ಕ್ಯಾ ಯಹೀ ಪ್ಯಾರ್ ಹೇ…..: ಗಿರಿಜಾ ಜ್ಞಾನಸುಂದರ್

ಬೆಳಿಗ್ಗೆ ಏಳುತ್ತಲೇ ಗಲಾಟೆ ಮಾಡುತ್ತಿದ್ದ ತನ್ನ ಪುಟ್ಟ ಅಚಿಂತ್ಯನನ್ನ ತನ್ನ ಕಂಕುಳಲ್ಲಿ ಹೊತ್ತುಕೊಂಡು ಅಡುಗೆ ಮನೆಗೆ ಧರಿತ್ರಿ ಬಂದಳು. ಗಂಟೆ ಆಗಲೇ ೬ ಆಗಿತ್ತು. ಗಂಡನಿಗೆ ಅಡುಗೆ ಮಾಡಿ ಡಬ್ಬಿಗೆ ಹಾಕಬೇಕು, ಹೆಚ್ಚು ಸಮಯವಿಲ್ಲ ಎಂದು ದಡಬಡ ಕೆಲಸ ಮಾಡುತ್ತಿದ್ದಳು. ಗಂಡನ ಪ್ರೀತಿಯ ವಾಂಗೀಬಾತ್ ಮಾಡುತ್ತ ಜೊತೆಯಲ್ಲಿ ಗಸಗಸೆ ಪಾಯಸ ಮಾಡುವುದರಲ್ಲಿ ಮಗ್ನಳಾಗಿದ್ದಳು. ಪುಟ್ಟ ಮಗು ಕೈಬಿಡುತ್ತಿಲ್ಲ. ಆದರೂ ಅವನ ಹುಟ್ಟುಹಬ್ಬಕ್ಕೆಂದು ಅವನಿಗೆ ಮತ್ತು ಅವನ ಸಹೋದ್ಯೋಗಿಗಳಿಗೂ ಆಗುವಂತೆ ಪ್ರೀತಿಯಿಂದ ತಯಾರು ಮಾಡಿ, ಡಬ್ಬಿಗೆ ಹಾಕಿದಳು. ಅಷ್ಟರಲ್ಲಿ ಪವನ್ ಎದ್ದು ಬಂದ. ಅವನನ್ನು ತಬ್ಬಿ ಹಿಡಿದು ಅವನ ಹುಟ್ಟಿದ ದಿನಕ್ಕೆ ಶುಭಾಶಯ ಕೋರಿ, ಅವನಿಗಾಗಿ ತಂದ ಪುಟ್ಟ ಚಿನ್ನದ ಉಂಗುರವನ್ನು ಅವನ ಬೆರಳಿಗೆ ತೊಡಿಸಿದಳು. ಪುಟ್ಟ ಅಚಿಂತ್ಯ ತನ್ನ ರಂಪ ಹೆಚ್ಚು ಮಾಡಿದ. ಇನ್ನು ಅವನ ಸಮಾಧಾನ ಧರಿತ್ರಿಯ ಮುಂದಿನ ಕೆಲಸ.

ಅದರ ಹಿಂದೆಯೇ ಅತ್ತೆ ಮಾವನಿಗೆ ತಿಂಡಿ ಕೊಟ್ಟು, ಆಫೀಸ್ ಗೆ ತಾನು ತಯಾರಾಗಿ ಹೊರಟಳು. ತನ್ನ ಮನೆ, ತನ್ನ ಸಂಸಾರ ಅದರಲ್ಲೇ ಪ್ರೀತಿಯನ್ನು ಕಾಣುತ್ತ ತನ್ನ ಜೀವನ ಕಳೆಯುವ ಜೀವನಕ್ಕೆ ಯಾವುದು ಸಾಟಿ?

***

ಪ್ರಮೋದ್ ತನ್ನ ಸಹೋದ್ಯೋಗಿ ವಿನೋದ ೧೧.೩೦ ಆದರೂ ಇನ್ನು ಆಫೀಸ್ ಗೆ ಬರದಿದ್ದನ್ನು ಕಂಡು ಗಾಬರಿಯಾದ. ಸಾಮಾನ್ಯವಾಗಿ ೯ ಗಂಟೆಗೆ ಸರಿಯಾಗಿ ಬರುತ್ತಿದ್ದ, ಇಂದು ಬಹಳ ತಡವಾಯಿತು ಎನ್ನುತ್ತಾ ಅವನ ಮೊಬೈಲ್ ಗೆ ಕರೆ ಮಾಡಿದ. ಆ ಕಡೆಯಿಂದ ಉತ್ತರ ಬರಲಿಲ್ಲ. ಅವನ ಆತಂಕ ಇನ್ನು ಹೆಚ್ಚಾಯಿತು. ಒಂದೇ ಸಮನೆ ಕರೆಗಳನ್ನು ಮಾಡಲು ಶುರು ಮಾಡಿದ. ಅವನ ನಾಲ್ಕನೇ ಕರೆಗೆ ಉತ್ತರ ಬಂತು. ಯಾರೋ ಮಾತಾಡುತ್ತ ವಿನೋದನಿಗೆ ಅಪಘಾತ ಆಗಿದೆ ಎಂದು ಮತ್ತು ಅವನನ್ನು ಆಸ್ಪತ್ರೆಗೆ ಸೇರಿಸಿದ್ದಾರೆಂದು ತಿಳಿಸಿದರು. ವಿನೋದನ ಕುಟುಂಬ ದೂರದ ಹಳ್ಳಿಯಲ್ಲಿ ಇರುವುದರಿಂದ ಅವನು ಇಲ್ಲಿ ಒಬ್ಬನೇ ಒಂದು ಸಣ್ಣ ಕೊಠಡಿಯಲ್ಲಿ ವಾಸವಾಗಿದ್ದ. ತನ್ನವರು ಯಾರು ಇರಲಿಲ್ಲವಾದ್ದರಿಂದ ಅವನನ್ನು ನೋಡಲು ಪ್ರಮೋದ್ ತಕ್ಷಣವೇ ಧಾವಿಸಿದ. ವಿನೋದನಿಗೆ ತಲೆಗೆ ತೀವ್ರವಾದ ಪೆಟ್ಟು ಬಿದ್ದು, ಅವನಿಗೆ ಪ್ರಜ್ಞೆ ಬರಲು ೫ ಗಂಟೆಗೆ ಆಯಿತು. ಪ್ರಮೋದ್ ಅಲ್ಲಿಯವರೆಗೂ ವಿನೋದನ ಪಕ್ಕದಲ್ಲೇ ಕುಳಿತಿದ್ದ. ವಿನೋದನ ಆರೈಕೆ ಹತ್ತು ದಿನದವರೆಗೂ ಪ್ರಮೋದನ ಕೆಲಸವಾಯಿತು. ವಿನೋದ ತನ್ನ ತಾಯಿಯನ್ನು ಕರೆಸುಕೊಳ್ಳುತ್ತೇನೆಂದರು ಬೇಡವೆಂದು ತಾನೇ ಅವನನ್ನು ನೋಡಿಕೊಳ್ಳುತ್ತಿದ್ದ. ಅವನು ಸಂಪೂರ್ಣವಾಗಿ ಗುಣವಾಗುವವರೆಗೂ ತನ್ನ ಮನೆಗೆ ಕರೆದೊಯ್ದು, ಅವನ ತಾಯಿಯ ಕೈಯಿಂದ ರುಚಿ ರುಚಿ ಅಡುಗೆ ಮಾಡಿಸಿ ಬಡಿಸುತ್ತಿದ್ದ.

ಒಂದೇ ಕಡೆ ಕೆಲಸ ಮಾಡುವ ಸಹೋದ್ಯೋಗಿ ಅಷ್ಟೇ ಆಗಿದ್ದರೂ, ಗೆಳೆಯರಿಗೋಸ್ಕರ ತಮ್ಮ ಆತ್ಮೀಯತೆ, ಪ್ರೀತಿ, ಸಮಯ ಕೊಡುವ ಗೆಳಯರ ಪ್ರೀತಿಗೆ ಏನು ಕೊಟ್ಟರು ಕಡಿಮಿಯೇ ಅಲ್ಲವೇ?

