ರಾಜನ ಕಿವಿ ಕತ್ತೆ ಕಿವಿ – ಸಂಕೇತಳ ಸ್ವಾರಸ್ಯಕರ ಕತೆ : ಕೆ ಟಿ ಸೋಮಶೇಖರ ಹೊಳಲ್ಕೆರೆ.

ಕತೆಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಇಷ್ಟವೆ! ಅದರಲ್ಲೂ ಸ್ವಾರಸ್ಯಕರವಾದ ಕತೆಗಳು, ವಿಕ್ರಮ್ ಭೇತಾಳದಂತ ಕತೆಗಳು, ಅಲೌಕಿಕ ಕತೆಗಳು, ಹ್ಯಾರಿ ಪಾಟರ್ ನಂತಹ ಕತೆಗಳು, ಆಲಿಬಾಬಾ ಅರವತ್ತು ಕಳ್ಳರು, ಪಂಚತಂತ್ರದ ಕತೆಗಳು ತುಂಬಾ ಇಷ್ಟ. ಮಕ್ಕಳಿಗೇ ಏಕೆ ದೊಡ್ಡವರೂ ಟಾಮ್ ಅಂಡ್ ಜರ್ರಿ, ಹ್ಯಾರಿಪಾಟರ್, ಚೋಟಾ ಭೀಮ್, ಗೇಮುಗಳಲ್ಲಿ ಮುಳುಗಿರುವುದು ಅವರೂ ಇಷ್ಟಪಡುವರೆಂಬುದ ಸಾರುತ್ತವೆ!

ನಾವು ಚಿಕ್ಕವರಿದ್ದಾಗ ದಿನಾ ರಾತ್ರಿಯಾಗುವುದನ್ನೇ ಕಾಯುತ್ತಿದ್ದೆವು. ಇಂದಿನಂತೆ ಮಕ್ಕಳನ್ನು ಹಿಂದೆ ಓದು ಓದು ಹೋಂ ವರ್ಕ್ ಮಾಡು ಮುಗಿಸು ಅಂತ ಹಿಂಸಿಸುತ್ತಿರಲಿಲ್ಲ! ತಾತ ಊಟ ಮಾಡಿ ಬರುತ್ತಿದ್ದಂತೆ ಕತೆ ಹೇಳೆಂದು ಕಾಡುತ್ತಿದ್ದೆವು. ತಾತ ಹೊಲದಲ್ಲಿ ಕೆಲಸಿಸಿ ಹಗಲೆಲ್ಲಾ ದಣಿದಿರುತ್ತಿದ್ದರು. ದಿಂಬಿಗೆ ತಲೆ ಕೊಡುತ್ತಿದ್ದಂತೆ ಗಾಢ ನಿದ್ರೆಗೆ ಜಾರಿಬಿಡುತ್ತಿದ್ದರು ಅಷ್ಟರೊಳಗೆ ಕತೆ ಹೇಳಿಸಿಕೊಳ್ಳಬೇಕಿತ್ತು. ಬೇಸಗೆಯಲ್ಲಿ ಮನೆ ಹೊರಗೇ ಮಲಗುತ್ತಿದ್ದೆವು ಹಾಗಂತೂ ಅಜ್ಜಿಗೂ ಕತೆ ಹೇಳೆಂದು ಗಂಟುಬೀಳುತ್ತಿದ್ದೆವು. ಅಜ್ಜ ತಪ್ಪಿದರೆ ಅಜ್ಜಿ, ಅಜ್ಜಿ ತಪ್ಪಿದರೆ ಅಜ್ಜ ಕತೆ ಹೇಳುತ್ತಿದ್ದರು. ಎಷ್ಟು ಕತೆಗಳನ್ನು ಹೇಳಿದರೂ ಇನ್ನೊಂದು ಹೇಳು ಎಂದು ಪೀಡಿಸುತ್ತಿದ್ದೆವು. ಅಜ್ಜಿ ತಾತ ಕತೆಗಳ ಗಣಿಯಾಗಿದ್ದರು. ಕೆಲವು ಕತೆಗಳು ಎಳೆಯಷ್ಟು ನೆನಪಿದ್ದರೆ, ಕೆಲವು ಪೂರ್ಣ ನೆನಪಿವೆ.

ಒಂದು ದಿನ ಒಂದು ಕತೆ ಅಜ್ಜ ಅರಂಭಿಸಿದರು. ಅವುಕ್ಕೆಲ್ಲಾ ಹೆಸರುಗಳಿರುತ್ತಿರಲಿಲ್ಲ! ಆ ಕತೆ ಜನಪದ ಕಥಾ ಲೋಕದಲ್ಲಿ ಎಲ್ಲಿಯಾದರೂ ದಾಖಲಾಗಿದೆಯೋ ಇಲ್ಲವೋ ತಿಳಿಯದು, ಅಗಿದ್ದರೆ ಒಳ್ಳೆಯದು. ಆಗದಿದ್ದರೆ ಜನಪದಲೋಕಕ್ಕೆ ಇದೊಂದು ಸೇರಿ ಇನ್ನೂ ಜನಪದ ಸಾಹಿತ್ಯ ಶ್ರೀಮಂತವಾಗಲಿ ಎಂಬ ಉದ್ದೇಶ ನನ್ನದು.

