ಸಾಮಾಜಿಕ ಸಂವೇಧನೆಯಲ್ಲಿ ಉಸಿರು ಬಿಗಿ ಹಿಡಿದ ಭವರಿ: ಕೆ.ಎಂ.ವಿಶ್ವನಾಥ ಮರತೂರ.


ಈ ಭವರಿಗಾಗಿ ಒಂದು ದಿನ ಕಾಯಬೇಕಾಯಿತು. ಪಾರ್ವತಿ ಸೋನಾರೆಯವರು ಕರೆ ಮಾಡಿ ಪುಸ್ತಕ ಓದಿ ಸರ್ ಎಂದರು. ಅವರ ಮಾತಿನಲ್ಲಿ ಒಬ್ಬ ಕಥೆಗಾರ ತನ್ನ ಮೊದಲ ಕಥಾ ಸಂಕಲನದ ಬಗ್ಗೆ ಅವರಿಗಿರುವ ಕಾಳಜಿ ಎದ್ದು ಕಂಡಿತು. ಭವರಿ ಕೈಸೇರಿದಳು. ಭಾರಿ ಒತ್ತಡದ ಕೆಲಸಗಳು. ವೃತ್ತಿ ಹಾಗೂ ಪ್ರವೃತ್ತಿಗಳ ಮಧ್ಯೆ ಪ್ರತಿದಿನ ಜಟಾಪಟಿ ಜೀವನ ನಮ್ಮದು ಆದರೂ ಭವರಿ ಯಾರು ಎಂಬ ಪ್ರಶ್ನೆ ಕಾಡಿದಾಗ “ಭವರಿ” ಕಥಾಸಂಕಲನ ಓದಬೇಕಾಯಿತು. ಇಲ್ಲಿ ಭವರಿ ಒಬ್ಬಳೆ ಅಲ್ಲಾ ಎಂಬುವುದು ಅರ್ಥವಾಯಿತು. ಬಂಜಗೇರೆ ಜಯಪ್ರಕಾಶ ಅವರು ಬರೆದ ಸಾಲುಗಳನ್ನು ಮೊದಲು ಓದಿಸಿಕೊಂಡವು. ಅತ್ಯಂತ ಪ್ರೀತಿ ಪೂರ್ವಕ ಮಾತುಗಳಿಂದ ಬಂಜಗೇರೆ ಅವರು ಹೊಸ ಕಥೆಗಾರತಿಯನ್ನು ಹುರಿದುಂಬಿಸಿದ್ದಾರೆ. ಕಥೆಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ವ್ಯಾಖ್ಯಾನಿಸಿದ್ದಾರೆ. ಕಥೆಗಾರತಿಯ ನೇರ ಮಾತುಗಳಿಗೆ ಬೆನ್ನುಡಿ ಬೆರಗಿನ ಮಾತುಗಳಿಂದ ಸ್ಪೂರ್ತಿಯಾಗಿವೆ.

