ಮಾತುಗಳೆಲ್ಲಾ ಮೌನವಾದಾಗ, ಎದೆಯಾಳದ ಪದಗಳೆಲ್ಲಾ ಎಚ್ಚೆತ್ತಾಗ: ಡಿ ಜಿ ನಾಗರಾಜ ಹರ್ತಿಕೋಟೆ

ನನ್ನೆಲ್ಲಾ ಕೊರತೆಗಳ ನೀಗಿಸಿಬಿಡು.
ನಿನ್ನ ಕಣ್ಣಲ್ಲೊಂದು ಪುಟ್ಟ ಹಣತೆಯಿದೆ
ನನ್ನೆಲ್ಲಾ ಕನಸುಗಳ ಬೆಳಗಿಬಿಡು.

ಮಾತುಗಳೆಲ್ಲಾ ಮೌನವಾದಾಗ, ಎದೆಯಾಳದ ಪದಗಳೆಲ್ಲಾ ಎಚ್ಚೆತ್ತಾಗ ನನ್ನೊಳಗೊಳಗೆ ಪ್ರೀತಿಯ ಪದಗಳ ಪಯಣ. ಅದೆಂತಾ ಅಮೃತಘಳಿಗೆಯೊ ನಾ ತಿಳಿಯೆ ! ಸಂಬಂಧಿಯ ಮದುವೆಮನೆಯಲ್ಲಿ ಲಂಗ ದವಣಿ ತೊಟ್ಟು, ಮಲ್ಲಿಗೆ ಮುಡಿದು ಉತ್ಸಾಹದಿಂದ ನಲಿದಾಡುತ್ತಿದ್ದ ನಿನ್ನ ನೋಡಿದಾಕ್ಷಣವಂತೂ ಮನಸ್ಸು ಪ್ಯಾರಾಚ್ಯೂಟನಂತಾಗಿಬಿಟ್ಟಿತ್ತು. ಹಸಿಹಸಿ ಹೃದಯದಲಿ ನೀನಿಟ್ಟ ಮೊದಲ ಹೆಜ್ಜೆಗುರುತದು. ನಿನ್ನ ಕಣ್ಣಂಚಿನ ಕುಡಿನೋಟಕ್ಕಾಗಿ,ಮಂದಹಾಸಕ್ಕಾಗಿ ಅದೆಷ್ಟು ಕಾತರಿಸಿದೆನೊ. ನೀ ಸೂಸಿದ ಮಲ್ಲಿಗೆಯ ಮನಸ್ಸಿನ ಘಮದ ಪರಿಮಳ ಮನದಂಗಳದಲ್ಲೆಲ್ಲಾ ಸೂಸಿ ನಾ ಕಳೆದುಹೋಗುವಾಗಲೇ ಮೊಗದಲ್ಲೊಂದು ಮುಗುಳ್ನಗೆಯ ಚೆಲ್ಲಿ ನನ್ನೊಡನೆ ಜೊತೆಯಾಗಿದ್ದೆ ನೀ. ಬಾವಾಂತಾರಂಗದಲ್ಲಿನ ಒಲವಿನ ತುಡಿತವೇ ಹೃದಯದ ಬಡಿತವಾಗಿತ್ತು. ನೀ ಕೇಳಬಹುದು . . . ನನ್ನ ಜೋಡಿಯಿಲ್ಲದಿದ್ದರೆ ಬದುಕಿನ ಬಂಡಿ ಸಾಗುವುದಿಲ್ಲವೇನೋ. . ? ಅದಕ್ಕೆ ನನ್ನ ಉತ್ತರವೊಂದೆ

ಕಾರಿರೊಳಾಗಸದಿ ತಾರೆ ನೂರಿದ್ದರೇನು
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು.

