ಕುರಿಯ ಕಾಲು: ಜೆ.ವಿ.ಕಾರ್ಲೊ

ಕಿಟಕಿಯ ಪರದೆಗಳು ಇಳಿಬಿದ್ದಿದ್ದ ಬೆಚ್ಚನೆಯ ರೂಮಿನಲ್ಲಿ ಟೇಬಲ್ ಲ್ಯಾಂಪಿನ ಮಂದ ಬೆಳಕು ಒಂದು ವಿಶಿಷ್ಟ ವಾತಾವರಣ ಉಂಟುಮಾಡಿತ್ತು. ಅವಳು ಕುಳಿತಿದ್ದ ಕುರ್ಚಿಯ ಹಿಂಭಾಗದಲ್ಲಿದ್ದ ಸೈಡ್‍ಬೋರ್ಡಿನ ಮೇಲೆ ಒಂದು ಅರೆ ತುಂಬಿದ್ದ ವ್ಹಿಸ್ಕಿ ಬಾಟಲ್, ಎರಡು ಉದ್ದನೆಯ ಗ್ಲಾಸುಗಳು, ಸೋಡ ಮತ್ತು ಐಸ್ ತುಂಡುಗಳ ಥರ್ಮೋ ಬಕೆಟ್ ತಯಾರಾಗಿತ್ತು. ಅವಳ ಎದುರಿನ ಕುರ್ಚಿ ಇನ್ನೂ ಖಾಲಿ ಇತ್ತು. ಮೇರಿ ಮಲೋನಿ, ತನ್ನ ಪತಿ ಕೆಲಸದಿಂದ ಹಿಂದಿರುಗುವುದನ್ನೇ ಕಾಯುತ್ತಿದ್ದಳು. ಗಳಿಗೆಗೊಮ್ಮೆ ಅವಳ ದೃಷ್ಟಿ ಗೋಡೆಯ ಮೇಲಿದ್ದ ಗಡಿಯಾರದ ಕಡೆಗೆ ಹೊರಳುತ್ತಿತ್ತು. ಹಾಗಂತ ಅವಳೇನು ಆತಂಕಗೊಂಡಿರಲಿಲ್ಲ. ಪ್ರತಿಭಾರಿಯೂ ಗಡಿಯಾರವನ್ನು ನೋಡಿದಾಗ ತನ್ನ ಗಂಡ ಬರುವ ಕ್ಷಣ ಸಮೀಪಿಸುತ್ತಿದೆ ಎಂಬ ನೆಮ್ಮದಿ ಅವಳಿಗಾಗುತ್ತಿತ್ತು. ಮಿಸೆಸ್ ಮೆಲೊನಿಯ ವ್ಯಕ್ತಿತ್ವದಲ್ಲಿ ಯಾವಾಗಲೂ ಜೀವಕಳೆ ತುಂಬಿ ತುಳುಕುತ್ತಿತ್ತು. ಆಕೆಯ ತುಟಿಗಳ ಮೇಲೆ ಒಂದು ಮಂದಹಾಸ ಕಾಯಾಮ್ಮಾಗಿ ಇರುತ್ತಿತ್ತು. ಅವಳು ತಲೆ ಬಗ್ಗಿಸಿಕೊಂಡು ಹಾಕುತ್ತಿದ್ದ ಹೆಣಿಗೆಯಲ್ಲೂ ಒಂದು ಬಗೆಯ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಆರು ತಿಂಗಳ ಬಸುರಿಯಾಗಿದ್ದ ಅವಳ ಮೈಯ ಚರ್ಮ ಹೊಸದಾಗಿ ಕಾಂತಿಯನ್ನು ಪಡೆದುಕೊಂಡು ಹೊಳೆಯುತ್ತಿತ್ತು. ತುಟಿಗಳು ಮಗುವಿನ ಮೃದುತ್ವವನ್ನು ಪಡೆದುಕೊಂಡಿದ್ದವು. ಐದು ಗಂಟೆಗೆ ಹತ್ತು ನಿಮಿಷಗಳಿದ್ದಾಗ ಅವಳ ಕಿವಿಗಳು ನೆಟ್ಟಗಾದವು. ಅವನು ಬರುವ ಸಮಯ ಸಮೀಪಿಸುತ್ತಿತ್ತು. ಕರಾರುವಾಕ್ಕಾಗಿ ಐದು ಗಂಟೆಗೆ ಗೇಟನ್ನು ತೆರೆದು ಕಾರು ಒಳಬರುವ ಸದ್ದಾಯಿತು. ಕಾರಿನ ಬಾಗಿಲು ತೆರೆದು ಹಾಕಿದ ಶಬ್ಧ ಹಾಗೂ ನಡೆದು ಬರುತ್ತಿರುವ ಬೂಟುಗಾಲುಗಳು ಬಾಗಿಲ ಬಳಿ ನಿಂತು ಕೀ ಬಾಗಿಲಿಗೆ ತೂರಿಸಿದ ಶಬ್ಧ. ಅವಳು ಹಾಕುತ್ತಿದ್ದ ಕಸೂತಿಯನ್ನು ಪಕ್ಕದಲ್ಲಿಟ್ಟು ಎದ್ದು ಬಾಗಿಲಿನ ಕಡೆಗೆ ನಡೆದಳು.

‘ಹಲೋ ಡಾರ್ಲಿಂಗ್!’ ಅವಳು ಉದ್ಗರಿಸಿದಳು.
‘ಹಲೋ ಡಾರ್ಲಿಂಗ್’ ಅವನೂ ಉತ್ತರಿಸಿ ಅವಳಿಗೆ ಮುತ್ತನ್ನಿತ್ತ. ಅವನ ಕೋಟನ್ನು ತೆಗೆದುಕೊಂಡು ಅವಳು ಕ್ಲೋಸೆಟಿನಲ್ಲಿ ನೇತು ಹಾಕಿ ಅವನಿಗೆ ಡ್ರಿಂಕನ್ನು ತಯಾರಿಸಲು ಮುಂದೆ ನಡೆದಳು. ಅವನು ಎಂದಿನಂತೆ ವ್ಹಿಸ್ಕಿಯ ಗ್ಲಾಸನ್ನು ಹಿಡಿದುಕೊಂಡು ಅವಳ ಎದರುರಿನ ತೂಗು ಕುರ್ಚಿಯಲ್ಲಿ ಕುಳಿತುಕೊಂಡು ತೂಗತೊಡಗಿದ. ಅವನ ಗ್ಲಾಸಿನಲ್ಲಿದ್ದ ಐಸಿನ ತುಣುಕುಗಳು ‘ಕಿಣ,ಕಿಣ’ ಸದ್ದು ಮಾಡುತ್ತಿದ್ದವು. ಮಿಸೆಸ್ ಮಲೊನಿ ಪ್ರತಿದಿನವೂ ಎದುರುನೋಡುತ್ತಿದ್ದ ಮತ್ತು ಆನಂದಿಸುತ್ತಿದ್ದ ಗಳಿಗೆ ಇದಾಗಿತ್ತು. ಮೊದಲನೆಯ ಡ್ರಿಂಕ್ ಮುಗಿಯುವವರೆಗೆ ಅವನು ಏನೂ ಮಾತನಾಡುತ್ತಿರಲಿಲ್ಲವೆಂದು ಅವಳಿಗೆ ಗೊತ್ತಿತ್ತು. ಅವಳಾದರೂ ಅಷ್ಟೆ, ಇಡೀ ದಿನ ಒಬ್ಬಳೇ ಮನೆಯಲ್ಲೇ ಇದ್ದು ಸಂಜೆಯ ಈ ಗಳಿಗೆಗಾಗಿ ಕಾದಿರುತ್ತಿದ್ದಳು. ಎದುರಿನ ಕುರ್ಚಿಯಲ್ಲಿ ಅವನ ಉಪಸ್ಥಿತಿಯಷ್ಟೇ ಅವಳಿಗೆ ನೆಮ್ಮದಿ ತರುತ್ತಿತ್ತು. ದಿನದ ಆಯಾಸವನ್ನು ಮೊದಲನೆಯ ಡ್ರಿಂಕಿನಲ್ಲಿ ಅವನು ಕ್ರಮೇಣ ಕಳಚಿಕೊಂಡು ಅವನು ಜೀವ ತಳೆಯುತ್ತಿದ್ದ.

