ಹಿಮಾಲಯವೆಂಬ ಸ್ವರ್ಗ (ಭಾಗ 4): ವೃಂದಾ ಸಂಗಮ್

vranda-sangam

ಇಲ್ಲಿಯವರೆಗೆ

ನಾವು ಮೊದಲು ಹೋದದ್ದು ಥಾಯ್ಲ್ಯಾಂಡ್ ದೇಶದ ಚೈತ್ಯಕ್ಕೆ. ಇದು ಥಾಯಿ ಶೈಲಿಯ ಕಟ್ಟಡವಾಗಿದ್ದು ಸುಮಾರು ದೊಡ್ಡದಾಗಿದೆ. ಇದನ್ನು ಕಟ್ಟಿ 4೦ ವರ್ಷಗಳಾಗಿದ್ದವು (1998 ರಲ್ಲಿ). ಬುದ್ಧನ ಪ್ರತಿಮೆ ನಾಲ್ಕುವರೆ ಟನ್ ಭಾರದ ಅಷ್ಟಧಾತು ಎಂಬ ಸಾಮಗ್ರಿಯಿಂದ ಮಾಡಲ್ಪಟ್ಟಿದೆಯಂತೆ. ಚಿನ್ನದ ಪಾಲೀಶ್ ಹಾಕಿರುವ ಈ ಪ್ರತಿಮೆಯ ವೆಚ್ಚ ಹದಿನಾರು ಲಕ್ಷ ರುಪಾಯಿಗಳಾಗಿದ್ದವಂತೆ. ಪ್ರತಿಮೆಯನ್ನು ಇಲ್ಲಿಯ ರೀತಿಯಂತೆ ಒಂದು ಗಾಜಿನ ಪೆಟ್ಟಿಗೆಯಲ್ಲಿರಿಸಲಾಗಿದೆ. ಚೈತ್ಯವು ಬಹಳ ಸುಂದರವಾಗಿದೆ – ಗೋಡೆಗಳು, ನೆಲ, ಮೇಲಿನ ಛಾವಣಿ ಎಲ್ಲ ಸುಂದರವಾದ ರಂಗು-ರಂಗಾದ ಕೆತ್ತನೆ/ಚಿತ್ರಕಲೆಗಳಿಂದ ತುಂಬಿದೆ. ಇದಾದ ನಂತರ ಒಂದು 8೦ ಅಡಿ ಎತ್ತರದ ಕುಳಿತಿರುವ ಬುದ್ಧನ ಪ್ರತಿಮೆ ನೋಡಲು ಹೋದೆವು. ಈ ಪ್ರತಿಮೆಯನ್ನು ಕೆಂಪು (ಇಟ್ಟಿಗೆ) ಬಣ್ಣದ ಮರಳುಗಲ್ಲಿನಿಂದ (ಸ್ಯಾಂಡ್ಸ್ಟೋನ್) ಮಾಡಲಾಗಿದೆ. ಬುದ್ಧನು ಒಂದು ತಾವರೆ ಹೂವಿನಾಕಾರದ ಆಸನದ ಮೇಲೆ ಕುಳಿತಿದ್ದಾನೆ. ಈ ಆಸನವನ್ನು ಹಳದಿ ಮರಳುಗಲ್ಲಿನಿಂದ ಮಾಡಲಾಗಿದೆ. ಬುದ್ಧನ ತಲೆಯಮೇಲೆ ಸುವರ್ಣಬಣ್ಣದ ಮುಂಗುರುಳು ಇದೆ. ಇದು ಭಾರಿ ಕಂಚು ಎಂದರು. ಈ ಪ್ರತಿಮೆಯನ್ನು ಭಾರತದಲ್ಲೇ ಮಾಡಿಸಿದ್ದಂತೆ. ಬುದ್ಧನ 1೦ ಶಿಷ್ಯರು ಅವನ ಸುತ್ತಲೂ ವಿವಿಧ ಆಸನಗಳಲ್ಲಿ ನಿಂತಿದ್ದಾರೆ. ನವೆಂಬರ್ 1989 ರಲ್ಲಿ ಈ ಪ್ರತಿಮೆಯನ್ನು ಉದ್ಘಾಟಿಸಲಾಯಿತಂತೆ. ಹೀಗೆ ಇನ್ನಷ್ಟು ಬುದ್ಧಾಲಯಗಳನ್ನು ನೋಡಿದೆವು. ನಮ್ಮ ಪ್ರೇಕ್ಷಣೆಯ ಕೊನೆಯ ವಿಹಾರ ಮಹಾಬೋಧಿ ಚೈತ್ಯವಾಗಿತ್ತು. ಇದು ಬೌದ್ಧರ ಅತ್ಯಂತ ಆದರಣೀಯ ಚೈತ್ಯ, ಹಾಗು ಬುದ್ಧನಿಗೆ ಜ್ಞಾನೋದಯವಾದ ಸ್ಥಳದ ಸಂಕೇತವಾಗಿದೆ. ಆದಿ ಶಂಕಾರಾಚಾರ್ಯರು 
     
ಬೌದ್ಧರನ್ನು ತರ್ಕದಲ್ಲಿ ಸೋಲಿಸಿದ ಕಾರಣ ಈ ಚೈತ್ಯವು ಸುಮಾರು ಶತಮಾನಗಳ ಕಾಲ ಅಲ್ಲಿಯ ಹಿಂದು ಶಂಕರಾಚಾರ್ಯ ಮಠದ ಆಧೀನದಲ್ಲಿದ್ದು, ಸ್ವಾತಂತ್ರ್ಯದ ನಂತರ ಮಠದ ಮಠಾಧಿಪತಿಯು ಈ ಚೈತ್ಯವನ್ನು ಭಾರತದ ಆಗಿನ ರಾಷ್ಟ್ರಪತಿಯಾದ ಡಾ ರಾಜೇಂದ್ರ ಪ್ರಸಾದರಿಗೆ ಉಡುಗೊರೆಯಾಗಿ ಕೊಟ್ಟರೆಂದು ಹೇಳಲಾಗುತ್ತದೆ. ಮಹಾಬೋಧಿ ಚೈತ್ಯವನ್ನು ಸಾಮ್ರಾಟ್ ಅಶೋಕನೇ ಸ್ವತಃ ಕಟ್ಟಿಸಿದ್ದಂತೆ. ಅವನು ಗೋಪುರಗಳನ್ನು 3೦ ಅಡಿ ಎತ್ತರ ಕಟ್ಟಿ ಅಲ್ಲಿಗೆ ನಿಲ್ಲಿಸಿದ್ದನಂತೆ. ಆದರೆ ಗುಪ್ತ ವಂಶದ ಚಕ್ರವರ್ತಿ ಸಮುದ್ರಗುಪ್ತನು ಗೋಪುರವನ್ನು 180 ಅಡಿಗೆ ಎತ್ತರಿಸಿದನಂತೆ. ಈ ಚೈತ್ಯವನ್ನು 12 ನೇ ಶತಮಾನದಲ್ಲಿ ಈ ಚೈತ್ಯವನ್ನು ಮುರಿಯಲು ಯತ್ನಿಸಿ ನಂತರ ಭೂಮಿಯಲ್ಲಿ ಹುಗಿಸಿಬಿಟ್ಟನಂತೆ. ಬ್ರಿಟೀಷರ ಕಾಲದಲ್ಲಿ ಲಾರ್ಡ್
     
ಕನ್ನಿಂಗ್ಹಾಮ್ ಎಂಬಾತ ಈ ಸ್ಥಳವನ್ನು ಭೂಶೋಧನೆ ಮಾಡಿ ರಿಪೇರಿ ಮಾಡಿಸಿದನಂತೆ. ಈಗಲೂ ಈ ಚೈತ್ಯಕ್ಕೆ ಹೋಗಲು ನೆಲ (ರಸ್ತೆ) ಮಟ್ಟದಿಂದ ಹಲವಾರು ಮೆಟ್ಟಲುಗಳಿಳಿದು ಹೋಗಬೇಕು. ಈ ಚೈತ್ಯವು ಸುಮಾರು ಬೇರೆ ಯಾವ ಗಾರೆಯನ್ನು ಬಳಸಿಲ್ಲವಂತೆ. ಇಟ್ಟಿಗೆ, ಸುಣ್ಣ, ಮಣ್ಣು, ಮರಳು ಹಾಗು ಬೆಲ್ಲದಿಂದ ಕಟ್ಟಲ್ಪಟ್ಟಿದೆಯಂತೆ. ಮುಸಲ್ಮಾನ ದಳಪತಿಯಾದ ಇಖ್ತಿಯಾರ್ ಖಿಲ್ಜಿ (ಭಖ್ತಿಯಾರ್ ಖಿಲ್ಜಿ ಎಂದೂ ಹೇಳುವರು ಈತನೇ ನಾಳಂದಾ ವಿಶ್ವವಿದ್ಯಾನಿಲಯವನ್ನು
     
ಧ್ವಂಸ ಮಾಡಿದ್ದು ಎಂದು 2300 ವರ್ಷ ಹಳೆಯದೆಂದು ಹೇಳಲಾಗುತ್ತದೆ. ಮಯಾನ್ಮಾರ್ (ಬರ್ಮ) ದೇಶವು ಉಡುಗೊರೆ ಕೊಟ್ಟ 5೦೦ ಕೆ.ಜಿ. ತೂಕದ ಒಂದು ಗಂಟೆಯನ್ನು ಇಲ್ಲಿ ನೋಡಬಹುದು. ಚೈತ್ಯದ ಪಕ್ಕದಲ್ಲಿ ಇನ್ನು ಎರಡು ಗುಡಿಗಳಿವೆ. ಮುಖ್ಯ ಚೈತ್ಯದ ಸುತ್ತಲೂ 48೦ ಸಣ್ಣ ಸಣ್ಣ ಸ್ತೂಪಗಳನ್ನು ಹಾಗು ಇತರ ಕಟ್ಟಡಗಳನ್ನು ನೋಡಬಹುದು. ಚೈತ್ಯದ ಹಿಂದೆ ಮಹಾಬೋಧಿ ವೃಕ್ಷ ಹಾಗು ಬುದ್ಧನಿಗೆ ಜ್ಞಾನೋದಯವಾದ ಆಸನಗಳನ್ನು (ಇದಕ್ಕೆ

ವಜ್ರಾಸನ ಎಂದು ಹೆಸರು) ಕಾಣಬಹುದು. ಬುದ್ಧನು ಆ ಆಸನದಲ್ಲಿ ಕುಳಿತು ಕಣ್ಣು ಮಿಟುಕಿಸದೆ ಈ ವೃಕ್ಷವನ್ನು ಒಟ್ಟಿಗೆ 7 ದಿನಗಳ ಕಾಲ ನೋಡಿದ್ದನಂತೆ. ಭಕ್ತಿಯಾರ್ ಖಿಲ್ಜಿಯು ಆ ಬೋಧೀ ವೃಕ್ಷವನ್ನು ಕಡಿಸಿಬಿಟ್ಟಿದ್ದನಂತೆ. ನಂತರ ನಿಂತ ಬೋಧಿ ವೃಕ್ಷವನ್ನು ಒಬ್ಬ ಹಿಂದೂ ರಾಜನು ಕಡಿಸಿದನಂತೆ. ಮೂರನೆಯದು ವಯಸ್ಸಾಗಿ ಬಿದ್ದುಹೋಯಿತಂತೆ. ಆದರೆ ಮೂಲ ಬೋಧಿ ವೃಕ್ಷದ ಸಸಿಗಳನ್ನು ಸಾಮ್ರಾಟ್ ಅಶೋಕನ ಮಕ್ಕಳು (5ನೆ ಕ್ಲಾಸಿನಲ್ಲಿ ಓದಿದ್ದು, ಮಗಳು ಸಂಘಮಿತ್ರ ಹಾಗೂ ಮಗನ ಹೆಸರು ನೆನಪಿಗೆ ಬರುತ್ತಿಲ್ಲ.) ಶ್ರೀಲಂಕೆಗೆ ಒಯ್ದಿದ್ದರಂತೆ. ಅದರ ಸಸಿ ಪುನ: ಶ್ರೀಲಂಕೆಯಿಂದ ತರಿಸಿ ಈ ಸ್ಥಳದಲ್ಲಿ ನೆಡಲಾಯಿತಂತೆ. ಬೋಧೀ ವೃಕ್ಷ ಹಾಗು ಆಸನಗಳಿರುವ ಈ ಸ್ಥಳವು 26೦೦ ವರ್ಷ ಹಳೆಯದ್ದಂತೆ. ಅದರ ಒಂದೆರಡು ಎಲೆಗಳನ್ನು ನಾನು ತಂದಿದ್ದೆ. ಅಲ್ಲಿ ತುಂಬಾ ಶಾಂತತೆ ಇದೆ. ಟಿಬೇಟಿಯನ್ ರು ಅಥವಾ ಅನೇಕ ಬೌದ್ಧ ಬಿಕ್ಷುಗಳು ಧ್ಯಾನ ಅಥವಾ ಸೇವೆ ಮಾಡುತ್ತಿರುತ್ತಾರೆ. ಹತ್ತಿರದಲ್ಲೇ ಒಂದು 1೦೦ ಅಡಿ ಎತ್ತರದ ಅಶೋಕ ಸ್ಥಂಭವಿತ್ತೆಂದು ಕೇಳಿದೆವು. ಆದರೆ ಮುಸಲ್ಮಾನರು ಅದನ್ನೂ ಕಡಿದು ಈಗ ಅದು ಪಾಳುಬಿದ್ದು ಬರೀ ಮೋಟು ಕ್ರಡು ಮಾತ್ರ ನಿಂತಿದೆ. ಚೈತ್ಯದ ಬಲ ಭಾಗದಲ್ಲಿ "ಮೋಚಲೀನ್ ಸರೋವರ್" ಎಂಬ ಒಂದು ಸರೋವರವಿದೆ. ಜ್ಞಾನೋದಯದ ನಂತರ ಬುದ್ಧನು ಈ ಸರೋವರದಲ್ಲಿ ಸ್ನಾನ ಮಾಡುತ್ತಿದ್ದಾಗ ಬಿರುಗಾಳಿ ಸಹಿತೆ ಮಳೆ ಬರಲು ಶುರುವಾಯಿತಂತೆ. ಆಗ ಒಂದು "ಮೂಚ್ ವಾಲ ಸಾಪ್" (ಮೀಸೆಯುಳ್ಳ ಸರ್ಪ) ಅವನಿಗೆ ರಕ್ಷಣೆ ಕೊಟ್ತಿತಂತೆ. ಆದ್ದರಿಂದಲೇ ಆ ಸರೋವರಕ್ಕೆ ಆ ಹೆಸರು ಹಾಗು ಬುದ್ಧನು ವಿಷ್ಣುವಿನ 9ನೆಯ ಅವತಾರವೆಂದು ಪ್ರತೀತಿ. ಚೈತ್ಯದ ಸುತ್ತಲೂ ನೋಡಿದ ಮೇಲೆ ಕೊನೆಗೆ ನಾವು ಒಳಗೆ ಹೋದೆವು. ಬುದ್ಧನ ಪ್ರತಿಮೆ ಸುಮಾರು 1೦ ಅಡಿ ಎತ್ತರವಿರಬಹುದು. ಬುದ್ಧನು ಪದ್ಮಾಸನದಲ್ಲಿ ಕುಳಿತಿದ್ದು ಆಚೆ ಹೊನ್ನಿನ ಬಣ್ಣದಾಗಿದೆ. ಈ ಪ್ರತಿಮೆಯನ್ನೂ ಗಾಜಿನ ಪೆಟ್ಟಿಗೆಯಲ್ಲಿರಿಸಲಾಗಿದೆ. ಚೈತ್ಯದಲ್ಲಿ ಒಂದು ಶಿವಲಿಂಗವೂ ಇದೆ. ಆದಿ ಶಂಕರಾಚಾರ್ಯರು ಬೌದ್ಧರನ್ನು ತರ್ಕದಲ್ಲಿ ಸೋಲಿಸಿದ ನಂತರ ಸ್ಥಾಪಿಸಿದ ಲಿಂಗವೆಂದು ಹೇಳಿದ್ದಾರೆ. ಅದೇ ಕಾರಣಕ್ಕಾಗಿ ಈ ಬೌದ್ಧ ತೀರ್ಥದಲ್ಲಿ ಶಂಕರ ಮಠವೂ ಸಹ. ಅಲ್ಲಿ ಅನೇಕ ವಿದ್ಯಾಲಯಗಳೂ ಇವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ದಕ್ಷಿಣ ಭಾರತದ ಕ್ಯಾಂಟೀನುಗಳೂ ಇವೆ. ನಾವೊಂದು ಕ್ಯಾಂಟೀನಿನಲ್ಲಿ ಮಸಾಲೆ ದೋಸೆ ತಿಂದು ಗಯಾಕ್ಕೆ ಹಿಂದಿರುಗಿದೆವು. ಅದು ಮುಂದೆ ಎಲ್ಲರಿಗೂ ತನ್ನ ಪ್ರಭಾವವನ್ನು ತೋರಿಸಿತು. 
    
ಸಾಹಿತಿ ಅ ರಾ ಮಿತ್ರ ದೋಸೆಯ ಬಗ್ಗೆ ಹೇಳಿದಂತೆ, ‘ಕೃಷ್ಣ ಭವನದಲಿ ಮೂಡಿತೊಂದು ಚಂದ್ರ, ಮೂಡಿತೆಂದೆಯಾ ಮುಳುಗಿತು ನನ್ನ ಉದರದಲಿ’ ಎಂದು, ಮುಂದೆ ಬೇಕಾದರೆ ನಾವೇ ಬೆಳೆಸಬಹುದು ಕವನವನು, ‘ಮುಳುಗಿತೆಂದೆಯಾ ತೋರಿಸಿತು, ತನ್ನ ಪ್ರಭಾವವನು, ನನ್ನ ಉದರದಲಿ, ಮುಂದೊಂದು ಗಂಟೆಯಲಿ.’
    
ನಾವೆಲ್ಲ ವಾಪಸು ಬಂದು, ಮಂತ್ರಾಲಯಾಚಾರ್ಯರು ಮಾಡಿಸಿ ಕೊಟ್ಟ ಚಿತ್ರಾನ್ನ ಮೊಸರನ್ನದ ಪ್ಯಾಕೆಟ್ ಗಳೊಡನೆ ಪ್ರಯಾಗಕ್ಕೆ ಹೊರಟೆವು. ನಾವು ಹೊಟೇಲ್ ನ 3 ನೆಯ ಮಹಡಿಯಿಂದ ನಮ್ಮ ಲಗೇಜುಗಳೊಡನೆ ಕೆಳಗಿಳಿಯುತ್ತಿದ್ದಾಗ ಭೂ ಕಂಪನವಾಯ್ತು. ಭೂಮಿ ಉಯ್ಯಾಲೆ ಅಡಿತ್ತು. ತುಸು ದಿನಗಳ ಹಿಂದಷ್ಟೇ ನೇಪಾಳದ ಭೀಕರ ಭೂ ಕಂಪ ಎಲ್ಲರನ್ನೂ ಭಯ ಪಡಿಸಿತ್ತು. ಈಗ ಆಗಿದ್ದು ಕೇವಲ 30 ಸೆಕೆಂಡುಗಳ ಕಾಲದ ಭೂ ಕಂಪ. ನಮಗೆ ಪ್ರಯಾಗದ ರೈಲು ಹಿಡಿಯುವ ಅವಸರ, ಅದಕ್ಕಿಂತಲೂ ಭೂ ಕಂಪ ಹೆಚ್ಚೆ? ನಾವೆಲ್ಲರೂ ಮುನ್ನುಗ್ಗಿಯೇ ಬಿಟ್ಟೆವು. ಗಯಾದ ರೈಲು ನಿಲ್ದಾಣದಲ್ಲಿ ಎಲ್ಲೆಲ್ಲೂ ಭೂ ಕಂಪದ ವಾರ್ತೆ ಟೀವಿಯಲ್ಲಿ. ಅದನ್ನು ನೋಡಿದವರೇ, ತಕ್ಷಣವೇ, ಮೊದಲು ಎಲ್ಲರೂ ಮನೆಗಳಿಗೆ ಜಂಗಮಿಸಿದೆವು. (ಮೊಬೈಲ್ ಕರೆ), ‘ಇಲ್ಲಿ ಭೂ ಕಂಪ, ನಾವೆಲ್ಲಾ ಸೇಫ್.’ 
    
ಸಮಯಕ್ಕೆ ಸರಿಯಾಗಿ ಆಗಮಿಸಿದ ‘ಪುರುಷೋತ್ತಮ ಎಕ್ಸಪ್ರೆಸ್’ ಹತ್ತಿ ಕುಳಿತೊಡನೆ ಹೊಟ್ಟೆಯಲ್ಲಿನ ದೋಸೆ ತನ್ನ ಪ್ರಭಾವ ತೋರಿಸಿತು. ಒದ್ದಾಡುತ್ತಾ ಕುಳಿತೆ. ಯಾವ ಚಿತ್ರಾನ್ನ ಮೊಸರನ್ನವೂ ಬೇಕಾಗಿರಲಿಲ್ಲ.   ಮುಂದಿನ ಗುರಿ ಪ್ರಯಾಗ. ಪ್ರಯಾಗದ ಲಕ್ಷ್ಮೀನಾರಾಯಣಾಚಾರ್ಯರು ಫೋನು ಮಾಡಿ, ನಿಮ್ಮ ಟ್ರೇನ್ ನೈನಿ ಎಂಬಲ್ಲಿ ಬಂದೊಡನೆ ತಿಳಿಸಿರಿ ಎಂದರು. ಅಬ್ಬಾ! ಆ ವ್ಯಕ್ತಿಗೆ ಮಾತು ಎಂದರೆ ಅದೆಷ್ಟು ಪ್ರೀತಿಯೋ. ನೈನಿ ಬರುವವರೆಗೂ ಮಾತನಾಡುತ್ತಲೇ ಇದ್ದರು. ಆದರೆ ಅದು ನಮಗೇನೂ ತಿಳಿಯುತ್ತಿರಲಿಲ್ಲವಷ್ಟೇ. ಮಾತನಾಡುವ ಯಾವುದೇ ಅವಕಾಶವನ್ನೂ ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ. ಮೊದಲೇ ಮಾತನಾಡಿದಂತೆ, ಅವರು ರೈಲು ನಿಲ್ದಾಣಕ್ಕೆ ಒಂದು ವೆಹಿಕಲ್ ಕಳಿಸಿದ್ದರು. 
    
