ಮಂಗಳನ ಅಂಗಳದಲ್ಲಿ! (ಭಾಗ 1): ಎಸ್.ಜಿ.ಶಿವಶಂಕರ್

Shivashankar SG

ಇಡೀ ಮನೆ ಅಲುಗಾಡಿದಂತ ಅನುಭವವಾಯಿತು ಸೃಜನನಿಗೆ. ಇದೊಂದು ಹೊಸ ಅನುಭವ. ಹಿಂದೆಂದೂ ಹೀಗಾಗಿರಲಿಲ್ಲ! ಭೂಕಂಪನವಾಗುತ್ತಿದೆ ಎನಿಸುವಂತ ಅನುಭವ! ಕೆಲವು ನಿಮಿಷಗಳ ನಂತರ ಆ ಕಂಪನ ನಿಂತಿಂತೆ ಅನಿಸಿತು. ಎಲ್ಲ ಸ್ಥಬ್ದವಾಯಿತು; ನೆಮ್ಮದಿ! ಸ್ವಲ್ಪ ಎಚ್ಚರವಾಗಿತ್ತು-ಅಲುಗಾಟಕ್ಕೆ. ಸ್ಥಬ್ದವಾದನಂತರ ಮತ್ತೆ ಜೋಂಪು. ಮತ್ತೆ ಅಲುಗಾಟ, ಕುಲುಕಾಟ! ಮನೆಯೇ ಅತ್ತಿತ್ತ ವಾಲಿದಂತೆ, ಮತ್ತೆ ಅದೇ ಸಾವರಿಸಿಕೊಂಡು ನೆಟ್ಟಗೆ ನಿಂತಂತೆ! ಛೆ..ಇದೆಂತಾದ್ದು..? ನಿಜಕ್ಕೂ ಏನಾಗುತ್ತಿದೆ..? ಈ ಸಾರಿ ಬಹಳ ಹೊತ್ತು ಸ್ಥಬ್ದತೆ ಇದ್ದಂತೆ ಭಾವನೆ. ಈ ಕಂಪನ, ಸ್ಥಬ್ದತೆಗಳ ನಡುವೆ ಎಂತದೋ ಕಿರಿಕಿರಿ! ಇನ್ನು ನಿದ್ರೆ ಸಾಧ್ಯವಿಲ್ಲವೆನಿಸಿತು.

ಸೃಜನನಿಗೆ ಈಗ ಪೂರಾ ಎಚ್ಚರವಾಯಿತು. ಆದರೂ ಕಣ್ಣು ತೆರೆಯುವ ಮನಸ್ಸಾಗಲಿಲ್ಲ. ಇನ್ನಷ್ಟು ಹೊತ್ತು ಮಲಗಿರಬೇಕೆನ್ನಿಸಿತು. ಬಹಳ ಕಾಲದಿಂದ ಮಲಗಿರುವೆ ಎನ್ನಿಸಿತು. ಎಷ್ಟು ಕಾಲ ನೆನಪೇ ಇಲ್ಲ. ಸುಧೀರ್ಘ, ಗಾಢ ನಿದ್ರೆಯಲ್ಲಿದ್ದೆ ಎಂಬ ಭಾವ. ಒಮ್ಮೆ ಅಚ್ಚರಿ ಕೂಡ! ಯಾವಾಗ ಮಲಗಿದೆ ಎಂಬ ನೆನಪೇ ಇಲ್ಲದ ನಿದ್ರೆ! ಬಹಶಃ ಕೆಲವು ದಿನಗಳಿಂದ ಮಲಗಿರುವೆ ಎನಿಸಿತು. ಮೈ ತುಂಬಾ ಭಾರವೆನಿಸಿತು. ಕೊರಡಿನಂತೆ ಬಿದ್ದಿರುವೆ ಎಂಬ ಭಾವನೆ. ಕೆಲವು ನಿಮಿಷಗಳು ತನ್ನ ಮನಸ್ಸನಲ್ಲಾಗುತ್ತಿರುವ ಯೋಚನೆಗಳನ್ನು ವೀಕ್ಷಿಸಿದ ಸೃಜನ. ಒಮ್ಮೆಲೇ ಚಳಿಯೆನಿಸಿತು. ರಾತ್ರಿ ಮಲಗುವ ಸಮಯದಲ್ಲಿ ಕಿಟಿಕಿಯನ್ನು ಮುಚ್ಚಿ ಮಲಗುತ್ತಿದ್ದ ನನಪು.  ಬಹುಶಃ ಕಿಟಿಕಿ ಹಾಕುವುದು ಮರೆತುಬಿಟ್ಟಿರಬೇಕು. ಎದ್ದು ಕಿಟಿಕಿ ಮುಚ್ಚಬೇಕು ಇಲ್ಲದಿದ್ದರೆ ಚಳಿಯನ್ನು ತಡೆದುಕ್ಕೊಳ್ಳಬೇಕು. ಮನಸ್ಸಿನ ಆಜ್ಞೆಗಾಗಿ ಕಾಯಿತು ಸೃಜನನ ದೇಹ.
ಕೊನೆಗೊಮ್ಮೆ ಎದ್ದೇಬಿಡಬೇಕೆನ್ನುವ ಮನಸ್ಸು ಮಾಡಿದ ಸೃಜನ. ಮೊಣಕೈಗಳ ಮೇಲೆ ಭಾರ ಬಿಟ್ಟು ಎದ್ದು ನಿಧಾನಕ್ಕೆ ಕಣ್ಣು ತೆರೆದ. ಅಚ್ಚರಿ ಕಾದಿತ್ತು!!

