ಒಮ್ಮೆ ನನ್ನನ್ನೂ  ಕಣ್ತುಂಬಾ ಕಾಡುವಾಸೆ ನಿನ್ನಲ್ಲಿ: ಅಮರದೀಪ್ ಪಿ.ಎಸ್.

ರಾತ್ರಿ ಮಲಗುವ ಮುನ್ನ ಬೆಳಿಗ್ಗೆ ಕರೆಕ್ಟಾಗಿ ಐದುವರೆಗೆಲ್ಲಾ ಎದ್ದುಬಿಡಬೇಕು.. ಅಲಾರ್ಮ್ ಇಡಬೇಕು ಅಂದುಕೊಂಡವನು ಮರೆತೆ. ಆದರೆ ನಿದ್ದೆಗೆ ಜಾರುವ ಮುಂಚೆ ತಲೆಯಲ್ಲಿತ್ತಲ್ಲ, ಅಂದುಕೊಂಡದ್ದು ನಿಖರವಾಗಿತ್ತು.  ಸರಿಸುಮಾರು ಒಂಭತ್ತು ತಿಂಗಳ ನಂತರ ವಾಕಿಂಗ್ ಹೋಗಬೇಕು,   ಅವಳು ಹೇಳಿದ್ದಳಲ್ಲ? ಒಂದಷ್ಟು ಯೋಗಾಭ್ಯಾಸ ಮಾಡಬೇಕು… ಹೂಂ… ಅಂದದಷ್ಟೇ ನಿಜ.  ಎದ್ದೇಳಲು ಮತ್ತದೇ ಸೋಮಾರಿತನ. ಎದ್ದ ನಂತರದ ಹಳಹಳಿ. ಅದಕ್ಕೆ ಪ್ರಾಯಶ್ಚಿತ್ತವಿಲ್ಲ….  ಹಾಗೇ ನಿದ್ದೆಗೆ ಜಾರಿಯೂ ಬಿಟ್ಟೆ…   ಥಟ್ಟನೇ ಎಚ್ಚರಾಗಿ  ಮೊಬೈಲ್ ನೋಡಿದರೆ ಆಗಲೇ ಐದು ಗಂಟೆ ಮೂವತ್ತು ನಿಮಿಷ.
ಎದ್ದವನೇ  ಕ್ರಿಯಾಕರ್ಮಗಳನ್ನು ಮುಗಿಸಿಕೊಂಡು  ಕೊರಳಲ್ಲಿ ಕ್ಯಾಮೆರಾ,    ಕಿವಿಗೆ ಹೆಡ್ ಫೋನು, ತುರುಕಿಕೊಂಡು ಕೈಯಲ್ಲಿ ಮೊಬೈಲ್ ಹಿಡಿದು ಹೆಜ್ಜೆ ಹಾಕುತ್ತಿದ್ದರೆ, “ಸಾಗರ್ ಕಿನಾರೇ……. ದಿಲ್ ಯೇ ಪುಕಾರೆ…… ತೂ ಜೋ ನಹೀ ತೋ ಮೇರಾssssss  ಕೋಹಿ ನಹೀ ಹೈ………” ಹಾಡು ದಾರಿ ಕಿರಿದಾಗಿಸುತ್ತಾ…. ನಾನು ದಾಪುಗಾಲು….ಪಕ್ಕದಲ್ಲೇ ಲುಂಬಿನಿ ಗಾರ್ಡನ್.  