್ಖಾ ಕಣ್ಣೀರನ್ಯಾಗ ಕರ್ಗೀಸಾಕ ಹೊಣಗ್ಯಾಡ್ತಿದ್ಳು. ಎಷ್ಟ ದವಾಖಾನಿಗೆ ತೋರ್ಸಿದ್ರೂ ಒಂದ ಥಟಗೂ ಆರಾಮ ಆಗವಲ್ನವ್ವಾ.. ನನ್ನ ಮಗಾ.. ಅಯ್ಯೋ.. ! ಈ ಹಾಳಾದ ಡಾಕ್ಟರ ಮನಿ ಮಸೂತಿ ಆಗ್ಲಿ.. ಪೆಂಡಿ ಪೆಂಡಿ ರೊಕ್ಕಾ ಹಿರ್ಕೋತಾರ ಒಂದ ಥಟಗೂ ನನ್ನ ಮಗನ್ನ ಆರಾಮ ಮಾಡವಲ್ರೂ… ನನಗ ಏನ್ ಮಾಡ್ಬೇಕಂತ ಗೊತ್ತಾಗ್ವಲ್ದು . ಯಾವ ದಿಕ್ಕ ತೋಚದ ಶಿವಕ್ಕ ಒಂದ ಮುಂಜಾನೆಯಿಂದ ಮಗನ್ನ ತೊಡಿಮ್ಯಾಲ ಮಲಗಸಕೊಂಡ ಬೋರಾಡಿ ಬೋರಾಡಿ ಅಳತಿದ್ಳು.. ಸಗರವ್ವಾ, ಯಮನವ್ವಾ ಅಕಿ ಸತ್ತ ಕುಂತಗೊಂಡ ಸಮಾಧಾನ ಹೇಳಿ ಹೇಳಿ ಬ್ಯಾಸತ್ತಿದ್ರು.

ಡಾಕ್ಟರ್ ಎರ್ಡ ದಿಂದಾಗ ಶ್ರೀಕಾಂತ ಸಾಯತಾನಂತ ಹೇಳಿದ್ದ. ನಾಕ ದಿನಾ ಆದ್ರೂ ಅಂವ ಆಗೊಮ್ಮೆ ಈಗೊಮ್ಮೆ ಅನ್ನುವಂಗ ಆಗಾಗ ಕಣ್ಣತೆರದ ನೋಡ್ತಿದ್ದ. ಎರಡ ತಾಸಿಗೋ ಮೂರತಾಸಿಗೋ ಒಂದ ನಾಕ ಹನಿ ತೆಂಗನೀರ ಕುಡಿತಿದ್ದ. ಇದನ್ನ ಕಂಡ ಮಗ್ಗಲ ಮನಿ ಸಗರವ್ವ ಮನಸನ್ಯಾಗ ಒಂದ ಖಾತ್ರಿ ಮಾಡಕೊಂಡ “ಯಕ್ಕಾ ಈ ಡಾಕ್ಟರ್ ಮಾತ ಏನ್ ಕೇಳ್ತಿಯವ್ವಾ.. ಹತ್ತಕೊಂದರ ಅವ್ರ ಮಾತನೂ ಹುಷಿ ಹೊಕ್ಕಾವ.. ನಮ್ಮ ಶ್ರೀಕಾಂತ ಉಳದ ಉಳಿತಾನ ನೀ ಧೈರ್ಯಾ ತಗೋ ಬರೀ ಗಳಾಗಳಾ ಅತ್ತರೇನಾತ..” ಅಂತ ಮನಸಿಗೆ ತಾಕುವಂಗ ಮಾತಾಡಿದಾಗ ಶಿವಕ್ಕ ಒಂದ ತಟಗ ಸಮಾಧಾನ ತಂಗೊಂದ್ಳು. ನೋಡವ್ವಾ ನಾ ಒಂದ ಮಾತ ಹೇಳ್ತಿನಿ ನೀ ಹೂಂ.. ಅನ್ನ ಅಷ್ಟ..