ಭಾರತವ ವಿಶ್ವವಿಖ್ಯಾತಗೊಳಿಸಿದ ಆ ಎರಡು ಘಟನೆಗಳು: ಕೆ ಟಿ ಸೋಮಶೇಖರ ಹೊಳಲ್ಕೆರೆ

ಸ್ವಾತಂತ್ರ್ಯಪೂರ್ವದಲ್ಲಿ ಜಗತ್ತಿನ ಬಹಳ ದೇಶಗಳಿಗೆ ಭಾರತದ ಧರ್ಮ, ಸಂಸ್ಕೃತಿಯ, ಉದಾತ್ತ ಗುಣಗಳ ಪರಿಚಯವೇ ಆಗಿರಲಿಲ್ಲ, ಆಗಲು ಸಾಧ್ಯವಿರಲಿಲ್ಲ! ಭಾರತಕ್ಕೆ ಸ್ವಾಯತ್ತತೆ ಇರದಿದ್ದರಿಂದ, ಬ್ರಿಟಿಷರೇ ಭಾರತವನ್ನು ಪ್ರತಿನಿಧಿಸುತ್ತಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಅವರ ಆಡಳಿತ ಇರುವಾಗಲೇ ಆ ಇಬ್ಬರು ಮಹಾನ್ ವ್ಯಕ್ತಿಗಳು, ಜಗತ್ತು ಕತ್ತೆತ್ತಿ ನೋಡುವಂತೆಯೂ, ನಿಬ್ಬೆರಗಾಗಿ ನಿಲ್ಲುವಂತೆಯೂ, ಭಾರತದ ಮಾನವೀಯತೆಯನ್ನು ಗುರುತಿಸುವಂತೆಯೂ, ಜಗತ್ತು ತನ್ನಷ್ಟಕ್ಕೆ ತಾನು ಎದ್ದು ನಿಂತು ತಲೆ ಬಾಗಿ ನಮಿಸುವಂತೆ, ಕೈಗಳು ತಮ್ಮಷ್ಟಕ್ಕೆ ತಾವೇ ಭಾರತವನ್ನು ವಂದಿಸುವಂತೆ ಮಾಡಿದರು. ಜನವರಿಯಲ್ಲೇ ಆ ಇಬ್ಬರಲ್ಲಿ ಒಬ್ಬರದು ಜಯಂತಿ, ಮತ್ತೊಬ್ಬರದು ಪುಣ್ಯ ಸ್ಮರಣೆ!

ಭಾರತಕ್ಕೆ ವಿಶಿಷ್ಟ ಸಂಸ್ಕೃತಿ, ಪುರಾತನ ಶ್ರೇಷ್ಟ ನಾಗರೀಕತೆ, ಮಹಾನ್ ಉಧಾತ್ತ ಭಾವಗಳು ಇವೆ ಎಂದು, ಭಾರತ ಋಷಿ, ಮುನಿ, ಸಾಧು, ಸಂತರ, ಆಧ್ಯಾತ್ಮ ಜೀವಿಗಳ, ಆತ್ಮೋದ್ಧಾರವೇ ಜೀವನದ ಉದ್ಧೇಶ ಇರುವವರ ನಾಡೆಂದು ವಿಶ್ವದ ಅನೇಕ ರಾಷ್ಟ್ರಗಳಿಗೆ ತಿಳಿದಿರಲಿಲ್ಲ! ಎಷ್ಟೋ ರಾಷ್ಟ್ರಗಳಿಗೆ ಭಾರತ ಎಂಬ ಮಹಾನ್ ರಾಷ್ಟ್ರ ಇದೆ ಎಂದೂ ತಿಳಿದೇ ಇರಲಿಲ್ಲ! ಅಂತಹ ಭಾರತವನ್ನು ವಿಶ್ವಮಟ್ಟದಲ್ಲಿ ಗೌರವಕ್ಕೆ ಮೊದಲು ಭಾಜನವಾಗುವಂತೆ ಮಾಡಿದ್ದು ಆ ಮಹಾನ್ ವ್ಯಕ್ತಿಗಳಲ್ಲಿ ಒಬ್ಬ ವೀರ ಸನ್ಯಾಸಿ. ಜಗತ್ತಿನ ಬಹಳ ರಾಷ್ಟ್ರಗಳಿಗೆ ಆ ಒಂದು ದಿನ ಬೆಳಕಾಗುವುದರೊಳಗೆ ಹಿಂದೂ ಧರ್ಮವನ್ನೂ, ಭಾರತದ ಸಂಸ್ಕೃತಿಯನ್ನೂ, ಉದಾತ್ತತೆಯನ್ನು ವಿಶ್ವದ ಅಂತರಾತ್ಮವನ್ನು ಹೊಗುವಂತೆ ಮಾಡಿ ಭಾರತವನ್ನೂ ವಿಶ್ವಮಾನ್ಯ ಮಾಡಿದುದಲ್ಲದೆ, ಒಂದು ದಿನ ಹಿಂದೆ ದಿಕ್ಕೆಟ್ಟವರೂ, ಅಜ್ಞಾತರೂ, ಅನಾಥರೂ, ಬಿಕ್ಷುಕರೂ ಆಗಿದ್ದವರು ವಿಶ್ವ ವಿಖ್ಯಾತರಾದರು.

