ಕೃಷ್ಣೆಯಿಂದ ಸಾಗಿ ಕೃಷ್ಣೆಯವರೆಗೆ: ಶ್ರೀ.ಎಂ.ಎಚ್.ಮೊಕಾಶಿ


ಒಂದು ದಿನ ಸಂಜೆ ತಂಪಾದ ಗಾಳಿ ಬೀಸುತ್ತಿತ್ತು, ಆಕಾಶದಲ್ಲಿ ಮೋಡಕವಿದ ವಾತಾವರಣವಿತ್ತು. ಇಂಥ ಚುಮುಚುಮು ಚಳಿಯಲ್ಲಿ ನಾವೆಲ್ಲ ನಾಲ್ಕೈದು ಗೆಳೆಯರು ಕೂಡಿ ಹರಟೆ ಹೊಡೆಯುತ್ತಿದ್ದೆವು. ಕೆಲ ಸಮಯದ ನಂತರ ಗೆಳೆಯರೆಲ್ಲರೂ ಕೂಡಿ ಟೀ ಕುಡಿಯಲು ಹೋಟೆಲ್ ಗೆ ಹೋದೆವು. ಅಲ್ಲಿ ಹಲವಾರು ವಿಷಯಗಳ ಚರ್ಚೆನಡೆಸುತ್ತಿರುವಾಗ ಗೆಳೆಯನೊಬ್ಬನು ಇಂಥ ಒಳ್ಳೆಯ ಕ್ಲೈಮೇಟ್ ನಲ್ಲಿ ಯಾಕೆ ನಾವೆಲ್ಲರೂ ಒಂದೆರಡು ದಿನ ಟೂರ್ ಗೆ ಹೋಗಬಾರದು ಎಂದನು. ಅದಕ್ಕೆ ಒಬ್ಬ ಗೆಳೆಯನು ಸಧ್ಯ ಮಳೆಗಾಲದಲ್ಲಿ ಟೂರ್ ಬೇಡ ಎಂದನು. ಆಗ ಇನ್ನೊಬ್ಬ ಗೆಳೆಯನಾದ ರೆಹಮತ್ ಸಧ್ಯ ಟೂರ್ ಮಾಡಬಹುದು ಎಂದು ಹಲವಾರು ರೀತಿಯ ಮಾಹಿತಿಗಳನ್ನು ನೀಡಿದನು. ಆಗ ಉಳಿದ ಗೆಳೆಯರೆಲ್ಲರೂ ರೆಹಮತ್‍ನ ಮಾತಿಗೆ ಸಹಮತಿಸಿದರು.

ಅದರಂತೆ ಇತರ ಗೆಳೆಯರನ್ನು ಸಂಪರ್ಕಿಸಿ ನಮ್ಮ ಪ್ರವಾಸದ ವಿಷಯವನ್ನು ಹೇಳಿದೆವು. ಆಗ ಒಟ್ಟು 30 ಗೆಳೆಯರು ಒಂದೆಡೆ ಸೇರಿ ಇದರ ಬಗ್ಗೆ ಚರ್ಚಿಸಲು ನಿರ್ಧರಿಸಲಾಯಿತು. ಕೆಲ ದಿನಗಳ ನಂತರ ಒಂದು ನಿರ್ದಿಷ್ಟ ಸ್ಥಳದಲ್ಲಿ ಸೇರಿ ಯಾವಾಗ ಪ್ರನಾಸ ಕೈಗೊಳ್ಳಬೇಕು? ಯಾವ ಯಾವ ಸ್ಥಳಗಳಿಗೆ ಭೇಟಿ ನೀಡಬೇಕು? ಇಂಥ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಇದರಲ್ಲಿ ಹೆಚ್ಚಿನ ಗೆಳೆಯರು ಖಾಸಗಿ ಉದ್ಯೋಗಿಗಳು ಹಾಗೂ ಸ್ವಂತ ವ್ಯಾಪಾರಸ್ಥರಾಗಿದ್ದರು. ಹೀಗಾಗಿ ಎಲ್ಲರಿಗೂ ಅನುಕೂಲವಾಗುವಂತೆ ದಿನಾಂಕವನ್ನು ನಿರ್ಧರಿಸಬೇಕಾಗಿತ್ತು. ಜುಲೈ ಎರಡನೇ ವಾರ ಶುಕ್ರವಾರ, ನಂತರ ಶನಿವಾರವು ಎರಡನೇ ಶನಿವಾರ ರಜೆಯಾಗಿರುವುದರಿಂದ ರವಿವಾರವೂ ಒಂದು ದಿನ ರಜೆ ಬರುವುದು ಹೀಗಾಗಿ ಜುಲೈ 12 ರಿಂದ 14 ರವರೆಗೆ ಮೂರು ದಿನಗಳು ವಿಜಯಪುರದಿಂದ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಯಿತು.

ಇದರ ಮಧ್ಯೆ ಒಟ್ಟು 30 ಗೆಳೆಯರಲ್ಲಿ ಕೇವಲ 23 ಗೆಳೆಯರು ಪ್ರವಾಸಕ್ಕೆ ಬರಲು ಒಪ್ಪಿದರೆ ಉಳಿದ ಆತ್ಮೀಯ ಗೆಳೆಯರು ಕೈಕೊಟ್ಟರು. ಮೂದಲೇ ನಿರ್ಧಾರಿತವಾದಂತೆ ನಾವೆಲ್ಲರೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಗುರುವಾರ ಸಂಜೆ 8 ಗಂಟೆಗೆ ಸೇರಿದೆವು. ನಾವೆಲ್ಲರೂ ಪ್ರವಾಸಕ್ಕೆ ಬೇಕಾದ ಎಲ್ಲ ತಯಾರಿಯೊಂದಿಗೆ ಚೂಡಾ, ಉಂಡಿ, ಹೋಳಿಗೆ ಹಾಗೂ ಹಲವಾರು ಬಗೆಯ ಸ್ವೀಟ್ ಗಳನ್ನು ತಂದಿದ್ದೇವು. ಪ್ರವಾಸಿ ವಾಹನವು 8:30 ಗಂಟೆಗೆ ಬಂದಿತು. ಅದಕ್ಕೆ ಪೂಜೆ ಮಾಡಿದ ನಂತರ ಸರಿಯಾಗಿ ರಾತ್ರಿ 9 ಗಂಟೆಗೆ ಹೊರಡಲು ಗ್ರೀನ್ ಸಿಗ್ನಲ್ ನೀಡಲಾಯಿತು. ವಾಹನವು ಹುಬ್ಬಳ್ಳಿ-ಮಲೆಬೆನ್ನೂರು ಮಾರ್ಗವಾಗಿ ಹೊರಟು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಚಿಕ್ಕಮಗಳೂರ ತಲುಪಿತು. ಅಲ್ಲಿ ಬೆಳಗಿನ ಕಾರ್ಯಗಳೆಲ್ಲವುಗಳನ್ನು ಮುಗಿಸಿಕೊಂಡು ಬ್ರೇಕ್ ಫಾಸ್ಟ್ ಮಾಡುವಾಗ ಸಮಯ 10 ಗಂಟೆಯಾಗಿತ್ತು. ನಂತರ ಅಲ್ಲಿಂದ ಮುಂದೆ ನಮ್ಮ ಪ್ರಯಾಣ ಪ್ರಸಿದ್ಧ ಬಾಬಾ ಬುಡನಗಿರಿ ಬೆಟ್ಟದತ್ತ ಸಾಗಿತು. ಈ ಬೆಟ್ಟವನ್ನು ತಲುಪಲು ಕೆಲವು ಸಣ್ಣ ಸಣ್ಣ ಬೆಟ್ಟಗಳ ಮೂಲಕ ಸಾಗಬೇಕು. ನಾವು ಬೆಟ್ಟಹತ್ತಲು ಪ್ರಾರಂಭಿಸಿದಾಗಲೇ ಮಳೆಯೂ ಕೂಡ ನಮ್ಮ ಜೊತೆಗೆ ಬರುತ್ತಿತ್ತು. ಮುಂದೆ ಸಾಗಿದಂತೆ ಮಳೆಯು ತಾಳ ಮೇಳಗಳಿಲ್ಲದೇ ಸುರಿಯಲಾರಂಭಿಸಿತು. ಅದರ ಹನಿಗಳು ಬಾನ ಸಂಗೀತ ಸುಧೆಯಂತೆ ಕೇಳಿ ಬರುತ್ತಿತ್ತು. ಮಧ್ಯದಲ್ಲಿ ಮಳೆಹನಿಯ ಟಪ್ ಟುಪ್ ಎಂಬ ಶಬ್ಧದ ಬೇರೆ ಬೇರೆ ಆಲಾಪವಿದ್ದರೆ ನಮ್ಮ ಗೆಳೆಯರಲ್ಲಿ ನಾವು ಹೇಗೆ ತಲುಪುತ್ತೇವೆ ಎಂಬ ಕಲಾಪ ಪ್ರಾರಂಭವಾಗಿತ್ತು. ನಾವೆಲ್ಲ ಉತ್ತರ ಕರ್ನಾಟಕ ಭಾಗದವರು ನಾವು ಹೆಚ್ಚು ಬಿಸಿಲುಂಡವರು, ಮಳೆ ಕಡಿಮೆ ಕಂಡವರು. ಸ್ವಲ್ಪ ಮುಂದೆ ಸಾಗಿದಂತೆ ಎತ್ತರದ ಪ್ರದೇಶದಲ್ಲಿನ ಬಾನೆತ್ತರಕ್ಕೆ ಚಾಚಿದ ಮರಗಳು, ಗಿಡ, ಬಳ್ಳಿಗಳು ಕಂಡುಬರಲಾರಂಭಿಸಿದವು.

ಅದರ ಪಕ್ಕದಲ್ಲಿನ ಬ್ಲೂ ರೆಸಾರ್ಟ್ ಬೋರ್ಡ್ ನಮ್ಮನ್ನು ಸ್ವಾಗತ ಮಾಡಿತು. ಎತ್ತರವೇರುತ್ತಿದ್ದಂತೆ ಒಂದು ರೀತಿಯ ರೋಮಾಂಚನವಾಗುತ್ತಿತ್ತು. ವಾಹನ ಪ್ರತಿ ತಿರುವು ಪಡೆಯುವಾಗ ಭಯವಾದರೆ, ಇನ್ನೊಂದೆಡೆಗೆ ಹಚ್ಚ ಹರಿಸಿನ ಪರಿಸರ ಕಾನನ, ಮೇಲಿನಿಂದ ಭೋರ್ಗರೆದು ಬೀಳುತ್ತಿರುವ ನೀರು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಅಲ್ಲದೇ ನಮ್ಮ ನಿಲುವಿಗೂ ನಿಲುಕದಂತಹ ಎತ್ತರ, ಗಿಡ್ಡ, ಹಾಗೂ ಸುಂದರವಾದ ಗಿಡ, ಮರಗಳು, ಸಾಲಾಗಿ ನಿಂತ ಶಿಸ್ತಿನ ಸಿಪಾಯಿಗಳಂತೆ ನಿಂತು ನಮ್ಮನ್ನು ಸ್ವಾಗತಿಸುವಂತೆ ಭಾಸವಾಗುತ್ತಿತ್ತು. ವಾಹನ ಬೆಟ್ಟದ ತುದಿಗೆ ಬರುತ್ತಿದ್ದಂತೆ ಇಬ್ಬನಿಯೂ, ಮಳೆಗೆ ಸಾಥ್ ನೀಡಿತು. ಈಗ ನಾವು ಆಕಾಶಕ್ಕೆ ಏಣಿ ಹಚ್ಚಿ ಏರುತ್ತಿದ್ದೇವೋ ಎಂಬಂತಾಗಿತ್ತು. ಕೆಲವೇ ಸಮಯದ ನಂತರ ನಾವೆಲ್ಲರೂ ಬಾಬಾ ಬುಡನಗಿರಿ ಬೆಟ್ಟ ತಲುಪಿದೆವು. ಆಗ ಅಲ್ಲಿ ನಮಗೆ ಸುಂದರ ಕಾಶ್ಮೀರದ ವಾತಾವರಣವನ್ನು ನೆನಪಿಸುತ್ತಿತ್ತು. ಇಲ್ಲಿ ಇಬ್ಬನಿ ಎಷ್ಟಿತ್ತೆಂದರೆ ಸ್ವಲ್ಪ ಅಡಿ ದೂರ ನಿಂತರೂ ನಮ್ಮ ಮುಖಗಳು ನಮಗೆ ಕಾಣುತ್ತಿರಲಿಲ್ಲ. ಇಲ್ಲಿನ ದೇವರ ದರ್ಶನ ಪಡೆಯಲು ಮೊದಲು ಇಲ್ಲಿಂದ ಮೂರು ಕಿಲೋ ಮೀಟರ್ ದೂರ ಎತ್ತರವಾದ ಪ್ರದೇಶದಲ್ಲಿ ಒಂದು ಪರಿಶುದ್ಧವಾದ ನೀರಿನ ತೊರೆಯಿದೆ ಅಲ್ಲಿ ಹೋಗಿ ಮೊದಲು ಸ್ನಾನ ಮಾಡಿ ಬರಬೇಕೆಂದು ಒಬ್ಬ ಗೆಳೆಯ ಹೇಳಿದನು. ಅದರಂತೆ ನಾವೆಲ್ಲರೂ ಅಲ್ಲಿ ಹೋಗಲು ತಯಾರಾದೆವು. ಆದರೆ ಅಲ್ಲಿಗೆ ಹೋಗಲು ಇಕ್ಕಟ್ಟಿನ ದಾರಿಯಿರುವುದರಿಂದ ಸ್ಥಳಿಯ ಎರಡು ಜೀಪ್(ವಾಹನ)ಗಳ ಸಹಾಯ ಪಡೆದು ಹೊರಟೆವು. ನಾನು ಹಾಗೂ ನನ್ನ ಕೆಲ ಗೆಳೆಯರಿರುವ ಒಂದು ವಾಹನ ರಸ್ತೆ ಬದಿಯಲ್ಲೆ ಕೆಟ್ಟು ನಿಂತರೆ, ನನ್ನ ಕೆಲ ಗೆಳೆಯರಿದ್ದ ಇನ್ನೊಂದು ವಾಹನ ಹಾಗೇ ಮುಂದೆ ಸಾಗಿತು. ಡ್ರೈವರ್ ನಮಗೆ ಬೇರೆ ವಾಹನದ ವ್ಯವಸ್ಥೆ ಮಾಡಿದನು.

ನಮಗೆಲ್ಲರಿಗೂ ಒಂದು ರೀತಿಯ ಹೆದರಿಕೆಯಾಗುತ್ತಿತ್ತು. ಏಕೆಂದರೆ ಮಾರ್ಗದ ಪಕ್ಕದಲ್ಲಿ ಕಾಡು ಪ್ರಾಣಿಗಳಿವೆ ಎಚ್ಚರ ಎಂಬ ಸೂಚನಾ ಫಲಕವಿತ್ತ್ತು. ಆದರೂ ನಾವೆಲ್ಲ ಬೇರೆ ವಾಹನ ಬರುವುದಕ್ಕೆ ಕಾತುರರಾಗಿ, ಕೆಟ್ಟಿದ್ದ ವಾಹನದಿಂದ ಕೆಳಗೆ ಇಳಿದೆವು ಮಳೆ, ಚಳಿ, ಇಬ್ಬನಿಗಳ ಮಧ್ಯೆ ಸುತ್ತಮುತ್ತಲೂ ದೃಷ್ಟಿ ಬೀರಿದಾಗ ಅಬ್ಬಾ ..! ಎಂತಹ ಸುಂದರ ದೃಶ್ಯವದು. ಬಹುಶಃ ನಾವು ಈ ದೃಶ್ಯವನ್ನು ನೋಡಲೆಂದೇ ವಾಹನ ಕೆಟ್ಟಿರಬಹುದೆಂದೆನಿಸಿತು. ನಾನೆಲ್ಲೋ ಗಗನ ಚುಂಬಿಸುತ್ತಿದ್ದೇನೋ ಎಂದೆನೆಸುತ್ತಿತ್ತು. ಏಕೆಂದರೆ ಭೂಮಿಯಿಂದ ಹಲವು ಮೀಟರ್ ಎತ್ತರದ ಪ್ರದೇಶವನ್ನು ನಾವು ತಲುಪಿದ್ದೇವು. ಹೀಗಾಗಿ ಇಲ್ಲಿ ಮೋಡಗಳದ್ದೇ ಸಾಮ್ರಾಜ್ಯ. ನಾನು ಮೋಡಗಳೊಂದಿಗೆ ಆಟವಾಡಿತ್ತಿದ್ದೇನೋ, ನಾನ್ನ ಮೇಲೆ ಅವುಗಳು ಹಾಯ್ದು ಹೋಗುತ್ತಿವೆಯೇನೋ, ನಾನೆಲ್ಲೋ ದೇವಲೋಕದಲ್ಲಿ ಸಂಚರಿಸುತ್ತಿದ್ದೇನೆನೋ ಎಂಬಂತೆ ಭಾಸವಾಗುತ್ತಿತ್ತು. ಈಗಲೂ ಆ ದೃಶ್ಯವನ್ನು ನೆನಸಿಕೊಂಡರೆ ಮೈ ಜುಮ್ಮೆನ್ನುವುದು. ಬಹುಶಃ ಕಾಳಿದಾಸನು ಇಂಥ ಸೌಂದರ್ಯಕ್ಕೆ ಮನಸೋತೇ “ಮೇಘದೂತ”ಎಂಬ ಪ್ರಸಿದ್ಧ ಗ್ರಂಥ ಬರೆದಿರಬೇಕೆಂದೆನಿಸಿತು. ಸ್ವಲ್ಪ ಸಮಯದ ನಂತರ ವಾಹನ ಬಂದಿತು. ನಾವೆಲ್ಲರೂ ಸ್ನಾನ ಮಾಡಲು ಬಂದೆವು ಅಲ್ಲಿ ಎತ್ತರದ ಪ್ರದೇಶದಿಂದ ನೀರು ಬೀಳುತ್ತಿತ್ತು. ನಾನು ಆ ನೀರಿನ ಕೆಳಗೆ ಬಂದು ನಿಂತೆ ಆಗ ನನ್ನ ತಲೆಯ ಮೇಲೆ ಆಲೆ ಕಲ್ಲುಗಳ ಸುರಿಮಳೆಯೇ ಸುರಿದಂತಾಯಿತು. ಚಳಿ ತಂಪಾಯಿತು. ನಂತರ ಪುನಃ ನಾವೆಲ್ಲ ಗೆಳೆಯರು ಬಂದು ಜೀಪಿನಲ್ಲಿ ಕುಳಿತು ಮೂಲ ಸ್ಥನಕ್ಕೆ ಬಂದೆವು ಅಲ್ಲಿಂದ ದೇರವ ದರ್ಶನಕ್ಕೆ ಹೊರಟೆವು ಸಣ್ಣ ದಾರಿ (ಒಬ್ಬರೇ ಸಾಗಬಹುದು)ಯಲ್ಲಿ ಹೊರಟು. ಗುಹೆಯನ್ನು ತಲುಪಿದೆವು ಗುಹೆಯಲ್ಲಿ ಸ್ವಲ್ಪ ಬಗ್ಗಿ ನಡೆಯಬೇಕು ಅಲ್ಲದೇ ಮೇಲಿನಿಂದ ನೀರಿನ ಹನಿಗಳು ಆಗಾಗ ಉದುರುತ್ತಿದ್ದವು. ಪ್ರತಿ ಹನಿಯೂ ಪರಿಶುದ್ಧವಲ್ಲದೇ ಅದರಿಂದ ಶ್ರೀಗಂಧದ ಸುವಾಸನೆ ಬರುತ್ತಿತ್ತು.

