ಚಿಮಣಿ ಬುಡ್ಡಿ: ಚೈತ್ರಾ ವಿ.ಮಾಲವಿ

ಕೇರಿಯ ಬೀದಿ ದೀಪದ ಮಂದ ಬೆಳಕಲ್ಲಿ ತನ್ನ ಗುಡಿಸ್ಲು ಮುಂದ ಓದ್ತಾ ಕುಂತಿದ್ಲು ಪಾರಿ.
“ಲೇ.. ಪಾರಿ, ಚಿಮಣಿ ಬುಡ್ಡಿ ಎಲ್ಲಿಟ್ಟಿ? ಕಾಣವಲ್ತು” ಒದರಿದ್ಲು ಅವ್ವ ಹುಲಿಗೆವ್ವ.
“ಯವ್ವಾ, ಅಲ್ಲೇ ಇಟ್ಟಿನಿ ನೋಡ್ಬೇ” ಕುಂತಲ್ಲೇ ಉಸರಿದಳು.
ಕತ್ಲು ಕವಿದ ಗುಡಿಸ್ಲು ಒಳಗ ತಡಕಾಡ್ತಿದ್ದ ಹುಲಿಗೆವ್ವಗ ಅಡಿಗೆ ಮನಿ ಮೂಲ್ಯಾಗ ತಣ್ಣಗ ಕುಂತಿದ್ದ ಚಿಮಣಿ ಬುಡ್ಡಿ ಕರ್ರಗೆ ಕಾಣ್ತು. ಏನೇನೋ ಗುನುಗುತ್ತಾ ಚಿಮಣಿ ಬುಡ್ಡಿಯನ್ನು ಕೈಗೆ ತಕ್ಕಂಡು, ಗುಡಿಸ್ಲು ನಡು ಕಂಬಕ ತಂದಿಟ್ಲು. ಬೆಂಕಿಪಟ್ಣ ಕಾಣ್ದೇ ಪಾರಿ ಮ್ಯಾಲಾ ಒದ್ರಾಡಿ, ಕೊನೆಗಾ ಒಲಿ ಮ್ಯಾಲಾ ಇಟ್ಟಿದ್ದು ನೆಂಪಾಗಿ ಹೋಗಿ ತಂದು, ಚಿಮಣಿ ಬುಡ್ಡಿಗೆ ಬೆಂಕಿಪಟ್ಣದಿಂದ ಕಡ್ಡಿ ಗೀರಿ ದೀಪ ಹಚ್ಚಿದ್ಲು. ಕತ್ಲು ಮಾಯಾಗಿ ಮಂದ ಬೆಳ್ಕು ಕಾಣ್ತು.
“ಲೇ ಪಾರಿ, ಬಾ ಒಳಗ ದೀಪ ಹಚ್ಚೀನಿ”
“ಬಂದ್ನೇ ಯವ್ವಾ” ಅನ್ತಾ ತನ್ನ ಪಾಟಿ ಚೀಲ ಹೊತ್ಕೊಂಡು ಒಳಗ ಬಂದು ಕುಂತ್ಲು ಪಾರಿ.
“ಎಲ್ಲಿ ಹೋಗ್ಯಾನ ನಿಮ್ಮಪ್ಪ? ಮಯ್ಯಾಗರ ಒಂದೀಟು ಖಬರ ಐತಾ ಅವ್ನಿಗಾ” ಅನ್ತಾ ಹುಲಿಗೆವ್ವ ತನ್ನ ಗಂಡನ ಬೈಯ್ಯಕ್ಕತ್ತಿದ್ಲು.
ಪಾರಿ ಮಾತಾಡ್ದೇ ಸುಮ್ಮ ಕುಂತಿದ್ಲು.