೧೮೯೩ ರರ ಸೆಪ್ಟೆಂಬರ್ ೧೧ ರಂದು, ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಆ ವೀರ ಸನ್ಯಾಸಿ ಆ ಸಭೆಯನ್ನುದ್ದೇಶಿಸಿ ಕೊಟ್ಟ ಕೊನೆಯಲ್ಲಿ ಮಾಡಿದ ಪುಟ್ಟ , ದಿಟ್ಟ ಭಾಷಣವೇ ಇಷ್ಟೆಲ್ಲಾ ಚಮತ್ಕಾರಕ್ಕೆ, ಭಾರತದ ಕೀರ್ತಿ ಪತಾಕೆ ವಿಶ್ವಮಟ್ಟದಿ ಹಾರಾಡಲು ಕಾರಣವಾದದ್ದು.

ಇಂತಹ ಗೌರವಕ್ಕೆ ಪಾತ್ರವಾಗುವಂತೆ ಮಾಡಿದ್ದು ಆ ಸನ್ಯಾಸಿ ಸಭೆಯನ್ನು ಉದ್ದೇಶಿಸಿದ ರೀತಿ. ಅಪರಿಚಿತ ಪರಕೀಯರನ್ನು, ಸ್ವಕೀಯರಂತೆ, ಹತ್ತಿರದ ಸಂಬಂಧೀಕರಂತೆ ಸಹೋದರ, ಸಹೋದರಿಯರೇ ಎಂದು ಸಂಬೋಧಿಸಿದ್ದು, ಸಾಗರದೋಪಾದಿಯಲ್ಲಿ ನೆರೆದಿದ್ದ ಕೇಳುಗರನ್ನು ೨ – ೩ ನಿಮಿಷದ ವರೆಗೆ ಕರತಾಡನದಲ್ಲಿ ಮುಳುಗಿಸಿದ್ದು, ನಂತರ ಧರ್ಮವನ್ನು ವ್ಯಾಖ್ಯಾನಿಸಿದ ರೀತಿ : ಎಲ್ಲಾ ಧರ್ಮಗಳ ಗುರಿ ಒಂದೆ. ಎಲ್ಲಾ ಧರ್ಮಗಳು ಸಮಾನ. ಯಾವುದೇ ದೇವರು, ಧರ್ಮ ಉನ್ನತವಾದುದೂ ಅಲ್ಲ, ಕೀಳಾದುದೂ ಅಲ್ಲ ಎಂದು ಹೇಳಿ ನಮ್ಮ ಧರ್ಮವೇ ಮೇಲು, ಇತರರ ಧರ್ಮ ಕೀಳೆಂಬ ಪಲ್ಲವಿಗೆ ಅಂತ್ಯ ಹಾಡಿದ ಆ ಉದಾರವಾಣಿ. ಕಂಚಿನ ಕಂಠದಿಂದ ನೆರೆದವರೆಲ್ಲಾ ಒಪ್ಪುವಂತೆ ದೇವರು ಮತ್ತು ಧರ್ಮವನ್ನು ವಿವರಿಸಿದರು ಮುಖ್ಯವಾಗಿ ಎಲ್ಲರಿಗೂ ಧರ್ಮ ಅಗತ್ಯವಾದುದೆಂಬುದನು ಸಾರಿ, ಮನದಟ್ಟು ಮಾಡಿದುದು. ಅವರ ಆಕರ್ಷಕ ವ್ಯಕ್ತಿತ್ವ, ಯಾವ ಧರ್ಮದಲೂ ತರತಮ ಎಣಿಸದ ವೈಶಾಲ್ಯತೆ. ಅವರ ಕಂಚಿನ ಕಂಠ, ಮಾತಿನ ರೀತಿ ಮತ್ತು ವಾಕ್ ಸಿರಿ.

