ಹಿಮಾಲಯವೆಂಬ ಸ್ವರ್ಗ (ಭಾಗ 2): ವೃಂದಾ ಸಂಗಮ್

vranda-sangam

ಹರನ ಜಡೆಯಿಂದ, ಹರಿಯ ಅಡಿಯಿಂದ, ಋಷಿಯ ತೊಡೆಯಿಂದ ಇಳಿದು ಬಂದ ಗಂಗೆ, ಸಗರನ ಮಕ್ಕಳಿಗೆ ಮೋಕ್ಷ ಕೊಟ್ಟ ಗಂಗೆ, ಭೀಷ್ಮ ಪಿತಾಮಹನ ತಾಯಿ ಗಂಗೆ, ಶಂತನು ಮಹರಾಜನ ಪ್ರೇಮಿ ಗಂಗೆ, ಜಹ್ನು ಋಷಿಯಿಂದ ಜಾಹ್ನವಿಯಾದ ಗಂಗೆ, ಭಗೀರಥನಿಂದ ಭಾಗೀರಥಿಯಾದ ಗಂಗೆ, ಪರಮ ಪಾವನೆ, ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿರುವ ಗಂಗೆ, ‘ಗಂಗೆಗೇ ಕೊಳೆ ಸೋಕದು ಪಾಪದಾ ಫಲ ತಟ್ಟದು’ ಎಂದು ನಾವು ಮಲಿನಗೊಳಿಸಿದ ಗಂಗೆ, ಕೋಟ್ಯಾನು ಕೋಟಿ ಭಾರತೀಯರ ಪಾಪ ತೊಳೆದು ಈಗ ಕೋಟ್ಯಾನು ಕೋಟಿ ರೂಪಾಯಿಯ ಒಡತಿಯಾಗಿ ಶುಧ್ಧೀಕರಣಗೊಳ್ಳಲಿರುವ ನಮಾಮಿ ಗಂಗೆಯನ್ನು ನೆನಸಿಕೊಳ್ಳುತ್ತಲೇ ನಡೆದೆವು.     

ಇನ್ನೂ ಎರಡು ಹೆಜ್ಜೆ ಇಟ್ಟಿಲ್ಲ, ಇದು ಝಾಂಸಿ ರಾಣಿ ಲಕ್ಷೀಬಾಯಿ ಹಟ್ಟಿದ ಸ್ಥಳ ಎಂಬ ಬೋರ್ಡು ಕಾಣಿಸಿತು. ಅವಳ ಮೂಲ ಹೆಸರು ಮಣಿಕರ್ಣಿಕಾ ಅಲ್ಲವೇ? ಬಹುಶಃ ಕಾಶಿಯ ಮಣಿಕರ್ಣಿಕಾ ಘಾಟ್ ನ ಬಳಿ ಅವರ ತಾಯಿಯ ಅಥವಾ ಅಜ್ಜಿಯ ಮನೆಯಿತ್ತೇನೋ? ಚಿಕ್ಕವರಿದ್ದಾಗ ಅವಳ ಗೆಳೆಯರು ನಾನಾ ಸಾಹೇಬ ಹಾಗೂ ತಾತ್ಯಾಟೋಪೆಯಂತಹ ವೀರರು. ಈ ಮೂವರೂ ವೀರರು ಸೇರಿ ಪ್ರಥಮ ಬಾರಿಗೆ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿ, ಭಾರತದಲ್ಲಿ ತಮ್ಮ ಆಳ್ವಿಕೆ ಶಾಶ್ವತವಲ್ಲ ಎಂದು ತಿಳಿಸಿದವರು. ನನ್ನ ಮೈ ಝುಮುಕರಿಸಿತು. ಆ ಮಹಾನ್ ತಾಯಿಯ ಕಿಚ್ಚು ಧೈರ್ಯ ನನ್ನಲ್ಲಿಲ್ಲವಾದರೂ ಅವಳ ಹೆಸರು ನಮ್ಮ ಮೈ ನವಿರೇಳಿಸುವಂತೆ ಮಾಡುತ್ತದೆ. ಅವಳು ಹುಟ್ಟಿ ಚಿಕ್ಕವಳಿದ್ದಾಗ ನಡೆದ ದಾರಿಯ ಮೇಲೇ ನಾನೂ ನಡೆವ ಭಾಗ್ಯ ಮಾತ್ರ ನನ್ನದಾಯಿತು. ಉತ್ತರ ಭಾರತದ ಪ್ರತಿಯೊಂದು ಜಾಗವೂ ಐತಿಹಾಸಿಕವೋ, ರಾಮಾಯಣ, ಮಹಾಭಾರತದ ಕತೆಗಳಿಗೆ ಸಂಬಂಧಿಸಿರುವುದೋ ಆಗಿರುತ್ತದೆ. ಕಾಶಿಯಂತೂ ತುಂಬಾ ಪುರಾತನ ನಗರ. ಹೀಗೇ ಹುಡುಕಿದ್ದರೆ ಇನ್ನೂ ಏನೇನು ಕಾಣುತ್ತಿದ್ದವೋ?
      
ನಾಲ್ಕೇ ಹೆಜ್ಜೆಯಲ್ಲಿ ಗಂಗಾ ನದಿ. ನಮ್ಮೂರ ಭಾಷೆಯಲ್ಲಿಯೇ ಹೇಳುವುದಾದರೆ ಹೊಳಿ ಗಂಗವ್ವ. ಭಾರತದ ಪ್ರತಿಯೊಂದು ನದಿಯೂ ಹೊಳಿ ಗಂಗೆಗಳೇ.  ನಾವೀಗ ಹೋಗುತ್ತಿರುವುದು ಮಾತ್ರ ನಿಜವಾದ ಗಂಗೆಯ ಕಡೆಗೆ.    