‘ಡಾರ್ಲಿಂಗ್, ತುಂಬಾ ಆಯಾಸವಾಗಿದೆಯೇ?’
‘ಹ್ಞೂ…ತುಂಬಾ.’ ಅವನು ಅನ್ಯಮನಸ್ಕತೆಯಿಂದ ಉತ್ತರಿಸಿ, ವ್ಹಿಸ್ಕಿ ಗ್ಲಾಸನ್ನು ಒಮ್ಮೆಲೇ ಎತ್ತಿ ಒಂದೇ ಗುಟುಕಿಗೆ ಗಂಟಲಿಗೆ ಇಳಿಸಿದ. ಇದು ಯಾವತ್ತೂ ಅವನ ರೀತಿಯಾಗಿರಲಿಲ್ಲ. ಅವಳು ಅವನ ಕಡೆಗೆ ನೋಡಿರಲಿಲ್ಲವಾಗಿದ್ದರೂ, ಅವನು ಗ್ಲಾಸನ್ನು ಕೆಳಗಿಟ್ಟಾಗ ಐಸ್ ತುಂಡುಗಳು ಮತ್ತೆ ಗ್ಲಾಸಿಗೆ ಬಿದ್ದು ಸದ್ದು ಮಾಡಿದವು. ಈ ಮೊದಲು ಅವನು ಡ್ರಿಂಕನ್ನು ಮುಗಿಸುತ್ತಿದ್ದಾಗ ಐಸ್ ತುಂಡುಗಳು ಕರಗಿ ನೀರಾಗಿರುತ್ತಿದ್ದವು. ಅವನು ಸ್ವಲ್ಪ ಹೊತ್ತು ಸುಮ್ಮನಿದ್ದು ಕುರ್ಚಿಯಿಂದ ಸಾವಕಾಶವಾಗಿ ಎದ್ದು ಅವಳ ಹಿಂಭಾದಲ್ಲಿದ್ದ ವ್ಹಿಸ್ಕಿ ಬಾಟಲಿನಿಂದ ಮತ್ತೊಂದು ಡ್ರಿಂಕನ್ನು ತನ್ನ ಗ್ಲಾಸಿಗೆ ಸುರುವಿಕೊಂಡ.
‘ನಾನೇ ಕೊಡುತ್ತಿದ್ದೇನಲ್ಲ ಡಾರ್ಲಿಂಗ್?’ ಒಮ್ಮೆಲೇ ಎದ್ದು ಅವಳು ಕೇಳಿದಳು.
‘ಬೇಡ, ಬೇಡ ನೀನು ಕುಳಿತುಕೋ..’ ಅವನು ಹೊಸ ಡ್ರಿಂಕನ್ನು ಹಿಡಿದುಕೊಂಡು ಕುರ್ಚಿಯ ಮೇಲೆ ಕುಳಿತುಕೊಂಡ. ಅವನ ಈ ಭಾರಿಯ ಡ್ರಿಂಕ್, ಬಣ್ಣದಲ್ಲಿ, ಎಂದಿಗಿಂತ ಗಾಢವಾಗಿದ್ದು ಅವಳು ಗಮನಿಸದೇ ಇರಲಿಲ್ಲ.

‘ಡಾರ್ಲಿಂಗ್, ನಿನ್ನ ಚಪ್ಪಲಿಗಳನ್ನು ತರಲೇ?’
‘ಬೇಡ,’ ಅವನು ಹೇಳಿದ. ಮೆಲೊನಿ ಅವನು ಹೀರುತ್ತಿರುವ ಗಾಢ ಹಳದಿ ಬಣ್ಣದ ವ್ಹಿಸ್ಕಿಯನ್ನೇ ನೋಡುತ್ತಾ ಕುಳಿತಳು.
‘ಪೋಲಿಸ್ ಖಾತೆಯಲ್ಲಿ ನಿನ್ನಂತ ಸೀನಿಯರ್‍ಗಳಿಗೂ ಇಷ್ಟೊಂದು ಓಡಾಟದ ಕೆಲಸ ಕೊಡುವುದು ನಿಜಕ್ಕೂ ಲಜ್ಜೆಗೇಡಿತನ ಡಾರ್ಲಿಂಗ್..’ ಅವನಿಗೆ ತುಂಬಾ ಆಯಾಸವಾಗಿದೆ ಎಂದೇ ತಿಳಿದು ಅವಳು ಅನುಕಂಪ ತೋರಿಸಿದಳು.
ಅವನು ಮಾತನಾಡಲಿಲ್ಲ. ಅವಳು ತಲೆ ಬಗ್ಗಿಸಿ ಮತ್ತೆ ತನ್ನ ಕೆಲಸದಲ್ಲಿ ತೊಡಗಿಸಿಕೊಂಡಳು. ಅವನ ಗ್ಲಾಸಿನೊಳಗಿನ ಐಸ್ ತುಂಡುಗಳ ಸದ್ದು ಬಿಟ್ಟರೆ ಅವರ ಮಧ್ಯೆ ಮೌನ ನೆಲೆಸಿತ್ತು.
‘ಡಾರ್ಲಿಂಗ್, ನಿನಗೆ ಏನಾದರೂ ಸ್ನ್ಯಾಕ್ಸ್ ತರಲೇ? ಇವತ್ತು ಗುರುವಾರವೆಂದು ನಾನು ಅಡುಗೆ ಮಾಡಿಲ್ಲ.’
‘ಬೇಡ.’ ಅವನು ಉತ್ತರಿಸಿದ.

‘ಡಾರ್ಲಿಂಗ್, ನಿನಗೆ ಇವತ್ತು ಹೊರಗೆ ಹೋಗುವುದು ಬೇಡವೆಂದಾದರೆ ಏನೂ ಚಿಂತೆ ಇಲ್ಲ. ಹೊತ್ತೇನೂ ಆಗಿಲ್ಲ. ಫ್ರೀಜರ್‍ನಲ್ಲಿ ಸಾಕಷ್ಟು ಮಾಂಸವಿದೆ. ನೀನು ಕುರ್ಚಿಯಿಂದ ಮೇಲೇಳುವ ಅಗತ್ಯವೇ ಇಲ್ಲ. ನಾನೇ ಏನಾದರು ಅಡುಗೆ ಮಾಡುತ್ತೇನೆ.’
ಅವಳು ಅವನ ಉತ್ತರಕ್ಕಾಗಿ, ಅಥವಾ ಒಂದು ಮುಗುಳ್ನಗೆಗೆ, ಹೋಗಲಿ ಕನಿಷ್ಠ ತಲೆದೂಗಿಗೆ ಕಾದಳು. ಅವನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
‘ಇರಲಿ ಬಿಡಿ.. ನಿಮಗೆ ನಾನು ಚೀಜನ್ನಾದದರೂ ತರುತ್ತೇನೆ.’
‘ನನಗದು ಬೇಡ ಮಾರಾಯ್ತಿ..’
ಅವಳಿಗೆ ನಿಜವಾಗಲೂ ಕಸಿವಿಸಿಯಾಗತೊಡಗಿತು. ಕುಳಿತಲ್ಲಿಂದಲೇ ಚಡಪಡಿಸತೊಡಗಿದಳು. ಅವಳ ಬಟ್ಟಲಕಂಗಳು ಅವನನ್ನೇ ಗಮನಿಸತೊಡಗಿದವು.
‘ಡಾರ್ಲಿಂಗ್, ನೀನು ಏನಾದರೂ ತಿನ್ನಲೇ ಬೇಕು. ನಾನು ಏನಾದರೂ ತಯಾರು ಮಾಡುತ್ತೇನೆ. ನೀನು ತಿನ್ನದೆ ಬಿಟ್ಟರೂ ಸೈ.’ ಅವಳು ಎದ್ದು ಕಸೂತಿ ಮಾಡುತ್ತಿದ್ದ ಬಟ್ಟೆಯನ್ನು ಟೇಬಲ್ ಲ್ಯಾಂಪಿನ ಪಕ್ಕದಲ್ಲಿ ಇಟ್ಟಳು.

‘ಮೆಲೊನಿ, ಕುಳಿತುಕೋ ಪ್ಲೀಜ್..ಒಂದು ನಿಮಿಷ ಅಷ್ಟೇ..!’ ಅವನ ದನಿ ವಿಚಿತ್ರವಾಗಿತ್ತು. ಯಾವುದೋ ಅವ್ಯಕ್ತ ಹೆದರಿಕೆಯಿಂದ ಅವಳ ಎದೆ ಡವಗುಟ್ಟತೊಡಗಿತು.
ಅವಳು ಮತ್ತೆ ಕುಳಿತುಕೊಂಡಳು. ಅವಳ ದೊಡ್ಡದಾದ ಕಣ್ಣುಗಳು ಅವನನ್ನೇ ದಿಟ್ಟಿಸತೊಡಗಿದವು. ಅವನು ಎರಡನೇ ಡ್ರಿಂಕನ್ನು ಮುಗಿಸಿ ಖಾಲಿ ಗ್ಲಾಸಿನೊಳಗೆ ದೃಷ್ಟಿಯನ್ನು ನೆಟ್ಟಿದ್ದ. ಅವನ ಹಣೆಯ ಮೇಲೆ ನೆರಿಗೆಗಳು ಮೂಡಿದ್ದವು.
‘ಮೇರಿ, ದಯವಿಟ್ಟು ಕೇಳಿಸಿಕೋ.. ನಿನ್ನ ಬಳಿ ಒಂದು ಗಂಭೀರವಾದ ವಿಚಾರವನ್ನು ಹೇಳುವುದಿದೆ.’
‘ಏನದು ಡಾರ್ಲಿಂಗ್? ಏನು ವಿಚಾರ?’
ಅವನು ನಿಶ್ಚಲನಾಗಿ ಬಗ್ಗಿ ಕುಳಿತಿದ್ದ. ಟೇಬಲ್ ಲ್ಯಾಂಪಿನ ಬೆಳಕು ಅವನ ಮುಖದ ಮೇಲ್ಭಾಗದಲ್ಲಿ ಬಿದ್ದು ಕೆಳಗಿನ ಭಾಗ ಕತ್ತಲಲ್ಲಿತ್ತು. ಅವನ ಎಡ ಕಣ್ಣಿನ ಬಳಿಯ ನರವೊಂದು ಸಣ್ಣಗೆ ಮಿಡಿಯುತ್ತಿರುವುದು ಅವಳ ಗಮನಕ್ಕೆ ಬಾರದಿರಲಿಲ್ಲ.