ಕೇವಲ ೧೫ ನಿಮಿಷ ಮಾತನಾಡಿ ದೊಡ್ಡ ಖ್ಯಾತಿಗೆ ಭಾಜನರಾದ ಆ ಸನ್ಯಾಸಿ ಆ ಸಮ್ಮೇಳನದಲ್ಲಿ ಉಪನ್ಯಾಸ ನೀಡುತ್ತಿರುವವರಲ್ಲಿ ಅತ್ಯಂತ ಕಿರಿಯ ಪ್ರತಿನಿಧಿಯಾಗಿದ್ದರು. ಜಗತ್ತಿನ ಮೂಲೆ ಮೂಲೆಗೂ ಭಾರತೀಯ ಧರ್ಮ, ಸಂಸ್ಕೃತಿ, ಉದಾತ್ತ ಗುಣಗಳನು ತಲುಪಿಸಿದರು. ರಾಮಕೃಷ್ಣ ಮಿಷನ್ ಅನ್ನು ಅನೇಕ ದೇಶಗಳಲ್ಲಿ ಸ್ಥಾಪಿಸಿ ಹಿಂದೂ ಧರ್ಮ, ಸಂಸ್ಕೃತಿ, ರಾಮಕೃಷ್ಣರ ವಿಚಾರಗಳನ್ನು ವಿವರಿಸಿದರು. ವಿವರಿಸಲು ಅನುಕೂಲಿಸಿದರೂ, ಇಂದಿಗೂ ಆವು ಆ ಕೆಲಸ ಮಾಡುತ್ತಿವೆ. ಅವರ ಚಿಂತನೆಗಳು ದೇಶದ ಉದ್ದಾರ , ವಿಶ್ವದ ಎಲ್ಲಾ ಮಾನವರ ಆತ್ಮೋದ್ದಾರದ ಬಗ್ಗೆ ಆಗಿದ್ದವು. ಹೀಗೆ ವಿಶ್ವದ ಮಾನವರ ಆತ್ಮೋದ್ಧಾರದ ಬಗ್ಗೆ ಶ್ರಮಿಸಿ, ಭಾರತೀಯತೆಯ ಉದಾತ್ತತೆಯ ಪರಿಮಳ ಪ್ರಪಂಚದಾದ್ಯಂತ ಪಸರಿಸಿ ನಲವತ್ತು ವರುಷ ತುಂಬುವ ಮುನ್ನವೆ ಹಿಂದಕೆ ಬರಲಾಗದ ಸ್ಥಳವ ತಲುಪಿದ.

ಅನ್ಯ ರಾಷ್ಟ್ರದ ವಸಹಾತುಗಳಾಗಿದ್ದ ರಾಷ್ಟ್ರಗಳೆಲ್ಲ ಹೋರಾಡಿ ರಕ್ತ ಸುರಿಸಿ ಸ್ವತಂತ್ರವಾದವು. ಭಾರತ ಮಾತ್ರ ಸುದೀರ್ಘ ಕಾಲ ಸ್ವಾತಂತ್ರ್ಯಕೆ ಹೋರಾಡಿದರೂ ಕೋಟಿಗಟ್ಟಲೆ ಮಾನವರ ಸಾವು, ನೋವ ತಡೆದು, ರಕ್ತ ಹರಿಸದೆ, ಅಹಿಂಸೆಯಿಂದ ಸ್ವತಂತ್ರವಾಯಿತು. ಇದ ಕಂಡು ವಿಶ್ವವೇ ಬೆರಗಾಯಿತು. ಇದರಿಂದ ಭಾರತ ವಿಶ್ವಮಾನ್ಯವಾಯಿತು. ವಿಶ್ವವೇ ತಲೆಬಾಗಿ ವಂದಿಸಿತು! ಇದರ ಮುಖ್ಯ ಕಾರಣಕರ್ತ ಲೋಕಮಾನ್ಯನಾದ.

