ಮಾಯವಾಗುತ್ತಿರುವ ಬರವಣಿಗೆ ಎಂಬ ಭಾಷಾ ಕೌಶಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ವಿಜ್ಞಾನ ತಂತ್ರಜ್ಞಾನದ ಶೀಘ್ರ ಬೆಳವಣಿಗೆಯಿಂದ ಮಾನವನ ಬದುಕು ಎಷ್ಟು ಸುಖಮಯ ಸುಲಭವಾಗುತ್ತದೋ ಅಷ್ಟೇ ಸಂಕೀರ್ಣವೂ ಅವಲಂಬಿಯೂ ಆಕಸ್ಮಿಕವೂ ಅಘಾತಕಾರಿಯೂ ಆಗುವುದರೊಂದಿಗೆ ಏಷ್ಟೋ ಶ್ರೇಷ್ಠ ಕಲೆಗಳ ಅಳಿವಿಗೂ ಹೊಸ ಕಲೆಗಳ ಸೃಷ್ಟಿಗೂ ನಾಂದಿ ಹಾಡಿದೆ! ಆದರೆ ವಿಜ್ಞಾನದ ಪ್ರಗತಿಯ ಓಟದಲ್ಲಿ ನಾವು ಈ ಸಂಕೀರ್ಣತೆಯನ್ನು, ಕಲೆಯನ್ನೂ ಮುಖ್ಯವೆಂದು ಭಾವಿಸುತ್ತಿಲ್ಲ! ಮುಂದೊಂದು ದಿನ ಅದರ ಪ್ರಾಮುಖ್ಯತೆ ಗೊತ್ತಾಗುತ್ತದೆ. ವಿಜ್ಞಾನ ತಂತ್ರಜ್ಞಾನದ ಅಪರಿಮಿತ ಬೆಳವಣಿಗೆಯಿಂದಾಗಿ ಇಂದು ಕ್ಯಾಶ್ಲೆಸ್ ವ್ಯವಹಾರ ಆರಂಭವಾಗಿದೆ! ಇದು ಅದ್ಭುತ ಸಾಧನೆ! ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ, ಒಂದು ಕರೆನ್ಸಿಯನ್ನು ಮತ್ತೊಂದು ಕರೆನ್ಸಿಯಾಗಿ ಪರಿವರ್ತಿಸಿ ಹಣ ಒಯ್ಯುವ ಆತಂಕ ಅದರ ರಕ್ಷಣೆ ಮಾಡುವ ಕಷ್ಟ ತಪ್ಪಿಸಿದೆ. ಇದರಿಂದ ಎಷ್ಟೋ ಅಮೂಲ್ಯ ಪ್ರಾಣಗಳು ಸಮಯ ಉಳಿದಂತಾಗಿದೆ! ಸಮಸ್ಯೆಗಳಿಗೆ ತಿಲಾಂಜಲಿಯಿಟ್ಟು ಆತಂಕ ದೂರವಾದಂತಾಗಿದೆ. ಡಿಜಿಟಲೀಕರಣ ಕ್ಯಾಶ್ಲೆಸ್ ವ್ಯವಹಾರಕ್ಕೆ ಹೆದ್ದಾರಿಯಾಗಿದೆ.

ವ್ಯವಹಾರ ಹೇಗೆ ಕ್ಯಾಶ್ ಲೆಸ್ ಆಗುವ ಕಡೆಗೆ ಸಾಗುತ್ತಿದೆಯೋ ಹಾಗೆಯೇ ದಾಖಲೀಕರಣ ಸಹ ರೈಟ್ ಲೆಸ್ಸೋ ಪೇಪರ್ ಲೆಸ್ಸೋ ಆಗುವ ಕಡೆಗೆ ಸಾಗುತ್ತಿದೆ! ಎಲ್ಲಾ ಕಚೇರಿಗಳಲ್ಲಿ ಒಂದರ ಮೇಲೆ ಒಂದು ಪೇರಿಸಿಟ್ಟ ಜೀರ್ಣ ಸ್ಥಿತಿಯಲ್ಲಿನ, ಹಳತಾದ, ಹೊಸತಾದ ಕಡತಗಳು ಅರ್ಧ ಕಛೇರಿಯನ್ನು ಆವರಿಸಿರುತ್ತಿದ್ದವು. ಅವು ಕಛೇರಿಯ ಅಂದಗೆಡಿಸಿ ಕಡತದ ಮೇಲಿನ ಧೂಳಿಗೆ ಹೆದರಿ ಅವುಗಳನ್ನು ಮುಟ್ಟಲು ಅವುಗಳಿಂದ ಉಂಟಾಗುವ ತೊಂದರೆಗೆ ಹೆದರುವಂತಾಗಿತ್ತು. ಇಂದು ಕಡತಗಳೆಲ್ಲಾ ಡಿಜಿಟಲೀಕರಣಗೊಂಡು ಎಲ್ಲ ಮಾಹಿತಿ ಆನ್ ಲೈನ್ ನಲ್ಲೇ ಲಭ್ಯವಾಗುವಂತಾಗಿ ಕಛೇರಿ, ಕಡತ ನಿರ್ವಾಹಕರ ಮನಸ್ಸು ನಿರಾಳವಾಗಿದೆ! ಕಡತಗಳ ಒತ್ತೊಯ್ಯುವ ಕಷ್ಟ, ಹಾಳಾಗದಂತೆ ಕಾಪಾಡುವ ಹೆದರಿಕೆ ಕಡತಗಳಿಗೆ ವಿಶಾಲ ಸ್ಥಳಾವಕಶ ಒದಗಿಸುವ ಸಂಕಷ್ಟ ತಪ್ಪಿದೆ. ಕೆಲವು ಧಾಖಲೆಗಳನ್ನು ಎಲ್ಲಿಗೂ ಹೊತ್ತೊಯ್ಯದೆ ಯಾವ ಊರಿನಲ್ಲಿ ಬೇಕಾದರೂ ನೇೂಡಬಹುದಾಗಿದೆ. ಕಡತಗಳಲ್ಲಿ ದಾಖಲಿಸಲು ಬರವಣಿಗೆ ಬರಬೇಕು. ಭಾಷೆ ಅಕ್ಷರ ಒಂದೇ ಆದರೂ ಒಬ್ಬೊಬ್ಬರ ಬರವಣಿಗೆ ಒಂದೊಂದು ಥರ! ಒಂದೇ ಅಕ್ಷರವನ್ನು ಪ್ರತಿಯೊಬ್ಬರು ಒಂದೊಂದು ರೀತಿ ಬರೆಯುತ್ತಿದ್ದರು. ಒಬ್ಬೊಬ್ಬರದು ಒಂದೊಂದು ಶೈಲಿ! ಒಂದೊಂದು ರೀತಿ! ಅವುಗಳನ್ನು ಓದಲು ತಿಳಿಯಲು ಅವರ ಬರವಣಿಗೆಯ ಶೈಲಿಯನ್ನು ಅರ್ಥಮಾಡಿಕೊಳ್ಳಬೇಕಿತ್ತು. ಭಾಷೆ ಕಲಿಯಲು ಮುಖ್ಯವಾಗಿ ನಾಲ್ಕು ಕೌಶಲಗಳು ಕಲಿಯಬೇಕು: ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆ. ಈ ಕೌಶಲಗಳನ್ನು ಕ್ರಮವಾಗಿ ಕಲಿಯದ ಹೊರತು ಭಾಷೆ ಬಾಯಿವಶವಾಗದು, ಬರವಣಿಗೆ ಕೈವಶವಾಗದು! ಇವುಗಳನ್ನು ಮಕ್ಕಳಿಗೆ ಕಲಿಸಲು ಮನೆಮಂದಿಯೆಲ್ಲ ಶ್ರಮಿಸುತ್ತಿದ್ದರು. ಶಿಕ್ಷಕರು ಎಷ್ಟು ಶ್ರಮಿಸುತ್ತಿದ್ದರೆಂದರೆ ಹೇಳತೀರದು! ಮನೆಮಂದಿಯೆಲ್ಲಾ ಮಾತನಾಡುವುದರಿಂದ ಅನುಕರಣೆ ಮೂಲಕ ಮಗು ಮಾತೃಭಾಷೆಯಲ್ಲಿ ಮಾತನಾಡುವುದನ್ನು ಕಲಿತುಬಿಡುತ್ತಿತ್ತು. ಮಾತೃ ಭಾಷೆಯಲ್ಲದಿದ್ದರೆ ಕಲಿಯುವುದು ಸ್ವಲ್ಪ ಕಷ್ಟ. ಭಾಷೆ ಕಲಿಯುವ ಕೌಶಲಗಳಲ್ಲಿ ಕೊಟ್ಟ ಕೊನೆಯದು ಬರವಣಿಗೆ! ಬರವಣಿಗೆ ಕಲಿಸಲು ಶಿಕ್ಷಕರ, ಪೋಷಕರ ಶ್ರಮ ಅವಿರತ ಮತ್ತು ಅಪರಿಮಿತ. ಅಕ್ಷರಾಭ್ಯಾಸ ಅಂತನೇ ಶಾರದಾ ಪೀಠ ಮುಂತಾದ ಕಡೆಗೆ ಮಗುವನ್ನು ಕರೆದುಕೊಂಡು ಹೋಗಿ ವಿದ್ಯಾರಂಭ ಚೆನ್ನಾಗಿ ಆಗಲಿ ಎಂದು ಗುರುಗಳ ಮುಖೇನ ಒಂದು ಶುಭ ಮುಹೂರ್ತದಲ್ಲಿ ಅಕ್ಕಿಯಲ್ಲಿ ಅಕ್ಷರ ಬರೆಯಿಸುವುದು ಮಾಡಿಸುತ್ತಿದ್ದರು. ಏಕೆಂದರೆ ವಿದ್ಯೆ ಅದರ ಭಾಗವಾದ ಬರವಣಿಗೆ ಅಷ್ಟು ಮುಖ್ಯ! ಬರವಣಿಗೆ ಕಲಿಸುವ ಮೊದಮೊದಲು ಮಗುವಿಗೆ ಬರಿ ಪುಟಗಟ್ಟಲೆ ದಿನವೆಲ್ಲಾ ಸೊನ್ನೆ ಸುತ್ತಿಸುವ ಕ್ರೀಯೆ ನಡೆಸಬೇಕಿತ್ತು! ಸೊನ್ನೆಯ ಕಲಿಸುವಿಕೆ ತುಂಬಾ ಮುಖ್ಯವಾದುದು. ಅನೇಕ ಅಕ್ಷರ ಅಂಕಿಗಳು ಇದನ್ನು ಅವಲಂಬಿಸಿವೆ. ಸೊನ್ನೆಯನ್ನು ಬರೆಯಲು ಬರೆಯಬೇಕಿರುವ ವಸ್ತುವಿನ ಮೇಲೆ ಲೇಖನಿ ಇಟ್ಟು ಎಡದಿಂದ ವೃತ್ತಾಕಾರವಾಗಿ ಕೆಳಕ್ಕೆಬಂದು ಬಲಗಡೆಯಿಂದ ವೃತ್ತಾಕಾರವಾಗಿ ಮೇಲಕ್ಕೆ ಹೋಗಿ ಆರಂಭಿಸಿದುದನ್ನು ಸೇರಿದಬೇಕಿತ್ತು. ಇಂದೂ ಕೆಲ ದೊಡ್ಡವರು ಹೀಗೆ ಸೊನ್ನೆಯನ್ನು ಬರೆಯುತ್ತಿಲ್ಲ! ಸೊನ್ನೆ ಕಲಿತ ನಂತರ ಒಂದೊಂದೇ ಅಕ್ಷರ ಕೈ ಹಿಡಿದು ತಿದ್ದಿಸುವ ಪ್ರಕ್ರಿಯೆ ಪ್ರತಿದಿನ ಮಾಡಬೇಕಿತ್ತು! ಒಂದೊಂದು ಅಕ್ಷರ ಕಲಿಸುವುದು ಅದನ್ನು ಒಂದು ಪುಟ ಬರೆದುಕೊಂಡು ಬರುವಂತೆ ಹೇಳಿ, ಅದನ್ನು ಕೈ ಹಿಡಿದು ತಿದ್ದಿಸಿ, ಮತ್ತೆ ಮತ್ತೆ ತಿದ್ದಿ ಮತ್ತೆ ಬರೆಯಿಸುತ್ತ ವಿದ್ಯಾರ್ಥಿಗೆ ಆ ಅಕ್ಕರ ಕೈವಶವಾಗುವವರೆಗೆ ದುಂಡಗಾಗುವವರೆಗೆ ಕಲಿಸುತ್ತಿದ್ದರು. ಅಕ್ಷರ ಕಲಿತ ನಂತರ ಪಾಠ ನೆನಪಿನಲ್ಲಿಟ್ಟುಕೊಳ್ಳಲು ಬರೀ ಓದಿನಿಂದ ಸಾಧ್ಯವಿಲ್ಲವೆಂದು, ಹತ್ತು ಸಾರಿ ಓದುವುದಕ್ಕಿಂತ ಒಂದು ಸಾರಿ ಬರೆಯುವುದು ಉತ್ತಮ ಎಂದು, ಅದನ್ನು ಗೃಹಪಾಠ ಕೊಡುತ್ತಿದ್ದರು. ಅಂದರೆ ಪ್ರತಿ ದಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕಲಿಸಿದ್ದು ಸದಾ ನೆನಪಲ್ಲಿ ಉಳಿಯಲೆಂದು ಎರಡು ಮೂರು ಸಾರಿ ಬರೆದುಕೊಂಡು ಬರುವಂತೆ ಹೇಳುತ್ತಿದ್ದರು. ಹಾಗೆ ಭಾಷಾ ಶಿಕ್ಷಕರು ಇಂಗ್ಲೀಷಾದರೆ ಫೋರ್ ಲೈನ್, ಕನ್ನಡವಾದರೆ ಟು ಲೈನ್ ನೋಟ್ ಪುಸ್ತಕಗಳಲ್ಲಿ ಆ ಸಾಲುಗಳನ್ನು ಹೇಗೆ ಬರೆಯಬೇಕೆಂದು ತೋರಿಸಿಕೊಡುತ್ತಿದ್ದರು. ಹಾಗೆಯೇ ಬರೆಯಲು ಹೇಳುತ್ತಿದ್ದರು. ಪ್ರತಿದಿನ ಗೃಹ ಪಾಠ ಬರೆಯಲು ಕೊಟ್ಟು ಪ್ರತಿನಿತ್ಯ ವೀಕ್ಷಿಸಿ ಸರಿಯಿಲ್ಲದ್ದ ಸರಿಪಡಿಸಿಕೊಳ್ಳಲು ಸಲಹೆ ಕೊಡುತ್ತಿದ್ದರು, ತಿದ್ದಿ ತೋರಿಸುತ್ತಿದ್ದರು. ಸುಂದರವಿಲ್ಲದ ಅಕ್ಷರಗಳ ಸುಂದರಗೊಳಿಸಿಕೊಳ್ಳಲು ಸೂಕ್ತ ಸಲಹೆ ಕೊಡುತ್ತಿದ್ದರು. ಹೆಚ್ಚು ಹೋಂವರ್ಕ್ ಕೊಟ್ಟು ಅಕ್ಷರ ಸುಂದರವಾಗುವಂತೆ ಮಾಡುತ್ತಿದ್ದರು! ಹೇಳಿದಷ್ಟು ಸಲ ಹೋಂವರ್ಕ್ ಮಾಡದಿದ್ದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ! ಶಿಕ್ಷೆಯಿಂದ ಪಾರಾಗಲು ಹೋಂವರ್ಕ್ ಮಾಡಲೇ ಬೇಕಾಗಿತ್ತು, ಹಾಗೆ ಮಾಡಿದಾಗ ಅಕ್ಷರ ಸುಂದರವಾಗಿ ಕಾಣುತ್ತಿದ್ದವು! ನಿತ್ಯ ಗೃಹಕೆಲಸ ಮಾಡುವುದರಿಂದ ಬರವಣಿಗೆಯ ವೇಗ ದಿನದಿಂದ ದಿನಕ್ಕೆ ಹೆಚ್ಚುವುದು ಬರವಣಿಗೆ ಶುದ್ದವಾಗುವುದು ಆಗುತ್ತಿತ್ತು! ಹೋಂವರ್ಕ್ ನಿತ್ಯದ ಭಾಗವಾಗಿತ್ತು ಮಾಡದವರು ಶಿಕ್ಷೆ ಅನುಭವಿಸಿಯೇ ತೀರಬೇಕಾಗಿತ್ತು! ಮಾಡದ ಕೆಲವರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಶಾಲೆಗೆ ಚಕ್ಕರ್ ಹೊಡೆಯುತ್ತಿದ್ದರು. ಕೆಲವರು ಶಿಕ್ಷೆಗೆ ಹೆದರಿ ಶಾಲೆಯನ್ನೇ ಬಿಡುತ್ತಿದ್ದರು! ಇಂತಹವರು ಅಪರೂಪ! ಪ್ರತಿನಿತ್ಯ ಹೋಂವರ್ಕ್ ಕೊಟ್ಟು ಏಳನೇ ತರಗತಿ ತಪ್ಪಿದರೆ ಎಂಟನೇ ತರಗತಿಗೆ ಬರುವ ಹೊತ್ತಿಗೆ ಕೆಲವೇ ಕೆಲವು ವಿದ್ಯಾರ್ಥಿಗಳು ತಮ್ಮದೇ ಆದ ಬರವಣಿಗೆಯ ಶೈಲಿಯನ್ನು ರೂಪಿಸಿಕೊಳ್ಳುವಷ್ಟರ ಮಟ್ಟಿಗೆ ಸಿದ್ಧರಾಗುತ್ತಿದ್ದರು! ಸುಮಾರು ಶೇಕಡ ಎಪ್ಪತ್ತರಷ್ಟು ವಿದ್ಯಾರ್ಥಿಗಳು ತಮ್ಮದೇ ಬರವಣಿಗೆ ಶೈಲಿಯನ್ನು ರೂಢಿಸಿಕೊಳ್ಳುವ ಹೊತ್ತಿಗೆ ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ತಲುಪಬೇಕಿತ್ತು! ಕೆಲವರು ಅವರದೇ ಆದ ಬರವಣಿಗೆಯ ಶೈಲಿ ಪಡೆಯಲು ಪದವಿ ತಲುಪಿದರೂ ಸಾಧ್ಯವಾಗುತ್ತಿರಲಿಲ್ಲ! ಆ ಬರವಣಿಗೆ ಶೈಲಿ ಹೇಗಿರುತ್ತಿತ್ತು ಎಂದರೆ? ಪ್ರತಿ ವ್ಯಕ್ತಿಯ ಹೆಬ್ಬೆರಳಿನ ಗುರುತು ಹೇಗೆ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತಿತ್ತೋ ಹಾಗೆ ಬರವಣಿಗೆ ಭಿನ್ನವಾಗಿರುತಿತ್ತು! ಪ್ರತಿಯೊಬ್ಬರ ಬರವಣಿಗೆಯೂ ಆ ವ್ಯಕ್ತಿಯ ವ್ಯಕ್ತಿತ್ವದ ಗುರುತನ್ನು ಮೂಡಿಸುತಿತ್ತು! ಬರವಣಿಗೆಯನ್ನು ನೋಡಿಯೇ ಅದನ್ನು ಬರೆದವರನ್ನು ಗುರುತಿಸುವಂತೆ ಬರವಣಿಗೆಯಲ್ಲಿ ಅವರ ಲಕ್ಷಣಗಳನ್ನು ಮೂಡಿಸುತಿತ್ತು! ಬರವಣಿಗೆಯಲ್ಲಿ ಅದನ್ನು ಬರೆದವರು ಕಾಣುತ್ತಿದ್ದರು. ಆ ಬರವಣಿಗೆ ಶೈಲಿಗಳು ಸತತ ಎಂಟೋ ಒಂಬತ್ತೋ ವರ್ಷ ಪ್ರತಿದಿನ ನಿರಂತರವಾಗಿ ಶ್ರಮಿಸಿದ ಫಲವಾಗಿತ್ತು! ಎಷ್ಟು ಜನ ಬರಹಗಾರರಿದ್ದರೋ ಅಷ್ಟು ಬರವಣಿಗೆಯ ಶೈಲಿಗಳಿರುತ್ತಿದ್ದವು. ಎಂದು ಟೈಪ್ ರೈಟಿಂಗ್ ಮಷಿನ್ಗಳು, ಕಂಪ್ಯೂಟರುಗಳು, ಲ್ಯಾಪ್ ಟಾಪ್ ಗಳು ಮೊಬೈಲುಗಳು ಬಂದುವೋ ತಮ್ಮದೇ ಆದ ಬರವಣಿಗೆಯ ಶೈಲಿಯ ಅಂತ್ಯ ಆಗಲೇ ಆರಂಭ ಮಾಡಿದವು! ತಮ್ಮದೇ ಬರವಣಿಗೆ ರೂಪಿಸಿಕೊಳ್ಳಲು ಎಂಟೋ ಒಂಬತ್ತೋ ವರ್ಷ ಪಡಬಾರದ ಕಷ್ಟ ಪಡಬೇಕಿತ್ತು ಅದು ತಪ್ಪಿತಲ್ಲಾ ಎಂದು ಕೆಲವರು ಖುಷಿ ಪಡಬಹುದು! ವಿದ್ಯಾರ್ಥಿಗಳಿಗೆ ಆಗುವಷ್ಟು ಖುಷಿ ಇನ್ನಾರಿಗೆ ಆದೀತು? ವಿದ್ಯಾರ್ಥಿಗಳ ಕಾಟ ತಾಳದೆ ಅವರ ಹೋಂವರ್ಕ್ ಮಾಡಿಕೊಡುತ್ತಿದ್ದ ಪೋಷಕರು ಖುಷಿಯಾಗಬಹುದು. ಹಾಗೆ ಕಛೇರಿಗಳಲ್ಲಿ ರಾಶಿ ರಾಶಿ ದಾಖಲೆಗಳನ್ನು ಬರೆದು ಬರೆದೂ ದಾಖಲೆಗಳು ಸೇರಿಸುವುದಕ್ಕೆ, ಕಡತಗಳ ಪೇರಿಸುವುದಕ್ಕೆ, ಧೂಳಿನಿಂದಾಗುತ್ತಿದ್ದ ಕಿರಿಕಿರಿಗೆ ಅಂತ್ಯ ಬಂದುದಕೆ ದಾಖಲೆಗಳ ಮಾಡಿ ಕಡತಗಳ ಪೇರಿಸಿಡುತ್ತಿದ್ದ ಕಛೇರಿ ಸಿಬ್ಬಂದಿಗೆ ಆನಂದವಾಗುತ್ತಿರಬೇಕು! ಇಂದು ಓದುವುದನ್ನು ಕಲಿತರೆ ಸಾಕು ಟೈಪ್ ಮಾಡಬಹುದಾಗಿದೆ. ಇಂದು ಬಹಳಷ್ಟು ಮಾಹಿತಿ ಹೀಗೆ ಕಂಪ್ಯೂಟರ್ನಲ್ಲೇ ದಾಖಲಾಗುತ್ತಿರುವುದರಿಂದ ಬರವಣಿಗೆಯ ಮಹತ್ವ ಹೊರಟು ಹೋಗಿದೆ! ಎಲ್ಲ ದಾಖಲೆಗಳು, ಫೈಲುಗಳು, ಎಲ್ಲರ ಬರವಣಿಗೆಯ ಅಕ್ಷರಗಳು ಒಂದೇ ಥರ! ಒಂದೇ ರೂಪ! ಒಂದೇ ಶೈಲಿ!