ಮುಂದ ಚಲೋನ ಅಕೈತಿ ಎಂದು ದೇವ್ರ ಹೇಳಕಿ ಹೇಳಿದ್ಹಂಗ ಸಗರವ್ವ ಹೇಳೂದನ್ನ ಸಣ್ಣ ಮಕ್ಕಳ ಕೇಳಿದ್ಹಂಗ ಶಿವಕ್ಕ ಎದೇನ್ ಹೇಳವ್ವಾ ನಾ ಎಂದರ ನಿನ್ನ ಮಾತ ಮೀರಿ ನಡದೀನೇನ? ಅದೇನಂತ ಹೇಳ ಅಂತ ಸಗರವ್ವಗ ಕೈಜೊಡಸಿದ್ಳು. ಅಯ್ಯ ದೌಳಾಕ್ನ.. ಹಂಗ್ಯಾಕ ಮಾಡ್ತಿ ನನಗ ಅಂತ ಸಗರವ್ವ ಅಕಿ ಕೈ ಮೆಲ್ಲಕ ಹಿಡದ ಹಿಚಗಿ, ಸಮಾಧಾನ ತಗೊಂದ.. “ನಮ್ಮೂರ ದ್ಯಾಮವ್ವ ಭಾಳ ಸತ್ತುಳಾಕಿ ಅದಾಳ.. ನೀ ಶ್ರೀಕಾಂತನ ಕರಕ್ಕೊಂಡ, ಆರಾಮ ಆಗೂಮಟಾ ಅಕಿ ಗುಡಿಯಾಗಿದ್ದ, ಕಸಾ ಕಡ್ಡಿ ಗೂಡಸ್ಕೋತ, ಅಕಿ ಸೇವಾ ಮಾಡ, ಖಂಡಿತಾ ಶ್ರಿಕಾಂತ ಪುಟಚಂಡಿನಗತೆ ಪುಟಿಯುವಂಗ ಅಕ್ಕಾನ” ಎಂದು ತನಗ ಅನಿಸಿದ್ದ ಸಗರವ್ವ ಹೇಳಿದ್ಳು.. ಶಿವಕ್ಕ ಸಗರವ್ವಾಡಿದ ಮಾತ ಕೇಳಿ ದಂಗಬಡದಾರಗತೆ ಕುಂತ್ಳು. ಶಿವಕ್ಕಗ ಮನಸಿನ ಯಾವದೋ ಮುಲ್ಯಾಗ ದ್ಯಾಮವ್ವನ ಗುಡಿಗೆ ಹೋಗಾಕ ಒಂದ ತಟಗ ಮುಜಗರ ಆದಂಗ ಅನಸಾಕತ್ತಿ. ಪಿಕಿಪಿಕಿ ಸಗರವ್ವನ ಮಾರಿ ನೋಡಿದ್ಳು. ಇಕಿ ಹೇಳುದ್ರಾಗ ನಂಬಕಿ ಇದ್ರು ಇರಬಹುದ ಖರೆ, ಆದ್ರ ಶ್ರೀಕಾಂತ ಉಳಿಲಿಲ್ಲಂದ್ರ ಏನ್ಮಾಡುದು? ಅದು ಅಲ್ಲದ ದ್ಯಾಮವ್ವನ ಗುಡ್ಯಾಗ ಊರ ಸಾವಕಾರನ ಹೆಂತಿ ಅನಸ್ಕೊಂಡಾಕಿ ಹೋಗಿ ಇದ್ದರ ಮ್ಯಾಲ ಜಾತಿ ಮಂದಿ ನನಗೇನ ಅನಬಾರ್ದು..? ಈ ಹೆಂಗಸಗೇನ ತಲಿಕೆಟ್ಟತೇನ..ನಮ್ಮ ಮ್ಯಾಲಜಾತಿ ದೇವ್ರಗೊಳ ಖೂಳ ಕಾಣದ ಬಿದ್ದಾವ. ಅವಗಳ ಕಡೆ ಹೋಗುದ ಬಿಟ್ಟ ಆ ಕೇರಿ ಮಂದಿ ಪೂಜಾ ಮಾಡು ದೇವ್ರ ಗುಡ್ಯಾಗ ಹೋಗಿ ಕುಂತೈತಾ ಆ ಬೇಬರ್ಸಿ.. ಅದಕ್ಕ ನಮ್ಮ ಕುಲದಾಗ ಸೇರಸ್ಕೋಬ್ಯಾಡ್ರೀ ಅಂತ ಊರ ದೈವದಾರ ಕೂಡಿ ತೀರ್ಮಾನ ಮಾಡಿದ್ರ.. ನನ್ನ ಮುಂದಿನ ಗತಿ ಹೆಂಗಂತ ಮನಸನ್ಯಾಗ ಇಚಾರ ಮಾಡ್ಕೋತ ಭಾಳ ಹೊತ್ತ ಕುಂತ್ಳು. ಸಗರವ್ವಾ ತನ್ನ ಮಾತಿಗೆ ಅಕಿ ವಾಪಸ್ ಏನೂ ಹೇಳಲಾರ್ದಕ್ಕ “ಅಯ್ಯ ಶಿವನೇ ಇಕಿಗೆ ಸುಮ್ನ ಹಿಂಗ ಅದನೆಲ್ಲಾ.. ನಾ ಹೇಳಿದ್ದ ಇಕಿ ಮನಸಿಗೇನಾರ ಬ್ಯಾನಿ ಆತೇನೋ” ಎಂದು ಹಳಹಳಿಸತೊಡಗಿದ್ಳು.

ಏನ್ ಆದ್ರೂ ಆಗ್ಲಿ ನಾ ನನ್ನ ಮಗಾ ಆರಾಮ ಆಗೂಮಟಾ ಆ ದ್ಯಾಮವ್ವತಾಯಿ ಗುಡ್ಯಾಗ ಟಿಕಾನಿ ಹೂಡ್ತಿನಿ ಎಂದು ಮ್ಯಾಲೆದ್ದ ಶ್ರೀಕಾಂತನ ಹೊತಗೊಂದ ದ್ಯಾಮವ್ವನ ಗುಡಿಯತ್ತ ನಡದೇ ಬಿಟ್ಳು. ಆಗ ಸಗರವ್ವಗ ಭಾಳ ಖುಷಿಯಾತು. ಅಕಿ ಮೋತಿಮ್ಯಾಲ ಒಂದ ಸಣ್ಣ ನಗು ಹುಟಗೊಂದ ಎಷ್ಟೋ ಹೊತ್ತ ಹಾಗೆ ಅರಳಿಕೊಂಡಿತ್ತು.