ಮರೆತಿದ್ದೆ; ಕೆಂಪು ಬಣ್ಣದ ಕಮಲವೊಂದನ್ನು  ಅವಳು ತರಲು ಹೇಳಿ ಯಾವ ಕಾಲವಾಗಿತ್ತು.. ಅದೇನೋ ಆ ಹೂವನ್ನು ತಂದು ಜಗುಲಿ ಮೇಲಿಟ್ಟು ಪೂಜೆ ಮಾಡಿ ಕೆಂಪು ಬಟ್ಟೆಯಲ್ಲಿ ಅದನ್ನು ಸುತ್ತಿ ನಾವು ದುಡ್ಡಿಡುವ ಜಾಗದಲ್ಲಿ ಇಟ್ಟರೆ ಸಂಪತ್ತು ವೃದ್ಧಿಯಾಗುತ್ತದೆ.  ಹಾಗಂತ ಅವಳ ನಂಬಿಕೆ.. ಸರಿ, ನಾನೂ ಕೊಪ್ಪಳದ ಮಳೇ ಮಲ್ಲೇಶ್ವರ ಬೆಟ್ಟದ ಕಮಲ ಸರೋವರಕ್ಕೂ ತೇಕುತ್ತಾ ಹತ್ತಿ ಬಂದಿದ್ದೆ .. ಊಹೂಂ, ಅಲ್ಲೂ ಕಮಲ ಸಿಕ್ಕಿದ್ದಿಲ್ಲ… ಆದರೆ, ಈ ಲುಂಬಿನಿ ಗಾರ್ಡನ್ ನಲ್ಲಿ ರಾಶಿ ರಾಶಿ ಕಮಲಗಳು, ಅದೂ ಕೆಂಪು ಬಣ್ಣದ್ದು. ಕಿತ್ತುಕೊಳ್ಳೋಣವೆಂದರೆ, ಕೆರೆಯೂ ಆಳ… ಈಜು ಬಾರದ ನಾನೂ ಇಳಿಯಲು ಧೈರ್ಯ ಮಾಡುವಂಥ ಆಳೇನಲ್ಲ..
ಪ್ರತಿ ದಿನ ಬೆಳಿಗ್ಗೆ  ಒಂದು ಫೋನ್ ಕಾಲು. ಬೈಗುಳವಾದರೆ ಅವಳೂ… ಸುಪ್ರಭಾತ ವಾದರೆ ನಾನು “ಹಲೋ” ಅನ್ನುವುದರಿಂದ ಶುರು.
ಎನ್.ಡಿ.ಟೀವಿ ಯಲ್ಲಿ ಪ್ರಸಾರವಾಯ್ತಂತೆ ಮೊನ್ನೆ ಯಾವತ್ತೋ ಯಾದಗಿರಿಯ ವಾತಾವರಣ ಕಲುಷಿತವಲ್ಲದ ಊರಂತೆ….. ಬಹುಶಃ ಸ್ವಚ್ಛ ವಾತಾವರಣದ ಸೆಳೆತವೋ ಏನೋ ನಾನು    ಬೆಳಿಗ್ಗೆ ನನ್ನ ಸೋಮಾರಿತನಕ್ಕೆ ಚುರುಕು ಮುಟ್ಟಿಸಲೂ ಮತ್ತು ಶುದ್ಧ ಗಾಳಿಗೆ ಮೈಯೊಡ್ಡಲು ಎದ್ದಿರಬಹುದೆನ್ನಿ….
“ಗುಡ್ ಮಾರ್ನಿಂಗ್ ಬಂಗಾರ” ಎಂದವನಿಗೆ ಅವಳ ಮಂಪರು ನಿದ್ದೆಯೊಳಗಿನ ಸಣ್ಣ ದನಿ ‘ಹಲೋ’ ಕೇಳಿ ಎಷ್ಟೋ ತಿಂಗಳಾಗಿದ್ದವು… ಆದ ಆನಂದಕ್ಕೆ ಪಾರವೇ ಇಲ್ಲ… “ಮಗನಿಗೆ ಎಬ್ಬಿಸಿದ್ಯಾ? ನೀನಿನ್ನು ಮಲಗಬೇಕಾ? ಇನ್ನೊಂದರ್ಧ ಗಂಟೆ ಬಿಟ್ಟು ಕಾಲ್ ಮಾಡಲಾ?  ಕೇಳುತ್ತಲೇ ಇದ್ದೇನೆ…. ಅವಳ ನಿದ್ದೆ ಮಂಪರ ದನಿಯಲ್ಲಿ ” ಹೂಂ….. ಹೂಂ……. ಹೂಂ…….. ಇನ್ನೊಂದ್ ಹತ್ನಿಮಿಷ ಮಲಗ್ತೀನಿ don’t disturb” ಅಂದಳು…
ಸರಿ,‌ನಾನು ಹಾಡು ಬದಲಿಸುತ್ತಾ, ಹೆಜ್ಜೆ ಹಾಕುತ್ತಾ ನಾಲ್ಕು ಕಿಲೋಮೀಟರ್ ನಡೆದೇ ನಡೆದೆ. ಒಂದು ಮಿಸ್ಡ್ ಕಾಲ್ ಕೂಡ ಇಲ್ಲ… ಮತ್ತೆ ಕಾಲ್ ಮಾಡಿದೆ. ಮತ್ತದೇ ಅವಳ ನಿದ್ದೆ ಮಂಪರು ದನಿ… “ಹೇಳು, ಹತ್ನಿಮಿಷ ಆಯ್ತಾ?!!!”  ಎದ್ದೇಳೇ ಬಂಗಾರ, ಯಾಕಿವತ್ತು ಇಷ್ಟು ನಿದ್ದೆ? ಎದ್ದೇಳೋ ಮನಸಿದೆಯೋ ಇಲ್ವೋ? ಕೇಳಿದೆ.
ಊಹೂಂ……..
ಶುರುವಾದ ಚಳಿಯೋ? ಬೆಚ್ಚಗೆ ಹೊದ್ದು ಮಲಗಿದ ನಿದ್ದೆಯೋ ಕಣ್ಣು ತೆರೆಯದೇ ಕೈ ಚಾಚಿದರೆ ಎಟುಕುವ ಮೊಬೈಲು, ದುರಭ್ಯಾಸದಂತೆ ಒತ್ತುವ ರೀಸೀವರ್ ಸ್ವೈಪು…. ಮತ್ತದೇ ರಾಗ…..
“ನಿನ್ನ ನಿದ್ದೆ ಮಂಪರಿನ ದನಿ ಕೇಳುತ್ತಿದ್ದರೆ, ನಾನೇ ಬಂದು ಮುತ್ತಿಟ್ಟು ಎಬ್ಬಿಸಲಾ ಅನ್ನಿಸುತ್ತಿದೆ, ಬರಲಾ?!” ಹಾಗೆ ಒಂದು ಸ್ಟ್ರಾಂಗ್ ಫಿಲ್ಟರ್ ಕಾಫಿ ತಂದು ನಿನ್ನ ಕಣ್ಲೆದುರು ನಿಲ್ಲಲಾ?!  ನೀನು ನಿದ್ದೆ ಮಂಪರಿಂದ ಬಿಡುವ ಅಮಲುಗಣ್ಣನ್ನು   ನೋಡಲು   ಕಾದು ಕುಳಿತುಕೊಳ್ಳಲಾ?    ಕೇಳಿದೆ.  ಮತ್ತೆ ಹೂಂ….. ಹೂಂ…… ಹೂಂ…….      ಅಂದಳು.  ಅಷ್ಟೊತ್ತಿಗೆ ನಡೆದ ಹಾದಿಯ ಮೈ ಬೆವರಿಗೆ ಎರಡು ಕಿಲೋಮೀಟರ್ ಅಂತರ ಹೆಚ್ಚಾಗಿತ್ತು…  ಮನಸ್ಸೆಲ್ಲಾ ಪ್ರಫುಲ್ಲ…
ಊರ ನಡುವೆ ಇರುವ ಕೋಟೆ ಗುಡ್ಡ ನಾನಿರುವ ಜಾಗದಿಂದ ದೂರ ದೂರ…. ಮಾತಾಡುತ್ತಾ, ಆಡುತ್ತಾ, ಸಣ್ಹಗೆ    ಹಾಡು ಕೇಳುತ್ತಾ, ಕೇಳುತ್ತಾ         ಗುಡ್ಡದ ಕೆಳಗೆ   ಸಾಗಿದ್ದು ಗೊತ್ತೇ ಆಗಲಿಲ್ಲ… ಕೇಳಿದರೆ ಯಾವ ಹಾಡು, ಎಷ್ಟು ಹಾಡೆಂದು ಮಾತ್ರ ಹೇಳಬಲ್ಲೆ….. ಆಡಿದ ಮಾತು?!!!!  ಬಿಡಿ,‌ ಎಷ್ಟೆಂದು ಹೇಳಲಿ…..
