ಲೇಡಿ ವಿತ್ ದ ಲ್ಯಾಂಪ್: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

 somashekar-k-t

ಮೇ ೧೨ ಪ್ಲಾರೆನ್ಸ್ ನೈಟಿಂಗೆಲ್ ಜನ್ಮದಿನ. ಅವಳ ಜನ್ಮದಿನದ ನೆನಪಿಗಾಗಿ ಮೇ ೬ ರಿಂದ ೧೨ ರ ವರೆಗ ನರ್ಸ್ ಗಳ ಅಂತರಾಷ್ಟ್ರೀಯ ದಿನ ಆಚರಿಸುತ್ತಾರೆ. ಇಂತಹ ಗೌರವಕ್ಕೆ ಅವಳು ಭಾಜನವಾಗಬೇಕೆಂದರೆ ಅವಳು ಯಾರು ? ಅವಳು ಮಾಡಿದ ಸಾಧನೆಯಾದರೂ, ಮಹತ್ಕಾರ್ಯವಾದರೂ ಏನೆಂದು ತಿಳಿಯುವುದು ಸೂಕ್ತ.

ಸೇವೆಗೆ ಮತ್ತೊಂದು ಹೆಸರೇ ಪ್ಲಾರೆನ್ಸ್ ನೈಟಿಂಗೇಲ್! ' ಲೇಡಿ ವಿತ್ ದ ಲ್ಯಾಂಪ್ ' ಎಂದು ಪ್ರಸಿದ್ಧರಾದವರು. ಇವಳು ಶ್ರೀಮಂತ ಕುಟುಂಬದ ಹಿನ್ನೆಲೆಯವಳು. ೧೮೨೦ ಮೇ ೧೨ ರಂದು ಇಟಲಿಯ ಪ್ಲಾರೆನ್ಸ್ ನಲ್ಲಿ ಜನಿಸಿದಳು. ತಾಯಿಯ ಹೆಸರು ಪ್ರಾನ್ಸಿಸ್ ನೈಟಿಂಗೇಲ್.  ತಂದೆಯ ಹೆಸರು ವಿಲಿಯಂ ಶೋರ್ ನೈಟಿಂಗೇಲ್.  ಇವರು ಇಂಗ್ಲೆಂಡಿನಲ್ಲಿ ಶ್ರೀಮಂತ ಭೂ ಒಡೆಯ. ಇವರಿಗೆ ಎರಡನೆಯ ಹೆಣ್ಣು ಮಗುವಾಗಿ ಪ್ಲಾರೆನ್ಸ್ ಜನಿಸಿದಳು. ಪ್ಲಾರೆನ್ಸ್ ಇಟಲಿಯ ಸುಂದರ ನಗರ. ಪ್ಲಾರೆನ್ಸಿನಲ್ಲಿ ಇವಳು ಜನಿಸಿದ ಪ್ರಯುಕ್ತ ಇವಳಿಗೆ ಪ್ಲಾರೆನ್ಸ್ ಎಂದು ನಾಮಕರಣ ಮಾಡಿದರು. ಇವಳಿಗೆ ಚಿಕ್ಕಂದಿನಿಂದಲೂ ಸಾಕು ಪ್ರಾಣಿಗಳು, ಅವುಗಳ ಶುಶ್ರೂಶೆ, ಗಿಡ ಮರಗಳೆಂದರೆ ತುಂಬ ಇಷ್ಡ. ಇವಳು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಅಂದಿನ ಶ್ರೀಮಂತ ಹೆಣ್ಣು ಮಕ್ಕಳ ಜೀವನ ಕ್ರಮಗಳಂತೆ ಜೀವಿಸಲು ಇವಳು ಬಯಸಲಿಲ್ಲ! ಕಸೂತಿ, ಹೊಲಿಗೆ, ಹೆಣಿಗೆ ಕೆಲಸಗಳು, ಅಂದವಾಗಿ ಸಿಂಗರಿಸಿಕೊಂಡು ಔತಣಕೂಟಗಳಲ್ಲಿ ಭಾಗವಹಿಸುವುದು, ಹೂದಾನಿಗಳನ್ನು ಸರಿಪಡಿಸುತ್ತಾ ಉದ್ಯಾನಗಳಲ್ಲಿ ಓಡಾಡಿಕೊಂಡಿರುವುದು ಸಭ್ಯ ಪ್ರತಿಷ್ಟಿತ  ಹೆಂಗಳೆಯರ ಜೀವನವಾಗಿತ್ತು. ಇದು ಪ್ಲಾರೆನ್ಸ್ ಗೆ ಹಿಡಿಸುತ್ತಿರಲಿಲ್ಲ! ಪ್ಲಾರೆನ್ಸ್ ನೈಟಿಂಗೇಲ್ ತನ್ನ ಹದಿನಾರನೇ ವಯಸ್ಸಿನಲ್ಲಿ ತನ್ನ ಹಳ್ಳಿಯಲ್ಲಿ ತಮ್ಮ ಅಕ್ಕಪಕ್ಕದ ಬಡವರ ಮತ್ತು ಬಡ ರೋಗಿಗಳ ಸುಶ್ರೂಶೆ ಮಾಡುತ್ತಿದ್ದಳು. ಬಡವರಿಗೆ ಆಹಾರ ಉಡುಪು, ಹೊದಿಕೆ, ಔಷಧಿಗಳ ಹಂಚುತ್ತಿದ್ದಳು. ಅವುಗಳ ಕೊಡಿಸುವಂತೆ ತಂದೆ ತಾಯಿಗಳಿಗೆ ಒತ್ತಾಯ ಮಾಡುತ್ತಿದ್ದಳ. ಹೀಗೆ ರೋಗಿಗಳು, ಬಡವರ ಬಗ್ಗೆ ಕಾಳಜಿ ವಹಿಸಿ ತನ್ನ ಜೀವನದ ಉದ್ದೇಶವಾದ ಶುಶ್ರೂಶಕರ ಸೇವೆಯ ಕರೆಗೆ ಆಗಲೇ ಓಗೊಟ್ಟಿದ್ದಳು. ಸೇವೆ ಎಂಬುದು ಬಹು ಪವಿತ್ರವಾದುದು ಎಂದು ಭಾವಿಸಿದ್ದಳು.

