ವೈದ್ಯಕೀಯ ಲೋಕದ ಸಂಶೋಧನೆಗಳ ದಿಕ್ಕು ಬದಲಾಗಬೇಕು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಾನವನ ಚಿಂತನೆಗಳು ಪ್ರಕೃತಿಯ ನಿಯಮಗಳಿಗೆ ದೇಹ ಪ್ರಕೃತಿಗೆ ಪೂರಕವಾಗಿರಬೇಕು. ಸಹಜ ಚಿಂತನೆಗಳು ಪ್ರಕೃತಿಯ, ದೇಹ ಪ್ರಕೃತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತವೆ. ಅಸಹಜ ಚಿಂತನೆಗಳು ಸಮಸ್ಯೆಗಳ ಸರಣಿಯನ್ನೇ ಸೃಷ್ಟಿಸುತ್ತವೆ! ಸಹಜ ಚಿಂತನೆಗಳಿದ್ದರೂ ಮಾನವ ತನ್ನ ದುರಾಸೆಯಿಂದ ದುಡ್ಡಿನ ಪಿಶಾಚಿ ಯಾಗಿರುವುದರಿಂದ ಉದ್ದೇಶಪೂರ್ವಕವಾಗಿ ಅಸಹಜವಾಗಿ ಚಿಂತಿಸಿ ಪ್ರಕೃತಿಯ, ದೇಹ ಪ್ರಕೃತಿಯ ನೋವು ಯಾತನೆಗಳಿಗೆ ಕಾರಣವಾಗುತ್ತಿದ್ದಾನೆ. ಪರಿಸರ ಮಾಲಿನ್ಯಕ್ಕೂ ಕಾರಣನಾಗಿದ್ದಾನೆ! ಇತ್ತೀಚೆಗೆ ಜಗತ್ತಿನಾದ್ಯಂತ ಇದೆ ವಿಜೃಂಭಿಸಿ ಜೀವಜಲ, ಅನಾರೋಗ್ಯ ಸಮಸ್ಯೆಗಳು ಅತಿ ಆಗಲು ಯಾತನೆ ಮುಗಿಲು ಮುಟ್ಟಲು ಕಾರಣವಾಗಿದೆ. ಇಡೀ ವಿಶ್ವವೇ ಇದರಲ್ಲಿ ಸಿಲುಕಿದೆ!

ಜೀವಿಗಳಿಗೆ ಕಾಯಿಲೆಗಳು ಬರುವುದು ಸಹಜ. ಹಿಂದೆಯೂ ಬರುತ್ತಿದ್ದವು, ಇಂದೂ ಬರುತ್ತಿವೆ. ಮುಂದೆನೂ ಬರುತ್ತವೆ. ಹಿಂದೆಯೂ ವೈದ್ಯರು ಚಿಕಿತ್ಸೆ ಕೊಡುತ್ತಿದ್ದರು ಇಂದೂ ಚಿಕಿತ್ಸೆ ಕೊಡುತ್ತಿದ್ದಾರೆ. ಹಿಂದೆ ಕಾಯಿಲೆಗಳು ಕಡಿಮೆ ಇದ್ದು ವೈದ್ಯರು ಕಡಿಮೆ ಇದ್ದರು. ಇಂದು ಜನಸಂಖ್ಯೆ ಎಷ್ಟು ಏರಿದೆಯೋ ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ಕಾಯಿಲೆಗಳು ಏರಿವೆ! ವೈದ್ಯರ ಸಂಖ್ಯೆಯಂತೂ ತುಂಬಾ ಏರಿದೆ! ಆದರೂ ವೈದ್ಯರ ಕೊರತೆಯಾಗುವಂತೆ ರೋಗಗಳು ಹೆಚ್ಚಿವೆ! ಹೊಸ ಹೊಸ ಕಾಯಿಲೆಗಳು ಬರುತ್ತಿವೆ. ವೈದ್ಯರ ಸಂಖ್ಯೆ ಹೆಚ್ಚಾದರೂ ಎಲ್ಲರಿಗೂ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ! ಜತೆಗೆ ಚಿಕಿತ್ಸೆ ಮಾತ್ರ ಹಿಂದಿನಂತಿಲ್ಲ! ಇಂದು ವೈದ್ಯ ರಂಗ ಬಹಳಷ್ಟು ವಿಸ್ತರಿಸಿದೆ, ಹೊಸ ಹೊಸ ಸಂಶೋಧನೆಗಳಾಗಿ ಬಹಳಷ್ಟು ಸಾಧನೆಯಾಗಿದೆ! ತುಂಡಾದ ಕೈ ಜೋಡಿಸಲಾಗುತ್ತಿದೆ, ಶಿರ ಕತ್ತರಿಸಿ ಜೋಡಿಸುವತ್ತ ಹೆಜ್ಜೆ ಇಡಲಾಗುತ್ತಿದೆ! ಕೃತಕ ಹೃದಯ ಅಳವಡಿಸಲಾಗುತ್ತಿದೆ! ಹೊಟ್ಟೆಯಲ್ಲಿರುವ ಆನಾರೋಗ್ಯವಂತ ಮಗುವಿಗೆ ಹೊಟ್ಟೆಯೊಳಗೆ ಇರುವಾಗಲೇ ಆಪರೇಷನ್ ಮಾಡಲಾಗುತ್ತಿದೆ! ಯಾವುದೋ ದೇಶದಲ್ಲಿರುವ ವೈದ್ಯ ಮತ್ತಾವುದೋ ದೇಶದಲ್ಲಿರುವ ರೋಗಿಯ ಪರೀಕ್ಷಿಸಿ ಚಿಕಿತ್ಸೆ ಕೊಡಲಾಗುತ್ತಿದೆ! ಹೀಗೆ ಅದರ ಸಾಧನೆಯ ಮೈಲುಗಲ್ಲುಗಳು ಅಪರಿಮಿತ ! ಸಾಧನೆ ಅದ್ಭುತ!

ಹಿಂದೆ ವೈದ್ಯರು ರೋಗಿಗಳಿಗೆ ಚಿಕಿತ್ಸೆ ಕೊಡುವಾಗ ಔಷಧೋಪಚಾರ ಮಾಡುತ್ತಿರುವಾಗ ಔಷಧಿ ಕೊಟ್ಟು ಅದನ್ನು ತೆಗೆದುಕೊಳ್ಳುವ ವಿಧಾನವನ್ನು ಹೇಳುತ್ತಿದ್ದರು! ಜೊತೆಗೆ ಮುಖ್ಯವಾಗಿ ಪಥ್ಯ ಅಂತ ಹೇಳುತ್ತಿದ್ದರು. ಇಷ್ಟು ದಿನಗಳ ಮಟ್ಟಿಗೆ ಇಂತಿಂಥ ಆಹಾರ ವರ್ಜಿಸಿ ಇಂತಿಂಥ ಆಹಾರ ಸೇವಿಸಿ ಅಂತ ಹೇಳಿ ಅವರ ಕಾಯಿಲೆ ಅತಿ ಬೇಗ ವಾಸಿಯಾಗಲು ಕಾರಣವಾಗುತ್ತಿದ್ದರು. ಅಂದರೆ ಕಾಯಿಲೆ ವಾಸಿ ಮಾಡುವಲ್ಲಿ ಆಹಾರದ್ದೂ ಮುಖ್ಯ ಪಾತ್ರ ಇತ್ತು ಎಂಬುದನ್ನು ಮರೆಯುವಂತಿಲ್ಲ! ಇಂದು ಹೀಗಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ! ಸಾಮಾನ್ಯವಾಗಿ ಎಕ್ಸ್ರೇ, ಸ್ಕ್ಯಾನಿಂಗ್, ಎಂ ಆರ್ ಐ ಸ್ಕ್ಯಾನ್, ಬ್ಲಡ್ ಟೆಸ್ಟ್ ಮುಂತಾದವುಗಳು ಅಂದು ಕಡಿಮೆ ಇದ್ದವು. ಅವು ಚಿಕಿತ್ಸೆಗಿಂತ ಹೆಚ್ಚಿನ ಹೊರೆ ಎನಿಸುತ್ತಿದ್ದವು. ಪ್ರಯುಕ್ತ ವೈದ್ಯರು ಆ ಪರೀಕ್ಷೆಗಳ ಮಾಡಿಸಿ ರೋಗಿಗಳಿಗೆ ಆರ್ಥಿಕ ಹೊರೆ ಮಾಡದೆ ಕಣ್ಣು, ನಾಲಗೆ, ನಾಡಿ ಪರೀಕ್ಷಿಸಿಯೇ ರೋಗ ಪತ್ತೆ ಹಚ್ಚುತ್ತಿದ್ದರು. ಎಲ್ಲಾ ವೈದ್ಯರಿಂದ ಇದು ಅಸಾಧ್ಯ ಅಂತ ಗೊತ್ತು! ಆದರೆ ಬಹಳಷ್ಟು ವೈದ್ಯರು ಹೀಗೇ ಪತ್ತೆಹಚ್ಚಲು ಸಮರ್ಥರಿದ್ದರು! ಅನೇಕ ಹೊಸ ರೋಗಗಳು ಈಗ ಬಂದಿವೆ. ಅವು ಸಾಮಾನ್ಯವಾಗಿ ಒಂದೇ ತರ ರೋಗಲಕ್ಷಣ ಹೊಂದಿರುವುದರಿಂದ ಆಧುನಿಕ ಪರೀಕ್ಷೆಗಳ ಮಾಡಿಸಿ ರೋಗ ಇಂತಹುದೇ ಎಂದು ಪತ್ತೆ ಹಚ್ಚುವುದು ಅನಿವಾರ್ಯವಾಗಿದೆ! ಹಾಗೆ ಮಾಡಿ ಕೆಲವು ವೈದ್ಯರು ಚಿಕಿತ್ಸೆ ಕೊಡುತ್ತಾರೆ! ಕೆಲವು ವೈದ್ಯರು ಸಣ್ಣ ಪುಟ್ಟ ಗೊತ್ತಿರುವಂತಹ ರೋಗ ತಿಳಿಯಲೂ ಆ ಪರೀಕ್ಷೆಗಳ ಮಾಡಿಸುತ್ತಾರೆ. ಪರೀಕ್ಷೆಗಳ ನಂತರವೇ ಚಿಕಿತ್ಸೆ ಆರಂಭಿಸುವುದು ಕಾಣುತ್ತೇವೆ! ಚಿಕಿತ್ಸೆಗೆ ಖರ್ಚಾಗುವ ಹಣಕ್ಕಿಂತ ಆ ಪರೀಕ್ಷೆಗಳಿಗೇ ಹೆಚ್ಚು ಖರ್ಚಾಗುವಂತಹ ಸಂದರ್ಭ ಬರುತ್ತದೆ! ಆ ರೋಗಗಳ ಪರೀಕ್ಷಿಸುವ ಉಪಕರಣಗಳ ಇಟ್ಟುಕೊಂಡು ಪರೀಕ್ಷಕರ ( ಟೆಕ್ನಿಷಿಯನ್ ) ನೇಮಿಸಿಕೊಂಡಿರುತ್ತಾರೆ. ಅವರ ಖರ್ಚನ್ನು ನಿಭಾಯಿಸಲು ಸಹ ಈ ಮಾರ್ಗವನ್ನು ಬಹಳ ವೈದ್ಯರು ತುಳಿಯುತ್ತಿರುವುದು ದುರದೃಷ್ಟ! ಹೀಗೆ ಮಾಡಿ ಕೆಲವರು ರೋಗಿಗಳಿಗೆ ಹೊರೆಯಾಗುತ್ತಿದ್ದಾರೆ!