ಒಂದು ರಾಜ್ಯದಲ್ಲಿ ಜನಾನುರಾಗಿ ರಾಜನಿದ್ದ. ಜನರಿಗೆ ಕಷ್ಟಗಳು ಬಂದಿವೆ ಎಂದು ಕಿವಿಗೆ ಬೀಳುತ್ತಿದ್ದಂತೆ ಪರಿಹಾರ ಹುಡುಕಿ ಬಗೆಹರಿಸುತ್ತಿದ್ದ. ಜನರ ಸುಖ ಮುಖ್ಯ ಎಂದು ತಿಳಿದು ಪ್ರಜೆಗಳ ಕಷ್ಟ – ಸುಖ, ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ. ಸುಖವಾಗಿರಲು ಬೇಕಾದ ಅನುಕೂಲಗಳ ಮಾಡುವುದರಲ್ಲಿ ಮಗ್ನನಾಗಿರುತ್ತಿದ್ದ! ಸದಾ ಪ್ರಜೆಗಳ ಹಿತ ಚಿಂತನೆ ಮಾಡುತ್ತಿದ್ದ. ಇಂಥಾ ರಾಜನಿಗೆ ಕಾರಣಾಂತರದಿಂದ ಕಿವಿಗಳು ಕತ್ತೆಯ ಕಿವಿಯ ಆಕಾರ ಹೊಂದಿದವು. ರಾಜನಿಗೆ ತುಂಬಾ ದುಃಖವಾಯಿತು. ರಾಜನಿಗೆ ಕತ್ತೆ ಕಿವಿ ಇವೆ ಎಂದರೆ ರಾಣಿ, ರಾಣಿವಾಸ, ಮಂತ್ರಿಗಳು, ಒಡ್ಡೋಲಗದ ವಿದ್ವಾಂಸರು, ರಾಜಾಸ್ಥಾನದ ಪ್ರಮುಖರು, ಪ್ರಜೆಗಳು ಬೆಲೆಕೊಡರು, ಸೇವಕರು ಸಹ ಅದೇಶಗಳ ಪಾಲಿಸರು. ಏನುಮಾಡುವುದು. ಇದು ಸಿಂಹಾಸನಕ್ಕೇ ಅಗೌರವ ಎಂದು ಚಿಂತಾಕ್ರಾಂತನಾದ. ಏನಾದರೂ ಆಗಲಿ ಯಾರಿಗೂ ತಿಳಿಯದಂತೆ ಈ ವಿಷಯ ಮುಚ್ಚಿಡೋಣವೆಂದು ಗಟ್ಟಿ ತೀರ್ಮಾನ ಮಾಡಿ ಪಟ್ಟದ ಪಲ್ಲಂಗದ ಅರಸಿಗೂ ಅರಿಯದಂತೆ ಹತ್ತಾರು ವರುಷಗಳಿಂದ ರಹಸ್ಯ ಕಾಪಾಡಿಕೊಂಡು ಬಂದಿದ್ದ! ಒಂದು ದಿನ ಮಲಗುವಾಗ ಯಾವುದೋ ಪಕ್ಕದ ರಾಜ ತನ್ನಮೇಲೆ ದಂಡೆತ್ತಿ ಬರುವನೆಂಬ ವಿಷಯದಲ್ಲಿ ಮುಳುಗಿದ್ದಾಗ ಯಾವುದೋ ದ್ಯಾಸದಲ್ಲಿ ರಾಜ ಪೇಟ ತೆಗೆದ! ತಕ್ಷಣ ಪಟ್ಟದರಸಿಗೆ ಗೊತ್ತಾಗಿಹೋಯಿತು! ಅಯ್ಯೋ! ಅಯ್ಯಯ್ಯೋ! ನಾನು ಕತ್ತೆ ಕಿವಿ ರಾಜನ ಪಟ್ಟದರಸಿಯೇ? ಅವಮಾನ! ನನಗೆ ಅವಮಾನ, ರಾಜ್ಯಕ್ಕೆ ಅವಮಾನ, ಈ ಅವಮಾನ ಸಹಿಸಲಾಗದು … ಎಂದು ಮುಂತಾಗಿ ಅಬ್ಬರಿಸತೊಡಗಿದಳು! ರಾಜ ಬಂದು ಬಾಯಿ ಮುಚ್ಚಿ ಅಬ್ಬರಿಸದಂತೆ ತಡೆದ. ಏನು ಮಾಡುವುದು ಆದದ್ದು ಆಗಿಹೋಯಿತು. ಕತ್ತೆ ಕಿವಿ ಬಂದು ಬಹಳ ವರುಷಗಳೇ ಸಂದಿವೆ! ಇದರಿಂದ ಏನು ತೊಂದರೆಯಾಗಿದೆ? ನೀನು ಸುಖವಾಗಿಲ್ಲವೆ? ರಾಜ್ಯ ಸಂತೃಷ್ಟಿಯಿಂದಿಲ್ಲವೆ? ಇದು ಎಲ್ಲರಿಗೂ ತಿಳಿದರೆ ನಾನು ಅಗೌರವಕ್ಕೆ ಒಳಗಾಗಿ ರಾಜ್ಯಭ್ರಷ್ಟನಾಗುತ್ತೇನೆ. ನಿನ್ನನ್ನು ಅರಮನೆಯಿಂದ ಓಡಿಸುತ್ತಾರೆ ನೀನು ತಿರಿದು ತಿನ್ನಬೇಕಾಗುತ್ತದೆ! ಯಾರಿಗೂ ಹೇಳದಿದ್ದರೆ ನನಗೂ ಕ್ಷೇಮ, ನಿನಗೂ ಕ್ಷೇಮ! ಯಾರಿಗೂ ಹೇಳಬೇಡ ಸುಮ್ಮನೆ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮಲಗು ಎಂದ.

ರಾಣಿ ಮಲಗಿದಳು. ಕಣ್ಣು ಮುಚ್ಚಿದರೆ ಸಾಕು ಅವೇ ಉದ್ದ ನೆಟ್ಟಗೆ ನಿಗುರಿದ ಕೂದಲಿನಿಂದ ಆವರಿಸಿದ ಕತ್ತೆ ಕಿವಿಗಳೇ ಕಣ್ಣೊಳಗೆ ಬರತೊಡಗಿದವು. ಮತ್ತೆ ಮತ್ತೆ ಆ ಕಡೆಗೊಮ್ಮೆ ಈ ಕಡೆಗೊಮ್ಮೆ ಮಗ್ಗಲು ಬದಲಿಸಿದಳು ನಿದ್ದೆ ಸುಳಿಯಲಿಲ್ಲ! ಕತ್ತೆ ಕಿವಿಗಳ ಬೇಟೆ ನಿಲ್ಲಲಿಲ್ಲ! ಮಗ್ಗುಲು ಬದಲಿಸಿ ಬದಲಿಸಿ ಸಾಕಾಯ್ತು ಗಟ್ಟಿ ನಿರ್ದಾರ ಮಾಡಿ ಮಲಗಿದಳು ಕಣ್ಣುಗಳ ಬಿಗಿಯಾಗಿ ಮುಚ್ಚಿದಳು. ಗಂಟೆಗೊಮ್ಮೆ ಹೊಟ್ಟೆ ದೊಡ್ಡದಾಗುತ್ತಾ ಅರ್ಧ ಗಂಟೆ, ಕಾಲು ಗಂಟೆ, ಐದು ನಿಮಿಷ, ಒಂದು ನಿಮಿಷಕ್ಕೊಮ್ಮೆ ಹೊಟ್ಟೆ ಉಬ್ಬತೊಡಗಿತು ಸ್ವಲ್ಪ ತಡಮಾಡಿದರೆ ಹೊಟ್ಟೆಯೇ ಬಿರಿದು ಹೊಡೆದು ಹೋಗಬಹುದೆಂಬಂತೆ ದೊಡ್ಡದಾಗುತ್ತಾಹೋಯಿತು. ತಾಳಲಾಗದೆ ರಾಜನನ್ನು ಎಚ್ಚರಿಸಿ ಹೊಟ್ಟೆ ತೋರಿಸಿದಳು. ದಿಗಿಲುಗೊಂಡ ರಾಜ ಏನುಮಾಡಬೇಕೆಂದು ತಿಳಿಯದಂತಾದ! ಮಂತ್ರಿಗಳ ವೈದ್ಯರ ಸಲಹೆ ಪಡೆಯುವ ವಿಷಯವಿದಲ್ಲವೆಂದು ಅರಿತ ರಾಜ ಚುರುಕಾದ. ಕುದುರೆ ಹತ್ತಿಸಿಕೊಂಡು ನಗರ ಬಿಟ್ಟು ಹತ್ತಾರು ಮೈಲಿ ಹೋದ. ಅವಳಿಗೋ ಸಂಕಟ! ತಾಳಲಾರದ ಹೊಟ್ಟೆ ಉಬ್ಬರದ ನೋವು! ಹೊಟ್ಟೆ ಪಟಾಕಿಯಂತೆ ಸಿಡಿಯಬಹುದೆಂಬ ಬಯ! ರಾಜ ದಾರಿಯ ಇಕ್ಕೆಲದ ಮರಗಳ ನೋಡುತ್ತಾ ನಿಧಾನವಾಗಿ ಸಾಗಿದ ಒಂದು ಮರ ಕಂಡು ಸಂತಸಗೊಂಡು ರಾಣಿಯನ್ನು ಅದರ ಬಳಿಗೆ ಕರೆದೊಯ್ದ! ಅದು ಟೊಳ್ಳು ಮರವಾಗಿತ್ತು. ಒಂದು ಪಕ್ಕದಲ್ಲಿ ಗವಾಕ್ಷಿಯಂತಹ ದೊಡ್ಡ ರಂದ್ರವಿತ್ತು ಅದರಲ್ಲಿ ಕತ್ತು ತೂರಿಸಿ ಮೂರು ಸಾರಿ ‘ ರಾಜನ ಕಿವಿ ಕತ್ತೆ ಕಿವಿ ‘ ಎಂದು ಮೆಲ್ಲಗೆ ಹೇಳುವಂತೆ ಹೇಳಿದ. ಒಂದು ಸಾರಿ ಹೇಳುತ್ತಿದ್ದಂತೆ ಹೊಟ್ಟ ಉಬ್ಬರ ಕಡಿಮೆಯಾಯಿತು. ಮೂರುಸಾರಿ ಹೇಳುತ್ತಿದ್ದಂತೆ ಉಬ್ಬರ ಮಾಯವಾಗಿ ಚಕ್ರವರ್ತಿಯ ಪಟ್ಟದರಸಿಯಾದಷ್ಟು ಸಂತಸವಾಯಿತು. ಹೋದ ಪ್ರಾಣ ಮರಳಿದಂತಾಯಿತು.

ಇದಾದ ಮೂರು ವರುಷ ಸುಖವಾಗೇ ಇದ್ದರು! ಅ ನಗರದಲ್ಲಿ ಪ್ರತಿ ವರುಷ ರಾಜ್ಯದೇವಿಯ ಉತ್ಸವ ಅದ್ದೂರಿಯಾಗಿ ಆಚರಿಸುವ ರೂಢಿಯಿತ್ತು. ಡೋಲು ಬಡಿದು ರಾಜ ಉತ್ಸವ ಉದ್ಘಾಟಿಸಿದ! ನಂತರ ಒಂದೊಂದು ವಾದ್ಯದವರು ರಾಜನ ಮುಂದೆ ಹಾಜರಾಗಿ ತನ್ನ ಹೆಸರು ಮತ್ತು ತಾನು ನುಡಿಸುವ ವಾದ್ಯದ ಹೆಸರು ಹೇಳಿ ಅವರ ಕಲಾ ಪ್ರತಿಭೆಯ ಮೆರೆದು ಪ್ರತಿಯೊಬ್ಬರೂ. ರಾಜನಿಂದ ಸನ್ಮಾನಿತರಾಗಿ ನಂತರ ಸಾಮೂಹಿಕ ಉತ್ಸವ ಜರುಗಿಸುತ್ತಿದ್ದರು. ಮೊದಲು ಡೋಲು ಬಾರಿಸುವವ ರಾಜನ ಮುಂದೆ ಬಂದು ನಿಂತ. ತನ್ನ ಕಲಾ ಪ್ರೌಢಿಮೆ ಮೆರೆದು ‘ ಉತ್ಸವದ ಅತ್ಯತ್ತಮ ಕಲಾಕಾರ ‘ ಗೌರವ ಪಡೆಯಬೇಕೆಂದು ನಿತ್ಯ ಅಭ್ಯಾಸ ಮಾಡಿದ್ದ. ಅಂದು ಹೊಸ ವಾದ್ಯದೊಂದಿಗೆ ಬಂದಿದ್ದ. ಆ ಹುರುಪಿನಿಂದ ಬಾರಿಸಲು ಮುಂದಾದ. ಬಾರಿಸಿದ ತಕ್ಷಣ ಅದು ” ರಾಜನ ಕಿವಿ ಕತ್ತೆ ಕಿವಿ ” ಎನ್ನುವುದೇ! ಆ ವಾದ್ಯ ರಾಣಿಯು ” ರಾಜನ ಕಿವಿ ಕತ್ತೆ ಕಿವಿ ” ಎಂದುಸಿರಿದ ಟೊಳ್ಳು ಮರದಿಂದ ಮಾಡಿದ್ದಾಗಿತ್ತು.‌ ಕಲಾಕಾರ ಭಯಭೀತನಾದ, ಕಾಲು ನಡುಗ ಹತ್ತಿದವು. ಸಾವರಿಸಿಕೊಂಡು ಮತ್ತೆ ಬಾರಿಸಿದ. ಮತ್ತೆ ” ರಾಜನ ಕಿವಿ ಕತ್ತೆ ಕಿವಿ, ರಾಜನ ಕಿವಿ ಕತ್ತೆ ಕಿವಿ ” ಎಂದಿತು. ನಡುಗಲಾರಂಭಿಸಿದ. ರಾಜ ದೈರ್ಯ ತುಂಬಿ ಮುಂದುವರಿಸುವಂತೆ ಅಜ್ಞಾಪಿಸಿದ. ಅವನು ಡೋಲು ಬಾರಿಸಿದಂತೆ ಅದು ” ರಾಜನ ಕಿವಿ ಕತ್ತೆ ಕಿವಿ, ರಾಜನ ಕಿವಿ ಕತ್ತೆ ಕಿವಿ ” ಎನ್ನತೊಡಗಿತು. ರಾಜನಿಗೆ ಸಹಿಸದಾಗಿ ಒತ್ತಡ ಹೆಚ್ಚಿ ಪ್ರಜೆಗಳು ಏನೇನೋ ಯೋಚಿಸಲು ಅವಕಾಶ ಕೊಡುವುದು ಬೇಡವೆಂದು ಪೇಟ ತೆಗೆದ! ನಿಮಿರಿದ ಕತ್ತೆ ಕಿವಿಗಳು ಗೋಚರಿಸಿದವು. ಅದನ್ನು ಕಂಡು ಎಲ್ಲರಿಗೂ ಅಚ್ಚರಿ! ಜತೆಗೆ ರಾಜನ ಬಗ್ಗೆ ಅಸಹ್ಯ ಉಂಟಾಯಿತು. ರಾಜನಿಗೆ ಅವಮಾನವಾಯಿತು. ಕತ್ತೆ ಕಿವಿ ಇರುವ ರಾಜ ಬೇಡ ಎಂದು ನೆರೆದವರು ಕೂಗಿದರು. ಇದುವರೆಗೂ ಈ ಕತ್ತೆ ಕಿವಿ ರಾಜನೇ ನಮ್ಮನ್ನು ಆಳಿದ್ದು ಎಂದು ತಮ್ಮ ಬಗ್ಗೆ ತಾವೇ ಲಜ್ಜಿತರಾದರು! ಗಲಬೆ ಗದ್ದಲ ಹೆಚ್ಚಿತು. ಒಬ್ಬ ಮಂತ್ರಿ ಎದ್ದು ನಿಂತು ಸದ್ದು ಮಾಡದಂತೆ ಸೂಚಿಸಿ ಇದುವರೆಗೂ ಇದೇ ರಾಜ ನಿಮ್ಮನ್ನಾಳಿದ್ದು. ಇವರ ಆಳ್ವಿಕೆಯಲ್ಲಿ ಯಾರಿಗೆ ತೊಂದರೆಯಾಗಿದೆ? ಕೇಡಾಗಿದೆ ಹೇಳಿ? ಯಾರ ಕಷ್ಟಗಳಿಗೆ ಸ್ಪಂದಿಸಿಲ್ಲ ಹೇಳಿ? ಇಡೀ ರಾಜ್ಯವೇ ಇವರ ಆಡಳಿತದಲ್ಲಿ ಸೌಖ್ಯವಾಗಿದೆ! ಅವರ ಕಿವಿಯಲ್ಲ, ಬಾಹ್ಯ ಸೌಂದರ್ಯವಲ್ಲ ನಿಮ್ಮನ್ನಾಳಿದ್ದು. ನಿಮ್ಮನ್ನಾಳಿದ್ದು ಅವರ ಹೃದಯ ಎಂಬುದ ಮರೆಯದಿರಿ. ಉತ್ಸವ ಮುಂದುವರಿಯಲಿ. ರಾಜ ಕಿವಿಯ ಮರೆಮಾಚುವ ಅವಶ್ಯಕತೆ ಬೀಳದಿರಲಿ ಎಂದ. ಎಲ್ಲರಿಗು ಆ ಮಂತ್ರಿಯ ಮಾತು ಒಪ್ಪಿತವಾಯಿತು. ಉತ್ಸವ ರಂಗೇರಿಸಲು ಅಲ್ಲಿ ಜನ ಸಜ್ಜಾದರು. ಅಲ್ಲಿ ಉತ್ಸವ ನಡೆಯುತ್ತಾ ಇರುತ್ತೆ ಇಲ್ಲಿ ನೀವು ಕಣ್ಣು ಬಾಯಿ ಬಿಡುತಾ ನನ್ನ ಮುಂದೆ ಕುಳಿತು ಇನ್ನೂ ಕತೆ ಇರಬಹುದೆಂದು ಕಿವಿದೆರೆದು ನನ್ನನ್ನೇ ನೋಡುತ್ತಾ ಕೇಳುತ್ತಿದ್ದೀರ! ಎಂದರು ತಾತ! ಓ ! ಕತೆ ಮುಗಿದೇ ಹೋಯಿತಾ? ಇನ್ನೂ ಮುಂದುವರಿದಿದ್ದರೆ ಇನ್ನೂ ಚೆನ್ನಾಗಿರುತಿತ್ತು ಎಂದು ದಿಂಬಿಗೆ ತಲೆಯಿಟ್ಟೆವು! ರಾತ್ರಿಯೆಲ್ಲಾ ಅದೇ ರಾಜನ ಕಿವಿ ಕತ್ತೆ ಕಿವಿಯ ಕನಸು!

ಜನಪದ ಕತೆಗಳೆಂದರೇನೇ ಅದ್ಬುತ ಕಲ್ಪನೆಗಳಿಂದ ಆಕರ್ಷಿಸುವಂತಹವು! ಅಲ್ಲಿ ಪ್ರಾಣಿ, ಪಕ್ಷಿ, ಗಿಡ, ಮರ ಮಾತನಾಡುವುದು ಕುತೂಹಲ ಮೂಡಿಸುತ್ತವೆ. ಅವು ಕತೆಯ ಭಾಗವಾಗುವುದು ನೋಡಿದ್ದೇವೆ. ಈ ಕತೆ ಸುಂದರವಾಗಿದೆ. ಕಲ್ಪನೆ ಸ್ವಾರಸ್ಯಕರವಾಗಿದೆ. ಕತೆ ಕಲಾತ್ಮಕವಾಗಿ, ಸ್ವಾರಸ್ಯಕರವಾಗಿ, ಕುತೂಹಲಕರವಾಗಿ, ಅರ್ಥಗರ್ಭಿತವಾಗಿ, ಅಕರ್ಷಕವಾಗಿದೆಯಲ್ಲವೆ?

ನನ್ನ ಅಜ್ಜ ಕಥೆ ಹೇಳುವ ಶೈಲಿ ಇದು. ಕತೆ ಅವರದು ಭಾಷೆ ನನ್ನದು. ಇಲ್ಲಿ ” ಹೆಂಗಸರ ಬಾಯಲ್ಲಿ ಮಾತು ನಿಲ್ಲುವುದಿಲ್ಲ, ಗಂಡಸರ ಕಂಕುಳಲ್ಲಿ ಕೂಸು ನಿಲ್ಲವುದಿಲ್ಲ ” ” ಸತ್ಯವನ್ನು ಬಹು ದಿನ ಬಚ್ಚಿಡಲಾಗುವುದಿಲ್ಲ ” ” ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌದರ್ಯ ಮುಖ್ಯ ” ಒತ್ತಡ ಏನೆಲ್ಲಾ ಸಮಸ್ಯೆಗಳ ತರಬಲ್ಲದು. ಮರಗಳು ಸಹ ಗುಟ್ಟನ್ನು ಮುಚ್ಚಿಡಲಾರವು, ವಿವೇಕಿಗಳು ಎಂತಹ ಕಠಿಣ ಸಮಸ್ಯೆಯನ್ನೂ ಸುಲಭವಾಗಿ ಬಗೆಹರಿಸಬಲ್ಲರು ಎಂಬ ಮುಖ್ಯವಾದ ಮಾತುಗಳು, ಗಾದೆ ಮಾತುಗಳು ಈ ಕತೆಯಲ್ಲಿ ನೆಲೆ ಪಡೆದುಕೊಂಡಿವೆ.

ಜನಪದ ಕತೆ ಎಂದರೇನೇ ಅನಕ್ಷರಸ್ಥರು ಸೃಜಿಸಿದ ಕತೆಗಳು ಅಂತ ಗೊತ್ತು! ದುಃಖದ ಭಾವವೋ, ಸಂತಸದ ಭಾವವೋ ತುಂಬಿ ಒತ್ತರಿಸಿ ಬಂದಾಗ ಜನಪದ ಸಾಹಿತ್ಯಲೋಕ ಸೃಷ್ಟಿಯಾಗಲು ಅನುವಾಯಿತು. ಯಾವ ವಿದ್ಯಾವಂತ ಕತೆಗಾರನಿಗಿಂತಾ ಕಡಿಮೆಯಿಲ್ಲದಂತೆ ಈ ಜನಪದ ಕತೆಗಾರ ಕತೆ ಹೇಳಿದ್ದಾನೆ. ಈ ಕತೆಯಲ್ಲಿ ಬರುವ ಪ್ರತಿಮೆಯೋಪಾದಿಯಲ್ಲಿನ ಮೂರು ಸಂಕೇತಗಳನ್ನು ಕತೆಗಾರ ಚೆನ್ನಾಗಿ ದುಡಿಸಿಕೊಂಡಿದ್ದಾನೆ. ರಾಜನ ಕಿವಿ ಕತ್ತೆಯ ಆಕಾರವಾಗಿರುವುದು ಅಸಹಜ! ಅದಿರಲಿ ಇದನ್ನು ಕಂಡ ರಾಣಿಗೆ ನಿದ್ದೆ ಬರದೆ ಹೊಟ್ಟೆ ಬಿರಿಯುವಂತೆ ಒಂದೇ ಸಮನೆ ಬಲೂನಿನಂತೆ ದೊಡ್ಡದಾಗುತ್ತಾಹೋಗುವದು ಅರ್ಥವತ್ತಾದ ಕಲ್ಪನೆ. ಅದು ಹೆಣ್ಣುಮಕ್ಕಳ ಬಾಯಲ್ಲಿ ಮಾತುನಿಲ್ಲುವುದಿಲ್ಲ ಎಂಬುದರ ಸಂಕೇತ! ಹಿಂದೆ ಈ ಮಾತು ಬಹಳಾ ಸತ್ಯ ಅನಿಸಿತ್ತು. ಏಕೆಂದರೆ ಹಳ್ಳಿಗಳಲ್ಲಿ ನೀರು ತರಲು ಹೆಣ್ಣು ಮಕ್ಕಳು ಬಾವಿಗೆ ಹೋಗುತ್ತಿದ್ದರು ಅಲ್ಲಿ ಊರಿನ ಹೆಣ್ಣುಮಕ್ಕಳೆಲ್ಲಾ ಸೇರುತ್ತಿದ್ದರು. ಒಂದು ಮನೆಯಲ್ಲಿ ನಡೆದ ಘಟನೆ ಒಂದು ಕೊಡದಿಂದ ಇನ್ನೊಂದು ಕೊಡಕ್ಕೆ ಸಂವಹನಗೊಂಡು ಯಾವ ಮಾಧ್ಯಮವಿಲ್ಲದೆ ಊರಿನ ತುಂಬ ಬೆಳಗಾಗುವುದರೊಳಗೆ ಕೊಡವೆಂಬ ಸುದ್ದಿ ಮಾಧ್ಯಮದಿಂದ ಪ್ರಸಾರವಾಗಿಬಿಡುತಿತ್ತು! ಇಂದು ಅದು ಅಷ್ಟರ ಮಟ್ಟಿಗೆ ಪ್ರಭಾವಿಯಾಗಿಲ್ಲ! ಆದರೆ ಇಂದು ಇದು ವೈಜ್ಞಾನಿಕವಾಗಿಯೂ ಸತ್ಯ ಅನಿಸುತ್ತಿದೆ. ಇಂದು ಅನೇಕರಿಗೆ ಅಸಿಡಿಟಿ, ಮೂಲವ್ಯಾದಿ ಮುಂತಾದ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ. ಈ ಎಲ್ಲಾ ಕಾಡುವಿಕೆಗಳ ಸಂದರ್ಭದಲ್ಲಿ ಹೊಟ್ಟೆ ಊದುತ್ತದೆ! ಅಸಿಡಿಟಿಗೆ ಮಾನಸಿಕ ಒತ್ತಡವೂ ಒಂದು ಕಾರಣ ಎಂದು ವೈದ್ಯಲೋಕ ಹೇಳುತ್ತಿದೆ. ಆದ್ದರಿಂದ ಹೆಣ್ಣು ಗಂಡೆಂಬ ಬೇದವಿಲ್ಲದೆ ಇಂದು ಒತ್ತಡ ಕಾಡುತ್ತಿದೆ! ಅದರಿಂದ ವಾಯು ವಿಕಾರವಾಗಿ ಹೊಟ್ಟೆ ಊದುತ್ತಿದೆ. ಈ ಕತೆಯಲ್ಲಿ ರಾಣಿಗೆ ರಾಜನ ಕಿವಿ ಕತ್ತೆ ಕಿವಿ ಎಂಬ ಅಸಹಜ ರೂಪವನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ! ಅದನ್ನು ಹೊರ ಹಾಕಲೇಬೇಕೆಂಬ ಒತ್ತಡ ಕ್ಷಣಕ್ಷಣಕ್ಕೂ ಹೆಚ್ಚುತ್ತಾ ಹೋಗುವುದು ಹೊಟ್ಟೆಯನ್ನು ಊದುವಂತೆ ಮಾಡುತ್ತದೆ. ರಹಸ್ಯವನ್ನು ಅದುಮಿಟ್ಟುದೇ ಹೊಟ್ಟೆ ಊದುವುದರ ಸಂಕೇತ! ಅಂದು ಮಾತಿನ ಒತ್ತಡ ಕಾಡಿದರೆ ಇಂದು ಕೆಲಸ, ಸಮಸ್ಯೆಗಳ ಒತ್ತಡ ಕಾಡುತ್ತಿದೆ. ಆ ಸಮಸ್ಯೆ ಅಥವಾ ಕೆಲಸ ಮುಗಿಯುವವರೆಗೆ ಒತ್ತಡ ಕಾಡಿ ಹೊಟ್ಟೆಯ ತುಂಬ ವಾಯು ತುಂಬಿ ಹೊಟ್ಟೆ ಊದಿ ಕಾಡುತ್ತಿದೆ. ಆ ಸಮಸ್ಯೆ ಅತವಾ ಕೆಲಸ ಮುಗಿಯಿತೆಂದರೆ ಮನಸ್ಸು ನಿರಾಳ. ಮನಸ್ಸಿನಿಂದಾದ ದೈಹಿಕ ವಿಕಾರವೂ ಮಾಯ! ಒಬ್ಬ ವ್ಯಕ್ತಿ ಎಂದರೆ ದೇಹ ಮನಸ್ಸು ಎರಡೂ ಸೇರಿ ವ್ಯಕ್ತಿಯಾಗುವುದು. ಒಂದರ ತೊಂದರೆಯ ಪರಿಣಾಮ ಇನ್ನೊಂದರ ಮೇಲಾಗುವುದಕ್ಕೂ ಇದು ಸಂಕೇತವಾಗಿದೆ! ಆ ವಿಷಯ ಹೇಳಬೇಕೆಂಬ ಒತ್ತಡವಿದ್ದುದು ಮನಸ್ಸಿಗೆ ತೊಂದರೆಯಾದುದ್ದು ದೇಹಕ್ಕೆ. ಅಳುವ ಗಂಡಸಿನ ಮುಖ ನೋಡಬಾರದು ಮಾತು ಮಾತಿಗೆ ಹೆಂಗಸು ನಗಬಾರದು ಎಂಬ ಗಾದೆ ಇದೆ. ಅಂದರೆ ಗಂಡು ಮಕ್ಕಳಿಗೆ ದೈರ್ಯ ಹೆಚ್ಚು, ಹಣ ಗಳಿಸುವವನು ವಿನಿಯೋಗಿಸುವವನು ಲಾಭ – ನಷ್ಟ ಸರಿದೂಗಿಸುವವನು ಅವನೆ. ಅದ್ದರಿಂದ ಎಂತಹ ಕಷ್ಟಬಂದಾಗಲೂ ಹೆದರದೆ ಕಷ್ಟಗಳ ಎದುರಿಸಬೇಕೆಂಬುದು ಅದರ ಅರ್ಥ! ಹಾಗೆ ಹೆಣ್ಣುಮಕ್ಕಳು ಅಳಬಹುದು ಎಂಬ ದನಿ ಅಲ್ಲಿ ಹುಟ್ಟುತ್ತದೆ. ಏಕೆಂದರೆ ಮನೆಯ ಜವಾಬ್ದಾರಿ ಗಂಡಿನ ಹೆಗಲಿಗಿದ್ದುದರಿಂದ ಅವರ ತೀರ್ಪೇ ಅಂತಿಮವಾದುದರಿಂದ ಇವರು ಅಸಹಾಯಕರಾಗುವಂತೆ ಆಗುತ್ತಿದ್ದರಿಂದ ಅಳು ಅನಿವಾರ್ಯ, ಸಮಾಧಾನದ, ಆರೊಗ್ಯದ ಆಸರೆಯಾಗಿತ್ತು! ಹೆಣ್ಣು ಮಕ್ಕಳು ಅತ್ತು, ಅಥವಾ ಇನ್ನೊಬ್ಬರಿಗೆ ಹೇಳಿ ದುಃಖವನ್ನು ಹೊರ ಹಾಕುತ್ತಿದ್ದರು. ಅತ್ತಾಗ ಹೊರ ಹಾಕಿದಾಗ ಸಮಾಧಾನವಾಗುತಿತ್ತು! ಹಾಗೆ ಹೊರ ಹಾಕಿ ಅವರು ಬೆಟ್ಟದಂತಹ ಸಮಸ್ಯೆಗಳು ಬಂದರೂ ಆರೋಗ್ಯವಾಗಿರುತ್ತಿದ್ದರು.

ಎರಡನೆಯದು ಟೊಳ್ಳಾದ ಮರದ ರಂದ್ರದಲ್ಲಿ ರಾಜ, ರಾಣಿಯ ಬಾಯಿಯಿಂದ ” ರಾಜನ ಕಿವಿ ಕತ್ತೆ ಕಿವಿ ” ಎಂದು ಮೂರು ಸಾರಿ ಹೇಳಿಸುವುದು ಆಗ ರಾಣಿಯ ಹೊಟ್ಟೆ ಉಬ್ಬರ ಇಳಿದು ಸಾಮಾನ್ಯಸ್ಥಿತಿಗೆ ಬರುವುದು ಕತೆಯಲ್ಲಿದೆ. ಇದು ರಾಣಿಗೆ ಉಂಟಾದ ಒತ್ತಡವನ್ನು ಕಡಿಮೆ ಮಾಡುವುದರ ಸಂಕೇತ! ರಾಣಿಗೆ ರಾಜನ ಕಿವಿ ಕತ್ತೆ ಕಿವಿ ಎಂಬ ಅಸಹಜ ವಿಷಯವನ್ನು ಇನ್ನೊಬ್ಬರಿಗೆ ಹೇಳಬೇಕೆಂಬ ಒತ್ತಡ ಕಾಡುತ್ತಿರುತ್ತದೆ. ಮರದ ರಂದ್ರದಲ್ಲಿ ಒಂದು ಸಾರಿಯಲ್ಲ ಮೂರು ಸಾರಿ ಉಸುರಿದಾಗ ಹಂತ ಹಂತವಾಗಿ ಒತ್ತಡ ಕಡಿಮೆಯಾಗಿ ಹೊಟ್ಟೆ ಸಾಮಾನ್ಯ ಸ್ಥಿತಿಗೆ ಬರುವುದು ಒತ್ತಡವನ್ನು ಇಲ್ಲವಾಗಿಸುವ ಅರ್ಥವತ್ತಾದ ಸಂಕೇತವಾಗಿದೆ!

ಮೂರನೆಯದು ” ರಾಜನ ಕಿವಿ ಕತ್ತೆ ಕಿವಿ ” ಎಂದು ಹೇಳುವ ಡೋಲು ಸಹ ಒಂದು ಸಂಕೇತವಾಗಿದೆ! ಡೋಲು ಮಾಡಲು ಟೊಳ್ಳಾದ ಮರ ಬೇಕು. ರಾಣಿ ಯಾವ ಟೊಳ್ಳಾದ ಮರದ‌ ದೊಡ್ಡ ರಂದ್ರದಲ್ಲಿ ” ರಾಜನ ಕಿವಿ ಕತ್ತೆ ಕಿವಿ ” ಎಂದು ಮೂರು ಸಾರಿ ಹೇಳಿದಳೋ ಆ ಮರದಿಂದನೇ ಆ ಡೋಲನ್ನು ಮಾಡಿದ್ದು! ಅದು ಸಹ ” ರಾಜನ ಕಿವಿ ಕತ್ತೆ ಕಿವಿ ” ಎಂದು ಹೇಳಿ ಮನುಷ್ಯರಷ್ಟೇ ಅಲ್ಲ ಒಣ ಮರ ಸಹ ಗುಟ್ಟನ್ನು ಬಹಳ ದಿನ ಅದುಮಿಡಲಾರದು ಎಂಬುದರ ಸಂಕೇತವಾಗಿದೆ! ಸತ್ಯ ಎಂದಾದರೂ ಒಂದು ದಿನ ಹೊರ ಬರಲೇಬೇಕು ಎಂಬುದರ ಸಂಕೆತವಾಗಿದೆ!

ರಾಜನ ಕಿವಿ ಕತ್ತೆ ಕಿವಿಯಾಗುವುದು, ರಾಣಿಯ ಹೊಟ್ಡೆ ಉಬ್ಬುವುದು, ಮರದ ಟೊಳ್ಳಿನಲ್ಲಿ ” ರಾಜನ ಕಿವಿ ಕತ್ತೆ ಕಿವಿ ” ಎಂದಾಗ ಉಬ್ಬಿದ ಹೊಟ್ಟೆ ಸಾಮಾನ್ಯ ಸ್ಥಿತಿಗೆ ಬರುವುದು, ಆ ಒಂದು ಡೋಲು ” ರಾಜನ ಕಿವಿ ಕತ್ತೆ ಕಿವಿ ” ಎಂದು ಮಾನವರಂತೆ ಮಾತನಾಡುವುದು ಸಹಜ ಕ್ರೀಯೆಗಳಲ್ಲದಿದ್ದರೂ ಅವೇ ಕುತೂಹಲ ಹುಟ್ಟಿಸಿ ಕತೆ ಮುಗಿಯುವವರೆಗೆ ಕೇಳಲು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತವೆ. ಕತೆಯ ಕೊನೆಯಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ, ಹೃದಯವಂತಿಕೆ, ಮಾನವೀಯತೆಗೆ ಮಿಡಿಯುವ ಮನಸ್ಸು ಶ್ರೇಷ್ಠ ಎಂಬ ಮಂತ್ರಿಯ ತೀರ್ಪು ಸಾರ್ವಕಾಲಿಕವಾದುದಾಗಿದೆ!

* ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x