ಮುರಿದ ಟೊಂಗೆಯ ಚಿಗುರು ಪುಸ್ತಕಾವಲೋಕನ: ಸುರೇಶ ಎಲ್.ರಾಜಮಾನೆ

ಕವನಸಂಕಲನ; “ಮುರಿದ ಟೊಂಗೆಯ ಚಿಗುರು”
ಲೇಖಕರು; ಸೂಗುರೇಶ ಹಿರೇಮಠ(ಸುಹಿ)
ಪುಸ್ತಕಾವಲೋಕನ; ಸುರೇಶ ಎಲ್.ರಾಜಮಾನೆ.

ಚಿಗುರಿನ ಕವಿತೆಗಳೊಂದಿಗೆ ಮಾತಿಗಿಳಿದಾಗ….

ಇತ್ತೀಚಿಗೆ ತಾಂತ್ರಿಕ ಜಗತ್ತು ತನ್ನದೇ ಆದ ವೇಗ ಪಡೆದುಕೊಳ್ಳುತ್ತಿರುವದು ನಮ್ಮೆಲ್ಲರ ಕಣ್ಮುಂದಿರುವ ಸತ್ಯ. ಇದರ ಹಿನ್ನೆಲೆಯಲ್ಲಿ ಮುಖಪುಟದ ಮೂಲಕ ಸಾಹಿತ್ಯ ಲೋಕಕ್ಕೆ ಹೊಸ ಹೊಸ ಪ್ರತಿಭೆಗಳು ಲಗ್ಗೆ ಇಡುತ್ತಿವೆ ಎಲ್ಲರ ಮನಸನ್ನು ಆವರಿಸುತ್ತಿವೆ. ಹೀಗೆ ಅಂತರ್ಜಾಲದ ಮೂಲಕ ನನ್ನ ಅಂತರಂಗವನ್ನು ಸೇರಿಕೊಂಡ ಗೆಳೆಯ ಸೂಗುರೇಶ ಹಿರೇಮಠ ಅದರಾಚೆಗೂ ಭಾವನಾತ್ಮಕ ಬದುಕಿನ ದಾರಿಯಲಿ ಬದುಕಿರುವ ಒಬ್ಬ ಭಾವುಕ ಜೀವಿ. ಕವಿತೆಗಳಿಂದಲೇ ಹತ್ತಿರವಾದ ಸ್ನೇಹಿತ. ಇತ್ತಿಚೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದುಕೊಂಡು ಡಿಸೆಂಬರ್ 29 ರಂದು ಪ್ರಾಧಿಕಾರದಿಂದ ಬಿಡುಗಡೆಗೊಂಡು ಪುಸ್ತಕವಾಗಿ ಹೊರಬಂದ “ಮುರಿದ ಟೊಂಗೆಯ ಚಿಗುರು” ಮೊದಲ ಕವನ ಸಂಕಲನದಲ್ಲಿ ತಾನಿರುವಂತೆಯೇ ಕವಿತೆಗಳು ಕವಿತೆಗಳಂತೆಯೇ ತಾನು ಎಂಬ ಭಾವವನ್ನು ಈ ಕವನಸಂಕಲನದ ಕವಿತೆಗಳು ನಮ್ಮಲ್ಲಿ ಮೂಡಿಸುತ್ತವೆ. ಒಟ್ಟು ಐವತ್ತು ಕವಿತೆಗಳನ್ನೊಳಗೊಂಡ ಈ ಭಾವಗುಚ್ಚ ಭಾವನಾತ್ಮಕ ಬದುಕಿನ ಚಿತ್ರಣವನ್ನು ಕಣ್ಮುಂದೆ ತರುತ್ತದೆ..

ಪ್ರತಿ ಕವಿತೆಯೊಳಗೊಂದು ಕಥಾಲೋಕವಿರುವಂತೆ ಚಿತ್ರಣಗಳನ್ನು ನೀಡುವ ಕವಿಗೆಳೆಯ ಸೂಗುರೇಶನು ತನ್ನ ಮೊದಲ ಕವನ ಸಂಕಲನದಿಂದಲೇ ಸಾಹಿತ್ಯಲೋಕದಲ್ಲಿ ಗಟ್ಟಿಯಾಗಿ ನೆಲೆಯೂರುವ ಭರವಸೆಯನ್ನು ಮೂಡಿಸುತ್ತಾನೆ ಮತ್ತು ಸಮಾಜಮುಖಿಯಾಗಿ ಬದುಕುವ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಸಮಾಜದಲ್ಲಿಯ ಅಸಮಾನತೆ, ಜಾತಿರಾಜಕಾರಣ, ಭ್ರಷ್ಟಾಚಾರ, ಹಸಿವು ಶೋಷಣೆ, ಯೋಧನ ರೋಧನ, ರೈತನ ಆಕ್ರಂಧನ, ಅವ್ವನ ನಿಸ್ವಾರ್ಥತೆ, ನಿಸರ್ಗದ ಕಾಳಜಿ, ಅವಳ ಮೌನದೊಳಗಿನ ಪ್ರೇಮ, ಇತ್ತಿಚೆಗೆ ನಡೆದ ಹತ್ಯೆಗಳು ಈ ಎಲ್ಲದರ ಕುರಿತು ತನ್ನ ಕವಿತೆಗಳಲ್ಲಿ ಓದುಗನೊಂದಿಗೆ
ಮಾತಿಗಿಳಿದು ಮನಸಿಗಿಳಿದುಬಿಡುತ್ತಾನೆ.

ಬಿಸಿಲಿಗೆ ಮೈಯೊಡ್ಡಿ
ಕೈ ಬೊಬ್ಬೆ ಮಾಡಿಕೊಂಡೋರು
ಕಲ್ಲು ರಾಶಿಯ ಕಂಡು
ನಿಟ್ಟುಸಿರ ಬಿಟ್ಟೋರು.. ‘ಕಲ್ಲು ಒಡೆಯೋರು ನಾವು’
ಕವಿತೆಯ ಈ ಸಾಲುಗಳು ನಡೆವ ದಾರಿಗೆ ಕಲ್ಲು ಹಾಸುವ ಕಲ್ಲು ಒಡೆಯುವವರ ಬದುಕಿನ ಕುರಿತು ಬಿಂಬಿಸುತ್ತದೆ.

‘ಯುವಕರೆಲ್ಲ ಚಟಗಳ ದಾಸರಾದಂತೆ
ವಾಸಿಯಾಗದ ಖಾಯಿಲೆ ಹಚ್ಚಿಕೊಂಡಂತೆ
ಕನಸ ಕಂಡೆ ನಾನೊಂದು ಕನಸಕಂಡೆ’

‘ನನ್ನ ಕನಸು’ ಕವಿತೆಯಲಿ ವಾಸ್ತವವನ್ನೆ ಕನಸಿಗಿಳಿಸಿ ಇಂದಿನ ಪೀಳಿಗೆಯ ಯುವಕರ ಕುರಿತು ಯೋಚಿಸುವ ರೀತಿ ವಿಭಿನ್ನವಾಗಿ ಕಂಡುಬರುತ್ತದೆ. ಕನಸಲ್ಲ ನಿಜವೆನ್ನುವ ವಾಸ್ತವಕ್ಕೆ ಬಂದಾಗ ಕವಿ ನಾನವನಲ್ಲ ಎನ್ನುವದರ ಮೂಲಕ ಯುವಜನತೆಗೊಂದು ಸಂದೇಶವನ್ನು ಕವಿತೆಯ ಮೂಲಕ ರವಾನಿಸುತ್ತಾರೆ.

‘ಗಾಂಧೀ’ ಎನ್ನುವ ಕವಿತೆಯಲಿ ಗಾಂಧಿಯನ್ನು ವಿಭಿನ್ನವಾಗಿ ಇಷ್ಟ ಪಡುವ ರೀತಿಯನ್ನು ಚಿತ್ರಿಸುತ್ತಾರೆ. ಆತ್ಮ ವಿಶ್ವಾಸಕೆ ನಿಸ್ವಾರ್ಥವೊಂದಿರಬೇಕು, ತಾಯಿಯಂತೆ ಎಲ್ಲವನ್ನು ಪ್ರೀತಿಸಿಬಿಡಬೇಕು ಎಂಬುದನ್ನು ‘ಫಕೀರ’ ಅನ್ನೊ ಕವಿತೆಯಲಿ ಮನಮುಟ್ಟುವಂತೆ ಕೆತ್ತಿದ್ದಾರೆ. ‘ಮಲ್ಲಿಗೆ ಮಾತು’, ‘ಅವ್ವ ಹೇಳಿದ ಕಥೆ’, ‘ಪ್ರೀತಿಯ ಝರಿ’, ‘ಆದರ್ಶ’,ಚಂದ್ರ’ ಕವಿತೆಗಳು ನಿರಾಳವಾಗಿ ಯಾವುದೇ ಅಡೆತಡೆಯಿಲ್ಲದೇ ಓದಿಸಿಕೊಂಡು ಹೋಗುತ್ತವೆ.

’ಬನ್ನಿ ಮಾರೋಣ’, ‘ಶ್..ಸುಮ್ಮನಿರಿ’,‘ನಾನೂ ರೈತ’, ‘ಅವ್ವ ಮತ್ತು ಚಾ’, ‘ಬಯಲು’, ‘ಕೊರವರ ಮರಿಯಪ್ಪ’ ಅನ್ನೊ ಕವಿತೆಗಳಂತು ಕವನಸಂಕಲನದ ತೂಕವನ್ನು ಹೆಚ್ಚಿಸುವದರ ಜೊತೆಗೆ ಚಿಂತನೆಗೆ ಹಚ್ಚುತ್ತವೆ. ಕವಿತೆಯಲ್ಲಿ ಕಥೆಯಾಗುಳಿಯುವ ಕೊರವರ ಮರಿಯಪ್ಪ ಶ್ರಮಜೀವನದ ನಿಜವಾದ ನಿದರ್ಶನವಾಗಿ ಮತ್ತೆ ಮತ್ತೆ ಕಾಡುತ್ತಾನೆ, ಜೊತೆಗೆ ಅಪ್ಪ , ಅವ್ವನನ್ನು ಕವಿತೆಯಾಗಿಸಿದ ಪರಿ ತುಂಬಾ ಆಪ್ತವಾಗಿ ಹೃದಯ ತಟ್ಟುತ್ತದೆ. ಹೀಗೆ ಹಲವಾರು ಬಗೆಯಲ್ಲಿ ರಚನೆಗೊಂಡ ಕವಿತೆಗಳು ಓದುಗನನ್ನು ಒಮ್ಮೆ ಮೌನವಾಗಿಸಿದರೆ, ಮತ್ತೊಮ್ಮೆ ಆಕ್ರೋಶಭರಿತನನ್ನಾಗಿ ಮಾಡುತ್ತವೆ, ಮತ್ತೊಮ್ಮೆ ನಮ್ಮನ್ನು ವಿಸ್ತಾರವಾಗಿ ತೆರೆದುಕೊಳ್ಳುವಂತೆ ಮಾಡುತ್ತವೆ, ಮಗದೊಮ್ಮೆ ಮುರಿದು ಬಿದ್ದ ಟೊಂಗೆಯೂ ಚಿಗುರೊಡೆಯುವದನ್ನು ಕಂಡು ಬದುಕನ್ನು ಜಯಿಸಲು ಸಿದ್ಧಗೊಳಿಸುತ್ತವೆ.

ಒಟ್ಟಾರೆಯಾಗಿ ಮೊದಲ ಕವನಸಂಕಲನದ ಮೂಲಕ ಕಾವ್ಯ ಜಗತ್ತಿಗೆ ಅಧಿಕೃತವಾಗಿ ಕಾಲಿಟ್ಟ ಕವಿಗೆಳೆಯ ಸೂಗುರೇಶ ಹಿರೇಮಠ ಒಬ್ಬ ಭರವಸೆಯ ಕವಿಯಾಗಿ ನಮ್ಮೆದುರು ನಿಲ್ಲುತ್ತಾರೆ. ಹೀಗೆಯೇ ಅವನ ಸಾಹಿತ್ಯಿಕ ಹಾದಿಯು ಹಸಿವನ್ನು ಉಸಿರಾಡುವವರ ಪರವಾಗಿ ಕಸಿದುನ್ನುವವರ ವಿರುದ್ಧವಾಗಿ ಸಮಾಜದ ಓರೆ-ಓರೆ-ಓರೆಕೋರೆಕೋರೆಗಳನ್ನು ತಿದ್ದುವತ್ತ ಮತ್ತಷ್ಟು ದಿಟ್ಟತನದಿಂದ ಸಾಗಲಿ ಮತ್ತಷ್ಟು ಮತ್ತಷ್ಟು ಹದವಾದ ಕವಿತೆಗಳನ್ನು ಕಾವ್ಯಲೋಕಕ್ಕೆ ನೀಡಲಿ ಎಂದು ಆಶಿಸುತ್ತೇನೆ. ನೀವೂ ಗೆಳೆಯನ ಕವಿತೆಗಳೊಂದಿಗೆ ಮಾತಾಗಿ ಹಿತವಾಗಿ ಆಶೀರ್ವದಿಸಿ ಹರಸಿ ಎಂದು ಕೇಳಿಕೊಳ್ಳುತ್ತೇನೆ. “ಜೀವದಂತಹ ಸ್ನೇಹಕ್ಕೆ” ಎಂದು ಪುಸ್ತಕವನ್ನು ಕೈಗಿಟ್ಟು ಎದೆಗಿಳಿದುಹೋದ ಗೆಳೆಯನಿಗೆ ಅಭಿನಂಧನೆಗಳೊಂದಿಗೆ ಧನ್ಯವಾದಗಳು.

ಯಶಸ್ ಪ್ರಕಾಶನದ ಮೊದಲ ಕೃತಿ “ಮುರಿದ ಟೊಂಗೆಯ ಚಿಗುರು” ಕವನಸಂಕಲನದ ಪ್ರತಿಗಳಿಗಾಗಿ ಕವಿಗೆಳೆಯ ಸೂಗುರೇಶ ಹಿರೇಮಠ ರನ್ನು 9980454200 ಈ ನಂಬರಿನಲ್ಲಿ ಬೇಟಿಯಾಗಿ…

-ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.


ಪಂಜುವಿನಲ್ಲಿ ಕವಿತೆಗಳನ್ನು ಬರೆಯುತ್ತಾ ಬಂದಿರುವ ಲೇಖಕ ಸೂಗುರೇಶ ಹಿರೇಮಠರವರು ಚೊಚ್ಚಲ ಕೃತಿ ಮುರಿದ ಟೊಂಗೆಯ ಚಿಗುರು ವಿಗೆ ಪಂಜು ಬಳಗದ ಪರವಾಗಿ ಅಭಿನಂದನೆಗಳು. ಸಾಹಿತ್ಯ ಲೋಕದಲ್ಲಿ ಅವರು ತಮ್ಮದೇ ಛಾಪು ಮೂಡಿಸಲಿ ಎಂದು ಹಾರೈಸುವ ಪಂಜು ಬಳಗ..


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x