ಪ್ರಯಾಗ ಅಥವಾ ಅಲಹಾಬಾದ್ ಇಲ್ಲಿ ರೈಲು ನಿಲ್ದಾಣದಲ್ಲಿ ಇಳಿಯುವವರೆಗೆ ನನಗನಿಸಿದ್ದು, ಅಲಹಾಬಾದ ನೆಹರೂ ಮನೆತನದ ಊರು, ಅವರ ಮನೆತನವೇ ಅಲ್ಲವೇ ಸ್ವತಂತ್ರ ಭಾರತವನ್ನು ಹೆಚ್ಚು ಆಳಿದ್ದು. ಶುದ್ಧವಾದ ಗಾಳಿ ಬೆಳಕಿನಿಂದ ಕೂಡಿದ ಊರು ಇರಬಹುದು ಎಂದು. ಆದರೆ ರಸ್ತೆಯೋ ಚರಂಡಿಯೋ ತಿಳಿಯದಂತಿದ್ದ ಊರದು. (ಅಮೇಥಿ ಹೇಗಿದೆಯೋ ತಿಳಿಯದು.) ಮುಖ್ಯ ರಸ್ತೆಯೇ ಹಾಗಿದ್ದ ಮೇಲೆ ನಾವು ಹೋಗಬೇಕಾಗಿದ್ದ ಉತ್ತರಾದಿ ಮಠ, ಲಕ್ಷ್ಮಿ ನಾರಾಯಣಾಚಾರ್ಯರ ಬಿಡಾರ ಇರುವುದು ಮೋರಿ ಗಲ್ಲಿ. ಅದು ಹೇಗಿರುತ್ತದೋ ತಿಳಿಯಲಿಲ್ಲ. ನಾನಂತೂ ಎಲ್ಲಾ ಲಗೇಜಗಳ ಜೊತೆ ಮೇಲೆ ರೂಮು ಸೇರಿ, ನಮಗಾಗಿ ಕಾದಿರಿಸಿದ ಎಸಿ ಎಂದು ಅವರು ಹೇಳುವ ರೂಮಿನಲ್ಲಿ ಮಲಗಿಬಿಟ್ಟೆ. 
    
ಮರುದಿನ ಬೆಳಿಗ್ಗೆ, ಧಾರವಾಡ ಮಹಾರಾಷ್ಟ್ರದಿಂದ ಬಂದ ದಂಪತಿಗಳ ಗಂಪಿನಲ್ಲಿ ನಮ್ಮವರನೇಕರು ವೇಣಿ ದಾನ ಮಾಡಿದರು. ವೇಣೀದಾನದ ಕಾರ್ಯವು ಒಂದು ಸಣ್ಣ ಮದುವೆಯಿದ್ದಂತೆ ಎಂದು ಕೇಳಿಬಂತು. ಪೂಜೆಯ ಕೊನೆಯಲ್ಲಿ ಪತಿಯು ಪತ್ನಿಯ ಮುಡಿಯ ತುದಿಯನ್ನು ಕತ್ತರಿಸಿ ಸಂಗಮಕ್ಕೆ ಅರ್ಪಿಸುತ್ತಾರೆ. ಅವರ ಸಂಕಲ್ಪ ಪೂಜೆಯ ನಂತರ ನಾವೂ ಆಟೋದಲ್ಲಿ ಪ್ರಯಾಗದ ತ್ರಿವೇಣಿ ಸಂಗಮದ ಸ್ನಾನಕ್ಕೆ ಹೊರಟೆವು. ತ್ರಿವೇಣಿ ಸಂಗಮದ ದಡದಲ್ಲಿ ಮತ್ತೆ ಸಂಕಲ್ಪಗಳ ನಂತರ ದೋಣಿಯಲ್ಲಿ ಸಂಗಮಕ್ಕೆ ಹೋದೆವು. ಈ ವೇಣಿದಾನದ ಕಾರ್ಯಕ್ರಮವಂತೂ ತುಂಬಾ ತಮಾಷೆಯಾಗಿತ್ತು.  ಮುಂದೆ ಈ ಅನುಭವದಿಂದ ನಾನೊಂದು ಕತೆ ಬರೆದೆ. 
    
ಇತಿಹಾಸ-ಪುರಾಣಗಳಲ್ಲೂ ಪ್ರಯಾಗದ ಉಲ್ಲೇಖವಿದೆ. ಗಂಗಾ ಯಮುನಾ ನದಿಗಳ ಮಧ್ಯದ ಪ್ರದೇಶವನ್ನು ಲೋಕದ ಅತ್ಯಂತ ಸಮೃದ್ಧ ಪ್ರದೇಶವೆಂದು ಹೇಳಲಾಗುತ್ತದೆ. ಋಗ್ವೇದದಲ್ಲೂ ಪ್ರಯಾಗ ಕ್ಷೇತ್ರವನ್ನು ಹಾಡಿ ಹೊಗಳಿದ್ದಾರೆ. ರಾಮಾಯಣ-ಮಹಾಭಾರತ ಮಹಾಕಾವ್ಯಗಳಲ್ಲಿ ಹಲವಾರು ಬಾರಿ ಪ್ರಯಾಗ ತೀರ್ಥದ ಉಲ್ಲೇಖವಿದೆ. ಆಲದ ಮರದ ಎಲೆಯಮೇಲೆ ಮಗುವಾಗಿ, ಶ್ರೀಮನ್ನಾರಾಯಣನು ಇಲ್ಲಿ ಯೋಗಮೂರ್ತಿಯಾಗಿ ನಿವಾಸಿಸುವ ಕಾರಣ ಪ್ರತಿ ಯುಗಾಂತರದಲ್ಲಿ ಬರುವ ಪ್ರಳಯವೂ ಪ್ರಯಾಗ ಕ್ಷೇತ್ರವನ್ನು ನಿರ್ವಿಕಾರಗೊಳಿಸುವುದಿಲ್ಲವೆಂದು ಹೇಳಲಾಗುತ್ತದೆ. ಇಂತಹ ಶ್ರೀಮನ್ನಾರಾಯಣನನ್ನು ವೇಣಿ ಮಾಧವನೆಂದು ಕರೆಯುತ್ತಾರೆ. ಈಶ್ವರನು ಇಲ್ಲಿರುವ ಅಕ್ಷಯ ವಟವೃಕ್ಷದ ವ್ಯಕ್ತಿತ್ವಾರೋಪಣೆ ಎಂದೂ ಹೇಳಲಾಗುತ್ತದೆ. ಚೀನೀ ಪ್ರವಾಸಿಗಳಾದ ಫಾಹಿಯಾನ್ (5ನೇ ಶತಮಾನ) ಹಾಗು ನಮ್ಮ ಹಳೆಯ ಮಿತ್ರ ಹ್ಯೂ ವೆನ್ ತ್ಸಾಂಗ್ (7ನೇ ಶತಮಾನ) ಇಬ್ಬರೂ ಇಲ್ಲಿಗೆ ಭೇಟಿ ನೀಡಿದ್ದರಂತೆ. ಇಬ್ಬರೂ ಅವರವರು ಬಂದ ಕಾಲಗಳಲ್ಲಿ ಈ ತೀರ್ಥಕ್ಷೇತ್ರವನ್ನು ಸಮೃದ್ಧವಾದ ಕ್ಷೇತ್ರವೆಂದು ಹೇಳಿದ್ದಾರೆ. ಪ್ರಯಾಗ ಕ್ಷೇತ್ರಕ್ಕೆ ಹರ್ಷ ಚಕ್ರವರ್ತಿಯೂ ಭೇಟಿಕೊಟ್ಟಿರುವ ಉಲ್ಲೇಖಗಳಿವೆ. ಕ್ರಿ.ಶ. 1575 ರಲ್ಲಿ ಮುಘಲ್ ಅಧಿಪತಿಯಾದ ಅಕ್ಬರನು ಈ ಸ್ಥಳದ ಕೌಶಲ್ಯತೆ ಅರಿತು, ಇಲ್ಲಿ ಒಂದು ಕೋಟೆ ಕಟ್ಟಿಸಿ, ಈ ಊರಿಗೆ ಅಲಹಾಬಾದ್ ಅಥವ ಇಲಹಾಬಾದ್ ಎಂದು ಹೆಸರಿಟ್ಟನಂತೆ.
    
ಈ ತ್ರಿವೇಣಿ ಸಂಗಮವು, ಸ್ನಾನ ಮಾಡಲು ಇಡೀ ಲೋಕದಲ್ಲೇ ಅತ್ಯಂತ ಪವಿತ್ರ ಸ್ಥಳವೆಂದು ಹೇಳಲಾಗುತ್ತದೆ. ಸಂಗಮವು ಪ್ರತ್ಯಕ್ಷವಾಗಿ ಕಣ್ಣಿಗೆ ಕಾಣಿಸುತ್ತದೆ. ಕಡಿಮೆ ಆಳ ಹಾಗು ಹೆಚ್ಚು ರಭಸದಿಂದ ಬರುವ ಗಂಗಾ ನದಿಯ ಮಣ್ಣು ಬಣ್ಣದ ನೀರು, ಶಾಂತವಾದ, ನೀಲಿ-ಹಸಿರು ಬಣ್ಣದ-ಆಳವಾದ ಯಮುನಾ ನದಿಯೊಡನೆ ಸಮಾಗಮಿಸುತ್ತದೆ. ಎರಡು ನದಿಗಳು ಸುಮಾರು 12೦ ಡಿಗ್ರಿ ಕೋನದಲ್ಲಿ ಬಂದು ಸೇರಿ ಸಂಗಮದಿಂದ ಹೊರಡುವ ನದಿ ಈ ಎರಡೂ ನದಿಗಳಿಂದ 12೦ ಡಿಗ್ರಿ ಕೋನದಲ್ಲಿ ಹರಿದು ಹೋಗುತ್ತದೆ. ಮಕರ ಸಂಕ್ರಾಂತಿ, ಪುಷ್ಯ ಪೂರ್ಣಿಮಾ, ಮೌನೀ ಅಮಾವಾಸ್ಯೆ, ಬಸಂತ ಪಂಚಮಿ, ಮಾಘ ಪೂರ್ಣಿಮ ಹಾಗು ಮಹಾಶಿವರಾತ್ರಿಯ ದಿನಗಳು ಸಂಗಮದಲ್ಲಿ ಸ್ನಾನಕ್ಕೆ ಶ್ರೇಷ್ಠವೆಂದು ಹೇಳಲಾಗುತ್ತದೆ. ಎಲ್ಲರೂ ದೋಣಿಯೇರಿ ಸಂಗಮದ ಮಧ್ಯದಲ್ಲಿ ಬಂದೆವು. ಅಲ್ಲಿ ತುಂಬಾ ಆಳ. ದೋಣಿಯವ ಎಲ್ಲರನ್ನೂ ನೀರಿಗೆ ನೂಕಿ ಬಿಡುತ್ತಿದ್ದ. ಎಲ್ಲರೂ ಹೋ ಎಂದು ಕಿರುಚುತ್ತಿದ್ದರು. ಯಾರಿಗೂ ನೀರಿನ ಆಳದಲ್ಲಿ ಕಾಲು ನೆಲಕ್ಕೆ ಸಿಗುತ್ತಿರಲಿಲ್ಲ. ಕೃಷ್ಣರವರು ಹೇಗೋ ದೋಣಿಯ ಉಯ್ಯಾಲೆಯ ಮೇಲೆ ನಿಂತು, ಎಲ್ಲರ ಕೈ ಹಿಡಿದು ಮೂರು ಮುಳುಗು ಹಾಕಿಸಿದರು. ನಾವೂ ಸಂಗಮದಲ್ಲಿ ಸ್ನಾನ ಮಾಡಿ ಪುನೀತರಾದೆವು. ಕೊನೆಗೆ ನದಿಗೆ ಬಾಗಿಣವನ್ನೂ ಕೊಟ್ಟೆವು.
    
ನಂತರ ಲಕ್ಷ್ಮೀನಾರಾಯಣಾಚರ್ಯರ ಮಗ ಪಿತೃ ಕಾರ್ಯವನ್ನು ಬಿಡಾರದ ಬಳಿ ದೊಡ್ಡದೊಂದು ಹಾಲ್ ನಲ್ಲಿ ಮಾಡಿಸಿದರು. ಊಟಕ್ಕೆ ಇನ್ನೂ ಸಮಯವಿದ್ದುದರಿಂದ ನಾವು ಪಕ್ಕದಲ್ಲೇ ಸ್ಥಾಲಿಗಳಲ್ಲಿ ಗಂಗೆಯನ್ನು ತುಂಬಿಸಿಕೊಳ್ಳುವ ಕೆಲಸವಿತ್ತು. ಕೆಲವು ಥಾಲಿಗಳನ್ನು ಮನೆಯಿಂದ ತಂದಿದ್ದೆವು, ಇನ್ನು ಕೆಲವನ್ನು ಅಲ್ಲೆ ಕೊಂಡೆವು. ಕಾಶಿಯ ಅಂತೂ ಗಂಗಾನದಿ ನೀರನ್ನು ಚೊಂಬುಗಳಲ್ಲಿ ತುಂಬಿಸಿ ಪ್ರಯಾಗದಲ್ಲಿ ಗಾಳಿ ತೂರದ ಮುಚ್ಚಳಗಳನ್ನು ಹಾಕಿಸಿಕೊಂಡು ಅತ್ಯಂತ ಪವಿತ್ರ ಗಂಗೆ ಸ್ಥಾಲಿಗಳಾಗಿಸಿಕೊಂಡೆವು. ಅಲ್ಲಿ ನಮ್ಮಂತೆಯೇ ಉಡುಪಿ ಹಾಗೂ ಮಂಗಳೂರಿನಿಂದ ಬಂದವರು ನಮ್ಮ ಪ್ರವಾಸದ ವಿಚಾರ ತಿಳಿದುಕೊಂಡು ತುಂಬಾ ಸಂತೋಷಪಟ್ಟರು. ತಾವು ಆ ರೀತಿಯಾಗಿ ಫೂರ್ಣ ಪ್ರವಾಸದ ಯೋಜನೆ ತಯಾರಿಸಿಲ್ಲದ ಬಗ್ಗೆ ವಿಷಾದಿಸಿದರು ಕೂಡಾ. ಪ್ರಯಾಗವು ಇಂದು ಮೂರು ನದಿಗಳ ಸಂಗಮದಂತೆಯೇ ಇತಿಹಾಸ-ಸಂಸ್ಕೃತಿ-ಧರ್ಮಗಳ ಸಂಗಮದ ಸಂಕೇತವಾಗಿದೆ.
    
