ಜಾಣಸುದ್ದಿ: ಕೊಳ್ಳೇಗಾಲ ಶರ್ಮ

 

kollagala-sharma

ವಿ.ಸೂ.: ವಿಜ್ಞಾನ, ವಿಸ್ಮಯ, ವಿಚಾರಗಳನ್ನು ಜನರಿಗೆ ಅದರಲ್ಲೂ ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಶ್ರೀ ಕೊಳ್ಳೇಗಾಲ ಶರ್ಮರವರು ಈ ಜಾಣಸುದ್ದಿ ಧ್ವನಿಮುದ್ರಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ. ಕನ್ನಡದ ಕೆಲವೇ ಕೆಲವು ವಿಜ್ಞಾನ ಬರಹಗಾರರಲ್ಲಿ ಶರ್ಮರವರು ಒಬ್ಬರು. ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಕತೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com 

ಜಾಣ ಸುದ್ದಿ ಧ್ವನಿಮುದ್ರಿಕೆ

ಈ ಸಂಚಿಕೆಯಲ್ಲಿ

ಸೊಳ್ಳೆಗೆ ಸೊಳ್ಳೆಯೇ ವೈರಿ, 

ಜೀನಿಯಸ್ಸಿನೊಳಗೊಬ್ಬ ಕರುಣಾಮಯಿ,

ಪೂರ್ವಜರ ಮೂಗಿನೊಳಗೊಂದು ನೋಟ,

ಹಾಗೂ ನಾಯಿಗೆ ಬಡಿದ ಭಯದ ವಾಸನೆ

1. ಸೊಳ್ಳೆಗೆ ಸೊಳ್ಳೆಯೇ ವೈರಿ
ಬೆಂಗಳೂರು, ಮೈಸೂರಿನಲ್ಲಿ ಡೆಂಗ್ಯೂ ಜ್ವರ ಮಾರಿಯಾಗಿದೆ ಎಂದು ಜನತೆ ಬೊಬ್ಬಿಡುತ್ತಿದ್ದಾರೆ. ಅತ್ತ ಕೊಲ್ಕತ್ತಾದ ವಿಜ್ಞಾನಿಗಳು ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡಿರುವ ಡೆಂಗ್ಯೂ ವೈರಸ್ ಹೊಚ್ಚ ಹೊಸತು. ಇದುವರೆಗೂ ಇದ್ದದ್ದಲ್ಲ ಎಂದು ಭೂತದ ನೆರಳಿಗೆ ಇನ್ನಷ್ಟು ಬಣ್ಣ ಹಚ್ಚಿದ್ದಾರೆ. ಈ ಎಲ್ಲ ಭೀತಿಯ ನಡುವೆ ಹೊಸದೊಂದು ಸುದ್ದಿಯನ್ನು ನೇಚರ್ ಮೊನ್ನೆ ವರದಿ ಮಾಡಿದೆ. ಅಮೆರಿಕೆಯಲ್ಲಿ ಡೆಂಗ್ಯೂ ವೈರಸ್ಸನ್ನು ಹರಡುವ ಸೊಳ್ಳೆಯನ್ನು ನಿಯಂತ್ರಿಸಲು ಸೊಳ್ಳೆಯ ಸೇನೆಯನ್ನು ಛೂ ಬಿಡಲು ತಯಾರಿ ನಡೆದಿದೆಯಂತೆ.   

ಸೊಳ್ಳೆಯನ್ನು ನಿರ್ನಾಮ ಮಾಡುವುದು ಸುಲಭವಲ್ಲ. ಅಲ್ಲೋ, ಇಲ್ಲೋ ಒಂದಿಷ್ಟು ನೀರು ಸಿಕ್ಕರೆ ಸಾಕು. ಸಾವಿರಾರು ಮೊಟ್ಟೆ ಇಟ್ಟು ಮರಿ ಮಾಡಿ ಬಿಡುತ್ತದೆ. ಇನ್ನು ಮುಂಗಾರು ಮಳೆಯಲ್ಲಿ ಮುಳುಗಿ ನಿಂತ ಬೆಂಗಳೂರಿನಂತಹ ಪಟ್ಟಣದಲ್ಲಿ ನೀರಿನ ಹೊಂಡಗಳಿಗೆ ಬರವಿಲ್ಲವಷ್ಟೆ. ಡೆಂಗ್ಯೂ, ಮಲೇರಿಯಾದಂತಹ ಸೊಳ್ಳೆ ಹರಡುವ ರೋಗಗಳನ್ನು ತಹಬಂದಿಯಲ್ಲಿ ಇಡಬೇಕು ಎಂದರೆ ಮೊದಲು ಸೊಳ್ಳೆಗಳ ಸಂತಾನವನ್ನು ಹತ್ತಿಕ್ಕಬೇಕು. ನಮ್ಮ ನಗರಗಳಲ್ಲಿ ಇದಕ್ಕಾಗಿ ಈಗಲೂ ನಿಷೇಧವಾಘಿರುವ ವಿಷೌಷಧ ಡಿಡಿಟಿ ಅಥವಾ ಇಂತಹುದೇ ವಿಷದ ಹೊಗೆಯೆಬ್ಬಿಸಿ ಗಾಳೀಯನ್ನೂ, ನೀರನ್ನೂ ವಿಷಗೊಳಿಸುತ್ತಿದ್ದೇವೆ. ಹೀಗೆ ಪರಿಸರಕ್ಕೆ ಹಾನಿಯಾಗದಂತೆ ಈ ಸೊಳ್ಳೆಗಳ ಸೇನೆಯನ್ನು ತಡೆಯಲಾಗದೇ?

ಯಾಕಾಗದು? ಸೊಳ್ಳೆಯ ವೈರಿಗಳನ್ನು ಛೂ ಬಿಟ್ಟರೆ ಆದೀತಲ್ಲ? ಶತ್ರುವಿನ ಶತ್ರು ಹೇಗಿದ್ದರೂ ಮಿತ್ರನೇ ತಾನೇ ಎನ್ನುವ ಆಲೋಚನೆಯಿಂದ ಹಲವು ಪ್ರಯೋಗಗಳು ನಡೆದಿವೆ. ಸೊಳ್ಳೆಯ ಮರಿಗಳನ್ನು ತಿನ್ನುವ ಮೀನುಗಳನ್ನು ಬೆಳೆಸುವುದು ಇದರಲ್ಲಿ ಒಂದು ಉಪಾಯ. ಇದು ದೊಡ್ಡ ಬಾವಿ, ಹೊಂಡಗಳಂತಹ ನೀರಿನ ಸೆಲೆಗಳಿಗೆ ಒಪ್ಪುವ ಉಪಾಯ. ರಸ್ತೆ ಹೊಂಡಗಳಿಗೆ ಏನು ಮಾಡೋಣ? ಅಲ್ಲಿ ಮೀನು ಬೆಳೆಯದಷ್ಟೆ. ಅಂತಹ ಕಡೆಗೆ ಗಂಡು ಸೊಳ್ಳೆಗಳನ್ನು ನಿರ್ವೀರ್ಯಗೊಳಿಸಿ ಬಿಡುವ ಯೋಚನೆಯೂ ಇದೆ. ಬ್ರೆಜಿಲ್ಲಿನಲ್ಲಿ ಆಕ್ಸಿಟೆಕ್ ಎನ್ನುವ ಕಂಪೆನಿ ಇಂತಹ ಪ್ರಯೋಗವನ್ನು ನಡೆಸಿತ್ತು. ಕೃತಕವಾಗಿ ಗಂಡು ಸೊಳ್ಳೆಗಳ ವೀರ್ಯದಲ್ಲಿ ದೋಷಗಳನ್ನುಂಟು ಮಾಡುತ್ತಿದ್ದರು. ಈ ಸೊಳ್ಳೆಗಳ ಜೊತೆಗೆ ಕೂಡಿದ ಹೆಣ್ಣುಗಳು ಇಟ್ಟ ಮೊಟ್ಟೆಗಳು ಬೆಳೆಯುತ್ತಲೇ ಇರಲಿಲ್ಲ.  ಈಗ ಅಮೆರಿಕನ್ನರು ಮತ್ತೊಂದು ಉಪಾಯ ಹೂಡಿದ್ದಾರೆ. ಗಂಡು ಸೊಳ್ಳೆಗಳ ಮೂಲಕ ಹೆಣ್ಣು ಸೊಳ್ಳೆಗಳಿಗೆ ಬ್ಯಾಕ್ಟೀರಿಯಾ ಸೋಂಕನ್ನು ಹರಡುವ ಉಪಾಯವನ್ನು ಹಾಕಿಕೊಂಡಿದ್ದಾರೆ. ಮುಖ್ಯವಾಗಿ ಡಂಗ್ಯೂ ಮತ್ತು ಹಳದಿ ಜ್ವರದ ವೈರಸ್ಸುಗಳನ್ನು ಹರಡುವ ಈಡಿಸ್ ಆಲ್ಬೊಪಿಕ್ಟಸ್  ಜಾತಿಯ ಸೊಳ್ಳೆಯ ಮೇಲೆ ಈ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಅಲ್ಲಿನ ಸರಕಾರ ಕಳೆದ ವಾರ ಅನುಮತಿ ನೀಡಿದೆ. 

aedis

ರಕ್ತ ಹೀರುತ್ತಿರುವ ಹೆಣ್ಣು ಈಡಿಸ್ ಆಲ್ಬೊಪಿಕ್ಟಸ್ ಸೊಳ್ಳೆ. ಡೆಂಗ್ಯೂನ ವಾಹಕ

ಸೊಳ್ಳೆಗೆ ಸೋಂಕು ತಗುಲಿಸುವುದೇ? ಅದು ಹೇಗೆ? ಇದು ಒಂದು ಸ್ವಾರಸ್ಯಕರವಾದ ಕಥೆ. ಸೊಳ್ಳೆ ಹಾಗೂ ಇಂತಹ ಕೀಟಗಳಿಗೂ, ವೋಲ್ಬಾಚಿಯಾ ಎನ್ನುವ ಬ್ಯಾಕ್ಟೀರಿಯಾಗಳಿಗೂ ಒಂದು ವಿಚಿತ್ರ ಸಂಬಂಧವಿದೆ. ವೊಲ್ಬಾಶಿಯಾದಲ್ಲಿ ಹಲವು ತಳಿಗಳಿವೆ. ಅವು ಒಂದೊಂದೂ ಒಂದೊಂದು ಜಾತಿಯ ಕೀಟವನ್ನಷ್ಟೆ ಸೋಂಕುತ್ತವೆ. ಬೇರೆ ಜಾತಿಗಳನ್ನು ತಾಕುವುದೂ ಇಲ್ಲ. ವೋಲ್ಬಾಶಿಯಾ ಪೈಪಿಯೆಂಟಿಸ್ ಕೇವಲ ಈಡಿಸ್ ಆಲ್ಬೊಪಿಕ್ಟಸ್ ಸೊಳ್ಳೆಗಳನ್ನಷ್ಟೆ ತಾಕುತ್ತದೆ. ಒಂದೇ ತಳಿಯ ಬ್ಯಾಕ್ಟೀರಿಯಾಗಳ ಸೋಂಕು ಇರುವ ಗಂಡು-ಹೆಣ್ಣುಗಳು ಕೂಡಿದರಷ್ಟೆ ಮೊಟ್ಟೆಗಳು ಮರಿಯಾಗಬಹುದು. ಗಂಡಿನಲ್ಲಿ ಬೇರೆ, ಹೆಣ್ಣಿನಲ್ಲಿ ಬೇರೆ ವೋಲ್ಬಾಶಿಯ ಇದ್ದರೆ ಆಗ ಹೆಣ್ಣು ಇಡುವ ಮೊಟ್ಟೆಗಳು ಮರಿಯಾಗುವುದಿಲ್ಲ. 

1

ವೋಲ್ಬಾಶಿಯಾ ಬ್ಯಾಕ್ಟೀರಿಯ

“ಮಸ್ಕಿಟೋಮೇಟ್ “ ಎನ್ನುವ ಕಂಪೆನಿ ಈ ಉಪಾಯವನ್ನೇ ಸೊಳ್ಳೆಗಳ ನಿಯಂತ್ರಣಕ್ಕೆ ಬಳಸಲು ಯೋಚಿಸುತ್ತಿದೆ. ವಿಶೇಷವಾದ ತಳಿಯ ವೋಲ್ಬಾಶಿಯವನ್ನು ಬೆಳೆಸಿ, ಗಂಡು ಸೊಳ್ಳೆಗಳಿಗೆ ಸೋಂಕಿಸುವುದು. ಅನಂತರ ಅಂತಹ ಲಕ್ಷಾಂತರ  ಗಂಡುಗಳನ್ನು ಸೊಳ್ಳೆಗಳ ಕಾಟವಿರುವ ಸ್ಥಳದಲ್ಲಿ ಬಿಡುವುದು. ಈ ಗಂಡುಗಳ ಜೊತೆಗೆ ಕೂಡಿದ ಹೆಣ್ಣುಗಳು ಮರಿಯಾಗದಂಥಹ ಮೊಟ್ಟೆಗಳನ್ನು ಇಡುತ್ತವೆ. ಹೀಗೆ ನಿಧಾನವಾಗಿ ಸೊಳ್ಳೆಗಳ ಸಂತಾನ ಕಡಿಮೆ ಆಗುತ್ತದೆ ಎನ್ನುವುದು ತರ್ಕ. ಹಾಂ. ಹೆದರಬೇಡಿ. ಗಂಡು ಸೊಳ್ಳೆಗಳು ರಕ್ತ ಹೀರುವುದಿಲ್ಲವಾದ್ದರಿಂದ ಇವು ಎಷ್ಟಿದ್ದರೂ ಅಪಾಯವಿಲ್ಲ.