ಗಂಡನ ಬೈತಾ, ಒಲಿ ಮುಂದ ಕುಂತು ಕಟ್ಗಿಗಳ್ನ ಒಲಿಯೊಳಗ ತುರುಕ್ತಾ.. “ಮೂದೇವಿ, ಅವ್ನಿಗಾ ಕುಡಿಯಾಕ ಇದ್ರ ಸಾಕು. ಹೆಂಡ್ರು ಮಕ್ಳು ನೆಂಪು ಎಲ್ಲಿಂದ ಬರ‍್ತಾತಿ” ಅನ್ತಿದ್ದಾಗ, “ಯವ್ವಾ, ಉಣ್ಣಕ ಏನ್ ಮಾಡಿಬೇ? ಹೊಟ್ಟಿ ಚುರ್ ಅಂತೈತಿ” ಅನ್ತಾ ಒಳಗ ಬಂದ ಬಾಲ.
“ಬಾ, ನಿಂಗ ಎಷ್ಟದಪ ಹೇಳ್ಬೇಕು? ಮನಿ ಮ್ಯಾಲ ಒಂದೀಟರ ಖಬರ್ ಐತಾ ನಿಂಗಾ? ನಿಮ್ಮಪ್ಪ ಕುಡ್ದು ಎಲ್ಲಿ ಬಿದ್ಕೊಂಡಾನೋ.. ನೀನು ಊರೂರು ಅಲ್ದು ಈಟೋತ್ತಲ್ಲಿ ಬಂದೀ” ಅನ್ತಾ ಒಲಿಯೊಳಗಿಟ್ಟ ಕಟಿಗಿಗಳಿಗಾ ಬೆಂಕಿಪಟ್ನದಿಂದ ಕಡ್ಡಿ ಗೀರಿ ಒಲಿ ಹಚ್ಚಿದ್ಲು. “ಹತ್ನೇದು ಪಾಸ್ ಆಗ್ದಿದ್ರು ಈ ಧಿಮಾಕೀಗ ಕಮ್ಮಿ ಇಲ್ಬಿಡು ನಿಂಗಾ”
ಅದ ವರ್ಷ ಹತ್ನೇದು ನಪಾಸಾಗಿ ಮನಿಯಾಗ ಕುಂತಿದ್ದ. ಪೋಲಿ ಹುಡುಗ್ರ ಕೂಡ ತಿರುಗ್ತಿದ್ದ ಬಾಲ ಸೋಮಾರಿ ಆಗಿದ್ದವ. ಓದು ಅವ್ನ ತಲಿಗೆ ಹತ್ಲಿಲ್ಲ.
“ಯವ್ವಾ, ಅದ್ನ ಯಾಕ್ ಮಾತಾಡ್ತಿ? ಸುಮ್ನ ಉಣ್ಣಕ ಇಕ್ಕು” ತಟ್ಟಿ ಹಿಡ್ದು ಒಲಿ ಮುಂದ ಬಂದು ಕುಂತ.
“ಪಾರಿ, ನೀನೂ ಬಾ.. ಧಣಿಯರ್ ಮನೆಗಾ ಜ್ವಾಳದ ರೊಟ್ಟಿ ಕೊಟ್ಟಾರ ಉಣ್ಣು ಬಾ” ಕರದ್ಲು.

“ಬಂದ್ನೇ ಯಾವ್ವಾ” ಅನ್ತಾ ಪಾಟಿ ಚೀಲನ ಮೂಲ್ಯಾಕಿಟ್ಟು ಎದ್ದು ಅಡ್ಗಿ ಮನೆಗೋಗಿ ಅವ್ವನ್ಮುಂದಾ ಕುಂತ್ಲು ಪಾರಿ.

“ಯವ್ವಾ, ನಾನು ಬೆಂಗ್ಳೂರಿಗ ದುಡಿಯಾಕ್ ಹೋಕ್ಕಿನಿ” ಅಂದ್ನ ಬಾಲ.
“ಹೇ..ಮೂದೇವಿ. ಏನಾಗಿದ್ಯೋ ನಿಂಗ? ಈ ಊರ‍್ನಾಗಿದ್ಕೊಂಡು ದುಡಿ. ಸುಮ್ನ ಗೊತ್ತಿಲ್ದೂರಿಗೆ ಹೋಗಿ ಏನ್ ಮಾಡ್ತಿ? ಧಣಿಯರಿಗಾ ಹೇಳಿನಿ. ನಾಳಿಯಿಂದ ಅವ್ರು ಹೊಲಕ ಹೋಗು. ಪುಣ್ಯನಾದ್ರೂ ಬರ‍್ತಾತಿ” ಅನ್ತಾ ತಟ್ಟಿಗ ಜ್ವಾಳದ ರೊಟ್ಟಿ, ಪುಂಡಿ ಪಲ್ಯ ಹಾಕಿದ್ಲು.
“ಹೋಗ್ಬೇ ಯವ್ವಾ. ನಾನ್ಯಾಕ ಹೊಲ್ದಾಗ ದುಡಿಲಿ? ಬೆಂಗ್ಳೂರಿಗೆ ಹೋಗಿ ನೌಕ್ರಿ ಮಾಡ್ತೀನಿ. ನಂಗ ಇಲ್ಲಿರಕಾಗಲ್ಲ. ನನ್ನ ಸ್ನೇಹಿತ್ರು ಹೋಗ್ತಾರ. ನಾನೂ ಹೊಂಟಿನಿ ಅಷ್ಟ” ಅನ್ತಾ ಉಣ್ಣದು ಮುಗಿಸಿ ತಟ್ಟ್ಯಾಗ ಕೈ ತೊಳ್ದು ಎದ್ದು ದಪ ದಪ ಹೆಜ್ಜೆ ಹಾಕ್ತಾ ಹೊರಗೋದ.
ಅವ್ನ ಧಿಮಾಕೀನ ಮಾತು ಕಂಡು ಹುಲಿಗೆವ್ವಗ ತಲಿಕೆಟ್ಟೋಯ್ತು. “ಎದಿಮಟ ಬೆಳ್ದ ಮಗ, ಪ್ಯಾಟಿಗೆ ಹೋಗ್ತೀನಿ ಅಂತನಲ್ಲಾ. ಕಣ್ಣೇದ್ರಿಗಿದ್ರ ನಮ್ಗ ಚೊಲೋ ಅನುಸ್ತದ. ಈ ಮೂದೇವಿಗಾ ಯಾರು ತಲಿ ಕೆಡಿಸಿದ್ರೋ..ಅವ್ರು ಹಾಳಾಗೊಗ್ಲಿ” ಮನಸ್ನಾಗ ಶಪಿಸಿದ್ಲು ಹುಲಿಗೆವ್ವ.

“ಯವ್ವಾ, ಅಪ್ಪ ಇನ್ನ ಬಂದಿಲ್ನೋಡು” ಪಾರಿ ಅಂದ್ಲು.
“ಅವಾ ಎಲ್ಲಿ ಬರ್ತಾನ. ಧಣಿಯರತ್ರ ರೊಕ್ಕ ಇಸ್ಕೊಂಡು ಕುಡಿಯಾಕುಂತಿರ್ತನ. ಬರ‍್ಲಿ ಅವ. ಗ್ರಹಚಾರ ಬಿಡಿಸ್ತೀನಿ. ದೊಡ್ಡ ಧಣಿಯರ್ ತಮ್ಮ ನಾಗಯ್ಯನತ್ರ ಹೋಗ್ಬೇಡ. ಅವ ಸರಿಗಿಲ್ಲ ಅಂದ್ರ ನಮ್ಮಾತು ಎಲ್ಲಿ ಕೇಳ್ತಾನ ನಿಮ್ಮಪ್ಪ” ಅನ್ತಾ ಪಾರಿ ತಟ್ಟಿಗೆ ರೊಟ್ಟಿ, ಪುಂಡಿ ಪಲ್ಯ ಹಾಕಿದ್ಲು.
“ಯಾಕವ್ವ? ಅವ್ರು ಯಾಕ ಸರಿಗಿಲ್ಲವ”
“ಅದೆಲ್ಲ ನಿಂಗ ಗೊತ್ತಾಗಕಿಲ್ಲ”
“ನಂಗೆಲ್ಲ ಗೊತ್ತವ”
“ಏನು ಗೊತ್ತು ನಿಂಗ?”
“ಅವತ್ತು ಅವ್ರು ಹೊಲ್ದಾಗ, ಕಳಿ ತೆಗಿಬೇಕಾದ್ರ ನಾಗಯ್ಯ ನಿನ್ನ ಹಿಡಿಯಾಕ ಬಂದಿದ್ನಲ್ಲ. ಅದ್ಕ ಅವ್ನ ದೂರ ತಳ್ಳಿದೆ. ಅದ್ಕ ಅವ್ನು ಸರಿಗಿಲ್ಲ” ಅಂದ್ಲು ಮುಗ್ಧದಿಂದ.
“ಹೌದವ್ವ. ನಮ್ಮ ಹಣೆಬರಹದಾಗ ಇದ್ದಿದ್ದು ಯಾರ್ ಕೈಯ್ಯಾಗ ತಪ್ಪಿಸೋಕೆ ಆಗುತ್ತಾ. ನಮ್ಮ ಪಾಲಿಗಿದ್ದಿದ್ದು ನಾವು ಉಣ್ಬೇಕು. ಅದ್ಕ ನೀನು ನನ್ನಂಗ ಅವಿದ್ಯವಂತೆ ಆಗ್ಬೇಡ. ಚಂದಗೆ ಓದಿ ದೊಡ್ಡ ಆಫಿಸರ್ ಆಗ್ಬೇಕು. ಆಗ ಯಾರಿಗೂ ನಿನ್ನ ಮೈ ಮುಟ್ಟಾಕ ಧೈರ್ಯ ಬರಂಗಿಲ್ಲ”
“ಹೌದವ್ವ, ನಾನು ಚಂದ ಓದ್ತೀನಿ”
“ಸರಿ, ನೀ ಉಂಡು ಹೋಗಿ ಮಲ್ಕ” ಅಂದು,
‘ಎಲ್ಲಿ ಬಿದ್ದುಕೊಂಡಾನೋ.. ಮೂದೇವಿ’ ಅನ್ತಾ “ಪಾರಿ, ಜೋಪಾನ. ನಿನ್ನಪ್ಪನ ಕರ‍್ಕೊಂಡು ಬರ‍್ತೀನಿ” ಅನ್ತಾ ಗುಡಿಸ್ಲಿಂದ ತನ್ನ ಕಾಲ್ಕಿತ್ತಿದ್ಲು.
ಊರ‍್ತುಂಬಾ ಹುಣ್ಮಿ ಬೆಳದಿಂಗ್ಳು ಮೈದುಂಬಿತ್ತು. ಕೆಲವಾರು ಮಂದಿ ಎದ್ದಿದ್ರು. ಹೋಗ್ತಾ ಬನ್ನಿ ಮರ ಕಟ್ಟಿ ಮ್ಯಾಗ ಕುಂತಿದ್ದ ಧರ್ಮಜ್ಜನ “ಅಜ್ಜ, ನನ್ನ ಗಂಡ ಏನಾರ ಕಂಡ್ನ” ಕೇಳಿದ್ಲು.
“ಹು..ಕಣವ್ವಾ ಸ್ವಲ್ಪ ಹೊತ್ತಿಗೆ ಮುಂಚೆ ಹಿಂಗ ಹೋದ್ನ” ಅಂದ.
ಅದ ದಾರಿಗ ಹೆಜ್ಜೆ ಹಾಕಿದ್ಲು. ದಾರ‍್ಯಾಗ ದುರುಗಪ್ಪ ಕಂಡು, “ಹುಲಿಗೆವ್ವ, ನಿನ್ನ ಗಂಡ ಸಾರಾಯಿ ಅಂಗ್ಡಿ ಮುಂದ ಕುಡ್ದು ಬಿದ್ಕಂಡನಾ ಹೋಗು” ಅನ್ತಾ ಮುಂದುಕೋದ.