ಈ ಭವರಿಯ ಇನ್ನೊಂದು ವಿಶೇಷ ಮತ್ತು ಆಕರ್ಷಣೆ ಅನಿಸಿದ್ದು ಕಥೆಗಾರರು ಬರೆದ ಅನಿಸಿಕೆ. ಇದು ಬರಿ ಅನಿಸಿಕೆಯಲ್ಲ ಮನದಾಳದಲ್ಲಿ ಅರಳಿದ ಕೆಂಗುಲಾಬಿ. ಅನುಭವಿಸಿದ ಆಸ್ವಾದಿಸಿದ ಕ್ಷಣಗಳು. ಕಣ್ಣಾರೆ ಕಂಡ ವಿಚಾರಗಳನ್ನು ಅತ್ಯಂತ ನೇರ ನಿಷ್ಠೂರ ಯಾರ ಹಂಗಿಲ್ಲದೇ ವಿವರಿಸಿದ್ದಾರೆ. ನಮ್ಮ ಭಾಗದ ಹಣ್ಣುಮಕ್ಕಳ ಜವಾರಿ ಭಾಷೆಗೆ ಕಥೆಗಾರತಿಯ ಮಾತುಗಳು ಹಿಡಿದ ಕನ್ನಡಿಯಾಗಿವೆ. ಸಾಮಾನ್ಯವಾಗಿ ಸತ್ಯ ಹೇಳುವುದು ಬಹಳ ಜನಕ್ಕೆ ಒಗ್ಗುವುದಿಲ್ಲ ಬದಲಿಗೆ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿ ಸಾಹಿತ್ಯ ಮುಗಿಸುತ್ತಾರೆ ಆದರೆ ಪಾರ್ವತಿಯವರು ಸತ್ಯವನ್ನು ಹೇಳುವಲ್ಲಿ ಮುಂದಾಗಿದ್ದಾರೆ. ತಮ್ಮ ಸುತ್ತಮುತ್ತಲಿನ ಪಾತ್ರಗಳು ಕಾಡಿದ ರೀತಿಯನ್ನು ಪಾತ್ರಗಳ ಭಾಷೆಯಲ್ಲಿಯೇ ವರ್ಣಿಸಿದ್ದಾರೆ.

ನಾನು ಓದಿದ ಮೊದಲ ಕಥೆ ಶ್ರೀದೇವಿಯದ್ದು ಕಥೆಯುದ್ದಕ್ಕು ಗ್ರಾಮೀಣ ಭಾಷೆಯ ಸೊಗಡು ಹಿಡಿದಿಟ್ಟಿದ್ದಾರೆ. ಹಳ್ಳಿ ಬದುಕಿನ ಹಲವು ಸತ್ಯಗಳನ್ನು ಅತ್ಯಂತ ಚಾಕಚಕ್ಕವಾಗಿ ಹೇಳಿದ್ದಾರೆ. ಶ್ರೀದೇವಿ ಬದುಕಿನ ಏರುಪೇರುಗಳನ್ನು ಜೀವಂತವಾಗಿ ಚಿತ್ರಿಸಿದ್ದಾರೆ. ಸಾಮಾಜಿಕ ಸಮಸ್ಯೆಯನ್ನು ಕಟ್ಟಿಕೊಡುವಲ್ಲಿ ಈ ಕಥೆ ಮುಖ್ಯಪಾತ್ರ ವಹಿಸುತ್ತದೆ. ಸ್ವಾಮಿಗಳ ಮನೆಯೊಳಗಿನ ಚಿಕ್ಕ ಘಟನೆ ಹೇಗೆ ಊರಿನ ಹಬ್ಬವಾಗುತ್ತದೆ, ಜನರು ಅದನ್ನು ಹೇಗೆ ಮೆಲ್ಲುತ್ತಾರೆ, ಹಳ್ಳಿಗಳಲ್ಲಿ ನಡೆಯುವ ಸಂಭಾಷಣೆ ಯಥಾವತ್ತಾಗಿ ಬರೆದಿದ್ದು ಕಥೆಗೆ ಇನ್ನಷ್ಟು ಮೆರಗು ತಂದಿದೆ. ಈ ಕಥೆ ಸರಿಸುಮಾರು 25 ಪುಟಗಳಲ್ಲಿ ಕುತುಹಲ ಹಿಡಿದಿಟ್ಟು ತಲೆಗೆ ಹುಳಬಿಡುವ ಕೆಲಸ ಮಾಡುತ್ತದೆ. ಶ್ರೀದೇವಿಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯು ಅನೇಕರ ಬಾಳಿನಲ್ಲಿ ಸಾಮಾನ್ಯವಾಗಿದೆ ಎಂಬುವುದು ಒಪ್ಪಿಕೊಳ್ಳಬೇಕಾದ ಸಂಗತಿಯನ್ನು ಕಥೆ ಎತ್ತಿ ಹಿಡಿಯುತ್ತದೆ. ಶ್ರೀದೇವಿ ಪಾತ್ರವನ್ನಾಗಲಿ, ಕಾಮಾಕ್ಷಿ ಪಾತ್ರವನ್ನಾಗಲಿ ಲೇಖಕರು ಎತ್ತಿ ಹಿಡಿಯದೇ ಸಮಾನವಾದವನ್ನು ಮುಂದಿಟ್ಟಿದ್ದಾರೆ. ಕಥೆಗಳಲ್ಲಿ ಮೆಚ್ಚುವಂತಹ ವಿಷಯಗಳಲ್ಲಿ ಇದು ಒಂದು ಭಾಗವಾಗಿದೆ. ಕಥೆ ಓದುವಾಗ ನಿಮ್ಮ ಎದೆ ಝಲ್ ಎನಿಸುತ್ತದೆ. ಕಥೆಗಳ ಒಳಗೆ ಬರುವ ಬೈಗುಳ ಭಾಷೆ ಹಳ್ಳಿಯ ವಾತಾವರಣವನ್ನು ನೆನಪಿಸುತ್ತದೆ. ಒಂದು ಸಾಮಾನ್ಯ ಹಳ್ಳಿಯು ಹೇಗೆ ಅಸಾಮಾನ್ಯ ಕಥೆಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ ಎಂಬ ಅರಿವಾಗುತ್ತದೆ. ಪಾರ್ವತಿಯವರು ಅದನ್ನು ಯಥಾವತ್ತಾಗಿ ಚಿತ್ರಿಸಿದ್ದು ಇನ್ನಷ್ಟು ಮೆರಗು ತಂದಿದೆ. ಕಥೆಗಳಲ್ಲಿನ ಪಾತ್ರ ಕೆಲವೊಮ್ಮೆ ಹೊಲಸು ಮಾತನಾಡಿದರೆ ಅದನ್ನು ಕೂಡ ಅಷ್ಟೆ ನೇರವಾಗಿ ಬರೆದ ಲೇಖಕಿಯ ಧೈರ್ಯ ಮೆಚ್ಚಲೇಬೇಕು ಕೆಲವರು ಇದನ್ನು ಮನಸ್ಸಿಗೆ ಹಚ್ಚಿಕೊಂಡು ಲೇಖಕರು ಇಷ್ಟು ಭಾಷೆ ಬಳಸಬೇಕೆ ಎನ್ನುವ ಮಾತು ಬರಬಹುದು ಆದರೆ ಸತ್ಯ ಬದುಕಿನ ಚಿತ್ರಣ ಹಾಗೆ ಇರುವಾಗ ಕಾಡಿರುವ ವಿಷಯವನ್ನು ಲೇಖಕರು ಹೆಚ್ಚು ಪಾಲಿಷ್ ಭಾಷೆಯಲ್ಲಿ ಹೇಳಲು ಹೋಗದೇ ಅದರದ್ದೆ ಸೊಗಡು ಉಳಿಸುವ ಶತ ಪ್ರಯತ್ನ ಮಾಡಿದ್ದು ಗೋಚರವಾಗುತ್ತದೆ.

ಇನ್ನು ನನಗೆ ಕಣ್ಣೀರು ಜೊತೆಗೆ ತುಂಬಾ ತರಿಸಿದ ಕಥೆ ನಂದಕಿಶೋರ್ ಎಂಬ ಘೋರ್ ಮನಷ್ಯನದ್ದು. ಈ ಕಥೆ ಲೇಖಕಿ ಬರೆಯಬಾರದಿತ್ತು ಎಂದೆನಿಸಿತು. ಇಂತಹ ಕಾಮುಕರನ್ನು ಇಟ್ಟಿಕೊಂಡಿರುವ ಈ ಭೂತಾಯಿಗೆ ಶಪಿಸಿದೆ ಒಂದುಕ್ಷಣ ಅಲ್ಲಿರುವ ಮಕ್ಕಳನ್ನು ಅವರ ನೋವನ್ನು ಕಂಡು ಅತ್ತುಬಿಟ್ಟೆ. ನಮ್ಮ ಸಮಾಜ ಎಷ್ಟೆ ಮುಂದುವರೆದರು ಇಂತಹ ಘಟನೆಗಳು ನಡೆಯುತ್ತವೆಯಲ್ಲ ಎಂಬ ನೋವು ಕಾಡಿತು. ಈ ಕಥೆಯ ನಂದಕಿಶೋರ್ ನನ್ನ ಕಣ್ಣ ಮುಂದೆಯಿದ್ದರೆ ಗುಂಡಿಕ್ಕಿ ಕೊಲ್ಲುವಷ್ಟು ಕೋಪ ಬಂದಿತು ಆದರೆ ಅದೇ ಕಥೆಯಲ್ಲಿ ಹೆಣ್ಣು ಮಗುವೊಂದು ಎಲ್ಲವನ್ನು ಸಹಿಸಿಕೊಂಡು ಬದುಕುತ್ತಿರುವ ದೃಶ್ಯ ಓದಿ ಕರುಳು ಚುರುಕ್ ಎಂದಿತು.

ಈ ಕಥೆಯಲ್ಲಿನ ಪ್ರತಿಯೊಂದು ಪಾತ್ರಗಳಿಗೂ ಜೀವ ತುಂಬಿದ್ದಾರೆ. ಭಾಷೆಯಲ್ಲಿ ಸರಳವಾಗಿ ಹೆಚ್ಚು ಅಲಂಕಾರಗಳನ್ನು ಬಳಸದೇ ಯಥಾವತ್ತಾಗಿ ಕಣ್ಣಿಗೆ ದೃಶ್ಯ ಕಾವ್ಯದಂತೆ ಕಟ್ಟಿದ್ದಾರೆ. ನಂದಕಿಶೋರ್ ನ ರಾಸಲೀಲೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಒಬ್ಬ ಶಿಕ್ಷಕಿ ಹೀಗೂ ಇರಬಹುದಾ ಎಂಬ ಅನುಮಾನ ಬಂದೆ ಬರುತ್ತದೆ. ಈ ಮೊದಲು ಲೇಖಕಿ ಹೇಳಿದಂತೆ ಇವು ಕಲ್ಪನೆಯ ಕಥೆಗಳಲ್ಲ ಅದಕ್ಕಾಗಿ ಈ ನಂದಕಿಶೋರ ಜೀವಂತ ಇರಬಹುದು ಎಂಬ ಊಹೆ ಮಾಡಿದೆ. ಒಬ್ಬ ತಂದೆ ತನ್ನ ಹೆಂಡತಿ ಮೂರು ಮಕ್ಕಳನ್ನು ತನ್ನ ಕಾಮಕ್ಕೆ ಬಳಿಸಿಕೊಳ್ಳುವಾಗಿ ದೃಶ್ಯ ನೆನಪಿಸಿಕೊಂಡಾಗಲೆಲ್ಲ ಛೇ ಈ ಗಂಡಸಿಗೆ ಕಾಮಕೊಟ್ಟು ಇಷ್ಟೊಂದು ಕೀಳು ಬುದ್ದಿಯಾಕೆ ನೀಡಿದೆ ಎಂದೆನಿಸಿತು. ಇಂತಹ ಕಾಮುಕರಿಂದಲೇ ಇವತ್ತು ಸಮಾಜದಲ್ಲಿ ಸಂಬಂಧಗಳಿಗೆ ಬೆಲೆಯಿಲ್ಲದಾಗಿದೆ. ಈ ಕಥೆ ಓದಿ ನಿಜಕ್ಕೂ ಎರಡು ದಿನ ಮನಸ್ಸು ವಿಚಲಿತವಾಗಿದ್ದು