ಈ ಘಟನೆಗೆ ಕಾರಣವಾದದ್ದು ಸ್ವಾತಂತ್ರದ ಹೋರಾಟದ ಅಭಿಯಾನಕೆ ಮುಂದಾಳುವಾದ, ಸತ್ಯಾಗ್ರಹ, ಅಸಹಕಾರ, ಅಹಿಂಸಾ …. ವ್ರತಗಳ, ಚಳುವಳಿಗಳ ಹರಿಕಾರನಾದ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಹೋರಾಟ. ಅಸ್ತ್ರಗಳನೇ ಬಳಸದೆ, ರಣಕೆ ಧುಮುಕದೆ ಯುದ್ದ ಗೆದ್ದ ಮಹಾತ್ಮನ ನಿರಂತರ ಅವಿರತ ಅಹಿಂಸಾ, ಶಾಂತ ಯುದ್ದ! ದೇಶದ ಉದ್ದಗಲ ವಿಶ್ರಮಿಸದೆ ಓಡಾಡಿ, ಅನೇಕತೆಯ ಬೇಧ ಭಾವ ತೊಡೆದು, ನಾವೆಲ್ಲರೊಂದೆಂಬ ಏಕತೆಯ ಮೂಡಿಸಿ, ದೇಶವ ಒಗ್ಗೂಡಿಸಿ, ದೇಶಪ್ರೇಮವ ತುಂಬಿ, ವಿಧ ವಿಧದಿ ಹೋರಾಡಿ, ಚಳುವಳಿಗಳ ಹೂಡಿ, ಉಪವಾಸ ಸತ್ಯಾಗ್ರಹ ಮಾಡಿ, ಅಹಿಂಸಾ ಮಾರ್ಗದಿ ಸ್ವಾತಂತ್ರದ ಹೋರಾಟದಿ ಹಿಂದಡಿಯಿಡದ, ವಿಶ್ರಮಿಸದ ವೀರಯೋಧನ ಛಲ ಬಿಡದ ಹೋರಾಟ ! ಆಂಗ್ಲರ ಅಹಿಂಸಾ ಮಂತ್ರದಿಂದ ಮಣಿಸಿದ, ಭಾರತದ ದಾಸ್ಯದ ಸಂಕೋಲೆ ಕಳಚಿ ವಿಶ್ವವೇ ಬೆರಗಾಗುವಂತೆ ಮಾಡಿ, ವಿಶ್ವವಿಖ್ಯಾತನಾದ ಶಾಂತಿಪ್ರಿಯ. ಮಾನವ ಪ್ರೇಮಿಯ ಲೋಕ ಪ್ರೀತಿ !

ದಕ್ಷಿಣ ಆಪ್ರಿಕದ ಕಗ್ಗತ್ತಲೆ ಬೆಳಗಲು ನಾಂದಿ ಹಾಡಿದ್ದ ಶೋಷಿತರ ಸಹೋದರ, ವಿಶ್ವಕತಿ ಪ್ರಬಲ ಅಹಿಂಸಾ ಅಸ್ತ್ರವನ್ನು ನೀಡಿ, ಭಾರತದ ದಾಸ್ಯ ಸಂಕೋಲೆಯನ್ನು ಕಳಚಿ, ತಪ್ಪು ಗ್ರಹಿಕೆ ಗುಂಡಿಗೆ ಬಲಿಯಾದ, ಆಗಲೂ ಅಹಿಂಸ ಮಂತ್ರ ಪಠಿಸಿದ, 30 – 01 – 1948 ರಂದು ವಿಶ್ರಮಿಸಿದ, ವಿಶ್ರಮಿಸದ ವೀರ ಯೋಧ!

ಬಯೋತ್ಪಾದನೆ, ಉಗ್ರರ ಅಟ್ಟಹಾಸ, ನಕ್ಸಲರ ಕ್ರೂರತೆ, ಧರ್ಮ ಪ್ರಾಯೋಜಿತ ಬಯೋತ್ಪಾದನೆ, ಭ್ರಷ್ಟಾಚಾರ, ಹಿಂಸೆ, ಕೊಲೆ, ಆಧುನಿಕ ಒತ್ತಡದ ನೆಮ್ಮದಿರಹಿತ ಬದುಕು ವಿಜೃಂಭಿಸಿ ಮಾನವ ನೆಮ್ಮದಿಗಾಗಿ ಅಲೆಯುತ್ತಿರುವ ಈ ಸಂದರ್ಭದಲ್ಲಿ ಈ ಘಟನೆಗಳಿಗೆ ಸಂಬಂಧಿಸಿದ ಮಹಾನ್ ಸಾಧಕರ ಆತ್ಮೋದ್ಧಾರದ ವಿಚಾರಗಳು, ಅಹಿಂಸಾ ತತ್ವ ಸತ್ಯ, ಮಾನವ ಪ್ರೇಮ ಮಾನವನ ನೆಮ್ಮದಿಯ ಬದುಕಿಗೆ ಆಸರೆ ಆಗುವುದರಿಂದ ಇವರ ನಡೆಗಳು ಹಿಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತವೆನಿಸುತ್ತಿವೆ. ಜನರ ನೆಮ್ಮದಿಗೆ ಕಾರಣವಾಗುತ್ತಿವೆ!

ಕೆ ಟಿ ಸೋಮಶೇಖರ ಹೊಳಲ್ಕೆರೆ,


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x