ಟ್ರಿಣ್ ಟ್ರಿಣ್ . . . . . . . ದಾರಿಬಿಡಿ: ಸಂಗೀತ ರವಿರಾಜ್

ಸೈಕಲ್ ತುಳಿಯುತ್ತ, ಚಕ್ರ ತಿರುಗಿದ ಕಾಲಗತಿಯಲ್ಲಿ ಕಾಲಚಕ್ರವು ಸದ್ದಿಲ್ಲದೆ ಉರುಳುತ್ತಾ, ಈಗ ನನಗೆ ನಾನೆ ಹುಬ್ಬೇರುವಂತೆ ಎರಡು ಮಕ್ಕಳ ತಾಯಿಯಾಗಿ, ಮೂರು ಕತ್ತೆ ವಯಸ್ಸಾಗಿ, ಬಳುಕದ ಬಳ್ಳಿಯಾಗಿ ಬಾಳುತ್ತಿದ್ದರು ಸೈಕಲ್ ಕಂಡಾಗಲೊಮ್ಮೆ ತುಳಿಯಬೇಕೆಂಬ ಮನದ ಹುಚ್ಚು ವಾಂಛೆ ಈ ಕ್ಷಣಕ್ಕು ಹೋಗಿಲ್ಲ ಎಂದರೆ ಯಾರು ನಂಬಲಾರರು. ಬಾಲ್ಯದ ಬಾಗಿಲಲ್ಲಿಯೆ ಕಲಿತ ಸೈಕಲ್ ಸವಾರಿ, ಈಗಲು ನನ್ನ ಕಾಲತುದಿಯಲ್ಲಿ ಅದೇ ಆಸಕ್ತಿಯಿಂದ ಕುಳಿತಿದೆ ಅಂದರೆ ನನಗೆ ನಾನೆ ಪರಮಾಶ್ಚರ್ಯಗೊಳ್ಳುತ್ತೇನೆ. ಮನೆಗೆ ಯಾರಾದರೂ ಸೈಕಲಲ್ಲಿ ಬಂದರೆ, ಅಥವ ನಾವು ಹೋದ ಮನೆಯಲೆಲ್ಲೋ ಸೈಕಲ್ ಇದ್ದು ಬಿಟ್ಟರೆ ಮನದಾಸೆಯನ್ನು ಹತ್ತಿಕ್ಕದೇ ಮನಸಾರೆ ನಾನೊಂದು ರೌಂಡು ಹೊಡೆದು ಪುಳಕಿತಗೊಳ್ಳುತ್ತೇನೆ ಎಂದರೆ ನೀವು ನಂಬಲೇ ಬೇಕು. ಹಾಗೆಂದು ಪ್ರತಿದಿನ ಸೈಕಲ್ ಕಂಡರೆ ಹಾಗೆ ಮಾಡುತ್ತೇನೆ ಅಂದುಕೊಳ್ಳಬೇಡಿ . ಹಾಗಂತ ನನಗೆ ಪ್ರತಿದಿನ ಸೈಕಲ್ ಸುಲಭದಲ್ಲಿ ಕಾಣಲು ಸಿಗುವುದು ಇಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಅಮವಾಸ್ಯೆಗೋ ಹುಣ್ಣಿಮೆಗೋ ಸೈಕಲ್ ದರ್ಶನ ಆದಾಗ ಹೀಗೆ ತುಳಿಯುವ ತುಡಿತ. ಈ ನನ್ನ ಸೈಕಲ್ ಸ್ಮರಣೆ ಧುತ್ತೆಂದು ಮೆರವಣಿಗೆಯಂತೆ ಸಾಲುಗಟ್ಟಿ ಬರಲು ಕಾರಣ ಈಗ ಮಗಳು ಸೈಕಲ್ ಹೊಡೆಯಲು ಕಲಿಯುತ್ತಿದ್ದಾಳೆ. ಅದರಲ್ಲಿಯು ಕುಳಿತುಕೊಳ್ಳಲು ಹವಣಿಸಿದರೆ ಮಗಳು ಬಿಡಲೊಲ್ಲಳು ನೋಡಿ! ಅವರ ಸೈಕಲ್ ಗಳಿಗೆ ಈಗ ಅದೇನೋ ‘ ಸಪೋರ್ಟ್ ವ್ಹೀಲ್ ‘ ಕುಳ್ಳಿರಿಸಿದ್ದಾರೆ. ಹಾಗಾಗಿ ಕಲಿಸುವ ಪ್ರಮೇಯ ನಮಗ್ಯಾರಿಗು ಇಲ್ಲ. ಅದನ್ನು ‌ಬಳಸಿಕೊಂಡು ನಿರಾಯಾಸವಾಗಿ ಎರಡು ವರ್ಷದಿಂದ ತುಳಿಯುತ್ತಿದ್ದರು ಆಕೆಗಿನ್ನು ಸಂಪೂರ್ಣ ಸೈಕಲ್ ಗೊತ್ತಿಲ್ಲ! ಇದು ಈಗಿನ ಮಕ್ಕಳ ವಿಪರ್ಯಾಸ. ನಮ್ಮ ಕಾಲದ ಸೈಕಲ್ ಗಳಿಗೆ ಸಪೋರ್ಟ್ ವ್ಹೀಲ್ ಇರಲಿಲ್ಲ ಹಾಗಾಗಿ ಸಪೋರ್ಟ್ ಕೈಗಳ ಅವಶ್ಯಕತೆ ತುಂಬಾ ಇತ್ತು. ಸೈಕಲ್ ತುಳಿಯಲು ಕಲಿಸಲು ಒಂದು ಜನ ಬೇಕೆ ಬೇಕು. ಕಲಿಸುವವರಿಗು ನಮಗು ಅದು ಭಾರಿ ಫಜೀತಿಯ ಕೆಲಸ. ಇಬ್ಬರಿಗು ವಿರಾಮದ ಸಮಯ ಒಂದೇ ಆಗಬೇಕು. ಕಲಿಸುವವರು ಹಿಂದಿನಿಂದ ಹಿಡಿದುಕೊಂಡು, ದೂಡಿಕೊಂಡು, ಹಾಂಟಿಕೊಂಡು, ವಾಲಿದಾಗ ನೇರ ಮಾಡಿಕೊಂಡು, ಬಿದ್ದರೆ ಎತ್ತಿಕೊಂಡು, ಏದುಸಿರು ಬಿಡುತ್ತಾ ಬರುವ ಪಾಡು ಪಾಪ ಅವರಿಗೆ ಗೊತ್ತು. ತಮ್ಮ ಮಗನೋ, ಮಗಳು, ತಂಗಿ, ತಮ್ಮನೋ ಕಲಿಯಲಿ ಎಂಬ ಕನಸು, ಆಸೆ ಅವರೊಳಗು ಇರುತ್ತದೆ. ಆ ಆಸೆಯ ಬಲದಿಂದ ಮತ್ತು ನಿಷ್ಕಲ್ಮಶ ಸಂಬಂಧದ ಪ್ರೀತಿಯೆದುರು ಕಲಿಸುವುದು ಕಷ್ಟವಲ್ಲ. ನಾವು ಕಲಿಯುವವರು ಅವರಿಗೆ ಕಷ್ಟವಾಗಬಾರದೆಂದು ಬೇಗನೆ ಕಲಿಯುತ್ತಿದ್ದೆವು.

ನಾನು ನಾಲ್ಕನೆ ಇಯತ್ತೆಯಲ್ಲಿದ್ದಾಗ ನಮ್ಮಲ್ಲಿಗೆ ತಂದೆ ಸೈಕಲ್ ಕೊಂಡುತಂದರು. ಸೈಕಲ್ ಹಳತಾಗಿದ್ದರು ನಮ್ಮ ಮನಸ್ಸಿಗದು ಹೊಚ್ಚ ಹೊಸದು. ನಾನೆ ಹಿರಿಯವಳಾದ ಕಾರಣ ಮೊದಲು ಕಲಿಯುವ ಸರದಿಯು ನನ್ನದೆ. ಆ ಆನಂದ ತುದಿಲವಾದ ಕ್ಷಣ ಈಗಲು ಬೆಚ್ಚನೆಯ ನೆನಪು. ನಮ್ಮದು ಶಾಲೆಯ ಪಕ್ಕದ ವಸತಿಗೃಹವಾದ್ದರಿಂದ ದೊಡ್ಡ ಮೈದಾನ ವರದಾನವಾಗಿತ್ತು. ಹಾಗಾಗಿ ಬೇಗನೆ ಕಲಿಯಲು