ಎಂಬ ಕಗ್ಗದ ಕವಿವಾಣಿಯೇ ನನ್ನ ಉತ್ತರವಾದೀತು. “ನಾ ನಿನ್ನೊಡೆನಿದ್ದೇನೆ” ಎಂಬ ಪುಟ್ಟದೊಂದು ನುಡಿ ಸಾಕು. ಬದುಕಿನ ಬಂಡಿ ಎಳೆಯಲು,ಮನೆಮನ ಬೆಳಗಲು. ಈ ಮಧುರಮೈತ್ರಿಗೆ ಒಲವೆಂಬ ಜೀವತುಂಬಿ ಬಾಳಸಂಗಾತಿಯಾಗಿ ಬದುಕಿಗೊಂದು ಅರ್ಥ ತುಂಬಿದವಳು ನೀ. ನನ್ನೆಲ್ಲಾ ತಪ್ಪು ಒಪ್ಪುಗಳನ್ನು ಇದ್ದ ಹಾಗೆಯೇ ಒಪ್ಪಿಕೊಂಡು ಅಪ್ಪಿಕೊಂಡಾಗಲೇ ನಾ ನಿನ್ನ ಮೆಚ್ಚಿಕೊಂಡಿದ್ದೆ. ಅರಳೋ ಹೂವು,ನಗುವ ಹಸಿರು,ಹರಿವ ಝರಿ,ಹಾರೋ ಹಕ್ಕಿ,ತಂಪೆಸೆಗೊ ಸೂರ್ಯ ಇವೆಲ್ಲವನ್ನೂ ಕಂಡಾಗ ಅನುಭವಿಸೋ ಉಲ್ಲಾಸವನ್ನೆ ನಿನ್ನ ಸಾಮೀಪ್ಯ ನನಗೊದಗಿಸಿದೆ. ಅಲ್ಲದೇ ಹುಸಿಮುನಿಸು,ಕೋಪ,ತರಲೆ,ತುಂಟಾಟ, ವಿರಸ ಇಲ್ಲವೆಂದಲ್ಲ. ಅವೆಲ್ಲವುಗಳ ಮಧ್ಯೆ ಮಾರಿಯ ಮ್ಯಾಲೊಂದು ಮುಗುಳ್ನಗೆಯ ಆಭರಣ ಹೊತ್ತು ನೀ ಬಳಿ ಸುಳಿದಾಗಲೆಲ್ಲಾ ನನ್ನೊಳಗೊಳಗೆ ಪ್ರೀತಿಯ ಪುಳಕ. ನಮ್ಮಿಬ್ಬರ ಎರಡೂ ವೃತ್ತಿಗಳ,ಎರಡೂ ಕೂಸುಗಳ ಈ ವೇಗದ ಬದುಕಿನಲ್ಲಿಯೂ ಒಲವಿನ ಹಣತೆ ಹಚ್ಚುತ್ತಿರುವ ಪ್ರಣತಿ ನೀ.

ಮಸುಕಾದ ಮನದಲ್ಲಿ
ಝಗ್ಗನೇ ಬೆಳಕು..!
ಆಹಾ…!
ಇನ್ನೂ ಬೆಳಗುವುದು
ಒಲವಿನ ಹಣತೆ‌.

ಕಾಲನ ಪಯಣದಲ್ಲಿ ಕಳೆದು ಹೋದ ದಿನಗಳೆಷ್ಟೋ . ಆದರೂ ಅನುದಿನವೂ ನಿನ್ನಲ್ಲಿ ನಾ ಕಾಣುವ ಹೊಸತನಕ್ಕೆ ಕೊರತೆಯಾದರೂ ಎಲ್ಲಿಂದ ಬಂತು ? ಈ ಪ್ರೀತಿ ಹಳತಾದಷ್ಟೂ ಮತ್ತೆ ಮತ್ತೆ ಮಗುವಾಗುತಿದೆ. ನನ್ನೆದುರು ಸೋಲಿದೆ,ನೋವಿದೆ ಎಂದಾಗಲೆಲ್ಲಾ “ನನ್ನೊಳಗೊಬ್ಬಳು ಸಂಗಾತಿಯಿದ್ದಾಳೆ”  ಎಂದು ಸವಾಲೊಡ್ಡುತ್ತೇನೆ ನಾನು. ನನಗೆ ನೀನೆಂದರೆ ಏನೋ ಹೇಳಲಾಗದ ಅವ್ಯಕ್ತ ಭಾವ. ಏಕೆಂದರೆ ನಿನ್ನಲ್ಲಿ ವಿಶಾಲ ಹೃದಯವಿದೆ,ಬಿಚ್ಚು ಮನಸ್ಸಿನ ಸರಳತೆಯಿದೆ, ಸಹಜ ನಡೆನುಡಿಯಿದೆ, ನಲಿವಿಗೆ ಸಂಭ್ರಮಿಸುವ ನೋವಿಗೆ ಸಂತೈಸುವ ಮನಸಿದೆ,ಅಂತಃಕರಣ,ಕಾಳಜಿ,ಮಮತೆ,ವಾತ್ಸಲ್ಯ ತುಂಬಿ ತುಳುಕುತ್ತಿದೆ. ಇದೆಲ್ಲವನ್ನೂ ಮೀರಿದ ಪ್ರೀತಿಯೆಲ್ಲಿದೆ. . ?ಗೆಳತಿ ನಿನ್ನೊಲವಲಿ ಗೆಲುವು ಕಂಡು ಬಾಳು ಚೆಲುವಾಗಿಸುವಾಸೆ. ಅದೆಷ್ಟೊ ಯಾತನೆಗಳ ಮಧ್ಯೆಯೂ ದಣಿವರಿಯದೆ,ಮಣಿಯದೆ ಜೀವನ್ಮುಖಿ ಪಯಣಕೆ ಜೊತೆಯಾಗುವಾಸೆ. ಬಾರೆ ಹಕ್ಕಿ ಹಾರಿ ಹೋಗಿ ತಾರೆ ತರೋಣ,ಪ್ರೀತಿಯ ಆಲಯದೊಳಗೆ ಬಯಲಾಗೋಣ. . .

ಇಂತಿ

ನಿನ್ನ ನೋವು ನಲಿವಲ್ಲೂ ಸದಾ ಜೊತೆಗಿರುವವ.

ಡಿ ಜಿ ನಾಗರಾಜ ಹರ್ತಿಕೋಟೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x