ಸುಳ್ಳಲ್ಲ. ಯಾವಾಗ ಇಂತಹ ಕಾಮುಕರನ್ನು ಕಟ್ಟಿಹಾಕಿ ತುಂಬಿ ಬಾವಿಯಲ್ಲಿ ದೊಡ್ಡದೊಂದು ಕಲ್ಲುಕಟ್ಟಿ ಒಗೆಯಬೇಕೆಂದು ಅನಿಸುತ್ತದೆ. ಈ ಕಥೆಯನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟ ಕಥೆಗಾರತಿ ಇದರೊಳಗೆ ತನ್ನ ತುಮುಲವನ್ನು ತೋಡಿಕೊಂಡಿದ್ದಾರೆ. ಈ ಸಮಾಜ ಹೆಣ್ಣಿನ ಬಟ್ಟೆಯ ಬಗ್ಗೆ ಮಾತನಾಡುತ್ತದೆ. ಗಂಡಸರೆಲ್ಲರೂ ಸರಿಯಿದ್ದಾರೆ ಆದರೆ ಹೆಣ್ಣುಮಕ್ಕಳು ಬಟ್ಟೆ ಸರಿಯಾಗಿ ಹಾಕುತ್ತಿಲ್ಲ ಅದಕ್ಕಾಗಿ ಅತ್ಯಾಚಾರ ಆಗುತ್ತಿವೆ ಎಂಬ ವಿಷಯ ಹೇಳುತ್ತಾರೆ ಆದರೆ ಎಳೆಯ ಹಸುಗೂಸುಗಳಿಗೂ ಬಿಡದ ಕಾಮುಕರನ್ನು ಲೇಖಕಿ ಪ್ರಶ್ನಿಸುತ್ತಾರೆ ಅಷ್ಟೆ ಯಾಕೆ ಕರುಳ ಕುಡಿಗಳನ್ನು ಬಿಡಿದ ಕಾಮುಕರನ್ನು ಕಂಡು ಪ್ರಶ್ನಿಸುತ್ತಾರೆ. ಈ ಕನ್ನಡ ಸಾಹಿತ್ಯ ಲೋಕದ ಹೊಸ ದೃಷ್ಠಯನ್ನು ಹಳೆಯ ಸಂಪ್ರದಾಯವನ್ನು ಮೆಟ್ಟಿ ನಿಲ್ಲುತ್ತದೆ.

ಭವರಿ ಕಥೆಯು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಭವರಿ ಬದುಕಿನಲ್ಲಿ ಹಲವು ಮಗ್ಗಲುಗಳು ಎದ್ದು ನಿಲ್ಲುತ್ತವೆ. ಹಳ್ಳಿಯಲ್ಲಿ ಬೆಳೆಯುವ ಸಹಜ ಬದುಕಿನ ಭವರಿ ತನ್ನ ಬದುಕು ತನಗೆ ಇಷ್ಟವಿಲ್ಲದವನ ಜೊತೆಗೆ ಕಳೆಯುತ್ತಾಳೆ ಅದು ಹೇಗೆ ಭಾವಿಯಲ್ಲಿ ತೇಲಲಾರದ ಹೆಣವಾಗುತ್ತಾಲೆ ಎಂಬುವುದು ಸೂಕ್ಷ್ಮ ವಿಚಾರವಾಗಿ ಲೇಖಕಿ ಹೇಳಿದ್ದಾರೆ. ಗಂಡಿಸಿನ ಹೇಸಿ ಬದುಕಿಗೆ ಅವನ ಕೋಪಕ್ಕೆ ಮೂರು ಹೆಣ್ಣು ಜೀವಗಳು ಹೊಲದೊಳಗಿನ ಭಾವಿಯಲ್ಲಿ ತೇಲದ ಕಂಟಿಮುಳ್ಳಿಗೆ ಸಿಕ್ಕಿಸಿಕೊಂಡು ನೆರಳಾಡುವ ದೃಶ್ಯ ಮೈನವಿರೇಳಿಸುತ್ತದೆ. ಇಂದು ಸಮಾಜದಲ್ಲಿರುವ ಅದೆಷ್ಟೊ ಹೆಣ್ಣುಮಕ್ಕಳ ಪರಿಸ್ಥಿತಿ ಇದೆ ಆಗಿದೆ ಕೆಲವು ಮುಖ್ಯವಾಹಿನಿಗೆ ಬರುತ್ತವೆ ಮತ್ತೆ ಕೆಲವು ಬರುವುದಿಲ್ಲ.