ತಂದೆ ತಾಯಿಯ ವಿರೋಧ ಇದ್ದಾಗ್ಯೂ ನರ್ಸಿಂಗ್ ಶಿಕ್ಷಣ ಆಯ್ದುಕೊಂಡಳು. ಆ ಕಾಲದಲ್ಲಿ ನರ್ಸಿಂಗ್ ಅನ್ನು ಕೆಳ ಮಟ್ಟದ್ದೆಂದು ಭಾವಿಸಿದ್ದರು. ಇವಳು ಆ ಸೇವೆಯನ್ನು ಆಯ್ದುಕೊಂಡು ಅದನ್ನು ಮೇಲ್ಮಟ್ಟಕ್ಕೇರಿಸಿದಳು! ಎಲ್ಲರೂ ಗೌರವ ಕೊಡುವಂತೆ, ಉಳ್ಳವರೂ ಈ ತರಬೇತಿಯನ್ನು ಪ್ರೀತಿಸಿ ಸೇವಾ ಮನೋಭಾವದಿಂದ ಶುಶ್ರೂಶ ತರಬೇತಿಗೆ ಬರುವಂತೆ ಮಾಡಿದ ಕೀರ್ತಿ ಇವಳಿಗೆ ಸಲ್ಲುತ್ತದೆ. ಕ್ರಿ ಶ ೧೮೪೪ ರಲ್ಲಿ  ಜರ್ಮನಿಯಲ್ಲಿನ ಕೈಸರಸ್ವೇರ್ತ್ ನ ಲೂಥೆರನ್ ಆಸ್ಪತ್ರೆಯಲ್ಲಿ ನರ್ಸಿಂಗ್ ತರಬೇತಿ ಪಡೆದಳು. ಅಲ್ಲಿನ ತರಬೇತಿ ಸಾಧಾರಣದ್ದಾಗಿತ್ತು. ಅನಂತರ ' ಹಾಸ್ಪಿಟಲ್ ಆಪ್ ದಿ ಕ್ಯಾಥೋಲಿಕ್ ಸಿಸ್ಟರ್ಸ್ ಆಪ್ ಚಾರಿಟಿ'  ಯಲ್ಲಿ ನರ್ಸಿಂಗ್ ತರಬೆರತಿ ಪಡೆದಳು. ಬೇರೆ ಬೇರೆ ಆಸ್ಪತ್ರೆಗೆ ಭೇಟಿಕೊಟ್ಟು ಶುಶ್ರೂಶಕಿಯರ ಪಾತ್ರದ ಬಗ್ಗೆ ಅರಿತಳು. ತನ್ನ ಹದಿನೇಳನೇ ವಯಸ್ಸಿನಲ್ಲೇ ತನಗೆ ಯೋಗ್ಯನಾದ ವರನೊಂದಿಗೆ ವಿವಾಹವಾಗುವ ಅವಕಾಶ ಕೂಡಿಬಂದಿತ್ತು. ಇವಳೂ ರಿಚರ್ಡ ಹಟ್ಟನ್ ನಲ್ಲಿ ಅನುರಕ್ತಳಾಗಿದ್ದರೂ ತಾನು ಶುಶ್ರೂಶಕಿಯಾಗಬೇಕೆಂದಿರುವುದರಿಂದ ತನ್ನು ಸೇವಾಕಾರ್ಯಕ್ಕೆ ತೊಂದರೆಯಾಗಬಹುದೆಂದು ಒಂದು ವರ್ಷದ ನಂತರ ಮದುವೆಯಾಗದಿರುವ ತೀರ್ಮಾನಕ್ಕೆ ಬಂದಳು. ಅವಳು ಜೀವನದಲ್ಲಿ ನೈತಿಕತೆ … ಕ್ರಿಯಾಶೀಲ ಸ್ವಭಾವ …  ತೃಪ್ತಿ  ಬಯಸಿದ್ದಳು.  ವೈವಾಹಿಕ ಜೀವನದಿಂದ ಇದಕ್ಕೆ ಅಡ್ಡಿಯಾಗುತ್ತದೆ ಎಂದು ವಿವಾಹ ನಿರಾಕರಿಸಿ ತನ್ನ ವೈವಾಹಿಕ ಜೀವನಕ್ಕಿಂತ, ತನ್ನ ಸುಖ ಸಂತೋಷಕ್ಕಿಂತ  ದುಃಖದಲ್ಲಿರುವವರ ಸೇವೆ ಮಾಡಿ ಅವರ ನೋವು ನಿವಾರಿಸುವುದೇ ಶ್ರೇಷ್ಠ ಎಂದು ಭಾವಿಸಿದ್ದಳು. ಇಷ್ಟು ಚಿಕ್ಕ ವಯೋಮಾನದಲ್ಲೇ ಎಂಥಾ ಮಹಾನ್ ಭಾವ, ಅನನ್ಯವಾದ ಚಿಂತನೆ, ಧಿಟ್ಟ, ಶ್ರೇಷ್ಠ ತೀರ್ಮಾನ ! ಅವಳು ಅ
ಸೇವೆಯಲ್ಲಿ  ಜೀವನದ  ಸಂತೃಪ್ತಿಯನ್ನು ಕಂಡುಕೊಂಡಳು. ಆದ್ದರಿಂದ ಯೋಗ್ಯ ವರನೊಂದಿಗಿನ ವಿವಾಹನ್ನು ನಿರಾಕರಿಸಿದಳು.

