ಪುಟ್ಟಿಯ ಬೆಂಗಳೂರು: ನಾಗರಾಜನಾಯಕ ಡಿ.ಡೊಳ್ಳಿನ


ಬೆಂಗಳೂರು ಅಂದರೆ ಚಿಕ್ಕಂದಿನಿಂದಲೂ ನಮಗೆ ಆಕರ್ಷಣೆ. ಅಲ್ಲಿನ ಮೆಜೆಸ್ಟಿಕ್, ಗಾಂಧಿನಗರ, ವಿಧಾನಸೌಧ, ಉದ್ಯೋಗಸೌಧ, ಹೈಕೋರ್ಟು, ಕಬ್ಬನ ಉದ್ಯಾನವನದಲ್ಲಿನ ಗ್ರಂಥಾಲಯ, ಲಾಲಬಾಗ್, ಬನ್ನೇರುಘಟ್ಟ, ನೆಹರು ತಾರಾಲಯ, ರವೀಂದ್ರ ಕಲಾಕ್ಷೇತ್ರ ಹೀಗೆ ಒಂದೇ ಎರಡೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಚಿಕ್ಕವನಿದ್ದಾಗ ಬೆಂಗಳೂರು ಕಾಡಿದ್ದು ಸುಳ್ಳಲ್ಲ. ಅಪ್ಪ ಬೆಂಗಳೂರಿಗೆ ಹೋದಾಗಲೆಲ್ಲ ನಮಗಾಗಿ ಚೆಂದನೆಯ ಆಟಿಕೆ, ಶಾಲಾ ಬ್ಯಾಗಗಳನ್ನು ತರುತ್ತಿದ್ದರಿಂದಲೋ ಏನೋ ನಮಗೆ ಬೆಂಗಳೂರಿನ ಬಣ್ಣ ಬಣ್ಣದ ಕಲ್ಪನೆಗಳು ಮೂಡುವಂತೆ ಮಾಡಿದ್ದು. ಆದರೆ ಆ ಕಲ್ಪನೆಗಳು ನಾವು ಪ್ರೌಢಾವಸ್ಥೆಗೆ ತಲುಪಿ ಬೆಂಗಳೂರು ಹೊರಟಮೇಲೂ ಇರುವುದು ಸುಳ್ಳಲ್ಲ. ಮೆಜೆಸ್ಟಿಕ್ ರಸ್ತೆ ದಾಟುವ ನೆಲಮಹಡಿಯಲ್ಲೆ ಆಟಿಕೆ, ಅಲಂಕಾರಿಕ ವಸ್ತುಗಳು, ಟೀಶರ್ಟ, ಚಪ್ಪಲಿ ನೆಲಮಹಡಿಯೇ ಮಿನಿ ಮಾರುಕಟ್ಟೆ ಯಾಗಿರುತ್ತದೆ. ಬೆಂಗಳೂರು ಅಂದರೆ ರಾಜ್ಯಧಾನಿ, ಉದ್ಯಾನ ನಗರಿ, ಗಾಂಧಿನಗರ, ವಿಧಾನ ಸೌಧ,ಮಾರುಕಟ್ಟೆ, ಮಾಯಾನಗರಿ,ಹೈಕೋರ್ಟ, ಸಿಲಿಕಾನ್ ಸಿಟಿ, ಮಾಲ್, ಅಲ್ಲಿನ ಬಹುಮಹಡಿ ಕಟ್ಟಡಗಳು ಹೀಗೆ ಅವರ ಅವರ ಭಾವಕ್ಕೆ ಅವರವರ ಭಕುತಿಗೆ ಬೆಂಗಳೂರು ಕಾಣಿಸುತ್ತದೆ. ಅವರವರ ಕಲ್ಪನೆಯಲ್ಲಿನ ಬೆಂಗಳೂರು ಅವರಿಗೆ ಚೆಂದ. ಬೆಂಗಳೂರಿನೊಂದಿಗೆ ನಮ್ಮ ನಿಮ್ಮೆಲ್ಲರದು ಒಂದು ಬಗೆಯ ನಂಟು, ಅದು ಕಛೇರಿಯದಾಗಿರಬಹುದು, ವೈಯಕ್ತಿಕದ್ದಾಗಿರಬಹುದು. ನಮ್ಮ ಅಪ್ಪ ಅಮ್ಮನೊಂದಿಗೆ ನೋಡಿದ ಬೆಂಗಳೂರು ಆಗಿರಬಹುದು.

ನಾವೆಲ್ಲಾ ಚಿಕ್ಕಂದಿನಲ್ಲಿ ಬೇಸಿಗೆಯ ರಜಾ ದಿನಗಳನ್ನು ಕಳೆಯುತ್ತಿದ್ದದ್ದು ನಮ್ಮ ಅಜ್ಜಿ ಊರಲ್ಲಿ. ಅಲ್ಲಿ ನಮಗೆ ನಮ್ಮ ತಾಯಿ ತಂಗಿ ( ಚಿಕ್ಕಮ್ಮ) ಬೆಂಗಳೂರಿಂದ ಬರುತ್ತಿದ್ದರಿಂದ, ಅವರನ್ನು ಬೆಂಗಳೂರು ಆಂಟಿ ಅಂತಲೇ ಕರೆಯುತ್ತಿದ್ದೆವು. ಅವರು ಹೇಳುತ್ತಿದ್ದ ಬೆಂಗಳೂರು ನಮಗೆ ಆಕರ್ಷಿಸುತ್ತಿದ್ದದ್ದು ಅಷ್ಟೇ ಅಲ್ಲ ಕಲ್ಪನೆಯನ್ನು ಮೂಡುವಂತೆ ಮಾಡುತ್ತಿದ್ದವು. ಇನ್ನು ನಮ್ಮ ಚಿಕ್ಕಮ್ಮ ಶಿಕ್ಷಕಿಯಾಗಿದ್ದರು ಅವರು ಯಾವಗಲೂ ನಾನು ಹೋಗುವ ಶಾಲೆಯ ದಾರಿಯಲ್ಲೆ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ ಅವರ ಮನೆ ಐತಿ ಅಂತ ಹೇಳಿ ನಮ್ಮ ಹೊಟ್ಟೆ ಉರಿಸುತ್ತಿದ್ದರು. ಮೊನ್ನೆ ನಮ್ಮ ಮನೆ ಹತ್ತಿರವೇ ನಟ ಅಂಬರೀಷ, ಉಮಾಶ್ರೀ ಅವರ ದೃಶ್ಯ ಚಿತ್ರೀಕರಣವಾಯಿತೆಂದು ಹೇಳಿದಾಗ ಬರೀ ಹೇಳುತ್ತಾರೆ ಒಂದ್ಸಲಾನೂ ತೋರಸಲ್ಲ ಅಂತ ಮುನಿಸುಕೊಳ್ಳುತ್ತಿದ್ದೆವು. ಇತ್ತೀಚಿಗೆ ನಿಧನರಾದ ಎಸ್. ಮಾಲತಿ ಅವರ ನಿರ್ದೇಶನದಲ್ಲಿ ಕೊಪ್ಪಳದ ಸಮುದಾಯವರೊಂದಿಗೆ ಪ್ರೊ ಜಿ.ಕೆ ಗೋವಿಂದರಾವ ಅವರ ಈಶ್ವರ ಅಲ್ಲಾ ನಾಟಕವನ್ನು ಕೊಪ್ಪಳದ ನೃಪತುಂಗ ವೇದಿಕೆಯಲ್ಲಿ ಪ್ರದರ್ಶನವಾಗಿತ್ತು. ಆ ನಾಟಕದಲ್ಲಿ ನಾನು ಬಾಲನಟ. ಆಗಿನ್ನು ಎರಡನೇ ತರಗತಿಯಲ್ಲಿದ್ದದ್ದು. ಕೊಪ್ಪಳದ ಪ್ರದರ್ಶನದ ನಂತರ ಆ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಸಜ್ಜಾಯಿತು. ನಿರ್ದೇಶಕರಾದ ಮಾಲತಿ ಮೇಡಂ ಅವರು ಬೆಂಗಳೂರಿಗೆ ಬಾ ಅಂತ ಹೇಳಿ ಹೋಗಿದ್ದರು. ಕೊಪ್ಪಳದ ಹಿರಿಯರು, ನಾಟಕದ ಪಾತ್ರಧಾರಿಗಳೆಲ್ಲಾ ಬೆಂಗಳೂರಿಗೆ ಹೋಗಲು ಸಜ್ಜಾಗಿದ್ದರು. ಆದರೆ ಅಪ್ಪಾಜಿ ಅಂದು ಕೆಲಸದ ನಿಮಿತ್ಯ ರಾಯಚೂರಿಗೆ ಹೋಗಿದ್ದರಿಂದ ಅಮ್ಮ ಅಪ್ಪನ ಕೇಳದೆ ಹ್ಯಾಗ ಕಳಿಸಲಿ ಎಂದು ಅಸಹಾಯಕಳಾಗಿ ನನ್ನನ್ನು ಕಳಿಸಲಿಲ್ಲ. ಅಮ್ಮ ಕಳಿಸದಿದ್ದ ಮುನಿಸು ನನ್ನೊಳಗೆ ಸುಮಾರು ವರ್ಷಗಳವರೆಗಿತ್ತು, ಆಗಾಗ ಸ್ಪೋಟವು ಆಗುತ್ತಿತ್ತು.

ನಮ್ಮ ನಿಮ್ಮೊಳಗೆ ಈ ತರಹದ ಸಾಕಷ್ಟು ಪ್ರಸಂಗಗಳು ಬೆಂಗಳೂರಿನೊಂದಿಗಿವೆ. ಕಾಲಚಕ್ರ ಊರುಳಿದಂತೆ ನಾವು ಬೆಳೆದಂತೆ ಕೆಲಸದ ನಿಮಿತ್ಯ ಬೆಂಗಳೂರಿಗೆ ಸಾಕಷ್ಟು ಬಾರಿ ಬಂದು ಹೋದರು ಆಕರ್ಷಣೆ ಮಾತ್ರ ಕುಂದಿಲ್ಲ. ಎರಡನೇ ತರಗತಿಯಲ್ಲಿ ದ್ದಾಗಲೇ ಬೆಂಗಳೂರಿನಲ್ಲಿ ನಾಟಕ ಪ್ರದರ್ಶನದಲ್ಲಿ ತಪ್ಪಿದ ಅವಕಾಶ, ಮತ್ತೆ ದೊರೆತದ್ದು ಪದವಿ ಓದುವಾಗ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಾಲೇಜು ರಂಗ ತಂಡದಿಂದ ಶಿವನಾಯಕ ದೊರೆ ನಿರ್ದೇಶನದಲ್ಲಿ ಗೆಳೆಯ/ ಗೆಳತಿಯರೊಂದಿಗೆ, ಪರನಾರಿ ಸಹೋದರ ಗಂಡುಗಲಿ ಕುಮಾರರಾಮ ನಾಟಕ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನವಾಗಿತ್ತು. ಆ ಪ್ರದರ್ಶನಕ್ಕೆ ಅಂದು ಚಿಕ್ಕವನಿದ್ದೀ ಅಂತ ಬೇಡ ಅಂದಿದ್ದೆ ಈಗ ಹೋಗಿ ಬಾ ಅಂತ ಆಶೀರ್ವದಿಸಿ ಕಳುಹಿಸಿದ್ದಳು ಅಮ್ಮ. ಇದೀಗ ಅದೆಷ್ಟು ಬಾರಿ ಬೆಂಗಳೂರಿಗೆ ಬಂದು ಹೋಗಿದ್ದೇನೊ ಲೆಕ್ಕವೂ ಇಟ್ಟಿಲ್ಲ.

ಇತ್ತೀಚೆಗೆ ಅಕ್ಕ ಗಾಯತ್ರಿಗೆ ಮೂಲ ದಾಖಲಾತಿ ಪರಿಶೀಲನೆಗೆ ದಿನಾಂಕ ನಿಗದಿಯಾಗಿತ್ತು. ಅಕ್ಕನ ನೌಕರಿ ವಿಷಯವಾಗಿ ಬೆಂಗಳೂರಿಗೆ ಹೋಗಬೇಕಾಯಿತು. ಮಾಮನದು ಬಿಡುವಿಲ್ಲದ ಕೆಲಸವಿದ್ದುದರಿಂದ ನಾನು ಅಕ್ಕನೊಂದಿಗೆ ಬೆಂಗಳೂರಿಗೆ ಹೊರಟೆ ನಮ್ಮ ಮನೆಯ ಕಿರಿಯ ಸದಸ್ಯೆ ಅಕ್ಕನ ಮಗಳು ದಿಶಾ. ಸಣ್ಣವಳು ಅಂತ ಅವಳನ್ನು ನಮ್ಮೊಂದಿಗೆ ದಿಶಾ ಮತ್ತು ಅವಳ ಅಣ್ಣ ಯಶವಂತನು ಬಂದಿದ್ದ. ಸರಿ ಬೆಂಗಳೂರು ತಲುಪಿದ್ದು ಆಯಿತು. ಮೂಲ ದಾಖಲಾತಿ ಪರಿಶೀಲನೆ ಇದ್ದದ್ದು ಬಹುಮಹಡಿ ಕಟ್ಟಡದಲ್ಲಿ ಅಲ್ಲಿಗೆ ಬಂದು ಅಕ್ಕನನ್ನು ಒಳಗೆ ಕಳುಹಿಸಿದೆ. ನಾನು ದಿಶಾ ಯಶವಂತನೊಂದಿಗೆ ಕುಳಿತೆವು. ಮೊದಮೊದಲು ಆಟವಾಡಿದ ದಿಶಾ, ಸಮಯವಾಗುತ್ತಾ ಹೋದಂತೆ ಬಾ ಮಾಮ ಬೆಂಗಳೂರಿಗೆ ಹೋಗೊಣ ಅಂದಳು. ನಾನು ಇದೇ ಬೆಂಗಳೂರು ಪುಟ್ಟಿ, ಅಂದರೆ ನಂಬುತ್ತಿಲ್ಲ. ಈಲ್ಲಾ ಪಪ್ಪಾ ಹೇಳಿದಾರೆ ಬೆಂಗಳೂರಿಗೆ ಕರಕೊಂಡು ಹೋಗಿ ಅಂತಾ ಬಾ ಹೋಗೊಣ ಅಂತ ಪುಟಾಣಿ ಬಾಯಲ್ಲಿ ಕೇಳುತ್ತಲೇ ಇದ್ದಳು. ನಾನು ಅವಳಿಗೆ ವಿಧಾನಸೌಧ ತೋರಿಸಿ ನೋಡು ಇದೇ ಬೆಂಗಳೂರು ಅಂದರು, ಮುನಿಸು ಸಡಿಲಿಸಲಿಲ್ಲ. ನಾನು ಇವಳ ಆಕರ್ಷಣೆಯ ಬೆಂಗಳೂರು ಯಾವುದೆಂದು ತಿಳಿಯಲು ಕೇಳಿದರೆ. ಕಳೆದ ಬಾರಿ ಕೆ.ಪಿ.ಎಸ್.ಸಿ ಯಲ್ಲಿ ನಡೆದ ಮೂಲ ದಾಖಲಾತಿ ಪರಿಶೀಲನೆಗೆ ಬಂದಾಗ ಅವಳನ್ನು ಮಂತ್ರಿಮಾಲ್ ಗೆ ಕರೆದೊಯ್ದಿತ್ತು. ಅವಳ ಪ್ರಕಾರ ಅದು ಬೆಂಗಳೂರು. ಕೊನೆಗೆ ಬಹುಮಹಡಿ ಕಟ್ಟಡದಲ್ಲಿ ಕರ್ತವ್ಯ ನಿತರರಾಗಿದ್ದ ಪೊಲೀಸರು ಪುಟ್ಟಿ ಇದೇ ಬೆಂಗಳೂರು. ನಿನಗೆ ಮತ್ತ್ಯಾವ ಬೆಂಗಳೂರು ಬೇಕಮ್ಮಾ ಅಂತ ಎತ್ತಿ ಮುದ್ದಾಡಿದ್ದರು.

ನಾನು ಇಲ್ಲ ಅವಳನ್ನು ಕಳೆದ ಬಾರಿ ಬೆಂಗಳೂರಿಗೆ ಬಂದಾಗ ಮಂತ್ರಿ ಮಾಲ್ ಗೆ ಹೋಗಿತ್ತು. ಅದನ್ನು ಹೇಳುತ್ತಿದ್ದಾಳೆ ಅಂದಿದ್ದಕ್ಕೆ ಪೊಲೀಸರು ನಕ್ಕು ಇವಳ ಬೆಂಗಳೂರೇ ಚೆಂದ. ನಿನ್ನ ಮಾಮನ ಬಿಡಬೇಡ ಸರ್ ನೀವು ಪುಟ್ಟಿನ ಬೆಂಗಳೂರಿಗೆ ಕರೆದುಕೊಂಡು ಹೊಗಲೇಬೇಕು ಅಂತಾ ಹೇಳಿ, ಅಲ್ಲಿಯವರೆಗೂ ಅಭ್ಯರ್ಥಿಗಳನ್ನು ಮಾತ್ರ ಒಳಗಡೆ ಬಿಡುತ್ತಿದ್ದ ಪೊಲೀಸರು ಇವಳ ಆಟ ನೋಡಿ ಅವರ ತಾಯಿ ಬಳಿ ಹೋದರೆ ಸುಮ್ಮನಾಗಬಹುದು ಅಂತ ನಮಗೂ ಒಳಗಡೆ ಹೋಗಲು ಪ್ರವೇಶವಕಾಶ ದೊರೆಯಿತು. ಅಂದು ದಾಖಲಾತಿಗೆ ಬಹಳ ಜನ ಬಂದಿದ್ದರಿಂದ ಮಧ್ಯಾಹ್ನ ಊಟದ ನಂತರವೂ ದಾಖಲಾತಿ ಪರಿಶೀಲನೆ ನಡದೆ ಇತ್ತು. ನಾನು ದಿಶಾಳನ್ನು ಸಂತೈಸಲು ಅದೆಷ್ಟು ಬಾರಿ ಲಿಫ್ಟ್ ಹತ್ತಿ ಇಳಿದೇನೂ ನನಗೆ ಗೊತ್ತಿಲ್ಲ. ಕೊನೆಗೆ ಸಂಜೆ ನಾಲ್ಕು ಮೂವತ್ತರ ಸುಮಾರಿಗೆ ದಾಖಲಾತಿ ಪರಿಶೀಲನೆ ಮುಗಿಸಿ, ಮೂಲದಾಖಲಾತಿಗಳನ್ನೆಲ್ಲಾ ಅವರಿಗೆ ಕೊಟ್ಟು ಬಂದರು ಅಕ್ಕ. ಅಷ್ಟೋತ್ತಿಗಾಗಲೇ ಕುಳಿತ ಖುರ್ಚಿಯಲ್ಲೇ ನಿದ್ದೆಗೆ ಜಾರಿದ್ದ ದಿಶಾ. ಅವಳಣ್ಣ ಯಶವಂತ ದಿಶಾ ಮಮ್ಮಿ ಬಂದರು ಅನ್ನುವ ಕೂಗಿಗೆ ಎಚ್ಚರವಾಗಿದ್ದು. ಅಲ್ಲಿಂದ ನಮ್ಮ ಮುಂದಿನ ಪಯಣ ವಿಧಾನಸೌಧದ ಮುಂಭಾಗದಲ್ಲಿರುವ ನಮ್ಮ ಮೆಟ್ರೊ ರೈಲು ನಿಲ್ದಾಣ ಪ್ರವೇಶಿಸಿ ಅಲ್ಲಿಂದ ನೇರವಾಗಿ, ದಿಶಾಳ ಬೆಂಗಳೂರಾದ ಮಂತ್ರಿಸ್ಕ್ವೇರ್ ಗೆ ಹೋದೆವು. ಮಂತ್ರಿ ಮಾಲ್ ಪ್ರವೇಶಿಸುತ್ತಿದ್ದಂತೆ ಬೆಂಗಳೂರು ಬಂತು ಬೆಂಗಳೂರು ಬಂತು ಅವಳ ಕುಣಿತ ನೋಡಿ ಅಕ್ಕ ಮತ್ತು ನಾನು ನಕ್ಕಿದ್ದು ಸುಳ್ಳಲ್ಲ. ಅವಳಿಷ್ಟದ ಬ್ಯಾಟರಿ ಚಾಲಿತ ಕಾರು ಸವಾರಿ, ಮಕ್ಕಳ ಆಟದ ಕೋಣೆ ಹೀಗೆ ಎಲ್ಲಾ ಆಟವಾಡಿದ ಅವಳು ಆಗ ಫುಲ್ ಖುಷಿಯಾಗಿದ್ದಳು. ಅವಳ ಖುಷಿ, ಕಲ್ಪನೆ ನೋಡಿ ನಾವು ನೀವು ಚಿಕ್ಕವರಿದ್ದಾಗ ಕಂಡ ಕಲ್ಪನೇಯೇ ಬೆಂಗಳೂರಿನಂತೆ. ದಿಶಾಳಿಗೆ ಮಂತ್ರಿ ಮಾಲ್ ಮಾತ್ರ ಬೆಂಗಳೂರು. ಅವಳ ಆಸೆಯೇ ಬೆಂಗಳೂರು ದುಬಾರಿಯೆನಿಸಿದರೂ, ದಿಶಾಳ ನಗುವಿನ ಮುಂದೆ ಆ ಖರ್ಚು ಹೊರೆಯಾಗಲಿಲ್ಲ.

ಎನೇ ಅನ್ನಿ ನಮ್ಮ ದಿಶಾಳ ಬೆಂಗಳೂರೇ ಚೆಂದ. ಈ ವಿಷಯವನ್ನು ಅಮ್ಮನಿಗೆ ತಿಳಿಸಿದ್ದೇ ತಡ ಅವರು ಮನಸಾರೆ ನಕ್ಕು. ಅಣ್ಣ ಮತ್ತು ಅಕ್ಕನ ಬೆಂಗಳೂರಿನ ವಿಷಯ ಪ್ರಾಸ್ತಾಪಿಸಿದರು. ನೀನು ಆಗಿನ್ನು ಚಿಕ್ಕವನೂ ವರುಷದವನಾಗಿದ್ದೆ. ನಿನ್ನ ಬೆಂಗಳೂರಿಗೆ ಕರೆದು ಕೊಂಡು ಹೋಗಲು ನಿರ್ಧರಿಸಿ. ನಿನ್ನ ಅಕ್ಕ ಮತ್ತು ಅಣ್ಣನನ್ನು ಹತ್ತಿರದ ಸಂಬಂಧಿಕರ ಮನೆಯಲ್ಲಿರಿಸಿ ಹೊರಡಲು ನಿರ್ಧರಿಸಿದ್ದೇವು. ಆದರೆ ನಿಮ್ಮ ಅಣ್ಣ ತಂಗಿಯನ್ನು ಕರೆದುಕೊಂಡು ಅಲ್ಲಿಂದ ಹೇಳದೆ ಕೇಳದೆ ಮರಳಿಬಂದಿದ್ದ. ಗೊಂಡಬಾಳ ವರೆಗೆ ಹೋಗಿ ಬಿಟ್ಟಬಂದರು ಮರಳಿ ಬಂದದ್ದು ಅಪ್ಪಾಜಿಗೆ ಸಿಟ್ಟು ತರಿಸಿತ್ತು. ಅಪ್ಪಾಜಿ ಸಿಟ್ಟಿಗೆ ಅಣ್ಣನಿಗೆ ಅಂದು ಕಟ್ಟಿಗೆಯಿಂದ ಪೂಜೆ ಆಗಿತ್ತು ಎಂದು ನೆನಪಿಸಿಕೊಂಡರು. ಕೊನೆಗೆ ನನ್ನ ಕಷ್ಟಕ್ಕೆ ಮಗನಮೇಲೆ ಕೋಪಿಸಿಕೊಂಡೆನ್ನೆಲ್ಲಾ ಎಂದು ಒಳಗೊಳಗೆ ಬೇಸರ ಪಟ್ಟುಕೊಂಡ ಅಪ್ಪಾಜಿ ಅವರನ್ನು ಕರೆದುಕೊಂಡು ಹೋಗಿದ್ದರು. ಅಮ್ಮನೊಂದಿಗೆ ಅಕ್ಕನು ಈ ಘಟನೆಯನ್ನು ನೆನಪಿಸಿಕೊಂಡು ಕೈಯಲ್ಲಿ ದುಡ್ಡಿಲ್ಲದಿದ್ದರೂ ನನ್ನ ಗೊಂಡಬಾಳನಿಂದ ಅಣ್ಣ ಕರೆದುಕೊಂಡು ಬಂದ ಧೈರ್ಯದ ಕುರಿತು ಮಾತನಾಡಿದಳು. ಅಂದು ದುಡಿಯುತ್ತಿದ್ದದ್ದು ಅಪ್ಪಾಜಿ ಒಬ್ಬರೇ ಖರ್ಚಿಗೆ ಹೆದರಿ ಬಿಟ್ಟು ಹೋಗಲು ನಿರ್ಧರಿಸಿ, ಕೊನೆಗೆ ಅಣ್ಣನ ಪ್ರತಿಭಟನೆಗೆ ಬೆಂಗಳೂರು ಕಾಣುವಂತಾಯಿತು ಎಂದು ನಕ್ಕರು. ಈಗ ಅಣ್ಣ ತಿಂಗಳಿಗೆ ಕನಿಷ್ಟ ಮೂರ್ನಾಲ್ಕು ಬಾರಿಯಾದರು ಬೆಂಗಳೂರಿಗೆ ಹೋಗುತ್ತಾನೆ. ಇದೇ ಬೆಂಗಳೂರಿನಲ್ಲಿ ಆತ ನಾಕೌಟ್ ರಿಯಾಲಿಟಿ ಶೋ,ನಲ್ಲಿ ಭಾಗವಹಿಸಿದ್ದು, ಖಾಸಗಿ ವಾಹಿನಿಗೆ ಸಂದರ್ಶನ ನೀಡಿ ಕೊಪ್ಪಳ ಜಿಲ್ಲಾ ವರದಿಗಾರನಾಗಿದ್ದು. ಇದೀಗ ಧಾರವಾಡದಲ್ಲಿ ವಾರ್ತಾಧಿಕಾರಿಯಾಗಿದ್ದಾರೆ.

ನಮ್ಮಲ್ಲಿರುವಂತೆ ನಿಮ್ಮೊಳಗೂ ನಿಮ್ಮ ಕಲ್ಪನೆಯ ಬೆಂಗಳೂರು ಇರಬಹುದು. ಅದಕ್ಕೆ ಮೊದಲೇ ಹೇಳಿದ್ದನ್ನಲಾ ಅವರವರ ಭಾವಕ್ಕೆ ಅವರವರ ಭಕುತಿಗೆ ಬೆಂಗಳೂರು ಬೇರೆ ಬೇರೆಯಾಗಿಯೇ ಕಾಣುತ್ತದೆ. ನಮಗ ಮಾತ್ರ ನಮ್ಮ ಪುಟ್ಟಿಯ ಬೆಂಗಳೂರು ಚೆಂದ . . .
ನಾಗರಾಜನಾಯಕ ಡಿ.ಡೊಳ್ಳಿನ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x