ಅನುಕೂಲವಾಗಿತ್ತು. ದೀರ್ಘ ರಜದಲ್ಲಿ ತಂದೆ ಅಭ್ಯಾಸ ಮಾಡಿಸಲು ಪ್ರಾರಂಭಿಸಿದರು. ತಂದೆಯೊಂದಿಗೆ ಪಕ್ಕದ ಮನೆಯ ಅಣ್ಣನು ಸೈಕಲ್ ಕಲಿಸಲು ಸಹಾಯ ಮಾಡಿದ ನೆನಪಿದೆ. ಒಮ್ಮೆ ಕಲಿತ ಭರದಲ್ಲಿ ಖುಷಿಯಾಗಿ ನಾನೊಬ್ಬಳೇ ಮೆಟ್ಟುತ್ತಿದ್ದಾಗ, ಮೈದಾನದ ಇಳಿಜಾರಿನಲ್ಲಿ ಸೀದಾ ಕೆಳಗೆ ಹೋಗಿಬಿಟ್ಟೆ. ಹೋಗುತ್ತಾ ಅಲ್ಲೇ ಇದ್ದ ತೆಂಗಿನ ಮರವನ್ನು ತಬ್ಬಿ ಹಿಡಿದ ರಭಸ ದಲ್ಲಿ ನನ್ನ ಕೈ ಇರುವಷ್ಟು ಉದ್ದ ಮೇಲಿಂದ ಕೆಳಗಿನವರೆಗೆ ಚರ್ಮ ತರಚಿ ತುಂಬಾ ಗಾಯವಾಗಿತ್ತು‌. ಕಲಿತ ಪ್ರಾರಂಭದಲ್ಲಿ ಇಂತ‌ ಬಿದ್ದವುಗಳಿಗೆ ಲೆಕ್ಕವು ಇರಲಿಲ್ಲವೆನ್ನಿ. ನಾನು ಕೊಡವಿ ಏಳುವುದರೊಟ್ಟಿಗೆ ಸೈಕಲ್ ಗೇನಾಗಿದೆ ಎಂಬುದನ್ನು ಸಹ ಕೂಡಲೇ ವೀಕ್ಷಿಸುತ್ತಿದ್ದೆ.

ಬೆಳಗೆದ್ದ ತಕ್ಷಣ ಸೈಕಲ್, ಮದ್ಯಾಹ್ನ ಸೈಕಲ್, ಸಂಜೆ ಸೈಕಲ್ ಹೀಗೆ ಪುರುಸೊತ್ತು ಆದಾಗಲೆಲ್ಲ ತುಳಿಯುವುದು ಚಾಳಿಯಾಗಿಬಿಟ್ಟಿತ್ತು. ಒಂದೇ ಸ್ಥಳದಲ್ಲಿ ಎಷ್ಟು ಅಂತ ಸುತ್ತು ಹಾಕಬಹುದು ನೀವೆ ಹೇಳಿ ?ಹಾಗಾಗಿ ರಸ್ತೆಯಲ್ಲಿ ತುಳಿಯಬೇಕೆಂದು ಅದಮ್ಯ ಆಸೆಯಾಗುತ್ತಿತ್ತು. ಆದರೆ ಅದಕ್ಕೆ ಮಾತ್ರ ಏನೆ ಆದರು ಒಪ್ಪಿಗೆ ಸಿಗಲೇ ಇಲ್ಲ. ಹಾಗು ಹೀಗು ಕೆಲವು ವರ್ಷ ಕಳೆದು ಸ್ವಲ್ಪ ದೊಡ್ಡವರಾಗಿ ಅಭ್ಯಾಸ ಕರಗತವಾದ ಮೇಲೆ ಮೆಲ್ಲಗೆ ರಸ್ತೆಗೆ ಹೋಗುವ ಪರಿಪಾಠ ಆರಂಭವಾಯಿತು. ನಮ್ಮ ಪುಣ್ಯಕ್ಕೆ ಸೈಕಲ್ ಎಂಬ ಗಾಡಿಗೆ ಲೈಸನ್ಸ್ ಇಲ್ಲದಿರುವುದು ವರವಾಯಿತು. ಬಹುಶಃ ಮೊದಲು ಕಲಿಯುವ ವಾಹನ, ಅತೀ ಸುಲಭ, ಅತಿ ಸಣ್ಣ ವಾಹನ, ಇಂಧನವಿಲ್ಲ, ಚಿಕ್ಕ ವಯಸ್ಸಿನಲ್ಲಿ ಕಲಿಯುವುದು ಮತ್ತು ವಾಹನ ಚಾಲನೆಯ ತಳಹದಿ ಎಂದರೆ ಸೈಕಲ್ ಸವಾರಿ ಈ ಎಲ್ಲ ಕಾರಣಗಳಿಂದ ಇದಕ್ಕೆ ಪರವಾನಿಗೆ ಇಲ್ಲದಾಗಿರಬಹುದೆಂದು ನನ್ನ ಊಹೆ. ಮನೆಯಿಂದ ಮಾತ್ರ ಪರವಾನಿಗೆ ಪಡೆದು ಹಾಗೊಮ್ಮೆ ರಸ್ತೆಗಿಳಿದು ಹೋದಾಗ ಪಕ್ಕದ ಮನೆಯ ಅಣ್ಣನನ್ನು ಜೊತೆಗೆ ಕಳಿಸಿದರು . ಮೇಲಿಂದ ಮೇಲೆ ವಾಹನಗಳು ಬರುತ್ತಿದ್ದವು. ಎದುರು ಬದುರಾಗಿ ವಾಹನಗಳು ಸೀದ ಹೋಗುತ್ತಿದ್ದವು. ಯಾಕೆಂದರೆ ಈ ಪುಟ್ಟ ಸೈಕಲನ್ನು ವಾಹನ ಎಂದು ರಸ್ತೆಯಲ್ಲಿ ಯಾರು ಪರಿಗಣಿಸುತ್ತಿರಲಿಲ್ಲ! ಸೈಕಲ್ ಇದೆ ಎಂದು ನಿಧಾನ ಮಾಡುವ ಜಾಯಮಾನವು ಯಾರಲ್ಲಿ ಇರಲಿಲ್ಲ. ಹಾಗೊಮ್ಮೆ ನಾನು ಬರುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ವಾಹನವೊಂದು ನನ್ನ ತೀರ ಸನಿಹದಲ್ಲಿ ಬಹಳ ರಭಸವಾಗಿ ಹೊರಟು ಹೋಯಿತು. ಆ ವೇಗಕ್ಕೆ ಹೆದರಿಯೆ ನಾನು ಇನ್ನೂ ಬದಿಗೆ ಹೋಗಿ ಗುಂಡಿಯೊಂದಕ್ಕೆ ಬಿದ್ದು ಬಿಟ್ಟೆ. ನೋವು ಮತ್ತು ಭಯದಿಂದಲು ಹೆಚ್ಚಾಗಿ ಮನೆಯಲ್ಲಿ ಸಿಗುವ ಬೈಯ್ಗಳದ ಚಿಂತೆಯೆ ಹೆಚ್ಚಾಗಿತ್ತು. ಹೇಳದೆ ಇರಲು ಸಾಧ್ಯವಿಲ್ಲ. ಏಕೆಂದರೆ ನನಗೆ ಮತ್ತು ಸೈಕಲ್ ಇಬ್ಬರಿಗು ಪೆಟ್ಟು ಬಲವಾಗಿಯೆ ಆಗಿತ್ತು. ಎಷ್ಟು ಸಲ ಸೈಕಲ್ ಹಾಕಿಕೊಂಡು ಬಿದ್ದರು ಫೀನಿಕ್ಸ್ ನಂತೆ ನನ್ನ ಸೈಕಲ್ ಮತ್ತೆ ಎದ್ದು ನಿಲ್ಲುತ್ತಿತ್ತು. ಆ ದಿನವಂತು ಅಳುಮೋರೆಯಿಂದ ನೆತ್ತರು ಒಸರಿಕೊಂಡು ಮನೆಗೆ ಹೋದರು ನಂಗೆ ಸಿಗುವ ಗುದ್ದು ತಪ್ಪಿಸಲು ಯಾರಿಂದ ಆಗಲಿಲ್ಲ. ಅಲ್ಲಿಂದ ಮೇಲೆ ರಸ್ತೆಯ ಸಹವಾಸ ಇಲ್ಲವೆನ್ನಿ . ಆದರೆ ಮನೆಯಂಗಳದ ಸುತ್ತಮುತ್ತ, ತಗ್ಗು, ಎತ್ತರಗಳಲ್ಲಿ ಪುರುಸೊತ್ತು ಸಿಕ್ಕಿದ ಹಾಗೆಲ್ಲ ತುಳಿಯುತ್ತಲೇ ಇರುತ್ತಿದ್ದೆ. ಸುಖಾಸುಮ್ಮನೆ ತುಳಿಯತ್ತಲೇ ಇರುವುದು ನನ್ನ ಮಾಮೂಲು ಖಯಾಲಿಯಾಗಿಬಿಟ್ಟಿತ್ತು. ಚಿಕ್ಕ ಪುಟ್ಟ ರಿಪೇರ್ ಗಳನ್ನು ನಾವೆ ಮಾಡಿಕೊಳ್ಳುತ್ತಿದ್ದೆವು. ಸೈಕಲ್ ಸರಪಳಿ ತಪ್ಪಿದ್ದರೆ ನಾನೆ ಸರಿಪಡಿಸಿಕೊಳ್ಳುತ್ತಿದ್ದೆ. ಆದರೆ ಅದರ ಕಪ್ಪಗಿನ ಗ್ರೀಸ್ ಅಂಟು ಎಲ್ಲೆಂದರಲ್ಲಿ ಅಂಟಿ  ಪಜೀತಿಯಾಗುತ್ತಿತ್ತು. ಕೆಲವೊಮ್ಮೆ ಬಿದ್ದಾಗ ಹ್ಯಾಂಡಲ್ ಓರೆ ಆಗಿಬಿಡುತ್ತಿತ್ತು. ಅದನ್ನು ಸರಿಪಡಿಸುವ ಕೌಶಲ್ಯವು ಒಲಿದಿತ್ತು. ನನ್ನ ತಮ್ಮನಂತು ಒಮ್ಮೆ ದನವೊಂದಕ್ಕೆ ಗುದ್ದಿಬಿಟ್ಟಿದ್ದ. ತಮ್ಮ, ದನ, ಸೈಕಲ್ ಮೂರು ಕಡೆ ಹೋಗಿ ಬಿದ್ದವು. ದನ ಆ ಕೂಡಲೆ ಎದ್ದು ಬೆಚ್ಚಿ ಬಿದ್ದು ಬಾಲ ಎತ್ತಿ ಓಡಲು ಪ್ರಾರಂಭಿಸಿದೊಂದೆ ಗೊತ್ತು. ಬಹುಶಃ ಅದು ಅದರ ಹಟ್ಟಿಗೆ ಹೋಗಿಯೆ ನಿಂತಿರಬೇಕು! ಮತ್ತೆ ತಮ್ಮನೋ ನನಗೆ ಸೈಕಲ್ ಬೇಡವೆಂದು ನಡೆದೆ ಹೊರಟ. ನಾನೆ ಮತ್ತೆ ಅವನನ್ನು ಹಿಂದೆ ಕೂರಿಸಿಕೊಂಡು ಮನೆ ಕಡೆ ಹೊರಟೆ.

ಮತ್ತೆ ಮನೆ ಬದಲಾಯಿಸಿ ಸ್ವಂತ ಊರಿಗೆ ಬಂದಾಗಲೂ ಅದೇ ಸೈಕಲ್ ಖಾಯಂ. ಅಲ್ಲಿ ರಸ್ತೆ ಬದಿಯ ಮನೆಯಾದರಿಂದ ರಸ್ತೆಗಿಳಿಯುವುದು ನಮಗೆ ಅನಿವಾರ್ಯವಾಗಿತ್ತು. ಸುತ್ತಮುತ್ತ ಇರುವ ಬಂಧುಗಳ ಮನೆಗಳಿಗೆ ಸೈಕಲ್ ನಲ್ಲಿ ಸುತ್ತುವುದು ಆ ಎಳವೆಯಲ್ಲಿ ಅದಮ್ಯ ಖುಷಿಯ ಸಂಗತಿ . ಇತರ ಮಕ್ಕಳು ಸೇರಿಕೊಂಡು‌ ಜೊತೆಜೊತೆಯಲ್ಲಿ ಸೈಕಲ್ ನಲ್ಲಿ ಸಾಗುತ್ತಿದ್ದೆವು. ರಸ್ತೆಗಿಳಿದ ಪ್ರಥಮ ಪ್ರಯತ್ನದಲ್ಲಿ ದಂತ ಭಗ್ನವಾದ್ದರಿಂದ ನಾನಂತು ಬಲು ಜಾಗ್ರತೆಯಿಂದ ಚಲಾಯಿಸುತ್ತಿದ್ದೆ. ಹುಡುಗಿಯರು