‘ಮೇರಿ, ನಾನು ಹೇಳ ಹೊರಟಿರುವುದು ಕೇಳಿ ನಿನಗೆ ಅಘಾತವಾಗಬಹುದು..’ ಅವನು ಶುರು ಮಾಡಿದ. ‘ನಾನು ಇದರ ಬಗ್ಗೆ ತುಂಬಾ ಯೋಚಿಸಿ, ಸೀದಾ ಸೀದಾ ಹೇಳುವುದೇ ಸರಿ ಎಂಬ ನಿರ್ಣಯಕ್ಕೆ ಬಂದಿದ್ದೇನೆ. ನೀನು ನನಗೆ ಹೆಚ್ಚು ದೂಷಿಸುವುದಿಲ್ಲವೆಂದು ಭಾವಿಸಿದ್ದೇನೆ. ಕೊನೆಗೂ ಅವನು ಹೇಳಿಯೇ ಬಿಟ್ಟ. ಅವನಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ನಾಲಕ್ಕೋ ಐದು ನಿಮಿಷಗಳು ಅಷ್ಟೇ. ಅವನು ಹೇಳುತ್ತಿರುವಾಗ ಅವಳು ಒಂದು ಶಬ್ಧವನ್ನೂ ಆಡಲಿಲ್ಲ. ಅವಳ ನಾಲಿಗೆಗೆ ಗರಬಡಿದಿತ್ತು. ಹೇಗೆ ಪ್ರತಿಕ್ರಿಯಿಸಬೇಕೆಂದೇ ತೋಚದೆ ಅವಳು ಅವನನ್ನೇ ನೋಡುತ್ತಾ ಕುಳಿತುಕೊಂಡುಬಿಟ್ಟಳು. ಅವನು ಹೇಳುತ್ತಾ ಹೋದಂತೆ, ಅವನೂ ಅವಳಿಂದ ದೂರ ದೂರ ಸರಿಯುತ್ತಿರುವಂತೆ ಅವಳಿಗೆ ಭಾಸವಾಯಿತು. ‘ಇದಿಷ್ಟು.. ನಾನು ಹೇಳಲೇಬೇಕಾಗಿತ್ತು. ಮುಂದೂಡಿ ಏನೂ ಪ್ರಯೋಜನವಿರಲಿಲ್ಲ. ನನಗೆ ಗೊತ್ತು. ನಿನಗೆ ಈ ಸ್ಥಿತಿಯಲ್ಲಿ ಹೇಳುವಂತ ವಿಚಾರವಲ್ಲ. ಆದರೂ, ನನಗೆ ಬೇರೆ ದಾರಿಯೇ ಇರಲಿಲ್ಲ. ಆದರೆ, ಹಣಕಾಸಿನ ವಿಚಾರದಲ್ಲಿ ನಾನು ನಿನಗೆಂದೂ ಮೋಸಮಾಡುವುದಿಲ್ಲ. ನಿನ್ನ ಎಲ್ಲಾ ಅಗತ್ಯತೆಗಳನ್ನು ನಾನು ನೋಡಿಕೊಳ್ಳುತ್ತೇನೆ. ನೀನು ಯಾವುದೇ ರಂಪ ಮಾಡುವುದಿಲ್ಲವೆಂದೆನಿಸುತ್ತೇನೆ. ನನ್ನ ಕೆಲಸಕ್ಕೆ ತೊಂದರೆಯಾಗುತ್ತದೆ.’

ಇದೆಲ್ಲಾ ಒಂದು ತಮಾಶೆ, ಕೆಟ್ಟ ಜೋಕ್ ಎಂಬುದು ಅವಳ ಪ್ರಥಮ ಪ್ರತಿಕ್ರಿಯೆಯಾಗಿತ್ತು. ಇದು ಸುಳ್ಳು. ನಾನು ಇದನ್ನ್ಯಾವುದನ್ನೂ ನಂಬುವುದಿಲ್ಲ ಎಂದು ಅವಳಿಗೆ ಜೋರಾಗಿ ಹೇಳಬೇಕೆನಿಸಿತು. ಅಲ್ಲದೆ ಅವನು ಇದನ್ನೆಲ್ಲಾ ಹೇಳಿಯೇ ಇಲ್ಲ. ತಾನೇ ಕಲ್ಪಿಸಿಕೊಂಡಿದ್ದೇನೆ ಎಂದು ನಗಬೇಕು ಅಂತ ಅನಿಸಿತು. ತಾನು ಇದನ್ನೆಲ್ಲಾ ಏನೂ ಕೇಳಿಸಿಯೇ ಕೊಂಡಿಲ್ಲ ಎಂದುಕೊಂಡು ತನ್ನ ಎಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಸ್ವಲ್ಪ ಹೊತ್ತಿನ ನಂತರ ಇದೆಲ್ಲಾ ಯಾವುದೂ ನಡೆದೇಯಿಲ್ಲ ಎಂತಾಗಲೂ ಬಹುದೇನೋ ಎಂಬ ಹುಚ್ಚು ಭ್ರಾಂತಿ ಅವಳಿಗೆ!

‘ನಾನು ಊಟ ತಯಾರಿಸುತ್ತೇನೆ.’ ಅವಳು ಎಂದಾಗ, ಅವನು ಈ ಭಾರಿ ತಡೆಯಲಿಲ್ಲ. ಅವಳು ಅಡುಗೆ ಕೋಣೆಯ ಕಡೆಗೆ ಹೆಜ್ಜೆ ಹಾಕುತ್ತಿರುವಾಗ ಅವಳಿಗೆ ನೆಲದ ಮೇಲೆ ಕಾಲೂರಿದ ಅನುಭವ ಆಗಲೇ ಇಲ್ಲ. ಅವಳಿಗೆ ವಾಕರಿಕೆ ಬರುವಂತಾಗುತ್ತಿತ್ತು. ಅವಳು ಯಾಂತ್ರಿಕವಾಗಿ ಮೆಟ್ಟಿಲುಗಳನ್ನಿಳಿದು ನೆಲಮಾಳಿಗೆಯನ್ನು ಹೊಕ್ಕು ದೀಪವನ್ನು ಬೆಳಗಿಸಿದಳು. ಫ್ರೀಜರಿನ ಬಾಗಿಲನ್ನು ಯಾಂತ್ರಿಕವಾಗಿ ತೆರೆದು ಕೈಗೆಸಿಕ್ಕಿದ ವಸ್ತುವನ್ನು ಎತ್ತಿ ಕೊಂಡಳು. ಪೇಪರಿನಲ್ಲಿ ಸುತ್ತಿದ್ದ ಅದನ್ನು ಬಿಡಿಸಿ ನೋಡಿದಳು. ಅದು ಕುರಿಯ ಕಾಲಾಗಿತ್ತು. ಸರಿ, ರಾತ್ರಿ ಊಟಕ್ಕೆ ಕುರಿಯ ಕಾಲೇ ಆಗಲಿ ಎಂದು ಎರಡೂ ಕೈಗಳಲ್ಲಿ ಎತ್ತಿಕೊಂಡು ಮೇಲೆ ಬಂದಳು. ಅವಳು ಹಜಾರಕ್ಕೆ ಬಂದಾಗ ಅವನು ಕಿಟಕಿಯ ಬಳಿ ಅವನಿಗೆ ಬೆನ್ನು ಮಾಡಿ ನಿಂತಿದ್ದು ನೋಡಿ ಅವಳು ಅಲ್ಲೇ ನಿಂತಳು
ಅವಳು ಬಂದಿದ್ದು ಅವನಿಗೆ ಕೇಳಿಸಿರಬೇಕು. ‘ನನಗೆ ಊಟ ಬೇಡ. ನಾನು ಹೊರಗೆ ಹೋಗುತ್ತೇನೆ.’ ಹಿಂದಿರುಗಿ ನೋಡದೆಯೇ ಅವನು ಹೇಳಿದ.

