ರೇಷ್ಮೆ ಸೀರೆ: ಅಶ್ಫಾಕ್ ಪೀರಜಾದೆ

-1-
ಅನುದಾನ ರಹಿತ ಖಾಸಗೀ ಶಾಲೆಯೊಂದರ ಸಹ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ 40 ವಯದ ಅನಂತನದು ಸುಂದರ ಸಂಸಾರ. ಮಗ ಅಮೀತ ಓದಿನಲ್ಲಿ ಜಾಣ ಅನ್ನುವ ಕಾರಣಕ್ಕೆ ನಗರದ ಪ್ರತಿಷ್ಠಿತ ಕಾಲೇಜವೊಂದರಲ್ಲಿ ಪಿ ಯು ವಿಜ್ಞಾನ ಓದುತ್ತಿದ್ದಾನೆ. ಮಗಳು ಮಯೂರಿ ಕೂಡ ಜಾಣ ವಿದ್ಯಾರ್ಥಿನಿ, ಎಂಟನೇಯ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳು ಈ ಸಣ್ಣ ವಯಸ್ಸಿನಲ್ಲಿ ಭರತ ನಾಟ್ಯದಲ್ಲಿ ಹೆಸರು ಮಾಡುತ್ತಿರುವ ಅಪರೂಪದ ಉದಯೋನ್ಮುಖ ಪ್ರತಿಭೆಯೂ ಹೌದು. ಇವಳು ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲಿಯುತ್ತಿರುವ ಶಾಲೆಗೆ, ಹುಟ್ಟಿದ ಮನೆಗೆ ಕೀರ್ತಿ ತಂದಿದ್ದಾಳೆ. ಹೀಗಾಗಿ ಅನಂತನಿಗಂತೂ ತನ್ನ ಮಕ್ಕಳ ಮೇಲೆ ತುಂಬ ಹೆಮ್ಮೆ. ಆಗಾಗ ತನ್ನ ಸಹದ್ಯೋಗಿಗಳ ಮುಂದೆ, ತನ್ನ ಸ್ನೇಹಿತರ ಮುಂದೆ ತಮ್ಮ ಮಕ್ಕಳ ಸಾಧನೆಗಳ ಬಗ್ಗೆ ಹೇಳುತ್ತಿರುತ್ತಾನೆ. ಮಯೂರಿಯ ಕಾರ್ಯಕ್ರಮಗಳ ಬಗ್ಗೆ, ಅವಳ ಪ್ರತಿಭೆಯ ಬಗ್ಗೆ, ಅವಳ ಪ್ರತಿಭೆ ಪುರಸ್ಕಾರಗಳ ಬಗ್ಗೆ ಎಷ್ಟು ಹೇಳಿದರೂ ಅವನಿಗೆ ಕಡಿಮೆಯೇ ಆಗಿತ್ತು. ಆ ಪುಟ್ಟ ಪ್ರತಿಭೆಯನ್ನು ಹೊಗಳಿ ಬರೆದ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗಲಂತೂ ಅವನ ಕಾಲುಗಳು ಭೂಮಿಯ ಮೇಲೆ ಇರುತ್ತಿರಲಿಲ್ಲ. ಅದನ್ನು ಒಯ್ದು ಎಲ್ಲ ಸ್ನೇಹಿತರಿಗೆ ತೋರಿಸಿ ತನಗಾದ ಆನಂದ ನಾಲ್ಕು ಜನಕ್ಕೆ ಹಂಚಿ ಬಂದಾಗಲೇ ಆತನಿಗೆ ಸಮಾಧಾನವಾಗುತ್ತಿತ್ತು. ಇನ್ನೂ ಅವನ ಧರ್ಮಪತ್ನಿ ವಿಮಲಾ ಬಗ್ಗೆ ಹೇಳಬೇಕೆಂದರೆ ಮನೆಗೆ ಸಾಕ್ಷಾತ್ ಮಹಾಲಕ್ಷ್ಮಿ! ಹಳ್ಳಿಯೊಂದರ ಬಡ ಕುಟುಂಬದಿಂದ ಬಂದವಳಾದರು ಗುಣದಲ್ಲಿ ಸಿರಿವಂತೆ. ಮಕ್ಕಳೆಂದ್ರೆ ಪಂಚಪ್ರಾಣ, ಪತಿಯೇ ಪರಮೇಶ್ವರ, ತಾನು ಹುಟ್ಟಿದ್ದೇ ಇವರ ಸೇವೆಗೊಸ್ಕರ ಅನ್ನುವ ಒಂದೇ ಒಂದು ಸಿದ್ಧಾಂತ ಅವಳದು. ಜಾಣ ಮಕ್ಕಳು, ಅನುಸರಿಸಿಕೊಂಡು ಹೋಗುವ ಪತ್ನಿ ಇರುವುದರಿಂದಲೇ ಇಂಥ ತುಟ್ಟಿ ದಿನಮಾನಗಳಲ್ಲಿಯೂ ಬರುವ ಒಂದೆರಡು ಸಾವಿರ ರೂಪಾಯಿ ವೇತನದಲ್ಲಿ ಜೀವನ ಸಾಗಿಸುವುದು ಭಾರ ಅನಿಸಿರಲಿಲ್ಲ. ಮನೆಯಲ್ಲಿ ತುತ್ತು ಅನ್ನಕ್ಕೂ ಗತಿ ಇಲ್ಲದಿರುವಾಗಲೂ ಸದಾ ನಗುನಗುತಲಿರುವ ಪತ್ನಿಯ ಮುಖ ನೋಡಿದಾಗ ಅನಂತನ ಎಲ್ಲ ನೋವು ನಿರಾಸೆಗಳು ಮಾಯವಾಗುದ್ದತ್ತಿದ್ದವು. ಮಕ್ಕಳನ್ನು ಸಹ ಅವಳು ಹಾಗೆಯೇ ಬೆಳಸಿದ್ದಳು. ಅವು ಉಪವಾಸ ಇರಬಲ್ಲವು ಆದರೆ ತಮ್ಮ ಸ್ವಾಭಿಮಾನ ಮರೆತು ಯಾರ ಹತ್ತಿರನು ಹತ್ತು ಪೈಸೆಯೂ ಕೇಳವರಲ್ಲ. ಇಬ್ಬರೂ ಪ್ರತಿಭಾವಂತರಾಗಿದ್ದರಿಂದ ಸರ್ಕಾದ ಸವಲತ್ತು, ಸ್ಕಾಲರಶೀಪ್ ಅದೂ ಇದೂ ಅಂತಾ ಹೇಗೋ ಶಾಲೆಯ ಖರ್ಚು ನಿಭಾಯಿಸುತ್ತಿದ್ದರು. ಇಡೀ ಕುಟುಂಬವೇ ಒಂದು ತರಹ ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡು ಇದ್ದದ್ದರಲ್ಲೆ ಸಂತೃಪ್ತ ಜೀವನ ನಡೆಸುತ್ತಿರವ ಒಂದು ಆದರ್ಶ ಕುಟುಂಬ ಅಂತಲೇ ಹೇಳಬಹುದು.

