Facebook

ಅಚ್ಚೊತ್ತಿದಂಥ ಪ್ರೀತಿಗಾಗಿ ಕಂದುಬಣ್ಣದ ಕಣ್ಣಿನ ಟ್ಯಾಟೋ…..: ಪಿ.ಎಸ್. ಅಮರದೀಪ್.

Spread the love

ತುಂಬಾ ನಿಸ್ತೇಜವಾದವು ಕಣ್ಣುಗಳು. ರಣ ಬಿಸಿಲಿಗೋ, ಮನಸ್ಸು ಉಲ್ಲಾಸ ಕಳೆದುಕೊಂಡಿದ್ದಕ್ಕೋ ಗೊತ್ತಿಲ್ಲ. ಅಂತೂ ಕಣ್ಣುಗಳಲ್ಲಿ ಸೋತ ಭಾವ. ನೋಡುತ್ತಿದ್ದರೆ ಏನೋ ಚಿಂತೆಯಲ್ಲಿ ಮುಳುಗಿದನೇನೋ ಅನ್ನಬೇಕು. ಕಣ್ಣ ಕೆಳಗೆ ಕಪ್ಪು ಕಲೆ, ಚರ್ಮ ಸುಕ್ಕು, ತುಟ್ಟಿಯೂ ಕಪ್ಪಿಟ್ಟಂತೆ. ಸಿಗರೇಟು ಅತಿಯಾಗಿ ಸೇದುತ್ತಿದ್ದನಾ? ಅಥವಾ ಲೇಟ್ ನೈಟ್ ಪಾರ್ಟಿನಾ? ಅಳತೆ ಮೀರಿದ ಕುಡಿತವಾ? ನೇರವಾಗಿ ಕೇಳಿಬಿಡಲಾ? ಊಹೂಂ, ಕೇಳಿದರೆ ಅದಕ್ಕಿಂತ ದೊಡ್ಡ ಬೇಸರ ಮತ್ಯಾವುದು ಅವನಿಗಾಗದು. ಹೀಗೆ ಕಂಡಾಗಲೆಲ್ಲಾ “ಏನ್ಸಾರ್, ಯಾಕೋ ತುಂಬಾ ಸೊರಗಿದಿರಾ! ಹುಷಾರಿಲ್ವಾ?” ಅಂತ ಬೇರೆಯವರು ಕೇಳೋದು, “ಹಾಗೇನಿಲ್ಲ, ಚೂರು ಆರೋಗ್ಯ ಕೆಟ್ಟಿತ್ತು, ಈಗ ಪರವಾಗಿಲ್ಲ. ನೋಡಿ, ದಿನಾ ಬೆಳಿಗ್ಗೆ ಮುಕ್ಕಾಲು ಗಂಟೆ ವಾಕ್ ಮಾಡ್ತೀನಿ. ಹದಿನೈದಿಪ್ಪತ್ತು ನಿಮಿಷ ಉಸಿರಾಟ ಸರಾಗವಾಗುವಂತೆ ಕಪಾಲಬಾತಿ. ಎಣ್ಣೆ ಕಡಿಮೆ ಇರುವ ಊಟ, ಉಪ್ಪೂ ಕಡಿಮೆ. I am fit and fine. ಹೀಗೆ ಹೇಳುತ್ತಿದ್ದರೆ, ಚೂರು ವಾಸನೆ ಬರದೇ ಇರದು.

