ಕೊಠಡಿ ಮೇಲ್ವಿಚಾರಣೆ ಎಂಬ ಗುಮ್ಮ…!: ಶೀಲಾ. ಗೌಡರ. ಬದಾಮಿ.


ಶೈಕ್ಷಣಿಕ ವರ್ಷ ಪ್ರಾರಂಭವಾದೊಡನೆ ಮೊದಲ ಸಭೆಯಲ್ಲೇ ಮುಖ್ಯಸ್ಥರು,”ಕಳೆದ ವರ್ಷ ಆದದ್ದಾಯ್ತು. ಈ ವರ್ಷ ಮಾತ್ರ ನಾವು 100/ ರಿಸಲ್ಟ ಮಾಡಬೇಕು.ಅದಕ್ಕಾಗಿ ಪರೀಕ್ಷೆ ಬಂದಾಗ ಗಡಿಬಿಡಿ ಮಾಡುವುದಕ್ಕಿಂತ ಈಗಿನಿಂದಲೇ ಗುರಿ ಸಾಧನೆಗೆ ಕಂಕಣಬದ್ದರಾಗಬೇಕು. “ ಎಂದು ಎಚ್ಚರಿಸುತ್ತಾರೆ. ಆಗಿನಿಂದಲೇ ಎಲ್ಲ ಶಿಕ್ಷಕರ, ಉಪನ್ಯಾಸಕರ ಎದೆ ಢವ….ಢವ…..ವಾರ್ಷಿಕ ಅಂದಾಜು,ಕ್ರಿಯಾಯೋಜನೆ ಸಿದ್ದಪಡಿಸಿ, ಡಿಸೆಂಬರ್ ಅಂತ್ಯಕ್ಕೆ ಸಿಲ್ಯಾಬಸ್ ಮುಗಿಸಿ, ಎರಡು ತಿಂಗಳು ರಿವಿಜನ್ ಮಾಡಬೇಕು ಎಂದು ಜೂನ್ ಒಂದರಿಂದಲೇ ಆನ್ ಯುವರ್ ಮಾರ್ಕ, ಗೆಟ್ ಸೆಟ್,ಗೋ……ಎಂದು ನಮ್ಮನ್ನು ರೇಸಿಗೆ ಬಿಟ್ಟು ಬಿಡುತ್ತಾರೆ. ಅದು ಸಾದಾ ಓಟಅಲ್ಲ.ಅಡೆ ತಡೆಗಳ ಓಟದ ಆಟ. ಏಕೆಂದರೆ ಮಧ್ಯದಲ್ಲಿ ಬರುವ ರಜೆಗಳು, ಬಂದ್ ಗಳು, ಅನಾರೋಗ್ಯ,ತರಬೇತಿಗಳೆಂಬ ಅಡೆತಡೆಗಳನ್ನು ಹಾರಿಯೇ ಶಿಕ್ಷಕರು ಮುಂದೆ ಹೋಗಬೇಕು. ಅವರು ಪ್ರತಿವರ್ಷ ಇದನ್ನೇ ಮಾಡುವುದರಿಂದ ಅವರು ಈ ಆಟದಲ್ಲಿ ಎಕ್ಸಪರ್ಟ. ಆದರೆ ಮಕ್ಕಳು ಹಾಗಲ್ಲ.. ನಮ್ಮೊಡನೆ ಎಷ್ಟೇ ಜಾಗರೂಕತೆಯಿಂದ ಕೈಹಿಡಿದು ತೆಗೆದುಕೊಂಡು ಹೋದರೂ ಬೇಗ ಸುಸ್ತಾಗಿ ಕುಳಿತೇ ಬಿಡುತ್ತಾರೆ. ತಡೆ ಬಂದಲ್ಲಿ ಕೈಬಿಡಿಸಿಕೊಂಡು ಗಾಢ ನಿದ್ದೆ ಹೊಡೆಯುತ್ತಾರೆ. ಹೀಗಾಗಿ ನಮ್ಮ ಅವರ ಪರಿಸ್ಥಿತಿ ಬನಶಂಕರಿಯ ತೇರಿನಂದು ಜಾತ್ರೆಯಲ್ಲಿ ತಪ್ಪಿಸಿಕೊಂಡ ತಾಯಿ ಮಕ್ಕಳಂತೆ ದಿಕ್ಕು ತಿಳಿಯದಂತೆ ಮಾಡುತ್ತದೆ. ಮತ್ತೆ ಮತ್ತೆ ಅವರನ್ನು ಹುಡುಕಿ ತಂದು ರೇಸ್ ನ ಅಂತಿಮ ರೇಖೆ ಮುಟ್ಟುವ ಒರೆಗೆ, ಗಡದ್ದಾಗಿ ಬೆಟ್ಟ ಪ್ರದೇಶದಲ್ಲಿ ಮಳೆಸುರಿಸಿ ಸುಸ್ತಾದ ಮೋಡ ಸುರಿಸುವ ಅಲ್ಪ ಮಳೆ ಪಡೆವ ಮಳೆ ನೆರಳಿನ ಪ್ರದೇಶದಂತಾರಿಗುತ್ತದೆ ನಮ್ಮ ಪರಿಸ್ಥಿತಿ.