ಅದು ಅವನ ಮನೆಯಾಗಿರಲಿಲ್ಲ! ಅದೊಂದು ಕ್ಯಾಬಿನ್ನಿನಂತೆ ಇತ್ತು. ಅಲ್ಲಿ ಮಂದವಾದ ಬೆಳಕು ಹರಡಿತ್ತು. ಯಾವುದೋ ಯಂತ್ರ ಚಾಲನೆಯಲ್ಲಿರುವಂತೆ ಶಬ್ದ ಬರುತ್ತಿತ್ತು. ಐದಾರು ಹೆಜ್ಜೆ ದೂರದಲ್ಲೇ ಸಣ್ಣದೊಂದು ಮಂಚದಲ್ಲಿ ಇನ್ನೊಂದು ವ್ಯಕ್ತಿ ಮಲಗಿತ್ತು!! ಅದು..ಅದು ಹೆಂಗಸು! ದೇಹದ ಆಕಾರ ಅದು ಹೆಂಗಸು ಎಂದು ಸ್ಪಷ್ಟಪಡಿಸಿತು. ಆಕೆ ಯಾರು..? ಅಮ್ಮನೆ..? ಅಕ್ಕನೆ..? ಯಾರು..? ತಾನೆಲ್ಲಿರುವೆ..? ಏನದು ಯಂತ್ರದ ಶಬ್ದ? ಪರೀಕ್ಷೆ ಮಾಡುವಂತೆ ಸೃಜನ ಕತ್ತು ಹೊರಳಿದಷ್ಟು ನೋಡಿದ. ಹೆಚ್ಚೆಂದರೆ ಇಪ್ಪತ್ತೈದು ಆಡಿ ಸುತ್ತಳತೆಯ ಕ್ಯಾಬಿನ್ನು ಅದು. ಎತ್ತರ ತುಸು ಕಮ್ಮಿ. ಬಹುಶಃ ಏಳು ಅಡಿ ಇದ್ದರೆ ಹೆಚ್ಚು! ಅದರ ಛಾವಣಿಯಲ್ಲಿನ ಬಲ್ಬುಗಳಿಂದ  ಮಂದ ಬೆಳಕು ಸೂಸುತ್ತಿತ್ತು. ಮಂದ ಬೆಳಕಿನಲ್ಲಿ ಕ್ಯಾಬಿನ್ನಿನಲ್ಲಿರುವ ವಸ್ತುಗಳು ಅಸ್ಪಷ್ಟವಾಗಿದ್ದವು. ಆದರೂ ಅವುಗಳ ಗುರುತು ಹಿಡಿಯಲು ಸಾಧ್ಯವಾಗಿತ್ತು. ಒಮ್ಮೆಲೇ ತನ್ನ ಎಡಗೈಯ ಹಸ್ತದ ಮೇಲು ಭಾಗದಲ್ಲಿ ಏನೋ ಇದೆ ಎನಿಸಿತು. ನೋಡಿದರೆ ಅದೊಂದು ಟ್ಯೂಬ್. ಅದು ಕ್ಯಾಬಿನ್ನಿನ ಹೊರಗಿನಿಂದ ಬಂದು ಸೂಜಿಯ ಮೂಲಕ ಅವನ ದೇಹದೊಳಗೆ ಸೇರಿತ್ತು!!