ಇದನ್ನು ಕೇಳಿ ಅವಳಿಗೆ ಏನನ್ನಿಸಿತೋ? ಅವಳು ಮುಂದೆ ನಡೆದು ಶೀಥಲಿಕರಿಸಿ ಕಬ್ಬಿಣದ ಸಲಾಕೆಯಂತಾಗಿದ್ದ ಕುರಿಯ ಕಾಲನ್ನು ಎರಡೂ ಕೈಗಳಿಂದ ಮೇಲಕ್ಕೆತ್ತಿ ಅವನ ತಲೆಯ ಹಿಂಭಾಗಕ್ಕೆ ಬಲವಾಗಿ ಬಡಿದು ಮೂರ್ನಾಲ್ಕು ಹೆಜ್ಜೆ ಹಿಂದೆ ಸರಿದಳು. ವಿಚಿತ್ರವೇನೆಂದರೆ, ಕೆಲವು ಸೆಕೆಂಡು ಅವನಿಂದ ಏನೂ ಪ್ರತಿಕ್ರಿಯೆ ಕಾಣಿಸಲಿಲ್ಲ. ನಂತರ, ನಿಂತಲ್ಲಿಂದಲೇ ಸ್ವಲ್ಪ ಹೊತ್ತು ಆಚೀಚೆ ಓಲಾಡುತ್ತಾ ಅವನು ಮೇಜಿನ ಜೊತೆಯಲ್ಲೇ ಕಾರ್ಪೆಟಿನ ಮೇಲೆ ದೊಪ್ಪನೆ ಕುಸಿದು ಬಿದ್ದ. ಅವನು ಮತ್ತು ಮೇಜು ಕುಸಿದು ಬಿದ್ದ ಶಬ್ಧ ಅವಳನ್ನು ಒಮ್ಮೆಲೇ ವಾಸ್ತವಕ್ಕೆ ತಂದಿತು. ಅವಳಿಗೆ ಆಶ್ಚರ್ಯವಾಯಿತು. ಕೆಲವು ಕ್ಷಣ, ಕುರಿಯ ಕಾಲನ್ನು ಕೈಯಲ್ಲಿ ಹಿಡಿದುಕೊಂಡೇ ಅವಳು ಎವೆಯಿಕ್ಕದೆ ನೆಲದ ಮೇಲೆ ಬಿದ್ದಿದ್ದ ಅವನನ್ನೇ ನೋಡಿದಳು. ತಾನು ಅವನನ್ನು ಸಾಯಿಸಿದೆ. ಅವಳ ಮನಃಸ್ಥಿತಿ ಕ್ರಮೇಣ ಸ್ಥಿಮಿತಕ್ಕೆ ಬರತೊಡಗಿತು. ಅವಳು ಯೋಚಿಸಲಾರಂಭಿಸಿದಳು. ಪೋಲಿಸ್ ತನಿಖಾಧಿಕಾರಿಯ ಮಡದಿಯಾಗಿದ್ದ ಅವಳಿಗೆ ತನ್ನ ತಪ್ಪಿನ ಪರಿಣಾಮ ಚೆನ್ನಾಗಿ ಅರಿವಾಗಿತು. ಅದರ ಬಗ್ಗೆ ಅವಳಿಗೆ ಕಿಂಚಿತ್ತೂ ಚಿಂತೆಯಿರಲಿಲ್ಲ. ಅದು ಒಂಥರದ ಬಿಡುಗಡೆಯೇ ಎನ್ನಬಹುದಿತ್ತೇನೋ? ಆದರೆ, ತನ್ನ ಗರ್ಭದಲ್ಲಿರುವ ಮಗುವಿನ ಗತಿಯೇನು? ಗರ್ಭಿಣಿ ಕೊಲೆಗಾರ್ತಿಯರ ಬಗ್ಗೆ ಕಾನೂನು ಏನು ಹೇಳುತ್ತದೆ? ಇಬ್ಬರನ್ನೂ ಸಾಯಿಸುತ್ತದೋ ಅಥವಾ ಮಗು ಹುಟ್ಟುವವರೆಗೂ ಕಾಯುತ್ತದೆಯೋ? ಇದಕ್ಕೆ ಅವಳ ಬಳಿ ಉತ್ತರ ಇರಲಿಲ್ಲ. ಅದೃಷ್ಟ ಪರೀಕ್ಷಿಸಲು ಅವಳು ಸುತರಾಂ ತಯಾರಿರಲಿಲ್ಲ. ಅವಳು ಅಡುಗೆಮನೆಗೆ ಹೋಗಿ ಕುರಿಯ ಕಾಲನ್ನು ಒಂದು ಅಗಲವಾದ ತಟ್ಟೆಯಲ್ಲಿಟ್ಟು ಓವನಿನೊಳಗೆ ಇಟ್ಟು ಗರಿಷ್ಟ ತಾಪಮಾನವನ್ನು ಸೆಟ್ ಮಾಡಿದಳು. ಕೈಯನ್ನು ಚೆನ್ನಾಗಿ ತೊಳೆದು ಮೇಲೆ ಬೆಡ್‍ರೂಮಿಗೆ ಹೋದಳು. ಕನ್ನಡಿಯ ಮುಂದೆ ಕುಳಿತುಕೊಂಡು ಕೂದಲು ಬಾಚಿ ಮುಖವನ್ನು ಕೊಂಚ ಶೃಂಗರಿಸಿ ಮುಗುಳ್ನಗಲು ಪ್ರಯತ್ನಿಸಿದಳು. ಅದ್ಯಾಕೊ ಸೊಟ್ಟಸೊಟ್ಟಗಾಯಿತು. ಅವಳು ಮತ್ತೆ ಪ್ರಯತ್ನಿಸಿ, ಸ್ವಲ್ಪ ಜೋರಾಗಿಯೇ, ‘ಹಲೋ ಸ್ಯಾಮ್?’ ಎಂದು ಉಲಿದಳು. ಅದು ಅವಳ ದನಿಯೆಂದು ಅನಿಸಲೇ ಇಲ್ಲ.

‘ಸ್ಯಾಮ್, ನನಗೆ ಕೆಲವು ಆಲೂಗೆಡ್ಡೆಗಳು ಬೇಕಿದ್ದವು. ಹಾಗೆಯೇ, ಒಂದು ಕ್ಯಾನ್ ಹಸಿ ಬಟಾಣಿ ಕಾಳುಗಳು ಕೂಡ.’ ಅವಳಿಗೆ ತೃಪ್ತಿಯಾಯಿತು. ಈ ಭಾರಿ ದ್ವನಿ ಹಾಗೂ ಮುಗುಳ್ನಗೆ ಕೃತಕವೆನಿಸಲಿಲ್ಲ. ಇದನ್ನು ಅವಳು ಬಹಳ ಸಲ ಅಭ್ಯಾಸ ಮಾಡಿದಳು. ನಂತರ ಕೆಳಗೆ ಹೋಗಿ ತನ್ನ ಕೋಟನ್ನು ಧರಿಸಿ ಅಡುಗೆ ಮನೆಯ ಬಾಗಿಲಿನಿಂದ ಹೊರ ನಡೆದಳು. ಹೂದೋಟವನ್ನು ದಾಟಿ ರಸ್ತೆಗೆ ಬಂದಳು. ಇನ್ನೂ ಆರುಗಂಟೆಯಾಗಿರಲಿಲ್ಲ. ಸ್ಯಾಮನ ಅಂಗಡಿಯಲ್ಲಿ ಬೆಳಕು ಕಾಣುತ್ತಿತ್ತು.
‘ಹಲೋ ಸ್ಯಾಮ್!’ ಕೌಂಟರಿನಲ್ಲಿ ಕುಳಿತ್ತಿದ್ದ ವ್ಯಕ್ತಿಗೆ ಹೇಳುತ್ತಾ ಮೇರಿ ಮುಗುಳ್ನಗುತ್ತಾ ಒಳಬಂದಳು. ಅವಳ ದನಿಯಲ್ಲಿ ಉಲ್ಲಾಸ ಎದ್ದು ಕಾಣುತ್ತಿತ್ತು.
‘ಹಲೋ ಮಿಸೆಸ್ ಮಲೋನಿ, ಹೇಗಿದ್ದೀರಾ?’ ಸ್ಯಾಮ್ ಉತ್ತರಿಸಿದ.
‘ಸ್ಯಾಮ್, ನನಗೆ ಕೆಲವು ಆಲೂಗೆಡ್ಡೆಗಳು ಬೇಕಿದ್ದವು. ಹಾಗೆಯೇ ಒಂದು ಕ್ಯಾನ್ ಹಸಿ ಬಟಾಣಿ ಕಾಳುಗಳೂ ಕೂಡ.’
ಅವನು ಬಟಾಣಿ ಕಾಳುಗಳಿಗಳಿಗಾಗಿ ತನ್ನ ಹಿಂದಿನ ಶೆಲ್ಫಿನ ಕಡೆಗೆ ತಿರುಗಿದ. ‘ಸಾಮಾನ್ಯವಾಗಿ ನಾವು ಗುರುವಾರ ಹೊರಗೆ ಊಟಕ್ಕೆ ಹೋಗುವುದು. ಪ್ಯಾಟ್ರಿಕನಿಗೆ ಇವತ್ತು ಯಾಕೋ ಬಹಳ ಆಯಾಸವಾಗಿದೆಯಂತೆ. ಮನೆಯಲ್ಲಿ ತರಕಾರಿಯೇ ಇಲ್ಲದಂತಾಗಿದೆ.’ ಅವಳು ಹೇಳಿದಳು.