ನಾವೋ ಪ್ರತಿಕ್ಷಣ ಪರೀಕ್ಷಾ ಫಲಿತಾಂಶ 100/ ಎಂದು ಜಪಿಸುತ್ತಿದ್ದರೆ, ಕೆಲವು ವಿದ್ಯಾರ್ಥಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಗೂಗ್ಲಿ ಕಟಿಂಗ್, ಹೆಬ್ಬುಲಿ ಕಟಿಂಗ್, ಜಾತ್ರೆ,ಮದುವೆ, ಮುಂಜಿವೆ……….ಹೀಗೆ ತಮ್ಮದೇ ಲೋಕದಲ್ಲಿ ಇರುತ್ತಾರೆ. ಅವರಿಗೇನು ಅನ್ನುವ ಹಾಗಿಲ್ಲ. ಬಾಲ್ಯದ ಸವಿ ಸವಿಯುವುದು ಅವರ ಆಜನ್ಮಸಿದ್ದ ಹಕ್ಕು. ವಿನಾಕಾರಣ ನಮ್ಮ ಟೆನ್ ಶನ್ ಅವರಿಗೇಕೆ ಎಂದು, ಅವರೊಡನೆ ನಾವೂ ನಕ್ಕು ನಮ್ಮ ಬಿ.ಪಿ. ಶುಗರ್ ಮೆಂಟೇನ್ ಮಾಡಿಕೊಳ್ಳುವ ಹರಸಾಹಸ ಮಾಡುತ್ತೇವೆ. ಹೀಗೆ ನೋಡು ನೋಡುತ್ತಲೇ ಶೈಕ್ಷಣಿಕ ವರ್ಷ ಮುಗಿದೇಬಿಡುವ ಹಂತಕ್ಕೆಬಂದುಬಿಡುವುದೇ…

ಪರೀಕ್ಷೆ ಸಮೀಪಿಸಿದಂತೆ ಮತ್ತೊಂದು ಹೊಸ ತಲೆನೋವು. ತಲೆನೋವು ಅನ್ನೊದಕ್ಕಿಂತ ಭಯ ಹುಟ್ಟಿಸಿ ರಾತ್ರಿ ನಿದ್ದೆಗೆಡಿಸುವ ಗುಮ್ಮ ಎಂದರೂ ತಪ್ಪಲ್ಲ. ಹಾಂ…! ಸರಿಯಾದ ಊಹೆ….”ಕೊಠಡಿ ಮೇಲ್ವಿಚಾರಣೆ ಕಾರ್ಯ”. ನಮ್ಮ ಗ್ರಹಚಾರ ಚನ್ನಾಗಿದ್ದರೆ ನಾವು ಯಾವುದೇ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳದೇ ಪರೀಕ್ಷೆ ಮುಗಿಸಿ ಬರುತ್ತೇವೆ. ಗ್ರಹಚಾರ ಕೆಟ್ಟಿದ್ದರೆ ಮಾತ್ರ ನಮ್ಮ ಮೇಲೆ ಬಡಿಗೆ ಬೀಳುವುದು ಗ್ಯಾರಂಟಿ. ಆದರೆ ಅನಿವಾರ್ಯ… ಇವುಗಳಿಂದ ನಾವು ತಪ್ಪಿಸಿಕೊಳ್ಳುವಂತಿಲ್ಲ. ಪರೀಕ್ಷಾ ಕಾರ್ಯ, ಚುನಾವಣಾ ಕಾರ್ಯ ಗಳಲ್ಲಿ ಮೈಯೆಲ್ಲ ಕಣ್ಣಾಗಿದ್ದರೂ ಕಡಿಮೆಯೇ…..

ಕೊಠಡಿ ಮೇಲ್ವಿಚಾರಣೆಗೆ ಕೊಠಡಿಯೊಳಗೆ ಕಾಲಿಡುತ್ತಿದ್ದಂತೆಯೇ ಏನೋ ಅವ್ಯಕ್ತ ಭಯ. ಕೊಠಡಿ ಆರಿಸಿಕೊಳ್ಳುವಾಗಲೂ ಯಾವ ಕೊಠಡಿ ನಮಗೆ ಸುರಕ್ಷಿತ ಎಂದು ಹಲವಾರು ದೃಷ್ಠಿಕೋನಗಳಿಂದ ಯೋಚಿಸಿ, ಸಾಮಾನ್ಯವಾಗಿ ಮೇಲಿನ ಮಹಡಿಯ ಕೊಠಡಿಗಳಿಗಾಗಿ ನಮ್ಮ ನಮ್ಮಲ್ಲೇ ಸ್ಪರ್ಧೆ. ಸಾದ್ಯವಾದಷ್ಟು ಹೊರ ಬೀಸಿನ ಕೊಠಡಿಗಳನ್ನು ಅವಾಯ್ಡ ಮಾಡಿ, ಕಿಟಕಿ- ಬಾಗಿಲಗಳು ಭದ್ರ ಇರುವ, ಜಾಳಗಿ ಬಡಿದಿರುವ ಕೊಠಡಿಗಳೇ ಸಿಗಲೆಂದು ದೇವರಿಗೆ ಎರಡು ಹೆಚ್ಚು ಊದಬತ್ತಿ ಹಚ್ಚಿಯೇ ಮನೆಯಿಂದ ಹೊರಡುವುದು…. ನಮ್ಮ ಸುರಕ್ಷತೆಗೆ……

ನಾವು ಕೊಠಡಿ ಯೊಳಗೆ ಹೋಗುವವರೆಗೆ ಅಲ್ಲಿಂದ ಪಾಲಕರು, ವಿದ್ಯಾರ್ಥಿಗಳ ಜೊತೆ ಬಂದ ಅವರ ಸಂಗಾತಿಗಳು ಕಾಲು ಕೀಳುವುದೇ ಇಲ್ಲ. ನಾವು ಹೋದ ತಕ್ಷಣ ನಮ್ಮನ್ನೊಂದು ಸಾರಿ ಅವರ ಬೀಗರಂತೆ ಮಾತನಾಡಿಸಿ, ಕುಷಲೋಪರಿ ವಿಚಾರಿಸಿ,
“ನೋಡಿ ಮೇಡಂ, ಇವ ನಮ್ಮ ಮಗ/ ಮಗಳು. ಸಹಾಯ ಮಾಡಿ ಮೇಡಂ” ಎಂದೇ ಮುಂದೆ ಹೋಗುತ್ತಾರೆ. ಇನ್ನು ಕೆಲವರಂತೂ “ ಸ್ಕಾಡ್ ಬಂದರೆ ಚೀಟಿ ಹೊರಗೆ ಒಗೀಬೇಡ. ಮೇಡಂ ಏನು ಮಾಡೊದೊಲ್ಲ. ಸ್ಕಾಡ್ ಹೋದ ಮೇಲೆ ತೆಗೆದು ಬರಿ” ಎಂದು ನಮ್ಮ ಮುಂದೆಯೇ ಹೇಳಿ, ನಮಗೊಂದು ನಗೆ ಚಲ್ಲಿ ಹೋಗುವುದೇ…? ನಮ್ಮ ಮುಖ ಮಾತ್ರ ಇಂಗು ತಿಂದ ಮಂಗನಂತೆ……..ಮರು ದಿನ ಪರೀಕ್ಷೆ ಇದ್ದದ್ದರಿಂದ ಹೇಗೋ ಏನೋ ಎಂದು ಅದನ್ನೇ ವಿಚಾರ ಮಾಡುತ್ತ ರಾತ್ರಿ ನಿದ್ದೆ ಹೋದೆ.

ನನ್ನ ಕರ್ತವ್ಯವನ್ನು ನಾನು ನಿಷ್ಠೆಯಿಂದ ಮಾಡಬೇಕು ಎಂದು ವೀರ ರಾಣಿ ಚನ್ನಮ್ಮನ ಹಾಗೆ ವೀರಾವೇಶದಿಂದ, ನನಗೆ ಹಂಚಿಕೆಯಾದ ಕೊಠಡಿಗೆ ಉತ್ತರ ಪತ್ರಿಕೆ ಹಿಡಿದು ನಡೆದೆ. “ ಇಲ್ನೋಡಿ ಮಕ್ಕಳಾ….! ಎಕ್ಸಾಂ ತುಂಬಾ ಸ್ಟ್ರಿಕ್ಟ ಆಗತ್ತೆ.ಸಾಹೇಬ್ರು ಬರ್ತಾರೆ . ಕಾಪಿ ಸಿಕ್ರೆ ಡಿಬಾರ್ ಮಾಡ್ತಾರೆ. ನೀವೆಲ್ಲ ಒಳ್ಳೆ ಮಕ್ಳಲ್ವಾ… ಯಾರ ಹತ್ರನಾದ್ರು ಚೀಟಿ ಇದ್ರೆ ಕೊಟ್ಟಬಿಡಿ.” ಎಂದು ಅವರ ಮನ ಗೆಲ್ಲುವಂತೆ ಮಾತನಾಡಿ, ಎಲ್ಲರನ್ನೂ ಪರೀಕ್ಷಿಸಿದ್ರೆ ಒಂದಾದರೂ ಚೀಟಿ ಸಿಗಬೇಕು………! ಎಲ್ಲವೂ ಕ್ಲೀನ್ ಚಿಟ್…. ನನಗೋ ಸಂಭ್ರಮವೋ…..ಸಂಭ್ರಮ….