ಗುಹೆಯಲ್ಲಿ ಶಾಂತ ವಾತಾವರಣ ಹಾಗೂ ಸ್ವಲ್ಪ ಕತ್ತಲೆಯು ಇತ್ತು. ನಾವೆಲ್ಲ ಗೆಳೆಯರು ಸಾಲಾಗಿ ಸಾಗಿ ದೇವರ ದರ್ಶನ ಪಡೆದು, ನಮ್ಮ ನಮ್ಮ ಬೇಕು ಬೇಡಿಕೆಗಳನ್ನು ದೇವರ ಮುಂದಿಟ್ಟು, ತೀರ್ಥ ಪಡೆದು, ಸಂಪೂರ್ಣ ಗುಹೆಯನ್ನು ಸಂದರ್ಶಿಸಿ ಪುಳಕಿತರಾದೆವು. ಕೆಲ ಸಮಯದ ನಂತರ ನಮ್ಮ ವಾಹನದ ಹತ್ತಿರವಿರುವ ಒಂದು ಸುಂದರ ಉಧ್ಯಾನವನಕ್ಕೆ ಬಂದು ಅಲ್ಲಿ ತಮಗನುಕೂಲಕರವಾದ ಭಂಗಿಯಲ್ಲಿ ಫೋಟೋ ಗಳನ್ನು ತೆಗೆಸಿಕೊಂಡೆವು. ಅಲ್ಲಿಂದ ನಾವೆಲ್ಲರೂ ಚಳಿಯಲ್ಲಿ ಚಹಾ ಕುಡಿಯಲು ಹೋಟೆಲ್ ಗೆ ಬಂದೆವು ಅಲ್ಲಿ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವಾಗ ನಮ್ಮ ಗೆಳೆಯನ ಕಾಲಿಗೆ ಜಿಗಣಿ ಹತ್ತಿತ್ತು ಅವನು ಅದನ್ನು ನೋಡಿ ಗಾಬರಿಯಾದನು. ನಾವೆಲ್ಲ ಗೆಳೆಯರು ಅದರ ಬಗ್ಗೆ ಚರ್ಚಿಸಲು ಶುರುಮಾಡಿದೆವು. ಆಗ ಸ್ಥಳೀಯರೊಬ್ಬರು ನಮಗೆ ಇದರ ಬಗ್ಗೆ ಮಾಹಿತಿ ನೀಡಿದರು. ಜಿಗಣೆಯು ಮಲೆನಾಡು ಹಾಗೂ ಹೆಚ್ಚು ನೀರಿರುವ ಪ್ರದೇಶದಲ್ಲಿ ಕಂಡು ಬರುವುದು. ಇದನ್ನು ಆಂಗ್ಲ್ ಭಾಷೆಯಲ್ಲಿ leech ಎನ್ನುವರು, ಇದರ ವೈಜ್ಞಾನಿಕ ಹೆಸರು hirudina. ಜಿಗಣಿಯ ಲಾಲಾರಸದಲ್ಲಿ ಬಯೋ ಆಕ್ಟೀವ್ ಪದಾರ್ಥವಿರುವುದರಿಂದ ವೈದ್ಯಕೀಯ ರಂಗದಲ್ಲಿ ಇದನ್ನು ಬಳಸುವರು, ಇದನ್ನು ಕಚ್ಚಿದರೆ ಲಂಟಾನ್ ಗಿಡದ ಸೊಪ್ಪನ್ನು ಗಾಯವಾದ ಸ್ಥಳದಲ್ಲಿ ಉಜ್ಜಬೇಕು ಅಥವಾ ಇದು ಕಚ್ಚದಹಾಗೆ ಮಾಡಲು ಉಳಿ ಸೊಪ್ಪನ್ನು ಉಜ್ಜಬೇಕು ಎಂದು ಹೇಳಿ, ನಮ್ಮ ಗೆಳೆಯನಿಗೆ ಪ್ರಥಮ ಚಿಕಿತ್ಸೆ ನೀಡಿದರು. ಆಗ ಗೆಳೆಯನೊಬ್ಬನು ಸಂಜೆಯಾಗುವುದರ ಮುನ್ಸೂಚನೆ ನೀಡಿದನು. ಏಕೆಂದರೆ ಸಂಜೆಯ ನಂತರ ಇಲ್ಲಿ ಪ್ರಯಾಣ ನಿಷಿದ್ದ, ಅಲ್ಲದೇ ಕಾಡು ಪ್ರಾಣಿಗಳ ಭಯ. ಹೀಗಾಗಿ ನಾವೆಲ್ಲರೂ ಬೆಟ್ಟದಿಂದ ಬೇಗ ಕೆಳಗಿಳಿಯಲು ತಯಾರಾಗಿ ವಾಹನದ ಕಡೆ ಸಾಗಿದೆವು. ಆದರೆ ನನಗೆ ಇನ್ನೂ ಕೆಲ ಸಮಯ ಆ ಸುಂದರ ಪ್ರದೇಶದಲ್ಲಿ ಸುತ್ತುವ ಆಸೆಯಿತ್ತು. ಆಗ ನನಗೆ ನೆನಪಾಗಿದ್ದೆಂದರೆ ‘ಈ ಸಂಜೆ ಯಾಕಾದಿದೆ…!’ ಎಂದು.

****
ನಮ್ಮ ವಾಹನವು ಬೆಟ್ಟ ಇಳಿಯುತ್ತಿದ್ದಂತೆಯೇ ವೇಗವಾಗಿ ಮಂಗಳೂರಿನತ್ತ ಸಾಗಿತು. ಸ್ವಲ್ಪ ಸಮಯದ ನಂತರ ನಾವೆಲ್ಲರೂ ಮಂಗಳೂರಿನ ಸಮೀಪದ ಇತಿಹಾಸ ಪ್ರಸಿದ್ಧ ಸುಲ್ತಾನ್ ಬ್ಯಾಟರಿ ವಾಚ್ ಟವರ್ ಗೆ ಭೇಟಿ ನೀಡಿದೆವು. ಇದನ್ನು ಟಿಪ್ಪು ಸುಲ್ತಾನನು 1784 ರಲ್ಲಿ ನಿರ್ಮಿಸಿದ್ದನು. ಇದು ಮಂಗಳೂರಿನ ಹತ್ತಿರವಿರುವ ಬೋಲೋರ್‍ದಲ್ಲಿದೆ. ಸುಲ್ತಾನ್ ಬ್ಯಾಟರಿ ವಾಚ್ ಟವರ್ ಎತ್ತರವಾದ ಪ್ರದೇಶವಾದರೂ ಇದಕ್ಕೆ ಒಂದು ತಳಮನೆಯಿದೆ. ಇದರಲ್ಲಿ ಮದ್ದು ಗುಂಡುಗಳ ತಯಾರಿಗೆ ಬೇಕಾಗುವ ವಸ್ತುಗಳನ್ನು, ಹಾಗೂ ಮದ್ದು ಗುಂಡುಗಳನ್ನು ಸಂಗ್ರಹಿಸಲಾಗುತ್ತಿತ್ತೆಂದು ಅಲ್ಲಿ ನಮಗೆ ಭೇಟಿಯಾದ ಸ್ಥಳೀಯ ಹಿರಿಯರೊಬ್ಬರು ಹೇಳಿದರು. ಇದರ ಪಕ್ಕದಲ್ಲಿ ಅರಬ್ಬಿ ಸಮುದ್ರವಿರುವುದರಿಂದ ಇದರ ಮೆರಗನ್ನು ಹೆಚ್ಚಿಸಿದೆ. ಬೇಗನೇ ನಾವು ಅಲ್ಲಿಂದ ಹೊರಟು ಮಂಗಳೂರಿನ ಎರಡನೆಯ ಪ್ರಸಿದ್ದ ಬೀಚ್ ಆದ ಪಣಂಬೂರ್ ಬೀಚ್ ಗೆ ತೆರಳಿದೆವು. ಸೂರ್ಯನು ಅರ್ಧ ಮುಳುಗಿದ್ದನು. ಅವನು ನಾವು ಬರುವುದನ್ನೇ ಕಾಯುತ್ತಿದ್ದನೆನಿಸುತ್ತಿತ್ತು. ನಾವು ಇಲ್ಲಿ ಸೂಯಾಸ್ತವನ್ನು ನೋಡಲೆಂದೇ ಬಂದಿದ್ದೇವು ಆದರೆ ಸ್ವಲ್ಪ ತಡವಾಯಿತು. ಈ ಬೀಚ್ ನಲ್ಲಿ ನೀರಿನ ಅಲೆಗಳ ಅಬ್ಬರ ಕಡಿಮೆಯಿರುವುದರಿಂದ ಸಮುದ್ರದ ನೀರಿನ ಅಲೆಗಳು ಶಾಂತವಾಗಿ ದಡಕ್ಕೆ ಬಂದು ಹೋಗುತ್ತಿದ್ದವು. ಇಲ್ಲಿ ಈಜುವವರಿಗೆ ಅನುಕೂಲವಾದ ಸ್ಥಳವಾಗಿದೆ. ನಾವೆಲ್ಲರೂ ಸೂರ್ಯನು ಅರ್ದಂಬರ್ಧ ಮುಳುಗುತ್ತಿದ್ದುದನ್ನು ನೋಡಿ ಅವನೊಂದಿಗೆ ಸೆಲ್ಫಿ ಹಾಗೂ ಫೋಟೊ ತೆಗೆದುಕೊಳ್ಳಲಾರಂಭಿಸಿದೆವು.