***

ಸಾವಿತ್ರಮ್ಮ ತಾನು ಸೊಪ್ಪು ಮಾರುವುದು ಒಂದು ಕೆಲಸವೆಂದು ತಿಳಿದೇ ಇರಲಿಲ್ಲ. ಅವಳಿಗೆ ಸೊಪ್ಪು ಮಾರುವುದು ಜೀವನವಾಗಿತ್ತು. ತನ್ನಬಳಿ ಸೊಪ್ಪು ಕೊಳ್ಳುವ ಗ್ರಾಹಕರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತ, ಅವರ ಕಷ್ಟಗಳನ್ನು ತನ್ನದೇ ಎಂದು ಕಣ್ಣೀರು ಹಾಕುತ್ತಿದ್ದಳು. ಅವರ ಸಂತೋಷಕ್ಕೆ ಹೃದಯ ತುಂಬ ಖುಷಿ ಪಡುತ್ತಿದ್ದಳು. ತನ್ನ ಮಕ್ಕಳು ತನ್ನನ್ನು ಹೊರಹಾಕಿದ್ದರು. ಆದರೂ ಅವಳು ಅವಳ ಕಷ್ಟಕ್ಕೆ ಕೊರಗದೆ, ತನ್ನ ಕೈಲಾದ ಮಟ್ಟಿಗೆ ಜೀವನಕ್ಕೆ ಆಗುವಷ್ಟು ಸಣ್ಣ ಮಟ್ಟಿಗೆ ಹಣ ಸಂಪಾದನೆ ಮಾಡಿ ತನ್ನ ಸಣ್ಣ ಗುಡಿಸಿಲಿನಲ್ಲಿ ವಾಸ ಆಗಿದ್ದಳು.

ಎಂದಿನಂತೆ ತನ್ನ ಪುಟ್ಟ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಳು. ಅಷ್ಟರಲ್ಲಿ ಪೂರ್ಣಿಮಾ ಅಲ್ಲಿಗೆ ಬರುತ್ತಿದ್ದವಳು ಹಾಗೆ ತಲೆಸುತ್ತಿ ಬಿದ್ದಳು. ತಕ್ಷಣವೇ ಸಾವಿತ್ರಮ್ಮ ಅವಳ ಕಡೆ ಓಡಿ ಹೋಗಿ ಅವಳ ತಲೆಯನ್ನು ಅವಳ ತೊಡೆಯಮೇಲಿಟ್ಟುಕೊಂಡು ನೀರು ಚುಮುಕಿಸಿದಳು. ಪೂರ್ಣಿಮಾ ನಿಧಾನವಾಗಿ ತನ್ನ ಕಪ್ಪು ಕಟ್ಟಿದ ಕಣ್ಣನ್ನು ತೆರೆದಳು. “ಏನಾಯ್ತು ಮಗು? ಯಾಕಮ್ಮ?” ಎಂದ ಸಾವಿತ್ರಮ್ಮನಿಗೆ ಏನು ಹೇಳಬೇಕೆಂದು ತಿಳಿಯದೆ “ಏನು ಇಲ್ಲ ಅಮ್ಮ. ನನ್ನ ಗಂಡ ನನ್ನನ್ನು ಬಿಟ್ಟು ಹೋಗಿ ೨ ತಿಂಗಳಾಯಿತು. ಇನ್ನು ಮಗುವಿಗೆ ನಾಲ್ಕು ತಿಂಗಳು. ಮಗುವಿಗೆ ಹಾಲು ಕುಡಿಸಲು ದುಡ್ಡಿಲ್ಲ. ಅಪ್ಪ ಅಮ್ಮಯಾರು ಇಲ್ಲದ ಅನಾಥೆ ನಾನು, ನನ್ನ ಕಂದನನ್ನು ನೋಡಿಕೊಳ್ಳಲ್ಲು ಮನೆಗೆಲಸ ಮಾಡಬೇಕಾಗಿದೆ. ಸರಿಯಾಗಿ ಊಟ ಮಾಡದೇ ದೇಹಕ್ಕೆ ಸುಸ್ತಾಗಿದೆ” ಎಂದು ಹೇಳಿದಳು.

