ನ್ಯಾನೋ ಕತೆಗಳು: ವೆಂಕಟೇಶ ಚಾಗಿ

 

೧) ಸ್ವಚ್ಛ ಭಾರತ

ಬಸ್ ನಿಲ್ದಾಣದ ಕಟ್ಟೆಯ ಮೇಲೆ ಇಬ್ಬರು ಸ್ನೇಹಿತರು ಸರಕಾರದ ಮಹತ್ತರ ಯೋಜನೆಯ ಸಾಧಕ-ಬಾಧಕಗಳ ಕುರಿತು ಮಾತನಾಡುತ್ತಾ ಕುಳಿತಿದ್ದರು. ಸಮಯ ಕಳೆಯಲು ಬಾಯಿ ಚಟಕ್ಕಾಗಿ ಶೇಂಗಾ, ಪ್ಯಾಕೆಟ್ ತಿಂಡಿ, ಬಾಳೆಹಣ್ಣು ಇನ್ನಿತರೆ ವಸ್ತುಗಳನ್ನು ತಿನ್ನುತ್ತಾ ಮಾತನಾಡುತ್ತಿದ್ದರು. “ಛೇ, ಈ  ಜನರಿಗೆ ಸರಕಾರದ ಈ ಮಹಾ ಯೋಜನೆ ಅರ್ಥವಾಗುವುದೇ ಇಲ್ಲ.  ಇವರಿಗೆ ಯಾವಾಗ ಬುದ್ಧಿ ಬರುತ್ತೋ ” ಎನ್ನುತ್ತಾ ಹೊರಟುಹೋದರು. ಅವರಿದ್ದ ಜಾಗದ ಸುತ್ತಮುತ್ತ ಶೇಂಗಾ ಸಿಪ್ಪೆ,  ಪ್ಲಾಸ್ಟಿಕ್ ಹಾಳೆಗಳು, ಬಾಳೆ ಸಿಪ್ಪೆ ಹರಡಿದ್ದವು. ಅವರು ಚರ್ಚಿಸುತ್ತಿದ್ದುದು ಸರಕಾರದ ಸ್ವಚ್ಛ ಭಾರತ ಆಂದೋಲನದ ಕುರಿತು.

೨) ಬೇಟಿ ಬಚಾವ್

ಅವನು ತನ್ನ ಹಣದ ಬಲದಿಂದ ವೈಧ್ಯರಿಗೆ ಹಣ ನೀಡಿ,  ತನ್ನ ಹೆಂಡತಿಯ ಗರ್ಭದಲ್ಲಿ ಹೆಣ್ಣು ಭ್ರೂಣ ವಿರುವುದು ಅರಿತಾಗ ಅವನಿಗೆ ತುಂಬಾ ನೋವುಂಟಾಯಿತು. ಗಂಡಾಗಿದ್ದರೆ ಚೆನ್ನಾಗಿರುತ್ತಿತ್ತು.  ತನ್ನ ಆಸ್ತಿಗೆ ಉತ್ತರಾಧಿಕಾರಿ ಗಂಡೇ ಆಗಬೇಕೆಂಬುದು ಹಠಹಿಡಿದ. ಗರ್ಭಪಾತ ಮಾಡುವಂತೆ ವೈದ್ಯರಿಗೆ ಬಲವಂತ ಮಾಡಿದ.  ಆದರೆ ಕುಟುಂಬದ ವೈದ್ಯರು ತಮ್ಮ ಸಮಯಪ್ರಜ್ಞೆಯಿಂದ, ಅವನಿಗೆ ಸಾಕಷ್ಟು ತಿಳುವಳಿಕೆಯನ್ನು ಹೇಳಿ ಹೆಣ್ಣು ಮಗುವನ್ನು   ಉಳಿಸಿದರು. ಅವನ ನಿರಾಸಕ್ತಿ ಯಲ್ಲಿ ಬೆಳೆದು ಆ ಹೆಣ್ಣು ಮಗು ದೊಡ್ಡವಳಾದಳು. ಆ ದಿನ ಅವನು ಹೃದಯಾಘಾತಕ್ಕೆ ಒಳಗಾದಾಗ ಅವನಿಗೆ ಪ್ರಥಮ ಚಿಕಿತ್ಸೆ ನೀಡಿ  ಮರುಜೀವ ನೀಡಿದವಳೇ ಅವಳು.  ಅವಳ ಸಮಯಪ್ರಜ್ಞೆಯಿಂದ ಆ ದಿನ ಅವಳನ್ನು ಬದುಕಿಸಿದ ವೈದ್ಯರೇ ಅವಳ ತಂದೆಯನ್ನು ಬದುಕಿಸಿದರು.