ಅಂದರೆ ಇದು ಆಸ್ಪತ್ರೆಯೆ..? ತನಗೇನಾಗಿದೆ..? ಖಾಯಿಲೆಯೆ..? ಅಪ್ಪ-ಅಮ್ಮ ಎಲ್ಲಿ..? ಕಾಯಿಲೆಯಾಗಿದ್ದರೆ ಒಬ್ಬರಾದರೂ ತನ್ನ ಜೊತೆ ಇರುತ್ತಿರಲಿಲ್ಲವೆ..? ಬಲಗೈ ಅಪ್ರಯತ್ನವಾಗಿ ಕಣ್ಣನ್ನು ಉಜ್ಜಿಕ್ಕೊಳ್ಳಲು ಮುಂದಾದಾಗÀ ಮತ್ತೊಂದು ಅಚ್ಚರಿ ಅವನಿಗೆ! ಗಲ್ಲದಲ್ಲಿ ಕೂದಲು ಚುಚ್ಚಿತು!! ಸ್ವಲ್ಪ ಪಕ್ಕಕ್ಕೆ ಕೈಯಾಡಿಸಿದರೆ ಕೆನ್ನೆ ಮತ್ತು ಮೂಗಿನ ಕೆಳಗೂ ಕೂದಲು! ಮೀಸೆ ದಾಡಿಯೆ..? ತನಗೆ..? ಬಹಳ ತಿಂಗಳುಗಳಿಂದ ಷೇವ್ ಮಾಡಿಲ್ಲzದ್ದರಷ್ಟೆ ಅಷ್ಟು ಬೆಳಯುವುದು. ಪ್ರತಿ ದಿನವೂ ಷೇವ್ ಮಾಡುತ್ತಿದ್ದೆನಲ್ಲ..? ಈ ಪ್ರಮಾಣದ ಮೀಸೆ ದಾಡಿಯೆ..? ಏನಿದು ವಿಚಿತ್ರ…?
"ಅಮ್ಮಾ..?" ಸೃಜನ ಕೂಗಿದ.
ಆ ಕೂಗಿಗೆ ಪಕ್ಕದ ಮಂಚದಲ್ಲಿದ್ದ ಹೆಂಗಸು ಸ್ವಲ್ಪ ಅಲುಗಿದಂತೆ ಕಂಡಿತು. ಆದರೆ ಅವನ ಕೂಗಿಗೆ ಉತ್ತರ ಬರಲಿಲ್ಲ! ಗಾಬರಿಯಾಯಿತು! ಇನ್ನೂ ಜೋರಾಗಿ ಕೂಗಿದ. ಪಕ್ಕದಲ್ಲಿದ್ದ ಹೆಂಗಸು ಹೊರಳಾಡಿ ಏಳುವಂತೆ ಕಂಡಳು. ಆಕೆಯ ಕೈಯಲ್ಲೂ ನಳಿಕೆ! ಅಂದರೆ ಆಕೆಯೂ ಪೇಷಂಟೆ..? 
ಸೃಜನನಿಗೆ ಭಯವಾಯಿತು! ಏನೋ ಹೆಚ್ಚು ಕಮ್ಮಿಯಾಗಿದೆ ಎನ್ನುವುದು ಗ್ಯಾರಂಟಿಯಾಗಿತ್ತು. ಏನು ಎಂಬ ಸ್ಪಷ್ಟ ಅರಿವು ಇರಲಿಲ್ಲ. ಇನ್ನೂ ಜೋರಾಗಿ ತಾಯಿಯನ್ನು ಕೂಗಿದ. ಅವನ ಕೂಗು ಮೊದಲಿಗಿಂತ ಜೋರಾಗಿರಲಿಲ್ಲ. ಗಂಟಲು ಒಣಗುತ್ತಿತ್ತು! ಭಯ ಅವನ ದನಿಯಲ್ಲಿತ್ತು.

ಸೃಜನನ ಕರೆಗೆ ಸ್ಪಂದಿಸಿದ ಪಕ್ಕದಲ್ಲಿದ್ದ ಹೆಂಗಸು ನಿಧಾನಕ್ಕೆ ಕಣ್ಣು ಬಿಟ್ಟು ಎದ್ದು ಸೃಜನನ್ನು ನೋಡಿದಳು. ಆಕೆಯ ತಲೆಕೂದಲು ಅಸ್ಥವ್ಯಸ್ಥವಾಗಿತ್ತು. ನೋಡಲು ಭಯವಾಗುವಂತಿದ್ದಳು! ಸೃಜನನ್ನು ಕಂಡು ಆಕೆ ಚಿಟ್ಟನೆ ಚೀರಿದಳು! ಅವಳ ಕಣ್ಣಿಗೆ ಸೃಜನ ಹುಚ್ಚನಂತೆ ಕಂಡಿದ್ದ!! ಅವಳನ್ನು ನೋಡಿ ಸೃಜನ ಚೀರಿದ. ಅವಳು ಹುಚ್ಚಿಯಂತೆ ಅವನಿಗೆ ಕಂಡಳು! ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಚೀರಿದರು! ಅವರ ಚೀರಾಟ ಆ ಕ್ಯಾಬಿನ್ನಿನಲ್ಲಿ ಅನೇಕ ಸಲ ಪ್ರತಿಧ್ವನಿಸಿತು!! ಅದರಿಂದ ಆಕೆ ಇನ್ನಷ್ಟು ಹೆದರಿದಳು.
ಆಕೆ ಚೀರಿದ್ದರಿಂದ ಆಕೆ ಹೆದರಿದ್ದಾಳೆ ಎಂದು ಸೃಜನನಿಗೆ ಗೊತ್ತಾಯಿತು. ಸೃಜನ ಭಯ ಅವಳಿಗೂ ಅರ್ಥವಾದಂತಿತ್ತು.
"ಯಾರು ನೀನು..?"
ಭಯವನ್ನು ಹತ್ತಿಕ್ಕಿಕ್ಕೊಳ್ಳುತ್ತಾ ಕೇಳಿದ ಸೃಜನ.
"ನಾನು ರುಚಿಕಾ..ನೀನು…?"
"ರುಚಿಕಾ..?" ಆ ಹೆಸರು ಅವನಿಗೆ ಚಿರಪರಿಚಿತ. ಆದರೆ ಆ ಆಕೃತಿಗೂ ಆ ಹೆಸರಿಗೂ ಹೊಂದಾಣಿಕೆಯೇ ಇರಲಿಲ್ಲ. ಸೃಜನ ಅನುಮಾನಿಸಿದ.
"ನೀನು.."
"ಸೃಜನ್"
"ಸಾಧ್ಯವಿಲ್ಲ..ನೀನು ಸೃಜನ್ ಆಗೋಕೆ ಸಾಧ್ಯವೇ ಇಲ್ಲ! ಅವನ ಯಾವ ಗುರುತು ನಿನ್ನಲ್ಲಿ ಇಲ್ಲ. ಸೃಜನ್ ಎಲ್ಲಿ? ಅಸಹ್ಯವಾಗಿರುವ ನೀನೆಲ್ಲಿ.?"
"ನೀನೂ ರುಚಿಕಾ ಆಗಿರುವುದು ಸಾಧ್ಯವಿಲ್ಲ! ಲಕ್ಷಣವಾಗಿರುವ ರುಚಿಕಾ ಎಲ್ಲಿ ಹೀಗೆ ಹುಚ್ಚಿಯಂತಿರುವ ನೀನೆಲ್ಲಿ..?"
ಮಾತಾಡುತ್ತಲೇ ಅವರಿಬ್ಬರಿಗೂ ಏನೋ ವಿಚಿತ್ರವಾದ ಘಟನೆ ನಡೆದಿದೆ ಎನ್ನುವುದು ಅರಿವಾಗಿತ್ತು. 
 "ಸೃಜನ್" ತಂದೆಯ ಧ್ವನಿ ಕೇಳಿ ಪುಳಕಗೊಂಡ ಸೃಜನ.
"ರುಚಿಕಾ.." ರುಚಿಕಾ ಕೂಡ ತನ್ನ ತಂದೆಯ ಧ್ವನಿಗೆ ಪುಳಕಗೊಂಡಳು.
"ಅಪ್ಪಾ..? ನೀವೆಲ್ಲಿದ್ದೀರಿ..ನನಗೇನಾಗಿದೆ..?" ಸೃಜನ್ ಕೇಳಿದ. 
ತಾವು ಕೇಳಿದ್ದು ಬರಿಯ ಧ್ವನಿಯಷ್ಟೆ, ಅದು ಸ್ಪೀಕರಿನ ಮುಖಾಂತರ ಬಂದಿದೆ ಎನ್ನುವುದು ಅವರಿಗೆ ಬಲುಬೇಗನೆ ಗೊತ್ತಾಯಿತು.

"ಸೃಜನ್ ಮತ್ತು ರುಚಿಕಾ ನಮ್ಮ ಮಾತನ್ನು ಎಚ್ಚರಿಕೆಯಿಂದ ಕೇಳಿಸಿಕ್ಕೊಳ್ಳಿ. ಬೇಕಾದರೆ ಈ ಮಾತನ್ನು ಮತ್ತೆ ರೀಪ್ಲೇ ಮಾಡಿಕ್ಕೊಳ್ಳಬಹುದು. ಅದು ಆಮೇಲಿನದು. ಈಗ ಗಮನವಿಟ್ಟು ನಮ್ಮ ಮಾತನ್ನು ಕೇಳಿ. ನೀವು ಇರುವುದು ಒಂದು ಅಂತರಗ್ರಹ ನೌಕೆಯಲ್ಲಿ. ನಮ್ಮ ಲೆಕ್ಕಾಚಾರ ಕರಾರುವಾಕ್ಕಾಗಿದ್ದರೆ ನೀವೀಗ ಮಂಗಳ ಗ್ರಹದಲ್ಲಿ ಲ್ಯಾಂಡ್ ಆಗಿದ್ದೀರಿ. ಹೆದರಬೇಡಿ, ನೀವಿಬ್ಬರೂ ಸುರಕ್ಷಿತರಾಗಿದ್ದೀರಿ. ಹೆದರಿಕೆಗೆ ಕಾರಣವಿಲ್ಲ. 

