ಕೆರೆಗೆ ಹಾರ (ಭಾಗ 1): ಅಖಿಲೇಶ್ ಚಿಪ್ಪಳಿ


ಎಲ್ಲಾ ನಾಗರೀಕತೆಗಳು ಹುಟ್ಟಿ ವಿಕಾಸವಾಗಿದ್ದು ನದಿದಂಡೆಗುಂಟ ಎಂದು ಇತಿಹಾಸ ಹೇಳುತ್ತದೆ. ಗಾಳಿಯಲ್ಲಿರುವ ಆಮ್ಲಜನಕ ಪುಕ್ಕಟೆಯಾಗಿಯೇ ಸಿಗುತ್ತದೆ. ಅಂತೆಯೇ ನೀರು. ಗಾಳಿಯ ಲಭ್ಯತೆ ಇರುವಂತೆ ನೀರಿನ ಲಭ್ಯತೆ ಎಲ್ಲಾ ಸ್ಥಳಗಳಲ್ಲೂ ಇರುವುದಿಲ್ಲ. ಇಳಿಜಾರಿನತ್ತ ಸಾಗುವ ನೀರಿನ ಗುಣವೇ ಮನುಷ್ಯನನ್ನು ಸೆಳೆದು ತನ್ನ ದಂಡೆಗುಂಟ ಸಾಕಿಕೊಂಡಿತು. ಜೀವಜಲದ ಮಹತ್ವದ ಅರಿವು ಎಲ್ಲರಿಗೂ ಇರಬೇಕಿತ್ತು. ಅರಿವಿನ ಕೊರತೆ ನೀರಿನ ಅಗಾಧತೆಗಿಂತಲೂ ಹೆಚ್ಚಿದೆ. ತಗ್ಗಿನಲ್ಲಿ ನೀರು ಸಿಗುತ್ತದೆ ಎಂಬ ಅರಿವು ಮಾನವನಿಗೆ ಆದ ಕ್ಷಣ ಬಾವಿ-ಕೆರೆಗಳ ಹುಟ್ಟೂ ಆಯಿತು. ಒಂದು ಊರು ಆರೋಗ್ಯವಾಗಿ ಸಮೃದ್ಧತೆಯಿಂದ ಇರಬೇಕು ಎನ್ನುವುದು ಅಲ್ಲಿನ ಜಲಲಭ್ಯತೆಯ ಮೇಲೆ ಆಧಾರವಾಗಿರುತ್ತದೆ. ನೈಸರ್ಗಿಕ ಬರವನ್ನು ಎದುರಿಸುವ ತಾಕತ್ತು ಆಯಾ ವ್ಯಾಪ್ತಿಯ ಕೆರೆಗಳ ಸಾಮಥ್ರ್ಯವನ್ನು ಅವಲಂಬಿಸಿರುತ್ತದೆ. ಊರಿನ ಕೆರೆಗಳು, ಜಲಪಾತ್ರೆಗಳು ಸಾಕಷ್ಟು ದೊಡ್ಡದಿದ್ದರೆ, ಅಲ್ಲಿನ ಬದುಕೂ ನೆಮ್ಮದಿಯಿಂದ ಕೂಡಿರುತ್ತದೆ. ಪಶು-ಪಕ್ಷಿಗಳ ಸಂತತಿ ವೃದ್ಧಿಸಿ, ನೈಸರ್ಗಿಕ ಸೇವೆಗಳು ಹೇರಳವಾಗಿ ದೊರಕುತ್ತವೆ.