ಮೊದಲೇ ಸಾಕ್ಷಾತ್ ಕರುಣಾಮಯಿ ಸಾವಿತ್ರಮ್ಮ. ಪೂರ್ಣಿಮ ವಿಷಯ ತಿಳಿದು ಅವಳ ಕರುಳು ಹಿಂಡಿದಂತಾಯಿತು. ಪೂರ್ಣಿಮ ತಲೆ ಸವರುತ್ತ ಅವಳಿಗೆ ಕುಡಿಯಲು ನೀರು ಕೊಟ್ಟು, ಸ್ವಲ್ಪ ಹಣ್ಣನ್ನು ಕೊಟ್ಟಳು. ಅವಳಿಗೆ ಸಮಾಧಾನ ಮಾಡಿ, ಅವಳ ಮಗುವನ್ನು ಮತ್ತು ಅವಳನ್ನು ತಾನೇ ನೋಡಿಕೊಳ್ಳುತ್ತೇನೆಂದು ಅವಳನ್ನು ತನ್ನ ಗುಡಿಸಿಲಿನಲ್ಲಿ ಆಶ್ರಯ ಕೊಟ್ಟಳು. ಮಗುವಿಗೆ ಒಳ್ಳೆಯ ಆರೈಕೆಯೊಂದಿಗೆ, ಪೂರ್ಣಿಮನಿಗೆ ಸಮಯಕ್ಕೆ ಸರಿಯಾಗಿ ಆಹಾರ ಆರೈಕೆ ಎಲ್ಲವು ದೊರೆಯಿತು. ಜೊತೆಯಲ್ಲಿ ಪೂರ್ಣಿಮಾ ಸಾವಿತ್ರಿಯ ಮಗಳಂತೆ ಪ್ರೀತಿಯ ಆಸರೆ ಆದಳು.

ಪ್ರೀತಿಗೆ ಆರೈಕೆಗೆ ಯಾವ ರಕ್ತ ಸಂಬಂಧದ ಅವಶ್ಯಕತೆ ಇಲ್ಲ ಅಲ್ಲವೇ? ತುಂಬು ಹೃದಯದಿಂದ ಪ್ರೀತಿಯಿಂದ ಕಂಡರೆ ಜೀವನವೇ ಪ್ರೀತಿಮಯ ಏನಂತೀರಿ?

ನಮ್ಮ ಸುತ್ತ ಮುತ್ತ ಪ್ರೀತಿಯೇ ತುಂಬಿದೆ. ದಿನನಿತ್ಯ ನಾವು ನೋಡುವ ಮಾತಾಡಿಸುವ ಜನ, ನಮ್ಮನ್ನು ಎಷ್ಟೊಂದು ಪ್ರೀತಿಸುತ್ತಿದ್ದಾರೆ.. ಎಂದಾರು ಯೋಚಿಸಿ ನೋಡಿ… ಪ್ರೀತಿಯಿಂದ ಆವರಿಸಿದ ಜೀವನ ನಮ್ಮದು. ಬಿಚ್ಚು ಮನಸ್ಸಿನಿಂದ ಎಲ್ಲರನ್ನು ಪ್ರೀತಿ ಮಾಡಿ.. ಯಾರಿಗೆ ಗೊತ್ತು ನಮ್ಮ ಸಮಯ ಯಾವಾಗ ಮುಗಿಯುತ್ತದೆಯೋ…. ನಾವು ಬಿಟ್ಟು ಹೋಗುವುದು ಪ್ರೀತಿಯಷ್ಟೇ ಅಲ್ಲವೇ??