ಚೀನಾದಲ್ಲಿಯೂ ಇಂತಹ ಪ್ರಯೋಗಗಳು ನಡೆದಿವೆ. ಇದೀಗ ಅಮೆರಿಕೆಯಲ್ಲಿ ಇದನ್ನು ನಡೆಸಲು ಸರಕಾರ ಅನುಮತಿ ನೀಡಿದೆ. ಆದರೆ ಒಂದೇ ತೊಂದರೆ. ಲಕ್ಷಾಂತರ ಸೊಳ್ಳೆಗಳಲ್ಲಿ ಕೇವಲ ಗಂಡನ್ನು ಹೆಕ್ಕುವುದು ಕಷ್ಟದ ಕೆಲಸ. ಚೀನಾದಲ್ಲಿ ಗಂಡು, ಹೆಣ್ಣು ಸೊಳ್ಳೆಗಳ ಗಾತ್ರದಲ್ಲಿರುವ ವ್ಯತ್ಯಾಸವನ್ನೇ ಬಳಸಿ ಅವುಗಳನ್ನು ಪ್ರತ್ಯೇಕಿಸುತ್ತಾರಂತೆ. ಅಲ್ಲಿಯವರೆವಿಗೂ ನಾವು ನೀವು ಬೆಚ್ಚಗೆ ಹೊದಿಕೆ ಹೊದ್ದು, ಸೊಳ್ಳೆ ಬತ್ತಿ ಹಚ್ಚಿ, ಸೊಳ್ಳೆ ಪರದೆಯೊಳಗೆ ಹುದುಗಿಕೊಳ್ಳೋಣ. ಏನಂತೀರಿ?
ಉಲ್ಲೇಖ: Emily Watz, US government approves 'killer' mosquitoes to fight disease, Nature, 6 November 2017
ಲಿಂಕ್: https://www.nature.com/news/us-government-approves-killer-mosquitoes-to-fight-disease-1.22959


2. ಚುಟುಕು ಚುರುಮುರಿ

ಜೀನಿಯಸ್ಸಿನೊಳಗಿನ ಕರುಣಾಮಯಿ

ಐನ್ಸ್ಟೀನ್ ಎಂದ ಕೂಡಲೇ ನಿಮ್ಮ ಮನಸ್ಸಿನಲ್ಲಿ ಯಾವ ಚಿತ್ರ ಮೂಡುತ್ತದೆ? ಕೆದರಿದ ಬಿಳೀ ಕೂದಲಿನ ವಯಸ್ಸಾದ, ಚುರುಕು 
ಗಣ್ಣಿನ ವ್ಯಕ್ತಿ. ಸ್ವಲ್ಪ ಅಲ್ಲಿ, ಇಲ್ಲಿ ನೀವು ಕಥೆಗಳನ್ನು ಓದಿದ್ದೀರಾದರೆ ಆತ ಮರೆಗುಳಿಯಾಗಿದ್ದ ಎಂದೂ ಚಿತ್ರಿಸಿಕೊಂಡು ಬಿಡುತ್ತೀರಿ. ಬಹುಶಃ ಜೀನಿಯಸ್ ಎನ್ನುವವರ ಚಿತ್ರವನ್ನೆಲ್ಲ ಹೀಗೇ ಏಕಚಿತ್ರವಾಗಿಸಿಬಿಟ್ಟಿದ್ದೇವೆ. ಮರೆಗುಳಿ, ಕನ್ನಡಕ ಇರುವ ಕೆದರಿದ ಕೂದಲು, ಬಟ್ಟೆಯ, ಪ್ರಪಂಚದ ಬಗ್ಗೆ ಗಮನವೇ ಇಲ್ಲದ ವ್ಯಕ್ತಿ ಅಂತ. ಐನ್ಸ್ಟೀನ್ ನಿಜಕ್ಕೂ ಹಾಗೆ ಇದ್ದರೇ?
ಐನ್ಸ್ಟೀನರು ಎರಡು ಬಾರಿ ವಿವಾಹವಾಗಿದ್ದರು ಎನ್ನುವುದು ಅವರೂ ನಮ್ಮ ನಿಮ್ಮಂತೆಯೇ ಒಬ್ಬ ಸಾಮಾನ್ಯ ಭಾವುಕತೆಯ ವ್ಯಕ್ತಿ ಎಂದು ನಿರೂಪಿಸುತ್ತದೆ. ಅಷ್ಟೇ ಸಾಲದು ಎಂದರೆ ಕೊಲಕತ್ತಾದ ವೇರಿಯೆಬಲ್ ಎನರ್ಜಿ ಸೈಕ್ಲೊಟ್ರಾನ್ ಸ್ಥಾವರದಲ್ಲಿ ವಿಜ್ಞಾನಿಯಾಗಿದ್ದ ಆಶೀಷ್ ಕುಮಾರ್ ಚೌಧರಿಯವರ ಮಾತು ಕೇಳಬೇಕು. ಇವರು ಐನ್ಸ್ಟೀನರ ಪತ್ರಗಳು ಹಾಗೂ ದಿನಚರಿಗಳನ್ನು ಅಧ್ಯಯನ ಮಾಡಿದ್ದಾರೆ. ಚೌಧರಿಯವರ ಪ್ರಕಾರ ಆ ಜೀನಿಯಸ್ಸು ಸುತ್ತಮುತ್ತಲಿನವರ ದುಃಖಗಳಿಗೆ ಸ್ಪಂದಿಸುತ್ತಿದ್ದರಂತೆ. ಅದೂ ಹೇಗೆ? ವಿಜ್ಞಾನದ ಮೂಲಕವೇ ಅಂತೆ. 

ನಮಗೆಲ್ಲ ಐನ್ಸ್ಟೀನರು ಸಾಪೇಕ್ಷ ಸಿದ್ಧಾಂತವನ್ನು ಮೊಟ್ಟಮೊದಲಿಗೆ ಹೇಳಿದರು ಎನ್ನುವುದು ಚೆನ್ನಾಗಿ ಗೊತ್ತು. ಇದು ಕಾಲ್ಪನಿಕ ತರ್ಕ. ಇದರಿಂದ ಏನೂ ಪ್ರಯೋಜನವಿಲ್ಲ ಎಂದವರೂ ಉಂಟು! ಆದರೆ ಈ ಸಿದ್ಧಾಂತವನ್ನು ಮಂಡಿಸಿದ ವ್ಯಕ್ತಿ ನಮ್ಮ ನಿತ್ಯ ಜೀವನಕ್ಕೆ ಅನುಕೂಲವಾಗುವಂತಹ ಸಾಧನಗಳನ್ನೂ ವಿನ್ಯಾಸ ಮಾಡಿದ್ದರು ಎನ್ನುತ್ತಾರೆ ಚೌಧರಿ. ಐನ್ಸ್ಟೀನ್ ವಿದ್ಯುತ್ತಿನ ಅವಶ್ಯಕತೆಯೇ ಇಲ್ಲದ ಹೊಸಬಗೆಯ ರೆಫ್ರಿಜರೇಟರು, ಎಕ್ಸ್ ರೇ ಚಿತ್ರಗಳನ್ನು ಸುಸ್ಪಷ್ಟವಾಗಿ ಚಿತ್ರಿಸುವ ಕ್ಯಾಮೆರಾವನ್ನೂ ರೂಪಿಸಿ ಆ ಬಗ್ಗೆ ಪೇಟೆಂಟೂ ಪಡೆದಿದ್ದರು. 