ಮಗಳು ಮಯೂರಿಯಲ್ಲಿನ, ವಿಶೇಷವಾಗಿ ಜನ್ಮದತ್ತವಾಗಿ ಬಂದಿದ್ದ ಪ್ರತಿಭೆಯನ್ನು ಗುರ್ತಿಸಿದ್ದ ಗುರುಮಾತೆ ಗಂಗಾದೇವಿಯವರು ಅವಳನ್ನು ತನ್ನ ಶಿಷ್ಯಳನ್ನಾಗಿ ಸ್ವೀಕರಿಸಿ ಯಾವುದೇ ಶುಲ್ಕವಿಲ್ಲದೇ ನೃತ್ಯ ಕಲಿಸುವ ಹೊಣೆಗಾರಿಕೆಯನ್ನು ಹೊತ್ತಿದ್ದಲ್ಲದೇ ಮೂಯೂರಿಯನ್ನು ಒಬ್ಬಳು ಸ್ಟಾರ್ ಸಿಲೆಬ್ರೇಟಿಯನ್ನಾಗಿ ಕಾಣುವ ಕನಸು ಕಾಣುತ್ತಿದ್ದರು. ಈ ನಿಟ್ಟಿನಲ್ಲಿ ಅವರ ಪ್ರಯತ್ನ ಸಾಕಷ್ಟು ಸಾರ್ಥಕವೂ ಅಗಿತ್ತು. ಏಕೆಂದರೆ ಈಗಾಗಲೇ ಮಯೂರಿ ಪತ್ರಿಕೆಗಳಲ್ಲಿ, ಟಿವಿ ಚಾನೆಲ್ಲಗಳಲ್ಲಿ ಹೆಸರು ಮಾಡಿದ್ದಳು. ಹೀಗಾಗಿ ಅವಳು ತನ್ನ ಶಿಷ್ಯೆ ಎನ್ನುವ ಕಾರಣಕ್ಕೆ ತನ್ನ ನೃತ್ಯ ಶಾಲೆಯ ಕೀರ್ತಿಯೂ ಎಲ್ಲ ಕಡೆ ಹರಡುತ್ತದೆ ಎನ್ನುವ ವಿಚಾರವೂ ಗುರು ಮಾತೆಯರದಾಗಿತ್ತು. ಇದೆಲ್ಲದರಿಂದ ತುಂಬಾ ಹೆಮ್ಮೆ ಪಡುತ್ತಿದ್ದ ಅನಂತನಿಗೆ ತನ್ನ ಬಡತನದ ವಿಷಯ ಯಾವತ್ತೂ ಪ್ರಮುಖವಾಗಲಿಲ್ಲ. ಒಂದಿಲ್ಲ ಒಂದು ದಿನ ತಮ್ಮ ಶಾಲೆಗೂ ಸರ್ಕಾರದ ಅನುದಾನ ಬಂದು ತಾನೂ ಪೂರ್ಣ ಪ್ರಮಾಣದ ಸಂಬಳ ಪಡೆಯುವನಂತಾಗಿ ತನ್ನ ಕುಟುಂಬವನ್ನು ಮುಂದೊಂದು ದಿನ ಆನಂದವಾಗಿಡಬಲ್ಲೆ ಎನ್ನುವ ನಂಬಿಕೆ ಅವನಲ್ಲಿ ಇತ್ತು.
– 2-

ಹೀಗೊಂದು ದಿನ ಗುರುಮಾತೆ ಗಂಗಾದೇವಿಯವರು ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿರುವದರಿಂದ ಈ ಕುರಿತು ಚರ್ಚಿಸಲು ತಕ್ಷಣ ಬರಬೇಕೆಂದು ಅನಂತನಿಗೆ ಸಂದೇಶ ಕಳಿಸಿದರು. ಹೀಗೆ ತನ್ನ ಮಗಳಿಗೆ ಒಲಿದು ಬರುತ್ತಿರುವ ಅವಕಾಶಗಳ ಬಗ್ಗೆ ಮನದಲ್ಲೆ ಖುಷಿಗೊಂಡು, ಅನಂತ ಗುರುಮಾತೆಯರನ್ನು ಕಾಣಲು ಗಂಗಾ ನೃತ್ಯ ಶಾಲೆಗೆ ಹೊರಟ.

“ ಮಯೂರಿ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ, ಈ ಕಾರ್ಯಕ್ರಮಕ್ಕೆ ಸರ್ಕಾರದ ಪ್ರತಿನಿಧಿಗಳು, ಗಣ್ಯ ಮಾನ್ಯರೆಲ್ಲ ಹಾಜರಿರುತ್ತಾರೆ. ಈ ಕಾರ್ಯಕ್ರಮವನ್ನು ಎಲ್ಲ ಚಾನೆಲ್‍ದವರು ನೇರ ಪ್ರಸಾರ ಮಾಡುತ್ತಾರೆ. ಲಕ್ಷೋಪ ಲಕ್ಷ ಜನ ಇದನ್ನು ವೀಕ್ಷಿಸಿಸುತ್ತಾರೆ. ಒಂದೇ ಒಂದು ದಿನದಲ್ಲಿ ನಿಮ್ಮ ಮಗಳು ಕರ್ನಾಟಕದ ತುಂಬ ಮನೆ ಮಾತಾಗುತ್ತಾಳೆ, ಸ್ಟಾರ್ ಆಗುತ್ತಾಳೆ. ಅಲ್ಲಿಗೆ ನನ್ನ ಕನಸು ನನಸಾಗುತ್ತದೆ. ಅವಳು ಈ ಸ್ಪರ್ಧೆಯಲ್ಲಿ ಗೆದ್ದರೆ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನವಿರುತ್ತದೆ” ಎಂದು ವಿವರಿಸಿದರು. ಮಗಳು ಸ್ಪರ್ಧೆಯಲ್ಲಿ ಭಾಗವಹಿಸುವದಕ್ಕೆ ತನ್ನ ಒಪ್ಪಿಗೆ ಸೂಚಿಸಿದ ನಂತರ “ಇದಕ್ಕೆ ತಮ್ಮ ಸಹಾಯವೇನಾದರೂ ಬೇಕಾಗಬಹುದೇ?” ಎಂದು ಪ್ರಶ್ನಿಸಿದಾಗ-
“ಸ್ಪರ್ಧೆ ಇದೇ ನಗರದ ಕಲಾ ಭವನದಲ್ಲಿ ನಡೆಯುವದರಿಂದ ಭರತ ನಾಟ್ಯಕ್ಕೆ ಒಪ್ಪುವ ಹಾಗೆ ಒಂದು ಸುಂದರವಾದ ಹೊಸ ರೇಷ್ಮೆ ಸೀರೆಯನ್ನು ತೊಡಿಸಿ, ಶೃಂಗರಿಸಿಕೊಂಡು ಬಂದರೆ ಸಾಕು” ಎಂದು ಹೇಳಿದಾಗ ರೇಷ್ಮೆ ಸೀರೆ ಎನ್ನುವ ಪದ ಕೇಳುತ್ತಿದ್ದಂತಯೇ ಸ್ವಲ್ಪ ಯೋಚನೆಗೆ ಬಿದ್ದ. ಏಕೆಂದರೆ ಹೊಸ ರೇಷ್ಮೆ ಸೀರೆ ತರುವ ತಾಕತ್ತು ಅವನಿಗೆ ಈಗ ಸಧ್ಯದ ಮಟ್ಟಿಗೆ ಇರಲಿಲ್ಲ. ಭಾಡಿಗೆಯಿಂದ ಕೊಡುವ ಅಂಗಡಿಗಳು ಕೂಡ ಈ ಚಿಕ್ಕ ನಗರದಲ್ಲಿ ಇರಲಿಲ್ಲ. ಮನೆಯಲ್ಲಿ ಹಳೆ ರೇಷ್ಮೆ ಸೀರೆ ಕೂಡ ಇಲ್ಲದಿರುವುದು ಅವನಿಗೆ ಗೊತ್ತಿತ್ತು. ತನ್ನ ಮಡದಿಯನ್ನು ಒಂದು ಸಾದಾ ಸೀರೆಯನ್ನೇ ತಂದು ಕೊಡಲಾರದವನು ಈಗ ರೇಷ್ಮೆ ಸೀರೆ ತರುವುದು ಕನಸಿನ ಮಾತೇ ಆಗಿತ್ತು. ಇಂಥಾ ಪರಿಸ್ಥಿತಿಯಲ್ಲಿ ಏನು ಮಾಡುವುದು ತನ್ನ ಅಸಹಾಯಕತೆಯನ್ನು ತೂಡಿಕೊಂಡ-
“ನೀವೇ ಏನಾದರು ಮಾಡಿ ರೇಷ್ಮೆ ಸೀರೆಯ ಏರ್ಪಾಟು ಮಾಡಬೇಕು” ಎಂದು ವಿನಂತಿಸಿದ.