ನಮ್ಮ ಗೆಳೆಯರು ಸಮುದ್ರದ ನೀರಿನಲ್ಲಿ ಸ್ವಲ್ಪ ಮುಂದೆಸಾಗಿ ಫೋಟೊ ತೆಗೆದುಕೊಳ್ಳುತಿದ್ದಂತೆಯೇ ನೀರಿನ ತೊರೆಯೊಂದು ಬಂದು ಅವರಿಗೆ ಸಂಜೆಸ್ನಾನ ಮಾಡಿಸಿ ಹೋಯಿತು. ಅದರಲ್ಲಿ ಒಬ್ಬ ಗೆಳೆಯನ ಮೊಬೈಲ್ ಕೂಡ ನೀರಿನಲ್ಲಿ ಸ್ನಾನಮಾಡಿದ್ದರಿಂದ ಅದು ಕಾರ್ಯನಿರತವಾಯಿತು. ಮಂಗಳೂರಿನಲ್ಲಿ ನೋಡಲು ಹಲವಾರು ಪ್ರೇಕ್ಷಣೀಯ ಸ್ಥಳಗಳಿದ್ದರೂ ಸಮಯದ ಅಭಾವದಿಂದ ಅವುಗಳೆಲ್ಲವನ್ನು ನೋಡಲಾಗಲಿಲ್ಲ. ಸುತ್ತಮುತ್ತಲೂ ಕತ್ತಲು ಆವರಿಸುತ್ತಿದ್ದುದರಿಂದ ನಾವೆಲ್ಲರೂ ಮುಂದಿನ ನಿಗದಿತ ಸ್ಥಳಕ್ಕೆ ತಲುಪಲು ಸಿದ್ದರಾಗಿ ವಾಹನ ಏರಿದೆವು. ವಾಹವದಲ್ಲಿ ನಾವೆಲ್ಲ ಗೆಳೆಯರು ಬೆಳಿಗ್ಗೆಯಿಂದ ನಡೆದ ಎಲ್ಲ ಚಟುವಟಿಕೆಗಳತ್ತ ಮೆಲುಕು ಹಾಕುತ್ತಿದ್ದೇವು, ಆಗ ಕೆಲ ಸಮಯದ ನಂತರ ಮಾರ್ಗದ ಬದಿಯಲ್ಲಿ ನಮ್ಮ ವಾಹನ ನಿಂತಿತು. ನಾವೆಲ್ಲರೂ ಕಿಟಕಿಯಿಂದ ಇಣುಕಿ ನೋಡಿದಾಗ ಅದೊಂದು ದೊಡ್ಡ ಧಾಬಾ ಆಗಿತ್ತು. ನಾಮಗೆಲ್ಲರಿಗೂ ಹಸಿವೂ ಆಗಿರುವುದರಿಂದ ಎಲ್ಲರೂ ಬೇಗನೇ ಹೋಗಿ ಊಟಕ್ಕಾಗಿ ತಮ್ಮ ತಮ್ಮ ಆಸನವನ್ನಲಂಕರಿಸಿದರು. ಆಗ ಸಮಯ ರಾತ್ರಿ 9 ಗಂಟೆಯಾಗಿತ್ತು. ಕೆಲ ಗೆಳೆಯರು ಮಂಗಳೂರಿನ ಪ್ರಸಿದ್ದ ಮೀನು ಸಾರಿನ ರುಚಿ ಚಪ್ಪರಿಸಿದರೆ ಕೆಲವರು, ಪರೋಟಾ, ನೀರ್ ದೋಸಾಗಳ ರುಚಿಯನ್ನು ಸವಿದರು. ಅಲ್ಲಿಂದ ಹೊರಡುವಾಗ ರಾತ್ರಿ 10:30 ಗಂಟೆಯಾಗಿತ್ತು. ವಾಹನದಲ್ಲಿ ಟಿ ವಿ ಸ್ಟಾರ್ಟ ಮಾಡಿ ಚಲನಚಿತ್ರವನ್ನು ಪ್ಲೇ ಮಾಡಲಾಯಿತು. ಆದರೆ ಎಲ್ಲರಿಗೂ ದಿನವಿಡೀ ಪ್ರವಾಸದಿಂದ ಆಯಾಸವಾಗಿದ್ದೆವು. ಹೀಗಾಗಿ ನಿದ್ರಾದೇವತೆಯು ಯಾವಾಗ ಆವರಿಸಿದಳೋ ಗೊತ್ತೇ ಆಗಲಿಲ್ಲ.
ನಮ್ಮ ವಾಹನವು ಚಳ್ಳಿಕೆರೆ, ಅನಂತಪುರಂ, ಮಾರ್ಗವಾಗಿ ಬೆಳಿಗ್ಗೆ ಕರ್ನೊಲ್ ಕ್ರಾಸ್ ರೋಡ್ ನಲ್ಲಿರುವ ಸೂರಜ ಗ್ರಾಂಡ್ ಹೋಟೆಲ್ ಗೆ ಬಂದು ತಲುಪಿತು. ನಾವೆಲ್ಲರೂ ಬೆಳಗಿನ ಪ್ರಮುಖ ಕಾರ್ಯಗಳನ್ನು ಮುಗಿಸಿಕೊಂಡು ಸ್ವಲ್ಪ ಅಲ್ಪೋಪಹಾರ ಸ್ವೀಕರಿಸಿ ಮುಂದಿನ ಪ್ರಯಾಣದೆಡೆಗೆ ಸಾಗಿದೆವು. ಹಲವು ಗಂಟೆಗಳ ನಂತರ ನಮಗೆ welcome to Hyderabad ಎಂಬ ಬೋರ್ಡ್ ನಮ್ಮನ್ನು ಸ್ವಾಗತಿಸಿತು. ಮದ್ಯಾಹ್ನಕ್ಕೆ ನಾವುಗಳು ಹೈದರಾಬಾದ ನಗರವನ್ನು ತಲುಪಿದೆವು.

ಹೈದರಾಬಾದ ನಗರವು ಭಾರತದ ಮುತ್ತಿನ ರಾಜಧಾನಿ, ನಿಜಾಮರ ನಗರ, ಹೈಟೆಕ್ ಸಿಟಿ, ಎಂದೇ ಖ್ಯಾತಿಯಾದ ದಕ್ಷಿಣ ಭಾರತದ ಖ್ಯಾತ ನಗರಗಳಲ್ಲಿ ಒಂದಾಗಿದೆ. ಡಾ||ಬಿ.ಆರ್.ಅಂಬೇಡ್ಕರ್‍ರವರು ಹೈದರಾಬಾದನ್ನು ಭಾರತದ ಎರಡನೇ ರಾಜಧಾನಿಯನ್ನಾಗಿ ಮಾಡಬೇಕೆಂದು ಹೇಳಿದ್ದರು. ಇಂದು ಹೈದರಾಬಾದ ತೆಲಂಗಾಣ ರಾಜ್ಯದ ರಾಜಧಾನಿಯಾಗಿದೆ. ಮೊದಲು ಇದು ಅವಿಭಜಿತ ಆಂಧ್ರ ಪ್ರದೇಶದ ರಾಜಧಾನಿಯಾಗಿತ್ತು.