ಇದು ಒಂದು ಕಡೆಯಾದರೆ ಇನ್ನೊಂದು ಕಡೆ ವೈದ್ಯಕೀಯ ಸಂಶೋಧನಾ ರಂಗದ ಅಸಹಜ ಸಂಶೋಧನೆಗಳು! ದೇಹದ ಒಳಗೆ ಯಾವ ಅಂಗಕ್ಕೆ ತೊಂದರೆಯಾಗಿದೆ ಅದನ್ನು ಹೋಗಲಾಡಿಸುವುದು ಹೇಗೆ ಎಂದು ತಿಳಿಯಲು ಅಸಹಜ ಸಂಶೋಧನೆಯಲ್ಲಿ ಮಗ್ನವಾಗಿದೆ. ಕಿಡ್ನಿ ಏನಾದರೂ ವಿಫಲವಾದರೆ ಅದು ಏಕೆ ವಿಫಲವಾಯಿತು? ವಿಫಲವಾಗದಂತೆ ಹೇಗೆ ನೋಡಿಕೊಳ್ಳಬೇಕು ಎಂದು ಚಿಂತಿಸದೆ ಅದನ್ನು ತೆಗೆದು ಹಾಕಿ ಬದಲೀ ಕಿಡ್ನಿ ಜೋಡಣೆಯನ್ನು ಮಾಡಿ ಆ ವ್ಯಕ್ತಿಯನ್ನು ಬಹಳ ವರ್ಷ ಉಳಿಸುವಂತಹ ಚಿಂತನೆ ಮಾಡಲಾಗುತ್ತಿದೆ. ಇದು ಅಸಹಜ ಚಿಕಿತ್ಸೆ! ಕಿಡ್ನಿ ಹಿಂದಿನ ಜನರಲ್ಲಿ ಏಕೆ ವಿಫಲವಾಗುತ್ತಿರಲಿಲ್ಲ? ಇಂದು ಯಾಕೆ ವಿಫಲವಾಗುತ್ತಿದೆ? ಎಂದು ಚಿಂತಿಸಿ ಆ ದಿಸೆಯಲ್ಲಿ ಸಂಶೋಧಿಸಿದರೆ ಪರಿಹಾರ ದೊರೆಯದಿರದು! ಆಗ ಕಿಡ್ನಿ ವಿಫಲವಾಗುವುದನ್ನು ತಡೆಯಬಹುದು! ಹೀಗೆ ಚಿಂತಿಸದೆ ಸಂಶೋಧಿಸದೆ ಬದಲಿ ವ್ಯವಸ್ಥೆ ಅಥವಾ ಪರ್ಯಾಯ ವ್ಯವಸ್ಥೆ ಅಂದರೆ ಕೃತಕ ಕಿಡ್ನಿ ಅಳವಡಿಸುವುದೋ ಇತರರ ಕಿಡ್ನಿ ಕಸಿ ಮಾಡುವುದೋ ಇಂತಿಷ್ಟು ದಿನಕ್ಕೊಮ್ಮೆ ನಿಯಮಿತವಾಗಿ ಡಯಾಲಿಸಿಸ್ ಮಾಡಿಸುವುದೋ ಇಂಥಾ ಚಿಂತನೆಗಳು ಪರಿಹಾರಗಳ ಮಾಡುತ್ತಿರುವುದು ಅಸಹಜ! ಇದು ಆಗಬಾರದು! ಹೀಗೆ ಚಿಂತಿಸುವುದರಿಂದ ಕಿಡ್ನಿ ವಿಫಲವಾಗುವವರ ಸಂಖ್ಯೆ ಹೆಚ್ಚುತ್ತದೆಯೇ ವಿನಾ ನಿಯಂತ್ರಿಸಲಾಗದು!

ಹಿಂದೆ ಸಿಹಿ ಮೂತ್ರ ರೋಗ ಎಂದರೇನೆಂದು ಗೊತ್ತಿರಲಿಲ್ಲ! ಗೊತ್ತಾದ ಮೇಲೆ ಅದು ಶ್ರೀಮಂತರ ರೋಗ ಎಂಬ ಹಣೆಪಟ್ಟಿ ಹೊಂದಿತ್ತು! ಆದರೆ ಇಂದು ವರ್ಗ ಬೇದ, ವಯೋಮಾನ ಬೇಧ ಮಾಡದೆ ಎಲ್ಲರನ್ನೂ ಮುತ್ತಿಡುತ್ತಿದೆ! ಇಂದು ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಏಕೆ? ವೈದ್ಯಲೋಕದ ಸಂಶೋಧನೆಗಳು ಅಸಾಮಾನ್ಯ ಪ್ರಗತಿಯನ್ನು ಸಾಧಿಸಿದ್ದರೂ ಏಕೆ ಮಧುಮೇಹವನ್ನು ನಿಯಂತ್ರಿಸಲಾಗಿಲ್ಲ? ನಿಯಂತ್ರಿಸುವುದಿರಲಿ ಈ ರೋಗ ಹರಡದಂತೆ, ಹೆಚ್ಚದಂತೆ ಸರಿಯಾದ ಚಿಕಿತ್ಸೆ ಏಕೆ ಕೊಡಲಾಗುತ್ತಿಲ್ಲ! ಒಂದೇ ಸಾರಿ ಕೊಲ್ಲದೆ ನಿಧಾನವಾಗಿ ನಿತ್ಯ ಇಷ್ಟಿಷ್ಟೇ ಕೊಲ್ಲುವ ರೋಗವಾಗಿ ಜೀವ ಹಿಂಡುತ್ತಿದೆ! ಇದನ್ನು ವೈದ್ಯಲೋಕ ನಿತ್ಯ ಅಸಹಜವಾಗಿ ನಿಭಾಯಿಸುವುದಂತೂ ಸರಿಯೆನಿಸದು!