ಹುಲಿಗೆವ್ವನ ಕ್ವಾಪ ನೆತ್ತಿಗೇರಿತ್ತು. ಕಂಗಳೆರಡು ಕೆಂಪಾಗಿ ತನ್ನ ಎಡ ಕೈನಿಂದ ಸೀರಿನ ಸೊಂಟಕ್ಕ ಸಿಗಿಸ್ಕೊಂಡು ಏನೇನೋ ಗುನುಗುತ್ತಾ ದಪದಪ ಹೆಜ್ಜೆ ಹಾಕ್ತಾ ಅಂಗ್ಡಿ ಕಡೆ ಹೊಂಟ್ಲು.

ಸಾರಾಯಿ ಅಂಗ್ಡಿ ಮುಂದ ತೂರಾಡ್ತ ಬಿದ್ಕೊಂಡಿದ್ದ ಗಂಡನ ಕಂಡು, ಹುಲಿಗೆವ್ವನ ಮೈ ಉರಿಯಕ್ಕತ್ತಿತ್ತು, “ಹೇ, ಮೂದೇವಿ ನಿಂಗ ಎಷ್ಟದಪ ಹೇಳ್ಬೇಕಾ? ಕುಡಿಬ್ಯಾಡಂತ” ಬೈತಾ ಅವ್ನ ಹಿಡ್ಕೊಂಡ್ಲು.
ಅಂಗ್ಡಿ ಕಟ್ಟಿ ಮ್ಯಾಲಾ ಕುಡೀತಾ ಕುಂತಿದ್ದ ಮಂದಿ ಕಣ್ಣು ಇವ್ಳ ಮ್ಯಾಲ ಬಿತ್ತು.
“ಏನೇ.. ಹುಲಿಗಿ, ನಿನ್ನ ಗಂಡನ ಕರಿಯಾಕ ಬಂದೀ. ನಾನೂ ಬರ‍್ತೀನಿ ತಡಿ” ಅನ್ತಾ ಅವ್ಳ ಕೈ ಹಿಡಿಯಾಕ ಬಂದ ನಾಗಯ್ಯ.
“ಹೇ..ಹೋಗ್ರಿ ಅತ್ತಾಗ. ನಂಗೊತ್ತದ ನನ್ನ ಗಂಡನ ಯಂಗ ಕರ‍್ಕೊಂಡು ಹೋಗ್ಬೇಕು ಅಂತ” ಗುಡುಗಿದ್ಲು ಹುಲಿಗೆವ್ವ.
“ಹೇ..ಹುಲಿಗೆವ್ವ ಯಾಕ್ಬೇ ಹಂಗ ಮಾತಾಡ್ತಿ? ಚೂರು ಮರ‍್ಯಾದಿ ಕೊಡು ನಾಗಯ್ಯಗ. ಅವ್ರು ದೊಡ್ಡ ಮನೆಯೋರು ನೆಂಪು ಇರ‍್ಲಿ” ಅಂದ್ನ ನಿಂಗಜ್ಜ.
ಏನೂ ಮಾತಾಡ್ದೇ ಹುಲಿಗೆವ್ವ ಗಂಡನ, ಗುಡಿಸ್ಲು ಕಡೆ ಕರ‍್ಕೊಂಡು ಬಂದ್ಲು. ದಾರ‍್ಯಾಗ ನಾಯಿಗಳ ಬೊಗಳಾಟ ಕೇಳಿ ಹೆದರ‍್ಕಿ ಆತು. ‘ಮಗ ಮಹ್ರಾಯ ಎಲ್ಲಿ ಕುಂತಾನ..ಹರ‍ಟಿ ಹೊಡ್ಕೊಂತಾ’ ಗುನುಗ್ತಾ, ಗಂಡನ ಬೈತಾ.. ಗುಡಿಸ್ಲುತಾವ ಬಂದು ಹೊರ ಕಟ್ಟಿಗ ಗಂಡನ ಮಲಗಿಸಿದ್ಲು.