ಹೈದರಾಬಾದನಲ್ಲಿ ನಾವು ಮೊದಲು ಸಂದರ್ಶಿಸಿದ್ದು, ಪ್ರಸಿದ್ದ ಐತಿಹಾಸಿಕ ಕಟ್ಟಡ ಚಾರ್‍ಮಿನಾರ್. ಇದು ಹೈದರಾಬಾದನ ಹೆಗ್ಗುರುತುಗಳಲ್ಲಿ ಒಂದಾದ ಲಾಡ್ ಬಜಾರನಲ್ಲಿರುವ ಹಳೆ ಪ್ರಾಂತ್ಯದ ಹೃದಯದಲ್ಲಿದೆ. ಚಾರ್‍ಮಿನಾರ್ ಕಟ್ಟಡವು ನಾಲ್ಕು ಮಿನಾರ್‍ಗಳನ್ನು ಅಂದರೆ ನಾಲ್ಕು ಪಿಲ್ಲರ್ ಗಳನ್ನು ಹೊಂದಿದೆ. ಉರ್ದು/ಹಿಂದಿ ಭಾಷೆಯಲ್ಲಿ ಚಾರ್ ಎಂದರೆ ನಾಲ್ಕು, ಆಂದರೆ ನಾಲ್ಕು ಮಿನಾರ್‍ಗಳಿರುವುದರಿಂದ ಇದಕ್ಕೆ ಚಾರ್‍ಮಿನಾರ್ ಎಂದು ಹೆಸರು ಬಂದಿದೆ. ಇದನ್ನು 1591 ರಲ್ಲಿ ಕುತುಬ್ ಷಾಹಿ ಆಡಳಿತದಲ್ಲಿ ಮೊಹಮ್ಮದ್ ಕುಲಿ ಕುತುಬ್ ಷಾಹಿಯಿಂದ ನಿರ್ಮಿತ ಈ ಕಟ್ಟಡವು ಇಂಡೋ ಇಸ್ಲಾಮಿಕ್ ಶೈಲಿಯನ್ನು ಹೊಂದಿದೆ. ಪ್ರತಿ ಮೀನಾರ್‍ಗಳ ಎತ್ತರ 160 ಅಡಿ ಆಗಿದೆ. ಇದರ ಶಿಲ್ಪಿ ಮೀರ್ ಮೋಮಿನ್ ಅಸ್ತರವಾದಿ. ಇದು ಮೂಸಿ ನದಿದಡದಲ್ಲಿದೆ. ಚಾರ್‍ಮಿನಾರ್ ಕಟ್ಟಡವನ್ನು ಹುಸೇನ್(ಪ್ರವಾದಿ ಮೊಹಮ್ಮದರ ಮೊಮ್ಮಗ)ರ ಸ್ಮರಣಾರ್ಥವಾಗಿ ಕಟ್ಟಲಾಯಿತು. ಇದನ್ನು ಕಟ್ಟುವ ಉದ್ದೇಶವೆಂದರೆ, ನಗರದಲ್ಲಿ ಬಂದ ಪ್ಲೇಗ್ ರೋಗವು ಹೆಚ್ಚಿಗೆ ಹರಡದಂತೆ ತಡೆದ ದೇವರ ಕೃತಜ್ಞಾಪೂರ್ವಕವಾಗಿ ಕಟ್ಟಲಾಗಿದೆಯೆಂದು ಹೇಳಲಾಗಿದೆ. ಇಂದು ಇದು ಚಲನಚಿತ್ರಗಳ ನೆಚ್ಚಿನ ಶೂಟಿಂಗ್ ಸ್ಪಾಟ್ ಆಗಿದೆ. ಇಲ್ಲಿ ಜನಸಂಧಣಿ ಅಧಿಕವಾಗಿದೆ. ಚಾರ್‍ಮಿನಾರಿನ ಮೇಲಿಂದ ಹೈದರಾಬಾದ8 ನಗರವನ್ನು ನೋಡುವ ಅಂದವೇ ಬೇರೆಯಾಗಿದೆ. ನಾವೆಲ್ಲರೂ ಇದರ ಮೇಲಿಂದ, ಮುಂದಿನಿಂದ, ಹೀಗೆ ಎಲ್ಲಕಡೆಗಳಿಂದ ಫೋಟೊಗಳನ್ನು ತೆಗೆಸಿಕೊಂಡೆವು. ಇದರ ಸಮೀಪದ ಲಾರ್ರ್ಡ ಬಜಾರ್‍ಗೆ ಹೋಗಿ ಅಲ್ಲಿನ ಪ್ರಸಿದ್ದ ಹರಳುಗಳು, ಬಳೆಗಳು, ಹಾಗೂ ಇನ್ನಿತರ ವಸ್ತುಗಳನ್ನು ಖರೀದಿಸಿದೆವು. ಅಲ್ಲಿಯೇ ಇರುವ ಒಂದು ಹೋಟೆಲ್‍ಗೆ ಹೋಗಿ ಹೈದರಾಬಾದನ ಪ್ರಸಿದ್ದ ಬಿರಿಯಾನಿ, ಪಿರೋಸಿ, ಮೊದಲಾದ ಖಾದ್ಯಗಳನ್ನು ಸವಿದೆವು. ಕೆಲವರು ವೆಜ್ ಬಿರಿಯಾನಿಯನ್ನು ತಿಂದರು. ಮದ್ಯಾಹ್ನ ಬಿಸಿಲು ಹೆಚ್ಚಾಗಿತ್ತು. ಆದುದರಿಂದ ಎಲ್ಲರೂ ಐಸ್ ಕ್ರೀಮ್ ತಿಂದು ನಂತರ ಹೈದರಾಬಾದ ಪಾನ್‍ನ ಸವಿಯನ್ನು ಹೀರಿದೆವು. ಇಲ್ಲಿಂದ ನಾವೆಲ್ಲರೂ ವಾಹನದ ಕಡೆಗೆ ಬಂದು ಪ್ರಸಿದ್ಧ ಐತಿಹಾಸಿಕ ಗೋಲ್ಕೊಂಡ್ ಕೋಟೆಯೆಡೆಗೆ ಸಾಗಿದೆವು.

ಗೋಲ್ಕೊಂಡ್ ಕೋಟೆಯು ಪ್ರಸಿದ್ದ ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾಗಿದ್ದು, ಇದು ಹೈದರಾಬಾದನಿಂದ 10 ಕಿಮೀ ದೂರದಲ್ಲಿದೆ. ಗೋಲ್ಕೊಂಡಾ ಹೆಸರು ಗೋಲ್ ಎಂದರೆ ವರ್ತುಲ ಅಥವಾ ಗೋಲಾಕಾರ ರೀತಿಯಾದ ಎತ್ತರದ ಕೋಟೆಯಿರುವುದರಿಂದ (Round Shaped Hill) ಗೋಲ್ಕೊಂಡ ಎಂಬ ಹೆಸರು ಬಂದಿದೆ. ಇದು ಎತ್ತರವಾದ ಬೆಟ್ಟದಲ್ಲಿ ನೆಲೆಗೊಂಡಿದ್ದು ಮತ್ತು ಇದು ಇತರ ಕಡೆಗಳಲ್ಲಿ ಸುರುಳಿಯಾಕಾರದಲ್ಲಿ ಹರಡಿದೆ. ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಬಹಮನಿ ಸಾಮ್ರಾಜ್ಯದ ಕುಲಿ ಕುತುಬ್ ಶಾಹಿ ಆಡಳಿತಾವಧಿಯಲ್ಲಿ ಇದನ್ನು ನಿರ್ಮಿಸಲಾಯಿತೆಂದು ಹೇಳುವರು. ಆದರೆ ಈ ಪ್ರದೇಶವು ಪ್ರಾಚಿನ ಭಾರತದ ಇತಿಹಾಸದ ಅವಧಿಯಲ್ಲಿ ಕಾಕತೀಯರ ಆಳ್ವಿಕೆಗೆ ಒಳಪಟ್ಟಿತ್ತೆಂದು ಹೇಳಲಾಗಿದೆ. ಇದರ ವಿನ್ಯಾಸ ವಿಶಿಷ್ಟ ಹಾಗೂ ಅದ್ಭುತವಾಗಿದೆ. ಏಕೆಂದರೆ ಇದರ ಪ್ರಾರಂಭದ ಕೆಳಗೆ ಕೋಟೆದ್ವಾರದ ಹತ್ತಿರದಿಂದ ಚಪ್ಪಾಳೆ ಹೊಡೆದರೆ ಎತ್ತರದ ಇನ್ನೊಂದು ಪ್ರದೇಶದಲ್ಲಿ ಇದರ ಸದ್ದು ಕೇಳಿ ಬರುವುದು. ಇದು ವಿರೋಧಿಗಳು ಒಳನುಸುಳಿದರೆ, ಆಕ್ರಮಣ ಮಾಡಿದರೆ, ಹೀಗೆ ಹಲವಾರು ಕಾರಣಗಳಿಂದ ಸೂಚನೆಗಳನ್ನು ನೀಡಲು ಬಳಸಲಾಗಿತ್ತಿತ್ತು. ಎತ್ತರದ ಕೋಟೆಯು ನೋಡಲು ಸುಂದರವಾಗಿವೆ, ಅಲ್ಲದೇ ಒಂದು ಗಾರ್ಡನ ಕೂಡ ಮಾಡಲಾಗಿದೆ. ಕೋಟೆಯ ಎತ್ತರವೇರಿ ಸಂಪೂರ್ಣ ಹೈದರಾಬಾದ ನಗರವನ್ನು ನೋಡುವ ಪರಿಯೇ ಬೇರೆಯದ್ದಾಗಿದೆ. ಇಲ್ಲಿ ಕೆಲವು ವಿದೇಶೀಯರನ್ನು ಪರಿಚಯಿಸಿಕೊಂಡೆವು ಅವರೊಂದಿಗೆ ಹಲವಾರು ಫೋಟೊ ಗಳನ್ನು ತೆಗೆಸಿಕೊಂಡೆವು. ಅವರೂ ಫೋಟೊ ತೆಗೆಸಿಕೊಂಡರು. ಅಲ್ಲಿಂದ ನಂತರ ನಾವು ಪ್ರಸಿದ್ದ ಹುಸೇನ್ ಸಾಗರ ಕೆರೆ/ಜಲಾಶಯ ದತ್ತ ಪ್ರಯಾಣ ಬೆಳೆಸಿದೆವು.