ಆಗಲೇ ಅವನಿಗೆ ಡಯಾಬಿಟಿಸ್ ಕಾಡುತ್ತಿದೆ. ವಯಸ್ಸು ನಲವತ್ತು ದಾಟಿದ ಕುರುಹು. ಮಕ್ಕಳಿನ್ನು ಚಿಕ್ಕವು, ಹೃದಯ ಸಂಭಂಧಿ ಖಾಯಿಲೆಯಾ? ಕೇಳಲು ಮುಜುಗರ. ಆದರೇನಂತೆ, ತೀರಾ ಖಾಸ್ ಆದ ಒಂಟಿ ಅಕ್ಷರದ ಗೆಳೆಯರು “ ಅದಕ್ಕೇ ಮಗಾ, ಲೈಫ್ನಾ ತುಂಬಾ ಸೀರಿಯಸ್ಸಾಗಿ ತಗೋಬಾರ್ದು. ಹಾಗಂತ, ನಾವೇನೋ ಇನ್ನೂ ಯಂಗ್ ಇದೀವಿ. ಈಗ್ಲೇ ನಮಗೆ ಬಿ.ಪಿ.ಶುಗರ್ರು ಬರಲ್ಲಾ ಬಿಡು ಅಂದ್ಕೊಂಡು ಯದ್ವಾ ತದ್ವಾ ಉರವಣಿಗೆಯಲ್ಲಿ ತಿರುಗಬಾರದು. ನೌಕರಿ ನಮ್ಮ ಆದ್ಯತೆ ಆದಷ್ಟೇ ಆರೋಗ್ಯ, ಕುಟುಂಬವೂ ನಮ್ಮ ನಿರ್ವಹಣೆಯನ್ನು ಅವಲಂಭಿಸಿರುತ್ತದೆ.” ಅನ್ನುವುದು ಸುಳ್ಳಲ್ಲ. ಆದರೆ, ಉಪದೇಶಗಳು ದಂಡಿಯಾಗಿ ಸಿಗುವಷ್ಟೇ ಸಲೀಸಾಗಿ ಸ್ವೀಕರಿಸುವ ಮನಸ್ಥಿತಿಯೂ ಪ್ರಾಯೋಗಿಕವಾಗಿ ಅನುಭವಿಸಿಯಾಗಿರುತ್ತಾದ್ದರಿಂದ ಹೂಂ ಅನ್ನದೇ ವಿಧಿಯಿಲ್ಲ. ಹೆಂಡತಿಯ ಕಡಿವಾಣ.
ಅಭ್ಯಾಸಗಳಿಗೆ ತಿಲಾಂಜಲಿ. ವೈದ್ಯರ ಸುಪರ್ದಿಯಲ್ಲಿ ಜೀವ. ಆಹಾ…..! ನಲವತ್ತರ ನಂತರದ ಮನುಷ್ಯ ಜೀವವೇ? ನಿನ್ನದಿನ್ನು ಪರಾವಲಂಭಿ ಬದುಕು ಅನ್ನಿಸಿಬಿಡುತ್ತದೆ.