ಮೇ ತಿಂಗಳು, ಬೇಶಿಗೆ. ನೀರೇನೂ ಜಾಸ್ತಿ ಇರಲಿಲ್ಲ. ಮೆಟ್ಟಿಲುಗಳನ್ನಿಳಿದಾಗ, ಸ್ವಚ್ಛ ತಿಳಿ ಜಲ. ಮಲಿನ ಗಂಗೆಯಲ್ಲ. ಆದರೂ ನಾವು ಸ್ನಾನಕ್ಕಾಗಿ ದೋಣಿಯಲ್ಲಿ ಇನ್ನೊಂದು ದಡಕ್ಕೆ ಹೋದೆವು. ಅರಾಮಾಗಿ ಯಾವುದೇ ಹೊಲಸಿಲ್ಲದ, ಜನರ ಗಲಾಟೆಯೂ ಇಲ್ಲದೇ ಸ್ವಚ್ಛವಾಗಿದ್ದ ಜಾಗದಲ್ಲಿ ನಿಧಾನವಾಗಿ ಸ್ನಾನ ಮಾಡಿ ಪುಣ್ಯ ಸಂಪಾದಿಸಿಕೊಂಡೆವು. ಅಲ್ಲದೇ ಮುಂದೆ ದೇವರಿಗೆ ಸಾಕ್ಷಿ ತೋರಿಸುವುದಕ್ಕೆ ಎಲ್ಲರೂ ಸೂರ್ಯಾರ್ಘ್ಯ ಬಿಡುತ್ತಿರುವ ಒಂದು ಫೋಟೋ ಕೂಡಾ ತೆಗೆಸಿಕೊಂಡೆವು. ನಾವೇ ಗಂಗೆಗೆ ಉಡಿ ತುಂಬಿ, ಬಾಗಿನ ಬಿಟ್ಟು ನದಿಯನ್ನು ಕಲ್ಮಶ ಮಾಡಿದೆವು. ನಂತರ ಸೀದಾ ಅಸ್ಸಿ ಘಾಟ್ ನ ಶ್ರೀ ಕೃಷ್ಣ ಮಂದಿರಕ್ಕೆ. ಪೇಟ್ ಪೂಜಾ ಕೇಲಿಯೇ.  ಪೆಹಲೆ ಪೇಠೋಬಾ ನಂತರ ವಿಠೋಬಾ. ಬಿಸಿ ಬಿಸಿ ಊಟ ಮಾಡಿ, ಮಾರವಾಡಿ ಮಂದಿರದಲ್ಲಿ ತುಸು ವಿರಾಮ ಪಡೆದು ನಂತರ ಊರು ಸುತ್ತುವುದಕ್ಕೆ ಹೊರಟೆವು.

ಕಾಶಿ ಎಂದರೆ ವಿಶ್ವನಾಥ. ಆದರೆ, ಕಾಶಿಗೆ ಒಬ್ಬ ಮಹಾರಾಜನೂ ಆತನ ಅರಮನೆಯೂ ಕೋಟೆಯೂ ಇದೆ. ಸತ್ಯ ಹರಿಶ್ಚಂದ್ರನ ಕಥೆಯಲ್ಲಿ ಬರುವುದಿಲ್ಲವೇ, ಆತನ ಹೆಂಡತಿ ಮತ್ತು ಮಗುವನ್ನು ಕೊಂಡು ಕೊಂಡಿದ್ದು ಈ ಕಾಶೀ ರಾಜ. ನಿಜವಾಗಲೂ ನಮಗೆಲ್ಲ ಕಾಶಿಯ ಪರಿಚಯ ಹರಿಶ್ಚಂದ್ರನ ಕಥೆಯಲ್ಲಿಯೇ. ರಾಘವಾಂಕ ತನ್ನ ಊರಲ್ಲಿದ್ದೇ ಹರಿಶ್ಚಂದ್ರ ಕಾವ್ಯವನ್ನು ಬರೆದನೋ, ಅಥವಾ ಕಾಶಿಗೇ ಬಂದಿದ್ದನೋ ತಿಳಿಯದು. ಊರಿನ ಜನರೆಲ್ಲ ಹರಿಶ್ಚಂದ್ರ ಮಹರಾಜನ ಕಳುಹಿಸಲು ಪುರದ ಕೊನೆವರೆಗೂ ಬಂದಿದ್ದರಂತೆ. ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ ಎಂದು ವರ್ಣಿಸಿದ್ದಾನೆ ಕವಿ. ಕಾಶೀ ಪಟ್ಟಣದಲ್ಲಿ, ‘ಹೇ ಚಂದ್ರಚೂಡ ಮದನಾಂತಕಾ ಶೂಲಪಾಣೇ, ಕಾಯೋ ಗಿರೀಶ ಗಿರಿಜೇಶ’ ಎಂದು ಪಂಢರೀಬಾಯಿಯೊಡನೆ ನಮ್ಮ ರಾಜ್ಕುಮಾರ ಹಾಡಿದ್ದಾನಲ್ಲ. ‘ಕುಲದಲ್ಲಿ ಮೇಲ್ಯಾವುದೋ ಹೇ ದಿದ್ಧರಿ ಹೇ ದಿದ್ಧರಿ’ ಎಂದು ಕುಣಿದ ವೀರಬಾಹುವಿನ ಮನೆ ಕೂಡಾ ಅಲ್ಲಿದೆ. ನದೀ ದಂಡೆಯ ಮೇಲೆಯೇ ಸಿಂಹದ ಎರಡು ಗೊಂಬೆಗಳೊಡನೆ ಸುಣ್ಣ ಬಳಿದು ಕೊಂಡು ನಿಂತಿದೆ. ಈಗಲೂ ಆ ವಂಶದವರು ಪ್ರತಿ ದಿನ ಪಕ್ಕದ ಹರಿಶ್ಚಂದ್ರ ಘಾಟ್ ನಿಂದ ಬೆಂಕಿ ಒಯ್ದು ಒಲೆ ಉರಿಸುತ್ತಾರಂತೆ.  ಆ ಕಾಲದಲ್ಲಿ ವೀರ ಬಾಹುವಿನ ಮನೆ ಸ್ಮಶಾನ ಎಲ್ಲಾ ಊರ ಹೊರಗಿದ್ದಿರಬಹುದು. ಈಗದು ಮುಖ್ಯ ಮಾರುಕಟ್ಟೆಯ ಮಧ್ಯದಲ್ಲಿಯೇ ಇದೆ. ಗಂಗಾ 

