ಪ್ರೇಮಪತ್ರಗಳು: ನಳಿನ.ಡಿ., ಆರೀಫ ವಾಲೀಕಾರ

ನೋವು ನಿರಂತರ ಧ್ಯಾನದಂತೆ!

ಆ ಹೊತ್ತು ನೀನು ಸಿಗಬಾರದಿತ್ತೇನೋ, ನೀನು ಸಿಕ್ಕು ಖಾಲಿ ಬಿದ್ದಿದ್ದ ನನ್ನ ಮೊಬೈಕ್ ನೊಳಗೆ ಪೆಟ್ರೋಲ್ ತುಂಬಿಸಲು ಬೆನ್ನ ಹಿಂದೆ ಹತ್ತಿಸಿಕೊಂಡು ಹೋದಿ. ಅಗ ಬರೀ ನನ್ನ ಗಾಡಿಯ ಎದೆಯೊಳಗೆ ಪೆಟ್ರೋಲ್ ಮಾತ್ರ ತುಂಬಿಸಲಿಲ್ಲ, ನನ್ನ ಎದೆಯ ತುಂಬಾ ನೀನೇ ತುಂಬಿಕೊಂಡೆ. ಭಾಷೆ ಗೊತ್ತಿಲ್ಲದ ಅನಾಮಿಕ ಭಾಷೆಯಲ್ಲಿ ನಾನು ನಿನ್ನನ್ನು ಕಷ್ಟಪಟ್ಟು ಇಷ್ಟವಾದದ್ದನ್ನು ಹೇಳಿದಾಗ ನೀನು ’ಥೂ, ಹೋಗಾಚೆ’ ಅಂದಿದ್ದರೆ ಸಾಕಿತ್ತು, ನೀನು ಹಾಗೆ ಮಾಡುತ್ತೀಯೇನೋ ಅಂತ ನಾನು ಎಷ್ಟು ಸಲ ನನ್ನ ಹೆಜ್ಜೆಗಳು ನಿನ್ನೆಡೆಗೆ ಸರಾಗವಾಗಿ ಹರಿದು ಬರುವುದನ್ನು ತಡೆಗಟ್ಟಿ ಹಿಡಿದಿದ್ದೇನೆ ಗೊತ್ತಾ? ಗುಡ್ ಬೈ ಅಂಥ ನಿನಗೆ ಮೆಸೇಜ್ ಹಾಕಿದಾಗಲೆಲ್ಲಾ ನೀನು, ಅದ್ಯಾವುದೋ ಥೀಸಿಸ್ ವಿಷಯ ಅಂತ ಹೇಳಿಕೊಂಡು ಕರೆ ಮಾಡಿಬಿಟ್ಟಿರುತ್ತಿದ್ದೆ, ನಾನೋ ಪರಮಾನಂದದಿಂದ ನನ್ನ ಬೌದ್ಧಿಕ ಶಕ್ತಿಯನ್ನೇಲ್ಲಾ ಮೀರಿ ನಿನ್ನ ಭಾಷೆಯಲ್ಲಿ ವಿವರಿಸಲು ಪ್ರಯತ್ನಿಸುತ್ತಿದ್ದೆ.

ಮತ್ತೆ ಅದೇ ನಿನ್ನ ಕಣ್ಣುಗಳ ಹೊಳಪು, ತುಟಿಯ ಮಂದಹಾಸ, ಕೆನ್ನೆಯ ಕೆಂಪು, ಕುಣಿವ ಕೆಂಚು ಮುಂಗುರುಳು, ಆತುರದ ಉಸಿರಾಟಕ್ಕೆ ಬಡಿದುಕೊಳ್ಳುವ ಹೃದಯಕ್ಕೆ ಸ್ಪಂಧಿಸುವ ನಿನ್ನ ಕುಚಗಳು, ಮತ್ತೆ ಆಕರ್ಷಿಸುವ ನಿನ್ನ ಮೂಗಿನ ನತ್ತು. ಏಹ್, ಎಷ್ಟು ಹುಚ್ಚು ಹಿಡಿದಿತ್ತೋ, ಪ್ರೀತಿ ಕೊಟ್ಟಿತ್ತೊ ಮತ್ತದಕ್ಕಿಂತ ದುಪ್ಪಟ್ಟು ಆಗಿದೆ ಕಣೆ, ಹೃದಯ ಅಂತ ಅಂದುಕೊಳ್ಳುವ ಜಾಗದಲ್ಲೆಲ್ಲಾ ನೀನೇ ತುಂಬಿಕೊಂಡಿದ್ದೇ. ನಿನ್ನ ಜಾತಿಯವನೇ ಸಿಕ್ಕಿದ್ದಾನೆ, ತುಂಬಾ ಕ್ಲೋಸ್ ಆಗಿದ್ದೀವಿ, ನಾನು ಲಾಯಲ್ ಆಗಿರ್ಬೇಕು ಅಂಥ ತಿರುಗಿ ನೋಡದೆ ಹೋದಾಗ ಅದೇ ಹೃದಯದಲ್ಲಿದ್ದ ನಿನ್ನ ಭಾಗವನ್ನು ಕಿತ್ತೊಯ್ದೆ, ಈಗಲ್ಲಿ ಬರೀ ಖಾಲಿ ಗಾಯ, ಗಾಯವೆಂತಹುದು ಯಾವುದೇ ಮುಲಾಮು ಹಚ್ಚಲು ಆಗದು. ನೋಡುವವರಿಗೇಕೆ, ನನಗೆ ನಾನೇ ನಗೆಪಾಟಲು ಈಗ.

ನಾನು ನಿನ್ನಷ್ಟೇ ಜಾಣನಲ್ಲ. ನನಗೆ ಜಾತಿಯ ಕಟ್ಟಳೆಗಳು ದೊಡ್ಡದೆನಿಸಲಿಲ್ಲ, ಅಸಲು ನಿನ್ನ ಜಾತಿ ಹೆಣ್ಣೆಂದು ತಾನೇ ನಾನು ಪ್ರೀತಿಸಿದ್ದು.. ಅದಕ್ಕಿಂತ ಬೇರೆ ಇನ್ನೇನು ಇದ್ದರೂ ಗೌಣವೇ. ಪ್ರೇಮ ಅಫೀಮು ಅಂದುಕೊಳ್ಳಲಿಲ್ಲ, ಆದರೆ ಪ್ರೇಮವನ್ನು ನೀನು ಪಾಯ್ಸನ್ ಮಾಡಿಬಿಟ್ಟೆ. ನನ್ನೆಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿಬಿಟ್ಟೆ. ನಿನ್ನ ಕಡಲಿನ ನೋಟದಲಿ, ತುಂಟ ನಗೆ ಭೀರುತ್ತಾ ಬಾಳ್ವೆ ಸಾಗಿಸುವ ಛಲ ಕಳೆದು ಹೋಗಿಬಿಟ್ಟೆ. ನೀನು ಬರಿದು ಮಾಡಿದ ಎದೆಗೆ ಯಾರು ಬೇಕಾದರೂ ಸಿಕ್ಕಬಹುದು, ಹೆಣ್ಣಿಗೆ ಅಂಥ ಶಕ್ತಿ ಇದೆ. ಆಕೆ ಎಂಥಾ ನೋವನ್ನಾದರೂ ಪರಿಹರಿಸಿಬಿಡುತ್ತಾಳೆ. ಆದರೆ ನೀನು ಹೆಣ್ಣೇ ಅಲ್ಲ. ನೀನು ಕೊಟ್ಟ ನೋವು, ಹೃದಯದಲ್ಲೆಲ್ಲಾ ಮಾಯದ ಗಾಯದಂತೆ ನನ್ನ ಅಲುಗಾಡಿಸುತ್ತಿದೆ. ನಿತ್ತರೂ, ಕುಂತರೂ ರಕ್ತ ಸೋರುತ್ತಿದೆಯೇನೋ ಎಂಬಂತೆ ಹೃದಯದ ಸೋನೆ ಇದೆ. ಈ ಯಾತನೆ ಯಾವ ಶತ್ರುವಿಗೂ ಬೇಡ. ಪ್ರೀತಿ ಹುಟ್ಟಿತು ಎಂದು ಉಂಟು ಮಾಡಿದ ಸುಖ, ಸಾಂಗತ್ಯ, ನಗು, ಉಲ್ಲಾಸ, ಎಲ್ಲಕ್ಕಿಂತ ಘೋರ ಪ್ರೀತಿಸಿದವರೇ ಉಂಡ ಮನೆಗೆ ದ್ರೋಹ ಬಗೆಯುವಂತೆ ಬಿಟ್ಟು ಹೋಗುವುದು. ಅದಕ್ಕಿಲ್ಲ ಎಣೆ, ಹೊಣೆ. ಇದೆಲ್ಲಾ ನಿನಗೆ ಬೇಕಾ, ಅಂಥ ಅಂತರಾತ್ಮ ಉಲಿಯುತ್ತಲೇ ಇತ್ತು. ನಾನು ಎಂದಿಗೂ ಅದರ ಮಾತನ್ನು ಪರಿಶೀಲಿಸಲೇ ಇಲ್ಲ. ಈ ನೋವು ನಿರಂತರ….. ಈ ನಿರಂತರ ನೋವು ಕೊಟ್ಟ ನಿಮಗೆ ಧನ್ಯವಾದಗಳು.

-ನಳಿನ.ಡಿ.

 

 

 

 


ಚಳಿಯಲಿ ಜೊತೆಯಲಿ
ಬಿಸಿ ಬಿಸಿ ಕಾಫಿ ಕುಡಿತೀರಾ…!
ಗೆಳೆಯನ ಮದುವೆಗೆ ಎರಡು ದಿನ ಮುಂಚೆ ಹೋಗಿದ್ದೆ. ಚಳಿಗೆ ರಾತ್ರಿ ನಿದ್ರೆನೇ ಬರಲಿಲ್ಲ. ಹೊರಗೆ ಹಾಕಿದ್ದ ಕೆಂಡದ ಪಕ್ಕ ಬೆಚ್ಚಗೆ ಹೋಗಿ ಕುಳಿತುಕೊಂಡೆ. ‘ಬಿಸಿಬಿಸಿ ಕಾಫಿ ಕುಡಿತೀರಾ’ ಎಂದು ಮಧುರ ಕಂಠದಲ್ಲಿ ಯಾರೋ ಕೇಳಿದ ಹಾಗೆ ಆಯ್ತು, ಮೆಲ್ಲನೆ ಹಿಂದೆ ತಿರುಗಿ ನೋಡಿದ ಘಳಿಗೆಯಲ್ಲಿ ಮೂಕವಿಸ್ಮಿತನಾದೆ. ದೇವಲೋಕದಿಂದ ಊರ್ವಸಿಯ ಮಗಳು ನನಗಾಗಿ ಧರೆಗೆ ಇಳಿದು ಬಂದಿದ್ದಾಳೆ ಎಂದು ಅನಿಸಿದ್ದಂತೂ ಸುಳ್ಳಲ್ಲ. ಕಾಮನಬಿಲ್ಲಿನಂತಹ ಅವಳ ಹುಬ್ಬು, ರಸಗುಲ್ಲಾದಂತಿರುವ ಕೆನ್ನೆಗಳು, ಕೆಂಗುಲಾಬಿ ತುಟಿಗಳು, ನೀಲಿ ಕಣ್ಣುಗಳು ಅವಳನ್ನು ವರ್ಣಿಸಲು ಒಂದು ಕ್ಷಣ ನಾನು ಕವಿಯಾದೆ.

‘ಬಳೆಯ ಸದ್ದುಮಾಡಿ ಕಾಫಿ ಬೇಕಾ’ ಎಂದು ಇನ್ನೊಮ್ಮೆ ಕೇಳಿದಾಗ ನಾನು ಬೇಕು ಎಂಬಂತೆ ಗೋಣು ಹಾಕಿದೆ. ಕಾಫಿ ತಂದು ಕೊಟ್ಟು ಅವಳು ನನ್ನ ಜೊತೆಯಲ್ಲಿ ಕುಳಿತುಕೊಂಡಳು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿಯಾಗುತ್ತಿತ್ತು. ‘ಚಳಿಯಲಿ ಅವಳ ಜೊತೆಯಲಿ’ ತುಂಬಾ ಮಾತಾಡಿದ್ದೆವು, ನಮ್ಮಿಬ್ಬರ ನಡುವೆ ಗಾಢ ಸ್ನೇಹವಾಯಿತು. ಅದೇ ಕ್ರಮೇಣ ನನ್ನ ಎದೆಯಲ್ಲಿ ಪ್ರೀತಿಯ ಅಂಕುರಕ್ಕೆ ಕಾರಣವಾಯಿತು. ಮರುದಿನ ಸಂಗೀತದ ಕಾರ್ಯಕ್ರಮದಲ್ಲಿ ನೀನು ಹಾಡಿದ ಆ ಹಾಡಿನ ಗುನುಗು ಈ ಹೃದಯರಾಗದಲ್ಲಿ ಇನ್ನೂ ಜೀವಂತವಿದೆ. ಅರಶಿಣ ಕಾರ್ಯದಲ್ಲಿ ಕಾರ ಪುಡಿ ಮಿಕ್ಸ್ ಮಾಡಿ ನನ್ನ ಕೆನ್ನೆಗೆ ಹಚ್ಚಿ ನನ್ನ ಕೆನ್ನೆ ಉರಿಯುವಂತೆ ಮಾಡಿದ್ದು ನೀನೇ ಅಲ್ವಾ ಗೆಳತಿ. ನಾನು ಉರಿತವನ್ನು ತಾಳಲಾರದೆ ಪರದಾಡುತ್ತಿದ್ದಾಗ, ಐಸ್ ತಂದುಕೊಟ್ಟು ಕಿವಿ ಹಿಡಿದು ಸಾರಿ ಕೇಳಿದ್ದೆ.

ಮದುವೆಯ ದಿನ ನೀನು ಧರಿಸಿದ ಪಿಂಕ್ ಸಾರಿಯಲ್ಲಿ ದೇವತೆ ತರ ಕಾಣುತ್ತಿದ್ದೆ. ನಿನ್ನ ಆ ಮುಗುಳ್ನಗೆ ನನ್ನ ನಡು ನಿದ್ರೆಯಲ್ಲಿ ಬಡಿದೆಬ್ಬಿಸುತ್ತಿದೆ ಕಣೆ. ಮದುವೆ ಮುಗಿಸಿಕೊಂಡು ನೀನು ಹೊರಟು ನಿಂತಾಗ ಕಣ್ಣ ಹನಿಯೊಂದು ಜಾರಿ ಕೆನ್ನೆ ಒದ್ದೆ ಮಾಡಿತ್ತು. ಹೃದಯದಲ್ಲಿ ಪರ್ವತದಷ್ಟು ಪ್ರೀತಿ ಇಟ್ಟುಕೊಂಡು, ಏನು ಇಲ್ಲವೆಬಂತೆ ನಟಿಸಿ, ಮರೆಯಲ್ಲಿ ಕಣ್ಣೀರು ಹಾಕಿದ್ದು ನನಗೆ ಗೊತ್ತು ಗೆಳತಿ.
ಮತ್ತೆ ಸಿಗುವೆಯಾ ಹೇ ಹುಡಗಿ, ನಿನಗಾಗಿ ಬಕಪಕ್ಷಿಯ ಹಾಗೆ ಕಾಯುತಿರುವೆ…

ಇಂತಿ ನಿನ್ನ ಕಾಫಿ ಹುಡುಗ…..
ಎಆರ್

-ಆರೀಫ ವಾಲೀಕಾರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x