ಕೆಲ ತಿಂಗಳ ಹಿಂದೆ ಗೊತ್ತಿರುವ, ಈಗತಾನೇ ಓದು ಮುಗಿಸಿದ ಹುಡುಗಿಯೊಬ್ಬಳು ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡು ಖುಷಿಪಟ್ಟು ಒಂದು ಸೆಲ್ಫಿ ತೆಗೆದುಕೊಂಡು ಫೇಸ್ಬುಕ್ಕಲ್ಲಿ ಹಾಕ್ಕೊಂಡಿದ್ದನ್ನು ನೋಡುತ್ತಿದ್ದೆ. ಇದ್ದಕ್ಕಿದ್ದಂತೆ ಮೊಬೈಲಿಲ್ಲದ ಕಾಲಮಾನದ ದಿನಗಳು ಕಣ್ಣಂಚಲ್ಲಿ ಹಾದು ಹೋದವು. ಪತ್ರಕ್ಕೆ ನಮ್ಮದೇ ಅಂತರಂಗದ ಜೀವ ತೇದು ಬಿಕ್ಕುತ್ತಿದ್ದ ಅಕ್ಷರಗಳಲ್ಲಿ ನಮ್ಮ ಇಡೀ ಗಂಟೆಗಳ ಮಾತುಗಳ ಸಾರವೆಲ್ಲಾ ತುಂಬಿರುತ್ತಿತ್ತು. ಆ ಪತ್ರವನ್ನು ಬರೆದಾದ ನಂತರದ ಫಜೀತಿ ಎಂದರೆ, ಯಾರಿಗೆ ಕೊಡುವುದು? ಹೇಗೆ ತಲುಪಿಸುವುದು? ಎಂದು. ಯಾರಿಗೆ ಅಂತಲೇ ಗೊತ್ತಿಲ್ಲದೇ ಒಂದು
ನವಿರಾದ ಪ್ರೇಮವನ್ನು, ಭಾವ ತುಂಬಿ, ಹೆಸರೇ ಇಲ್ಲದ ಪ್ರೇಯಸಿಗೆ ಬರೆವ ಪತ್ರವಿದೆಯಲ್ಲಾ? ಅದರಂತಹ ಮುದ ನೀಡುವ ಸಮಯ ಮತ್ತೆ ಮತ್ತೆ ಸಿಗುವುದಿಲ್ಲ. ಯಾರಿಗಾದರೂ ಯಾರಾದರೂ ಸರಿ, ಒಂದು ವಯಸ್ಸಿನ ಪ್ರೇಮ ನಿವೇದನೆ ಎಂದರೆ, ಅದರಲ್ಲಿ ಜೀವಮಾನದ ಯೌವನವೆಲ್ಲಾ ಹಂಗಂಗೇ ಹಸಿರಾಗೇ ಇರುತ್ತದೆ. ಅಂಕುರಿಸಿದ ಪ್ರೀತಿ ಆಯುಷ್ಯದುದ್ದಕ್ಕೂ ಅಚ್ಚು ಒತ್ತಿದಂತೆಯೇ ಸರಿ.

ನಾನೂ ಹೊರತಲ್ಲ ಅದಕ್ಕೆ. ಮೊದ ಮೊದಲು ಹುಟ್ಟಿದ ಸಾಲುಗಳಿಗೆ ಇಳಿಸಂಜೆಯ ಸ್ನೇಹಿತನ ಬಾಡಿಗೆ ರೂಮಿನ ಟೆರಾಸ್, ಕಾಲಲ್ಲಿ ಎಳೆದಾಡುತ್ತಿದ್ದ ಅಗ್ಗದ ಹವಾಯಿ ಚಪ್ಪಲಿ.
ರೆನಾಲ್ಡ್ಸ್ ಪೆನ್ನು, ಮತ್ತು ಆಗತಾನೇ ಓದು ಮುಗಿದು ನೋಟ್ ಬುಕ್ಕನ್ನು ಗುಜರಿಗೆ ತೂಕಕ್ಕೆ ಹಾಕದೇ ಉಳಿದ ಖಾಲಿ ಪುಟಗಳ ಕೊನೆ ಸಾಕ್ಷಿಯಾಗಿದ್ದವು. ಆಗ ಅನ್ನಿಸಿತ್ತು; ನಾನೊಂದು ಅಚ್ಚೆ ಹಾಕಿಸಿಕೊಳ್ಳಬೇಕೆಂದು. ಸರಿ, ಹಾಕಿಸಿಕೊಳ್ಳುತ್ತೇನೆಂದೇ ಅಂದುಕೊಂಡರೂ ಏನು ಹಾಕಿಸಿಕೊಳ್ಳುವುದು, ಅಮ್ಮ ಅಪ್ಪ, ತಂಗಿ, ಅಕ್ಕ, ದೇವರು, ಗೆಳೆಯ, ಗೆಳತಿ ಯಾರ ಹೆಸರು? ಗೊತ್ತಿಲ್ಲ. ಆದರೆ, ಆ ಸಮಯಕ್ಕೆ ಅಚ್ಚೆ ಹಾಕಿಸಿಕೊಳ್ಳಬೇಕೆಂಬ ಬಯಕೆ ಮಾತ್ರ ಸತ್ಯ. ಹಾಕಿಸಿಕೊಂಡ ನಂತರ ಎಲ್ಲರೂ ಕೇಳುವವರೇ, ಯಾರ ಹೆಸರಿದು? ಯಾಕಷ್ಟು ಪ್ರೀತಿ? ಅಂತೆಲ್ಲಾ. ಅವೆಕ್ಕಲ್ಲಾ ಸಕಾರಣಗಳನ್ನೂ ನೀಡಿ ವಿವರಿಸಬೇಕು. ಗೊತ್ತಿದ್ದವರು ಕೇಳದೇ ಇದ್ದರೂ ಅಭಿಮಾನ, ಪ್ರೀತಿ ತೋರಿಸಬಹುದು. ಇನ್ನು ಲವ್ವು, ಆಫೇರು ಅಂತೆಲ್ಲಾ ಹೆಸರಿಟ್ಟು ನೋಡಿದವರದು; “ಬಿಡಲೇ ಇನ್ನೂ ಜೀವ್ನಾ ಬೇಕಾದಂಗೈತಿ,
ದುಡುದ್ ಬೇಕಾದ್ದ್ ಸಾಧ್ಸಿ ನಿನ್ನ ಗೇಲಿ ಮಾಡೋರ ಮುಂದೆ ಸುಮ್ನೆ ಹಂಗೆ ನಿಂತು ನೋಡು, ಆಗ ಹೇಳು” ಅನ್ನೋ ಪಾಸಿಟಿವ್ ಸಲಹೆ ಕೂಡ.

ಸರಿ, ಬರಿಗಾಲಲ್ಲೇ ಮೈಲುಗಳ ಸುತ್ತಿ, ಹಸಿವನ್ನು ಅರಗಿಸಿಕೊಂಡು, ಕೆಲಸ, ದುಡಿಮೆ, ಹುದ್ದೆ, ಜವಾಬ್ದಾರಿ, ಹೆಸರು, ಮನೆಯನ್ನು, ಜೀವನ ವೆಚ್ಚವನ್ನು ಸರಿದೂಗಿಸುತ್ತಲೇ ಕಳೆದ ವರ್ಷಗಳ ಲೆಕ್ಕ ಅನುಭವದ ಮೂಟೆಯನ್ನು ಬೆನ್ನಿಗಿಟ್ಟಿರುತ್ತದೆ. ಹಾಗೆ ಆಯಿತು. ಅಷ್ಟರಲ್ಲಿ ನಾನು, ನನಗಿಷ್ಟವಾದದ್ದು, ಸಿನಿಮಾ, ಸಂಗೀತ, ಪುಸ್ತಕ, ಓದು, ಪತ್ರಿಕೆ, ಸ್ನೇಹಿತರು, ಅವರ ಮಧ್ಯೆ ಗಾಢ ಮತ್ತು ಅಂತರದ ಚೂರು ವ್ಯತ್ಯಾಸದ ಗೆಳೆತನ, ದುರುದ್ದೇಶಗಳಿಗೆ ಬಲಿಯಾಗಿ ಜಾಮೀನುದಾರನಾಗಿ ಮಾಡಿದ ಸಹಿ, ಕೋರ್ಟು, ಕೇಸು, ಹೀಗೆ. ನಂತರ ಬರೀ ಹುಡುಗಾಟದಿಂದಲೇ ಇದ್ದ ಬದುಕು, ಅಪ್ಪನ ನಿಧನದ ನಂತರ ಚೂರು ಚೂರೇ
ಗಂಭೀರವಾಗುತ್ತಾ ಹೋಯಿತು. ಇಪ್ಪತ್ತರಿಂದ ವಯಸ್ಸು ಇಮ್ಮಡಿಯಾಗುವತ್ತಲೇ ಜಾರುತ್ತಿತ್ತು. ಕನ್ನಡಿ ಮುಂದೆ ನಿಂತು ಬಾಚಿಕೊಳ್ಳುತ್ತಿದ್ದರೆ ಆಗಲೇ ಹಣೆ ಮೊದಲಿದ್ದ ಅಳತೆಗಿಂತ ದೊಡ್ಡದಾಗಿದೆ. ಇಷ್ಟಾಗುವ ಹೊತ್ತಿಗೆ ಮದುವೆ, ಮಕ್ಕಳು ಆಹಾ…..! ಜೀವನ ದಾಪುಗಾಲು. ನೌಕರಿ ಅನ್ನೋದೇನಿದೆಯಲ್ಲಾ? ಇಷ್ಟಪಟ್ಟು ಮಾಡುವಂತಾದ್ದು. ಕಷ್ಟಪಟ್ಟು ಮಾಡಿದೆ ಅಂದರೆ ಅವರಾಗಲೇ ನೌಕರಿ, ದುಡಿಮೆಯಿಂದ ಬೇಸತ್ತಿದ್ದಾರೆಂದೇ ಅರ್ಥ. ಈ ಮಧ್ಯೆ ನೌಕರಿಯಲ್ಲಿ ಕಂಟಕಗಳು ಮನುಷ್ಯರೂಪದಲ್ಲಿ ಆಗಾಗ ಎದುರಾಗುತ್ತಲೇ ಇದ್ದವು, ಈಗಲೂ ಇವೆ. ಎಡಗಾಲಿನಿಂದ ಒದ್ದು ಮುಂದೋಡುತ್ತಲೇ ಬಂದಿದ್ದೇನೆ.