ಎಲ್ಲರಿಗೂ ಪ್ರಶ್ನೆ-ಉತ್ತರ ಪತ್ರಿಕೆ ಪೂರೈಸಿ ದ್ದಾಯ್ತು.” ಎಷ್ಟೊಂದು ಒಳ್ಳೆ ಮಕ್ಳು “ ಎಂದು ಒಳಗೊಳಗೇ ಹೆಮ್ಮೆ ಪಡುತ್ತ, ಸಿ ಸಿ ಕ್ಯಾಮರಾಗೆ ಕಣ್ಣು ಮಿಟಿಕಿಸಿ “ನಿನ್ನದೇನು ಕೆಲಸಾ ಇಲ್ಲಾ ಬಿಡು ಇಲ್ಲಿ….” ಗೇಲಿ ಮಾಡಿ ನಕ್ಕು ಪೇಪರ್ಗಳಿಗೆ ಸಹಿ ಮಾಡುತ್ತ, ಪರೀಕ್ಷೆಯ ಫಾರ್ಮಾಲಿಟಿ ಪೂರೈಸ ತೊಡಗಿದೆ. ಹಾಗೇ ಅರ್ಧಗಂಟೆ ಜಾರುತ್ತಿದ್ದಂತೆ ಕಿಟಕಿಯಲ್ಲೇನೋ ಪರ ಪರ ಶಬ್ದ. “ ಅಯ್ಯೋ ಮಂಗ ಬಂತೇನೋ ಎಂದು ಗಾಬರಿಯಿಂದ ಹೊಡೆಯಲು ಉಷಾ……! ಎನ್ನುತ್ತಾ ಹೋದರೆ ….ಹೌದು ಮಂಗನೇ….! ಮಂಗನಿಂದ ವಿಕಾಸ ವಾದರೂ, ಮೂಲ ಮಂಗನ ಗುಣಗಳನ್ನು ಬಿಡದ, ಬಾಲವಿಲ್ಲದ ಮನುಷ್ಯ. “ಏ !, ಏನೋ ಇಳಿ ಕೆಳಗೆ.” ಎಂದು ಗದರಿಸಿದರೆ “ ಮೇಡಂ, ಏ ಚೀಟಿ ಸುಧಾಗೆ ಕೊಟ್ಟು ಬಿಡಿ. ಆಮೇಲೆ ನಾ ಹೋಗ್ತೇನಿ” ಎನ್ನಬೇಕೆ? ಆತನನ್ನು ನೋಡಿ ಮತ್ತೆ 5-6 ಮಂಗಗಳು, ಅಲ್ಲಲ್ಲ…ಜನ ಬರಬೇಕೆ? ಅವೂ ಕೂಡ ಒಂಟಿಯಾಗಿ ಬರಲು ಅಂಜುತ್ತವಲ್ಲವೇ. ….! ಕೋಣೆಯ ತುಂಬಾ ಚೀಟಿಗಳು ಹಾರಾಡ ತೊಡಗಿದವು.

ನಾನು ಪೋಲೀಸ್ ಪೋಲೀಸ್ ಎಂದು ಕೂಗಲು, ಯಾವ ಕುರುಹನ್ನೂ ಬಿಡದೇ ಪಟ ಪಟನೇ ಇಳಿದು ಓಡಿಬಿಡಬೇಕೆ? ಕೆಳಗೆ ಅವರೆಲ್ಲ ಮುಂದೆ ಮುಂದೆ ಓಡುವುದು…ಪೋಲೀಸರು ಹಿಂದೆ ಹಿಂದೆ…! “ನಗುವುದೋ ಅಳುವುದೋ ನೀವೇ ಹೇಳಿ ….” ಹಳೆಯ ಹಾಡು ಗುನುಗುತ್ತ ಹಾಳೆ ಆರಿಸುವ ಸರದಿ ನನ್ನದಾಗಿತ್ತು. ಸಿಪಾಯಿಗಳನ್ನು ಕರೆಸಿ ಆರಿಸಿ ಚೆಲ್ಲುವ ವ್ಯವಧಾನ ನನಗಿರಲಿಲ್ಲ. ಬೆಂಕಿಯನ್ನು ಮೊದಲು ಹೊರಗೆಸೆಯಬೇಕಿತ್ತಷ್ಠೇ……! ನಾನು ಕಸ ಆರಿಸುವುದನ್ನು ನೋಡಿ ಸಿಸಿ ಕ್ಯಾಮರಾ ಅಲ್ಲಿಯೇ ಮುಸಿ ಮುಸಿ ನಗುತ್ತಿತ್ತು. ಸುನಾಮಿ ಬಂದು ತಣ್ಣಗಾದ ಅನುಭವ. ಬಚಾವಾದೆ ಸ್ಕಾಡ್ ಬರಲಿಲ್ಲ ಎಂದು ಸೀರೆ ಸರಿ ಮಾಡಿಕೊಂಡು ಮತ್ತೆ ಹಾಗೇ ಅತ್ತಿಂದಿತ್ತ ಅಡ್ಡಾಡ ತೊಡಗಿದೆ. ಆಗ ಬಾಗಿಲಿಗೆ ಬಂದ ಚೀಫ್ “ ಮೇಡಂ ಹಾಗೆ ವಿಧ್ಯಾರ್ಥಿಗಳ ಮಧ್ಯ ಅವರನ್ನೇ ನೋಡುತ್ತ ಹೆಚ್ಚು ಅಡ್ಡಾಡಬೇಡಿ. ಅವರಿಗೆ ಬರೆಯಲು ಎದೆ ಗುದಿ ಆಗುತ್ತೆ, ಒಂದು ಕಡೆ ಸುಮ್ಮನೇ ನಿಂತು ಎಲ್ಲರನ್ನೂ ವೀಕ್ಷಿಸಿ” ಎಂದರು. ನನಗೆ ಬಟ್ಟೆಯಲ್ಲಿ ಕಲ್ಲು ಕಟ್ಟಿ ಮುಖಕ್ಕೆ ಹೊಡೆದಂತಾಯಿತು. “ ಸರಿ ಸರ್. ಹೆಚ್ಚು ಹೊತ್ತು ನಿಂತೇ ಇರೋದು ಕಷ್ಟ. ಚೇರ್ ಹಾಕಸಿ ಸರ್” ಎಂದೆ. ಚೇರ್ ಬಂದ ಮೇಲೆ ಕುಳಿತು ಎಲ್ಲರನ್ನೂ ಹಾಗೇ ವೀಕ್ಷಿಸುತ್ತಿದ್ದೆ.