ಜರ್ಮನಿಯಲ್ಲಿ ಶುಶ್ರೂಶ ಶಿಕ್ಷಣ ಮುಗಿಸಿದ ಪ್ಲಾರೆನ್ಸ್ ಲಂಡನ್ನಿಗೆ ಮರಳಿ ಅಲ್ಲಿನ ' ದ ಇನ್ ಸ್ಟಿಟ್ಯೂಷನ್ ಫಾರ್ ದ ಕೇರ್ ಆಫ್ ದ ಸಿಕ್ ಜಂಟಲ್ ವಿಮೆನ್ ಇನ್ ಡಿಸ್ಟ್ರೆಸ್ಡ್ ಸರ್ ಕಂಸ್ಟೆನ್ಸಸ್ ' ಆಸ್ಪತ್ರೆಯಲ್ಲಿ ಮೇಲ್ವಿಚಾರಕಿಯಾಗಿ ಕೆಲಸಕ್ಕೆ ಸೇರಿ ಆರಂಭದಲ್ಲೇ ಅದರ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಳು. ಶಿಸ್ತು, ಸ್ವಚ್ಛತೆ, ಧಕ್ಷ ಕಾರ್ಯನಿರ್ವಹಣೆ, ನೈರ್ಮಲ್ಯತೆಗೆ ಮಹತ್ವ ಕೊಟ್ಟು ಅವ್ಯವಸ್ಥೆಯ ಆಗರವಾಗಿದ್ದ ಅದನ್ನು ಮಾದರಿ ಆಸ್ಪತ್ರೆ ಮಾಡಿ ಸೇವಾ ಮನೋಭಾವ ಮೆರೆದು ಎಲ್ಲರ ಗಮನ ಸೆಳೆದಳು!

೧೮೫೪ ರಲ್ಲಿ ಕ್ರಿಮಿಯ ಯುದ್ಧ ಸಂಭವಿಸಿತು. ಅಲ್ಮ ಎಂಬಲ್ಲಿ ಬ್ರಿಟಿಷ್ ಸೈನ್ಯ ಸೋತಿತು. ೧೮,೦೦೦ ಸೈನಿಕರು ಸೈನಿಕ ಆಸ್ಪತ್ರೆಗೆ ಸೇರಿದರು. ಆಗ ಅ ಆಸ್ಪತ್ರೆಗಳಲ್ಲಿ ನರ್ಸ್ ಗಳು ರಾತ್ರಿ ವೇಳೆ ಆಸ್ಪತ್ರೆಗಳಲ್ಲಿ ತಂಗುತ್ತಿರಲಿಲ್ಲ. ಮತ್ತು ಈ ಹಿಂದೆ ಅವರ ಸೇವೆ ಉತ್ತಮವಾಗಿರಲಿಲ್ಲವೆಂದು ಅವರನ್ನು ಆಸ್ಪತ್ರೆಯಿಂದ ನಿಗ್ರಹಿಸಿದ್ದರು. ಕ್ರಿಮಿಯಾ ಯುದ್ದದಲ್ಲಿ ಗಾಯಗೊಂಡ ಸೈನಿಕರನ್ನು ಸಂಖ್ಯೆ ಹೆಚ್ಚಾದ್ದರಿಂದ ಮತ್ತೆ ಶುಶ್ರೂಶೆ ಮಾಡಲು ಅವರನ್ನು ಕರೆಯಿಸಬೇಕಾದ ಒತ್ತಡದಲ್ಲಿ ಸಿಲುಕಿತು. ಯುದ್ದ ಭೂಮಿಯಲ್ಲಿ ಸೈನಿಕರಿಗೆ ಶುಶ್ರೂಶೆ ಮಾಡುವವರು ಇರದೆ ಅವರ ಗಾಯಗಳು ಕೊಳೆತುಹೋಗುತ್ತಿದ್ದವು. ಅವರನ್ನು ಉಳಿಸಲು ಅರವಳಿಕೆ ಕೊಡದೆ ಕೈ ಅಥವಾ ಕಾಲನ್ನು ಹಾಗೆ ಕತ್ತರಿಸಿ ತೆಗೆಯುತ್ತಿದ್ದರು! ಅದಕ್ಕೆ ೧೮೫೪ ರಲ್ಲಿ ಸರ್ಕಾರದ ಮುಖ್ಯ  ಸಮರ ಕಾರ್ಯದರ್ಶಿ ನೈಟಿಂಗೇಲಳ ಸೇವಾ ಮನೋಭಾವದ ಪ್ರಖ್ಯಾತಿಯನ್ನು ಕೇಳಿ ಅವಳಿಗೆ ಪತ್ರವೊಂದು ಬರೆದರು. ಆ ಪತ್ರ ಬಂದ ಪ್ರಯುಕ್ತ ಹಾಗೂ ಸೈನಿಕರ ದುಸ್ಥಿತಿಯ ವಿವರವನ್ನು ಪತ್ರಿಕೆಯಲ್ಲಿ ಓದಿ ತಿಳಿದು ಅವರ ಶುಶ್ರೂಶೆ ಮಾಡ ಬಯಸಿ ಇವಳೂ ಅವರಿಗೆ ಪತ್ರ ಬರೆದಿದ್ದಳು. ಅವಳಿಗೆ ಸೇವೆ ಮಾಡುವ ಅವಕಾಶ ದೊರೆಯಿತು. ನೈಟಿಂಗೇಲ್ ೩೪ ನರ್ಸ್ ಗಳೊಂದಿಗೆ ಕ್ರಿಮಿಯ ತಲುಪಿದಳು. ಅಲ್ಲಿಗೆ ಹೋಗಿ ನೋಡಿದಾಗ ತಾವು ಅಂದುಕೊಂಡದ್ದಕ್ಕಿಂತ, ಅವರು ಹೇಳಿದ್ದಕ್ಕಿಂತಾ ಆ ಪರಿಸ್ಥಿತಿ ಕೆಟ್ಟದ್ದಾಗಿತ್ತು. ಅಲ್ಲಿನ ದುಃಸ್ಥಿತಿಯ ಮಟ್ಟಕ್ಕೆ ಸಿದ್ಧತೆ ಮಾಡಿಕೊಂಡಿರಲಿಲ್ಲ. ಅದು ಅವ್ಯವಸ್ಥೆಯ ಆಗರವಾಗಿತ್ತು. ಸ್ವಚ್ಛತೆನೆ ಇರದೆ ಅಲ್ಲಿನ ನೀರು, ಆಸ್ಪತ್ರೆ ಗೋಡೆ, ಕಟ್ಟಡ ಗಲೀಜಿನಿಂದ ಕೂಡಿತ್ತು. ತಾವು ಮಾಡಿದ ಗಲೀಜಿನ ಮೇಲೆ ಆ ರೋಗಿಗಳು ಮಲಗುವುದು, ಕುಳಿತುಕೊಳ್ಳುವುದು ಮಾಡಬೇಕಿತ್ತು. ಆದ್ದರಿಂದ ಅಲ್ಲಿ ಇಲಿಗಳು, ತಗಣಿಗಳು ಹೆಚ್ಚಿ ರೋಗಿಗಳ ಮೇಲೆಯೇ ನಡೆದಾಡುತ್ತಿದ್ದವು ! ಜತೆಗೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದ ಪ್ರಯುಕ್ತ ಮೂಲಭೂತ ಅವಶ್ಯಕಗಳಾದ ಸೋಪು, ಬ್ರಷ್, ಬ್ಯಾಂಡೇಜ್ ಗಳ ಕೊರತೆ ಉಂಟಾಗಿ ರೋಗ ಹರಡುವಿಕೆ ಹೆಚ್ಚಿತು. ಗಾಯಗೊಂಡು ಸಾಯುವವರಿಗಿಂತ ಇನ್ಫೆಕ್ಷನ್ ಆಗಿ ಸಾಯುವವರ ಸಂಖ್ಯೆ ಹೆಚ್ಚಾಗಿತ್ತು. ಇದು ನೈಟಿಂಗೇಲಳನ್ನು ಚಿಂತೆಗೀಡುಮಾಡಿತು. ನೂರು ಬ್ರಷ್ ತರಿಸಿ ರೋಗಿಗಳಿಂದಲೇ ಸ್ವಚ್ಛ ಮಾಡಿಸುವುದನ್ನು ಮೊದಲು ಮಾಡಿದಳು. ಅಮೂಲಾಗ್ರವಾಗಿ ಆಸ್ಪತ್ರೆಯನ್ನು ಬದಲಿಸುದಳು. ಗಾಯಾಳುಗಳಿರುವಲ್ಲಿಗೆ ಹೋಗಿ ಶುಶ್ರೂಶೆ ಮಾಡುತ್ತಿದ್ದಳು. ಸೈನಿಕರ ಮನ ಗೆಲ್ಲುವಂತೆ ಪ್ರೀತಿಯಿಂದ ಸೇವೆ ಮಾಡಿ