3

ಇಪ್ಪತ್ತನೆಯ ಶತಮಾನದ ಜೀನಿಯಸ್​

4ಮ್ಯಾಡ್ ಸೈಂಟಿಸ್ಟ್ ಚಿತ್ರದಲ್ಲಿ ಐನ್ಸ್ಟೀನನ ಅಣಕು ಪಾತ್ರ​

ಅಂದಿನ ಕಾಲದಲ್ಲಿ ರೆಫ್ರಿಜರೇಟರನ್ನು ತಣಿಸಲು ಮೀಥೈಲ್ ಕ್ಲೋರೈಡು ಮತ್ತು ಸಲ್ಫರ್ ಡಯಾಕ್ಸೈಡನ್ನು ಬಳಸುತ್ತಿದ್ದರು. ತನ್ನ ತವರೂರು ಜರ್ಮನಿಯಲ್ಲಿ ಇಂತಹ ರೆಫ್ರಿಜರೇಟರಿನಲ್ಲಿದ್ದ ಅನಿಲ ಸೋರಿಕೆಯಾಗಿ ತಾಯಿ-ಮಗಳಿಬ್ಬರು ಸತ್ತರು ಎನ್ನುವ ಸುದ್ದಿಯನ್ನು ಕೇಳಿ ಐನ್ಸ್ಟೀನ್ ಮಮ್ಮರ ಮರುಗಿದರಂತೆ. ಇಂತಹ ದುರಂತಗಳನ್ನು ತಡೆಯಲೆಂದು ಒಂದು ರೆಫ್ರಿಜರೇಟರಿನ ವಿನ್ಯಾಸವನ್ನೂ ಮಾಡಿದರಂತೆ. ಕೇವಲ ಅಯಸ್ಕಾಂತಗಳನ್ನೂ, ಅವುಗಳಿಂದ ಪ್ರಭಾವಿತವಾಗು ಲೋಹಗಳನ್ನೂ ಈ ರೆಫ್ರಿಜರೇಟರಿನಲ್ಲಿ ಬಳಸಬೇಕು ಎಂದಿತ್ತು. ಹೀಗೆ ವಿದ್ಯುತ್ತಾಗಲಿ, ವಿಷಾನಿಲವಾಗಿಲಿ ಇಲ್ಲದೆ ರೆಫ್ರಿಜರೇಟರನ್ನು ಫೀಸಿಕ್ಸ್ ತಂತ್ರದಿಂದ ರೂಪಿಸಿದ್ದರಂತೆ. ಆದರೆ ಅದು ಮಾರುಕಟ್ಟೆಗೇ ಬರಲಿಲ್ಲ. ಇತ್ತೀಚೆಗೆ ಅಂದರೆ ಈಗೆ ಎರಡು ವರ್ಷಗಳ ಹಿಂದೆ ಅದರ ತತ್ವವನ್ನೇ ಆಧರಿಸಿ ಬ್ರಿಟಿಷ್ ವಿಜ್ಞಾನಿಯೊಬ್ಬ ವಿದ್ಯುತ್ ಇಲ್ಲದೆಯೇ ತಣ್ಣಗಿಡುವ ತಂಪುಪೆಟ್ಟಿಗೆಯನ್ನು ತಯಾರಿಸಿದ. ಇದರಲ್ಲಿ ಜೀವವನ್ನುಳಿಸುವ ಲಸಿಕೆಗಳನ್ನು ಸುಮಾರು 30 ದಿನಗಳವರೆಗೆ ಕಾಪಾಡಬಹುದಂತೆ. 

ಐನ್ಸ್ಟೀನ್ ತಮ್ಮ ಗೆಳತಿ ಹಾಗೂ ಗಾಯಕಿ ಓಲ್ಗಾ ಐಸರಿಗೆ ನೆರವಾಗಲೆಂದು ಒಂದು ಶ್ರವಣ ಸಾಧನವನ್ನೂ ರೂಪಿಸಿದ್ದರಂತೆ. ಇದು ಅವರು ಜರ್ಮನಿಯಲ್ಲಿದ್ದಾಗಲೇ ಮಾಡಿದ್ದು. ಈ ಕೆಲಸ ಪೂರ್ಣಗೊಳ್ಳುವ ಮೊದಲೇ ಜರ್ಮನಿಯನ್ನು ಹಿಟ್ಲರ್ ಎಂಬ ಭೂತವೆದ್ದು ಕಾಡಲು ಆರಂಭಿಸಿತು. ಐನ್ಸ್ಟೀನ್ ಜರ್ಮನಿಯನ್ನು ಬಿಟ್ಟು ಅಮೆರಿಕೆಗೆ ವಲಸೆ ಬಂದರು ಎನ್ನುತ್ತದೆ ಚರಿತ್ರೆ. 

ಜೀನಿಯಸ್ಸಿನೊಳಗೂ ಒಬ್ಬ ಕರುಣಾಮಯಿ ಇದ್ದೇ ಇರಬೇಕು ಅಲ್ಲವೇ?
ಉಲ್ಲೇಖ: ALBERT EINSTEIN—REFRIGERATOR TECHNICIAN? 
SPECTRUM.IEEE.ORG | NORTH AMERICAN | NOV 2017 | 19; 
ಲಿಂಕ್: https://spectrum.ieee.org/geek-life/history/albert-einsteinrefrigerator-technician


3. ಪೂರ್ವಜರ ಮೂಗು ಮತ್ತು ಉಸಿರಾಟ

ವಿಜ್ಞಾನಿಗಳ ಬಗ್ಗೆ ಒಂದು ಮಾತಿದೆ. ಇವರು ಮೂಗು ತೂರಿಸದ ವಿಷಯವಿಲ್ಲ ಅಂತ. ಕಾಲ, ದೇಶ, ವಸ್ತು ಇವ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆಯೇ ಪ್ರಶ್ನೆ ಮಾಡುತ್ತಲೇ ಇರುತ್ತದೆ ವಿಜ್ಞಾನ.  ಉದಾಹರಣೆಗೆ, ನಮ್ಮ ಪೂರ್ವಜರ ಮೂಗು ನಮ್ಮಂತೆಯೇ ಇತ್ತೇ? ಅಥವಾ ಬೇರೆ ಥರವಿತ್ತೇ? ಇದೆಂಥ ಪ್ರಶ್ನೆ? ಮೂಗು ಹೇಗಿದ್ದರೇನಂತೆ ಎಂದು ಮೂಗು ಮುರಿಯಬೇಡಿ. ಮೂಗಿನ ಸ್ಥಾನ ಹಾಗೂ ಆಕಾರ ಮಾನವನ ವಿಕಾಸದಲ್ಲಿ ಬಲು ಮುಖ್ಯವಾದ ವಿಷಯ. ಮೂಗು ಮತ್ತು ಅದರ ಸುತ್ತಮುತ್ತಲಿರುವ ಖಾಲಿ ಜಾಗೆಗಳು ಮತ್ತು ನಾಲಗೆ ನಮಗೆ ಮಾತನಾಡುವ ಸೌಕರ್ಯವನ್ನು ಒದಗಿಸಿವೆ. ಇವು ಹೀಗೆ ಇದ್ದಿಲ್ಲದಿದ್ದರೆ ಬಹುಶಃ ಮಾನವನೂ ಮೂಕ ಪ್ರಾಣಿ ಎನ್ನಿಸಿಕೊಂಡು ಬಿಡುತ್ತಿದ್ದ. ಹೀಗೆ ಹೇಳುವ ಸಂಶೋಧನೆಯೊಂದು ಪಿಎನ್ಎಎಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಅರ್ಜೆಂಟೀನಾದ ಬ್ಯೂನೋಸ್ ಐರಿಸ್ಸಿನಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾಲಯದ ವಿಜ್ಞಾನಿ ರೋಡ್ರಿಗೋ ಪಾಜ್ ಮತ್ತು ಸಂಗಡಿಗರು ಹೀಗೊಂದು ಕೌತುಕವನ್ನು ವರದಿ ಮಾಡಿದ್ದಾರೆ. 

ಮೂಗಿನ ರಚನೆಯೇ ಮಾನವನ ವಿಕಾಸಕ್ಕೆ ಹಾದಿ ಮಾಡಿಕೊಟ್ಟಿರಬೇಕು ಎನ್ನುವ ಊಹೆ ಇದೆ. ಏಕೆಂದರೆ ಇಂದಿನ ಮಾನವ, ಅವನ ಪೂರ್ವಜರು ಹಾಗೂ ಆ ಪೂರ್ವಜರ ಕಾಲದಲ್ಲೇ ಇದ್ದ ನಿಯಾಂಡರ್ತಲ್ ಎನ್ನುವ ಆದಿಮಾನವ ಜೀವಿಯೂ ಬಹುತೇಕ ಶೀತ ಪ್ರದೇಶದಲ್ಲಿಯೇ ವಾಸವಿದ್ದರು. ಶೀತ ಹೆಚ್ಚಿದ್ದರೂ, ಬಿಸಿಲು ಹೆಚ್ಚಿದ್ದರೂ ಗಾಳಿಯಲ್ಲಿ ತೇವಾಂಶ ಕಡಿಮೆ ಇದ್ದು ಶುಷ್ಕವಾಗಿರುತ್ತದಷ್ಟೆ. ಶೀತ ವಾತಾವರಣದಲ್ಲಿ ಮೂಗು ಒಣಗಿದಂತೆ ಭಾಸವಾಗುವುದು ಇದೇ ಕಾರಣಕ್ಕೇ. ಮೂಗು ಒಣಗಿದಷ್ಟೂ ಉಸಿರಾಟಕ್ಕೂ ತೊಂದರೆ. ಅರ್ಥಾತ್, ನಾವು ಎಳೆದುಕೊಳ್ಳುವ ಉಸಿರು ತೇವವಾಗಿದ್ದರಷ್ಟೆ ಅದು ಶ್ವಾಸಕೋಶಕ್ಕೆ ಹಿತವಾಗಿರುತ್ತದೆ. ಉಸಿರು ಒಣಗಿದ್ದಷ್ಟೂ ಶ್ವಾಸಕೋಶಕ್ಕೂ ತೊಂದರೆಯೇ. ನಮ್ಮ ಮೂಗು ಈ ತೊಂದರೆಯನ್ನು ತಪ್ಪಿಸುತ್ತದೆ. ಮೂಗಿನೊಳಗೆ ಮ್ಯೂಕೋಸ ಎನ್ನುವ ಲೋಳೆಸುರಿಕ ಅಂಗಾಂಶವಿದೆ. ಇದು ಉಸಿರು ಶ್ವಾಸಕೋಶವನ್ನು ತಲುಪುವ ಮುನ್ನ ಅದನ್ನು ತೇವಗೊಳಿಸುತ್ತದೆ.

5

ಮಾನವ ಹಾಗೂ ನಿಯಾಂಡರ್ಥಲ್ ತಲೆಬುರುಡೆಗಳ ನಡುವಣ ವ್ಯತ್ಯಾಸ

ಹಾಗಿದ್ದರೆ ಶೀತ ಪ್ರದೇಶದಲ್ಲಿ ಇದ್ದ ನಿಯಾಂಡರ್ಥಲ್ ಜೀವಿಗಳ ಮೂಗಿಗೂ ಈ ಸಾಮರ್ಥ್ಯ ಇದ್ದಿರಬೇಕು? ಅಥವಾ ಈ ತರ್ಕವೇ ತಪ್ಪು ಎನ್ನುವುದಾದರೆ ನಮ್ಮ ಮೂಗಿನ ಚಟುವಟಿಕೆ ಬೇಸಿಗೆಯಲ್ಲಿಯೂ, ಛಳಿಗಾಲದಲ್ಲಿಯೂ ಒಂದೇ ರೀತಿ ಇರಬೇಕು. ಅಂದರೆ ಬೇಸಗೆಯಲ್ಲಿಯೂ, ಛಳಿಗಾಲದಲ್ಲಿಯೂ ಉಸಿರು ಒಳಗೆಳೆದುಕೊಂಡಾಗ ಅದಕ್ಕೆ ಕೂಡಿಕೊಳ್ಳುವ ತೇವಾಂಶದ ಪ್ರಮಾಣದಲ್ಲಿ ವ್ಯತ್ಯಾಸಗಳು ಇರಬಾರದು ಎಂದು ತರ್ಕಿಸಿದ ಪಾಜ್ ತಂಡ ಇದನ್ನು ಪರೀಕ್ಷಿಸಿದೆ. ಅಂದ ಹಾಗೆ ಮೂಗು ಗಟ್ಟಿಯಾಗಿ ಕಂಡರೂ ಮೂಳೆಯಲ್ಲವಷ್ಟೆ! ಹೀಗಾಗಿ ಇದು ಅಸ್ಥಿಪಂಜರದ ಪಳೆಯುಳಿಕೆಯಾಗಿ ಇರುವುದು ಸಾಧ್ಯವೇ ಇಲ್ಲ. ಹಾಗಿದ್ದರೆ ಇವರು ಹೇಗೆ ಸುಮಾರು ಎರಡರಿಂದ ಐದು ಲಕ್ಷ ವರ್ಷ ಹಿಂದೆ ಬದುಕಿದ್ದ ನಿಯಾಂಡರ್ತಲ್ಲರ ಮೂಗನ್ನು ಅಧ್ಯಯನ ಮಾಡಿದರು ಎನ್ನುವುದಲ್ಲವೇ ನಿಮ್ಮ ಪ್ರಶ್ನೆ!