ಮೊದಲಿನಿಂದಲೂ ಅನಂತನ ಪರಿಸ್ಥಿತಿಯ ಪರಿಚಯವಿದ್ದ ಗಂಗಾದೇವಿಯವರು-
“ ಬೇರೆ ವಿದ್ಯಾರ್ಥಿಗಳ ಹತ್ತಿರ ಇದ್ದರೆ ತರಿಸಿ ಕೊಡುತ್ತೇನೆ. ಆದಿನ ನೀವು ಅವಳನ್ನು ರೆಡಿ ಮಾಡಿ ತನ್ನಿ”ಎಂದು ಹೇಳಿದರೆ- “ತನ್ನ ಮನೆಯವಳಿಗೆ ಅದೆಲ್ಲ ಬರುವದಿಲ್ಲ ಎಲ್ಲ ನೀವೇ ಮಾಡಬೇಕು” ಎಂದು ಗಂಗಾದೇವಿಯನ್ನು ಒಪ್ಪಿಸಿ ಮನೆಗೆ ಮರಳಿದ. ಮಯೂರಿಯ ಪ್ರಚಂಡ ಪ್ರತಿಭೆಯ ಮೇಲೆ ನಂಬಿಕೆ ಇದ್ದ ಗುರುಮಾತೆ ಎಲ್ಲದಕ್ಕೂ ಒಪ್ಪಿಕೊಂಡಿದ್ದರು. ಕಾರ್ಯಕ್ರಮ ಆರಂಭವಾಗುವ ಒಂದೆರಡು ಘಂಟೆ ಮೊದಲು ತಂದು ಬಿಟ್ಟರೆ ಸಾಕು ಎಲ್ಲ ಏರ್ಪಾಡವೂ ಮಾಡುವದಾಗಿ ಅನಂತನಿಗೆ ಹೇಳಿ ಕಳಿಸಿದರು.

-3-

ಹೇಳಿದಂತೆ ಕಾರ್ಯಕ್ರಮ ನಿಗದಿ ಪಡಿಸಲಾದ ಭಾನುವಾರದಂದು ಅನಂತ ದಂಪತಿಗಳು ಮಯೂರಿಯೊಂದಿಗೆ ಕಾರ್ಯಕ್ರಮದ ಎರಡು ಗಂಟೆ ಮುಂಚೆಯೇ ಕಲಾ ಭವನಕ್ಕೆ ಆಗಮಿಸಿದರು. ಮಯೂರಿಯನ್ನು ಗಂಗಾದೇವಿಯವರ ಹತ್ತಿರ ಬಿಟ್ಟು ಬಂದು ಅನಂತ, ವಿಮಲಾ ಇಬ್ಬರೂ ಮುಂದಿನ ಕುರ್ಚಿಗಳಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಂಡು ಕುಳಿತರು. ಈಗಾಗಲೇ ಹೀಗೆ ಕುಳಿತ ಪಾಲಕರು ಸಾಕಷ್ಟು ಜನ ಇದ್ದರು. ಎಲ್ಲರೂ ತಮ್ಮ ತಮ್ಮ ಮಕ್ಕಳ ಬಗ್ಗೆ ಆಡಿಕೊಳ್ಳುತ್ತಿದ್ದರು. ಕಾರ್ಯಕ್ರಮದ ಸಮಯ ಹತ್ತಿರವಾದಂತೆ ಸಭಾ ಭವನ ಕಿಕ್ಕಿರಿದು ತುಂಬಿತ್ತು. ಮೀಡಿಯಾದವರು, ನಿರ್ಣಾಯಕರು, ಕಲಾ ಪ್ರೇಮಿಗಳು, ನಾಯಕರು ಎಲ್ಲರೂ ಅಲ್ಲಿದ್ದರು. ಅಂದುಕೊಂಡಂತೆ ಕಾರ್ಯಕ್ರಮ ಸರಿಯಾದ ಸಮಯಕ್ಕೆ ಆರಂಭಗೊಂಡಿತ್ತು. ಒಂದರ ಹಿಂದೆ ಒಂದರಂತೆ ಉತ್ತಮ ನೃತ್ಯ ಪ್ರದರ್ಶನಗಳು ನಡೆದವು. ಎಂಟತ್ತು ಸ್ಪರ್ಧಾಳುಗಳ ನಂತರ ಮಯೂರಿಯ ಸರದಿ, ಹಸಿರು ವರ್ಣದ ನವಿರಾದ ಸುಂದರವಾದ ರೇಷ್ಮೆ ಸೀರೆಯಲ್ಲಿ ವೇದಿಕೆಗೆ ಬಂದ ಮಯೂರಿ ಧರೆಗಿಳಿದು ಬಂದ ನಾಟ್ಯ ಸರಸ್ವತಿಯೇ!. ಮಯೂರಿ ನವಿಲಿನಂತೆ ನಲಿಯುತ್ತಿದ್ದರೆ ಪ್ರೇಕ್ಷಕರ ಮನಸ್ಸಿನಿಂದ ‘ವಾಹ್’ ಅನ್ನುವ ಶಬ್ಧ ಹೊರಡುತಿತ್ತು. ಅನಂತ, ವಿಮಲಾ ಮಗಳ ಸೌಂದರ್ಯ, ಹಾವ-ಭಾವ, ನೃತ್ಯ ಭಂಗಿಗಳು ಕಣ್ತುಂಬಿಕೊಂಡು ಹರ್ಷ ಪಡುತ್ತಿದ್ದರು. ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಮೂಯೂರಿ ತನ್ನ ನೃತ್ಯದ ಮೂಲಕ ಎಲ್ಲರ ಮನಸ್ಸು ಗೆದಿದ್ದಳು. ಅವಳ ಪ್ರದರ್ಶನ ಮುಗಿಯುತ್ತಿದಂತೆಯೇ ಸಭಾ ಭವನದ ತುಂಬ ಕರತಾಡನ, ಹರ್ಷೋದ್ಘಾರ!. ಕಾರ್ಯಕ್ರಮ ಮುಗಿದ ಬಳಿಕ ತಡ ರಾತ್ರಿ ಮಗಳು, ಪತ್ನಿಯೊಂದಿಗೆ ರಿಕ್ಷಾದಲ್ಲಿ ಮನೆಗೆ ಮರಳಿದ.