ಈ ಪುಸ್ತಕದಲ್ಲಿ ಹಳ್ಳಿ ಭಾಷೆ, ಅಲ್ಲಿನ ಸಂಭಾಷಣೆ, ಧ್ವನಿಗಳು, ಪಿಸುಮಾತುಗಳು, ತುಸು ಹರಟೆಗಳು, ಹೆಣ್ಣು ಗಂಡಿನ ಜೀವಂತ ತಾರತಮ್ಯಗಳು, ಉಸಿರು ಕಟ್ಟಿರುವ ವಾತಾವರಣಗಳು. ಆ ಮಣ್ಣಿನ ವಾಸನೆ, ಹಳ್ಳಿಗರ ಉಡುಪುಗಳು. ಮಾತನಾಡುವ ಧಾಟಿಗಳು. ಕಪಟವಿಲ್ಲದ ನಾಟಕಗಳು ಎಲ್ಲವೂ ಆಕರ್ಷಣೆಯಾಗಿವೆ. ಎಲ್ಲಿಯೂ ಬೋರ್ ಆಗದೇ ಕಥೆಗಳು ಓದಿಸಿಕೊಂಡು ಮುಂದುವರೆಯುತ್ತವೆ. ನನ್ನ ವಯಕ್ತಿಕ ಅನಿಸಿಕೆಹಾಗೂ ಸ್ವತ: ಕಥೆಗಾರರೆ ಹೇಳುವಂತೆ ಈ ಎಲ್ಲಾ ಪಾತ್ರಗಳು ಈಗಲೂ ಜೀವಂತವಿದ್ದು ಲೇಖಕಿಗೆ ಇನ್ನು ಕಾಡುತ್ತಿರಬೇಕು ಹಾಗಾಗಿಯೇ ತಾವು ಎಲ್ಲಾ ಕತೆಗಳಲ್ಲಿ ನಿರೂಪಕಿಯಾಗಿ ಮುಂದುವರೆಯುತ್ತಾರೆ. ಎಲ್ಲಿಯೂ ತಾನಿದ್ದೇನೆ ಎಂದು ಹೇಳದೆ ಎಲ್ಲವೂ ತಾವೆ ಹೇಳಿದ್ದಾರೆ. ಕಥೆಯೊಳಗಿನ ಪಾತ್ರಗಳು ಕಾಡಿದಷ್ಟು ನಿರೂಪಕಿ ಕ್ರೋಧದೊಳಗೆ ಬೆಂದು ಸಮಾಜವನ್ನು ಶಪಿಸಿ ಬರೆಯುತ್ತಾಳೆ.