ಇಂದಿಗೆ ಸರಿಯಾಗಿ ಮುನ್ನೂರು ದಿನಗಳಿಂದ ನೀವು ಈ ಸ್ಪೇಸ್ ಷಟಲ್‍ನಲ್ಲಿದ್ದೀರಿ. ನಿಮ್ಮ ಈ ಸ್ಥಿತಿಗೆ ಕಾರಣವನ್ನು ತಿಳಿಯಲು ನೀವು ಕುತೂಹಲದಿಂದ ಇದ್ದೀರಿ ಅದೊಂದು ದೊಡ್ಡ ಕತೆ, ಕೇಳಲು ಸಿದ್ಧರಾಗಿ.
ನೀವೀಗ ಒಂದು ಸುಸಜ್ಜಿತ, ಅತ್ಯಂತ ಮುಂದುವರಿದ ತಂತ್ರಜ್ಞಾನ ಅಳವಡಿಸಿದ ಅಂತರಗ್ರಹ ನೌಕೆಯಲ್ಲಿದ್ದೀರಿ. ಇದೊಂದು ಸ್ವಯಂಚಾಲಿತ ನೌಕೆ. ಇದನ್ನು ಉಡಾವಣೆ ಮಾಡುವ ಮುನ್ನ ಇದರ ಪ್ರಯಾಣದ ಹಾದಿಯನ್ನು ಪೆÇ್ರೀಗ್ರಾಮ್ ಮಾಡಲಾಗಿದೆ. ಈಗ ಆ ಪ್ರೊಗ್ರಾಮ್ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಕೆಲವು ಕಾಲದ ನಂತರ ನೀವು ಈ ನೌಕೆಯಿಂದ ಈಚೆ ಬರಬಹುದು. ಹೊರಗಿನ ವಾತಾವರಣ ಜೀವಿಸಲು ಅನುಕೂಲವಾಗಿದ್ದರೆ ನಿಮ್ಮ ಪ್ರಯಾಣವನ್ನು ಇಲ್ಲಿಗೇ ಕೊನೆ ಮಾಡಬಹುದು. ಬೇರೆ ವಾಸದ ವ್ಯವಸ್ಥೆಯಾಗುವವರೆಗೂ ಈ ನೌಕೆಯನ್ನೇ ನಿಮ್ಮ ವಾಸಕ್ಕೆ ಉಪಯೋಗಿಸಬಹುದು. ಎಷ್ಟು ಕಾಲ ಬೇಕಾದರೂ ಇದನ್ನು ಮನೆಯಾಗಿ ಇಟ್ಟುಕ್ಕೊಳ್ಳಬಹುದು. ಈ ಗ್ರಹ ಸರಿಯಿಲ್ಲವಾದರೆ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು. ಅದು ನಿಮ್ಮ ಜ್ಞಾನ, ಸಾಹಸ ಪ್ರವೃತ್ತಿ ಇವುಗಳನ್ನು ಅವಲಂಬಿಸಿದೆ. ಇದರ ಚಾಲನೆಯನ್ನು ನಿಮ್ಮ ಪಕ್ಕದಲ್ಲಿರುವ ರೂಮಿನಲ್ಲಿರುವ ಸೂಪರ್ ಕಂಪ್ಯೂಟರ್ ಕಲಿಸುತ್ತದೆ. ಭೂಮಿಯನ್ನು ಸಂಪರ್ಕಿಸುವ ವ್ಯವಸ್ಥೆ ಕೂಡ ಅದಕ್ಕೇ ಅಳವಡಿಸಲಾಗಿದೆ. ಆದರೆ ಈ ಸಮಯದಲ್ಲಿ ಭೂಮಿಯಲ್ಲಿ ಮನುಷ್ಯರು ಉಳಿದಿರುತ್ತಾರೆ ಎನ್ನುವುದು ಅನುಮಾನವೇ.

ಇದಕ್ಕೆ ಕಮ್ಯಾಂಡರ್ ಇಲ್ಲ. ಮುಂದೆ ಇದರ ಕಮ್ಯಾಂಡರ್ ನೀವಿಬ್ಬರೂ ಅಗÀಬಹುದು.. ಇದನ್ನು ನಾವು ಬದುಕಿದ್ದಷ್ಟು ದಿವಸ ಮಾನಿಟರ್ ಮಾಡುತ್ತೇವೆ. ನಂತರ ಎಲ್ಲವೂ ಪ್ರಕೃತಿ ಮತ್ತು ನಾವೆಲ್ಲಾ ನಂಬಿರುವ ಭಗವಂತನ ಕೃಪೆಗೆ ಬಿಟ್ಟಿದ್ದು. ಈ ಮಾತುಗಳಿಂದ ನಿಮ್ಮ ಕುತೂಹಲ ಇನ್ನಷ್ಟು ಹೆಚ್ಚಾಗಿರುತ್ತದೆ ಜೊತೆಗೇ ನಮ್ಮ ಬಗೆಗೆ ಚಿಂತೆಯೂ ಶುರುವಾಗುತ್ತದೆ. 

ಎಲ್ಲಿಂದ ಪ್ರಾರಂಭಿಸುವುದು ಎಂಬ ಗೊಂದಲ ನನಗಾಗುತ್ತಿದೆ. ಮುನ್ನೂರು ದಿನಗಳ ಹಿಂದಿನಿಂದ ಪ್ರಾರಂಭಿಸುತ್ತೇನೆ.  ಸೃಜನ್ ನಿನಗೆ ನೆನಪಿರುವುದು ಒಂದು ವರ್ಷದ ಹಿಂದಿನದು. ಅಲ್ಲಿಂದ ಅನಾಮತ್ತಾಗಿ ನೀನು ಮುನ್ನೂರು ದಿನಗಳನ್ನು ಕಳೆದಿದ್ದೀಯ. ಮುಖದ ತುಂಬಾ ಗಡ್ಡ ಮೀಸೆ ಬೆಳೆದಿರುತ್ತದೆ. ಹಿಂದಿನ ಮುನ್ನೂರು ದಿನಗಳ ನೆನಪು ನಿನಗಿಲ್ಲ. ಹಾಗೆಯೇ ರುಚಿಕಾಗೆ ಕೂಡ! ಯಾಕೆ ಹೀಗಾಯಿತು..?
ಬಹಳ ದುಃಖಕರವಾದ ವಿಷಯ ನಿಮಗೆ ಹೇಳಬೇಕಾಗಿದೆ. ಬಹುಶಃ ಈ ಸಮಯಕ್ಕೆ ಭೂಮಿಯ ಮೇಲೆ ಯಾವುದೇ ಜೀವಿ ಇರುವುದಿಲ್ಲ. ಕಾರಣ..ಭೂಮಿಯ ಸರ್ವನಾಶವಾಗಿರುವ ಸಾಧ್ಯತೆಗಳೇ ಹೆಚ್ಚಿವೆ. ಅಕಸ್ಮಾತ್ ನಾವು ಉಳಿದಿದ್ದರೆ ನೀವು ನಮ್ಮನ್ನು ಸಂಪರ್ಕಿಸಲು ಸಾಧನಗಳಿವೆ ಅವನ್ನು ಉಪಯೋಗಿಸಬಹುದು. ಈಗ ರುಚಿಕಾ ತಂದೆ ಭೂಷಣ್ ಮಾತಾಡುತ್ತಾರೆ"
  ಸೃಜನ್ ಮತ್ತು ರುಚಿಕಾ ಪರಸ್ಪರ ಮುಖ ನೋಡಿಕೊಂಡರು. ಅಲ್ಲಿ ದುಃಖಕ್ಕಿಂತ ಭಯವೇ ಕಾಣುತ್ತಿತ್ತು. ಅಂದರೆ..ತಾವು ಭೂಮಿಯಿಂದ ಕೋಟ್ಯಾಂತರ ಮೈಲುಗಳಾಚೆ ಬಂದುಬಿಟ್ಟಿದ್ದೇವೆ.
"ರುಚಿಕಾ, ಇದು ನನ್ನ ಕೊನೆಯ ಮಾತು ಎನಿಸುತ್ತದೆ". ರುಚಿಕಾ ತನ್ನ ತಂದೆಯ ಮಾತಿಗೆ ಬಿಕ್ಕಳಿಸಿದಳು. "ಅಳಬೇಡ ಮಗಳೆ, ನಿಮ್ಮ ಒಳಿತಿಗಾಗಿ ನಾವು ಈ ಕೆಲಸ ಮಾಡಿದ್ದೇವೆ. ನಾನು ಮತ್ತು ಸೃಜನ್ ತಂದೆ ವರ್ಮಾ ನಿಮಗಾಗಿ ಈ ಯೋಜನೆ ಮಾಡಿದೆವು. ಭೂಮಿಯನ್ನು ಉಳಿಸುವುದಂತೂ ನಮ್ಮಿಂದ ಸಾಧ್ಯವಿಲ್ಲ. ಕೊನೆಯ ಪಕ್ಷ ನಮ್ಮ ಕರುಳ ಬಳ್ಳಿಗಳಾದರೂ ಉಳಿಯಲಿ ಎಂದು ಈ ಯೋಜನೆ. ಇದಕ್ಕಾಗಿ ಸತತವಾಗಿ ನಾವು ಐದು ವರ್ಷ ಕೆಲಸ ಮಾಡಿದ್ದೇವೆ-ಅದೂ ಗುಪ್ತವಾಗಿ. ನಮ್ಮ ಗಳಿಕೆಯ ಕೊನೆಯ ರೂಪಾಯಿಯನ್ನೂ ಇದಕ್ಕಾಗಿ ವಿನಿಯೋಗಿಸಿದ್ದೇವೆ! 