ನಂತರ ಸಿಪಾಯಿ ಓಡುತ್ತ ಬಂದ. “ಮೇಡಂ ಸ್ಕಾಡ್ ಬಂದ್ರು…ಸ್ಕಾಡ್ ಬಂದ್ರು” ಎಂದು ಹೇಳುತ್ತ ಹೋದ. ನಾನು “ಬರಲಿ ಬಿಡು. ಅದಕ್ಕೇಕೆ ಇಷ್ಟು ಹೆದರ್ತೀರಿ. ನಾವೇನೂ ಕಾಪಿ ಮಾಡಸ್ತಿಲ್ವಲ್ಲಾ.” ಎಂದು ಗತ್ತಿನಿಂದ ಚೇರ್ ಹತ್ತಿರವೇ ಒಂದು ಕಡೆ ನಿಂತೆ. ವಿದ್ಯಾರ್ಥಿಗಳು ಸಿಪಾಯಿ ಮಾಡಿಕೊಂಡ ಟೆನ್ ಶನ್ ಗೇನೆ ಹೆದರಿಕೊಂಡು ಬರಿಯೋದು ಬಿಟ್ಟು, ತಮ್ಮ ಸುತ್ತ ಮುತ್ತ ಚೀಟಿ ಇವೆ ಏನೋ ಎಂದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೊರಳಾಡತೊಡಗಿದರು. ನನಗದು ಹೊಸ ತಲೆನೋವಾಯ್ತು. “ಏನು ಇಲ್ರೋ ಮಾರಾಯ್ರೇ… ಸುಮ್ನೆ ಬರೀರಿ. ಹೊರಳಾಡಿದ್ರೆ ಚೆಕಿಂಗ್ ಪ್ರಾರಂಭ ಆಗತ್ತೆ.” ಎಂದು ಗದರಿಸಿದೆ. ಬರೆಯತೊಡಗಿದರು. ಸ್ಕಾಡ್ ಒಳಗೆ ಬಂದವರೇ ಒಂದು ಗಸ್ತು ತಿರುಗುತ್ತಿರುವಾಗ ಮೂಲೆಯ ಒಬ್ಬ ಹುಡುಗನ ಹತ್ತಿರ ಬಿದ್ದಿದ್ದಒಂದು ಕಾಪಿ ಚೀಟಿ ಅವರನ್ನೇ “ಯಾಕ್ರೀ ಸರ್ ಅರಾಮದೀರಿ…..?” ಅನ್ನುವಂತೆ ಅವರನ್ನೇ ನೋಡಬೇಕೆ…? ಅದನ್ನು ಅವರು ಕೈಗೆತ್ತಿಕೊಂಡ ತಕ್ಷ ಣ ನನ್ನ ಎದೆ ಊರಿಗೇ ಕೇಳುವಂತೆ ಬಡಿಯ ತೊಡಗಿತು. ಕಾಲು ಮೆಲ್ಲಗೆ ಕಂಪಿಸ ತೊಡಗಿದವು. ಆಯ್ತು ಇವತ್ತು ನನ್ನ ಗ್ರಹಚಾರ ಕೆಟ್ಟಿದೆ ಎಂದು ಕೊಂಡು ಅವರ ಮುಖವನ್ನೇ ನೋಡತೊಡಗಿದೆ. “ಏನ್ರಿ ಮೇಡಂ ಹೇಗೆ ಮೇಲ್ವಿಚಾರಣೆ ಮಾಡತೀರಿ. ಮೂಲೇಲಿ ಒಂದು ಚೇರ್ ಹಾಕ್ಕೊಂಡು ಕುಳಿತ್ರೆ ಮುಗೀತಾ? ಅಡ್ಡಾಡಿ ನೋಡ ಬೇಕು “ ಎಂದಾಗ ಕಲ್ಲನ್ನು ನೇರವಾಗೇ ನನ್ನ ಮುಖಕ್ಕೇ ಹೊಡೆದ ಹಾಗಾಯ್ತು. ನಾ ಮಾತ್ರ ಚೀಫ್ ರನ್ನು ತಿನ್ನುವಂತೆ ನೋಡಿದೆ. ಆದರೆ ಅವರು ನನ್ನನ್ನು ನೋಡಲೇ ಇಲ್ಲ. ಆ ವಿದ್ಯಾರ್ಥಿಯೋ ರಂಪವನ್ನೇ ಪ್ರಾರಂಭಿಸಿದ. “ ಅಯ್ಯೋ ಸರ್ ನಮ್ಮಪ್ಪನ ಆಣೆಗೂ ಇದು ನನ್ನದಲ್ಲ. ಯಾರದೋ ನಂಗೊತ್ತಿಲ್ಲ. ನನ್ನನ್ನ ಡಿಬಾರ್ ಮಾಡಬೇಡಿ” ಅಂತ ಜೋರಾಗಿ ಅಳ ತೊಡಗಿದ. ಸ್ಕಾಡ್ ಬಂದವರು ಚೀಟಿ ನೋಡಲು ನನ್ನ ಕೈಗೇ ಕೊಟ್ಟರು.
