ಜನಜಾಗೃತಿಯ ಮಹಾಮಾರ್ಗದ ‘ಆಯುಧ’ ನಾಟಕ ಪ್ರಯೋಗ: ಹಿಪ್ಪರಗಿ ಸಿದ್ಧರಾಮ

hipparagi
ಬದುಕಿನಲ್ಲಿ ಸರ್ವವನ್ನು ಕಳೆದುಕೊಂಡ ವ್ಯಕ್ತಿಯೋರ್ವ ಅಂತಿಮವಾಗಿ ಗುರುವಿನ ಹುಡುಕಾಟದಲ್ಲಿ ಅಲೆಮಾರಿಯಾಗಿ ತಾಯಿಯನ್ನು ಕಳೆದುಕೊಂಡ ಮಗುವಿನಂತೆ ಹಂಬಲಿಸುತ್ತಾ ರಂಗಪ್ರವೇಶಿಸುವುದರೊಂದಿಗೆ ‘ಆಯುಧ’ ನಾಟಕ ಅಸಂಗತವಾಗಿ ಆರಂಭವಾಗುತ್ತದೆ. ಕೆಲಸವಿಲ್ಲದ ವಿದ್ಯಾವಂತ ನಿರುದ್ಯೋಗಿಗಳು ಬಡಾವಣೆಯೊಂದರ ಹರಟೆ ಕಟ್ಟೆಯಲ್ಲಿ ಕಲಿತ ವಿದ್ಯೆಯನ್ನು ಮರೆತು ಇಸ್ಪೀಟು, ಜೂಜಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅಲ್ಲಿಗೆ ಆಗಮಿಸುವ ಅನಾಮಿಕನೋರ್ವನು ‘ಸೇವ್ ಇಂಡಿಯಾ ; ಸೇವ್ ಡೆಮಾಕ್ರಸಿ’ ಎಂದು ತನ್ನಷ್ಟಕ್ಕೆ ತಾನೆ ಬಡಬಡಿಸುತ್ತಾ, ನಗುತ್ತಾ ಅವಧೂತನಂತೆ ಆಗಮಿಸಿ, ಕುಳಿತುಕೊಳ್ಳುತ್ತಾನೆ. ಹೀಗೆ ಎಷ್ಟೋ ಹೊತ್ತು ನಡೆದರೂ ನಿರುದ್ಯೋಗಿಗಳು ಮತ್ತು ಅನಾಮಿಕರ ನಡುವೆ ಯಾವುದೇ ಸಂವಹನ ನಡೆಯದೆ, ಅಸಂಗತವಾಗಿ ತಂತಮ್ಮ ಲೋಕದಲ್ಲಿ ತಲ್ಲೀನರಾಗಿರುತ್ತಾರೆ. ಇಸ್ಪೀಟಾಟದಲ್ಲಿ ಸೋತವನು ಮತ್ತು ಗೆದ್ದವನ ನಡುವೆ ಜಗಳ ಶುರುವಾಗಿ, ಮಾರಾಮಾರಿ ನಡೆದು, ರಕ್ತಪಾತದಿಂದ ಸುಸ್ತಾಗಿ ಬಿದ್ದಾಗ ಅನಾಮಿಕನ ‘ಸೇವ್ ಇಂಡಿಯಾ ; ಸೇವ್ ಡೆಮಾಕ್ರಸಿ’ ಧ್ವನಿ ಕೇಳಿ ಕುತೂಹಲವಾಗುತ್ತಾರೆ. ಕುತೂಹಲದಿಂದ ನಡೆಯುವ ಚುರುಕಿನ ಸಂಭಾಷಣೆಯು ನಾಟಕಕಾರರ ಅಭಿರುಚಿಯನ್ನು ಪ್ರತಿಧ್ವನಿಸಿತು. ಪ್ರಾಚೀನ ಕಾಲದಿಂದ ಆರಂಭಗೊಂಡು ಸಮಕಾಲೀನ ಸಂದರ್ಭದವರೆಗಿನ ಹಲವಾರು ವಿಷಯಗಳು ಸಾಂದರ್ಭಿಕವಾಗಿ ಅನಾಮಿಕನ ಸಂಭಾಷಣೆಯಲ್ಲಿ ಅಭಿವ್ಯಕ್ತಗೊಂಡವು. ಸಾಮಾಜಿಕ ಪರಿವರ್ತನೆಯ ಹೋರಾಟಗಾರರ ಉಲ್ಲೇಖಗಳು ಪುಂಖಾನುಪುಂಖವಾಗಿ ಹೊರಹೊಮ್ಮುವುದು ಅನಾಮಿಕ ಪಾತ್ರದ ವಿಶೇಷ. ವಾಜಿ ಹಾರುವುದಲ್ಲ, ತೇಜಿ ಹೇರುವುದಲ್ಲ, ಗಾಜಿನ ಕುಣಿಕೆ ಮಣಿಯಲ್ಲ, ಅತ್ತಿಫಲ ಬೀಜದೊಳಗಲ್ಲ ಎಂಬ ಸರ್ವಜ್ಞನ ಅನುಭವಾತ್ಮಕ ತ್ರಿಪದಿಯು ಸಂದರ್ಭೋಚಿತವಾಗಿತ್ತು. 