ನೀವು ತುಂಬಾ ಸಂವೇದನಾಶೀಲರಿದ್ದೀರಿ. ಇದನ್ನೆಲ್ಲಾ ಆಗ ಹೇಳಿದ್ದರೆ ನಿಮಗೆ ಅರ್ಥವಾಗುತ್ತಿರಲಿಲ್ಲ. ಅರ್ಥವಾಗಿದ್ದರೂ ಈ ರೀತಿಯ ಪ್ರಯಾಣ ನಿಮಗೆ ದಿಗಿಲು ಹುಟ್ಟಿಸಿ, ಹಾದಿಯಲ್ಲಿ ಏನಾದರೂ ಅನಾಹುತ ಮಾಡಿಕ್ಕೊಳ್ಳಬಹುದು ಎಂಬ ಅನುಮಾನದಿಂದ, ನಿಮ್ಮಿಬ್ಬರಿಗೂ ಧೀರ್ಘಕಾಲ ನಿದ್ರಿಸುವಂತ ರಾಸಾಯನಿಕಗಳನ್ನು ನಿಮ್ಮ ದೇಹಕ್ಕೆ ಉಣಿಸಿ ಇಲ್ಲಿಯವರೆಗೂ ನಿಮಗೆ ಎಚ್ಚರವಿಲ್ಲದಂತೆ ಮಾಡಿದ್ದೆವು. ಇದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಾಗಲೀ ನಿಲ್ಲದಂತಿರಲು ವಿಶೇಷ ಕಂಪ್ಯೂಟರ್ ಮತ್ತು ರೋಬೋಗಳನ್ನು ರೂಪಿಸಿ ಅವುಗಳ ಮುಖಾಂತರ ನಿಮಗೆ ಯಾವುದೇ ರೀತಿಯ ತೊಂದರೆಯಾಗಲೀ ಕೊರತೆಯಾಗಲೀ ಆಗದಂತೆ ಮಾಡಿದ್ದೇವೆ. ಒಮ್ಮೆ ನಮ್ಮ ಮಾತು ಮುಗಿದ ನಂತರ ನೀವು ಪಕ್ಕದ ಚೇಂಬರಿಗೆ ಹೋಗಿ ಅಲ್ಲಿನ ವ್ಯವಸ್ಥೆಗಳನ್ನು ಅಧ್ಯಯನ ಮಾಡಬಹುದು. ತಲೆಯಲ್ಲಿರುವ ನಿಮ್ಮ ಸೆನ್ಸಾರುಗಳನ್ನು ನೀವೀಗ ತೆಗೆಯಬಹುದು. ಅದರಿಂದ ನಿಮ್ಮ ಮಿದುಳಿಗೆ ಬೇಕಾದ ಮಾಹಿತಿಯನ್ನು ಸಿಮುಲೇಟ್ ಮಾಡಿ ಫೀಡ್ ಮಾಡುತ್ತಿದ್ದೆವು. ಇನ್ನು ನಿಮಗೆ ಅದರ ಅವಶ್ಯಕತೆಯಿರುವುದಿಲ್ಲ. 

ಸತತವಾಗಿ ಐದು ವರ್ಷಗಳಿಂದ ನಾನು ಮತ್ತು ಸೃಜನನ ತಂದೆ ವರ್ಮಾ ನಿಮ್ಮಿಬ್ಬರನ್ನು ಉಳಿಸಲು ಶ್ರಮಿಸಿದ್ದೇವೆ. ನಿಮ್ಮ ದೈಹಿಕ ಬೆಳವಣಿಗೆ, ಮಾನಸಿಕ ಬೆಳವಣಿಗೆಗಳಲ್ಲಿ ಯಾವುದೇ ಕೊರತೆಯಾಗದಂತೆ ನಿಮ್ಮ ದೇಹಗಳಿಗೆ ಅಗತ್ಯವಾದ ಜೀವ ಪೋಷಕಗಳನ್ನು ನಿಯಮಿತವಾಗಿ ನಿಮ್ಮ ದೇಹದೊಳಕ್ಕೆ ಇಂಜೆಕ್ಟ್ ಮಾಡುತ್ತಿರುವ ರೋಬೋ ಮತ್ತು ಕಂಪ್ಯೂಟರನ್ನು ಪಕ್ಕದ ಚೇಂಬರಿನಲ್ಲಿ ನೀವು ಕಾಣಬಹುದು. 

ಭೂಮಿಯ ಮೇಲೆ ಈ ಸಮಯಕ್ಕೆ ಜೀವರಾಶಿ ಉಳಿದಿರುವ ಸಾಧ್ಯತೆಗಳು ತೀರಾ ಕಮ್ಮಿ. ಧರ್ಮಾಂದತೆ ಮತ್ತು ವಾತಾವರಣ ಕಲುಷಿತಗಳ ಪರಿಣಾಮ ಜೀವರಾಶಿಗೆ ಅಪಾಯವುಂಟಾಗಿದೆ. ಒಂದು ಕಡೆ ಧರ್ಮದ ಹೆಸರಿನಲ್ಲಿ ಯುದ್ಧ ನಡೆಯುತ್ತಿದೆ. ಪ್ರಬಲ ಧರ್ಮಗಳು ಒಟ್ಟಾಗಿ ಗುಂಪುಗಳಾಗಿವೆ. ಇನ್ನಿಲ್ಲದಂತ ವಿನಾಶಕಾರೀ ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಭಯೋತ್ಪಾದನೆ ಅವ್ಯಹತವಾಗಿ ನಡೆದಿದೆ. ಯಾವ ಕ್ಷಣದಲ್ಲಾದರೂ ಭುಗಿಲೆದ್ದಿರುವ ದ್ವೇಶ ಜೀವರಾಶಿಯ ನಾಶಕ್ಕೆ ಕಾರಣವಾಗುತ್ತದೆ. ಭೂಮಿಯಲ್ಲಿ ಇನ್ನು ಭವಿಷ್ಯವಿಲ್ಲ. ಅಕಸ್ಮಾತ್ ಯುದ್ಧ ನಿಂತರೂ ಅದರ ದುಷ್ಪರಿಣಾಮದಿಂದ ಜೀವರಾಶಿಗೆ ಅಪಾರವಾದ ಹಾನಿಯಾಗುವುದು. ಬದುಕಲು ಸಾಧ್ಯವಿಲ್ಲದಂತ ವಾತಾವರಣ ಸೃಷ್ಟಿಯಾಗಿ ವಿಕೃತ ಜೀವಿಗಳು ಭೂಮಿಯಲ್ಲಿ ತುಂಬುತ್ತವೆ. ಇವುಗಳಿಂದ ನಿಮ್ಮನ್ನು ಪಾರುಮಾಡಿ ಮನುಷ್ಯ ಪೀಳಿಗೆ ಉಳಿಯುವಂತೆ ಮಾಡುವ ನಮ್ಮ ಈ ಪ್ರಯತ್ನ ಫಲ ಕೊಡುವುದು ಎಂಬ ನಂಬಿಕೆಯೊಂದಿಗೆ ಶ್ರಮಿಸಿದ್ದೇವೆ. ಭೂಮಿಯಲ್ಲಿ ಏನಾದರೂ ಉಳಿದಿದ್ದರೆ ಅವರನ್ನು ಸಂಪರ್ಕಿಸಲು ಸೂಕ್ತ ವ್ಯವಸ್ಥೆ ಪಕ್ಕದಲ್ಲೇ ಇದೆ. ನಿಮ್ಮ ಕೆಲವು ಕಾಲದ ಅಗತ್ಯಗಳಿಗೆ ಪೂರಕವಾದ ವ್ಯವಸ್ಥೆ ಕೂಡ ಇದೆ. ಅವನ್ನು ಉಪಯೋಗಿಸಿಕೊಂಡು ಜೀವಿಸಲು ವ್ಯವಸ್ಥೆ ಮಾಡಿಕ್ಕೊಳ್ಳಿ.

ನಿಮ್ಮ ಜ್ಞಾನವೃದ್ಧಿಗೆ ಸಾಧ್ಯವಿರುವ ಎಲ್ಲಾ ಸೌಲಭ್ಯಗಳನ್ನೂ ಒದಗಿಸಿದ್ದೇವೆ. ಈಗಾಗಲೇ ನಿಮ್ಮ ನಿದ್ರೆಯಲ್ಲಿ ಸಹ ನಿಮ್ಮ ಜ್ಞಾನವೃದ್ಧಿಗೆ ಸೂಕ್ತ ಸೂಚನೆಗಳನ್ನು ನಿಮ್ಮ ಮಿದುಳಿಗೆ ನೇರವಾಗಿ ವರ್ಗಾಯಿಸಿದ್ದೇವೆ, ನಿಮ್ಮಿಬ್ಬರ ನಡುವಿನ ಚಿಂತನ-ಮಂಥನಗಳಿಂದ ಇನ್ನೂ ಹೆಚ್ಚಿನ ಜ್ಞಾನ ಪ್ರಾಪ್ತಿಯಾಗಲು ಸಾಧ್ಯವಿದೆ. ಅದು ನಿಮ್ಮನ್ನು ಅವಲಂಬಿಸಿದೆ. ಇನ್ನು ಮುಂದೆ ರುಚಿಕಾ, ನಿನ್ನ ಅಮ್ಮ ಮಾತಾಡುತ್ತಾಳೆ..ಶುಭ ವಿದಾಯ"
"ಓ..ಡ್ಯಾಡಿ..ಡ್ಯಾಡಿ..ನಮಗಾದರೂ ಇದು ಯಾಕೆ ಬೇಕಿತ್ತು..? ನಿಮ್ಮೊಂದಿಗೇ ನಾವೂ ಬದುಕನ್ನೂ ಮುಗಿಸಬಹುದಿತ್ತು. ಬಂಧು ಬಳಗವಿಲ್ಲದ ಈ ಬದುಕು ಏಕೆ..?" ರುಚಿಕಾ ಬಿಕ್ಕಳಿಸಿದಳು. ಕಣ್ಣುಗಳಿಂದ ಧಾರಕಾರವಾಗಿ ನೀರು ಹರಿಯುತ್ತಿತ್ತು.


(ಮುಂದುವರೆಯುವುದು….)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Rajendra B. Shetty
Rajendra B. Shetty
6 years ago

ಕುತೂಹಲಕಾರಿಯಾಗಿದೆ.

 

1
0
Would love your thoughts, please comment.x
()
x