ಕಾಶಿಯಲ್ಲಿ ನೋಡತಕ್ಕ ಸ್ಥಳಗಳು ಅನೇಕ. ಗಂಗಾ ನದಿಯ ಬಲ ದಂಡದಲ್ಲಿರುವ ರಾಮನಗರ ಕೋಟೆ ಮತ್ತು ಮ್ಯೂಸಿಯಂ, 17 ನೇ ಶತಮಾನದಲ್ಲಿ ಈ ಕೋಟೆಯನ್ನು ಕಟ್ಟಿದ ರಾಜ ಬಲ್ವಂತ್ ಸಿಂಗ್ ರ ಮನೆಯಾಗಿತ್ತು. ಮಹಾಭಾರತದ ಋಷಿ ವೇದವ್ಯಾಸರು ಧ್ಯಾನ ಮಾಡಿದ ಸ್ಥಳ ಇದಾಗಿದೆ. ಈ ಸ್ಥಳವನ್ನು ಅವರ ಹೆಸರಿನಿಂದಲೇ ವ್ಯಾಸ ಕಾಶಿ ಎಂದು ಕರೆಯಲಾಗುತ್ತಿತ್ತು. ಇಲ್ಲಿ ನದೀ ದಂಡೆಯ ದೇವಸ್ಥಾನದಲ್ಲಿ ಮೂರು ಲಿಂಗಗಳಿವೆ. ರಾಮನಗರವು ಸಪ್ಟೆಂಬರ್ ನಿಂದ ಅಕ್ಟೋಬರ್ ತನಕ 31 ದಿನಗಳ ಕಾಲ ನಡೆಯುವ ರಾಮಲೀಲಾಕ್ಕೆ ಜನಪ್ರಿಯವಾಗಿದೆ.

ಮ್ಯೂಸಿಯಂನಲ್ಲಿ ಸುಂದರ ಕೆತ್ತನೆಗಳಿರುವ ಬಾಲ್ಕನಿ, ಅತ್ಯಾಕರ್ಷಕ ಸಭಾಂಗಣ ಮತ್ತು ತೆರೆದ ಅಂಗಣವಿದೆ. ಮ್ಯೂಸಿಯಂನಲ್ಲಿರುವ ವಿದ್ಯಾ ಮಂದಿರವು ರಾಜರ ಆಳ್ವಿಕೆ ಕಾಲದಲ್ಲಿ ನ್ಯಾಯಾಲಯವಾಗಿತ್ತೆನ್ನುವುದನ್ನು ಪ್ರತಿಬಿಂಬಿಸುತ್ತದೆ. ಪ್ರಾಚೀನ ಕಾಲದ ಗಡಿಯಾರ, ಹಳೆ ಶಸ್ತ್ರಾಸ್ತ್ರ, ಖಡ್ಗ, ಹಳೆಯ ಕೋವಿ, ಹಳೆಯ ಕಾರುಗಳು ಮತ್ತು ಆನೆ ದಂತದ ವಸ್ತುಗಳು ಸೇರಿದಂತೆ ಆಕರ್ಷಕ ವಸ್ತುಗಳ ಸಂಗ್ರಹವಿದೆ. ರಾಜಮನೆತನಕ್ಕೆ ಸಂಬಂಧಿಸಿದ ಮಧ್ಯ ಯುಗದ ಉಡುಪುಗಳು, ಆಭರಣಗಳು, ಮತ್ತು ಪೀಠೋಪಕರಣನ್ನು ಕಾಣಬಹುದಾಗಿದೆ. 

ಅರಮನೆಯ ಹೊರಗಡೆ ಉತ್ತರ ಭಾರತದ ಪ್ರಸಿದ್ಧ ಲಸ್ಸಿ ಕುಡಿದೆವು. ಕೆಲವರು ಕೂಲ್ ಡ್ರಿಂಕ್ಸ ಕುಡಿದರು. ಪಾಪ ಸುಖವನ್ನು ತಿಳಿಯದು ಅದೃಷ್ಟ ಹೀನರು. ದೊಡ್ಡ ಪರಾತದಂಹದರಲ್ಲಿ ಗಟ್ಟಿ ಹಾಲನ್ನು ಕೆನೆ ಸಮೇತ ಹೆಪ್ಪು ಹಾಕಿದ್ದು, ಕೊರಿಯುವಂತಹ ಕೆನೆಮೊಸರನ್ನು ಅಲ್ಪ ಸ್ವಲ್ಪ ನೀರನ್ನು ಬಸಿಯುವಂತೆ ಓರೆಯಾಗಿ ಇಟ್ಟಿರುತ್ತಾರೆ. ಗಿರಾಕಿಗಳು ಬಂದಂತೆ ಕೆನೆ ಸಮೇತ ನಮ್ಮೆದುರಿಗೇ ಮೊಸರು ಕಡೆಯುತ್ತಾರೆ, ನಂತರ ಸಕ್ಕರೆ ಕಡೆಯುತ್ತಾರೆ. ಬೇಕು ಎಂದವರಿಗೆ ಐಸ್ ಕ್ಯೂಬ್ ಕೂಡಾ ಹಾಕಿ ಕೊಡುತ್ತಾರೆ. ಗಟ್ಟಿ ಲಸ್ಸಿಗೆ ಐಸ್ ಕ್ಯೂಬ್ ನ್ ನೀರು ಸೇರಿದರೆ? ರುಚಿಯಲ್ಲಿ ವ್ಯತ್ಯಾಸ ವಾಗುವುದಿಲ್ಲವೇ? ನಾನಂತೂ ಐಸ್ ಕ್ಯೂಬ್ ಹಾಕಿಸಿಕೊಳ್ಳಲಿಲ್ಲ. ಆಹಾ! ಬಹು ರುಚಿಕರ ಲಸ್ಸಿ – ಪುಟ್ಟ ಮಣ್ಣಿನ ಮಡಿಕೆಗಳಲ್ಲಿ ಕೊಡುತ್ತಾರೆ, ಗುಲಾಬಿಯ ಸ್ವಾದ ಕೂಡಿರುತ್ತದೆ. ನಾನೆಂದೂ ಅಂತಹ ಲಸ್ಸಿ ಕುಡಿದಿರಲಿಲ್ಲ, ಅಂದಿನಿಂದ ಈವರೆಗೂ ಆ ರುಚಿಯ ಲಸ್ಸಿ ಕುಡಿದಿಲ್ಲ. 