ನಾ ಅದನ್ನ ತೆಗೆದ್ರೆ ಅದರಲ್ಲಿ ಇಂಗ್ಲೀಷ್ ಪೋಯಮ್ ಇದೆ. ಪರೀಕ್ಷೆ ನಡೆದದ್ದು ಗಣಿತ. ಇಂಗ್ಲೀಷ ಪೇಪರ್ ಗೆ ಇನ್ನೂ ನಾಕು ದಿನ ಬಾಕಿ ಇತ್ತು. ನಾವೇ ಫಾಸ್ಟು ಅಂದ್ರೆ ಇವರು ನಮಗಿಂತ ಫಾಸ್ಟು ಅನಸಿ ಸಾಹೇಬ್ರು ಮರು ಮಾತಾಡದೆ ಹೊರಟು ಹೋದರು. ಇಷ್ಟರ ಮೇಲೆ ನನಗೆ ಗೊತ್ತಾಯ್ತು, ಹೊರಗಿನಿಂದ ಕಾಪಿ ಕೊಡಲು ಬರುವವರಿಗೇ ಎಷ್ಟು ವಿಷಯ ಜ್ಞಾನ ಇದೆ ಅಂತಾ. ಅವರು ಕೇಂದ್ರದಲ್ಲಿ ಇರುವ ವರೆಗೆ ಚೀಫ್ ನಿಂದ ಹಿಡಿದು ಪೋಲೀಸ್ ವರೆಗೆ ಎಲ್ಲರಿ ಗೂ ತುಂಬಾ ನಿರಾಳ. ಅರ್ಧ ಗಂಟೆ ಬಿಟ್ಟು ಜೀಪ್ ಹೊರಡಲು ಪ್ರಾರಂಭಿಸಿತು. ನನಗೆ ಮತ್ತೆ ತಳಮಳ ಪ್ರಾರಂಭ. “ ಹೋಗ ಬೇಡಿ ಸಾಹೆಬ್ರೆ, ಕೇಂದ್ರ ಬಿಟ್ಟು. ಒಂದು ತಾಸಿನಲ್ಲೇ ರಿಪೋರ್ಟ ಕೊಟ್ಟು” ಎಂದು ಹಾಡ ಬೇಕಿನಿಸಿತು. ಆದರೆ ನೋಡ ನೋಡುತ್ತಲೇ ಜೀಪ್ ಕಣ್ಮರೆ ಆಯಿತು.

ಅಷ್ಟೊತ್ತಿನ ಒರೆಗೆ ತಮ್ಮ ತಮ್ಮ ಗೂಡು ಸೇರಿದ್ದ ಹಕ್ಕಿ – ಪಕ್ಷಿ, ನವಿಲು, ಸಾರಂಗ, ಜಿಂಕೆ, ಮಂಗಗಳೆಲ್ಲವೂ ಗೂಡುಬಿಟ್ಟು ಹೊರಬಂದು ಮತ್ತೆ ಕೇಂದ್ರದ ಸುತ್ತ ಹಾರಾಡ ತೊಡಗಿದವು. ಮೊದಲಿನ ಸಾರಿ ವಿನಂತಿ ಮಾಡಿಕೊಂಡಿದ್ದ ಅವುಗಳ ಬಳಿ ಈಗ ಸಮಯ ಇರಲಿಲ್ಲ. ಮಾಡು ಇಲ್ಲವೇ ಮಡಿ ಪರಿಸ್ಥಿತಿ. ನೇರವಾಗಿ ನನ್ನೊಡನೆ ಯುದ್ದಕ್ಕೆ ಇಳಿದರು. “ ಯಾಕ್ರೀ ಮೇಡಂ . ಸೀದಾ ನೆಟ್ಟಗ ಮನೀಗೆ ಹೋಗಬೇಕಂತೀರೇ ಇಲ್ಲ? ತುಗೋರಿ ಈ ಚೀಟಿ ಮರ್ಯಾದಿ ಇಂದ ಆ ಹುಡುಗರಿಗೆ ಕೊಡ್ರಿ” ಆ ಹುಡುಗರ ಹೆಸರ ಹೇಳ ತೊಡಗಿದರು. ಸಿಸಿ ಕ್ಯಾಮರಾ ಮೊದಲು ಮುಸಿ ಮುಸಿ ನಕ್ಕಿದ್ದು ಈಗ ಗಹಗಹಿಸಿ ನಗ ತೊಡಗಿತು. ನನ್ನ ಮೈಯಲ್ಲಿ ವೀರ ಣಕೆ ಓಬವ್ವನೇಅವತರಿಸಿ ಬಂದಂತೆ ಚೀಪ್ ಅವರನ್ನು ಕೂಗಿ ಕರೆದು ದೂರು ನೀಡಿದೆ. ಪೋಲೀಸರು ಕೆಳಗೆ ಓಡಿ ಬಂದರು. ಅವರಿಗಂತೂ ಜನರ ಜೊತೆ ಮುಟ್ಟಾಟ ಆಡಿ ಆಡಿ ಸಾಕಾಗಿತ್ತು. ಮತ್ತೆ ಒಂದು ಕ್ಷಣ ಜೋರಾಗಿ ಮಳೆ ಬಂದು ನಿಂತಂತೆ ಎಲ್ಲವೂ ಸ್ಥಬ್ದ. ಮತ್ತೆ ಕಾಲು ಘಂಟೆ ನಂತರ ಮತ್ತೊಬ್ಬ ಕಿಟಕಿ ಬಳಿ ಬಂದ. ಆತನಿಗೆ ಗೊತ್ತಾಗಿತ್ತು, ಜಗತ್ತಿನ ಲ್ಲ ವೀರ ವನಿತೆಯರೂ ಈ ಎಮ್ಮನ ಮೈಯಲ್ಲೇ ಅವತರಿಸಿದ್ದಾರೆ ಎಂದು. …! ಇಲ್ಲಿ ತಮ್ಮ ಪೊಗರಿನ ಆಟ ನಡೆಯುವುದಿಲ್ಲ. ಏನಿದ್ದರೂ ಇವಳಲ್ಲಿನ ವೀರ ರಸವನ್ನು ಶಾಂತ ಮಾಡಿ, ಕರುಣಾ ರಸ ವನ್ನು ಚಿಮ್ಮಿಸ ಬೇಕೆಂದು ಕೆಳಗಿನವರೆಲ್ಲ ಮೀಟಿಂಗ್ ಮಾಡಿ, ಮಹಾಭಾರತದಲ್ಲಿ ಕೌರವ ಪಾಂಡವರ ನಡುವೆ ಸಂಧಾನಕ್ಕೆ ಕೃಷ್ಣ ಬಂದಂತೆ ಈತ ಕಿಡಕಿಯಲ್ಲಿ ದುತ್ತೆಂದು ಅವತರಿಸಿದ್ದ. ಮತ್ತೆ ನಾನು ಕಣ್ಣು ಕೆಂಪಗೆ ಮಾಡಿ “ ಏನು?” ಅಂದೆ. “ ನೋಡಿ ಮೇಡಂ. ಅಲ್ಲಿ ಕುಳಿತಿದ್ದಾನಲ್ಲ ಆತ ಅನಾಥ. ಹುಟ್ಟು ವಾಗ್ಲೆ ತಂದೆ ತಾಯಿ ತೀರಿ ಹೋದರು. ಸಂಭದಿಕರೂ ಸಂಬಂಧನೇ ಇಲ್ಲದಂತೆ ಓಡಿಹೋದ್ರು. ನಾವೇ ಊರಿನ ಮಗ ಅಂತ ಊರಿನವರೆಲ್ಲ ಸೇರಿ ಬೆಳೆಸಿದ್ವಿ. ಮಗಾ ಬೆಳಿಗ್ಗೆ ಅರ್ಧ ದಿನ ಕೂಲಿ ಮಾಡಿ ಶಾಲಿಗೆ ಹೋಗತ್ತೆ. ದುಡದು ದುಡದು ಮದ್ಯಾನ್ಹ ಪಿರಿಯಡ್ನಲ್ಲೇ ನಿದ್ದಿ ಮಾಡ್ತಾನಂತೆ. ಈಗ ಇದೊಂದು ಪರೀಕ್ಷೆ ಪಾಸಾದ್ರೆ ಅವನ್ನ ಜೀವನಕ್ಕೆ ದಾರಿ ಆಗತ್ತೆ. ದಯವಿಟ್ಟು ಅವನ್ನ ಪಾಸ್ ಮಾಡಸ್ರಿ ಮೇಡಂ” ಅಂತ ಇನ್ನು ಎನೇನ ಹೇಳುವವನಿದ್ದನೋ ಕೆಳಗಿನಿಂದ ಪೋಲೀಸ್ ಲಾಠಿ ಬೀಸಿದ್ದೇ ತಡ ಚಂಗನೇ ಜಿಗಿದು ಮಾಯವಾದ. ಆಗಲೇ ನನ್ನೊಳಗಿನ ವೀರ ವನಿತೆ ಹೇಳದೆ ಕೇಳದೆ ಮಾಯವಾಗಿದ್ದಳು . ಮಾತೃ ಹೃದಯದಲ್ಲಿ ಕರುಣ ರಸ ಜಿನುಗುತ್ತಿತ್ತು. ಆದರೆ ನನಗೂ ನನ್ನದೇ ಆದ ಪರಿಧಿ ಇತ್ತು. ನಾನು ದೇವರ ಮೊರೆ ಹೋಗದೆ ಬೇರೆ ದಾರಿ ಇರಲಿಲ್ಲ. ಕಾಯಕವೇ ಕೈಲಾಸ ಎಂದ ಬಸವಣ್ಣನ ಬಳಿಯೇ ಇದಕ್ಕೆ ಪರಿಹಾರ ದುಕೊಂಡು” ಕಾಪಿ ಚೀಟಿ ಕಾಣದಂತೆ ಕುರುಡನ ಮಾಡಯ್ಯ ತಂದೆ. ಉತ್ತರಗಳು ಕೇಳದಂತೆ ಕಿವುಡನ ಮಾಡಯ್ಯ ತಂದೆ. ಕೊಠಡಿಯಲ್ಲಿ ಸುತ್ತದಂತೆ ಹೆಳವನ ಮಾಡಯ್ಯ ತಂದೆ…..” ಪರೀಕ್ಷೆ ಮುಗಿಯುವವರೆಗೆ ದೇವರನ್ನು ಸ್ಮರಿಸ ತೊಡಗಿದೆ. ಆ ಹುಡುಗನಿಗೆ ನಿಜವಾದ ತೊಂದರೆ ಇದ್ದರೆ ನಾನು ವೈಯಕ್ತಿಕ ವಾಗಿ ಹಣ, ಆಹಾರ, ಬಟ್ಟೆ, ಕೆಲಸ ಕೊಡಬಲ್ಲೆ. ಆದರೆ ಇದು ಸರಕಾರದ ಕೆಲಸ. ದೇವರೇ ಎಲ್ಲರನ್ನು ಕಾಪಾಡಬೇಕು. ಆತ ನನಗೆ ಮಾಡಲು ಹೇಳಿದ್ದು ಅತಿಮಾನುಷ ಕೆಲಸ ಎಂದು ಸಮಯ ದೂಡುತ್ತಿರುವಾಗ ಪರೀಕ್ಷೆ ಮುಗಿದ ಬೆಲ್ ಕೇಳಿಸಿತು.

ನಾನು “ಹಾ…! ಪೇಪರ್ ಮುಗಿತು. ಬೇಗ ಬೇಗ ಪೇಪರ್ ಕೊಡಿ” ಎಂದು ಬಡಬಡಿಸುತ್ತಾ ಹಾಸಿಗೆಯಮೇಲೆ ಮಲಗಿದ ಗಂಡ, ಮಕ್ಕಳನ್ನು ಬಡಿಬಡಿದು ಪೇಪರ್ ಎನ್ನತ್ತಿದ್ದೇನೆ…..ಪತಿರಾಯರು ನಿದ್ದೆ ಭಂಗ ಮಾಡಿದ್ದಕ್ಕೆ ಶಪಿಸುತ್ತ,”ಏ! ತಲೆ ಕೆಟ್ಟಿದೆಯೇನೆ….ಮಕ್ಕಳಿಗಿಲ್ಲದ ಪರೀಕ್ಷಾ ಭಯ ನಿನಗೇ ಹೆಚ್ಚಾಗಿದೆ. ಏನು ಕನಸು ಕಂಡೆ. ಸುಮ್ನೆ ಮಲಗಬಾರದಾ” ಅಂದಾಗ ನನ್ನ ಮುಖ ನಾಚಿಕೆಯಿಂದ ಪೆಚ್ಚಾಗಿ, ಬೇಸಿಗೆಯ ಝಳದಲ್ಲೂ ಚಾದರ ಹೊದ್ದು ಮಲಗಿದೆ. ಚಿಕ್ಕಂದಿನಿಂದ ಯಾವ ಗುಮ್ಮಕ್ಕೂ ಅಂಜದಿದ್ದ ನಾನು ಈ ಗುಮ್ಮಕ್ಕೆ ಅಂದು ಅಂಜಿದ್ದೆ.
ಶೀಲಾ. ಗೌಡರ. ಬದಾಮಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಎಂ.ಎಚ್. ಮೊಕಾಶಿ ಉಪನ್ಯಾಸಕರು ವಿಜಯಪುರ
ಎಂ.ಎಚ್. ಮೊಕಾಶಿ ಉಪನ್ಯಾಸಕರು ವಿಜಯಪುರ
4 years ago

ಶೀಲಾ ಗೌಡರವರ ಕೊಠಡಿಯ ಮೇಲ್ವಿಚಾರಣೆ ಲೇಖನವು ಇಂದಿನ ಪರೀಕ್ಷಾ ಪದ್ದತಿಯನ್ನು ಓರೆ ಹಚ್ಚುವಂತಿದೆ. ಇದು ಇವರ ಕನಸಾದರೂ ಪ್ರಸ್ತುತ ಪರೀಕ್ಷಾ ಪದ್ದತಿ ಕುರಿತು ಆಳವಾದ ವಿಚಾರಗಳನ್ನು ಬಹಳ ಸುಂದರವಾಗಿ ವ್ಯಕ್ತಪಡಿಸಿದ್ದಾರೆ.

1
0
Would love your thoughts, please comment.x
()
x