ಬಹುಶಃ ದೂರ ಮಾತ್ರವೇ ಪ್ರೀತಿಯನ್ನು ಹತ್ತಿರವಾಗಿಸುತ್ತೆ… ಮತ್ತದು ಓಲೈಸಲು, ಓಲೈಸಿಕೊಳ್ಳಲು ದಾರಿಯಾಗಬಲ್ಲದು. ಹತ್ತಿರವಿದ್ದಾಗ ಅದೆಷ್ಟು ಬಾರಿ ಮುನಿಸಿಕೊಂಡಿದ್ದೇವೋ ಲೆಕ್ಕವಿಲ್ಲ. ಈಗೀಗ ಮಾತಿನ ಮಧ್ಯೆ ಚೂರು ಸಪ್ಪೆ ಎನಿಸಿದರೂ absence ಗುರುತಿಸಿ ಗೋಗರೆಯುವುದೇನೋ….. ಸಮಾಧಾನಿಸುವುದೇನೋ?   ಆಹಾ…  ಪ್ರೀತಿಯೇ…!!
ಇನ್ನೊಂದು ಗಂಟೆಯ ಬೆಳಗಿನ ನಿದ್ರೆಯಾದಾದರೂ ಆಗುತ್ತಿತ್ತು…ಎಬ್ಬಿಸಿದೆನೆಂದು ಗೊಣಗಿ  ಫೋನು ಕಟ್ ಮಾಡಿದಳು… ಅಷ್ಟರಲ್ಲಿ ಅವಳಿಂದ‌ ಎಷ್ಟೆಲ್ಲಾ ಹೂಂ…. ಎನ್ನುವ ಉತ್ತರ ಕೇಳಿದ್ದೆನೋ.. ಪ್ರತಿಯೊಂದಕ್ಕೂ “ರಾಜ್ಯಪಾಲರ ಆದೇಶಾನುಸಾರವಾಗಿ” ಎಂದು ಅಧಿಕೃತವಾಗಿ ಸರ್ಕಾರದ ಆದೇಶ ಪಡೆದಷ್ಟೇ ಮತ್ತು ಸರ್ಕಾರದಿಂದ ಬಾಕಿ ಇರುವ ಭತ್ಯೆಗಳೆಲ್ಲಾ ನಗದಾಗಿ ಮಂಜೂರಾತಿಗೆ ಅನುಮೋದನೆ ಸಿಕ್ಕ ಥೇಟ್ ಸರ್ಕಾರಿ ನೌಕರನಂತಾಗಿ  ಖುಷಿಯಾಗಿಬಿಟ್ಟೆ.
ವಾಕಿಂಗ್ ಮುಗಿಸಿಕೊಂಡು ವಾಪಾಸ್ ಬರುವಾಗೆಲ್ಲಾ ದಾರಿಯುದ್ದಕ್ಕೂ  ಚಂದ್ರಮುಖಿ ಪ್ರಾಣಸಖಿಯ “ಮರೆತೂ ಕೂಡ ಮರೆಯಲಾರೆ ನಾ ನಿನ್ನ” ಹಾಡು…ಮತ್ತು ಮನೆದೇವ್ರು ಸಿನಿಮಾದ ರವಿಚಂದ್ರನ್ ಡ್ಯೂಯೆಟ್ ಸಾಂಗಿನ ರೇಂಜಿಗೆ ಉಬ್ಬಿ ಹೋದ ನಾನು….