ಮಧುಮೇಹ ಹೇಗೆ ಉಂಟಾಗುತ್ತದೆ : ಪ್ಯಾಂಕ್ರಿಯಾಸ್ ಇನ್ಸುಲಿನನ್ನು ಉತ್ಪಾದಿಸದಿರುವುದರಿಂದ. ಕೆಲವರಲ್ಲಿ ಉತ್ಪಾಧಿಸಿದರೂ ಅದರ ಅಸಮರ್ಪಕ ಬಳಕಿಯಿಂದ ಉಂಟಾಗುತ್ತದೆ. 1 ಇನ್ಸುಲಿನ್ ಅವಲಂಬಿತ ಸಕ್ಕರೆ ಕಾಯಿಲೆ 2 ಇನ್ಸುಲಿನ್ ಅಂಬಲಂಭಿತವಲ್ಲದ ಸಕ್ಕರೆ ಕಾಯಿಲೆ 3 ಅಪೌಷ್ಠಿಕತೆಗೆ ಸಂಬಂಧಿಸಿದ ಸಕ್ಕರೆ ಕಾಯಿಲೆ ಅಂತ ಮಧುಮೇಹದಲ್ಲಿ ಮೂರುವಿಧ. 1 ಮತ್ತು 3 ನೇ ವಿಧದ ಸಕ್ಕರೆ ಕಾಯಿಲೆಯವರ ದೇಹದಲ್ಲಿರುವ ಪ್ಯಾಕ್ರಿಯಾಸ್ ಇನ್ಸುಲಿನ್ ನನ್ನು ಉತ್ಪಾದಿಸುವುದಿಲ್ಲ! ದೇಹದಲ್ಲಿನ ಪ್ಯಾಂಕ್ರಿಯಾಸ್ ಆರೋಗ್ಯವಂತರಲ್ಲಿ ಸಹಜವಾಗಿ ಇನ್ಸುಲಿನ್ ಉತ್ಪಾದಿಸುತ್ತದೆ. ಚಯಾಪಚಯ ಕ್ರೀಯೆಗಳು ನಡೆಯುವಾಗ ಗ್ಲೂಕೋಸ್ ರಕ್ತಕ್ಕೆ ಬಂದು ಸೇರುತ್ತದೆ. ಸೇರಬೇಕು! ಆದ್ದರಿಂದ ರಕ್ತದಲ್ಲಿ ಸಕ್ಕರೆ ಅಂಶ ಆಗ ಏರುತ್ತದೆ. ಏರಬೇಕು! ಆಗ ಪ್ಯಾಂಕ್ರಿಯಾಸ್ ಇನ್ಸುಲಿನ್ ಸುರಿಸಿ ರಕ್ತಕ್ಕೆ ಬಂದು ಸೇರುವ ಸಕ್ಕರೆಯ ಅಂಶವನ್ನು ಎಷ್ಟು ಇರಬೇಕೋ ಅಷ್ಟು ಇರುವಂತೆ ನೋಡಿಕೊಳ್ಳುತ್ತದೆ! ಪ್ಯಾಂಕ್ರಿಯಾಸ್ ಇನ್ಸುಲಿನ್ ರಸದೂತವನ್ನು ಸುರಿಸುವುದನ್ನು ನಿಲ್ಲಿಸಿಬಿಟ್ಟರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ದಿನೇ ದಿನೇ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ನಿತ್ಯ ಸುಸ್ತು, ತಲೆ ಸುತ್ತು, ಬಿಪಿ ಬರಬಹುದು, ರಕ್ತನಾಳಗಳು ಬಂದಾಗಬಹುದು ಗಾಯಗಳಾದರೆ ವಾಸಿಮಾಡುವುದು ಕಷ್ಟವಾಗಬಹುದು ಗ್ಯಾಂಗ್ರಿಯಾಸ್ ಆಗಬಹುದು ಅಂಗಗಳ ಕತ್ತರಿಸಬೇಕಾಗಬಹುದು ದೃಷ್ಟಿ ಕ್ಷೀಣಿಸುತ್ತಾ ಬಂದು ಕೊನೆಗೆ ವ್ಯಕ್ತಿ ಇಲ್ಲವಾಗಬಹುದು! ದೇಹದ ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರಿ ಅವುಗಳ ಚಟುವಟಿಕೆಗೆ ಅಡ್ಡಿಯಾಗಬಹುದು!. ಇಂತಹ ಸಂದರ್ಭದಲ್ಲಿ ರೋಗಿಯು ಯಮಯಾತನೆ ಅನುಭವಿಸುವಂತಾಗುತ್ತದೆ. ಕೊನೆಗೆ ಮಧುಮೇಹ ಅವನನ್ನು ನಿಧಾನವಾಗಿ ಹಿಂಸಿಸಿ ಹಿಂಸಿಸಿ ಇಲ್ಲವಾಗಿಸಬಹುದು! ಜತೆಗೆ ಮುಂದಿನ ಪೀಳಿಗೆಗೆ ಈ ರೋಗ ಕೊಡುಗೆಯೂ ಆಗಬಹುದು! ಇದು ರಕ್ತ ಬೀಜಾಸುರನಂತೆ ಹೆಚ್ಚಲು ಕಾರಣವಾಗಬಹುದು! ಒಟ್ಟಾರೆ ಪ್ಯಾಂಕ್ರಿಯಾಸ್ ಇನ್ಸುಲಿನ್ ಸುರಿಸುವುದರಿಂದ ವಿಫಲವಾಗುವುದೇ ಮಧುಮೇಹ ಬರಲು ಕಾರಣ!

ಈ ಸಮಸ್ಯೆ ಬಗೆಹರಿಸಲು ವೈದ್ಯರಂಗ ಪ್ರತಿನಿತ್ಯ ಕೃತಕವಾಗಿ ತಯಾರಿಸಿದ ಇನ್ನುಲಿನನ್ನು ಇಂಜೆಕ್ಟ್ ಮಾಡಿಕೊಳ್ಳುವ ಪರಿಹಾರ ಸೂಚಿಸಿದೆಯಾದರೂ ಇದು ಅಸಹಜ ಬೆಳವಣಿಗೆ! ಪ್ರತಿನಿತ್ಯ ಇನ್ಸುಲಿನ್ ತೆಗೆದುಕೊಳ್ಳುವುದರಿಂದ ನೂರಕ್ಕೆ ನೂರರಷ್ಟು ಮಾನವ ಮೊದಲಿನಂತೆ ಆರೋಗ್ಯವಾಗಿರಲು ಸಾಧ್ಯವಿಲ್ಲ! ಅದು ಕಿರಿಕಿರಿ! ಇನ್ಸುಲಿನ್ ನಿಯಮಿತವಾಗಿ ತೆಗೆದುಕೊಳ್ಳುವವರೇನಾದರೂ ಆರೋಗ್ಯವಾಗಿದ್ದಾರೆಯೇ? ಇಲ್ಲವಲ್ಲ! ಸಿಹಿ ಪದಾರ್ಥಗಳ ನಿಯಂತ್ರಿಸಲು ಎಷ್ಟೇ ಮುಂಜಾಗ್ರತ ಕ್ರಮ ಪಾಲಿಸಿದರೂ ತೊಂದರೆಗೆ ಒಳಗಾಗುವುದನ್ನು ನಿಯಂತ್ರಿಸಲಾಗದು! ಆದರೂ ಇದ್ದುದರಲ್ಲಿ ಇದೇ ಉತ್ತಮ! ಈ ಪರಿಹಾರ ರೋಗ ವಂಶಪಾರಂಪರ್ಯವಾಗಿ ಬರುವ ಸಾಧ್ಯತೆಗಳನ್ನು ತಡೆಹಿಡಿಯದು! ಇದರಿಂದ ಇದನ್ನು ನಿಯಂತ್ರಿಸಲಾಗದೆ ಹೆಚ್ಚುವಂತೆ ಮಾಡಿದಂತಾಗಲಿಲ್ಲವೇ?! ಇದು ಹೀಗೇ ಹೆಚ್ಚುತ್ತಾ ಹೋದರೆ ಮುಂದೊಂದು ದಿನ ಮಧುಮೇಹಿಗಳಿಲ್ಲದ ಜಗತ್ತನ್ನು ಊಹಿಸಲು ಸಾಧ್ಯವಾಗದು!