ಆಸ್ಪತ್ರೆಯ ಅವ್ಯವಸ್ಥೆ,  ಗಲೀಜು, ದರ್ನಾಥ ಹೋಗಲಾಡಿಸಿ ನಿರ್ಮಲ ಮಾಡಿದಳು. ಗಾಯ , ಮುಂತಾದ ತೊಂದರೆಗಳ ನಿವಾರಿಸಲು ಹತ್ತಿ, ಬ್ಯಾಂಡೇಜ್ ಬಟ್ಟೆ, ಔಷಧಿ ಮುಂತಾದವುಗಳು ದೊರೆಯುವಂತೆ ಮಾಡಿದಳು. ಹಾಸಿಗೆ, ಮಂಚ ವ್ಯವಸ್ಥೆ ಮಾಡಿಸಿದಳು. ಸೈನಿಕರ ಆತ್ಮೀಯವಾಗಿ ವಿಚಾರಿಸಿ ಶುಶ್ರೂಶೆ ಮಾಡಿದಳು.

ಪ್ರತಿದಿನ ಸಾಯಂಕಾಲ ಕತ್ತಲಲ್ಲಿ ಬಂದು ಸ್ವಯಂ ಆಸಕ್ತಿಯಿಂದ ರೋಗಿಗಳ ಕ್ಷೇಮ ವಿಚಾರಿಸುತ್ತಿದ್ದಳು. ಹಾಗೆ ಬಂದು ಎಲ್ಲಾ ರೋಗಿಗಳ ಗಮನಿಸುವಾಗ ಆ ಕಾಲದಲ್ಲಿ ವಿದ್ಯುತ್ ಇಲ್ಲದ ಪ್ರಯುಕ್ತ ಕೈಯಲ್ಲಿ ಒಂದು ಲ್ಯಾಂಪನ್ನು ಹಿಡಿದು ಬಂದು ರೋಗ ವಿಚಾರಿಸಿ ಅವರ ಬಗ್ಗೆ ಕಾಳಜಿ ಮೆರೆದಳು. ಅದಕ್ಕಾಗಿ ಇವಳನ್ನು '  ಲೇಡಿ ವಿತ್ ದ ಲ್ಯಾಂಪ್ ' ಎಂದು ಕರೆದರು. ಹಾಗೆ ರೋಗಿಗಳ ಮೇಲೆ ಹೆಚ್ಚು ಕರುಣೆ, ಕಾಳಜಿ ವಹಿಸಿ ಶುಶ್ರೂಶೆ ಮಾಡಿ ಸಾವಿನ ಸಂಖ್ಯೆ ಮೂರನೇ ಎರಡರಷ್ಟು ಕಡಿಮೆಗೊಳಿಸಿದಳು. ಗಾಯಾಳುಗಳಿಗೆ ಇವಳು ಮರು ಜೀವ ಬರುವಂತೆ ಶುಶ್ರೂಶೆ ಮಾಡುತ್ತಿದ್ದಳು. ಗಾಯಾಳುಗಳಿಗೆ ದೇವತೆಯಾಗಿ ಸೇವೆ ಮಾಡಿದಳು. ಆದ್ದರಿಂದ ಅವಳನ್ನು ' ಏಂಜೆಲ್ ಆಫ್ ಕ್ರಿಮಿಯ ' ಎಂದು ಕರೆದರು. ಅವಳು ಆ ಆಸ್ಪತ್ರೆಯನ್ನು ಸುಧಾರಿಸಿ ಮೇಲ್ದರ್ಜೆಗೇರಿಸಿದಳು. ಆಸ್ಪತ್ರೆಯನ್ನು ರೋಗಗಳು ಹರಡದಂತೆ ನಿರ್ಮಲವಾಗಿಸಿದಳು, ರೋಗಿಗಳು ಸ್ವಚ್ಛ ಬಟ್ಟೆ ಧರಿಸಿ ರೋಗಗಳಿಂದ ದೂರವಿರುವಂತಾಗಲೆಂದು ಲ್ಯಾಂಡ್ರಿ ತೆರೆದಳು, ತರಗತಿಗಳ ನಡೆಯಿಸುತ್ತ ರೋಗಗಳು ಹರಡದಂತೆ ಹೇಗೆ ಇರಬೇಕೆಂದು ತಿಳಿಸಿದಳು. ಲೈಬ್ರರಿ ತೆರೆದು ರೋಗಿಗಳಿಗೆ ಚೈತನ್ಯ ತುಂಬಿದಳು. ಮತ್ತು ಮನರಂಜನೆಗೆ ಅವಕಾಶ ಮಾಡಿಕೊಟ್ಟಳು. ರೋಗಗಳು ಬೇಗ ವಾಸಿಯಾಗಲು ಅನುಕೂಲಿಸಿದಳು.

