ತ್ಯಾಜ್ಯ-ಮಾಲಿನ್ಯ-ತ್ಯಾಜ್ಯ: ಅಖಿಲೇಶ್ ಚಿಪ್ಪಳಿ

Akhilesh chippali column1
ಪ್ರೇಮಿಗಳ ದಿನದಂದೇ ಸಾಗರದಲ್ಲಿ ಮಾರಿಜಾತ್ರೆಯೂ ಶುರುವಾಗಿದೆ. ಮಾರಿಗೆ ಉಡಿ ತುಂಬಲು ಜನ ಬೆಳಗಿನ ಜಾವದಲ್ಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಯುವಪ್ರೇಮಿಗಳೆಲ್ಲಾ ಬಹುಷ: ಫೇಸ್‍ಬುಕ್ ಅಥವಾ ವ್ಯಾಟ್ಸಪ್‍ಗಳಲ್ಲೇ ಸಂದೇಶ ರವಾನಿಸುತ್ತಲೇ ದಿನವನ್ನು ಕಳೆದರೇನೋ? ಪ್ರೇಮಿಗಳ ದಿನಾಚರಣೆ ವಿರುದ್ಧ ಮಾರಲ್ ಪೋಲೀಸ್‍ಗಿರಿ ಮಾಡಿದ್ದು ವರದಿಯಾಗಲಿಲ್ಲ. ಜನದಟ್ಟಣೆ ಹೆಚ್ಚು ಇರುವಲ್ಲಿ ಕೊಳಕೂ ಹೆಚ್ಚಿರುತ್ತದೆ. ಮಾರಿಜಾತ್ರೆಯಲ್ಲಿ ಜನಸಂದಣಿ ಹೆಚ್ಚು ಇರುವುದರಿಂದ ತ್ಯಾಜ್ಯಗಳ ಬಳಕೆಯೂ ಹೆಚ್ಚಿರುತ್ತದೆ ಹಾಗೂ ಅದರ ವಿಲೇವಾರಿ ಸಮರ್ಪಕವಾಗಿ ಆಗುವುದಿಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಕಾಣಬಹುದು. ತ್ಯಾಜ್ಯ ವಿಲೇವಾರಿ ಮಾಡುವುದು ಸ್ಥಳೀಯ ಸಂಸ್ಥೆಗೆ ಒಂದು ಸವಾಲಿನ ಕೆಲಸವೂ ಹೌದು. ಸಾಗರದಲ್ಲಿ ಮೂರು ವರ್ಷಕ್ಕೊಮ್ಮೆ ಮಾರಿಜಾತ್ರೆ! ಬೆಂಗಳೂರಿನಲ್ಲಿ ನಿತ್ಯವೂ ಜಾತ್ರೆಯೇ, ಹಳ್ಳಿಗಳಿಂದ ಗುಳೆಹೋದ ಜನರೆಲ್ಲಾ ಒಂದೆಡೆ ನುಗ್ಗಿ, ಇಡೀ ಬೆಂಗಳೂರು ಜಾತ್ರೆಯಂತೆ ಆಗಿದೆ. ಅಲ್ಲೂ ತ್ಯಾಜ್ಯ ವಿಲೇವಾರಿ ಸಮಸ್ಯೆ ಇದೆ. ದುರಂತವೆಂದರೆ ಭದ್ರಾವತಿಯ ನಗರ ವ್ಯಾಪ್ತಿಯಲ್ಲಿ ಬೆಲ್ಲ ತಯಾರಿಸುವ ಆಲೆಮನೆಗಳಲ್ಲಿ ಬೆಂಗಳೂರಿನ ತ್ಯಾಜ್ಯ ಬಳಕೆಯಾಗುತ್ತಿರುವ ವರದಿ. ಟನ್‍ಗಟ್ಟಲೇ ಪ್ಲಾಸ್ಟಿಕ್ ತ್ಯಾಜ್ಯಗಳು ಬೆಂಗಳೂರಿನಿಂದ ಬಂದು ಆಲೆಮನೆ ಸೇರುತ್ತವೆ. ಆಲೆಮನೆಯ ಕೊಪ್ಪರಿಗೆಯಡಿಯಲ್ಲಿ ಸುಟ್ಟು ಸುತ್ತಲಿನ ಇಡೀ ವಾತಾವರಣವನ್ನು ಮಲೀನಗೊಳಿಸುತ್ತವೆ. ಪ್ಲಾಸ್ಟಿಕ್ ಸುಡುವಾಗ ಹೊರ ಬರುವ ವಿವಿಧ ರೀತಿಯ ರಾಸಾಯನಿಕಗಳು ಮನುಷ್ಯನಿಗಲ್ಲದೇ ಇಡೀ ವಾತಾವರಣದ ಕ್ಯಾನ್ಸರ್‍ಗೆ ಕಾರಣವಾಗುತ್ತವೆ. ಪತ್ರಿಕೆಯೊಂದು ಈ ಗಂಭೀರ ಪರಿಸ್ಥಿತಿಯನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರಿಂದ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆಲೆಮನೆಗಳಲ್ಲಿ ಪ್ಲಾಸ್ಟಿಕ್ ಸುಡುವುದನ್ನು ನಿಷೇಧಿಸುವ ಕ್ರಮಕ್ಕೆ ಮುಂದಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆಯೇ ಇರಬಹುದು. ಆದರೂ ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡುವು ಅಗತ್ಯ ಖಂಡಿತಾ ಇದೆ. 

ಉದಾಹರಣೆಯಾಗಿ ನಮ್ಮ ನಗರದ ವಾಹನ ದಟ್ಟಣೆಯ ಹಾಗೂ ಅವುಗಳು ಕಕ್ಕುವ  ವಿಷಯುಕ್ತ ಇಂಗಾಲ, ರಂಜಕಗಳ ಮಿತಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಣವಿಲ್ಲ. ಯಾವುದೇ ಒಂದು ವಾಹನ ಸುಸ್ಥಿತಿಯಲ್ಲಿದ್ದರೆ, ಅದರಿಂದ ಹೊರಬರುವ ಮಾಲಿನ್ಯ ಸುರಕ್ಷತೆಯ ಮಿತಿಯಲ್ಲಿರುತ್ತದೆ. ಸಾಗರದಲ್ಲಿ ಮಾಲಿನ್ಯದ ಪ್ರಮಾಣವನ್ನು ಪರೀಕ್ಷೆ ಮಾಡಿಸಲು ಹಲವು ಖಾಸಗೀ ಮಾಲಿನ್ಯ ಕ್ಲಿನಿಕ್‍ಗಳಿವೆ. ಕಾಲಕಾಲಕ್ಕೆ ಮಾಲಿನ್ಯ ಪ್ರಮಾಣವನ್ನು ಪರೀಕ್ಷಿಸುವ ಜವಾಬ್ದಾರಿ ಆಯಾ ವಾಹನ ಮಾಲೀಕರ ಜವಾಬ್ದಾರಿ ಆಗಿರುತ್ತದೆ. ವಾಹನದ ಹೊಗೆತ್ಯಾಜ್ಯದ ಪ್ರಮಾಣ ಸುರಕ್ಷತೆಯ ಮಿತಿಯೊಳಗೆ ಇದ್ದಲ್ಲಿ, ಅಂತಹ ವಾಹನವನ್ನು ಸುರಕ್ಷಿತ ವಾಹನವೆನ್ನಬಹುದು. ವಿಪರ್ಯಾಸ ನೋಡಿ, ಕೆಲವು ಖಾಸಗಿ ವಾಹನ ಮಾಲಿಕರು ಕಾನೂನಿನ ಭಯದಿಂದಾದರೂ ಕಾಲಕಾಲಕ್ಕೆ ಮಾಲಿನ್ಯ ತಪಾಸಣೆಯನ್ನು ಮಾಡಿಸುತ್ತಾರೆ. ಆದರೆ, ಸರ್ಕಾರಿ ವಾಹನಗಳ ಕತೆ ಬೇರೆಯೇ ಇದೆ. ಖುದ್ದು ಸಾರಿಗೆ ಇಲಾಖೆಯ ವಾಹನದ ಮಾಲಿನ್ಯವೇ ಸುರಕ್ಷತೆಯ ಮಿತಿಗಿಂತ ಹೆಚ್ಚು ಇದೆ. ಬರೀಗಣ್ಣಿನಿಂದಲೇ ಇದನ್ನು ಅಂದಾಜಿಸಬಹುದಾಗಿದೆ. ಅದು ಕಕ್ಕುವ ಕರಿ ಹೊಗೆಯೇ ಸಾಕು ಆ ಸರ್ಕಾರಿ ವಾಹನದ ಯಂತ್ರದ ಗುಣಮಟ್ಟ ಪಾತಾಳ ಕಂಡಿದೆ ಎಂಬುದು ಗೊತ್ತಾಗುತ್ತದೆ. 

ಈಗೊಂದು ತಿಂಗಳ ಹಿಂದೆ, ಹಿಂದಿನವರಿಗೆ ರಸ್ತೆ ಕಾಣದಷ್ಟು ಹೊಗೆಯನ್ನು ಕಕ್ಕುತ್ತಾ  ಇಕ್ಕೇರಿ ರಸ್ತೆಯಲ್ಲಿ ಒಂದು  ವಾಹನ ಹೋಗುತ್ತಿತ್ತು. ಬಹಳ ಕಷ್ಟಪಟ್ಟು ಅದರ ಹಿಂದೆ ಹೋಗಿ ಗಮನಿಸಿದರೆ, ಷಾಕ್ ಆಗುವುದು ನಮ್ಮ ಪಾಳಿ. ಅದು ಪೋಲೀಸ್ ವಾಹನ! ಅದರ ಸಂಖ್ಯೆಯನ್ನು ಗುರುತಿಸಿಟ್ಟುಕೊಂಡು (ಕೆ.ಎ.-14, ಜಿ-0579), ಇದರ ಕುರಿತು ಚಿಕ್ಕ ಟಿಪ್ಪಣಿಯನ್ನು ಬರೆದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ಹಾಕಿದೆ. ವ್ಯಾಟ್ಸಪ್ ಟಿಪ್ಪಣಿಯನ್ನು ಅಧ್ಯಕ್ಷರು ಗಮನಿಸಿದ್ದಾರೆ. ಆದರೆ ಇದರ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳುವ ಭರವಸೆಯಾಗಲೀ ಅಥವಾ ಉತ್ತರವಾಗಲೀ ಇಲ್ಲಿಯವರೆಗೂ ಬಂದಿಲ್ಲ. ಸರ್ಕಾರಿ ವಾಹನಗಳು ಹೊಗೆಯನ್ನು ಕಕ್ಕುತ್ತಲೇ ಇವೆ. ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ಇದೇ ಹೊತ್ತಿನಲ್ಲಿ ಶ್ರೀಮಂತ ಯೂರೋಪ್ ರಾಷ್ಟ್ರಗಳ ತೈಲ ಕಂಪನಿಗಳು ತಮ್ಮ ದೇಶದಲ್ಲಿ ಬಳಸಲಾಗದಷ್ಟು ಮಲೀನವಾದ ಡೀಸೆಲ್ ಕಂಟೈನರ್‍ಗಳನ್ನು ಆಫ್ರಿಕಾ ಖಂಡಕ್ಕೆ ರವಾನಿಸುತ್ತಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಯೂರೋಪ್‍ನಲ್ಲಿ ಡೀಸೆಲ್ ವಾಹನಗಳಿಂದ ಹೊರಬರುವ ಮಾಲಿನ್ಯದ ಮಿತಿ 10 ಪಿಪಿಎಮ್‍ಗಿಂತ ಹೆಚ್ಚು ದಾಟಬಾರದು ಎಂದು ನಿಗದಿ ಮಾಡಿಕೊಂಡಿದ್ದಾರೆ. ಹಾಗಾಗಿ ಅಲ್ಲಿ ಕಲುಷಿತ ಡೀಸೆಲ್‍ನ್ನು ಉಪಯೋಗಿಸುವುದಿಲ್ಲ. ಕಳಪೆ ಗುಣಮಟ್ಟದ ಡೀಸೆಲ್ ಮಾರುವುದಕ್ಕೆ ಇವರು ಮುಖಮಾಡಿದ್ದು ಆಫ್ರಿಕಾ ಖಂಡದತ್ತ. ಯೂರೋಪ್ ರಾಷ್ಟ್ರಗಳಿಂದ ತಮ್ಮ ದೇಶಗಳಿಗೆ ಅಮದಾದ ಡೀಸೆಲ್ ಕಳಪೆ ಮಟ್ಟದ್ದು ಎಂಬ ಸಂಪೂರ್ಣ ಕಲ್ಪನೆ ಆಫ್ರಿಕಾ ಖಂಡದ ರಾಷ್ಟ್ರಗಳಿಗೆ ಇರಲಿಲ್ಲ. ಕೊಂಚ ಕಡಿಮೆ ದರಕ್ಕೆ ಲಭ್ಯವಾದ ಡೀಸೆಲ್‍ನ್ನು ಹೇರಳವಾಗಿಯೇ ಬಳಸಲಾಯಿತು. ಇದರಿಂದ ಅಲ್ಲಿನ ವಾಯುವಿನ ಗುಣಮಟ್ಟ ಶೀಘ್ರವಾಗಿ ಕುಸಿಯುತ್ತಾ ಸಾಗಿತು. ಕೆಲ ಪಟ್ಟಣಗಳಲ್ಲಿ ಮಾಲಿನ್ಯದ ಪ್ರಮಾಣ 5000 ಪಿಪಿಎಮ್ ದಾಟಿತು. ಇದೀಗ ಕಳಪೆ ಡೀಸೆಲ್ ಮಾರಿದ ಆರೋಪಕ್ಕೆ ಐರೋಪ್ಯದ ಶ್ರೀಮಂತ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಎದ್ದಿದೆ. ಹಾಗೂ ಅದು ಹಾಗೆಯೇ ಮುಚ್ಚಿ ಹೋಗುವ ಸಂಭವವೂ ಹೆಚ್ಚಿದೆ.
 
ಕಳೆದ ತಿಂಗಳ ಕೊನೆ ಭಾಗದಲ್ಲಿ, ಅಂದರೆ ಜನವರಿ 28ರ ಆಸುಪಾಸಿನಲ್ಲಿ ಚನೈ ಹೃದಯ ಭಾಗದಲ್ಲಿ ರಾಜಕೀಯ ಸಂಚು ಹೊತ್ತಿ ಉರಿಯುವ ಹೊತ್ತಿನಲ್ಲೇ, ಸಸಿ ವರ್ಸಸ್ ಪನ್ನೀರ್ ಮೇಲಾಟದಲ್ಲಿ ಮುಳುಗಿರುವ ಹೊತ್ತಿನಲ್ಲೇ, ಅತ್ತ ಸಮುದ್ರದಲ್ಲಿ ಒಂದು ಅನಾಹುತ ಸಂಭವಿಸಿತು. ಈ ದುರ್ಘಟನೆ ನಡೆದದ್ದು ಜನವರಿ 28ರ ಬೆಳಗಿನ ಜಾವ 4 ಗಂಟೆಯ ಹೊತ್ತಿನಲ್ಲಿ, ಎನ್ನೋರಿನ ಕಾಮರಾಜರ್ ಪೋರ್ಟ್‍ನಿಂದ ಎಲ್‍ಪಿಜಿ ದಾಸ್ತಾನನ್ನು ಖಾಲಿ ಮಾಡಿ ವಾಪಾಸು ಹೊರಟ ಹಡಗಿನ ಹೆಸರು ಎಂಟಿಬಿಡಬ್ಲ್ಯೂ ಮಾಪ್ಲೆ ಅದೇ ಹೊತ್ತಿನಲ್ಲಿ ಇದೇ ತೀರಕ್ಕೆ ಪೆಟ್ರೋಲಿಯಂ ತೈಲವನ್ನು ಹೊತ್ತು ಬರುತ್ತಿದ್ದ ಹಡಗಿಗೆ ಪರಸ್ಪರ ಡಿಕ್ಕಿಯಾಯಿತು. ಈ ಹಡಗಿನ ಹೆಸರು ಎಂಟಿ ಡಾನ್ ಕಾಂಚಿಪುರಂ. ಪರಸ್ಪರ ಡಿಕ್ಕಿಯಾದಾಗ  ಡಾನ್ ಹಡಗು ತೀರ ತಲುಪಲು ಇನ್ನೂ 3 ಕಿ.ಮಿ. ಬಾಕಿಯಿತ್ತು. ದುರ್ಘಟನೆ ನಡೆದ 2 ತಾಸಿನ ನಂತರ ಮೀನುಗಾರನೊಬ್ಬ ಹಡಗಿನಿಂದ ಕಪ್ಪು ತೈಲ ಸೋರಿ ಸಮುದ್ರ ಸೇರುವುದನ್ನು ನೋಡಿದ್ದಾನೆ. ಅಲ್ಲಿಯವರೆಗೂ  ಹಡಗಿನ ಸಿಬ್ಬಂದಿಗಾಗಲೀ ಅಥವಾ ಪೋರ್ಟ್‍ನ ಕಾವಲುಗಾರರಿಗಾಗಲಿ, ಯಾರಿಗೂ ಈ ವಿಷಯ ತಿಳಿದಿರಲೇ ಇಲ್ಲ. ಹಡಗಿನ ಸಿಬ್ಬಂದಿಗಳು ಅನಾಹುತವನ್ನು ವರದಿ ಮಾಡುವಷ್ಟರಲ್ಲಿ ಸಾಕಷ್ಟು ತೈಲ ಸಮುದ್ರಕ್ಕೆ ಸೋರಿಯಾಗಿತ್ತು. ಎಷ್ಟು ಪ್ರಮಾಣವೆಂದು ಅಂದಾಜು ಇರಲಿಲ್ಲ. ತಕ್ಷಣದಲ್ಲಿ ತುರ್ತುಕ್ರಮವನ್ನು ಅನುಸರಿಸಲು ಸಾಕಷ್ಟು ಸಿಬ್ಬಂದಿಗಳು ಪ್ರಯತ್ನ ಪಟ್ಟರು. ಇರಲಿ ವಿಷಯ ಇದಲ್ಲ. ಮೊದಲ ದಿನ ಅಧಿಕಾರಿಗಳ ಪ್ರಕಾರ ಸೋರಿದ ತೈಲ ಬರೀ 5 ಟನ್ ಹಾಗೂ ಇಷ್ಟು ಮಾತ್ರ ಪ್ರಮಾಣದ ತೈಲ ಸೋರಿಕೆಯಿಂದ ಯಾವ ಅನಾಹುತವೂ ಆಗುವುದಿಲ್ಲ. ಆರ್ಥಿಕ ತಜ್ಞರು ಅಥವಾ ಸರ್ಕಾರಗಳು ಅಥವಾ ತೈಲ ಕಂಪನಿಗಳು ಸೋರಿಕೆಯಿಂದ ಆದ ಆರ್ಥಿಕ ಹೊರೆ ಎಷ್ಟು ಎಂದು ಲೆಕ್ಕ ಹಾಕುವಷ್ಟರಲ್ಲಿ ತೈಲ ಸಮುದ್ರದಲ್ಲಿ 5 ಕಿ.ಮಿ.ನಷ್ಟು ಪಸರಿಸಿಯಾಗಿತ್ತು. ಆಗಲೇ ಆಮೆಗಳು ಸತ್ತು ತೇಲುತ್ತಿರುವ ದೃಶ್ಯವನ್ನು ಸಾರ್ವಜನಿಕರು ಗಮನಿಸಿದ್ದರು. 