ಕಳೆದ ಏಪ್ರಿಲ್ ತಿಂಗಳ ಕಡೆಯ ವಾರದಲ್ಲಿ ಮಂಗಳೂರಿನ ಸರೋಜಕ್ಕ (ಚಿಲಿಯ ಕಲಿಗಳ) ಖ್ಯಾತಿಯ ಫೋನ್ ಮಾಡಿ, ಶಿರಸಿಯಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ರಮ ಪ್ರಾರಂಭವಾಗಿದೆ. ನೇತೃತ್ವವನ್ನು ಜಲತಜ್ಞ ಶಿವಾನಂದ ಹೆಗಡೆಯವರು ವಹಿಸಿಕೊಂಡಿದ್ದಾರೆ. ಸಾಗರದಲ್ಲೂ ಮಾಡಬಹುದಲ್ಲ ಎಂದರು. ಹೌದಲ್ಲ! ಯಾಕಾಗಬಾರದು? ಎನ್ನುವ ಧನಾತ್ಮಕ ಪ್ರಶ್ನೆಗಳನ್ನಿಟ್ಟುಕೊಂಡು, ಕಳವೆಯವರನ್ನೇ ಸಂಪರ್ಕಿಸಿದೆವು. ಕಳವೆಯವರು ಬಂದರು. ಒಂದು ತಾಸು ಮಾತನಾಡಿದರು. ಕೆರೆಯ ಹೂಳನ್ನು ತೆಗೆಯುವುದು ಸುಲಭ, ಆದರೆ ತಲೆಯ ಹೂಳನ್ನು ತೆಗೆಯುವ ಕೆಲಸವೂ ಆಗಬೇಕು. ಸುಮ್ಮನೆ ಚರ್ಚೆ ಬೇಡ, ಮಾತು ಮನೆ ಕೆಡಿಸಿತ್ತು. ಕೆಲಸ ಮಾಡಿ ಎಂದರು. ಆ ಕ್ಷಣದಲ್ಲೇ “ಸಾಗರ ತಾಲ್ಲೂಕು ಜೀವಜಲ ಕಾರ್ಯಪಡೆ” ಹುಟ್ಟಿಕೊಂಡಿತು. ಊರಿನ ಹಿರಿಯ ಸಾಹಿತಿ ಶ್ರೀ ನಾ.ಡಿಸೋಜ ಗೌರಾವಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ನೀಡಿದರು. ಬಹಳ ಉತ್ಸಾಹದಿಂದ ಕಾರ್ಯಪಡೆ ಕೆಲಸ ಶುರು ಮಾಡಿತು. ಸಾಗರದ ಆವಿನಹಳ್ಳಿ ರಸ್ತೆಯ ತಗ್ಗಿನಲ್ಲಿರುವ “ತಿಮ್ಮಣ್ಣ ನಾಯಕ” ಕೆರೆಯನ್ನು ಪ್ರಯೋಗಾರ್ಥವಾಗಿ ಎತ್ತಿಕೊಳ್ಳುವುದು ಎಂಬ ಮಾತು ಬಂತು. ಕೆರೆಯನ್ನು ಖುದ್ಧು ಹೋಗಿ ಕಾರ್ಯಪಡೆ ಪರಿಶೀಲಿಸಿತು. ಜನ್ನತ್ ಗಲ್ಲಿಯ ಹಾಗೂ ಶಿವಪ್ಪನಾಯಕ ನಗರದ ಅಷ್ಟೂ ಕೊಚ್ಚೆ ನೀರು ಕೆರೆಗೆ ಬಂದು ಸೇರುತ್ತಿತ್ತು. ತಿಮ್ಮಣ್ಣ ನಾಯಕನ ಕೆರೆ ಗಂಗೆಗಿಂತ ಮಲೀನವಾಗಿತ್ತು. ನೀರು ಖಾಲಿ ಮಾಡಿ, ಕೆಲಸ ಕೈಗೆತ್ತಿಕೊಳ್ಳುವುದು ಆಗಿನ ಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂಬ ತೀರ್ಮಾನ ಮಾಡಲಾಯಿತು.