ಮುಂಜಾನೆ ಎಂದಿನಂತೆ ಅನಂತ ತನ್ನ ಕಾಯಕಕ್ಕೆ ತೆರಳಿದ. ಮಯೂರಿ ಸಹ ಶಾಲೆಗೆ ಹೊರಟು ಹೋದಳು. ವಿಮಲಾ ಮನೆಗೆಲಸಕ್ಕೆ ತೊಡಗಿಕೊಂಡಳು. ನಿನ್ನೆ ಕಾರ್ಯಕ್ರಮದ ಅವಸರದಲ್ಲಿ ಮುಸುರೆ ಪಾತ್ರೆಗಳೆನ್ನೆಲ್ಲ ಹಾಗೇ ಉಳಿದಿವೆ ಅವುಗಳನ್ನು ತಿಕ್ಕಿ ಸ್ವಚ್ಚಗೊಳಿಸಬೇಕು. ನಂತರ ರೇಷ್ಮೆ ಸೀರೆ ಸೇರಿದಂತೆ ನಿನ್ನೆ ರಾತ್ರಿ ಸೋಪ ಪಾವಡರ ಹಾಕಿ ನೆನೆಯಿಟ್ಟ ಎಲ್ಲ ಬಟ್ಟೆಗಳನ್ನು ಒಗೆದು ಒಣಹಾಕಬೇಕು. ನಂತರ ಅಡುಗೆಗೆ ತೊಡಗಬೇಕು ಎಂದುಕೊಂಡು ಮೊದಲು ಪಾತ್ರೆಗಳೆಲ್ಲ ಶುಭ್ರವಾಗಿಸಿದಳು. ಈಗ ನೆನೆ ಇಟ್ಟ ಬಟ್ಟೆಗಳ ಬಕೆಟ್ ತಗೆದುಕೊಂಡು ಕುಳಿತಳು. ಒಂದೊಂದಾಗಿ ಎಲ್ಲ ಬಟ್ಟೆಗಳನ್ನು ಸೋಪ ಹಚ್ಚಿ ಬ್ರಶ್‍ದಿಂದ ತಿಕ್ಕುತ್ತ ಬಂದಳು. ಕೊನೆಗೆ ಉಳಿದಿದ್ದು ರೇಷ್ಮೆ ಸೀರೆ ಚನ್ನಾಗಿ ತಿಕ್ಕಿ ಸ್ವಚ್ಚ ಮಾಡಿ ಕೂಡಬೇಕು. ಸೀರೆ ಕೊಟ್ಟು ಸಹಾಯ ಮಾಡಿದವರಿಗೊಮ್ಮೆ ಮನದಲ್ಲೇ ಕೃತಜÐತೆಗಳನ್ನು ಅರ್ಪಿಸಿದಳು. ಈ ಸೀರೆಯಲ್ಲಿ ಮಯೂರಿ ಎಷ್ಟು ಸುಂದರವಾಗಿ ಕಾಣುತ್ತಿದ್ದಳು. ನಿನ್ನೆ ಅದನ್ನು ಸ್ಪರ್ಶಿಸಿದಾಗ ಅದೇನೋ ಅಪ್ಯಾಯಮಾನ! ಅದೇನೋ ಪುಳಕ!! ಹಾಗೇಯೇ ಸುಂದರ ಸ್ವಪ್ನಕ್ಕೆ ಜಾರಿದಳು. ತನ್ನ ಗಂಡ ಕೆಲಸ ಮಾಡುತ್ತಿರು ಶಾಲೆಗೆ ಅನುದಾನ ಬಂದು ಪೂರ್ಣ ಸಂಬಳ ಪಡೆದ ಸಂಭ್ರಮದಲ್ಲಿ ಅನಂತ ಒಂದು ಮೈಸೂರ ಸೀಲ್ಕ ಸಾರಿ ಖರೀದಿಸಿ ತಂದು ವಿಮಲೆಯ ಕೈಗೆ ಇಟ್ಟು “ಇದು ನನ್ನ ಹೃದಯ ರಾಣಿಗೆ ಒಲವಿನ ಉಡುಗೊರೆ” ಎಂದು ಈಗಲೇ ಸೀರೆ ಉಟ್ಟು ಬರುವಂತೆ ಒತ್ತಾಯಿಸಿ, ಅವಳನ್ನು ರೇಷ್ಮ ಸೀರೆಯಲ್ಲಿ ಕಂಡು” ಸಾಕ್ಷಾತ್ ಅಪ್ಸರೆ” ಎಂದು ಮನಸಾರೆ ಹೊಗಳಿದ್ದು, ಆ ಹೊಗಳಿಕೆಗೆ ವಿಮಲೆ ನಾಚಿ ಕೆಂಪಾಗಿದ್ದು…ಅಷ್ಟರಲ್ಲಿ ಬೆಕ್ಕು ಜಿಗಿದ ಸದ್ದು ಅವಳನ್ನು ವಾಸ್ತವಕ್ಕೆ ಎಳೆದು ತಂದಿತ್ತು. ಕನಸು ನೆನಪಿಸಿಕೊಂಡು ಒಂದು ಕ್ಷಣ ಮಂದಹಾಸ ಬೀರುತ್ತಲೇ ರೇಷ್ಮೆ ಸೀರೆ ಕೈಗೆತ್ತಿಕೊಂಡಳು. ಸೋಪ ಪಾವಡರನಲ್ಲಿ ನಿನ್ನೆಯಿಂದ ನೆನೆದ ಸೀರೆ ಶಗಣಿಯ ಗುಂಪಿಯಂತಾಗಿತ್ತು. ಹರಸಾಹಸ ಮಾಡಿ ಅದನ್ನು ತೆರೆದು ಸೋಪ ಹಚ್ಚಿ ಬ್ರಶ್‍ದಿಂದ ಉಜ್ಜಲು ಆರಂಭಿಸಿದಂತೆ ರೇಷ್ಮ ಎಳೆಗಳು ಒಂದೊಂದಾಗಿ ಬಿಚ್ಚಲಾರಂಭಿಸಿದವು. ಓಹೋ, ತನ್ನಿಂದ ಎನೋ ಅಚಾತುರ್ಯವಾಗಿದೆ ಎಂದುಕೊಂಡು ಪಕ್ಕದ ಮನೆಯವರೊಬ್ಬರಿಗೆ ಕರೆತಂದು ತೋರಿಸಿದಳು. ಅವರು ಅಸುನೀಗಿದ ವ್ಯಕ್ತಿಯನ್ನು ಕಂಡ ವೈದ್ಯರು ಪ್ರತಿಕ್ರಿಯಿಸುವಂತೆ “ಎಲ್ಲ ಮುಗಿದು ಹೋಗಿದೆ ಇನ್ನೇನೂ ಮಾಡಲು ಆಗುದಿಲ್ಲ” ಎಂದರು. ಅಷ್ಟರಲ್ಲೆ ಎಲ್ಲವನ್ನು ಅರ್ಥೈಸಿಕೊಂಡ ವಿಮಲಾ ಕಣ್ಣಲ್ಲಿ ನೀರು ತಂದುಕೊಂಡು ಸತ್ತು ಬಿದ್ದ ಸೀರೆಯನ್ನು ನೋಡುತ್ತ ನಿಂತಳು.