ಮಾಯವಾಗುತ್ತಿರುವ ಆಟೋಗ್ರಾಫ್. ಇವು ಇಂತಹ ಕವಿಗಳ, ಪ್ರಮುಖರ ಹಸ್ತಾಕ್ಷರ ಅಂತ ಬಹಳ ಕಡೆ ಅವರ ಹಸ್ತಾಕ್ಷರವನ್ನೇ ಮುದ್ರಿಸಲಾಗಿತ್ತು. ಅವರೊಡನೆ ಮಾತನಾಡದವರು ಅವರ ಲಿಪಿ ಕಂಡು ಅದರೊಂದಿಗೆ ಏನೋ ಒಂದು ಭಾವನಾತ್ಮಕವಾಗಿ ಸಂಬಂಧ ಕಲ್ಪಿಸಿಕೊಳ್ಳುತಿದ್ದರು. ಬರೆದವರು ಇಲ್ಲವಾಗಿದ್ದರೂ ಅವರ ಲಿಪಿ ಅವರ ಬಗ್ಗೆ ಏನೋ ಒಂದು ಭಾವನೆ ಬರುವಂತೆ ಮಾಡುತಿತ್ತು! ಡಿಜಿಟಲೀಕರಣದಿಂದ ಅದು ಸಾಧ್ಯವಾಗದಂತಾಗಿದೆ!

ಟೈಪು ಮಾಡುವ ಸಾಧನಗಳು ಬಂದಮೇಲೆ ಕಂಪ್ಯೂಟರ್ಗಳಲ್ಲಿ, ಮೊಬೈಲುಗಳಲ್ಲಿ ಟೈಪು ಮಾಡುವ ಸಾಧನಗಳ ಕೀಲೀ ಮಣಿಯಲ್ಲಿರುವ ಅಕ್ಷರಗಳನ್ನು ನೋಡಿಕೊಂಡು ಟೈಪ್ ಮಾಡಬೇಕಾಗಿತ್ತು. ಆಗ ಎಲ್ಲಾ ಬೆರಳುಗಳಿಗೆ ವ್ಯಾಯಾಮವಾಗುತಿತ್ತು. ಲಿಪಿಕಾರ ಅಂತ ಒಂದು ಆಪ್ ಬಂದು ಟೈಪ್ ಮಾಡುವ ಶ್ರಮವನ್ನು ಸರಳಗೊಳಿಸಿದೆ! ಲಿಪಿಕಾರ ಅಥವಾ ವಾಯ್ಸ್ ಬೇಸ್ಡ್ ಟೈಪ್ ಬಂದು ಬರವಣಿಗೆಯನ್ನು ಸುಲಭಗೊಳಿಸಿದೆ! ಆ ಆಪಗಳನ್ನು ಡೌನ್ಲೋಡ್ ಮಾಡಿಕೊಂಡರೆ ಸಾಕು ಹದಿನೈದು ಸೆಕೆಂಡ್ ತನಕ ಅದರ ಮುಂದೆ ಮಾತನಾಡಿದರೆ ಅದು ಆ ಮಾತುಗಳನ್ನು ಚಾಚೂ ತಪ್ಪದೆ ಬರೆದು ಕೊಳ್ಳುತ್ತದೆ. ಹೀಗೆ ಹದಿನೈದು ಸೆಕೆಂಡ್ ಆದ ಮೇಲೆ ಮತ್ತೆ ಮಾತನಾಡಿದರೆ ಆ ಹದಿನೈದು ಸೆಕೆಂಡುಗಳ ತನಕ ದಾಖಲಿಸಿಕೊಳ್ಳುತ್ತದೆ. ಹೀಗೆ ಎಷ್ಟೋ ಆಪ್ಗಳು ಬಂದಿವೆ ಅವು ಬೇರೆ ಬೇರೆ ಸಮಯಾವಧಿಯ ತೆಗೆದುಕೊಂಡು ಹೇಳಿದುದನ್ನು ಬರೆಯುತ್ತವೆ. ಹೀಗೆ ಬರೆಯದೆ ಟೈಪ್ ಮಾಡದೆ ವಿಷಯಗಳ ದಾಖಲಿಸಬಹುದಾಗಿದೆ. ವಾಯ್ಸ್ ರೆಕಾರ್ಡ್ ಎಲ್ಲರಿಗೂ ಗೊತ್ತು. ಇದು ವಾಯ್ಸ್ ರೈಟರ್. ಅದ್ಭುತ! ಬರವಣಿಗೆಗೆ ಇನ್ನು ಪೂರ್ಣ ವಿರಾಮ ಗ್ಯಾರಂಟಿ! ಇನ್ನು