ಪಾಜ್ ಮತ್ತು ಸಂಗಡಿಗರು ಪಳೆಯುಳಿಕೆಗಳ ತಲೆಬುರುಡೆಯಲ್ಲಿದ್ದ ರಚನೆಗಳನ್ನು ಕಂಪ್ಯೂಟರ್ ಬಳಸಿ ಪೂರ್ಣಗೊಳಿಸಿದರು. ಸ್ವಲ್ಪ ಮಟ್ಟಿಗೆ ಇದು ಮೂಗಿನ ಆಕಾರವನ್ನು ಒದಗಿಸಿತು. ಅನಂತರ, ಈ ಮೂಗು ಹಾಗೂ ಇಂದಿನ ಮಾನವರ ಮೂಗಿನ ರಚನೆಗಳನ್ನು ಹೋಲಿಸಿದರು. ಹೋಲಿಸುವಾಗ ಈ ಮೂಗುಗಳ ಮೂಲಕ ಸೆಳೆದುಕೊಂಡ ಗಾಳಿ ತೇವವಾಗಲು ಮೂಗಿನಲ್ಲಿ ಎಷ್ಟು ಅಂಗಾಂಶ ಇರಬೇಕು? ಅಷ್ಟು ಅಂಗಾಂಶ ಇದ್ದರೆ ವಿವಿಧ ಉಷ್ಣತೆಗಳಲ್ಲಿ ಉಸಿರಿನ ತೇವಾಂಶ ಎಷ್ಟಿರುತ್ತದೆ? ಎಂದು ಲೆಕ್ಕ ಹಾಕಿದರು. ಲೆಕ್ಕ ಸುಲಭವಲ್ಲ. ಉಷ್ಣತೆ, ಗಾಳಿಯ ತಾಪಮಾನ, ಮೂಗಿನ ರಚನೆ, ಮೂಗಿನ ತೇವಾಂಶ ಇವೆಲ್ಲವೂ ಉಸಿರಿನ ತೇವಾಂಶವನ್ನು ಬಾಧಿಸುತ್ತವೆ. ಹೀಗಾಗಿ ಒಂದಷ್ಟಿಷ್ಟು ಬದಲಾವಣೆಯಾದರೂ ಸಾಕಷ್ಟು ವ್ಯತ್ಯಾಸಗಳು ಕಾಣುತ್ತವೆ. ಇವನ್ನು ಲೆಕ್ಕ ಹಾಕುವುದು ಸುಲಭವಲ್ಲ.  ಕಂಪ್ಯೂಟರು ಅದನ್ನು ಸುಲಭವಾಗಿಸಿತು. ಹೀಗೆ ಲೆಕ್ಕ ಹಾಕುವುದನ್ನು ಕಂಪ್ಯೂಟರ್ ಫ್ಲೂಯಿಡ್ ಡೈನಾಮಿಕ್ಸ್ ಎಂದು ಹೇಳುತ್ತಾರೆ. ಈ ತಂತ್ರದಲ್ಲಿ ಉಸಿರಿನ ಉಷ್ಣಾಂಶ, ಹರಿವು ಎಲ್ಲವನ್ನೂ ಗಣಿಸಲಾಯಿತು.

ಇವೆಲ್ಲದರ ಪರಿಣಾಮ. ಶುಷ್ಕ ವಾತಾವರಣದಲ್ಲಿ ಬದುಕಿದ್ದ ನಿಯಾಂಡರ್ಥಲ್ ಮತ್ತು ಮಾನವನ ಪೂರ್ವಜರ ಮೂಗು ಇದಕ್ಕೆ ಉಸಿರಿನ ತೇವಾಂಶವನ್ನು ಕಾದಿಟ್ಟುಕೊಳ್ಳಲು ಶಕ್ತವಾಗಿತ್ತಂತೆ. ಅಂದರೆ ಈ ಶಕ್ತಿಯಿಂದಾಗಿ ನಿಯಾಂಡರ್ಥಲ್ಲರು ಯುರೋಪಿನ ಅತಿ ಶೀತಲ ವಾತಾವರಣದಲ್ಲಿ ಬದುಕಲು ಅನುವಾಯಿತು ಎಂದು ಇವರು ತರ್ಕಿಸಿದ್ದಾರೆ. 

ಕಣ್ಣಿಗೆ ಕಾಣದ್ದನ್ನೂ ಕಾಣಿಸುವ ಶಕ್ತಿ ಇರುವುದು ಬಹುಶಃ ವಿಜ್ಞಾನಕ್ಕೆ ಮಾತ್ರ ಅಲ್ಲವೇ?

ಆಕರ: S. de Azevedo et al, Nasal airflow simulations suggest convergent adaptation in Neanderthals and modern humans, PNAS Early Edition, www.pnas.org/cgi/doi/10.1073/pnas.1703790114