*

ಶಿವಕ್ಕಾ ದ್ಯಾಮವ್ನ ಗುಡಿಗಿ ಹೋಗಿ ನಾಕ ದಿಂದಾಗ ಊರ ತುಂಬ ಸುದ್ದಿ ಹಬ್ಬಿ ಬಾಯಿಗೊಂದ ಜನರು ಮಾತಾಡಾಕ ಸುರುಮಾಡಿದ್ರು. ಪಾಪ.. ಇದ್ದ ಗಂಡ ಒಬ್ಬ ಸತ್ತ ಹೋಗ್ಯಾನ.. ಮಗನಿಗೆ ನೋಡಿದ್ರ ಒಂದ ಕಾಯಿಲೇ ಐತಿ, ಅಕಿಗೆ ಎಲ್ಲಿ ಹ್ವಾದ್ರ ಸಮಾಧಾನಾ ಸಿಗತೈತಿ ಅಲ್ಲಿ ಇರ್ಲಿ ಬಿಡು ಅಂತ ಕೆಲವ ಜನರ ಅಂದ್ರ, ಇನ್ನ ಕೆಲವ್ರ ಅಕಿಗೆ ಆ ಕೇರಿ ಮಂದಿ ದೇವ್ರ ಬೇಕಾಗಿತ್ತೇನ.. ಬ್ಯಾರೆ ಯಾವ ದೇವ್ರು ಸಿಗಲಿಲ್ಲೇನ.. ಅಂತ ಗುಡಗತಿದ್ರು. ಮತ್ತ ಒಂದಿಷ್ಟ ಮಂದಿ ಅಕಿ ಕುಲಾಗಿಲಾ ಎಲ್ಲಾ ಬಿಟ್ಟ ನಾಯಿ ಹಂಗ ಬದಕಾಕತ್ಯಾಳ್ರೋ.. ಹೊಲಸಿ ಎಂದು ಹಳಿತಿದ್ರು. ಯಾರ ಮಾತಿಗೂ ಕಿವಿಗೊಡದ ಶಿವಕ್ಕ ದ್ಯಾಮವ್ವತಾಯಿ ಸೇವಾ ಮಾಡ್ಕೋತ.. ಅಲ್ಲೆ ಭಕ್ತರ ಕೊಟ್ಟ ಪ್ರಸಾದ ತಿನಕೋತ ಶ್ರೀಕಾಂತಗ ಗುಡಿಯಾಗಿದ್ದ ತೀರ್ಥಾ ಬಾಯಿಗಿ ಆಗಾಗ ಹಚಗೋತ.. ಹಣಿಗೆ ಭಂಡಾರ ಬಡದ ಕೈ ಮುಗದ.. ನೋಡತಾಯಿ ನನ್ನ ಮಗನ್ನ ಕಾಪಾಡವ್ವಾ ಎಲ್ಲಾ ನಿನ್ನ ಕೂಡೈತಿ.. ನನಗ ದಿಕ್ಕ ಏನೂ ತೋಚವಲ್ದು, ಅದಕ್ಕ ನಿನ್ನ ಪಾದದ ಮ್ಯಾಲ ಬಂದ ಬಿದ್ದೀನಿ, ನೀ ಹೆಂಗ ಮಾಡ್ತಿಯೋ ಮಾಡು ಅಂತ ಸೆರಗೊಡ್ಡೆ ಶಿವಕ್ಕ ದೇವಿ ಮುಂದ ನಿಂತ ಬೇಡ್ಕೊತಿದ್ರು. ಕೇರಿ ಮಂದಿಗೆ ಶಿವಕ್ಕ ಸಾವಕಾರ್ತಿ ತಮ್ಮ ಬಡವರ ದೇವ್ರಿಗೆ ನೆಡಕೊಳ್ಳುದ ಕಂಡು ಹಿರಿಹಿರಿ ಹಿಗ್ಗಿದ್ದರು. ದೇವಿಮ್ಯಾಲ ಒಂದ ತಟಗ ಭಕ್ತಿ ಹೆಚ್ಚಾಗಿ ಕೆರಿ ಮಂದಿಗೆ ಹೆಚ್ಚಾತು.

ಹುಚ್ಚರಾಮಿನೂ ಅದ ಗುಡಿಯಾಗ ಟಿಕಾನಿ ಹೂಡಿ ಎಂಟತ್ತ ವರ್ಷ ಆಗಿತ್ತು. ಗೌಡರ ತಿಮ್ಮನಗೌಡ ದೊಡ್ಡಾಕಿ ಆದ ಒಂದ ವಾರದಾಗ, ಹೊತಗೊಂಡ ಹೋಗಿ ಬಾಳಿ ತ್ವಾಟದಾಗ ಬಲ್ಲಂಗ ಅತ್ಯಾಚಾರ ಮಾಡಿ, ಅಕಿ ದೇಹದ ತುಂಬಾ ಸಿಕ್ರೇಟಿಂದ ಸುಟ್ಟ, ಚಿತ್ರ ಹಿಂಸ್ಯಾ ಮಾಡಿದ್ದ. ತಂದಿ ತಾಯಿ ಇಲ್ಲದ ಪರದೇಸಿ ಮಗಳ್ನ ಕಮಲಮ್ಮ ಗುದ್ದಾಡಿ ಜ್ವಾಕಿ ಮಾಡಿತ್ತು. ತಿಮ್ಮನಗೌಡ ಹಿಂಗತಿ ಮಾಡಿದ ಸುದ್ದಿ ತಂದ ಕೇರಿ ಮಂದಿಮುಂದ ರಾಮಿ ಹೇಳಿದ್ರ ಯಾರೂ ಕಿವಿಯಾಗ ಹಕ್ಕೊಳಿಲ್ಲಾ.. ಆ ದುಷ್ಟ ಗೌಡನ ಎಲ್ಲಿ ಎದರ ಹಾಕ್ಕೊಂಡ ಬದಕೋದು ಅಂತ ಹೆದರಿ ತಮ್ಮ ಪಾಡಿಗೆ ತಾವ ಸುಮ್ಮನಿದ್ರು. ರಾಮಿ ಗೋಳಾಡುದ ಕಂಡ ಕಮಲವ್ವ ಎದಿಬಾಯಿ ಬಡ್ಕೊಂಡ ಅಳುವಾಗಲೇ ಜೀವಾ ಬಿಟ್ಟಿದ್ಳು. ತನ್ನ ಸಾಕಿದ ಅಜ್ಜಿ ಸತ್ತದ್ದು.. ತನ್ನ ಶೀಲಾ ಹಾಳಾದದ್ದು ಭಾಳ ಮನಸಿಗೆ ಹಚಗೊಂಡ ರಾಮಿ ಹುಚ್ಚಿಗತೆ ಅಡ್ಡಾಡ್ಕೋತ ನಡೆದ ಬಿಟ್ಳು. ಕಡಿಗೂ ಅಕಿಗೆ ಪೂರ್ತಿ ಹುಚ್ಚ ಹಿಡಿತು. ಅಂದಿನಿಂದ ಎಲ್ಲಾ ಸುತ್ತಾಡಿ ಬಂದ ಅದ ದ್ಯಾಮವ್ವನ ಗುಡಿಯಾಗ ಮಲಗಾಕ ಸುರು ಮಾಡಿದ್ಳು.

ಶಿವಕ್ಕ ಸಾವಕಾರ್ತಿ ಗುಡಿಗೆ ಬಂದಾಳಂತ ಹೇಳಿ, ಕೇರಿ ಮಂದಿ ಹುಚ್ಚರಾಮಿನ ಬೆದರಿಸಿ, ಬಡದು, ಎಳದು ಗುಡಿಯಿಂದ ಹೋರಗ ಹಾಕಿದ್ರು. ಹುಚ್ಚರಾಮಿ ಅಳಕೋತ ಗುಡಿ ಹಿಂದಿನ ಕಲ್ಲ ಕುಟರ್ಯಾಗ ಮಲಗಾಕ ಹತ್ತಿದ್ಳು. ಒಮ್ಮೊಮ್ಮೆ ದಿಕ್ಕ ತಪ್ಪಿ ಗುಡಿಯಾಗ ಬಂದ ಬಿಡ್ತಿದ್ಳು. ಸತ್ತ ಹೆಣದ ಗತೆ ಮಲಗಿದ್ದ ಶ್ರೀಕಾಂತನನ್ನು ದುರುದುರು ನೋಡ್ಕೋತ ಹುಚ್ಚರಾಮಿ ನಿಂತದ ಕಂಡು ಶಿವಕ್ಕ ಹೆದರಿ, ಮಂದಿ ಕೂಡಿಸಿ ಮತ್ತ ರಾಮೀನ ಕೇರಿ ಮಂದಿ ಗುಡಿಯಿಂದ ಹೊರ್ಗ ಅಟ್ಟತಿದ್ರು.

