ನೆನಪಿನ ಪಯಣ – ಭಾಗ 4: ಪಾರ್ಥಸಾರಥಿ ಎನ್

parthasarathy nಇಲ್ಲಿಯವರೆಗೆ

ಜ್ಯೋತಿ ಮತ್ತೆ ನೆನಪಿಸಿಕೊಳ್ಳುತ್ತಿದ್ದಳು.
ನಾನು ಆಗಿನ್ನು ಪಿಯುಸಿ ಮುಗಿಸಿದ್ದೆ, ಯಾವುದು ಸರಿಯೋ ಯಾವುದು ತಪ್ಪೋ ಯಾರು ಒಳ್ಳೆಯವರು ಕೆಡುಕರು ಅನ್ನುವುದು ಸದ್ಯ ತಿಳಿಯದ ಸ್ಥಿತಿ. ನಾನಾಗ ರಜೆಯಲ್ಲಿ ಟೈಪಿಂಗ್ ಕೋರ್ಸ್ ಸೇರಿದ್ದೆ. ಅಲ್ಲಿ ಒಬ್ಬ ಹುಡುಗ ಪರಿಚಯವಾಗಿದ್ದ. ನನಗಿಂತ ಮೂರು  ವರ್ಷ ದೊಡ್ಡವನಿರಬಹುದೇನೊ, ನಾಗೇಶ ಎಂದು ಹೆಸರು. ಅಲ್ಲಿ ಹೋದ ಒಂದು ತಿಂಗಳಿಗೆಲ್ಲ ಎಷ್ಟು ಆತ್ಮೀಯನಾಗಿದ್ದ ಎಂದರೆ ಅವನ ಮಾತುಗಳಿಗೆ ನಾನು ಮರುಳಾಗಿದ್ದೆ. ಅವನನ್ನು ಪ್ರಾಣದಂತೆ ಪ್ರೀತಿಸುತ್ತಿದ್ದೆ. ಮನೆಯಲ್ಲಿ ಅಪ್ಪ ಅಮ್ಮನಿಗೂ ಹೇಳುವ ದೈರ್ಯವಿಲ್ಲ. ಹೇಳಿದರೆ, ಇನ್ನೂ ಓದು ಮುಗಿಸದೆ ನಿನಗೆ ಈ ಪ್ರೀತಿ ಪ್ರೇಮದ ಹುಚ್ಚೆ ಎಂದು ಖಂಡಿತ ಅನ್ನಿಸಿಕೊಳ್ಳುವೆ , ಹಾಗಾಗಿ ಎಲ್ಲರಿಂದಲೂ ಈ ಪ್ರೀತಿಯ ವಿಷಯ ಗುಟ್ಟಾಗಿ ಇಟ್ಟಿದ್ದೆ.

ರಜೆಯಲ್ಲಿ ಅಮ್ಮನ ಜೊತೆ ಅಜ್ಜಿಯ ಮನೆಗೆ ಹೋಗಿ ಬಾ ಒಂದು ವಾರ ಇದ್ದು ಬಾ ಎಂದು ಎಲ್ಲರ ಒತ್ತಾಯ, ಆದರೆ ಅಜ್ಜಿಯ ಮನೆ ಎಂದು ಹೋದರೆ, ಒಂದು ವಾರ ನಾಗೇಶನನ್ನು ಬೇಟಿ ಮಾಡದೆ ಇರುವದಾದರು ಹೇಗೆ, ಅನ್ನುವ ಸಂಕಟ. ಹಾಗಾಗಿ ಅಜ್ಜಿಯ ಮನೆಗೆ ಬರಲ್ಲ ಎಂದು ಅಮ್ಮನ ಬಳಿ ಹೇಳಿದರೆ ಅಮ್ಮನದು ಒಂದೇ ಕೂಗಾಟ. ನಿನ್ನದು ಅತಿಯಾಯಿತು ಎಂದು.