ಸಮುದ್ರ ಮಥನದಿಂದ ದೊರಕಿದ ಅಮೃತದ ಕಥೆಗೂ ಪ್ರಯಾಗದ ಸಂಬಂಧವಿದೆ. ಒಂದು ಕಥೆಯ ಪ್ರಕಾರ ಶುಕ್ರಾಚಾರ್ಯರು ಅಮೃತವು ದಾನವರಿಗೆ ಸಿಗಬಾರದೆಂದು ಅಮೃತದ ಕುಂಭವನ್ನು ಎತ್ತಿಕೊಂಡು ಪ್ರಯಾಗ ಕ್ಷೇತ್ರಕ್ಕೆ ಓಡಿಬಂದರಂತೆ. ಅವರನ್ನಟ್ಟಿಸಿ ಬಂದ ದಾನವರೊಡನೆ ನಡೆದ ಹೋರಾಟದಿಂದ ನಾಲ್ಕು ತೊಟ್ಟು ಅಮೃತವು ಪ್ರಯಾಗ, ಹರಿದ್ವಾರ, ಉಜ್ಜಯನಿ ಹಾಗು ನಾಸಿಕದಲ್ಲಿ ಚೆಲ್ಲಿದವಂತೆ. ಪ್ರತಿ 12 ವರ್ಷಕ್ಕೊಮ್ಮೆ, ಗ್ರಹಗಳ ಅದೇ ರೀತಿಯ ಸಂಧಾನವಾದಾಗ ಮಹಾ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಭಕ್ತರು ಆ ಸಮಯದಲ್ಲಿ ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ಮಹಾ ಕುಂಭಮೇಳದ 6 ವರ್ಷಗಳ ನಂತರ ಅರ್ಧ ಕುಂಭಮೇಳ ನಡೆಯುತ್ತದೆ. ಈ ಎರಡೂ ಕುಂಭಮೇಳಗಳಿಲ್ಲದ ವರ್ಷಗಳಲ್ಲಿ ಮಾಘ ಮಾಸದಲ್ಲಿ ಮಾಘ ಮೇಳ ನಡೆಯುತ್ತದೆ. ಈ ಮೇಳಗಳ ಸಮಯದಲ್ಲಿ ಸಂಗಮದ ನದಿ ತೀರದಲ್ಲೆ ಒಂದು ಊರನ್ನು ಹೂಡಿ ಭಕ್ತರು ಅಲ್ಲೇ ವಾಸಮಾಡುತ್ತಾರೆ.
    
ಸಂಜೆ ಮೊದಲು, ಜವಹರಲಾಲ್ ನೆಹರು ಜನಿಸಿದ ಮನೆಯಾದ 'ಆನಂದ ಭವನ'ಕ್ಕೆ ಹೋದೆವು. ಇದೊಂದು ದೊಡ್ಡ ಮನೆ ಮೋತೀಲಾಲ್, ಜವಹರಲಾಲ್, ಇಂದಿರಾ ಹೀಗೆ ಎಲ್ಲರ ಕೋಣೆಗಳನ್ನು ನೋಡಬಹುದು. ಆದರೆ ಅದು ಕ್ಲೋಸಾಗಿತ್ತು. ನಂತರ "ಭಾರದ್ವಾಜ ಆಶ್ರಮ" ಕ್ಕೆ ಹೋದೆವು. ಈ ಸ್ಥಳಕ್ಕೆ ರಾಮ ಬಂದಿದ್ದನೆಂಬ ಪ್ರತೀತಿ ಇದೆ. ಅಲ್ಲಿಯೇ ರಾಮಾಯಣ ಮಹಾಭಾರತ ಕಾಲದ ಹೆಚ್ಚು ಕಡಿಮೆ ಎಲ್ಲಾ ದೇವತೆಗಳ, ಋಷಿ ಮುನಿಗಳ ದೇವಸ್ಥಾನಗಳಿವೆ. ಎಲ್ಲ ದೇವಸ್ಥಾನಗಳಲ್ಲೂ ಯಾರಾದರೊಬ್ಬರು ಕೂತು ದಕ್ಷಿಣೆ ಹಾಕಿ ಎನ್ನುತ್ತಾರೆ. ಕೆಲವರಂತೂ ನಿದ್ರಿಸುತ್ತಿರುತ್ತಾರೆ. ಅಲ್ಲಿಯೇ ನಾಗನ ದೇವಸ್ಥಾನಕ್ಕೆ ಹೋಗಿ, ಮುಂದೆ, ದಾರಿಯಲ್ಲಿ ವೇಣಿ ಮಾಧವನ ದೇವಾಲಯಕ್ಕೆ ಹೋದೆವು. ವೇಣೀ ಮಾದವನ ತೋರಿಸೇ, ಜಾಣೆ ತ್ರಿವೇಣಿಯೆ, ಕಾಣದೆ ಇರಲಾರೆ ಎಂದು ಹಾಡುತ್ತ. 
    
ವೇಣಿ ಮಾಧವ ದೇವಾಲಯವು ಪ್ರಯಾಗದ ಅತ್ಯಂತ ಹಳೆಯ ದೇವಾಲಯವೆಂದು ಹೇಳಲಾಗಿದೆ. ಈ ದೇವಾಲಯದ ಕಥೆ ಹೀಗಿದೆ: ತ್ರೇತಾಯುಗದಲ್ಲಿ ಗಜಕರ್ಣನೆಂಬ ಅಸುರನೊಬ್ಬ ಘೋರ ತಪಸ್ಸು ಮಾಡಿ ವರಗಳನ್ನು ಪಡೆದು ನಂತರ ಇಂದ್ರನನ್ನು ಸ್ವರ್ಗದಿಂದ ಒದ್ದೋಡಿಸಿ ಸ್ವರ್ಗಾಧಿಪತಿಯಾದನಂತೆ. ದೇವತೆಗಳೆಲ್ಲರೂ ನಾರದರ ಬಳಿ ಹೋಗಿ ಉಪಾಯ ಕೇಳಿದರಂತೆ. ನಾರದರು ಗಜ ಕರ್ಣಾಸುರನ ಬಳಿ ಹೋಗಿ ನಾರಾಯಣನ ಸ್ಥುತಿ ಮಾಡಿದಾಗ ಅಸುರನಿಗೆ ಕೋಪ ಬಂದು ನಾರದರನ್ನು ಕೊಲ್ಲ ಹೊರಟನಂತೆ. ಹೇಗೋ ಅಂತು ಅಸುರನನ್ನು ಶಾಂತ ಮಾಡಿ ನಾರದರು ಅವನನ್ನು ಮುಗಿಸುವ ಯೋಚನೆ ಮಾಡಲಾ ರಂಭಿಸಿದರಂತೆ. ಗಜ ಕರ್ಣಾಸುರನು ಕಜ್ಜಿ ರೋಗ ಪೀಡಿತನಾಗಿ ಆತನ ಕಾಲು ಯಾವಾಗಲು ಕಡಿಯುತ್ತಿದ್ದಿತಂತೆ. ನಾರದರು ಅವನಿಗೆ ಮಾಘ ಮಾಸದಲ್ಲಿ ಪ್ರಯಾಗದ ಸಂಗಮಸ್ನಾನದಿಂದ ಈ ರೋಗದ ನಿವಾರಣೆಯಾಗುವುದಾಗಿ ಹೇಳಿ, ಅವನು ಆ ರೀತಿ ಮಾಡಿದಾಗ ರೊಗ ಗುಣ ವಾಯಿತಂತೆ. ಮೂರು ಪವಿತ್ರ ಹಾಗು ರೋಗ ನಿವಾರಣಾ ಶಕ್ತಿಯುಳ್ಳ ನದಿಗಳನ್ನು ನೋಡಿ, ಅಸುರನು ಅವುಗಳನ್ನು ತನ್ನ ತಾಣಕ್ಕೆತ್ತಿಕೊಂಡು ಹೋಗುವ ಯೋಜನೆ ಹೂಡಿ, ಮೂರು ನದಿಗಳನ್ನು ಹೀರಿಬಿಟ್ಟನಂತೆ. ಆಗ ಆ ಪ್ರದೇಶವು ಬರಡು ಭೂಮಿಯಾಗಿ, ಎಲ್ಲರೂ ಭಗವಂತನನ್ನು ಕಾಪಾಡು ಎಂದು ಪ್ರಾರ್ಥಿಸಿದರಂತೆ. ಆಗ ಮಾಧವನು ಬಂದು ಗಜ ಕರ್ಣಾಸುರನ ತಲೆ ತನ್ನ ಚಕ್ರದಿಂದ ಕತ್ತರಿಸಿದನಂತೆ. ಅಷ್ಟು ಹೊತ್ತಿಗೆ ರಾಕ್ಷಸನು ಸರಸ್ವತಿಯನ್ನು ಅರಗಿಸಿಕೊಂಡು ಆಕೆ ಮಾಯವಾದಳಂತೆ. ಯಮುನೆ ಆತನ ನಾಡಿಗಳಲ್ಲೋಡುತ್ತಿದ್ದರಿಂದ, ಯಮುನೆ ನೀಲಿಯಾದಳಂತೆ. ಗಂಗೆ ಅವನ ಹೊಟ್ಟೆಯಲ್ಲಿದ್ದರಿಂದ ಹಳದಿ ಬಣ್ಣ ತಿರುಗಿದಳಂತೆ. ಅನ್ಯ ಅಸುರರ ಭಯದಿಂದ ಪ್ರಯಾಗವು ಭಗವಂತನನ್ನು ಆ ಸ್ಥಳ ಬಿಟ್ಟು ಹೋಗದಿರಲು ಪ್ರಾರ್ಥಿಸಿತಂತೆ. ಮಾಧವನು ಹಾಗೇ ಆಗಲೆಂದು ಅಲ್ಲೇ ವೇಣಿ ಮಾಧವನಾಗಿ ನೆಲೆಸಿದನಂತೆ. ಹೀಗಾಗಿ, ವೇಣಿ ಮಾಧವನ ದರ್ಶನವಿಲ್ಲದೆ ಸಂಗಮದ ಸ್ನಾನದ ಫಲ ದೊರಕುವುದಿಲ್ಲ ಎಂದು ಹೇಳುತ್ತಾರೆ. ಅಲ್ಲೆಲ್ಲ, ಅಲ್ಲಿ ಅಷ್ಟೇ ಏಕೆ ಉತ್ತರ ಭಾರತದ ತುಂಬೆಲ್ಲ ಸಹಿಸಲಾಗದ ಶೆಕೆ.
     
ಅಲ್ಲೇ ನದಿ ದಂಡೆಯ ಮೇಲೆ ಹನುಮಂತನ ಗುಡಿ ಇದೆ. ಇಲ್ಲಿ ಮಲಗಿರುವ ಹನುಮಂತನ ಪ್ರತಿಮೆ ಇದೆ. ಗಂಗೆ ಉಕ್ಕಿ ಹರಿದು ಹನುಮಂತನ ಪಾದ ಮುಟ್ಟಿ ಮತ್ತೆ ಶಾಂತಳಾಗುವಳಂತೆ. ಮುಂದೆ ಗಂಗಾ ಆರತಿ ನೋಡಿ ಹಿಂದಿರುಗಿದೆವು. ಅಲ್ಲಿಯೇ ಕಪ್ಪು ಕಲ್ಲಿನ ಶಂಕರಾಚಾರ್ಯರ ಆಶ್ರಮವೆಂದು ಹೇಳುವ ದೊಡ್ಡ 3 ಅಂತಸ್ತಿನ, ಕಪ್ಪು ಕಲ್ಲಿನ ಗುಡಿಯಿದೆ. ಅಲ್ಲಿಗೂ ಸಮಯವಾಗಿದ್ದರೂ ಗುಡಿಯನ್ನು ನೋಡಿದೆವು. ಪಕ್ಕದಲ್ಲೇ ದೇವರ ಪೂಜಾ ಸಾಮಗ್ರಿಗಳನ್ನು ಮಾರುವ ಅಂಗಡಿಗಳಿದ್ದವು. ಅಲ್ಲೇನೂ ಕಣ್ಣು ಹಾಯಿಸದೇ ಬಿಡಾರಕ್ಕೆ ಹಿಂದಿರುಗಿದೆವು. 
    
ಸಂಗಮದ ಹತ್ತಿರವೇ ಯಮುನಾ ತೀರದಲ್ಲಿ ಮುಘಲ್ ಬಾದಶಹ ಅಕ್ಬರನು ಕ್ರಿ.ಶ. 1583 ರಲ್ಲಿ ಕಟ್ಟಿಸಿದ ಕೋಟೆಯೊಂದಿದೆ. ಒಳಗೆ ಒಂದು ಜೆನಾನ ಹಾಗು ಹಲವಾರು ಆವರಣಗಳಿವೆ. ಕೌಸಂಬೀ ರಾಜ್ಯದಿಂದ ಸಾಗಿಸಿದ ಕ್ರಿ.ಪೂ. 3 ನೇ ಶತಮಾನದ 10.5  ಅಡಿ ಎತ್ತರದ ಅಶೋಕ ಸ್ಥಂಭ, ಅದರ ಜೊತೆಯಿದ್ದ ಹಲವು ಶಾಸನಗಳು ಇವೆ. ಮುಸಲ್ಮಾನರ ಕಟ್ಟಡವಾದರೂ ಕೋಟೆಯೊಳಗೆ ಸರಸ್ವತಿ ನದಿಯ ಸ್ಥಳವೆನಿಸುವ ಸರಸ್ವತಿ ಕೂಪವೆಂಬ ಬಾವಿಯಿದೆ. 'ಅಕ್ಷಯ ವಟ'ವೆಂದು ಹೆಸರು ಪಡೆದಿರುವ ಅಮೃತ ಆಲದ ಮರ ಹಾಗು ಪಾತಾಳಪುರಿ ದೇವಸ್ಥಾನಗಳಿವೆ. ಪ್ರಳಯ ಬಂದಾಗಲೂ ಈ ಅಕ್ಷಯ ವಟವು ನಿರ್ವಿಕಾರವಾಗಿರುತ್ತದೆಯಂತೆ. ರಾಮಾಯಣದ ಶ್ರೀರಾಮನೇ ಈ ಅಕ್ಷಯವಟವನ್ನು ನೋಡಲು ಬಂದಿದ್ದನಂತೆ. ಚೀನೀ ಪ್ರವಾಸಿ ಹ್ಯೂ ವೆನ್ ತ್ಸಾಂಗನೂ ಈ ಸ್ಥಳದ ಬಗ್ಗೆ ಬರೆದಿದ್ದಾನೆ. ಪಾತಾಳಪುರಿ ದೇವಾಲಯವು ಕೋಟೆಯ ನೆಲಮಾಳಿಗೆಯಲ್ಲಿದ್ದು, ಇದನ್ನು ಪುರಾಣ ಇತಿಹಾಸಗಳಲ್ಲಿ ಉಲ್ಲೇಖಿಸಲಾಗಿದೆ. ಈಶ್ವರನೇ ಈ ಅಕ್ಷಯ ವಟವೃಕ್ಷದ ವ್ಯಕ್ತಿತ್ವಾರೋಪಣೆಯೆಂದು ಹೇಳಲಾಗುತ್ತದೆ. ಇಲ್ಲಿ ಹಲವಾರು ಕಲ್ಲಿನಿಂದ ಕೆತ್ತಿದ ಪ್ರತಿಮೆಗಳಿವೆ. ಎಂದು ಹೇಳುತ್ತಾರೆ.  ಇವುಗಳನ್ನು ನೋಡಲಾಗಲಿಲ್ಲ. ಅದೇ ಬೇಜಾರಿನಲ್ಲಿ ನಮ್ಮ ಮೋರಿ ಗಲ್ಲಿಗೆ ಹಿಂದಿರುಗಿದೆವು.
    