ಹುಸೇನ್ ಸಾಗರ ಕೆರೆಯು ನೀಲಿ ನೀರಿನಿಂದ ಕಂಗೊಳಿಸುತ್ತ ನಮ್ಮನ್ನು ಕರೆಯುವಂತಿತ್ತು, ಇದು ಹಜರತ್ ಹುಸೈನಿ ಷಾ ವಲಿಯಿಂದ ನಿರ್ಮಿಸಲ್ಪಟ್ಟ ಮಾನವ ನಿರ್ಮಿತ ಜಲಾಶಯವಾಗಿದೆ. ಇಲ್ಲಿಗೆ ತಲುಪಿದಾಗ ಸಂಜೆ 5 ಗಂಟೆಯಾಗಿತ್ತು. ಈ ಕೆರೆಯ ಮಧ್ಯದಲ್ಲಿ ರಾಕ್ ಆಫ್ ಗಿಬ್ರಲ್ಜರ್ ಎಂದು ಕರೆಯುವ ದಿಬ್ಬದಲ್ಲಿ ಆಕಾಶಕ್ಕೆ ಚಾಚಿಕೊಂಡಂತೆ ನಿಲ್ಲಿಸಲಾಗಿರುವ 19 ಮೀ ಎತ್ತರದ ಬುದ್ಧನ ಬಿಳಿಯ ಅಮೃತ ಶಿಲೆಯು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವುದು. ನಾವೆಲ್ಲರೂ ಬೋಟಿನಲ್ಲಿ ಸಾಗಿ ಆ ಸ್ಥಳವನ್ನು ಸುತ್ತಿ ಮೂರ್ತಿಯನ್ನು ನೋಡಿ ಪುಳಕಿತರಾದೆವು. ಆ ಮೂರ್ತಿಯು ಹತ್ತಿರಕ್ಕೆ ಹೋದಂತೆ ಅದು ಕೈಯೆತ್ತಿ ನಮ್ಮನ್ನು ಆಶೀರ್ವದಿಸುವಂತೆ ಭಾಸವಾಗುತ್ತಿತ್ತು. ನಾವೆಲ್ಲರೂ ಇಲ್ಲಿ ಸೂರ್ಯಾಸ್ತದ ಆನಂದವನ್ನು ಅನುಭವಿಸಿದ ಅವನಿಗೆ ವಿದಾಯ ಹೇಳಿ, ಕೆರೆಯ ಪಕ್ಕದಲ್ಲಿರುವ ಒಂದು ಹೋಟೆಲ್ ಗೆ ಹೋದೆವು. ಅಲ್ಲಿ ವಿಶೇಷವಾದ ಇರಾನಿ ಚಾಯ್ ಹಾಗೂ ಓಸ್ಮಾನಿಯಾ ಬಿಸ್ಕತ್ ಗಳ ರುಚಿ ನೋಡಿದೆವು. ಚಹಾ ತುಂಬ ರುಚಿ ಹಾಗೂ ಸ್ವಾದಿಷ್ಡವಾಗಿತ್ತು. ಕೆಲ ಗೆಳೆಯರು ಎರಡೆರಡು ಬಾರಿ ಚಹಾದ ರುಚಿಯನ್ನು ಸವಿದರು. ಹೈದರಾಬಾದನಲ್ಲಿ ಪ್ರವಾಸಿಯೋಗ್ಯವಾದ ಸಾಲಾರ್‍ಜಂಗ್ ವಸ್ತುಸಂಗ್ರಹಾಲಯ, ಎನ್ ಟಿ ಆರ್ ಗಾರ್ಡನ್ , ನೆಹರು ತಾರಾವೀಕ್ಷಣಾಲಯ, ರಾಮೋಜಿ ಫಿಲ್ಮ್ ಸಿಟಿ, ಹೀಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ನಾವು ಈಗಾಗಲೇ ಈ ಮೊದಲು ಇವುಗಳನ್ನು ವೀಕ್ಷಿಸಿದ್ದರಿಂದ ಮುಂದಿನ ಪ್ರಯಾಣದತ್ತ ಸಾಗಿದೆವು. ನಮ್ಮ ಮುಂದಿನ ಪ್ರಯಾಣ ವಿಜಯವಾಡಾ ಆಗಿತ್ತು.

ಹೈದರಾಬಾದದಿಂದ ವಿಜಯವಾಡಾ ತಲುಪಲು 5 ಗಂಟೆಗಳು ಬೇಕು. ನಾವು ಎನ್ ಎಚ್ 65 ಮೂಲಕ ಹೊರಟು ಮಧ್ಯರಾತ್ರಿ ವಿಜಯವಾಡಾ ತಲುಪಿದೆವು. ಅಲ್ಲಿ ಹೊಟೆಲ್ ಶ್ರೀನಿವಾಸನಲ್ಲಿ ತಂಗಿದೆವು. ಈ ಹೊಟೆಲ್ ಸ್ವಲ್ಪ ದುಬಾರಿಯಾದರೂ ಪರವಾಗಿಲ್ಲ. ಸುಸಜ್ಜಿತ ವ್ಯವಸ್ಥೆಹೊಂದಿದೆ. ಬೆಳಗಿನ ಕಾರ್ಯಗಳೆಲ್ಲವನ್ನು ಮುಗಿಸಿಕೊಂಡು ಬೆಳಗಿನ ಅಲ್ಪೋಪಹಾರ ಸೇವಿಸಿದಾಗ ಸಮಯ 8 ಗಂಟೆಯಾಗಿತ್ತು. ನಾವಲ್ಲರೂ ವಾಹನದತ್ತ ಸಾಗಿದೆವು. ವಿಜಯವಾಡಾ ಆಂಧ್ರ ಪ್ರದೇಶದ ಎರಡನೆಯ ದೊಡ್ಡ ನಗರ. ಇದರ ಹೆಸರೇ ಸೂಚಿಸುವಂತೆ ವಿಜಯದ ನಗರವಾಗಿದೆ. ವಿಜಯವಾಡಾ ಎಂದು ಹೆಸರು ಬರಲು ಒಂದು ಐತಿಹ್ಯದ ಪ್ರಕಾರ. ಅರ್ಜುನನು ಇಲ್ಲಿರುವ ಇಂದ್ರಲೀಲಾ ಬೆಟ್ಟದ ಮೇಲೆ ಕಠಿಣ ತಪಸ್ಸನ್ನು ಮಾಡಿ ಶಿವನಿಂದ ವಿಜಯದ ವರವನ್ನು ಪಡೆದುದರ ಸಂಕೇತವಾಗಿ ಈ ಹೆಸರು ಬಂದಿದೆ ಎಂದು ಹೇಳಲಾಗಿದೆ. ಪ್ರಾಚೀನ ಕಾಲದಲ್ಲಿ ಇದನ್ನು ವಿಜಯಗ್ರಾಮ ಎಂದು ಕರೆಯಲಾಗುತ್ತಿತ್ತು. ಇದು ಕೃಷ್ಣಾ ನದಿಯ ದಂಡೆಯಮೇಲಿದೆ. ವಿಜಯವಾಡಾ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ.

ಮೊದಲಿಗೆ ನಾವು ಇಲ್ಲಿ ಕನಕದುರ್ಗಾ ದೇವಸ್ಥಾನಕ್ಕೆ ತೆರಳಿದೆವು. ಈ ದೇವಸ್ಥಾನವು ಭಾರತದ ಪ್ರಾಚೀನ ದೇವಸ್ಥಾನಗಳಲ್ಲಿ ಒಂದಾಗಿದೆ. ಇದರ ಗರ್ಭಗುಡಿಯಲ್ಲಿ ದುರ್ಗಾಮಾತೆಯ ಅಲಂಕರಿತ ಸುಂದರ ಮೂರ್ತಿಯಿದೆ. ಈ ದೇವಸ್ಥಾನವು ದ್ರಾವಿಡ ಶೈಲಿಯ ಪಿರ್ಯಾಮಿಡಾಕಾರದ ಎತ್ತರ ಕಟ್ಟಡವಾಗಿದೆ. ದೂರಿನಿಂದ ಇದು ಬಂಗಾರ ಹೊದ್ದಂತೆ ಕಾಣುವುದು. ಹಲವಾರು ಶಿಲ್ಪಿಗಳನ್ನು ಕೆತ್ತಲಾಗಿದೆ. ಇದರಲ್ಲಿನ ಸುಂದರ ಕೆತ್ತನೆ ಕೆಲಸ ಅದ್ಭುತವಾಗಿದೆ. ಒಟ್ಟು 108 ಶಕ್ತಿ ಪೀಠಗಳಲ್ಲಿ ಕನಕ ದುರ್ಗಾ ದೇವಸ್ಥಾನವೂ ಒಂದಾಗಿದೆ. ಇದರ ಗೋಡೆಯ ಮೇಲೆ ದುರ್ಗಾಮಾತೆಯು ಮಹಿಷಾಸುರನನ್ನು ವಧಿಸುತ್ತಿರುವ ದೃಶ್ಯ ನೋಡುಗರನ್ನು ಆಕರ್ಶಿಸುವಂತಿದೆ. ಅಲ್ಲದೇ ಮಹಿಷಾಸುರನ ಮೇಲೆ ದುರ್ಗೆಯು ಸಾಧಿಸಿದ ವಿಜಯದ ಸಂಕೇತವಾಗಿಯೂ ವಿಜಯವಾಡಾ ಎಂಬ ಹೆಸರು ಬಂದಿತೆಂದು ಹೇಳುವರು. ಇಲ್ಲಿ ನವರಾತ್ರಿಯ 9 ದಿನಗಳು ಬಹಳ ವಿಜೃಂಬಣೆಯಿಂದ ಪೂಜೆ ಪುನಸ್ಕಾರಗಳನ್ನು ನಡೆಯುವವು. ಇಲ್ಲಿಗೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಬಂದು ಇದರಲ್ಲಿ ಫಾಲ್ಗೊಳ್ಳುವರು. ನಾವು ದೇವಸ್ಥಾವವೆಲ್ಲ ಸುತ್ತಿ ದೇವಿಯ ದರ್ಶನ ಪಡೆದು ಹೊರಬಂದೆವು. ಇಲ್ಲಿಂದ ನಮ್ಮ ಪ್ರಯಾಣ ಐತಿಹಾಸಿಕ ಉಂಡುವಳ್ಳಿ ಗುಹೆಯೆಡೆಗೆ ಸಾಗಿತು.

