“ಅಡಚಣೆಗಾಗಿ ಕ್ಷಮಿಸಿ…ದ್ದರೂ ಏಟು ಬಿದ್ದಿತ್ತು ಅಂದು !!”: ಗಿರೀಶ್.ವಿ


ಅಂದು ಡಿಸೆಂಬರ್ 4, 2017 ರಾತ್ರಿ ಎಂಟಾಗಿತ್ತು. ನನ್ನವಳು ಕನ್ನಡ ಪತ್ರಿಕೆ ಯೊಂದರಲ್ಲಿನ ಪದಬಂಧ ಬಿಡಿಸುವುದರಲ್ಲಿ ನಿರತಳಾಗಿದ್ದಳು. ಸಾಮಾನ್ಯವಾಗಿ ಅತೀ ವೇಗದಲ್ಲಿ ಉತ್ತರ ಕಂಡುಕೊಳ್ಳುತ್ತಿದ್ದವಳಿಗೆ ಅಂದು ಒಂದು ಸಾಲು ಮಾತ್ರ ಕೈಕೊಟ್ಟಿತ್ತು. ‘ಈಗಂತೂ ಅರ್ಜೆಂಟಾಗಿ ಒಂದು ಕಾಫಿ ಬ್ರೇಕ್ ತಗೋಬೇಕು’ ಅನ್ನುತ್ತಾ ಎದ್ದವಳಿಗೆ ನಾನು ‘ವಿರಾಮ ಬೇಕಿದ್ದರೇ ಸ್ವಲ್ಪ ದೂರ ವಾಕಿಂಗ್‍ಗೆ ಹೋಗಬಹುದು, ಅದಿಲ್ಲದಿದ್ದರೆ ಸಂಗೀತ ಕೇಳಬಹುದು! ಆದ್ರೆ ಕಾಫಿ ಮಾತ್ರ ಬೇಡ ಅಂದೆ’. ಇನ್ನೂ ಮುಂದುವರಿದು, ತಮಾಷೆಗೆ ‘ನಿನ್ನ ಸಾಮಥ್ರ್ಯ ಮತ್ತು ಬುದ್ಧಿಮತ್ತೆ ಚುರುಕಾಗಲು ಕಾಫಿಯ ಅಗತ್ಯವಿಲ್ಲ. Never attribute your success to ಯಕಃಶ್ಚಿತ್ ಕಾಫಿ’ ಅಂದೆ’! ಮುಂದಿನ ಕೆಲವೇ ಕ್ಷಣಗಳಲ್ಲಿ ನಾವುಗಳು ಮನೆಯ ಹತ್ತಿರದ ಪಾರ್ಕಿನಲ್ಲಿದ್ದೆವು. ಪಾರ್ಕಿನಲ್ಲಿ ಅವಳ ಮೊಬೈಲ್‍ನ ವಾಟ್ಸ್‍ಆಪ್ ಸಂದೇಶದ ಅಲರ್ಟ್ ಟೋನ್ ಒಂದೇ ಸಮನೆ ಸದ್ದಿಡುತ್ತಿತ್ತು. ಕುತೂಹಲದಲ್ಲಿ ಅವಳು ಆ ಮೆಸೆಜ್ ತೆರೆದು ನೋಡಿ ಕೊಂಚ ಶಾಕ್ ಆಗಿದ್ದಳು. ಆ ಸಂದೇಶವನ್ನು ನನಗೆ ತೋರಿಸುತ್ತಾ ಅವಳು ಹೇಳಿದ್ದು “Legendary Actor of ¨Bollywood is no more” ಅಂತ. ದೀರ್ಘಕಾಲದ ಬೇನೆಯಿಂದ ಬಳಲುತ್ತಿದ್ದ ಆತ ಅಂದು ಇಹಲೋಕ ತ್ಯಜಿಸಿದ್ದ. ಅದೇ ಗುಂಗಿನಲ್ಲಿ ವಾಕಿಂಗ್ ಮುಗಿಸಿ ಮನೆಗೆ ಬಂದು ರಾತ್ರಿ ಮಗಳಿಗೆ ಊಟ ಮಾಡಿಸಿ, ಮಲಗಿದೆ. ಎಷ್ಟೇ ಪ್ರಯತ್ನಪಟ್ಟರೂ ನಿದ್ದೆ ಬಾರದೆ ಎದ್ದು, ಕಂಪ್ಯೂಟರ್ ಮುಂದೆ ಕುಳಿತು, ಮನಸ್ಸಿನಲ್ಲಿ ಮೂಡುತ್ತಿದ್ದ ಅನಿಸಿಕೆಗಳನ್ನು ಟೈಪಿಸಲು ಪ್ರಾರಂಭಿಸಿದೆ.