ಡಾಕ್ಟರ್ ಮಾತು ಸುಳ್ಳು ಅಂತ ತಿಳಕೊಂಡ ಶಿವಕ್ಕನಿಗೆ ಒಂದ ತಟಗ ಧೈರ್ಯ ಬಂದಂಗ ಅನಿಸ್ತು. ಗುಡಿಗೆ ಬಂದ ಹತ್ತ ದಿನವಾದ್ರೂ ಶ್ರಿಕಾಂತನಲ್ಲಿ ಯಾವ ಬದಲಾವನೆಯೂ ಆಗಿರಲಿಲ್ಲ. ಶಿವಕ್ಕ ಆರಾಮ ಆಗುತನಕಾ ಗುಡಿಯಾಗ ಇರ್ಬೇಕಂತ ಗಟ್ಟಿಮನಸ ಮಾಡಿ ಕುಂತಿದ್ಳು.

ಒಂದ ರಾತ್ರಿ ಹುಚ್ಚರಾಮಿ ಗುಡಿಯಾಗ ಬಂದ ಮಲಿದ್ಳು. ಶೀವಕ್ಕಗ ನಿದ್ದಿ ಹತ್ತಿತ್ತು. ಮೆಲ್ಲಕಾಸ ಹುಚ್ಚರಾಮಿ ನೆಡೆದ ಬಂದು ಶ್ರೀಕಾಂತನ ಮಗ್ಗಲದಾಗ ಕುಂತ ಅಂವನ ಮೋತಿ ಮ್ಯಾಲ ಕೈಯಾಡಿಸಿ, ಅಕಿ ಕೈಯಾಗಿದ್ದ ಒಂದ ಕೊಳಕ ಬಾಳಿ ಹಣ್ಣ ಅಂವನ ಬಾಯಿಗೆ ಒತ್ತಿದ್ಳು. ಶ್ರೀಕಾತಂತ ಗುರಕ್ ಗುರಕ್ ಅಂತ ಒದ್ರಕೋತ ಆ ಬಾಳಿಹಣ್ಣ ನುಂಗಿದ.. ಹುಚ್ಚರಾಮಿ ಮೆಲ್ಲಕ ಎದ್ದ ದುಡುದುಡು ಎದ್ದು ಗುಡಿದಾಟಿ ಹೋರಗ ನಡದ್ಳು.

ಪ್ರತಿ ರಾತ್ರಿ ಶ್ರೀಕಾಂತನ ಹಂತೇಕ ಬಂದ ಅಂವನ ಮೋತಿ ಕೈಯಾಡ್ಸಿ, ಏನಾರ ಒಂದ ಅಂವನ ಬಾಯಿಗೆ ಹಾಕಿ ಹೋಗುವ ರೂಡಿ ಹುಚ್ಚರಾಮಿ ಮಾಡ್ಕೊಂಡ್ಳು. ಒಂದ ವಾರದಾಗ ಶ್ರೀಕಾಂತ ಮೆಲ್ಲಕ ಕಣ್ಣ ತೆರದ ಎಲ್ಲರ್ನೂ ನೋಡೂದು, ನಗುದು ಮಾಡಾಕ ಸುರುಮಾಡಿದ. ಶಿವಕ್ಕಗ ಖುಷಿನೋ ಖುಷಿ. ಮತ್ತ ಒಂದ ವಾರ್ದಾಗ ಮ್ಯಾಲ ಎದ್ದ ಕುಂತ.. ಮೆಲ್ಲಕಾಸ ಒಂದೊಂದ ಹೊತ್ತ ಸಣ್ಣಂಗ ಉಣ್ಣಾಕ ಹತ್ತಿದ. ಮತ್ತ ವಾರದಾಗ ಶ್ರೀಕಾಂತ ಎದ್ದ ಅಡಾಡುದ ಕಂಡ ಇಡೀ ಊರ ಮಂದಿಗೆ ಅಚ್ಚರಿ ಆತು. ಏನ್ ಸುತ್ತುಳ ದೇವ್ರವ್ವಾ ದ್ಯಾಮವ್ವಾ ಅಂತ ದೇವ್ರ ಲೀಲಾ ಕೊಂಡಾಡಿದ್ರು.