ಕ್ರಿಮಿಯ ಅನುಭವ ಆಧಾರವಾಗಿಟ್ಟುಕೊಂಡು ಕೆಲವು ಟಿಪ್ಪಣಿಗಳನ್ನು ಬರೆದಳು ಮತ್ತು ೮೩೦ ಪುಟದ ವರದಿ ಸಿದ್ಧಪಡಿಸಿದಳು. ಆಸ್ಪತ್ರೆಗಳನ್ನು ಹೇಗೆ ಸುಧಾರಿಸುವುದು, ಆಡಳಿತ ನಡೆಸುವ ಬಗ್ಗೆ ಮಾಹಿತಿ ನೀಡಿದಳು. ಆ ಪುಸ್ತಕ ವೈರಲ್ ಆಯಿತು.  ಅದರ ಆಧಾರದ ಮೇಲೆ ಆಸ್ಪತ್ರೆಗಳು ಸುಧಾರಣೆಗೊಂಡವು.

ಇವಳಿಗೆ ಅನೇಕ ಪ್ರಶಸ್ತಿಗಳು ಬಂದವು, ಅನೇಕರು ಕತೆ ಕವನ ಕಟ್ಟಿ ಹೊಗಳಿದರು.ಬ್ರಿಟಿಷ್ ಸರ್ಕಾರ ೨೫,೦೦೦ ಡಾಲರ್ ಬಹುಮಾನ ಕೊಟ್ಟಿತು.ಆ ಹಣದಿಂದ ಸಂತ ಥಾಮಸ್ ಆಸ್ಪತ್ರೆಯನ್ನು, ನೈಟಿಂಗೇಲ್ ಟ್ರೈನಿಂಗ್ ಸ್ಕೂಲ್ ಆಫ್ ನರ್ಸಸ್  ತೆರೆದು ವೈಜ್ಞಾನಿಕ ತಳಹದಿಯ ಮೇಲೆ ತರಬೇತಿ ನೀಡುವ ವ್ಯವಸ್ಥೆಮಾಡಿದಳು.  ೧೩ ಆಗಸ್ಟ ೧೯೧೦ ರಂದು ಅನಾರೋಗ್ಯನಿಮಿತ್ತ ಕೊನೆಯುಸಿರೆಳೆದಳು.ಇವಳನ್ನು ಆಧುನಿಕ ನರ್ಸಿಂಗಿನ ಸ್ಥಾಪಕಿ ಎಂದು ಕರೆಯುತ್ತಾರೆ! ಆಸ್ಪತ್ರೆಯ ಆಡಳಿತ ಕಾರ್ಯ ನಿರ್ವಹಣೆ ಸುಧಾರಿಸುವಂತೆ ಮಾಡಿದಳು. ಆಸ್ಪತ್ರೆಯಲ್ಲಿನ ನೈರ್ಮಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಳು

ಮೇ ೧೨ ಇವಳ ಹುಟ್ಟಿದ ದಿನ. ಮೇ ೬ ರಿಂದ ಮೇ ೧೨ ರವರೆಗೆ ಇವಳ ಜಯಂತಿಯನ್ನು ಅಂತರಾಷ್ಟೀಯ ನರ್ಸುಗಳ ದಿನವನ್ನಾಗಿ ಆಚರಿಸುತ್ತಾರೆ. ಅಂದು ಸಮಾಜದಲ್ಲಿ ನರ್ಸುಗಳ ಮಹತ್ವ ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.. 

ಸೇವೆ ಎಂಬುದು ಭಾಗ್ಯ ! ಇದೊಂದು ಪವಿತ್ರ ಕಾರ್ಯ! ಈ  ಮನೋಭಾವ ಎಲ್ಲರಲ್ಲೂ ಇರುವುದಿಲ್ಲ. ಇದರಲ್ಲಿ ತೊಡಗಿರುವ ನರ್ಸ್ ಗಳನ್ನು  ಭೂಮಿಯಮೇಲೆ ನಡೆದುಾಡುವ ದೇವತೆಗಳೆಂದರೆ ಅತಿಶಯೋಕ್ತಿಯಾಗಲಾರದು. ಇದಕ್ಕೆ ಅಪವಾದಗಳು ಇಲ್ಲದಿಲ್ಲ, ಆದರೆ ಅವು ಗೌಣ. ಗೌಣವಾದವುಗಳಿಗೆ ಪ್ರಾಮುಖ್ಯತೆ ಕೊಡಬಾರದು. ನರ್ಸುಗಳು ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಒಮ್ಮೆ ಕಲ್ಪಿಸಿಕೊಳ್ಳಿ ! ಆಗ ಅವರ ಪ್ರಾಮುಖ್ಯತೆ ತಿಳಿಯುತ್ತದೆ.

-ಕೆ ಟಿ ಸೋಮಶೇಖರ್ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x