ವಿವಾದದಿಂದಲೇ ಕೂಡಿದ ಗಣಪತಿ ಕೆರೆಯನ್ನು ಮುಟ್ಟುವ ಹಾಗಿಲ್ಲ. ಪಟ್ಟಣದ ಹತ್ತಿರದಲ್ಲೇ ಇರುವ ಯಾವುದಾದರೂ ಚಿಕ್ಕ ಕೆರೆಯನ್ನು ನೋಡುವ ಎಂದರು. ಚಿಪ್ಪಳಿ-ಲಿಂಗದಹಳ್ಳಿಯ ಬಂಗಾರಮ್ಮನ ಕೆರೆಗೆ ಭೇಟಿ ಮಾಡಿದೆವು. ಅಂತಹ ಬರಗಾಲದಲ್ಲೂ ಕೆರೆಯಲ್ಲಿ ನೀರಿತ್ತು. ನೀರು ಖಾಲಿಮಾಡಿ ಒಂದು ತಿಂಗಳಲ್ಲಿ ಕೆರೆಯ ಹೂಳೆತ್ತುವುದು ಇದಕ್ಕೆ ಅಂದಾಜು ವೆಚ್ಚದ ಪಟ್ಟಿ ತಯಾರು ಮಾಡುವುದು, ಹಿಟಾಚಿ, ಟಿಪ್ಪರ್‍ಗಳ ಲೆಕ್ಕ ಇತ್ಯಾದಿಗಳು ಅತ್ಯುತ್ಸಾಹದ ತರಾತುರಿಯಲ್ಲಿ ನಿರ್ಧರಿತವಾದವು. ಕೆರೆಯ ಉದ್ದಗಲಗಳನ್ನು ಅಳತಿಸಿ, ಇಷ್ಟು ಲೋಡು ಹೂಳು, ಲೋಡಿಗಿಂತಿಷ್ಟು, ಹಿಟಾಚಿಯ ಸಮಯಕ್ಕೆ ಇಷ್ಟು ಎಂದೆಲ್ಲಾ ಪಟ್ಟಿ ಮಾಡಿ ಐದು ಲಕ್ಷದ ಮುವತ್ತು ಸಾವಿರವಾಗುತ್ತದೆ ಎಂದರು. ಮೊದಲ ಮೀಟಿಂಗ್‍ನಲ್ಲೇ 25000 ಹಣ ಸಿಕ್ಕಿತ್ತು. ಮಾರನೇ ದಿನ ಇನ್ನೊಂದು ಇಪ್ಪತೈದು ಸಾವಿರ ವಾಗ್ದಾನ ಬಂತು. ಮತೈದು ಲಕ್ಷ ಒಟ್ಟು ಮಾಡುವುದು ಯಾವ ಲೆಕ್ಕ ಎಂದು ತೀರ್ಮಾನಿಸಿ, ಕೆರೆ ದಂಡೆಯೊಡೆದು ನೀರು ಖಾಲಿ ಮಾಡಿದೆವು.

ಅಸಂಖ್ಯ ಜಲಚರಗಳನ್ನು ಹೊತ್ತ ನೀರು ಕೆಳಗಿನ ಯೋಗೀಶ್ವರ ಕೆರೆಗೆ ಸೇರಿತು. ಚಲಿಸಲಾರದ ದೊಡ್ಡ ಮೀನುಗಳು ಸ್ಥಳೀಯರಿಗೆ ಆಹಾರವಾದವು. ಬೆಳ್ಳಕ್ಕಿ-ಕುಕ್ಕಗಳು ಅಳಿದುಳಿದ ಜೀವಿಗಳನ್ನು ಸ್ವಾಹ ಮಾಡಿದವು. ಕಾರ್ಯಪಡೆಯ ಕೆಲ ಸದಸ್ಯರೂ ಒಂದೆರೆಡು ದೊಡ್ಡ ಮೀನುಗಳನ್ನು ಹೊತ್ತರು. ಏಳು ಮೇ 2017ರ ಬೆಳಗ್ಗೆ ಸಾಗರದ ಉಪವಿಭಾಗಾಧಿಕಾರಿಗಳಾದ ಶ್ರೀ ನಾಗರಾಜ್ ಆರ್. ಶಿಂಗ್ರೇರ್ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಿವೈಎಸ್‍ಪಿ ಶ್ರೀ ಮಂಜುನಾಥ ಸಿ. ಕವರಿ ಜೊತೆಗಿದ್ದರು. ಶ್ರೀ ನಾ.ಡಿಸೋಜ ಅಧ್ಯಕ್ಷತೆ ವಹಿಸಿದು. ಇದೇ ಸಭೆಯಲ್ಲಿ ಉಪವಿಭಾಗಾಧಿಕಾರಿಗಳು ವೈಯಕ್ತಿಕವಾಗಿ 20 ಸಾವಿರ ನೀಡುವ ಭರವಸೆ ನೀಡಿ, ಅದನ್ನು ಪೂರೈಸಿದರು.

ಟಿಪ್ಪರ್‍ಗಳಿಗೆ ರಸ್ತೆ ಮಾಡಲು ಅನಿವಾರ್ಯವಾಗಿ ಕೆಲ ಗಿಡ-ಮರಗಳು ಪ್ರಾಣ ತೆರಬೇಕಾಯಿತು. ಕೆರೆದಂಡೆಯ ಮೇಲೆ ನಿಂತು ಹಿಟಾಚಿ ಕೆಲಸ ಶುರು ಮಾಡಿತು. 600 ವರ್ಷಗಳಿಂದ ಶೇಖರವಾದ ಹೂಳಿನ ಮೊದಲ ಬಕೇಟ್ ಟಿಪ್ಪರ್ ಸೇರಿತು. ಮೊದಲೇ ನಿಗದಿ ಮಾಡಿದ ಜಾಗದಲ್ಲಿ ಹೂಳನ್ನು ಸುರಿಯಲಾಯಿತು. ಇದೇ ಹೊತ್ತಿನಲ್ಲಿ ಸಾಗರ ತಾಲ್ಲೂಕಿನ ಹಿನ್ನೀರ ದಂಡೆಗಳಲ್ಲಿ ಅಕ್ರಮ ಮರಳು ದಂಧೆ ತನ್ನ ಉತ್ತುಂಗವನ್ನು ತಲುಪಿತ್ತು. ರಾತ್ರಿಯೆಲ್ಲಾ ಕೆಲಸ ಮಾಡುವ ಟಿಪ್ಪರ್‍ಗಳು ಹಗಲಿನಲ್ಲಿ ಲಭ್ಯವಿಲ್ಲ. ಟಿಪ್ಪರ್‍ಗಳ ಕೊರತೆಯನ್ನು ನೀಗಿಸಲು ಏನೆಲ್ಲಾ ಸರ್ಕಸ್ ಮಾಡಬೇಕಾಯಿತು. ಬರೀ ಉತ್ಸಾಹದಿಂದ ಕೆಲಸವಾಗುವುದಿಲ್ಲ ಎಂಬುದು ಎರಡನೇ ದಿನದಲ್ಲೇ ಮನವರಿಕೆ ಆಯಿತು. ಹಿಟಾಚಿಯ ರೇಟು ಕೊಂಚ ಹೆಚ್ಚು, ಗಂಟೆಗೆ ಬರೀ 2000 ಸಾವಿರ. ಹಿಟಾಚಿಯ ಸಮರ್ಪಕ ಸೇವೆಯನ್ನು ಪಡೆಯಬೇಕೆಂದರೆ, ಸಾಕಷ್ಟು ಪ್ರಮಾಣದ ಟಿಪ್ಪರ್‍ಗಳು ಇರಬೇಕು. ಒಂದಕ್ಕೊಂದು ತಾಳೆಯಾಗದೆ ಕೈ ಸುಟ್ಟುಕೊಳ್ಳುವ ಆತಂಕ ಶುರುವಾಯಿತು. ಆರುನೂರು ವರ್ಷಗಳ ತಲಾಂತರದಿಂದ ನೀರನ್ನು ಉಪಯೋಗಿಸುವುದೊಂದೇ ತಿಳಿದಿರುವ ವಂಶವಾಹಿನಿ ನಮ್ಮದು. ವೈಯಕ್ತಿಕವಾಗಿ ಯಾರೂ ಒಂದು ಚಮಚೆಯ ಹೂಳನ್ನು ತೆಗೆದ ಇತಿಹಾಸವಿಲ್ಲ. ಪ್ರಯೋಗಾರ್ಥವಾಗಿ ಮಾಡುತ್ತಿರುವ ನಮ್ಮ ಕೆಲಸದಲ್ಲಿನ ಲೋಪ-ದೋಷಗಳನ್ನು ಪಟ್ಟಿ ಮಾಡಿ ತಿದ್ದಿಕೊಳ್ಳುವುದೊಂದೆ ನಮ್ಮೆಗೆದುರು ಇರುವ ಏಕೈಕ ದಾರಿ.

ಮುಂದೆ ಹೋಗುವ ಮುನ್ನ, ಬಂಗಾರಮ್ಮ ಕೆರೆಯ ಭೂರಚನೆಯ ಪರಿಚಯ ಮಾಡಿಕೊಳ್ಳಬೇಕು. ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಅಗಾಧವಾದ ಗುಡ್ಡಗಾಡು. ಉತ್ತರ ದಿಕ್ಕಿನ ಕಡೆ ಮಾತ್ರ ತಗ್ಗು. ಟಿಪ್ಪರ್‍ಗಳ ಸಾಮಥ್ರ್ಯಕ್ಕೆ ತಕ್ಕಂತೆ ಹೂಳನ್ನು ತುಂಬಿದರೆ ಗುಡ್ಡವನ್ನು ಏರಿ ಹೋಗುವುದು ಟಿಪ್ಪರ್‍ಗಳಿಗೆ ಆಗಲಿಲ್ಲ. ಒಂದೊಂದು ಬಕೇಟ್ ಹೂಳು ಕಡಿಮೆ ಹಾಕಬೇಕು. ನಾವೆಣಿಸಿದಂತೆ ಕೆಲಸವಾಗುವುದಿಲ್ಲ. ಎರಡನೇ ದಿನವೇ ಹೊಸ ಆಪತ್ತೊಂದು ಎದುರಾಯಿತು. ಏರಿ ಹೋಗುತ್ತಿದ್ದ ಟಿಪ್ಪರ್‍ನ ಹಿಂಬಾಗಿಲು ಕಳಚಿ ಎಲ್ಲಾ ಹೂಳು ದಾರಿಯಲ್ಲೇ ಬಿತ್ತು. ಅದನ್ನು ತೆರವುಗೊಳಿಸದೇ ಕೆಲಸ ಮುಂದುವರೆಯಲಾರದು. ತೆರವುಗೊಳಿಸುವವರೆಗೆ ಟಿಪ್ಪರ್‍ಗಳಿಗೆ ರಜೆ ನೀಡಬೇಕು. ಕೆರೆಯ ದಂಡೆಯಿಂದ ತೆವಳುತ್ತಾ ಬರುವ ಹಿಟಾಚಿ ಐದಾರು ಟಿಪ್ಪರ್‍ಗಳ ಒಂದು ತಾಸನ್ನು ತಿಂದು ಹಾಕುತ್ತದೆ.

ಈ ಮಧ್ಯೆ ಮತ್ತೆರೆಡು ಸಭೆಗಳಾದವು. ಮೊದಲ ದಿನದ ಸಭೆಯ ಕೋರಂ ಇರಲಿಲ್ಲ. ಆರಂಭದ ಉತ್ಸಾಹ ಕಾಣಲಿಲ್ಲ. ಹಿಡಿದ ಕೆಲಸವನ್ನು ಬಿಡುವ ಹಾಗಿಲ್ಲ. ಕೆರೆಯ ಹತ್ತಿರದ ಕೆಲಸ ನೋಡಿಕೊಳ್ಳಲು ಊರಿನ ಯುವಕರು ಶ್ರಮಿಸುತ್ತಿದ್ದಾರೆ. ಜೊತೆಗೆ ಒಂದು ಲಕ್ಷದ ದೇಣಿಗೆ ನೀಡುವ ಭರವಸೆಯನ್ನೂ ನೀಡಿದ್ದಾರೆ. ಪೇಟೆಯಲ್ಲಿ ಹಣ ಒಟ್ಟು ಮಾಡಬೇಕು. ಇದಕ್ಕೆ ಒಬ್ಬಿಬ್ಬರು ಹೋದರೆ ಆಗುವ ಕೆಲಸವಲ್ಲ. ಎಂಟತ್ತು ಜನರಾದರೂ ಜೊತೆಗಿರಬೇಕು. ಅದೂ ಎಲ್ಲಾ ವೈಯಕ್ತಿಕ ಕೆಲಸಗಳನ್ನು ಪೂರೈಸಿ ನಿಗದಿತ ಸಮಯಕ್ಕೆ ಜೋಳಿಗೆ ಹಿಡಿಯಬೇಕು. ಬೆಳಗಿನ ಹೊತ್ತು ಹೋದರೆ ಬೋಣಿಗೆಯಾಗಿರುವುದಿಲ್ಲ. ಮಧ್ಯಾಹ್ನ ವ್ಯವಹಾರದ ಬ್ಯುಸಿ. ಸಂಜೆ ಹೋದರೆ ದೀಪ ಹಚ್ಚುವ ಸಮಯ. ಈ ವಿಷಯದಲ್ಲಿ ಲಕ್ಷ್ಮೀಯಷ್ಟು ಬುದ್ಧಿವಂತೆ ಸರಸ್ವತಿಯೂ ಅಲ್ಲ. ನೀರನ್ನು ಗಂಗೆಯಂತೆ ಪೂಜಿಸುವ ನಮಗೆ, ನೀರಿನ ಕೆಲಸಕ್ಕೆ ಹಣವೊದಗಿಸುವುದು ಇನಿತು ಕಷ್ಟವಿಲ್ಲ ಎಂಬ ಅಪಾರ ನಂಬುಗೆ. ಅತ್ತ ಕೆರೆಯ ಕೆಲಸ ನಡೆಯುತ್ತಲೇ ಇದೆ. ಹಣಕಾಸು ಒದಗಿಸುವ ಕಾಯಕ ವೇಗವಾಗಿ ನಡೆಯುತ್ತಿಲ್ಲ. ಹಿಟಾಚಿ-ಟಿಪ್ಪರ್‍ಗಳ ಡ್ರೈವರ್‍ಗಳಿಗೆ ಊಟ-ಬಾಟ ಕೊಡಬೇಕು. ಮಾಲೀಕರಿಗೆ ಹಣ. ಇದೆಲ್ಲಾ ಒತ್ತಡಗಳನ್ನೂ ಮೀರಿ ಕೆಲಸ ಮಾಡುವ ಪಡೆ ನಮ್ಮಲ್ಲಿಲ್ಲ. ಕಾರ್ಯಪಡೆ ಬಂಗಾರಮ್ಮನ ಕೆಲಸ ಪ್ರಾರಂಭಿಸಿದೆ ಎಂದು ಜಗಜ್ಜಾಹಿರು ಮಾಡಿದವರು ಎಂದಿನಂತಲೇ ಪತ್ರಕರ್ತರು. ಎಲ್ಲಾ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳಲ್ಲೂ ಹೂಳು ತೆಗೆಯುವ ಚಿತ್ರಗಳು ವರದಿ ಸಮೇತ ಪ್ರಕಟವಾದವು. ಜನರೂ ಓದಿದರು. ಇದು ಸಾಂಕ್ರಾಮಿಕವಾಗಿ ಹೊಸನಗರದ ದೊಂಬೆಕೊಪ್ಪದಲ್ಲಿ ಹೂಳು ತೆಗೆಯುತ್ತೇವೆ, ಬಂದು ಮಾರ್ಗದರ್ಶನ ಮಾಡಿ ಎಂದರು. ಅಲ್ಲೂ ಹೋಗಿ ಸಭೆ ಮಾಡಿ ಸ್ಥಳೀಯರ ತಲೆಯ ಹೂಳನ್ನು ತೆಗೆಯುವ ಪ್ರಯತ್ನ ನಡೆಯಿತು. ಒಣಗಿದ ಮೂರು ಕೆರೆಗಳ ಹೂಳನ್ನು ಅಲ್ಪ-ಸ್ವಲ್ಪ ತೆಗೆಯಲಾಯಿತು.

ಉದ್ಘಾಟನೆಯ ಮಾರನೇ ದಿನವೇ ವಾಟ್ಸಪ್ ಗುಂಪು ಚುರುಕಿನಿಂದ ಕೆಲಸ ಮಾಡಿತು. ಸಲಹೆಗಳು ಹರಿದು ಬಂದವು. ಮತ್ತೂ ಮತ್ತೂ ಮರೆಯಬಾರದ ಸೂತ್ರವೊಂದಿದೆ. ಅದೇ ಸೂತ್ರವನ್ನು ಗಮನಿಸುತ್ತಲೇ ಇರಬೇಕು. ಅದೇ ಉತ್ಸಾಹ-ಸಲಹೆ-ಸೂಚನೆಗಳು ಕೆರೆಯ ಹೂಳನ್ನು ಎತ್ತಲಾರವು ಎಂಬುದೇ ಈ ಸೂತ್ರ. ಬಂಗಾರಮ್ಮನ ಕೆರೆಯ 600 ವರ್ಷಗಳ ಹೂಳನ್ನು ತೆಗೆಯಲು ಹಿಟಾಚಿ-ಟಿಪ್ಪರ್‍ಗಳು ಬೇಕು. ಇವಕ್ಕೆ ಮತ್ತೆ ಹಣಕಾಸು ಬೇಕು. ಅಗಾಧ ಪ್ರಮಾಣದ ಹೂಳನ್ನು ಹೊರಸಾಗಿಸಲು ಅಷ್ಟೇ ಪ್ರಮಾಣದ ಹಣಕಾಸು ಬೇಕು. ಕೆಲಸ ಶುರು ಮಾಡಿದ ವಾರದಲ್ಲೇ ಇಂಜಿನಿಯರ್ ಹೇಳಿದ ಬಜೆಟ್ ಮೀರಿತು. ಸರ್ಕಾರಿ ಕೆಲಸವಾದರೆ ನಿಲ್ಲಿಸಬಹುದಿತ್ತು. ಆದರೆ ಇಡೀ ಸಮಾಜಕ್ಕೊಂದು ಸಂದೇಶ ನೀಡುವ ಮಹೋನ್ನತ ಉದ್ಧೇಶವಿರುವ ಕಾರ್ಯಪಡೆಯ ಕೆಲಸ ನಿಲ್ಲುವ ಹಾಗಿಲ್ಲ. ಮುಂದೇನು? ಮುಂದಿನ ವಾರ!!!


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x