ಸೈಕಲ್ ನಲ್ಲಿ ತೆರಳುತ್ತಿದ್ದಾರೆ ಎಂದು ವಿಶೇಷವಾಗಿ ಗಮನಿಸುವವರು ಇದ್ದಾಗ ನಮ್ಮಲ್ಲು ಖುಷಿಯ ಅಲೆಗಳು ಏಳುತ್ತಿದ್ದದು ನಿಜ. ಹೈಸ್ಕೂಲ್ ವರೆಗು ಅತಿಯಾಗಿ ಇದ್ದ ಸೈಕಲ್ ತುಳಿಯುವ ವಾಂಛೆ ಮತ್ತು ಚಾಳಿ ಮತ್ತೆ ಕೊಂಚ ಮೆತ್ತಗಾಗಿತ್ತು. ಹೈಸ್ಕೂಲ್ ದಿನಗಳಲ್ಲಿ ಅದರಲ್ಲಿಯೆ ಶಾಲೆಗೆ ಹೋಗಬೇಕೆಂದು ಬಲವಾಗಿ ಆಸೆಯಾಗುತ್ತಿತ್ತು. ಆದರೆ ಬೇರೆ ವಾಹನಗಳು ಇರುವಾಗ ನಮಗದಕ್ಕೆ ಅವಕಾಶವೆ ಇರಲಿಲ್ಲ. ಒಮ್ಮೆ ಭಾರತ್ ಬಂದ್ ಇದ್ದಾಗ  ಬೇರೆ ವಾಹನ ನಿಷೇಧವಿದ್ದಾಗ ಐದು ಕಿಮೀ ದೂರದ ಶಾಲೆಗೆ ನಾವು ನಡೆದೆ ಸಾಗಿದ್ದೆವು. ಆದರೆ ಶಾಲೆಗೆ ಇತರೆ ಕೆಲವು ಮಕ್ಕಳು ಸೈಕಲ್ ತಂದಿದ್ದು ನೋಡಿ ನಾನು ತರದೆ ಅವಕಾಶ ತಪ್ಪಿಸಿಕೊಂಡೆ ಎಂದು ಭಾರಿ ತಲೆಬಿಸಿಯಾಗಿತ್ತು. ಮತ್ತೆ ಬಂದ್ ಇರಲಿ ಎಂದು ಮನಸ್ಸಿನಲ್ಲಿಯೆ ಬೇಡಿಕೊಳ್ಳುತ್ತಿದ್ದೆ‌. ಅಂತು ಮಗದೊಂದು ದಿನ ಬಂದ್ ಇದ್ದು ಇತರ ವಾಹನಗಳು ಇಲ್ಲದೆ ಸೈಕಲ್ ನಲ್ಲಿಯೆ ಶಾಲೆಗೆ ಹೋಗಿದ್ದೆ.

ನಾನು ಸೈಕಲ್ ತುಳಿದು ತುಳಿದು ಅದೆಷ್ಟು ಪರಿಣತಿ ಹೊಂದಿದ್ದೆ ಅಂದರೆ ಎರಡು ಕೈ ಬಿಟ್ಟು ಸಲೀಸಾಗಿ ಹೋಗುವಷ್ಟು ಕಲಿತಿದ್ದೆ. ಮುಂದೊಂದು ದಿನ ಸ್ಕೂಟರ್ ತೆಗೆದಾಗಲೂ ಅದನ್ನು ಕಲಿಯುವ ಪ್ರಮೇಯವೆ ಬರಲಿಲ್ಲ‌ . ಎಕ್ಸಲೇಟರ್ ಸ್ವಲ್ಪ ಏರುಪೇರಾಗಿದ್ದು ಬಿಟ್ಟರೆ ಒಂದೇ ಸಲಕ್ಕೆ ಒಬ್ಬಳೆ ಹೋಗಿಬಿಟ್ಟಿದ್ದೆ. ಹೀಗಿತ್ತು ನನ್ನ ಮತ್ತು ಸೈಕಲ್ ಕರಾಮತ್ತು. ಅದ್ಯಾಕೆ ಈ ಪರಿ ಸೈಕಲ್ ಮೆಟ್ಟಿಕೊಂಡೆ ಇರ್ತಿಯ ಹಲವರು ಕೇಳಿದವರಿದ್ದಾರೆ. ಮತ್ತೊಮ್ಮೆ ನಾವು ಕಲಿತ ಶಾಲೆಯಲ್ಲಿ ನಿಧಾನ ಸೈಕಲ್ ಸವಾರಿ ಸ್ಪರ್ದೆ ಇತ್ತು. ಅದರಲ್ಲು ನನಗೆ ಪ್ರಥಮ ಬಹುಮಾನ ಬಂದಿತ್ತು. ಈಗಿನ ಹೈಸ್ಕೂಲ್ ಮಕ್ಕಳಿಗೆ ಶಾಲೆಯಲ್ಲಿಯೆ ಸೈಕಲ್ ದಕ್ಕುವುದು ಅವರದೃಷ್ಟ ಎಂದರು ಸರಿ. ನಮ್ಮೂರಿನಂತಹ ತೀರಾ ಹಳ್ಳಿಗಾಡಿನ ಪ್ರದೇಶದಲ್ಲಿ ಇದು ತುಂಬಾ ಉಪಯೋಗಕ್ಕೆ ಬಂದಿದೆ. ನಮ್ಮ ಮನೆಯ ಸನಿಹದಲ್ಲಿಯೆ ಇರುವ ಹೈಸ್ಕೂಲ್ ಗೆ ಹುಡುಗಿಯರು ಹಳ್ಳಿ ರಸ್ತೆಗಳಲ್ಲಿ  ಜುಮ್ ಅಂತ ಸೈಕಲ್ ತುಳಿಯುತ್ತ ಹೋಗುವಾಗ ಆಸೆಕಂಗಳಿಂದ ನೋಡುತ್ತೇನೆ. ಅವರನ್ನು ನೋಡುವಾಗ ಮನಸ್ಸಿಗೆ ತುಂಬಾ ಖುಷಿಯೆನಿಸುತ್ತದೆ. ಆ ಹುಡುಗಿಯರು ಹೈಸ್ಕೂಲ್ ದಾಟಿದ ಹಾಗೆ ಇನ್ನಿತರ ಎರಡು ಚಕ್ರದ ಗಾಡಿಗಳನ್ನು ಸಲೀಸಾಗಿ ಬಳಸುತ್ತಾರೆ. ಸೈಕಲ್ ತುಳಿಯಲು ಗೊತ್ತಿಲ್ಲದ ನನ್ನ ಗೆಳತಿ ಈಗ ಸ್ಕೂಟರ್ ಕಲಿಯಲು ಪಡುವ ಹರಸಾಹಸ ಅಷ್ಟಿಷ್ಟಲ್ಲ. ಅದೆಷ್ಟೋ ತಿಂಗಳುಗಳಿಂದ ಹರಸಾಹಸ ಪಟ್ಟರು ಸ್ವತಂತ್ರವಾಗಿ ತೆಗೆದುಕೊಂಡು ಹೋಗಲು ಅವಳಿಗಿನ್ನು  ತಿಳಿದಿಲ್ಲ. ಮೊದಲಿಗೆ ಸೈಕಲ್ ಕಲಿ, ಮತ್ತೇನು ಸ್ಕೂಟರ್ ಏರಲು ಕಷ್ಟವಿಲ್ಲ ಎಂಬುದಾಗಿ ಉಚಿತ ಸಲಹೆ ನೀಡಿದ್ದೆ. ಈ ಪ್ರಾಯದಲ್ಲಿ ಸೈಕಲ್ ಕಲಿಯಲು ಹೊರಟರೆ ನಗೆಪಾಟಲಿಗೆ ಈಡಾಗಿಬಿಟ್ಟರೆ ಎಂಬ ಭಯ, ನಾಚಿಕೆ ಅವಳಿಗಿದೆ . ಹಾಗಾಗಿ ಸೈಕಲ್ ಕಲಿಯಲು ಹಿಂದೇಟು ಹಾಕುತ್ತಿದ್ದಾಳೆ. ಈಗಿನ ದಿನಗಳಲ್ಲಿ ನಾನಾ ನಮೂನೆಯ, ನಾನಾ ವಿನ್ಯಾಸದ ಸೈಕಲ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮೂರು ವರ್ಷದ ಮಗುವಿನಿಂದ ಪ್ರಾರಂಭವಾಗಿ ಆ ಮಗುವಿನ ತಾತನಿಗು ಬೇಕಾದಂತಹ ನಮೂನೆಯ ಸೈಕಲ್ ಗಳು ಈಗ ಲಭ್ಯವಿದೆ.