ayudha_drama-show1

ಕರೆನ್ಸಿ ಬದಲಾಯಿಸಿದ್ದು, ಡಿಜಿಟಲ್ ಇಂಡಿಯಾ ವಿಚಾರ, ಭಾಗ್ಯಗಳ ಯೋಜನೆಗಳಂತಹ ಪ್ರಜಾಪ್ರಭುತ್ವದ ಸರಕಾರಗಳ ಸಮಕಾಲೀನ ಜನಪರ ವಿಚಾರಗಳು ಅಲ್ಲಲ್ಲಿ ಉಲ್ಲೇಖಗೊಂಡವು. ದೇಶದ ಪ್ರಜೆಗಳಿಗಾಗಿ ರೂಪಿತವಾಗುವ ಯೋಜನೆಗಳ ಸದೂಪಯೋಗ ಮಾಡಿಕೊಳ್ಳಿರಿ. ಋಣಾತ್ಮಕವಾಗಿ ಯೋಚಿಸದಿರಿ. ಸಾಮಾಜಿಕ ಸಮಾನತೆಯನ್ನು ಭಯಸುವ ಪ್ರಜಾಪ್ರಭುತ್ವವವು ವಿಶ್ವಕ್ಕೆ ಮಾದರಿಯಾಗಿ ನಮ್ಮ ಇಂಡಿಯಾ ದೇಶವನ್ನು ಬೆಳಗುತ್ತಿದೆ. ಪ್ರಜಾಪ್ರಭುತ್ವವೆಂಬ ಮಹಾಮಾರ್ಗವನ್ನು ಅನುಸರಿಸದೆ ಕ್ಷಣಿಕ ಆಕರ್ಷಣೆಗೆ ಒಳಗಾಗಿ ವ್ಯವಸ್ಥೆಯನ್ನು ಬದಲಿಸೋಣ, ಕ್ರಾಂತಿ ಮಾಡೋಣ ಎಂಬ ಭ್ರಮೆಯಲ್ಲಿರುವುದು ಸರಿಯಲ್ಲ. ರಾಜರ ಆಳಿಕೆ ಮುಗಿದು ಎಂದೋ ಕಾಲವಾಯ್ತು. ಸ್ವಾತಂತ್ರಪೂರ್ವದಲ್ಲಿ ನಮ್ಮನ್ನಾಳುವ ದೊರೆಯು ದೊರೆಯ ಹೊಟ್ಟೆಯಲ್ಲಿ ಜನಿಸುತ್ತಿದ್ದ ; ಆದರೆ ಪ್ರಜಾಪ್ರಭುತ್ವದಲ್ಲಿ ಮತಪೆಟ್ಟಿಗೆಯಲ್ಲಿ ನಮ್ಮನ್ನಾಳುವ ದೊರೆಯು ಜನಿಸಿ ಉದಯವಾಗುತ್ತಾನೆ ಎಂಬ ಅನಾಮಿಕ (ಜೊಸೆಪ್ ಮಲ್ಲಾಡಿ) ಪಾತ್ರದ ಸಂಭಾಷಣೆ ಗಮನ ಸೆಳೆಯಿತು. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿರಿ. ಭವ್ಯ ಇತಿಹಾಸವನ್ನು ಸಂಪೂರ್ಣವಾಗಿ ಅರ್ಥಾ ಮಾಡಿಕೊಂಡು ಭವಿಷ್ಯವನ್ನು ಸಮಸಮಾಜದ ಸಮಾನತೆಯ ಮಾನವೀಯತೆಯೊಂದಿಗೆ ಪ್ರಜಾಪ್ರಭುತ್ವವನ್ನು ಬಲಗೊಳಿಸಿರಿ. ಸಿನಿಕರಾಗದಿರಿ. ಈ ದೇಶಕ್ಕೆ ಪ್ರಜಾಪ್ರಭುತ್ವ ಬಿಟ್ಟರೆ ಪರಿಹಾರವಿಲ್ಲ. ಪ್ರತೊಯೊಬ್ಬರ ಮನೆಯಲ್ಲಿ ನಮ್ಮ ದೇಶದ ಸಂವಿಧಾನ ಕಡ್ಡಾಯವಾಗಿ ಇಟ್ಕೊಳ್ರಿ ಎಂದು ಹೇಳುತ್ತಾ ನಿರುದ್ಯೋಗಿ ಫಟಿಂಗರ ಮನಸ್ಸು ಬದಲಾಯಿಸುತ್ತಾನೆ. 

ಬದಲಾಗಿದ್ದಾರೆಂದು ಭಾವಿಸುವ ಹೊತ್ತಿಗೆ ಮತ್ತೆ ಜಾತಿಯ ಹೆಸರಿನ ಜಗಳ ಶುರುವಾಗುತ್ತದೆ. ಬಿಡಿಸುವರಿಲ್ಲದೇ ಜಗಳಾಡುವುದನ್ನು ಮೊಬೈಲ್‍ದಲ್ಲಿ ಚಿತ್ರಿಕರಿಸುತ್ತಾ, ಇಂಟರ್‍ನೆಟ್‍ಗೆ ಅಪ್‍ಲೋಡ್ ಮಾಡಿದರೆ ಲೈಕ್, ವೀಕ್ಷಕರ ಸಂಖ್ಯೆ ಹೆಚ್ಚಾದರೆ ಹೆಚ್ಚು ಹಣ ಅಕೌಂಟಿಗೆ ಬರುವುದರೊಂದಿಗೆ ಹಣ ಸಂಪಾದಿಸಬೇಕೆನ್ನುವ ಆಧುನಿಕ ವಿಕೃತಿಗಳನ್ನು ಸಹ ನಾಟಕದಲ್ಲಿ ನಿರ್ದೇಶಕರು ಬಳಸಿಕೊಂಡಿರುವುದು ಅವರ ಸೃಜನಶೀಲತೆಗೆ ಕೈಗನ್ನಡಿಯಾಗಿದೆ. ಇಷ್ಟೇಲ್ಲಾ ಮಾತಾಡೋನು ಯಾರಿವನು ? ಎಂದು ತಲೆಕೆಡಿಸಿಕೊಳ್ಳುತ್ತಿರುವಾಗ ಗುವಿನ ಅನ್ವೇಷಣೆಯಲ್ಲಿರುವ ಅಲೆಮಾರಿ (ಹಿಪ್ಪರಗಿ ಸಿದ್ಧರಾಮ) ವ್ಯಕ್ತಿಯು ‘ಗುರುಗಳೇ, ನೀವು ಇಲ್ಲಿದ್ದೀರಾ?’ ಎಂದು ಕೂಗುತ್ತಾ ಬಂದು ಅನಾಮಿಕ ವಿಚಾರವಾದಿ ವ್ಯಕ್ತಿಯ ಪರಿಚಯವನ್ನು ನಿರುದ್ಯೋಗಿಗಳಿಗೆ ಹೇಳಿದಾಗ ಗೌರವದಿಂದ ತಲೆಬಾಗುವರು. ಇಂಥಹ ಸಾಮಾಜಿಕ ವಿಚಾರವಾದಿಗಳನ್ನು ನಾವು ರಕ್ಷಿಸಿಕೊಳ್ಳುವುದು ಇಂದಿನ ಕಾಲದ ತುರ್ತಾಗಿದೆ. ತಪ್ಪಾಗಿ ಅರ್ಥೈಸಿಕೊಂಡು ಅವರ ಜೀವಕ್ಕೆ ಅಪಾಯವಾಗಬಾರದು ಎಂದು ಹೇಳುತ್ತಿರುವಾಗ, ಅನಾಮಿಕನು, ಸತ್ಯ ಯಾವಾಗಲು ಕಠುವಾಗಿರುತ್ತದೆ. ಅದನ್ನು ಮುಚ್ಚಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಮತ್ತು ಅಂತಿಮವಾಗಿ ಈ ದೇಶಕ್ಕೆ ಜಾತಿ, ಮತ, ಧರ್ಮಗಳಿಂದ ಏನೂ ಪ್ರಯೋಜನವಿಲ್ಲ. ಸರ್ವರನ್ನೂ ಸಮಾನವಾಗಿ ಕಾಣುವ ಮಾನವೀಯ ಅಂತಃಕರಣದ ಸಂವಿಧಾನ ನಮ್ಮ ಧರ್ಮವಾದರೆ ಸಾಕು. ಎಲ್ಲರೂ ಅದನ್ನು ಅನುಸರಿಸಿದರೆ ಸಾಕು. ನಮ್ಮೆಲ್ಲರನ್ನು ನಿಯಂತ್ರಿಸಲು ಯಾವುದೇ ಮಾರಕ ಆಯುಧ ಬೇಡ. ‘ಸಂವಿಧಾನ’ ಒಂದೇ ಸಾಕು. ನಮ್ಮೆಲ್ಲರ ಆಯುಧ ‘ಸಂವಿಧಾನ’ ಆಗಬೇಕು ಎಂದು ಘೋಷಣೆ ಕೂಗಿಸುತ್ತಾ ಎಲ್ಲರನ್ನು ಒಂದು ಮಾಡಿಸುವ ಅನಾಮಿಕ ಪಾತ್ರದೊಂದಿಗೆ ಸಹಜ ಅಭಿನಯದೊಂದಿಗೆ ಗಮನಸೆಳೆದ ಗಣಕರಂಗ ಕಲಾವಿದರು ಬಹುದಿನಗಳವರೆಗೆ ನೆನಪಿನಲ್ಲಿ ಉಳಿಯುವಂತಹ ನಾಟಕ ಪ್ರದರ್ಶನ ಕಟ್ಟಿಕೊಟ್ಟರು. ಇಂಥಹ ಪ್ರದರ್ಶನವನ್ನು ಸವಿಯುವ ಭಾಗ್ಯವನ್ನು ಧಾರವಾಡದ ಶ್ರೀಗುರು ಸಂಗೀತ ಪಾಠಶಾಲೆ ಸಂಘದವರು ಆಯೋಜಿಸಿದ್ದ ನಾಟಕೋತ್ಸವ-2017ರಲ್ಲಿ ಒದಗಿಸಿಕೊಟ್ಟಿದ್ದರು. 

ಉದಯೋನ್ಮುಖ ಕಲಾವಿದ ಯೋಗೇಶ ಪಾಟೀಲ ನಿರ್ದೇಶನದೊಂದಿಗೆ ಪಾತ್ರವೊಂದರ ನಿರ್ವಹಣೆ ಮಾಡಿದ್ದರು. ನಿರುದ್ಯೋಗಿಗಳ ಪಾತ್ರದಲ್ಲಿ ವೀರೇಶ ಪುಠಾಣಿಶೆಟ್ಟರ್, ದೊಡ್ಡಬಸವ ಕಾರಟಗಿ ಚುರುಕಿನ ಅಭಿನಯದ ಮೂಲಕ ಪ್ರೇಕ್ಷಕರಿಗೆ ಕಚಗುಳಿಯಿಟ್ಟರು. ಆಧುನಿಕ ನಾಟಕ ಪ್ರದರ್ಶನಗಳ ಸಂದರ್ಭದಲ್ಲಿ ಯಾವುದೇ ಆಡಂಭರದ ರಂಗಸಜ್ಜಿಕೆ, ಬೆಳಕಿನ ವ್ಯವಸ್ಥೆಯ ಹಂಗಿಲ್ಲದೆ ಇರುವುದನ್ನೇ ಸಮರ್ಥವಾಗಿ ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ಸಮಾಜಮುಖಿ ಸಂಗತಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಈಗಾಗಲೇ ಹೆಸರಾಗಿರುವ ಧಾರವಾಡದ ಗಣಕರಂಗ ಸಂಸ್ಥೆಯ ಈ ನಾಟಕ ವಿವಿದೆಡೆ ಹಲವಾರು ಪ್ರಯೋಗಗಳನ್ನು ಕಂಡಿದ್ದು, ಜನಜಾಗೃತಿ ಮೂಡಿಸಲು ಯುವಕರು ರಂಗಮಾಧ್ಯಮವನ್ನು ಆಯ್ಕೆ ಮಾಡಿಕೊಂಡಿರುವುದು ಅವರ ಆರೋಗ್ಯವಂತ ಸೃಜನಶೀಲ ಮನಸ್ಸಿಗೆ ಸಾಕ್ಷಿ ಎಂದರೆ ತಪ್ಪೇನಲ್ಲ !


    
 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
shreemanth
shreemanth
6 years ago

Good play.

1
0
Would love your thoughts, please comment.x
()
x