ನಮ್ಮ ದೊಡ್ಡಮ್ಮ, ಅವರ ಅಣ್ಣನ ಮಗ ಸೇನೆಯಲ್ಲಿ ಅತೀ ಮುಖ್ಯ ಹುದ್ದೆಯಲ್ಲಿದ್ದುದರಿಂದ, ಈಗ ಸಾಮಾನ್ಯವಾಗಿ ಎಲ್ಲರೂ ವೀಕ್ಷಿಸುವ ವಟು ವೃಕ್ಷವಲ್ಲದೇ, ಮೂಲ ವಟುವೃಕ್ಷ, (ಮಹಾ ವಿಷ್ಣುವು ಪ್ರಳಯ ಕಾಲದಲ್ಲಿ ಮಗುವಾಗಿ ಇದರ ಎಲೆಯ ಮೇಲೆ ಮಲಗಿರುತ್ತಾನಂತೆ) ಹಾಗೂ ಸಾವಿತ್ರಿ, ಸೀತಾಮಾತೆ ಆಯಾಸ ಪರಿಹರಿಸಿಕೊಳ್ಳಲು ಕುಳಿತ ಸ್ಥಳ (ಇವೆಲ್ಲವೂ ಸೇನಾ ನಿಯಂತ್ರಣದ ಸ್ಥಳದಲ್ಲಿವೆ.) ಇವುಗಳನ್ನು ನೋಡಿದರಂತೆ. ಹಾಗೂ ವಿಐಪಿ ಜನಗಳಿಗೆ ವಿಶೇಷವಾಗಿ ಮಾಡಿದ ಟೆಂಟ್ ಗಳಲ್ಲಿನ ಸ್ನಾನದ ವ್ಯವಸ್ಥೆ ಬಗ್ಗೆ ವಿವರಿಸಿದ್ದರು. ಆದರೆ ಪ್ರಳಯ ಕಾಲದಲ್ಲಿ ವಿಷ್ಣುವು ಮಲಗಿದ ವಟು ವೃಕ್ಷದ ದರ್ಶನವಾಗಲಿಲ್ಲ. ನಮಗೆಲ್ಲ ಇನ್ನೂ ಪ್ರಳಯ ದೂರದಲ್ಲಿದೆ ಎಂದು ಭಾವಿಸಿ, ಮತ್ತೊಮ್ಮೆ ಪ್ರವಾಸ ಆಯೋಜಿಸಬೇಕು.     
    
ಮರುದಿನ ನಮ್ಮ ಪ್ರವಾಸದ ಪ್ರಕಾರ ಅಯೋಧ್ಯೆಗೆ ಹೋಗುವುದಿತ್ತು. ರಸ್ತೆ ಸರಿಯಿಲ್ಲ. ಟ್ರೇನ್ ವೇಳೆಗೆ ಹಿಂದಿರುಗಲು ಆಗುವುದಿಲ್ಲ. ಎಂಬ ಅಭಿಪ್ರಾಯ ಆಚಾರ್ಯರದು. ಈ ವಿಪರೀತದ ಸೆಕೆಯಲ್ಲಿ, ಸರದಿ ಸಾಲಿನಲ್ಲಿ ನಿಂತು, ಮೂರು ಗುಂಡುಗಳನ್ನು ನೋಡುವುದೇ ಎಂಬ ಅಭಿಪ್ರಾಯ ಸಹಯಾತ್ರಿಗಳದ್ದು. ಹೇಳಿದ್ದೆನಲ್ಲ. 10% ಅತ್ತಿತ್ತ. ಎಂದು. ಸರಿ ಚಿತ್ರಕೂಟ ಪರ್ವತಕ್ಕೆ ಹೋಗಿ ಬರುವುದೆಂದರು. ಅಲ್ಲಿ ಕೂಡಾ ತುಂಬಾ ಬಿಸಲು, ಕಲ್ಲಲ್ಲಿ ನಡೆಯಲು ಸಾಧ್ಯವಿಲ್ಲ ಎಂದರು ಸಹ ಯಾತ್ರಿಗಳು. ಸರಿ ಸೀತಾ ಮರಹಿ ಎಂಬ ದೇವಸ್ಥಾನ ಹತ್ತಿರದಲ್ಲಿದೆ ಎಂದುದರಿಂದ ಅಲ್ಲಿಗೆ ಹೊರಟೆವು. ಸೀತೆಯು ರಾಮನಿಂದ ಪರಿತ್ಯಕ್ತೆಯಾಗಿ, ಪುನಃ ಸಂಗಮದ ಸಮಯದಲ್ಲಿ ಭೂ ಕಂಪನವಾಗಿ ಭೂಮಿಯಲ್ಲಿ ಸೇರಿಹೋದ ಸ್ಥಳ. 
      
ಆಗ ರಾಮಾಯಣದ ಕಾಲದಲ್ಲಿ ಆ ಸ್ಥಳ ಹೇಗಿತ್ತು ಎನ್ನುವುದಕ್ಕೆ ಫೋಟೋ ಹಾಕಿದ್ದಾರೆ. ಈಗ ಸೀತಾ ಮಾತೆಯ ಪುಟ್ಟದೊಂದು ಗುಡಿ ನಿರ್ಮಿಸಿದ್ದಾರೆ. ‘ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ. ಸಂಗಮ ಸಮಯದೆ ಭೂ ಕಂಪನ ಚಿರ ವಿರಹವೇ ಜಾನಕಿ ಜೀವನ.’ ಅಲ್ಲವೇ. ದೇವಸ್ಥಾನ ಚನ್ನಾಗಿದೆ. ಗಂಗಾ ನದಿಯ ಎದುರಿಗೆ ಪುಟ್ಟವನದಲ್ಲಿದೆ. ಅದರ ಸುತ್ತಲೂ ನೀರಿದೆ. ದೋಣಿಯಾಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಆದರೆ ಅಲ್ಲಿ ನೀರು ಹಸುರೇರಿ, ತುಂಬಾ ಹೊಲಸಾಗಿತ್ತು.


ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x