ಶ್ರೇಷ್ಠ ಸಾಹಿತಿ ವಿಲಿಯಂ ಶೇಕ್ಸಪೀಯರ್ ಬದುಕು ಬರಹ ಮತ್ತು ಕಾಲ: ನಾಗರೇಖ ಗಾಂವಕರ



ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತಿ ವಿಲಿಯಂ ಶೇಕ್ಸಪಿಯರ ಎಲ್ಲ ಕಾಲ ದೇಶಗಳಿಗೂ ಪ್ರಶ್ತುತ ಎನ್ನಿಸುವ ಸಾಹಿತ್ಯ ಕೃತಿಗಳ ರಚಿಸುವ ಮೂಲಕ ಸರ್ವಮಾನ್ಯ ಸಾಹಿತಿ ಎಂದೇ ಪ್ರಸಿದ್ಧ. ತನ್ನ ಜೀವನ ಮತ್ತು ಬರವಣಿಗೆಗಳಲ್ಲಿ ಪ್ರೌಢತೆಯನ್ನು ಬಿಂಬಿಸಿದ್ದ ಶೇಕ್ಸಪಿಯರ ಜ್ಞಾನ, ಔದಾರ್ಯ, ನಂಬಿಕೆ, ಯುವ ಪ್ರೇಮದ ತುಡಿತ, ಕ್ಷಮೆ ಹೀಗೆ ಮಾನವ ಸಂವೇದನೆಗಳ ಸುತ್ತ ಹೆಣೆದ ಆತನ ಕೃತಿಗಳು ಲೋಕ ಪ್ರಸಿದ್ಧವಾಗಿವೆ.

ಇಂಗ್ಲೀಷ ಸಾಹಿತ್ಯ ಲೋಕದಲ್ಲಿ ಎಲಿಜಬೆತನ್ ಯುಗ ಸುವರ್ಣ ಕಾಲ. ಐತಿಹಾಸಿಕವಾಗಿ ಜ್ಞಾನಪುನರುಜ್ಜೀವನ, ಧಾರ್ಮಿಕ ಸುಧಾರಣೆ, ಭೌಗೋಲಿಕ ಅನ್ವೇಷಣೆಗಳ ಕಾಲವಾಗಿ ಅಲ್ಲದೇ ಅಷ್ಟೇ ಅದ್ವಿತೀಯ ಕೊಡುಗೆಯನ್ನು ಸಾಹಿತ್ಯಕ್ಕೆ ನೀಡಿದ ಕಾಲ. ಪಾಶ್ಷಾತ್ಯ ಪೌರಾತ್ಯ ವ್ಯಾಪಾರಿ ಕೇಂದ್ರವಾಗಿದ್ದ ಕಾನಸ್ಟಾಂಟಿನೊಪಲ್ ಟರ್ಕರ ವಶವಾಗುವುದರೊಂದಿಗೆ  ಅಲ್ಲಿಯ ವಿದ್ವಾಂಸರು ಇಟಲಿಗೆ ಪಲಾಯನಗೈದರು. ತಮ್ಮೊಂದಿಗೆ ಪ್ರಾಚೀನ ಗ್ರೀಕ್ ಉತ್ಕೃಷ್ಟ ಕೃತಿಗಳನ್ನು ಹೊತ್ತೊಯ್ದರು. ಮುದ್ರಣ ಯಂತ್ರ ಕಂಡುಹಿಡಿಯಲ್ಪಟ್ಟು ಜ್ಞಾನ ಪ್ರಸಾರ ಕಾರ್ಯ ತ್ವರಿತಗತಿಯಲ್ಲಿ ಯುರೋಪಿನ ಮೂಲೆಮೂಲೆಗಳಲ್ಲೂ ಪ್ರಸರಿಸತೊಡಗಿತ್ತು. ಹೀಗಾಗಿ ಇಟಲಿ ಜ್ಞಾನಪುನರುಜ್ಜೀವನದ ನೆಲೆಯಾಗಿತ್ತು.ಅಷ್ಟೇ ಅಲ್ಲದೇ ಪುನರುಜ್ಜೀವನ ವೈಜ್ಞಾನಿಕ ದೃಷ್ಟಿಕೋನ ಮಾನವೀಯ ಗುಣಗಳನ್ನು ಉನ್ನತಿಕರಿಸಲು ಅವಕಾಶ ಕಲ್ಪಿಸಿತ್ತು. ಚರ್ಚಿನ ಧಾರ್ಮಿಕ ಕುರುಡು ನಂಬಿಕೆಗಳನ್ನು ಜನರು ಪ್ರಶ್ನಿಸತೊಡಗಿದರು, ಶಿಕ್ಷಣ ಕೇಂದ್ರಗಳು ಧಾರ್ಮಿಕ ಹಿಡಿತದಿಂದ ಸ್ವತಂತ್ರವಾದವು. ಯುರೋಪ ದೇಶ ನಾಗರಿಕತೆಗೆ ತೆರೆದುಕೊಳ್ಳಲಾರಂಭಿಸಿತ್ತು. ರೋಮ, ವೆನಿಸ್ ಮುಂತಾದ ಸುಂದರ ನಗರಗಳು ಶಿಕ್ಷಣ ಕೇಂದ್ರಗಳಾಗಿ ರೂಪುಗೊಂಡವು. ಹೀಗಾಗಿ ಹೊಸ ಯೋಚನಾ ವಿಧಾನ, ಭಾವನೆಗಳು, ಅಭಿವ್ಯಕ್ತಿಯ ಹೊಸ ಹೊಳಹುಗಳಿಂದಲೂ ಪುಷ್ಠಿಗೊಂಡ ನಾಟಕಗಳು ಯಶಸ್ವಿಯಾಗಿ ಮೂಡಿಬಂದವು. ಮೂಲತಃ 14ನೇ ಶತಮಾನದಲ್ಲಿ ಇಟಲಿಯಲ್ಲಿ ಪ್ರಾರಂಭವಾದ ಈ ಚಳುವಳಿ 15 ಹಾಗೂ 16ನೇ ಶತಮಾನಗಳಲ್ಲಿ ಕ್ರಮೇಣ ಇಟಲಿ ಹಾಗೂ ಇತರ ಪಾಶ್ಚಾತ್ಯ ಯುರೋಪಿನ ದೇಶಗಳಿಗೂ ವಿಸ್ತರಿಸಿತು. ಈ ಕಾಲದಲ್ಲಿಯೇ ಜಗತ್ತಿನ ಸಾಹಿತ್ಯ ಪರಂಪರೆಯಲ್ಲಿ  ಶ್ರೇಷ್ಠಾತೀಶ್ರೇಷ್ಠ ನಾಟಕಕಾರನೂ, ಕವಿಯೂ ಆದ ವಿಲಿಯಂ ಶೇಕ್ಸಪಿಯರ್ ಎಂಬ ಸಾಹಿತಿ ತಿವಿಕ್ರಮನಾಗಿ ಬೆಳೆದು ನಿಂತ ಕಾಲ.ನಾಟಕಗಳ ಮೇಲೆ ನಾಟಕಗಳು ಆತನ ಹರಿತ ಕುಶಲಮತಿಯಿಂದ ಮೂಡಿಬಂದವು.

1564ರಲ್ಲಿ ಇಂಗ್ಲೆಂಡಿನ ವಾರವಿಕ್‍ಶೈರನ ಸ್ಟ್ರಾಟಫೋರ್ಡ್ ಆನ್ ಏವನ್ ನಲ್ಲಿ ಜನಿಸಿದ ಶೇಕ್ಸಪಿಯರ ಸ್ಟ್ರಾಟಫೋರ್ಡ ಅನ್ನು ಬಹುವಾಗಿ ಇಷ್ಟಪಟ್ಟಿದ್ದ. ತಂದೆ ಜಾನ್ ಶೇಕ್ಸಪಿಯರ್, ವ್ಯಾಪಾರಿ. ತನ್ನ ಸುತ್ತಮುತ್ತಲ ಊರುಗಳಲ್ಲಿ ಒಳ್ಳೆಯ ಹೆಸರು ಹೊಂದಿದ್ದ. ತಾಯಿ ಮೇರಿ ಆರ್ಡನ್.   ಶೇಕ್ಸಪಿಯರ್ ತನ್ನ ಆರು ಅಥವಾ ಏಳನೇ ವಯಸ್ಸಿಗೆ ಗ್ರಾಮರ್ ಶಾಲೆಗೆ ಸೇರಿಸಲ್ಪಟ್ಟ. ಸುಮಾರು 16 ವರ್ಷವಾಗುವವರೆಗೂ ಅಲ್ಲಿಯೇ ಇದ್ದ ಶೇಕ್ಸಪಿಯರ ಹೆಚ್ಚಿನ ಓದಿಗೆ ಆಕ್ಸಫರ್ಡ ಅಥವಾ ಕೇಂಬ್ರಿಜ್ಡ್ ವಿಶ್ವವಿದ್ಯಾಲಯಗಳನ್ನು ಸೇರಲಾಗಲಿಲ್ಲ. ಆತನ ಶಾಲೆಯಲ್ಲಿ ಪರಿಣತ ಶಿಕ್ಷಕರಿದ್ದರು,ಸಾಹಿತ್ಯ ಪಾರಂಗತರಿದ್ದರು. ಅಲ್ಲಿಯೇ ಲ್ಯಾಟಿನ್ ಕಲಿತ. ಸ್ಟ್ರಾಟಫೋರ್ಡ್ ನಲ್ಲಿಯೇ ಮೊಟ್ಟ ಮೊದಲು ಆತನಲ್ಲಿ ನಾಟಕ ಅಭಿರುಚಿ ಮೂಡಿತು. ವೃತ್ತಿನಿರತ ನಾಟಕ ಕಂಪನಿಗಳ ನಟರು ನೀಡಿದ ಅಮೋಘ ವಿನೋದ ನಾಟಕ ಆತನ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವವನ್ನು ಮೂಡಿಸಿತು.

1582ರಲ್ಲಿ ಆತ ತನಗಿಂತ ಎಂಟು ವರ್ಷಗಳಿಗೆ ಹಿರಿಯಳಾದ ಅನ್ನೆ ಹ್ಯಾಥ್ ವೇಳೊಂದಿಗೆ ವಿವಾಹವಾದ. ಆ ದಂಪತಿಗಳಿಗೆ ಮೂವರು ಮಕ್ಕಳು. ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದ  ಶೇಕ್ಸಪಿಯರನ ಇದ್ದ ಒಬ್ಬನೇ ಮಗ ಹ್ಯಾಮ್ ನೆಟ್ ತನ್ನ ಹನ್ನೊಂದನೇ ವಯಸ್ಸಿನಲ್ಲಿ ತೀರಿಕೊಂಡ. ಆದರೆ ಶೇಕ್ಸಪಿಯರ ಮಹತ್ವಾಕಾಂಕ್ಷಿಯಾಗಿದ್ದ, 1586ರ ಸುಮಾರಿಗೆ ಶೇಕ್ಸಪಿಯರ ಸ್ಟ್ರಾಟಫೋರ್ಡ್ ನಿಂದ ಲಾರ್ಡ್ ಚಾಂಬರ್ಲೇನ್ ನಾಟಕ ಕಂಪನಿಯ  ಸದಸ್ಯನಾಗಿ ಲಂಡನ್ನಿಗೆ ಹೊರಟುಬಂದ. ಅಲ್ಲಿ ನಾಟಕ ಕಂಪನಿಯ ನಟನಾಗಿ  ನಾಟಕಕಾರನಾಗಿ ಅಭೂತಪೂರ್ವ ನೈಪುಣ್ಯತೆಯನ್ನು ಪಡೆಯುತ್ತ ಹೋದ. 1595ರ ಹೊತ್ತಿಗೆ ಪ್ರತಿಷ್ಠಿತ ನಾಟಕ ಕಂಪನಿಯ ಶೇರಹೋಲ್ಡರ್ ಕೂಡಾ  ಆಗಿದ್ದ. ಆತನ ನಾಟಕಗಳು ನೀಡುವ ಆಳ ಜ್ಞಾನ, ವಿಸ್ಮಯಗೊಳಿಸುವ ಹಾಸ್ಯಪ್ರಜ್ಞೆ, ಮನೋವೈಜ್ಞಾನಿಕ ಅಂತರ್‍ದೃಷ್ಟಿ, ಕಾವ್ಯ ಸೌಂದರ್ಯ, ನಾಟಕೀಯ ತೀವೃತೆಗಳಿಂದ ಶತಶತಮಾನಗಳಿಂದಲೂ ತನ್ನದೇ ಆದ ಮೌಲ್ಯಗಳನ್ನು ಗಳಿಸಿಕೊಳ್ಳುತ್ತಲೇ ಬಂದಿವೆ. ಆತನ ನಾಟಕಗಳು ಪ್ರಮುಖವಾಗಿ ಜ್ಞಾನಪುನರುಜ್ಜೀವನದ ಪ್ರಜ್ಞೆಯೊಂದಿಗೆ ಮೂಡಿಬಂದಿವೆ. ಈತನ ಸಮಕಾಲೀನ ಬೆನ್ ಜಾನ್ಸನ್ ಇತನ ಬಗ್ಗೆ ಫಾರ್ ಆಲ್ ಟೈಮ್ ಎಂದು ಹೇಳಿದ್ದಾನೆ..ಸಾಹಿತ್ಯ, ನಾಟಕ ಕ್ಷೇತ್ರಗಳಲ್ಲಿ ಅತ್ಯಪೂರ್ವ ಕೃತಿಗಳು ಮೂಡಿಬಂದವು.

ಶೇಕ್ಸಪೀಯರನ ಬರವಣಿಗೆಯ ಕಾಲ ಕ್ವೀನ್ ಎಲಿಜಬೆತ್ ಇಂಗ್ಲೆಂಡನ್ನು ಆಳುತ್ತಿದ್ದ ಕಾಲ. ಆ ಕಾಲದ ಸಾಮಾಜಿಕ, ರಾಜಕೀಯ, ಬೌದ್ಧಿಕ ಹಿನ್ನೆಲೆಯುಳ್ಳ ಕೃತಿಗಳ ಜೊತೆಗೆ ಶೇಕ್ಸಪಿಯರ ಮಾನವೀಯ ಸಂವೇದನೆಗಳುಳ್ಳ ಪ್ರೇಮ, ಸ್ನೇಹ, ಸಂತೋಷ, ದ್ರೋಹ, ಲೋಭಗಳನ್ನು ತನ್ನ ನಾಟಕಗಳಲ್ಲಿ ಪಡಿಮೂಡಿಸಿದ. ಅವುಗಳ ಪರೀಕ್ಷಿಸುವ ಪರಿಶೋಧಿಸುವ ಆತನ ದೃಷ್ಟಿಕೋನ ವಿಭಿನ್ನವಾಗಿತ್ತು. ಹಾಗಾಗಿ ನಾಲ್ಕು ನೂರು ವರ್ಷಗಳ ಹಿಂದೆ ಬರೆದ ನಾಟಕಗಳು ಇಂದಿಗೂ ಪ್ರಶ್ತುತವಾಗಲು ಕಾರಣ ಆತನ  ಕೃತಿಗಳು ಸಾರ್ವಕಾಲಿಕ ಮಹತ್ವ ಹೊಂದಿದ್ದು  ಮನುಕುಲದ ಸಮಸ್ಯೆಗಳು, ಚಿಂತೆಗಳು, ಚಿಂತನೆಗಳು,ದ್ವಂದ್ವಗಳು ಹೀಗೆ ವ್ಯಾಪಕವಾಗಿ ವಿಸ್ತರಿಸಿಕೊಂಡಿದ್ದವು. ಶೇಕ್ಸಪಿಯರ ತನ್ನ ಬದುಕಿನುದ್ದಕ್ಕೂ 37 ನಾಟಕಗಳನ್ನು ಬರೆದ. ಅವುಗಳನ್ನು ನಾಲ್ಕು ವಿಭಾಗಗಳಲ್ಲಿ ಹೀಗೆ ಗುರುತಿಸಬಹುದು.

ಕಾಮಿಡಿಗಳು- As you like it, A Midsummer Night”s Dream,The Merchant Of Vanice, Much Adore About nothing.
ಐತಿಹಾಸಿಕ ನಾಟಕಗಳು-Richard II, Henry IV Part I , Henry IV Part II, Henry V, Richard III
ರೊಮೆಡಿಗಳು- Romeo And Juliet, Antony And Cleopatra, The Winter’s Tale, The Tempest.

ಅಲ್ಲದೇ ಸುಮಾರು 154 ಸಾನೆಟ್ ಗಳನ್ನು ಜಗತ್ತಿಗೆ ನೀಡಿದ ಮಹಾನ್ ಸಾಹಿತಿ. ಈ ಸಾನೆಟ್‍ಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಮೊದಲ 126 ಸಾನೆಟ್‍ಗಳನ್ನು ಆತ  ಅನುಪಮ ಸುಂದರಾಂಗನಾದ ಚೆಲುವನೊಬ್ಬನನ್ನು ಕುರಿತು ಬರೆದಿದ್ದಾನೆ. ಬಹುಶಃ ಶೇಕ್ಸಪಿಯರನಿಗೆ ಆ ಸುಂದರನಲ್ಲಿ ಯಾವುದೋ ಅನುಬಂಧ ಆಕರ್ಷಣೆ ಇದ್ದಿರಬಹುದೆಂದು ವಿಮರ್ಶಕರು ಊಹಿಸುತ್ತಾರೆ. ಈ ಕುರಿತು ಹಲವು ಚರ್ಚೆ ವಾದಗಳು ನಡೆದಿದ್ದರೂ ನಿರ್ದಿಷ್ಟ ಇಂಗಿತಕ್ಕೆ ಬರಲು ಸಾದ್ಯವಾಗಿಲ್ಲ. ಅದು ರಹಸ್ಯವಾಗಿಯೇ ಉಳಿದಿದೆ.ಕೆಲವರ ಪ್ರಕಾರ ಆ ಸುಂದರಾಂಗ  Henry Wriothesley, the Earl Of Southompton  ಎಂದು ವಾದಿಸಿದರೆ,  ಇನ್ನು ಕೆಲವರ ಪ್ರಕಾರ ಆತ Henry Herbert, the Earl Of Pembroke ಎಂದು ವಾದಿಸುತ್ತಾರೆ. ಆದರೆ ಇಂದಿಗೂ ಅದು ಗೂಢವಾಗಿಯೇ ಉಳಿದಿದೆ.

ಇನ್ನು ಎರಡನೇ ಗುಂಪಿನಲ್ಲಿ ಬರೆದ ಕವಿತೆಗಳು ಕಪ್ಪು ಹೆಣ್ಣಿನ ಕುರಿತಾಗಿದ್ದು ಆಕೆಯಲ್ಲಿ ಶೇಕ್ಸಪಿಯರ ಮಾತಿಗೆ ನಿಲುಕದ ಪ್ರೇಮಭಾವ ಹೊಂದಿದ್ದ. “The raven brows, and eyes so suited” ಎಂದು ಆಕೆಯನ್ನು ಶೇಕ್ಸಪಿಯರ  ಉಲ್ಲೇಖಿಸಿದ್ದು, ಆಕೆಯನ್ನು ಕೆಲವರು ಕ್ವೀನ್ ಎಲಿಜಬೆತ್‍ಳ  ಸಖಿ ಮಿಸ್ ಮೇರಿ ಫಿಟ್ಟನ್ ಎಂದು  ಹೇಳಿದರೂ ಅದೂ ಕೂಡಾ ಧೃಡಪಟ್ಟಿರುವುದಿಲ್ಲ. 16ನೇ ಶತಮಾನದ ಪೂರ್ವಾರ್ಧ, 17 ನೇ ಶತಮಾನದ ಉತ್ತರಾರ್ಧದಲ್ಲಿ ಮೂಡಿಬಂದ ಆತನ ಕೃತಿಗಳು ಆತನ ಕಾಲಕ್ಕೆ ಮಾತ್ರವಲ್ಲದೇ ಇಂದಿಗೂ ಪ್ರಶಂಸೆಗೆ ಕಾರಣವಾಗುವುದು ಅವುಗಳು ಬಿಂಬಿಸಿದ ಭಾವ, ಪಡಿಮೂಡಿಸಿದ ವಿಚಾರಗಳು ಇಂದಿಗೂ ಸತ್ಯವಾಗಿರುವುದು. ಲಂಡನ್ನಿನಲ್ಲಿ ಪ್ರಸಿದ್ಧಿಯ ಉತ್ತುಂಗವನ್ನೇರಿದರೂ ತನ್ನ ಹುಟ್ಟೂರಾದ ಸ್ಟ್ರಾಟಫೋರ್ಡ್ ನೆಲದಲ್ಲಿಯೇ ಕೊನೆಯ ದಿನವನ್ನು ಕಳೆದು 53ನೇ ವಯಸ್ಸಿಗೆ 1616ರಲ್ಲಿ ಮರಣಹೊಂದಿದ. ಶೇಕ್ಸಪಿಯರ ಜನಿಸಿದ ಸ್ಟ್ರಾಟಫೋರ್ಡ್ ಆ ಮನೆ ಇಂದು ಸ್ಮಾರಕವಾಗಿ ಜಗತ್ತಿನ ಸಾಹಿತ್ಯ ಪ್ರಿಯರನ್ನು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ನಾಗರೇಖ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x