ಇದನ್ನು ಗಮನಿಸಿದ ಪೋರ್ಟ್ ಅಧಿಕಾರಿಗಳು ಬರೀ 5 ಟನ್ ಅಲ್ಲ ಸ್ವಲ್ಪ ಹೆಚ್ಚೇ ಸೋರಿಕೆಯಾಗಿದೆ, ಆದರೂ ಹೆದರುವ ಕಾರಣವಿಲ್ಲ, ಇದನ್ನು ಆದಷ್ಟು ಬೇಗ ಸ್ವಚ್ಛಗೊಳಿಸುತ್ತೇವೆ ಎಂಬ ಮಾತು ಹೇಳಿ ತೇಪೆ ಹಚ್ಚುವ ಕೆಲಸ ಆರಂಭಿಸಿದ ಹೊತ್ತಿನಲ್ಲಿ, ಸಮುದ್ರದ ಅಲೆಗಳಿಗೆ ಸಿಕ್ಕ ಕಪ್ಪು ತೈಲ ಕಡೆದು-ಕಡೆದು ಮರಳಿನ ಕಣಗಳನ್ನು ಹೊದ್ದು ಉಂಡೆಯಾಕಾರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ತೇಲುತ್ತಿದ್ದವು. ಇಡೀ ಸಮುದ್ರದ ತೀರದಲ್ಲಿ ಸುಮಾರು 600 ಟನ್‍ಗಳಷ್ಟು ತೈಲಕೊಚ್ಚೆ ಜಮೆಯಾಗಿತ್ತು. ದುರಂತ ನಡೆದ 10 ದಿನಗಳಲ್ಲಿ ತೈಲ ಸಮುದ್ರದಲ್ಲಿ 40 ಕಿ.ಮಿ.ವರೆಗೂ ವ್ಯಾಪಿಸಿತ್ತು. ಇಷ್ಟೆಲ್ಲಾ ಆದರೂ ಮೊದಲ ಐದು ದಿನ ತಮಿಳುನಾಡು ಸರ್ಕಾರ ಈ ಬಗ್ಗೆ ಕಿಂಚಿತ್ತೂ ಕ್ರಮ ಕೈಗೊಂಡಿರಲಿಲ್ಲ. ವಿರೋಧ ಪಕ್ಷದ ಶಾಸಕರೊಬ್ಬರು ಈ ಗಂಭೀರ ಪರಿಸ್ಥಿತಿಯ ಎಳೆ ಹಿಡಿದು ಸದನದಲ್ಲಿ ಗಲಾಟೆ ಆರಂಭಿಸಿದಾಗಲೇ ಸರ್ಕಾರ ಎಚ್ಚೆತ್ತುಕೊಂಡಿತು.  ತಮಿಳುನಾಡು ಕೋಸ್ಟ್ ಗಾರ್ಡ್ ಸಿಬ್ಬಂದಿ ಹಾಗೂ ಕಾಮರಾಜರ್ ಪೋರ್ಟ್ ಸಿಬ್ಬಂದಿಯ ಜೊತೆಯಲ್ಲಿ ಸಾರ್ವಜನಿಕರು ಬಕೇಟ್ ಹಿಡಿದು ನೀರಿನ ಮೇಲೆ ತೇಲುವ ತೈಲವನ್ನು ಬಾಚಿ ತೆಗೆಯುವಲ್ಲಿ ಸಹಕರಿಸಿದರು. ಮೊಳಕಾಲು ಮುಳುಗುವಷ್ಟು ನೀರಿನಲ್ಲಿಳಿದು ತೇಲುವ ತೈಲವನ್ನು ಬಕೇಟಿನಲ್ಲಿ ತುಂಬಿ, ಮಾನವ ಸರಪಳಿಯನ್ನು ನಿರ್ಮಿಸಿಕೊಂಡು ತೀರಕ್ಕೆ ತಂದು ಸ್ವಚ್ಚಗೊಳಿಸುವ ಕೆಲಸವನ್ನು ಸಮರೋಪಾದಿಯಲ್ಲಿ ನೆರವೇರಿಸಿದರು. 

ಹಡಗಿನಿಂದ ತೈಲ ಸೋರಿಕೆಯಾಗಿ ಸಮುದ್ರದ ನೀರೆಲ್ಲಾ ರಾಡಿಯಾಗುವುದು, ಲಕ್ಷಾಂತರ ಸಂಖ್ಯೆಯಲ್ಲಿ ಜಲಜೀವಿಗಳು ಸಾಯುವ ಪ್ರಕ್ರಿಯೆ ಪ್ರಪಂಚದಾದ್ಯಂತ ನಡೆಯುತ್ತಲೇ ಇರುತ್ತದೆ. ಚನೈನಲ್ಲಿ ಈ ಅವಘಡ ಸಂಭವಿಸಿದ್ದು ಸಮದ್ರದ ತೀರದಲ್ಲಿ, ಇದರಿಂದಾಗಿ ಸ್ವಚ್ಛಗೊಳಿಸುವ ಕೆಲಸ ಕೊಂಚ ಸುಗಮವಾಯಿತು. ಆದರೂ ಧೂರ್ತ ತೈಲ ಕಂಪನಿಗಳು ಸೋರಿದ ಪ್ರಮಾಣವನ್ನು ಮುಚ್ಚಿ ಇಡುವ ಪ್ರಯತ್ನ ಮಾಡಿದರು. ಅವರ ಪ್ರಕಾರ ಸೋರಿದ್ದು ಅತ್ಯಲ್ಪ ಪ್ರಮಾಣದ ತೈಲ. ಆದರೆ ಕೋಸ್ಟ್ ಗಾರ್ಡ್ ಐಜಿ ಹೇಳುವ ಪ್ರಕಾರ ಕಂಪನಿ ಹೇಳುವ ಲೆಕ್ಕಕ್ಕಿಂತ ಹತ್ತು ಪಟ್ಟು ಹೆಚ್ಚು ತೈಲ ಸೋರಿಕೆಯಾಗಿದೆ. ಹೀಗೆ ಸುಳ್ಳು ಪ್ರಮಾಣಿಸಲೂ ಕಾರಣವಿದೆ. ಪಾರಿಸಾರಿಕವಾದ ಹಾನಿಯನ್ನು ತೈಲ ಕಂಪನಿಗಳು ತುಂಬಿ ಕೊಡಬೇಕಾಗುತ್ತದೆ. ಬರೀ ಹತ್ತು ಟನ್ ತೈಲ ಸೋರಿದೆ ಎಂದು ಲೆಕ್ಕ ತೋರಿಸಿದರೆ, ಕಟ್ಟುವ ದಂಡದ ಪ್ರಮಾಣ ಕಡಿಮೆಯಾಗುತ್ತದೆ. ಇಲ್ಲೂ ಲಾಭದ ಯೋಚನೆಯನ್ನಷ್ಟೇ ಧೂರ್ತ ಕಂಪನಿಗಳು ಮಾಡುತ್ತವೆ. ಅಂತೂ ಕಟ್ಟ ಕಡೆಗೆ ಕೇಂದ್ರ ಪರಿಸರ ಸಚಿವಾಲಯ ಸದರಿ ತೈಲ ಕಂಪನಿಗಳಿಗೆ ವಿವರಣೆ ಕೋರಿ ನೋಟೀಸ್ ನೀಡಿದೆ. ಇಷ್ಟೆಲ್ಲಾ ಆದರೂ ಹಡಗಿನ ಕ್ಯಾಪ್ಟನ್ ಆಗಲಿ ಅಥವಾ ಸಂಬಂಧಪಟ್ಟ ಬೇರೆ ಸಿಬ್ಬಂದಿಯಾಗಲಿ ಘಟನೆ ಕುರಿತು ತುಟಿ ಬಿಚ್ಚಲಿಲ್ಲ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Prasanna Kumar V
Prasanna Kumar V
7 years ago

Good information. Well done.

Akhilesh
Akhilesh
7 years ago

ಧನ್ಯವಾದಗಳು ಪ್ರಸನ್ನ ಕುಮರ್ ಜೀ

2
0
Would love your thoughts, please comment.x
()
x