“You always live in the past” ಅನ್ನುವ ನನ್ನವಳ ಮಾತಿನಂತೆ, ಮತ್ತೆ ನೆನಪಾಗಿತ್ತು ದೂರದರ್ಶನ ಮತ್ತು ಭಾನುವಾರದ ಬೆಳಿಗ್ಗೆಯ ರಂಗೋಲಿ ಕಾರ್ಯಕ್ರಮ. ಅಂದು ಆ ನಟನ ಎಂದೂ ಮರೆಯಲಾಗದ, ಕಿಶೋರ್ ಕುಮಾರ್ ಹಾಗೂ ಮಹೇಂದ್ರ ಕಪೂರ್ ರವರ ಹಿನ್ನೆಲೆ ಗಾಯನವುಳ್ಳ “ಲಂಡನ್ ಸೆ ಆಯಾ ಹೂ ಅಲ್‍ಬೇಲಾ” ಅನ್ನುವ ಹಾಡು ನನ್ನ ಸ್ಮøತಿಪಠದಲ್ಲಿ ಮೂಡಿತು. ಆ ಗೀತೆಯಲ್ಲಿ ನಾಯಕಿಯನ್ನು ತಮ್ಮತ್ತ ಸೆಳೆಯಲು ನಾಯಕ ಮತ್ತು ಖಳನಟರ ನೃತ್ಯದ ಜುಗಲ್‍ಬಂದಿ ಎಷ್ಟು ಸೊಗಸಾಗಿ ಚಿತ್ರಿಸಿದ್ದಾರೆಂದರೆ, ಈಗಲೂ ನೀವು ಗೂಗಲ್ ಮಾಡಿದರೆ ನನ್ನ ತಲೆಮಾರಿನ ಹಾಗೂ ಈಗಿನ ವಯೋಮಾನದವರು ಕೂಡ ಅದನ್ನು ನೋಡಿ, ಮೆಚ್ಚಿ ಕಾಮೆಂಟ್ ಮಾಡಿರುವುದು ಕಾಣಸಿಗುತ್ತದೆ.

ನಾವು ಚಿಕ್ಕವರಿದ್ದಾಗ ಇದ್ದದ್ದು ದೂರದರ್ಶನ ವಾಹಿನಿ ಮಾತ್ರ. ಅದರಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು ಬಹಳ ಕಡಿಮೆ. ಆಗೆಲ್ಲಾ ಸಿನಿಮಾ ನಟರೂ ಕೂಡ ಟಿವಿಯಲ್ಲಿ ಆಗಾಗ ಕಾಣಿಸುತ್ತಿರಲಿಲ್ಲವಾದ್ದರಿಂದ, ಸಿನಿಮಾ ಮತ್ತು ಕಲಾವಿದರ ಬಗ್ಗೆ ನನ್ನಲ್ಲಿ ಸಹಜವಾಗಿ ಕುತೂಹಲ ಹೆಚ್ಚಿತ್ತು. ನಮ್ಮ ಮನೆಯಲ್ಲಿ ಆಗಿನ್ನೂ ಟಿವಿ ಕೊಂಡಿರಲಿಲ್ಲ. ಸಿನಿಮಾಗಳ ಬಗ್ಗೆ ನನ್ನಲ್ಲಿ ಇದ್ದ ಆಸಕ್ತಿ, ಬೇರೆಯವರ ಮನೆಗೆ ಟಿವಿ ನೋಡಲು ಹೋಗುವ ಪರಿಪಾಠಕ್ಕೆ ನಾಂದಿಯಾಗಿತ್ತು. ಹೊಸ ಹಾಗೂ ಹಳೆಯ ಚಿತ್ರಗೀತೆಗಳನ್ನು ಸವಿಯಲು ಗುರುವಾರದ ಚಿತ್ರಮಂಜರಿ ಹಾಗೂ ಕನ್ನಡ ಸಿನಿಮಾಗಳಿಗೆ ಭಾನುವಾರದ ಸಂಜೆ ಮೀಸಲಿತ್ತು. ಭಾನುವಾರದ ಚಲನಚಿತ್ರದ ಪ್ರಸಾರದ ಮಧ್ಯದಲ್ಲಿ ಆಗಾಗ “ಅಡಚಣೆಗಾಗಿ ಕ್ಷಮಿಸಿ” ಅನ್ನುವ ಪಶ್ಚಾತ್ತಾಪದ ಬೋರ್ಡನ್ನು ನೇತುಹಾಕುವುದು ಹಾಗೂ ದೆಹಲಿಯ ಕಾರ್ಯಕ್ರಮಕ್ಕೆ ಸಮಯ ಒದಗಿಸಲು ಚಲನಚಿತ್ರದ ಮಧ್ಯೆ ಮಧ್ಯೆ ಕತ್ತರಿ ಹಾಕುತ್ತಿದ್ದದ್ದು ಸಾಮಾನ್ಯವಾಗಿತ್ತು. ಈ ಮಧ್ಯೆ ನಮ್ಮ ಮನೆಗೇ ಹೇಗಾದರೂ ಮಾಡಿ ಟಿವಿ ತರುವ ಆಸೆಯನ್ನು ಅಮ್ಮನ ಬಳಿ ಹೇಳಿಕೊಂಡಾಗ ಅಪ್ಪನ ಕಡೆಗೆ ಕೈ ತೋರಿಸಿ ತನ್ನ ಅಸಹಾಯಕತೆ ತೋಡಿಕೊಂಡಿದ್ದಳು. ಆದರೆ ಮುಂದೆ ನಮ್ಮ ಮನೆಗೇ ಟಿವಿ ಬಂದ ಸನ್ನಿವೇಶ ಕೂಡ ಸ್ವಲ್ಪ ವಿಚಿತ್ರವಾಗಿತ್ತು.

ಸುಮಾರು ವರ್ಷಗಳ ಹಿಂದಿನ ಮಾತು. ಹೆಸರು ಪುಟ್ಟಣ್ಣ.ಎಸ್. ಹೌದು… ತಮ್ಮ ಹೆಸರಿನಲ್ಲಿ ‘ಪುಟ್ಟ’ ಅಂತ ಇದ್ದರೂ, ನಾವು ವಾಸವಾಗಿದ್ದ ಬೀದಿಯಲ್ಲಿ ಅವರದು ದೊಡ್ಡ ಪ್ರಭಾವವೇ ಇತ್ತು. ಅವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಮಾತು ಮಾತಿಗೂ ಅದು ಅವರದೇ ‘ಮಿಸ್ಟೀಕ್’ ಅಂತಾನೇ ಬೇರೆಯವರ ಕಡೆಗೆ ಹಾಗೂ ಬೇರೆಯದರ ಕಡೆಗೆ ಬೆರಳು ತೋರಿಸುತ್ತಿದ್ದ ಆತ ನಿಜವಾಗಿಯೂ ಅಂಥ ದೊಡ್ಡ ಯಾವ ತಪ್ಪನ್ನೂ ಸಾಮಾನ್ಯವಾಗಿ ಮಾಡುತ್ತಿರಲಿಲ್ಲ. ಮಾರುಕಟ್ಟೆಗೆ ಹೊಸತೇನೇ ಬಂದರೂ ಮೊದಲು ಅವುಗಳನ್ನು ತನ್ನದಾಗಿಸಿ ಕೊಂಡು ಬೀಗುವ ವ್ಯಕ್ತಿತ್ವದವರಾಗಿದ್ದರು. ಬ್ಲಾಕ್ ಅಂಡ್ ವೈಟ್ ಟಿವಿ ಯನ್ನು ಕೂಡ ಆ ಬೀದಿಯಲ್ಲಿ ಎಲ್ಲರಿಗಿಂತ ಮುಂಚೆನೇ ಕೊಂಡುಕೊಂಡು ಈಗಿನ ಕಾಲದ ತರಹ ಸೆಲ್ಫಿತೆಗೆದುಕೊಳ್ಳಲು ಮೊಬೈಲ್ ಫೋನ್ ಇಲ್ಲದಿದ್ದುದರಿಂದ ಆ ಬೀದಿಯ ಕೊನೆಯಲ್ಲಿ ವಾಸವಾಗಿದ್ದ ಫೊಟೋಗ್ರಾಫರ್‍ನನ್ನು ಕರೆಯಿಸಿ ಟಿವಿಯ ಶಟರ್ ತೆರೆಯುತ್ತಿರುವ ಹಾಗೆ ಫೋಟೋ ತೆಗೆಸಿಕೊಂಡು ಅದಕ್ಕೆ ಚಂದದ ಫ್ರೇಮ್‍ವೊಂದನ್ನು ಹಾಕಿಸಿ ಮನೆಯ ಪಡಸಾಲೆಯ ಗೋಡೆಯ ಮೇಲೆ ನೇತುಹಾಕಿದ್ದರು. ತದನಂತರದಲ್ಲಿ ಮುಂದಿನ ಬೀದಿಯ ಸೂರ್ಯನಾರಾಯಣ ರವರ ಮನೆಯಲ್ಲಿ ಕಲರ್ ಟಿವಿ ಯನ್ನು ನೋಡಿ ಮನೆಗೆ ಬಂದು ಬಿಸಿಲಿನ ಧಗೆಯ ಕಾರಣ ನೀಡಿ ಮಜ್ಜಿಗೆ ಕುಡಿದದ್ದನ್ನು ಅವರ ಶ್ರೀಮತಿ ನಮ್ಮ ತಾಯಿಯ ಹತ್ತಿರ ಒಮ್ಮೆ ಸಿಕ್ಕಾಗ ಹೇಳಿಕೊಂಡಿದ್ದೂ ಉಂಟು.