“ಏನ್ರೀ ವಿಮಲಾ ಬಾಯಿ, ರೇಷ್ಮೆ ಸೀರೆ ಯಾರಾದರೂ ಸೋಪಿಗೆ ಹಾಕಿ ನೆನೆ ಇಡ್ತಾರೆನ್ರೀ ? ನೀವು ಅದಷ್ಟೆ ಮಾಡುವದಲ್ಲದೇ ಸೋಪ ಹಚ್ಚಿ, ಬ್ರಶದಿಂದ ಉಜ್ಜಿ ತುಟ್ಟಿ ಸೀರೆ ಹಾಳು ಮಾಡಿದಿರೀ, ಇನ್ನು ಸೀರೆ ಕೊಟ್ಟವರಿಗೆ ಏನು ಹೇಳ್ತೀರಾ?” ಎಂದು ಹೇಳುತ್ತ ಹೊರ ನಡೆದಾಗ ವಿಮಲೆಯ ಕಣ್ಣಿಂದ ಕಣ್ಣೀರು ಕಟ್ಟೆಯೊಡೆಯಿತು. ಸಂಜೆ ಅನಂತ ಮನೆಗೆ ಬಂದಾಗ ವಿಷಯ ತಿಳಿದು ಸಿಟ್ಟಿನಲ್ಲಿ ಬೆಂಕಿಯಂತಾಗಿ ವಿಮಲೆ ಕೆನ್ನೆಗೊಂದು ಬಾರಿಸಿ “ ಹಳ್ಳಿ ಗುಗ್ಗು ಏನೂ ಗೋತ್ತಿಲ್ಲ ಇದಕ್ಕೆ” ಎಂದು ಅರಚಾಡಿದ.
“ನನಗೇನು ಗೊತ್ತು ರೇಷ್ಮೆ ಸೀರೆ ನೀರಿಗೆ ನೆನೆ ಇಟ್ಟು ತಿಕ್ಕಿ ತೊಳೆಬಾರದಂತ. ಹಳ್ಳಿ ಗುಗ್ಗು ನಾನು ತವರಿನಲ್ಲೂ ರೇಷ್ಮೆ ಸೀರೆ ನೋಡಿದಾಕಿಯಲ್ಲ, ಮದ್ವೆಯಾಗಿ ಇಷ್ಟು ದಿನಾ ಆದರೂ ಗಂಡನ ಮನೆಯಲ್ಲೂ ಕಂಡಾಕಿಯಲ್ಲ, ಏನೋ ಅದನ್ನು ಚೆನ್ನಾಗಿ ಹಿಂದಿರುಗಿಸಬೇಕು ಅಂತಾ ಬಯಸಿದ್ದೇ ನನ್ನ ತಪ್ಪಾಯ್ತು” ಎಂದೂ ಅಪರೋಕ್ಷವಾಗಿ ಅನಂತನನ್ನು ಚುಚ್ಚಿದಳು ವಿಮಲ. ತನ್ನ ಅಸಹಾಯಕತೆಯನ್ನು ದರ್ಶನ ಮಾಡಿಸಿದ ವಿಮಲೆಯ ಸಾತ್ವಿಕ ಸಿಟ್ಟನ್ನು ಅರ್ಥ ಮಾಡಿಕೊಂಡ ಅನಂತ-
“ಆಗಿದ್ದು ಆಗಹೋಯ್ತು, ಏನಾದರು ಮಾಡೋಣ” ಎಂದು ವಿಮಲೆಯನ್ನು ಸಂತೈಸಿಸಲು ಮಂದಾದನು.

-4-

ಮುಂದೆ ಏನು ಮಾಡಬೇಕೆಂದು ತಿಳಿಯದ ಅನಂತ ಗಂಗಾದೇವಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿ ನಡೆದ ಘಟನೆಯನ್ನು ವಿವರಿಸಿದ. ಘಟನೆ ವಿವರ ಕೇಳಿ ಸ್ವಲ್ಪ ವಿಚಲಿತರಾದವರಂತೆ ಕಂಡುಬಂದ ಗಂಗಾದೇವಿಯವರು.
“ಏನ್ರೀ..ಬೇರೆಯವರ ಸೀರೆ ಅನ್ನುದು ಗೊತ್ತಿದ್ದೂ ಹೀಗೆ ಮಾಡುದಾ?” ಎಂದು ಸ್ವಲ್ಪ ಸಿಟ್ಟಿನಿಂದ ಮಾತಾಡಿದರು.
“ಏನೋ ನನ್ನ ಹೆಂಡತಿಯಿಂದ ಅರಿಯದೇ ತಪ್ಪು ಆಗಿದೆ, ದಯವಿಟ್ಟು ಕ್ಷಮಿಸಿ. ಅದರ ದಡ್ಡು ಎಷ್ಟಾಗುತ್ತೆಯೋ ಕೇಳಿ ಹೇಳಿ ಹೇಗಾದರೂ ಮಾಡಿ ನಾನು ಕೊಡುತ್ತೇನೆ” ಎಂದು ಅನಂತ ಹೇಳಿದಾಗ ನೆಮ್ಮದಿಯ ಉಸಿರು ಬಿಟ್ಟ ಗಂಗಾದೇವಿಯವರು.