ಸರಿ, ಬಂದವನೇ ಶೇವಿಂಗು, ಬ್ರಷ್ಷು, ಸ್ನಾನ ಮುಗಿಸಿದೆ. ಬ್ಲೂ ಜೀನ್ಸ್ ಮತ್ತು ಸ್ಕಿನ್ ಟೈಟ್ ಕ್ರೀಮ್ ಟೀ ಶರ್ಟ್ ಹಾಕಿದೆ.    ಎಂದೂ   ಇಲ್ಲದವನು ಇವತ್ತು ಡಿಯೋಡ್ರೆಂಟ್ ಬಳಸಿದೆ,  “ಕೊನೆಯ ಎರಡು ದಿನಗಳು ಮಾತ್ರ” ಎಂದು ನಮ್ಮ ಹಂಗಾಮಿ ದಿನಗಳಲ್ಲಿ ಮೈಕ್ ನಲ್ಲಿ ಸಿನಿಮಾ ಥಿಯೇಟರ್ ನ ರಿಕ್ಷಾವಾಲಾ ಹೇಳುವಂತೆ ಇನ್ನೇನು ಕೆಲವೇ ವರ್ಷಗಳಲ್ಲಿ ಉದುರುವ ನೆತ್ತಿಯ ಎಣಿಸುವಷ್ಟು,  ಬಾಚಿಣಿಕೆಯ ಹಲ್ಲಿಗೂ  ಹತ್ತದ ಕೂದಲನ್ನೇ ತಿರುವಿಕೊಂಡು  ರೂಮಿನಿಂದ ಚಂಗನೆ ಜಿಗಿದವನೇ ಸ್ವಾಗತ ಹೋಟೆಲ್ ಗೇನೋ ಹೋದೆ.  ದಿನ  ತಿಂದದ್ದೇ ಬೇಸರವಿದ್ದರೂ  ತಿನ್ನಲೇಬೇಕಾದ ಅನಿವಾರ್ಯದ ಹಸಿವಿಗೆ   ಬಿಸಿ ಪೂರಿ ತಿಂದು ಆಫೀಸ್ ಬಂದು ಅಟೆಂಡನ್ಸ್ ಸಹಿ ಮಾಡಿ “ಅನ್ನದಾತ ಸುಖೀಭವ” ಅನ್ನುತ್ತಾ ಕಾಲ್ ಮಾಡಿದೆ….
ಆ ಕಡೆಯಿಂದ ಅವಳು “ಹಲೋ…… ರೀ,‌ ಬೆಳಿಗ್ಗೆ ನೀವು ಕಾಲ್ ಮಾಡಿ ಮಾತಾಡಿದ್ರಲ್ಲ?!!!  ಥೂ,  ಎಂಥ ತಲೆನೋವಿತ್ತು, ಹಾಳಾದ್ದು  ನಿದ್ದೆ ಬೇರೆ ಇದ್ದಿಲ್ಲ, ಮಬ್ಬೋ ಮಬ್ಬು.  ನೀವ್  ಏನ್ ಹೇಳಿದ್ರೋ ನಾನೇನ್ ಅಂದ್ನೋ  ಒಂದೂ ನೆನಪಿಲ್ಲ…. ” ಈಗ ಹೇಳಿ ತಲ್ನೋವು ಕಮ್ಮಿ ಆಗಿದೆ….” ಅಂದಳು…..
ಅಷ್ಟೇ…..
-ಅಮರದೀಪ್ ಪಿ.ಎಸ್.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x