ಭವರಿ ತನ್ನ ಬರವಣಿಗೆ ಸೌಂದರ್ಯದಿಂದ ಇಷ್ಟವಾಗುತ್ತಾಳೆ. ಇಲ್ಲಿ ಭವರಿಯಂತಹ ಅನೇಕ ಹೆಣ್ಣುಮಕ್ಕಳು ಕಣ್ಣಮುಂದೆ ಬರುತ್ತಾರೆ. ಭವರಿ ಅನುಭವಿಸಿದ ಹಸಿ ವೇದನೆ ಎಲ್ಲರೂ ಅನುಭವಿಸುತ್ತಾರೆ. ಭವರಿ ಗುಲಾಬಿಯಷ್ಟ ಸುಂದರಿಯಾದರೂ ಬದುಕಿನ ಸುತ್ತಲು ಮುಳ್ಳುಗಳಿಂದ ಕೂಡಿದ್ದಾಳೆ. ಶ್ರೀದೇವಿಯಂತಹ ಹಾಗೂ ನಂದಕಿಶೋರರಂತಹ ಕಾಮುಕರನ್ನು ಕೊಟ್ಟಿದ್ದು ಭವರಿಯ ಇನ್ನೊಂದು ವಿಶೇಷವೆನಿಸುತ್ತದೆ. ಲೇಖಕರ ಪ್ರಯತ್ನ ಪ್ರಮಾಣಿಕವಾಗಿದೆ. ಇವೆಲ್ಲವೂ ಸತ್ಯ ಕಥೆಯಾದ್ದರಿಂದ ತಮ್ಮ ಸುತ್ತಮುತ್ತಲಿನವರ ಕೆಂಗಣ್ಣಿಗೆ ಗುರಿಯಾಗುವುದು ಸಹಜವೆನಿಸುತ್ತದೆ. ಅವರ ಭಾಷೆಯಲ್ಲಿಯೇ ಹೇಳುವುದಾದರೆ, “ಊರಾ ಉಸಾಬರಿ ತೊಗೊಂಡು ಈಕಿಯೇನ್ ಮಾಡತಾಳ” ಎಂದು ಸಹಜವಾಗಿ ಓದುಗರ ಒಂದು ತಂಡ ಕೇಳಿಯೇ ಕೇಳುತ್ತದೆ. ಭವರಿಯ ಒಡಲಾಳ ಅರ್ಥಮಾಡಿಕೊಳ್ಳುವ ಮನಸ್ಸುಗಳು ಮಾತ್ರ ಭವರಿಯನ್ನು ನನ್ನ ಹಾಗೆ ಕೊಂಡಾಡುತ್ತಾರೆ. ಈ ಪುಸ್ತಕವನ್ನು ಬರೆಯುವಾಗ ಬಹುಷ್ಯ ಲೇಖಕಿ ನಿದ್ದೆ ಮಾಡಿಲ್ಲವೆಂದು ಅರ್ಥವಾಗುತ್ತದೆ ಕಾರಣ ಎಲ್ಲಾ ಕಥೆಗಳು ಎಳೆ ಒಂದೇ ಆಗಿದ್ದರು ಬೇರೆ ಬೇರೆ ಹೋಲಿಕೆಗಳಾಗಲಿ ಅಲಂಕಾರಗಳಿಂದಾಗಲಿ ಸಿಂಗರಿಸಲು ಲೇಖಕರಿಗೆ ಸಾಧ್ಯವಾಗಿಲ್ಲ. ಕಾಡಿದ ಪಾತ್ರಗಳನ್ನು ಯಥಾವತ್ತಾಗಿ ಬಿಡಿಸಿದ್ದಕ್ಕೆ ಅದು ಮರೆಯಾಗಿರಲುಬಹುದು. ಒಟ್ಟಾರೆ ಭವರಿ ನನಗೂ ಕಾಡಿದಳು. ಚಿಂತೆಗಿಡು ಮಾಡಿದಳು. ಈ ಭವರಿಯನ್ನು ನಾನು ಅಪ್ಪಿಕೊಂಡು ಮಲಗಿದ್ದೆ, ಕೆಲವೊಮ್ಮೆ ಬಡಿದೆಬ್ಬಿಸಿದಳು. ಮತ್ತಷ್ಟು ಸಮಾಜವನ್ನು ಹುಡುಕುವ ಹಾಗೆ ಮಾಡಿದಳು. ನೀವು ಈ ಭವರಿಯನ್ನು ಬರಮಾಡಿಕೊಳ್ಳಿ. ಸಾಹಿತ್ಯ ಲೋಕದಲ್ಲಿ ಭವರಿ ಬಂಡಾಯ ಸಾಹಿತ್ಯ ಮೈಲಿಗಲ್ಲಾಗುತ್ತಾಳೆ ಏಕೆಂದರೆ ನನ್ನಿಂದ ಕೊನೆಗೂ ಭವರಿ ನಿದ್ದೆಯಿಂದ ಎಬ್ಬಸಿ ಬರೆಸಿಕೊಂಡು ಮನಸ್ಸಿನ ಭಾರ ಕಡಿಮೆ ಮಾಡಿದಳು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x