“ಆಯ್ತು ಅವರಿಗೆ ಕೇಳಿ ಹೇಳುವೆ” ಎಂದು ಪೋನ ಇಟ್ಟಾಗ ಒಂಚೂರು ಸಮಾಧಾನ ಅನಂತನಿಗೆ’

ಮಾರನೇಯ ದಿನ ಫೋನ ಕರೆ ಮಾಡಿದ ಗಂಗಾದೇವಿಯವರು- “ ಆ ಸೀರೆ ಬೆಲೆ ಹತ್ತು ಸಾವಿರವಂತೆ, ತಂದು ಈಗ ಹದಿನೈದು ದಿನವಾಯಿತಂತೆ, ಅದಕ್ಕೇ ಹತ್ತು ಸಾವಿರವನ್ನೇ ಕೋಡಬೇಕಾಗುತ್ತೆ” ಎಂದು ಹೇಳಿದಾಗ ಕ್ಷಣಹೊತ್ತು ಹೃದಯ ಸ್ತಬ್ಧವಾದ ಅನುಭವ ಅನಂತನಿಗೆ. ತನಗೇ ತಿಂಗಳಿಗೆ ಬರುವ ಸಂಬಳವೇ ಒಂದೆರಡು ಸಾವಿರ. ಇನ್ನೂ ಹತ್ತು ಸಾವಿರ ಎಲ್ಲಿಂದ ತರುವುದು ಎಂದು ಯೋಚ್ನೆಗೆ ಬಿದ್ದ ಅನಂತನ ಮೌನ ಅರ್ಥ ಮಾಡಿಕೊಂಡ ಗಂಗಾದೇವಿಯವರು-
“ ಪರ್ವಾಗಿಲ್ಲ. ಅಷ್ಟು ದುಡ್ಡು ಸಧ್ಯ ನಿಮ್ಮಿಂದ ಕೊಡಲಿಕ್ಕಿ ಆಗಲಿಕ್ಕಿಲ್ಲ. ಈಗ ನಾ ಕೊಟ್ಟಿರತೀನಿ ನೀವು ಸಾಧ್ಯವಾದಾಗ ಕೊಡಿಯುವಿರಂತೆ” ಎನ್ನವ ಅವರ ಹೃದಯವಂತಿಕೆಗೆ ಅನಂತನ ಹೃದಯ ತುಂಬಿ ಬಂದು-
“ ನೀವು ಎಷ್ಟೊಂದು ಉಪಕಾರ ಮಾಡಿದೀರಿ, ಇದೊಂದು ಭಾರ ನಿಮ್ಮ ಮೇಲೆಯೇ ಹಾಕುವುದು ಸರಿ ಅನಿಸುವದಿಲ್ಲ. ಏನಾದರು ಮಾಡಿ ಈ ದುಡ್ಡನ್ನು ನಾನೇ ಕೊಡುತ್ತೇನೆ” ಎಂದು ಹೇಳಿ ಕರೆ ನಿಲ್ಲಿಸಿದ.
-5-
ಅನಂತನಿಗೆ ಒಂದೆರಡು ದಿನಗಳಲ್ಲಿ ಹೇಗಾದರು ಮಾಡಿ ಹತ್ತು ಸಾವಿರ ಹೊಂದಿಸಬೇಕಾಗಿತ್ತು. ಒಬ್ಬ ಬಡ ಶಿಕ್ಷಕನ ಬ್ಯಾಂಕ ಬ್ಯಾಲನ್ಸ್‍ಯಲ್ಲ ಖಾಲಿ. ಮನೆಯಲ್ಲಿ ಒಂದು ರೂಪಾಯಿನೂ ಇಲ್ಲ. ಹೇಗೆ ಮಾಡುವುದು? ಎಷ್ಟೇ ತೊಂದರೆಗಳು ಬಂದರೂ ಯಾರ ಹತ್ರಾನೂ ದುಡ್ಡು ಕೇಳಿದವನಲ್ಲ. ಬೇರೆಯವರ ಬಳಿ ಸಾಲ ಕೇಳುವುದೆಂದರೆ ಶೂಲಕ್ಕೆ ಏರಿದಷ್ಟೆ ವೇದನೆ. ಮುಂದೇನು ಮಾಡುವುದು ಪ್ರಶ್ನೆ ದೈತ್ಯ ರೂಪ ತಾಳಿತ್ತು. ಇಂಥ ಸಂಕಟದ ಸಮಯದಲ್ಲಿ ದೇವರಂತೆ ನೆನಪಾದವನು ತನ್ನ ಪ್ರಾಣ ಸ್ನೇಹಿತ ಅಶೋಕ. ಅಶೋಕ ಅನಂತ ಇಬ್ಬರು ಸಹಪಾಠಿಗಳು, ಸ್ನೇಹಿತರು. ಅಶೋಕನ ದೈವ ಚೆನ್ನಾಗಿತ್ತು ಅವನಿರುವ ಖಾಸಗಿ ಶಾಲೆಗೆ ಬೇಗ ಅನುದಾನ ಸಿಕ್ಕು ಸಂಬಳ ಪಡೆಯುವಂತಾಗಿತ್ತು. ಈಗ ಕೈತುಂಬ ಸಂಬಳ ತಗೆದುಕೊಂಡು ಹಾಯಾಗಿ ಜೀವನ ಸಾಗಿಸುತ್ತಿರುವನು. ನಗರದ ಬಡಾವಣೆಯಲ್ಲಿ ಸ್ವಂತ ಮನೆ ಕೂಡ ಕಟ್ಟಿಸಿರುವನು, ಅವನ ಪತ್ನಿ ಕೂಡ ಸರ್ಕಾರಿ ಶಾಲಾ ಶಿಕ್ಷಕಿ. ಅವಳದು ಕೈತುಂಬ ಸಂಬಳ. ಡಬಲ್ ಪಗಾರ ಲೈಫ್‍ನಲ್ಲಿ ಸೆಟ್ಟಲ್ ಆಗಿದ್ದಾನೆ. ಇಷ್ಟಾದರೂ ಇಲ್ಲಿಯವರೆಗೂ ಅವನ ಹತ್ರಾ ತನ್ನ ಕಷ್ಟಕ್ಕೆ ಅಂತಾ ಒಂದು ಪೈಸೆನೂ ಕೇಳಿದವನಲ್ಲ. ಅದರೆ ಈ ಸಂದರ್ಭದಲ್ಲಿ ಅವನನ್ನು ನೆನಪಿಸಿಕೊಳ್ಳಲು ಇನ್ನೊಂದು ಕಾರಣವೂ ಇತ್ತು. ಐದಾರು ವರ್ಷಗಳ ಹಿಂದೆ ಅಶೋಕನಿಗೆ ಅನುದಾನ ದೊರಕಿಸಿಕೊಳ್ಳುವ ಸಂದರ್ಭದಲ್ಲಿ ಲಂಚಕೊಡಬೇಕಾಗಿ ಬಂದಾಗ ತನ್ನ ಕಷ್ಟವನ್ನು ಅಶೋಕ ಅನಂತನ ಮುಂದೆ ಹೇಳಿಕೊಂಡಿದ್ದ. ತನ್ನ ಗೆಳೆಯನಿಗಾದರೂ ಅನುದಾನ ಸಿಕ್ಕು ಬೇಗ ಸಂಬಳ ತಗೆದುಕೊಳ್ಳುವಂತಾಗಲಿ ಎನ್ನುವ ಉದ್ದೇಶಕ್ಕೆ ಹೇಗೋ ಉಳಿತಾಯ ಮಾಡಿ ಇಟ್ಟಿದ್ದ ಐದು ಸಾವಿರ ರೂಪಾಯಿಗಳನ್ನು ಅಶೋಕನ ಕೈಗಿಟ್ಟು-
“ನನ್ನಿಂದ ಸಾಧ್ಯವಾದಷ್ಟು ಕೊಟ್ಟಿದ್ದೇನೆ” ಎಂದು ಹೇಳಿದ್ದ.