ಮುಂದೆ ಮಕ್ಕಳು ರೈಟಿಂಗ್ ಮಾಡುವುದಾಗಲಿ, ಶಿಕ್ಷಕ ಗೃಹ ಪಾಠ ಮಾಡಿಲ್ಲ ಎಂದು ಶಿಕ್ಷಿಸುವುದಾಗಲಿ, ಪೋಷಕರು ಮಕ್ಕಳನ್ನು ಹೊಂವರ್ಕ್ ಮಾಡಿಲ್ಲ ಎಂದು ಗೋಳು ಹೊಯ್ದುಕೊಳ್ಳುವುದಾಗಲೀ ಇರುವುದಿಲ್ಲ! ಹೋಂವರ್ಕ್ ಮಾಡುವ ಶ್ರಮ ಮಕ್ಕಳಿಗೂ ಮಾಡಿಸುವ ಶ್ರಮ ಪೋಷಕರಿಗೂ ತಪ್ಪು ತಿದ್ದಿ ಮಾರ್ಗದರ್ಶನ ಮಾಡುವ ಶ್ರಮ ಶಿಕ್ಷಕರಿಗೂ ಇರುವುದಿಲ್ಲ! ಪೋಷಕರು ನಿರಾಳರಾಗುತ್ತಾರೆ ರಬ್ಬರ್, ಪೆನ್ನು, ಇಂಕು, ಪೇಪರ್ ಗಳೊಂದಿಗೆ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಕೆಲಸ ಇಲ್ಲವಾಗಬಹುದು! ಡಿಜಿಟಲ್ ಬೋರ್ಡ್, ಗ್ರೀನ್ ಬೋರ್ಡ್ ಬಂದ ಕಾರಣ ಬ್ಲಾಕ್ ಬೋರ್ಡ್, ಪೀಸ್ ಆಪ್ ಚಾಕ್, ಡಸ್ಟರ್, ಧೂಳು ಮಾಯವಾಗಿ ಎಲ್ಲಾ ಸ್ಮಾರ್ಟ್ ಆಗುತ್ತಿವೆ!

ತಮ್ಮದೇ ಛಾಪನ್ನು ಮೂಡಿಸುತ್ತಿದ್ದ, ವ್ಯಕ್ತಿಗೆ ಆಭರಣದಂತಿದ್ದ, ಮುಕುಟದಂತಿದ್ದ, ಪರಿಣತಿಯಿಂದ ತಮ್ಮ ಗೌರವ ಹೆಚ್ಚಿಸುತ್ತಿದ್ದ, ಕೆಲವರಿಗೆ ವೃತ್ತಿಯೂ ಆಗಿದ್ದ, ಇತರರನ್ನು ಬರಹದಿಂದನೇ ಆಕರ್ಷಿಸುತ್ತಿದ್ದ, ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತಿದ್ದ ಕೈಬರಹ ಮಾಯವಾಗುತ್ತಿದೆ. ಸಹಿ ಸಹ ಆಕರ್ಷಕವಾಗಿದ್ದರೆ ಗಮನಸೆಳೆಯುತ್ತಿತ್ತು. ಬಯೋಮೆಟ್ರಿಕ್ ಪದ್ದತಿಯಿಂದ ಇನ್ನು ಅದಕ್ಕೂ ಮುಕ್ತಿ ಸಿಗುವ ಕಾಲ ದೂರವಿಲ್ಲವೆನಿಸುತ್ತಿದೆ! ಹೀಗೇ ತಾಂತ್ರಿಕ ಪ್ರಗತಿಯಿಂದ ಪರ್ಯಾಯಗಳು ಸೃಷ್ಟಿಯಾಗಿ ಅವಲಂಬನೆಯನ್ನು ಹೆಚ್ಚಿಸಿವೆ. ಕೈಬರಹ ಕೈಗೆ ಬಾಯ್ ಹೇಳುತ್ತಿದೆ. ಅವಲಂಬನೆಯ ಬುತ್ತಿ ಹೆಗಲೇರುತ್ತಿದೆ!

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x