ಪರಿಸರ ಪರ ವಾಹನವಾದ ಸೈಕಲ್ ನೊಂದಿಗೆ ಏನೇನೋ ಸಾಹಸ ಕ್ರೀಡೆಗಳು, ಸರ್ಕಸ್, ಪ್ರವಾಸ, ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು, ಬಂದ್ ಆಚರಣೆ, ಚಳುವಳಿ, ಆಂದೋಲನ ಹೀಗೆ ಇನ್ನಿತರ ಹಲವಾರು ವಿಚಾರಗಳು ಸಮಾಜದೊಳಗೆ ನಡೆಯುತ್ತಲೇ ಇರುತ್ತದೆ. ಇದರಿಂದಲೇ ಸೈಕಲ್ ನ ವಿಶಿಷ್ಟತೆ ನಮಗರಿವಾಗುತ್ತದೆ. ಈ ಪರಿಸರ ಸ್ನೇಹಿಯನ್ನು ದಟ್ಟ ಪಟ್ಟಣಗಳಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಹೆಚ್ಚಾಗಿ ಬಳಸುತ್ತಾರೆ. ಅಂತೆಯೆ ಹಳ್ಳಿಗಳಲ್ಲು ಅವಶ್ಯಕತೆಗೆ ಅನುಸಾರವಾಗಿ ಬಳಸುವವರ ಸಂಖ್ಯೆ ಹೆಚ್ಚು . ಅಂಚೆಯಣ್ಣನನ್ನು ತೋರಿಸುವಾಗ ಸೈಕಲ್ ಇರಲೇಬೇಕು ಎಂಬಷ್ಟು ಆಪ್ತತೆ, ಐಸ್ ಕ್ಯಾಂಡಿ ಡಬ್ಬ ಸೈಕಲ್ ಮೇಲೆ ಕೂತರೆನೆ ಚಂದ, ಹಳೆಯ ಚಲನ ಚಿತ್ರಗಳಲ್ಲಿ ಪ್ರೇಮಿಗಳಿಬ್ಬರು ಇದೇ ಸೈಕಲ್ ನಲ್ಲಿ ಹೋಗುತ್ತಾರೆ. ನಿಧಾನ ಹೋಗುವಿಕೆ ಮತ್ತು ತುಳಿಯುವ ಕಷ್ಟಕ್ಕೆ ಸೈಕಲ್ ನಿಂದ ಎಲ್ಲರು ಕೊಂಚ ದೂರ ಹೋದರು ಹೊರತು ಸೈಕಲ್ ನ ಕಿಮ್ಮತ್ತು ಒಂದಿನಿತು ಕಡಿಮೆಯಾಗಲಿಲ್ಲ ಎಂಬುದಂತು ನಿಜ. ಅದೆಷ್ಟೋ ವಸ್ತುಗಳು ಆವಿಷ್ಕಾರದ ನಂತರ ಕಾಲಾಂತರದಲ್ಲಿ ಹಂತ ಹಂತವಾಗಿ ಬದಲಾಗುತ್ತ ಅದರ ಸಂಪೂರ್ಣ ಸ್ವರೂಪವೆ ಬದಲಾಗಿ ನಮ್ಮ ಕೈಯಲ್ಲಿ  ಕುಳಿತಿದೆ. ಆದರೆ ಸೈಕಲ್ ಹಾಗಲ್ಲ. ಅಂದು, ಇಂದು, ಎಂದೆದಿಗು ಇದು ಮೂಲ ಸ್ವರೂಪವನ್ನು ಬಿಟ್ಟುಕೊಡುವುದಿಲ್ಲ ಮತ್ತು ಎಂದೆದಿಗು ಸೈಕಲ್ ಎಂಬ ಸಂಚಾರಿ ಸಾಧನ ಇಲ್ಲವಾಗುವುದು ಅಸಾಧ್ಯ. ಸೈಕಲ್ ಪ್ರಿಯರ ಸಂಖ್ಯೆ ಹೆಚ್ಚೆಚ್ಚು ಆದಷ್ಟು ಸರ್ವ ರೀತಿಯಲ್ಲಿ ಪ್ರಕೃತಿಗು ಒಳಿತು. ಸೈಕಲ್ ತುಳಿಯುವುದು ಆರೋಗ್ಯದ ವಿಚಾರದಲ್ಲು ಉತ್ತಮ. ಬೇಗನೆ ಉದ್ದ ಬೆಳೆಯುತ್ತಾರೆ ಎಂಬುದು ಕೆಲವರ ಅಂಬೋಣ. ಯಾರನ್ನು ಕೇಳಿದರು ನಾನು ಸೈಕಲ್ ಮೆಟ್ಟಿಯೆ ಉದ್ದ ಆದದ್ದು ಎನ್ನುತ್ತಾರೆ. ನಾನು  ಹಾಗೆಯೆ ಸೈಕಲ್ ತುಳಿದೇ ಉದ್ದ ಆದದ್ದು. ಸೈಕಲ್ ಸಂಗಾತಿಯ ಸಂಗತಿಗಳ ಭಾವಲಹರಿ ಹಗುರವಾದ ಈ ಹೊತ್ತು  ಇನ್ನುಳಿದ ಸ್ಮರಣೆಗಳು ಮನಸ್ಸೊಳಗೆ ಟ್ರಿಣ್ ಟ್ರಿಣ್ ಎನ್ನುತ್ತಿವೆ.

-ಸಂಗೀತ ರವಿರಾಜ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x