ಆದರೆ, ಜೀವನವೆಂದರೆ ನೌಕರಿಗಾಗಿ, ಕುಟುಂಬಗಾಗಿ, ಹೆಣ್ತಿ, ಮಕ್ಳು, ಮನೆಗಾಗಿ ಥೇಕುವ ಮಧ್ಯೆ ನನ್ನ opitimistic ಆಗಿ ಇರಿಸಿದ್ದು ಓದು, ಪುಸ್ತಕಗಳು, ಬರಹ, ಸಿನಿಮಾ,
ಸಂಗೀತವೂ ಹೌದು. ಕಳೆದ ಜೂನ್ ಗೆ ನಾನಾಗಲೇ ನಲವತ್ತು ದಾಟಿದ ಚಾಳೀಸು. ಮಗನಿಗಾಗಲೇ ಹದಿನಾಲ್ಕು ವರ್ಷ, ನನಗಿನ್ನೂ ಇಪ್ಪತ್ತು ಚಿಲ್ಲರೆಯ ಮನಸ್ಸು. ಅರೆರೇ…… ಇಷ್ಟು
ವರ್ಷದಲ್ಲಿ ಒಮ್ಮೆಯಾದರೂ ಅಚ್ಚೆ ಹಾಕಿಸಿಕೊಳ್ಳುವ ಬಯಕೆ ಗರಿಗೆದರಿದ್ದಿಲ್ಲ. ಆದರೆ….ಮೊನ್ನೆ ಮೊನ್ನೆ ಆ ಹುಡುಗಿ ಸೆಲ್ಫಿ ನೋಡಿ ಕೈ ನೋಡಿಕೊಂಡೆ. ಅಚ್ಚೆ ಒತ್ತಿದಂಥ ಅರಳು ಮಾತಿನ ಹುಡುಗಿ, ಕೊಕ್ಕರಿಸಿ ನಕ್ಕರೆ ಮೂಡುವ ಗುಳಿ ಕೆನ್ನೆಯ ಹುಡುಗಿ, ಧೈರ್ಯ ತುಂಬಿದ ಹುಡುಗಿ, ಬಟ್ಟಲುಗಣ್ಣ ಹುಡುಗಿ ಕಂದು ಬಣ್ಣದ, ಅಮಲು ತುಂಬುವ ಬೊಗಸೆ ಕಂಗಳ ಹುಡುಗಿ, ಆಗಾಗ ನನ್ನನ್ನು “ಹುಂಬ” ಎನ್ನುತ್ತಿದ್ದ ಹುಡುಗಿ, ಹೃದಯದ ಮೇಲೆ ಅಕ್ಷರಶ: ಗುರುತು ಮೂಡಿಸಿದ ಮೂಡಿ ಹುಡುಗಿ ಅಬ್ಬಾ….. ಅದೇ ಹುಡುಗಿ ಹೆಸರು ಹಾಕಿಸಿಕೊಳ್ಳಲಾ?