4. ನಾಯಿಗೆ ಬಡಿದ ಭಯದ ವಾಸನೆ

ವಾಸನೆ, ವಾಸನೆ ಎನ್ನುವವರನ್ನು ನಿನ್ನದೇನು ನಾಯಿ ಮೂಗೋ ಎಂದು ಹೀಯಾಳಿಸುವುದನ್ನು ಕೇಳಿದ್ದೇವೆ. ನಾಯಿಯ ಘ್ರಾಣ ಶಕ್ತಿ ಹೆಚ್ಚು. ಅತ್ಯಲ್ಪ ವಾಸನೆ ಇದ್ದರೂ ಅದನ್ನು ಗುರುತಿಸಬಲ್ಲುದು. ಅದರ  ಈ ಸಾಮರ್ಥ್ಯವನ್ನೇ ಪೋಲೀಸರು ಅಪರಾಧ ಪತ್ತೆಯಲ್ಲಿಯೂ ಬಳಸಿಕೊಳ್ಳುತ್ತಾರೆ. ಅದೇನೋ ಸರಿ. ಆದರೆ ನಾಯಿಗೆ ಭಯದ ವಾಸನೆಯೂ ಗೊತ್ತಾದೀತೇ?
ಓಹೋ? ಯಾಕಿಲ್ಲ. ಖಂಡಿತ ಅದಕ್ಕೆ ಭಯದ ವಾಸನೆ ಗೊತ್ತಾಗುತ್ತದೆ. ಅದರಲ್ಲೂ ಮನುಷ್ಯರಿಗೆ ಭಯವುಂಟಾದರೆ ಅದಕ್ಕೆ ಗೊತ್ತಾಗುತ್ತದೆಯಂತೆ. ಹೀಗೆಂದು ಇಟಲಿಯ ನೇಪಲ್ಸ್ ವಿಶ್ವವಿದ್ಯಾನಿಲಯದ ಜೀವವಿಜ್ಞಾನಿ ಬಿಯಾಜಿಯೊ ಡ್ಯಾನಿಯೆಲೊ ಮತ್ತು ಸಂಗಡಿಗರು ಅನಿಮಲ್ ಕಾಗ್ನಿಷನ್  ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ತನ್ನ ಒಡೆಯ ಮಾತನಾಡದಿದ್ದರೂ, ಸಂಜ್ಞೆ ಮಾಡದಿದ್ದರೂ ಕೇವಲ ಅವನ ವಾಸನೆಯಿಂದಲೇ ಅವನಿಗೆ ಭಯವಾಗಿದೆ ಎಂದು ನಾಯಿಗಳು ತಿಳಿದುಕೊಳ್ಳುತ್ತವೆ ಎಂದು ಇವರು ವರದಿ ಮಾಡಿದ್ದಾರೆ.
 
ಹೌದೇ? ಅದು ಹೇಗೆ? ಎಂದಿರಾ. ವಿಷಯಗಳನ್ನು ತಿಳಿಸಲು ಮಾತೇ ಬೇಕಿಲ್ಲ. ಪ್ರೇಮಿಗಳಲ್ಲಿ ಮಾತಿಗಿಂತಲೂ ಕಣ್ಣ ಭಾಷೆಯೇ ಹೆಚ್ಚು ಎನ್ನುವುದನ್ನೂ ಕೇಳಿದ್ದೇವೆ. ಪ್ರಾಣಿಗಳು ಸಂವಹನಕ್ಕೆ ಶಬ್ದ,  ಸಂಜ್ಞೆಗಳ ಜೊತೆಗೇ ಪರಿಮಳ ಗಂಧಗಳನ್ನೂ ಬಳಸುತ್ತವೆ. ಇವನ್ನು ಫೆರೋಮೋನು ಎನ್ನುತ್ತಾರೆ. ಮೂಗಿಗೆ ಗಾಢವಾಗಿ ಬಡಿಯುವಷ್ಟು ಪ್ರಮಾಣದಲ್ಲಿ ಇಲ್ಲದಿದ್ದಾಗ್ಯೂ ಇವು ಪ್ರಾಣಿಗಳ ನಡವಳಿಕೆಯನ್ನು ಬದಲಿಸಬಲ್ಲುವು. ರೇಷ್ಮೆಯ ಪತಂಗದ ಗಂಡು ಆರೇಳು ಕಿಲೋಮೀಟರು ದೂರದಿಂದಲೇ ತನ್ನ ಪ್ರೇಯಸಿದ ಪರಿಮಳವನ್ನು ಪತ್ತೆ ಮಾಡುತ್ತದಂತೆ. ಇನ್ನು ಇರುವೆಗಳೂ ಆಹಾರದ ವಾಸನೆಯ ಜಾಡು ಹಿಡಿದು ಸಾಗುವುದನ್ನು ಗಮನಿಸಿರುತ್ತೀರಿ. ಸೊಳ್ಳೆಗಳೂ ನಮ್ಮ ದೇಹದಿಂದ ಒಸರುವ ಬೆವರಿನ ವಾಸನೆಯನ್ನು ಹಿಡಿದು ರಕ್ತ ಹೀರಲು ಬರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 

6

ಭಯವೋ, ಬೆದರಿಕೆಯೋ?​

ಮನುಷ್ಯನಲ್ಲೂ ವಾಸನೆಯ ಗ್ರಂಥಿಗಳಿವೆ. ಇವು ಒಸರುವ ಗಂಧಗಳು ಇತರರಿಗೆ ಯಾವ ವಿಷಯವನ್ನು ಹೇಳೂತ್ತವೆಯೋ ಗೊತ್ತಿಲ್ಲ. ಆದರೆ ಯಾರಿಗಾದರೂ ಭಯವಾದಾಗ, ಅವರ ಬಳಿಯಿದ್ದವರೂ ಭಯವನ್ನು ಅನುಭವಿಸುತ್ತಾರೆ. ಇದು ಬಹುಶಃ ಫೆರೋಮೋನುಗಳಿಂದ ಇರಬಹುದು ಎನ್ನುವ ಅನುಮಾನವಿದೆ. 

ನಮ್ಮ ಭಯದ ವಾಸನೆ ನಾಯಿಗೂ ತಟ್ಟಬಹುದೇ? ಇದು ಪ್ರಶ್ನೆ. ಏಕೆಂದರೆ ಎರಡು ವಿಭಿನ್ನ ಜೀವಿಗಳಾದ ನಾಯಿ ಮತ್ತು ಮನುಷ್ಯರ ಒಡನಾಟ ಬಲು ಆತ್ಮೀಯವಾಗಿರುತ್ತದೆ. ಇಷ್ಟು ಆತ್ಮೀಯತೆ ಬೆಳೆಯಬೇಕಾದರೆ ಒಬ್ಬರಿನ್ನೊಬ್ಬರ ಜೊತೆಗೆ ಸಂವಾದಿಸುವುದು ಅವಶ್ಯಕ. ನಾವು ಮಾತನಾಡುವುದು ನಾಯಿಗೆ ಅರ್ಥವಾಗುತ್ತದೆಯೋ ಅಥವಾ ಅದು ಕೇವಲ ಶಬ್ದದ ಜೊತೆಗೆ ನಾವು ಮಾಡುವ ಹಾವಭಾವಗಳನ್ನೂ ಕೂಡಿಸಿಕೊಂಡು ನಮ್ಮ ಮನಸ್ಸಿನಲ್ಲಿರುವುದನ್ನು ಅರ್ಥ ಮಾಡಿಕೊಳ್ಳುತ್ತದೆಯೋ ಎನ್ನುವುದು ಸ್ಪಷ್ಟವಾಗಿಲ್ಲ. ಇವೆಲ್ಲದರ ಮಧ್ಯೆ ನಾಯಿ ವಾಸನೆಯಿಂದಲೂ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತದೆ ಎನ್ನುವುದು ವಿಚಿತ್ರವಾದರೂ ವಿಶಿಷ್ಟ. 