ನಾವುಗಳು ಪುಟ್ಟಣ್ಣನವರ ಮನೆಗೆ ಭಾನುವಾರ ಕನ್ನಡ ಸಿನಿಮಾ ನೋಡಲು ಹೋದಾಗಲೆಲ್ಲಾ ನಮ್ಮನ್ನು ಆತ್ಮೀಯವಾಗಿಯೇ ಬರಮಾಡಿಕೊಳ್ಳುತ್ತಿದುದು ಮಾತ್ರವಲ್ಲ ನಮ್ಮ ತಂದೆಯವರ ಜೊತೆಗೆ ವಿಶೇಷ ಸ್ನೇಹವಿದ್ದುದರಿಂದ ಅವರಿಗೇನೆ ಒಂದು ಪ್ರತ್ಯೇಕ ಆಸನ ಮೀಸಲಿಟ್ಟಿದ್ದರು. ಒಂದು ಭಾನುವಾರ ಕನ್ನಡದ ಮೇರುನಟನ ಒಂದು ಚಿತ್ರ ಪ್ರಸಾರವಾಗುವುದರಲ್ಲಿತ್ತು. ಎಂದಿನಂತೆ ಪುಟ್ಟಣ್ಣನವರು ತಮ್ಮ ಕನ್ನಡಕವನ್ನು ತಾವು ಧರಿಸಿದ್ದ ಬನಿಯನ್‍ನಲ್ಲೇ ಚೆನ್ನಾಗಿ ಒರೆಸಿ, ಟವೆಲ್‍ಅನ್ನು ತಮ್ಮ ಹೆಗಲಮೇಲೆ ಏರಿಸಿ, ಸಿನಿಮಾ ನೋಡಲು ಬಂದ ನಮ್ಮ ತಂದೆಯವರನ್ನು ಸ್ವಾಗತಿಸಿಯಾಗಿತ್ತು. ‘ಮೊದಲೇ ಮೇರುನಟನ ಚಿತ್ರ, ಯಾವುದಕ್ಕೂ ಹೆಚ್ಚು ಜನರು ಸೇರಲು ಬಿಡಬೇಡಿ. ಸಿನಿಮಾದ ಮಧ್ಯೆ ಏನಾದರೂ ಅಡಚಣೆಗಾಗಿ ಕ್ಷಮಿಸಿ ಅಂತ ಬೋರ್ಡ್ ಬಿದ್ದರೇ ನಿಮ್ಮ ಟಿವಿಯ ಗತಿ ಏನು’ ಎಂದು ನಮ್ಮ ತಂದೆ ಮುನ್ನೆಚ್ಚರಿಕೆಯನ್ನು ಕೊಟ್ಟಿದ್ದರೂ ಕೂಡ ಬಂದವರನ್ನು ವಾಪಸ್‍ಕಳಿಸುವ ಮಾರ್ಗ ತೋಚದೆ ದೇವರನ್ನು ಜಪಿಸುತ್ತಾ, ಬಂದವರನ್ನು ಶಪಿಸುತ್ತಾ, ಪುಟ್ಟಣ್ಣನವರು ಕುರ್ಚಿಯ ಮೇಲೆ ಆಸೀನರಾಗಿ ಟಿವಿಯ ಸ್ವಿಚ್ಚನ್ನು ಅದುಮಿದರು ಮತ್ತು ಮನೆಯ ಹಾಲ್‍ನ ದೀಪವನ್ನು ಆರಿಸಿದರು. ಸಿನಿಮಾ ಶುರುವಾಯಿತು. ಆ ಸಿನಿಮಾದಲ್ಲಿ ನಾಯಕನಟ ಚಿಕ್ಕಂದಿನಲ್ಲಿ ವಿದ್ಯುತ್ ತಂತಿಗೆ ಸಿಕ್ಕಿಹಾಕಿಕೊಂಡ ಗಾಳಿಪಟವನ್ನು ತೆಗೆಯಲು ಹೋಗಿ, ವಿದ್ಯುತ್ ಸ್ಪರ್ಶದಿಂದ ಕೆಳಗೆ ಬಿದ್ದು ತನ್ನ ಕೈಯಿನ ಸ್ವಾಧೀನ ಕಳೆದುಕೊಂಡಿರುತ್ತಾನೆ. ನಂತರದಲ್ಲಿ ತನಗೆ ಕಿರುಕುಳಕೊಡುತ್ತಿದ್ದ ಖಳನಿಗೆ “ಈ ನನ್ನ ಮೊಂಡು ಕೈ ಸರಿಹೋದ ತಕ್ಷಣ ನಾನು ಕೊಡುವ ಮೊದಲನೇ ಗೂಸಾ ನಿನಗೆ ” ಎಂದು ಡೈಲಾಗ್ ಹೊಡೆಯುವಷ್ಟರಲ್ಲಿ ಎಂದಿನಂತೆ ವಾರ್ತೆ ಶುರುವಾಗಿತ್ತು. ವಾರ್ತೆ ಶುರುವಾದ ತಕ್ಷಣ ಮನೆಗೆ ಓಡಿಹೋಗಿ ಊಟ ಮುಗಿಸಿ, ಮತ್ತೆ ಬಂದು ಟಿವಿ ನೋಡುತ್ತಿದ್ದುದು ವಾಡಿಕೆಯಾಗಿತ್ತು. ಆದರೆ ಆ ಸಿನಿಮಾದ ಕುತೂಹಲ ಎಷ್ಟಿತ್ತೆಂದರೇ ಆದಿನ ನಾವಾಗಲೀ, ನಮ್ಮ ತಂದೆಯವರಾಗಲೀ, ಅಲ್ಲಿ ನೆರೆದಿದ್ದ ಜನರೆಲ್ಲರೂ ಕೂಡ ಯಾರೂ ಊಟ ಮಾಡಲು ಹೋಗದೆ ಬೇಡದ ವಾರ್ತೆಯನ್ನು ಆಲಿಸಿಕೊಂಡೇ ಅಲ್ಲೇ ಕುಳಿತಿದ್ದಾಗಿತ್ತು. ಅಮ್ಮ ಕೂಡ ಅಂದು ನಮ್ಮನ್ನು ಊಟಕ್ಕೆ ಬಲವಂತ ಮಾಡದೇ ಪುಟ್ಟಣ್ಣನವರ ಮಡದಿ ಜೊತೆಯಲ್ಲೇ ಕುಳಿತು ಮೊದಲಬಾರಿಗೆ ಪೂರ್ತಿ ವಾರ್ತೆಯನ್ನು ನೋಡಿದ್ದರು. ಸರಿ ವಾರ್ತೆಯೇನೋ ಮುಗಿಯಿತು. ತಕ್ಷಣ ದೀಪ ಆರಿಸಿದ ಪುಟ್ಟಣ್ಣನವರು ಮುಂದೆ ಇದೆ ತಮಾಷೆ ಅಂತ ಆಸೀನರಾದರು. ಸಿನಿಮಾ ಮತ್ತೆ ಶುರು.