೩) ಸ್ವಯಂ ಉದ್ಯೋಗ

ಅವನು ಚೆನ್ನಾಗಿ ಓದಿ ಒಂದು ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಮಾಡಬೇಕೆಂಬುದು ಅವನ ದೊಡ್ಡ ಆಸೆಯಾಗಿತ್ತು.  ಅದರಂತೆ ಅವನು ಚೆನ್ನಾಗಿಯೇ  ಓದಿದ. ತನ್ನ ಬಳಿ  ಇದ್ದ ಬದ್ದ ಆಸ್ತಿಯನ್ನೆಲ್ಲ ಮಾರಿ ಪ್ರತಿಷ್ಠಿತ ಕಂಪನಿಯ ಉದ್ಯೋಗಕ್ಕೆ ಬೇಕಾದ ವಿದ್ಯಾರ್ಹತೆಯನ್ನು ಹೊಂದಿದ.   ಆದರೆ ಅವನ ದುರದೃಷ್ಟವೆನೋ  ಎಂಬಂತೆ ಪ್ರತಿಷ್ಠಿತ ಕಂಪನಿಯು ತನ್ನಲ್ಲಿರುವ ಉದ್ಯೋಗಿಗಳನ್ನು ಕಡಿತಗೊಳಿಸತೊಡಗಿತು. ಇತ್ತ ಬೇರೆ ಕೆಲಸಕ್ಕೆ ಹೋಗದೆ ಚಿಂತೆಗೀಡಾದ. ಮಾನಸಿಕ ಅಸ್ವಸ್ಥನಂತಾದ.  ಕೊನೆಗೆ ಸ್ವಂತ ಉದ್ಯೋಗ ಮಾಡಬೇಕೆನ್ನುವ ನಿರ್ಧಾರ ಮಾಡಿ ಸರಕಾರದ ಧನ ಸಹಾಯ ಪಡೆದುಕೊಂಡು ಒಂದು ಚಿಕ್ಕದಾದ ಮೊಬೈಲ್ ಹೋಟೆಲನ್ನು ರಸ್ತೆಯ ಪಕ್ಕ ಪ್ರಾರಂಭಿಸಿದ. ಅವನ ಕೈರುಚಿಯಿಂದಾಗಿ ಗಿರಾಕಿಗಳ ಸಂಖ್ಯೆ ಹೆಚ್ಚು ತೊಡಗಿತು.  ಕೆಲವೇ ದಿನಗಳಲ್ಲಿ ದೊಡ್ಡ ಹೋಟೆಲ್ ಆರಂಭಿಸಿದ.  ಅವನ ಅದೃಷ್ಟ ವೇನು ಎನ್ನುವಂತೆ ಅವನ ಹೋಟೆಲ್ ಉದ್ಯಮವು ಪ್ರತಿಷ್ಠಿತ ಕಂಪನಿಯಾಗಿ ಬೆಳೆಯಿತು.

೪) ಸರ್ವಶಿಕ್ಷಾ ಅಭಿಯಾನ

ಆ ಊರು ಕಾಡಿನ ಮಧ್ಯ ಅಗೋಚರದಂತಿದ್ದು. ಅಲ್ಲಿನ ಜನರು ನಗರ ಜೀವನದಿಂದ ಬಹು ದೂರವೇ ಉಳಿದಿದ್ದರು. ಯಾರೋ ಬೆರಳೆಣಿಕೆಯಷ್ಟು ಜನರು ನಗರಕ್ಕೆ ಹೋಗಿ ಬರುತ್ತಿದ್ದರು. ಅಲ್ಲಿನ ಜನರಿಗೆ ಶಿಕ್ಷಣ ಮರೀಚಿಕೆಯಾಗಿತ್ತು.  ಅವರು ನಗರಕ್ಕೆ  ಹೋಗಿ ಬರುತ್ತಿದ್ದದ್ದು ಯಾವುದೋ ವ್ಯವಹಾರಕಲ್ಲ. ತಮ್ಮ ಜನರಿಗೆ ಮತ್ತು ಮಕ್ಕಳಿಗೆ ಯಾರಾದರೂ ಶಿಕ್ಷಣ ನೀಡುವವರು ಸಿಗುವವರೆನೋ ಎಂದು ಹುಡುಕುತ್ತಿದ್ದರು. ಆದರೆ ನಾಡಿನ ಜನರು ಇವರನ್ನು ಭಿಕ್ಷುಕರಂತೆ ಕಂಡು ಓಡಿಸಿ ಬಿಡುತ್ತಿದ್ದರು.  ಒಬ್ಬ ಪ್ರಜ್ಞಾವಂತ ಶಿಕ್ಷಕ ಇವರನ್ನು ಕಂಡು  ಆ ಊರಿನ ಜನರಿಗೆ ಶಿಕ್ಷಣ ನೀಡಬೇಕೆಂದು ಸಂಕಲ್ಪ ತೊಟ್ಟ.  ಅದರಂತೆ ಸರ್ವಶಿಕ್ಷಾ ಅಭಿಯಾನದಡಿ ಆ ಊರಿಗೆ ಶಾಲಾ ಕೊಠಡಿ ನಿರ್ಮಿಸಿ, ತಾನೇ ಆ ಊರಿಗೆ ವರ್ಗಾವಣೆಗೊಂಡ.  ಶಿಕ್ಷಕನ ಶ್ರಮದಿಂದಾಗಿ ಆ ಊರಿನ ಜನರು ಮಕ್ಕಳು ಅಕ್ಷರಸ್ಥರಾದರು.

-ವೆಂಕಟೇಶ ಚಾಗಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x