“ಪಾರಿ” ಅನ್ತಾ ಒಳಗ ಬಂದ್ಲು.
ಪಾರಿ ಮಕ್ಕಂಡಿದ್ದು ಕಂಡು, ಪಕ್ಕದಾಗಿದ್ದ ದುಪ್ಡಿ ಹೊಚ್ಚಿ, ಗಂಡ ಉಂಡಿಲ್ಲಂತ ತಾನೂ ಉಣ್ದೇ, ಅನ್ನ ಮಾಡಾಕ ಒಲಿ ಹಚ್ಚಿ ಡಬರಿಗ ನೀರು ಇಟ್ಟಿದ್ದು ಕಂಡು, ಒಲಿಯೊಳಗಿನ ಕಟಿಗಿಗಳ್ನ ತೆಗ್ದು ಅದ್ಕ ನೀರು ಚುಮ್ಮಿಸಿ ಬೆಂಕಿ ಆರ‍್ಸಿದ್ಲು. ಒಂದು ಕಪ್ಪು ನೀರು ಕುಡ್ದು, ಹಾಸಿಗಿ ತಕ್ಕಂಡು ಗುಡಿಸ್ಲು ಹೊರ ಕಟ್ಟಿಗೆ ಬಂದು ಕುಂತ್ಲು. ಗಂಡ ಮಾದಪ್ಪ ಗಡತ್ತಾಗಿ ನಿದ್ದಿ ಮಾಡ್ತಿದ್ದನ್ನು ಕಂಡು,
“ಯಂಗ ಬಿದ್ಕಂಡನಾ ನೋಡು” ಮನಸ್ನಾಗ ಅಂದ್ಕೊಂಡ್ಲು.
ಮಗ ಬಾಲ ಇನ್ನೂ ಬರ‍್ದಿದ್ದಕ, ಕ್ವಾಪ ಬಂದಿತ್ತು. ಮಗ್ಳು ಬೆಳಿಯಾಕತ್ತಾಳ. ಚಂದಗೆ ಓದ್ತಾಳ. ಧಣಿಯಾರ ಹೊಲ್ದಾಗ ಇನ್ನ ಹೆಚ್ಚು ದುಡ್ದು, ಯಂಗೋ ಅವಳ್ನ ಚಂದಗೆ ಓದಿಸ್ಬೇಕು. ಕೇರಿಯಾಗ ನಮ್ ಮಗ್ಳೇ ಹೆಚ್ಚು ಓದ್ಬೇಕು. ಚಂದಗೆ ಓದಿದ ಮ್ಯಾಲ ಒಳ್ಳೆ ಹುಡುಗಗ ಕೊಟ್ಟು ಲಗ್ನ ಮಾಡ್ಬೇಕು. ಅಂದ್ಕೊಳ್ತಾ ಕಟ್ಟಿ ಮ್ಯಾಲ ಮಗಗ ಹಾಸಿಗಿ ಇಟ್ಟು, ಗಂಡಗ ದುಪ್ಪಡಿ ಹೊಚ್ಚಿ, ತಾನು ಗುಡಿಸ್ಲು ಒಳಗ ಬಂದು ಬಾಗ್ಲು ಚಿಲ್ಕ ಹಾಕಿದ್ಲು. ಪಾರಿ ಪಕ್ಕ ಹಾಸ್ಕೊಂಡು ಮಲ್ಕೊಂಡ್ಲು. “ಏಟೋತ್ತಾದ್ರೂ ಬಾಲ ಇನ್ನ ಬಂದಿಲ್ಲಲ್ಲ. ಎಲ್ಲಿ ಹಾಳಾಗ ಹೋಗ್ಯಾನ?” ಅನ್ತಾ ಕಣ್ಮುಚ್ಚಿ ನಿದ್ದಿ ಮಾಡಿದ್ಲು.