ನಾಯಕನಿಗೆ ಕೈ ಕೂಡ ಸರಿಹೋಯಿತು. ಅಷ್ಟರಲ್ಲಿ ನಾನು ಕೂತಿದ್ದ ಜಾಗವೆಲ್ಲಾ ಒದ್ದೆಯಾಗಿತ್ತು. ಹೌದು.. ಪುಟ್ಟಣ್ಣನವರ ಮಗ ಸಿನಿಮಾ ನೋಡುವ ಕುತೂಹಲದಲ್ಲಿ ತನಗೆ ಜಲಭಾದೆ ಉಂಟಾಗಿದ್ದರೂ ಕೂಡ ಎದ್ದು ಹೋಗದೆ, ತಾನು ಕುಳಿತಿರುವ ಜಾಗದಲ್ಲೇ ಪ್ರಕೃತಿಯ ಕರೆಗೆ ಓಗೊಟ್ಟಿದ್ದರಿಂದ ಆ ಜಾಗವೆಲ್ಲಾ ಒಂದು ಪುಟ್ಟ ಕೊಳವಾಗಿ ಮಾರ್ಪಟಿತ್ತು. ಅದರಿಂದ ನನ್ನ ಚಡ್ಡಿಯಲ್ಲಾ ಒದ್ದೆ ಆದರೂ ಸಿನಿಮಾ ಕುತೂಹಲಘಟ್ಟ ತಲುಪಿದ್ದರಿಂದ ಹಾಗೇ ಸಾವರಿಸಿಕೊಂಡು ಕೂತಿದ್ದೆ. ನನ್ನ ಮುಂದೆ ಕೂತಿದ್ದವನೂ ಕೂಡ ಒಮ್ಮೆ ನನ್ನನ್ನು ಹಿಂತಿರುಗಿ ನೋಡಿ ಮತ್ತೆ ವಿಚಾರಿಸಲು ಕೂಡ ಸಮಯವಿಲ್ಲವೇನೋ ಎನ್ನುವಂತೆ ಒದ್ದೆ ಚಡ್ಡಿಯಲ್ಲೇ ಚಿತ್ರ ವೀಕ್ಷಣೆಗೆ ತೊಡಗಿದ್ದ. ಇನ್ನೇನು ಖಳನಿಗೆ ನಾಯಕ ಹೊಡೆಯಬೇಕು, ಅಷ್ಟರಲ್ಲಿ ದೂರದರ್ಶನದಿಂದ “ಅಡಚಣೆಗಾಗಿ ಕ್ಷಮಿಸಿ” ಅನ್ನುವ ಬೋರ್ಡ್. ಕೆಲವೇ ಕ್ಷಣದಲ್ಲಿ ಆ ಬೋರ್ಡ್ ತೆಗೆದರೂ ಕೂಡ, ಟಿ.ವಿಯ ಪರದೆ ಮೇಲಿನಿಂದ ಕೆಳಕ್ಕೆ , ಕೆಳಗಿಂದ ಮೇಲೆ ಒಂದುಕಡೆ ನಿಲ್ಲಲಾಗದೇ ಒದ್ದಾಡಲು ಶುರುಮಾಡಿತು. ಎಂದಿನಂತೆ ‘ಇದು ಅಲ್ಲಿಯದೇ ಮಿಸ್ಟೀಕ್’ ಅಂತ ಪುಟ್ಟಣ್ಣನವರು ತಮ್ಮ ಆಸನದಿಂದ ಏಳುವಷ್ಟರಲ್ಲಿ ಅವರ ಮಗ ಇನ್ನು ಸಹಿಸಲು ಆಗದೇ ಕೈಗೆ ಏನು ಸಿಕ್ಕಿತೋ ಅದನ್ನು ಟಿವಿಯ ಕಡೆಗೆ ಒಗೆದಿದ್ದ. ಟಿವಿಯ ಪರದೆ ಮೇಲೆ ಸ್ಟಾರ್ ಆಕಾರದಲ್ಲಿ ಮೂಡಿದ ಆಕೃತಿಯನ್ನು ಕಂಡು ಪುಟ್ಟಣ್ಣನವರು ತಕ್ಷಣ ದೀಪ ಹಾಕಿದೊಡನೇ ಗಾಬರಿಗೊಂಡ ಅವರ ಮಗ ಓಡಲು ಶುರುಮಾಡಿದ.

ನಾನು ಅವನನ್ನು ಹಿಡಿಯಲು ಹೋಗಿ ನೆಲದ ಮೇಲಿನ ಒದ್ದೆಯಿಂದ ಜಾರಿ ಬಿದ್ದೆ. ನಾನು ಓಡಿ ಜಾರಿ ಬಿದ್ದದ್ದು ನೋಡಿದ ನಮ್ಮ ತಂದೆ ಹಾಗೂ ಪುಟ್ಟಣ್ಣನವರು ನಾನೇ ಟಿವಿಯನ್ನು ಒಡೆದಿದ್ದು ಅಂತ ನಿರ್ಣಯಕ್ಕೆ ಬಂದಾಗಿತ್ತು. ಮುಂದೆ ನಾನು ಯೋಚಿಸುವಷ್ಟರಲ್ಲಿ ನಮ್ಮ ತಂದೆ ನನ್ನನ್ನು ಹಿಡಿದು ಮನೆಗೆ ಎಳೆದುಕೊಂಡು ಹೋಗಿ ಮನಸೋ ಇಚ್ಚೆ ಥಳಿಸಿದ್ದರು. ಆಗ ಮಧ್ಯೆ ಬಂದ ಅಮ್ಮ ನನ್ನನ್ನು ಬಿಡಿಸುವ ಪ್ರಯತ್ನದಲ್ಲಿ ಅಪ್ಪನನ್ನು ಪಕ್ಕಕ್ಕೆ ತಳ್ಳಿದರು. ಆಗ ಬಿದ್ದ ಅಪ್ಪನನ್ನು ನೋಡಿ
‘My Daddy is the strongest’ ಅನ್ನುವ ಭ್ರಮೆ ಆ ಕ್ಷಣಕ್ಕೆ ಕಳಚಿಬಿದ್ದಿತ್ತು. ಇಷ್ಟೆಲ್ಲಾ ಆಗಿ ರಾತ್ರಿ ಅಮ್ಮ ನನ್ನ ಬಳಿ ಬಂದು ಸಂತೈಸುತ್ತಾ ನಡೆದ ವಿಷಯವನ್ನೆಲ್ಲಾ ಕೇಳಿಕೊಂಡು ಅಪ್ಪನಿಗೆ ತಿಳಿಸಿದಳು. ನೊಂದ ಅಪ್ಪ ನನಗೆ ಹೊಡೆದ ಪಶ್ಚಾತ್ತಾಪ ವ್ಯಕ್ತಪಡಿಸುವುದರ ಜೊತೆಗೆ, ಆ ಚಿತ್ರದ ಕ್ಲೈಮಾಕ್ಸ್ ತಿಳಿಯದ ನೋವು ಮತ್ತೊಂದೆಡೆ ಅಂತ ವಿವರಿಸುತ್ತಿದ್ದಾಗ, ನನ್ನ ತಾಯಿ ಇವೆಲ್ಲವನ್ನು ತಪ್ಪಿಸಲು ನಮ್ಮ ಮನೆಗೇ ಟಿವಿ ತರುವ ಮಾತನಾಡಿದ್ದು, ಅಪ್ಪ ಅದಕ್ಕೆ ಸಮ್ಮತಿಸಿದ್ದು ನನಗೆ ಬಿದ್ದ ಏಟಿನ ನೋವನ್ನು ಮರೆಸಿತ್ತು.

ಅಂತೂ ಇಂತು ಮನೆಗೆ ಟಿ.ವಿ ಬಂದಿತ್ತು. ‘ಅಪ್‍ಟ್ರಾನ್’ ಬ್ಲಾಕ್ ಅಂಡ್ ವೈಟ್ ಟಿ.ವಿ ಅದಕ್ಕೆ ಶಟರ್ ಕೂಡ ಇತ್ತು. ಟಿ.ವಿ ಬಂದ ಹೊಸತರಲ್ಲಿ ಒಮ್ಮೊಮ್ಮೆ ಮಧ್ಯರಾತ್ರಿ ಎದ್ದು ಶಟರ್ ತೆಗೆದು ನೋಡುವುದು ಸಂತಸ ತರುತ್ತಿತ್ತು. ಹೊಸ ಟಿವಿಗೆ ಬಹು ದೊಡ್ಡ ಪ್ರೇಕ್ಷಕರು ನಾನು ಮತ್ತು ಅಮ್ಮ. ಒಮ್ಮೆ ಪ್ರಸಿದ್ದ ಚಲನಚಿತ್ರ ನೋಡುವಾಗ, ನಾಯಕ ತನ್ನ ನಾಯಕಿಯನ್ನು ಕಳೆದುಕೊಂಡು ಅತ್ತಾಗ ಅಮ್ಮ ಕೂಡ ಅತ್ತಿದ್ದು, ಇನ್ನೊಮ್ಮೆ ಹಿಂದಿಯ ‘ದೀವಾರ್’ ಸಿನಿಮಾ ನೋಡುವಾಗ ಆ ಸಿನಿಮಾದ ನಾಯಕ ‘ಮೆರೇ ಪಾಸ್ ಮಾ ಹೈ’ ಎಂದು ಡೈಲಾಗ್ ಹೊಡೆದಾಗ, ನಾನು ಓಡಿ ಹೋಗಿ ಅಮ್ಮನನ್ನು ತಬ್ಬಿ ಮುತ್ತು ಕೊಟ್ಟಿದ್ದು ಈಗಲೂ ನೆನೆದರೆ ರೋಮಾಂಚನವಾಗುತ್ತದೆ. ಅಮ್ಮನ ಹಳೆಯ ಬ್ಲಾಕ್ ಅಂಡ್ ವೈಟ್ ಫೋಟೋಗಳು, ಜೊತೆಯಲ್ಲಿ ಸಂಭ್ರಮಿಸಿದ ವಿಡಿಯೋಗಳು, ಆಲಿಸಿದ ಗೀತೆಗಳು, ಅಪ್ಪನ ಇಷ್ಟದ ‘ಸ್ಕೂಲ್ ಮಾಸ್ಟರ್’ ಚಿತ್ರ, ನಮ್ಮ ಜನರೇಶನ್‍ಗೆ ರಾಮಾಚಾರಿ ಬಳಗ; ಇವುಗಳೆಲ್ಲಾ ಇನ್ನು ಒಂದು ಸುಂದರ ನೆನಪುಗಳಾಗಿ ನನ್ನ ಹಾರ್ಡ್‍ಡಿಸ್ಕ್‍ನಲ್ಲಿ ಕಾಪಿಟ್ಟು ಕೊಂಡಿದ್ದೇನೆ. ಇಂದಿಗೂ ಕೂಡ, ಸುಪ್ರಸಿದ್ಧ ನಟ ಕಮ್ ಗಾಯಕರೊಬ್ಬರು ತಮ್ಮ ಅಮರಕಂಠದಲ್ಲಿ ‘ಹೊಸ ಬೆಳಕಿನ’ ಆಗಮನದ ಬಗ್ಗೆ ಹಾಡಿರುವ ಗೀತೆ ಕಿವಿಮೇಲೆ ಬಿದ್ದರೆ ದೂರದರ್ಶನದ ಗುರುವಾರದ ಚಿತ್ರಮಂಜರಿ ನೆನಪಾಗುತ್ತದೆ. ಒಮ್ಮೆ ಈ ಎಲ್ಲಾ ನೆನಪುಗಳು ಕಣ್ಣುಗಳನ್ನು ತೋಯಿಸಿದರೆ, ಮತ್ತೊಮ್ಮೆ ತುಟಿಯ ಮೇಲೆ ನಗುವಾಗುತ್ತದೆ. ಕಣ್ಣೀರೂ ಕೂಡ ಒಮ್ಮೊಮ್ಮೆ ಚೈತನ್ಯ ಕೊಡುವುದು ಈ ಸುಂದರ ನೆನಪುಗಳಿಂದಲೇ…!
ಇಷ್ಟು ಟೈಪ್ ಮಾಡುವಷ್ಟರಲ್ಲಿ ಮಧ್ಯರಾತ್ರಿ 01.00 ಘಂಟೆಯಾಗಿತ್ತು. ಕುರ್ಚಿಯಿಂದ ಎದ್ದು ಹಿಂತಿರುಗಿ ನೋಡಿದಾಗ ನನ್ನವಳು ಆ ಕ್ಷಣವನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದಳು. ನನ್ನ ಕುತೂಹಲಕ್ಕೆ ತೆರೆಯೆಳೆಯುವಂತೆ ‘ಇಂದಿನ ಚಿಕ್ಕ ಚಿಕ್ಕ ಕ್ಷಣಗಳೇ, ಮುಂದೆ ಕಾಲ ನಮ್ಮ ಜೀವನದಲ್ಲಿ ಸೃಷ್ಟಿಸುವ ನಿರ್ವಾತದಲ್ಲಿ ಎಲ್ಲವೂ ಖಾಲಿ ಖಾಲಿ ಎನಿಸಿದಾಗ ನಮ್ಮ ಜೊತೆಯಾಗುವ ಸಂಗಾತಿ’ ಎನ್ನುತ್ತಾ ಆ ಕ್ಷಣವನ್ನು ಮಧುರ ಮತ್ತು ಅಮರವಾಗಿಸಿದ್ದಳು. ಮುಗಿಸುವ ಮುನ್ನ…

‘ದೀರ್ಘಗಳು’ ಕೆಲವಡೆ ‘ಸುದೀರ್ಘ’ವಾಗಿದ್ದರೆ,
‘ಅಲ್ಪಪ್ರಾಣ’ ಬರುವೆಡೆಯಲ್ಲಿ ‘ಮಹಾಪ್ರಾಣ’ ನುಸುಳಿದ್ದರೆ,
ಸರಾಗವಾಗಿ ಓದಲು ‘ಅಡಚಣೆ’ ಉಂಟಾಗಿದ್ದರೆ,
ದಯವಿಟ್ಟು, ಆ ಅಡಚಣೆಗಾಗಿ ಕ್ಷಮೆ ಇರಲಿ!!

-ಗಿರೀಶ್.ವಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x