Facebook

ಕಪ್ಪು ಹುಡುಗಿ: ಸುನೀತಾ ಕುಶಾಲನಗರ

ಕನ್ನಡದ ಬರಹಗಳನ್ನು ಹಂಚಿ ಹರಡಿ

Sunitha K

    
“ಮಡಿಕೇರಿ ಮಂಗಳೂರು ರಾಜ್ಯ ಹೆದ್ದಾರಿಯ ನಡುವೆ ಸಿಗುವ ಸುಳ್ಯದ ಸಮೀಪದ ಕಲ್ಲುಗುಂಡಿ ಎಂಬ ಸಣ್ಣಪೇಟೆಯಿಂದ ಒಂದಿಷ್ಟು ಊರೊಳಗೆ ಹೋದರೆ ಸಿಗುವ ಚೆಂಬು ಎಂಬ ಪುಟ್ಟ ಹಳ್ಳಿಯ ಹೊಸೂರು ಎಂಬಲ್ಲಿ ಕುಳಿತುಕೊಂಡು ಜಗತ್ತಿಗೆ ಪ್ರತಿಕ್ರಿಯಿಸುತ್ತಿರುವ ಶ್ರೀಮತಿ ಸಂಗೀತಾ ರವಿರಾಜ್ ಅವರಿಗೆ ಸಾಹಿತ್ಯವೆಂದರೆ ಒಂದು ರೀತಿಯ ಭರವಸೆ” ಎನ್ನುತ್ತಾರೆ ಬೆನ್ನುಡಿಸುತ್ತಾ ಡಾ|| ಪುರುಷೋತ್ತಮ ಬಿಳಿಮಲೆಯವರು. 

ದಿಟ!
ಬೆರಗುಗೊಳಿಸಿದ ಕಾಲ 
ತಲ್ಲಣಗಳ ರಂಗಲ್ಲಿಯ ಚುಕ್ಕಿ
ಉತ್ಸಾಹದ ಮೂಟೆ ಸಕ್ಕರೆಯ ಸಾಲು
ಬಿತ್ತುತ್ತಾ ನಡೆಯುವೆನು ಹೆಜ್ಜೆ ಹಾಕಿ

ಎಂಬ ಮೆಲುದನಿಯ ಮೂಲಕ ಕಪ್ಪು ಹುಡುಗಿಯನ್ನು ಅಪ್ಪಿಕೊಳ್ಳುವ ಸಂಗೀತಾರ ಈ ಕೃತಿಯಲ್ಲಿ ಸುಮಾರು 24 ಪ್ರಬಂಧಗಳಿವೆ. ಎಲ್ಲವೂ ವಿಶಿಷ್ಟ ಉಸಿರಿನ ಮೂಲಕ ಉಸುರುತ್ತಾ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಎಂಬುದಕ್ಕೆ ಕೃಷ್ಣಸುಂದರಿಯ ಕಥನದ ಈ ಕೆಳಗಿನ ಸಾಲುಗಳನ್ನು ನೋಡಿ… ಬಣ್ಣ ಎಂದಿಗೂ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವುದಿಲ್ಲ. ನಮ್ಮ ಗುಣ, ನಡವಳಿಕೆ, ವಿದ್ಯೆ, ಬುದ್ದಿ, ಇವುಗಳು ನಮ್ಮ ವ್ಯಕ್ತಿತ್ವದ ಕನ್ನಡಿಯೇ ಹೊರತು ಬಣ್ಣವಲ್ಲ. ಆದರೂ ವಾಸ್ತವವಾಗಿ ಒಂದು ಕಟು ಸತ್ಯವಿದೆ ಎಂದು ಮುಂದುರೆಸುತ್ತಾ ಪ್ರತಿಭೆ ಮತ್ತು ಉತ್ತಮ ನಡವಳಿಕೆ ಇವೆರಡು ಬಣ್ಣವನ್ನು ಮೀರಿದ್ದು. ಇವೆರಡು ಇರುವ ವ್ಯಕ್ತಿಗೆ ಕಪ್ಪು ವಿಷಯವೇ ಅಲ್ಲ ಎನ್ನುವುರ ಮೂಲಕ ಕಪ್ಪು ಮೈ ಬಣ್ಣದವರಿಗೆ ಆತ್ಮವಿಶ್ವಾಸವನ್ನು ತುಂಬಿದ್ದಾರೆ. 
    
ಕೊಡೆ ಅರಳುವ ಸಮಯವನ್ನು ಪತ್ರಿಕೆಯಲ್ಲಿ ಓದಿ ಆಸ್ವಾದಿಸಿದ್ದೇವೆ. ಕೊಡೆಗೆ ಮಳೆಯನ್ನು ನಿಲ್ಲಿಸಲಾಗದು. ಆದರೆ ಎಂತಹ ಜಡಿ ಮಳೆಯ ನಡುವೆಯೂ ನಾವು ನಿಲ್ಲುವಂತಹ ಅದಮ್ಯ ಧೈರ್ಯ ಉತ್ಸಾಹ ಸಾಮಥ್ರ್ಯವನ್ನು ಈ ಕೊಡೆಯೆಂಬ ಪುಟ್ಟ ಚೇತನ ನಮಗೆ ನೀಡುತ್ತದೆ ಎಂಬ ಸಾಲುಗಳು ಮತ್ತೆ ಮತ್ತೆ ಓದುವಂತೆ ತಿವಿಯುತ್ತದೆ. 
    
ಬರಹಗಾರರ ಬವಣೆಗಳೆಂಬ ಸುಖಗಳಲ್ಲಿ ಸಾಗರದಂತಹ ಸಾಹಿತ್ಯ ಮಯದಲ್ಲಿ ನಮ್ಮಂತಹ ಚಿಕ್ಕ ಪುಟ್ಟ ಬರಹಗಾರರ ಪೀಕಲಾಟಗಳು ಅಷ್ಟಿಷ್ಟಲ್ಲ ಎನ್ನುತ್ತಾ ಸಣ್ಣಗೆ ಮೀಟುವ ಎದೆಯೊಳಗಿನ ನೋವನ್ನು ಇದರಲ್ಲಿ ಸುಖವಾಗಿ ಪ್ರಸವಿಸಿದ್ದಾರೆ. 

kappu-hudugi

 

Sangeetha                                                                                 ಶ್ರೀಮತಿ ಸಂಗೀತಾ ರವಿರಾಜ್
    
ಸೀರೆ ಮತ್ತು ನೀರೆಯ ಸಂಬಂಧವನ್ನು ಸೀರೆಯ ಸೆರಗು ಎಂದಿಗೂ ಎವರ್ ಗ್ರೀನ್. ಸೀರೆಯ ಉಳಿದ ಭಾಗ ಹಾಳಾದರೂ ಅಭೂತ ಪೂರ್ವ ಕಲೆಯನ್ನು ಉಳಿಸಿಕೊಂಡ ಸೆರಗು ಇನ್ನು ಹೊಸತರಂತೆ ಇರುತ್ತದೆ, ಎನ್ನುತ್ತಾ ಜಗತ್ತಿನಲಿ ಒಂದು ಆರೋಗ್ಯಕರ ಉಡುಪಿನ ಮಾದರಿಯೆಂದರೆ ಸೀರೆ ಹೊರತು ಬೇರ್ಯಾವುದೂ ಇರಲು ಸಾಧ್ಯವಿಲ್ಲ ಎಂದು ದೃಢವಾಗಿ ಹೇಳುತ್ತಾರೆ. 
    
ಬರಹವೆಂಬ ಭರವಸೆಯಡಿ ಬರೆದುಕೊಂಡೇ ನಮ್ಮೆಲ್ಲರನ್ನು ಸೆಳೆಯುವ ಸಂಗೀತಾ ಮನೆವಾಳ್ತೆಯ ಮಹಿಳೆ ಎಂಬ ಪ್ರಬಂಧದಲ್ಲಿ ಕೆಳಗಿನ ಸಾಲುಗಳ ಮೂಲಕ ಖ್ಯಾತ ಲೇಖಕಿಯರನ್ನು ಸ್ಮರಿಸುತ್ತಾರೆ. 
ಮನೆಯಿಂದ ಮನೆಯೆನಿಸುವುದೆಲ್ಲ
ಮಡದಿಯಿಂದ ಮನೆ ಕಾಣ
ಕಲ್ಲು ಕಟ್ಟಡಗಳಿಂದ ಮನೆಯಾಗುವುದಿಲ್ಲ
ಮನೆಯೊಳಗೆ ಮಡದಿಯಿದ್ದರೆ ಮಾತ್ರ ಮನೆ ನೋಡಾ 
ಇದು ಇವರ ಓದಿನ ವಿಸ್ತಾರ ಹಾಗೂ ಗೃಹಿಣಿಯ ಜವಾಬ್ದಾರಿಯನ್ನು ಕಟ್ಟಿಕೊಡುತ್ತದೆ. 
    
“ಸುರಗಿ ಹೂವಿನ ನೆನಪು ಸೊರಗುವುದಿಲ್ಲ” ಆಕರ್ಷಕ ಶೀರ್ಷಿಕೆಯಷ್ಟೇ ಈ ಪ್ರಬಂಧದಲ್ಲಿ ಹೆಣ್ಣಿನ ಅನುಭೂತಿಗಳನ್ನು ಅತೀ ಸುಂದರ ಪುಷ್ಪ ಶುಭ್ರ ಬಿಳಿಯ ಸುರಗಿಗೆ ತಾಳೆ ಮಾಡುತ್ತಾ ಸ್ತ್ರೀ ಮತ್ತು ಸುರಗಿಗೆ ಇರುವ ಅವಿನಾಭಾವ ಸಂಬಂಧದ ಬಗ್ಗೆ ಚೆಂದದ ಇತಿಹಾಸವಾಗಿ ಬಿಂಬಿಸಿದ್ದಾರೆ. 
    
ಹೀಗೆ 24 ಬರಹಗಳ ಮೂಲಕ ವಿಶಿಷ್ಟ ಶೈಲಿಯಲಿ ಬೇರೆ ಬೇರೆ ಲಹರಿಯನ್ನು ನೀಡುತ್ತಾ ಕಪ್ಪು ಹುಡುಗಿ ನಮ್ಮನ್ನು ಸೇರಿದ್ದಾಳೆ. 
    
ಕೊಡಗಿನಲ್ಲಿ ತೀವ್ರವಾಗಿ ಬೆಳೆಯುತ್ತಿರುತ್ತಿರುವ ಬರಹಗಾರರಲ್ಲಿ ಅದರಲ್ಲೂ ಮಹಿಳಾ ಬರಹಗಾರರಲ್ಲಿ ಸಂಗೀತಾ ರವಿರಾಜ್ ರಾಜ್ಯಮಟ್ಟದಲ್ಲಿ ಬೆಳೆದ ಬರಹಗಾರ್ತಿ. ಇವರ ಪ್ರಬುದ್ಧ ಭಾಷೆ ಬಳಸಿರುವ ಪಕ್ವವಾದ ಶೈಲಿಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಇವರ ಬಗ್ಗೆ ಮತ್ತಷ್ಟು ಭರವಸೆ ಮೂಡಿದೆ. ಈಗಾಗಲೆ ಉಡುಗೊರೆ ಮತ್ತು ನನ್ನೊಡಲ ಮಿಹಿರ ಎಂಬೆರಡು ಉತ್ತಮ ಕವನ ಸಂಕಲನಗಳನ್ನು ಪ್ರಕಟಿಸಿರುವ ಇವರ ಕಪ್ಪು ಹುಡುಗಿ ಗದ್ಯಬರಹ ಪದ್ಯ, ಗದ್ಯಗಳು ಇವರಿಗೆ ಒಲಿದಿರುವುದಕ್ಕೆ ಸಾಕ್ಷಿ.
    
ಕೊಡಗಿನ ಗೌರಮ್ಮ ಪ್ರಶಸ್ತಿಯ ಜೊತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬರಲಿ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಇವರ ಹೆಸರು ಎತ್ತರಕ್ಕೇರಲಿ…. ಇವರಿಂದ ಸಾಕಷ್ಟು ಕೃತಿಗಳು ಹೊರಬರಲಿ ಎಂದು ಪ್ರೀತಿಯಿಂದ ನಿರೀಕ್ಷಿಸುತ್ತೇನೆ.


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply