ಸೀಕ್ರೆಟ್ ಡೈರಿ: ಪ್ರಸಾದ್ ಕೆ.

prasad-naik
ಕೊಡಚಾದ್ರಿಯ ಎತ್ತರ. ತಣ್ಣನೆ ಗಾಳಿ. ಹಾಗೆ ಸುಮ್ಮನೆ ತಲೆಯ ಒಂದಿಷ್ಟು ಮೇಲಿನಿಂದ ಹಾದುಹೋಗುತ್ತಿರುವ ಮೋಡಗಳ ಚಪ್ಪರ. ಇನ್ನೇನು ಒಂದು ಲಾಗ ಹಾಕಿದರೆ ಹಿಡಿಯಷ್ಟು ಮೋಡವನ್ನು ಬಾಚಿ ಜೇಬಿನಲ್ಲಿಡಬಹುದು ಎಂಬಂತೆ. ಮುಳುಗುತ್ತಿದ್ದ ಸೂರ್ಯ ಕಿತ್ತಳೆಯಂತೆ, ಕೆಂಡದ ಪಾಕದಲ್ಲದ್ದಿದ ನಾಣ್ಯದಂತೆ ಕಾಣುತ್ತಿದ್ದ. ಆದರೆ ಅವನ ವೃತ್ತಾಕಾರದ ಅಂಚುಗಳೋ ಕೈವಾರದಿಂದ ವೃತ್ತ ಕೊರೆದಷ್ಟು ಹರಿತ, ಅಷ್ಟು ಪರಿಪೂರ್ಣತೆ. ಅಷ್ಟು ಎತ್ತರದಲ್ಲಿ ಅವರಿಬ್ಬರೂ ಅಂದು ಇದ್ದರು. ಅವನು ಮತ್ತು ಅವಳು. 

ಕಳೆದೆರಡು ದಿನಗಳಿಂದ ಪರ್ವತವನ್ನು ಹತ್ತಿ, ಅಲ್ಲಲ್ಲಿ ನಿಂತು, ಅಲ್ಲಿಲ್ಲಿ ನಿದ್ದೆ ಹೊಡೆದು ತುದಿಯವರೆಗೆ ಬಂದಿದ್ದರು ಇವರಿಬ್ಬರೂ. ಈ ಪಯಣದಲ್ಲಿ ಅವರು ದಾರಿ ತಪ್ಪಿಹೋಗಿದ್ದೆಷ್ಟು ಬಾರಿ? ಆದರೂ ಈ ಪಯಣದಲ್ಲಿ ತಮ್ಮನ್ನು ತಾವು ಅವರು ಕಂಡುಕೊಂಡ ಬಗೆ, ಆದ ಮಿನಿ ಜ್ಞಾನೋದಯಗಳ ಸಂಖ್ಯೆಗಳನ್ನೆಲ್ಲಾ ಲೆಕ್ಕವಿಟ್ಟವರಾರು? ಅದು ಅವರಿಗೊಂದು ಸ್ವಾತಂತ್ರ್ಯದ, ವಿಮೋಚನೆಯ ಕ್ಷಣ. ಅವನು ಮೋಡಗಳನ್ನೇ ನೋಡುತ್ತಿದ್ದ. ಅವಳು ಅವನನ್ನೇ ನೋಡುತ್ತಿದ್ದಳು. ಇಬ್ಬರ ಮನದಲ್ಲೂ ಅದೆಷ್ಟೋ ಮಾತುಗಳು. ಆದರೆ ಅವುಗಳಿಗೋ ತುಟಿಸೋಕುವ ಭಾಗ್ಯವಿಲ್ಲ. ಅಲ್ಲಿದ್ದಿದ್ದು ಅದೆಂಥದ್ದೋ ಒಂದು ವಿಚಿತ್ರ ನೀರವ ಮೌನ.    

ಅಷ್ಟರಲ್ಲಿ ಅವನು ಆಕಸ್ಮಿಕವೆಂಬಂತೆ ಅವಳನ್ನು ನೋಡಿಬಿಟ್ಟ. ಅವಳು ಅವನ ಕಣ್ಣುಗಳಲ್ಲೇ ಕಳೆದುಹೋಗಿದ್ದಳು. ''ಏನು ಹಾಗೆ ನೋಡುತ್ತಿದ್ದೀಯಾ?'', ನಿದ್ದೆಯಲ್ಲಿದ್ದ ಮೋಡಗಳಿಗೆ ಎಚ್ಚರವಾಗುತ್ತದೆಯೆಂಬಂತೆ ಅವನು ಮೆತ್ತಗೆ ಹೇಳಿದ. ''ಏನನ್ನೂ ಮಾತಾಡಬೇಡ. ಸುಮ್ಮನೆ ನನ್ನನ್ನೇ ನೋಡು. ಮೋಡಗಳನ್ನು ನೋಡಿದಷ್ಟು ಸುಲಭವಲ್ಲ ನನ್ನನ್ನು ನೋಡುವುದು'', ಎಂದಳು ಅವಳು. ಅವಳ ಈ ಮಾತಿಗೆ ಅವನ ಅಹಂನ ಬಲೂನಿಗೆ ಎಲ್ಲೋ ಸೂಜಿ ಚುಚ್ಚಿದಂತಾಯಿತು. ಕೂಡಲೇ ಎಲ್ಲವನ್ನೂ ಬಿಟ್ಟು ಅವಳತ್ತ ಮುಖ ಮಾಡಿ ಕುಳಿತ. ಕೈಗಳನ್ನು ಗಲ್ಲಕ್ಕೆ ಆಧಾರವಾಗಿರಿಸಿಕೊಂಡು ಅವಳತ್ತಲೇ ನೋಡತೊಡಗಿದ. ಹೀಗೆ ಮಾಡೆಂದು ನೆಟ್ಟಗೆ ಹೇಳಿದರೆ ಮಾಡುತ್ತಿರಲಿಲ್ಲ. ಇವರ ಪುರುಷಾಹಂಕಾರಕ್ಕೆ ತಟ್ಟಬೇಕು. ಆಗಲೇ ಇವರೆಲ್ಲಾ ದಾರಿಗೆ ಬರೋದು. ಈ ಗಂಡಸರ ಜಾತಿಯೇ ಇಷ್ಟು… ಎಂದು ಮನದಲ್ಲೇ ಗೊಣಗಿದವಳು ತನ್ನ ಮಾತಿಗೆ ದಾರಿಗೆ ಬಂದ ಅವನನ್ನು ಕಂಡು ಒಳಗೊಳಗೇ ಖುಷಿಯಾದಳು. 

ನಿಮಿಷಗಳು ಕಳೆದಂತೆ ಅವಳಂದಿದ್ದು ಸತ್ಯ ಎಂಬುದು ಅವನಿಗೆ ಅರಿವಾಗತೊಡಗಿತ್ತು. ಅವಳ ಕಣ್ಣುಗಳನ್ನು ಅಷ್ಟು ಗಮನವಿಟ್ಟು ಅವನೆಂದೂ ನೋಡಿಯೇ ಇರಲಿಲ್ಲ. ಅವನ ಕಣ್ಣುಗಳೊಂದಿಗೆ ಬೆಸೆದಿದ್ದಾಗ  ದಾಕ್ಷಿಣ್ಯಕ್ಕೆ ಸೇರುತ್ತಿದ್ದಂತಿದ್ದ ಅವಳ ರೆಪ್ಪೆಗಳು, ತನ್ನ ಪಾಯಿಂಟ್ ಬ್ರಷ್ ನಿಂದಲೇ ತೀಡಿದಂತಿದ್ದ ಅವಳ ಐ-ಲೈನರ್, ಸುಮ್ಮನಿದ್ದಂತೆ ಕಂಡರೂ ಮರ್ಕಟಮನದಂತೆ ನಿಂತಲ್ಲೇ ನಿಲ್ಲಲಾರದೆ ಕುಣಿದಾಡುತ್ತಿದ್ದ ಅವಳ ಕಣ್ಣಬೊಂಬೆ, ಆ ಮಿಲಿಮೀಟರಿನ ಮೂಲೆಯಲ್ಲೇ 'ನಾನು ನಿನಗಾಗಿಯೇ ಮೀಸಲು' ಎಂಬಂತಿದ್ದ ಅದರ ಚಡಪಡಿಕೆ, ಆ ನೋಟದಲ್ಲಿದ್ದ ವ್ಯಾಮೋಹ… ಅಬ್ಬಬ್ಬಾ… ನೋಡನೋಡುತ್ತಿರುವಂತೆಯೇ ಅವನ ಕಣ್ಣ ಮೂಲೆಯಲ್ಲೊಂದು ಹನಿಯು ಇಳಿದುಹೋಗಿ ನೆಲದ ಗರಿಕೆಯನ್ನು ಒದ್ದೆ ಮಾಡಿತು. ಅವಳು ಏನನ್ನೋ ಹೇಳಲು ಬಾಯಿತೆರೆದಳು. ಬೇಡವೆಂಬಂತೆ ಅವನು ತನ್ನ ತೋರುಬೆರಳನ್ನು ಅವಳ ಕೆಂದುಟಿಗಳಿಗೆ ಅಡ್ಡ ಇಟ್ಟ. ಅವರಿಬ್ಬರೂ ಹಾಗೆಯೇ ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಕೊನೆಗೂ ಅವನೇ ಬಾಯ್ತೆರೆದ. ''ಇದು ಕನಸೋ ನನಸೋ ಗೊತ್ತಾಗ್ತಿಲ್ಲ. ನನ್ನನ್ನೊಮ್ಮೆ ಚಿವುಟಿಬಿಡು ಮಾರಾಯ್ತಿ'', ಎಂದ ಅವನು. ಅವಳು ತನ್ನ ಕಣ್ಣಬೊಂಬೆಯನ್ನು ಸ್ಥಾನಪಲ್ಲಟಗೊಳಿಸದೇನೇ ತನ್ನ ಕೈಯನ್ನು ಮೆತ್ತಗೆ ಅವನತ್ತ ಸರಿಸಿ ಚಿವುಟಿದಳು. 

''ಆಂವ್…'', ಅವನು ಹುಸಿಮುನಿಸಿನಿಂದ ಮೆತ್ತಗೆ ಕೂಗಿಟ್ಟ. ಅವಳ ನೀಳ ಸುಂದರ ಉಗುರು ಕೊಂಚ ಜೋರಾಗಿಯೇ ಚಿವುಟಿತ್ತು. ಅವನ ದೃಷ್ಟಿಯು ಈಗ ಅವಳ ಕಣ್ಣಿನಿಂದ ಬಿದ್ದುಹೋಗಿ ಸೀದಾ ನೋವಿನ ಜಾಗಕ್ಕೆ ಬಂದು ಕುಳಿತಿತ್ತು. ಅವನ ಪೆದ್ದುತನವನ್ನು ಕಂಡು ಅವಳು ಗೊಳ್ಳನೆ ನಕ್ಕಳು. 

**********

''ಆಂವ್…'', ತಕ್ಷಣ ನನಗೆ ಎಚ್ಚರವಾಯಿತು. 
ಕೈಗೆ ಏನೋ ಕಡಿದಂತೆ! ನಿದ್ದೆಯ ಅಮಲನ್ನೇ ಹೊತ್ತುಕೊಂಡಿದ್ದ ಕಣ್ಣುಗಳನ್ನು ಮೆಲ್ಲಗೆ ತೆರೆದು ಏನೆಂದು ನೋಡಿದರೆ ಸೊಳ್ಳೆಯೊಂದು ತನ್ನ ಕೈಯ ಮೇಲೆ ಕುಳಿತು ವಾರಾಂತ್ಯದಂದು ಬಾರಿನಲ್ಲಿ ಐಪಿಎಲ್ ಪಂದ್ಯವನ್ನು ನೋಡುತ್ತಾ ಹಾಯಾಗಿ ಬಿಯರ್ ಕುಡಿಯುತ್ತಿರುವಂತೆ ರಕ್ತ ಹೀರುತ್ತಿದೆ. ''ಶಿಟ್…'', ಎನ್ನುತ್ತಾ ಅದರತ್ತ ನಾನು ಕೈಬೀಸಿದೆ. ಅದು ಮತ್ತೆಲ್ಲೋ ಹಾರಿತು. ಅಷ್ಟಕ್ಕೂ ನಿದ್ದೆಯ ಅಮಲಿನಲ್ಲಿದ್ದಿದ್ದು ನಾನು. ಆ ಸೊಳ್ಳೆಯಲ್ಲವಲ್ಲಾ!

ಈ ಮಧ್ಯದಲ್ಲೇ ನನಗೆ ತಕ್ಷಣ ಅರಿವಾಯಿತು. ಅವಳೂ ನನ್ನ ಪಕ್ಕದಲ್ಲೇ ಮಲಗಿದ್ದಳು. ನಾನು ಸೊಳ್ಳೆಯೊಂದಿಗೆ ಸೆಣಸಾಡುವಾಗ ಅವಳು ತನ್ನ ಕನಸಲ್ಲಿ ಇನ್ನೇನು ಮಾಡಿದಳೋ, ಒಟ್ಟಾರೆಯಾಗಿ ಈಗ ಮಗ್ಗುಲು ಬದಲಿಸಿ ನನ್ನನ್ನು ತಲೆದಿಂಬಿನಂತೆ ತಬ್ಬಿ ಹಿಡಿದು ತನ್ನತ್ತ ಎಳೆಯಲು ಪ್ರಯತ್ನಿಸುತ್ತಾ ಮಲಗಿದಳು. ಅಸಲಿಗೆ ಗಾಳಿಗೂ ಜಾಗವಿಲ್ಲದಿದ್ದ ನಮ್ಮ ಸಾಮೀಪ್ಯವನ್ನು ಕಂಡು ನನಗೇ ಖುಷಿ. ಇನ್ನು ನನ್ನ ತುಟಿಗಳೋ ಅವಳ ಬಿಸಿಯುಸಿರಿನಿಂದ ತನ್ನಷ್ಟಕ್ಕೇ ಪುಳಕಗೊಳ್ಳುತ್ತಿದ್ದವು. ಹಣೆಯಿಂದ ಇಳಿದ ಕೂದಲೊಂದು ಅವಳ ಮೂಗಿನ ಮೇಲೆ ಉದಾಸೀನದಿಂದ ಬಿದ್ದುಕೊಂಡು ಆಗೊಮ್ಮೆ ಈಗೊಮ್ಮೆ ಫ್ಯಾನಿನ ಗಾಳಿಗೆ ನನ್ನ ಮೂಗನ್ನು ಸವರುತ್ತಿದ್ದುದನ್ನೂ ನಾನು ನೋಡಿದೆ. ಕೈಬೆರಳಿನಿಂದ ಅದನ್ನೆತ್ತಿ ಹಿಂದೆಲ್ಲೋ ಅವಳ ಕೇಶರಾಶಿಯಲ್ಲೇ ಅಡಗಿಸಿಡಬಹುದಿತ್ತು. ಆದರೆ ಈಗ ನಾನು ಕೊಂಚ ಅಲುಗಾಡಿದರೂ ಅವಳಿಗೆ ಎಚ್ಚರವಾಗುತ್ತದೆ. ಹೀಗಾಗಿ ನಾನೇ ಸ್ವತಃ ತುಟಿಯನ್ನು ವಿಚಿತ್ರವಾಗಿ ತಿರುಚಿ ಅದರತ್ತ ಮೆಲ್ಲಗೆ ಗಾಳಿ ತೂರಿದೆ. ಕೂದಲು ಕೊಂಚ ಎಡಕ್ಕೆ ಹೋಗಿ ಅಲ್ಲೇ ತೂಕಡಿಸಿತು. ಅದು ಮತ್ತೆ ಈ ಕಡೆ ಬರೋದಿಲ್ಲ ಅಂತಲ್ಲ. ಆದರೆ ಅದ್ಯಕ್ಕಂತೂ ಅದನ್ನು ನಾನು ದೂರವಿಟ್ಟಿದ್ದೆ. 

ಮಧ್ಯಾಹ್ನದ ಊಟ ಮುಗಿಸಿ ಪರಸ್ಪರರ ಬಿಸಿಯಪ್ಪುಗೆಯಲ್ಲಿ ಮಲಗಿದ ನಾವುಗಳು ಸಂಜೆಯ ನಾಲ್ಕಾದರೂ ಎದ್ದಿರಲಿಲ್ಲ. ಆದರೆ ತನಗಂಟಿಕೊಂಡು ಮುದ್ದುಗೊಂಬೆಯಂತೆ ಮಲಗಿದ್ದ ಅವಳನ್ನು ಕಂಡು ಎಬ್ಬಿಸುವ ಮನಸಾಗಲಿಲ್ಲ ನನಗೆ. ಜೀವನವು ಇದ್ಯಾವ ತಿರುವಿನಲ್ಲಿ ನನ್ನನ್ನು ತಂದು ನಿಲ್ಲಿಸಿತ್ತು? ಇಂಥಾ ಭಾವನೆಗಳನ್ನೆಲ್ಲಾ ಇನ್ಯಾರೂ ಹಿಂದೆಂದೂ ನನ್ನಲ್ಲಿ ಮೂಡಿಸಿರಲಿಲ್ಲ. ಹೀಗಾಗಿ ಇವೆಲ್ಲವೂ ನಿಜಕ್ಕೂ ನಡೆಯುತ್ತಿದೆಯೋ ಅಥವಾ ಒಂದು ಸುಂದರ ಸ್ವಪ್ನವೋ ಎಂಬುದನ್ನು ಲೆಕ್ಕಹಾಕುತ್ತಾ ಸುಮ್ಮನೆ ಅವಳನ್ನು, ಅವಳ ಸುಖನಿದ್ದೆಯನ್ನು ನೋಡುತ್ತಲೇ ಇದ್ದೆ. ಆಗಲೇ ನನಗೆ ಆ ಕನಸಿನ ನೆನಪಾಯಿತು. ನಾನು ಅವಳಿಗೆ ಇದು ಕನಸೋ, ನನಸೋ ಅಂತ ಕೇಳಿ ಚಿವುಟಲು ಹೇಳಿದ್ದು, ನನಗೆ ನೋವಾಗಿದ್ದು, ಆಗ ನನಗೆ ಎಚ್ಚರವಾಗಿದ್ದು… ಇವುಗಳೆಲ್ಲಾ! ಅದೊಂದು ಸ್ವಪ್ನ ಎಂದೆನಿಸಿ ಈ ಬಾರಿ ಒಂದು ಕ್ಷಣ ನನಗೇ ನಗು ಬಂದುಬಿಟ್ಟಿತು.     
ಅವಳನ್ನು ನನ್ನತ್ತ ಮತ್ತಷ್ಟು ಹತ್ತಿರ ಎಳೆದುಕೊಂಡ ನಾನು ನನ್ನ ತಲೆಯನ್ನು ಅವಳ ಎದೆಗಳಲ್ಲಿ ಹುದುಗಿಸಿ ಹಾಗೇ ಮಲಗಿಬಿಟ್ಟೆ. ಶಾಂತವಾಗಿದ್ದ ಅವಳ ಎದೆಬಡಿತವು ನನ್ನೆದೆಯ ಕದವನ್ನು ಮೆತ್ತಗೆ ತಟ್ಟಿದಂತಾಗುತ್ತಿತ್ತು. ಢಬ್ ಢಭ್… ಢಬ್ ಢಬ್… ಢಬ್ ಢಬ್…

**********

ಢಬ್ ಢಭ್… ಢಬ್ ಢಬ್… ಢಬ್ ಢಬ್…
 ಹೊರಗೆ ಕುಂಭದ್ರೋಣ ಮಳೆ. ನಾನು ಬೆಚ್ಚಗೆ ಮನೆಯಲ್ಲಿ ಕುಳಿತುಕೊಂಡು ಕಾಫಿ ಹೀರುತ್ತಾ ಪುಸ್ತಕವೊಂದನ್ನು ಓದುತ್ತಿದ್ದೆ. ಹೀಗಿರುವಾಗ ಯಾರೋ ಜೋರಾಗಿ ಬಾಗಿಲು ತಟ್ಟುತ್ತಿದ್ದರು. ಆ ಜಡಿಮಳೆಯಲ್ಲೂ ಕದತಟ್ಟುವ ಸದ್ದು ಅಷ್ಟು ಜೋರಾಗಿ ಕೇಳುತ್ತಿದೆಯೆಂದರೆ ಅದೆಷ್ಟು ಬಲವಾಗಿ ಬಡಿಯುತ್ತಿರಬಹುದು ಬಾಗಿಲಾಚೆಗಿರುವವರು! ಢಬ್ ಢಭ್… ಢಬ್ ಢಬ್… ಢಬ್ ಢಬ್… 
ಪಕ್ಕದ ಮೇಜಿನ ಮೇಲಿಟ್ಟಿದ್ದ ಹೇರ್ ಬ್ಯಾಂಡನ್ನು ಎತ್ತಿಕೊಂಡ ನಾನು ನನ್ನ ಕೂದಲನ್ನು ಮೇಲಕ್ಕೆ ಕಟ್ಟಿಕೊಂಡೆ. ಯಾರಾದರೂ ಪರಿಚಿತರು ಬಂದಿದ್ದರೆ ಸ್ವಲ್ಪವಾದರೂ ಮಟ್ಟಸವಾಗಿ ಕಾಣಬೇಕೆಂದು ಕಣ್ಣುಗಳಿಗೆ ಕೈಯ ಶಾಖವನ್ನು ನೀಡಿ, ಲಗುಬಗೆಯಿಂದಲೇ ಒಂದಿಷ್ಟು ಲಿಪ್ ಸ್ಟಿಕ್ ಹಚ್ಚಿ ಬಾಗಿಲಿನತ್ತ ಓಡಿದೆ. ಕೊನೆಗೂ ಬಾಗಿಲು ತೆರೆದಾಗ ಬಾಗಿಲಾಚೆ ಅವನಿದ್ದ. ಮಳೆಯಲ್ಲಿ ಸಂಪೂರ್ಣವಾಗಿ ನೆನೆದು ಒದ್ದೆ ಕೋಳಿಯಂತಾಗಿದ್ದ ಅವನು. ''ಏನಾಯ್ತೋ ನಿಂಗೆ? ಒಳಗ್ಬಾ ನಡಿ'', ಎಂದೆ ನಾನು. ''ಏನಿಲ್ಲ ಕಣೇ. ಒಳಗೆಲ್ಲಾ ಬರೋ ಹಾಗಿಲ್ಲ. ಇಲ್ಲೇ ಉತ್ತರ ಬೇಕು ನಂಗೆ'', ಎಂದ ಅವನು ಥೇಟು ಹಟಮಾರಿಯಂತೆ. ಇವನು ಹೀಗೆ ಹೇಳಿದರೆ ಕೇಳುವವನಲ್ಲ ಎಂದು ಲೆಕ್ಕಹಾಕಿದ ನಾನು ಅವನ ಕೈಯನ್ನು ಹಿಡಿದುಕೊಂಡು ಎಳೆದುಕೊಂಡೇ ಒಳಕ್ಕೆ ಬಂದೆ. ಅವನನ್ನು ಸೋಫಾದ ಮೇಲೆ ಕುಳ್ಳಿರಿಸಿದೆ. ನಾನೂ ನಿನ್ನೊಂದಿಗೆ ಬರುತ್ತೇನೆ ಎಂಬಂತೆ ಮಳೆಯೂ ಕೂಡ ಅವನೊಂದಿಗೆ ಬಂದು ಬಾಗಿಲಿನಿಂದ ಸೋಫಾದವರೆಗಿನ ಜಾಗವನ್ನು ಅವನ ಕಾಲಹೆಜ್ಜೆಯನ್ನು ಹಿಂಬಾಲಿಸಿಕೊಂಡೇ ಒದ್ದೆ ಮಾಡಿತು. ಎಷ್ಟಾದರೂ ಅವನೊಂದಿಗೆ ಬಂದ ಮಳೆಯಲ್ಲವೇ?

ಅವನೇನೋ ಮಾತನಾಡುವ ಮುನ್ನವೇ ನಾನು ಒಳಗಿನಿಂದ ದಪ್ಪನೆಯ ಟವೆಲ್ ಒಂದನ್ನು ತಂದು ಅವನ ತಲೆಯ ಮೇಲೆ ಧೊಪ್ಪನೆ ಹಾಕಿ ಚೆನ್ನಾಗಿ ತಿಕ್ಕತೊಡಗಿದೆ. ಅವನು ಬಹುಷಃ ಅದೇನನ್ನೋ ಹೇಳುತ್ತಲಿದ್ದ. ಅವನು ಮಾತಾಡುತ್ತಿದ್ದಿದ್ದು ನನಗೆ ಕೇಳುತ್ತಿಲ್ಲ ಎಂಬಂತೆ ನಾನು ಇನ್ನಷ್ಟು ಜೋರಾಗಿ ಆ ಒದ್ದೆ ತಲೆಯನ್ನು ತಿಕ್ಕುತ್ತಾ ಅವನೊಂದಿಗೆ ಕೀಟಲೆ ಮಾಡುತ್ತಿದ್ದೆ. ಕೊನೆಗೂ ಅವನಿಗೆ ರೋಸಿಹೋಯಿತು. ಟವೆಲನ್ನೂ, ನನ್ನನ್ನೂ ಕೊಡವಿ ''ಸ್ವಲ್ಪ ಸುಮ್ಮನಿರ್ತೀಯಾ?'' ಎಂದು ಕೋಪದಿಂದಲೇ ಕೇಳಿದ. ಅವನ ಇಂಥಾ ರೂಪವನ್ನು ಕಂಡು ಅಭ್ಯಾಸವಿದ್ದ ನಾನು ಹೂಂ ಎನ್ನುತ್ತಾ, ತಾತನ ಎದುರು ಕತೆಯನ್ನು ಕೇಳಲು ಚಕ್ಕಳಮಕ್ಕಳ ಹಾಕಿಕೊಂಡು ಕುಳಿತುಕೊಳ್ಳುವ ಪುಟ್ಟ ಮಗುವಿನಂತೆ ಅವನೆದುರು ಕುಳಿತುಕೊಂಡು ಅವನತ್ತಲೇ ನೋಡತೊಡಗಿದೆ. 

ಕ್ಷಣಾರ್ಧದಲ್ಲಿ ಅದೇನಾಯಿತೋ! ''ನೀನು ನನ್ನಿಂದ ದೂರ ಹೋಗಿಬಿಡುತ್ತೀಯಾ ಅಲ್ವಾ? ಯಾವತ್ತೂ ಮರಳಿ ಬಾರದಷ್ಟು ದೂರ?'', ಎನ್ನುತ್ತಾ ಏಕಾಏಕಿ ಕಣ್ಣೀರು ಹಾಕತೊಡಗಿದ್ದ ಅವನು. ನಿನ್ನೆಯಷ್ಟೇ ನಾವು ಕೊಂಚ ಜಗಳವಾಡಿದ್ದೆವು. ಆದರೆ ಪ್ರತೀಬಾರಿ ಜಗಳವಾದಾಗಲೂ ಅವನಿಗೆ ಹೀಗನ್ನಿಸುತ್ತಿತ್ತು. ನಾನು ಎಂದಾದರೊಂದು ದಿನ ಅವನಿಂದ ದೂರವಾಗಿಬಿಡುತ್ತೇನೆಂಬ ಭಯ, ಅಭದ್ರತೆಗಳು ಅವನನ್ನು ಕಾಡುತ್ತಿದ್ದವು. ಹೀಗಾಗಿ ಅವನು ಒಳಗೊಳಗೇ ಮತ್ತಷ್ಟು ಕುಸಿದುಹೋಗುತ್ತಿದ್ದ. ಈ ಸಂಬಂಧದಲ್ಲಿ ಹಗ್ಗದ ಮೇಲೆ ನಡೆಯುತ್ತಿರುವವನಂತೆ ನಾಜೂಕಾಗಿ ನಡೆಯುತ್ತಿದ್ದ ಆತ. ನಡೆಯುವುದಕ್ಕಿಂತಲೂ ಹೆಚ್ಚು ಬೀಳುವ ಬಗ್ಗೆಯೇ ಅವನಿಗೆ ದೊಡ್ಡ ಚಿಂತೆಯಿದ್ದಂತಿತ್ತು. ಅದೆಂಥದ್ದೋ ನೋವು ಅವನನ್ನು ಒಳಗೊಳಗೇ ಕೊಲ್ಲುತ್ತಿತ್ತು, ಇಷ್ಟಿಷ್ಟೇ ಕೊಲ್ಲುತ್ತಿತ್ತು. 

ಆದರೆ ಅಂದು ಜಡಿಮಳೆಯಲ್ಲಿ ನೆನೆದು ನನ್ನೆದುರು ದೈನ್ಯಸ್ಥಿತಿಯಲ್ಲಿ ನಿಂತಿದ್ದ ಅವನನ್ನು ಕಂಡು ನಾನು ನಿಜಕ್ಕೂ ಕರಗಿಬಿಟ್ಟೆ. ಅಂದು ಅವನನ್ನು ತಬ್ಬಿಕೊಂಡು ಜೋರಾಗಿ ನಾನೂ ಅತ್ತುಬಿಟ್ಟೆ. ಹಾಗೆ ಎಂದೂ ಅತ್ತವಳಲ್ಲ ನಾನು. ಆದರೆ ಆ ಕ್ಷಣದಲ್ಲಿ ಎದೆಯ ಅಣೆಕಟ್ಟುಗಳು ಮುರಿದು ಕಣ್ಣೀರಧಾರೆಯೇ ಹರಿದುಹೋಯಿತು. ಹೊರಗಡೆಯ ಕುಂಭದ್ರೋಣ ಮಳೆಯ ಕೃಪೆಯಲ್ಲಿ ಹುಟ್ಟಿದ್ದ ಹಿತವಾದ ಚಳಿಯಲ್ಲಿ, ಹೊದ್ದುಕೊಂಡ ಒಂದೇ ಕಂಬಳಿಯಡಿಯಲ್ಲೇ ಒಬ್ಬರನ್ನೊಬ್ಬರು ಅಪ್ಪಿಕೊಂಡು ಇಬ್ಬರೂ ಜೋರಾಗಿ ತಾಸುಗಟ್ಟಲೆ ಅತ್ತೆವು. ತನ್ನ ಕಣ್ಣೀರು ನನಗೆ ಕಾಣದೆಂದು ಅವನು, ನನ್ನ ಕಣ್ಣೀರು ಅವನಿಗೆ ಕಾಣಬಾರದೆಂದು ನಾನು… ಕಣ್ಣೀರಿನಲ್ಲೂ, ಕಂಬಳಿಯೊಳಗಿನ ಕತ್ತಲ ಮರೆಯಲ್ಲೂ ನಮ್ಮ ಕಂಬನಿಗಳ ಕಣ್ಣುಮುಚ್ಚಾಲೆಯು ನಡೆಯಿತು. ಕೊನೆಗೂ ಅವನು ಅತ್ತು ಅತ್ತು ನನ್ನ ಎದೆಯ ಮೇಲೆಯೇ ನಿದ್ದೆ ಹೋದ. ನಾನು ನನ್ನ ಕೈಬೆರಳುಗಳಿಂದ ಹಿತವಾಗಿ ಅವನ ತಲೆನೇವರಿಸಿದೆ. ಕೆಲಕ್ಷಣಗಳಲ್ಲೇ ಕಣ್ಣು ಮತ್ತು ಮನಸ್ಸುಗಳು ಭಾರವಾಗಿದ್ದ ನನಗೂ ನಿದ್ದೆಯು ಆವರಿಸಿಕೊಂಡಿತು. 
ನನಗೆ ನೆನಪಿರುವಂತೆ ನಾನು ಕೇಳಿದ ಕೊನೆಯ ಸದ್ದೆಂದರೆ ''ಢಣ್ ಡಣ್… ಢಣ್ ಢಣ್…'', ಎಂದು ಬಡಿಯುತ್ತಿದ್ದ ಹಳೆಯ ಗೋಡೆಗಡಿಯಾರ. ಸಮಯ ಎರಡನ್ನು ತೋರಿಸುತ್ತಿತ್ತು. 

**********

ಢಣ್ ಡಣ್… ಢಣ್ ಢಣ್…
ಆ ಎರಡು ಸದ್ದು. ಎರಡೇ ಎರಡು ತೀಕ್ಷ್ಣ ಸದ್ದು. ಕೆಳಕ್ಕೆ ಬಿದ್ದ ಸ್ಟೀಲಿನ ಲೋಟವು ಅಷ್ಟೇ ಸದ್ದು ಮಾಡಿ, ಎರಡು ಪುಟ್ಟ ಪ್ರದಕ್ಷಿಣೆಗಳನ್ನು ಮಾಡಿ ತನ್ನ ಕುಂಡೆಯನ್ನು ಮೇಲಕ್ಕೆ ತೋರಿಸುತ್ತಾ ತಲೆಯ ಮೇಲೆ ನಿಂತಿತ್ತು. ಕೂತಲ್ಲೇ ತೂಕಡಿಸುತ್ತಿದ್ದ ನಾನು ತಕ್ಷಣ ಆ ಸದ್ದಿಗೆ ಎಚ್ಚರವಾಗಿದ್ದೆ.
ಛೇ… ನಿದ್ದೆ ಬಂದು ಅದೆಷ್ಟು ಹೊತ್ತಾಯಿತೋ ಏನೋ… ನಾನು ಮನದಲ್ಲೇ ಹಳಹಳಿಸಿ ಅವಳತ್ತ ಹೋದೆ. ಅವಳಿನ್ನೂ ಆಸ್ಪತ್ರೆಯ ಆ ವಾರ್ಡಿನಲ್ಲಿ ಮಲಗಿಕೊಂಡಿದ್ದಳು. ಹೆಚ್ಚು ಗಂಭೀರವೇನೂ ಅಲ್ಲ. ಆದರೆ ಪ್ರಜ್ಞೆಯಂತೂ ಅವಳಿಗೆ ಬಂದಿರಲಿಲ್ಲ. ಸೈಡ್ ಟೇಬಲ್ಲಿನಲ್ಲಿ ಇಟ್ಟಿದ್ದ ನೀರು, ಆಹಾರ, ಹಣ್ಣುಗಳು, ಅವಳ ಇಷ್ಟದ ಪುಸ್ತಕಗಳು, ಸಂಗೀತವನ್ನು ಕೇಳಲು ಐಪಾಡ್… ಹೀಗೆ ಎಲ್ಲವೂ ವ್ಯವಸ್ಥಿತವಾಗಿ ಇದೆಯಲ್ಲವೇ ಎಂದು ಮತ್ತೊಮ್ಮೆ ನೋಡಿಕೊಂಡೆ. ಅವಳು ಎದ್ದಾಗ ಅವಳಿಗೆ ಬೇಕಿರುವ ಎಲ್ಲವೂ ಕೈಗೆಟಕುವಂತೆ ಸಿಗಬೇಕೆಂಬುದು ನನ್ನ ಇಚ್ಛೆಯಾಗಿತ್ತು. ನಾನು ಬದುಕಿರವವರೆಗೂ ಏನೇನೋ ಸದ್ದನ್ನು ಮಾಡುತ್ತಾ ಅವಳು ನನ್ನ ಗಮನ ಸೆಳೆಯುವುದು ನನಗೆ ಬೇಕಿರಲಿಲ್ಲ. ಹೀಗೆ ಲೋಟವನ್ನು ಬೀಳಿಸಿಯೂ ಕೂಡ! 
''ಇದೊಂದು ಚಿಕ್ಕ ಶಸ್ತ್ರಚಿಕಿತ್ಸೆಯಷ್ಟೇ. ಭಯಪಡುವಂತಹದ್ದೇನೂ ಇಲ್ಲ. ನೀವು ಆರಾಮಾಗಿರಿ. ಇನ್ನು ನಾಲ್ಕೈದು ತಾಸುಗಳಲ್ಲಿ ಅವರಿಗೆ ಪ್ರಜ್ಞೆ ಬರಲಿದೆ'', ಎಂದು ವೈದ್ಯರು ಹೇಳಿದ್ದರು. ಆದರೂ ನನಗೆ ಸಮಾಧಾನವಿರಲಿಲ್ಲ. ಹೊರಗಡೆಯೇ ಇರುವಂತೆ ಸ್ಪಷ್ಟವಾಗಿ ಹೇಳಿದ್ದರೂ ಅವರ ಕೈಕಾಲು ಹಿಡಿದು ಬೇಡಿಕೊಂಡು ನಾನು ಒಳಬಂದು ಕೂತಿದ್ದೆ. ಅವಳ ಪಕ್ಕದಲ್ಲೇ. ಅವಳ ಮೃದುವಾದ ಕೈಯನ್ನು ನನ್ನ ಕೈಗಳಲ್ಲಿ ಜೋಪಾನವಾಗಿರಿಸಿಕೊಂಡು. ಹೀಗೆ ಕೂತಲ್ಲೇ ತೂಕಡಿಸುತ್ತಿರುವಾಗಲೇ ನಿದ್ದೆಯು ಹತ್ತಿರ ಸುಳಿದದ್ದು. ಹೇಗೋ ನನ್ನ ಕೈಯೋ, ಇನ್ನೇನೋ ಸೈಡ್ ಟೇಬಲ್ಲಿಗೆ ತಾಕಿ ಲೋಟವನ್ನು ಕೆಳಗುರುಳುವಂತೆ ಮಾಡಿದ್ದು. ಢಣ್ ಡಣ್… ಢಣ್ ಢಣ್… ಎಂದು ಸದ್ದಾಗಿದ್ದು… 

ಆದರೆ ಆಸ್ಪತ್ರೆಯಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದ ಮತ್ತೊಂದು ವಿಚಿತ್ರ ಕಥೆಯನ್ನೂ ನಾನು ಗಮನಿಸುತ್ತಿದ್ದೆ. ನನ್ನವಳು ಮಲಗಿರುವ ಹಾಸಿಗೆಯ ಎಡಬದಿಗೆ ಮಧ್ಯವಯಸ್ಕ ಮಹಿಳಾ ರೋಗಿಯೊಬ್ಬರು ಮಲಗಿದ್ದರು. ದಿನಕ್ಕೆ ನಾಲ್ಕೈದು ಬಾರಿ ಆಕೆಯ ಗಂಡ ಆಕೆಯನ್ನು ನೋಡಲು ವಾರ್ಡಿಗೆ ಬರುತ್ತಿದ್ದ. ಆತ ಆಕೆಯೊಂದಿಗೆ ತಾಸುಗಟ್ಟಲೆ ಮಾತಾಡುತ್ತಿದ್ದ, ಕಷ್ಟಸುಖಗಳನ್ನು ಹೇಳಿಕೊಳ್ಳುತ್ತಿದ್ದ. ಆಕೆಯನ್ನು ರಮಿಸುತ್ತಿದ್ದ, ರೂಮಿಯ ಕವಿತೆಗಳನ್ನು ಹೇಳುತ್ತಿದ್ದ. ನನ್ನ ಬಿಟ್ಟು ಹೀಗ್ಯಾಕೆ ದೂರಹೋದೆ ಎಂದು ಆಗಾಗ ಗದ್ಗದಿತನಾಗಿ ಕೇಳುತ್ತಿದ್ದ. ನಿನಗಿಲ್ಲಿ ನನ್ನ ಚಿಂತೆಯೇ ಇಲ್ಲ, ನಾನೇ ನೀನಿಲ್ಲದೆ ಏಕಾಂಗಿಯಾಗಿದ್ದೇನೆ ಎಂದು ಕಣ್ಣೀರು ಹಾಕುತ್ತಿದ್ದ. ಈತ ಯಾಕೆ ಒಬ್ಬನೇ ಮಾತಾಡುತ್ತಿದ್ದಾನೆ, ಮಲಗಿರುವ ಅವನ ಮನೆಯಾಕೆ ಸ್ವಲ್ಪವೂ ಪ್ರತಿಕ್ರಯಿಸುತ್ತಿಲ್ಲವೇಕೆ ಎಂದು ನಾನು ಆಗೆಲ್ಲಾ ಯೋಚಿಸುತ್ತಿದ್ದೆ. ಆಕೆ ಕಳೆದ ಕೆಲ ವರ್ಷಗಳಿಂದ ಕೋಮಾದಲ್ಲಿದ್ದಾರೆಂದು ನಂತರ ನನಗೆ ತಿಳಿದು ಬಂದಿತ್ತು. ಆತ ನಕ್ಕರೂ, ಅತ್ತರೂ, ಗೊಣಗಿದರೂ ನನಗೆ ಸುಮಾರಾಗಿ ಎಲ್ಲವೂ ಕೇಳುತ್ತಿತ್ತು. ಏಕೆಂದರೆ ನಮಗೆ ಮತ್ತು ಅವರಿಗಿದ್ದ ಒಂದೇ ಒಂದು ಖಾಸಗಿತನದ ಗೋಡೆಯೆಂದರೆ ನಡುವಿನಲ್ಲಿದ್ದ ಒಂದು ಹಸಿರು ಪರದೆ.        

ಈ ದೃಶ್ಯಗಳನ್ನು ನೋಡುತ್ತಾ ಹೀಗೆ ಕೂಡ ಪ್ರೀತಿಸಲು ಸಾಧ್ಯವಿದೆಯೇ? ನಿಜಕ್ಕೂ ಇಷ್ಟು ಭಾವತೀವ್ರತೆಯಿಂದ ಪ್ರೀತಿಸುವವರು ಇರುತ್ತಾರೆಯೇ? ಪ್ರೀತಿ ಹೀಗೂ ಇರುತ್ತದೆಯೇ?… ಎಂದೆಲ್ಲಾ ನಾನು ಸುಮ್ಮನೆ ಯೋಚಿಸುತ್ತಿದ್ದೆ. ಆದರೆ ಜೊತೆಗೇ ತಾನೂ ಒಂದು ಕಾಲದಲ್ಲಿ ಹೀಗಿದ್ದ ದಿನಗಳು ನನಗೆ ನೆನಪಾಗುತ್ತಿದ್ದವು. ಈಗ ನಾನು ಹಾಗಿಲ್ಲದಿದ್ದರೆ ನನ್ನ ಪ್ರೀತಿಯೇನು ಕಮ್ಮಿಯಾಗಿದೆಯೇ? ಹಾಗಿದ್ದರಷ್ಟೇ ಪ್ರೀತಿಯೇ? ನನ್ನದು ಪ್ರೀತಿಯೇ ಅಲ್ಲವೇ? ಹೀಗೆ ಕೇಳಿಕೊಂಡಷ್ಟು ಹೆಚ್ಚುತ್ತಿದ್ದವು ಪ್ರಶ್ನೆಗಳು. ಬಿಡಿಸಿದಷ್ಟು ಮುಗಿಯದ ಗೋಜಲುಗಳು. 
''ಐಸೇ ನ ಮುಝೇ ತುಮ್ ದೇಖೋ… ಸೀನೇ ಸೆ ಲಗಾಲೂಂಗೀ''… ಮಧುರವಾದ ಹಾಡಿನ ರಿಂಗ್ ಟೋನ್ ಸದ್ದಾಗುತ್ತಿರುವಂತೆಯೇ ನನ್ನ ಯೋಚನಾಲಹರಿಯ ವೇಗಕ್ಕೆ ತಡೆಬಿದ್ದಿತು. ಫೋನೆತ್ತಿ ಹಲೋ ಎಂದರೆ ''ನಿಮ್ಮ ಪತ್ನಿಯವರ ಹುಟ್ಟುಹಬ್ಬದ ಸ್ಪೆಷಲ್ ಕೇಕ್ ರೆಡಿಯಾಗಿದೆ. ಎಲ್ಲಿ ತರಬೇಕು?'', ಎಂದು ಬೇಕರಿಯ ಸಿಬ್ಬಂದಿಯೊಬ್ಬ ಕೇಳುತ್ತಿದ್ದ. ''ರೊಸಾರಿಯೋ ಆಸ್ಪತ್ರೆಗೆ ಬನ್ನಿ'', ಎಂದ ನಾನು ಆತನಿಗೆ ಆಸ್ಪತ್ರೆಯ ಸಂಪೂರ್ಣ ವಿಳಾಸವನ್ನು ನೀಡಿದೆ. 

**********

''ಐಸೇ ನ ಮುಝೇ ತುಮ್ ದೇಖೋ… ಸೀನೇ ಸೆ ಲಗಾಲೂಂಗಾ''…
ಅವನು ಆ ಕಿಶೋರ್ ಕುಮಾರ್ ಹಾಡನ್ನು ಹಾಡುತ್ತಲೇ ಇದ್ದ. ಮಿಕಾ ಸಿಂಗ್ ನ ಈ ಕಾಲದಲ್ಲಿ ಅವನಿಗೆ ಕಿಶೋರ್ ಕುಮಾರ್ ಮೋಹವೇನೋ ನಾನರಿಯೆ… ಆದರೆ ಅವನು ವೇದಿಕೆಯಲ್ಲಿ ನಿಂತು ಹಾಗೆ ಜೀವಹಿಂಡುವಂತೆ ಹಾಡುತ್ತಿದ್ದರೆ ನನ್ನನ್ನೂ ಸೇರಿದಂತೆ ಕಾಲೇಜಿನ ಎಲ್ಲಾ ಹೆಣ್ಣುಮಕ್ಕಳೂ ಅವನಿಗೆ ಫಿದಾ ಆಗುತ್ತಿದ್ದರು. ಹಾಡುಹಗಲೇ ಕನಸು ಕಾಣುತ್ತಿದ್ದರು. ಗುಟ್ಟಾಗಿ ತಮ್ಮ ನೋಟ್ ಪುಸ್ತಕಗಳ ಕೊನೆಯ ಹಾಳೆಯಲ್ಲಿ ಇಂಟರ್ನೆಟ್ಟಿನಿಂದ ಕದ್ದ ಕವಿತೆಗಳನ್ನು ತಮ್ಮದೆಂಬಂತೆ ಬರೆಯುತ್ತಿದ್ದರು….
….

**********

ಅಪ್ಪನ ಡೈರಿಯನ್ನು ಗುಟ್ಟಾಗಿ ಓದುತ್ತಿದ್ದ ಮಗರಾಯ ಏನೊಂದೂ ಅರ್ಥವಾಗದೆ ಸುಮ್ಮನೆ ಪಿಳಿಪಿಳಿ ಕಣ್ಣುಬಿಡುತ್ತಿದ್ದ. ಅಪ್ಪ ಎಲ್ಲವನ್ನು ಬರೆದರೂ ಬಹಳಷ್ಟನ್ನು ಅಡ್ಡಗೋಡೆಯ ಮೇಲೆ ದೀಪವಿಡುವಂತೆ ವಿಚಿತ್ರವಾಗಿ ಬರೆದಿದ್ದ. ಅಪ್ಪ 'ನಾನು' ಎನ್ನುವಾಗ ಕೆಲವೊಮ್ಮೆ ಖುದ್ದು ಅವನೇ ಆಗುತ್ತಿದ್ದ. ಇನ್ನು ಕೆಲವೊಮ್ಮೆ ಸ್ವತಃ ಅಮ್ಮನಾಗಿ 'ನಾನು' ಎಂದು ಕಥೆ ಶುರು ಮಾಡಿಬಿಡುತ್ತಿದ್ದ. ಹಲವು ಭಾಗಗಳಲ್ಲಂತೂ ತಮ್ಮ ಜೀವನವನ್ನು ಇತರರ ಕಣ್ಣುಗಳಿಂದ ನೋಡುತ್ತಿರುವಂತೆ ಅವನು, ಅವಳು ಎಂದೆಲ್ಲಾ ಸಂಬೋಧಿಸಿ ಬರೆಯುತ್ತಿದ್ದ. ಇದು ನಿಜಕ್ಕೂ ಅಪ್ಪ-ಅಮ್ಮನ ಕಥೆಯೇ ಎಂದು ಈ ಬಾರಿ ಅವನಿಗೇ ಗೊಂದಲವಾಯಿತು. ಅಪ್ಪ ತನ್ನ ಡೈರಿಯಲ್ಲಿ ಬರೆದಿಟ್ಟಿದ್ದಾನೆ ಎಂಬ ಮಾತ್ರಕ್ಕೆ ಅದು ಅವನ ಕಥೆಯಾಗಲೇಬೇಕೇ? ಏಕೆಂದರೆ ಅಪ್ಪನ ರೊಮ್ಯಾಂಟಿಕ್ ಮುಖವನ್ನು ನೋಡುವುದಿರಲಿ, ಆ ಬಗ್ಗೆ ಕಲ್ಪಿಸಿಕೊಳ್ಳುವುದಕ್ಕೂ ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಅಪ್ಪ ಅವನಿಗೆ ತೀರಾ ಒರಟನಂತೆ, ಮುಂಗೋಪಿ ಮುದುಕನಂತೆ ಕಾಣುತ್ತಿದ್ದ. ಅಮ್ಮನಲ್ಲಾದರೂ ಕೇಳೋಣವೆಂದರೆ ಆಕೆ ಸತ್ತೇ ಕೆಲ ವರ್ಷಗಳು ಕಳೆದಿದ್ದವು. 

ಇವಿಷ್ಟೇ ಅಲ್ಲದೆ ಈ ಬರಹಗಳು ಹೇಗಿದ್ದವೆಂದರೆ ಸತ್ಯಘಟನೆಗಳೆಷ್ಟು, ಕಾಲ್ಪನಿಕ ಅಂಶಗಳೆಷ್ಟು, ಕನಸುಗಳೆಷ್ಟು, ನೈಜಘಟನೆಗಳೆಷ್ಟು ಇತ್ಯಾದಿಗಳು ಯಾರಿಗೂ ಗೊತ್ತಾಗದಂತೆ ಬರೆದಿಡಲಾಗಿದ್ದ ನಿಗೂಢ ಮಹಾಕಾವ್ಯದಂತಿತ್ತು. ಒಟ್ಟಾರೆಯಾಗಿ ಆದಿಅಂತ್ಯಗಳಿಲ್ಲದ ಅನಂತದಂತೆ ಕಾಣುತ್ತಿದ್ದರೂ ಅದ್ಯಾವುದೋ ಅಗೋಚರ ಎಳೆಯೊಂದು ಇವೆಲ್ಲವನ್ನೂ ಒಂದಕ್ಕೊಂದು ಬಂಧಿಸಿಟ್ಟಿರುವಂತೆ, ತಳುಕು ಹಾಕಿಕೊಂಡಿರುವಂತೆ ಅವನಿಗೆ ಭಾಸವಾಗುತ್ತಿತ್ತು, ಇದನ್ನು ಹೀಗೇ ಓದುತ್ತಿದ್ದರೆ ಸತ್ಯ-ಮಿಥ್ಯ, ನಿಜ-ಭ್ರಮೆ, ಕನಸು-ಎಚ್ಚರಗಳ ನಡುವೆ ನಾನೇ ಕಳೆದುಹೋಗುತ್ತೇನೆ ಎಂದು ಅನ್ನಿಸತೊಡಗಿ ದಿಗಿಲಾಗಿ ಸುಮ್ಮನೆ ಅದನ್ನು ಮುಚ್ಚಿಬಿಟ್ಟ. ''ನನ್ನನ್ನೊಮ್ಮೆ ಚಿವುಟಿ ನೋಡೇ'', ಎಂದು ಕುತೂಹಲಕ್ಕೆ ಕೇಳಲಾದರೂ ಒಬ್ಬಳು ಪ್ರಿಯತಮೆಯಿರಬೇಕಿತ್ತು ಎಂದು ಅವನಿಗಂದು ಅನ್ನಿಸಿತು. 

********** 
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x