-ಗಿರಿಜಾ ಜ್ಞಾನಸುಂದರ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Ramesh V
Ramesh V
5 years ago

ನಾವು ಸತ್ತ ಮೇಲೆ ನಾವು ಬಿಟ್ ಹೋಗೋದು ಪ್ರೀತಿನೇ ಇರಿಬೊಹುದು ಆದ್ರೆ ಅದನ್ನ ಪರಿಗಣಿಸೋರು ಬೆರಳೆಣಿಕೆ ಮಾತ್ರ. ಪ್ರೀತಿನ ಪಕ್ಕಕಿಟ್ಟು , ಆಸ್ತಿ , ಒಡವೆ , ಶೇರ್ಸ್ ಎಷ್ಟು ಬಿಟಿಯೋದ್ವಿ ಅಂತ ಲೆಕ್ಕ ಹಾಕೋರೇ ಜಾಸ್ತಿ. ಪ್ರೀತಿ ಇವುಗಳ ಮಧ್ಯೆಯೇ ಕಣ್ಮರೆಯಾಗುತ್ತೆ!!!

Girija Jnanasundar
Girija Jnanasundar
5 years ago
Reply to  Ramesh V

ನಮ್ಮ ಸುತ್ತ ಎಲ್ಲಾ ತರಹದ ಜನ ಇದ್ದಾರೆ.ಅಷ್ಟೊಂದು ವೈವಿಧ್ಯತೆಯೇ ಜೀವನದ ಚಂದ. ಎಲ್ಲರಿಂದ ಕಲಿವ ಪಾಠವೇ ಜೀವನ ಎಂದು ನನ್ನ ಅನಿಸಿಕೆ.

Mohan M
Mohan M
5 years ago

ತುಂಬಾ ಚೆನ್ನಾಗಿದೆ, ನಿಮ್ಮ ಪುಟ್ಟ ಪುಟ್ಟ ಕಥೆಗಳಲ್ಲಿ ದೊಡ್ಡ ದೊಡ್ಡ ಮೌಲ್ಯಗಳನ್ನು ತುಂಬ ಸರಳವಾಗಿ ಅರ್ಥ ಮಾಡಿಸ್ತೀರ!! ನೀವೇನಾದ್ರು ಟೀಚರ್ ಆಗಿದ್ರಾ? Madam!!😉

ಉಮಾಶಂಕರ್ ಹುಸ್ಕೂರ್
ಉಮಾಶಂಕರ್ ಹುಸ್ಕೂರ್
5 years ago

ಮೊದಲನೆಯ ಸಂಗತಿಯಲಿ ಸಾವಿತ್ರಿ ತನ ಮನೆ,ಗಂಡ,ಮಕಳು,ಸಂಸಾರ ಗೆ ಮೀಸಲಿಟೂ ತನ ಕಾಯಕವನ್ನು ಮಾಡುತಲೆ.
2) ಪ್ರಮೋದ್ ತನ ಜೀವದ ಗೆಳೆಯನಿಗೆ ತಾನು ವೊಬ ಬರೆ ಸಹದ್ಯೋಗಿ ಅಲ್ದೆ ಮನವೆಯತೆ ಮೇರಿ ಸಹಾಯ ಮಾಡುತನೆ
3) ಸವಿತ್ರಮ್ ತನ ಕಷ್ಟವೇ ದೊಡದೆಂದು ಭವೆಸದೆ ಪೂರ್ಣಿಮಾ ಕಷ್ಟವನೆ ಸ್ಮರಿಸು ಸಹಾಯ ಮಾಡುವ ದೊಡ್ಡ ಗುಣ ಆಕೆಯದು

ಈ ಮೂರು ಕಥೆಗಲ್ಲು ಜೀವನದಲೇ ದುಡಿಗೆಂತ ಸ್ನೇಹ,ಸಮಂಧ,ಮುಖ್ಯಎಂದು ತೋರಿಸುತ್ತೆಯ
ಗಿರಿಜಾ ಮೇಡಂ ಧನ್ಯವಾದಗಲ್ಲು ಶರೆ ಮಾಡಿಧಕೆ

ನಮ್ಮ ಕನ್ನಡ ಸ್ವಲ್ಪ ವೀಕ್ ಧಯವೀಟೋ ಕ್ಷಮಿಸಿ

4
0
Would love your thoughts, please comment.x
()
x