ಭಾರತದಲ್ಲಿ ಪ್ರಪಂಚದ ಶೇಕಡ 60 ರಷ್ಟು ಮಧುಮೇಹಿಗಳು ಇದ್ದಾರೆಂದರೆ ಅದರ ಬಗ್ಗೆ ಭಾರತೀಯರಿಗಿರುವ ಅರಿವಿನ ಅಭಾವವೆಷ್ಟು ಎಂಬುದು ತಿಳಿಯದಿರದು! ಇದರಿಂದ ಜನರಿಗೆ ದೇಶಕ್ಕೆ ಎಷ್ಟು ನಷ್ಟ? ಅದರ ಬಗ್ಗೆ ಸರ್ಕಾರ, ಆರೋಗ್ಯ ಇಲಾಖೆ ಇನ್ನಿಲ್ಲದಂತೆ ಸಮರೋಪಾದಿಯಲ್ಲಿ ಜನ ಜಾಗೃತಿ ಮೂಡಿಸಿ ಈ ರೋಗ ನಿಯಂತ್ರಿಸಬೇಕಿದೆ! ಸರ್ಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಭಾರತಕ್ಕೆ ಅಪಾಯ!

ಹಿಂದಿನವರಿಗೆ ಮಧುಮೇಹ ಏಕೆ ಬರುತ್ತಿರಲಿಲ್ಲ? ಎಂದು ಚಿಂತಿಸಿದಾಗ ಸಂಶೋಧನೆ ಮಾಡಿದಾಗ ಪೂರ್ವಜರ ಆಹಾರ ಕ್ರಮವೋ ಜೀವನ ಕ್ರಮವೋ ಒತ್ತಡರಹಿತ ಬದುಕೋ ಕಾರಣವಾಗಿರಬೇಕೆಂಬ ಉತ್ತರ ಸಿಗಬಹುದು! ಅಥವಾ ಬೇರೆಯದೇ ಉತ್ತರ ಸಿಕ್ಕಾಗ ಅದನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿ ರೋಗ ನಿಯಂತ್ರಿಸಬಹುದು! ಪ್ಯಾಂಕ್ರಿಯಾಸ್ ಏಕೆ ಇನ್ಸುಲಿನ್ ಸುರಿಸಲು ವಿಫಲವಾಗುತ್ತಿದೆ? ಪ್ಯಾಂಕ್ರಿಯಾಸ್ ಇನ್ಸಲಿನನ್ನು ಪುನರುತ್ಪತ್ತಿ ಮಾಡುವಂತೆ ಮಾಡಲಾಗದೆ? ಎಂದು ಚಿಂತಿಸಿ ಸಂಶೋಧನೆಯಲ್ಲಿ ತೊಡಗಿದರೆ ಉತ್ತರಗಳು ಸಿಗದಿರವು? ಇದು ಸಹಜ ಚಿಂತನೆ ಸಂಶೋಧನೆ! ಈ ದಿಕ್ಕಿನ ಕಡೆಗೆ ಸಂಶೋಧನೆಗಳು ನಡೆದಾಗ ಪ್ಯಾಂಕ್ರಿಯಾವನ್ನು ವಿಫಲವಾಗದಂತೆ ನೋಡಿಕೊಳ್ಳಬಹುದು! ಅಥವಾ ವಿಫಲವಾದ ಪ್ಯಾಂಕ್ರಿಯಾವನ್ನು ಇನ್ಸುಲಿನನ್ನು ಪುನರುತ್ಪತ್ತಿ ಮಾಡುವಂತೆ ಮಾಡಿ ಸಹಜವಾಗಿ ಇನ್ಸುಲಿನ್ ಉತ್ಪತ್ತಿಯಾಗುವಂತೆ ಮಾಡುವ ಮಾರ್ಗಗಳು ಕಂಡುಕೊಂಡು ಮಾನವನನ್ನು ಈ ರೋಗ ಯಮಯಾತನೆಯಿಂದ ಮುಕ್ತನಾಗಿಸಬಹುದು! ಮಾನವ ಕುಲವನ್ನು ಮಧುಮೇಹ ಮುಕ್ತಗೊಳಿಸಬಹುದು!