ಈ ನಡುವೆ ನನ್ನ ನಾಗೇಶನ  ಪ್ರೀತಿ ಯಾವ ಮಟ್ಟಕ್ಕೆ ಎಂದರೆ ಅವನು ಏನು ಹೇಳಿದರು ಕೇಳುವ ಮಟ್ಟಕ್ಕೆ ಅವನನ್ನು ನಂಬುತ್ತಿದ್ದೆ. ಅಂದು ಅವನು ಹೇಳಿದ
"ನಾನು ನಿನ್ನನ್ನು ಬಿಟ್ಟಿರಲಾರೆ, ಒಂದು ಕೆಲಸ ಮಾಡುವ, ನೀನು ನಿನ್ನ ಮನೆಬಿಟ್ಟು ಬಂದುಬಿಡು, ನಾವಿಬ್ಬರು ಎಲ್ಲಿಯಾದರು ದೂರಹೋಗಿ ನಮ್ಮ ಪಾಡಿಗೆ ನಾವೆ ಇದ್ದುಬಿಡುವ" 
ಅದಕ್ಕೆ ನಾನು ಒಪ್ಪಿಬಿಟ್ಟೆ , ಅವನು ಹೇಳಿದ

"ಹಾಗಿದ್ದರೆ ಸರಿ, ನಾಳೆ ಬೆಳಗ್ಗೆ ನೀನು ಒಂದಿಷ್ಟು ಬಟ್ಟೆ, ಮನೆಯಲ್ಲಿನ ಒಡವೆ ಹಣ ಎಲ್ಲ ತಂದುಬಿಡು, ನಾನು ಒಂದಿಷ್ಟು ಹಣ ತರುತ್ತೇನೆ, ಸ್ವಲ್ಪ ಕಾಲ ಹೊರಗೆ ಯೋಚನೆ ಇರಲ್ಲ. ಆಮೇಲೆ ನಾನೊಂದು ಕೆಲಸ ಹುಡುಕುತ್ತೇನೆ"  
ನಾನು ಹೆಚ್ಚು ಯೋಚಿಸದೆ ಸಿದ್ದಳಾಗಿ ಬಿಟ್ಟೆ. 
ಮರುದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿ, ರಾತ್ರಿಯೆ ಸಿದ್ದಪಡಿಸಿದ್ದ ಬಟ್ಟೆಯ ಬ್ಯಾಗ್ ಹಿಡಿದು ಮನೆಯಿಂದ ಹೊರಟೆ, ರಸ್ತೆಯ ತುದಿಯಲ್ಲಿ ನಾಗೇಶ ಕಾಯುತ್ತಿದ್ದ. ಅವನ ಮುಖ ನೋಡುವಾಗಲೆ ನನ್ನ ಮನಸ್ಸು ಹೃದಯ ತುಂಬಿಬಂದವು, 
ಅವನು ನನ್ನ ಮುಖ ನೋಡುವಾಗಲೆ ಮೊದಲು ಕೇಳಿದ
"ಒಡವೆ ಹಣ ಎಲ್ಲ ತಂದಿರುವೆಯಾ? !!!! "
ನನಗೆ ಪಿಚ್ಚೆನಿಸಿತು, ನಾನು ಅವನ ಪ್ರೀತಿಗಾಗಿ ಓಡಿಬಂದಿದ್ದರೆ ಅವನ ಮೊದಲ ಗಮನ ಒಡವೆ ಹಣ.
ನಾನು ಹೇಳಿದೆ 

'ಇಲ್ಲ ತರಲಿಲ್ಲ, ನನ್ನನ್ನು ನೋಡಿಕೊಳ್ಳಲು ನೀನಿರುವಾಗ, ನಿನ್ನ ಪ್ರೀತಿ ಇರುವಾಗ ಅದೆಲ್ಲ ನನಗೆ ನೆನಪೆ ಬರಲಿಲ್ಲ " 
ನಾಗೇಶ ನಗುತ್ತಿದ್ದ, 
"ಅಯ್ಯೋ ಪೆದ್ದೆ, ಪ್ರೀತಿ ಮುಖ್ಯ ಅಂತ ಹೊರಗೆ ಅದನ್ನು ನಂಬಿ ಬದುಕಕ್ಕೆ ಆಗುತ್ತ, ಬದುಕಿಗೆ ಮೊದಲು ಹಣ ಮುಖ್ಯ ಅದೇ ಇಲ್ಲದಿದ್ದರೆ ಹೇಗಿರೋದು." 
ನನಗೆ ತೀರ ಪಿಚ್ಚೆನಿಸಿತು. ಅವನು ಬಿಡಲಿಲ್ಲ, ನನಗೆ ಹೇಳಿದ
"ಚಿಂತಿಸಬೇಡ, ನಿಮ್ಮ ಮನೆಯಲ್ಲಿ ಇನ್ನೂ ಯಾರು ಎದ್ದಿರಲ್ಲ, ಹಾಗೆ ಹೋಗಿ, ಒಡವೆ ಹಣ ಎಲ್ಲ ಎಗರಿಸಿ ತಂದು ಬಿಡು, ಬೆಳಗಿನ ರೈಲಿಗೆ ಹೊರಟುಹೋಗೋಣ"
ನಾನು ಹಿಂದೆ ಹೊರಟೆ , ಅವನು ಹೇಳಿದ್ದನ್ನು ತರಲು, ನನಗೆ ಅದೇಕೊ ಮೊದಲಿನ ಉತ್ಸಾಹವಿರಲಿಲ್ಲ ಮನಸಿಗೆ.
ಬಾಗಿಲು ತೆರೆದು ಒಳಗೆ ಬಂದರೆ, ಅಮ್ಮ ಹಾಲಿನಲ್ಲಿ ಸಿದ್ದರಾಗಿ ನಿಂತಿದ್ದರು, ನಾನು ಬ್ಯಾಗ್ ಸಮೇತ ಬಂದಾಗ ಅವರಿಗೆ ಆಶ್ಚರ್ಯ. 
"ಇದೇನೆ ಇಷ್ಟು ಬೇಗ ಸಿದ್ದಳಾಗಿದ್ದೀಯ, ಹೊರಗೆ ಏಕೆ ಹೋಗಿದ್ದೆ "ಎಂದರು. 
ಅಷ್ಟರಲ್ಲಿ ಅಪ್ಪ ರೂಮಿನಿಂದ ಬಂದವರು,ನನ್ನನ್ನು ಕಂಡು

 "ನೋಡಿದೆಯಾ ಮಗೂನ, ಸುಮ್ಮನೆ ಬೈಯುತ್ತೀಯ, ನಿನ್ನ ಜೊತೆಗೆ ಅಜ್ಜಿಮನೆಗೆ ಅಂತ ಸಿದ್ದಳಾಗಿ ನಿಂತಿದ್ದಾಳೆ. ನಿನ್ನ ಬಾಯಿ ಜಾಸ್ತಿ  ಸುಮ್ಮನೆ ಅವಳನ್ನು ಅನ್ನುತ್ತೀಯ, "
ಎಂದು ಅಮ್ಮನನ್ನೆ ಬೈದರು. 
ನನಗೆ ಏಕೊ ಅಳು ಬಂದಂತಾಗುತ್ತಿತ್ತು ತಡೆದುಕೊಂಡೆ. 
ಈಗ ವಿದಿ ಇರಲಿಲ್ಲ, ತಮ್ಮ ಹೊರಗೆ ಹೋಗಿ ಆಟೋ ತಂದ, 
ಸುಮ್ಮನೆ ಬಾಯಿಮುಚ್ಚಿ, ಅಮ್ಮನ ಜೊತೆ ಆಟೋ ಹತ್ತಿ ಕುಳಿತೆ, ಆಟೋ ರಸ್ತೆಯ ತುದಿಗೆ ಬಂದಾಗ ನಾಗೇಶ ನನ್ನನ್ನು ಕಾಯುತ್ತ ನಿಂತಿರುವುದು ಕಾಣಿಸಿತು. ಆದರೆ ಅಮ್ಮ ಪಕ್ಕದಲ್ಲಿದ್ದಳು, ನಾನು ಏನು ಮಾಡುವಂತಿರಲಿಲ್ಲ. ನಾಗೇಶ ನನ್ನನ್ನು ನೋಡಿದ ಅನ್ನಿಸುತ್ತೆ.  ನಾನು ಅಜ್ಜಿಯ ಊರಿನಿಂದ ಹಿಂದಕ್ಕೆ ಬರುವಾಗ ಹದಿನೈದು ದಿನ ಕಳೆದಿತ್ತು. ಅಲ್ಲಿಂದ ಅವನನ್ನು ಸಂಪರ್ಕಿಸಲು ಅವನ ವಿಳಾಸ ತಿಳಿದಿರಲಿಲ್ಲ . ಮೊಬೈಲ್ ಇರಲಿಲ್ಲ.  ಅಲ್ಲಿಂದ ಬಂದ ನಂತರ ನನಗೆ ಶಾಕಿಂಗ್ ಸುದ್ದಿಯೊಂದು ಕಾದಿತ್ತು, 
ನಾನು ಪ್ರೀತಿಸಿದ್ದ ನಾಗೇಶ ನಮ್ಮ ರಸ್ತೆಯ ಶಾರದ ಜೊತೆ ಓಡಿ ಹೋಗಿದ್ದ ಅಂತ ಎಲ್ಲಡೆಯು ಸುದ್ದಿ. ಅದು ನಿಜವೂ ಆಗಿತ್ತು, ಅವರಿಬ್ಬರು ಮನೆಬಿಟ್ಟು ಓಡಿ ಹೋಗಿದ್ದರು.
ಜ್ಯೋತಿ ಮತ್ತೆ ಮೌನವಾದಳು.

ನನಗೀಗ ಚಿಂತೆ ಅನ್ನಿಸುತ್ತಿತ್ತು. ಹೆಣ್ಣಿನ ಮನದಲ್ಲಿ ಅದೆಂತ ಗುಟ್ಟುಗಳಿರುತ್ತವೆ. ಎಲ್ಲ ಗುಟ್ಟುಗಳು ಮಾತುಗಳಾದರೆ ಬಹಳಷ್ಟು ಸಂಸಾರಗಳು ಒಡದು ಚೂರುಗಳಾಗುತ್ತವೆ. 
ಆನಂದನಂತು ತಲೆ ತಗ್ಗಿಸಿ ಕುಳಿತ್ತಿದ್ದ, ಅವನ ಮನದಲ್ಲಿ ಏನಾಗುತ್ತಿದೆ ನನಗೆ ತಿಳಿಯುತ್ತಿಲ್ಲ. ಸಂದ್ಯಾಳಿಗೂ ಈಗ ಜ್ಯೋತಿ ಹೇಳಿದ ನೆನಪಿನ ಘಟನೆ ಅನಿರೀಕ್ಷಿತ ಅನ್ನಿಸುತ್ತೆ ಮೌನವಾಗಿ ಕುಳಿತಿದ್ದಳು. ಜ್ಯೋತಿ ಮಾತ್ರ ತನ್ನ ನೆನಪಿನ ಪಯಣದಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಹಿಂದೆ ಹೋಗುತ್ತಿದ್ದಳು. ಅವಳನ್ನು ತಡೆಯುವುದು , ಎಬ್ಬಿಸುವುದೋ ಏಕೆ ಸಾದ್ಯವಾಗುತ್ತಿಲ್ಲ ಎನ್ನುವ ಆತಂಕ ನನಗೆ
ಆನಂದ ಎದ್ದು ನಿಂತ, ಸಂದ್ಯಾ ಕಡೆ ನೋಡಿದ,  ಅವರಿಬ್ಬರು ನಿಶ್ಯಬ್ದವಾಗಿ ಅಡುಗೆಮನೆ ಕಡೆ ಹೊರಟರು , ಕಾಫಿ ಮಾಡಿ ತರಲು. ಆರ್ಯ ಹಾಗು ಉಷಾ ಮತ್ತು ಶ್ರೀನಿವಾಸ ಮೂರ್ತಿಗಳು ಸುಮ್ಮನೆ ಕುಳಿತಿದ್ದರು ಏನು ತೋಚದೆ.