ನಂತರ ಹೊರಟಿದ್ದು ಮೂಲ ವ್ಯಾಸ ಕಾಶಿಗೆ. ಅಲ್ಲಿನ ದೇವಸ್ಥಾನದಲ್ಲಿ ವಿಜಯದಾಸರ, ಮಧ್ವಾಚಾರ್ಯರ, ಪುರುಂದರದಾಸರ ಮೂರ್ತಿಗಳಿವೆ. ಅಲ್ಲಿ ಕನ್ನಡದ ಬೋರ್ಡ ಇದೆ. ವಿಜಯದಾಸರ ಕವಚವನ್ನು ಕನ್ನಡದಲ್ಲಿ ಬರೆದು, ಲ್ಯಾಮಿನೇಶನ್ ಮಾಡಿದ್ದಾರೆ. ನಾವೆಲ್ಲರೂ ವಿಜಯದಾಸರ ನಾಡಿನವರು, ದಿನವೂ ವಿಜಯದಾಸರ ಕವಚವನ್ನು ಹಾಡಿಕೊಳ್ಳುತ್ತೇವೆ ಎಂದಾಗ ಅಲ್ಲಿಯವರಿಗೆ ಖುಷಿಯೋ ಖುಷಿ. ಆ ಬೋರ್ಡನ್ನು ನಮಗೆ ಓದಲು ಬರುತ್ತದೆ ಎಂದಾಗ ತುಂಬಾ ಆದರದಿಂದ ಆ ಹಾಡಿನ ರೆಕಾರ್ಡ ಹಾಕಿದರು, ಅಲ್ಲದೇ ವಿಶೇಷ ಮಂತ್ರಾಕ್ಷತೆಗಳ ಫಲ ಸಿಕ್ಕಿತು. ಎಲ್ಲಿಯ ಕರ್ನಾಟಕ, ಎಲ್ಲಿಯ ದಾಸರು, ಎಲ್ಲಿಯ ಕನ್ನಡ. ಜಯಹೇ ಕರ್ನಾಟಕ ಮಾತೆ.

ನಂತರ ಬಂದಿದ್ದು ಬನಾರಸ ವಿಶ್ವವಿದ್ಯಾಲಯಕ್ಕೆ. ಅದರ ರೂವಾರಿ, ಮದನ ಮೋಹನ ಮಾಲವೀಯರ ಮೂರ್ತಿಯೊಂದಿಗೆ ಸ್ವಾಗತ ಕೋರುವ ಬನಾರಸ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಬಿರ್ಲಾ ಮಂದಿರ ವೀಕ್ಷಿಸಿ, ಹನುಮಾನ್ ಮಂದಿರಕ್ಕೆ ಮಂದಿರಕ್ಕೆ ಬಂದೆವು. ನಮಗೆ ಸಂಕಟ ಮೋಚನ್, ಕವಡೀಬಾಯಿ, ಸಾರಾನಾಥ ನೋಡಲಾಗಲಿಲ್ಲ. ಅಶೋಕನ ಸಾರಾನಾಥ ಸ್ತೂಪ ಕೂಡಾ. ಅಲ್ಲಿಂದಲೇ ನಮ್ಮ ರಾಷ್ಟ ಲಾಂಛನ ನಾಲ್ಮೊಗದ ಸಿಂಹವನ್ನು ಪಡೆದಿದ್ದು. ಅದೀಗ ಅನಾಥವಾಗಿ ಹಾದಿಯಲ್ಲಿ ನಿಂತಿದೆ ಎಂದರು. ಆದರೆ ನಾನದನ್ನು ನೋಡಲಿಲ್ಲ. ಕ್ಷಮೆಯಿರಲಿ. ನನಗೆ ನಿಜವಾಗಲೂ ಬನಾರಸ ವಿಶ್ವವಿದ್ಯಾಲಯ ಪೂಜ್ಯವಾಗಿತ್ತು. ಅಲ್ಲಿ ಒಂದು ದಿನ ಪೂರ್ತಿ ಇರಬೇಕಾಗಿತ್ತು. ಆದರೆ ನನ್ನಂತಹ ಸಾಮಾನ್ಯಳಿಗೆ ಅಲ್ಲಿ ಕ್ಷಣಕಾಲ ಓಡಾಡಲು ಅವಕಾಶ ಸಿಕ್ಕಿದ್ದೇ ಪಾವನವಾಗಿತ್ತು. ಕಾಶಿಗೆ ವಾರಣಾಸಿ ಹಾಗೂ ಬನಾರಸ ಎಂಬ ಹೆಸರುಗಳಿವೆ. ಬನಾರಸ್ ಎಂದರೆ ಸೀರೆ, ಪಾನ್ ಹಾಗೂ ಯೂನಿವರ್ಸಿಟಿ. ಪಾನ್ ತಿನ್ನದಿದ್ದರೂ, ಅನ್ನಪೂರ್ಣ ಬನಾರಸ್ ಸ್ಯಾರೀ ಫ್ಯಾಕ್ಟರಿಯಲ್ಲಿ ಮಗಳಿಗಾಗಿ ಬನಾರಸಿ ಸೀರೆ ಕೊಂಡೆ, ಇಲ್ಲಿ ಅನೇಕ ಭಾಷೆಯಲ್ಲಿ ಫಲಕವಿದ್ದು, ಅದರಲ್ಲಿ ಕನ್ನಡದಲ್ಲಿಯೂ ಒಂದು ಫಲಕವಿದೆ.  ಯೂನಿರ್ವಸಿಟಿಯಲ್ಲಿ ಒಂದು ಸುತ್ತು ತಿರುಗಾಡಿದೆ.

ವರುಣಾ ಮತ್ತು ಅಸ್ಸಿ ನದಿಗಳ ನಡುವಿನ ಪುರವೇ ವಾರಣಾಸಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಭಾಗವಾದ ಸುಪ್ರಸಿದ್ಧ ಬನಾರಸ್ ಘರಾನಾ ಸ್ಥಾಪನೆಯಾಗಿದ್ದೆ ವಾರಣಾಸಿಯಲ್ಲಿ. ಅಲ್ಲದೆ ಭಾರತದ ಅತಿ ಪ್ರಮುಖ ಆಧ್ಯಾತ್ಮಿಕ ಗುರುಗಳು, ಕವಿಗಳು, ಲೇಖಕರು, ಸಂಗೀತಗಾರರು ಹೀಗೆ ಹಲವು ಸಮಾಜದ ಮಂಚೂಣಿ ವ್ಯಕ್ತಿಗಳು ವಾರಣಾಸಿಯಲ್ಲಿ ವಾಸಿಸಿದ್ದಾರೆ ಹಾಗೂ ವಾಸಿಸುತ್ತಲೂ ಇದ್ದಾರೆ.     

ಈಗಾಗಲೇ ತಡವಾಗಿದ್ದು ಕಾಶಿಗೆ ಬಂದು 12 ಗಂಟೆಗಳಾಗಿದ್ದರೂ ವಿಶ್ವನಾಥನ ದರ್ಶನ ಮಾಡಿರಲಿಲ್ಲ. ವಿಶ್ವನಾಥನು ಕಾಶಿಯವನೇ ವಿನಃ ವಾರಣಾಸಿ, ಬೆನಾರಸದವನಲ್ಲ. ಕಾಶಿಯು ಭಾರತದ ಅತಿ ಪ್ರಾಚೀನವಾದ ಸಾಂಸ್ಕೃತಿಕ ನಗರಿ. ಕಾಶಿ ಎಂದರೆ ಗಲ್ಲಿಗಳ ಊರು. ವಿಶ್ವನಾಥ ಮಂದಿರ ಇಲ್ಲಿನ ಪ್ರಧಾನ ದೇವಾಲಯ. 1776ರಲ್ಲಿ ಈ ದೇವಸ್ಥಾನವು ಪುನರ್ ನಿರ್ಮಾಣಗೊಂಡಿತು. ಇಲ್ಲಿನ ಚೌಕಾಕಾರದ ಕುಂಡದಲ್ಲಿ ಸಾಲಿಗ್ರಾಮ ಶಿಲೆಯ ಲಿಂಗವು ಒಂದು ಅಡಿ ಎತ್ತರವಾಗಿದೆ. ಗಂಗಾಸ್ನಾನ ಮಾಡಿ, ಸ್ವತಃ ಭಕ್ತಾದಿಗಳೇ ಗಂಗಾ ಜಲದಿಂದ ಅಭಿಷೇಕ ಮಾಡಬಹುದು. ವಿಶ್ವನಾಥ ದೇವಾಲಯ ದೊಡ್ಡದಾಗಿಯೂ, ಕಲಾಭಿರುಚಿಯಿಂದ ಕೂಡಿದ್ದಾಗಿಯೂ ಇರಬಹುದೇನೋ? ಆದರೆ ವಿವಿಧ ಗೇಟ್ ಗಳು ಎಂಟ್ರನ್ಸಗಳು ಹಾಗೂ ವ್ಯಾಪಾರೀ ಮಳಿಗೆಗಳು ಮತ್ತೂ ಸರದೀ ಸಾಲು ಅಲ್ಲದೇ ಭದ್ರತಾ ತಪಾಸಣೆಗಳಿಗೆ ಜಾಗ ಕೊಟ್ಟ ವಿಶ್ವನಾಥ ಮಂದಿರದ ಗಾತ್ರ ಹಾಗೂ ಕುಶಲ ಕಲೆ ವೀಕ್ಷಿಸಲು ಸಾಧ್ಯವೇ ಇಲ್ಲ.     

ಕಾಶಿಯಲ್ಲಿ ಮುಕ್ಕೋಟಿ ದೇವಾಲಯಗಳಿವೆ ಎಂದು ಹೇಳುತ್ತಾರೆ. ಇವೆಲ್ಲವನ್ನೂ ನೋಡಲು ಜೀವನದ ಉಳಿದ ಸಮಯ ಬೇಕಾಗುವುದರಿಂದ ಕಾಶಿಗೊಮ್ಮೆ ಬಂದರೆ ಬಿಟ್ಟು ಹೋಗಲೇ ಬಾರದೆಂದು ಹೇಳುತ್ತಾರೆ. ಈ ಸಂಖ್ಯೆಯು ಸ್ವಲ್ಪ ಹೆಚ್ಚೆನಿಸಿದರೂ, ಕಾಶಿಯಲ್ಲಿ ನಿಜವಾಗಿ ಸಾವಿರಾರು ದೇವಾಲಯಗಳು, ಗುಡಿಗಳು ಇವೆ. ರಾಮೇಶ್ವರ, ದ್ವಾರಕೆ, ಜಗನ್ನಾಥ ಪುರಿ, ಕಾಂಚೀಪುರ ಹೀಗೆ ಎಲ್ಲ ತೀರ್ಥಗಳ ಹೆಸರುಳ್ಳ ದೇಗುಲಗಳಿವೆಯಂತೆ. ಅದಕ್ಕೆ ಕಾಶಿಗೊಮ್ಮೆ ಹೋದರೆ ಎಲ್ಲ ತೀರ್ಥಗಳ ದರ್ಶನ ಮಾಡಿದ ಪುಣ್ಯ ಬರುವುದಂತೆ. ಕಾಲಮಿತಿಗಳಿಂದ ನಾವು ಆ ಎಲ್ಲಾ ದೇವಾಲಯಗಳಿಗೆ ಹೋಗಲಾಗಲಿಲ್ಲ. ಕಾಶಿಯ ಊರನ್ನು ಸುತ್ತುವರೆಯುವ ಒಂದು ಪುಣ್ಯ ರಸ್ತೆಗೆ "ಪಂಚಕ್ರೋಷಿ ಪರಿಕ್ರಮ" ಎಂದು ಹೆಸರು. ಇದರ ಸುತ್ತ ಹೋದರೆ ೧೦೮ ದೇಗುಲಗಳಿವೆಯಂತೆ. ಈ ಪರಿಕ್ರಮದ ಸುತ್ತ ನಡೆದು ಈ ೧೦೮ ದೇಗುಲಗಳನ್ನು ನೋಡುವುದು ಉತ್ತಮವಂತೆ. ಆಗದಿದ್ದಲ್ಲಿ ಪಂಚಕ್ರೋಷಿ ದೇಗುಲಕ್ಕೆ ಹೋಗಿ ಅದನ್ನು ಸುತ್ತುವರೆದರೆ ಆ ಪರಿಕ್ರಮವನ್ನು ಸುತ್ತಿದಂತೆ ಎಂದು ಹೇಳುತ್ತಾರೆ. ಹೀಗೆ ಇನ್ನೊಂದು ಪಥಕ್ಕೆ 'ನಾಗರ ಪ್ರದಕ್ಷಿಣೆ' ಎಂದು ಹೆಸರಂತೆ. ಇದರ ಸುತ್ತ ೭೨ ಗುಡಿಗಳಿವೆಯಂತೆ. ನಮಗೆ ಇವ್ಯಾವುದು ನೋಡಲು ಕಾಲಾವಕಾಶವಿರಲಿಲ್ಲ.

ಈ ಕ್ಷೇತ್ರದ ಕುರಿತು ನೂರಾರು ಪುರಾಣ ಕಥೆಗಳು ಕೇಳಿ ಬರುತ್ತವೆ. ಪ್ರಳಯಕಾಲದಲ್ಲಿ ಮಹಾವಿಷ್ಣು ಇಲ್ಲಿ ತಪಸ್ಸನ್ನು ಆಚರಿಸಿದನೆಂದೂ, ಬ್ರಹ್ಮನು ಆಗ ಈತನ ನಾಭಿ ಕಮಲದಿಂದ ಜನಿಸಿದಾಗ, ಲಕ್ಷ್ಮಿಯು ಆತನ ಕಣ್ಣುಮುಚ್ಚಲು ಜಗವೆಲ್ಲ ಕತ್ತಲಾಯಿತೆಂದೂ, ಆಗ ಭಕ್ತರ ಸ್ತೋತ್ರದಿಂದ ಸುಪ್ರೀತನಾದ ಶಿವನು ಜ್ಯೋತಿರ್ಲಿಂಗ ಸ್ವರೂಪನಾಗಿ ಇಲ್ಲಿ ನೆಲೆಸಿ ಜಗವನ್ನು ಬೆಳಗಿದನೆಂಬುದು ನಂಬಿಕೆ. ಆದ್ದರಿಂದಲೇ ಕಾಶಿಯು ಬೆಳಕಿನ ಊರು. ಸ್ವರ್ಗದಿಂದ ಧುಮುಕಿದ ಗಂಗೆಯನ್ನು ಶಿವ ತನ್ನ ಜಟೆಯಲ್ಲಿ ಹಿಡಿದದ್ದು ಇಲ್ಲೇ ಎಂಬ ನಂಬಿಕೆಯೂ ಇದೆ. ಅಯೋಧ್ಯಾ ಮಾಯಾ ಮಥುರಾ ಕಾಶಿ ಕಂಚೀ ಅವಂತಿಕಾ ಮುಂತಾದ ಪ್ರಮುಖ ಪ್ರಾಚೀನ ನಗರಗಳಲ್ಲಿ ಕಾಶಿಯು ಒಂದು ಎಂಬ ಪ್ರಖ್ಯಾತಿ ಹೊಂದಿದೆ. ವೇದಗಳಲ್ಲೂ ಇದರ ಪ್ರಸ್ತಾಪವಿದೆ. 

ಪುರಾಣಗಳ ಪ್ರಕಾರ ಬ್ರಹ್ಮ ಹಾಗು ವಿಷ್ಣುವಿನ ಮಧ್ಯೆ ವಾದ-ವಿವಾದ ನಡೆಯುತ್ತಿದ್ದಾಗ ಬ್ರಹ್ಮನು ತನ್ನ ಅಹಂಗಾಗಿ ಸುಳ್ಳು ನುಡಿದನಂತೆ. ಆಗ ಈಶ್ವರನು ಕಾಲ ಭೈರವನಾಗಿ ಬ್ರಹ್ಮನಿಗಿದ್ದ ಐದು ತಲೆಗಳಲ್ಲಿ ಒಂದನ್ನು ಕತ್ತರಿಸಿದನಂತೆ ಶಂಕರನು ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದಾಗ ಅದು ಅವನನ್ನು ಅಂಟಿಕೊಂಡು ಬಿಟ್ಟಿತ್ತು. ಯಾವ ಪುಣ್ಯಕ್ಷೇತ್ರಕ್ಕೆ ಹೋದರೂ ಇದರಿಂದ ಶಿವನಿಗೆ ಬಿಡುಗಡೆ ಆಗಲಿಲ್ಲ. ಕೊನೆಗೆ ಕಾಶಿಗೆ ಬಂದಾಗ ಶಿವನು ಬ್ರಹ್ಮಹತ್ಯಾ ದೋಷದಿಂದ ವಿಮುಕ್ತನಾದನು.  ಕಾಶಿಯ ಗಂಗೆಯಲ್ಲಿ ಸ್ನಾನ ಮಾಡಿದ ಕೂಡಲೇ ಈ ಐದನೇ ತಲೆಕೆಳಗೆ ಬಿದ್ದಿತಂತೆ.  ಬ್ರಹ್ಮಕಪಾಲವು ಬಿದ್ದ ಆ ಸ್ಥಳವನ್ನು ಕಪಾಲ ವಿಮೋಚನಾ ತೀರ್ಥ ಎನ್ನುತ್ತಾರೆ. ಮೊದಲು ಇದು ಮಾಧವನ ಕ್ಷೇತ್ರವಾಗಿತ್ತು. ಶಿವನು ಈ ಕ್ಷೇತ್ರದಲ್ಲಿಯೇ ನೆಲೆಸುವುದಾಗಿ ವಿಷ್ಣುವನ್ನು ಪ್ರಾರ್ಥಿಸಿದಾಗ ವಿಷ್ಣುವು ಶಿವನಿಗೆ ಇಲ್ಲಿಯೇ ಇರಲು ಸೂಚಿಸುತ್ತಾನೆ. ಆಗ ಈಶ್ವರನ ಕಣ್ಣುಗಳಿಂದ ಆನಂದದ ಬಿಂದುಗಳು ಬಿದ್ದಿದ್ದರಿಂದ ಇಲ್ಲಿನ ಮಾಧವ "ಬಿಂದು ಮಾಧವ" ಎಂದು ಕರೆಯಲ್ಪಡುತ್ತಾನೆ. ಸ ಬಿಂದುಮಾಧವಃ ಪಯಾದ್ವಿಭೋರ್ಯಸ್ಯ ನಿರೀಕ್ಷಣಾತ್ | ಅಪಾ ರೋಪಿ ಹಿ ಸಂಸಾರಸಿಂಧುರ್ಬಿಂದುತ್ವಮಶ್ನುತೇ || ಯಾವ ಬಿಂದು ಮಾಧವನ ಕಡೆಗಣ್ಣಿನ ಕೃಪಾವಲೋಕನದಿಂದ  ಪಾರವಿಲ್ಲದ ಸಂಸಾರವೆಂಬ  ಸಾಗರವು ಒಂದು ಬಿಂದುವಿನಷ್ಟು ಆಗುತ್ತದೆಯೋ ಆ ಬಿಂದು ಮಾಧವನು ನಮ್ಮನ್ನು ಕಾಪಾಡಲಿ. ಸ್ಕಂದ ಪುರಾಣದಲ್ಲಿ ಕಾಶಿಯನ್ನು ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂದು ಹೇಳಲಾಗಿದೆ. ತ್ರಿಲೋಕ ಪಾವನೆಯಾದ ಭಾಗೀರಥಿಯ ದಡದಲ್ಲಿರುವ ಕಾಶೀ ನಗರವು ಇಡೀ ಜಗತ್ತನ್ನು ರಕ್ಷಿಸುತ್ತಿದೆ ಎಂದು ಹೇಳಲಾಗಿದೆ. ನಾರದರು ಕಾಶೀ ನಗರವನ್ನು ಎಲ್ಲಿಯವರಿಗೆ ವರ್ಣಿಸುವುದು? ಎನ್ನುತ್ತಾರೆ. ಈ ನಗರವು ಶಂಕರನ ತ್ರಿಶೂಲದಲ್ಲಿ ನಿಂತಿರುವುದರಿಂದ ಇಡೀ ಜಗತ್ತಿಗೆ ಪ್ರಳಯವಾದರೂ ಕಾಶೀ ನಗರಕ್ಕೆ ಅಪಾಯವಿಲ್ಲ ಎನ್ನುತ್ತಾರೆ. 

ಅಷ್ಟು ಪ್ರಾಚೀನ ಊರಾದರೂ, ಕಾಶಿಯಲ್ಲಿ 16ನೇ ಶತಮಾನಕ್ಕಿಂತ ಹಳೆಯ ಕಟ್ಟಡಗಳು ಬಹಳ ವಿರಳ. ೧೧ನೇ ಶತಮಾನದಿಂದ ಜ್ಞಾನವೇ ಹಿಂದೂ ಧರ್ಮದ ಶಕ್ತಿಯೆಂದರಿತು ಮುಸಲ್ಮಾನ ಸೇನೆಗಳು ಜ್ಞಾನದ ಕೇಂದ್ರಬಿಂದುವಾದ ಕಾಶಿಯನ್ನು ಹತ್ತಾರು (ನೂರಾರು?) ಬಾರಿ ಆಕ್ರಮಣ ಮಾಡಿ ಅಲ್ಲಿಯ ದೇವಾಲಯಗಳನ್ನು ಧ್ವಂಸ ಮಾಡಿ ಅವುಗಳ ತಳಪಾಯದ ಮೇಲೆ ಮಸೀದಿಗಳನ್ನು ಕಟ್ಟಿದರೆಂದು ಇತಿಹಾಸ ಹೇಳುತ್ತದೆ. 

ಕ್ರಿ.ಶ 1194 ರಲ್ಲಿ ಕುತುಬುದ್ದೀನ್ ಐಬಕನ ಸೈನ್ಯವು ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ಕೆಡವಿದರಂತೆ. ಮುಘಲ್ ಅಧಿಪತಿಯಾದ ಶಹಜಹಾನನು ಕ್ರಿ. ಶ 1629 ರಲ್ಲಿ ಒಂದೇ ದಿನದಲ್ಲಿ 76 ದೇವಾಲಯಗಳನ್ನು ಒಡೆಸಿದನಂತೆ. ಕೃ. ಶ. 1669 ರಲ್ಲಿ ಆಗಿನ ಮುಘಲ್ ಅಧಿಪತಿ ಹಾಗೂ ಶಹಜಹಾನನ ಮಗನಾದ ಔರಂಗಜೇಬನು ಸರ್ವಶ್ರೇಷ್ಠವಾದ ಕಾಶೀ ವಿಶ್ವೇಶ್ವರ ದೇವಾಲಯವನ್ನು ಕೆಡವಿ ಅದರ ಸ್ಥಳದಲ್ಲೊಂದು ಮಸೀದಿ ಕಟ್ಟುವ ಆಜ್ಞೆ ಮಾಡಿದನಂತೆ. ಇಂದಿಗೂ ಆ ಮಸೀದಿ ಹಾಗೇ ನಿಂತಿದೆ – ಸಾಂಕೇತಿಕವಾಗಿ ಅದರ ಹೆಸರೂ ಹಿಂದೂ ಹೆಸರು – ಜ್ಞಾನ ವಾಪಿ ಮಸೀದಿ ಎಂದು. ಆ ಮಸೀದಿಯ ಗೋಡೆಗಳ ಮೇಲೆ ಹಿಂದೂ ಕೆತ್ತನೆಗಳು ಕಂಡು ಬರುತ್ತವೆ. ಹೀಗೆ ಧ್ವಂಸ ಮಾಡಲ್ಪಟ್ಟ ಇನ್ನೊಂದು ದೇವಾಲಯವೆಂದರೆ ಪ್ರಾಚೀನ ಬಿಂದು ಮಾಧವ ದೇವಾಲಯ. ಇಂದು ಆ ದೇವಾಲಯದ ಸ್ಥಳದಲ್ಲಿ ಆಲಂಗೀರ್ ಮಸೀದಿ ನಿಂತಿದೆ. 1669 ರಲ್ಲಿ ಧ್ವಂಸ ಮಾಡಲ್ಪಟ್ಟ ವಿಶ್ವೇಶ್ವರ ದೇವಾಲಯವನ್ನು ಕ್ರಿ.ಶ. 1776 – 1780ರಲ್ಲಿ ಇಂದೋರಿನ ರಾಣಿ ಅಹಲ್ಯಾಬಾಯಿ ಹೋಳ್ಕರ್ ಮತ್ತೆ ಅದರ ಮೂಲ ಸ್ಥಳದ ಪಕ್ಕದಲ್ಲೇ (ಈಗ ರಸ್ತೆಯಲ್ಲಿ ಎದುರಿಗೆ) ಕಟ್ಟಿಸಿದಳಂತೆ. ಮೂಲ ದೇವಾಲಯದಲ್ಲಿದ್ದ ವಿಶ್ವೇಶ್ವರ ಸಾಲಿಗ್ರಾಮವನ್ನು ಇಲ್ಲಿ ಪುನ: ಸ್ಥಾಪಿಸಲಾಯಿತಂತೆ. 1785 ರಲ್ಲಿ ಬ್ರಿಟೀಶ್ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್ನ ಆಜ್ಞೆಯ ಮೇಲೆ ದೇವಾಲಯದಲ್ಲಿ ಒಂದು ನಗಾರಿ ಖಾನೆ (ಡೋಲು ಖಾನೆ) ಕಟ್ಟಿಸಲಾಯಿತಂತೆ. 1839 ರಲ್ಲಿ ದೇವಾಲಯದ ಮೂರು ಗೋಪುರಗಳಲ್ಲಿ ಎರಡನ್ನು ಪಂಜಾಬಿನ ಮಹಾರಾಜ ರಣಜೀತ್ ಸಿಂಗ್ ದಾನ ಕೊಟ್ಟ ಒಂದು ಟನ್ ಭಾರದ (24 ಮಣ ಎಂದು ಓದಿದ ನೆನಪು) ಚಿನ್ನದ ತಗಡಿನಿಂದ ಹೊದಿಸಲಾಯಿತಂತೆ. ಸ್ವಾತಂತ್ರ್ಯದ ನಂತರ ಮೂರನೆಯ ಗೋಪುರವನ್ನು ಉತ್ತರ ಪ್ರದೇಶದ ಸರಕಾರ ಚಿನ್ನದ ತಗಡಿನಿಂದ ಹೊದಿಸಿತಂತೆ. ಜನವರಿ 28 1983 ರ ದಿನ ದೇವಾಲಯವು ಉತ್ತರ ಪ್ರದೇಶ ಸರಕಾರದ ನಿಯಂತ್ರಣಕ್ಕೆ ಹೋಯಿತಂತೆ.

ನಾವು ಹೋದಾಗ ರಾತ್ರಿ 8 ಗಂಟೆ ಆಗುತ್ತ ಬಂದಿತ್ತು. ಆಗ ಲಿಂಗದ ಸುತ್ತಲೂ ನಾಲ್ಕೂಕಡೆ ಭಟ್ಟರು ಕೂತಿದ್ದರು. ವೇದಘೋಷದಿಂದ ಪೂಜೆ, ಆರತಿ ತಯಾರಿ ನಡೆಯುತ್ತಿತ್ತು.  ನಾಲ್ಕೂ ಬಾಗಿಲಲ್ಲಿ ವಿಶೇಷ ಪೂಜಾ ಕರ್ತ ಜನ ಪೂಜೆಯನ್ನು ವೀಕ್ಷಿಸುತ್ತ ಕುಳಿತಿದ್ದರು. ಅವರ ಹಿಂದೆ ಪಂಡಾಗಳು. ಅವರು ನಮಗೆಲ್ಲ ಪ್ರತಿಯೊಬ್ಬರಿಗೂ ದೇವರ ದರ್ಶನ ಮಾಡಿಸಲು 50/- ರೂಪಾಯಿಯ ಒಳ ಒಪ್ಪಂದ ಮಾಡಿಕೊಂಡರು. ಸರಿ, ನಾವು ನಿಂತಲ್ಲೇ ಬಾಗಿಲನ್ನು ತೋರಿಸಿ, ಅಲ್ಲೇ ವಿಶ್ವನಾಥನ ಲಿಂಗವಿದೆ ಎಂದರು. ಆಕಾಶ ನೋಡಲು ದುಡ್ಡು ಕೊಟ್ಟು ಮೋಸ ಹೋದವರ ಕತೆ ನಮ್ಮನ್ನು ನೋಡಿಯೇ ಬರೆದಿರಬೇಕು. ದುಡ್ಡು ಕೊಟ್ಟು, ನಿಂತಲ್ಲೇ ಪೆಚ್ಚು ಮುಖ ಮಾಡಿಕೊಂಡು ದೇವರ ದರ್ಶನ ಮಾಡಿದೆವು. 

ಏನಾದರೇನು, ಪಾಪಿ ಪೇಟ್ ಕಾ ಸವಾಲ್, ಅಸ್ಸಿಘಾಟ್ ಗೆ ವಾಪಸು ಬಂದು, ಮರು ದಿನ ಕ್ಷೇತ್ರ ವಿಧಿ ಮಾಡುವವರಿಗೆ ಫಲಾಹಾರ ಉಳಿದವರಿಗೆ ಊಟ, ಕೃಷ್ಣ ಮಠದಲ್ಲಿ ಮುಗಿಸಿ, ಮಾರವಾಡಿ ಮಂದಿರದಲ್ಲಿ ಮಲಗಿದೆವು. ಮರುದಿನ ಮತ್ತೊಮ್ಮೆ ಗಂಗಾಸ್ನಾನ. ಗಂಡಸರೆಲ್ಲ ಶ್ರಾದ್ಧ ಕಾರ್ಯದಲ್ಲಿ ತೊಡಗಿದ್ದುದರಿಂದ, ಹೆಂಗಸರಷ್ಟೇ ವಿಶ್ವನಾಥನ ದರ್ಶನಕ್ಕೆ ಹೊರಟೆವು. ನಾವು 7 ಜನವಿದ್ದು, ಒಂದು ಆಟೋ ಹಾಗೂ ಸೈಕಲ್ ರಿಕ್ಷಾದಲ್ಲಿ ಹೊರಟಾಗ ತುಸು ಹಿಂದು ಮುಂದಾಗಿ, ಇಳಿಯ ಬೇಕಾಗಿದ್ದ 2 ನೇ ನಂಬರ ಗೇಟ್ ಬಗ್ಗೆ ಆಟೋದವನು ನೀಡಿದ ತಪ್ಪು ಮಾಹಿತಿಯಿಂದ ನಾವೆಲ್ಲ ಬೇರೆ ಬೇರೆಯಾದೆವು. “ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವಾ, ನಮ್ಮವರನು ಹುಡುಕಲಾರೆ” ಎಂದು ಎಷ್ಟು ಹುಡುಕಿದರೂ ಕಾಶಿಯ ಎಲ್ಲಾ ಗಲ್ಲಿಗಳಲ್ಲೂ ತಿರುಗಿದರೂ ಸೈಕಲ್ ರಿಕ್ಷಾದಲ್ಲಿ ಬಂದರವರು ಕಾಣಲಿಲ್ಲ. ನಂತರ ನಾವಷ್ಟೇ ವಿಶ್ವನಾಥನನ್ನು ಮುಟ್ಟಿ ಕ್ಷೀರಾಭಿಷೇಕ ಮಾಡಿ, ಪೂಜೆ ಮಾಡಿ, ‘ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿಯಲ್ಲವೇ’ ಎನ್ನುತ್ತಾ, ವಿಶಾಲಾಕ್ಷಿ ಮಂದಿರದಲ್ಲಿ ಅಮ್ಮನವರಿಗೆ ಸೀರೆ ಏರಿಸಿ, ಅನ್ನಪೂರ್ಣ ಮಂದಿರದಲ್ಲಿ ಪೂಜೆ ಮಾಢಿಕೊಂಡು, ಈ ಅನ್ನಪೂರ್ಣೆಯೇ ಅಲ್ಲವೇ ಶಂಕರನಿಗೆ ಬಿಕ್ಷೆ ನೀಡಿದ್ದು ಎಂದುಕೊಂಡು ನಮಸ್ಕರಿಸಿ, ಸರಸ್ವತೀ ಬಾಯಿ ಪಾಠಕ ಗೇಟ್ ನಿಂದ ಹೊರಬಂದು ಆಟೋ ಹತ್ತಿದೆವು. 


ಮುಂದುವರೆಯುವುದು….

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x