‘ಮಾಂಸನೂ ಬೇಕೇ ಮಿಸೆಸ್ ಮಲೋನಿ?’ ಅವನು ಕೇಳಿದ.
‘ಥ್ಯಾಂಕ್ಸ್ ಸ್ಯಾಮ್. ಫ್ರೀಜರಿನಲ್ಲಿ ಇಡೀ ಕುರಿಯ ಕಾಲೇ ಇದೆ. ಅದನ್ನೇ ಅಡುಗೆ ಮಾಡುತ್ತೇನೆ.’
‘ಸರಿ ಬಿಡಿ. ಮತ್ತೇನಾದ್ರೂ ಬೇಕೇ ಮಿಸೆಸ್ ಮಲೋನಿ? ಊಟದ ನಂತರ? ಫ್ರೆಶ್ ಚೀಝ್ ಕೇಕ್ ಇದೆ. ಕೊಡಲೇ?’
‘ಪರ್ಫೆಕ್ಟ್, ಸ್ಯಾಮ್. ಚೀಝ್ ಕೇಕ್ ಎಂದ್ರೆ ಪ್ಯಾಟ್ರಿಕ್‍ಗೆ ಬಹಳ ಇಷ್ಟ.’
ಅವನಿಗೆ ದುಡ್ಡನ್ನು ತೆತ್ತು, ಮುಗುಳ್ನಗುತ್ತಾ, ‘ಥ್ಯಾಂಕ್ಸ್ ಸ್ಯಾಮ್’ ಎಂದು ಅವಳು ಹೊರನಡೆದಳು. ಅವಳು ಅವಸವಸರದಿಂದ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ಹಸಿದು ಊಟಕ್ಕೆ ಕಾಯುತ್ತಿರುವ ಗಂಡನಿಗೆ ಅಡುಗೆ ತಯಾರಿಸಲು ತಾನು ಕೆಲವು ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಅವನಿಗೆ ಆದಷ್ಟು ರುಚಿಕಟ್ಟಾಗಿ ಅಡುಗೆ ಮಾಡಿ ಬಡಿಸಬೇಕು. ಪಾಪ ದಣಿದಿದ್ದಾನೆ. ತಾನು ಮನೆಯನ್ನು ಹೊಕ್ಕಾಗ ಅತಿರಿಕ್ತವಾದದ್ದೋ, ಕೆಟ್ಟದ್ದು ಏನಾದರೂ ನಡೆದಿದ್ದರೆ ಸಹಜವಾಗಿ ತನಗೆ ಅಘಾತವಾಗುತ್ತದೆ. ಆ ಗಳಿಗೆಯಲ್ಲಿ ನಾನು ಭಯಭೀತಳಾಗಿ ಹೇಗೇಗೋ ಪ್ರತಿಕ್ರಿಯಿಸುತ್ತೇನೆ. ಎಲ್ಲವನ್ನೂ, ನಟಿಸದೆಯೇ, ಸಹಜವಾಗಿ ನಿಭಾಯಿಸಬೇಕು. ಆದ್ದರಿಂದ ಅಡುಗೆಮನೆಯ ಹಿಂಭಾಗದ ಬಾಗಿಲಿನಿಂದ ಒಳಹೊಕ್ಕಾಗ ಅವಳು ಯಾವುದೋ ಹಾಡನ್ನು ಗುನುಗುನಿಸುತ್ತಿದ್ದಳು. ತುಟಿಗಳ ಮೇಲೆ ಮಂದಹಾಸವಿತ್ತು.

‘ಪ್ಯಾಟ್ರಿಕ್, ಹೇಗಿದ್ದೀಯಾ ಡಾರ್ಲಿಂಗ್?’ ಎಂದು ಕೇಳುತ್ತಾ ಅವಳು ತಂದ ಸಾಮಾನುಗಳನ್ನು ಅಡುಗೆಮನೆಯ ಮೇಜಿನ ಮೇಲಿಟ್ಟು ಹಜಾರದ ಕಡೆಗೆ ಹೆಜ್ಜೆ ಹಾಕಿದಳು. ಹಜಾರದ ಕಿಟಕಿಯ ಬಳಿ ಪ್ಯಾಟ್ರಿಕ್ ಹಿಮ್ಮುಖವಾಗಿ ಬಿದ್ದುಕೊಂಡಿದ್ದ. ಅವನ ಎರಡೂ ಕಾಲುಗಳು ಮಡಚಿಕೊಂಡಿದ್ದವು. ಒಂದು ಕೈ ತಿರುವಿ ಅವನ ಬೆನ್ನ ಕೆಳಗೆ ಸೇರಿಕೊಂಡಿತ್ತು. ನಿಜಕ್ಕೂ ಅವಳಿಗೆ ದೊಡ್ಡ ಅಘಾತವೇ ಆಯಿತು. ತಕ್ಷಣ ಓಡಿ ಬಂದು ಅವನ ಪಕ್ಕದಲ್ಲೇ ಮಂಡಿಯೂರಿ ಕುಳಿತುಕೊಂಡು ಜೋರಾಗಿ ಬಿಕ್ಕಳಿಸಿದಳು. ಇದುವರೆಗೆ ಅವನ ಮೇಲಿಟ್ಟಿದ್ದ ಪ್ರೀತಿ ಅವಳ ಒಳಗಿನಿಂದ ಉಕ್ಕಿ ಹರಿಯಿತು. ಅವಳಿಗೆ ನಟಿಸುವ ಅಗತ್ಯವೇ ಕಂಡುಬರಲಿಲ್ಲ. ಎಲ್ಲವೂ ಸಹಜವಾಗಿಯೇ ನಡೆಯುತ್ತಿತ್ತು. ಕೆಲವು ಸಮಯದ ನಂತರ ಅವಳು ಎದ್ದು ಪೋನನ್ನು ಕೈಗೆತ್ತಿಕೊಂಡಳು. ಅವಳಿಗೆ ಪೋಲಿಸ್ ಠಾಣೆಯ ನಂಬರ್ ಚೆನ್ನಾಗಿ ನೆನಪಿತ್ತು. ಅತ್ತ ಕಡೆ ಪೋನ್ ಎತ್ತಿದ ಕೂಡಲೇ, ‘ಬೇಗ, ಬೇಗ ಮನೆಗೆ ಬನ್ನಿ ಪ್ಲೀಜ್.. ಪ್ಯಾಟ್ರಿಕ್ ಸತ್ತು ಹೋಗಿದ್ದಾನೆ.’ ಎಂದಳು.

ಅತ್ತಕಡೆಯಿಂದ ‘ನೀವು ಯಾರು?’ ಎಂದು ಕೇಳಿದಾಗ,
‘ನಾನು ಮಿಸೆಸ್ ಪ್ಯಾಟ್ರಿಕ್ ಮಲೋನಿ.’ ಎಂದಳು.
‘ಮೇಡಂ, ನೀವು ನಮ್ಮ ಪ್ಯಾಟ್ರಿಕ್ ಮಲೋನಿ ಬಗ್ಗೆ ಹೇಳುತ್ತಿದ್ದೀರಾ? ಏನಾಯ್ತು? ಓ ಗಾಡ್.. ಪ್ಯಾಟ್ರಿಕ್ ನಿಜವಾಗಲೂ ಸತ್ತೋದರೇ?’ ಅತ್ತ ಕಡೆಯಿಂದ ಆತಂಕದ ದನಿ ಕೇಳಿಸಿತು.
‘ಹಾಗೆಯೇ ಕಾಣಿಸುತ್ತಿದ್ದ. ಅವರು ನೆಲದ ಮೇಲೆ ಬಿದ್ದಿದ್ದಾರೆ. ಸ್ಪಂದಿಸುತ್ತಿಲ್ಲ.’ ಅವಳು ಬಿಕ್ಕಿದಳು.
‘ಈಗಲೇ ಬಂದುಬಿಡ್ತೀವಿ ಮೇಡಂ.’

ಕೆಲವು ಕ್ಷಣಗಳಲ್ಲೇ ಕಾರು ಬಂದಿತು. ಅವಳು ಎದ್ದು ಬಾಗಿಲು ತೆರೆದಳು. ಇಬ್ಬರು ಪೋಲಿಸರು ಒಳಗೆ ಬಂದರು. ಅವರಿಬ್ಬರೂ ಪರಿಚಯಸ್ಥರೇ. ಪ್ಯಾಟ್ರಿಕ್ ಕೆಲಸ ಮಾಡುತ್ತಿದ್ದ ಠಾಣೆಯಲ್ಲಿನ ಎಲ್ಲರೂ ಅವಳಿಗೆ ಗೊತ್ತಿದ್ದವರೇ ಆಗಿದ್ದರು. ಅವಳು ಬಾಗಿಲು ಹಾಕಿ ಅವರನ್ನು ಸೇರುವಷ್ಟರಲ್ಲಿ ಒ’ಮ್ಯಾಲಿ ಮಂಡಿಯೂರಿ ಪ್ಯಾಟ್ರಿಕನ ನಾಡಿಯನ್ನು ಪರೀಕ್ಷಿಸುತ್ತಿದ್ದ. ಮೇರಿಯನ್ನು ನೋಡುತ್ತಲೇ,
‘ಸಾರಿ ಮೇಡಂ. ಏನಾಯ್ತು ಹೇಳುವಿರಾ?’ ಎಂದ. ಅವಳು ಸಂಕ್ಷಿಪ್ತವಾಗಿ ಎಲ್ಲವನ್ನೂ ವಿವರಿಸಿ, ತಾನು ಸ್ಯಾಮನ ಅಂಗಡಿಗೆ ಹೋಗಿಬರುವಷ್ಟರಲ್ಲಿ ಪ್ಯಾಟ್ರಿಕ್ ಈ ರೀತಿ ಬಿದ್ದಿದ್ದ ಎಂದಳು. ಅವರು ಮಾತನಾಡುತ್ತಿರುವಾಗ ಮತ್ತೊಬ್ಬ ಪೋಲಿಸ್ ನೂನನ್ ಪ್ಯಾಟ್ರಿಕನ ತಲೆಯ ಹಿಂಬದಿಯಲ್ಲಿ ರಕ್ತ ಒಸರಿ ಹೆಪ್ಪುಗಟ್ಟಿರುವುದನ್ನು ಪತ್ತೆ ಹಚ್ಚಿ ಒ’ಮ್ಯಾಲಿಗೆ ತೋರಿಸಿದ. ಅದನ್ನು ನೋಡಿ ಧೃಡಪಡಿಸಿದ ಮ್ಯಾಲಿ ತಕ್ಷಣ ಎದ್ದು ಪೋನಿನ ಕಡೆಗೆ ನಡೆದ. ಸ್ವಲ್ಪ ಹೊತ್ತಿನಲ್ಲೇ ಬಹಳಷ್ಟು ಪೋಲಿಸರು ಬಂದು ಸೇರಿದರು. ಮಿಸೆಸ್ ಮಲೋನಿಗೆ ಗೊತ್ತಿರುವಂತೆ ಒಬ್ಬರು ಡಾಕ್ಟರ್, ಮತ್ತಿಬ್ಬರು ಪತ್ತೇದಾರರು. ಅವರಲ್ಲಿ ಒಬ್ಬನಿಗೆ ಆಕೆ ಹೆಸರಿನಿಂದ ಬಲ್ಲವಳಾಗಿದ್ದಳು. ಸ್ವಲ್ಪ ಹೊತ್ತಿನಲ್ಲೇ ಪೋಲಿಸ್ ಛಾಯಾಗ್ರಾಹಕ ಬಂದು ವಿವಿಧ ಕೋನಗಳಿಂದ ಛಾಯಾಚಿತ್ರಗಳನ್ನು ತೆಗೆಯತೊಡಗಿದ. ಅವನ ಹಿಂದೆಯೇ ಬೆರಳಚ್ಚುಗಾರ ಬಂದು ಸೇರಿದ. ಅವರೆಲ್ಲಾ ಪ್ಯಾಟ್ರಿಕನ ಮೃತ ದೇಹದ ಸುತ್ತ ನೆರೆದು ಗುಸಗುಸ ಮಾತನಾಡತೊಡಗಿದರು. ಪತ್ತೇದಾರ ಅವಳಿಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳತೊಡಗಿದ. ಆದರೂ ಅವರೆಲ್ಲಾ ಅವಳಿಗೆ ಕಿರಿಕಿರಿಯಾಗದಂತೆ ಜಾಗ್ರತೆವಹಿಸಿದ್ದರು.

ಅವಳು ಹೇಳಿದ್ದನ್ನೇ ಮತ್ತೊಮ್ಮೆ, ಮಗದೊಮ್ಮೆ ಹೇಳಬೇಕಾಯಿತು. ಸಂಜೆ ಮನೆಗೆ ಬಂದಾಗ ಪ್ಯಾಟ್ರಿಕ್ ಎಂದಿನಂತಿರದೆ ಅನ್ಯಮನಸ್ಕನಾಗಿದ್ದುದು, ಗುರುವಾರಗಳಂದು ಹೊರಗೆ ಊಟಮಾಡುವ ಸಂಪ್ರದಾಯವನ್ನು ಮುರಿದು ಹಸಿವಾಗುತ್ತಿಲ್ಲವೆಂದು ಅವನು ನಿರಾಸಕ್ತಿ ತೋರಿಸಿದ್ದು, ಕೊನೆಗೆ ತಾನು ಮನೆಯಲ್ಲೇ ಅಡುಗೆ ಮಾಡುತ್ತೇನೆಂದು ಕುರಿಯ ಕಾಲನ್ನು ಓವನ್‍ನಲ್ಲಿ ಹಾಕಿಟ್ಟು ತರಕಾರಿ ತರಲು ಅಂಗಡಿಗೆ ಹೋಗಿ ಬಂದಿದ್ದು, ಅಡುಗೆ ಮನೆಯಿಂದ ಹೊರಗೆ ಬಂದು ನೋಡಿದಾಗ ಪ್ಯಾಟ್ರಿಕ್ ಸತ್ತು ಬಿದ್ದಿದ್ದು..
‘ಮಿಸೆಸ್ ಮಲೋನಿ, ನೀವು ಯಾರ ದಿನಸಿ ಅಂಗಡಿಗೆ ಹೋಗಿದ್ದೀರಿ?’ಎಂದು ಒಬ್ಬ ಪತ್ತೇದಾರ ಕೇಳಿದ.

ಅವಳು ಹೇಳಿದಳು. ಅವನು ಮತ್ತೊಬ್ಬ ಪತ್ತೇದಾರನ ಕಿವಿಯಲ್ಲಿ ಏನೋ ಉಸುರಿದ. ಕೇಳಿ ಅವನು ಹೊರಟುಹೋದ. ಅವನು ಹದಿನೈದು ನಿಮಿಷಗಳ ನಂತರ ಮತ್ತೆ ಬಂದಾಗ ಅವನ ಕೈಯಲ್ಲಿ ಟಿಪ್ಪಣಿ ಮಾಡಿಟ್ಟಿದ್ದ ಹಾಳೆಗಳಿದ್ದವು. ಅವರ ಮಧ್ಯೆ ಮತ್ತೆ ಮಾತುಕತೆ ನಡೆಯಿತು. ಬಿಕ್ಕುವುದರ ಮಧ್ಯೆ ಅವಳಿಗೆ ಅವನು ಹೇಳುತ್ತಿದ್ದುದ್ದು ಅಸ್ಪಷ್ಟವಾಗಿ ಕೇಳಿಸಿತು, ‘…ಸಹಜವಾಗಿಯೇ ಎಂದಿನಂತೆ ಖುಷಿಖುಷಿಯಾಗಿದ್ದಳಂತೆ… ಆಲೂಗೆಡ್ಡೆ, ಬಟಾಣಿ, ಚೀಝ್ ಕೇಕು..’

ಡಾಕ್ಟರ್ ಮತ್ತು ಫೋಟೊಗ್ರಾಫರ್ ಹೊರಟು ಹೋದರು. ಮತ್ತಿಬ್ಬರು ಬಂದು ಪ್ಯಾಟ್ರಿಕ್ ಮಲೋನಿಯನ್ನು ಸ್ಟ್ರೆಚರಿನಲ್ಲಿ ಹಾಕಿಕೊಂಡು ಹೋದರು. ಅವರ ಹಿಂದೆಯೇ ಬೆರಳಚ್ಚುಗಾರ ಹೊರಟುಹೋದ. ಅಲ್ಲೇ ಉಳಿದುಕೊಂಡಿದ್ದ ಇಬ್ಬರು ಪತ್ತೇದಾರರು ಮತ್ತು ಇಬ್ಬರು ಪೋಲಿಸರು ಮಿಸೆಸ್ ಮಲೋನಿಯ ಬಗ್ಗೆ ವಿಶೇಷ ಕಾಳಜಿ ತೋರುತ್ತಾ ಆಕೆಗೆ ಕೆಲವು ದಿನ ತನ್ನ ತಂಗಿಯ ಮನೆಗೆ ಹೋಗಿ ಇರುವಂತೆ ಸೂಚಿಸಿದರು. ಜಾಕ್ ನೂನನ್, ಮಿಸೆಸ್ ಮಲೋನಿಯನ್ನು ತನ್ನ ಮನೆಗೇ ಬರುವಂತೆ ಒತ್ತಾಯಿಸತೊಡಗಿದ. ಆದರೆ ಆಕೆ ಅದಾವುದಕ್ಕೂ ಒಪ್ಪಲಿಲ್ಲ. ಇಲ್ಲಿಂದ ಕಿಂಚಿತ್ತೂ ಕದಲಲೂ ತನಗೆ ಮನಸ್ಸಿಲ್ಲ ಎಂದಳು. ತಾನು ಅಲ್ಲಿರುವುದು ಅವರ ಕೆಲಸಕ್ಕೆ ತೊಂದರೆಯಾಗದಿದ್ದರೆ ತಾನು ಕೊಂಚ ಹೊತ್ತು ಇದೇ ರೂಮಿನಲ್ಲಿ ಉಳಿದುಕೊಳ್ಳಲು ಬಯಸುತ್ತೇನೆ ಎಂದಳು. ನೀವು ಸ್ವಲ್ಪ ಹೊತ್ತು ಮಲಗಿಕೊಳ್ಳಬಾರದೆ? ಎಂದು ಜಾಕ್ ನೂನನ್ ಕೇಳಿದ. ಅವಳು ತಾನು ಕುಳಿತ್ತಿದ್ದ ಕುರ್ಚಿಯಲ್ಲೇ ಕುಳಿತುಕೊಂಡಿರಲು ಬಯಸುವುದಾಗಿಯೂ ಮತ್ತು ಮನಸ್ಸಿಗೆ ಸಮಧಾನವಾದ ನಂತರ ಅಲ್ಲಿಂದ ಏಳುವುದಾಗಿ ತಿಳಿಸಿದಳು. ಅವರು ಅವಳನ್ನು ಅಲ್ಲಿಯೇ ಬಿಟ್ಟು ಮನೆಯನ್ನು ಶೋಧಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಪ್ಯಾಟ್ರಿಕ್ ಮಲೋನಿಯ ತಲೆಯ ಹಿಂಭಾಗಕ್ಕೆ ಯಾವುದೋ ಲೋಹದ ವಸ್ತುವಿನಿಂದ ಬಲವಾಗಿ ಹೊಡೆದು ಹತ್ಯೆಮಾಡಲಾಗಿದೆ ಎಂದು ಮತ್ತು ತಾವು ಆ ಲೋಹದ ವಸ್ತುವನ್ನು ಹುಡುಕುತ್ತಿದ್ದೇವೆ ಎಂದು ಜಾಕ್ ನೂನನ್ ಅತ್ತಕಡೆ ಬಂದಾಗ ಅವಳಿಗೆ ಹೇಳಿದ. ಕೊಲೆಗಾರ ಒಂದೋ ಆ ಆಯುಧವನ್ನು ತನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದಾನೆ, ಅಥವಾ ಇಲ್ಲೇ ಎಲ್ಲೊ ಎಸೆದಿದ್ದಾನೆ ಅಥವಾ ಬಚ್ಚಿಟ್ಟಿದ್ದಾನೆ ಎಂಬುದು ಅವರ ಗುಮಾನಿ. ‘ಹತ್ಯೆಗೈದ ಆಯುಧ ಸಿಕ್ಕಿದರೆ, ಕೊಲೆಗಾರ ಸಿಕ್ಕಿದಂತೆ. ಇದು ನಮ್ಮ ನಂಬಿಕೆ.’ ಅವಳ ಎದುರಿಗೆ ಕುರ್ಚಿ ಎಳೆದುಕೊಂಡು ಕುಳಿತು ಜಾಕ್ ನೂನನ್ ಹೇಳಿದ. ನಂತರ, ‘ಮನೆಯಲ್ಲಿಯೇ ಇದ್ದ ಯಾವುದಾದರೂ ವಸ್ತುವನ್ನೇ ಆಯುಧವನ್ನಾಗಿ ಬಳಸಿ ಹತ್ಯೆ ಮಾಡಿರಬಹುದೇ? ಇದ್ದರೆ, ಅಂಥಹದು ಯಾವ ವಸ್ತುವಿದ್ದಿರಬಹುದು ಮಿಸೆಸ್ ಮಲೋನಿ? ನೀವು ಒಮ್ಮೆ ನೋಡಿ ಹೇಳಬಹುದೇ? ಪೈಪ್ ರೆಂಚೋ, ದೊಡ್ಡ ಸ್ಪ್ಯಾನರ್ರೋ, ಲೋಹದ ಹೂದಾನಿಯೋ.. ಮತ್ತ್ಯಾವುದೋ ಇರಬಹುದು?’ ಎಂದು ಕೇಳಿದ.

ಅಂಥಹ ವಸ್ತುಗಳನ್ನು ತಾನು ನೋಡಿದ ಜ್ಞಾಪಕವಿಲ್ಲ, ಇದ್ದರೆ ಗರಾಜಿನಲ್ಲಿರಬಹುದೇನೋ ಎಂದಳು. ಶೋಧಕಾರ್ಯ ಮುಂದುವರೆಯಿತು. ಮನೆಯ ಸುತ್ತಮುತ್ತ ಮತ್ತು ಗಾರ್ಡನ್‍ನೋಳಗೆ ಪೋಲಿಸರು ತುಂಬಿದ್ದರು. ಅವರ ಹೆಜ್ಜೆಗಳ ಸಪ್ಪಳ ಮತ್ತು ಕಿಟಕಿಯ ಪರದೆಯೊಳಗಿಂದ ಆಗಿಂದಾಗ್ಗೆ ಒಳಗೆ ಬೀಳುವ ಟಾರ್ಚ್ ಬೆಳಕು ಅವರ ಇರುವನ್ನು ಸೂಚಿಸುತ್ತಿತ್ತು. ಗೋಡೆಯ ಮೇಲಿನ ಗಡಿಯಾರ 9 ಹೊಡೆಯಿತು. ಒಳಗೆ ಶೋಧಿಸುತ್ತಿದ್ದ ನಾಲ್ವರು ಪೋಲಿಸರಿಗೂ ಆಯಾಸವಾಗಿತ್ತು.

‘ಜಾಕ್, ನನಗೊಂದು ಡ್ರಿಂಕ್ ಕೊಡುವೆಯಾ?’

‘ಖಂಡಿತಾ ಮೇಡಂ. ಈ ವ್ಹಿಸ್ಕಿಯನ್ನೇ ಕೊಡಲೇ?’

‘ಹೌದು ಜಾಕ್. ಅದರಿಂದ ನನಗೊಂದಿಷ್ಟು ಸಮಧಾನ ಲಭಿಸುವುದೋ ನೋಡೋಣ. ಸಣ್ಣ ಡ್ರಿಂಕ್ ಸಾಕು.’ ಜಾಕ್ ಅವಳ ಕೈಗೆ ಡ್ರಿಂಕನ್ನು ಕೊಟ್ಟಾಗ, ‘ನೀವುಗಳೂ ಒಂದೊಂದು ಡ್ರಿಂಕ್ ತೆಗೆದುಕೊಂಡಿದ್ದರೆ ಚೆನ್ನಾಗಿತ್ತು. ನಿಮಗೂ ತುಂಬಾ ಆಯಾಸವಾಗಿದೆ…’ ಅವಳೆಂದಳು.

‘ನಾವು ಡ್ಯೂಟಿಯ ಮೇಲಿದ್ದಾಗ ಕುಡಿಯೋ ಹಾಗಿಲ್ಲ. ಆದರೂ, ಒಂದು ಡ್ರಿಂಕಿಂದ ಏನೂ ತೊಂದರೆ ಇಲ್ಲವೆಂದು ಕಾಣಿಸುತ್ತದೆ.’ ಎಂದ ಜಾಕ್.

ಎಲ್ಲರೂ ಬಂದು ಒಂದೊಂದು ಪೆಗ್ ವ್ಹಿಸ್ಕಿಯನ್ನು ಹಿಡಿದು, ಅವಳಿಗೆ ಸಂತೈಸುವ ಮಾತುಗಳನ್ನು ಹೇಳಲು ಪ್ರಯತ್ನಪಡುತ್ತಾ ಅವಳ ಸುತ್ತ ಮುಜುಗರಪಟ್ಟು ನಿಂತುಕೊಂಡರು. ಜಾಕ್ ನೂನನ್ ಹಾಗೇ ಅಡ್ಡಾಡುತ್ತಾ ಅಡುಗೆ ಮನೆಗೆ ಹೋದವನು ವಾಪಸ್ ಬಂದು, ‘ಮಿಸೆಸ್ ಮಲೋನಿ ನಿಮ್ಮ ಓವನ್ ಆನ್ ಆಗಿದ್ದು ಒಳಗೆ ಮಾಂಸ ಬೇಯುತ್ತಿರುವಂತೆ ಕಾಣಿಸುತ್ತದೆ.’ ಎಂದನು.

‘ಒಹ್ ದೇವರೇ.. ನಾನು ಮರೆತೇ ಬಿಟ್ಟಿದ್ದೆ!’

‘ಆಫ್ ಮಾಡಲೇ ಮಿಸೆಸ್ ಮಲೋನಿ.’

‘ಹಾಗೇ ಮಾಡು ಜಾಕ್. ತುಂಬಾ ಥ್ಯಾಂಕ್ಸ್.’ ಎಂದಳು ಮಿಸೆಸ್ ಮಲೋನಿ. ಅವಳ ಅಗಲವಾದ ಕಂಗಳು ತುಂಬಿದ್ದವು. ‘ಜಾಕ್, ನೀವೆಲ್ಲಾ ನನಗೆ ಮತ್ತೊಂದು ಉಪಕಾರವನ್ನು ಮಾಡುವಿರಾ?’

‘ಹೇಳಿ ಮಿಸೆಸ್ ಮಲೋನಿ, ನಮ್ಮಿಂದ ಸಾಧ್ಯವಾಗುವುದಾದರೆ ಖಂಡಿತಾ ಮಾಡೋಣ.’ ಎಂದ ಜಾಕ್.

‘ನೀವು ಇಲ್ಲಿ ಸೇರಿರುವವರೆಲ್ಲಾ ಹೆಚ್ಚುಕಮ್ಮಿ ಪ್ಯಾಟ್ರಿಕನ ಸ್ನೇಹಿತರು, ಸಹಧ್ಯೋಗಿಗಳೇ. ಅವನ ಕೊಲೆಗಾರನನ್ನು ಕಂಡುಹಿಡಿಯುವ ಕಾಯಕದಲ್ಲಿ ನಿಜವಾಗಿಯೂ ಆಯಾಸಗೊಂಡಿದ್ದೀರಾ. ರಾತ್ರಿ ಊಟದ ಹೊತ್ತು ಮೀರಿಹೋಗಿದೆ. ಖಂಡಿತಾ ನಿಮಗೆ ಹಸಿವಾಗಿದೆ. ನಿಮಗೆಲ್ಲಾ ಊಟವನ್ನೂ ಬಡಿಸದೆ ಕಳುಹಿಸಿದರೆ ಖಂಡಿತವಾಗಿಯೂ ಪ್ಯಾಟ್ರಿಕನ ಆತ್ಮಕ್ಕೆ ಶಾಂತಿ ಲಭಿಸಲಾರದು. ನೀವೆಲ್ಲಾ ಸೇರಿ ಓವನ್‍ನಲ್ಲಿನ ಆ ಕುರಿಯ ಕಾಲನ್ನು ಏಕೆ ತಿನ್ನಬಾರದು? ಅದು ಇಷ್ಟೊತ್ತಿಗೆ ಹದವಾಗಿ ಬೆಂದಿರುತ್ತದೆ.’

‘ಒಹ್, ಈಗ ಊಟದ ಬಗ್ಗೆ ಯೋಚಿಸುವಷ್ಟು ಪುರುಸೊತ್ತೇ ಇಲ್ಲ ಮಿಸೆಸ್ ಮಲೋನಿ, ಕ್ಷಮಿಸಿ.’ ಜಾಕ್ ನೂನನ್ ಹೇಳಿದ.

‘ದಯವಿಟ್ಟು ಬೇಡ ಎನ್ನಬೇಡಿ. ನಾನದನ್ನು ನಮ್ಮಿಬ್ಬರಿಗೆಂದೇ ಬೇಯಿಸಲು ಇಟ್ಟಿದ್ದೆ. ನೀವೇ ಹೇಳಿ. ಅವರೇ ಇಲ್ಲವೆಂದ ಮೇಲೆ ನಾನು ಒಬ್ಬಳೇ ಅದನ್ನು ಹೇಗೆ ತಿನ್ನಲಿ? ನನ್ನಿಂದ ಸಾಧ್ಯವೇ ಇಲ್ಲ. ನಿಮಗಾದರೆ, ಹಾಗಲ್ಲ. ಪ್ಲೀಜ್. ಊಟ ಮಾಡಿ ನೀವು ನಿಮ್ಮ ಕೆಲಸ ಮುಂದುವರೆಸಬಹುದಲ್ಲ?’ ಅವಳು ಗೋಗರೆದಳು. ಮೊದಮೊದಲು ಅವರು ಮುಜುಗರಪಟ್ಟರಾದರೂ ಅವರಿಗೆ ನಿಜವಾಗಲೂ ಹಸಿವಾಗಿತ್ತು. ಅಡುಗೆ ಮನೆಗೆ ಹೋಗಿ ತಾವೇ ಬಡಿಸಿಕೊಂಡು ಊಟ ಮಾಡುವಂತೆ ಮಿಸೆಸ್ ಮಲೋನಿ ಅವರನ್ನು ಬಲವಂತದಿಂದ ಕಳುಹಿಸಿದಳು. ಅವಳು ಹಜಾರದಲ್ಲೇ ಕುಳಿತುಕೊಂಡು ಅವರು ಬಾಯ್ತುಂಬಾ ಮಾಂಸವನ್ನು ಅಗಿಯುತ್ತಾ ಮೆಲು ಮಾತಿನಲ್ಲಿ ಮಾತನಾಡುವುದನ್ನು ಕೇಳತೊಡಗಿದಳು.

‘ಚಾರ್ಲಿ, ಮತ್ತಷ್ಟು ತಗೋ..’

‘ಹೇಯ್! ಸಾಕು, ಸಾಕು. ಪೂರ್ತಿ ಮುಗಿಸುವುದು ಬೇಡ.’

‘ಉಳಿಸುವುದು ಬೇಡವಂತೆ. ಮಿಸೆಸ್ ಮಲೋನಿಯೇ ಹೇಳಲಿಲ್ಲವೇ?’ ಎನ್ನುತ್ತಾ ಅವರು ಕುರಿಯ ಕಾಲನ್ನು ಬಿಡಿಸಿ ಚಪ್ಪರಿಸತೊಡಗಿದರು.

‘ಪಾಪ, ಪ್ಯಾಟ್ರಿಕನಿಗೆ ಗಟ್ಟಿಮುಟ್ಟಾದ ವಸ್ತುವಿನಲ್ಲೇ ಹೊಡೆದು ಸಾಯಿಸಿದ್ದಾರೆ.’

‘ಪ್ಯಾಟ್ರಿಕನ ತಲೆ ಬುರುಡೆಯ ಹಿಂಭಾಗ ದೊಡ್ಡ ಸುತ್ತಿಗೆಯಲ್ಲಿ ಬಲವಾಗಿ ಹೊಡೆದಂತೆ ಚೂರುಚೂರಾಗಿದೆ ಎಂದು ಡಾಕ್ಟರ್ ಹೇಳುತ್ತಿದ್ದರು.’

‘ಅಷ್ಟು ದೊಡ್ಡ ಸುತ್ತಿಗೆಯನ್ನೋ ಅಥವಾ ಮತ್ತ್ಯಾವುದೋ ಆಯುಧವನ್ನು ಕೊಲೆಗಾರ ಕೈಯಲ್ಲಿಡಿದು ಕೊಂಡು ಹೊರಗೆ ಹೋಗಿರಲಾರ. ಮನೆಯಲ್ಲೋ, ಹೊರಗೆಲ್ಲೋ ಬಿಸಾಕಿ ಹೋಗಿರಬೇಕು. ಅದನ್ನು ಕಂಡಿಡಿಯುವುದು ಅಷ್ಟೇನು ಕಷ್ಟವಾಗಲಾರದು. ನಮ್ಮ ಎದುರೇ ಇರಬೇಕು. ಏನಂತೀಯಾ ಜಾಕ್?’ ಯಾರೋ ದೊಡ್ಡದಾಗಿ ತೇಗುತ್ತಾ ಹೇಳಿದ.

ಹಜಾರದಲ್ಲಿ ಕುಳಿತ್ತಿದ್ದ ಮಿಸೆಸ್ ಮಲೋನಿಯ ತುಟಿಗಳು ವ್ಯಂಗ್ಯದಿಂದ ಬಿರಿದವು. .

*****

ಮೂಲ: ರೊಆಲ್ಡ್ ದಾಹ್ಲ್
ಅನುವಾದ: ಜೆ.ವಿ.ಕಾರ್ಲೊ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x