ಇಲ್ಲಿಂದ ಉಂಡವಳ್ಳಿ ಗುಹೆಗೆ 30 ನಿಮಿಷದ ಪ್ರಯಾಣದ ನಂತರ ತಲುಪಿದೆವು. ಉಂಡವಳ್ಳಿಯು ಗುಂಟೂರು ಜಿಲ್ಲೆಯಲ್ಲಿದೆ. ವಿಜಯವಾಡಾದಿಂದ 6ಕಿ.ಮಿ ನೈರುತ್ಯಕ್ಕಿದೆ. ದೂರದಿಂದ ಬರಿ ಬೆಟ್ಟವೇ ಗೋಚರಿಸುತ್ತಿತ್ತು. ಇಲ್ಲಿ ನಾವು ತಲುಪಿದಾಗ ಕಂಡ ದೃಶ್ಯವು ಅದ್ಭುತವಾಗಿದೆ. ದೊಡ್ಡದಾದ ಬೆಟ್ಟದ ಬಂಡೆಗಳನ್ನು ಕೊರೆದು ಗುಹೆಗಳನ್ನು ನಿರ್ಮಿಸಲಾಗಿದೆ. ಇವುಗಳು 4 ರಿಂದ 5 ನೇ ಶತಮಾನಕ್ಕೆ ಸೇರಿದ್ದವು. ಇಲ್ಲಿನ ಗುಹೆಗಳನ್ನು 7 ನೇ ಶತಮಾನದಲ್ಲಿ ರಾಜಾವಿಷ್ಣುಕುಂಡಿನನ ಸಮಯದಲ್ಲಿ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಈ ಗುಹೆಗಳು ಅನಂತ ಪದ್ಮನಾಭಸ್ವಾಮಿ, ವಿಷ್ಣು/ನರಸಿಂಹ ಹಾಗೂ ಬುದ್ಧನಿಗರ್ಪಿತವಾಗಿವೆ. ಇಲ್ಲಿನ ಕಲೆಯು ಗುಪ್ತರ ಕಾಲಕ್ಕೆ ಸೇರಿದ್ದಾಗಿದೆ. ಗುಹೆಯು ಮೂರು ಅಂತಸ್ತುಗಳನ್ನು ಹೊಂದಿದೆ. ಇದು ಬಾದಾಮಿಯ ಗುಹೆಗಳನ್ನು ನೆನಪಿಗೆ ತರಿಸುವುದು. ಇದು ಕೃಷ್ಣಾ ನದಿದಂಡೆಗೆ ಇರುವುದರಿಂದ ಇಲ್ಲಿ ವಿವಿಧ ಗಿಡ, ಮರ, ಬಳ್ಳಿ, ಪಕ್ಷಿಗಳಿಂದ ಕೂಡಿದ ಸುಂದರ ಉಧ್ಯಾನವನವಿದೆ.

ಗುಹೆಯ ಮೊದಲನೇ ಮಹಡಿಯಲ್ಲಿ 5 ಮೀಟರ್ ಎತ್ತರವಾದ ಗೋಡೆಗೆ ಅಂಟುಕೊಂಡಂತೆ ಬುದ್ದನ ವಿಗ್ರಹವಿದೆ. ಅದರ ಸುತ್ತಲೂ ಬುದ್ದ ಬಿಕ್ಕುಗಳ ಅನೇಕ ಶಿಲ್ಪಗಳಿವೆ. ಅಲ್ಲದೇ ಬುದ್ದನಿಗೆ ಸಂಬಂಧಿತ ಚಿತ್ರಗಳನ್ನು ಕೆತ್ತಲಾಗಿದೆ. ಎರಡನೆಯ ಅಂತಸ್ತಿಗೆ ಹೋದಾಗ ಅಲ್ಲಿ ನಿದ್ರಿಸುತ್ತಿರುವ ವಿಷ್ಣುವಿನ ದೊಡ್ಡದಾದ ಏಕಶಿಲಾ ಮೂರ್ತಿಯಿದೆ. ವಿಷ್ಣುವಿನ ಸುತ್ತಲೂ ಹಾಗೂ ಹಿಂದೆ ಗೋಡೆಯ ಮೇಲೆ ವಿವಿಧ ಭಂಗಿಯಲ್ಲಿರುವ ಹಲವಾರು ಶಿಲ್ಪಗಳನ್ನು ಕೆತ್ತಲಾಗಿದೆ. ಇಲ್ಲಿರುವ ಪ್ರತಿಯೊಂದು ಕಂಬದ ಮೇಲೆ ಹಲವಾರು ಚಿತ್ರಗಳನ್ನು ಕೆತ್ತಲಾಗಿದೆ. ಇದರ ಮುಂದಿನ ಕಟಾಂಜನದಲ್ಲಿ ತಪಸ್ಸನ್ನಾಚರಿಸುತ್ತಿರುವ ಮುನೀಶ್ವರನ ದೊಡ್ಡ ಮೂರ್ತಿಯಿದೆ. ಇದರ ಪಕ್ಕದಲ್ಲಿ ಆನೆ ಹಾಗೂ ವಿವಿಧ ಶಿಲ್ಪಗಳಿವೆ. ಮೂರನೇ ಅಂತಸ್ತಿಗೆ ಹೋದಾಗ ಬ್ರಹ್ಮ, ವಿಷ್ಣು, ಶಿವನ ತ್ರಿಮೂರ್ತಿ ವಿಗ್ರಹಗಳಿವೆ. ಗಣಪತಿ ಹಾಗೂ ಹನುಮಂತನ ವಿಗ್ರಹಗಳು ಕೂಡ ಇವೆ. ಅಲ್ಲದೇ ಹಲವಾರು ಭಂಗಿಗಳಲ್ಲಿ ನಿಂತ ಶಿಲ್ಪಗಳನ್ನು ಕೆತ್ತಲಾಗಿದೆ. ಇಲ್ಲಿಂದ ಇದರ ಮುಂದಿರುವ ಗಾರ್ಡನ್ ಬಹು ಸುಂದರವಾಗಿ ಕಾಣುವುದು. ಕೆಳ ಅಂತಸ್ತಿನ ಗೋಡೆಯ ಮೇಲೆ ಬರಹಗಳನ್ನು ಕೆತ್ತಲಾಗಿದೆ, ಅಲ್ಲದೇ ಇಲ್ಲಿ ಒಂದು ಸುರಂಗ ಮಾರ್ಗವಿದೆ. ಇದು ಹಲವಾರು ಸ್ಥಳಗಳನ್ನು ಸಂಧಿಸುತ್ತದೆಂದು ಹೇಳುವರು. ನಾವು ಭೇಟಿ ನೀಡಿದಾಗ ರಜಾ ದಿನವಿರುವುದರಿಂದ ಜನಸಂದಣಿ ಅಧಿಕವಾಗಿತ್ತು. ಸ್ವಲ್ಪ ಮಂಗಗಳ ಕಾಟ ಇದೆ. ವಿಜಯವಾಡಾಕ್ಕೆ ಭೇಟಿಕೊಟ್ಟ ಪ್ರತಿಯೊಬ್ಬ ಪ್ರವಾಸಿ ನೋಡಲೇಬೇಕಾದ ಐತಿಹಾಸಿಕ ಸ್ಥಳ ಇದಾಗಿದೆ. ಇಲ್ಲಿ ಸ್ಥಳೀಯರು ಹೆಚ್ಚಾಗಿ ಆಗಮಿಸುವರು. ಇಲ್ಲಿಂದ ನಮ್ಮ ಪಯಣ ಪ್ರಕಾಶಂ ಬ್ಯಾರೇಜ್‍ನತ್ತ ಸಾಗಿತು.

ಉಂಡವಳ್ಳಿ ಗುಹೆಯ ಸಮೀಪವೇ ಪ್ರಕಾಶಂ ಬ್ಯಾರೇಜ್ ಇದೆ. ಇದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಈ ಬ್ಯಾರೇಜನ್ನು ಕಟ್ಟಲಾಗಿದೆ. ‘ಕೃಷ್ಣಾನದಿಯೆಂದರೆ ನಮಗೆ ಹೆಮ್ಮೆ, ಏಕೆಂದರೆ ವಿಜಯಪುರವು ಪಂಚನದಿಗಳ ಬೀಡಾಗಿದ್ದು, ಅದರಲ್ಲಿ ಕೃಷ್ಣಾನದಿಯು ಪ್ರಮುಖವಾಗಿರುವುದರಿಂದ ಇದು ವಿಜಯಪುರದ ಜೀವನಯಾಗಿದೆ’. ಪ್ರಕಾಶಂ ಬ್ಯಾರೇಜಿನ ನಿರ್ಮಾಣ ಕಾರ್ಯವು 1954 ರಿಂದ 1957ರ ವರೆಗೆ ಇದೆ. ಇದನ್ನು 1.75 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 1223.5 ಮೀ, ಉದ್ದವಿದ್ದು, 7 ಲಕ್ಷ ಎಕರೆವರೆಗೆ ವಿಸ್ತರಿಸಿದೆ. 1.2 ಮಿಲಿಯನ್ ಎಕರೆ ಪ್ರದೇಶಕ್ಕೆ ನೀರು ಒದಗಿಸುವುದು. ಇದು ಒಟ್ಟು 76 ಪಿಲ್ಲರ್‍ಗಳನ್ನು ಹೊಂದಿದ್ದು. 70 ಪಿಲ್ಲರ್‍ಗಳಿಂದ ನೀರನ್ನು ಗುಂಟೂರು ಜಿಲ್ಲೆಗೆ ಹಾಗೂ 6 ಪಿಲ್ಲರ್‍ಗಳಿಂದ ನೀರನ್ನು ಕೃಷ್ಣಾ ಜಿಲ್ಲೆಗಳಿಗೆ ವಿತರಿಸಲಾಗಿದೆ. ಈ ಪಿಲ್ಲರ್‍ಗಳಿಗೆ ವಿವಿಧ ಬಣ್ಣದ ಬಣ್ಣದ ಲೈಟ್‍ಗಳನ್ನು ಅಳವಡಿಸಿ ಸಂಜೆ ಪ್ರವಾಸಿಗರನ್ನು ಆಕರ್ಶಿಸುವಂತೆ ಮಾಡಲಾಗಿದೆ. ಇದರ ಹೆಸರನ್ನು ಆಂಧ್ರದ ಪ್ರಥಮ ಮುಖ್ಯಮಂತ್ರಿಯಾದ ತಂಗುತೂರಿ ಪ್ರಕಾಶಂರವರ ಸ್ಮರಣಾರ್ಥ ಇಡಲಾಗಿದೆ. ಎಲ್ಲೆಡೆ ಮಳೆಯಾಗುತ್ತಿದ್ದರಿಂದ ನಿರಿನ ಹರಿವು ಹೆಚ್ಚಾಗಿ ಇದು ತನ್ನ ಸುಂದರತೆಯನ್ನು ಇಮ್ಮಡಿಗೊಳಿಸಿಕೊಂಡಿತ್ತು. ಇದನ್ನು ವೀಕ್ಷಿಸಿದ ನಂತರ ನಾವು ವಿಜಯವಾಡಾದತ್ತ ಪ್ರಯಾಣ ಬೆಳೆಸಿದೆವು.

ಮಾರ್ಗ ಮಧ್ಯದಲ್ಲಿ ರಾಜೀವ್ ಗಾಂಧಿ ಪಾರ್ಕಿಗೆ ಭೆಟಿ ನೀಡಿದೆವು. ಇದು ದೊಡ್ಡ ಉದ್ಯಾನವನವಾಗಿದ್ದು. ಇಲ್ಲಿ ಮಕ್ಕಳಿಗೆ ಅವಶ್ಯಕವಿರುವ ಎಲ್ಲ ರೀತಿಯ ಮನರಂಜನೆಯನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಜೋಕಾಲಿ, ಜಾರುಬಂಡೆ,ಸುಂದರವಾದ ಸಣ್ಣ ಸಣ್ಣ ಮರ ಬಳ್ಳಿಗಳು ಗಿಡ್ಡದಾದ ಮರಗಳು ವಿವಿಧ ಜಾತಿಯ ಹೂಗಳನ್ನು ಇಲ್ಲಿ ಕಾಣಬಹುದು. ಉದ್ಯಾನವನದ ಮಧ್ಯದಲ್ಲಿ ದೈತ್ಯಾಕಾರದ ಡೈನೋಸಾರ್‍ನ ಪ್ರತಿರೂಪವನ್ನಿಡಲಾಗಿದೆ. ಇಲ್ಲಿ ಮಕ್ಕಳಿಗಾಗಿ ಪ್ರಯಾಣಿಸಲು ರೈಲಿನ ವ್ಯವಸ್ಥೆಯೂ ಇದೆ. ನಾವು ಹೋದಾಗ ರೈಲಿನ ಹಳಿಗಳಿದ್ದವು ಆದರೆ ರೈಲೇ ಇರಲಿಲ್ಲ. ನಮ್ಮ ಗೆಳೆಯರೆಲ್ಲರೂ ರೈಲು ಊಟಕ್ಕೆ ಹೋಗಿರಬಹುದೆಂದು ಜೋಕ್ ಮಾಡುತ್ತ ಅಲ್ಲಿಂದ ಹೊರಬಂದೆವು. ನಾವೆಲ್ಲರೂ ಬೇಗನೇ ಊಟಮಾಡಿಕೊಂಡು ಕೊಂಡಪಲ್ಲಿ ಕೋಟೆ ನೀಡಲು ಹೊರಟೆವು. ಏಕೆಂದರೆ ಸಂಜೆ 5 ಗಂಟೆಯ ನಂತರ ಅಲ್ಲಿ ಪ್ರವೇಶ ನಿಶಿದ್ದ.

ಕೊಂಡಪಲ್ಲಿ ಕೋಟೆಗೆ ತಲುಪಿದಾಗ ಸಂಜೆ 4 ಗಂಟೆಯ ಸಮಯವಾಗಿತ್ತು. ಈ ಕೋಟೆಯು 14 ನೇ ಶತಮಾನದಲ್ಲಿ ಮಸುನೂರಿ ಎಂಬ ನಾಯಕನ ಕಾಲದಲ್ಲಿ ನಿರ್ಮಿತವಾಗಿದ್ದೆಂದು ಹೇಳಲಾಗಿದೆ. ನಂತರ ಇದನ್ನು ಓರಿಸ್ಸಾದ ಗಜಪತಿ ಪ್ರತಾಪರುದ್ರನು ಆಕ್ರಮಿಸಿಕೊಂಡಿದ್ದನು. ಇವನ ನಂತರ ಹಲವಾರು ಪಾಳೆಗಾರರ ವಶದಲ್ಲಿತ್ತು. ಕೊನೆಗೆ ಕುತುಬಶಾಹಿಯ ಆಡಳಿತಕ್ಕೊಳಪಟ್ಟಿತು. ಇದನ್ನು ಸೈನಿಕ ಕಾರ್ಯಾಚರಣೆಗೆ ಬಳಸಲಾಗಿತ್ತಿತ್ತು. ಇದರ ಪ್ರಮುಖ ಬಾಗಿಲನ್ನು ದರ್ಗಾದ ಬಾಗಿಲೆಂದು ಕರೆಯುವರು. ಏಕೆಂದರೆ ಅದರ ಪಕ್ಕದಲ್ಲೇ ಗುಲಾಬ ಷಾ ರವರ ದರ್ಗಾಇದೆ. ಅಲ್ಲದೇ ಗೋಲ್ಕೋಂಡಾ ಬಾಗಿಲೆಂದು ಹಲವಾರು ಹೆಸರುಗಳಿಂದ ಕರೆಯುವರು. ಬಾಗಿಲನ್ನು ಆಯತಾಕಾರದಲ್ಲಿ ಒಂದೇ ಗ್ರಾನೈಟ್ ಕಲ್ಲನ್ನು ಬಳಸಿ ಮಾಡಲಾಗಿದೆ. ಕೋಟೆಯು 12 ಅಡಿ ಅಗಲ ಹಾಗೂ 15 ಅಡಿ ಎತ್ತರವಾಗಿದೆ. ಇದರ ಮುಂದೆ ಸಣ್ಣ ಸಣ್ಣ ತೋಫುಗಳನ್ನು ಇಡಲಾಗಿದ್ದು ಸುತ್ತಲೂ ಸುಂದರವಾದ ಗಾರ್ಡನ್ ಇದೆ. ಇಲ್ಲಿಂದ ಸ್ವಲ್ಪ ಮುಂದೆ ಬಂದು ಚಹಾಕುಡಿಯುವಹೊತ್ತಿಗೆ ಸಮಯ ಸಂಜೆ 6 ಗಂಟೆಯಾಗುತ್ತಲಿತ್ತು. ಆಗ ನಾವೆಲ್ಲರೂ ನಮ್ಮ ವಾಹನವನ್ನು ಹತ್ತಿ ನೆಲಗೊಂಡ್ ಮೂಲಕ ಸಾಗಿ ರಾತ್ರಿ ಮೆಹಬೂಬ್‍ನಗರ ತಲುಪಿದೆವು. ಅಲ್ಲಿ ಊಟ ಮಾಡಿಕೊಂಡು ‘ಮರಳಿ ಮಣ್ಣಿಗೆ’ ಎಂಬಂತೆ ವಿಜಯಪುರದತ್ತ ನಮ್ಮ ಪ್ರಯಾಣ ಸಾಗಿತು. ಶಹಾಪೂರ್ ಮಾರ್ಗವಾಗಿ ಸಾಗಿ ಬೆಳಿಗ್ಗೆ 8 ಗಂಟೆಗೆ ನಾವೆಲ್ಲರೂ ವಿಜಯಪುರವನ್ನು ತಲುಪಿದೆವು. ಗೆಳೆಯರನ್ನು ಎಲ್ಲೆಲ್ಲಿ ಪಿಕ್ ಅಪ್ ಮಾಡಿದ್ದೇವೋ ಅಲ್ಲಲ್ಲಿ ಡ್ರಾಪ್ ಮಾಡುತ್ತ, ನಾನು ಪ್ರವಾಸದ ಅನುಭವಗಳನ್ನು ಹೊತ್ತು ಮನೆಗೆ ಬರುವಷ್ಟರಲ್ಲಿ 9 ಗಂಟೆಯಾಗಿತ್ತು.

-ಶ್ರೀ.ಎಂ.ಎಚ್.ಮೊಕಾಶಿ,


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Asif
Asif
5 years ago

Thank u bro to explain our amazing tour moments in words

Aziz
Aziz
5 years ago

Good article
Love to read again and again

I was one of the traveller in this tour

Irfan
Irfan
5 years ago

Me too

Irfan
Irfan
5 years ago

Hi RASUL BHAI

4
0
Would love your thoughts, please comment.x
()
x