ಹುಲಿಗೆವ್ವನ ಮಾತು ನಾಗಯ್ಯಗ ಸರಿ ಬರಲಿಲ್ಲ. ಅವ್ಳು ಮ್ಯಾಲ ಕ್ವಾಪ ಉಕ್ಕಿತ್ತು. ಅವ್ಳು ಮ್ಯಾಲ ಬಾಳ ದಿನದಿಂದ ಒಂದು ಕಣ್ಣಿಟ್ಟಿದ್ದ ನಾಗಯ್ಯ. ಹುಲಿಗೆವ್ವ ಚೂರು ಕಪ್ಪಿದ್ರು ಬಾಳಾ ಚಂದ ಕಾಣ್ತಿದ್ಲು. “ಏಟು ದಿನದಿಂದ ಕಾಯಕತ್ತೀನಿ. ಆ ಕೇರಿಯಾಗ, ಇಷ್ಟು ಸುಂದ್ರೀನಾ ಕಂಡಿಲ್ಲ. ಎರ‍್ಡು ಮಕ್ಳಿದ್ರೂ ಬಾಳಾ ಚಂದ ಕಾಣ್ತಾಳ. ಅವುಳ್ನ ನೋಡ್ತಿದ್ರ, ಕುಡ್ದಿದ್ದ ನಿಶಾ ಡರ್ ಅಂತ ಕೆಳಗಿಳಿತೇತಿ. ಅವ್ಳನಾ ಯಂಗಾರ ಮಾಡಿ ನನ್ನೊಳ ಮಾಡ್ಕೋಬೇಕು” ಅನ್ತಾ ಹುಲಿಗೆವ್ವನ ಗುಡಿಸ್ಲು ದಾರಿ ಹಿಡ್ದ.

ನಾಯಿಗಳ ಬೊಗಳಾಟ ಕೇಳ್ತಿತ್ತು. ಹುಣ್ಮಿ ಬೆಳದಿಂಗ್ಳು ದಾರ‍್ಯಾಗ ತುಂಬಿತ್ತು. ಬೀದಿ ದೀಪದ ಸುತ್ತ ಮಿಣುಗು ಹುಳುಗಳ ಜುಯ್ಯಿ ಜುಯ್ಯಿ ಸದ್ದು ಕಿವಿಗ ಬಡಿತಿತ್ತು. ನಾಗಯ್ಯ ಕೈಯ್ಯಾಗ ಬಾಟ್ಲಿ ಹಿಡ್ಕೊಂಡು ಕುಡೀತಾ ಹುಲಿಗೆವ್ವನ ಗುಡಿಸ್ಲುತಾವ ಬಂದ. ಹೊರಗ ಗಂಡ ಮಾದಪ್ಪ ಮಲ್ಕೊಂಡಿದ್ದು ಕಂಡು, ಕೈಯ್ಯಾಗಿದ್ದ ಬಾಟ್ಲಿ ಬೀದಿಗೆ ಬಿಸಾಕಿ, ಗುಡಿಸ್ಲು ಬಾಗ್ಲು ಬಡ್ದ.