“ಮಿಕ್ಕಿದ್ದು ಇನ್ನೇಲ್ಲಿಯಾದರು ಕೇಳುತ್ತೇನೆ, ನೀನು ಮಾಡಿದ ಉಪಕಾರ ಎಂದಿಗೂ ಮರೆಯುವುದಿಲ್ಲ…” ಎನ್ನುವ ಅಶೋಕನ ಮಾತುಗಳು ನೆನಪಿಗೆ ಬಂದು ತಾನು ಹೋಗಿ ಕೇಳಿದರೆ ಅವನು ದುಡ್ಡು ಕೊಟ್ಟೇ ಕೊಡ್ತಾನೆ ಎನ್ನುವ ನಂಬಿಕೆಯೊಂದಿಗೆ ಅಶೋಕನ ಮನೆಯತ್ತ ಹೆಜ್ಜೆ ಹಾಕಿದ. ಮುಸ್ಸಂಜೆ ಹೊತ್ತು ಅನಂತ ಅಶೋಕನ ಮನೆ ಕಾಲಿಂಗ ಬೆಲ್ಲ ಒತ್ತಿದ ಸ್ವಲ್ಪ ಸಮಯದಲ್ಲೇ “ಯಾರು” ಎನ್ನುತ್ತ ಅಶೋಕನೇ ಬಾಗಿಲು ತೆರೆದ. ಅಶೋಕನ ಮುಖ ಕಂಡು ಅನಂತನ ಮುಖ ಹೂವಿನಂತೆ ಅರಳಿತು.
“ಅಶೋಕ ನಿನ್ನ ಹತ್ರಾ ಸ್ವಲ್ಪ ಕೆಲಸವಿತ್ತು” ಎಂದು ಹೇಳಿದಾಗ, ಎಂದೂ ತನ್ನ ಮನೆ ಕಡೆಗೆ ಬಾರದವನು ಇವತ್ತು ಬಂದಿದ್ದಾನೆ ಅಂದರೆ ದುಡ್ಡೇ ಬೇಕಾಗಿರಬಹುದೆಂದು ಗ್ರಹಿಸಿದ ಅಶೋಕ-
“ಏನು ಕೆಲ್ಸಾ “ ಎಂದು ಮನೆ ಬಾಗಿಲಲ್ಲೆ ನಿಲ್ಲಿಸಿ ಸ್ವಲ್ಪ ಒರಟಾಗಿಯೇ ಪ್ರಶ್ನಿಸಿದ್ದ.
“ಅಂಥದೆನಿಲ್ಲ, ಅರ್ಜಂಟ ಸ್ವಲ್ಪ ದುಡ್ಡು ಬೇಕಿತ್ತು. ಬಹಳೇನಿಲ್ಲ ಅದೇ ಒಂದೈದು ಸಾವಿರ” ಅಂದಿದಕ್ಕೆ ಅಶೋಕನಿಗೆ ಅನಂತ ಬಂದ ಉದ್ದೇಶ ಅರ್ಥವಾಗಿತ್ತು.
“ಅದೂ…” ಎಂದು ಎನೋ ಯೋಚನೆಗೆ ಬಿದ್ದವರಂತಿದ್ದ ಅಶೋಕನಿಗೆ ಅನಂತ-
“ ಏನಿಲ್ಲ ಒಂದೇ ತಿಂಗಳು, ಮುಂದಿನ ತಿಂಗಳ ಸಂಬಳಕ್ಕೆ ನಿನ್ನ ದುಡ್ಡು ವಾಪಸ ಮಾಡತೀನಿ” ಎಂದು ವಿನಂತಿಸಿದ.
“ ಇಲ್ಲೋ ಗೆಳೆಯಾ, ಈ ತಿಂಗಳು ಮನೆಯಲ್ಲಿ ತುಂಬಾ ಅಡಚಣಿ, ನನ್ನ ಹೆಂಡ್ತಿಗೂ ಹುಶಾರಿಲ್ಲ. ಹಾರ್ಟ ಪ್ರಾಬ್ಲಮ್, ಆಸ್ಪತ್ರೆಗೆ ಸಿಕ್ಕಾಪಟ್ಟೆ ಖರ್ಚು. ಈ ತಿಂಗಳು ಸಂಬಳ ಬೇರೆ ಬಂದಿಲ್ಲ. ತಪ್ಪು ತಿಳಿಬೇಡ ಇದ್ದಿದ್ದರೆ ಖಂಡಿತ ಸಹಾಯ ಮಾಡುತ್ತಿದ್ದೆ” ಎಂದು ನೆಪ ಹೇಳಿ ನೊಣಚಿಕೊಳ್ಳಲು ಪ್ರಯತಿಸಿದ. ಅಶೋಕನ ವರ್ತನೆಯಿಂದ ಅನಂತನಿಗೆ ವಿಪರೀತ ಸಿಟ್ಟು ಬಂತು. ಹಿಂದೊಮ್ಮೆ ಆತನಿಗೆ ಮಾಡಿದ ಸಹಾಯ ಈಗ ನೆನಪಿಸಲೇಬೇಕು ಎಂದನಿಸಿ-
“ಅನುದಾನ ತಗೆದುಕೊಳ್ಳುವ ಸಮಯದಲ್ಲಿ ನೀನು ನನ್ನಿಂದ ತಗೆದುಕೊಂಡ ದುಡ್ಡು ಇಂದಿಗೂ ಕೊಟ್ಟಿಲ್ಲ”
“ಹೀಗ್ಹೇಳು ಮತ್ತೆ ಕೊಟ್ಟ ಸಾಲ ವಸೂಲಿಗೆ ಬಂದಿದೀನಿ ಅಂತಾ” ಎಂದು ಸಿಟ್ಟಿನಿಂದ ಹೇಳಿದಾಗ ಅನಂತ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದ-
“ಹಾಗೇ ತಿಳ್ಕೋ, ಆದರೆ ಈಗ ನನ್ನ ದುಡ್ಡು ನನಗೆ ಬೇಕೇ ಬೇಕು”
“ಹಾಗಾದ್ರೆ ನನ್ನ ಹತ್ರಾನೂ ಈಗ ದುಡ್ಡಿಲ್ಲ, ಇದ್ದಾಗ ಕೊಡ್ತೀನಿ ಅದೇನು ಮಾಡ್ತೀಯೋ ಮಾಡು” ಎಂದು ಮುಖಕ್ಕೆ ಬಡಿಯುವ ಹಾಗೆ ಬಾಗಿಲು ಹಾಕಿದ.
ಅನಂತನ ಕಣ್ಣಲ್ಲಿ ನೀರಾಡಿತು, ಎದೆಯಲಿ ಸಿಟ್ಟು ಕುದಿಯುತಿತ್ತು, ಅದೇ ಸಿಟ್ಟಿನಲ್ಲಿ ಮನೆಗೆ ಮರಳಿದಾಗ ಎದುರಾದ ಪತ್ನಿಯ ಪ್ರಶ್ನೆ-
“ದುಡ್ಡೇನಾದ್ರು ಸಿಕ್ಕಿತೇನ್ರೀ?”