ಡ್ಯಾನಿಯೆಲೊ ತಂಡ ಇದಕ್ಕಾಗಿ ಪ್ರಯೋಗಗಳನ್ನು ನಡೆಸಿತು. ಮನುಷ್ಯರಿಗೆ ಭಯವುಂಟು ಮಾಡಿ ಅವರ ಕಂಕುಳಿನ ಬೆವರನ್ನು ಹತ್ತಿಯಿಂದ ಒರೆಸಿ ತೆಗೆದರು. ಕಂಕುಳಿನ ಬೆವರಿನ ಜೊತೆಗೆ ಪ್ರೇಯಸಿಯನ್ನು ಆಕರ್ಷಿಸುವ ಫೆರೋಮೋನುಗಳೂ, ಸಂತೋಷದ ಸಂದೇಶವನ್ನು ಬೀರುವ ಫೆರೋಮೋನುಗಳೂ ಇರುತ್ತವೆಂದು ಗುಮಾನಿ ಇದೆ. ಭಯದ ಫೆರೋಮೋನುಗಳೂ ಇವೆ. ಈ ಹತ್ತಿಯನ್ನು ಅನಂತರ ನಾಯಿಗಳಿಗೆ ಮೂಸಲು ಕೊಡಲಾಯಿತು. ಅನಂತರ ನಾಯಿಗಳನ್ನು ಮನುಷ್ಯರ ಬಳಿ ಕರೆದೊಯ್ದಾಗ ಅವು ಸಂತೋಷ ಪಟ್ಟಿದ್ದವರ ಬಳಿಗೆ ಓಡಿದಷ್ಟು ಭಯಗೊಂಡಿದ್ದವರ ಬಳಿಗೆ ಹೋಗಲಿಲ್ಲವಂತೆ. ಅರ್ಥಾತ್, ಅದು ಹೇಗೋ ಅವಕ್ಕೆ ಈ ಮಂದಿಗೆ ಭಯವಾಗಿತ್ತು ಎಂಬುದು ಅರ್ಥವಾಗಿ ಬಿಟ್ಟಿತ್ತು ಎಂದು ಡ್ಯಾನಿಯೆಲೊ ತೀರ್ಮಾನಿಸಿದ್ದಾರೆ.

ಕಥೆಗಳಲ್ಲಿ ಲೇಖಕರು ದುರಂತ, ಸಾವು ಹಾಗೂ ಭಯವನ್ನು ವಾಸನೆ ಎಂದು ವಿವರಿಸುತ್ತಾರಲ್ಲ ಇದಕ್ಕೇ ಇರಬಹುದೇ?
ಉಲ್ಲೇಖ: D’Aniello, B., Semin, G.R., Alterisio, A. et al. Anim Cogn (2017). https://doi.org/10.1007/s10071-017-1139-x


5. ಜಾಣನುಡಿ

ನವೆಂಬರ್ 7. ಅಖಂಡ ಭಾರತದಲ್ಲಿ ನೋಬೆಲ್ ಪಾರಿತೋಷಕವನ್ನು ಪಡೆದ ಏಕೈಕ ವಿಜ್ಞಾನಿ ಸರ್. ಸಿ. ವಿ. ರಾಮನ್ ಜನಿಸಿದ ದಿನ. ಅಂದಿನಿಂದ ಇಂದಿನವರೆಗೂ ಇನ್ನೂ ನಾಲ್ಕೈದು ಮಂದಿ ನೋಬೆಲ್ ಪಾರಿತೋಷಕವನ್ನು ಗಳಿಸಿದ್ದಾರೆ. ಆದರೆ ಅವರ್ಯಾರೂ ರಾಮನ್ನರಂತೆ ಭಾರತದಲ್ಲೇ ನೆಲೆಸಿದವರಲ್ಲ. ಆ ಮಟ್ಟಿಗೆ ಇಲ್ಲೇ ಇದ್ದು, ಪ್ರಪಂಚಕ್ಕೆ ನಮ್ಮ ವಿಜ್ಞಾನದ ಮಟ್ಟವನ್ನು ನಿರೂಪಿಸಿದವರು ರಾಮನ್. ವಿಜ್ಞಾನ, ಬದುಕು, ಕಲಿಕೆಯ ಬಗ್ಗೆ ಅವರು ಸಾಕಷ್ಟು ಹೇಳಿದ್ದಾರೆ. ಅದರಲ್ಲಿ ಒಂದು ಬಹಳ ಅರ್ಥಪೂರ್ಣವಾದ ಮಾತು ಹೀಗಿದೆ. 
“ನಿಮ್ಮ ಬದುಕಿನಲ್ಲಿ ನಿಮಗೆ ಜೊತೆಯಾಗುವವರನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನಿಮಗಿಲ್ಲದಿರಬಹುದು, ಆದರೆ ಅವರಿಂದ ಯಾವ ಪಾಠ ಕಲಿಯಬಹುದೆನ್ನುವ ಸ್ವಾತಂತ್ರ್ಯ ಮಾತ್ರ ನಿಮ್ಮದೇ.”
ಅಲ್ಲವೇ?

sir-c-v-raman

madam-curie

ನವೆಂಬರ್ 7 ಮತ್ತೊಬ್ಬ ವಿಜ್ಞಾನಿ ಹಾಗೂ ಮಹಿಳೆಯರಲ್ಲೇ ಅದ್ವಿತೀಯರಾದಂಥ ಮೇರೀ ಕ್ಯೂರಿ ಹುಟ್ಟಿದ ದಿನ. ಈಕೆ ಎರಡು ಬಾರಿ ನೋಬೆಲ್ ಪಾರಿತೋಷಕ ಗಳಿಸಿದ್ದರು. ಅದೂ ಎರಡು ವಿಭಿನ್ನ ವಿಷಯಗಳಲ್ಲಿ ಗಳಿಸಿದರು. ಮೊದಲು ಫಿಸಿಕ್ಸಿನಲ್ಲಿ ಹಾಗೂ ಅನಂತರ ಕೆಮಿಸ್ಟ್ರಿಯಲ್ಲಿ. ಈಕೆಯೂ ಬಲು ಸೊಗಸಾದ ಮಾತನ್ನು ಹೇಳಿದ್ದಾರೆ. 
“ಪರಿಪೂರ್ಣತೆಯನ್ನು ಪಡೆಯುವುದು ಹೇಗೆನ್ನುವ ಬಗ್ಗೆ ಆತಂಕ ಬೇಡ. ಅದನ್ನು ಪಡೆಯುವುದು ಸಾಧ್ಯವೇ ಇಲ್ಲ.”
ಎರಡೆರಡು ಬಾರಿ ನೋಬೆಲ್ ಪಡೆದವರು ಈ ಮಾತನ್ನು ಹೇಳಿದ್ದಾರೆಂದರೆ ಅದೆಷ್ಟು ಕಠಿಣ ಸತ್ಯ ಇರಬೇಕು ಅಲ್ಲವೇ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x