ಹುಲಿಗೆವ್ವಗ ಎಚ್ಚರಾಗಿ, ಮಗ ಬಾಲ ಬಂದಾನಂತ ಎದ್ಲು. ಗುಡಿಸ್ಲು ನಡು ಕಂಬಕ್ಕಿಟ್ಟಿದ್ದ ಚಿಮಣಿ ಬುಡ್ಡಿ ಉರಿತಿತ್ತು. ಒಳಗ ಮಂದ ಬೆಳ್ಕು ಬಿದ್ದಿತ್ತು. ಬಾಗ್ಲು ತೆಗ್ದ ಹುಲಿಗೆವ್ವಗ, ಹೊರಗ ನಾಗಯ್ಯ ನಿಂತಿದ್ದು ಕಂಡು ಹೆದರ‍್ಕಿ ಆತು. “ನಾಗಯ್ಯ, ನೀನ್ಯಾಕ ಬಂದೀ? ಹೋಗು” ಅನ್ತಾ ಗಾಬ್ರಿಯಿಂದ ಬಾಗ್ಲು ಮುಚ್ಚೋಕ ನೋಡ್ತಿದ್ಲು. ಆದ್ರ ನಾಗಯ್ಯ ತನ್ನ ಕಸುವಿನಿಂದ ಬಾಗ್ಲುನ ಜೋರಾಗಿ ದಬ್ಬಿದ. ಹುಲಿಗೆವ್ವ ಕೆಳಗ ಬಿದ್ಲು. ನಾಗಯ್ಯ ಒಳಗೋಗಿ ಬಾಗ್ಲು ಚಿಲ್ಕ ಹಾಕ್ದ. “ಬ್ಯಾಡ್ರಿಯಪ್ಪ ನನ್ನ ಏನೂ ಮಾಡ್ಬೇಡ್ರಿ” ಕೈ ಮುಗ್ದು ಬೇಡ್ತಿದ್ದ ಹುಲಿಗೆವ್ವನ ಭುಜಗಳ್ನ ಹಿಡ್ದ ನಾಗಯ್ಯ, “ಹುಲಿಗೆವ್ವ, ಏಟು ಚಂದ ಕಾಣ್ತಿಯೆಲ್ಲ. ಈ ಮಂದ ಬೆಳ್ಕನಾಗ ನಿನ್ನ ರೂಪಾನೇ ಮಿನುಗ್ತೇತಿ. ಏಟು ದಿನದಿಂದ ನಿನ್ಮ್ಯಾಗ ಮನಸಿಟ್ಟಿನಿ. ಇವತ್ತು ನಿನ್ನ ನನ್ನೊಳಾಗಿ ಮಾಡ್ಕೊಂತಿನಿ” ಅಂತ ಅವ್ಳನ ತಬ್ಕೊಂಡ್ನ. “ಬ್ಯಾಡ್ರಿ, ಬಿಟ್ಬಿಡ್ರಿ ನನ್ನ” ಅಂತ ಅವ್ನಿಂದ ತಪ್ಪಸ್ಕೊಂಡು ಗುಡಿಸ್ಲು ಬಾಗ್ಲು ತೆಗಿಯಾಕ ನೋಡುದ್ಲು. ಆದ್ರ ನಾಗಯ್ಯ ಅವ್ಳನಾ ತನ್ನ ಕಸುವಿನಿಂದ ಜೋರಾಗಿ ತನ್ನತ್ತ ಸೆಳ್ದು, ಅವ್ಳ ಮೈ ಮೇಲಿದ್ದ ಸೀರೆ ತೆಗ್ದು, ಅವ್ಳನಾ ಕೆಳಗಾ ಬೀಳಿಸಿ, ಅವ್ಳು ಕೆಳಗ ಬಿದ್ಕೂಡಲ ಅವ್ಳನಾ ಬಿಗಿಯಾಗಿ ತಬ್ಕೊಂಡ. ಅವ್ಳು ಬ್ಯಾಡ್ರಿ..ಬ್ಯಾಡ್ರಿ ಅಂದ್ರು ಬಿಡದೇ, ಅವ್ಳನಾ ಹಾಳು ಮಾಡಿದ. ಅವನ ಕಾಲು ಗುಡಿಸ್ಲು ನಡು ಕಂಬಕ್ಕಿಟ್ಟಿದ್ದ ಚಿಮಣಿ ಬುಡ್ಡಿಗೆ ತಾಕಿ ಉಳ್ಳಿತ್ತು. ಅದ್ರಿಂದ ಸೀಮೇಣ್ಣಿ ಚೆಲ್ಲಿತ್ತು, ದೀಪ ಆರಿತ್ತು. ಮಂದ ಬೆಳ್ಕಿಂದ ತುಂಬಿದ್ದ ಗುಡಿಸ್ಲು ಒಳಗ ಬೆಳ್ಕು ಮಾಯಾಗಿ ಕತ್ಲು ತುಂಬಿತ್ತು, ಬರೀ ಕತ್ಲು ಹೊಮ್ಮಿತ್ತು.
-ಚೈತ್ರಾ ವಿ.ಮಾಲವಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x