“ಇಲ್ಲಾ ಕಣೇ” ಎಂದು ತುಂಬಾ ಬೇಸರವಾಗಿ ಹೊರಟ ಧ್ವನಿಯನ್ನು ಅರ್ಥ ಮಾಡಿಕೊಂಡ ವಿಮಲ ಯಾವುದೋ ಹಳೆ ಟ್ರಂಕ್ಕಿನಲ್ಲಿ ಜೋಪಾನವಾಗಿರಿಸಿದ್ದ, ತವರ ಮನೆ ಉಡುಗೊರೆಯಾಗಿ ಬಂದಿದ್ದ ಚಿನ್ನದ ಎರಡು ಬಳೆಗಳನ್ನು ತಂದು ಅನಂತನ ಮುಂದೆ ಹಿಡಿದು ಹೇಳಿದಳು.
“ ಈ ಬಳೆಗಳನ್ನು ಒಯ್ದು ಅಡವಿಟ್ಟು ಆ ಸೀರೆ ದುಡ್ಡು ಕೊಟ್ಟು ಬನ್ನಿ”
ವಿಮಲಳ ಹೃದಯವಂತಿಕೆ ಕಂಡು ಅನಂತನಿಗೆ ಹೆಮ್ಮೆ ಅನಿಸಿತು. ಹೃದಯ ತುಂಬಿ ಬಂದು ಕಣ್ಣಲ್ಲಿ ನೀರಾಡಿತು. ಅವಳತ್ತ ಒಮ್ಮೆ ಹೆಮ್ಮೆಯಿಂದ ನೋಡಿ ಚಿನ್ನದ ಬಳೆಗಳನ್ನು ತಗೆದುಕೊಂಡು ಸರಾಫಿ ಅಂಗಡಿಯತ್ತ ನಡೆದ. ಸರಾಫಿ ಅಂಗಡಿಯಲ್ಲಿ ಒಡುವೆಗಳನ್ನು ಅಡುವಿಟ್ಟು ಹತ್ತು ಸಾವಿರಗಳನ್ನು ಪಡೆದು ಗುರುಮಾತೆ ಗಂಗಾದೇವಿ ಕೈಗೊಪ್ಪಿಸಿ ಸೀರೆ ಸಾಲದಿಂದ ಮುಕ್ತನಾಗಿದ್ದ.

-6-
ಆದರೆ ಗತಿಸಿದ ಘಟನೆಗಳು ಚಲನ ಚಿತ್ರದಂತೆ ಅನಂತನ ಸ್ಮೃತಿಪಟಲದ ಮೇಲೆ ಹಾಯ್ದು ಹೋಗುತ್ತಲೇ ಇದ್ದವು. ಮಾನವೀಯತೆಯ ಸಾಕಾರ ಮೂರ್ತಿಯಂತಿರುವ ಗುರುಮಾತೆ, ವಿಶಾಲ ಹೃದಯದ ವಿಮಲ, ಸಾಧನೆಯ ಮೆಟ್ಟಿಲಗಳನ್ನು ಏರುತ್ತಿರುವ ಮಗಳು ಮಯೂರಿ, ಜೊತೆಗೆ ಪ್ರಾಣ ಸ್ನೇಹಿತನ ರೂಪದಲ್ಲಿರು ಶತ್ರು ಅಶೋಕ, ಇವರುಗಳ ನಡುವೆ ನಿಸ್ಸಹಾಯಕನಾಗಿ ನಿಂತ ಅನಂತ ಅಂದರೆ ತನ್ನ ಮೇಲೆಯೇ ಆತನಿಗೆ ವಿಪರೀತ ಸಿಟ್ಟು ಬಂತು. ಆದರೂ ಮಗಳ ಮುದ್ದು ಮುಖ ತನ್ನ ಸಿಟ್ಟನ್ನು ನಿಯಂತ್ರಣದಲ್ಲಿರುವಂತೆ ಮಾಡಿತು. ಆದರೆ ಅಡುವಿಟ್ಟು ಬಂದ ಹೆಂಡ್ತಿಯ ಒಡವೆಗಳನ್ನು ಆದಷ್ಟು ಬೇಗ ಬಿಡಿಸಿಕೊಂಡು ಬಂದು ಅವಳ ಪ್ರೀತಿ ಪಾತ್ರ ಆಗುವ ಬಗ್ಗೆ ಅವನಲ್ಲಿ ಚಿಂತನೆ ನಡೆಯುತ್ತಿತ್ತು. ಜೊತೆಗೆ ಒಂದಿಲ್ಲ ಒಂದು ದಿನ ತನ್ನ ಕಷ್ಟಗಳೆಲ್ಲ ಕರಗಿ ಒಳ್ಳೆಯ ದಿನಗಳು ಬರಬಹುದು, ಆಗಲಾದರು ಮಕ್ಕಳು ಮತ್ತು ವಿಮಲ ಆನಂದವಾಗಿರುವುದನ್ನ ಕಣ್ತುಂಬ ನೋಡಬಹುದೆಂದು ಒಳ್ಳೆ ದಿನಗಳ ನಿರೀಕ್ಷೆಯಲ್ಲಿ ದಿನ ನೂಕುತ್ತಿರುವಾಗಲೇ ಇದ್ದಕ್ಕಿದ್ದಂತೆ ಒಂದು ದಿನದ ಮುಂಜಾವು ಅನಂತನ ಪಾಲಿಗೆ ಶುಭ ಮುಂಜಾವು ಆಗಿ ಮೂಡಿತು. ಗಂಗಾ ದೇವಿಯವರು ಕರೆ ಮಾಡಿ ಮಯೂರಿಗೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದು ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ಬಹುಮಾನ ಬಂದಿರುವುದಾಗಿ ತಿಳಿಸಿದಾಗ ಅನಂತನ ಮನೆ ತುಂಬ ಸಂಭ್ರಮವೇ ಸಂಭ್ರಮ. ಇಡೀ ಕುಟುಂಬ ಇನ್ನೂ ಇದೇ ಆನಂದದಲ್ಲಿರುವಾಗಲೇ ಇನ್ನೊಂದು ಶುಭ ಸಮಾಚಾರ!. ಅನಂತನ ಶಾಲೆಗೆ ಸರಕಾರದಿಂದ ಅನುದಾನ ಬಂದು ಅನಂತನಿಗೂ ಇದರ ಎಲ್ಲ ಸೌಲಭ್ಯಗಳು ದೊರಕುವಂತಾಗಿ ಪೂರ್ಣ ಪ್ರಮಾಣದ ಸಂಬಂಳ ಪಡೆಯುವಂತಾಗಿದ್ದು ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಇದ್ದಕ್ಕಿದಂತೆ ಒಂದು ದಿನ ಚಿನ್ನದ ಒಡವೆಗಳು, ಹೊಸ ಮೈಸೂರ ರೇಷ್ಮೆ ಸೀರೆ, ಮೈಸೂರ ಮಲ್ಲಿಗೆ ಹೂವಿನ ಮಾಲೆಯೊಂದಿಗೆ ಪ್ರತ್ಯಕ್ಷನಾದ ಅನಂತನನ್ನು ಕಂಡು ವಿಮಲಳಿಗೆ ಸ್ವರ್ಗದ ಬಾಗಿಲೇ ತೆರದಂತಾಗಿ ಓಡಿ ಬಂದು ಅನಂತನನ್ನು ಬಿಗಿದಪ್ಪಿಕೊಂಡಳು.

-ಅಶ್ಫಾಕ್ ಪೀರಜಾದೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x