ನೆನೆಸಿಕೊಂಡರೇನೇ ಕಣ್ಣರಳುತ್ತವೆ. ಮನಸು ಹಗುರಾಗುತ್ತದೆ. ಬಿಡಿ, ಆ ಕಂಗಳಷ್ಟೇ ಗಾಢವಾಗಿ ಕಾಡಿದ, ಕಾಪಾಡಿದ, ಜೊತೆಗೂಡಿದ, ಕೈ ಹಿಡಿದ, ನನ್ನೊಡನೆ ಹನಿಗೂಡಿದ ಕಣ್ಣುಗಳೂ ಇವೆ. ಅವಕ್ಕೆಲ್ಲಾ ಏನೆಂದು ಹೆಸರಿಟ್ಟರೂ ನನ್ನ ಜೀವನದ ಸುಖ, ದು:ಖ, ಸಂತೋಷ, ನಗು, ಪ್ರೀತಿ, ದ್ವೇಷ ಅವೆಲ್ಲವೂ ಒಳಗೊಂಡಿದ್ದು ಅವೇ ಕಣ್ಣುಗಳಲ್ಲಿ. ಯಾವ ಕಣ್ಣುಗಳನ್ನೂ ಉಪೇಕ್ಷೆ ಮಾಡಿದರೂ ನನ್ನ ತಪ್ಪಾಗುತ್ತದೆ. ಆದರೆ, ಅವೆಲ್ಲ ಕಣ್ಣುಗಳ ಮಧ್ಯೆಯೂ “ ಹುಂಬ” ಎನ್ನುವಂತೆ ನೋಡುತ್ತಿದ್ದ ಕಣ್ಣು ಮಾತ್ರ ತುಸು ಹೆಚ್ಚೇ ಕಾಡುತ್ತದೆನ್ನಿ……… ಆದ್ದರಿಂದ ನಾನು ಅಚ್ಚೆ ಹಾಕಿಸಿಕೊಂಡದ್ದೇ ಆದಲ್ಲಿ ಅದು ಕಣ್ಣಿನದು ಮಾತ್ರ. ವಯಸ್ಸು ಕಳೆದು ಹೋಗುತ್ತಿರುವುದನ್ನು ಹಳಿಯಬೇಕೋ ಮನಸ್ಸಿನ್ನೂ ಹರೆಯದಲ್ಲಿದ್ದುದಕ್ಕೆ ಖುಷಿಪಡಬೇಕೋ ? ನಗುವೇ ಜೀವನ ಎನ್ನುವ ಹಾಜರಿ ಪುಸ್ತಕದಲ್ಲಿ ದಿನವೂ ರುಜು ಹಾಕುತ್ತಿರುವ ನಮ್ಮ ನಮ್ಮಲ್ಲೇ ಕುಚ್ ಖಟ್ಟಾ, ಕುಚ್ ಮೀಠಾ…… ಲಗೇ ರಹೋ
….ದಿಲ್ ಸೆ……….

-ಪಿ.ಎಸ್. ಅಮರದೀಪ್.


 

You can leave a response, or trackback from your own site.

Leave a Reply