ಹಸಿದವರು: ಪ್ರವೀಣಕುಮಾರ್. ಗೋಣಿ

praveen kumar

ಒಲೆಯ ಮೇಲೆ ಇಟ್ಟ ಅನ್ನ ಉಕ್ಕಿ ಗಂಜಿ ಎಲ್ಲ ಪಾತೆಲಿಯ ಮೈತುಂಬ ಇಳಿದು ಉರಿಯುತ್ತಿದ್ದ ಬೆಂಕಿಯನ್ನ ಚರ ಚರನೇ ಆರಿಸುತ್ತಲಿತ್ತು.  ಮಿಣುಕು ದೀಪದ ಮುಂದೆ ಓದುತ್ತ ಕುಳಿತಿದ್ದ ಮಗನನ್ನೇ ಬೆರಗು ಕಣ್ಣಿಂದ ನೋಡುತ್ತಾ ಕುಳಿತಿದ್ದ ಯಲ್ಲಿ ಎದ್ದು ಓಡಿ ಹೋಗಿ ಪಾತ್ರೆಯ ಮೇಲಿನ ಮುಚ್ಚಳಿಕೆಯನ್ನ ಆಚೆ ನೂಕಿದಳು.  ಏಳು ಮಗಾ ವೇಳ್ಯಾ ಬಾಳ್ ಆಯ್ತು ಅನ್ನಾನು ಆಗೆದೆ ಉಂಡು ಒದ್ತಾ ಕೂಡುವೆಂತೆ ಅಂತಾ ರಾತ್ರಿ ಊಟಕ್ಕೆ ಗಂಗಾಳ ಇಟ್ಲು.  ತೇಲಿ ಬರುತ್ತಿದ್ದ ನಿದ್ದೆಯನ್ನ ಸರಿಸಿ ಪರಮ ಚಕ್ಕಳುಮುಕ್ಕಳು ಹಾಕಿಕೊಂಡು ಕುಳಿತು  ಏನವ್ವ, ಅನ್ನಾ ಇದು ಎಷ್ಟ ದೊಡ್ಡ ದೊಡ್ಡ ಕಾಳದೆ ಅಂತಾ ಮೂಗು ಮುರಿಯುತ್ತಲೇ ಉಣ್ಣಲಾರಂಭಿಸಿದ.  ಸರಕಾರದೋರು ರೂಪಾಯಿಗೆ ಕೇಜಿ ಅಕ್ಕಿ ಕೊಡ್ತಾರಂತ ಅನ್ನ ಕಾಣೋವಂಗ ಆಗೆದೋ ಇಲ್ಲ ನಮಗೆ ನಲವತ್ತು ಐವತ್ತು ರೂಪಾಯಿದು ಅಕ್ಕಿ ತಂದು ಉಣ್ಣೋಕಾಗ್ತದೇನೋ ಅಂತಾ ಪರಮನಿಗೆ ಸಮಾಧಾನ ಹೇಳುತ್ತಾ ತಾನು ಉಂಡು ಎದ್ದಳು. 

ಹತ್ತು ಹೊಡೀತು ಇನ್ನು ಬಂದಿಲ್ಲಾ ಅದೇನು ಅಲಿತದೋ ಸುಡಗಾಡು ಒಳ್ಳೆ ನಾಯಿಗೆರೆ ಇರೋರಂಗೆ ಗಣ ಗಣಾ ತಿರುಗ್ತದೆನೋ ನಿಮ್ಮಪ್ಪ ಅಂತಾ ತನ್ನ ಗಂಡ ನಿಂಗಪ್ಪನನ್ನ ಶಪಿಸುತ್ತ ಮಲಗಲು ಹಾಸಿಗೆ ಅಣಿಮಾಡಿದಳು.  ಆಗಲೇ ನಿದ್ದೆಗೆ ಜಾರಿದ್ದ ಪರಮನ ತಲೆ ನೇವರಿಸುತ್ತ ಕೂಡಲು, ಗಂಡ ಏನಮ್ಮಿ ತಾಯಿ ಮಗಾ ಇಬ್ರುದು ಊಟ ಆಗಿ ಮಲಗೋ ತಯರಿಲಿ ಇದ್ದಂಗಿದೆ ಅಂತಾ ಹೇಳುತ್ತಾ ಕಾಲು ತೊಳೆದು ಊಟ ಬಡಿಸಿಕೊಂಡು ಕೂತ.  ಏನೋಪಾ ನೀ ಅಂತು ಹೊರಗೆ ತಿರುಗಿ ಬರ್ತಿಯಾ ನಮ್ಮ ತಾಪತ್ರಯಾ ಕೇಳೋ ವ್ಯವಧಾನ ಎಲ್ಲಿ ಬರಬೇಕು ಹೇಳು ಅಂತ ಮುಸುನಗುತ್ತಲೇ ಯಲ್ಲಿ ತನ್ನ ಗಂಡನ ಕಾಲೆಳೆವಂತೆ ಮಾತಾಡಿದಳು.  ಪರಮ ಪಿ.ಯು.ಸಿ. ಒಂದನೇ ವರ್ಷ ಮುಗಿತಾ ಬಂತು ಮುಂದಿನ ಸಾರಿ ಅದೇನೋ ಹೊರಗಡೆ ಕೋಚಿಂಗ್ ಎಲ್ಲ ಹೋಗಬೇಕಂತೆ ಶಾನೆ ದುಡ್ಡೆಲ್ಲ ಬೇಕಾಯ್ತದಂತೆ ಚೂರು ಮನಸಿನ ಮ್ಯಾಲೆ ತಗೋ ಅಂತಾ ಗಂಡನಿಗೆ ಹೇಳಿದಳು.  ಹ್ಞೂ ಕಣೆ ಮಗೀ ಓದೋದು ಬರೆಯೋದು ಅವನ ಮಾತು ನಡತೆ ನೋಡಿದ್ರೆ ನಂಗು ಓದಸ್ಬೇಕು ದೊಡ್ಡ ಡಾಕ್ಟರನ ಮಾಡಬೇಕು ಅಂತಾ ಆಸೆ ಇದೆ ಮಾಡ್ಸೋಣ ಬಿಡು ಇರೋನೆ ಒಬ್ಬ ಮಗಾ ದೇವರು ಅನುಕೂಲ ಮಾಡ್ತಾನೆ ಅಂತಾ ಯಲ್ಲಿಗೆ ಪರಮನ ಕುರಿತಾದ ಕಾಳಜಿಯನ್ನ ಮನಸು ಬಿಚ್ಚಿ ಹೇಳಿದ. 

ತಮ್ಮ ಮಗನ ಮೇಲಿನ ನಿರೀಕ್ಷೆಗಳನ್ನು, ಕನಸುಗಳನ್ನು ನನಸಾಗುವ ಘಳಿಗೆಯನ್ನ ಕಲ್ಪಿಸಿಕೊಳ್ಳುತ್ತಾ ಇಬ್ಬರು ನೆಲಕ್ಕೊರಗಿ ನಿದ್ದೆ ಹೋದರು.  ಅವರಿಬ್ಬರ ಆಸೆ ತುಂಬಿದ ಮುಖಗಳನ್ನ ಬೆಳಕಿಂಡಿಯಿಂದ ತೂರಿಬರುವ ಬೆಳದಿಂಗಳು ಹೊಳೆಯುವಂತೆ ಮಾಡುತ್ತಿತ್ತು.  ಮರುದಿನ ಇರೋ ಎರಡು ಮೂಟೆ ಹೆಸರನ್ನ ಮಾರಿಬಂದ ನಿಂಗ ಬಂದ ಹಣವನ್ನ ನೋಡಮ್ಮಿ ಇದ್ನಾ ತಗೊಂಡು ಆ ಮಗೀದು ಅದೇನೋ ಕೋಚಿಂಗ್ ಎಲ್ಲ ಮುಗಸ್ಕೊಳೊಕ್ ಹೇಳು, ಎಲ್ಲ ಮುಗ್ಸಿ ಶಾನೆದಾಗಿ ದೊಡ್ಡ ಡಾಕ್ಟರಾಗ್ಲಿ ಅಂತಾ ತನ್ನ ಹೆಂಡಗಿಯ ಕೈಗಿಟ್ಟ.  ಹಾಕಿಕೊಳ್ಳಲು ತರ ತರಹದ ಅರಿವೆ ಅಂಚಡಿ ಇಲ್ಲದಿದ್ದರೂ, ಮೆಟ್ಟಲು ಮಿಂಚುವ ಚಪ್ಪಲಿ ಇಲ್ಲದಿದ್ದರೂ ಬಡತನ ಹಸಿವು ಕಲಿಸುವ ಪಾಠವನ್ನ ಅರಿತಿದ್ದ ಪರಮ ಎಲ್ಲ ಸಂಕಷ್ಟಗಳು, ಅಡಚಣೆಗಳನ್ನ ಮೀರಿ ಚೆನ್ನಾಗಿ ಓದುತ್ತಿದ್ದ.  ಇರೋ ಒಂದೂವರಿ ಎಕರೆ ಜಮೀನೆ ಆ ಮೂರು ಜೀವಿಗಳ ಜೀವನದ ಮೂಲ ಆಧಾರ.  ನಿಂಗ ಅಲ್ಲಾ ಕಣೆ ಇರೋ ಇಷ್ಟೇ ಜಮೀನಾಗೆ ಏನ್ ಬೆಳೆದ್ರು ಬರೋ ಫಸಲು ನಮ್ಮ ಹೊಟ್ಟೆ ಮಾತ್ರ ತುಂಬಿಸ್ಬಹುದೇ ಹೊರತು ಮಗೀನ ಒದ್ಸೋಕೆ ದುಡ್ಡಾಗಲ್ವೆ ಅಂತಾ ಯಲ್ಲಿಗೆ ಹೇಳಿದ. 

ಗುಟುಕರಿಸುತ್ತಿದ್ದ ಚಹದ ಕಪ್ಪು ಕೆಳಗಿಟ್ಟ ಯಲ್ಲಿ ನೀ ಅನ್ನೋ ಮಾತು ದಿಟಾನೆ, ಆದರೆ ಆ ಮಾದೇವಪ್ಪ ಇದ್ದಾನಲ್ಲ ಅವನೇನೋ ಹೊಲಾನ ಈ ವರ್ಷ ಲಾವಣಿ ಹಾಕ್ತಾನೆ ಅಂತಾ ಆಡ್ಕೋಳ್ತಿದ್ರು ವಸಿ ಕೇಳಿ ನೋಡಿ ಅಂತಾ ತನ್ನ ಗಂಡನ ತಲೆಯಲ್ಲಿ ಹುಳ ಬಿಟ್ಲು.  ತಲೆಯಲ್ಲಿ ಹೆಜ್ಜೆ ಇಟ್ಟ ವಿಚಾರವನ್ನೇ ಆಲೋಚಿಸುತ್ತ ನಿಂಗ ಮಡಿವಾಳ ಮಾದೇವಪ್ಪನ ಮನೆಯೆಡೆಗೆ ಹೆಜ್ಜೆ ಹಾಕಿದ.  ಮನೆಯ ಮುಂಚಿ ಬಾಗಿಲ ಕಟ್ಟಿಯಮ್ಯಾಲೆ ಅಚ್ಚಬಿಳುಪಿನ ಒಳಂಗಿ ಧೋತುರ ಉಟ್ಟ ಮಡಿವಾಳ ಮಾದೇವಪ್ಪ ಎಲಿಯಡಿಕೆ ಮೆಲ್ಲುತ್ತ ಕೂತಿದ್ದವ, ನಿಂಗ ಬರುವುದನ್ನ ನೋಡಿ ಬಾರೋ ನಿಂಗಪ್ಪ ಎಂದು ಕೂಗಿ ತನ್ನ ಎಲೆಯಡಿಕೆ ಚೀಲವನ್ನ ಅವನ ಮುಂದಿಟ್ಟ.  ಚಾ ಕುಡದ ಎಲಿಯಡಿಕಿ ಹಾಕ್ಕೊಂಡಾ ಬಂದೇನ್ರಿ ಧಣ್ಯಾರ ಎಂದು ಪಾಠ ಕೇಳುವ ವಿದ್ಯಾರ್ಥಿಯಂತೆ ಮಾದೇವಪ್ಪನ ಎದುರು ಕುಳಿತ.  ಹೇಳಪಾ ನಿಂಗಪ್ಪ ಮತ್ತೇನ್ ಸುದ್ದಿ, ನಿನ್ ಮಗಾ ಹೆಂಗ್ ಚಲೋ ಓದಾಕತ್ತಾನೋ ಎಂದು ಮಾದೇವಪ್ಪ ಕೇಳಿದ, ಎಲ್ಲ ತಮ್ಮಂಥ ಹಿರೇರ್ ಆಶೀರ್ವಾದರೀ, ಚಲೋ ಓದಾಕತ್ತಾನ್ರಿ, ಅವ್ನ ಡಾಕ್ಟರ್ ಮಾಡ್ಬೇಕಂತ ಐತ್ರಿ ಹಂಗಾಗ್ ಸ್ವಲ್ಪ ರೊಕ್ಕಾ ಹೊಂದ್ಕಿ ವಿಚಾರ ನಡೆಸೆನಿ, ಮತ್ ನೀವ್ ಈ ಸಾರಿ ನಿಮ್ ಮೂರ ಎಕರೆ ಜಮೀನ ಲಾವಣಿ ಕೊಡ್ತೀರಂತ ತಿಳೀತ್ರಿ ಹಂಗಾಗಿ ವಿಚಾರಿಸ್ಕೊಂಡ ಹೋದ್ರಾತಂತ ಬಂದ್ಯಾರಿ ಅಂತ ಹೇಳಿದ. 

ಓಹ್ ಹೌದೇನ ಮೂರು ಎಕರೆ ಒಂದೂವರಿ ಲಕ್ಷಕ್ ಕೊಡಬೇಕಂತ ಅದಾ ಹೊಂದಿಸ್ಕೊಂಡ ಬಾ ನಿಂಗಪ್ಪ ಮಾತಾಡಿ ಮುಗ್ಸೋಣು ಎನ್ನುತ್ತಾ ಮಡಿವಾಳಜ್ಜ ಒಳಮನೆಯತ್ತ ನಡೆದ.  ಅಜ್ಜನ ಮಾತಿಗೆ ಹುರುಪುಗೊಂಡವನಂತೆ ನಿಂಗ ತನ್ನ ಮನೆ ಹಾದಿ ಹಿಡಿದ.  ಮನೆಗೆಲಸ ಮುಗಿಸಿ ತರಕಾರಿ ಸೋಸುತ್ತ ಕುಳಿತಿದ್ದ ಯಲ್ಲಿ ಎಮ್ಮಾಡಿದ್ರಿ? ಕೇಳಿದ್ರ್ಯಾ? ಏನಂದ್ರು ಅಂತ ಒಂದೇ ಸಮನೆ ಕೇಳಲು ಹತ್ತಿದಳು.  ಪಡಸಾಲೆಯ ಕಂಬಕ್ಕೊರಗಿ ಕೂತ ನಿಂಗ ಕೇಳಿದ್ನವೀ ಒಂದೂವರಿ ಲಕ್ಷ ಅಂತಾ ಹೇಳ್ತದೆ ಅಜ್ಜ ಎನ್ನುತ್ತಾ ಚಿಂತಿಸುವನಂತೆ ಸುಮ್ಮನಾದನು.  ಒಂದೂವರೆಯಾ ಬಾಳಾ ಆಯ್ತದಲ್ಲೋ ಯಜಮಾನ, ನನ್ನ ಹತ್ರಾಕಿರೋ ಬಂಗರ ಎಲ್ಲಾ ಬ್ಯಾಂಕಲ್ಲಿ ಅಡಾ ಇಟ್ಟು ಅವಗೆ ಹಣ ಕೊಟ್ಟ್ರಾಯ್ತು ಬಿಡು ಅಂತಾ ಸಮಾಧಾನಗೊಂಡ್ಲು.  ನಾವಾರು ಯಾತಕ್ಕೆ ಇಷ್ಟೆಲ್ಲಾ ಮಾಡೋದು ಹೇಳು?  ಇರೋ ಒಬ್ನೇ ಮಗ ಪರಮನಿಗೆ ತಾನೇ, ಅವ್ನು ಚೆಂತಾಕಿ ಓದಿ ದೊಡ್ಡ ಡಾಕ್ಟರ್ ಆದ್ರೆ ಸಾಕಲ್ವೆ ಅಂತಾ ಚಿಂತಿಸುತ್ತಾ ಕುಳಿತಿದ್ದ ನಿಂಗನಿಗು ಧ್ಯೆರ್ಯ ತುಂಬಿದಳು.  ಮರುದಿನಾನೆ ಇದ್ದಬದ್ದ ಒಡವೆಯಲ್ಲ ಗಿರವಿ ಇಟ್ಟು ಒಂದೂವರೆ ಲಕ್ಷ ಮಡಿವಾಳ ಮಾದೇವನ ಕೈಗಿಟ್ಟು ಹೊಲದ ಲಾವಣಿ ಪತ್ರ ಮಾಡಿಸೊಕೊಂಡು ನಿಂಗ ಮನೆಗೆ ಬಂದ.  ಈ ಸಾರಿ ಇರೋ ನಮ್ ಒಂದುವರೆ ಎಕರೆಲಿ ಈರುಳ್ಳಿ ಹಾಕೋಣ, ಮಡಿವಾಳಜ್ಜನ ಹೊಲಕ್ಕೆ ಬೀಟಿ ಹತ್ತಿ ಹಾಕೋಣ ಒಳ್ಳೆ ಬೆಳೆ ಬಂದು ಚಲೋ ರೇಟ್ ಆಯ್ತಂದ್ರೆ ಮಡಿವಾಳಪ್ಪನ ರೊಕ್ಕಾನು ಚುಕ್ತಾ ಅಗ್ತದೆ ನಮ್ ಪರಮನ ಓದಿಗೂ ಸಾಕಾಗುವಷ್ಟು ದುಡ್ಡಾಗ್ತದೆ ಅಂತಾ ಲೆಕ್ಕಾಚಾರ ಹಾಕುತ್ತ ಇಬ್ಬರೂ ಕುಳಿತರು.  ಜಂತಿಯ ಮ್ಯಾಲಿನ ಹಲ್ಲಿ ಲೊಚಗೊಟ್ಟಿತು ಇಬ್ಬರು ಒಳಗೊಳಗೆ ಸಂತೋಷದ ನಗೆ ಬೀರಿದರು. 

ಬೆಳಗಾಗುತಲೇ ಲಾವಣಿ ಪಡೆದ ಹೊಲ, ಇದ್ದ ಸ್ವಂತ ಜಮೀನನ್ನ ಹಸನಾಗಿಸಿ ಉಳುಮೆಗೆ ತಯಾರಿ ಮಾಡುವ ಆಲೋಚನೆಯೆ ನಿಂಗನ ತಲೆಯಲ್ಲಿ ಸುಳಿದಾಡುತ್ತಿತ್ತು.  ಯಲ್ಲಿ ಮಾಡಿದ ಚಹವನ್ನು ಗುಟುಕರಿಸುತ್ತಲೆ, ಅಲ್ಲಮ್ಮಿ ಹೊಲ ಏನೋ ಲಾವಣಿ ಪಡೆದಾಯಿತು ಹೊಲಕ್ಕೆ ಹರಗೋಕೆ, ಹಸನು ಮಾಡೋಕೆ, ಬೀಜ, ಗೊಬ್ಬರ, ಕ್ರಿಮಿನಾಶಕ, ಬಿತ್ತೊ ಆಳಿನ ಕೂಲಿ ಎಲ್ಲಾಕೂ ಇನ್ನೂ ಕಂಡಾಪಟಿನೇ ದುಡ್ಡು ಬೇಕಾಯ್ತದಲ್ಲೆ ಅಂತಾ ಎಲಿಯಡಿಕೆ ಚೀಲ ತೆರೆದ.  ನೀ ಒಬ್ಬಪ್ಪಾ… ನಮ್ದು ಅಂತಾ ಯಾವ ಸಾಲಾ ಅದೆ, ಊರಿನ ಸೊಸೈಟಿ ಒಳಗೆ ಕೃಷಿ ಸಾಲ ಸಿಗ್ತದೆ ಆಳಿಂದು ಅದಕ್ಕೆ ಇದಕ್ಕೆ ಅಂತಾ ಊರ ಗೌಡರ ಹತ್ರ ಸಾಲ ತಗೋಂಡ್ರಾಯ್ತು ಬೆಳೆ ಎಲ್ಲ ಬಂದಮ್ಯಾಕೆ ತೀರ್ಸೊಕೆ ಆಗ್ತದಲ್ರ್ಯಾ ಅಂತಾ ಚಿಂತಾಕ್ರಾಂತನಾದ ನಿಂಗನಿಗೆ ಸಮಾಧಾನ ಮಾಡಿದಳು.  ಸಾಲಸೋಲ ಮಾಡಿ ನಿಂಗ ಮತ್ತು ಯಲ್ಲಿ ಇಬ್ಬರು ಬೆವರು ಸುರಿಸಿ ಗದ್ದೆಯಲ್ಲಿ ಕೆಲಸ ಮಾಡಿ ಹಸನಾಗಿಸಿ ಆಸೆ ಕಂಗಳ ತುಂಬಿಕೊಂಡು ಬೀಜ ಬಿತ್ತಿದರು.  ಬಿತ್ತನೆ ಮುಗಿದ ಮೂರೇ ದಿನಕ್ಕೆ ಭೂಮಿಯೆಲ್ಲ ನೀರಾಡುವಂತೆ ಮಳೆ ಹುಯ್ಯಿತು.  ದುಡಿಯೋ ಜನ ನಾವು ನಮ್ಮ ಕಷ್ಟ ಕಣ್ಣೀರು ಅರಿಯೋ ಭಗವಂತ ನಮ್ಮ ಕೈಯಿ ಹಿಡಿಯದೇ ಇರ್ತಾನೆಯಾ ನೋಡು? ಅಂತಾ ಇಬ್ಬರು ಮೊಳಕೆಯೊಡೆದ ಸಸಿಗಳನ್ನೆ ನೋಡುತ್ತ ಹೊಲದ ತುಂಬ ಹರುಷದಿಂದ ಅಲೆದಾಡಿದರು.  ಇತ್ತ, ತನಗಾಗಿ ತನ್ನ ತಂದೆ ಅನುಭವಿಸುತ್ತಿರುವ ಪಡಿಪಾಟಲನ್ನು ನೋಡುತ್ತಿದ್ದ ಪರಮ ಒಂದು ಕ್ಷಣವನ್ನೂ ಹಾಳುಮಾಡದೆ ತನ್ನ ಓದಿನಲ್ಲಿ ತಲ್ಲೀನನಾಗಿದ್ದ.  ಬಿತ್ತಿದ್ದ ಬೀಜಗಳೆಲ್ಲ ಸಸಿಯಾಗಿ ನಳನಳಿಸುತ್ತಿರಲು ಯಲ್ಲಿ ಮತ್ತು ನಿಂಗನ ಮನಸಲ್ಲಿ ಕಟ್ಟಿದ್ದ ಕನಸು ನನಸಾಗುವ ಭಾವ ಊಟೆ ಹೊಡೆಯಿತು.  ಹುಟ್ಟಿದ್ದ ಸಸಿಗಳೆಲ್ಲ ಪೆÇಗಸ್ತಾಗಿ ಬೆಳೆಯಲಿ ಎಂದು ಕೈಸಾಲ ಮಾಡಿಕೊಂಡು ರಸಗೊಬ್ಬರವನ್ನೆಲ್ಲ ತಂದು ಹೊಲಕ್ಕೆ ಹಾಕಿದರು. 

ಎಲ್ಲವೂ ಅಂದುಕೊಂಡಂತೆ ಸಾಂಗವಾಗಿ ಸಾಗುತ್ತಿರುವ ಗಳಿಗೆಯಲ್ಲಿ ಕಾರ್ಮೋಡಗಳೆಲ್ಲ ಆಗಸದಿಂದ ಬರಿದಾಗಿ ಬೇಸಿಗೆ ಕಾಲದ ಸುಡು ಬಿಸಿಲು ಮೆರೆಯಲಾರಂಭಿಸುತ್ತದೆ.  ಆಸೆಯಿಂದ ನೂರೆಂಟು ಪರಿತಾಪಗಳನ್ನು ಅನುಭವಿಸಿ ಹೊಲದ ಉಳುಮೆ ಮಾಡಿದ್ದ ಇಬ್ಬರಲ್ಲೂ ವಿಷಾದದ ಕಾರ್ಮೋಡ ಕವಿಯುತ್ತದೆ.  ಕೈಕೊಡುತ್ತಿರುವ ಮಳೆಯನ್ನ, ಒಣಗಿ ಹೋಗುತ್ತಿರುವ ಬೆಳೆಯನ್ನ ನೋಡಿ ನಿಂಗನ ಜಂಗಾಬಲವೇ ಉಡುಗಿ ಹೋಗುತ್ತದೆ.  ಏನಮ್ಮಿ? ಮಗೀನ ಓದ್ಸೋಕೆ ಅಂತಾ ಇಷ್ಟೆಲ್ಲ ಕಷ್ಟಪಟ್ಟು ಬೆವರು ಸುರಿಸಿ ದುಡಿದರೂ ಹುಯ್ಯಬೇಕಿರೊ ಮಳೆನೇ ಹೀಗೆ ಕೈಕೊಟ್ರೆ ಏನ್ ಮಾಡಕಾಯ್ತದೆ ಹೇಳು ಅಂತಾ ನಿಂಗ ಸಂಕಟದಿಂದ ತಲೆಮೇಲೆ ಕೈಹೊತ್ತು ಕೂತು ಬಿಡುತ್ತಾನೆ.  ಬೆಳೆದ ಫಸಲೆಲ್ಲಾ ಒಣಗಿ ನೆಲಕ್ಕೆ ಒರಗಲಾರಂಭಿಸುತ್ತವೆ.  ಕಟ್ಟಿದ್ದ ಕನಸಿನ ಗೋಪುರ ಮೆಲ್ಲಗೆ ಉರುಳಲಾರಂಭಿಸುತ್ತದೆ.  ದಿವಿನಾದ ಬೆಳೆ ಬಂದು ನಾಲ್ಕು ದುಡ್ಡಾಯ್ತದೆ ಅಂತಾ ಹಗಲಿರುಳು ದುಡಿದ ನಿಂಗ ಮತ್ತು ಯಲ್ಲಿಯ ಶ್ರಮವೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ.  ಮಾಡಿದ್ದ ಸಾಲವೆಲ್ಲ ಬೆಟ್ಟದಂತೆ ಎದುರು ನಿಂತು ಕಾಡಲಾರಂಭಿಸುತ್ತದೆ.  ಆಗಬೇಕಿದ್ದ ಮಳೆ ಬಾರದಿದ್ದರಿಂದ ಸರಕಾರ ಇವರ ತಾಲೂಕನ್ನ ಬರಪೀಡಿತ ಪ್ರದೇಶ ಎಂದು ಘೋಷಿಸುತ್ತದೆ.  ಆತಂಕದಿಂದ ಕನಲಿದ ನಿಂಗ ಅಲ್ಲಿ ಇಲ್ಲಿ ಅಂತ ಶಾನೇನೆ ಸಾಲಾ ಆಗ್‍ಹೋಗೈತಿ ಯಲ್ಲಿ ಅಂತಾ ಕಣ್ಣೀರಿಡುತ್ತಾನೆ. 

ಸರಿದ ಮಳೆ ಮತ್ತೆ ಸುರಿದು ಫಸಲೆಲ್ಲ ಚೆನ್ನಾಗಿ ಬರಲಿ ಅಂತಾ ಯಲ್ಲಿ ಮನೆದೇವರಾದ ಮೈಲಾರನಿಗೆ ತುಪ್ಪದ ದೀಪ ಹಚ್ಚಿ, ವಾರಕ್ಕೆರಡು ದಿನ ಉಪವಾಸ ಮಾಡಿ ಮಳೆ ಸುರಿಸೋ ಮೈಲಾರಾ! ಅಂತಾ ಅಂಗಲಾಚುತ್ತಾಳೆ.  ಮೂಕದೇವರ ನೆತ್ತಿಯ ಮೇಲಿನ ಹೂವು ಕೆಳಗೆ ಬೀಳುತ್ತದೆ ಹೊರತು ಹನಿ ಮಳೆಯೂ ಜಿನಗುವುದಿಲ್ಲ.  ದುಃಖದಿಂದ ಕನಲಿಹೋದ ಗಂಡಹೆಂಡಿರಿಬ್ಬರೂ ಕಣ್ಣೀರಿನಲ್ಲೇ ದಿನ ದೂಡಲಾರಂಭಿಸುತ್ತಾರೆ.  ಇತ್ತ ಪರಮ ತನ್ನ ಪರಿಶ್ರಮದಿಂದ ಓದಿ ಎರಡನೇ ವರ್ಷದ ಪಿ.ಯು.ಸಿ. ಯನ್ನ ಹೆಚ್ಚು ಅಂಕ ಪಡೆದು ಪಾಸಾಗುತ್ತಾನೆ.  ಮಗನ ಯಶಸ್ಸನ್ನ ಕಂಡ ನಿಂಗ ಮತ್ತು ಯಲ್ಲಿ ಇಬ್ಬರು ಹರುಷದಿಂದ ಆನಂದಭಾಷ್ಪ ಸುರಿಸುತ್ತಾರೆ.  ಪಕ್ಕದ ಊರಿನ ಫಕ್ಕೀರಪ್ಪ ಬರದ ಬಾಧೆಯನ್ನ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಸತ್ತುಹೋಗುತ್ತಾನೆ.  ಆತನಿಗೆ ಸರಕಾರ ಪರಿಹಾರ ಧನ ಅಂತ ಎರಡು ಲಕ್ಷ ರೂಪಾಯಿಗಳನ್ನು ಕೊಡುತ್ತದೆ.  ಹೊರಗೆ ನಗುತ್ತಿರುವಂತಿದ್ದ ನಿಂಗ, ಅಳು ನುಂಗಿ ಒಳಗೊಳಗೆ ಸಾಲದ ಭಯದಿಂದ ನರಳಲಾರಂಭಿಸುತ್ತಾನೆ.  ಯವ್ವೋ, ಇವತ್ತು ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಬರ್ತದೆ ಅದ್ರಾಗೆ ಪಾಸಾದ್ರೆ ಡಾಕ್ಟರು ಒದಾಕೆ ಹೋಗೋದೆಯಾ ಅಂತಾ ಉತ್ಸಾಹದಿಂದ ಪರಮ ಹೇಳುತ್ತಾನೆ.  ಒಮ್ಮೆಲೇ ಮನೆಯೋಳಗೆ ಓಡಿಬಂದ ಮ್ಯಾದಾರ ಮಲ್ಲಪ್ಪ ಬೇ ಯಲ್ಲವಾ! ನಿನ್ನ ಯಜಮಾನ ಊರ ಹತ್ರದ ನಿಮ್ಮ ಹೊಲದ ಬೇವಿನ ಮರಕ್ಕೆ ನೇಣು ಹಾಕ್ಕೊಂಡುಬಿಟ್ಟವ್ನೆ ಅಂತಾ ಹೇಳಿ ಕುಸಿದು ಕುಂತುಬಿಟ್ಟ.  ಜೀವವೇ ಬಾಯಿಗೆ ಬಂದಂತೆ ಅರಚುತ್ತಾ ಓಡಿಹೋದ ತಾಯಿ ಮಗ ಇಬ್ಬರೂ ಹೋಗಿ ನೋಡಿದರೆ ನಿಂಗ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ನಾಲಿಗೆ ಹೊರ ಚಲ್ಲಿದ್ದ.  ತಾಯಿ ಮಗನ ಆಕ್ರಂದನ ಮುಗಿಲುಮುಟ್ಟಿತು.  ಬಿಳಿ ಮೋಡಗಳಿಂದ ನಳನಳಿಸುತ್ತಿದ್ದ ಆಗಸದಲ್ಲಿ ಕಾರ್ಮೋಡಗಳು ಹೆಪ್ಪಾಗಿ, ಕರಗಿ ಭೂಮಿ ಆಗಸವನ್ನೇ ಒಂದಾಗಿಸುವಂತೆ ಜೋರಾದ ಮಳೆ ಸುರಿಯಲಾರಂಭಿಸಿತು.  ಅಂಗಲಾಚಿ ಬೇಡಿದರೂ ಹನಿಯೊಡೆಯದ ಮಳೆ ನಿಂಗನ ಸಾವಿಗೆ ರೋಧಿಸುವಂತೆ ಹುಯ್ಯಲಾರಂಭಿಸಿತು.  ಬರದ ಬರೆಗೆ ತುತ್ತಾದ ಕುಟುಂಬದ ಹಿರಿಯ ಕೊಂಡಿ ಕಳಚಿಬಿದ್ದಿತ್ತು.  ಮರುದಿನದ ದಿನಪತ್ರಿಕೆಯ ಮುಖಪುಟದಲ್ಲಿ ಬೆಂದು ಅರಳಿ ರಾಜ್ಯಕ್ಕೆ ವೈದ್ಯ ಪ್ರವೇಶ ಪರೀಕ್ಷೆಯಲ್ಲಿ ಮೊದಲನೆಯ ರ್ಯಾಂಕ್ ಪಡೆದ ವಿದ್ಯಾರ್ಥಿ ಎಂದು ಪರಮನ ಭಾವಚಿತ್ರ ಬಂದಿತ್ತು.  ಅದರ ಬೆನ್ನಿನ ಪುಟದಲ್ಲೇ ಬರದಿಂದ ಸಾಲದ ಸಂಕೋಲೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದ ರೈತನೆಂದು ನಿಂಗನ ಭಾವಚಿತ್ರ ಬಂದಿತ್ತು.  ಸಂಕಟ ಮತು ಸಂತಸಗಳೆರಡೂ ಒಮ್ಮೆಲೆ ಬಂದು ಬಡೆದ ಹಸಿದವರ ಮನೆಯಲ್ಲಿ ಸ್ಮಶಾನ ಮೌನ ತಬ್ಬಿತು.

– ಪ್ರವೀಣಕುಮಾರ್. ಗೋಣಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x