ಶಿವಕ್ಕನ ಬಗ್ಗೆ ಹಗುರವಾಗಿ ಮಾತಾಡಿದವ್ರು ಬಾಯಿ ಮುಚಗೊಂಡ ಸುಮ್ಮನಾದ್ರು. ತಿಂಗಳದಾಗ ಚಂಡಿನಂತೆ ಶ್ರೀಕಾಂತ ಪುಟಿದಾಡಾಕ ಹತ್ತಿದ್ದು ಈ ತಾಯಿ ದ್ಯಾಮವ್ವನಿಂದ ಎಂದು ಅಕಿ ಪಾದದ ಮ್ಯಾಲ ಹಣಿ ಊರಿ ನಿನ್ನ ಲೀಲಾ ದೊಡ್ಡದೈತವ್ವಾ ನನ್ನ ಮಗನ್ನ ಉಳಿಸಿ ಕೊಟ್ಟಿ ನನ್ನ ಪ್ರಾಣ ಇರೂತನಕ ನಿನ್ನ ಸೇವಾ ಮಾಡ್ಕೊಂಡಿ ಇರ್ತಿ, ನಾಳೆ ಮನಿಗೆ ಹೊಕ್ಕಿನಿ ಅಪ್ಪಣಿ ಕೊಡ ತಾಯಿ ಎಂದು ದೇವಿ ಮುಂದ ಶಿವಕ್ಕ ದೈನಾಸಬಿಟ್ಳು. ಇಡೀ ಊರಿಗೆ ಈ ಸುದ್ದಿ ಒಂದು ಕಥೆಯಾಗಿತ್ತು. ಪ್ರತಿಯೊಬ್ಬರ ಮನೆಯಲ್ಲಿ ಶಿವಕ್ಕನ ಸುದ್ದಿನೇ ಇರ್ತಿತ್ತು. ಇದೊಂದು ರಾತ್ರಿ ತಾಯಿ ಗುಡಿಯಾಗ ಕಳದ ಮರದಿನ ಮುಂಜಾನೆ ಅಕಿಗೊಂದ ನಮಸ್ಕಾರ ಮಾಡಿ ಮನಿಗೆ ಹೋಗ್ಬೇಕಂತ ಶಿವಕ್ಕ ಅಂದಕೊಂಡು ಆದೊಂದು ರಾತ್ರಿ ಕಳೆಯಲು ಅದೆ ಗುಡಿಯಲ್ಲಿ ಮಲಗಿದ್ದಳು.

ನಡುರಾತ್ರಿ ದಿನಾ ಬರುವಂತೆ ಬಂದು ಶ್ರೀಕಾಂತನ ಹತ್ತಿರ ಕುಂತು ಕೈಯಲ್ಲಿದ್ದ ಏನೋ ಒಂದನ್ನು ಬಾಯಿಗೆ ತುರಕುತ್ತಿದ್ದಳು. ಶ್ರೀಕಾಂತ ತಿನ್ನುತ್ತಲಿದ್ದ, ಶಿವಕ್ಕನಿಗೆ ದಿಗ್ಗನೆ ಎಚ್ಚರಾಯಿತು. ಮಗನ ಹತ್ತಿರ ಕುಂತು ಅಂವನಿಗೆ ಏನೋ ತಿನಿಸುತ್ತಿರುವುದನ್ನು ನೋಡಿದ ಶಿವಕ್ಕ ನಡುರಾತ್ರಿಯಲ್ಲಿಯೇ ಲಬೋ ಲಬೋ ಹೊಯ್ಕೊಂಡು ಮಂದಿ ಕುಡಿಸಿದ್ಳು.. ಈ ದೇವಿ ಮಹಿಮಾದಿಂದ ನನ್ನ ಮಗಾ ಆರಾಮ ಅಗಿದ್ನೋ ಈ ಹುಚ್ಚರಾಮಿ ನನ್ನ ಮಗನಿಗೆ ಮತ್ತ ಏನ ತಿನಸಿದ್ಳೋ.. ಯಪ್ಪಾ ನನ್ನ ಮಗನಿಗೆ ಏನಾದ್ರು ಹೆಚ್ಚು ಕಮ್ಮಿ ಆದ್ರ ಹೆಂಗ್ರೋ ಎಂದು ನೆಲದ ಮ್ಯಾಲ ಬಿದ್ದ ಉಳ್ಳಾಡಿ ಅಳಾಕ ಹತ್ತಿದ್ಳು, ಕೂಡಿದ ಮಂದಿ ಶಿವಕ್ಕನ ಮಾತ ಕೇಳುದ ತಡಾ ಹುಚ್ಚ ರಾಮೀನ ಬಲ್ಲಂಗ ರಪ್ಪರಿಪ್ಪ ತಳಸಿ, ದರಾ ದರಾ ಎಳದ, ಗುಡಿದಾಟಿ ದೂರ ಹೋಗಿ ಊರ ಹೊರ್ಗ ಹಾಳ ಕಂಟ್ಯಾಗ ಎಸದ್ರು. ತಲಿ ಒಡದ ಬಳಾಬಳಾ ರಕ್ತ ಸೋರತಿದ್ರೂ ಅದರ ಕಬರಲ್ಲದ ಹುಚ್ಚರಾಮಿ ಹೀ..ಹೀ.. ಅಂತ ಹಲ್ಲ ಕಿಸಗೋತ.. ನರಳಕೋತ ಮುಳ್ಳ ಕಂಟ್ಯಾಗ ಬಿದ್ದು ಒದ್ದಾಡ್ತಿದ್ಳು.. ಗುಡಿಯಾಗ ಶಿವಕ್ಕ ಕಿರಚಾಡಿ ಅಳತಿದ್ಳು…

ಬೆಳಗಾದಾಗ ಶ್ರೀಕಾಂತ ಎದ್ದ ಓಡತೊಡಗಿದ, ಮಗನ ಹಿಂದ ಶಿವಕ್ಕ ಒಡತೊಡಗಿದ್ಳು, ಶಿವಕ್ಕನ ಹಿಂದ ಊರ ಜನರು ಇರುವೆಯಂತೆ ಸಾಲುಗಟ್ಟಿದ್ರು, ನಾಕ ವರ್ಷದ ಶ್ರೀಕಾಂತ ಹುಚ್ಚರಾಮಿನ ಊರ ಮಂದಿ ಬಡದು, ಅಕಿನ ಎಸದ ಜಾಗ ಹುಡಿಕಿಕೊಂಡ ಹೋಗಿ, ಅಲ್ಲಿ ಕುಂತ ಬುಳುಬುಳು ಅಳತಿದ್ದ.. ಹುಚ್ಚರಾಮಿದು ಅಲ್ಲಿ ಯಾವ ಖೂನವೂ ಇರಲಿಲ್ಲ. ಅದನ್ನ ನೋಡಿದ ಊರ ಮಂದಿ ಮತ್ತೊಮ್ಮೆ ಬೆರಗಾದರು.. ಅನಾದಿ ಮೊರೆಯ ಕೇಳಿ ಬಂದು ತನ್ನ ಮಗನನ್ನು ಕಾಪಾಡಿದ ಆ ರೂಪಕ್ಕೆ ಶಿವಕ್ಕ ಮತ್ತೊಮ್ಮೆ ಕೈಮುಗಿದಳು.

-ತಿರುಪತಿ ಭಂಗಿಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply