ಪಂಜು ಕಾವ್ಯಧಾರೆ

ತುಣುಕು ಧೂಪ . . . :

ಮನದ ಬಾಗಿಲ ನಡುವೆ ಯಾವ ರೂಪವದು/
ಅಂತರಾಳದಿ ಇರಲಿ ಒಲವ ದೀಪವದು//

ಬರಿದೆ ಬೇಸರವೇಕೆ ಇರುಳ ಉರುಳಿನಲಿ/
ಹಗುರವಾಗಲಿ ಎದೆಯು ಆರಿ ತಾಪವದು//

ಒಳ ಬಿಕ್ಕ ಹಾವಳಿಗೆ ಒಡಲುರಿಯು ಬೇರೆ/
ಎಲ್ಲಿ ಕರಗಿತು ಹೇಳು ಸುಖದ ಲೇಪವದು//

ಸಪ್ಪೆ ಸೂರ್ಯನ ಆಟ ಕತ್ತಲೆಯ ಕಾಟ/
ಯಾಕೆ ಸರಿಯದು ಮುಗಿಲು ಕವಿದ ಶಾಪವದು//

ನೂರು ದೇವರ ಪೂಜೆ ಸಲ್ಲಿಸಿದ ಫಲವೇ/
ಕುದಿಯುವುದು ಕಡೆಯಿರದೆ ಮಡಿಲ ಕೋಪವದು//

ಚೂರು ಘಮಿಸದೆ ಹೇಳು ಕಿಡಿಯ ಮುಡಿದಿರಲು/
ಮೂಲೆಯಲಿ ಕುಲಿತಿರುವ ತುಣುಕು ಧೂಪವದು//

– ರಮೇಶ ಹೆಗಡೆ


ಮೌನದ್ ರೋಗ

ಮನದರುಣಂಗೆ ಮೌನದ್ ಮೋಡ
ಮೋಡಿ ಮಾಡ್ತು ಮೂಡಣಕ್ಕೂಡ|
ಮಾಟಮಾಡಿ ದಿಶೆಯದ್ದೇ ದಿಕ್ ತಪ್ಸಿ
ಕುಳಿತೈತಿ ನೋಡ್ತಾ ತನ್ತಾನೇ ದಿಟ್ಸಿ||

ಮಾತಿಂದ ಬಳಗ ಹೆಚ್ಚು
ಮೌನಕ್ಕೆ ಸಂಕೀರ್ಣದುಚ್ಚು|
ಮೌನದ್ ಕಾಳ್ಗ ಹೆಚ್ಚ್ಸೈತಿ ಹಸಿವ
ಒಳಗಿನುಸಿರು ಕಟ್ಟ್ಸೈತಿ ಉಸಿರ||

ಮನಸಿನ್ ಮಾರ್ಗಕ್ಕೆ ಬೇಕೇ ದಿಕ್ಸೂಚಿ
ಬಿಡುಗಡೆಯ ಬರಕ್ಕೆ ತಾನಾಗೇ ನಡಿತೈತಿ|
ನುಡಿತೈತಿ ನಾಲ್ಗೆ ಬೇಡೆನಗೆ ವಿಶ್ರಾಂತಿ
ಮಾತಾಡಿದ್ರೆ ಮೌನಕ್ಕೋ ಮನಕ್ಕೋ ವಿಮುಕ್ತಿ?

– ಶಚಿ ಪಿ.


ಗರತಿಯ ಹಾಡು(ಜಾನಪದ ಗೀತೆ)
ಸ್ವಚ್ಛ ಮನಸಿಲೆ ನೀನು ಇಚ್ಛೆ ಕೆಲಸ ಮಾಡೋ
ಕಚ್ಚಿ ಇರಲಿ ನಿನ್ನ ಕೈಯಾಗ|ಎಲೆ ಮಗನೆ
ಜನಮೆಚ್ಚಿ ನಡಿಯೋ ಜಗದಾಗ

ಕಸ ಬ್ಯಾಡ ಕಣ್ಣಾಗ , ಹುಸಿ ಬ್ಯಾಡ ನಗುವಾಗ
ಮೋಸಿರಬಾರ್ದು ಮನದಾಗ|ಎಲೆ ಕಂದಾ
ಖುಷಿ ಇರಬೇಕು ನಡಿನುಡಿಯಾಗ

ಧನ್ಯತೆ ಪಡಿವಾಗ, ನಮ್ರತೆ ಕೊಡುವಾಗ
ಕೊನೆತನಕ ಇರಲಿ ಕಡುಪ್ರೇಮ|ಎಲೆ ಕಂದಾ
ದಾನಧರ್ಮ ದೊಡ್ಡದು ಜಗದಾಗ

ಕಾಸಿದ್ದವರ ಕೂಡ ಖುಷಿಪಡಬೇಡ
ಹೆಸಿರೊಕ್ಕ ಹೆರವರದ|ಎಲೆ ಮಗನೆ
ಪಾಸಿಮಾಡಿ ಹೊಟ್ಟಿ ಹೊರಿಬ್ಯಾಡ

ಕರೆದವರ ಕೈಕೆಳಗ ಕೈಚೀಲಾ ಆಗಬ್ಯಾಡ
ಖರೆಯಿದ್ದರೆ ನೀನು ಶಿರಬಾಗು| ಎಲೆ ಕಂದಾ
ಕರವಸ್ತ್ರದ ಕೆಲಸ ನಿಂದಲ್ಲ

ಮೆಟ್ಟುಮೆದಳು ಈಗ ಕೊಟ್ಟಿ ಆಗ್ಯಾರ
ಗಟ್ಟಿಗರ ಗೆಳೆತನ ನೀಮಾಡು|ಎಲೆ ಮಗನೆ
ಒಟ್ಟಿಗೆ ಬಾಳುವುದು ಬಲು ಕಷ್ಟ

ದುಡಿಯದೆ ತಿನ್ನುವ ದುರುಳರು ಬಹುಜನ
ದುಂಡುಪಾಳ್ಯದ ರಾಕ್ಷಸರು|ಎಲೆ ಕಂದಾ
ಸಿಕ್ಕರೆ ಕೈಯಾನ ಕಸಬಾರಿಗೆ

ಸತ್ಯ ಶಾಂತಿ ಭಕ್ತಿ ಶುದ್ದದಿ ಮಾಡೋ
ನಂಬಿದ ದೈವ ಮನದಲ್ಲಿ|ಎಲೆ ಕಂದಾ
ಮೋಕ್ಷದ ದಾರಿ ಜಗಕೊಂದೆ.

ಸಾಹೇಬಗೌಡ. ಯ.ಬಿರಾದಾರ


ಜೀವನ್ಮುಖಿ

ಕವಿ ಸತ್ತಾಗ
ವಿಧವೆ ಕಾವ್ಯ
ಶವದ ಬಳಿ ಕುಳಿತು
ರೋಧಿಸುತ್ತಿತ್ತು

ಚೂರು-ಚೂರಾಗಿ
ಚಿಲ್ಲಾಪಿಲ್ಲೆಯಾಗಿ
ಬಿದ್ದ ಅಕ್ಷರದ
ಬಳೆ ಚೂರುಗಳು
ಅವಳೆದೆಯ
ನೋವಿಗೆ ಮೂಕ
ಸಾಕ್ಷಿಯಾಗಿದ್ದವು

ಚಿರನಿದ್ರೆಗೆ
ಜಾರಿದವನ
ಮುಖದ ಮೇಲೆ
ಬುದ್ಧನ
ಮಂದಹಾಸ !!
ಬಹುಶಃ
ಜೀವನ್ಮುಕ್ತಿಯ
ಖುಷಿಯವನಿಗೆ

ಇದ್ದಾಗ
ಪರಿಪರಿಯಾಗಿ
ಕಾಡಿದಾಕೆ
ಅವನಿಲ್ಲದ
ಬಂಜರು-ಬದುಕು
ಕಲ್ಪಿಸಿಕೊಂಡು
ಕಂಪಿಸುತ್ತಿದ್ದಳು

ಕಣ್ಣಂಚಿನಿಂದ
ಇಳಿಯುತ್ತಿದ್ದ
ಕಂಬನಿ ಧಾರೆ
ಕೆನ್ನೆಯಿಂದಿಳಿದು
ಎದೆಯ ಮೇಲೆ
ಸಾಗರವಾಗುತ್ತಿತ್ತು

ಇದ್ದಾಗ
ಲೋಕದ ಚಿಂತೆ
ಮಾಡಿದಾತ
ಈಗ ಇದ್ಯಾವದರ
ಪರ್ವೆಯಿಲ್ಲದೆ ಮಲಗಿದ
ಧ್ಯಾನಸ್ಥ ಸಂತ

ಅಮರ ಕವಿಯಾತ್ಮ
ಜಗದ ಮೋಹ
ಮಾಯೆ ಮರೆತು
ಅಲೌಕಿಕ ಸುಖ
ಅನುಭವಿಸುತ್ತಿತ್ತು

ಅವನೊಂದಿಗೆ
ನಿತ್ಯ ಸತ್ತು-ಸತ್ತು
ಬದುಕುಳಿದ ಕವಿತೆ
ತಬ್ಬಲಿಯಾಗಿ
ಅತ್ತು-ಅತ್ತು
ಸುಸ್ತಾಗಿತ್ತು

ಹಸಿವಿನಿಂದ ಕಂಗೆಟ್ಟವಳ
ಒಡಲ ಬೆಂಕಿ
ಅದ್ಯಾರೋ ಸುರಿಸಿದ
ಸಾಂತ್ವನದ ಮಾತು
ಮಳೆಗೆ ತಣ್ಣಗಾಗಿ

ಜೀವ ಸಂತೃಪ್ತವಾಗಿ
ಚಿಗುರೊಡೆದ ಬದುಕು
ಜವಾಬ್ಧಾರಿ
ಜಾಗೃತಗೊಂಡು ಮತ್ತೇ
ಚಲಿಸಲಾರಂಭಿಸಿತು
ಜೀವ…(ನ) !!!!!!!!!

-ಅಶ್ಫಾಕ್ ಪೀರಜಾದೆ

 

 

 

 


ಹೊಟ್ಟೆಯೊಳಗೆ ಹೂತಿಟ್ಟ ಭ್ರೂಣ
ಒಂದು ಆಕಾರಕ್ಕೆ ತಿರುಗುಬಹುದು
ಅಗತ್ಯಕ್ಕೆ ತಕ್ಕಂತೆ ಆರೈಕೆಯಾದರಂತೂ
ಹೂತಿಟ್ಟ ಭ್ರೂಣಕ್ಕೆ ರಾಜ ಲಕ್ಷಣ
ಬಂದರೂ ಬರುಬಹುದಂತೆ, ನಂಗೂ ಗೊತ್ತಿಲ್ಲ !

ಹೊಟ್ಟೆಯೊಳಗೆ ಪಿಸುಗುಟ್ಟುವ ಧ್ವನಿ
ಅವಳೊಬ್ಬಳಿಗೆ ಕೇಳಿಸುತ್ತದೆಯಂತೆ
ಹೊಸ ಜೀವದ ಹೃದಯ ಬಲಿತಿರಬೇಕು
ಅವಳು ತಾಯ್ತನದ ಸುಖ ಅನುಭವಿಸುತ್ತಿರಬಹುದು, ನಂಗೂ ಗೊತ್ತಿಲ್ಲ !

ಅವನೆದೆಯಲ್ಲೀಗ ಉಲ್ಲಾಸ ಉತ್ಸಾಹ
ಆದರೇನು ಬಂತೂ, ನೋವು ಅವಳಿಗಷ್ಟೇ
ಅವಳಿಗೂ ಅವನ ಸಂತಸದ ಮುಂದೆ
ಆ ನೋವೆಲ್ಲವು ಕ್ಷಣಿಕವಂತೆ, ನಂಗೂ ಗೊತ್ತಿಲ್ಲ !

ಕಾನನದ ಕಡಲಿಗೆ ಹಂಬಲಿಸಿದಂತೆ
ಹೊಸ ಜೀವದ ಹುಟ್ಟಿಗೆ ಹಂಬಲಿಸುವ
ಹೃದಯಗಳಿಗೇನು ಸದ್ಯಕ್ಕೆ ಭರವಿಲ್ಲ
ಮುಂದೆ ಏನಾಗಬಹುದು, ನಂಗೂ ಗೊತ್ತಿಲ್ಲ !

ಅವಳು ಅವನೆದೆಗೆ ಒರಗಿ ಕೇಳುತ್ತಾಳೆ
“ನನ್ನ ನೋವಿನಲ್ಲಿ ನಿನ್ನದೂ ಪಾಲಿದೆ” ಎಂದೂ
ಅಷ್ಟರಲ್ಲಿ ಅವನು ಮೌನವಾಗಿ ಆಲಂಗಿಸಿ
ಹಣೆಗೊಂದು ಮುತ್ತಿಟ್ಟು ಮುಗುಳುನಕ್ಕ
ಅವಳಿಗೀಗ ನಂಬಿಕೆ ಬಂದಿರಬಹುದು, ನಂಗೂ ಗೊತ್ತಿಲ್ಲ !

-ಶಿವು ನಾಗಲಿಂಗಯ್ಯನಮಠ

 

 

 

 


ನಿನ್ನ ಪ್ರೀತಿ ಒಂದೊಂದೇ ಮೆಟ್ಟಿಲು ಇಳಿವ ಹಗೆ ಬಲ್ಲೆ ಸಖಾ…
ನನ್ನ ಎದೆಯಲಿ ಉಸಿರುಗಟ್ಟಿಸಿದ ಹೊಗೆ ಬಲ್ಲೆ ಸಖಾ..

ನೋವು ಕೊಡದೆ ಸಾಯಿಸುವ ತಾಕತ್ತು ನಿನ್ನಲ್ಲಿದೆ ಗೊತ್ತು….
ಕದಡಿದ ಬಣ್ಣಕ್ಕಿರುವ ಅಧಿಕಾರದ ಬಗೆ ಬಲ್ಲೆ ಸಖಾ..

ನಾ ತೋರಿದ ಮುನಿಸುಗಳ ಪರಿಗಣಿಸಿ ನೀ ಬಳಲಬಾರದಿತ್ತು…
ಕಿರುಬೆರಳು ಹಿಡಿದು ನಡೆದ ನಿನ್ನ ಹುಮ್ಮಸ್ಸುಗಳ ನಗೆ ಬಲ್ಲೆ ಸಖಾ…

ಮನದಿಂದ ಮನಕೆ ಭಾವತಂತು ಬೆಸೆದ ಪ್ರತಿ ನನ್ನಲ್ಲಿ…
ಲೋಕದ ಬಿರುಗಾಳಿಗೆ ಮರಳಿನ ನೆಗೆ ಬಲ್ಲೆ ಸಖಾ….

ಈ ಲೋಕದ ಏಕಾಂತಕ್ಕೆ ಜೊತೆ ನಿಲ್ಲುವೆ ಎಂದು ಭಾಷೆ ಕೊಟ್ಟವನು…
ನನ್ನ ಬಿಚ್ಚಿದ ಕೇಶವನ್ನಾಳುವ ನಿನ್ನ ಸೋಗೆ ಬಲ್ಲೆ ಸಖಾ…
…Bi


ಪ್ರೀತಿಯೊಂದು ಮಾಯಾವಿ

ಅದೊಂದು ಕೋಟಿ ಕನಸುಳ್ಳ ಕಂಗಳು
ನೂರಾರು ಹಂಬಲಗಳ ಬಯಲು
ಒಂಟಿ ದಾರದಲ್ಲಿ ಒಂದಾಗಿಸುವ ಘಮಲು
ಎದೆ ಬಟ್ಟಲು ತುಂಬ ಒಲವಿನ ಹಾಲು
ಮುಳ್ಳುಗಳ ಶಿಖರದಲ್ಲೂ ಹೂ ರಾಶಿ
ದ್ವೇಷ ಸ್ವಾರ್ಥಗಳನು ದೂರ ಸರಿಸಿ
ಒಲವಿನೋಕುಳುಯಲ್ಲೇ ಮೈ ಪುಲಕಿಸಿ
ಸಹಜ ಸಮೃದ್ಧಿ ಶಾಂತಿಯ ಅರಳಿಸಿ
ನೆಲದಿಂದ ಬಾನಿಗೆ ಚಿಮ್ಮಿಸುವ ಕಾರಂಜಿ
ಬಾಳನು ಹಸನಾಗಿಸುವ ಅಪರಂಜಿ
ಕಲ್ಲು ಮುಳ್ಳುಗಳ ಲೆಕ್ಕಿಸದೇ
ದುಃಖ ದುಮ್ಮಾನಗಳಿಗೆ ಮಣಿಯದೇ
ಕಷ್ಟದ ಬೆಟ್ಟಕ್ಕೂ ಶರಣಾಗದೇ
ಏಳು ಬೀಳಿಗೂ ದೃತಿಗೆಡದೇ
ಸದಾ ಮನದಾಳವ ಕದಲಿಸುತ್ತದೆ.
ಹೃದಯದ ಮೈದಡವಿ ಗೆಲಿಸುತ್ತದೆ
ಸೊಲಿನಲ್ಲೂ ಸಂಭ್ರಮಿಸುವ ಬೆಳಕು
ಎದೆಯ ಬಾನಂಗಳದ ಬೆಳದಿಂಗಳ ಹೊಳಪು
ಜಗದಗಲ ತುಂಬಿರಲು ಒಲವಿನ ಸದ್ದು
ಲೋಕವೆಲ್ಲ ವಿಸ್ಮಯ ತುಂಬಿದ ಹೊನಲು
ಭೂ ಸ್ವರ್ಗವಾಗಿಸಲು ಇದ್ದರೆ ಸಾಕು
ಈ ಮಾಯಾವಿ ಹೆಗಲು
– ಜಯಶ್ರೀ.ಜೆ.ಅಬ್ಬಿಗೇರಿ ಬೆಳಗಾವಿ

 

 

 

 


ಅರಿಕೆಗಳು

1.
ಅರಳಿ ಸರಿದ ಹಗಲುಗಳೆಷ್ಟೋ
ಆವರಿಸಿ ಕವಿದು ಕನಲಿದ
ಇರುಳುಗಳೆಷ್ಟೋ..
ಒಂದಂತೂ ದಿಟ
ಕವಿತೆಯೇ..ನಿನ್ನ ಅನುಪಸ್ಥಿಯಲ್ಲಿ
ಈ ಎರಡು ಕ್ರಿಯೆಗಳೂ
ಸಂಭವಿಸುತ್ತಿವೆ ನಿರಂತರ
ಹಾಗೂ ಕಾಯುವಿಕೆಯಲ್ಲೇ ನಾ ಕರಗಿ
ಕಳೆದು ಹೋಗುತ್ತಿದ್ದೇನೆ ಸತತ.

ಪ್ರಭುವೇ..
ಹಗಲು ಇರುಳು
ಹಾಗೇ ಬಂದು ಹೋಗುತ್ತಿರಲಿ
ಕಾಯುವಿಕೆಯ ಸುಖ ಹೀಗೇ
ಅನಂತವಾಗಿರಲಿ.

2.

ಪ್ರಭುವೇ..ನನಗೆ
ಪೂರ್ವ ಜನ್ಮದ ಬಗ್ಗೆ ಅರಿವಿಲ್ಲ
ಪುನರ್ಜನ್ಮದ ಬಗ್ಗೆ ನಂಬಿಕೆಯೂ ಇಲ್ಲ
ಅತ್ತ ಇತ್ತ ಸುಳಿದಾಡಿ
ಸತಾಯಿಸುವ ಕವಿತೆಯನ್ನೊಮ್ಮೆ
ಇದೇ ಜನುಮದಲ್ಲಿ ನನ್ನ ಇದಿರು
ಎಳೆದು ತಂದು ನಿಲ್ಲಿಸಿ ಬಿಡು ಸಾಕು.

3.

ಮೊದಲು ಕಣ್ಣು ಬಿಟ್ಟಾಗ ಜೋರಾಗಿ
ಶಬ್ದ ಹೊರಡಿಸಿ ಅತ್ತ ನೆನಪು
ಈಗಲೂ ಹಾಳು ಅಳು ನಿಲ್ಲುವುದಿಲ್ಲ
ಗುದ್ದಿ ಗುದ್ದಿ ಹೊರ ಬಂದರೂ
ಶಬ್ದ ಮಾತ್ರ ಕೇಳಿಸುತ್ತಿಲ್ಲ.

ದಯೆ ತೋರು ಕವಿತೆಯೇ..
ಎಲ್ಲಾ ಭಾರವನ್ನು ನಿನ್ನ ಹೆಗಲಿಗೇರಿಸಿರುವೆ
ಶಬ್ದವನ್ನು ನಿಶ್ಯಬ್ದವಾಗಿ ಇಳಿಸಿಬಿಡು
ಶಬ್ದ ಸ್ಪೋಟದ ಅನಾಹುತಕ್ಕೆ ನೀನೂ ಕೂಡ
ಕಾರಣವಾಗುವುದ ತಪ್ಪಿಸಿಕೋ..

4.

ಅತ್ತಷ್ಟು ಬಾರಿ ನಗಲಿಲ್ಲ
ಆದರೂ ಅತ್ತದ್ದು ಸುದ್ದಿಯಾಗಲೇ ಇಲ್ಲ
ನಕ್ಕಿದ್ದು ಗುಲ್ಲೋ ಗುಲ್ಲು
ಕವಿತೆಯೇ..ನೀ ಎಚ್ಚರವಾಗಿರುವುದಷ್ಟೇ
ಮುಖ್ಯ ಇಲ್ಲಿ.
ಆಗ ಕಚಿ ಪಿಚಿ ಪಿಸಿ ಪಿಸಿಗಳ ಸೊಲ್ಲಡಗಿ ಬಿಡುತ್ತದೆ
ನಾನೂ ನಿಶ್ಚಿಂತೆಯಾಗಿರಬಲ್ಲೆ.
-ಸ್ಮಿತಾ ಅಮೃತರಾಜ್. ಸಂಪಾಜೆ.

 

 

 

 


ಸತ್ಯಮೇವ ಜಯತೇ…

ಗಡಿಕಾಯವ್ವ ಯೋಧವೀರರ ಗೂಡು ಮಾತೇ
ಭೂಮಿತಾಯಿ ಮಗನ ಕೈ ಹಿಡಿವ ಅನ್ನದಾತೇ
ಜಯ ಜಯ ಭಾರತ ಮಾತೇ…
ಹೇ ಭಗವತಿ, ಸತ್ಯಮೇವ ಜಯತೇ…

ಧರ್ಮ ರಕ್ಷಣೆಗೆ ಪಾರ್ಥನ ಸಮರ
ಪಸರಿಸು ದೇಶ ಭಕ್ತಿಯ ಗೀತೆಸಾರ
ನ್ಯಾಯ-ನೀತಿ, ಸತ್ಯಧರ್ಮಗಳ ಝೇಕಾಂರ
ಕಲಿಸಿ ಕೊಡುಡುವುದು ದೇಶ ಬದಕುವ ಸಂಸ್ಕಾರ
ಜಯ ಜಯ ಭಾರತ ಮಾತೇ…
ಹೇ ಭಗವತಿ, ಸತ್ಯಮೇವ ಜಯತೇ…

ಕುಲದೂಳು ಹೊಕ್ಕು ಕುಲಕುಲವೆಂದು,
ಬಡೆದಾಡುವ ಮನುಕುಲ;
ಮಾನವಿಯತೇಯ ನೀ ಮರೆಯದಿರು,
ಮಾನವ ಧರ್ಮವ ನೀ ತೊರೆಯದಿರು;
ಭ್ರಷ್ಟಾಚಾರಕೆ ಕೈ ಚಾಚಿ,
ಅನಾಚಾರಕೆ ತಲೆ ಬಾಗದಿರು
ಜಯ ಜಯ ಭಾರತ ಮಾತೇ…
ಹೇ ಭಗವತಿ, ಸತ್ಯಮೇವ ಜಯತೇ…

ಪೂರ್ಣಿಮಾ ಮಾ ಪಿರಾಜಿ


ನಮ್ಮ ಕಥೆ…
ಯಾರದೋ ಪುಣ್ಯ
ಆದೆವು ಧನ್ಯ
ತಿರುಗಾಡಿ ತಿನ್ನುತ್ತ
ಬತ್ತಲೆಯ ಮೈಯತ್ತ
ಅರಿವ ಪಡೆಯುತ್ತ
ಸಾಗಿದೆವು ಶತಶತಮಾನಗಳಿಂದಿತ್ತ…
ನೆಲದ ಮೇಲೆ ಕಂಡೆದ್ದೆಲ್ಲ ಬೇಡಿ
ರಚ್ಚೆ ಹಿಡಿದು ಉಚ್ಚೆ ಹೊಯ್ದು
ಆಕಾಶದಲೂ ಸಹ ತಡಕಾಡಿ ಮತ್ತೆ
ಹೇತ ನೆಲದ ಎದೆಯೊಳಗಿಳಿದು
ಯಂತ್ರಕೈಗಳಿಂದ ಬಗೆದು ಮನೆ ಮಠ,
ಗುಡಿ ಗುಂಡಾರ, ಚರ್ಚು ಮಸಜೀದುಗಳ ಕಟ್ಟಿ ಅಲ್ಲಲ್ಲಿ
ಆತ್ಮ ತೊಳೆಯುತ್ತ…
ಉಸಿರ ಊಡುವ ಉಸಿರ್ಗಾಳಿಗೆ
ಹೇಸಿಗೆಯ ಮೆತ್ತಿ
ಮೊಗೆದು ಕುಡಿವ ಅಪ್ಪುವಿನ ಕರುಳಿಗೆಲ್ಲ
ಮಲಿನತೆಯ ಸವರಿ
ಮಣ್ಣ ಮಾರಿ ಬೆಲೆ ಕಟ್ಟಿದ ನಮ್ಮ ಈ ಅರಿವಿಗೆ
ಬಾರದಾಯಿತು
ಮಣ್ಣು ನಮಗೆ ಬೆಲೆ ಕಟ್ಟದೆಂದು
ನನ್ನ ಬಯಸುವೆ ನೀ
ನಿನ್ನನೂ ನಾ ಬಯಸದೇ ಇರನೆಂದಿತು ಮಣ್ಣು..
ಜೀವಕೆ ತಂಪಿಟ್ಟು ನೆರಳಿಟ್ಟು
ಪೊರೆದ ಹಸಿರಿಗೆ
ಕಸಿರಂತೆ ಕಂಡು
ಮೈಯ ಸೀಳುವಾಗ ರಕ್ತ ಮಾಂಸವಿರಲಿಲ್ಲ..
ಕಾಂಕ್ರೀಟಿನ ಕಾಡು
ಗೊಂದಲದ ಗೂಡು
ನಮ್ಮೊಳಗೆ ನಮ್ಮದೇ ದೌಡು..
ಹೊಟ್ಟೆ ಕೆಡವಿದ ಬಾಣಂತಿಯಂತೆ ಭೂತಾಯಮ್ಮನ ಪಾಡು..
ಮೆರೆದಿವಿಲ್ಲಿ ಮೆದುಳೊಂದನೆ ಮೆರೆಸಿ,
ಮೈಯಿಂದ ಮನಸನಷ್ಟೇ ಹೊರಗಿರಿಸಿ,
ನೊಂದ ಪ್ರಕೃತಿಯು
ತಾಳದಂತಾಗಿ
ಪಂಚಭೂತಗಳೆಲ್ಲ ಒಂದಾಗಿ,
ಹೆಣೆದ ಸಣ್ಣ ಸ್ಥಿತಿಯನು ಎದುರಿಸದಾದೆವು..
ಬಗೆದಷ್ಟು ಸುಲಭವಲ್ಲ ಬದುಕು ಉಳಿಸಿಕೊಳ್ಳುವ ಬಗೆ
ಇದರ ಮುನಿಸಿನ ಎದುರು ಸಲ್ಲ..
ಪ್ರಕೃತಿಗಿಂತ ಅಧಿಕರು
ಮತ್ತಾರೂ ಇಲ್ಲ..
— ರನ್ನ ಕಂದ

ಶೂನ್ಯ ಬದುಕು

ಎನ್ನೊಡಲಲಿ ಮಧಿಸಿದ
ಕೊಂಚ ಗೂಡಾರ್ಥ
ಕಾಡಿತ್ತು ಆ ಕರಾಳ ರಾತ್ರಿ.
ಕಣ್ಣಂಚಲಿ ತುಂಬಿತ್ತು ವೇದನೆ
ಹೇಳಲಾರದ ತೊಳಲಾಡಿತ್ತು ಹೊರಭಾವನೆ
ಅರಿಯದೆ ಹೋಗಿತ್ತು ಈ ದುರಳನ ಕಲ್ಪನೆ

ಏನೋ ಹೊಸತನ ನನ್ನಲ್ಲಿ
ಹೊಸ ಜ್ಞಾನದ ಸೆಲೆ ನಿಮ್ಮಲ್ಲಿ
ಕಾತುರತೆ ಪ್ರತಿಕ್ಷಣ ಹೃದಯಾಂಗಳದಲಿ
ನವ ವಿಚಾರಗಳ ವರ್ಗಿಕರಣ
ನಾನಲ್ಲ ಮಾನ್ಯ,
ಒಳಗೆಲ್ಲ ಬರಿ ಶೂನ್ಯ

ಮಾನ್ಯರಲಿ ಅಸಾಮಾನ್ಯರು ನೀವಿಲ್ಲಿ
ಅರೆಸುತಿಹುದು ಸಾಗಬೇಕೆಂದು ಸದ್ವಿಚಾರಗಳ ಪಥದಲ್ಲಿ
ನೀವೆಷ್ಟು ಸಿಡಿದರು ಸ್ವೀಕರಿಸುವ ಮನ ನನ್ನಲಿ
ಯಾಚಿಸುತಿದೆ ಕ್ಷಮೆ, ಕರಮುಗಿದು ನಿಮ್ಮಲ್ಲಿ
ಉಳಿಸಿಕೊಳ್ಳುವುದು ನಂಬಿಕೆಯ ಬಾಳ ಪಯಣದಲಿ

ಮಣಿಯಂತೆ ನೀವು
ಕ್ಷೂದ್ರ ಹಣೆಯಂತೆ ನಾನು
ಒಳಗೆಲ್ಲ ಖಾರ
ದೂರದೆಂಬ ಮನಕೆ ಸದಾ ಬಾರ
ಹೊಮ್ಮಿ ಬರಲಿ ಸದಾ ಹೂ ನಗೆ
ಕ್ಷಮೆ ಇರಲಿ ನನಗೆ….

*****

ನಿರೀಕ್ಷೆ

ಪತಿಗಾಗಿ ಪರಿತಪಿಸಿ ಹಗಲಿರುಳು
ಕಾಯ್ದೆ ಊರ್ಮಿಳೆಯಂತೆ…

ನೆನೆನೆನೆದು ಅವನಿತ್ತ ನಿರ್ಮಲ ಪ್ರೀತಿಯ
ಹೊದ್ದು ಮಲಗಿದ್ದೆ ಅವನ ತೋಳು ಬಂಧಿಯ
ಅವನೋ ಇನ್ನೋರ್ವಳ ಬಂಧಿ!..
ಮನವೂ ಚೂರಾಯಿತಾದರೂ, ನಕ್ಕು
ಹೇಳಿತು ಮುಡಿಯಲವಳೊಂದು ಗಳಿಗೆ
ನಾ ಮುಡಿದ ಮಲ್ಲಿಗೆಯಾ…

ಕಾಲು ಜಾರಿಹನಾದರೂ ಮರಳಿ
ಬಾರನೇ ತನ್ನ ಗೂಡಿಗೆ
ಮಡದಿಯ ಸುಂದರ ಬಾಳಿಗೆ
ಉಸಿರು ನಲುಗಿತು
ಅವನ ನಿರೀಕ್ಷೆಯಲಿ…

ಪಂಜರದ ಗಿಳಿಯಂತೆ
ನಾ ಬಂಧಿ ಅವನ ಪ್ರೇಮದಿ
ಅವನೂ ಮನದನ್ನೆಯ ಕೈ ಸೆರೆ
ಅವನೊಂದಿಗೆ ಮನದಿ ನಾ ಆಡುವಾಗ
ಪ್ರೇಯಸಿ ಜೊತೆ ಅವನ ಚಲ್ಲಾಟ…

ನಿಜದ ಬೆಳಕು ಹರಿದು
ಓಡಿ ಬಂದನಾಗಾದರೂ
ನೆಮ್ಮದಿಯ ಚಿರ ನಿದ್ರೆಗೆ
ಜಾರಿದ್ದಳು ಮಡದಿ,
ಪ್ರೇಮ ಪರೀಕ್ಷೆಯಲಿ
ಗೆಲವು ನನಗಿರಲೆಂದು…
-ಕವಿತಾ ಸಾರಂಗಮಠ, ರಾಣೆಬೆನ್ನೂರ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x