ಹೀಗೇ ಮಾನವನ ಬೇರೆ ಬೇರೆ ಅಂಗಗಳ ವಿಷಯದಲ್ಲೂ ಸಹಜ ಸಂಶೋಧನೆಗಳು ನಡೆಯಬೇಕಿದೆ! ಸಮಸ್ಯೆಗೆ ಪರ್ಯಾಯ ಮಾರ್ಗಗಳ ಹುಡುಕುವ ಚಿಂತನೆ ಮಾಡಬಾರದು! ಹಾಗೆ ಮಾಡಿದ್ದರಿಂದಾಗಿ ರೋಗ, ರೋಗಿ, ನೋವು ಹಾಗೇ ಉಳಿಯುವಂತಾಗಿ, ಉಲ್ಬಣಿಸುವಂತಾಗಿ ಆಸ್ಪತ್ಪತ್ರೆಗಳು, ಔಷಧಿ ತಯಾರಿಕಾ ಕಂಪನಿಗಳು, ಕೃತಕ ಅಂಗ ತಯಾರಿಕಾ ಕಾರ್ಖಾನೆಗಳು, ನರ್ಸಿಂಗ್ ಕಾಲೇಜುಗಳು, ನರ್ಸ್ ಗಳು, ವೈದ್ಯರು, ಔಷಧಿಗಳು, ಬ್ರದರ್ಸ್ ಗಳು, ನರ್ಸಿಂಗ್ ಹೋಮ್ಗಳು, ಫಾರ್ಮಸಿಗಳು, ವಿವಿಧ ಟೆಕ್ನಿಷಿಯನ್ನು ವಿಪರೀತ ಹೆಚ್ಚಿ ಪರಿಸರ ಮಾಲಿನ್ಯ ಹೆಚ್ಚುವಂತಾಗಿದೆ! ಸಹಜವಾಗಿ ಚಿಂತಿಸಿದ್ದರೆ ಹೀಗಾಗದೆ ಆರೋಗ್ಯವಂತ ಜನರು ಇರುವಂತಾಗಿ, ಒಳ್ಳೆಯ ಪರಿಸರದಿಂದ ಜಗತ್ತು ಸುಂದರವಾಗಿರುತಿತ್ತು! ಈಗಲಾದರೂ ಆ ದಿಕ್ಕಿನ ಕಡೆ ಸಂಶೋಧನೆಗಳು ನಡೆಯುವಂತಾಗಲಿ! ಮಧುಮೇಹಕ್ಕೆ ಮುಕ್ತಿ ಸಿಗುವಂತಾಗಲಿ! ಮಧುಮೇಹಕ್ಕಷ್ಟೇ ಅಲ್ಲ ಕಿಡ್ನಿ, ಹೃದಯದ ಸಮಸ್ಯೆ ಮುಂತಾದವುಗಳಿಗೆ ಸಹ! ಎಲ್ಲರೂ ಇಂತಹ ರೋಗಗಳಿಂದ ಮುಕ್ತರಾಗಿ ಸುಮಧುರ ಬದುಕನ್ನು, ಪ್ರಕೃತಿಯನ್ನು ಸವಿಯುವಂತಾಗಲಿ!

-ಕೆ ಟಿ ಸೋಮಶೇಖರ ಹೊಳಲ್ಕೆರೆ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x