ನಾನು ಮತ್ತೆ ಕರೆದೆ
ಜ್ಯೋತಿ , ಎಲ್ಲರಿಗೂ ಸಮಯವಾಗುತ್ತಿದೆ, ಏಳುವಿರ ?
ಆಕೆ ನಿಧಾನವಾಗಿ ಎಂಬಂತೆ ಹೇಳಿದಳು
ಯಾರಿಗೆ ಸಮಯವಾಗುತ್ತಿದೆ ? , ನಾನೀಗ ಹಿಂದೆ ಮತ್ತೂ ಹಿಂದೆ ಹೋಗಬೇಕು ಏಳಲಾರೆ , 
ನಾನು ನಿಸ್ಸಹಯಾಕನಾಗಿ ಕುಳಿತೆ. ಸ್ವಲ್ಪ ಸಮಯದಲ್ಲಿ ಕಾಫಿ ಬಂದಿತು, ಎಲ್ಲರಿಗೂ ಒಂದು ಲೋಟ.
ನಾನು ಕಾಫಿ ಹಿಡಿದು ಜ್ಯೋತಿಯನ್ನು ಕೇಳಿದೆ,

ಜ್ಯೋತಿ ಏಳಿ, ನಿಮಗಾಗಿ ಕಾಫಿ ಬಂದಿದೆ, ಒಂದು ಲೋಟ ಕುಡಿಯಿರಿ ನಂತರ ನಿಮ್ಮ ನೆನಪಿನ ಪಯಣ ಸಾಗಲಿ
ನನ್ನ ಮಾತಿಗೆ ಪ್ರತಿಕ್ರಿಯಿಸದೆ ಜ್ಯೋತಿ ಮುಂದುವರೆದರು
" ಚಿಕ್ಕವಯಸ್ಸು ಅಂದರೆ ನನಗೆ ಅದೇಕೊ ತೀರ ಚಿಕ್ಕವಯಸ್ಸಿನದು ನೆನಪಿದೆ, ಎಲ್ಲರಿಗೂ ಹೇಗೋ ಕಾಣೆ,
ಆಗ ನಾವು ಮೂಡಿಗೆರೆ ಹತ್ತಿರದ ಹಳ್ಳಿಯಲ್ಲಿದ್ದೆವು. ನಮ್ಮ ತಂದೆ ಶಾಲೆಯ ಟೀಚರ್ ಹಾಗಾಗಿ ಟ್ರಾನ್ಸ್ ಫರ್ ಆದಾಗಲೆಲ್ಲ ಸುತ್ತಾಟ. ನಮ್ಮ ಪಕ್ಕದ ಮನೆಯಲ್ಲಿ ಟೈಲರ್ ಒಬ್ಬರಿದ್ದರು, ಅವರಿಗೆ ಇಬ್ಬರು ಮಕ್ಕಳು .ನಾನು ಅವರ ಮನೆಗೆ ಹೋದರೆ ನಮ್ಮ ತಂದೆಗೆ ಭಯ , ಅಲ್ಲಿ ಹೊಲಿಗೆಯ ಮಿಶಿನ್, ಕತ್ತರಿ ಎಲ್ಲ ಇರುತ್ತಿದ್ದು, ಮಕ್ಕಳು ಏನು ಮಾಡಿಕೊಳ್ಳುತ್ತಾರೋ ಎಂದು . ಒಮ್ಮೆ ನಡುಮದ್ಯಾಹ್ನ ಅವರ ಮನೆಗೆ ಹೋಗಿದ್ದೆ,
ಎಲ್ಲರೂ ಊಟಕ್ಕೆ ಕುಳಿತ್ತಿದ್ದರು.ನಾನು ನಿರಾಂತಕವಾಗಿ ಮುಂದಿನ ಅಂಗಡಿಯಲ್ಲಿದ್ದ ಹೊಲಿಗೆಯ ಮಿಶಿನ್ ಏರಿ ಕುಳಿತೆ.  ಸೂಜಿಗೆ ಸೇರಿಸಿದ್ದ ದಾರ ಕಿತ್ತು ಬಂದಿತ್ತು. ದಾರ ಸರಿಪಡಿಸಲು ಪ್ರಯತ್ನಿಸಿದೆ, ಗೊತ್ತಿಲ್ಲದೆ ಹೊಲಿಗೆಯ ಯಂತ್ರದ ಪೆಡಲ್ಲನ್ನು ಒತ್ತಿಬಿಟ್ಟನೇನೊ, ಸೂಜಿ ಸೀದಾ ನನ್ನ ಹೆಬ್ಬೆರಳ ಉಗುರನ್ನು ದಾಟುತ್ತ ಕೈಬೆರಳನ್ನು ದಾಟಿ ತೂರಿಕೊಂಡು ಒಳಗೆ ಹೊರಟು ಹೋಯಿತು. ನನ್ನ ಬೆರಳ ಒಳಗೆ ಸೂಜಿ  ಒಳ ಸೇರಿಹೋಗಿ ಅಪಾರ ನೋವು, ಒಮ್ಮೆಲೆ ಕೂಗಿಕೊಂಡೆ ಅಪ್ಪಾ ಅಪ್ಪಾ ಎಂದು "

ಜ್ಯೋತಿ ನಿಜಕ್ಕೂ ಅಪ್ಪ ಅಪ್ಪ ಎಂದು ಕೂಗುತ್ತಿದ್ದರು, ಈಗಲೂ ಅವರ ಬೆರಳಿನಲ್ಲಿ ಸೂಜಿ ತೂರಿದೆಯೇನೊಎನ್ನುವಂತೆ ಕೈ ಹಿಡಿದಿದ್ದರು, ಆಕೆಯ ಮುಖದಲ್ಲಿ ನೋವು. ಖಂಡಿತ ಈಕೆ ಎಚ್ಚರದಲ್ಲಿಲ್ಲ, ಸಂಮೋಹಿನಿಗೆ ಒಳಗಾಗಿದ್ದಾರೆ, ನಾನು ಏನು ಮಾಡದಿದ್ದರು, ಆಕೆ ಸ್ವಯಂ ಸಂಮೋಹಿನೆಗೆ ಒಳಗಾಗಿದ್ದಾರೆ.  
ಜ್ಯೋತಿ ಮುಂದುವರೆಸಿದ್ದರು,
"ನನ್ನ ಕೂಗು ಕೇಳಿ ನನ್ನ ಅಪ್ಪ ಓಡಿ ಬಂದಿದ್ದರು , ಕೈ ಬೆರಳು ಗಾಯ ವಾಸಿ ಆಗಲು ಹದಿನೈದೆ ದಿನ ಹಿಡಿಯಿತೇನೊ"

ಜ್ಯೋತಿಯ ವರ್ಣನೆ ನಿಂತಿತು, ಆಕೆ ತನ್ನ ಬಾಲ್ಯಕ್ಕೆ ಬಂದಾಯಿತು, ಇನ್ನು ಹೆಚ್ಚು ಹಿಂದೆ ಹೋಗಲು ಸಾದ್ಯವಿಲ್ಲ,  

ಹತ್ತು ನಿಮಿಶವಾಯಿತೇನೊ ಜ್ಯೋತಿ ಪುನಃ ಮಾತನಾಡಲು ಪ್ರಾರಂಭಿಸಿದರು, ಸಮಯ ನೋಡಿದೆ , ಸಂಜೆ ಆರು ಗಂಟೆ ಆಯಿತು.ಎಲ್ಲರಲ್ಲೂ ಚಡಪಡಿಕೆ
ನಾನಂತು ಬಿಟ್ಟು ಏಳುವಹಾಗಿರಲಿಲ್ಲ , ಆಕೆ ಹೇಳುತ್ತಿದ್ದಳು, 

" ಆಗ ನಾನು ತುಂಬಾ ಚಿಕ್ಕವಳು ಅನ್ನಿಸುತ್ತೆ, ಮಾತನಾಡಲು ಬರುತ್ತಿತ್ತೋ ಇಲ್ಲವೋ ತಿಳಿಯದು, ಸಂಜೆಯ ಸಮಯ ನಾನು ಮನೆಯ ಮುಂದೆ ನಿಂತಿದ್ದೆ, ನಮ್ಮ ಅಪ್ಪ ಎದುರಿಗೆ ಇದ್ದರು. ನಾನು ನಿಂತಿದ್ದಿದ್ದು ಹಸಿರುಹುಲ್ಲಿನ ನೆಲದ ಮೇಲೆ. ಎದುರಿಗೆ ಏನೊ ನೋಡುತ್ತಿದ್ದವಳು, ಕಾಲು ತಣ್ಣಗಾಯಿತು ಎಂದು ನನ್ನ ಕಾಲ ಕಡೆ ನೋಡಿದೆ , ಅದೆಂತದೋ ದೊಡ್ಡ ಹಾವು. ಉದ್ದ ಸುಮಾರು ಎಂಟು ಅಡಿಯೇ ಇತ್ತೋ ಏನೊ, ನಿಧಾನವಾಗಿ ಹರಿಯುತ್ತ ಹೋಗುತ್ತ ಇದ್ದಿದ್ದು ನನ್ನ ಪಾದಗಳ ಮೇಲೆ ಹರಿಯುತ್ತಿತ್ತು.
ಹಾವು ನನ್ನ ಪಾದಗಳ ಮೇಲೆ ಹರಿದಾಗ ಅದೇನೆಂದು ಅರಿಯದ ನಾನು ತಣ್ಣಗಾದ ಕಾರಣಕ್ಕೆ ಕುತೂಹಲದಿಂದ ನೋಡುತ್ತಿದ್ದೆ ಎದುರಿಗಿದ್ದ ಅಪ್ಪ ಅಲುಗಾಡದೆ ನಿಂತಿದ್ದರು, ಒಮ್ಮೆ ಕೂಗಿದರೆ, ನಾನು ಕದಲಿದರೆ ಹಾವಿನಿಂದ ಅಪಾಯ ಎಂದು ಅವರು ನಿರ್ಧರಿಸಿದ್ದರೋ ಏನೊ, ಹಾಗಾಗಿ ಹಾವು ನನ್ನ ಕಾಲ ಮೇಲಿನಿಂದ ಹರಿದು ದೂರ ಸಾಗುವವರೆಗೂ ನೋಡುತ್ತಲೇ ಇದ್ದವರು , ನಂತರ ತಕ್ಷಣ ನನ್ನನ್ನು ಎತ್ತಿಕೊಂಡು ಒಳಗೆ ಓಡಿಹೋಗಿದ್ದರು " ಬಾಲ್ಯವನ್ನು ನೆನೆದು ಜ್ಯೋತಿಯ ಮುಖದಲ್ಲಿ ಸಣ್ಣನಗು
ಈಗ ಕುತೂಹಲ ಜ್ಯೋತಿ ಇನ್ನೂ ಮುಂದೆ ಏನು ಹೇಳುವರೋ ನೋಡೋಣ ಎಂದು
ಹಿಂದೆ ಮತ್ತೂ ಹಿಂದೆ ಸಾದ್ಯವಿಲ್ಲವೇ ? ಆಕೆ ಗೊಣಗುತ್ತಿದ್ದರು ,

ನಾನು ಚಿಂತಿಸುತ್ತಿದ್ದೆ ನಾವೆಲ್ಲರೂ ಭೂಮಿಯ ಒಂದು ಅಂಶವೇ ಹಾಗಾಗಿ ಭೂಮಿಯ ಉಗಮದ ಜೊತೆಯೆ ನಮ್ಮ ಉಗಮವೂ ಆಗಿರಬೇಕಲ್ಲವೆ ಆದರೆ ಮನುಷ್ಯನ ಮೆದುಳಿಗೆ ತನ್ನದೆ ಆದ ಲಿಮಿಟೇಶನ್ ಇದೆ, ದೇಹದ ಹಿಡಿತದಲ್ಲಿರುವ ಅದು ದೇಹಕ್ಕಿಂತ ಹಿಂದೆ ಹೋಗಲಾರದೇನೊ, 
ನಮ್ಮ ಮೆದುಳಿನ ನ್ಯೂರಾನ್ ಗಳು ಸಹ ನಮ್ಮದೇ ದೇಹದ ಜೀವಾಣುಗಳಿಂದ ಆಗಿರುವುದು, ಹೃದಯವಾಗಲಿ, ಮೆದುಳಾಗಲಿ, ಉಳಿದ ಯಾವುದೇ ಬಾಗವಾಗಲಿ ಎಲ್ಲದಕ್ಕು ಮೂಲ ಕಣಗಳು ಒಂದೇನೆ ಎಂದು ಹೇಳುವರು. ಅಂತಹ ಜೀವಕಣಗಳು ನಮ್ಮಲ್ಲಿ ಹರಿದುಬರುತ್ತಿರುವುವು.
  ನಮ್ಮ ದೇಹದ ಜೀನ್ಸ್ಗಳು ಸಹ ನಮ್ಮ ತಂದೆ ತಾಯಿಯ ವಂಶಪಾರಂಪರ್ಯವಾಗಿ ವಂಶದಲ್ಲಿ ಹರಿದು ಬಂದಿರುವುದೆ ಅನ್ನುವರಲ್ಲ, ಹಾಗಾಗಿ ನೆನಪಿನ ಕೋಶಗಳಲ್ಲಿ ಅದೇಕೆ ಹಿಂದಿನ ನೆನಪು ಹರಿದು ಬಂದಿರಲಾರದು?. ಇರುವದೇನೊ ಅದನ್ನು ಪ್ರಚೋದನೆಗೊಳಿಸುವ ಶಕ್ತಿ ನಮ್ಮಲಿಲ್ಲವೇನೊ, ಅಥವ ತೀರ ರಹಸ್ಯವಾಗಿ ನಮ್ಮ ಮೆದುಳಿನ ಯಾವುದೋ ಮೂಲೆಯಲ್ಲಿ ಕುಳಿತಿರುವ ನೆನಪುಗಳನ್ನು ಕೆದಕಲು ಯಾವುದಾದರು ರಹಸ್ಯ ದಾರಿ  ಇರಬಹುದು.  ಎಂದೆಲ್ಲ ಯೋಚಿಸುತ್ತಿದ್ದೆ. ಅಲ್ಲದೇ ಜ್ಯೋತಿಯ ಸ್ಥಿತಿಯ ಆತಂಕದ ಕಾರಣದಿಂದಾಗಿ, ಈ ವಿಷಯ ಹೆಚ್ಚು ಯೋಚಿಸುವುದು ಕಷ್ಟವೆನಿಸುತ್ತಿತ್ತು. ಜ್ಯೋತಿಯ ಮುಖದಲ್ಲಿ ಎಂತದೋ ವಿಲಕ್ಷಣ ಭಾವವಿತ್ತು. ಅದು ನೋವೋ ಸಂತಸವೋ ತಿಳಿಯಲಾರದ ಭಾವ. ಏನನ್ನೊ ನೆನೆಯಲು ಪ್ರಯತ್ನಪಡುತ್ತಿದ್ದಾಳೆ 
"  got it got it ….. ….. ಸಾದ್ಯ ಅದು ಸಾದ್ಯ…. " ಜ್ಯೋತಿಯ ಉದ್ಗಾರ ..
ಅಷ್ಟಕ್ಕೂ ಈಕೆ ಏನನ್ನು ನೆನಪಿಸಿಕೊಳ್ಳುತ್ತಿರುವುದು ನನಗೆ ಅರ್ಥವಾಗುತ್ತಿಲ್ಲ.


ಮುಂದುವರೆಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x